[1]ಶ್ರೀ ಗಿರಿಜೇಶನೆ ಭಾಗೀರಥೀಶನೆ | ಭೋಗಿಭೂಷಣ ಭಾಳನೇತ್ರ |
ಆಗಮಕೊಡೆಯನೆ ಮೂಜಗವ ರಕ್ಷಿಪನೆ | ನಾಗಭೂಷಣನೆ ನಂದೀಶ                || ೧ ||

ನೀಲವರ್ಣನ ಸುತನ ನೇತ್ರದಿ ಉರುಹಿದೆ | ಪಾಲಿಸಿದೆ ರತಿಗೆ ಮನಸಿಜನ |
ಕೊಲಿಸಿದೆ ಅಜಶಿರವ ಉಗುರಿಂದ ಕಪಾಲ | ಧರನೆ ಕೊಡು ಮತಿಯ                 || ೨ ||

ಬಿಟ್ಟಿಯ ಬತ್ತವನು ಕೊಟ್ಟಣಕೆ ಶರಣರಿಗೆ | ಒಕ್ಕಲು ಹೇ[ಳೆ] ಕಲ್ಯಾಣಕೆ |
ಅಚ್ಚು ಮೆಚ್ಚಿನ ಹೊರೆಯ ಮತ್ತೊಂದು ಬಳಸಿದ | ಕಪ್ಪಿನ ಮಲ್ಲ ಕೊಡಮತಿಯ       || ೩ ||

ಕಾಶಿರಾಮೇಶ್ವರಕೆ ಈಸು ವೆಗ್ಗಳವಾದ | ತ್ರಾಸಿಲಿ ತೂಗಿ ನೋಡಿದರೆ |
ಲೇಸನು ಪಾಲಿಸು ನಡೆಸುವೆ ಕೃತಿಯನು | ಪರಮೇಶ ವಿರುಪಾಕ್ಷಲಿಂಗ              || ೪ ||

ರತ್ನಾಜಿ ರಾಮನ ನೆಪ್ಪನು ಕಾಣದೆ | ಚಕ್ರಪಾಲಕರ ಕೇಳಿದಳು |
ಒಪ್ಪಗಳ ಲಾಲಿಸಿ ತೊತ್ತು ಸಂಗಿಯು ಪೇಳ್ವ | ಬಿತ್ತರದ ನಾಮಗಳನಿಟ್ಟು             || ೫ ||

ಸಂಗಾಯಿ ಬಿಡಿಸೆನ್ನ ಅಂಗಜನ ತಾಪವ | ತಂದು ತೋರಿದೆ ನಯನಕ್ಕೆ |
ಕುಂಬಾಂಢ ಮಂತ್ರಿಯ ಮಗಳ ಮನ್ಮಥಸುತನ | ಒಂದುಗೂಡಳೆ ಉಷೆ[ಯೊ]ಲಿದು || ೬ ||

ಚಿತ್ರಲೇಖೆಯು ಹಿಂದೆ ಮೊದಲು ತರ್ಕಕೆ ತೋರಿ | ಮತ್ತೆ ಅಗಣಿತ ರೂಪಗಳ |
ಲೆಕ್ಕವಿಲ್ಲದೆ ತೋರೆ ಒಪ್ಪಿ ಇರಲು ಕಡೆಗೆ | ಚಿ[ತ್ತ]ಪ್ರಿಯನ ತೋರೇಳೆ                 || ೭ ||

ಕೇಳಮ್ಮ ನಯನಕ್ಕೆ ಪ್ರೀತಿದೋರುವ ವಿಟರ | ತಾಯೆ ಪೇಳುವೆನು ಕಡೆಗವನ |
ರಾಯ ರಾಮಗೆ ಮಿಕ್ಕ ಕುಮಾರ ದೊರೆಗಳು ಉಂಟು | ವೀರ ಮನ್ನೆಯರು ಮೋಹನರು      || ೮ ||

ಎದ್ದ ಸತ್ತಿಗೆ ಮೇಲೆ ವಜ್ರದ ಕಳಸವು | ರುದ್ರನ ಭಾವ ಮುಂಗೋಪ |
ಗದ್ದಲಿಸಿ ಕರುವಾಡ ಎದ್ದು ಹಾರುವನಮ್ಮ | [ಮಂ]ದಲೋಚನ ಸಂಗಿಯಾರೆ         || ೯ ||

ರತ್ನಾಜಿ ಲಾಲಿಸು ಪೃಥ್ವಿಗೆ ಹೆಸರಾದ | ಗುತ್ತಿಯ ನಾಡನಾಳುವನು |
ಕಸ್ತುರಿಯ ಚಾಮಯ್ಯ ಕಮಲದಳ ನಯನೇ | ಶಕ್ತಿಲಿ ಸರಿಯಿಲ್ಲ ಜಗದಿ               || ೧೦ ||

ನೀಲಸತ್ತಿಗೆ ಜಲ್ಲಿಗಳು ಅಪರಂಜಿ | ಕಾಲನಾರ್ಭಟದಿ ನಿಂದಿಹನು |
ಪ್ರಿಯದೊಳಿರುವುದೆನ್ನ ಮನಸು ಮಮಕಾರ ಪುಟ್ಟಿ | ಯಾವ ರಾಯನೆ ಸಂಗಾಯಿ    || ೧೧ ||

ಭಾವೆ ಕೇಳೆಲೆ ಬಾಲೆ ಮಾನದ ರತ್ನಿ ಜಾಣೆ | ಹೆಡಿ ನಾಗರದಂತೆ ಮೊಳದುದ್ದ ಚುಂಗ |
ಸಾದು ತಿಲಕ ಕಾದು ವೈರಿಯ ಕಡಿವಂಥ | ಮಾದಿಗ ಹಂಪ ಕೇಳಮ್ಮ                || ೧೨ ||

ಚೊಕ್ಕ ವರ್ಣದ ಸತ್ತಿಗೆ ಇಕ್ಕಿದ ಸರ ಗುಚ್ಛೆ | ಚಿಕ್ಕ ಮನ್ನೆಯನಾರೆ ಸಂಗಿ |
ಸಕ್ಕರೆ ಚೆಂದುಟಿ [ಉ]ಕ್ಕುವ ಜವ್ವನೆ | ಗಂಗಪಾಟಿಯ ಗಂಗರಾಜ                    || ೧೩ ||

ಸಾಲುವಣ್ಣಿಗೆ ಮೇಲೆ ನೀಲದ ಸತ್ತಿಗೆ | ಲೋಲ ಮನ್ನೆಯನಾರೆ ಸಂಗಿ |
ಪಾಲುಕುರಿಕೆಯ ಹನುಮರಾಜನು ಎಂದು | ಲೋಲಜಮುಖಿಗೆ ಹೇಳಿದಳು           || ೧೪ ||

ತುರಗವನೇರುತ್ತ ಕರದಲ್ಲಿ ಬಿಲ್ಲನು | ಮರೆಯದ ಮನ್ನೆಯನಾರೆ ಸಂಗಿ |
ಧರೆಯೊಳು ತೊರಗಲ್ಲ ಲಿಂಗರಾಜನುಯೆಂದು | ಸರಸಿಜಮುಖಿಗೆ ಹೇಳಿದಳು        || ೧೫ ||

ಕಮಲದ ಸತ್ತಿಗೆ ಮೀರಿದ ತುರಗವು | ಕಮಲಸಖನೊಲು ಮೆರೆವಾರಿವ |
ಕೊಮಾರಮಡುವಿನ ಕಾಟನಾಯಕನೆಂದು | ಭ್ರಮರಕುಂತಳೆಗೆ ಹೇಳಿದಳು         || ೧೬ ||

ಕನಕದ ಸತ್ತಿಗೆ ನೆಳಲೊಳಗೊಪ್ಪುವ | ಘನತರದ ಸತ್ತಿಗೆನಾರೆ ಸಂಗಿ |
ವನಿತೆ ಕೇಳವನು ಆಡುವ ಕಾಟಣ್ಣ | ಜನಪತಿ ವೀರ ವಿಕ್ರಮನು                       || ೧೭ ||

