೩೦೨
ಸಾಕ್ಷಿ-
ವಾಯುಶ್ಚ ಗುಹ್ಯಃ ಪಾದಶ್ಚ ಹಸ್ತವಾಗಾಂತರಂ ತಥಾ |
ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತುಕಾರಣಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೩೦೩
ಜಗತ್ ಸೃಷ್ಟ್ಯರ್ಥ ಕಾರಣವಾಗಿ,
ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ದೆಸೆಯಿಂದ
ಷಟ್‌ಶಕ್ತಿಗಳುತ್ಪತ್ಯವಾದವು.
ಆ ಷಟ್‌ಶಕ್ತಿಯೇ ಕಾರಣವಾಗಿ ಷಡಂಗ ಉತ್ಪತ್ಯವಾದವು.
ಆ ಷಡಂಗದಲ್ಲಿ ಲೋಕಾದಿ ಲೋಕಂ ಸಚರಾಚರಂಗಳ
ಉತ್ಪತ್ಯಲಯವು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೦೪
ಇನ್ನು ಮೂವತ್ತಾಱು ತತ್ತ್ವಂಗಳ ನಿವೃತ್ತಿ-
ಅದೆಂತೆಂದಡೆ :
ಆಕಾಶ ಚೈತನ್ಯ ಭಾವಕರ್ತ ಕ್ಷೇತ್ರಜ್ಞ ಶಿವನು ಈ ಆಱು ತತ್ತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ
ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦೫
ವಾಕ್ ಶ್ರೋತ್ರ ಜ್ಞಾನ ಶಬ್ದ ಮಹಾಕಾಶ ಸದಾಶಿವನು ಈ ಆಱು ತತ್ತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ದರ್ಪಣಾಕಾರವಾಗಿಹ
ವಿಜ್ಞಾನಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦೬
ವಾಣಿ ತ್ವಕ್ಕು ಮನ ಸ್ಪರ್ಶ ವಾಯು ಈಶ್ವರನು ಈ ಆಱು ತತ್ತ್ವಂಗಳು
ಅಖಂಡ ಮಹಾಜ್ಯೋತಿಪ್ರಣವದ
ಅರ್ಧ ಚಂದ್ರಕೆ ಸ್ವರೂಪವಾಗಿಹ
ಆನಂದ ಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦೭
ಗುಹ್ಯ ಜಿಹ್ವೆ ಬುದ್ಧಿ ರಸ ಅಪ್ಪು ಪಾದ ನೇತ್ರ ಅಹಂಕಾರ ರೂಪು
ಅಗ್ನಿರುದ್ರನು ಈ ಆಱು ತತ್ತ್ವಂಗಳು.
ಆ ಅಖಂಡ ಮಹಾಜ್ಯೋತಿ ಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦೮
ಗುಹ್ಯ ಜಿಹ್ವೆ ಬುದ್ಧಿ ರಸ ಅಪ್ಪು ವಿಷ್ಣು ಈ ಆಱು ತತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ
ಪಿಂಡಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦೯
ಗುದ ಘ್ರಾಣ ಚಿತ್ತ ಗಂಧ ಪೃಥ್ವಿ ಬ್ರಹ್ಮ ಈ ಆಱು ತತ್ವಂಗಳು.
