ಆತುಕೊಂಡರು ತಮ್ಮ ಹಮ್ಮೀರ ಭಟನೆಂದು | ರೂಢಿಸಿ ಕೋಪಾಗ್ನಿ ಮನದಿ |
ನೋಡಿ ಲೆಗ್ಗೆ ಯನಿಡಲು ಮೂರೆರಡು ತುಂಡಾಗಿ | ಹಾರದೆ ಪುಟವು ಸುಳಿದಿರುಗಿ || ೧೩೧ ||
ಬೀಳಲು ಲೆಗ್ಗೆಯು ಓಡಿ ರಾಮನ ಮಂದಿ | ತೋರುವರು ನಾಲ್ಕು ಮುಖದೊಳಗೆ |
ಏರಿದನು ಮತ್ತೊಬ್ಬ ಬಾಣ ರಂಗಯ್ಯನು | ವಾರ್ಯಾಗು ಲೆಗ್ಗೆ ಬಿತ್ತೆನುತ || ೧೩೨ ||
ಹಿಡಿವ ಲೆಗ್ಗೆಯ ನಮ್ಮ ಹೊಡೆಯಲು ರಂಗಯ್ಯ | ಕದುಬಿಡಲವನು ಕಾತರದಿ |
ಬಡಿಯಲು ಬಲಭಾಗ ತುದಿ ಅಂಗಿ ಒರಗನು | ನೆಗೆದು ಓಡಲು ಬಾಣ ದೆಸೆಗೆ || ೧೩೩ ||
ಗೆಲಿದರು ಒಂದಾಟ ಗೆಲವುಳ್ಳ ಕಾಟನ ಮಂದಿ | ಹಿಡಿಯಲು ಬಿರಿದಿನ ಕಹಳೆ |
ನಡುಗದೆ ಲೆಗ್ಗೆಯ ಕನಕಗಿರಿಯ ನಾಯ್ಕ | ಹಿಡಿಯಲು ಚೆಂಡ ಕೋಪದಲಿ || ೧೩೪ ||
ತಟ್ಟನೆ ಇಡು ಬೇಗ ಎಷ್ಟೊತ್ತು ನಾಯಕರೆ | ಪಟ್ಟಕ್ಕೆ ಲೇಖ ರತ್ನ ಮಣಿಯೆ |
ಕೊಟ್ಟೇನೆ ಪುಟಿಗಳನು ದಿಟ್ಟರೆ ಬಳಸಿರೆ | ಕೊಟ್ಟು ಕಳುಹಯ್ಯ ಈಗೆಮಗೆ || ೧೩೫ ||
ಗಮಕದ ನುಡಿಗೇಳಿ ಕನಕಗಿರಿನಾಯಕ | ಕನಲಿ ಕೋಪಾಗ್ನಿಯಿಂದ್ಹೊಡೆಯೆ |
ಜಗಳವು ಕರುವಾಡ ಮುರಿದು ಲೆಗ್ಗೆಯ ಪುಟಿಯು | ನೆಗೆದಾಡುತಿರಲು ಮೇಘದಲಿ || ೧೩೬ ||
ತಪ್ಪಲ್ಲ ಕೈಯೊಳಗೆ ಎದೆಗೆಟ್ಟು ಓಡಲಿ ಬೇಡಿ | ಕೊಟ್ಟವಗೆ ಪುಟಿಯ ಹಮ್ಮೀರ |
ಕಿಚ್ಚಿನಾರ್ಭಟದೊಳು ಬರುವ ಚಂಡನು ಕಂಡು | ಹಿಡಿದನು ಬಾಣಿಯ ಮುದ್ದ || ೧೩೭ ||
ಸಾಗಿದ ಕನಕಯ್ಯ ಕಾಲನ ಪುರಕಾಗಿ | ವಾಲಿ ಬಂದೆ ಕೊಳ್ಳಿ ಚೆಂಡ |
ಯಾರಣ್ಣಿ ಇಡುವರು ಮೋರೆ ನೋಡುವ ಬನ್ನಿ | ಆತುಕೊಂಬೆವು ಬೆಲ್ಲದಂತೆ || ೧೩೮ ||
ನೋಡಿವರಸ ಮಾತಿನ ಮೋಡಿ ಸಿಟ್ಟಿವನೆಂದು | ರೂಢಿಸಿಕೋಪ ಚಾಮಯಗೆ |
ಆಡುವ ನುಡಿ ಗರ್ವ ಮುರಿವೆನೆನ್ನುತ ಬಂದು | ನೀಡುವೆ ಚೆಂಡ ಕರದೊಳಗೆ || ೧೩೯ ||
ಹೆಚ್ಚಿನ ನುಡಿಬೇಡ ಗುತ್ತಿಯ ಚಾಮಯ್ಯ | ಮುಚ್ಚಿಕೊ ನಿನ್ನ ಪೌರುಷವ |
ಕೆಟ್ಟರು ಕೆಲಬರು ದಿಟ್ಟ ಚಲಗಳನಾಡಿ | ಎಷ್ಟೊಂದು ಮಾತು ಇಡು ನೀನು || ೧೪೦ ||
ಹೀನ ವಚನಗಳು ಕೇಳುತ ಚಾಮಯ್ಯ | ಭೀಮನಾರ್ಭಟದ ಕೋಪದಲಿ |
ಮೇಗಕ್ಕೆ ಕೈ ನೀಡಿ ಆರ್ಭಟಿಸಿ ಹೊಡೆಯಲು | ಲೆಗ್ಗೆ ಜೋರಾಗಿ ಪುಟಿಯೇಳೆ ಚೆಂಡು || ೧೪೧ ||
ಓಡಬೇಡಿರೊ ನಿಲ್ಲಿ ಮೇಗಳ ಪುಟಿ ಹಿಡಿದು | ಸಾರದಿರಲು ನಡೆವನಂತೆ |
ಬಾಣ ಪ್ರಯೋಗದಿ ಬರುವ ಚೆಂಡನು ಕಂಡು | ಜಾಡರ ಬಸವನು ಪಿಡಿದ || ೧೪೨ ||
ಆಡಿದ ಚಾಮಯ್ಯ ಭೂಮಿ ತೂಕದ ಮಾತ | ಜಾಡನ ಕರದೊಳು ನಡೆದ |
ಯಾರಿನ್ನು ಇಡುವರೆ ಮೋರೆ ನೋಡುವ ಬನ್ನಿ | ಹಾರಿಸಲು ಚೆಂಡು ಹಿಮ್ಮರಳಿ || ೧೪೩ ||
ಸಿಟ್ಟಿನೊಳ್ ನಡೆತಂದ ಚಿನ್ನನ ಗಿರಿದುರ್ಗದ | ಚಿಕ್ಕಣ್ಣ ನಾಯ್ಕನೆಂಬವನು |
ಗಟ್ಟ್ಯಾಗಿ ಇರಿರಣ್ಣ ಎದೆಗೆಚ್ಚ ಮುರಿವೆನು ನಿಮ್ಮ | ಹೊತ್ತುಣುತೆ ಓಡಿಸಿ ಹೊಡೆವೆನು || ೧೪೪ ||
ಹೊಡೆದ ಚಿಕ್ಕಣ್ಣನ ಬಗೆಯ ಬಲ್ಲೆವು ಬೇರೆ | ಕುರುಹ ಬಲ್ಲವಗೆ ಎಲೆ ಯಾಕೊ |
ಸುಡು ನಿನ್ನ ಮಾತುಗಳ ಕೊಡು ನೋಡು ಪುಟಿಯನು | ಎಡದ ಕೈಯೊಳಗೆ ಪಿಡಿವೆನು || ೧೪೫ ||
