೨೬೭
ಇನ್ನು ಷಡ್ವಿಧ ಪರಿಣಾಮದ ನೆಲೆ ನಿವೃತ್ತಿ, ಅದೆಂತೆಂದಡೆ :
ಆ ಪ್ರಣವದ ತಾರಕಾಸ್ವರೂಪದಲ್ಲಿ ಗಂಧವಡಗಿತ್ತು
ಆ ಪ್ರಣವದ ದಂಡಕಾಸ್ವರೂಪದಲ್ಲಿ ರಸವಡಗಿತ್ತು
ಆ ಪ್ರಣವದ ಕುಂಡಲಾಕಾರದಲ್ಲಿ ರೂಪುವಡಗಿತ್ತು
ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶನವಡಗಿತ್ತು
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದವಡಗಿತ್ತು
ಆ ಪ್ರಣವದ ಜ್ಯೋತಿ ಸ್ವರೂಪದಲ್ಲಿ ತೃಪ್ತಿಯಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬೮
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಆತ್ಮನೆಂಬ
ಷಡ್ವಿಧ ಅಂಗವನೊಳಕೊಂಡು
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ
ಷಟ್ಸ್ಥಲವನೊಳಕೊಂಡು
ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವವೆಂಬ
ಷಡ್ವಿಧ ಹಸ್ತಂಗಳನೊಳಕೊಂಡು
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ
ಷಡ್ವಿಧ ಲಿಂಗಂಗಳನೊಳಕೊಂಡು
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ, ಹೃದಯವೆಂಬ
ಷಡ್ವಿಧ ಮುಖಂಗಳನೊಳಕೊಂಡು
ಗಂಧ ರಸ ರೂಪು ಸ್ಪರ್ಶ ಶಬ್ದ ತೃಪ್ತಿಯೆಂಬ
ಷಡ್ವಿಧ

[1]ದ್ರವ್ಯವ[2]ನೊಳಕೊಂಡು
ಕೂರ್ಮನು ತನ್ನ ವಿನೋದಕ್ಕೆ ತಾನು ತನ್ನ ಕಾಲು, ಕೈ, ತಲೆ, ಬಾಲವ
ತೋರಿ ಅಗಡಿಸಿಕೊಂಬುದು.
ಅದರ ಹಾಂಗೆ ಶಬ್ದವೆಂಬ ಪರಬ್ರಹ್ಮ ತನ್ನ ವಿನೋದಕ್ಕೆ
ತಾನು ತನ್ನ ತಾರಕಾಸ್ವರೂಪ ದಂಡಕಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ
ಜ್ಯೋತಿಸ್ವರೂಪದ ತೋರಿ ಅಡಗಿಸಿಕೊಂಡು,
ಆದಿಮಧ್ಯ ಅಂತ್ಯವಿಲ್ಲದೆ ದಶ ದೆಶೆಗಳಿಲ್ಲದೆ
ಸರ್ವಶೂನ್ಯ ನಿರಾಕಾರವಾಗಿ ಅಖಂಡ
ಜ್ಯೋತಿರ್ಮಯಲಿಂಗವಾಗಿದ್ದುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

*

ಷಡಂಗ ಮೊದಲಾಗಿ ಪರಿಣಾಮ ಕಡೆಯಾಗಿ ಷಟ್ಟ್ಸಲಕ್ಕೆ ಉಂಟಾದ ಸಮಸ್ತವು ಪರಬ್ರಹ್ಮ ಸ್ವರೂಪವಾಗಿಹ ಪರಮ ಪ್ರಣವದಲ್ಲಿಯೆ ಉತ್ಪತ್ತ್ಯಲಯವೆಂದು ಆ ಶಿಷ್ಯಂಗೆ ಸದ್ಗುರು ಸ್ವಾಮಿ ನಿರೂಪಿಸಿದ ವಚನಪರಿಸಮಾಪ್ತ ಮಂಗಳ ಮಹಾ ಶ್ರೀಶ್ರೀ.

