೩೬೧
ನಾದ ಬಿಂದು ಸಾದಾಖ್ಯ ಇಂಬಾಗಿ ನಿಂದು
ಪುರುಷನನು, ಪ್ರಾಣವಾಯುವನು, ಚಿತ್ತವನು,
ಹೃದಯಸ್ಥಾನದಲ್ಲಿ ದರ್ಶನವ ಮಾಡುವದು
ಪರಮ ಸುಷುಪ್ತಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೨
ನಾದಬಿಂದುಗಳಿಂಬಾಗಿ ನಿಂದು ಪುರುಷನು ಪ್ರಾಣವಾಯುವನು
ನಾಭಿಸ್ಥಾನದಲ್ಲಿ ದರ್ಶನವ ಮಾಡುವುದು ಪರಮತುರೀಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

[1]

೩೬೩
ಸುಷುಪ್ತಿ ಯಾವುದು?
ಕರಣಾದಿಗಳೈದು, ಶಬ್ದಾದಿಗಳೈದು ಕರಣದಲ್ಲಿ ಚಿತ್ತವಲ್ಲದೆ
ಮೂಱು ದಶ ವಾಯುಗಳಲ್ಲಿ
ಪ್ರಾಣವಾಯುವಲ್ಲದೆ ವಾಯು ಒಂಬತ್ತು.
ಈ ಇಪ್ಪತ್ತುಮೂಱು ಕರಣಂಗಳು ಕಂಠಸ್ಥಾನದಲ್ಲಿ ನಿಂದು
ಚಿತ್ತವನು, ಪ್ರಾಣವಾಯುವನು, ಸ್ಪರ್ಶನವನು
ಈ ಮೂಱು ಕರಣಂಗಳೊಡನೆ ಹೃದಯಸ್ಥಾನದಲ್ಲಿ ನಿಂದು,
ಅನೇಕ ಚಿಂತನೆಯ ಮಾಡುವುದು
ಜಾಗ್ರದಲ್ಲಿ ಬಂದರೆ ಹೇಳಲರಿಯದಿಪ್ಪುದು ಸುಷುಪ್ತಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೪
ತುರೀಯವಾವುದು?
ಚಿತ್ತವೊಂದು ಹೃದಯಸ್ಥಾನದಲ್ಲಿ ನಿಂದು
ಪುರುಷನನು ಪ್ರಾಣವಾಯುವನು ನಾಭಿಸ್ಥಾನದಲ್ಲಿ ನಿಂದು
ಶರೀರಕ್ಕೆ ಕಾವಲಾಗಿ ನಿಂದು, ಸಂಧಿಸುವುದು ತುರೀಯ
ತುರೀಯಾತೀತವದು.
ನಾಭಿಸ್ಥಾನದಲ್ಲಿ ಪ್ರಾಣವಾಯು ನಿಂದು
ಪುರುಷನ ಮೋಹಿನಿ ಸ್ವರೂಪವಾಗಿ ಕಂಡು
ಒಂದೆಂಬುದ ಕೆಟ್ಟು ಮೂಲಾಧಾರದಲ್ಲಿಹುದು ತುರೀಯಾತೀತ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೫