ನರಿಗಿಂದ ಕಡೆಯಾಗಿ ತೃಣಕರಿಸಿ ಆಡುವರೆಂದು | ಮೆರೆಯುತ [ಮೇಘನ] ಭರದಿ |
ಹೊಡೆಯಲಾಕ್ಷಣ ಲೆಗ್ಗೆ ನೆಗೆದು ಚೆಂಡಿನ ಪುಟಿಯು | ಗಗನ ಮಾರ್ಗವ ತುಡುಕುತಿರಲು || ೧೪೬ ||
ಸಿಟ್ಟ ಮಾಡಿದರೇನು ತಪ್ಪಲ್ಲ ಚಿಕ್ಕಣ್ಣ | ಕೊಟ್ಟನು ಕುಶಲತ್ವ ಪುಟವ |
ಬಿಟ್ಟರೆ ಬಹುಜೋಕೆ ಕಟ್ಟು ಮಾಡಲು ರಾಮ | ಎದೆಗೊಟ್ಟು ಪಿಡಿದನು ಮಡಿವಾಳ || ೧೪೭ ||
ಅಣ್ಣಾಜಿ ಚಿಕ್ಕಣ್ಣ ಮಾಡಿದ ಛಲಪದಕೆ | ಜನ್ಮದ ಪಿಂಡ ತಲ್ಲಣಿಸಿ |
ಮುನ್ನುಳಿದ ಹಳೆ ಅರಿವೆ ತೊಳೆವ ಮಾಚನ ಕರೆದು | ಎನ್ನುತ ರಾಮ ನಗುತಿರಲು || ೧೪೮ ||
ಕಾಟನ ಕಡೆಯೊಳು ಮೀಟಾದ ಮನ್ನೆಯರು | ಸೋತು ಕುಳಿತರು ಚಿಂತಿಸುತ |
ಚಿಂತೆ ಯಾತಕೆ ಬೇಡ ತಾನೊಬ್ಬ ಬಡವ ಬಂದೆನುಯೆಂದು | ಹಾಕೆನಲು ಚೆಂಡ ಹಮ್ಮೀರ || ೧೪೯ ||
ಖಾನರು ಬಂದರೆ ಮಾಡೆವು ಸಲ್ಲಾಮ | ನೋಡೇವು ಇಡು ನಿನ್ನ ಕೈಯ |
ಗೋಡೆಗಳನೆ ಏರಿ ನಾಡ ಸುಲಿದಂತಲ್ಲ | ಹಾಸ್ಯಾಡಲು ರಾಮನ ಮಂದಿ || ೧೫೦ ||
ಹಾಸ್ಯವಾಯಿತು ನಿಮಗೆ ಸೋತರೆನ್ನವರೆಂದು | ಮೀಸೆಯ ಮುರಿದು ಹಮ್ಮೀರ |
ಕೇಸರಿ ಕೆರಳಿದ ರೋಷಾಗ್ನಿಯಿಂದಲಿ ಒಡೆಯೆ | ಹಾಸರು ಮಲಗಲು ಲೆಗ್ಗೆ || ೧೫೧ ||
ಹಮ್ಮೀರಖಾನನ ಜರಿದೊಮ್ಮೆ ನುಡಿದೆವು | ಮುನ್ನ ತಮ್ಮ ಓಡಿಸಿ ಗೂಳ್ಯವನು |
ಇನ್ನು ನೋಡಿರಿ ಎದೆಯ ಮುರಿವುದು ಚೆಂಡು | ನಿಲ್ಲದೆ ಓಡೆ ಬಯಲಾಗಿ || ೧೫೨ ||
ಹೊಡೆದಾಟ ಬರಿಸಿದ ಬಾದೂರನ ಮಗನಹುದೊ | ಹೀನರೊಳಗೆ ಸರ್ಜಮೀಯ |
ರಾಯ ಕಾಟನು ಮೆಚ್ಚೆ ನಗುತ ಮನ್ನೆರನೆಲ್ಲ | ನೋಡಿದೆವು ಈ ಮೇಲೆ ಒಂದ || ೧೫೩ ||
ನೋಡುವುದು ಇನ್ನೇನು ಬಾಣಿ ಮುದ್ದನು ದೌಡ | ಬೀಳುವ ಲೆಗ್ಗೆ ಬಂತೆನಲು |
ತೋರಿದ ಮದಬಂದ ಮಾರಿ ಕೋಣನ ತೆರದಿ | ನೋಡಿಡಲು ಹಮ್ಮೀರ ನೆಗೆದು || ೧೫೪ ||
ಇಟ್ಟನು ತನ್ನಯ ಶಕ್ತಿ ಸಾಹಸದೊಳು | ತಪ್ಪಲು ಚೆಂಡ ಇಬ್ಬರೊಳು |
ಬಿಟ್ಟಂತೆ ಕಡೆ ಸಿಡಿಲು ಆರ್ಭಟ ಮಾಡಲು ಬಂದು | ಹೊಕ್ಕುದು ಮನೆ ಮಠಗಳೆಲ್ಲ || ೧೫೫ ||
ಕಂಡರು ನೋಡುವ ಗಣಗಳು ಜನಸ್ತೋಮ | ಬೆಂಗಾಡ ಬಿದ್ದೋಡುವರು |
ಚೆಂಡಲ್ಲ ಇದು ಪಾಪಿ ತಿಂಬೋರೆ ನರ ಪಡೆಯ | ಬಂದು ಸೇರಿಹುದು ಕುಮ್ಮಟದಿ || ೧೫೬ ||
ನೋಡಿರೈ ಜಾಣರು ಹಾರಿದವು ಮನೆಯೆಂಟು | ಕೋಣ ಮುದ್ದಣ್ಣ ಸಿಕ್ಕಿರಲು |
ಚೂರಾನೆಯರು ಮಾಂಸ ಕೂಡಿದರಂದಿಗೆ | ತೋರೆನಲು ಗುರುತು ನಿಲ್ಲುವುದೆ || ೧೫೭ ||
ಆಡುವರು ವಿಪರೀತ ಪ್ರಾಯ ಮದಳಗ ಮೇಲೆ | ಜೀವದಾಸೆಗಳನು ತೊರೆದು |
ತಾವು ಸಾಯಲು ಪೂರ್ವ ಲಿಖಿತವೆಯೆಂದು | ದೂರನೆ ನಿಂದು ನೋಡುವರು || ೧೫೮ ||
ಚೆಂಡು ತಪ್ಪಿತು ಎಂದು ಛಲದಂಕ ರಾಮನ ಮಂದಿ | ಕಂದನಂದದಿ ಹಾರಿ ನಗುತ |
ಹೂಡಿದ ಮದುವೆಗೆ ಮರುಲಿ ಮಾಡೆವು ನಿಮ್ಮ | ತೊಟ್ಟಿದ ಎದೆಯ ಮುರಿದೇವು || ೧೫೯ ||
ನೀವೇನು ಮುರಿವಿರಿ ಸೂಳೆಯರ ಮನಗುಡಲಿ | ಭೀಮ ರಾಮಯ್ಯ ಹೊರತಾಗಿ |