ಗಂಟೆಯು ಕೊರಳಲ್ಲಿ ಎಂಟು ದಿಕ್ಕಿನ ಮೇಲೆ | ನೂರೆಂಟು ಬಾರೇರಿ ತುರಗವನು |
ಗುಂಟನೂರ ರಾಜಯ್ಯನು ಅವ | ಮಟ್ಟಿ ಕಾಲ ರತ್ನಿ ಕೇಳು                            || ೧೮ ||

ಬಣ್ಣದ ಸತ್ತಿಗೆ ಗೋಣಿತುಂಬಿದ ಮುತ್ತು | ಜಾಣನಾಯಕನಾರೆ ಸಂಗಿ |
ಪ್ರಾಣದೊಳಾಸೆ ಮಾಡುವನಲ್ಲ | ಗಾಣಿಗ ಚೆನ್ನ ಕಾಣಮ್ಮ                            || ೧೯ ||

ಪಟ್ಟೆ ಸತ್ತಿಗೆ ಮೇಲೆ ಮುತ್ತಿನ ಕಳಸವು | ಎತ್ತಣ ನಾಡ ಮನ್ನೆಯನೆ |
ಅರಸು ನೇಮಿಯ ಗಂಡ ಚೆನ್ನಿಗ ರಾಮನ | ರಸಿಕ ಮೈದುನ ಮಲ್ಲನಮ್ಮ             || ೨೦ ||

ಹಸಿರ ಸತ್ತಿಗೆ ಮೇಲೆ ಹೊಸ ಹೊನ್ನ ಕಳಸವು | ದೇಸಿಗೆ ಮನ್ನೆಯನಾರೆ ಸಂಗಿ |
ದೆಸೆಗೆಡಿಸಿ ತುರುಕರ ಕಾದಿ ಕೊಲ್ಲುವನಿದ | ಹೆಸರಾದ ಬಾದುರಖಾನ                || ೨೧ ||

ವಸವಂತ ಸತ್ತಿಗೆ ನೆಳಲೊಳಗೊಪ್ಪುವ | ಹಸನಾದ ಮನ್ನೆಯನಾರೆ ಸಂಗಿ |
ವಸುಧೆಯೊಳಗೆ ಯಾರು ಸರಿಯಿಲ್ಲ ಇವನಿಗೆ | ಮಾಚರ ಮಲ್ಲ ಕಾಣಮ್ಮ             || ೨೨ ||

ಬೆಳ್ಳಿಯ ಸತ್ತಿಗೆ ನೆಳಲೊಳಗೊಪ್ಪುವ | ಒಳ್ಳೆಯ ಮನ್ನೆಯನಾರೆ ಸಂಗಿ |
ಡಿಳ್ಳಿಯಿಂದಲಿ ಬಂದ ಬಾದುರಖಾನನ | ಮಲ್ಲುಕಖಾನ ಕಾಣಮ್ಮ                    || ೨೩ ||

ಗುಂಪಿನ ಸತ್ತಿಗೆ ಹಬ್ಬಿದ ಸರಮಾಲೆ | ಗಬ್ಬನಾಯಕನಾರೆ ಸಂಗಿ |
ಹೆಬ್ಬುಲಿ ಗಜಸಿಂಹ ಜಾಡರ ಚೆನ್ನಣ್ಣ | ಸರ್ವದಳಕೆ ಸುರಿತಾಳ                        || ೨೪ ||

ಪಟ್ಟೆಸತ್ತಿಗೆ ನೆಳಲೊಳಗೆ ಒಪ್ಪುವ ಇವ | ಎತ್ತಣ ನಾಡ ಮನ್ನೆಯನೆ |
ಬಿಟ್ಟುರಂಜಿಯನಾಡನಾಳುವ ಈ | ರಾಯರ ಶೆಟ್ಟಿ ಕಾಣಮ್ಮ                         || ೨೫ ||

ಹೇಮದ ಸತ್ತಿಗೆ ನೆಳಲೊಳಗೊಪ್ಪುವ | ಹೇಮದಾಸೆಯನಾರೆ ಸಂಗಿ |
ಭೀಮನ ಸಮತೂಕ ಬಂಟನು ಇವನೀಗ | ಕೋಮಟಿಗರ ಮಲ್ಲನಮ್ಮ                || ೨೬ ||

ಕೆಂಪಿನ ಸತ್ತಿಗೆ ಗುಂಪಿನ ಮನ್ನೆಯನು | ಇಂಪಾಗಿ ಬಹನಾರೆ ಸಂಗಿ |
ಕಂಪಿಲ ರಾಯನ ಮೋದಬಂಟನು | ದೊಣ್ಣೆಯ ಬಸವ ಕಾಣಮ್ಮ                     || ೨೭ ||

ಅನುವಾದ ತೇಜಿಯನೇರಿ ದುವ್ವಾಳಿಪ | ಚೆಲುವ ಚೆನ್ನಿಗನಾರೆ ಸಂಗಿ |
ಸನುಮಾನಿ ಹಾರುವ ಕುಲದೊಳಗಿವನು | ಚಿನಿವಾರ ರಾಮ ಕಾಣಮ್ಮ               || ೨೮ ||

ಎದ್ದ ಸತ್ತಿಗೆ ಮೇಲೆ ಹದ್ದಿನ ಗರಿಯಿಕ್ಕಿ | ರೌದ್ರ ಮನ್ನೆಯನಾರೆ ಸಂಗಿ |
[ಗೆ]ದ್ದು ನೇಮಿಯ ದಂಡ ಕಾದು ಕೊಲ್ಲುವನಿವ | ಸಿದ್ಧರಾಜನ ಬಸವಯ್ಯ              || ೨೯ ||

ದುಗುಲಿನ ಸತ್ತಿಗೆ ಅಗಲಸುರ ವಾಲೆ | ಸೊಗಸು ಮನ್ನೆಯನಾರೆ ಸಂಗಿ | ಸ
ಜಗದೊಳು ತುರುಕರ ಕಾದಿ ಕೊಲುವನಿದ | ಮುಗಲೂರ ಕಾಮ ಕಾಣಮ್ಮ           || ೩೦ ||

ಕೊಳಲು ತಂಬಟೆ ಬೊಬ್ಬುಳಿಯಲ್ಲಿ ಬರುತಿಹ | ಇಳೆಗೆ ಮನ್ನೆಯನಾರೆ ಸಂಗಿ |
ಚೆಲುವಾಡಿಯ ಚಿಕ್ಕರಾಹುತನೆಂದಳು | ಲಲನೆ ರತ್ನಾಜಿಗೆ ಮುಖದಿ                  || ೩೧ ||

ಬೆಳ್ಳಿಯ ಸತ್ತಿಗೆ ನೆಳಲಡಿಯ ನಿಂದಿಹ ಒಳ್ಳೆ | ಮನ್ನೆಯ ನಾರೆ ಸಂಗಿ |
ವಸುಧೆಯೊಳಗೆ ಇವ ರಾಯದುರ್ಗದ ರಾಯ | ಗುರವೆ ಕೇಳಮ್ಮ ರತ್ನಾಜಿ           || ೩೨ ||

ಹಕ್ಕರಿಕೆಯ ಮೇಲೆ ಇಕ್ಕಿದ ಸರಗುಬ್ಬಿ | ಚಿಕ್ಕ ಮನ್ನೆಯನಾರೆ ಸಂಗಿ |
ಲೆಕ್ಕವಿಲ್ಲದೆ ನೇಮಿಯ ದಂಡ ಕಡಿವಂಥ | ಅಕ್ಕಸಾಲೆಯ ಚಿಕ್ಕನಮ್ಮ                 || ೩೩ ||

