೩೨೯
ಇನ್ನು ನಿರಾಳ ಷಟ್‌ಚಕ್ರದ ಮೇಲಣ ನಾಲ್ಕು ಚಕ್ರಂಗಳ ಕ್ರಮವೆಂತೆಂದಡೆ :
ನಿರ್ವಾಣಲಿಂಗ ಚಕ್ರವೆಂದು.
ಮಹಾನಿರ್ವಾಣಲಿಂಗ ಚಕ್ರವೆಂದು.
ಶ್ರೀ ಮಹಾನಿರ್ವಾಣಘನಲಿಂಗ ಚಕ್ರವೆಂದು.
ಮಹಾನಿರ್ವಾಣ ಘನಾತೀತಲಿಂಗ ಚಕ್ರವೆಂದು.
ಈ ನಾಲ್ಕು ಚಕ್ರಕ್ಕು ಪದ್ಮವಿಲ್ಲ ವರ್ಣವಿಲ್ಲ.
ಅಕ್ಷರಂಗಳಿಲ್ಲ, ಅಕ್ಷರಶಕ್ತಿಇಲ್ಲ, ಅಧಿದೇವತೆ ಇಲ್ಲ, ನಾದವಿಲ್ಲ,
ಬೀಜಾಕ್ಷರವಿಲ್ಲದೆ ಬೆಳಗುತ್ತಿಹುದು.
ಆ ಚಕ್ರಂಗಳು ವರ್ಣಾತೀತವಾಗಿಹುದು.
ಉಪಮೆಗೆ ಉಪಮಾತೀತವಾಗಿಹುದು.
ಚಕ್ರಕ್ಕೂ ಚಕ್ರಾತೀತವಾಗಿಹುದೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೦
ಇನ್ನು ಶ್ರೀ ನಿರಾಮಯ ಷಟ್‌ಸ್ಥಲಭೇದವದೆಂತೆಂದಡೆ :
ನಿರಾಮಯ ಭಕ್ತ ನಿರಾಮಯ ಮಹೇಶ್ವರ.
ನಿರಾಮಯ ಪ್ರಸಾದಿ ನಿರಾಮಯ ಪ್ರಾಣಲಿಂಗಿ,
ನಿರಾಮಯ ಶರಣ ನಿರಾಮಯ ಐಕ್ಯ.
ಈ ನಿರಾಮಯ ಷಟ್‌ಸ್ಥಲದ ಭೇದವದೆಂತೆಂದಡೆ :
ಸೂಕ್ಷ್ಮಕ್ಕು ಅತ್ಯಂತ ಸೂಕ್ಷ್ಮ, ರಹಸ್ಯಕ್ಕೂ ಅತ್ಯಂತ ರಹಸ್ಯವಾಗಿಹುದು
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೩೧
ಇನ್ನು ನಿರಾಮಯ ಷಟ್‌ಸ್ಥಲದ ಅರ್ಪಿತಾವಧಾನದ ಭೇದವದೆಂತೆಂದಡೆ :
ನಿರಾಮಯ ಭಕ್ತಂಗೆ ನಿರಾಮಯವೆ ಅಂಗ,
ನಿರಾಮಯವೆ ಹಸ್ತ, ನಿರಾಮಯವೇ ಆಚಾರಲಿಂಗ.
ನಿರಾಮಯವೆಂಬ ಮುಖದಲ್ಲಿ
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡ,
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೨
ನಿರಾಮಯ ಮಹೇಶ್ವರಂಗೆ,
ನಿರಾಮಯವೆ ಅಂಗ ನಿರಾಮಯವೆ ಹಸ್ತ.
ನಿರಾಮಯವೆ ಗುರುಲಿಂಗ ನಿರಾಮಯವೆಂಬ ಮುಖದಲ್ಲಿ
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೩
ನಿರಾಮಯ ಪ್ರಸಾದಿಗೆ ನಿರಾಮಯವೆ ಅಂಗ.
ನಿರಾಮಯವೆ ಹಸ್ತ ನಿರಾಮಯವೆ ಶಿವಲಿಂಗ.
ನಿರಾಮವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವ
ಸಮರ್ಪಣವ ಮಾಡಿ ತೃಪ್ತಿಯನೆ

[1]ಭೋಗಿಸುವನು[2] ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೪
ನಿರಾಮಯ ಪ್ರಾಣಲಿಂಗಿಗೆ,
ನಿರಾಮಯವೆ ಅಂಗ ನಿರಾಮಯವೆ ಹಸ್ತ.
ನಿರಾಮಯವೆ ಜಂಗಮಲಿಂಗ ನಿರಾಮಯವೆಂಬ ಮುಖದಲ್ಲಿ,
ನಿರಾಮಯಾನಂದವೆಂಬ ಸುಖವ ಸಮರ್ಪಣ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೫
ನಿರಾಮಯ ಶರಣಂಗೆ,
ನಿರಾಮಯವೆ ಅಂಗ ನಿರಾಮಯವೆ ಹಸ್ತ.
ನಿರಾಮಯವೆ ಪ್ರಸಾದ ಲಿಂಗ, ನಿರಾಮಯವೆಂಬ ಮುಖದಲ್ಲಿ,
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೬
ನಿರಾಮಯ ಐಕ್ಯಂಗೆ,
ನಿರಾಮಯವೆ ಅಂಗ ನಿರಾಮಯವೆ ಹಸ್ತ.
ನಿರಾಮಯವೆ ಮಹಾಲಿಂಗ.
ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ
ಸುಖವನು ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸಿ ನಿರಾಮಯಾತೀತವೆಂಬ
ನಿರ್ವಯಲನೈದಿದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೭
ಇನ್ನು ನಿರಂಜನ ದಶಚಕ್ರದ ಭೇದವದೆಂತೆಂದಡೆ :
ಪರತತ್ತ್ವ ಪೃಥ್ವಿಯೆಂದು
ಪರತತ್ತ್ವ ಅಪ್ಪುವೆಂದು
ಪರತತ್ತ್ವ ತೇಜವೆಂದು
ಪರತತ್ತ್ವ ವಾಯುವೆಂದು
ಪರತತ್ತ್ವ ಆಕಾಶವೆಂದು
ಪರತತ್ತ್ವ ಹೃದಯವೆಂದು
ಆಱು ಪ್ರಕಾರವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೮
ಪರತತ್ತ್ವ ಪೃಥ್ವಿಯ ಮೇಲೆ, ನಿರಂಜನ ಆಧಾರ ಚಕ್ರ.
ಅಲ್ಲಿಯ ಪದ್ಮ ಐನೂರುನಾಲ್ವತ್ತು ದಳ ಪದ್ಮ.
ಆ ಪದ್ಮದ ವರ್ಣ ಅಱವತ್ತುಸಾವಿರದಾಱುನೂರು ಕೋಟಿ
ಸೂರ್ಯ ಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ಐನೂಱು ನಾಲ್ವತ್ತಕ್ಷರ.
ಆ ಅಕ್ಷರ ವಾಚಾತೀತವಾಗಿಹುದು.
ಅಲ್ಲಿಯ ಶಕ್ತಿ, ನಿಃಕಲಶಕ್ತಿ ಅಲ್ಲಿಯ ನಾದವೆ ನಾದ.
ಅಚಲ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ಬೀಜಾಕ್ಷರ ಅಖಂಡ ಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩೯
ಪರತತ್ತ್ವ ಅಪ್ಪುವಿನ ಮೇಲೆ ನಿರಂಜನ ಸ್ವಾಧಿಷ್ಠಾನಚಕ್ರ
ಅಲ್ಲಿಯ ಪದ್ಮ ನಾನೂಱ ಐವತ್ತುದಳ ಪದ್ಮ.
ಆ ಪದ್ಮದ ವರ್ಣ ಎಪ್ಪತ್ತು ಸಾವಿರದಾಱುನೂಱುಕೋಟಿ
ಸೂರ್ಯಚಂದ್ರಾದಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ನಾನೂಱಐವತ್ತಕ್ಷರ
ಆ ಅಕ್ಷರ ಮನಾತೀತವಾಗಿಹುದು.