ಆ ಅಖಂಡ ಮಹಾಜ್ಯೋತಿಪ್ರಣವದ ತಾರಕಾಸ್ವರೂಪವಾಗಿಹ
ಮೂರ್ತಿಬ್ರಹ್ಮದಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೦
ಇನ್ನು ಷಡಂಗ ನಿಃಷಡಂಗ ನಿವೃತ್ತಿ :
ಅದೆಂತೆಂದಡೆ :
ಶಿವ ಸದಾಶಿವ ಈಶ್ವರ ರುದ್ರ ವಿಷ್ಣು ಬ್ರಹ್ಮ-
ಈ ಆಱು ಶಿವಾಂಗವು
ಚಿಚ್ಛಕ್ತಿಯಲ್ಲಿಯೆ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೧
ಕ್ಷೇತ್ರಜ್ಞ ಆಕಾಶ ವಾಯು ತೇಜ ಅಪ್ಪು ಪೃಥ್ವಿ-
ಈ ಆಱು ಭೂತಾಂಗವು
ಪರಾಶಕ್ತಿಯಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೨
ಕರ್ತನು ಶಬ್ದ ಸ್ಪರ್ಶ ರೂಪು ರಸ ಗಂಧ-
ಈ ಆಱು ಯೋಗಾಂಗವು
ಆದಿ ಶಕ್ತಿಯಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೩
ಭಾವ ಜ್ಞಾನ ಮನ ಅಹಂಕಾರ ಬುದ್ಧಿ ಚಿತ್ತ-
ಈ ಆಱು ಕಾಮಾಂಗವು
ಇಚ್ಛಾಶಕ್ತಿಯಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೪
ಚೇತನ ಶ್ರೋತೃ ತ್ವಕ್ಕು ನೇತ್ರ ಜಿಹ್ವೆ ಘ್ರಾಣ
ಈ ಆಱು ವಿದ್ಯಾಂಗವು
ಜ್ಞಾನ ಶಕ್ತಿಯಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೫
ಅಂತರ ವಾಕ್ ಪಾಣಿ ಪಾದ ಗುಹ್ಯ ವಾಯು
ಈ ಆಱು ಕರ್ಮಾಂಗವು
ಕ್ರಿಯಾಶಕ್ತಿಯಲ್ಲಿ ಅಡಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೬
ಇನ್ನು ಷಟ್‌ಶಕ್ತಿಗಳ ನಿವೃತ್ತಿ, ಅದೆಂತೆಂದಡೆ :
ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿಯಡಗಿದಳು.
ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿಯಡಗಿದಳು.
ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿಯಡಗಿದಳು.
ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿಯಡಗಿದಳು.
ಚಿಚ್ಛಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿಯಡಗಿದಳು.
ನಿಃಶಬ್ದವೆಂಬ ಪರಬ್ರಹ್ಮದ,
ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿಯಡಗಿದಳು.
ಆ ನಿಃಶಬ್ದವೆಂಬ ಪರಬ್ರಹ್ಮದ ಚಿಂತೆಯುಡುಗಿ
ಶೂನ್ಯ ನಿಶೂನ್ಯವಾಗಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೭
ವೇದಾಂತ ತತ್ವವೆಂಬ ಅಷ್ಟವಿಂಶತಿ ತತ್ವವನೊಳಕೊಂಡು
ಮಾಹೇಶ್ವರ ತತ್ವ, ಸದಾಶಿವ ತತ್ವ ಶಿವತತ್ವವೆಂಬ
ಏಕತ್ರಿಂಶತತ್ವವನೊಳಕೊಂಡು
ತ್ವಂ ಪದ ತತ್ ಪದ ಅಸಿ ಪದವೆಂಬ
ಮೂವತ್ತಾಱು ತತ್ವವನೊಳಕೊಂಡು ವೇದಾಂತಿಯ ಮನ ವಾರ್ತೆ.
ತ್ವಂ ಪದ ತತ್ ಪದ ಅಸಿಪದವೆಂಬ ತ್ರಿವಿಧ ಪದಂಗಳನೊಳಕೊಂಡು
ತೊಂಬತ್ತಾಱು ತತ್ವವನೊಳಕೊಂಡು
ಷಡಂಗವನೊಳಕೊಂಡು ಷಟ್‌ಶಕ್ತಿಗಳನೊಳಕೊಂಡು
ಸ್ವರಾಕ್ಷರ ಕಲಾಕ್ಷರ ಏಕಾಕ್ಷರವನೊಳಕೊಂಡು
ಅನೇಕ ಕೋಟಿ ವೇದಂಗಳನೊಳಕೊಂಡು
ಅನೇಕ ಕೋಟಿ ಚಂದ್ರಾದಿತ್ಯರನೊಳಕೊಂಡು
ತ್ರೈಲೋಕ್ಯ ಸಚರಾಚರಂಗಳನೊಳಕೊಂಡು
ತಿರುತಿರುಗಿ ಬಹ ಅನೇಕ ಕೋಟಿ ಕಲ್ಪಾಂತರವನೊಳಕೊಂಡು
ಷಟ್‌ಸ್ಥಲ ಬ್ರಹ್ಮವ ಗರ್ಭೀಕರಿಸಿಕೊಂಡು
ಆದಿ ಮಧ್ಯ ಅವಸಾನವಿಲ್ಲದೆ,
ಅಖಂಡ ಮಹಾಜ್ಯೋತಿರ್ಮಯ ಲಿಂಗವಾಗಿದ್ದುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೮
ಇಂದ್ರ ಇಂದ್ರರೆಂಬವರನೇಕ ಕೋಟಿ
ಲಿಂಗಗರ್ಭದಲ್ಲಿ ಲಯವಾಗಲು, ಮೂವತ್ತುಮೂಱು ಕೋಟಿ
ದೇವರ್ಕಳಿಗೆ ಒಂದು ಸಂವತ್ಸರವಾಯಿತ್ತು.