೨೬೯
ಇನ್ನು ಷಟ್ಸ್ಥಲಬ್ರಹ್ಮ ಉತ್ಪತ್ಯವದೆಂತೆಂದಡೆ :
ಆದಿ ಮಕಾರ ಅಕಾರ ಉಕಾರ ಈ ಮೂಱು ಬೀಜಾಕ್ಷರ
ಆ ಮಕಾರವೆ ಆದಿ ಕಲೆ ಅಕಾರವೆ ಆದಿ ನಾದ
ಅಕಾರವೆ ಆದಿ ಬಿಂದು ಮಕಾರವೆ ಆದಿ ಸದಾಶಿವ
ಅಕಾರವೆ ಆದಿ ರುದ್ರ ಉಕಾರವೆ ಆದಿ ಈಶ್ವರ
ಇಂತಿ ಅದಿ ಮಕಾರ ಅಕಾರ ಉಕಾರಕ್ಕೆ
ಆದಿ ಕಲೆ ನಾದ ಬಿಂದುವೆ ಆಧಾರ
ಆದಿ ಕಲೆ ನಾದ ಬಿಂದುವಿಗೆ ಆದಿ ಪ್ರಕೃತಿಯೆ ಆಧಾರ
ಆ ಆದಿ ಪ್ರಕೃತಿಗೆ ಪ್ರಾಣಮಾತ್ರೆಯೆ ಆಧಾರ
ಆ ಪ್ರಾಣಮಾತ್ರೆಗೆ ಆ ಅಖಂಡ ಜ್ಯೋತಿರ್ಮಯ ಲಿಂಗವೆ ಆಧಾರ
ಮಾ ಎಂದಡೆ ಮನುಸ್ವರ ಆ ಎಂದಡೆ ಆದಿ ಕಲೆ ಇಳಿಯಿತ್ತು.
ಉ ಎಂಬಲ್ಲಿ ಅನುಸ್ವರ ಬಂದು ಕೂಡಲು
ಶಿವ ಶಕ್ತಿಗಳೆಂಬ ನಾಮರಹಿತವಾಗಿ ಹಂಥಾ ಓಂಕಾರವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೭೦
ಮಕಾರವೆಂಬ ಪ್ರಣವದಲ್ಲಿ,
ದಂಡಶ್ಚ ತಾರಕಾಕಾರೋ ಭವತಿ ಓಂ ಆದಿಸದಾಶಿವೋ ದೇವತಾ |
ಮಕಾರಶ್ಚ ಲಯಃ ಪ್ರಾಪ್ತಿಃ ತ್ರಯೋದಶ ಪ್ರಣವಾಂಶಿಕೆ ||
ಅಕಾರವೆಂಬ ಪ್ರಣವದಲ್ಲಿ,
ಕುಂಡಲಶ್ಚ ಅರ್ಧಚಂದ್ರೋ ಭವತಿ, ಓಂ ಆದಿರುದ್ರೋ ದೇವತಾ |
ಅಕಾರಶ್ಚ ಲಯಃ ಪ್ರಾಪ್ತಿಶ್ಚತುರ್ದಶ ಪ್ರಣವಾಂಶಿಕೆ ||
ಉಕಾರವೆಂಬ ಪ್ರಣವದಲ್ಲಿ,
ಜ್ಯೋತಿಶ್ಚ ದರ್ಪಣಾಕಾರೋ ಭವತಿ ಓಂ ಆದಿಈಶ್ವರೊ ದೇವತಾ |
ಉಕಾರಶ್ಚ ಲಯಃ ಪ್ರಾಪ್ತಿಃ ಪಂಚದಶ ಪ್ರಣವಾಂಶಿಕೆ |
ಮಕಾರೇಚ ಅಕಾರೇ ಚ ಉಕಾರೇ ಚ ಧನಂಜಯಃ |
ಅಯಮೇಕಃ ಸಮಂತ್ಪನ್ನಃ ಓಂ ಮಹಾಜ್ಯೋತಿ ರೂಪಕಃ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೨೭೧
ಓಂಕಾರಂಚ ಕಲಾರೂಪಂ ಓಂಕಾರಂ ನಾದರೂಪಕಂ |
ಓಂಕಾರಂ ಬಿಂದು ರೂಪಂ ಚ ಓಂಕಾರಂ ಗೌಪ್ಯಮಾನಸಂ ||
