೨೦೨
ಇನ್ನು ಪಂಚಾಕ್ಷರ ನಿವೃತ್ತಿ ಅದೆಂತೆಂದಡೆ :
ಅಲ್ಲಿ ಜ್ಯೋತಿಸ್ವರೂಪುಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾಕೃತಿಯಲ್ಲಿಹ ನಕಾರದಲ್ಲಿ ನಕಾರವಡಗಿತ್ತು.
ಆ ಪ್ರಣವದ ದಂಡಕಾಕೃತಿಯಲ್ಲಿಹ ಮಕಾರದಲ್ಲಿ ಮಕಾರವಡಗಿತ್ತು.
ಆ ಪ್ರಣವದ ಕುಂಡಲಾಕೃತಿಯಲ್ಲಿಹ ಶಿಕಾರದಲ್ಲಿ ಶಿಕಾರವಡಗಿತ್ತು.
ಆ ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹ ವಕಾರದಲ್ಲಿ ವಕಾರವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರವಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೦೩
ಇನ್ನು ಪ್ರಣವ ಮೊದಲಲ್ಲಿಹ
ಪಂಚಾಕ್ಷರಂಗಳ ಐಕ್ಯ ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾಕೃತಿಯಲ್ಲಿಹ ನಕಾರವು
ಆ ಪ್ರಣವದ ತಾರಕಾಕೃತಿಯಲ್ಲಿಯೆ ಐಕ್ಯವಾಯಿತ್ತು.
ಆ ಪ್ರಣವದ ದಂಡಕಾಕೃತಿಯಲ್ಲಿಹ ಮಕಾರವು
ಆ ಪ್ರಣವದ ದಂಡಕಾಕೃತಿಯಲ್ಲಿಯೆ ಐಕ್ಯವಾಯಿತ್ತು.
ಆ ಪ್ರಣವದ ಕುಂಡಲಾಕೃತಿಯಲ್ಲಿಹ ಶಿಕಾರವು
ಆ ಪ್ರಣವದ ಕುಂಡಲಾಕೃತಿಯಲ್ಲಿಯೆ ಐಕ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹ ವಕಾರವು
ಆ ಪ್ರಣವದ ಅರ್ಧಚಂದ್ರಾಕೃತಿಯಲ್ಲಿಯೆ ಐಕ್ಯವಾಯಿತ್ತು.
ಆ ಪ್ರಣವದ ದರ್ಪಣಾಕೃತಿಯಲ್ಲಿಹ ಯಕಾರವು.
ಆ ಪ್ರಣವದ ದರ್ಪಣಾಕೃತಿಯಲ್ಲಿಯೆ ಐಕ್ಯವಾಯಿತ್ತು.
ಆ ಪ್ರಣವದ ಜ್ಯೋತಿ ಸ್ತಂಭಾಕೃತಿಯಲ್ಲಿಹ ಚಿದಾತ್ಮ ಪರಮಾತ್ಮರಿಬ್ಬರು.
ಆ ಪ್ರಣವದ ಜ್ಯೋತಿ ಸ್ತಂಭಾಕೃತಿಯಲ್ಲಿಯೆ ಐಕ್ಯವಾಯಿತ್ತು.
ಶ್ರುತಿ :
ಓಮಿತ್ತ್ಯೇಕಾಕ್ಷರಂ ಬ್ರಹ್ಮ | ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೦೪
ಇನ್ನು ಸಹಸ್ರಾಕ್ಷರ ತ್ರಯಾಕ್ಷರ ಏಕಾಕ್ಷರ ನಿವೃತ್ತಿ ಅದೆಂತೆಂದಡೆ :
ಸಹಸ್ರಾಕ್ಷರ ತ್ರಯಾಕ್ಷರದಲ್ಲಿ ಅಡಗಿತ್ತು.
ಆ ತ್ರಯಾಕ್ಷರ ಏಕಾಕ್ಷರದಲ್ಲಿ ಅಡಗಿತ್ತು.
ಆ ಏಕಾಕ್ಷರ ‘ನಿಃಶಬ್ದಂ ಬ್ರಹ್ಮಉಚ್ಯತೆ’-ಎಂಬ
ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೦೫
ಇನ್ನು ಶ್ರೀ ಷಡ್ವಿಧ ಭೂತಂಗಳ ನಿವೃತ್ತಿ, ಅದೆಂತೆಂದಡೆ :
ಸದ್ಯೋಜಾತ ಮುಖದಲ್ಲಿ ಪೃಥ್ವಿ ಎಂಬ ಮಹಾಭೂತವಡಗಿತ್ತು.
