ಭುವನಕ್ಕೆ ಕರ್ಣಾದ ಸುರಿತಾಳನ ಬಂಟನ ಕೊಡದೆ | ಮೊರೆಯಾಗಲು ನೀ ಕಾದಿ ಕಡಿದೆ |
ಪಡೆದವನ ಛಲಕ್ಹೋಗಿ ಪಾಪಿ ತೇಜಿಯ ತಂದೆ | ಹಗೆಯ ಮೀವನು ರುದ್ರರಾಯ     || ೧೨೧ ||

ಹಾಕಿ[ದೆ] ಬಿರಿದನು ಹರಿಹರನು ಹೊರತಾಗಿ | ಮೂರುಲೋಕದ ಗಂಡನೆಂದು |
ಪಾಪಿ ಚೆಂಡಾಡಲು ಅಪಜಯ ತೋರಲು ಮಗನೆ | ಮುದಿ ಪಾಪಿ ಕಂಪಿಲನ ಬಿಡುವ || ೧೨೨ ||
ಮುನ್ನ ಮಾಡಿದ ಧರ್ಮ ಕರ್ಮಗಳೆಲ್ಲವಲು | ಬೆನ್ನಟ್ಟಿ ಬಿಡವು ಕಾಣಮ್ಮ |
ಪನ್ನಂಗಧರನಾಣೆ ವಿಧಿಬೆನ್ನ ಬಿಡುವುದೆ | ನನ್ನಾಣೆ ಚೆಂಡ ಕೊಡಮ್ಮ                 || ೧೨೩ ||

ಮರೆದಿರ್ದ ಚಂಡ ನಿನಗರುಹಿ ಕೊಟ್ಟವರಾರು | ಮರಿಯಾನೆ ಚೆನ್ನಿಗರಾಮ |
ಕೊರತೆ ಕುಮಾರರು ಚೆಂಡನಾಡುವರೆಂದು | ಹರಕೆಯ ಮಗಗೆ ಹೇಳಿದಳು          || ೧೨೪ ||

ಮರೆಯ ಮಾತೇತಕ್ಕೆ ಕೇಳವ್ವ ಹರಿಯಮ್ಮ | ಹಿರಿಯ ಕಾಟಣ್ಣ ಹೇಳಿದನು |
ಹರುಷದಿ ಆ ಚೆಂಡ ಆಡಿ ನೋಡುವೆ ತಾಯಿ | ತರಿಸಿಕೊಡಮ್ಮ ಬೇಗದೊಳು         || ೧೨೫ ||

ಬಟ್ಟ ಕಂಗಳು ಉದಕವ ಸುರಿಸಲು ರಾಮ | ಕೆಟ್ಟನೆನುತ ಹರಿಯಮ್ಮ |
ಬುದ್ಧಿಯ ಹೇಳಲು ಅಡ್ಡ ಮೋರೆಯನಿಟ್ಟ | ಬಿದ್ದವು ಕಂಗಳಲಿ ಉದಕ                  || ೧೨೬ ||

ಎಂದಳು ಹರಿಯಮ್ಮ ಹೀಗೆ ಯಾತಕೆ ಎಂದು ಮುದ್ದಾಡಿ ಮಗನ ಸಂತೈಸಿ |
ತೆಗೆದಪ್ಪಿ ಕಂದನ ಕಣ್ಣೀರ ತೊಡೆದಳು | ಬಿಗಿಯಪ್ಪಿ ಮುಂಡಾಡಿ ಬೇಗ                || ೧೨೭ ||

ಅಗಜೆಯರಸ ನಿನ್ನ ಸಲಹಲಿ ಎನುತಾಗ | ಸುಗುಣ ರಾಮಗೆ ಇಂತೆಂದೊ |
ಮುತ್ತಯ್ಯ ಮೂವರು ಸ್ವತಂತ್ರದೊಳೀ ಚೆಂಡ | ಎತ್ತಿ ಆಡಲು ಸುಖವಿಲ್ಲ              || ೧೨೮ ||

ಇತ್ತ ನೀನಾಡಲು ದತ್ತಿ ಬಲಿಯ ಕೊಟ್ಟು | ಮುತ್ತಿನ ಚೆಂಡೊಯ್ಯೊ ಮಗನೆ |
ಏನು ಬಲಿಯು ಇದಕೆ ತಾಯಿ ನೀ ಹೇಳೆಂದ | ನಾನು ಈ ಕ್ಷಣ ತರಿಸುವೆನು          || ೧೨೯ ||

ಮೂರಾರು ತಲೆಯಿಂದ ಕಾಣದು ಪೂಜೆಯನು | ಬಾಗಿಲ ತೆಗೆದು ಪೂಜಿಸಲು |
ಕಾದಿಹವು ಬಲು ಭೂತ ಆಹುತಿಯನು ಕೊಟ್ಟು | ನೀ ಒಯ್ಯೋ ಮಗನೆ ಸಿಟ್ಟೇಕೆ       || ೧೩೦ ||

ಕೊಡುವೆನು ಎಂಬಂಥ ನುಡಿ ಕಿವಿಗೆ ಬೀಳಲು | ರವಿ ಕಿರಣ ಕಾಂತಿ ಮುಖವಾಗೆ |
ಮರಳೊಮ್ಮೆ ಪಾದಕ್ಕೆ ಎರಗಿ ನಿಮ್ಮಣುಗಗೆ | ದಯವಾಡಿ ಕೊಡುವ ಶಾಂತಿಗಳ     || ೧೩೧ ||

ಅರುಹಲು ಚರರಾ[ಗ] ಹೊಡೆತಂದು ಮುನ್ನೂರು | ಕುರಿ ಕೋಳಿ ಕೋಣ ನಿಲ್ಲಿಸಲು |
ಬಂದಳು ಹರಿಹರನ ದ್ವಂದ್ವ ಮಂಟಪಕಾಗಿ | ಗಾಂಭೀರ್ಯ ಗುಣದ ಭೂದೇವಿ       || ೧೩೩ ||

ಬಂದಳು ಬಾಲ[ಕರ] ಕರವೆರಡರಿಂದ ಪಿಡಿದು | ಚೆಂಡಿರುವ ಗೃಹದ ಬಳಿಗೆ |
ತಂದಂಥ ಕುರಿಕೋಣ ಕೊಂದು ಪೂಜೆಯ ಮಾಡಿ | ಬಂಧಿಸಿದ ಬೀಗವನು ತೆಗೆಯೆ  || ೧೩೪ ||

ಬಾಗಿಲು ಏಳಂತ್ರ ಬೀಗ ಮುದ್ರಯ ತೆಗೆದು | ಪೋಗಲು ಚಂಡಿರುವ ಬಳಿಗೆ |
ಪೊಜೆ ಪುಷ್ಪ ಮಾಡಿ ಬೆಳ್ಳಿ ಪೆಟ್ಟಿಗೆಯನು | ಬೀಗವ ತೆಗೆದು ಕರಮುಗಿದು              || ೧೩೫ ||