ಅಂಚಿನ ಸತ್ತಿಗೆ ಮಿಂಚಿನ ಚೌಲವು | ಮಿಂಚಾಗಿ ಬಹನಾರೆ ಸಂಗಿ |
[ಹೊಂ]ಚಿದ ವೈರಿಯ ಮಿಂಚಾಗಿ ಕಡಿವಂಥ | ಕಂಚಗಾರರ ಕೆಂಚನಮ್ಮ             || ೩೪ ||

ಕೂಡಿದೆಕ್ಕಟಿಗರ ಮೀಟಾದ ಸತ್ತಿಗೆ | ಘಾಟದಿ ಬಹನಾರೆ ಸಂಗಿ |
ಪಾಟಿಯಾದರೆ ನಿನ್ನ ಹಿರಿಯ ಕುಮಾರನು | ಕಾಟನಾಯಕನು ಕಾಣಮ್ಮ             || ೩೫ ||

ಕಾಗಿನ ಸತ್ತಿಗೆ ತೂಗುವ ಚೌರವು | ಭೋಗದೊಳಿಹನಾರೆ ಸಂಗಿ |
ಸಾಗಿಸಿ ಸಮರದೊಳಗೆ ಹೊಗಲೇರುವ | ಬಿರಿದುಳ್ಳ ಗಿಂಡಿಯ ಸಂಗ                 || ೩೬ ||

ಕಾಗಿನ ಸತ್ತಿಗೆ ತೂಗುವ ಚೌರವು | ಭೋಗದೊಳಿಹನಾರೆ ಸಂಗಿ |
ಸಾಗಿಸಿ ಸಮರದೊಳಗೆ ಹೊಗಲೇರುವ | ಬಿರಿದುಳ್ಳ ಗಿಂಡಿಯ ಸಂಗ                 || ೩೬ ||

ಮುತ್ತಿನ ಚೌರಿಯ ಎರಡ ಢಾಳಿಸಿಕೊಂಬ | ಇವನೆತ್ತಣ ನಾಡಮನ್ನೆಯನೆ |
ಎತ್ತಿ ಬರುವ ಸುರಿತಾಳನ ಗಂಡನು | ಗುತ್ತಿಯ ನಾಡ ಗಂಗಣ್ಣ                       || ೩೭ ||

ಗೀರು ಗಂಧವು ಮೈಯಲ್ಲಿ ಚಿಮ್ಮುರಿ ಸುತ್ತಿ | ಧೀರ ಮನ್ನೆಯನಾರೆ ಸಂಗಿ |
ಜೀವವೊಂದಾದ ರಾಮನ ಗೆಣೆಗೆಕಾರ | ಜಂಗಮ ಬಸವ ಕಾಣಮ್ಮ                  || ೩೮ ||

ಭಸಿತವು ಪಣೆಯಲ್ಲಿ ಎಸೆವ ರುದ್ರಾಕ್ಷಿಯು | ವಿಷಕಂಠ ರೂಹನಾರೆ ಸಂಗಿ |
ವಸುಧೆಯೊಳಗೆ ನೇಮಿಯ ದಂಡ ಕಡಿವಂಥ | ಹೆಸರುಳ್ಳ ಸಿಂಗಿರಾಜಯ್ಯ            || ೩೯ ||

ಬೆಕ್ಕಿಗೆ ಚೆನ್ನಾಟ ಇಲಿಗೆ ಕಷ್ಟಗ[ಳಂತೆ[ | ವ್ಯರ್ಥವಾದುದು ಎನ್ನ ಬದುಕು |
ತೊತ್ತು ಸಂಗಿ[ಯೆ] ಮೂಗ ಹತ್ತೆ ಕೊಯ್ಸುವೆ ಈಗ | ಸಿಕ್ಕಿದೆ [ನನ್ನ] ಕರದೊಳಗೆ     || ೪೦ ||

ಹೋಗದೆ ಉಳಿವು[ದು] ಯಾವ ತೆರದೊಳು ಮೂಗು | ನಾಡ ಮಿಂಡರ ಬಯಸುವ[ಳೆ] |
ರೂಢಿಪರಲ್ಲವೆ ತೋರಿ[ದೆ]ನೆ ಗಾರ್ದಭನ | ಹಲ್ಲಾವಿದಳೆ ಕೇಳಮ್ಮ                   || ೪೧ ||

ಕತ್ತೆಗೆ ಕಡಿವಾಣ ಇಕ್ಕಿ ಜೀವನ ಮಾಡೆ | ಉತ್ತಮ ತೇಜಿ ಎನಿಸುವುದೆ |
ತೊತ್ತು ರೂಪಾಗಿರಲು ರಾಯ ಮುಟ್ಟಲು ಅವಳು | ಪ[ಟ್ಟ]ದ ರಾಣಿಯಾಗುವಳೆ      || ೪೨ ||

ಕರಿಯ ಸತ್ತಿಗೆ ಮೇಲೆ ಒರಗಿದ ಶ್ರೀಗಂಧ | ಧುರಗಲಿ ಇವನಾರೆ ಸಂಗಿ |
ಕರಿಘಂಟೆಗಳ ಮೇಲೆ ಹೊಗಲೇರಿ ಕಡಿವಂಥ | ಬಾಗೂರ ನರಸ ಕಾಣಮ್ಮ           || ೪೩ ||

ಕೋವಿನ ಸತ್ತಿಗೆ ನೆಳಲೊಳು ನಿಂದಿಹ | ರೂಪುಳ್ಳ ಮನ್ನೆಯನಾರೆ ಸಂಗಿ |
ಗೋಪತಿ ರಾಮಗೆ ಸೋವತಿದೋರುವ | ಗೋಪಿದೇವಿಯ ಕಂದನಮ್ಮ              || ೪೪ ||

ಕಲಹವೆಂದರೆ ಮುಂದೆ ಉಲಿದು ಬೊಬ್ಬಿಡುವನು | ಬಲಗೈಯ ಧೀರನಾರೆ ಸಂಗಿ |
ಧರೆಯೊಳು ಜಗಳವೆಂದರೆ ಹಾ[ಯು]ವನಿವ | ಕರಿಯ ಸಂಗಣ್ಣ ಕಾಣಮ್ಮ            || ೪೫ ||

ಇವರ ಸತ್ತಿಗೆ ನಿಂದುರಿಯಲೆ ಸಂಗಾಯಿ | ಇವರಗೊಡವೆ ನಮಗೇಕೆ |
ಇವರ ಸತ್ತಿಗೆ ಹಾಗಿರಲಮ್ಮ ಸಂಗಾಯಿ | ಚೆಲುವನ ತೋರೆ ರಾಮುಗನ             || ೪೬ ||

ರಾಮನ ತೋರು ತೋರೆಂದರೆ ಸಂಗಾಯಿ | ನಾಡುಮನ್ನೆಯರ ತೋರಿದೆಯಾ |
ರೂಢಿಗಧಿಕ ಚೆನ್ನ ರಾಮನ ತೋರೆಂದು | ನಾರಿ ಸಂಗಿಯ ಕೂಡೆ ನುಡಿದೊ          || ೪೭ ||

ನೀಲಸತ್ತಿಗೆ ನಡುವೆ ಚೌಲ ಡಾಳಿಸಿಕೊಂಬ | ಲೋಲ ಮನ್ನೆಯನಾರೆ ಸಂಗಿ |
ಭೂಲೋಕಕಧಿಕ ಬಲ್ಲಾಳನ ಗಂಡ | ಬಾಲ ರಾಮಯ್ಯ ಕಾಣಮ್ಮ                     || ೪೮ ||

ಎಡಬಲದೊಳಗೆಲ್ಲ ಹಿಡಿದ ಸತ್ತಿಗೆಗಳು | ನಡುವೆ ಬರುವನಾರು ಸಂಗಿ |
ಪೊಡವಿಯೊಳಗೆ ನಾಲ್ಕು ದಿಕ್ಕಿನ ರಾಯರ ಗಂಡ | ಕಡುಗಲಿ ಚೆನ್ನಿಗ ರಾಮ          || ೪೯ ||