ಇನ್ನು ಮೊದಲಾದವಸ್ಥೆಯ ದರ್ಶನವದೆಂತೆಂದಡೆ :
ಶುದ್ಧ ತತ್ತ್ವಕ್ಕೈದು ಇಂಬಾಗಿ ನಿಂದು
ಅತೀತ ಮೊದಲಾಗಿ ದರ್ಶನವ ಮಾಡುವುದು.
ಅದೆಂತೆಂದಡೆ :
ನಾದ ಇಂಬಾಗಿ ನಿಂದು ಒಂದೆಂಬುದು ಇಲ್ಲದಿದ್ದ ಠಾವನು.
ಪುರುಷನನು ಮೂಲಾಧಾರದಲ್ಲಿ ದರ್ಶನವ ಮಾಡುವುದು,
ತುರೀಯಾತೀತ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೬
ನಾದ ಬಿಂದು ಸಾದಾಖ್ಯ ಈ ಸ್ವರವು ಇಂಬಾಗಿ ನಿಂದು
ವಚನಾದಿಗಳೈದು, ಶಬ್ದಾದಿಗಳೈದು
ಕರಣ ನಾಲ್ಕು, ವಾಯು ಹತ್ತು, ಪುರುಷನೊಬ್ಬ
ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು
ದರ್ಶನವ ಮಾಡುವದು ಪರಮ ಸ್ವಪ್ನ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೭
ಶಿವತತ್ತ್ವವೈದು ಇಂಬಾಗಿ ನಿಂದು
ಪುರುಷನೊಬ್ಬ, ವಚನಾದಿಗಳೈದು, ಶಬ್ದಾದಿಗಳೈದು
ಕರಣ ನಾಲ್ಕು, ಶ್ರೋತ್ರಾದಿಗಳೈದು, ವಾಗಾದಿಗಳೈದು, ವಾಯು ಹತ್ತು,
ಈ ಮೂವತ್ತೈದು ಕರಣಂಗಳೊಡನೆ
ಭ್ರೂಮಧ್ಯದಲ್ಲಿ ದರ್ಶನವ ಮಾಡುವುದು
ಪರಮ ಜಾಗ್ರತ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೬೮
ಇನ್ನು ಕೇವಲಾವಸ್ಥೆಯ ದರ್ಶನವದೆಂತೆಂದಡೆ :
ಮುಂದೆ ಹೇಳಿದ ಅವಸ್ಥೆಗಳನು ಬಿಟ್ಟು ಬೇಱಾಗಿ
ಒಂದೆಂಬುದ ಕೆಟ್ಟ ಠಾವು ಕೇವಲಾವಸ್ಥೆ
ಇನ್ನು ಸಕಲಾವಸ್ಥೆಯದರ್ಶನವದೆಂತೆಂದಡೆ :
ಮುಂದೆ ಹೇಳಿದ ಆ ಸಕಲವನು ಕಂಡ ಠಾವು ನೋಡಾ.
ಅಪ್ರಮಾಣ ಕೂಡಲಸಂಗಮದೇವ.