ಯುಗ ಮೂರರೊಳಗಾಗಿ ಮಲೆತವರ ಮರ್ದಿಸಿದೆ | ಒಲಿದೆಮ್ಮ ಪಿತಗೆ ಬಡತನ |
ಬಯಲ ಮಾಡಿಯುದ್ದರಿಸಿದೆ ಜಗಕೆಲ್ಲ | ಕಡೆಹಾಸು ನಿಮ್ಮ ಬಾಲಕರ                 || ೧೩೫ ||

ಸತ್ಯದ ರಾಮನ ಅಪಕೀರ್ತಿ ಮಾಡುವ ತೆರಕೆ | ಹುಟ್ಟದೆ ಕುಮ್ಮಟಕೆ[ಯಿಂ]ದು |
ಸತ್ಯವ ಬಿಡಲಾರ ಸಾಯದುಳಿವನೆಯೆಂದು | ಈಲು ಗೌಳಿ ಲೇಖನ                  || ೧೩೬ ||

ಮುತ್ತಿನಾರತಿ ಬೆಳಗಿ ಪುತ್ರರಿರ್ವರು ಕೈಯಲಿ | ಕೊಟ್ಟಳು ಹರಿಯಮ್ಮ ಹರಿಸಿ |
ದೃಷ್ಟದ ಚೆಂಡಿಯ ಎಚ್ಚರದೊಳಗಾಡಿ | ಹುಟ್ಟದೆ ವೈರಾಗ್ಯ ನಿಮಗೆ                   || ೧೩೬ ||

ಜನನಿಗೆ ವಂದಿಸಿ ಕಿರಿಣದ ಕಳೆಯಂತೆ | ನಗುತ ಪಲ್ಲಕ್ಕಿ ಏರಿದನು |
ಎತ್ತಿತ್ತು ರಾಮಗೆ ಮುತ್ತಿನ ಸತ್ತಿಗೆ | ಮತ್ತೆ ಪಾಠಕರು ಉಗ್ಘಡಿಸೆ                      || ೧೩೮ ||

ಅರಿರಾಯಮರ್ದನ ಮೂರು ರಾಯರ ಗಂಡ | ಪರರಾಯ ಮಸ್ತಕ ಶೂಲ |
ಧುರಧೀರ ಶರಭಭೇರುಂಡನೆ ಸ್ಥಿರಬಾಳು | ಪರಿವಾರ ಭಟ್ಟರು ಕೊಂಡಾಡೆ           || ೧೩೯ ||

ಮಣಿವ ರಾಯರ ಗಂಡ ಮಲೆವ ರಾಯರ ಮಿಂಡ | ಸೆಣಸುವ ವೈರಿ ಮಾರ್ತಂಡ |
ಡಣಡಣರೆಂಬ ಗಂಟೆಗಳೊಪ್ಪುತಿರ್ದವು | ಕಣಕಾಲಿನೊಳಗೆ ರಾಮನಿಗೆ               || ೧೪೦ ||

ಖಂಡೆದ ಕೈಯ್ಯಲ್ಲಿ ಧರ್ಮಜೀವವ ಕೊಂಬ | ಹಂದೆ ಕುಮಾರರ ಗಂಡ |
ಚಂದದಿಂದಲಿ ಬಿರಿದನು ಹೊಗಳಿಸಿಕೊಂಬ | ಅಂದ ಕುಮಾರ ರಾಮನಿಗೆ            || ೧೪೧ ||

ಸೂಳೆಯರಂತೆ ಶೃಂಗರಿಸಿ ರಣಾಗ್ರದೊಳ್ | ಆಳು ಕಳುಹಿಸಿ ತಾನು ಜಣುಗಿ |
ಬಾಳುವ ಸುರಿತಾಳನ ಗಂಡ ರಾಮಯ್ಯ | ಕಾಳೆಗಳೆತ್ತಿ ಸಾರಿದವು                   || ೧೪೨ ||

ಪಟ್ಟಸಾಲಿಗೆ ನಡೆತಂದನು ರಾಮಯ್ಯ | ಕಟ್ಟಿಗೆಯವರಾಗ | ಬಂದರು ಕೇರಿ ಕೇರಿಯಲಿ |
ಹಿಂದಣ ಕಾಲದ ರಾಯರಾಡುವ ಚೆಂಡು | ಇಂದು ರಾಮಯ್ಯಾಡುತಿಹನೆ            || ೧೪೪ ||

ಮಂದಿಯ ಕರೆಸಿ ಹೇಳಲು ಶೃಂಗರವಾಗಿ | ಅಂದು ಕಾಲಾಳು ಮುಂಚಿದವು |
ಚಂದದಿಂದಲಿ ಶೃಂಗರವಾಗಿ ಹೊರಟ[ರು] | ಅಂದು ರಾಮಯ್ಯನ ಬಳಿಗೆ            || ೧೪೫ ||

[ಕ]ಲೆಯ ವೇಶಿಯರೆಲ್ಲ ಹೊರಡೆಂದು ಸೇವಕರು | ಹೇಳಿದರು ಕೇರಿ ಕೇರಿಯಲಿ
ಚೆಲುವ ರಾಮಯ್ಯ ಚೆಂಡಾಡುವ ಬಯಲಿಗೆ | ಲಲನೆಯರೆಲ್ಲ ಶೃಂಗರಿಸಿ              || ೧೪೬ ||

ಕಾಮನ ರೂಪನ ನೋಡಬೇಕೆನುತಲಿ | ಕಾಮಿನಿಯರು ತವಕದಲಿ |
ಕೋಮಾಲೆ ಬಗೆಬಗೆ ಬಣ್ಣ ನಾಣ್ಯವನುಟ್ಟು | ಸೀಮೆಯಿಂದವರು ಹೊರವಂಟು        || ೧೪೭ ||

ಓರುಗಲ್ಲಿಂದ ಸೂಳೆ ಯಲ್ಲಾಜಿಯು | ಭೋರನೆ ತಾ ವಿಟರೊಡನೆ |
ಸೇರಿಸುವಳು ಸುರತದಿ ಸೂಜಿಗಳನು | ನೀರೆಯು ನಡೆದಳುರ್ತಿಯಲಿ               || ೧೪೮ ||

ಕುಂಭಕೋಣೆಯಿಂದ ವಿರುಪಾಯಿ ಬಂದಳು | ಬೊಂಬೆ ಸರಪಳಿ ಕಾಲಲಿಟ್ಟು |
ಸಂಭ್ರಮದಿಂದ ವೇಶಿಯ ಪಡೆ ಬಂದಿತು | ಅಂಬು ತಾಕಿಯೆ ವಿಟರೆದೆಯು            || ೧೪೯ ||