ರಾಮನೆಂಬುವ ಮಾತ ಕೇಳುತ್ತ ಮನದೊಳು | ಬಾಲೆ ಹರುಷವನು ತಾಳಿದಳು |
ಪ್ರೇಮದಿಂದಲಿ ಆಗ ತರಹರಿಸಲಾರದೆ | ಕಾಮ ಹುಟ್ಟಿತ್ತು ಮನದೊಳಗೆ             || ೫೦ ||

ದೃಷ್ಟಿಸಿ ನೋಡಿ ರಾಮನ ಕಂಡು ಮನದೊಳು | ಹುಟ್ಟಿತು ತಾಪ ವೆಗ್ಗಳಿಸಿ |
ಕಟ್ಟಾಳು ರಾಮನ ಸಂಗವ ಹೊಕ್ಕು ಸವಿವೆವು | ದಿಟ್ಟೆಯಾಡಿದಳು ಸಂಗಿಯೊಡನೆ    || ೫೧ ||

ಧರೆಯೊಳಗಾಡುವ ಬರಿಮಾತು ಮನ್ಮಥನ | ಉರುಹಿ ಕೊಂದುದು ಸಟೆಯಾಯ್ತು |
ಭರದಿಂದ ಬಂದನು ಸ್ತ್ರೀಯರ ದುರ್ಗವ | ಇರದೆ ಸುರೆಗಳ ಮಾಡುವರೆ              || ೫೨ ||

ಬ್ರಹ್ಮನೆಂಬವ ಪಾಪಿ ಇಂತಪ್ಪ ಪುರುಷನ | ನಮ್ಮ ಗಂಡನ ಮಾಡದ್ಹೋದ |
ಕಮ್ಮಗೋಲನ ಬಾಧೆ ಘನವಾಗಿ ಸತಿಯ[ಳು] | ಹೆಮ್ಮೆಕಾತಿ[ಯು] ಜ್ಞಾಪಿಸುತ      || ೫೩ ||

ನಿಶ್ಚಯವಹುದೆನೆ ಮುಚ್ಚದೆ ನಯನವನು | ಬೆಚ್ಚಿನೋಡಲು ಎರಳೆಯಂತೆ |
ಚಿತ್ತವುಕ್ಕಲು ಅವನು ತೆಕ್ಕೆಯೊಳು ಬರ[ಲಂ]ತೆ | ಆತ್ಮದ ಸ್ಮರಣೆ ಮರೆದಳು         || ೫೪ ||

ಕಾಮನ ಬಾಣವು ಪೂರಸಿತ್ತು ರತ್ನಿಗೆ | ಗಾಯವಡೆದ ಮೃಗದಂತೆ |
ಮಾನಾಭಿಮಾನವ ತೊರೆದಳು ರತ್ನಾಜಿ | ಕಾಮನ ಬಾಧೆ ಘನವಾಗೆ                || ೫೫ ||

ಕಾತರವೆಂಬುದು ಪಾಪಿ ಮನ್ಮಥ ಜಗವ | ಹಾಕದೆ ಹಗ್ಗ ಕೊಲ್ಲುವನು |
ಏಕಾಂತವಾದಂತೆ ಒಡೆದು ಕಾಮ ಕೇಳಿ | ಭೂಮಿಯೊಳೊರಗಿದಳು ರತ್ನಿ            || ೫೬ ||

ಕಾಮಜರೂಪನು ಮಾಯದುಮ್ಮನು ಕೊಟ್ಟು | ಆಯತ ಮನವ ತಾಗಲೆಸೆಯೆ |
ಬಾಯ ತಾಂಬೂಲವು ಹುಡಿಯಾಗಿ ರತ್ನಾಜಿ | ತಾಯ ಕಾಣದ ಹುಲ್ಲೆಯಂತೆ         || ೫೭ ||

ನಿಡುಮುಡಿ ಸಡಿಲಿರೆ ಕಡೆಗಣ್ಣು ಮುಚ್ಚಿತ್ತು | ಪಿಡಿದೆಲೆ ಕೈಯ್ಯಲ್ಲಿ ಬಾಡಿ |
ಹುಡಿಯಾಯ್ತು ತಾಂಬೂಲ ರಸ ಬಾಳು | ಬಿಡದೆ ಬಿದ್ದಳು ಬೆರಗಾಗಿ                  || ೫೮ ||

ಒಡತಿ ಬೀಳಲು ನೋಡಿ ಹಡಪದ ಸಂಗಿಯು | ಹೊಡೆಯಿತೆ ಬ್ರಹ್ಮ ರಾಕ್ಷಸನು |
ನುಡಿಸಿ ನೋಡುವ ಬನ್ನಿ ಕಳ್ಳ ರಂಡೆಯನೆಂದು | ಪಿಡಿದು [ತ]ಟ್ಟಲು ಬಾಯಿ [ಯಿ]ಲ್ಲ || ೫೯ ||

ಎಡಬಲದ ಗೌಡಿಯರು ಹೊಡೆದುಕೊಳ್ಳಲು ಬಾಯಿ | ಅಳಿದಳು ಅಮ್ಮ ರತ್ನಾಜಿ |
ಉಸುರು ಹೋ[ಗಿ]ದೆ ರತ್ನಿ ಅರಸು ಊರೊಳಗಿಲ್ಲ | ಮುರಿದು ಬೆರಳುಗಳ ಬೊಬ್ಬಿಡಲು       || ೬೦ ||

ಅಳುವುದೇತಕೆ ನಿಲ್ಲಿ ಜನರು ಹೊರಗೆ | ಹಲವು ಮಿಂಡರ ಸೂಳೆ ಇವಳು |
ಅಲರಂಬ ರೂಪನ ತನುವ ದೃಷ್ಟಿಸಿ ನೋಡಿ | ಮಲಗಿಹಳು ಮೂರ್ಚೆ ತಾಪದಲಿ     || ೬೧ ||

ಸಾಯಬಲ್ಲಳೆ ಸರ್ವದ್ರೋಹಿ ಪಾತಕ ಮೂಳಿ | ಗೊಲ್ಲಕುಲದ ಹೊಲೆರಂಡೆ |
ಮೋಹ ಮಗನೊಳಗಿಡಲು ಮಾರನ ಸರಳಂಬು | ಏರಿದಂದದಿ ಮಲಗಿಹಳು         || ೬೨ ||

ಕಾಯವಿಲ್ಲದ ಕಾಮ ಕಾಡುವನೀ ಬಗೆಯ | ಭೂಮಿ ಮಧ್ಯದಿ ತಾನು ಇರಲು |
ಸ್ತ್ರೀ ಪುರುಷರೆಂಬವರ ಗೋವಿನ ತೆರಮಾಳ್ಪ | ತಾ ಕಂಡು ಹರ ಶಿಕ್ಷಿಸಿದ             || ೬೩ ||

ರತ್ನಾಜಿ ಮೂ[ರ್ಛೆ]ಯ ಅರ್ಥ ಎಲ್ಲರು ಪೇಳಿ | ಮತ್ತಿಲ್ಲಿ ಬಂದು ರತ್ನಿಯ[ಳು] |
ಕಟ್ವಾಳು ರಾಮಗೆ ಇಟ್ವಾಳು ಮನವನು | ನೆಟ್ಟುಕೊಂಡುದು ಬಾರದಿರಲು            || ೬೪ ||

ಮಾರುತನ ಸುಳಿವಾಗಿ ಬೆಮರೊಡೆದ ರತ್ನಿಗೆ | ತೀರಿತು ಮೂರ್ಚೆ ಕಿಂಚಿತವು |
ಸೂರ್ಯಗೆ ಅಡರಿದ ಗ್ರಹವಿಳಿದು ಬರುವಂತೆ | ತೀರಲು ನಯನವ ತೆರೆದು          || ೬೫ ||

