೨೭
ಎಪ್ಪತ್ತೆಂಟು ಕೋಟಿ ರೋಮದ್ವಾರಂಗಳಲ್ಲಿ
ಚರಿಸುವ ವಾಯುವಿನ ನೆಲೆಯಂದು ಹೇಳದೆ
ತುಂಬುವುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮
ಪಿಂಗಳವ ಮುಚ್ಚಿ ಇಡೆಯಲ್ಲಿ ತೆಗೆದು,
ಪಿಂಗಳೆಯಲ್ಲಿ ಮೆಲ್ಲ ಮೆಲ್ಲನೆ ಬಿಡುವುದು,
ಇಡೆಯ ಮುಚ್ಚಿ ಪಿಂಗಳೆಯಲ್ಲಿ ತೆಗೆದು,
ಇಡೆಯಲ್ಲಿ ಮೆಲ್ಲ ಮೆಲ್ಲನೆ ಬಿಡುವದು,
ಹೀಂಗೆ ತೆಗೆದು ತೆಗೆದು ತೆಗೆದು ರೇಚಿಸಿದರೆ
ಉಕ್ಕುವುದು ಕಾರಣ ಪೂರಕದೊಳು
ಅಪ್ರಮಾಣ ಕೂಡಲಸಂಗಮದೇವ.

೨೯
ರೇಚಿಸುವ ಹಾಗೆ ಪೂರಿಸಿಕೊಂಡಿದ್ದಡೆ,
ತ್ರಾಸಿನ ನಾಲಗೆ ಹಾಗೆ ಸಮವಹುದು !
ಕುಂಭಕದೊಳು ನೆಱೆ ನೋಟವ ನೋಡಿದಡೆ
ತುಂಬಿಹುದು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೦
ರೇಚಕ ಪೂರಕ ಕುಂಭಕದ ಕಾಲ ಕೊಯಿದಡೆ
ತ್ರಾಸಿನ ಹಾಗೆ ತತ್ವವಹುದು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೧
ವಾಯುವಿನ ಕಾಲನಱ್‌ದಡೆ ನೀ ಬೆರಸಿ ನಿಂದಡೆ,
ಆಯುಷ್ಯ ಅನೇಕ ಕಾಲವಿಹುದು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೨
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳೆಲ್ಲ
ಸಂಕಲ್ಪ ವಿಕಲ್ಪ ಭ್ರಾಂತು ಭ್ರಮೆಯ ಕೆಡಿಸಲದಲ್ಲದೆ
ಪ್ರಾಣವಾಗಿಹನು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೩
ಹೋಗುವ ವಾಯುವ ಹೊದ್ದಿದಡೆ ಶಿವನಹುದು ನೋಡಾ,
ಈ ವಾಯುವಿಗೆ ಇಡೆ ಪಿಂಗಳೆಗಳಲ್ಲಿ ಸೂಸುವ ಪವನವ-
ಸೂಸಲಿಯ್ಯದೆ ನಿಲಿಸಿದಡೆ ಕೂಡುವನು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೪
ಮುಂದೆ ಅನಂತ ಕೋಟಿ ಕಾಲ ತಪವ ಮಾಡಿದಾತಂಗಲ್ಲದೆ ಈಗಱಿವಿಲ್ಲ,
ಮುಂದೆ ಅನಂತಕೋಟಿ ಕಾಲ ತಪವ ಮಾಡಿ ಈಗ ಅಱಿದು
ಅನುಭವಿಸುವದೆ ಅಱಿವು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫
ಇನ್ನು ಅಗ್ನಿಧಾರಣಿ, ಅದೆಂತೆಂದಡೆ ;
ಮೂಲ ಜ್ಯೋತಿಯನೆಬ್ಬಿಸಿ ಸುಷುಮ್ನ ನಾಳದ
ಅದ್ರಿಯ ತುದಿಯನಡರಿ
ಸಹಸ್ರದಳ ಮಂಟಪವ ಹಾಯಿದು,
ಆ ಜ್ಯೋತಿಯೊಳು ಪರಿಣಾಮಿಸುತ್ತಿರ್ದ್ದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬
ಕಾಲಾಗ್ನಿಯನೆಬ್ಬಿಸಿ, ಕಮಲನಾಳದ ತುದಿಯನಡರಿ,
ಕರ್ಮವನುಂಡು, ಮಹಾಜ್ಯೋತಿಯ ಪ್ರಭೆಯಲ್ಲಿ
ಬಯಲಾದ ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೭
ಮಹಾ ವಾಯುವ ಪಿಡಿದು,
ಮೂಲ ಗುಂಡಿಗೆಯೊಳಗಣ ಮೂಲಜ್ವಾಲೆಯನೆಬ್ಬಿಸಿ,
ಮೇಲಣ ಬಯಲ ಬಾಗಿಲ ತೆಗೆದು ಹೊಕ್ಕು
ಮಹಾಜ್ಯೋತಿಯಲ್ಲಿ ಬಯಲಾದ ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೩೮
ಅಱಿವಿನೊಳಗೆ ಅಱಿವ ತುಂಬಿದಡೆ,
ಮನೆಯ ಹೊಗುವದಕ್ಕೆ ಮಹಾ ಸುಲಭ ನೋಡಾ.
ನಾಶಿಕಾಗ್ರದ ಮೇಲೆ ನಯನಾಂಬುಧಿಯ ತುಂಬಿ,
ಮೂಲ ಜ್ವಾಲೆ ಸುಷುಮ್ನನಾಳದ ಬಟ್ಟೆಯ ತುದಿಯನಡರಿ,
ಬ್ರಹ್ಮರಂದ್ರವ ಮುಟ್ಟಿಸಿ, ಮೂಲಾಧಾರವ ಮುಟ್ಟಿಸಿ ಮಂಡಲ ಶ್ವಾಸವಪಿಡಿದು,
ಹೊರಡಲಿಯ್ಯದೆ ಸಾಧಿಸುವ ಯೋಗಿಗಳಿಗೆ
ಮೇಲೆ ಕೊಡನುಕ್ಕಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