ಓಂಕಾರಂ ನಾದ ರೂಪೇಣ ಓಂಕಾರಂ ಬಿಂದು ರೂಪಕಂ |
ಓಂಕಾರಂ ವ್ಯಾಪಿ ಸರ್ವತ್ರಂ ಓಂಕಾರಂ ಗೌಪ್ಯಮಾನನಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೭೨
ಇನ್ನು ಅಖಂಡ ಮಹಾಜ್ಯೋತಿ ಪ್ರಣವದ ಲಕ್ಷಣವೆಂತೆಂದಡೆ :
ಪ್ರಥಮಂ ತಾರಕಾರೂಪವಾಗಿಹುದು
ದ್ವಿತೀಯಂ ದಂಡಕ ಸ್ವರೂಪವಾಗಿಹುದು
ತೃತೀಯಂ ಕುಂಡಲಾಕಾರವಾಗಿಹುದು
ಚತುರ್ಥಂ ಅರ್ಧಚಂದ್ರಾಕಾರವಾಗಿಹುದು
ಪಂಚಮಂ ದರ್ಪಣಾಕಾರವಾಗಿಹುದು
ಷಷ್ಠಮಂ ಜ್ಯೋತಿ ಸ್ವರೂಪವಾಗಿಹುದು
ಈ ಆಱು ಪ್ರಕಾರವಾಗಿಹ ಅಖಂಡ ಮಹಾಜ್ಯೋತಿ ಪ್ರಣವ
ಅತ್ಯಂತ ಗೋಪ್ಯವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೭೩
ರಹಸ್ಯ, ಸಾಕ್ಷಿ :
ಪ್ರಥಮಂ ತಾರಕಂ ರೂಪಂ ದ್ವಿತೀಯಂ ದಂಡ ಉಚ್ಚತೇ |
ತೃತೀಯಂ ಕುಂಡಲಾಕಾರಂ ಚತುರ್ಥಂಚಾರ್ಥ ಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಂಚ ಜ್ಯೋತಿ ರೂಪಕಂ |
ಇತಿ ಪ್ರಣವವಿಜ್ಞೇಯಂ ತದ್‌ದ್ಗೋಪ್ಯಂ ವರಾನನೆ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೭೪
ಇನ್ನು ಷಟ್ಸ್ಥಲಬ್ರಹ್ಮದ ಭೇದವದೆಂತೆಂದಡೆ :
ಅಖಂಡ ಮಹಾಜ್ಯೋತಿ ಪ್ರಣವದ ತಾರಕಾಸ್ವರೂಪವೆ ಮೂರ್ತಿಬ್ರಹ್ಮವು
ಆ ಅಖಂಡ ಮಹಾಜ್ಯೋತಿಪ್ರಣವದ ದಂಡಸ್ವರೂಪವೆ ಪಿಂಡಬ್ರಹ್ಮವು.
ಆ ಅಖಂಡ ಮಹಾಜ್ಯೋತಿ ಪ್ರಣವದ ಕುಂಡಲಾಕಾರದಲ್ಲಿ ಕಲಾಬ್ರಹ್ಮವು.
ಆ ಅಖಂಡ ಮಹಾಜ್ಯೋತಿ ಪ್ರಣವದ ಅರ್ಧಚಂದ್ರಕವೆ ಬ್ರಹ್ಮಾನಂದಬ್ರಹ್ಮವು.
ಆ ಅಖಂಡ ಮಹಾಜ್ಯೋತಿ ಪ್ರಣವದ ದರ್ಪಣಾಕಾರವೆ ವಿಜ್ಞಾನ ಬ್ರಹ್ಮವು.
ಆ ಅಖಂಡ ಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವೆ ಪರಬ್ರಹ್ಮವು.