ವಾಮದೇವ ಮುಖದಲ್ಲಿ ಅಪ್ಪುವೆಂಬ ಮಹಾಭೂತವಡಗಿತ್ತು.
ಅಘೋರಮುಖದಲ್ಲಿ ತೇಜವೆಂಬ ಮಹಾಭೂತವಡಗಿತ್ತು.
ತತ್ಪುರುಷ ಮುಖದಲ್ಲಿ ವಾಯುವೆಂಬ ಮಹಾಭೂತವಡಗಿತ್ತು.
ಈಶಾನ್ಯಮುಖದಲ್ಲಿ ಆಕಾಶವೆಂಬ ಮಹಾಭೂತವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಮನವೆಂಬ ಮಹಾಭೂತವಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೦೬
ಇನ್ನು ಷಡ್ವಿಧ ಮುಖಂಗಳ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾಸ್ವರೂಪದಲ್ಲಿ ಸದ್ಯೋಜಾತ ಮುಖವಾಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವ ಮುಖವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರ ಮುಖವಡಗಿತ್ತು.
ಆ ಪ್ರಣವದ ಆರ್ಧಚಂದ್ರಕದಲ್ಲಿ ತತ್ಪುರುಷ ಮುಖವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನ್ಯ ಮುಖವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ನಿರ್ಭಾವಮುಖವಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೦೭
ಇನ್ನು ಷಡ್ವಿಧ ಲಿಂಗಂಗಳ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವದ ತಾರಕಾಸ್ವರೂಪದಲ್ಲಿ ಆಚಾರಲಿಂಗವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗವಡಗಿತ್ತು.
ಆ ಪ್ರಣವದ ಆರ್ಧಚಂದ್ರಕದಲ್ಲಿ ಜಂಗಮಲಿಂಗವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಮಹಾಲಿಂಗವಡಗಿತ್ತು,
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೦೮
ಇನ್ನು ಷಟ್ಸಾದಾಖ್ಯಂಗಳ ನಿವೃತ್ತಿ, ಅದೆಂತೆಂದಡೆ :
ನಿವೃತ್ತಿಕಲೆಯಲ್ಲಿ ಕರ್ಮಸಾದಾಖ್ಯವಡಗಿತ್ತು.
ಪ್ರತಿಷ್ಠಾ ಕಲೆಯಲ್ಲಿ ಕರ್ತೃಸಾದಾಖ್ಯವಡಗಿತ್ತು.
ವಿದ್ಯಾಕಲೆಯಲ್ಲಿ ಮೂರ್ತಸಾದಾಖ್ಯವಡಗಿತ್ತು.
ಶಾಂತಿಕಲೆಯಲ್ಲಿ ಅಮೂರ್ತ ಸಾದಾಖ್ಯವಡಗಿತ್ತು.
ಶಾಂತ್ಯತೀತ ಕಲೆಯಲ್ಲಿ ಶಿವಸಾದಾಖ್ಯವಡಗಿತ್ತು.
ಶಾಂತ್ಯತೀತೋತ್ತರ ಕಲೆಯಲ್ಲಿ ನಿರ್ಮುಕ್ತಿಯೆಂಬ ಮಹಾಸಾದಾಖ್ಯವಡಗಿತ್ತು
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೦೯
ಇನ್ನು ಷಟ್ಕಲೆಗಳ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕ ಸ್ವರೂಪದಲ್ಲಿ ನಿವೃತ್ತಿಕಲೆಯಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಪ್ರತಿಷ್ಠಾಕಲೆಯಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆಯಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆಯಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆಯಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ತರಕಲೆಯಡಗಿತ್ತು.
ನೋಡಾ,  ಅಪ್ರಮಾಣ ಕೂಡಲಸಂಗಮದೇವ.

೨೧೦
ಇನ್ನು ಷಡ್ವಿಧ ಹಸ್ತಂಗಳ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕ ಸ್ವರೂಪದಲ್ಲಿ ಸುಚಿತ್ತಹಸ್ತವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರ ಹಸ್ತವಡಗಿತ್ತು.
ಆ ಪ್ರಣವದ ಅರ್ಧ ಚಂದ್ರಕದಲ್ಲಿ ಸುಮನ ಹಸ್ತವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಸುಜ್ಞಾನಹಸ್ತವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಭಾವಹಸ್ತವಡಗಿತ್ತು.