ರೋಮ ಅಳುಕದೆ ನಮಗೆ ಈ ಊರ ವೇಶಿಯರ ಮನೆಗೆ | ನೀ ಹೊರಿಸಿರೋ ಮನ್ನೆಯರು || ೧೬೦ ||
ಆಟ ಗೆದ್ದರೆ ಸಾಕು ಈ ಮಾತಿರಲಿ ನಿಮ್ಮೊಳಗೆ | | ಸೋತರೆ ನೀವೆ ಹೊರುತಿಹರು |
ಹಾಕಿರೊ ಚೆಂಡಿತ್ತ ಹೂಡಿ ಲೆಗ್ಗೆಯ ಬೇಗ | ಘನಭೂಪರಿದ್ದರೆ ನಿಮಗೇನು || ೧೬೧ ||
ಆಡಲು ಲೆಗ್ಗೆಯ ರಾಯ ಕಾಟನ ಮಂದಿ | ಊದಿಸಲು ರಾಮ ಕಹಳೆಯನು |
ಮೂರು ರಾಯರ ಗಂಡ ಮುರಿವನೆದೆಗಳನೆಂದು | ಭೋರಿಡಲು ಭೂಮಿ ಒದರ್ವಂತೆ || ೧೬೨ ||
ಚೆಂಡನು ಹಿಡಿದನು ಜಂಗಮ ಬಸವಯ್ಯ | ಗಂಗೆ ರಮಣನಿಗೆ ಮೊದಲಾಟ |
ಉಂಡವರು ಮನೆಗೊಂದು ಭೋಜ್ಯ ಭಿಕ್ಷದಸ್ವಾಮಿ | ಕಂಡ ಕೈಯಲು ಹುದು ಕೊಡುವೆವು || ೧೬೩ ||
ತಿರುಕ ಜಂಗಮರೆಂದು ಅಣಕಬೇಡಿರಿ ನೋಡಿ | ಹುಡುಕಿರೋ ಓಡುವರೆ ನೆಲನ |
ಪುಲ್ಲಶರನ ವೈರಿ ನೆನೆದು ಹೊಡೆಯಲು ಲೆಗ್ಗೆ | ಚೆಲ್ಲಾಡಿ ಪುಟವೇಳದಿರ[ವೆ] || ೧೬೪ ||
ನೋಡಯ್ಯ ಲಿಂಗಣ್ಣ ವೀರ ಸಂಗಮರಾಯ | ಭೂಮಿ ಪಾಲಕರು ನೃಪರೆಲ್ಲ |
ಆಡಿದೆವು ಹಾಸ್ಯವನು ಓಡಿಸಿದ ಒಡೆಯರ | ಭೋರನೆ ಎಲ್ಲ ಹೆದರೋಡೆ || ೧೬೫ ||
ಬರುವೆವು ಲೆಗ್ಗಿಗೆ ಉರುಬುವೆವು ನಾಕು ಮುಖದಿ | ಬರುವರು ಒದಗಿ ಸನ್ನಿಧಿಗೆ |
ಹಿಡಿದ ಲೆಗ್ಗೆಯನೆಂದು ಹನುಮಾನಾಯ್ಕನು ಬರಲು | ಹೊಡೆದಾಡು ಎಡಗಾಲು ಮುರಿಯೆ || ೧೬೬ ||
ತೀರಿತು ನಮ ನಿಮಗೆ ಸಾಲವೆಂಬುವುದಿಲ್ಲ | ಏರಿದಾಟಗಳು ಇಳಿದಾವು |
ಸಾರುತಿರಲು ಕಹಳೆ ರಾಯ ರಾಮನ ಕಡೆಯ | ಹಮ್ಮೀರರು ಬಂದು ಚೆಂಡಾಡೆ || ೧೬೭ ||
ಕಲ್ಲುಕೋಟೆಯ ಚಿಕ್ಕ ಕಾಕ್ಹೋಡೆದು ಚೆಂಡನು | ಪಿಡಿದ ಬಲ್ಲಿದ ಮದದಾನೆಯಂತೆ |
ಪಲ್ಲಸನ ಪಿತನಳಿಯೆ ಭೀಮನಂದದಿ ಹೊಡೆಯೆ | ಅಲ್ಲಿಗೆಯು ಹಾರಿ ಬೀಳೆ || ೧೬೮ ||
ಅಣ್ಣಾಜಿ [ಕಾಟ]ನ ಮನ್ನೆಯರು ತಲೆದೂಗೆ | ಕುಳ್ಳನ ಮರಿಯಂಥ ಚಿಕ್ಕ |
ಎಲ್ಲಿಹುದೊ ಈ ಶಕ್ತಿ ಯಮನಿಗೆ ಮಿಗಿಲಾದ | ಹುಲ್ಲೆಯಂದದಿ ಬೆದರಿ ಓಡೆ || ೧೬೯ ||
ಓಡಬೇಡಿರೊ ನಿಲ್ಲಿ ಆಡದಿರಿ ಛಲ ಪದವ | ಸೂಳೆಯರ ಮನೆಗೆ ನೀರಿಲ್ಲ |
ಕೂಡಿ ಬಂದೆವೊ ಕಾಣೊ ಓಡಿದರೆ ಏನಣ್ಣ | ಏರಲು ಗುತ್ತಿ ಚಾಮಯ್ಯ || ೧೭೦ ||
ಲೆಗ್ಗೆ ಬಿದ್ದನು ಎಂದು ನೆಗೆದು ಹೊಡೆಯಲು ಚಿಕ್ಕ | ಬೊಗ್ಗಲು ಚಾಮಯ್ಯ ಗೋಣ |
ಅವ ಬಾಯ ಬಡಕೊಂಡು ಕಡೆಗೆ ಓಡಲು ಚೆಂಡು | ಮುದ್ದು ರಾಮನ ಕಹಳೆ ಸಾರೆ || ೧೭೧ ||
ಆಟ ಉತ್ತಮವೆಂದು ರಣಭೂಪ ಕಾಟಯ್ಯ | ಝೇಂಕರಿಸೆ ಕಹಳೆ ಭೇರಿಗಳು |
ಭೋರನೆ ಬಂದಲ್ಲಿ ರಾಯ ಕಾಟನ ಮಂದಿ | ಹೂಡಲು ಲೆಗ್ಗೆ ಪ್ರತಿಯಾಗಿ || ೧೭೨ ||
ಬಂದನು ದೇವಾಂಗ ಗೊಂಬೆ ಬರಹವ ನೆಯ್ವ | ಚೆಂಡ ಪಿಡಿಯಲು ರೋಷದಲಿ |
ಬಂದನು ಬಸವಣ್ಣ ಬಲುಜಾಣ ಲಾಳಿಯ | ತುಂಬಲಿಟ್ಟಿಹನು ತಟಹಾಯೆ || ೧೭೩ ||
ಇರಲಣ್ಣ ಎಚ್ಚರು ಜರಿದರೆ ತನಗೀಗ | ಕೊರತೆಯಾದಡೆ ಕುಲವಂಶ |
ಹನುಮನ ತರಹದಿ ನೆಗೆದು ಹೊಡೆಯಲು ಲೆಗ್ಗೆ | ತರಗೆಲೆಯಂದದಿ ಹಾರೆ || ೧೭೪ ||
ಮಗ್ಗದವನು ಎಂದು ಅಗ್ಗ ಮಾಡಿದೆವಲ್ಲ | ತಿದ್ದಿದ ಬಿಸಿನೀರ ಬುಡಕೆ |