ಹಿಡಿದ ಮಾತ್ರಕೆ ಹಿಡಿ ಹೊನ್ನ ಕೈಕೊಂಬಳು | ಸುರತದ ಸುಗ್ಗಿ ಎಂಬವಳು |
ಹೊರಟಳು ಬೇಗದಿ ಪೆನಗುಂಟೆ ಯಲ್ಲಾಜಿ | ಭರದಿಂದ ಚೆಂಡ ನೋಡುವರೆ          || ೧೫೦ ||

ವಿಜಯನಗರದ ಭದ್ರಾಜಿ ತಾ ಹೊರಟಳು | ರುದ್ರಾಕ್ಷಿ ಸೀರೆಯನುಟ್ಟು |
ಮುದ್ದು ರಾಮನ ಚೆಂಡಿನಾಟಕ್ಕೆ ಸತಿಯರು | ಪದ್ಮಿನಿಯರು ತೆರಳಿದರು             || ೧೫೧ ||

ತಿದ್ದಿದ ಗಂಧ ಕಸ್ತುರಿಯಿಟ್ಟು ತಿಲಕದ | ಮುದ್ದು ಮುಖದ ನಗೆ ನುಡಿಯು |
ನಿದ್ದೆಗೆ ಸಾವಿರ ಹೊನ್ನ ಕೊಂಬವಳೊಬ್ಬ | ಉದ್ದಗಿರಿಯ ಸಿದ್ದಿಯಿವಳು                || ೧೫೨ ||

ಭೇದವಿಲ್ಲದ ರತಿಗಲೆಗಳೊಳು ಲೆಗ್ಗೆಯ | ಆಡುವ ಚೆಂಡಿನಂಥವಳು |
ಅಂದವಾಗಿಯೆ ನಾಗಾಜಿ ತಾ ಬಂದಳು | ಬೇಗದಿ ತಾ ವಿಟರೊಡನೆ                  || ೧೫೩ ||

ವಾಲಗದೊಳಗೆ ಸಂದಣಿಸಿದ ಸತಿಯರು | ಮೇಲೆ ಡವುಡೆಯ ಹೊಯ್ಸಿಕೊಳುತ |
ಬೇಲೂರ ಚೆನ್ನಿ ಬೇಗದಿ ತಾ ಬಂದಳು | ಲೋಲ ರಾಮನ ನೋಡುವರೆ              || ೧೫೪ ||

ಚಿನ್ನದ ಬರೆಹದ ಸೀರೆಯನುಟ್ಟಳು | ಹೆಣ್ಣುಗಳನು ಒಡಗೊಂಡು |
ಹೊನ್ನೂರ ನಾಂಟ್ಯ[ದ] ವಿರುಪಾಯಿ ಬಂದಳು | ಚೆನ್ನರಾಮನ ವಾಲಗಕೆ            || ೧೫೫ ||

ಅಂದಣದೊಳಗೆ ಸಂದಣಿಸಿದ ಸತಿಯರು | ಚಂದ್ರಗಿರಿಯ ಚೆನ್ನೆ ಚೆಲುವೆ |
ಚಿಕ್ಕ ಪ್ರಾಯದ ವಿಟರನು ಸೋಲಿಸುವಳು | ದಿಕ್ಕಿಗೆ ಸುಪ್ರತಿಯೆನಿಸಿ                  || ೧೫೬ ||

ಕಲ್ಲುಕೋಟೆಯ ಚಿಕ್ಕಾಜಿ ತಾ ಬಂದಳು | ಕಕ್ಕಸ ಕುಚ ಅಲಗುತಿರಲು |
ಚೆನ್ನಿಗ ರಾಮನ ನೋಡಬೇಕೆನುತಲಿ | ಕನ್ನೆವೆಣ್ಣುಗಳೈದಿದರು                       || ೧೫೭ ||

ಹಟ್ಟಿಕಾರರು ಹಳ್ಳಿಕಾರರು ಹನುಮರು | ದಿಟ್ಟ ಗಾಣಿಗೆ ಬೊಮ್ಮನವರು |
ಕಟ್ಟಾಳು ರಾಮನೆಡಬಲದಲ್ಲಿ ನಿಂದರು | ಒಟ್ಟಾಗಿ ಸಕಲ ಮನ್ನೆಯರು                || ೧೫೮ ||

ಗಡಿಯಂಕ ಬೇಡರು ದಿಟ್ಟ ಕಲಿಗಾರರು | ಒಡನೆ ಮಾದಿಗ ಹಂಪನವರು
ಕಡುಗಲಿ ಅಕ್ಕಸಾಲೆಯ ಚೆನ್ನಣ್ಣನು | ಗಡಣದಲ್ಲಿರುವ ಮನ್ನೆಯರು                   || ೧೫೯ ||

ಎಪ್ಪತ್ತುರಾಯನ ಬೊಲ್ಲನೇರಿಯೆ ರಾಮ | ಒಪ್ಪುವ ನಡುಬೀದಿಯೊಳಗೆ |
ಇತ್ತರದಲಿ ಚಾಮರವ ಡಾಳಿಸಿಕೊಂಡು | ಅರ್ತಿಲಿ ನಡೆದ ರಾಮಯ್ಯ                || ೧೬೦ ||

ಪಟ್ಟಣದೊಳಗುಳ್ಳ ಸ್ತ್ರೀಯರೆಲ್ಲರು ಕೂಡಿ | ಇಟ್ಟು ಶೃಂಗರವಾಗುತಿರಲು |
ದಿಟ್ಟ ರಾಮಯ್ಯನ ನೋಡಬೇಕೆನುತಲಿ | ಮಿತ್ರೆಯರೊಂದು ಸಾವಿರವು              || ೧೬೧ ||

ರಾಜಬೀದಿಯಲಿ ರಾಮಯ್ಯನು ಬರುವಾಗ | ಮೂಜಗದೊಳು ಕಲಿವೀರ |
ರಾಜ ಕಾಮಿಯರು ಕಂಡು ಕಾಮಿಸಿದರು | ಧಾತುಗೆಟ್ಟರು ಮನದೊಳಗೆ              || ೧೬೨ ||

ಕಾಮನ ಕಳೆಗಿಂದ ಹೆಗ್ಗಳಿಸಿಪ್ಪನೆ | ಭೂಮಿಗೆ ಚೆಲುವನೆ ರಾಮ |
ಸಾಮಜಗಮನೆ ನಿನ್ನ ಪೆತ್ತಳೆಯೆಂದು | ಕೊಮಾಲೆಯರು ಕೊಂಡಾಡಿದರು           || ೧೬೩ ||