ಅಂಥ ಮೂವತ್ತುಮೂಱು ಕೋಟಿ ದೇವರ್ಕಳು
ಅನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಬ್ರಹ್ಮನಿಗೊಂದು ದಿನವಾಯಿತ್ತು.
ಅಂಥ ಬ್ರಹ್ಮಾದಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಮೀನಜನೆಂಬ ಮುನಿಗೊಂದು ಮೀನ ಸಡಿಲಿತ್ತು.
ಅಂಥ ಮೀನಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ರೋಮಜನೆಂಬ ಮುನಿಗೊಂದು ರೋಮ ಸಡಿಲಿತ್ತು.
ಅಂಥ ರೋಮಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಡೊಂಕಜನೆಂಬ ಮುನಿಗೊಂದು ಡೊಂಕು ಸಡಿಲಿತ್ತು.
ಅಂಥ ಡೊಂಕಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ನೇತ್ರಜನೆಂಬ ಮುನಿಗೊಂದು ನೇತ್ರ ಸಡಿಲಿತ್ತು.
ಅಂಥ ನೇತ್ರಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಬೆ(ಚಿ)ಪ್ಪಜನೆಂಬ ಮುನಿಗೊಂದು ಬೆಪ್ಪು ಸಡಿಲಿತ್ತು.
ಅಂಥ ಬೆ(ಚಿ)ಪ್ಪಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಪಾದಜನೆಂಬ ಮುನಿಗೊಂದು ಪಾದ ಸಡಿಲಿತ್ತು.
ಅಂಥ ಪಾದಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಚಿಟುಕಜ ಮುನಿಗೊಂದು ಚಿಟುಕು ಸಡಿಲಿತ್ತು.
ಅಂಥ ಚಿಟುಕಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಸಾರಂಗನೆಂಬ ಮುನಿಗೊಂದು ರೇಣು (ಕಣ) ಕುಂದಿತ್ತು.
ಅಂಥ ಸಾರಂಗನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ವಿಷ್ಣುವಿಗೊಂದು ದಿನವಾಯಿತ್ತು.
ಅಂಥ ವಿಷ್ಣುಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ರುದ್ರನ ಕಣ್ಣೆವೆ ಹಳಚಿತ್ತು.
ಅಂಥ ರುದ್ರಾದಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಅತಲ ಸುತಲ ವಿತಲ ತಲಾತಲ ಮಹಾತಲ ರಸಾತಲ ಪಾತಾಲ,
ಭೂಲೋಕ ಭುವರ್ಲೋಕ ಮಹರ್ಲೋಕ ಜನರ್ಲೋಕ
ತಪೋಲೋಕ ಸತ್ಯಲೋಕ ಗೋಲೋಕವೆಂಬ
ಹದಿನಾಲ್ಕು ಲೋಕವು ಲಿಂಗಗರ್ಭದಲ್ಲಿ ಲಯವಾಗಲು
ಇಂತೀ ಹದಿನಾಲ್ಕು ಲೋಕವನೊಳಕೊಂಡು
ಅತ್ತತ್ತವಾಗಿಹ ಅಖಂಡ ಮಹಾಜ್ಯೋತಿರ್ಮಯ
ಲಿಂಗದೊಳಗಿದ್ದವರೆಲ್ಲರು ಲಿಂಗವನಱಿಯದೆ ಸತ್ತರು
ಲೋಕದೊಳು ಸುಳಿವ ವೇಷಧಾರಿಗಳಿಗೆಂದು ಸಾಧ್ಯವಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧೯
ಸಾಕ್ಷಿ-
ಆಕಾಶಗತ ಲಿಂಗಾನಾಂ ಪೃಥಿವೀಗತ ಪೀಠಯಃ |
ಆಲಯಂ ಋಷಿದೇವಾನಾಂ ಲಯನಂ ಲಿಂಗಮುಚ್ಯತೇ ||
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈಶ್ರೀಗುರವೇ ನಮಃ || -ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೩೨೦
ಶಿವ ಶಕ್ತಿರಹಿತವಾದ ಪ್ರಣವವು ಹದಿನಾಱನೆಯ ಪ್ರಣವವೆಂದು ನಿರಾಮಯಾತೀತಾಗಮದಲ್ಲಿ ಪಾರ್ವತಾದೇವಿಯರಿಗೆ ಶಿವನು ನಿರೂಪಿಸಿದನೆಂದು ಸದ್ಗುರು ಸ್ವಾಮಿ ಶಿಷ್ಯಂಗೆ ನಿರೂಪಿಸಿದನು.