 ೩೯
ಮೂಲ ದ್ವಾರವನೊತ್ತಿ ಮೂಲಾಗ್ನಿಯನೆಬ್ಬಿಸಿ,
ಮೂಲಾಕ್ಷರವ ಕಟ್ಟೆಯ ಮಾಡಿ ಭಕ್ತಿಯೆಂಬ ಬತ್ತಿಯ ತೀವಿ
ಅಮೃತವೆಂಬ ತುಪ್ಪವನೆಱೆದು
ಪರಮಾನಂದವೆಂಬ ಜ್ರೋತಿಯ ಮುಟ್ಟಿಸಿ,
ಆ ಪರಮಾನಂದ ಪ್ರಭೆಯೊಳು ತಾನೋಲಾಡುತ್ತಿರ್ದ್ದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦
ಇನ್ನು ಅಮೃತಧಾರಣೆ ಅದೆಂತೆಂದಡೆ :
ಮೂಲವಾಯುವಂ ಪಿಡಿದು ಅಮೃತಧಾರಣೆ
ಮೂಲಾಜ್ವಾಲೆಯನೆಬ್ಬಿಸಿ,
ಅಮಳೋಕ್ಷದ್ವಾರದಲ್ಲಿ ಜಿಹ್ವೆಯನೇಱಿಸಿ,
ಚಂದ್ರಮಂಡಲದೊಳಿಹ ಅಮೃತವನುಂಡಡೆ,
ಹರಿಬ್ರಹ್ಮಾದಿಗಳೊಡೆಯನಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧
ಓಂಕಾರ ಕಳಸದೊಳಗಿಹ ಅಮೃತವನುಂಡಡೆ,
ಕಾಲಕಲ್ಪಿತವಿಲ್ಲದೆ ಶಿವ ತಾನೆ ಯೋಗಿಯಹನು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೪೨
ಆಧಾರ ಧಾರಣೆ :
ಷೋಡಶ ಕಳೆಗಳೊಳಗಿಹ ಅಮೃತವನುಂಡಡೆ,
ಪರಿಪೂರ್ಣನಾಗಿಹನು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೪೩
ಜ್ಞಾನಪ್ರಕಾಶವಾಗಿಹ ಮಹಾಜ್ಯೋತಿಯೆಂಬ ಅಮೃತವನುಂಡಡೆ,
ಹಸಿವು ತೃಷೆಗಳಡಗಿ ಆನಂದ ಸ್ವರೂಪವಾಗಿಹನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೪
ಆಧಾರದೊಳಗೆ ಅಱಿದು ಶಿವನ ಮನವೆ ಆಲಯ,
ಪ್ರಾಣವೆ ಪೀಠಿಕೆಯಾಗಿ ಶಿವನೆಂಬ ಶಿವಲಿಂಗವ,
ನೆಲೆಗೊಳಿಸಿ ಅರ್ಚಿಸಿ ಭೇದವಿಲ್ಲದೆ ಬೆರಸುವದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೫
ಇನ್ನು ಆಯು ಪ್ರಾಣವೆ ಪೀಠಿಕೆಯಾಗಿ,
ಶಿವನೆಂಬ ಶಿವಲಿಂಗವ ನೆಲೆಗೊಳಿಸಿ,
ಅರ್ಚಿಸಿ ಭೇದವಿಲ್ಲದೆ ಬೆರಸುವದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬
ಬಿಂದುವೆ ಪೀಠ ನಾದವೆ ಲಿಂಗ
ಕಳೆಯೇ ಪೂಜೆಯಾಗಿ ಅರ್ಚಿಸುವದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೭
ಓಂಕಾರವೆ ಪೀಠ, ಅಕಾರವೆ ಕಂಠ, ಖು
ಉಕಾರವೆ ಮೇಗಣ ಪೀಠವಾಗಿ
ಆ ಮೇಗಣ ಪೀಠದ ಮೇಲಿಹ ಬಟುವೇ ಮಕಾರ,
ಆ ಬಟುವಿನೊಳಗಣ ಗುಣಿಯೆ ಬಿಂದು,
ಆ ಬಿಂದುವಿನೊಳಗಣ ನಾದವೆ ಲಿಂಗ
ಆ ಮೂಲಾಕ್ಷರದಲ್ಲಿ ಮಹಾಲಿಂಗ
ಸೂಕ್ಷ್ಮವಾಗಿಹುದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮
ಓಂಕಾರದ ಪೀಠದ ಮೇಲೆ ನಿಶ್ಶಬ್ದವೆಂಬ ಲಿಂಗವ ನೆಲೆಗೊಳಿಸಿ,
ನಿರಾಮಯದಲ್ಲಿ ನಿಂದು ನಿರಾಳನಾಗಿಹುದೇ ಪೂಜೆ, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೯
ನಾಡಿಧಾರಣೆ, ವಾಯುಧಾರಣೆ, ಅಮೃತಧಾರಣೆ
ಅಗ್ನಿಧಾರಣೆ, ಆಧಾರ ಧಾರಣೆಯೆಂಬ ಪಂಚಧಾರಣೆಯ ಮಾಡಿ
ತನ್ನಿಂದ ತಾನೆ ತಿಳಿದು ಇನ್ನು ಆತ್ಮಯೋಗಿಯಾಗಿರಬಾರದೆಂದು,
ಭ್ರಮರನು ಸದ್ವಾಸನೆಯುಳ್ಳ ಪುಷ್ಪವ ಹೇಂಗೆ ಅರಸುವವು ಹಾಂಗೆ
ಆ ಆತ್ಮಯೋಗಿ ಸದ್ಗುರುವನರಸಿ ಕಂಡು
ಅವರ ಕಾರುಣ್ಯವ ಪಡವೆನೆಂದು ಬಹನು, ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೫೦
ಆ ಆತ್ಮಯೋಗಿ ಸದ್ಗುರು ಸ್ವಾಮಿಯ ಕಂಡು