ಬಿದ್ದು ಓಡಲುಗೊಡ ಬೆದರಿದ | ಓಡಲಮ್ಮದೆ ಎಡಬಲನ || ೧೭೫ ||
ತೋರುವರು ಅಣಿ ಮೊನೆಯ ನಾನಾ ಮುಖದೊಳು ಅವ[ರು] | ಏರಿದ ಲೆಂಕೆಯ ಹನುಮ |
ಭೇರುಂಡನಂದದಿ ನೆಗೆದು ಹೊಡೆಯಲು ಬಸವ | ಹಾರಲು ಎಡಗೈಯ ಬೆರಳು || ೧೭೬ ||
ಅಣ್ಣಾಜಿ ಕಾಟಮಗೆ ಆಟೆರಡು ಹೊತ್ತವು | ಒಮ್ಮೆ ರಾಮನ ಕಹಳೆ ಸಾರೆ |
ವರ್ಮಗಳು ಮಸಗುತ ಧರ್ಮಜನ ಪಿತನಂತೆ | ಖಿನ್ನನಾದನು ಕಾಟಣ್ಣ || ೧೭೭ ||
ಲೆಂಕೆಯ ಹನುಮನು ನೊಂದನೆಂಬುದ ಕೇಳಿ | ಕಂದಲು ಕಾಟಣನ ಮುಖಕಾಂತಿ |
ಕಂಡಿಕೆ ಭನವನು ಗುಂಡಿಗೆಯ ಮುರಿವೆನು | ಹೊಂದದೆ ಆಟ ತಮ್ಮೊಳಗೆ || ೧೭೮ ||
ಏನಯ್ಯ ಕಾಟಣ್ಣ ಯಾರೊಡನೆ ಈ ಸಿಟ್ಟು ರಾಜಪುತ್ತಿಯಗೆ ಕರ ಮುಗಿಯೆ |
ಬೇರೊಮ್ಮೆ ಮುಗಿದೆವು ಆಡುವ ಎಡೆಯೊಳು | ತೋರುವರೆ ನಿಮ್ಮ ಕೋಪಗಳ || ೧೭೯ ||
ಹೂಡಲು ಲೆಗ್ಗೆಯ ರಾಯ ಕಾಟನ ಮಂದಿ | ಬಾಣಿ ಮುದ್ದನು ಚೆಂಡ ಹಿಡಿದ |
ಹೊಡೆಯಲು ಲೆಗ್ಗೆಯ ಪರಿಯಾಗಿ ಚೆಂಡೇಳಿ | ಹಿಡಿಯಲು ಮಿಗಿಲೇನೂ ರಾಯ || ೧೮೦ ||
ಬಾಣಿಯ ಮುದ್ದನ ಸಾಗಿಸಿರೊ ಮನೆಗಾಗಿ | ಹೂಡಲು ಆರಂಭ ಭಯ |
ಯಾರೊಮ್ಮೆ ಹಿಡಿಕೊಳ್ಳಿ ಮೊನೆಗಾರ ಭಟರುಯೆಂದು | ಹಾರಿಸಿಟ್ಟರು ಚೆಂಡನವರು || ೧೮೧ ||
ಮಡಿವಾಳ ಮಾಚನು ಹಿಡಿದ ಚೆಂಡನು ಬೇಗ | ಶರಣನಂದದಿ ಚೆಂಡ ಇಡಲು
ಮುರಿದು ಲೆಗ್ಗೆಯು ಹಾರೆ ನೆಗೆದ ಪುಟಿಯನೆ ಕಂಡು | ಒಡನೆ ಹಿಡಿದನು ಲಿಂಗಣ್ಣ || ೧೮೨ ||
ಸಾಗಿದ ಮನೆಗಾಗಿ ಹೋಗಲಿ ಮಾಚಣ್ಣ | ಮೂಳಗತ್ತಿಯ ಕಿರುಬ ಕಿರಿದೇ |
ಘುಡುಘುಡಿಸಿ ಬಂದನು ಬಡಗಿ ಗಂಗಯ್ಯ | ಸಿಡಿಲ ಕೋಪಾಗ್ನಿಯ ಒಳಗೆ || ೧೮೩ ||
ಕೊಡು ಚೆಂಡ ಎನುತಲಿ ಎಡಗಾಲ ಮುಂದಿಟ್ಟು | ಹೊಡೆಯಲು ಲೆಗ್ಗೆ ಪುಟವೇಳೆ |
ಬರಸಿಡಿಲಂಗೆ ಭೋರ್ಮೊರೆವ ಚೆಂಡನು ಕಂಡು | ಹಿಡಿಯಲು ವೀರಸಂಗಯ್ಯ || ೧೮೪ ||
ಜಾಣ ಪಂಚಾಳನು ಸಾಗಿದ ನವಪುರಿಗೆ ಕುಲವಂಶ | ಕುಂಬಾರ ಮಲ್ಲನೆಂಬವನು |
ಹಂಡಿ ಕಟ್ಟಿದ ಜಾಣ ಚೆಂಡ ಪುಟಕೆ ಕೊಂಡು | ಕಂಡಾಗ ಮನ್ನೆಯರು ನಗಲು || ೧೮೬ ||
ಹಂಡಿ ಕಟ್ಟಿದ ಬಳಿಕ ಉಂಬವರೆ ಗತಿಯಿಲ್ಲ | ಕುಂಬಾರ ಹೊಡೆಯೆ ಕೋಪದಲಿ |
ಕೋಡಿ ಮೇಲಾಗಲು ಚೆಂಡು ಗಗನಕೆ ಏಳೆ | ರಂಗನಾಯಕನು ತಾ ಪಿಡಿದ || ೧೮೭ ||[1]
ಸಾಗಿದ ಕುಂಬಾರ ಆವಿಗೆ ಮನೆ ಬೆಂದು | ಕೂಗುವಳು ಮಾಳಿ ಕುಂಬರನ |
ತೋರಿ ರೊಕ್ಕ ಪದ್ಮ ಇಡುವ ಮನ್ನೆಯರೆಂದು | ಹಾರಿಸಿಟ್ಟರು ಚೆಂಡ ನಗುತ || ೧೮೮ ||
ಕುಂಬಾರ ಸೋತರೆ ಮಂದ್ಯಾರು ಇಲ್ಲವೇನೊ | ಬಂದನು ಕೊಮುಟಿಗ ಎಂಕ |
ಚೆಂಡು ಹಿಡಿಯಲು ನೋಡಿ ಚಂದ ಕಾಟನ ಮಂದಿ | ಮುಂದವರು ನಗಲು ತೊಡೆಬಡಿದು || ೧೮೯ ||
ನಗಲೆದ್ದು ನಾಸಯ ಬಗೆಯನು ಚೆಂಡೆನುತ | ಹೊಡೆಯಲು ಕಡುಗೋಪದೊಳಗೆ |
ಪುಡಿಯಾಗೆ ಲೆಗ್ಗೆಯು ಪುಟವೇಳದೆ ಚೆಂಡಲ್ಲಿ | ತಿರುಗತಿರಲು ನೆಲದೊಳಗೆ || ೧೯೦ ||
ಸೆಟ್ಟಿ ವೆಂಕನ ಕಂಡು ನಕ್ಕರೆಂದೆನುತಲಿ | ಕುಟ್ಟಿದ ಪುಡಿ ಹಾರುವಂತೆ |
ದಿಕ್ಕಾಗಿ ಓಡಲು ರಾಯ ಕಾಟನ ಮಂದಿ | ಹಕ್ಕಿ ಬೆದರಿದ ಪರಿಯಾಗಿ || ೧೯೧ ||