ಶ್ರೀ ಶ್ರೀ ಶ್ರೀಮದ್ಗುರು ಬೋಳ ಬಸವೇಶ್ವರಾಯ ನಮಃ
ಶ್ರೀ ನಿರಂಜನ ಪ್ರಣವದುತ್ಪತ್ಯ :
ಎನೂ ಎನೂ ಎನಲಿಲ್ಲದ ಮಹಾಘನ ನಿರಂಜನಾತೀತದ ನೆನಹು.
ಮಾತ್ರದಲ್ಲಿ ನಿರಂಜನ ಪ್ರಣವ ಉತ್ಪತ್ಯವಾಯಿತ್ತು.
ಆ ನಿರಂಜನ ಪ್ರಣವದ ನೆನಹು ಮಾತ್ರದಲ್ಲಿ
ಕಲಾಪ್ರಣವ ಉತ್ಪತ್ಯವಾಯಿತ್ತು.
ಆ ಕಲಾಪ್ರಣವದ ನೆನಹು ಮಾತ್ರದಲ್ಲಿ
ಅನಾದಿ ಪ್ರಣವ ಉತ್ಪತ್ಯವಾಯಿತ್ತು.
ಆ ಅನಾದಿ ಪ್ರಣವದ ನೆನಹು ಮಾತ್ರದಲ್ಲಿ
ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು.
ಆ ಅಕಾರ ಉಕಾರ ಮಕಾರದ ರೂಪಾಂಗ ಭೇದದಿಂದ
ಒಂಬತ್ತು ಪ್ರಣವ ಉತ್ಪತ್ಯವಾಯಿತು.
ಅಕಾರ ಉಕಾರ ಮಕಾರ ಈ ಮೂಱು ಕೂಡಿ ಏಕಾರ್ಥವಾಗಿಹ
ಪ್ರಣವ ಶಿವ ಸಂಬಂಧವಾಗಿಹವು.
ಆ ಅಕಾರ ಉಕಾರ ಮಕಾರ ಈ ಮೂಱೂ ಕೂಡಿ ಏಕಾರ್ಥವಾಗಿಹ
ಪ್ರಣವ ಶಿವಶಕ್ತಿರಹಿತವಾಗಿಹವು.
ಆ ಶಿವಸಂಬಂಧವಾಗಿಹ ಅಖಂಡ ಗೋಳಕಾಕಾರ ಪ್ರಣವದಲ್ಲಿ
ಜ್ಯೋತಿಸ್ವರೂಪ ಪ್ರಣವವೆಂದು, ದರ್ಪಣಾಕಾರ ಪ್ರಣವವೆಂದು,
ಕುಂಡಲಾಕಾರ ಪ್ರಣವವೆಂದು, ದಂಡಕಸ್ವರೂಪ ಪ್ರಣವವೆಂದು
ಅರ್ಧಚಂದ್ರಕ ಪ್ರಣವವೆಂದು ತಾರಕಾಸ್ವರೂಪ ಪ್ರಣವವೆಂದು
ಆಱು ಪ್ರಕಾರವಾಗಿಹುದು.
ಶಕ್ತಿಸಂಬಂಧವಾದ ಪರಂಜ್ಯೋತಿ ಸ್ವರೂಪವಾಗಿಹ ಪರಮ ಪ್ರಣವದಲ್ಲಿ
ತಾರಕಾಸ್ವರೂಪ ಪ್ರಣವವೆಂದು, ದಂಡಕಸ್ವರೂಪ ಪ್ರಣವವೆಂದು
ಕುಂಡಲಾಕಾರ ಪ್ರಣವವೆಂದು ಅರ್ಧಚಂದ್ರ ಪ್ರಣವವೆಂದು
ದರ್ಪಣಾಕಾರ ಪ್ರಣವವೆಂದು ಜ್ಯೋತಿಸ್ವರೂಪ ಪ್ರಣವವೆಂದು
ಆಱು ಪ್ರಕಾರವಾಗಿಹುದು.