ಈ ಆಱು ಷಟ್ಸ್ಥಲಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೭೫
ನಿರಂಜನಾತೀತಾಗಮೇ ಸಾಕ್ಷಿ-
ಓಂಕಾರಂ ತಾರಕಂ ರೂಪಂ ಮೂರ್ತಿಬ್ರಹ್ಮಯಥಾ ಭವೇತ್ |
ಓಂಕಾರಂ ದಂಡರೂಪೇಚ ಪಿಂಡಬ್ರಹ್ಮಚ ಉಚ್ಚತೇ ||
ಓಂಕಾರಂ ಕುಂಡಲಾಕಾರಂ ಕಲಾಬ್ರಹ್ಮಚ ಕೀರ್ತಿತಂ |
ಓಂಕಾರಂ ಅರ್ಧಚಂದ್ರೇಣ ಬ್ರಹ್ಮಾನಂದ ಬ್ರಹ್ಮ ಭವೇತ್ ||
ಓಂಕಾರಂ ದರ್ಪಣಾಕಾರಂ ವಿಜ್ಞಾನ ಬ್ರಹ್ಮಉಚ್ಚತೇ |
ಓಂಕಾರಂ ಜ್ಯೋತಿರೂಪೇಣ ಪರಬ್ರಹ್ಮ ಯಥಾ ಭವೇತ್ ||
ಪ್ರಣವಂ ಷಷ್ಠಬ್ರಹ್ಮಚ ಷಟ್ಸ್ಥಲ ಬ್ರಹ್ಮ ಉಚ್ಯತೆ |
ಇತಿ ಷಟ್‌ಬ್ರಹ್ಮ ವಿಜ್ಞೇಯಂ ತದ್‌ದ್ಗೋಪ್ಯಂ ವರಾನನೆ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೨೭೬
ಇನ್ನು ಷಟ್ಸ್ಥಲಬ್ರಹ್ಮದ ಕಾಂತಿ ಅದೆಂತೆಂದಡೆ :
ಆ ಅಖಂಡ ಮಹಾಜ್ಯೋತಿ ಪ್ರಣವದ ತಾರಕಾಸ್ವರೂಪವಾಗಿಹ
ಮೂರ್ತಿಬ್ರಹ್ಮವು ಅಱುವತ್ತುನೂಱು ಕೋಟಿ
ಮಹಾ ಜ್ಯೋತಿಪ್ರಕಾಶವಾಗಿಹುದು.
ಆ ಅಖಂಡ ಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ
ಪಿಂಡ ಬ್ರಹ್ಮವು ಎಪ್ಪತ್ತುನೂಱುಕೋಟಿ ಮಹಾಜ್ಯೋತಿ
ಪ್ರಕಾಶವಾಗಿಹುದು.
ಆ ಅಖಂಡ ಮಹಾಜ್ಯೋತಿಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮವು ಎಂಭತ್ತುನೂಱುಕೋಟಿ ಮಹಾಜ್ಯೋತಿ
ಪ್ರಕಾಶವಾಗಿಹುದು.
ಆ ಅಖಂಡ ಮಹಾಜ್ಯೋತಿಪ್ರಣವದ ಅರ್ಧಚಂದ್ರಸ್ವರೂಪವಾಗಿಹ
ಬ್ರಹ್ಮಾನಂದ ಬ್ರಹ್ಮವು ತೊಂಬತ್ತುನೂಱುಕೋಟಿ ಮಹಾಜ್ಯೋತಿ
ಪ್ರಕಾಶವಾಗಿಹುದು.
ಆ ಅಖಂಡ ಮಹಾಜ್ಯೋತಿಪ್ರಣವದ ದರ್ಪಣಾಕಾರವಾಗಿಹ
ವಿಜ್ಞಾನ ಬ್ರಹ್ಮವು ನೂಱುಸಾವಿರಕೋಟಿ ಮಹಾಜ್ಯೋತಿ
ಪ್ರಕಾಶವಾಗಿಹುದು.
ಆ ಅಖಂಡ ಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ
ಪರಬ್ರಹ್ಮವು ಅನೇಕ ಕೋಟಿ ಮಹಾಜ್ಯೋತಿ ಪ್ರಕಾಶವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೭೭
ಇನ್ನು ಷಟ್ಸ್ಥಲ ಬ್ರಹ್ಮದಲ್ಲಿ ಮೂವತ್ತಾಱು ತತ್ವಂಗಳುತ್ಪತ್ಯ ಅದೆಂತೆಂದಡೆ :
ಆ ಅಖಂಡ ಮಹಾಜ್ಯೋತಿ ಪ್ರಣವದ ಜ್ಯೋತಿ ಸ್ವರೂಪದಲ್ಲಿಹ
ಪರಬ್ರಹ್ಮದಲ್ಲಿ ಶಿವನುತ್ಪತ್ಯವಾದನು,
ಕ್ಷೇತ್ರಜ್ಞನುತ್ಪತ್ಯವಾದನು, ಕರ್ತನುತ್ಪತ್ಯವಾದನು,
ಭಾವವುತ್ಪತ್ಯವಾಯಿತ್ತು, ಚೈತನ್ಯನುತ್ಪತ್ಯವಾದನು.