ತೋರುವರು ಒಂಬತ್ತು ಬೀದಿ ಗೊಂದಿಯ ಹಿಡಿದು | ಏರಿದ ಜರಿಮಲೆಯ ಅರಸು |
ಸೇರುವ ಲೆಗ್ಗೆಯೆಂದು ಮೆಕ್ಕ ಹೊಡೆಯಲು ಚೆಂಡ | ಗೋಡೆ ಬಡಿಯಲು ಬಗ್ಗಲಿಲ್ಲ || ೧೯೨ ||
ತಪ್ಪಲು ಚೆಂಡಲ್ಲಿ ಚದುರ ಕಾಟನ ಮಂದಿ | ಮತ್ತೆ ಹಾರುತ್ತ ತೊಡೆ ಬಡಿದು |
ಎತ್ತಿ ಸಾರಲು ಕಹಳೆ ಪೃಥ್ವಿ ತಲ್ಲಣಿಪಂತೆ | ಮತ್ತವರು ಚೆಂಡನು ಪಿಡಿಯೆ || ೧೯೩ ||
ಹೂಡಿ ಲೆಗ್ಗೆಯ ಬನ್ನಿ ರಾಯ ರಾಮನ ಮಂದಿ | ಮೀರಿದ ಮದವ ಮುರಿವೆವು |
ಆಡಿದರೆ ಅದಕೇನು ಮುರಿವ ತ್ರಾಣಗಳನು | ಬೇರ ಬಲ್ಲೆವು ಮೊದಲಾಗಿ || ೧೯೪ ||
ಆಡಿರೊ ಅದಕೇನು ನಾಡ ಮಾತುಗಳೇಕೆ | ಓಡೆಲೊ ಜೊಳ್ಳು ಬೆದರಿಂಗೆ |
ಮೇಘದ ಗುಡುಗಿಗೆ ಕಾಲುಗೆಡುವವರಲ್ಲ | ಭೇರುಂಡ ರಾಮನ ಮಂದಿ || ೧೯೫ ||
ಹೂಡಿ ಲೆಗ್ಗೆಯನೆನುತ ಹಿಡಿಯೆನುತಲಿ ಚೆಂಡ | ಪಾಗೊಂಡೆ ನಾಯಕನು ಪಿಡಿಯೆ |
ಸೂರ್ಯನ ಮಗನಂತೆ ಕಾಲನಂದದಿ ಇಡಲು | ಹಾರಲು ಲೆಗ್ಗೆ ಪುಟಿವೇಳೆ || ೧೯೬ ||
ಲೆಗ್ಗೆ ಬೀಳಲು ಬೆದರಿ ಕದ್ದು ಓಡಲಿ ಬೇಡಿ | ಮುದ್ದಾದ ಪುಟವ ಕೊಟ್ಟಿಹನು |
ದುರ್ಗವು ಒಡೆವಂತೆ ಆರ್ಭಟಿಸಿ ಇಳಿವ ಚೆಂಡ | ಮಗ್ಗದ ಬನವನು ಪಿಡಿದ || ೧೯೭ ||
ಪಾಗೊಂಡೆನಾಯ್ಕನು ಸಾಗಿದ ಯಮನಿಂದ | ವಾಲೆ ತಂದನು ಬನವಶೆಟ್ಟಿ |
ಮುಂದಾರು ಹಿಡಿವರು ಮೋರೆ ನೋಡೆವು ಎಂದು | ಹಿಂದಕಿಡಲು ಚೆಂಡ ನಗುತ || ೧೯೮ ||
ಬಂದನು ಕಾಟಣ್ಣ ಬಿರಿದಂಕ ಚೌಡಿಗೆ | ದಂಡಧರನ ಕೋಪದೊಳಗೆ |
ಕಂಡರು ರಾಮನ ಮಾರ್ತಂಡ ಮನ್ನೆಯರೆಲ್ಲ | ಬಂದುದು ಮೃತಕಾಲ ತಮಗೆ || ೧೯೯ ||
ರಾಯ ರಾಮನು ಕಂಡು ಹೊಡೆದಾಡುವ ಮನ್ನೆಯರ | ತೋಳು ನಾಲ್ಕಹವೆ ಅಣ್ಣಯಗೆ |
ನಾ ಬರುವೆ ಭಯ ಬೇಡ ರಾಮ ನಡೆಯಲು ಎದ್ದು | ಧೀರ ಮನ್ನೆಯರು ಕಲಿಯಾಗೆ || ೨೦೦ ||
ಸರಸದಾಟವು ಪೋಗಿ ವಿರಸವೆಗ್ಗಳವಾಗಿ | ನುಡಿವ ವಚನವು ಹೆಚ್ಚು ಕಡಿಮೆ |
ಮೃಡನ [ಮೋಹ]ದ ಕಂದ ಶರ [ಭ]ಭಕ್ತಿಯ ತಾಳಿ | ಹೊಡೆಯಲು ಲೆಗ್ಗೆ ಚೂರೇಳೆ || ೨೦೧ ||
ಹೊಡೆಯಲು ಕಾಟಣ್ಣ ನಡುಗುತ ಉಪ್ಪರಿಗೆ | ಸಡಿಲಲು ತೊಟ್ಟಿಯ ಲೋವೆ
ಎಡಬಲನ ನೋಡದೆ ಚೆಲುವ ರಾಮನ ಮಂದಿ | ಪುಲಿಗಂಡ ಗೋವಿನಂತೋಡೆ || ೨೦೨ ||
ಓಡುವರು ಕಾಲ್ತೊಡರಿ ಹದಿನಾರು ಮಂದಿಯು ಬಿದ್ದು | ಓಡಿದರು ಬಾಣದೆಸಗೆಯನು |
ನೋಡಲಮ್ಮರು ಇತ್ತ ಹೊಂ[ಚಿ]ಡುತ ಮಾನ್ಯರು | ಗೋಡೆ ಹಳ್ಳನ ನು[ಗ್ಗುವ]ರು || ೨೦೩ ||
ಹಿರಿಯಣ್ಣ ಹೊಡೆಯಲು ತಡೆಯಬಲ್ಲುದ ಲೆಗ್ಗೆ | ತಲೆದೂಗಿ ರಾಮರಾಜೇಂದ್ರ |
ವಿಧಿವಾಸ ತೀರದೆ ಮರಣ ಮಾನವರಿಗಿಲ್ಲ | ಒದಗಿ ಲೆಗ್ಗೆಯ ಎನಲು ರಾಮ || ೨೦೪ ||
ಏರುವರು ನಾಕಾ ಮುಖದಿ ಆಲೆ ಬೊಬ್ಬೆಯ ಹೊಡೆದು | ತಾ ಪರಿದು ಪ್ರಾಣದಾಸೆಗಳ |
ವೀರಮಾಸ್ತಿಗಳಾಗಿ ಇರುವರು ಅವರೊಡೆಯೆ | ಗಾಯವಡೆಯಲು ಮೂರೆರಡು || ೨೦೫ ||
ಕಾಲೊಡೆಯೆ ಕಲ್ಲಯನ ಮೂಗೊಡೆಯೆ ಮಲ್ಲಯನ | ಹಾರಲು ಕಿವಿಯು ವಿರುಪಯನ |
