೧೧೫
ಇನ್ನು ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರದ ನೆಲೆ ಅದೆಂತೆಂದಡೆ :
ಪಶ್ಚಿಮ ಚಕ್ರದಲ್ಲಿ ಏಕಾಕ್ಷರ ನ್ಯಾಸವಾಗಿಹುದು,
ಶಿಖಾ ಚಕ್ರದಲ್ಲಿ ತ್ರಯಾಕ್ಷರ ನ್ಯಾಸವಾಗಿಹುದು,
ಬ್ರಹ್ಮಚಕ್ರದಲ್ಲಿ ಸಹಸ್ರಾಕ್ಷರ ನ್ಯಾಸವಾಗಿಹುದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧೬
ಇನ್ನು ಅಖಂಡ ಜ್ಯೋತಿರ್ಮಯವಾಗಿಹ ಗೋಳಾಕಾಕಾರ ಪ್ರಣವದ,
ತಾರಕಾಸ್ವರೂಪ, ದಂಡಸ್ವರೂಪ, ಕುಂಡಲಾಕಾರ, ಅರ್ಧಚಂದ್ರಕ,
ದರ್ಪಣಾಕಾರ, ಜ್ಯೋತಿಸ್ವರೂಪ ಇವರ ಕಾಂತಿ.
ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ತಾರಕಸ್ವರೂಪವು

[1]ಅಱವತ್ತುನೂಱು ಕೋಟಿ ಸೂರ್ಯ ಚಂದ್ರಾಗ್ನಿಪ್ರಕಾಶವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧೭
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ದಂಡಕಸ್ವರೂಪವು,
ಎಪ್ಪತ್ತುನೂಱು ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧೮
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಕುಂಡಲಾಕಾರವು,
ಎಂಬತ್ತುನೂಱು ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧೯
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ
ಪ್ರಣವದ ಅರ್ಧ ಚಂದ್ರಕ ಸ್ವರೂಪವು,
ತೊಂಬತ್ತುನೂಱು ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೦
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ದರ್ಪಣಾಕಾರವು
ಸಾವಿರದ ನೂಱು ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ.
ಅಪ್ರಮಾಣ ಕೂಡಲಸಂಗಮದೇವ.

೧೨೧
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ
ಪ್ರಣವದ ಜ್ಯೋತಿ ಸ್ವರೂಪವು,
ಅನೇಕ ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವಾ.

೧೨೨
ಇನ್ನು ಅತಿ ಸೂಕ್ಷ್ಮ ಪಂಚಾಕ್ಷರದುತ್ಪತ್ಯವದೆಂತೆಂದಡೆ :
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾ ಸ್ವರೂಪದಲ್ಲಿ ನಕಾರ ಉತ್ಪತ್ಯ,
ಆ ಪ್ರಣವದ ದಂಡಕ ಸ್ವರೂಪದಲ್ಲಿ ಮಕಾರ ಉತ್ಪತ್ಯ,
ಆ ಪ್ರಣವದ ಕುಂಡಲಾಕಾರದಲ್ಲಿ ಶಿಕಾರ ಉತ್ಪತ್ಯ,
ಆ ಪ್ರಣವದ ಅರ್ಧ ಚಂದ್ರಕದಲ್ಲಿ ವಕಾರ ಉತ್ಪತ್ಯ,
ಆ ಪ್ರಣವದ ದರ್ಪಣಾಕಾರದಲ್ಲಿ ಯಕಾರ ಉತ್ಪತ್ಯ,
ಆ ಪ್ರಣವದ ಜ್ಯೋತಿ ಸ್ವರೂಪದಲ್ಲಿ ಚಿದಾತ್ಮ ಪರಮಾತ್ಮರುತ್ಪತ್ಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೩
ಚಿತ್ಪಿಂಡನಾದೇ ಸಾಕ್ಷಿ –
ಓಂಕಾರ ತಾರಕಾರೂಪೇ ನಕಾರಂ ಚ ಸಜಾಯತೇ |