ನೋಡಾ,  ಅಪ್ರಮಾಣ ಕೂಡಲಸಂಗಮದೇವ.

೨೧೧
ಇನ್ನು ನವಶಕ್ತಿಗಳ ನಿವೃತ್ತಿ, ಅದೆಂತೆಂದಡೆ :
ಕಾಕಿನಿಶಕ್ತಿ ರಾಕಿನಿ ಶಕ್ತಿಯಲ್ಲಿ ಅಡಗಿದಳು.
ಆ ರಾಕಿನಿಶಕ್ತಿ ಲಾಕಿನಿ ಶಕ್ತಿಯಲ್ಲಿ ಅಡಗಿದಳು.
ಆ ಢಾಕಿನಿಶಕ್ತಿ ಹಾಕಿನಿ ಶಕ್ತಿಯಲ್ಲಿ ಅಡಗಿದಳು.
ಆ ಹಾಕಿನಿಶಕ್ತಿ ನಿರ್ಮಾಯ ಶಕ್ತಿಯಲ್ಲಿ ಅಡಗಿದಳು.
ಆ ನಿರ್ಮಾಯಶಕ್ತಿ ನಿಭ್ರಾಂತ ಶಕ್ತಿಯಲ್ಲಿ ಅಡಗಿದಳು.
ಆ ನಿಭ್ರಾಂತಶಕ್ತಿ ನಿರ್ಭಿನ್ನಶಕ್ತಿಯಲ್ಲಿ ಅಡಗಿದಳು.
ಆ ನಿರ್ಭಿನ್ನಶಕ್ತಿ ಏನು ಎನಲಿಲ್ಲದ ಮಹಾಘನ
ನಿರಂಜನಾತೀತದ ನೆನಹಿನಲ್ಲಿಯೆ ಅಡಗಿದಳು.
ಆ ಏನೂ ಎನಲಿಲ್ಲದ ಮಹಾಘನ ನಿರಂಜನಾತೀತದ
ನೆನಹು ಅಡಗಿ ನಿಃಶೂನ್ಯವಾಯಿತ್ತು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೧೨
ಇನ್ನು ಷಡ್ವಿಧ ಅಧಿದೇವತೆಗಳ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾಸ್ವರೂಪದಲ್ಲಿ ಬ್ರಹ್ಮನಡಗಿದನು.
ಆ ಪ್ರಣವದ ದಂಡಕಸ್ವರೂಪದಲ್ಲಿ ವಿಷ್ಣುವಡಗಿದನು.
ಆ ಪ್ರಣವದ ಕುಂಡಲಾಕಾರದಲ್ಲಿ ರುದ್ರನಡಗಿದನು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಈಶ್ವರನಡಗಿದನು.
ಆ ಪ್ರಣವದ ದರ್ಪಣಾಕಾರದಲ್ಲಿ ಸದಾಶಿವನಡಗಿದನು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಆತ್ಮನಡಗಿದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೧೩
ರಹಸ್ಯೇ,
ಬ್ರಹ್ಮಾವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ |
ಏತೇ ಗರ್ಭಗತಶ್ಚೈವ ತಸ್ಮೈ ಶ್ರೀ ಗುರುವೇ ನಮಃ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೧೪
ಇನ್ನು ಅಂತರಾತ್ಮ ಪರಮಾತ್ಮನ ನಿವೃತ್ತಿ, ಅದೆಂತೆಂದಡೆ :
ಅಂತರಾತ್ಮನೆಂಬ ಮಹಾಗುರು
ಪರಮಾತ್ಮನೆಂಬ ಮಹಾಲಿಂಗದಲ್ಲಿ ಅಡಗಿತ್ತು.
ಆ ಪರಮಾತ್ಮನೆಂಬ ಮಹಾಲಿಂಗವು
ಸರ್ವಾತ್ಮನೆಂಬ

[1]ಮಹಾ[2] ಜಂಗಮದಲ್ಲಿ ಅಡಗಿತ್ತು.