ಆಕಾಶವುತ್ಪತ್ಯವಾಯಿತ್ತು.
ಈ ಆಱು ತತ್ವಂಗಳು ಪರಬ್ರಹ್ಮದಲ್ಲಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೭೮
ಸಾಕ್ಷಿ-
ಶಿವಂ ಕ್ಷೇತ್ರಜ್ಞಕರ್ತಾರು ಭಾವಂ ಚೈತನ್ಯಮಂತರಂ |
ಏವಂ ತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮ ಚ ಕಥ್ಯತೆ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೨೭೯
ಆ ಅಖಂಡ ಮಹಾಜ್ಯೋತಿ ಪ್ರಣವದ ದರ್ಪಣಾಕಾರವಾಗಿಹ
ವಿಜ್ಞಾನ ಬ್ರಹ್ಮದಲ್ಲಿ ಸದಾಶಿವನುತ್ಪತ್ಯವಾದನು.
ಮಹಾಕಾಶ ಉತ್ಪತ್ಯವಾಯಿತ್ತು, ಶಬ್ದ ಉತ್ಪತ್ಯವಾಯಿತ್ತು,
ಜ್ಞಾನ ಉತ್ಪತ್ಯವಾಯಿತ್ತು, ಶ್ರೋತ್ರ ಉತ್ಪತ್ಯವಾಯಿತ್ತು,
ವಾಕು ಉತ್ಪತ್ಯವಾಯಿತ್ತು.
ಈ ಆಱು ತತ್ವಂಗಳು ವಿಜ್ಞಾನ ಬ್ರಹ್ಮದಲ್ಲಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮೦
ಸಾಕ್ಷಿ-
ಸದಾಶಿವಂ ಮಹಾಕಾಶಂ ಶಬ್ದಂ ಜ್ಞಾನಂ ಚ ಶ್ರೋತ್ರಕಂ |
ವಾಕ್ತಥಾ ಷಡ್ವಿಧಂ ಪ್ರೋಕ್ತಂ ವಿಜ್ಞಾನಬ್ರಹ್ಮ ಉಚ್ಯತೆ | ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೨೮೧
ಆ ಅಖಂಡ ಮಹಾಜ್ಯೋತಿ ಪ್ರಣವದ ಅರ್ಧಚಂದ್ರಕ ಸ್ವರೂಪವಾಗಿಹ
ಬ್ರಹ್ಮಾನಂದ ಬ್ರಹ್ಮದಲ್ಲಿ ಈಶ್ವರನುತ್ಪತ್ಯವಾದನು,
ವಾಯು ಉತ್ಪತ್ಯವಾಯಿತ್ತು, ಸ್ಪರ್ಶನ ಉತ್ಪತ್ಯವಾಯಿತ್ತು,
ತ್ವಕ್ಕು ಉತ್ಪತ್ಯವಾಯಿತ್ತು, ಪಾಣಿಂದ್ರಿಯ ಉತ್ಪತ್ಯವಾಯಿತ್ತು.
ಈ ಆಱು ತತ್ವಂಗಳು ಬ್ರಹ್ಮಾನಂದ ಬ್ರಹ್ಮದಲ್ಲಿ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮೨
ಸಾಕ್ಷಿ-
ಈಶ್ವರೋ ವಾಯು ಸಂಸ್ಪರ್ಶೇ ಮನಸ್ತತ್ವಾನಿ ಉಚ್ಚತೇ |
ಷಟ್‌ಸಂಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೆ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೮೩
ಆ ಅಖಂಡ ಮಹಾಜ್ಯೋತಿ ಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮದಲ್ಲಿ ರುದ್ರನುತ್ಪತ್ಯವಾದನು.
ಅಗ್ನಿ ಉತ್ಪತ್ಯವಾಯಿತ್ತು, ರೂಪು ಉತ್ಪತ್ಯವಾಯಿತ್ತು.