ಅಲರುವಿಲ್ಲನು ಜೋಡಿಸಿ ತೆಗೆದೆಸೆಯಲು | ಚೆಲುವೆಯರೆಲ್ಲ ತುಟಿ ಕಚ್ಚೆ |
ತಲೆಬೇನೆ ಕೆದರಿತ್ತು ಕೆಲವು ಸ್ತ್ರೀಯರಿಗೆಲ್ಲ | ಚೆಲುವ ರಾಮನ ಮುಖ ನೋಡಿ         || ೧೬೪ ||

ನಿಲ್ಲಲಾರದೆ ಎಡಬಲದ ಸತಿಯರೆಲ್ಲ | ಸಲೆ ಮೋಹಿಯರೆಲ್ಲ ಒರಗಿದರು |
ಹಲವು ಪರಿಯಲಿ ಕೊಳ್ಳಲು ತಮ್ಮೊಳು ತಾವು | ಇವನೊಲಿಸುವುದು ಹೇಗೆನುತ     || ೧೬೫ ||

ಬ್ರಹ್ಮನೆಂಬವ ಪಾಪಿ ಇಂತಪ್ಪ ಚೆಲುವನ | ನಮ್ಮ ಗಂಡನ ಮಾಡದ್ಹೋದ |
ಹೆಮ್ಮೆಕಾತಿಯರಾಗ ಉಮ್ಮಳಿಸುತಲಾಗ | ತಮ್ಮೊಳು ತಾವೆ ಮಾತಾಡಿ            || ೧೬೬ ||

ನುಡಿ ಮರೆದು ಮೋಹಿ[ಪ] ಹೆಣ್ಣುಗಳಿಗೆ | ಒಡೆದವು ಮಾನಕೆರೆಯು |
ಕಡುಗಲಿ ರಾಮನ ಕಾಣುತ್ತ ಸತಿಯರು | ಮಿಡುಕುತ್ತ ತಮ್ಮೊಳು ತಾವು              || ೧೬೭ ||

ಒಮ್ಮೆ ಇವನ ನಾವು ಒಲಿಸಬೇಕೆನುತಲಿ | ತಮ್ಮ ಪಣೆಗೆ ಮದ್ದ ಪೂಸಿ |
ಗಮ್ಮನೆ ರಾಮನ ಕಾಣುತ ಸತಿಯರು | ತಮ್ಮೊಳು ತಾವು ಮಾತಾಡಿ               || ೧೬೮ ||

ಜನವಶ್ಯದ ತಿಲಕವನಿಟ್ಟು ರಾಮನ | ಮನವನು ಸೂರೆಗೊಂಬೆವೆನುತ |
ವಿನಯದಿಂದಲಿ ನೆರೆದರು ಬನವರಸುತ | ಅನುವಾಗಿ ನಿಂದಳೊಬ್ಬ ಮತ್ತೆ           || ೧೬೯ ||

ಕಾಮನರೂಪನ ಯೌವನ ಮದವೆಂತು | ಭೂಮಿಗೆ ಚೆಲುವನೆ ರಾಮ |
ಸಾಮಜಗಮನೆ ನಿನ್ನ ಪೆತ್ತಳುಯೆಂದು | ಕೋಮಲೆಯರ ಕೊಂಡಾಡಿದರು           || ೧೭೦ ||

ಕಂತು ಸನ್ನಿಭ ಚೆನ್ನರಾಮನ ಕಾಣುತ್ತ | [ಇಂತಿ] ವನೊಲಿಸಬೇಕೆನುತ |
ನಿಂತೊಬ್ಬ ಮುದಿವೇಶಿ ರಾಜಬೀದಿಗಳೊಳು | ಮಂತ್ರಿಸಿಟ್ಟರು ಏಳು ಹರಳ          || ೧೭೧ ||

ನೆತ್ತಿಯ [ಕೊಡ]ಗಳ ಮರೆದು ಕೈಬಿಟ್ಟರು | ಹುಟ್ಟಿದ ವಿರಹ ತಾಪದಲಿ |
ಎತ್ತಿದ ಮ[ಕ್ಕ]ಳ ಮರೆದು ಕೈಬಿಟ್ಟರು | ಚಿತ್ತದಿ ಭ್ರಮಿಸಿ ನೋಡಿದರು                 || ೧೭೨ ||

ನೋಡಿದ ರಾಮನ ರೂಪಯಿರೆ ಹೀಂಗಾದೆ | ಕೂಡುವ ಬಗೆ ಹೇಂಗೆಂದೆನುತ |
ಗೋಡೆಯೊಳ್ ಚಿತ್ರವ ಬರೆದಂತೆ ಸತಿಯರು | ಗಾಡಿಕಾತಿಯರು ಸಂತಯಿಸಿ        || ೧೭೩ ||

ನೋಡಿದ ರಾಮಯ್ಯ ವಿರಹದ ಸತಿಯರ | ಆಡಿದ ತನ್ನೊಳು ತಾನು |
ನೋಡುವ ಸತಿಯರು ಹರಿಯಮ್ಮನೋಪಾದಿ | ಕೂಡೆ ಕಾಳೆಯ ಹಿಡಿಸಿದನು        || ೧೭೪ ||

ಹೆತ್ತ ತಾಯಿಗಳು ಮನ ನೋಡುತ್ತಿಹರೆಂದು | ಚಿತ್ತದೊಳತಿ ಹರುಷದಲಿ |
ಮತ್ತೆ ಮನ ಹರುಷದಿ ರಾಮಯ್ಯ ನಡೆದನು | ಚಿತ್ತ ಉಮ್ಮಳಿಸಿತಾ ಕ್ಷಣದಿ            || ೧೭೫ ||

ಮತಿಗೆಟ್ಟ ಪುರಜನ ಇರಲಿತ್ತ ಕಂಪಿಲನ | ಸುತ ರಾಮ ನಡೆದನರ್ತಿಯಲಿ |
ಅತಿಶಯದಿಂದ ಕಾಟಣ್ಣನು ಸಹವಾಗಿ | ಹಿತವಾಯಿತೆಂದು ಚೆಂಡಾಟ                || ೧೭೬ ||

ಆವ ಠಾವಿಲಿ ಆಡುವ ಚೆಂಡ ಕಾಟಣ್ಣ | ಆವ ಬಯಲು ದೆಸೆಮುಖವು |
ಆವ ಬಯಲು ಹಸನಾಗಿದೆ ಕಾಟಣ್ಣ | ಕೋವಿದ ರಾಮ ಕೇಳಿದನು                    || ೧೭೭ ||