ಆ ಸರ್ವಾತ್ಮನೆಂಬ ಮಹಾಜಂಗಮ ತಾನೆ ನಿತ್ಯ ನಿರಂಜನ
ನಿರಾಮಯ ನಿರಾಮಯಾತೀತನಾಗಿದ್ದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೧೫
ಇನ್ನು ಅಷ್ಟನಾದ ನಿವೃತ್ತಿ, ಅದೆಂತೆಂದಡೆ :
ಪೆಣ್ದುಂಬಿಯನಾದ ವೀಣಾನಾದದಲ್ಲಿ ಅಡಗಿತ್ತು.
ಆ ವೀಣಾನಾದ ಘಂಟಾನಾದದಲ್ಲಿ ಅಡಗಿತ್ತು.
ಆ ಘಂಟಾನಾದ ಭೇರಿನಾದದಲ್ಲಿ ಅಡಗಿತ್ತು.
ಆ ಭೇರಿನಾದ ಮೇಘಧ್ವನಿಯಲ್ಲಿ ಅಡಗಿತ್ತು.
ಆ ಮೇಘಧ್ವನಿ ಪ್ರಣವನಾದದಲ್ಲಿ ಅಡಗಿತ್ತು.
ಆ ಪ್ರಣವನಾದ ದಿವ್ಯನಾದದಲ್ಲಿ ಅಡಗಿತ್ತು.
ಆ ದಿವ್ಯನಾದ ಸಿಂಹನಾದದಲ್ಲಿ ಅಡಗಿತ್ತು.
ಆ ಸಿಂಹನಾದ ನಿಃಶಬ್ದವೆಂಬ ಪರಬ್ರಹ್ಮದ ನೆನಹಿನಲ್ಲಿ ಅಡಗಿತ್ತು.
ನಿಃಶಬ್ದವೆಂಬ ಪರಬ್ರಹ್ಮದ ನೆನಹು ಅಡಗಿ ನಿಃಶೂನ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೧೬
ಇನ್ನು ಷಡ್ವಿಧ ಭಕ್ತಿಯ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾ ಸ್ವರೂಪದಲ್ಲಿ ಸದ್ಭಕ್ತಿ ಅಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ನೈಷ್ಠಿಕಾಭಕ್ತಿಯಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅವಧಾನಭಕ್ತಿ ಅಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಅನುಭಾವಭಕ್ತಿ ಅಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಆನಂದಭಕ್ತಿ ಅಡಗಿತ್ತು.
ಆ ಪ್ರಣವದ ಜ್ಯೋತಿ ಸ್ವರೂಪದಲ್ಲಿ ಸಮರಸಭಕ್ತಿ ಅಡಗಿತ್ತು.
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೧೭
ಇನ್ನು ಷಡ್ವಿಧ ದ್ರವ್ಯದ ನಿವೃತ್ತಿ, ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಸ್ವರೂಪದಲ್ಲಿ ಗಂಧವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ರಸವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ರೂಪುವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶನವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದವಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ತೃಪ್ತಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೧೮
ಇನ್ನು ಋಗ್ವೇದ ಯಜುರ್ವೇದ ಸಾಮವೇದ
ಅಥರ್ವಣವೇದ ಗಾಯತ್ರಿ ಅಜಪೇಯ ನಿವೃತ್ತಿ,
ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾಸ್ವರೂಪದಲ್ಲಿ ಋಗ್ವೇದವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಯಜುರ್ವೇದವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣ ವೇದವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿಯಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೆಯಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೧೯
ದಶ ಚಕ್ರ ಮೊದಲಾಗಿ ಅಜಪೆ ಗಾಯತ್ರಿ ಕಡೆಯಾಗಿ
ಸಮಸ್ತವನು ಗರ್ಭೀಕರಿಸಿಕೊಂಡು ಅಡಿ ನಡು ಮುಡಿಯಿಲ್ಲದೆ,
ಅಖಿಂಡ ಜ್ಯೋತಿರ್ಮಯ ಲಿಂಗವಾಗಿದ್ದುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೨೦
ಏನು ಏನೂ ಎನಲಿಲ್ಲದ ಮಹಾಘನ
ನಿರಂಜನಾತೀತದ ನೆನಹು ಮಾತ್ರದಲ್ಲಿಯ
ನವಪದ್ಮ ನವಶಕ್ತಿಗಳುತ್ಪತ್ಯಲಯವು.
ನಿಃಶಬ್ದವೆಂಬ ಪರಬ್ರಹ್ಮದ ನೆನಹು ಮಾತ್ರದಲ್ಲಿಯೆ
ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರ ಅಷ್ಟನಾದ ಉತ್ಪತ್ಯಲಯವು.