ಮೃದು ಬಾಲನಂದದಿ ತೊದಲುತ ನುಡಿದಳು | ಕುಣಿಯುತ ತುಟಿ ಬಾಯಿ ಹಲ್ಲು |
ಸುಖಸಾರ ಕೂಡಿದೆನು ಕಾಣ್ವಂತೆ ಎಲ್ಲರು | ಮತಿಗೆಟ್ಟು ನಾಚಿದಂತಿಹಳು            || ೬೬ ||

ಏತಕ್ಕೆ ನಾಚಿಯೆ ಈ ರೀತಿಯ ಸುಡು ನಿನ್ನ | ಜಾತಿಯೊಳು ಗಾರ್ದಭನ ಕುಲವೆ |
ನೀ ಕಾದೆ ಸತಿ ಅರ್ಧಭೋಗಾನ್ವಯಗಳ | ಕಾತರ ಯಾಕೆ ಈ ಬಗೆಯ                || ೬೭ ||

ಪುರುಷನುಳ್ಳವಳಿಗೆ ತರವೇನೆ ಇಂತಪ್ಪ | ಮಮಕಾರದ ಮೂರ್ಛೆ ತಾಪಗಳು |
ಅರಸು ಕೇಳಲು ನಿನ್ನ ಕೊರೆಸನೆ ಕಿವಿಮೂಗ | ತರಹರವಿರಬೇಕು ಮನದಿ            || ೬೮ ||

ದೊರೆ ರಾಯ ಕಂಪಿಲಗೆ ಬೆದರಬಲ್ಲೆನೆ ಸಂಗಿ | ಇರಲಮ್ಮ ನಿನ್ನ ಎದೆಯೊಳಗೆ |
ಧರೆಯೊಳಗೀ ಕಾಯ ಸ್ಥಿರರಾಜ್ಯ ಪಡೆದಿಹುದೆ ಒಂದರ | ಗಳಿಗೆ ಕಾಮನ ಭೋಗ ಸಾಕು       || ೬೯ ||

ಜಾಣಬಲ್ಲನೆ ತನ್ನ ವೀಣೆಯ ಸ್ವರವನು | ಗೋವ ಬಲ್ಲನೆ ಕುರಿ ಕಾಯ್ವ |
ಕೋಮಲಾಂಗಿಯ ಮದವ ಮುರಿಯಬಲ್ಲನೆ ರಾಯ | ಮುದಿಜೀವಿ ಬಲ್ಲನೆ ಒಣೆ ಮೋಹ       || ೭೦ ||

ಬಾಲೆ ನಿನ್ನಯ ಬಸುರೊಳು ನಾ ಬಂದೇನು | ಹೇಳಬಾರದೆ ಒಂದು ಮಾತ |
ಮೋಸದಿಂದಲಿ ಆ ಸತಿಯರ ಹೊರಡಿಸಿ | ಸೂಸುತ ಕಣ್ಣೀರ ತೊಡೆದು               || ೭೧ ||

ಗಾಸಿಯಾಗಿರುವ ರತ್ನಿಗೆ ಭಾಷೆಯ ಕೊಟ್ಟು | ಓಸರಿಸಿದಳು ನೀನೇಕೆ |
ಚಿಂತಿಸುವೆ ಲೋಕಮಂತ್ರವ ಬಲ್ಲೆ | ನಾ ಕರೆತರುವೆ ರಾಮುಗನ                     || ೭೨ ||

ಬೇಕಾದರು ಒಂದು ಗಳಿಗೆ ಸೈರಿಸು ತಾಯೆ | ನಾ ಕರೆತಹೆ ಅಂಜಬೇಡ |
ನಿಲ್ಲು ಸೈರಿಸು ನೀನು ತಲ್ಲಣಗೊಳಬೇಡ | ಬಲ್ಲೆನು ನಾನೊಂದು ಪರಿಯ            || ೭೩ ||

ಕಲ್ಲು ಮನದ ರಾಮ ಬಲ್ಲಿದ ಬಗೆಯೇನು | ಒಳ್ಳೆಯ ಮಂತ್ರವ ಬಲ್ಲೆ |
ಎಲ್ಲಿಗಾದರು ಹೋಗಿ ನಾನೊಂದು ತಿಲಕವ | ಒಲ್ಲದವನ ಒಲಿಸುವುದು               || ೭೪ ||

ಮಂತ್ರಿಸು ಗುರುವ[ವ]ನು ಕೊಟ್ಟು ಕಳುಹಿಸಿದರೆ | ಅವನತ್ತ ಹರುಷದಿ ತೆಕ್ಕೊಂಡು |
ಕಂತು ಸನ್ನಿಭ ಚೆನ್ನರಾಮ ಎನಗೊಲಿದರೆ | ಮಂತ್ರ ಒಳ್ಳೆಯದೆ ಸಂಗಾಯಿ           || ೭೫ ||

ಉಂಗುರವನು ಕೊಟ್ಟು ಕಳುಹಿದರೇನೆಂಬನೊ | ಕಂಗಳ ಚೆಲುವ ಯೌವನವು |
ಶೃಂಗಾರ ಸುಗುಣೆ ನೀ ಕೊಡುಯೆಂದು ಕಳುಹಲು | ಪಿಂಗಾಣಿಯ ತರಿಸಿದಳು        || ೭೬ ||

ಗಂಧ ಕಸ್ತುರಿ ಪುಣುಗು ಕದಂಬ ಮಾಡಲು ರತ್ನಿ | ತಂದಿಟ್ಟು ಹೊನ್ನ ತಟ್ಟೆಯಲಿ |
ಚಂದ್ರಗಮನೆ ತನ್ನ ಉಂಗುರ ಅದರೊಳು ಮಡಗಿ | ಕೊಂಡೊಯ್ಯೆ ಸಂಗಿ ನೀ ಬೇಗ || ೭೭ ||

ಪಟ್ಟೆ ವಸ್ತ್ರಗಳನು ಮುಚ್ಚಿದಳು ಸಂಗಿಯು | ತಟ್ಟನೆ ನಡೆಯೆ ಅವರೆಡೆಗೆ |
ತಂದಳು ರಾಮ ಚೆಂಡಾಡುವ ಬಯಲಿಗೆ | ಚಂದನ ಪರಿಮಳಗಳನು                 || ೭೮ ||

ಹಸ್ತಿನಿ ಚಿತ್ತಿನಿ ಶಂಖಿನಿ ಪದ್ಮಿನಿ | ಮೊತ್ತದ ನಾಲ್ಕು ಜಾತಿಗಳು |
ಚಿತ್ತಜರೂಪ ರಾಮಯ್ಯನ ಕಾಣುತ್ತ | ಎತ್ತಿ ಕರಂಗಳ ಮುಗಿದಳು                     || ೭೯ ||

ತಾಯಿ ಕಳುಹಿದ ಚಂದನ ಪರಿಮಳಗಳ | ನಾಯಕ ಮಕ್ಕಳಿಗಿತ್ತು |
ಆಯತದಿಂದಲಿ ಕೊಡುವೂತ ರಾಮಯ್ಯ | ಪ್ರಿಯದಿಂದಲಿ ಕರೆಸಿದನು                || ೮೦ ||

ಬಾರಯ್ಯ ಧುರಧೀರ ಅಣ್ಣ ಕಾಟಣ್ಣನೆ | ಬಾರಯ್ಯ ಕೊಳ್ಳೊ ಗಂಧವನು |
ಈ ರೀತಿ ಹಂಚಿದರೆ ಮುಂಚೆ ವೀಳ್ಯವ ಕೊಂಬ | ಧುರಗಲಿ ಜಂಗಮ ಬಸವ          || ೮೧ ||

ಎಡಬಲದೆಕ್ಕುಟಿಗರಿಗೆ ರಾಮಯ್ಯನು | ಬಿಡದೆ ಕೊಟ್ಟನು ಗಂಧವನು |
ಕಡುಗಲಿ ತಾನು ತಕ್ಕೊಳ್ಳುವ ಸಮಯದಿ | ತಡಕಿ ಕಂಡನು ಉಂಗುರವ             || ೮೨ ||