ರಾಮನ ಕೂಡೆ ಇಂತೆಂದನು ಕಾಟಣ್ಣ | ಉರ್ವಿಗೆ ಪೂರ್ವದಿಕ್ಕುಗಳು |
ಕಿರಿಯಮ್ಮ ರತ್ನಾಜಿಯರಮನೆ ಪವುಳಿಲಿ | ತೆರವಿದೆ ರಾಜಬೀದಿಯಲಿ                || ೧೭೮ ||

ಒಳಿತಾಯಿತು ನಡೆ ಚಿಕ್ಕಮ್ಮ ನೋಡಲಿ | ಅಲ್ಲಿ ಮಕ್ಕಳ ಅರ್ತಿಯನು |
ಬೆಳ್ಳಿಯಲೇಳು ಚಿನ್ನದಲೇಳು ಹಲಗೆಯ | ಕೊಳ್ಳಿಯ ನಾಗ ಹೂಡಿದನು               || ೧೭೯ ||

ಬಂದು ನಿಂದರು ರತ್ನಾಜಿಯ ಪೌಳಿಲಿ | ಮಂದಿ ಮಕ್ಕಳು ಸಹವಾಗಿ |
ತಂದು ಹಾಕಿದರು ಚಿನ್ನದಲೇಳು ಹಲಗೆಯ | ಕೊಳ್ಳಿಯ ನಾಗ ಹೂಡಿದನು           || ೧೮೦ ||

ಅಂಬುಧಿಯ ಹೇಳಿ ಚೆಂಡ ಪುಟಿಸಿದರು | ಚೆನ್ನಿಗ ರಾಮನು ಆಗ |
ಇರವಂತಿಗೆ ಶಾವಂತಿಗೆ ಮುಡಿವಾಳ | [ಅದಿರ್ಮು] ತ್ತೆಸೆವ ಕೆಂಜಾಜಿ                || ೧೮೧ ||

ಪಿರಿದೆನಿಸುವ ನಾಗವಳ್ಳಿಯ ವನದಲ್ಲಿ | ಹರುಷದಿ ಚೆಂಡ ಪೂಜಿಸಿದ |
ಬಿರಿ ಮುಗುಳಾದ ಸಂಪಗೆ ವನ ಬನದೊಳು | ಸರಸದಿ ಚೆಂಡ ಪೂಜಿಸಿದ            || ೧೮೨ ||

ಹೊನ್ನ ಮಾಲೆಯ ಕಟ್ಟಿದ ಎಕ್ಕಟಿಗರು | ನಿನ್ನ ಕಡಯೊಳು ಕಾಟಣ್ಣ |
ಮನ್ನಣೆಯಿಂದ ಉಂಡುಟ್ಟು ಎಕ್ಕಟಿಗರು | ನನ್ನ ಕಡೆಯೊಳು ಕಾಟಣ್ಣ                 || ೧೯೩ ||

ಅಗಸರ ತಿಪ್ಪನು ನಾಯಿಂದ ನಾಗನು | ವಸ ಜಾಡರೆ ಕೆಂಪಯ್ಯ |
ಮುಸುಕಿಲಿ ವಲು ಮೇಲೇರಿ ಕಡಿವಂಥ | ಹೆಸರುಳ್ಳ ಬಾದುರಖಾನ                   || ೧೮೪ ||

ಹರಿಗಣ್ಣ ಉರಿಗೊಳ್ಳಿ ಬೈಚಪ್ಪ ಮುದ್ದಣ್ಣ | ಧುರಧೀರ ಬೇವಿನ ಸಿಂಗ |
ಧುರವ ಜಯಿಸುವ ಧುರಧೀರ ರೇವಂತ | ನೆರೆಗಲಿ ಅಗ್ಗದ ಮಲ್ಲ                      || ೧೮೫ ||

ಹರಡೆಯ ಸಿಂಗನು ಕೊರಡಲ್ಲಿಖಾನನು | ನೆರೆಗಲಿ ಕೊಟ್ಟಿಗರ ದೇವ |
ಪರಬಲ ವೈರಿ ದಳವಾಯಿ ಮಾದಣ್ಣನು | ನೆರೆಗಲಿ ದೇವಿಶೆಟ್ಟಿ ಲಿಂಗ                 || ೧೮೬ ||

ಲಿಂಗ ಮೋಗದ ಮಲ್ಲ ಕಲ್ಲಕೋಟೆಯ ಚಿಕ್ಕ | ಸಿಂಗನು ಕ್ಷೌರದ ಗಂಗ |
ವಂಗಾಲದೇಶದ ಹನುಮ ರಾಜಯ್ಯನು | ಸಿಂಗಳದೇಶದಿರುಪಾಕ್ಷ                   || ೧೮೭ ||

ನಲ್ಲೆಯ ನಾಗನು ಕಲ್ಲಿಕೋಟೆಯ ಚಿಕ್ಕ | ಬಲ್ಲಿದ ಸೋಮಿದೇವಯ್ಯ |
ನಿಲ್ಲದೆ ರಣಸೂರೆಗೊಂಬ ಮಲ್ಲುಕಖಾನ | ನೆಲ್ಲರ ತಾ ಹಂಚಿಕೊಂಡ                  || ೧೮೮ ||

ನಲ್ಲೆಗಲ್ಲ ಗತಿಯ ಎಕ್ಕಟಿ ಬೋವನು | ಕುಲಕೆ ಜೋಕೆಯ ಕೆಂಪನವರು |
ಕುಲಕಕ್ಕೆ ಸಲೆ ಬೇವಿನ ಸಿಂಗಣ್ಣನು | ಕೊರಳಿಲಿ ಶಿವದಾರ ಎಸೆಯೆ                   || ೧೮೯ ||

ಕಲಿಕ ಬಿಲ್ಲರ ಸಿಂಗಣ್ಣನು ತೆಲುಗರ | ನಲ್ಲರ ನಾಯಕನು |
ಮಲ್ಲರ ಗಂಡನು ಮಲ್ಲಿದೇವಯ್ಯನು | ಚಲದಂಕರಾಮ ಕರೆಸಿದನು                   || ೧೯೦ ||

ಅಕ್ಕಸಾಲೆಯ ಚಿಕ್ಕ ಒಕ್ಕಲಿಗರ ಮುದ್ದ | ಮಿಕ್ಕ ಮೀನಿಗ ಬೊಮ್ಮನವರು |
ಹೊಕ್ಕು ಹೊಯ್ವ ಹೆಸರಿನ ಗಾಳಿನಾಯ್ಕನು | ಎಕ್ಕಟಿಗರ ಹಂಚಿಕೊಂಡ              || ೧೯೧ ||