ಆ ಸದ್ಗುರು ಸ್ವಾಮಿಯ ಚರಣಕ್ಕೆ ದೀರ್ಘದಂಡ ನಮಸ್ಕಾರಮಂ ಮಾಡಿ,
ಆ ಯೋಗಿ ಭವಿಯಾಗಿರಬಾರದೆಂದು
ಅಂಗದ ಮೇಲೆ ಲಿಂಗ ಪ್ರತಿಷ್ಠೆಯ ಮಾಡಬೇಕೆಂದು ಬಿನ್ನೈಸಲು,
ಆ ಶಿಷ್ಯನ ಬಿನ್ನಹವಂ ಕೈಕೊಂಡು
ತನ್ನ ನಿಜಕರಯುಗಲದಲ್ಲಿ ಹಣೆಯ ಹಿಡಿದೆತ್ತಿದನು, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೫೧
ಇನ್ನು ಆ ಶಿಷ್ಯನ ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವ ಕ್ರಮವೆಂತೆಂದಡೆ:-

ಏಕಭೂಕ್ತೂಪವಾಸಂಗಳ ಮಾಡಿಸಿ
ಪಂಚಗವ್ಯಮಂ ಕೊಟ್ಟು ಗಣ ತಿಂಥಿಣಿಗೆ ದಂಡ ಪ್ರಣಾಮಂ ಮಾಡಿಸಿ,
ದಶ ವಾಯು ಶುದ್ಧ, ಅಷ್ಟತನು ಶುದ್ಧ, ಜೀವಶುದ್ಧ, ಆತ್ಮಶುದ್ಧವಂ ಮಾಡಿ,
ಇಂದ್ರಿಯ ಲಿಖಿತವಂ ತೊಡದು, ಶಿವಲಿಖಿತವಂ ಲಿಖಿಸಿ,
ವಿಭೂತಿ ಪಟ್ಟವ ಕಟ್ಟಿ ಸ್ಥಾನ ಸ್ಥಾನದಲ್ಲಿ ರುದ್ರಾಕ್ಷಿಯಂ ಧರಿಸಿ,
ಕಳಶಾಭಿಷೇಕವಂ ಮಾಡಿ,
ಆ ಶಿಷ್ಯನ ಮಸ್ತಕದ ಮೇಲೆ ತನ್ನ ಹಸ್ತ ಕಮಲವನಿರಿಸಿ,
ಬ್ರಹ್ಮರಂಧ್ರದ ಚಿತ್ಕಲಾ ಪ್ರಭಾಲಿಂಗವಂ ತೆಗೆದು ಧ್ಯಾನಿಸಿ,
ಆ ಶಿಷ್ಯನ ಹಸ್ತವ ಪಂಚಾಮೃತದಲ್ಲಿ ಪ್ರಕ್ಷಾಲಿಸಿ,
ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಿ,
ಕರ್ಣದ್ವಾರದಲ್ಲಿ ಮೂಲ ಮಂತ್ರವ ತುಂಬಿ, ಕೃತಾರ್ಥನ ಮಾಡಿದನು