೩೬೯
ಇನ್ನು ಶುದ್ಧಾವಸ್ಥೆಯ ದರ್ಶನವೆಂತೆಂದಡೆ :
ಮುಂದೆ ಹೇಳಿದ ಕೇವಲದಲ್ಲಿ ಒಂದೆಂಬುದ ಕೆಟ್ಟ ಠಾವನು
ಸಕದಲ್ಲಿ ಕರಣಂಗಳ ಕೂಟವನು ಮತ್ತೆಲ್ಲವನು ಬಿಟ್ಟು
ಈ ಎರಡವಸ್ಥೆಯು ಇವನಿಗೆ ಪ್ರತೀಯವೆಂದು ಕಂಡುದು ಶುದ್ಧಾವಸ್ಥೆ
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೭೦
ಇನ್ನು ನಿರ್ಮಲಾವಸ್ಥೆಯ ದರ್ಶನವ ಮಾಡುವಾಗ
ಪಂಚಲಿಂಗಗಳನು ದರ್ಶನವ ಮಾಡುವುದು.
ಅದೆಂತೆಂದಡೆ :
ಆಣವ ಮಾಯೆ ಕಾರ್ಮಿಕ ಮಹಾಮಾಯೆ
ತಿರೋದಾಯ ಮಲ.
ಆಣವ ಮಲವಾವುದು?
ಶಿವನ ನೆನೆಯಲೀಸದಿಹುದು,
ಮಾಯೆಯಾವುದು?
ತನು ಕರಣ ಭುವನ ಭೋಗಂಗಳ ಬಯಸುತ್ತಿಹುದು.
ಕಾರ್ಮಿಕವಾವುದು?
ಪುಣ್ಯಪಾಪಂಗಳೆಂದು ಹೆಸರಾಗಿ ಸುಖದುಃಖಂಗಳಾಗಿಹುದು.
ಮಹಾಮಾಯೆ ಯಾವುದು?
ಪಂಚಕರ್ತನು ರೂಪಾದಿ ದೇಹಾಗಿ ಪ್ರಪಂಚಗಳ ಪ್ರೇರಿಸಿಕೊಂಡಿಹುದು.
ತಿರೋದಾಯ ಮಲವಾವುದು?
ಮಱಸಿ ಮಾಯಾ ಭೋಗದಲ್ಲಿಯೇ ಬಿದ್ದು ಹೊರಳಾಡಿಸುತ್ತಿಹುದು.
ಈ ಪ್ರಕಾರದಲ್ಲಿ ಪಂಚಮಲಂಗಳನು ಕಂಡುಕೊಂಬುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೧
ಇನ್ನು ಮುಂದೆ ಹೇಳಿದ ನಿರ್ಮಲಾವಸ್ಥೆಯ ದರ್ಶನವದೆಂತೆಂದಡೆ :
ಹೀಂಗೆ ಪಂಚಮಲಂಗಳ ತೋಱಿದ ಜ್ಞಾನಶಕ್ತಿಗು ಮೊದಲು
[2]ಪೂರ್ಣ[3]ಬೋಧವಾಗಿ ನಿಂದ, ಠಾವು ನಿರ್ಮಲ ಜಾಗ್ರ.
ಮುಂದೆ ಹೇಳಿದ ‘ಪೂರ್ಣ’ಬೋಧಿ ನಿರ್ವಿಕಾರ ಹುಟ್ಟುವ ಬಗೆಗೂ
ಮೊದಲಾದ ಠಾವು ನಿರ್ಮಲಸ್ವಪ್ನ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೨
ಪರಮ ಭೋಗದಲ್ಲಿಯೆ ಸಂತೋಷವನಱಿದು
ನಿಷ್ಪತ್ತಿಯಾಗಿ ನಿಂದುದೆ ನಿರ್ಮಲ ಸುಷುಪ್ತಿ,
ಮುಂದೆ ಹೇಳಿದ ಪರಮ ಭೋಗವನು ಬಿಟ್ಟು,
[4]ಮೇಲಾದ[5] ಪರಮಾನಂದಕ್ಕೆ ಮೊದಲು ನಿರ್ಮಲ ತುರ್ಯ.
ಮುಂದೆ ಹೇಳಿದ ಪರಮಾನಂದವನು ಸುಟ್ಟ ಠಾವು,
ನಿರ್ಮಲ ತುರ್ಯಾತೀತ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೩
ಅವಸ್ಥೆಗಳಿಪ್ಪತ್ತುನಾಲ್ಕನು
[6]ಹಿಂದೆ[7] ದರ್ಶನವ ಮಾಡಿದಾತ ಶಿವಮುಕ್ತನು.
ಈ ಶಿವ ಮುಕ್ತನಿಗೆ ಪಂಚ ಮಲಂಗಳು ಪಂಚ ಶಕ್ತಿಗಳು,