ದಶಚಕ್ರ ಮೊದಲಾಗಿ, ಚತುರ್ವೇದ ಗಾಯತ್ರಿ ಅಜಪೆ ಕಡೆಯಾಗಿ.
ಸಮಸ್ತವು ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವದಲ್ಲಿ ಉತ್ಪತ್ಯಲಯವೆಂದು ಬೋಧಿಸಿ
ಕೃತಾರ್ಥನ ಮಾಡಿದ ಮಹಾಗುರುವಿನ ಶ್ರೀಪಾದಕ್ಕೆ
ನಮೋ ನಮೋ ಎಂದು ಬದುಕಿದೆನು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೨೨೧
ಇನ್ನು ಇಷ್ಟ ಪ್ರಾಣ ಭಾವಲಿಂಗದ ಭೇದವೆಂತೆಂದಡೆ :
ಆದಿ ಉಕಾರ ಮಕಾರ ಅಕಾರ ಈ ಮೂಱು ಬೀಜಾಕ್ಷರ.
ಉಕಾರವೆ ಆದಿ ಬಿಂದು, ಮಕಾರವೆ ಆದಿ ಕಲೆ,
ಅಕಾರವೆ ಆದಿನಾದ, ಉಕಾರವೆ ಇಷ್ಟಲಿಂಗ,
ಮಕಾರವೆ ಪ್ರಾಣಲಿಂಗ, ಅಕಾರವೆ ಭಾವಲಿಂಗವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೨೨
ಸಾಕ್ಷಿ-
ಅಕಾರಂ ಇಷ್ಟಲಿಂಗಂ ಚ ಉಕಾರಂ ಪ್ರಾಣಲಿಂಗಕಂ |
ಮಕಾರಂ ಭಾವ ಲಿಂಗಂ ಚ ತ್ರಿಧಾಮೇಕಂ ವರಾನನೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೨೩
ಇಂತೀ ಆದಿ ಉಕಾರ ಮಕಾರ ಅಕಾರಕ್ಕೆ ಆ ಆದಿ ಬಿಂದು ಕಲೆ ನಾದವೆ ಆಧಾರ
ಆ ಆದಿ ಬಿಂದು ಕಲೆ ನಾದಕ್ಕೆ ಆ ಆದಿ ಪ್ರಕೃತಿಯೇ ಆಧಾರ
ಆ ಆದಿ ಪ್ರಕೃತಿಗೆ ಪ್ರಾಣಮಾತ್ರೆಯೆ ಆಧಾರ
ಆ ಪ್ರಾಣಮಾತ್ರೆಗೆ ಪರಂಜ್ಯೋತಿ ಲಿಂಗವೆ ಆಧಾರ
ಉ ಎಂದರೆ ಆದಿಬಿಂದು, ಮ ಎಂದರೆ ಉಕಾರ ವಳಿಯಿತ್ತು
ಅ ಯೆಂಬಲ್ಲಿ ಅನುಸ್ವರ ಬಂದು ಕೂಡಲು ಶಕ್ತಿಶಿವನಾಗುತಂ ಇಹಂಥಾ
ಓಂಕಾರವಾಯಿತ್ತು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೨೪
ಉಕಾರವೆಂಬ ಪ್ರಣವದಲ್ಲಿ,
ದಂಡಶ್ಚ ತಾರಕಾಕಾರೋ ಭವತಿ ಓಂ ಇಷ್ಟಲಿಂಗೋ ದೇವತಾ,
ಉಕಾರೇ ಚ ಲಯಂ ಪ್ರಾಪ್ತೇ ನವಮಪ್ರಣವಾಂಶಿಕೇ |
ಮಕಾರವೆಂಬ ಪ್ರಣವದಲ್ಲಿ,
ಕುಂಡಲಶ್ಚಾರ್ಧ ಚಂದ್ರೋ ಭವತಿ. ಓಂ ಪ್ರಾಣಲಿಂಗೋ ದೇವತಾ,
ಮಕಾರೇ ಚ ಲಯಂ ಪ್ರಾಪ್ತೇ ದಶಮಪ್ರಣವಾಂಶಿಕೇ |
ಅಕಾರವೆಂಬ ಪ್ರಣವದಲ್ಲಿ,
ದರ್ಪಣಶ್ಚ ಜ್ಯೋತಿರೂಪಾ ಭವತಿ, ಓಂ ಭಾವಲಿಂಗೋ ದೇವತಾ,
ಮಕಾರೇ ಚ ಲಯಂ ಪ್ರಾಪ್ತೇ ಏಕಾದಶಪ್ರಣವಾಂಶಿಕೇ |
ಉಕಾರೇ ಚ ಮಕಾರೇ ಚ ಅಕಾರೇ ಚ ತ್ರಯಕ್ಷರಂ |
ಇದಮೇಕ ಸಮುತ್ಪನ್ನಂ ಓಂಕಾರ ಪರಮೇಶ್ವರಃ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೨೫
ಇನ್ನು ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದ ಲಕ್ಷಣವದೆಂತೆಂದಡೆ :
ಪ್ರಥಮಂ ತಾರಕಾ ಸ್ವರೂಪವಾಗಿಹುದು.