ಧನ್ಯನಾದೆನಯ್ಯ, ಎನ್ನ ಸದ್ಗುರುಸ್ವಾಮಿ ಧನ್ಯನಾದೆನಯ್ಯ,
ಅಪ್ರಮಾಣ ಕೂಡಲಸಂಗಮದೇವ.

೫೨
ಮತ್ತುಂ ಆ ಶಿಷ್ಯನು ಸದ್ಗುರು ಸ್ವಾಮಿಗೆ, ದೀರ್ಘದಂಡ ನಮಸ್ಕಾರಮಂ ಮಾಡಿ,
ಇಷ್ಟಪ್ರಾಣ ಭಾವಲಿಂಗದ ಭೇದವನು, ಇಷ್ಟಪ್ರಾಣ ಭಾವಲಿಂಗದ ಪೂಜೆಯನು,
ಇಷ್ಟಪ್ರಾಣ ಭಾವಲಿಂಗಾರ್ಪಿತ ಭೇದವನು,
ಗುರುಲಿಂಗ ಶಿವಲಿಂಗ ಜಂಗಮಲಿಂಗದ ಭೇದವನು
ತ್ರಿವಿಧ ಲಿಂಗದಲ್ಲಿ ಮಾಡುವ ಪೂಜೆಯ ಕ್ರಮದ ಭೇದವನು,
ಷಟ್ಸ್ಥಲ ಬ್ರಹ್ಮಂಗಳ ಯಮ ನಿಯಮಾಸನ ಪ್ರಾಣಾಯಾಮ
ಪ್ರತ್ಯಾಹಾರ ಧ್ಯಾನ ಧಾರಣೆ ಸಮಾಧಿಯ ಭೇದವನು,
ತ್ರಿವಿಧ ಲಿಂಗದಲ್ಲಿ ಸಮುದ್ಭವವಾದ ತ್ರಿವಿಧ ಪ್ರಸಾದದ ಭೇದವನು
ತ್ರಿವಿಧೋದಕ ಕ್ರಮವನು ಷಟ್ಸ್ಥಲಂಗಳ ಭೇದವನು ಅಱಿಯನು
ಎಲೆ ಸದ್ಗುರು ಸ್ವಾಮಿ ನಿರೂಪಿಸೆಂದು ಬಿನ್ನೈಸಲು
ಆ ಸದ್ಗುರು ಸ್ವಾಮಿ ನಿರೂಪಿಸಿದ ವಚನ :
ಆ ಸದ್ಗುರು ಸ್ವಾಮಿ ಅನುಗ್ರಹಿಸಿ ಕೊಟ್ಟದು ಇಷ್ಟಲಿಂಗ,
ಆ ಲಿಂಗವೆ ಪ್ರಾಣವ ಭೇದಿಸಿ ಪ್ರಾಣಲಿಂಗವಾಯಿತ್ತು,
ಭಾವವನೆ ಭೇದಿಸಿ ಭಾವಲಿಂಗವಾಯಿತ್ತು.
ಈ ತ್ರಿವಿಧ ಲಿಂಗ ಒಂದೇ ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೫೩
||ರಹಸ್ಯ|| ಸದ್ಗುರೋನುಗ್ರಹಂ ಇಷ್ಟಂ, ತಲ್ಲಿಂಗಂ ಪ್ರಾಣವೇದಿತಂ,
ತದ್ಬಾವ ವೇದ್ಯತೆ ಲಿಂಗಂ, ತ್ರಿಧಾಮೇಕಂ ವರಾನನೇ
ಅಪ್ರಮಾಣ ಕೂಡಲಸಂಗಮದೇವ.