ಬಿಟ್ಟ ಪ್ರಕಾರ ದರ್ಶನವದೆಂತೆಂದಡೆ :
ಮುಂದೆ ನಿಂದ ಮಾಯಾಭೋಗದ ಇಚ್ಛೆಯಲ್ಲದುದೆ
ತಿರೋಧಾನ ಮಲನಷ್ಟ. ಕರ್ಮವ [ತೊಱೆದು] ಸುಖದುಃಖಗಳು ಸಮವಾಗಿ ಪಂಚಕೃತ್ಯಂಗಳು ಕೆಟ್ಟುದಾಗಿ,
ಮಹಾ ಮಾಯೆ ನಷ್ಟ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೪
ಅದು ಅವಳು ಅದು ತಾನೆಂಬ ಜ್ಯೋತಿ ಅಡಗಿತ್ತಾಗಿ ಕರ್ಮ ನಷ್ಟ,
ರೂಪ ಕೆಟ್ಟುದಾಗಿ ಮಾಯೆ ನಷ್ಟ.
ಅಱಿವು ತಲೆದೋಱಿತ್ತಾಗಿ ಆಣವ ನಷ್ಟವು.
ಶಿವಪ್ರಕಾಶವಾದ ಕಾರಣ ತಿರೋಧಾನ ಶಕ್ತಿ ನಷ್ಟ.
ಫಲಪದಂಗಳ ಬಯಕೆ ಇಲ್ಲದೆ ಕಾರಣ ಇಚ್ಛಾಶಕ್ತಿ ನಷ್ಟ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೫
ಅದಂಥಾದಂಥಾದೆಂದು ನೋಡುವ ರೂಪು ನಿರೂಪವ ಬಿಟ್ಟು
ಅತ್ತತ್ತವಾಗಿ ಸ್ವಾನುಭಾವ ಬಲಿಯಲಿಕ್ಕಾಗಿ ಜ್ಞಾನಶಕ್ತಿ ನಷ್ಟವು.
ಕೂಟ ಕೆಡಲಿಕ್ಕಾಗಿ ಕ್ರಿಯಾಶಕ್ತಿ ನಷ್ಟವು.
ನಿರ್ವಿಕಾರವು ಕೆಟ್ಟ ಅನುಭವಿಸಲಿಕ್ಕಾಗಿ ಪರಾಶಕ್ತಿ ನಷ್ಟವು.
ಹಿಂಗೆ ದರ್ಶನವ ಮಾಡುವದ ನಿತ್ಯ ನಿರಂಜನ,
ನಿರಮಾಯನಿರಾಳ ಶರಣಂಗಲ್ಲದೆ,
ಮಿಕ್ಕಿನ ವೇಷಧಾರಿಗಳೆತ್ತ ಬಲ್ಲರು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೬
ಇನ್ನು ಜ್ಞಾನಾವಸ್ಥೆಯ ದರ್ಶನವದೆಂತೆಂದಡೆ :
ತನ್ನ ತಾನಱಿದು ಪರಮ ಜ್ಞಾನವ ತಿಳಿದುದೇ ಜ್ಞಾನ ಜಾಗ್ರ.
ಆ ಪರಮ ಜ್ಞಾನ ನಿವಾಸಿಯಾಗಿಹುದೇ ಜ್ಞಾನ ಸ್ವಪ್ನ.
ಆ ಪರಮ ಜ್ಞಾನ ನಿವಾಸದಲ್ಲಿ ನಿಂದು
ಲಿಯ್ಯವಾಗಿಹುದೇ ಜ್ಞಾನ ಸುಷುಪ್ತಿ.
ಆ ಜ್ಞಾನ ಸುಷುಪ್ತಿಯಲ್ಲಿ ತಲೆದೋಱಿದ
ಸುಜ್ಞಾನವೇ ಜ್ಞಾನ ತುರ್ಯ.
ಆ ಸುಜ್ಞಾನವನೊಳಗೊಂಡು ನಿಃಶಬ್ದವೆ ಜ್ಞಾನ ವ್ಯೋಮ.
ಆ ಜ್ಞಾನ ವ್ಯೋಮವನೊಳಗೊಂಡ ಮಹಾಜ್ಞಾನವೆ,
ಜ್ಞಾನ ವ್ಯೋಮಾತೀತವೆಂದು
ಶ್ರುತಿಗಳು ಸಾರುತ್ತಿಹುದು ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೩೭೭
ಇನ್ನು ಶಿವಾವಸ್ಥೆಯ ದರ್ಶನವದೆಂತೆಂದಡೆ :
ಆತ್ಮನು ತನ್ನ ತಾನಱಿದು ಶಿವನಱಿವಾಗ
ಶಿವಜಾಗ್ರವೆನಿಸಿತ್ತು.
ಆತ್ಮನು ಶಿವನಱಿದು ಬೆರಸುವ ತವಕವೆ
ಶಿವಸ್ವಪ್ನವೆಂದೆನಿಸಿತ್ತು.