ಓಂಕಾರ ದಂಡರೂಪೇ ಚ ಮಕಾರಂ ಚ ಸಜಾಯತೇ ||
ಓಂಕಾರ ಕುಂಡಲಾಕಾರೇ ಶಿಕಾರಂ ಚ ಸಜಾಯತೇ |
ಓಂಕಾರಶ್ಚಾರ್ಧ ಚಂದ್ರೇಚ ವಕಾರಂ ಚ ಸಜಾಯತೇ ||
ಓಂಕಾರ ದರ್ಪಣಾಕಾರೇ ಯಕಾರಂ ಚ ಸಜಾಯತೇ |
ಓಂಕಾರ ಜ್ಯೋತಿರೂಪೇಚ ಚಿತ್ಪರಂ ಚ ಸಜಾಯತೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೨೪
ಅತಿ ಸೂಕ್ಷ್ಮ ಪಂಚಾಕ್ಷರ, ಇನ್ನು ಅತಿ ಸೂಕ್ಷ್ಮ ಪಂಚಾಕ್ಷರದ ಕಾಂತಿ,
ಅತಿ ಸೂಕ್ಷ್ಮ ಪಂಚಾಕ್ಷರದ ನೆಲೆ, ಚಿದಾತ್ಮ ಪರಮಾತ್ಮನ ಕಾಂತಿ,
ಚಿದಾತ್ಮ ಪರಮಾತ್ಮನ ಕಾಂತಿ ನೆಲೆ, ಚಿದಾತ್ಮ ಪರಮಾತ್ಮನ ನೆಲೆ,
ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರದ ಪ್ರಣವದ
ತಾರಕ ಸ್ವರೂಪದಲ್ಲಿ
ಅಱುವತ್ತುನೂಱು ಕೋಟಿ ಸಿಡಿಲೊಡದ ಬಯಲು ಪ್ರಕಾಶವಾಗಿ
ನಕಾರವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೫
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ದಂಡಕಸ್ವರೂಪದಲ್ಲಿ
ಎಪ್ಪತ್ತುನೂಱು ಕೋಟಿ ಸಿಡಿಲೊಡದ ಬಯಲ ಪ್ರಕಾಶವಾಗಿ
ಮಕಾರವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೬
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಕುಂಡಲಾಕಾರದಲ್ಲಿ,
ಎಂಬತ್ತುನೂಱು ಕೋಟಿ ಸಿಡಿಲೊಡದ ಬಯಲ ಪ್ರಕಾಶವಾಗಿ
ಶಿಕಾರವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೭
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಅರ್ಧಚಂದ್ರಕ ಸ್ವರೂಪದಲ್ಲಿ,
ತೊಂಬತ್ತು ನೂಱು ಕೋಟಿ ಸಿಡಿಲೊಡದ ಬಯಲ ಪ್ರಕಾಶವಾಗಿ
ವಕಾರವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೮
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ದರ್ಪಣಾಕಾರದಲ್ಲಿ
ಸಾವಿರನೂಱು ಕೋಟಿ ಸಿಡಿಲೊಡದ ಬಯಲ ಪ್ರಕಾಶವಾಗಿ
ಯಕಾರವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨೯
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ
ಪ್ರಣವದ ಜ್ಯೋತಿ ಸ್ವರೂಪದಲ್ಲಿ,
ಅನೇಕ ಕೋಟಿ ಸಿಡಿಲೊಡದ ಬಯಲ ಪ್ರಕಾಶವಾಗಿ
ಚಿದಾತ್ಮ ಪರಮಾತ್ಮರಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೦
ಇನ್ನು ಐವತ್ತೆರಡಕ್ಷರ ಉತ್ಪತ್ಯವೆಂತೆಂದಡೆ :
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾ ಸ್ವರೂಪದಲ್ಲಿಹ ನಕಾರದಲ್ಲಿ ನಕಾರದುತ್ಪತ್ಯ,
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ದಂಡಕ ಸ್ವರೂಪದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯ,