ಅಲ್ಲಿಯ ಶಕ್ತಿ ಆನಂದಶಕ್ತಿ.
ಅಚಲಾನಂದ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಪರನಾದ.
ಅಲ್ಲಿಯ ಬೀಜಾಕ್ಷರ ಪರಬ್ರಹ್ಮ ಸ್ವರೂಪವಾಗಿಹ
ಪರಮ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೦
ಪರತತ್ತ್ವ ತೇಜದ ಮೇಲೆ ನಿರಂಜನ ಮಣಿಪೂರಕ ಚಕ್ರ.
ಅಲ್ಲಿಯ ಪದ್ಮ ಮೂಱುನೂಱಱುವತ್ತುದಳ ಪದ್ಮ,
ಆ ಪದ್ಮದ ವರ್ಣ ಎಂಬತ್ತುಸಾವಿರದಾಱುನೂಱುಕೋಟಿ
ಸೂರ್ಯಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ಮೂಱುನೂಱಱುವತ್ತಕ್ಷರ
ಆ ಅಕ್ಷರ ವರ್ಣಾತೀತವಾಗಿಹುದು.
ಅಲ್ಲಿಯ ಶಕ್ತಿ ನಿತ್ಯಾನಂದ ಶಕ್ತಿ, ವಿಮಲ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಅಮಲ ನಾದ
ಅಲ್ಲಿಯ ಬೀಜಾಕ್ಷರ ಅಖಂಡ ಜ್ಯೋತಿ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೧
ಪರತತ್ತ್ವವಾಯುವಿನ ಮೇಲೆ ನಿರಂಜನ ಅನಾಹತ ಚಕ್ರ.
ಅಲ್ಲಿಯ ಪದ್ಮ ಇನ್ನೂಱಎಪ್ಪತ್ತುದಳ ಪದ್ಮ.
ಆ ಪದ್ಮದ ವರ್ಣ ತೊಂಬತ್ತುಸಾವಿರದಾಱುನೂಱುಕೋಟಿ.
ಸೂರ್ಯ ಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ಇನ್ನೂಱ ಎಪ್ಪತ್ತಕ್ಷರ.
ಆ ಅಕ್ಷರ ತತ್ತ್ವಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಮಯಶಕ್ತಿ ವಿಮಲಾನಂದ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ನಿರಾಳ ನಾದ
ಅಲ್ಲಿಯ ಬೀಜಾಕ್ಷರ ನಿರಂಜನ ಸಕಲ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೨
ಪರತತ್ತ್ವ ಆಕಾಶದ ಮೇಲೆ ನಿರಂಜನ ವಿಶುದ್ಧಿ ಚಕ್ರ.
ಅಲ್ಲಿಯ ಪದ್ಮ ನೂಱ ಎಂಬತ್ತು ದಳ ಪದ್ಮ.
ಆ ಪದ್ಮದ ವರ್ಣ, ನೂಱು ಸಾವಿರದಾಱುನೂಱು ಕೋಟಿ.
ಸೂರ್ಯ ಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ನೂಱ ಎಂಬತ್ತಕ್ಷರ.
ಆ ಅಕ್ಷರ ಜ್ಞಾನಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಮಯಾನಂದ ಶಕ್ತಿ, ಆನಂದ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ನಿರಾಳನಂದವೆಂಬ ಮಹಾನಾದ.
ಅಲ್ಲಿಯ ಬೀಜಾಕ್ಷರ ಅವಾಚ್ಯ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೩
ಪರತತ್ತ್ವ ಹೃದಯದ ಮೇಲೆ ನಿರಂಜನ ಆಜ್ಞಾಚಕ್ರ.
ಅಲ್ಲಿಯ ಪದ್ಮ ವಿಶ್ವತೋ ದಳ ಪದ್ಮ.
ಆ ಪದ್ಮದ ವರ್ಣ ಅನೇಕ ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ವಿಶ್ವತೋ ಅಕ್ಷರ.
ಆ ಅಕ್ಷರ ವಿಶ್ವಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಮಯ ನಂದಾತೀತಯೆಂಬ ಮಹಾಗಣೇಶ್ವರಿ.