ಆತ್ಮನು ಶಿವನ ಬೆರಸಿನಿಂದುದೆ ಶಿವಸುಷುಪ್ತಿ.
ಆತ್ಮನು ತಾನಱಿದು ತಾನುಳಿದು ನಿಂದುದೆ ಶಿವತುರ್ಯ.
ಆತ್ಮನು ತಾನ[8]ಱಿ[9]ದು ಶಿವನುಳಿದು ನಿಂದುದೆ ಶಿವವ್ಯೋಮ,
ಶಿವನೆಂಬ ನಾಮ ನಿಃಶಬ್ದವಾಗಿಹುದೆ ಶಿವ ವ್ಯೋಮಾತೀತವೆಂದು
ಶ್ರುತಿಗಳು ಸಾರುತ್ತವೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೮
ಇನ್ನು ನಿರಾಳಾವಸ್ಥೆಯ ದರ್ಶನವದೆಂತೆಂದಡೆ :
ನಿರಾಳಮಯವನಱಿದು ಆ ನಿರಾಳಮಯದೊಳು
[10]ಪೂರ್ಣ[11]ಬೋಧವಾಗಿ ನಿಂದುದೇ ನಿರಾಳ ಜಾಗ್ರ.
ಮುಂದೆ ಹೇಳಿದ ಪೂರ್ಣಬೋಧ ನಿರ್ವಿಕಾರ ಹುಟ್ಟುವ ಬಗೆಗು
ಮೊದಲಾದುದೆ ನಿರಾಳ ಸ್ವಪ್ನ.
ಮುಂದೆ ಹೇಳಿದ ನಿರಾಳ ಭೋಗದಲ್ಲಿ ಸಂತೋಷವನಱಿದ
ನಿಷ್ಪತ್ತಿಯಾಗಿ ನಿಂದುದೆ ನಿರಾಳ ಸುಷುಪ್ತಿ,
ಮುಂದೆ ಹೇಳಿದ ನಿರಾಳ ಭೋಗವ ಬಿಟ್ಟು
[12]ಮೇಲಾದ[13] ನಿರಾಳಾನಂದಕ್ಕೆ ಮೊದಲು ನಿರಾಳ ತುರ್ಯ.
ಮುಂದೆ ಹೇಳಿದ ನಿರಾಳಾನಂದ ಸುಟ್ಟ ಠಾವು ನಿರಾಳವ್ಯೋಮ.
ನಿರಾಳವ್ಯೋಮವ ಮೆಟ್ಟಿ ಮೇಲಾದುದೆ ನಿರಾಳ ವ್ಯೋಮಾತೀತವೆಂದು
ಅಸಿಪದಾತೀತಾಗಮದಲ್ಲಿ ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೭೯
ಇನ್ನು ನಿರಂಜನಾವಸ್ಥೆಯ ದರ್ಶನವದೆಂತೆಂದಡೆ :
ನಿರಂಜನವೆಂಬ ನಿತ್ಯಾನಂದ ಪೂರ್ಣನಿವಾಸವನಱಿದು
ಆ ನಿತ್ಯಾನಂದ ಪೂರ್ಣ ನಿವಾಸದೊಳು ನಿಂದುದೆ ನಿರಂಜನ ಜಾಗ್ರ.
ಆ ನಿತ್ಯಾನಂದ ಪೂರ್ಣ ನಿವಾಸದೊಳು ವಿಕಾರ ನಿರ್ವಿಕಾರವಿಲ್ಲದಿಹುದೆ, ನಿರಂಜನ ಸ್ವಪ್ನ.
ಆ ನಿತ್ಯಾನಂದ ಪೂರ್ಣ ನಿವಾಸದೊಳು ಸಂತೋಷವಱಿದು
ನಿಷ್ಪತ್ತಿಯಾಗಿ ನಿಂದುದೆ ನಿರಂಜನ ಸುಷುಪ್ತಿ.
ಆ ನಿತ್ಯಾನಂದ ಪೂರ್ಣ ನಿವಾಸವ ಬಿಟ್ಟು ಮೇಲಾದ,
ನಿತ್ಯಾನಂದಾತೀತಕ್ಕೆ ಮೊದಲು ನಿರಂಜನ ತುರ್ಯ,
ಆ ನಿತ್ಯಾನಂದಾತೀತವ ಸುಟ್ಟ ಠಾವು ನಿರಂಜನ ವ್ಯೋಮ.
ಆ ನಿರಂಜನ ವ್ಯೋಮವ ಮೆಟ್ಟಿ ಮೇಲಾದುದೆ ನಿರಂಜನ ವ್ಯೋಮಾತೀತವೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಸಾರುತ್ತಿಹುದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