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯ,
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಅರ್ಧಚಂದ್ರಕ ಸ್ವರೂಪದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯ,
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯ,
ಈ ಪಂಚಾಕ್ಷರೋತ್ಪತ್ಯ ಗೋಪ್ಯಕ್ಕೂ ಗೋಪ್ಯವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೧
||ರಹಸ್ಯ|| ನಕಾರೆ ನಕಾರೋತ್ಪನ್ನಃ ಮಕಾರೆ ಮಕಾರೊದ್ಭವಃ |
ಶಿಕಾರೆ ಶಿಕಾರೋತ್ಪನ್ನಃ ವಕಾರೆ ವಕಾರೋದ್ಭವಃ |
ಯಕಾರೆ ಯಕಾರೋತ್ಪನ್ನಃ ಗುಹ್ಯಾದ್ಗುಹ್ಯಂ ವರಾನನೆ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೩೨
ಇನ್ನು ಬೀಜಾಕ್ಷರಂಗಳ ನೆಲೆ ಅದೆಂತೆಂದಡೆ :
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದಲ್ಲಿ
ಪ್ರಣವ ಉತ್ಪತ್ಯವಾಗಿ,
ಆ ಆಜ್ಞಾ ಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯವಾಗಿ,
ವಿಶುದ್ಧಿ ಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯವಾಗಿ,
ಅನಾಹತ ಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯವಾಗಿ,
ಮಣಿಪೂರಕ ಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ದಂಡಕ ಸ್ವರೂಪದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಗಿ
ಸ್ವಾಧಿಷ್ಠಾನ ಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ತಾರಕ ಸ್ವರೂಪದಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯವಾಗಿ
ಆಧಾರ ಚಕ್ರಕ್ಕೆ ಬೀಜಾಕ್ಷರವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೩
ಸಾಕ್ಷಿ-
ಆಧಾರಂ ಚ ನಕಾರಂ ಚ ಸ್ವಾಧಿಷ್ಠಾನಂ ಮಕಾರಕಂ |
ಶಿಕಾರಂ ಮಣಿಪೂರಂ ಚ ವಕಾರಂ ಚ ಅನಾಹತಂ |
ಮಕಾರಂ ಚ ವಿಶುದ್ಧಿಶ್ಚ ಆಜ್ಞಾ ಪ್ರಣವ ಏವಚ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೩೪
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರದ
ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ ಪರಮಾತ್ಮನಲ್ಲಿ
ಜೀವಹಂಸ ಪರಮಹಂಸ ಉತ್ಪತ್ಯವಾಗಿ
ಆಜ್ಞಾಚಕ್ರದ ದ್ವಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೫
ವಿಶುದ್ಧಿಚಕ್ರದ ಯಕಾರ ಬೀಜಾಕ್ಷರದಲ್ಲಿ
ಅಆ ಇಈ ಉಊ ಋಋ ಇಇ ಎಐ ಒಔ ಅಂಅಃ ಎಂಬ
ಷೋಡಶಾಕ್ಷರಂಗಳುತ್ಪತ್ಯವಾಗಿ ವಿಶುದ್ಧಿ ಚಕ್ರದ ಷೋಡಶದಳ ಪದ್ಮದಲ್ಲಿ
ನ್ಯಾಸವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೬