ಅಲ್ಲಿಯ ನಾದ ಗುಹ್ಯನಾದ.
ನಿರಂಜನಾತೀತವೆಂಬ ಮಹಾಘನಲಿಂಗವೆ ಆಧಿದೇವತೆ.
ಅಲ್ಲಿಯ ಬೀಜಾಕ್ಷರ ನಿರಂಜನ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೪
ಇನ್ನು ನಿರಂಜನ ಷಟ್‌ಚಕ್ರದ ಮೇಲೆ ನಾಲ್ಕು ಚಕ್ರ ಉಂಟು
ಅದೆಂತೆಂದಡೆ :
ರಹಸ್ಯಕ್ಕು ಅತ್ಯಂತ ರಹಸ್ಯವಾಗಿಹುದು.
ಸೂಕ್ಷ್ಮಕ್ಕು ಅತ್ಯಂತ ಸೂಕ್ಷ್ಮವಾಗಿಹುದು.
ಶೂನ್ಯಕ್ಕು ಅತ್ಯಂತ ಶೂನ್ಯವಾಗಿಹುದು.
ಅಮಲಕ್ಕು ಅಮಲಾತೀತವಾಗಿಹುದೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೫
ಇನ್ನು ನಿರಂಜನ ಷಟ್‌ಚಕ್ರದ ಮೇಲಣ ನಾಲ್ಕು ಚಕ್ರಂಗಳ ಕ್ರಮ
ಅದೆಂತೆಂದಡೆ :
ಸ್ವಯಾನಂದ ಚಕ್ರವೆಂದು ಸ್ವಯಾನಂದ ಘನಚಕ್ರವೆಂದು,
ಸ್ವಯಾನಂದ ಮಹಾಘನಚಕ್ರವೆಂದು,
ಸ್ವಯಾನಂದ ಮಹಾಘನತೀತಚಕ್ರವೆಂದು ನಾಲ್ಕು ಚಕ್ರಂಗಳು.
ಅನೇಕ ಕೋಟಿ ಪದ್ಮವನೊಳಕೊಂಡು ಪದ್ಮವಿಲ್ಲದಿಹುದು.
ಅನೇಕಕೋಟಿ ವರ್ಣವನೊಳಕೊಂಡು ವರ್ಣವಿಲ್ಲದಿಹುದು.
ಅನೇಕಕೋಟಿ ಅಕ್ಷರವನೊಳಕೊಂಡು ಆಕ್ಷರವಿಲ್ಲದಿಹುದು.
ಅನೇಕ ಕೋಟಿ ಶಕ್ತಿಯನೊಳಕೊಂಡು ಶಕ್ತಿಯಿಲ್ಲದಿಹುದು.
ಅನೇಕ ಕೋಟಿ ಅಧಿದೇವತೆಯನೊಳಕೊಂಡು ಅಧಿದೇವತೆಯಿಲ್ಲದಿಹುದು.
ಅನೇಕಕೋಟಿ ನಾದವನೊಳಕೊಂಡು ನಾದವಿಲ್ಲದಿಹುದು.
ಅನೇಕಕೋಟಿ ಬೀಜಾಕ್ಷರವನೊಳಕೊಂಡು ಬೀಜವಿಲ್ಲದೆ ಬೆಳಗುತ್ತಿಹುದು.
ಆಚಕ್ರಂಗಳು ವಾಚ್ಯಕ್ಕೂ ವಾಚ್ಯತೀತವಾಗಿಹುದು,
ಮನಕ್ಕೂ ಮನಾತೀತವಾಗಿಹುದು.
ವರ್ಣಕ್ಕೂ ವರ್ಣಾತೀತವಾಗಿಹುದು.
ತತ್ತ್ವಕ್ಕೂ ತತ್ತ್ವಾತೀತವಾಗಿಹುದು.
ಜ್ಞಾನಕ್ಕೂ ಜ್ಞಾನಾತೀತವಾಗಿಹುದು.
ಉಪಮೆಗೂ ಉಪಮಾತೀತವಾಗಿಹುದು.