ಅವಸ್ಥೆಗಳ ದರ್ಶನದ ವಚನ ಸಮಾಪ್ತ ಶ್ರೀ ಮಂಗಲ ಮಹಾಶ್ರೀ
ಶ್ರೀಮದ್ಗುರು ಗಣೇಶಾಯ ನಮಃ ||

೩೮೦
ಇನ್ನು ಷಡಧ್ವದುತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ
ಹೃದಯಮಂತ್ರ ಉತ್ಪತ್ಯ.
ಆ ಪ್ರಣವದ ದರ್ಪಣಾಕಾರದಲ್ಲಿ ಶಿರೋ ಮಂತ್ರ ಉತ್ಪತ್ಯ.
ಆ ಪ್ರಣವದ ಅರ್ಧ ಚಂದ್ರಕದಲ್ಲಿ ಶಿಖಾ ಮಂತ್ರ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ಕವಚ ಮಂತ್ರ ಉತ್ಪತ್ಯ.
ಆ ಪ್ರಣವದ ದಂಡಕಸ್ವರೂಪದಲ್ಲಿ ನೇತ್ರ ಮಂತ್ರ ಉತ್ಪತ್ಯ.
ಆ ಪ್ರಣವದ ತಾರಕಾ ಸ್ವರೂಪದಲ್ಲಿ ಅಸ್ತ್ರ ಮಂತ್ರ ಉತ್ಪತ್ಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೮೧
ಮತ್ತಂ ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನ್ಯ ವಕ್ತ್ರ ಉತ್ಪತ್ಯ.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷ ಮುಖ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರ ವಕ್ತ್ರ ಉತ್ಪತ್ಯ.
ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವ ವಕ್ತ್ರ ಉತ್ಪತ್ಯ.
ಆ ಪ್ರಣವದ ತಾರಕಾಸ್ವರೂಪದಲ್ಲಿ ಸದ್ಯೋಜಾತ ವಕ್ತ್ರ ಉತ್ಪತ್ಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೮೨
ಈಶಾನ್ಯ ವಕ್ತ್ರದಲ್ಲಿ ಈಶಾನ್ಯ ಮಂತ್ರ ಉತ್ಪತ್ಯ.
ತತ್ಪುರುಷ ವಕ್ತ್ರದಲ್ಲಿ ತತ್ಪುರುಷ ಮಂತ್ರ ಉತ್ಪತ್ಯ.
ಅಘೋರ ವಕ್ತ್ರದಲ್ಲಿ ಅಘೋರ ಮಂತ್ರ ಉತ್ಪತ್ಯ.
ವಾಮದೇವ ವಕ್ತ್ರದಲ್ಲಿ ವಾಮದೇವ ಮಂತ್ರ ಉತ್ಪತ್ಯ.
ಸದ್ಯೋಜಾತ ವಕ್ತ್ರದಲ್ಲಿ ಸದ್ಯೋಜಾತ ಮಂತ್ರ ಉತ್ಪತ್ಯ,
ಈ ಹನ್ನೊಂದು ಮಂತ್ರವು ಸಪ್ತಕೋಟಿ ಮಹಾಮಂತ್ರಂಗಳ ಸಾರವಾದಂಥಾದ್ದು.
ಇವು ಮಂತ್ರಾಧ್ವ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೮೩
ಇನ್ನು ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳುತ್ಪತ್ಯವೆಂತೆಂದಡೆ :
ಅನೇಕಕೋಟಿ ಸೂರ್ಯಚಂದ್ರಾಗ್ನಿಮಯವಾಗಿಹ
ಮಹಾಜ್ಯೋತಿರ್ಮಯ ಲಿಂಗದಲ್ಲಿ ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳುತ್ಪತ್ಯ-
ತೊಂಬತ್ತುನಾಲ್ಕು ವ್ಯೋಮ ವ್ಯಾಪಿ ಪದಂಗಳ ವಿವರವದೆಂತೆಂದಡೆ :
ವ್ಯೋಮವ್ಯಾಪಿನೇ ವ್ಯೋಮರೂಪಾಯ, ಸರ್ವವ್ಯಾಪಿನೇ ಶಿವಾಯ,
ಈಶಾನ್ಯ ಮೂರ್ಧ್ನಾಯ, ತತ್ಪುರುಷ ವಕ್ತ್ರಾಯ, ಅಘೋರ ಹೃದಯಾಯ,