ಕಂಡನು ಕಮಲಾಕ್ಷಿಯ ಉಂಗುರವನು | ಮಂಡೆಯ ಮೇಲಿಟ್ಟುಕೊಂಡ |
ಮಂಡಲದೊಳಗಿನ್ನು ಹೊಸಪರಿಯಾಯಿತ್ತು | ನೊಂದುಕೊಂಡನು ಮನದೊಳಗೆ    || ೮೩ ||

ಹರಹರ ಏನು ಕಾರಣ ಬಂತು ಉಂಗುರ | ಹರಿಹರ ಗುರುವೆ ತಾ ಬಲ್ಲ |
ಹರಿಹರದೇವಿ ಆಡಿದ ಮಾತು ಬಂತಿಲ್ಲಿ | ಭರದಿ ತೋರಿತ್ತು ಸೂಚನೆಯ              || ೮೪ ||

ಹಡಪದ ಸಂಗಿ ಉಂಗುರ ಬಂದ ಪರಿಯೇನೆ | ನಿಜವಾಗಿ ಪೇಳು ಎನ್ನೊಡನೆ |
ಕಂಡುದಿಲ್ಲವು ಸ್ವಾಮಿ ನಿಮ್ಮಾಣೆಯ[ಲ್ಲಿ] | ಪ್ರಚಂಡ ರಾಮಗೆ ಹೇಳಿದಳು             || ೮೫ ||

ತಡೆಯದೆ ಗಂಧವ ಹದಮಾಡುವಾಗಲು | [ಸಡಿ]ಲಿ ಬಿದ್ದಿತು ಉಂಗುರವು |
ಮಡದಿ ರತ್ನಾಜಿ ಉಂಗುರವನು ತಾ ಕಂಡು | ನುಡಿದನು ರಾಮ ಇಂತೆಂದು         || ೮೬ ||

ತಕ್ಕೊಂಡು ಹೋಗಿ ಚಿಕ್ಕಮ್ಮಗೆ ಕೊಡು ಎಂದು | ಉದ್ದಂಡ ರಾಮನು ಕೊಟ್ಟನಾಗ |
ತಕ್ಕೊಂಡು ಬಂದಳು ಹಡಪದ ಸಂಗಿಯು | ಬಂದು ರತ್ನಾಜಿಗೆ ಕೊಡಲು             || ೮೭ ||

ಒಲ್ಲದೆ ಹೋದ ಉಂಗುರವನೆಂದೆನಲಾಗ | ತಲ್ಲಣಿಸುತ್ತ ಮನದೊಳಗೆ |
ಫುಲ್ಲಶರನಟ್ಟುಳಿಯನು ತಾಳಲಾರದೆ | ಎಲ್ಲ ದೇವರನು ನೆನೆದಳು                   || ೮೮ ||

ಕೊನೆ ಬೆರಳುಗುರ ಮೂಗಿನ ಮೇಲೆ ಇಟ್ಟಳು | ಮನಿಸಿಜರೂಪನ ಬಯಸಿ |
ಮನದೊಳಗಿನ್ನೊಂದು ಅನುವ ನಿಶ್ಚಯಿಸುತ | ನೆನೆದಳು ಕುಟಿಲ ದೇವತೆಯ       || ೮೯ ||

ಹರಸಿಕೊಂಡಳು ಹರಿಹರನೆಂಬ ಲಿಂಗಕ್ಕೆ | ಹರಕೆಯ ಮಾಡಿ ಹೊನ್ನುಗಳ |
ಇರದೆ ಇಕ್ಕಿಸುವೆನು ನಾ ಹೊನ್ನ ಕಳಸವ | ತರಿಸಿಕೊಟ್ಟರೆ ಲೆಗ್ಗೆ ಚಂಡ               || ೯೦ ||

ಹಗ್ಗದ ಹುರಿ ಬಾಯಿ ಬೀಗ ಬೆನ್ನಿನ ಸಿಡಿ | ಬಗ್ಗಿ ಹರೆಯ ಹೊ[ಯಿ]ಸುವೆನು |
ಹುಗ್ಗಿ ಕೂಳನು ಗಂಗಳದಿ ಹೊತ್ತು ನಡೆವೆನು | ನಮ್ಮಗಳ ಕುಲದೇವತೆಗೆ            || ೯೧ ||

ಹರಿಹಬ್ಬ ಮಾಡುವೆ ನಾ[ಗುತ್ತಿ] ಅಮ್ಮಗೆ | ಹರಿದಲೆಗಳ ಹೊತ್ತು ನಡೆವೆ |
ಕುರಿದಲೆಗಳ ಕುಟ್ಟಿಸುವೆ ದುರ್ಗಿಯ ಮುಂದೆ | ಧುರಧೀರ ರಾಮ ಸಿಕ್ಕಿದರೆ           || ೯೨ ||

ಹಿಡಿಹೊನ್ನ ಕಳಿಸುವೆ ನಾ[ಗುತ್ತಿ]ಯಮ್ಮಗೆ | ಹಿಡಿವೆನೊಪ್ಪತ್ತಿನೂಟವನು |
ತಡೆಯದೆ ನನಗೊಂದು ಶಿಶು ಜನಿಸಿದರೆ | ಬಿಡುವೆನು ಒಲಿದು ಜೋಗತಿಯ         || ೯೩ ||

ಕಾಣಿಕೆಯಿಕ್ಕುವೆ ನಾ ಗುತ್ತಿಯಮ್ಮಗೆ | ಕೋಣವೈನೂರ ಹೊಯಿಸುವೆನು |
ಮಾಣಿಕದಾರತಿ ಎತ್ತುವೆ[ನ]ಮ್ಮ | ಕ್ಷೋಣಿಪ ರಾಮ ಸಿಕ್ಕಿದರೆ                        || ೯೪ ||

ಧರೆಯೊಳು ವರವುಳ್ಳ ತಿರುಮಲೆದೇವರೆ | ಕೊಟ್ಟರೆ ಲೆಗ್ಗೆಯ ಚಂಡ |
ಸುರತದೊಳಗೆ ಒಂದು ಶಿಶುವು ಜನಿಸಿದರೆ | ತಿರುಜೋಗಿಯ ಬಿಡಿಸುವೆನು          || ೯೫ ||

ಗುಜ್ಜಾರಿ ಮಂಚವ ಮುನ್ನೂರು ಕಳುಹುವೆ | ಉಜ್ಜಯಿನಿ ಮಲ್ಲಪ್ಪ ನಿನಗೆ |
ಸರಸಿಜ ರಾಮನು ಇಟ್ಟ ಮುತ್ತಿನ ಚಂಡು ಹರುಷದಿ ಬರಲೆನ್ನ ಮನೆಗೆ                || ೯೬ ||

ಊರ ಮುಂದಿರುವಂಥ ಮಾರಮ್ಮ ದೇವತೆಗೆ | ಹಾರುಗೋಳಿಯ ಬಿಡಿಸುವೆನು |
ಧೀರ ರಾಮಯ್ಯನು ಇಟ್ಟ ಮುತ್ತಿನ ಚೆಂಡು | ಬೇಗದಿ ಬರಲೆನ್ನ ಮನೆಗೆ               || ೯೭ ||

ಅರುವತ್ತು ಚಿನ್ನದ ಕಂಬಿಯ ಕಳಹುವೆ | ಪರ್ವತ ಮಲ್ಲಯ್ಯ ನಿನಗೆ |
ಸರಸಿಜ ರಾಮನು ಇಟ್ಟ ಮುತ್ತಿನ ಚೆಂಡು | ಹರುಷದಿ ಬರಲೆಂದು ಮನೆಗೆ            || ೯೮ ||