ದ್ವಿತೀಯಂ ದಂಡಕಸ್ವರೂಪವಾಗಿಹುದು.
ತೃತೀಯಂ ಕುಂಡಲಾಕಾರವಾಗಿಹುದು.
ಚತುರ್ಥಂ ಅರ್ಧಚಂದ್ರಾಕಾರವಾಗಿಹುದು.
ಪಂಚಮಂ ದರ್ಪಣಾಕಾರವಾಗಿಹುದು.
ಷಷ್ಠಮಂ ಜ್ಯೋತಿ ಸ್ವರೂಪವಾಗಿಹುದು.
ಇತಿ ಪ್ರಣವ ಅತ್ಯಂತ ಗೋಪ್ಯವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೨೬
ರಹಸ್ಯೇ, ಸಾಕ್ಷಿ-
ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಂ ಚ ಜ್ಯೋತಿ ರೂಪಕಂ |
ಇತಿ ಪ್ರಣವ ವಿಜ್ಞೇಯಂ ಯತ್ತದ್ಗೋಪ್ಯಂ ವರಾನನೇ ||
ಅಪ್ರಮಾಣ ಕೂಡಲಸಂಗಮದೇವ.

೨೨೭
ಇನ್ನು ಪಂಚಭೂತದುತ್ಪತ್ಯವದೆಂತೆಂದಡೆ :
ಪರಬ್ರಹ್ಮಸ್ವರೂಪವಾಗಿಹ ಪರಮಪ್ರಣವದ ಜ್ಯೋತಿಸ್ವರೂಪದಲ್ಲಿ
ಆತ್ಮನುತ್ಪತ್ಯವಾದನು.
ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶವುತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ತೇಜ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಾಸ್ವರೂಪದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು.
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೨೮
ಚಿತ್ಪ್ರಕಾಶಸೂತ್ರೇ ಸಾಕ್ಷಿ-
ಓಂಕಾರಜ್ಯೋತಿರೂಪೇ ಚ ಆತ್ಮಾ ಚೈವ ಸಮುದ್ಭವಃ |
ಓಂಕಾರದರ್ಪಣಾಕಾರೇ ಆಕಾಶಶ್ಚ ಸಮುದ್ಭವಃ ||
ಓಂಕಾರೇ ಚಾರ್ಧಚಂದ್ರೇ ಚ ವಾಯುಶ್ವೈವ ಸಮುದ್ಭವಃ |
ಓಂಕಾರಕುಂಡಲಾಕಾರೇ ತೇಜಶ್ಚೈವ ಸಮುದ್ಭವಂ |
ಓಂಕಾರದಂಡರೂಪೇ ಚ ಆಪಶ್ಚೈವ ಸಮುದ್ಭವಾಃ ||
ಓಂಕಾರತಾರಕಾರೂಪೇ ಪೃಥ್ವೀ ಚ ಸಮುದ್ಭವಾಃ |
ಇತಿ ಷಷ್ಠಭೂತಂ ದೇವಿ ಸ್ಥಾನೇ ಸ್ಥಾನೇ ಸಮುದ್ಭವಃ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೨೯
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಆತ್ಮನು ಈ ಆಱು ಪ್ರಕಾರವು
ಅತ್ಯಂತ ಗೋಪ್ಯ, ಅತ್ಯಂತ ಸೂಕ್ಷ್ಮ, ಅತ್ಯಂತ ರಹಸ್ಯವಾಗಿಹುದು
ಈ ಆಱನು ಗುರುಮುಖದಲಿ ಕೇಳಿಕೊಂಬುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.


[1]      x (ತಾಪ್ರ ೫೮೬)

[2]