ಚಕ್ರಕ್ಕೂ ಚಕ್ರಾತೀತವಾಗಿಹುದು.
ಎಂದು ಅಸಿಪದ್ಮಾತೀತಾಗಮದಲ್ಲಿ ಪ್ರಸಿದ್ಧವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೬
ಇನ್ನು ನಿರಂಜನಾತೀತ ಷಟ್‌ಸ್ಥಲ ಬ್ರಹ್ಮವದೆಂತೆಂದಡೆ :
ನಿರಂಜನಾತೀತ ಭಕ್ತ,
ಶ್ರೀ ನಿರಂಜನಾತೀತ ಮಹೇಶ್ವರ, ನಿರಂಜನಾತೀತ ಪ್ರಸಾದಿ.
ನಿರಂಜನಾತೀತ ಪ್ರಾಣಲಿಂಗಿ, ನಿರಂಜನಾತೀತ ಶರಣ,
ನಿರಂಜನಾತೀತ ಐಕ್ಯ, ನಿರಂಜನಾತೀತ ಷಟ್‌ಸ್ಥಲ ಅಖಂಡಿತ,
ಅಪ್ರಮಾಣ ಅಗೋಚರ ಅಪ್ರಮೇಯ,
ವಾಚಾಮಗೋಚರಕತ್ತತ್ತವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೭
ಇನ್ನು ನಿರಂಜನಾತೀತ ಷಟ್‌ಸ್ಥಲದ ಅರ್ಪಿತಾವಧಾನದ ಭೇದವದೆಂತೆಂದಡೆ :
ನಿರಂಜನಾತೀತ ಭಕ್ತಂಗೆ ನಿರಂಜನಾತೀತವೇ ಅಂಗ
ನಿರಂಜನಾತೀತವೇ ಹಸ್ತ, ನಿರಂಜಾನಾತೀತವೇ ಆಚಾರಲಿಂಗ
ನಿರಂಜನಾತೀತವೆಂಬ ಮುಖದಲ್ಲಿ, ನಿರಂಜನಾತೀತವೆಂಬ
ಮುಖವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೮
ನಿರಂಜನಾತೀತವೆಂಬ ಮಹೇಶ್ವರಂಗೆ
ನಿರಂಜನಾತೀತವೆ ಅಂಗ ನಿರಂಜನಾತೀತವೆ ಹಸ್ತ
ನಿರಂಜನಾತೀತವೆ ಗುರುಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ,
ನಿರಂಜನಾ ತೀತಾನಂದವೆಂಬ ಸುಖದ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೪೯
ನಿರಂಜನಾತೀತ ಪ್ರಸಾದಿಗೆ ನಿರಂಜನಾತೀತವೇ ಅಂಗ
ನಿರಂಜನಾತೀತವೆ ಹಸ್ತ ನಿರಂಜನಾತೀತವೆ ಶಿವಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೦
ನಿರಂಜನಾತೀತ ಪ್ರಾಣಲಿಂಗಿಗೆ
ನಿರಂಜನಾತೀತವೇ ಅಂಗ
ನಿರಂಜನಾತೀತವೇ ಹಸ್ತ
ನಿರಂಜನಾತೀತವೇ ಜಂಗಮಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೧
ನಿರಂಜನಾತೀತ ಶರಣಂಗೆ
ನಿರಂಜನಾತೀತವೆ ಅಂಗ
ನಿರಂಜನಾತೀತವೆ ಹಸ್ತ
ನಿರಂಜನಾತೀತವೆ ಪ್ರಸಾದ ಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೨
ನಿರಂಜನಾತೀತ ಐಕ್ಯಂಗೆ
ನಿರಂಜನಾತೀತವೆ ಅಂಗ
ನಿರಂಜನಾತೀತದೆ ಹಸ್ತ
ನಿರಂಜನಾತೀತವೆ ಮಹಾಲಿಂಗ.