ಬೇಲೂರ ಚೆನ್ನಪ್ಪನ ಬೇಡಿಕೊಂಡಳು | ಲೋಲ ರಾಮನ ಚೆಂಡು ಬರಲಿ |
ವಾಲಗ ಪಾ[ತ್ರ] ಭೋಗಕ್ಕೆ ಐನೂರು | ಬಾಲಕಿಯರ ಕಳುಹುವೆನು                  || ೯೯ ||

ಅಕ್ಕರೆಯಿಂದಲಿ ಹರುವೆ ಲಕ್ಕಮ್ಮಗೆ ಹೊತ್ತು | ನಾ ನಡೆವೆ ದೀಪವನು |
ಅಕ್ಕನ ಮಗ ರಾಮ ಸಿಕ್ಕಿದ[ನಾ]ದರೆ | ನಿತ್ಯದಿಂದಲಿ ದೀಪವನು                     || ೧೦೦ ||

ಚಿನ್ನದ ಕದಪು ರನ್ನದ ಕುಂದಣವನು | ಮನ್ನೆಯ ಹನುಮಗಿಕ್ಕಿಸುವೆ |
ಚೆನ್ನಿಗ ರಾಮಯ್ಯನಿಟ್ಟ ಮುತ್ತಿನ ಚೆಂಡು | ಎನ್ನರಮನೆಗೆ ಬರಲು                     || ೧೦೧ ||

ಹಸ್ತಪಾದವ ತೊಳೆದು ಮತ್ತೊಮ್ಮೆ ದುಸ್ವಾಗಿ | ನೇತ್ರಲೋಚನನ ಭಜಿಸುವಳು |
ಸತ್ಯಮಾರ್ಗಗಳೆಲ್ಲ ಸುಟ್ಟವನ ತಲೆ ಕಾಮ | ಹತ್ತಿ ರಾಮನ ಬಯಸುವೆನು           || ೧೦೨ ||

ಹರಸಿಕೊಂಬಳು ರತ್ನಿ ಹರಿಹರ ಲಿಂಗನ | ಅವರ ಜಟ್ಟಂಗಿ ರಾಮೇಶ್ವರಗೆ |
ದೊರೆ ರಾಮನಾಡುವ ಚೆಂಡೆನ್ನ ಮನೆಗೆ ಸೇರೆ | ಹೊರ ಪೌಳಿ ಹಜಾರ ಹೊಡೆವೆನು  || ೧೦೩ ||

ಅರುವತ್ತು ಚಿನ್ನದ ಕಂಬಿಯನೆ ಕಳುಹುವೆ | ಪರ್ವತದ ಗಿರಿಯ ಮಲ್ಲನಿಗೆ |
ಭ್ರಮೆ ಬಿದ್ದ ಮನುಜನ ಬರಿಸಿಕೊಡಲು ನಿಮ್ಮ | ಗಿರಿಯ ಕಾಣುತ ಮಂಡೆಗೊಡುವೆ    || ೧೦೪ ||

ಪಂಪಾಪತಿ ಹರನೆ ಹಂಪೆ ವಿರುಪಾಕ್ಷನೆ | ಕಂಪಿಲನ ಸುತನಾಡು ಚೆಂಡು |
ಅಂತ್ರಮಾರ್ಗದಿ ಬಂದು ಅರಮನೆಯ ಸೇರಲು ನಿಮಗೆ | ಶ್ಯಾಲೆ ತೇರುಗಳ ನಡೆಸುವೆನು    || ೧೦೬ ||

ಸೋಮವಾರದುಪವಾಸ ಪ್ರಾಣಿರಲು ನಡೆಸುವೆ | ರಾಮಗಿರಿಯ ಸಿದ್ಧೇಶ್ವರಗೆ |
ರಾಮನ ಸುಖದೊಳು ಬಲನಾಗಲು ನಿಮಗೆ | ಕೋರನ್ನದ್ಹೈನ ಬಡಿಸುವೆ             || ೧೦೭ ||

ಮೂಡಲಗಿರಿವಾಸ ನಾಡ ಕಾಣಿಕೆ ಕೊಂಬೆ | ರಾಮನ ತನಗೊಲಿಸಿಕೊಡಲು |
ಕೂಡಿದ ಫಲದೊಳು ತೋರಿದರೆ ಶಿಶುಬಾಲ | ವಾರದ ದಾಸಯ್ಯನ ಬಿಡುವೆ         || ೧೦೮ ||

ಯಲ್ಲಮ್ಮ ಎಕನಾತಿ ಹುಲ್ಲ ಮನೆಯಳೆ ಕೆಂಚು | ಕಲ್ಲ ಮಾಳಿಗೆಯ ಕಟ್ಟಿಸುವೆ |
ಒಲ್ಲೆನೆಂಬುವ ರಾಮ ಒಲಿದು ಬಂದರೆ ನಿಮಗೆ | ಮತ್ತಲ್ಲಿ ಹೊರುವೆ ಹಡ್ಡಲಿಗೆ          || ೧೦೯ ||

ಕುಂಭಿನಿಯಮ್ಮಗೆ ಕೊಡುವೆನು ಕುರಿಕೋಣ | ಹಿಡಿವನೊಪ್ಪತ್ತಿನೂಟಗಳ |
ನಡೆವೆನು ನಿಮ್ಮೆಡೆಗೆ ಬೇವಿನುಡುಗೆಯನುಟ್ಟು | ಸುಗುಣ ರಾಮನ ಕೂಡಿದರೆ        || ೧೦೯ ||

ಹರ[ಣ]ದಿಂದಲಿ ಜನಿಸಿ ನಿರ್ವಾಣದಿ ನೆಲೆಗೊಂಡೆ | ಹಿರಿಯ ಕೆಂಜೆಡೆಯ ಭೈರವನೆ |
ಕರುಣಿಸು ರಾಮಗೆ ಮೊದಲಾದ ಬಾಲಗೆ | ಬಿಡುವೆನು ಜೋಗಿಯ ನಿನಗೆ             || ೧೧೦ ||

ನಾಡದೇವರ ಮಾತು ಕಾಣಗೊಡುದು ಸಂಗಿ | ವಾಯುದೇವರು ಒಂದು ತೆರದಿ |
ಮಾಯದ ಗಾಳೆದ್ದು ಹಾರಿಸಿ ತಂದರೆ | ಭೀಮ ಹನುಮಗೆ ನಾಮ ಕೊಡುವೆ          || ೧೧೧ ||

ಹರಕೆಯ ಕೊಡುವುದು ಸರಿ ಕಾಣೆ ರತ್ನಮ್ಮ | ಪುರುಷ ಕಂಪಿಲನು ಕೇಳಿದರೆ |
ಅದಕೇನು ಗತಿ ಪೇ[ಳ್ವೆ] ತಾನು ಕಾಣದ ಮುನ್ನ | ಧರಣಿದೈವಗಳ ಪ್ರಾರ್ಥನೆ[ಯೇ?]           || ೧೧೨ ||

ಹಾದರವ ಬಲ್ಲಾಕೆ ಈ ಜಾಲನರಿಯಳೆ ಸಂಗಿ | ಓದಬಲ್ಲಾತ ಅರ್ಥವನು |
ಭೇದಗಾಣನೆ ಮುದಿಜೀವಿ ಕಂಪಿಲಗೊಮ್ಮೆ | ಅಹುದಾಗಿ ತೋರಿಸುವೆ ಹರಕೆಯನು  || ೧೧೩ ||

ಒಡನೆ ಬರುವೆನು ಎಂದು ತಡೆಯಲು ದಿನ ಮೂರು | ಮನದಿ ಕಂಗೆಟ್ಟು ದೈವಗಳ |
ಕಡವೆ ಶಾರ್ದೂಲದೊಳು ಜಯಿಸಿ ಬಳೆ ಉಳಿಯಲು | ಧರಣಿ ದೈವದ ಬೇಡಿಕೊಂಡೆ || ೧೧೪ ||