ಅನಾಹತ ಚಕ್ರದ ವಕಾರ ಬೀಜದಲ್ಲಿ
ಕ ಖ ಗ ಘ ಙ ಚ ಛ ಜ ಝ ಞ ಟ ಠ
ದ್ವಾದಶಾಕ್ಷರಂಗಳುತ್ಪತ್ಯವಾಗಿ ಆ ಅನಾಹತ ಚಕ್ರದ
ದ್ವಾದಶದಶ ಪದ್ಮದಲ್ಲಿ ನ್ಯಾಸವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೭
ಮಣಿಪೂರಕ ಚಕ್ರದ ಶಿಕಾರ ಬೀಜದಲ್ಲಿ
ಡ ಢ ಣ ತ ಥ ದ ಧ ನ ಪ ಫ ಎಂಬ ದಶಾಕ್ಷರಂಗಳುತ್ಪತ್ಯವಾಗಿ,
ಆ ಮಣಿಪೂರಕ ಚಕ್ರದ ದಶದಳ ಪದ್ಮದಲ್ಲಿ ನ್ಯಾಸವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೮
ಸ್ವಾಧಿಷ್ಠಾನ ಚಕ್ರದ ಮಕಾರ ಬೀಜದಲ್ಲಿ
ಬ ಭ ಮ ಯ ರ ಲ ಎಂಬ ಆಱಕ್ಷರಂಗಳುತ್ಪತ್ಯವಾಗಿ
ಸ್ವಾಧಿಷ್ಠಾನ ಚಕ್ರದ ಷಡ್ದಳ ಪದ್ಮದಲ್ಲಿ ನ್ಯಾಸವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೩೯
ಅಧಾರ ಚಕ್ರದ ನಕಾರ ಬೀಜದಲ್ಲಿ
ವ ಶ ಷ ಸ ಎಂಬ ನಾಲ್ಕು ಅಕ್ಷರಂಗಳುತ್ಪತ್ಯವಾಗಿ
ಆಧಾರ ಚಕ್ರದ ನಾಲ್ಕುದಳ ಪದ್ಮದಲ್ಲಿ ನ್ಯಾಸವಾಗಿಹುದು. ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪೦
ಸಾಕ್ಷಿ-
ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮನಿ ಜಾಯತೇ |
ಕ್ಷಂ ಳಂ ದ್ವಿವರ್ಣಕಂ ಚೈವ ಜೀವಾತ್ಮನಿ ಚ ಜಾಯತೇ ||
ಅಆ ಇಈ ಉಊ ವರ್ಣಂ ಚ ಋಋ ಇ ಇ ವರ್ಣಂ ವಿದುಃ |
ಎಐ ಓ ಔ ಅಂ ಅಃ ವರ್ಣಂ ಯಕಾರಂ ಚ ಸಜಾಯತೇ ||
ಕಖಗಘಙ ವರ್ಣಂ ಚ ಚಛಜಝಞ ವರ್ಣಕಂ |
ಟಠ ದ್ವಿವರ್ಣಕಂ ಚೈವ ವಕಾರೇ ಚ ಸಚಾಯತೇ ||
ಡಢಣ ತಥ ವರ್ಣಂಚ ದಧನ ಪಷ ವರ್ಣಕಂ |
ಇತ್ಯೇತೆ ದಶವರ್ಣಾನಿ ಶಿಕಾರೇ ಚ ಸಜಾಯತೇ ||
ಬಭಮ ಯರ ವರ್ಣಂ ಡ ಲ ಏಕೋ ವರ್ಣಕಂ ತಥಾ |
ಇತಿ ಷಡ್ವರ್ಣಕಂ ಚೈವ ಮಕಾರೇ ಚ ಸಜಾಯತೇ ||
ವಶಷಸ ಚತುವರ್ಣಂ ನಕಾರಂ ಚ ಸಜಾಯತೇ |
ಇತಿ ವರ್ಣಾಕ್ಷರಂ ನ್ಯಾಸಂ ಸುಸೂಕ್ಷ್ಮಂ ಕಮಲಾನನೇ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೪೧
ಈ ಐವತ್ತೆರಡಕ್ಷರವೆ ಅನೇಕ ಆಗಮಂಗಳು,
ಈ ಐವತ್ತೆರಡಕ್ಷರವೆ ಅನೇಕ ಪುರಾಣಂಗಳು.
ಈ ಐವತ್ತೆರಡಕ್ಷರವೆ ಅನೇಕ ವೇದಂಗಳು,
ಈ ಐವತ್ತೆರಡಕ್ಷರವೆ ಅಱಿವೆಂದಱಿದರೆ
ಐವತ್ತೆರಡಕ್ಷರವಡಗಿ ಆಱಕ್ಷರವಾಯಿತ್ತು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪೨
ಇನ್ನು ಷಡ್ವಿಧ ಮುಖಂಗಳುತ್ಪತ್ಯ ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕ ಸ್ವರೂಪದಲ್ಲಿ ಸದ್ಯೋಜಾತ ಮುಖ ಉತ್ಪತ್ಯ.
ಆ ಪ್ರಣವದ ದಂಡಕ ಸ್ವರೂಪದಲ್ಲಿ ವಾಮದೇವ ಮುಖ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರ ಮುಖ ಉತ್ಪತ್ಯ.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷ ಮುಖ ಉತ್ಪತ್ಯ.
ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನ್ಯ ಮುಖ ಉತ್ಪತ್ಯ.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ನಿರ್ಭಾವ ಮುಖ ಉತ್ಪತ್ಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪೩
ಶಿವಧರ್ಮಸೂತ್ರೇ ಸಾಕ್ಷಿ-
ಓಂಕಾರತಾರಕಸ್ವರೂಪೇ ಸದ್ಯೋಜಾತಂ ಚ ಜಾಯತೇ |
ಓಂಕಾರದಂಡಸ್ವರೂಪೇ ವಾಮದೇವಂ ಚ ಜಾಯತೇ ||
ಓಂಕಾರಕುಂಡಲಾಕಾರೇ ಅಘೋರಂ ಚ ಸಜಾಯತೇ |
ಓಂಕಾರ ಅರ್ಧಚಂದ್ರೇಚ ತತ್ಪುರುಷಂ ಚ ಜಾಯತೇ ||
ಓಂಕಾರದರ್ಪಣಾಕಾರೇ ಈಶಾನ್ಯಂ ಚ ಸಜಾಯತೇ |
ಓಂಕಾರಜ್ಯೋತಿರೂಪೇಚ ನಿರ್ಭಾವಂ ಚ ಸಜಾಯತೇ ||
ಇತಿ ಷಡ್ವಕ್ತ್ರಕಂ ದೇವಿ ಸ್ಥಾನೇ ಸ್ಥಾನೇ ಚ ಜಾಯತೇ | ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೪೪
ಇನ್ನು ಷಡ್ವಿಧ ಮುಖಂಗಳ ನೆಲೆ, ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಸದ್ಯೋಜಾತ ಮುಖವಿಹುದು.
ಸ್ವಾಧಿಷ್ಠಾನ ಚಕ್ರದಲ್ಲಿ ವಾಮದೇವ ಮುಖವಿಹುದು.
ಮಣಿಪೂರಕ ಚಕ್ರದಲ್ಲಿ ಅಘೋರ ಮುಖವಿಹುದು.
ಅನಾಹತ ಚಕ್ರದಲ್ಲಿ ತತ್ಪುರುಷ ಮುಖವಿಹುದು.
ವಿಶುದ್ಧಿ ಚಕ್ರದಲ್ಲಿ ಈಶಾನ್ಯ ಮುಖವಿಹುದು.
ಆಜ್ಞಾ ಚಕ್ರದಲ್ಲಿ ನಿರ್ಭಾವ ಮುಖವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪೫
ಶಿವಧರ್ಮಸಾರೇ-
ಆಧಾರೇ ಚ ಸದ್ಯೋಜಾತಂ ಸ್ವಾಧಿಷ್ಠೇ ವಾಮದೇವಕಂ |
ಅಘೋರಂ ಮಣಿಪೂರೇಚ ತತ್ಪುರುಷಂ ಚನಾಹತೇ ||
ಈಶಾನ್ಯಂ ತು ವಿಶುದ್ಧಿಶ್ಚ ಆಜ್ಞಾನಿರ್ಭಾವಕಂ ತಥಾ |
ಇತಿ ಷಡ್ವಕ್ತ್ರಕಂ ದೇವಿ ಸ್ಥಾನೇ ಸ್ಥಾನೇ ಸಮಾಚರೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೪೬
ಇನ್ನು ಷಡ್ವಿಧ ಭೂತಂಗಳುತ್ಪತ್ಯ, ಅದೆಂತೆಂದಡೆ :
ಸದ್ಯೋಜಾತ ಮುಖದಲ್ಲಿ ಪೃಥ್ವಿ ಪುಟ್ಟಿತ್ತು.
ವಾಮದೇವ ಮುಖದಲ್ಲಿ ಅಪ್ಪು ಪುಟ್ಟಿತ್ತು.
ಅಘೋರ ಮುಖದಲ್ಲಿ ಅಗ್ನಿ ಪುಟ್ಟಿತ್ತು.
ತತ್ಪುರುಷ ಮುಖದಲ್ಲಿ ವಾಯು ಪುಟ್ಟಿತ್ತು.
ಈಶಾನ್ಯ ಮುಖದಲ್ಲಿ ಆಕಾಶ ಪುಟ್ಟಿತ್ತು.
ಪ್ರಣವದ ಅರ್ಧಚಂದ್ರಕದಲ್ಲಿ ಮನಸ್ಸು ಪುಟ್ಟಿತ್ತು
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೧೪೭
ಸದ್ಯೋಜಾತಾದ್ಭವೇದ್ಭೂಮಿಃ ವಾಮದೇವಾದ್ಭವೇತ್ ಜಲಂ |
ಅಘೋರಾದ್ವಹ್ನಿರುತ್ಪತ್ತಿಃ ತತ್ಪುರುಷಾದ್ವಾಯೋರುದ್ಭವಃ ||
ಈಶಾನ್ಯದ್ಗಗನಂ ಜಾತಂ ಅರ್ಧಚಂದ್ರೇ ಮನೋದ್ಭವಂ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೪೮
ಇನ್ನು ಷಡ್ವಿಧ ಭೂತಂಗಳ ನೆಲೆ ಅದೆಂತೆಂದಡೆ :
ಆಧಾರ ಚಕ್ರದಲ್ಲಿ ಪೃಥ್ವಿ ಎಂಬ ಮಹಾಭೂತವಿಹುದು.