ನಿರಂಜನಾತೀತವೆಂಬ ಮುಖದಲ್ಲಿ
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೩
ನಿರಂಜನಾತೀತ ಷಟ್‌ಸ್ಥಲ ಅಂಗವಾಗಿ
ಆ ನಿರಂಜನಾತೀತ ಷಟ್‌ಸ್ಥಲ ಬ್ರಹ್ಮವನೊಡಗೂಡಿದ
ಮಹಾಶರಣಂಗೆ
ನಮೋ ನಮೋ ಎಂದು ಬದುಕಿದೆನು ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

ಚಕ್ರಾತೀತಾಗಮ || ಅಸಿಪದಾತೀತಾಗಮದಲ್ಲಿ ನಿರಾಳ ದಶಚಕ್ರ, ನಿರಾಮಯ ಷಟ್‌ಸ್ಥಲ ನಿರಂಜನ ದಶಚಕ್ರ ನಿರಂಜನಾತೀತ ಷಟ್‌ಸ್ಥಲ ಬ್ರಹ್ಮವನು ಪಾರ್ವತಾದೇವಿಯರಿಗೆ ಶಿವನು ನಿರೂಪಿಸಿದರೆಂದು, ಆ ಸದ್ಗುರುಸ್ವಾಮಿ ನಿರೂಪಿಸಿದ ವಚನ, ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ.

೩೫೪
ಇನ್ನು ಅವಸ್ಥೆಗಳ ದರ್ಶನಭೇದವದೆಂತೆಂದಡೆ :
ಪ್ರೇರಕಾವಸ್ಥೆ ಒಂದು, ಮಧ್ಯಾವಸ್ಥೆ ಐದು,
ಕೆಳಗಾದವಸ್ಥೆ ಐದು, ಮೇಲಾದವಸ್ಥೆ ಐದು,
ನಿರ್ಮಲಾವಸ್ಥೆ ಐದು,
ಈ ಇಪ್ಪತ್ತುನಾಲ್ಕು ಅವಸ್ಥೆಯ ದರ್ಶನದ ಭೇದದ
ಶಿವಯೋಗಿ ಲಿಂಗಾನುಭಾವಿ ಬಲ್ಲನಲ್ಲದೆ
ಮಿಕ್ಕಿನ ವೇಷಧಾರಿ ಎತ್ತಬಲ್ಲನೊ,
ಅಪ್ರಮಾಣ ಕೂಡಲಸಂಗಮದೇವ.

೩೫೫
ಇನ್ನು ಪ್ರೇರಕಾವಸ್ಥೆಯ ದರ್ಶನವದೆಂತೆಂದಡೆ :
ಶಿವತತ್ತ್ವವೈದು, ಕಲಾದಿಗಳೇನು, ಕರಣ ನಾಲ್ಕು,
ಜ್ಞಾನೇಂದ್ರಿಯಂಗಳಲ್ಲಿ ಶ್ರೋತ್ರ ಒಂದು
ಭೂತಂಗಳಲ್ಲಿ ಆಕಾಶ ಒಂದು.
ಈ ಹದಿನೆಂಟು ಕರಣಂಗಳೊಡನೆ ಕೂಡಿ
ಶಬ್ದವ ಕೇಳುವ ಅವಸರ ಮತ್ತಂ ಉಂಟಾದ
ಇಂದ್ರಿಯಂಗಳ ಕಂಡುಕೊಂಬುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೬
ಇನ್ನು ಮಧ್ಯಾವಸ್ಥೆಯ ದರ್ಶನವದೆಂತೆಂದಡೆ :
ಜಾಗ್ರತದಲ್ಲಿ ಅತೀತವಾವುದು?
ಮುಂದೆ ಕಂಡವನ ಈಗ ಅಱಿಯದಿಪ್ಪುದು ಜಾಗ್ರದಲ್ಲಿ ಅತೀತವು.
ಜಾಗ್ರದಲ್ಲಿ ತುರಿಯವಾವುದು?
ಪುರುಷ ತತ್ತ್ವದೊಡನೆ ಪ್ರಾಣವಾಯು ಕೂಡಿಕೊಂಡು
ಇವನಱಿಯದ ಹಾಂಗೆ.