ಶಿವಶಕ್ತಿ ರಹಿತವಾಗಿಹ ಅಖಂಡ ಮಹಾಜ್ಯೋತಿ ಪ್ರಣವದಲ್ಲಿ
ಮೂರ್ತಿಬ್ರಹ್ಮ ಪ್ರಣವವೆಂದು, ಪಿಂಡಬ್ರಹ್ಮ ಪ್ರಣವವೆಂದು
ಕಲಾಬ್ರಹ್ಮ ಪ್ರಣವವೆಂದು ಬ್ರಹ್ಮಾನಂದಬ್ರಹ್ಮ ಪ್ರಣವವೆಂದು
ವಿಜ್ಞಾನಬ್ರಹ್ಮ ಪ್ರಣವವೆಂದು ಪರಬ್ರಹ್ಮ ಪ್ರಣವವೆಂದು
ಈ ಆಱು ಪ್ರಣವಂಗಳು ಷಟ್‌ಸ್ಥಲ ಬ್ರಹ್ಮ ತಾನೆ ಷಷ್ಠ ಪ್ರಣವವಾಗಿಹುದೆಂದು
ನಿರಾಮಯಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳಿಹುದು.
ಇನ್ನು ಶಿವಸಂಬಂಧವಾದ ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವದ ದರ್ಪಣಾಕಾರದ ಪ್ರಣವದಲ್ಲಿ
ಈಶಾನ್ಯ ಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕ ಪ್ರಣವದಲ್ಲಿ
ತತ್ಪುರುಷ ಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರ ಪ್ರಣವದಲ್ಲಿ
ಅಘೋರ ಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪ ಪ್ರಣವದಲ್ಲಿ
ವಾಮದೇವ ಮುಖವು ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಾಸ್ವರೂಪ ಪ್ರಣವದಲ್ಲಿ
ಸದ್ಯೋಜಾತ ಮುಖವು ಉತ್ಪತ್ಯವಾಯಿತ್ತು.
ಈಶಾನ್ಯ ಮುಖದಲ್ಲಿ ಸಾಯುಜ್ಯ ಪ್ರಣವ ಉತ್ಪತ್ಯವಾಯಿತ್ತು.
ತತ್ಪುರುಷ ಮುಖದಲ್ಲಿ ಸಾಕಲ್ಯ ಪ್ರಣವ ಉತ್ಪತ್ಯವಾಯಿತ್ತು.
ಅಘೋರ ಮುಖದಲ್ಲಿ ಶಾಂಭವ ಪ್ರಣವ ಉತ್ಪತ್ಯವಾಯಿತ್ತು.
ವಾಮದೇವ ಮುಖದಲ್ಲಿ ಸಾವ

[1]ಸ್ಯ ಪ್ರಣವ ಉತ್ಪತ್ಯವಾಯಿತ್ತು.
ಸದ್ಯೋಜಾತ ಮುಖದಲ್ಲಿ ಸೌಖ್ಯ ಪ್ರಣವ ಉತ್ಪತ್ಯವಾಯಿತ್ತು.
ಶಿವಸಂಬಂಧವಾದ ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವವು,
ಶಕ್ತಿಸಂಬಂಧವಾದ ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವವು,
ಶಕ್ತಿಸಂಬಂಧವಾದ ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪರಬ್ರಹ್ಮ ಪ್ರಣವವು,
ಶಿವಶಕ್ತಿರಹಿತವಾಗಿಹ ಅಖಂಡ ಮಹಾಜ್ಯೋತಿ ಪ್ರಣವ
ಈ ಮೂಱು ಪ್ರಣವಂಗಳು ಕೂಡಿ ಏಕಾರ್ಥವಾಗಿ
ಅಖಂಡಿತ ಅಪ್ರಮಾಣ ಅಗೋಚರ ಅಪ್ರಮೇಯ, ಅಗಮ್ಯ
ವಾಚಾಮಗೋಚರಕತ್ತತ್ತವಾದ ಮಹಾಘನಕ್ಕೆ
ಘನವನೇನೆಂದುಪಮಿಸಬಾರದ ಉಪಮಾತೀತಕತ್ತತ್ತವಾಗಿಹನು
ನೋಡಾ, ನಮ್ಮ ಅಪ್ರಮಾಣ ಕೂಡಲಸಂಗಮದೇವ.