ಜೋರುಗಾಯವು ಸಾಮಿ ವೀರ ಹನುಮಯ್ಯಗೆ | ತಾರ ಮಲಗಿದ ಮಾಯಣ್ಣ || ೨೦೬ ||
ಏರು ಬೀಳಲುತನ ಆದುದು ಹೀನಾಯ | ರಾಮ ಕರಗುವ ಮನದೊಳಗೆ |
ಕಾಹಳೆ ಹೊಲೆಯಾಗೆ ಬಿರಿದು ತನ್ನಯದೆಂದು | ಆಗಲು ಅದಕೇನು ಅನ್ಯಾಯ || ೨೦೭ ||
ಮಂದಿ ನೋಯಲು ಬಹಳ ನೊಂದುಕೊಂಬರೆ ತಮ್ಮ | ಹಿಂದೆ ನೋಯರೆ ಎನ್ನ ಕಡೆಯ |
ತಂದುಕೊಳ್ಳದೆ ಸಿಟ್ಟು ಸರಿಗುಡಿಯಾಡದ ಮೇಲೆ | ತಾ ಅಂದ ಮಾತಿಲ್ಲಿ ಸರಿ ಬಂತು || ೨೦೮ ||
ಆಗಲಿ ಅಣ್ಣಯ್ಯ ಸೋಲುಗಳು ಉಂಟು | ನೋಡುವ ಬರಲೊಂದು ಆಟ |
ಕೈಲಾಸಪುರಕವರು ಹಾದಿ ತೋರುವರೆಂದು | ಬಡಿದಾಟ ಯಾತಕೆ ಆಡೆನಲು || ೨೦೯ ||
ಹಿಡಿಯಲು ಚೆಂಡಲ್ಲಿ ಜರಿಮಲೆಯ ಮುಮ್ಮಯ್ಯ | ಗಿರಿಗೆ ಎರಗುವ ಸಿಡಿಲಂತೆ |
ಹೊಡೆಯಲಾಕ್ಷ[ಣ] ಲೆಗ್ಗೆ ಮುರಿದು ಪೋಪವನು ಏಳೆ | ಗಗನ ಮಂಡಲವ ಸೊಂಕಿಸುತ || ೨೧೦ ||
ಪುಟಿಯ ಕೊಟ್ಟನು ನಿಲ್ಲಿ ಹೆದರಿ ಓಡಲಿ ಬೇಡಿ | ಒದಗಿ ಎಲ್ಲರು ಬಿಡದಂತೆ |
ಎದೆಗೊಟ್ಟು ಕುರುಬರ ಮಲ್ಲನು ಹಿಡಿಕೊಂಡು | ತಲೆ ಕೆಳಗಾಗಿ ಮಲಗಿದನು || ೨೧೧ ||
ಸಾಗಿದ ಮುಮ್ಮಯ್ಯನ ಲವಣವನ ಕಳೆದಿರಿ | ಹೋಗಿ ಬರಲು ಸತಿಯ ನೋಡಿ |
ಯಾರಿನ್ನು ಇಡುವವನ ಮೋರೆ ನೋಡುವೆ ಕೇಳಿ | ಹಾರಿಸಿಟ್ಟರು ಚೆಂಡ ನಗುತ || ೨೧೨ ||
ಬಂದು ಹಿಡಿಯಲು ಚೆಂಡ ಸಂಗಯ್ಯ ಕೋಪದಲಿ | ಗಂಗೆ ರಮಣನೆ ಗತಿಯೆಂದು |
ಹಿಂದಕೆ ತೆರೆದಿಡಲು ತುಂಡಾಗಿ ಲೆಗ್ಗೆಯು | ಚೆಂಡೇಳೆ ಪುಟಿಯು ಚೆನ್ನಾಗಿ || ೨೧೩ ||
ಬರುವ ಪುಟಿಯನು ನೋಡಿ ಏಳಲ್ಕೆ ಕುರುಬರ | ಮರಿಮಲ್ಲ ಹೋಗಿ ಎದೆಗೊಡಲು |
ಲಡಗನು ಎರಗಿದ ರವದೊಳು ಭೋರ್ಮೊರೆದು ಚೆಂಡನು | ಮರನಾಗಿ ಬಿದ್ದ ತಳಕೆಳಗ || ೨೧೪ ||
ಹಿಡಿಯಲಾರದೆ ಬಿಟ್ಟ ಬಡಯೆದೆಯ ಪಾಪಿಯೆಂದು | ಕೆಡೆದು ಓಡಲು ರಾಮನಾಳು |
ಹಿಡಿಯಲು ಹಳ್ಳವನು ಬಲ್ಲಿದರು ಗೋಡೆಯ | ಹಿಡಿದು ಇಗೊ ಬಂದೆನೆಂದೆನಲು || ೨೧೫ ||
ಗರಳ ಬೊಬ್ಬೆಯ ಮಾಡೆ ಉರುಬುವರು ಮುಂದಕ್ಕೆ | ಮದವೆದ್ದು ಕರಿಗಳಂದದಲಿ |
ತೋ[ರೆದಲು] ಗಲು ಮುದ್ದು ಹೊಡೆಯೆ ಸಂಗಮನಾಥ | ನಡೆಯಲು ತಪ್ಪಿ ಇಬ್ಬೆರಳ || ೨೧೬ ||
ಚೆಂಡು ತಪ್ಪಿತು ಸ್ವಾಮಿಯೆಂದು ರಾಮಗೆ ಪೇಳೆ | ದಂಡನಾಗ್ರದಲಿ ತಾ ನಡೆಯೆ |
ಕಂಡು ಕಾಟನ ಮಂದಿ ಮನ್ನೆಯರೆಲ್ಲ | ಬಂದುದು ವಿಧಿಕಾಲ ತಮಗೆ || ೨೧೭ ||
ಮೂರು ರಾಯರ ಗಂಡ ರಾಮನೋಡುವನೆಂದು | ಸಾರಲು ಕಹಳೆ ಶೋಕದಲಿ |
ಪೂರಿತು ಇಲ್ಲಿಗೆ ರಾಣಿ ರತ್ನಿಯ ಮನೆಯ | ಸೇರುವುದು ಚೆಂಡೆಂದು ನುಡಿಯೆ || ೨೧೮ ||
ಹೂಡಲು ಲೆಗ್ಗೆಯ ರಾಯ ಕಾಟನ ಮಂದಿ | ಆ ಧೀರರು ರಾಮನ ಮುಂಡಾಡುತಿರಲು |
ಭೇರುಂಡನಂದದಿ ಅಕ್ಕಸಾಲೆಯ ಚಿಕ್ಕ | ಹಾರುವಂದದಿ ಲೆಗ್ಗೆ ಇಡಲು || ೨೧೯ ||
ಲೆಗ್ಗೆ ಬೀಳಲು ಚೆಂಡು ಎದ್ದು ಮೇಗಕೆ ಹಾರೆ | ಅಬ್ಬಣ್ಣನೆಂಬವ ಪಿಡಿದ |
ಎದ್ದನು ಚಿಕ್ಕಣ್ಣ ಯಮನೂರ ಒಡೆಯಗೆ | ಉದ್ಯೋಗ ಮಾಡುವರೆ ಕೊಳ್ಳ || ೨೨೦ ||
ಹೋದರೆ ಏನಣ್ಣ ಬಂದೆನು ಬಡಮಗನು | ವೀರ ರಾಮಯ್ಯನ ಬಲ ಭುಜವು |