ವಾಮದೇವ ಗುಹ್ಯಾಯ, ಸದ್ಯೋಜಾತ ಮೂರ್ತಯೇ, ಓಂ ನಮೋ ನಮಃ
ಗುಹ್ಯಾತಿ ಗುಹ್ಯಾಯ, ಗೋಷ್ಠ್ರ ಅಭಿಧಾನಾಯ,
ಸರ್ವೇ ಯೋಗಾಧಿಕೃತಾಯ, ಜ್ಯೋತಿರೂಪಾಯ,
ಪರಮೇಶ್ವರಪರಾಯ, ಚೇತನಾಚೇತನ ವ್ಯೋಮಿನ್, ವ್ಯಾಪಿನ್, ಅರೂಪಿನ್,
ರೂಪಿನ್, ಪ್ರಥಮತಃ ಪ್ರಥಮಃ ತೇಜಸ್ತೇಜಃ. ಜ್ಯೋತಿರ್ಜೋತಿಃ, ಅರೂಪಃ
ಅನಿಲಿನಃ, ಅಧೂಮಃ, ಅಭಸ್ಮಃ, ಅನಾದೇರನಾದಿಃ, ನಾ, ನಾ, ನಾ.
ಧೂ, ಧೂ, ಧೂ, ಓಂ ಭೂ, ಓಂ ಭುವಃ, ಓಂ ಸ್ವಹಃ,
ಅನಿಧನಃ, ನಿಧನೋದ್ಭವಃ, ಶಿವಃ ಶರ್ವಃ, ಪರಮಾತ್ಮನ್, ಮಹೇಶ್ವರಃ,
ಮಹಾತೇಜಃ, ಯೋಗಾಧಿಪತೆ, ಮುಂಚ ಮುಂಚ, ಪ್ರಮಥ ಪ್ರಮಥ,
ಶರ್ವ ಶರ್ವ, ಭವ ಭವ, ಭವಾದ್ಭವ, ಸರ್ವ ಭೂತ ಸುಖಪ್ರದ,
ಸರ್ವಸಾಂಗತ್ಯಕರ, ಬ್ರಹ್ಮವಿಷ್ಣುರುದ್ರಪರ, ಅರ್ಚಿತಾರ್ಚಿತಃ,
ಅಸ್ತುತಾತಸ್ತುತಃ ಪೂರ್ವಸ್ಥಿತ ಪೂರ್ವಸ್ಥಿತಃ ಸಾಕ್ಷೀ, ತುರುತುರು,
ಪತಂಗ ಪತಂಗ, ಪಿಂಗ ಪಿಂಗ, ಜ್ಞಾನ ಜ್ಞಾನ, ಶಬ್ದ ಶಬ್ದ, ಸೂಕ್ಷ್ಮ ಸೂಕ್ಷ್ಮ,
ಶರ್ವ ಶರ್ವ ಶರ್ವ, ಓಂ ನಮಃ ಶಿವಾಯ, ಓಂ ನಮೋ ನಮಃ ಶಿವಾಯ, ನಮೋ ನಮಃ ಓಂ.
ಅಂತು ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳು. ಇವು ಪದಾಧ್ವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೮೪
ಇನ್ನು ಐವತ್ತೆರಡು ವರ್ಣಾಕ್ಷರ ಉತ್ಪತ್ಯವದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಾಕೃತಿಯಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯ
ಆ ಪ್ರಣವದ ದಂಡಕಾಕೃತಿಯಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯ
ಆ ಪ್ರಣವದ ಕುಂಡಲಾಕೃತಿಯಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯ
ಆ ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯ
ಆ ಪ್ರಣವದ ದರ್ಪಣಾಕೃತಿಯಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯ
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೮೫
|| ರಹಸ್ಯ || ಸಾಕ್ಷಿ-
ನಕಾರೇ ನಕಾರೋತ್ಪನ್ನಃ, ಮಕಾರೇ ಮಕಾರೋದ್ಭವಃ, |
ಶಿಕಾರೇ ಶಿಕಾರೋತ್ಪನ್ನಃ, ವಕಾರೇ ವಕಾರೋದ್ಭವಃ ||
ಯಕಾರೇ ಯಕಾರೋತ್ಪನ್ನಃ, ಗುಹ್ಯಾದ್ಗುಹ್ಯಂ ವರಾನನೇ ||
ಎಂದುದಾಗಿ ಅಪ್ರಮಾಣ ಕೂಡಲಸಂಗಮದೇವ.