ನಿಃಕಲಾತೀತಾಗಮದಲ್ಲಿ ನಾಲ್ವತ್ತು ಪ್ರಣವವೆಂದು ಶಿವನು, ಪಾರ್ವತಾದೇವಿಯರಿಗೆ ನಿರೂಪಿಸಿದರೆಂದು ಸದ್ಗುರು ಸ್ವಾಮಿ ಶಿಷ್ಯಂಗೆ ನಿರೂಪಿಸಿದ ಪ್ರಣವಸ್ಥಲದ ವಚನ ಸಮಾಪ್ತ ಮಂಗಲ ಮಹಾ ಶ್ರೀ ಶ್ರೀ ಶ್ರೀ.

೩೨೧
ಶ್ರೀ ನಿರಾಳ ದಶಚಕ್ರ; ಅದೆಂತೆಂದಡೆ :
ಶಿವತತ್ವ ಪೃಥ್ವಿಯೆಂದು, ಶಿವತತ್ವ ಅಪ್ಪುವೆಂದು
ಶಿವತತ್ವ ತೇಜವೆಂದು. ಶಿವತತ್ವ ವಾಯುವೆಂದು
ಶಿವತತ್ವ ಆಕಾಶವೆಂದು ಶಿವತತ್ವ ಹೃದಯವೆಂದು
ಆಱು ಪ್ರಕಾರವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೨
ಶಿವತತ್ವ ಪೃಥ್ವಿಯ ಮೇಲೆ ನಿರಾಳ ಆಧಾರಚಕ್ರ,
ಅಲ್ಲಿಯ ಪದ್ಮ ಐನೂಱು ನಾಲ್ವತ್ತುದಳ ಪದ್ಮ,
ಆ ಪದ್ಮಕ್ಕೆ ವರ್ಣವಿಲ್ಲ.
ಅಲ್ಲಿಯ ಅಕ್ಷರ ಐನೂಱು ನಾಲ್ವತ್ತಕ್ಷರ,
ಆ ಅಕ್ಷರಕ್ಕೆ ರೂಪಿಲ್ಲ.
ಅಲ್ಲಿಯ ಶಕ್ತಿ ನಿರಾಳ ರುದ್ರಶಕ್ತಿ.
ನಿರಾಳ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಅಕಾರ ನಾದ.
ಅಲ್ಲಿಯ ಬೀಜಾಕ್ಷರ ಅಕಾರ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೩
ಶಿವತತ್ವದ ಅಪ್ಪುವಿನ ಮೇಲೆ ನಿರಾಳ ಸ್ವಾಧಿಷ್ಠಾನಚಕ್ರ
ಅಲ್ಲಿಯ ಪದ್ಮ ನಾನೂಱು ಐವತ್ತು ದಳದ ಪದ್ಮ,
ಆ ಪದ್ಮವು ಉಪಮೆ ಇಲ್ಲದ ವರ್ಣ.
ಅಲ್ಲಿಯ ಅಕ್ಷರ ನಾನೂಱು ಐವತ್ತರಕ್ಷರ
ಆ ಅಕ್ಷರ ನಿರಾಕಾರವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಈಶ್ವರ ಶಕ್ತಿ
ನಿತ್ಯಾನಂದ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಪ್ರಣವ ನಾದ
ಅಲ್ಲಿಯ ಬೀಜಾಕ್ಷರ ಉಕಾರ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೪
ಶಿವತತ್ವ ತೇಜದ ಮೇಲೆ ನಿರಾಳ ಮಣಿಪೂರಕಚಕ್ರ
ಅಲ್ಲಿಯ ಪದ್ಮ ಮುನ್ನೂಱಱವತ್ತು ದಳದ ಪದ್ಮ,
ಆ ಪದ್ಮದ ವರ್ಣ ಉಪಮಾತೀತವು,
ಅಲ್ಲಿಯ [2]ಅಕ್ಷರ[3] ಮೂನ್ನೂಱಱವತ್ತಕ್ಷರ,
ಆ ಅಕ್ಷರ ರೂಪಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಶಿವಶಕ್ತಿ,
ನಿರಂಜನ ಬ್ರಹ್ಮವೇ ಅಧಿದೇವತೆ.
ಅಲ್ಲಿಯ ನಾದ ಬ್ರಹ್ಮನಾದ.