ತಾರೆನುತ ಎಡಗೈಲಿ ಚೆಂಡ್ಹಿಡಿದು ಹಂಪ | ಹಾರುವಂದದಿ ಇಡಲು ಲೆಗ್ಗೆ || ೨೨೧ ||
ಲೆಗ್ಗೆ ಬೀಳಲು ನೋಡಿ ನೆಗೆದು ಕಾಟನ ಮಂದಿ | ಎದ್ದರು ಎರಳೆಯಂದದಲಿ |
ಒಬ್ಬೆ ಓಣಿಯ ಪಿಡಿದು ಹಮ್ಮೀರಖಾನರು ಬರಲಿ | ನಿರ್ಧರದೊಳು ಹೊಡೆಯೆ ಹಂಪ || ೨೨೨ ||
ಎದ್ದ ಗಳಿಗೆಯ ಫಲ ನೋಡುವರಾಗಿ | ಅರ್ಧವ ಪಿಡಿಯೆ ಚಿಂದಿಯನು |
ರುದ್ರಭೂಮಿಯ ಕಾಬೆ ವಿಧಿಯು ಅಳಿವುದುಯೆಂದು | ಇದ್ದ ಮನ್ನೆಯರು ತಲೆದೂಗೆ || ೨೨೩ ||
ರಾಯ ರಾಮನು ಬಂದ ತಾನೊಮ್ಮೆ ನೋಡುವೆ | ಭೀಮನಣ್ಣಯ್ಯನ ತ್ರಾಣವನು |
ತಾರೆನುತ ಚೆಂಡನು ಹಿಡಿಯಲಾಕ್ಷಣದೊಳು | ನಡುಗಲು ಕಾಟನ ಮಂದಿ || ೨೨೪ ||
ಕಂಡನು ಕಾಟಣ್ಣ ಪ್ರಚಂಡ ರಾಮನ ಕೋಪ | ಗುಂಡಿಗೆ ಒಡೆದು ತಲ್ಲಣಿಸಿ |
ಇಂದಿಗೆ ಸರಿ ನಮ್ಮ ತಂದಂಥ ಪಡಿಸಾರ | ಹೊಂದಲಮ್ಮರು ಲೆಗ್ಗೆ ಬಳಿಯ || ೨೨೫ ||
ಬೇಡವೊ ಸಿಟ್ಟುಗಳು ಮೂರು ರಾಯರ ಗಂಡ | ಯಾರಿಲ್ಲಿ ನಿನ್ನ ತಡೆವವರು |
ಈಡುಂಟೆ ನರಿ ಲಕ್ಷ ಆನೆ ತೆರಳಲು ಮುಂದೆ | ಹೀನಾಯ ಬರದೇನೊ ಕಡೆಗೆ || ೨೨೬ ||
ತನ್ನನೊಳಕೊಂಡನೆಂದು ಹಮ್ಮೇನೋ ಕಾಟಣ್ಣ | ಬ್ರಹ್ಮಾಂಡದೊಳಗೆ ಮೊನೆಗಾರ |
ಮುಂದೆನಗೆ ಅಪಕೀರ್ತಿ ಸೋತರೆ ಬರಬಹುದೆ | ಭ್ರಮೆಯೇನೊ ನಿಲ್ಲು ಅಣ್ಣಾಜಿ || ೨೨೭ ||
ಮೊದಲಾಟ ಮೊನೆಗಾರ ಚದುರರೆಲ್ಲರು ಕೊಟ್ಟ | ಬಗೆಯಾವುದಣ್ಣಯ್ಯ ನಿನಗೆ |
ಬೆದರಲೇತಕೆ ನಿಲ್ಲಿ ಎದೆಗೆಡಲು ತಾ ಬಿಡೆನು | ಹಿಡಿದನು ಮುತ್ತಿನ ಚೆಂಡ || ೨೨೮ ||
ಹೂಡಿರೊ ಲೆಗ್ಗೆಯ ಆಡುವೆನೊಂದಾಟ | ರಾಯ ಮನ್ನೆಯರ ಸಾಹಸವ |
ಹೇಡಿಯಾಗಲು ಬೇಡಿ ಭೀಮನ ನಾ ಮುನ್ನು | ಮೂಡಿ ಇರುವವೆ ಕರ ನಾಲ್ಕು || ೨೨೯ ||
ಅಂಜಲೇತಕೆ ಎರಡು ಕೊಂಬುಂಟೆ ತಲೆಯೊಳು | ನಾವುಂಬ ಊಟ ಬೇರೆ ಬದಲೆ
ಬಂದುದಿಲ್ಲವೆ ನರನೆಂಬ ಜನ್ಮದಿ ಒಯ್ಯುತ | ಬಂಧದೊಳಗೆ ಜನಿಸಿದನೆ || ೨೩೦ ||
ಭಯ ಬರುವುದಾರಿಗೆ ಈ ಬಗೆಯ ಛಲವನು ಮಾಡೆ | ಹೆದರುತೆ ಮೆಲ್ಲನೆ ಬರಲು |
ಎದೆಯೊಳು ಪರಮಾತ್ಮ ಹೊಡೆದುಕೊಳ್ಳುತ ಬಂ[ದ] | ಬೆದರುತ ಲೆಗ್ಗೆಯಾಡುವರು || ೨೩೧ ||
ಹಿಡಿಯಲು ಕೊ[ಟ್ಟೆ]ನು ಮೊದಲಾಟ ಹರ ಶಂಭು | ಪುರದ ಜಟ್ಟಂಗಿರಾಮಯಗೆ |
ಈ ಮೇಲೆ ತನ್ನಾಟ ಕಾಣೆನೆಂದರೆ ಬಿಡೆನು | ಭೀಮನಾರ್ಭಟದೊಳು ನಿಲಲು || ೨೩೨ ||
ಎತ್ತಿದ ಬಲದೊಳು ಮೆಟ್ಟಿದ ಎಡಗಾಲ | ಸಿಟ್ಟಿಲಿ ಹನುಮ ಕೋಪದಲಿ |
ಇಟ್ಟನು ಲೆಗ್ಗೆಯ ಪೊಟ್ಟರು ಉಪ್ಪರಿಗೆ | ನಿಟ್ಟೋಡಲು ಚೆಂಡು ಪುಟವೇಳೆ || ೨೩೩ ||
ಪುಟವನು ಸುಡು ನಮ್ಮ ಘಟಗಳುಳಿಯವೆಂದು | ಉಸುರಲಮ್ಮದೆ ಒಬ್ಬಗೊಬ್ಬ |
ಪಶು ಹಿಂದೆ ವ್ಯಾಘ್ರನ ಹೊಸಗಾಳಿ ಬಂದಂತೆ | ದೆಸೆಗೆಟ್ಟು ಓಡೆ ನೃಪರೆಲ್ಲ || ೨೩೪ ||
ತೂರಾಡಲು ಮೂರು ಬಾಣ ದೆಸೆಗಲಿ ತಮ್ಮ | ಮೋರೆಗಳ ಸುಳುಹು ಸೂಚನೆಯ |
ನೋಡಿದ ರಾಮ ಇನ್ನಾರೊಡನೆ ಆಡುವೆನೆಂದು | ತೋರುವರಿಲ್ಲ ಬಂದೆನುತ || ೨೩೫ ||
ಯಾತರ ಬಂಡಾಟ ರಣಭೀತಿ ಕಳ್ಳರ ಕೂಡೆ | ಬೇಟೆಗಾರನ ಎರಳೆ ಕಂಡಂತೆ |