ಕಬ್ಬಲಿಗರ ನಾಗ ಬೊಬ್ಬುಲಿ ಚಿಕ್ಕನು | ಅಬ್ಬಣ್ಣನಾಯಕನವರು |
ತಬ್ಬಿಬ್ಬಗೊಳಿಸುವ ಬೊಲ್ಣಿದೇವನು | ಗಬ್ಬಿ ರಾಮಯ್ಯ ಹಂಚಿಕೊಂಡ                 || ೧೯೨ ||

ಬೆಲಗೂರ ಖಾನನು ಹಲಗೆಯ ಲಕ್ಕಣ್ಣ | ಮಿಗಿಲೆನಿಸುವ ಕಂಪನರು |
ಜಗದೊಳು ಅರಿಬಿರಿದಿನ ಮನ್ನೆಯರನು | ನಗೆಮುಖ ರಾಮ ಹಂಚಿದನು             || ೧೯೩ ||

ಸರಿಯಾಗಿ ಹಂಚಿಕೊಟ್ಟನು ಕಾಟಣ್ಣಗೆ | ಮರಿಯಾನೆ ಚೆನ್ನಗರಾಮ |
ತರಿಸಿದನಾಕ್ಷಣ ಅರಮನೆಯಿಂದಲಿ | ಪರಿಪರಿ ಪಟ್ಟೆ ನಾಣ್ಯಗಳ                      || ೧೯೪ ||

ಕರೆಸಿದ ರಾಮಯ್ಯ ಅಣ್ಣ ಕಾಟಣ್ಣನ | ಸರಿಯಾಯಿತೆಂದು ಮನ್ನೆಯರು |
ಸರಿತೂಕ ಬಂಗಾರ ಉಡುಗೊರೆಯನು ಕೊಟ್ಟು | ಪರಿವಾರಕೆ ವೀಳ್ಯ ಕೊಡಲು       || ೧೯೫ ||

ಪಟ್ಟೆ ಪಟ್ಟಾವಳಿ ಪವಳ ದೇವಾಂಗವು | ಉಟ್ಟು ಚಿಮ್ಮುರಿಗಳ ಸುತ್ತಿ |
ಕಟ್ಟಾಳು ರಾಮನೆಡಬಲದಲ್ಲಿ ನಿಂದರು | ನೆಟ್ಟನೆ ರವಿ ಶಶಿಯಂತೆ                    || ೧೯೬ ||

ಒಗ್ಗೊಡೆಯದೆ ಪರಿವಾರವು ಕೂಡಿತ್ತು | ಗಂಭೀರ ರಾಮನ ಪರಿವಾರ |
ತಗ್ಗು ಮುಗ್ಗಿಲ್ಲದ ಠಾವಿಲಿ ಕಾಟಣ್ಣ | ಲೆಗ್ಗೆಯ ಮಾಡ ಹೇಳಿದನು                       || ೧೯೭ ||

ಬೆಳ್ಳಿಯಲೇಳು ಚಿನ್ನದಲೇಳು ಲೆಗ್ಗೆಯ | ಕೊಳ್ಳಿಯ ನಾಗ ಹೂಡಿದನು |
ಒಳ್ಳೆ ಒಳ್ಳೆಯ ಮನ್ನೆಯರನು ರಾಮಯ್ಯ | ಅಲ್ಲಿ ನಿಲ್ಲಿಸಿ ಬೇಗದಲಿ                    || ೧೯೮ ||

ಹಿಡಿದನು ಮೊದಲಾಗ ನಿಡುಗಲ್ಲ ರಂಗರಸು | ಹೊಡೆವೆನು ಲೆಗ್ಗೆ ನೋಡೆನುತ |
ಹಿಡಿಯಲು ಕೊಡೆ ನಿಮಗೆ ಇದು ದೇವರಾಟೆಂದು | ನಗುತಿರಲು ಕೊಡಿರಣ್ಣ ಚೆಂಡ    || ೧೯೯ ||

ಈ ಮೇಲೆ ತನ್ನಾಟ ಕಾಣೆಯೆಂದರೆ ಬಿಡೆನು | ಓಡಿರೊ ರಾಮಯ್ಯನ ಮಂದಿ |
ತೋರಯ್ಯ ಹರುಷವನು ಹಿಡಿದಿರಲು ಹೆದರಿ | ಓಡುವೆ ಕಾಣೊ ಗಂಗರಸೆ            || ೨೦೦ ||

ಬೊಬ್ಬೆಯಾರ್ಭಟ ಮಾಡಿ ಜಗ್ಗಿಸಿ ಮುಂದಕೇರಲು | ರೌದ್ರದೊಳಗೆ ಚಂಡನಿಡಲು |
ಬಿದ್ದ ಲೆಗ್ಗೆಯ ಪುಟವು ಎದ್ದಿತು ಗಗನಕ್ಕೆ | ತಬ್ಬಿ ಹಿಡಿದನು ಕಲ್ಲಣ್ಣ                      || ೨೦೧ ||

ಹಾರಿದನು ಗಂಗರಸು ತೀರಿದನು ಮೊದಲಾಗಿ | ಸಾಗಿದ ಶಿವಗಂಗೆ ಯಾತ್ರೆ |
ತೋರಿರೊ ಮುಖವನು ಮೊರೆನೋಡವು ಎಂದು | ಹಾರಿಸಿಟ್ಟರು ಚಂಡ ಮರಳಿ      || ೨೦೨ ||

ಜೆಟ್ಟಿಯ ಮಗ ಲಿಂಗ ಸಿಟ್ಟಿಲಿ ಚೆಂಡನು | ತಕ್ಕೊಂಡು ಕೋಪಾಗ್ನಿಯೊಳಗೆ |
ಎಚ್ಚರು ಇರಲಣ್ಣ ಎದೆಯ ಮುರಿವೆನುಯೆಂದು | ಇಟ್ಟನು ಲೆಗ್ಗೆ ಚೆಂಡೇಳೆ             || ೨೦೩ ||

ತುಂಡಾಗಿ ಲೆಗ್ಗೆಯು ಭೂಮಂಡಕೆ ಪುಟಿದೇಳೆ | ಪ್ರಚಂಡನಹುದೆಂದು ತಲೆದೂಗೆ |
ಗುಂಡೊಡೆದು ಬರುವಂಥ ಚೆಂಡಿಗೆ ಎದೆಗೊಟ್ಟು | ನಿಂದು ಪಿಡಿಯಲು ಬಾಣಿ ಮುದ್ದ  || ೨೦೪ ||

ಆರಿದ ಹುರಿಕಡಲೆ ತೂಗಿ ಮಾರುವ ಜಾಣ | ಸೇರಿದನೆ ಮುನ್ನೂರನವನು |
ಮೇಲಾರು ಇಡುವರು ಮುಖವ ತೋರೆನುತಲಿ | ಹಾರಿಸಿ ಚೆಂಡನು ಇಡಲು          || ೨೦೫ ||