ಅಲ್ಲಿಯ ಬೀಜಾಕ್ಷರ ಮಕಾರ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೫
ಶಿವಶಕ್ತಿತತ್ತ್ವವಾಯುವಿನ ಮೇಲೆ ನಿರಾಳ ಅನಾಹತಚಕ್ರ.
ಅಲ್ಲಿಯ ಪದ್ಮ ಇನ್ನೂಱು ಎಪ್ಪತ್ತು ದಳದ ಪದ್ಮ
ಆ ಪದ್ಮ ವರ್ಣವಿಲ್ಲದೆ ಅಪ್ರಮಾಣ ಅಗೋಚರವಾಗಿಹುದು.
ಅಲ್ಲಿಯ ಅಕ್ಷರ ಇನ್ನೂಱು ಎಪತ್ತಕ್ಷರ
ಆ ಅಕ್ಷರ ನಿರೂಪಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಉಪಮಾಶಕ್ತಿ,
ಅಮಲಾನಂದ ಬ್ರಹ್ಮವೇ ಅಧಿದೇವತೆ.
ಅಲ್ಲಿಯ ನಾದ ಸಂನಾದ.
ಅಲ್ಲಿಯ ಬೀಜಾಕ್ಷರ ಆದಿ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೬
ಶಿವತತ್ತ್ವ ಆಕಾಶದ ಮೇಲೆ ನಿರಾಳ ವಿಶುದ್ಧಿ ಚಕ್ರ
ಅಲ್ಲಿಯ ಪದ್ಮನೂಱುಎಂಬತ್ತು ದಳ ಪದ್ಮ,
ಆ ಪದ್ಮ ವರ್ಣಾತೀತವಾಗಿಹುದು.
ಅಲ್ಲಿಯ ಅಕ್ಷರ ನೂಱುಎಂಬತ್ತಕ್ಷರ
ಆ ಅಕ್ಷರ ಅರೂಪಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಮನೋನ್ಮನಿಶಕ್ತಿ.
ಅಲ್ಲಿಯ ನಾದ ಮಹಾನಾದ.
ಸಕಲ ನಿಃಕಲಾತೀತ ಬ್ರಹ್ಮವೇ ಅಧಿದೇವತೆ.
ಅಲ್ಲಿಯ ಬೀಜಾಕ್ಷರ ಅನಾದಿ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೭
ಶಿವತತ್ತ್ವ ಹೃದಯದ ಮೇಲೆ ನಿರಾಳ ಆಜ್ಞಾಚಕ್ರ.
ಅಲ್ಲಿಯ ಪದ್ಮ ಅನೇಕ ಕೋಟಿ ದಳ ಪದ್ಮ.
ಅದರ ವರ್ಣ ಅಂಥಾದಿಂಥಾದೆಂದು
ಉಪಮೆ ಇಲ್ಲದ ಉಪಮಾತೀತವಾಗಿಹುದು.
ಅಲ್ಲಿಯ ಅಕ್ಷರ ಅನೇಕ ಕೋಟಿ ಅಕ್ಷರ
ಆ ಅಕ್ಷರ ಸರ್ವಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಗಣಿಶಕ್ತಿಯೆಂಬ ಮಹಾಶಕ್ತಿ.
ಅಲ್ಲಿಯ ನಾದ ಪರಮಾನಂದವೆಂಬ ಮಹಾ ನಾದ.
ನಿರಾಳಾತೀತವೆಂದು ಮಹಾಘನ ಲಿಂಗವೆ ಅಧಿದೇವತೆ
ಅಲ್ಲಿಯ ಬೀಜಾಕ್ಷರ ಕಲಾಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೨೮
ನಿರಾಳ ಷಟ್‌ಚಕ್ರದ ಮೇಲೆ ನಾಲ್ಕು ಚಕ್ರವುಂಟು
ಆ ಚಕ್ರಂಗಳು ಗೌಪ್ಯಕ್ಕೆ ಅತ್ಯಂತ ಗೋಪ್ಯ.
ಸೂಕ್ಷ್ಮಕ್ಕು ಅತ್ಯಂತ ಸೂಕ್ಷ್ಮ.
ಶೂನ್ಯಕ್ಕು ಅತ್ಯಂತ ಶೂನ್ಯ.
ಅಮಲಾತೀತವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.


[1]     ರ (ತಾ.ಪ್ರ. ೭೬)

[2]     ಬೀಜಾಕ್ಷರ (ತಾ.ಪ್ರ. ೭೬)

[3]