ಸೋತಾಟಯೆನ್ನರೆ ರಣಭೂತನೆ ನಾ ಮುನ್ನ | ಮಾತಲ ಬನ್ನಿ ಮನ್ನೆಯರೆ || ೨೩೬ ||
ಹೆದರ ಬೇಡಿರೆ ಬನ್ನಿ ಹಿಡಿದುಕೊಂಬೆನು ಕೈಯ | ಹೊಡೆಯಲು ತನಗೆ ಮರುಳುಂಟೆ |
ನಡೆಯದೆ ಅಪಕೀರ್ತಿ ಧರಣಿಯಿರಲು ಪ್ರಾಣ | ಮಡಿದರೆ ರಾಮನ ಚೆಂಡಿನೊಳಗೆ || ೨೩೭ ||
ಅಣ್ಣಾಜಿ ಇಡಲದು ಕಣ್ಣಗಾಣದ ಬುದ್ಧಿ | ಬ್ರಹ್ಮಾಂಡದೊಳಗೆ ಅಪಕೀರ್ತಿ |
ತನ್ನೊಳಗೆ ಬಾ ಬುದ್ಧಿ ಮುನ್ನಿಲ್ಲ ಬರಲೆಂದು | ಧರ್ಮ ನಂಬುಗೆಯ ಕೊಡಲಾಗಿ || ೨೩೮ ||
ಆಡಿ ತಪ್ಪುವನಲ್ಲ ಮೂರು ರಾಯರ ಗಂಡ | ದೇಹದ ಹಂಬಲ ತೊರೆದು |
ಏರಿದನಲ್ಲೊಬ್ಬ ವೀರ ಸಂಗಮನಾಥ | ಸಾರುತ ಲೆಗ್ಗೆ ಬಂತೆನುತ || ೨೩೯ ||
ಮಿಕ್ಕು ಹಿಡಿವನು ಲೆಗ್ಗೆ ಮೀನಾಂಕ ಚೆನ್ನಿಗರಾಮ | ಪಕ್ಷಿಗೆರಗುವ ಲಗಡನಂತೆ |
ತರ್ಕೈಸಿ ಪಿಡಿಕೊಂಡು ಅಕ್ಕನ ರಮಣನ | ನಕ್ಕನು ರಾಮ ಹಾಸ್ಯದಲಿ || ೨೪೦ ||
ಹೂಡಿರೊ ಲೆಗ್ಗೆಯ ನೋಡುವ ಇನ್ನೊಮ್ಮೆ | ಜೋಡಾಟದೊಳು ಸೋಲು ಗೆಲುವು |
ಕೂಡಿತ್ತು ಹಿಂದಣ ಹರನಾಡಿದ ಕಂಟಕ ಮಾ | ತಾಡಲು ಚೆಂಡ ಕರದೊಳಗೆ || ೨೪೧ ||
ಹಿಡಿಯಲು ಚೆಂಡಲ್ಲಿ ನುಡಿಯಲು ಗೌಳಿಯು | ಹಿಡಿಸುವದು ರತ್ನಿ ಕೈಯೊಳಗೆ |
ಹೊಡೆಸುವಳು ತಲೆಯಾಕೆ ಪಡೆದವನ ಕರದೊಳಗೆ | ಕಡೆಗೊಬ್ಬರಿಂದ ಉಳಿವೆನಲು || ೨೪೨ ||
ಹಿಡಿಸುವ ಬಳಿಮೂಲ ತಿಳಿದು ನೋಡಲಿ ಬೇಕು | ಬರೆದಿಹುದೆ ಚೆಂಡು ಪಣೆಯೊಳಗೆ |
ಮೃಡವಾಸ ಎಡವಾಸ ಎಡದಿನ್ನು ಕೊಲ್ವುದೆ | ಹೊಡೆದೆ ನೋಡುವೆನು ಈ ಸಾರಿ || ೨೪೩ ||
ಚೆಂಡಿನ ಛಲಪದವ ಕಂಡುನೋಡಲಿ ಬೇಕು | ದಂಡಧರನ ಕೋಪದೊಳಗೆ |
ಮುಂದಕ್ಕೆ ಅಡಿಯಿಟ್ಟು ಹನುಮೇಂದ್ರನಂದದಿ ಹೊಡೆಯೆ | ಕಂಡವರಿಲ್ಲವೆ ಲೆಗ್ಗೆ ಕುರುಹ || ೨೪೪ ||
ಹಾರಿದ ಲೆಗ್ಗೆಯ ನೋಡದೆ ಎಲ್ಲರು | ಓಡುವರು ಎಡವಿ ಬೀಳುತಲಿ |
ನೋಡಲಮ್ಮರು ತಿರುಗಿ ದೂರದೃಷ್ಟಿಯ ಮೇಲೆ | ರಾಮ ಹೊಡೆಯಲು ಶಕ್ತಿಯಲಿ || ೨೪೫ ||
ಬಿರಿಗೋಪದೊಳು ಹೊಡೆಯೆ ಗಗನ ಮಂಡಲಕಡರಿ | ಇಳಿಯುತಿರಲು ರತ್ನಿ ಮನೆಗೆ |
ಹರಹರ ಪಲ್ಲಿಯ ನುಡಿ ಮುನ್ನ ನಿಜ ಬಂತು | ಬೆರಳಿಟ್ಟ ರಾಮ ನಾಸಿಕ[ಕೆ] || ೨೪೬ ||
ಬೀಳುವ ಚೆಂಡನು ಕಾಣುತ್ತ ರಾಮನು | ತಾಯಿ ಹೇಳಿದ ಮಾತು ಬಂತು |
ಸ್ವಾಮಿ ದ್ರೋಹಿಯು ಅಹುದು ಸಟೆಯಲೆನ್ನುತಲಿರ್ದೆ | ಭೂಮಿ ಪಾಲಕರ ಕೆಡಿಸಿಹುದು || ೨೪೭ ||
ತಣ್ಣಗಾದುದು ಆಟ ತಿನ್ನಿ ಹುರುಳಿಯ ಕಾಳ | ನಿರ್ಮಳವಾಯಿತ್ತೆ ನಿಮಗೆ |
ಇನ್ನೇನು ಆಡುವಾ ಅಮ್ಮ ರತ್ನಿಯ ಸೇರಿ | ಹಣ್ಣುವುದು ಇನ್ನೊಂದು ಕಥೆಯು || ೨೪೮ ||
ಧರೆಗಧಿಕ ಹಂಪೆಯ ವರ ಪುಣ್ಯಕ್ಷೇತ್ರದ | ಕರುಣಿಸು ವಿರುಪಾಕ್ಷಲಿಂಗ |
ತರಳ ರಾಮನ ಚೆಂಡು ದುರುಳ ರತ್ನಿಯ ಸೇರೆ | ಬಳಿಗೆ ಏಳು ನಾಲ್ಕು [>ಐದು]ಸಂಧಿ || ೨೪೯ ||[2]
[1] ೧೮೮ -೨೨೦ ಒಳಗೊಂಡಂತೆ ೩೩ ಪದ್ಯಗಳು ‘ಆ’ ಪ್ರತಿಯಲ್ಲಿ ಇಲ್ಲ. (ಸಂ)
[2] + ಅಂತು ಸಂಧಿ ೧೧ [<೧೨] ಕ್ಕಂ ಪದನು ೨೫೫೮ಕ್ಕಂ ಮಂಗಳ ಮಹಾಶ್ರೀ (ಮೂ).
Leave A Comment