೫೪
ಇನ್ನು ಇಷ್ಟ ಪ್ರಾಣ ಭಾವಲಿಂಗದ ಪೂಜೆ ವಿವರವೆಂತೆಂದಡೆ :
ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ
ಮಾಡುವದು ಇಷ್ಟಲಿಂಗದ ಪೂಜೆ.
ಆ ಲಿಂಗವನು ಮನಸ್ಸಿನಲ್ಲಿಯೆ
ಧ್ಯಾನಿಸುವದು ಪ್ರಾಣಲಿಂಗದ ಪೂಜೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೫೫
ಸಾಕ್ಷಿ-

ಅಷ್ಟವಿಧಾರ್ಚನಂ ತೂರ್ಯಂ ಇಷ್ಟಲಿಂಗಸ್ಯ ಪೂಜನಂ |
ತಲ್ಲಿಂಗೆ ಮನು ತೇಯಸ್ತು ಪ್ರಾಣಲಿಂಗಸ್ಯ ಪೂಜನಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೫೬
ಉಪ್ಪು ಉದಕವ ಬೆರಸಿದಂತೆ
ವಾರಿಕಲ್ಲು ವಾರಿಯ ಬೆರಸಿದಂತೆ
ಕರ್ಪೂರ ಅಗ್ನಿಯ ಬೆರಸಿದಂತೆ
ಮನಲಿಂಗದಲ್ಲಿ ಲಿಯ್ಯವಾಗಿಹುದೆ ಭಾವಲಿಂಗದ ಪೂಜೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೫೭
ಸಾಕ್ಷಿ-

ಮನೋರ್ಲಯೋ ನಿರಂಜನಂ ಭಾವಲಿಂಗಸ್ಯ ಪೂಜನಂ |
ಯತ್ತೇ ಲಿಂಗಾರ್ಚನಂ ಜ್ಞಾನಂ ವಿಶೇಷಂ ಶ್ರುಣು ಪಾರ್ವತಿ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೫೮
ಇನ್ನು ಇಷ್ಟ ಪ್ರಾಣ ಭಾವಲಿಂಗಾರ್ಪಿತದ ಭೇದವೆಂತೆಂದಡೆ :
ಇಷ್ಟಲಿಂಗಕ್ಕೆ ಶರೀರವ ಸಮರ್ಪಿಸುವದು,
ಪ್ರಾಣಲಿಂಗಕ್ಕೆ ತನ್ನ ಮನಸ್ಸನೆ ಸಮರ್ಪಿಸುವದು,
ಭಾವಲಿಂಗಕ್ಕೆ ತನ್ನ ಪರಿಣಾಮವ ಸಮರ್ಪಿಸುವದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೫೯
ಸಾಕ್ಷಿ-

ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಃ |
ಭಾವಲಿಂಗಾರ್ಪಿತಂ ತೃಪ್ತಿಃ ಇತಿ ಭೇದ ವರಾನನೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೬೦
ಇನ್ನು ಗುರುಲಿಂಗ ಶಿವಲಿಂಗ ಜಂಗಮಲಿಂಗದ ವಿವರವೆಂತೆಂದಡೆ :
ಗುರುಲಿಂಗವು ಸಕಲನು, ಶಿವಲಿಂಗವು ನಿಃಕಲನು
ಜಂಗಮ ಲಿಂಗವು ಸಕಲ ನಿಃಕಲನು, ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೬೧
ಸಾಕ್ಷಿ-