ಮುದಿರಾಯನ ಮನಸು ಕರಗುವಂದದಿ ಪೇಳ್ವೆ | ಮರಳು ಆಗುವನು ನಿಜವೆಂದು
ಗರತಿಯೊಳ್ ಪತಿವ್ರತೆ ಪುರುಷಮೋಹಿನಿಯೆಂದು | ಇರ[ನೇ]ನ ಮೂಳ ನಾಯಾಗಿ || ೧೧೫ ||

ಕಳ್ಳ ಸತಿಯರ ಮಾತು ಕರ್ಣಕ್ಕೆ ಹಿತ ಕಾಣೆ | ಸುಳ್ಳಿನ ಮುಂ[ದೆ] ನಿಜ ತರವೇ |
ನಿಲ್ಲದು ಕಲಿಯೊಳು [ನನ್ನಿಯದೇನು] ರಲು | ಹಲ್ಲು ಹೋದವಗೆ ಹೆದರುವೆನೆ         || ೧೧೬ ||

ಕಂಪಿಲನ ಮಾತೆನ್ನ ಅಂತರಂಗದಿ ಎಲ್ಲ | ಮುಂದೆ ಹಾರಿಸುವೆ ಮೇಘದಲಿ |
ಕಂತುಸನ್ನಿಭ ರಾಮ ಬಂದು ನೆರೆದರೆ ಸಾಕು ಮಂದಿ | ಕಾಂತನ ಮೂಲೆ ಹೊಗಿಸುವೆನು      || ೧೧೭ ||

ಆಳಿದ ಕಂಪಿಲ[ನು]ಕಾಲವಶಕೆ ಸಂಗಿ | ಕೋವಿದ ಪುರುಷ ದೊರೆಯದೆ |
ಹಾಲ್ಹಣ್ಣು ಸವಿದ ಜಿಹ್ವೆಎ ಒಣಗೂಳು | ಸೇರುವುದೆ ಸಂಗೀ ನೀ ಪೇಳು                || ೧೧೮ ||

ಲಾಯದೊಳಗಣ ತೇಜಿ ಪೋದಂತೆ ಮುದಿಯಾಗಿ | ಸಾಣಿಗೆ ಸಮರ್ಥನಿಲ್ಲದೆ |
ಏಳಲಾರದ ಪುರುಷ ನೀರೆಯ ಒಡಗೂಡೆ | ತೀರುವುದೆ ಕಾಮನ ಕಲೆಯು           || ೧೧೯ ||

ಹಸ್ತಿನಿ ಜಾತಿಯ ರತ್ನಿ ತನ್ನಯ ಮನ | ಚಿತ್ತ ಹರಿ[ದಂ]ತೆ ಆಡುತಿರಲು |
ಮತ್ತಲ್ಲಿ ಶೃಂಗಾರ ತೋಟದೊಳಗೆ ಕುಳಿತು | ಕಂದ ರಾಮನ ನೆನೆ ನೆನೆದು          || ೧೨೦ ||

ಶೃಂಗಾರ ತೋಟದೊಳು ರಂಭೆ ರತ್ನಿಯು ಕುಳಿತು | ಚೆನ್ನಿಗ ರಾಮನ ನೆನೆದು |
ಎಂದಿಗೆ ಮುಖ ಕಾಣ್ವೆ ಚಂದ್ರಗೆ ಪ್ರತಿಯಾದ | ಕಂದರ್ಪರೂಪ ಬರನೆನುತ           || ೧೨೧ ||

ನೆರೆ ಪಾಪಿ ರತ್ನಾಜಿ ಈ ತೆರದೊಳು ಇರುವಾಗ | ಬಿರಿದಂಕರಾಡೆ ಲೆಗ್ಗೆಯನು |
ಒಲಿದು ಲಾಲಿಸಿ ಕೇಳಿ ಸುಗುಣ ಮೋಹನರೆಲ್ಲ | ಹೊಡೆದಾಡು ಲೆಗ್ಗೆ ಛಲ ಪದವ      || ೧೨೨ ||

ಭೇರಿ ಕಹಳೆಯ ಸ್ವರವು ಭೂಮಿಯಾರ್ಭಟಿಸುವ | ಸಡಗರವ ಶಿವ ತಾನೆ ಬಲ್ಲ |
ಕಿಡಿಕಿಡಿ ಮಸುಗುತ ಛಲ ಪಂಥಗಳು ಪುಟ್ಟಿ | ಹೊಡೆದಾಡೆ ಹೀನ ಭಾಷೆಯಲಿ        || ೧೨೩ ||

ರಾಯ ಕಾಟನ ಕಡೆಗೆ ಮೊನೆಗಾರ ಎಕ್ಕಟಿಗರು | ಭೇರುಂಡ ಪುಲಿ ಸಿಂಹದಂತೆ |
ಬಾಯ ಧರಣಿಗೆ ಭೂಮಿ ತಾನದುರುವಂದದಿ | ಹೂಡೇನು ಲೆಗ್ಗೆ ಚಂಡೆನುತ          || ೧೨೪ ||

ಹಿಡಿಯಲು ಚಂಡಾಗ ನಿಡುಗಲ್ಲ ಗಂಗರಸ | ಹೊಡೆವೆನು ಲೆಗ್ಗೆ ಹೂಡೆನಲು |
ಇಡು ನಿನ್ನ ಪುಟಿಗಳನು ಹಿಡಿಯದಿದ್ದರೆ | ಇಡಿಸಣ್ಣ ಮೂಗಿಗೆ ಸುಣ್ಣ                    || ೧೨೫ ||

ಕಾಲನಾರ್ಭಟದೊಳು ನೋಡಿಸುತ ಗಂಗಯ್ಯ | ಭೂಮಿ ಜಜ್ಝರಿಪಂತೆ ಇಡಲು |
ಹೂಡಲು ಲೆಗ್ಗೆಯ ಹದ್ದಿನಂದದಿ ಚೆಂಡು | ಎರಗಲು ಗನನ ಮಾರ್ಗದಲಿ              || ೧೨೬ ||

ರಾಯ ರಾಮನ ಮಂದಿ ನೋಡಿದರು ಬರುತಿರ್ಪ | ಭೋರೆಂದು ಬರಸಿಡಿಲ ತೆರದಿ |
ಓರ್ಯಾಗಲೆಲ್ಲರು ಎಡಗೈಯ ಹಂಪನು | ಬಾಗಿ[ಯೆ] ಪಿಡಿದನು ಚಂಡ               || ೧೨೭ ||

ಗಂಗರಸು ನಡೆದನು ಗಾಳಿಪೂಜೆಗೆ ಮುನ್ನ | ಇನ್ನಾರು ಇಡುವ ತಕ್ಕೊಳ್ಳಿ |
ಎದ್ದು ಬಂದನು ಮದ್ದಾನೆ ಮಲೆನಾಡ | ಮುದ್ದು ಮಲ್ಲಯ್ಯ ಚೆಂಡ್ಹಿಡಿದ                 || ೧೨೮ ||

ಕಿಡಿಕಿಡಿ ಹಾರುತ ಹೊಡೆಯಲು ಮಲ್ಲಯ್ಯ | ನೆಗೆದು ಲೆಗ್ಗೆಯು ಪುಟಿದೇಳೆ |
ಬಿಡದಿರಿ ಚೆಂಡನು ಹಿಡಿಯೆನಲು ರಾಮಯ್ಯ | ನೆಗೆದಿಡುವ ಜಂಗಮ ಬಸವ          || ೧೨೯ ||

ಸಾಗಿದ ಮಲ್ಲರಸು ಬೋನದ ಗಂಜಿಗೆ | ಯಾವನು ಬನ್ನಿ ಇನ್ನೊಬ್ಬ |
ಭೇರುಂಡನಂದದಿ ಬಂದು ಚಂಡನು ಪಿಡಿಯೆ | ಸೀರ್ಯದ ರಂಗನಾಯಕನು         || ೧೩೦ ||

[1] + ಶಾರದಾಂಬಾಯ ನಮಃ (ಮೂ)