ಬಂದನು ಚಾಮಯ್ಯ ಭೇರುಂಡನ ರವದೊಳು | ಚೆಂಡನು ಪಿಡಿದು ಕರದೊಳಗೆ |
ಮುಂದಕ್ಕೆ ಅಡಿಯಿಟ್ಟು ಹನುಮೇಂದ್ರನಂದದಿ | ಹೊಡೆದನು ಲೆಗ್ಗೆ ಪುಟಿವಂತೆ        || ೨೦೬ ||

ಲೆಗ್ಗೆ ಬೀಳಲು ನೋಡಿ ಎದೆ ಬಿದ್ದು ರಾಮನ ಮಂದಿ | ಬಿದ್ದು ಓಡುವರ ಕಣುಗೆಟ್ಟು |
ಲೆಗ್ಗೆ ಎನುತ ಬಂದು ನೆಗೆದು ಹಾರಲು ಬರಲು | ಕೋವಿದ ಎಡಗಯ್ಯ ಬಂಟ         || ೨೦೭ ||

ನೋಡಿದ ಚಾಮಯ್ಯ ಹಾರುತ ಬರುವುದ ಕಂಡು | ಹೋಯಿತು ತಮ್ಮಾಟವೆನುತ |
ಹಾರಿಸುವೆ ಸ್ಥಿತಿಯವನ ಎದೆ ಹಾರಿ ಹೊಡೆಯಲು | ಓರ್ಯಾಗಿ ಗೋಡೆಗೆ ಬಡಿಯೆ   || ೨೦೮ ||

ಚೆಂಡು ತಪ್ಪಲು ಬೇಗ ಪ್ರಚಂಡ ರಾಮನ ಮಂದಿ | ಒಂದೆ ಆಟಕೆ ನಿಂತಿರಲು |
ಕುಂಭಿನಿ ಒಡೆದಂತೆ ಕೋಳಾಹಳ ಮಾಡುತ್ತ ಬರಲು | ರಂಭೆ ರತ್ನಾಜಿ ಕೇಳಿದಳು    || ೨೦೯ ||

ಭೋರೆಂಬ ಸ್ವರವನು ಲಾಲಿಸಿ ಕೇಳಿಯೆ | ಏನಿದು ಗಲಭೆ ಊರೊಳಗೆ |
ಬಾರದು ನಿದ್ರೆನಗೆ ತಲೆ ಭಾರಗೊಡುವುದು | ಮುಂಡೆ ನೋಡೆನ್ನ ಪ್ರಾಣದ ಸಂಗಿ     || ೨೧೦ ||

ರಾಯ ಬೇಂಟೆಯನಾಡಿ ಊರ ಹೊಗುವನು ಕಾಣೆ | ಭೇರಿ ಕಾಳೆಯು ನೀರ ಬಯಲು
ನಾರಿ ಮರೆದನು ಪ್ರಾಣಕಾಂತಗೆ ಒಂದು | ಆಳು ಹುಟ್ಟಿದೆ ತನ್ನ ಬಳಿಯ              || ೨೧೧ ||

ಆದರೆ ಅದಕೇನು ನೋಡಮ್ಮ ಸಂಗಾಯಿ | ಸೇರಲು ಮನೆ ಮುಂದೆ ಮುದಿಯ |
ಹಾರುವೆ [ತೊಂ]ಡನೂರ ರಾಕ್ಷಸಿಯಂದದಿ ಎನ್ನ | ನಾಲ್ವರ ತೆರನಾಗಿ ಕಂಡ        || ೨೧೨ ||

ಒಡತಿ ಪೇಳಲು ಸಂಗಿ ಕರುಮಾಡವನು ಹತ್ತಿ | ಬೆರಗಾಗಿ ನೋಡೆ ಜನಜಾತ್ರೆ |
ಕಿರಣದ ಪ್ರಭೆಯಂತೆ ಧರಣಿಯ ರಾಯರು | ನೆರೆದು ಆಡುವ ಲೆಗ್ಗೆಯನ್ನು             || ೨೧೩ ||

ಊರ ಮುಂದಣ ಹೊನ್ನ ಅರಳಿಯ ಮರದಡಿ | ವೀರ ರಾಮನ ಚೆಂಡಿನಾಟ |
ಸೇರಿತು ನಿನ್ನ ಮನದ ಬಯಕೆಯು ಎಂದು | ವಾರಿಜಮುಖಿಗೆ ಹೇಳಿದಳು            || ೨೧೪ ||

ರಾಜ ನಿಲ್ಲದ ಹಿಂದೆ ಪಟ್ಟಣದೊಳಗೆಲ್ಲ | ಜೂಜಿನ ಪಗಡೆಗಳಿಹವೆ |
ತೇಜಿಪನಾರೆಂದು ಲೆಗ್ಗೆಯನಾಡು | ರಾಜಪುತ್ರನ ಪೇಳೆ ರಮಣಿ                      || ೨೧೫ ||

ಏನ ಹೇಳುವೆನಕ್ಕ ರಾಮನ ರೂಪಿಗೆ | ಮಾನಿನಿಯರು ಬರುತಿಹರೆ
ಭಾನು ಕಳೆಯವನ ಸೋಲಿಸುತಿಹರೆಂದು | ತಾನು ಹೇಳಿದಳು ಸಂಗಾಯಿ           || ೨೧೬ ||

ಚೆನ್ನಿಗ ರಾಮನ ನೋಡಬೇಕೆನುತಲಿ | ತನ್ನರಮನೆಗೈದಿದಳು |
ಪನ್ನೀರ ತಕ್ಕೊಂಡು ಕೈಕಾಲು ಮುಖವನು | ಚೆನ್ನಾಗಿ ತೊಳೆದಳು ರತ್ನಾಜಿ          || ೨೧೭ ||

ಅಂಗನೆ ನಡೆದು ಬಂದಳು ಸಜ್ಜೆ ಗೃಹಕಾಗಿ | ಬಂಗಾರ ಪತ್ರಗಳ್ಹರಹಿ |
ಭೃಂಗಕುಂತಳೆಯರು ಶೃಂಗಾರವನೆ ಮಾಡೆ | ಅಂಗಜನ ಸತಿಯುಉ ಹೊಳೆವಂತೆ || ೨೧೮ ||

ಒತ್ತುವರು ಕಸ್ತೂರಿ ಪುನುಗು ಕೆಮ್ಮೆಣ್ಣೆಯನು | ಒಪ್ಪಕ್ಕೆ ಬಾಚಿ ಮುಡಿಗಟ್ಟಿ |
ಹಸ್ತ ಕಡಗವು ಹರಳೋಲೆ ಮುತ್ತಿನ ಸರವ | ಇಟ್ಟರು ಸ್ಥಾನಸ್ಥಾನಕ್ಕೆ                  || ೨೧೯ ||