ಉಸುರ ಬಿಡುವದು ಜಾಗ್ರದಲ್ಲಿ ತುರಿಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೭
ಜಾಗ್ರದಲ್ಲಿ ಸುಷುಪ್ತಿಯಾವುದು?
ಪುರುಷ ಪ್ರಾಣವಾಯು ಚಿತ್ತದೊಡನೆ ಕೂಡಿ
ಅವನ ಕಂಡ ಠಾವ ಹೇಳುವುದು
ಜಾಗ್ರದಲ್ಲಿ ಸುಷುಪ್ತಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೮
ಜಾಗ್ರದಲ್ಲಿ ಸ್ವಪ್ನವಾವುದು?
ಶಬ್ದಾದಿಗಳೈದು, ಶ್ರೋತ್ರಾದಿಗಳೈದು, ವಚನಾದಿಗಳೈದು,
ವಾಗಾದಿಗಳೈದು, ಕರಣ ನಾಲ್ಕು, ಪುರುಷನೊಬ್ಬ,
ಇಂತೀ ಇಪ್ಪತ್ತೈದು ಕರಣಂಗಳೊಡನೆ ಕೂಡಿ
ಅವನನು ಅವನ ಕಂಡ ಠಾವನು ಹೇಳುವುದು
ಜಾಗ್ರದಲ್ಲಿ ಸ್ವಪ್ನನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫೯
ಜಾಗ್ರದಲ್ಲಿ ಜಾಗ್ರವಾವುದು?
ಪುರುಷನೊಬ್ಬ, ವಾಯು ಹತ್ತು,
ನಾಡಿ ನಾಲ್ಕು, ಶಬ್ದಾದಿಗಳೈದು, ವಚನಾದಿಗಳೈದು,
ಶ್ರೋತ್ರಾದಿಗಳೈದು, ವಾಗಾದಿಗಳೈದು
ಈ ಮೂವತ್ತೈದು ಕರಣಂಗಳೊಡನೆ ಕೂಡಿ
ಇವನ ತಬ್ಬಿಕೊಳ್ಳತಕ್ಕ ಪ್ರಿಯವ ಮಾಡುವದು
ಜಾಗ್ರದಲ್ಲಿ ಜಾಗ್ರ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೦
ಮುಂದೆ ಹೇಳಿದ ಪ್ರೇರಕಾವಸ್ಥೆ
ಅಲ್ಲಿ ಹೇಳಿದ ಕರಣಂಗಳು ಹದಿನೆಂಟೊಡನೆ ಕೂಡಿ
ಇವನ ನಾಮ ಜಾತಿ ಗುಣತ್ರಯಂಗಳೆಲ್ಲವನು
ವಿಚಾರಿಸಿ ಅಱಿದು ಸಂದೇಹಗಳು ಕೆಡುವದು
ಪ್ರೇರಕಾವಸ್ಥೆಯೆಂದಱಿವುದು.
ಇನ್ನು ಕೆಳಗಾದವಸ್ಥೆಯ ದರ್ಶನವದೆಂತೆಂದಡೆ :
ಸ್ವಪ್ನವಾವುದು?
ಶ್ರೋತ್ರಾದಿಗಳೈದು, ವಾಗಾದಿಗಳೈದು, ಹತ್ತುಕರಣಂಗಳು,
ಭ್ರೂಮಧ್ಯದಲ್ಲಿ ನಿಂದು ಶಬ್ದಾದಿಗಳೈದು
ವಚನಾದಿಗಳೈದು, ವಾಯುಹತ್ತು
ಕರಣ ನಾಲ್ಕು ಪುರುಷನೊಬ್ಬ
ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು
ಆನೆಯನೇರುವ ಹಾಂಗೆ ಮಾಲೆಯಧರಿಸುವ ಹಾಂಗೆ,
ಕಂಡ ಅವಸರವು ಸ್ವಪ್ನನೋಡಾ,
ಅಪ್ರಮಾಣ ಕೂಡಲಸಂಗಮದೇವ.


[1]      ಸಮರ್ಪಿಸುವನು (ತಾ.ಪ್ರ. ೭೬)

[2]