೩೮೬
ಆ ಪ್ರಣವದ ಜ್ಯೋತಿ ಸ್ತಂಬಾಕೃತಿಯಲ್ಲಿಹ ಚಿದಾತ್ಮ ಪರಮಾತ್ಮನಲ್ಲಿ
ಹಂ ಕ್ಷಂ ಹಂ ಳಂ ಎಂಬ ಚತುರಾಕ್ಷರ ಉತ್ಪತ್ಯ.
ಯಕಾರದಲ್ಲಿ ಉತ್ಪತ್ಯವಾದ ಯಕಾರ ಬೀಜದಲ್ಲಿ
ಅ ಆ ಇ ಈ ಉ ಊ ಋ ಋ ಇ ಞ ಎ ಐ ಓ ಔ ಅಂ ಅಃ
ಎಂಬ ಷೋಡಶಾಕ್ಷರ ವರ್ಣಾಕ್ಷರ ಉತ್ಪತ್ಯ.
ಆ ವಕಾರದಲ್ಲಿ ಉತ್ಪತ್ಯವಾದ ವಕಾರ ಬೀಜದಲ್ಲಿ
ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ ದ್ವಾದಶ ವರ್ಣಾಕ್ಷರ ಉತ್ಪತ್ಯ
ಶಿಕಾರದಲ್ಲಿ ಉತ್ಪತ್ಯವಾದ ಶಿಕಾರ ಬೀಜದಲ್ಲಿ ಡ ಢ ಣ ತ ಥ ದ ಧ ನ ಪ ಫ ಎಂಬ.
ದಶವರ್ಣಾಕ್ಷರ ಉತ್ಪತ್ಯ
ಮಕಾರದಲ್ಲಿ ಉತ್ಪತ್ಯವಾದ ಮಕಾರ ಬೀಜದಲ್ಲಿ
ಬ ಭ ಮ ಯ ರ ಲ ಎಂಬ ಷಟ್ಠವರ್ಣಾಕ್ಷರ ಉತ್ಪತ್ಯ.
ಆ ನಕಾರದಲ್ಲಿ ಉತ್ಪತ್ಯವಾದ ನಕಾರ ಬೀಜದಲ್ಲಿ
ವ ಶ ಷ ಸ ಎಂಬ ಚತುರ್ವರ್ಣಾಕ್ಷರ ಉತ್ಪತ್ಯ
ಈ ಐವತ್ತೆರಡು ವರ್ಣಾಕ್ಷರವು ವರ್ಣಾಧ್ವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೮೭
ನಿರಾಮಯಾತೀತಾಗಮೇ ಸಾಕ್ಷಿ-
ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮನಿ ಜಾಯತೆ |
ಹಂ ಳಂ ದ್ವಿವರ್ಣಕಂ ಚೈವ ಜೀವಾತ್ಮನಿ ಚ ಜಾಯತೆ ||
ಅ ಆ ಇ ಈ ಉ ಊ ವರ್ಣಂ, ಋ ಋ ಇ ಞ ವರ್ಣಕಂ ತಥಾ |
ಎ ಐ ಓ ಔ ಅಂ ಅಃ ವರ್ಣಂ, ಯಕಾರೆ ಚ ಸಜಾಯತೆ ||
ಕ ಖ ಗ ಘ ಙ ವರ್ಣಂ ಚ ಛ ಜ ಝ ಞ ವರ್ಣಕಂ |
ಟ ಠ ದ್ವಿವರ್ಣಕಂ ಚೈವ ವಕಾರೇ ಚ ಸಜಾಯತೆ ||
ಬ ಭ ಮ ಯ ರ ವರ್ಣಂ ಚ ಲ ಏಕೋ ವರ್ಣಕಂ ತಥಾ |
ಇತಿ ಷಡ್‌ ವರ್ಣಕಂ ಚೈವ ಮಕಾರೇ ಚ ಸಜಾಯತೆ ||
ವ ಶ ಷ ಸ ಚತುರ್ವರ್ಣಂ ನಕಾರೇ ಚ ಸಜಾಯತೆ |
ಇತಿ ವರ್ಣಂ ಸಮುತ್ಪನ್ನಂ ವರ್ಣಾಧ್ವಂ ಚ ಪ್ರಕೀರ್ತಿತಂ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.


[1]      ೩೬೪ ರಿಂದ ೩೬೭ ರ ವರೆಗಿನ ವಚನಗಳು ತಾ.ಪ್ರ. ೫೮೬ ರಲ್ಲಿ ಇಲ್ಲದೇ ಇದ್ದುದರಿಂದ ತಾ.ಪ್ರ. ೭೬ ರಿಂದ ಈ ವಚನಗಳನ್ನು ತೆಗೆದುಕೊಳ್ಳಲಾಗಿದೆ.

[2]     ಪುರಾಣ (ತಾ.ಪ್ರ. ೭೬)

[3]

[4]     ಮೊದಲಾದ (ತಾ.ಪ್ರ. ೭೬)

[5]

[6]     ಹಿಂಗೆ (ತಾ.ಪ್ರ. ೭೬)

[7]

[8]     ಳಿ (ತಾ.ಪ್ರ. ೭೬)

[9]

[10]    ಪುರಾಣ (ತಾ.ಪ್ರ. ೭೬)

[12]    ಮೊದಾಲದ (ತಾ.ಪ್ರ. ೭೬)