ಕೊಪ್ಪ ಚಿಂತಕ ಕೊರಳಹಾರ ರತ್ನದ ಪದಕ | ಇಟ್ಟರು ರಾಮನ [ತ]ಣಿಸುವಂತೆ |
ಕಾಲಲಂದುಗೆ ಪಿಲ್ಲಿ ಮೇಲೆ ಪಾಗಡ ಗೆಜ್ಜೆ | ವೀರಮಿ ಟೀಕೆ ಬಿಲ್ಲೆ ಸರವು               || ೨೨೦ ||

ಸೂರ್ಯನ ಪ್ರಭೆ ಮುಂಜ್ಯೋತಿರೆ ಗಟ್ಟಿಯು ಅಪರಂಜಿ | ಮೀನ ಗೆಜ್ಜೆಗಳು ಕಾಲ್ಕಡಗ |
ಮುಡಿಯ ಭಾರವ ಶಿರದೊಲವು ತಡೆಯದುಯೆಂದು | ಪೊಡೆಯ ಚಿತ್ತಕವನು ಧರಿಸಿ || ೨೨೧ ||

ಎದೆ ಕಳಸ ಕುಚದೊಲವ ಪಿಡಿ ನಡುವು ತಾಳದು ಎಂದು | ಚೌಕುಳಿ ಡಾಬು ಇಟ್ಟರು ದಾದಿಯರು |
ಇಟ್ಟರಾಭರಣವ ಮತ್ತವಳು ದಣಿವಂತೆ | ಕತ್ತಿಗೆ ಹೇರು ಸಮನಾಗಿ                   || ೨೨೨ ||

ಗಚ್ಚಿನ ಅಪರಂಜಿ ಕೆತ್ತಿದ ಸೀರೆಯನು | ನೇತ್ರಮುಖಿಯರು ಉಡಿಸಿದರು |
ನೋಡುವ ವಿಟರೆದೆ ಮೂಡಿದ ಮಾಲೆಯೆಂಬ | ಬಾಳೆಯ ತಳಿರಂತೆ ರವಿಕೆ          || ೨೨೩ ||

ಜಾಣ ಮೋಹನದ ಪ್ರವೀಣ ಬರೆಯಲು ಚಿತ್ರ | ಭಾವಕ್ಕೆ ಮಿಗಿಲಾಗೆ ರತ್ನಿ |
ಕಸ್ತೂರಿ ತಿಲಕವನಿಟ್ಟರು ನಯನದ | ಒತ್ತಿಗೆ ಕಪ್ಪು ಕಾಡಿಗೆಯ                        || ೨೨೪ ||

ಒಪ್ಪದಿಂದಲಿ ಧರಿಸಿ ನಿಲುಗನ್ನಡಿ ಕೊಡಲು | ನಕ್ಕಳು ನೋಡಿ ಲಾವಣ್ಯ |
ಸಂಗಾಯಿ ನೀ ನೋಡೆ ಎನ್ನಂಗಕೆ ಆಭರಣ | ಹೊಂದಿಕೆಯಾಗಿ ತೋರುವುದೆ        || ೨೨೫ ||

ಚಂದ್ರವದನೆ ಕೇಳು ಮುಕುಂದನ ಸುತನರಸಿ | ಗಿಂದಲು ರೂಪದೋರುವುದು       || ೨೨೬ ||

ಬಾಗುತ ಬಳಕುತ ಜಾಗಿಸಿ ನಡೆವುತ | ದಾದಿಯರ ಕರಗಳ ಪಿಡಿದು                 || ೨೨೭ ||

ಏರಲು ಕರುಮಾಡವ ತೋರುತ ಕಿರುಬೆವರು | ನಾರಿಯರು ಬೀಸೆ ಚಾಮರವ |
ಘಲ್ಲುಘಲ್ಲೆನುತಲಿ ಗಮಕದಿ ನಡೆಯಲು | ಕೆದರುತ ನೀರೆ ಶೃಂಗಾರ                  || ೨೨೮ ||

ನಿಲ್ಲುತ ಅಡಿಗಡಿಗೆ ನೀರಜಮುಖಿ ಬಂದು | ಮೆಲ್ಲನೆ ಕರುಮಾಡನೇರಿ |
ಏಳು ನೆಲೆಯ ಹತ್ತಿ ಬಾಲೆ ರತ್ನಾಜಿಯು | ಸುಳ್ಳಲ್ಲ ಸಂಗಿ ನಿನ ಮಾತು               || ೨೨೯ ||

ಕಾಲ ಮಣಿಗಳ ಮೇಲೆ ಹಾಸಿ ಗದ್ದುಗೆ ಹಾಕಿ | ಬೆಪ್ಪಾಗಿ ಕುಂತಳು ಸಂಗಿ |
…………………………. | ಚೆದುರ ರಾಮನ ತೋರೆ ಎನಗೆ                           || ೨೩೦ ||

ಕಾಣಗೊಡದು ಕಾಣೆ ಆಳ್ಯಾರೊ ಅರಸಾರೊ | ಕೀಳು ಮೇಲಿಲ್ಲ ನೋಡದರೆ |
ತೋರುವರು ರವಿ ಶಶಿಯು ಮೂಡಿಪ್ಪ ತೆರದೊಳು | ಬಾಲತ್ವದೊಳು ಕಂಡ ಮಾತು || ೨೩೧ ||

ಮೋಹನಾಂಗಿಯೆ ಕೇಳು ಪ್ರಿಯವಾದರೆ ನಿನಗೆ | ಅಹುದಾದರೆನ್ನವ ರಾಮನೆಂಬೆ |
ತೋರಲು ಮುಂದಾಗಿ ಹಾರುವುದು ಸ್ಥಿತಿ ನಿನ್ನ | ಕಾಮಾಗ್ನಿ ಕಾತರ ಪುಟ್ಟಿ            || ೨೩೨ ||

ಧರೆಗಧಿಕ ಹಂಪೆಯ ವರಪುಣ್ಯ ಕ್ಷೇತ್ರದ | ಹರ ಶಂಭು ವಿರಿಪಾಕ್ಷಲಿಂಗ |
ತರಳ ರಾಮನ ರತ್ನಿ ಕುರುಹ ಕೇಳುವ ಬಳಿಗೆ | ಮೂರೇಳು [ಮೂರೆಂಟು] ಸಂಧಿ ಪದ ಮುಗಿಯೆ       || ೨೩೩ ||[1]

[1] ಅಂತು ಸಂಧಿ ೧೦[>೧೦]ಕ್ಕಂ ಪದನು ೨೩೦೯ಕ್ಕಂ ಪದನು ಮಂಗಳ ಮಹಾಶ್ರೀ (ಮೂ).