ಅಹಂಕಾರ ಉತ್ಪತ್ಯವಾಯಿತ್ತು, ನೇತ್ರ ಉತ್ಪತ್ಯವಾಯಿತ್ತು,
ಪಾದೇಂದ್ರಿಯ ಉತ್ಪತ್ಯವಾಯಿತ್ತು.
ಈ ಆಱು ತತ್ವಂಗಳು ಕಲಾಬ್ರಹ್ಮದ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮೪
ಸಾಕ್ಷಿ-
ರುದ್ರಂ ತೇಜಸ್ತಥಾ ರೂಪಂ, ಮಹಾನೇತ್ರಂ ಚ ಪಾದಯೋಃ |
ಷಡಂಗಮಿಶ್ರಿತಂ ಚೇತಿ ಕಲಾಬ್ರಹ್ಮಾ ಚ ಕಥ್ಯತೆ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೮೫
ಆ ಅಖಂಡ ಮಹಾಜ್ಯೋತಿ ಪ್ರಣವದ ದಂಡಕಸ್ವರೂಪವಾಗಿಹ
ಪಿಂಡ ಬ್ರಹ್ಮದಲ್ಲಿ ವಿಷ್ಣು ಉತ್ಪತ್ಯವಾದನು.
ಅಪ್ಪು ಉತ್ಪತ್ಯವಾಯಿತ್ತು, ರಸ ಉತ್ಪತ್ಯವಾಯಿತ್ತು,
ಬುದ್ಧಿ ಉತ್ಪತ್ಯವಾಯಿತ್ತು, ಜಿಹ್ವೆ ಉತ್ಪತ್ಯವಾಯಿತ್ತು,
ಗುಹ್ಯ ಉತ್ಪತ್ಯವಾಯಿತ್ತು.
ಈ ಆಱು ತತ್ವಂಗಳು ಪಿಂಡಬ್ರಹ್ಮದಲ್ಲಿ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮೬
ಸಾಕ್ಷಿ-
ವಿಷ್ಣುರಾಪೋ ರಸೋ ಬುದ್ಧಿಃ ಜಿಹ್ವಾ ಗುಹ್ಯಸ್ತಥೈವ ಚ |
ಷಟ್‌ತತ್ವಮಿದಂ ಪ್ರೋಕ್ತಂ ಪಿಂಡಬ್ರಹ್ಮಾ ಚ ಕಥ್ಯತೆ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೮೭
ಆ ಅಖಂಡ ಮಹಾಜ್ಯೋತಿ ಪ್ರಣವದ ತಾರಕಾಸ್ವರೂಪವಾಗಿಹ
ಮೂರ್ತಿ ಬ್ರಹ್ಮದಲ್ಲಿ ಬ್ರಹ್ಮನುತ್ಪತ್ಯವಾದನು.
ಪೃಥ್ವಿ ಉತ್ಪತ್ಯವಾಯಿತ್ತು, ಗಂಧ ಉತ್ಪತ್ಯವಾಯಿತ್ತು,
ಚಿತ್ತ ಉತ್ಪತ್ಯವಾಯಿತ್ತು, ಘ್ರಾಣ ಉತ್ಪತ್ಯವಾಯಿತ್ತು,
ಗುದ ಉತ್ಪತ್ಯವಾಯಿತ್ತು.
ಈ ಮೂಱು ತತ್ವಂಗಳು ಮೂರ್ತಿ ಬ್ರಹ್ಮದಲ್ಲಿ ಉತ್ಪತ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮೮
ಸಾಕ್ಷಿ-
ಧಾತಾ ಧಾತ್ರೀ ಚ ಗಂಧಶ್ಚ ಚಿತ್ತಘ್ರಾಣ ಗುದಸ್ತಥಾ |
ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮ ಚ ಕಥ್ಯತೆ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೮೯
ಇನ್ನು ಷಡ್‌ಶಕ್ತಿಗಳುತ್ಪತ್ಯವದೆಂತೆಂದಡೆ :
ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ
ಸಹಸ್ರಾಂಶದಲ್ಲಿ ಚಿತ್‌ಶಕ್ತಿ ಹುಟ್ಟಿದಳು.
ಆ ಚಿತ್‌ಶಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿ ಹುಟ್ಟಿದಳು.