ಸ್ವಾಧಿಷ್ಠಾನ ಚಕ್ರದಲ್ಲಿ ಜಲ ಎಂಬ ಮಹಾಭೂತವಿಹುದು.
ಮಣಿಪೂರಕ ಚಕ್ರದಲ್ಲಿ ತೇಜ ಎಂಬ ಮಹಾಭೂತವಿಹುದು.
ಅನಾಹತ ಚಕ್ರದಲ್ಲಿ ವಾಯುವೆಂಬ ಮಹಾಭೂತವಿಹುದು.
ವಿಶುದ್ಧಿ ಚಕ್ರದಲ್ಲಿ ಆಕಾಶವೆಂಬ ಮಹಾಭೂತವಿಹುದು.
ಆಜ್ಞಾ ಚಕ್ರದಲ್ಲಿ ಮನವೆಂಬ ಮಹಾಭೂತವಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪೯
ಮೃಗೇಂದ್ರಸಾರೇ, ಸಾಕ್ಷಿ
ಆಧಾರೇ ಪೃಥ್ವಿಭೂತಂ ಚ ಸ್ವಾಧಿಷ್ಠಾನೇ ಜಲಂ ತಥಾ |
ಮಣಿಪೂರೇ ಚ ತೇಜಶ್ಚ ವಾಯುಭೂತಂ ಚಾನಾಹತೇ ||
ಆಕಾಶಂ ಚ ವಿಶುದ್ಧಿಶ್ಚ ಆಜ್ಞೆಯಾಂ ಮನವೇವ ಚ |
ಇತಿ ಪುಷ್ಠಭೂತಂ ಚೈವ ಸ್ಥಾನೇಸ್ಥಾನೇ ಸಮಾಚರೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೫೦
ಇನ್ನು ಷಡ್ವಿಧಲಿಂಗಉತ್ಪತ್ಯ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿ ಸ್ವರೂಪದಲ್ಲಿ ಮಹಾಲಿಂಗ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದ ಲಿಂಗ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗ ಹುಟ್ಟಿತ್ತು.
ಆ ಪ್ರಣವದ ದಂಡಕ ಸ್ವರೂಪದಲ್ಲಿ ಗುರುಲಿಂಗ ಹುಟ್ಟಿತ್ತು.
ಆ ಪ್ರಣವದ ತಾರಕ ಸ್ವರೂಪದಲ್ಲಿ ಆಚಾರ ಲಿಂಗ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೫೧
ಶಿವಲಿಂಗಾಗಮೇ ಸಾಕ್ಷಿ-
ಓಂಕಾರಜ್ಯೋತಿಸ್ವರೂಪೇ ಚ ಮಹಾಲಿಂಗಂ ಸಮುದ್ಭವಂ |
ಓಂಕಾರದರ್ಪಣಾಕಾರೇ ಪ್ರಸಾದಲಿಂಗಮುದ್ಭವಂ ||
ಓಂಕಾರೇಚಾರ್ಧಚಂದ್ರೇ ಚ ಜಂಗಮಲಿಂಗಮುದ್ಭವಂ |
ಓಂಕಾರ ಕುಂಡಲಾಕಾರೇ ಶಿವಲಿಂಗಂ ಸಮುದ್ಭವಂ ||
ಓಂಕಾರ ದಂಡಸ್ವರೂಪೇ ಗುರುಲಿಂಗಂ ಸಮುದ್ಭವಂ |
ಓಂಕಾರ ತಾರಕಾರೂಪೇ ಆಚಾರಲಿಂಗಮುದ್ಭವಂ |
ಇತಿ ಷಷ್ಠಲಿಂಗೋತ್ಪನ್ನಂ ಸುಸೂಕ್ಷಂ ಶೃಣು ಪಾರ್ವತಿ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.


[1]     ಅಱು (ತಾಪ್ರ ೫೮೬)