ಸಕಲಂ ಗುರುಲಿಂಗಂ ಚ ನಿಷ್ಕಲಂ ಶಿವಲಿಂಗಕಂ |
ಸಕಲಂ ನಿಃಕಲಂ ಚೈವ ಜಂಗಮಶ್ಚ ಪ್ರಕೀರ್ತಿತಃ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೬೨
ಇನ್ನು ಪ್ರಥಮ ಲಿಂಗದಲ್ಲಿ
ದ್ವಿತೀಯ ಲಿಂಗದಲ್ಲಿ ತೃತೀಯ ಲಿಂಗದಲ್ಲಿ ಮಾಡುವ
ಪೂಜಾವಿಧಿ ಕ್ರಮವೆಂತೆಂದಡೆ :
ಶಕ್ತಿ ಪ್ರಥಮಲಿಂಗ, ಆ ಲಿಂಗವೆ ಗುರುಲಿಂಗ,
ಆ ಸನ್ನಿಧಿಯೇ ಶಿವಲಿಂಗ, ಆ ಲಿಂಗವೆ ಜಂಗಮಲಿಂಗ
ಇಂತೀ ತ್ರಿವಿಧವು ಗುರುಲಿಂಗದೊಳಗಿಹವೆಂದು

ಸಾಕ್ಷಿ-

ಶಕ್ತಿಃ ಸದ್ಗುರು ಲಿಂಗಂ ಚ ಸನ್ನಿಧೌ ಶಿವಲಿಂಗಕಂ |
ತಲ್ಲಿಂಗಂ ಜಂಗಮಲಿಂಗಂ ತ್ರಿವಿಧಂ ಗುರುಮಿಶ್ರಿತಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೬೩
ಹಿಂಗೆ ಅಱಿದು ಅರ್ಚಿಸಿ ವಂದಿಸಿ ಆರಾಧನೆಯಂ ಮಾಡಿ
ತನು ಕ್ರಿಯಾ ಮಾರ್ಗದಿಂದ ಶುದ್ಧ ಪವಿತ್ರ ಚರಿತನಾಗಿ
ಮಹಾ ಜ್ಞಾನ ವರ್ತಕನಾಗಿ, ಶ್ರೀ ಗುರುವಾಜ್ಞೆಯಂ ಮೀರದೆ
ನಡೆವುದೀಗ ಗುರುಪೂಜೆಯ ಎರವು, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೬೪
ಆ ಶ್ರೀಗುರು ಉಪದೇಶ ಮಂತ್ರ ಮಾರ್ಗದಲ್ಲಿ,
ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣಿ ಸಮಾಧಿ
ಎಂಬ ಅಷ್ಟಾಂಗಯೋಗದಲ್ಲಿ ನಿರೂಪಿತನಾಗಿ
ಇಂದ್ರಿಯ ವ್ಯವಹಾರ ದೇಹವಿಕಾರವಿಲ್ಲದೆ ನಿರಾಕಾರ ಲಿಂಗಸಂಗಿಯಾಗಿ
ಪ್ರಥಮ ಕಾಲ ದ್ವಿತಿಯ ಕಾಲ ತೃತಿಯ ಕಾಲದೆಂಬ
ಕಾಲತ್ರಯಂಗಳನುಲ್ಲಂಘಿಸದೆ ಮಾಡುವದೀಗ ಲಿಂಗಪೂಜೆ, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೬೫
ಇನ್ನು ಗುರುಪೂಜಾ ವಿಧಿಯ ಕ್ರಮ ತಾನೆ ಅಷ್ಟಾಂಗ ಯೋಗ,
ಅದೆಂತೆಂದಡೆ :
ಹಿಂಸೆಯನತಿಗಳೆದು, ಅನ್ಯ ದೈವದ ಬಿಡುವ
ಅನ್ಯ ಕರ್ಮವನಾಚರಿಸದಿಹ ಪರಧನ ಪರಸ್ತ್ರೀಯ ವರ್ಜ್ಜಿತ,
ಈ ಐದು ಯಮಯೋಗ, ನೋಡಾ,
ಅಪ್ರಮಾಣ ಕೂಡಲಸಂಗಮದೇವ.