ಆ ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿ ಹುಟ್ಟಿದಳು.
ಆ ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿ ಹುಟ್ಟಿದಳು.
ಆ ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿ ಹುಟ್ಟಿದಳು.
ಆ ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿ ಹುಟ್ಟಿದಳು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯೦
ಚಿಚ್ಛಕ್ತಿ ಪರಾಶಕ್ತಿ ಆದಿಶಕ್ತಿ ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ
ಈ ಷಟ್‌ಶಕ್ತಿಗಳು ಸರ್ವತತ್ವಕ್ಕೂ ಕಾರಣವಾಗಿಹವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯೧
ಇನ್ನು ಷಡಂಗ ಉತ್ಪತ್ಯವದೆಂತೆಂದಡೆ :
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನು.
ಈ ಮೂಱು ಶಿವಾಂಗವು,
ಚಿಚ್ಛಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯೨
ಸಾಕ್ಷಿ-
ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ |
ಶಿವಂ ಶಿವಾಂಗಮಿತ್ಯೇತತ್ ಚಿಚ್ಛಕ್ತಿಶ್ಚ ಕಾರಣಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೯೩
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞರು
ಈ ಮೂಱು ಭೂತಾಂಗವು,
ಪರಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯೪
ಸಾಕ್ಷಿ-
ಭೂಜಲಾಗ್ನಿಮರುದ್ಯೇವ ಕ್ಷೇತ್ರಜ್ಞಾನಶ್ಚ ದೇವ ಹಿ |
ಭೂತಾಂಗಂ ಚ ಇದಂ ಪ್ರೋಕ್ತಂ ಪರಾಶಕ್ತಿಸ್ತು ಕಾರಣಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೯೫
ಗಂಧ ರಸ ರೂಪು ಸ್ಪರ್ಶ ಶಬ್ದಕರ್ತನು
ಈ ಮೂಱು ಯೋಗಾಂಗವು.
ಆದಿ ಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯೬
ಸಾಕ್ಷಿ-
ಗಂಧಂ ಚ ರಸರೂಪಂ ಚ ಸ್ಪರ್ಶನಂ ಶಬ್ದಮೇ ವಹಿ |
ಕರ್ತಾರಂ ಚೇತಿ ಯೋಗಾಂಗಂ ಆದಿಶಕ್ತಿಸ್ತು ಕಾರಣಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೯೭
ಚಿತ್ತ ಬುದ್ಧಿ ಅಹಂಕಾರ ಮನಸ್ಸು ಜ್ಞಾನ ಭಾವ
ಈ ಮೂಱು ಕಾಮಾಂಗವು,
ಇಚ್ಛಾಶಕ್ತಿಯೆ ಕಾರಣವಾಗಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯೮
ಸಾಕ್ಷಿ-
ಚಿತ್ತಬುದ್ಧಿರಹಂಕಾರಃ ಮನೋಜ್ಞಾನಂ ಚ ಭಾವಕಂ |
ಷಡ್ಭಿಃ ಕಾಮಾಂಗದಂ ಪ್ರೋಕ್ತಂ ಇಚ್ಛಾಶಕ್ತಿಸ್ತು ಕಾರಣಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೨೯೯
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಚೇತನ
ಈ ಆಱು ವಿದ್ಯಾಂಗವು,
ಜ್ಞಾನಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦೦
ಸಾಕ್ಷಿ-
ಘ್ರಾಣಂ ಜಿಹ್ವಾ ಚ ನೇತ್ರಂ ಚ ತ್ವಕ್ ಶ್ರೋತ್ರಂ ಚೇತನಂ ವಿದುಃ |
ಷಟ್ಕಂ ವಿದ್ಯಾಂಗಮೇವೇತಿ ಜ್ಞಾನಶಕ್ತಿಸ್ತು ಕಾರಣಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೩೦೧
ವಾಯು ಗುಹ್ಯ ಪಾದ ಪಾಣಿ ವಾಕ್ ಅಂತರ
ಈ ಆಱು ಕರ್ಮಾಂಗವು
ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.


[1]     ದ್ರವ್ಯಂಗಳ (ತಾ.ಪ್ರ. ೭೬)

[2]