೪೦೪
ಪಸರ ಪಸರ ತಪ್ಪದಿಹ ಗಾಜುಗಳೆಲ್ಲ ರತ್ನವಾಗಬಹುದೆ ಅಯ್ಯಾ?
ಕೇರಿ ಕೇರಿ ತಪ್ಪದಿಹ ಶ್ವಾನವೆಲ್ಲ ಸಿಂಹವಾಗಬಹುದೆ ಅಯ್ಯಾ?
ಧರೆಯೊಳಗೆ ಬಿದ್ದು ಹೊರಳುವ ನಾಮಧಾರಕ ಗುರುಗಳೆಲ್ಲ
ಸದ್ಗುರುವಾಗಬಹರೆ ಅಯ್ಯಾ?
ಇದು ಕಾರಣ ಮನವು ಮಹದಲ್ಲಿ ನಿಂದು
ಪರಿಣಾಮ ನೆಲೆಗೊಂಡ ಮಹಾನುಭಾವ ಸದ್ಗುರು
ಕೋಟಿಗೊಬ್ಬರು ಇಲ್ಲವೆಂಬೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೫
ಹೊನ್ನು ಹೆಣ್ಣು ಮಣ್ಣು ಹಿಡಿವನ್ನಕ್ಕ ಗುರುವಲ್ಲ.
ಆ ಗುರುವಿನ ಬೆಂಬಳಿ ಲಿಂಗವಿಲ್ಲ.
ಆ ಲಿಂಗ ಪೂಜೆಯ ಮಾಡುವಾತ ಶಿಷ್ಯನಲ್ಲ.
ಆ ಗುರು ಶಿಷ್ಯರಿಬ್ಬರಿಗೆಯು ಕುಂಭಿಯ ಪಾತಕ
ತಪ್ಪದೆಂದು ಶ್ರುತಿ ಸಾರುತ್ತಿದೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೬
ಹೊನ್ನ ಬಿಟ್ಟಡೇನು? ಹೆಣ್ಣಿನಾಸೆಯ ಬಿಡದನ್ನಕ್ಕರ
ಅಲ್ಲಿಗೆ ಹಿರಿಯತನ ಸಾನದು.
ಹೆಣ್ಣ ಬಿಟ್ಟಡೇನು? ಮಣ್ಣಿನಾಸೆಯ ಬಿಡದನ್ನಕ್ಕರ
ಅಲ್ಲಿಗೆ ಹಿರಿಯತನ ಸಾಲದು.
ಅದೆಂತೆಂದಡೆ :
ಈ ತ್ರಿವಿಧವು ಒಂದಬಿಟ್ಟೊಂದಿರದಾಗಿ.
ಈ ತ್ರಿವಿಧವನತಿಗಳೆದು ಮನ ಮಹಾಘನದಲ್ಲಿ
ಲಿಯ್ಯವಾಗಿ ದಗ್ಧ ಪಟನ್ಯಾಯದಲ್ಲಿ ಸುಳಿವ
ನಿಜಸುಳಿವಿಂಗೆ ನಮೋನಮೋ ಎನುತ್ತಿರ್ದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೭
ಪಂಚಾಕ್ಷರಿ ಪಂಚವಕ್ತ್ರಂಗಳ ನೆಲೆಯನಱಿಯರು
ಅಕಾರ ಉಕಾರ ಮಕಾರ ನಾದ ಬಿಂದು ಕಲೆಯನಱಿಯರು.
ಪ್ರಣವ ಸ್ವರೂಪವನಱಿಯರು
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನಱಿಯದೆ.
ಗುರುಲಿಂಗ ಜಂಗಮವೆಂದು ಸುಳಿದಡೆ
ಪಂಚ ಮಹಾಪಾತಕ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೪೦೮
ಅಕಾರ ಉಕಾರ ಮಕಾರವನಱಿಯರು
ಅಕಾರದೊಳಗೆ ಅಕಾರವನಱಿಯರು
ಅಕಾರದೊಳಗೆ ಉಕಾರವನಱಿಯರು
ಅಕಾರದೊಳಗೆ ಮಕಾರವನಱಿಯರು
ಅಕಾರದೊಳಗೆ ಓಂಕಾರವನಱಿಯರು
ಅಕಾರದೊಳಗೆ ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನಱಿಯದೆ
ಗುರುಲಿಂಗ ಜಂಗಮವೆಂದು ಸುಳಿದಡೆ ಅಘೋರನರಕವೆಂದು
ಆಗಮಂಗಳು ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೦೯
ಉಕಾರದೊಳಗೆ ಉಕಾರವನಱಿಯರು
ಉಕಾರದೊಳಗೆ ಅಕಾರವನಱಿಯರು
ಉಕಾರದೊಳಗೆ ಮಕಾರವನಱಿಯರು
ಉಕಾರದೊಳಗೆ ಓಂಕಾರವನಱಿಯರು
ಉಕಾರದೊಳಗೆ ನಿರಾಳನಿರಂಜನ ನಿರಾಮಯ
ನಿರಾಮಯಾತೀತವನಱಿಯದೆ ಗುರುಲಿಂಗ ಜಂಗಮವೆಂದು ಸುಳಿದಡೆ
ಅವ ಅನಾಚಾರಿ ಪಂಚಮಹಾಪಾತಕರೆಂದುದು ನೋಡಾ,
ಅಥರ್ವಣವೇದ, ಅಪ್ರಮಾಣ ಕೂಡಲಸಂಗಮದೇವ.

೪೧೦
ಮಕಾರದೊಳಗೆ ಮಕಾರವನಱಿಯರು
ಮಕಾರದೊಳಗೆ ಅಕಾರವನಱಿಯರು
ಮಕಾರದೊಳಗೆ ಉಕಾರವನಱಿಯರು
ಮಕಾರದೊಳಗೆ ಓಂಕಾರವನಱಿಯರು
ಮಕಾರದೊಳಗೆ ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವನಱಿಯದೆ ಗುರುಲಿಂಗ ಜಂಗಮವೆಂದು ಸುಳಿದಡೆ
ಕುಂಭಿಪಾತಕವೆಂದು ಇತಿಹಾಸ ಪುರಾಣದಲ್ಲಿ ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧೧
ಮಂತ್ರ ಹನ್ನೊಂದನಱಿಯರು, ಆಚಾರ್ಯರೆಂಬರು.
ಪದ ತೊಂಬತ್ತುನಾಲ್ಕನಱಿಯರು, ಆಚಾರ್ಯರೆಂಬರು.
ವರ್ಣ ಐವತ್ತೆರಡನಱಿಯರು ಆಚಾರ್ಯರೆಂಬರು.
ಭುವನ ಇನ್ನೂರುಇಪ್ಪತ್ತುನಾಲ್ಕನಱಿಯರು ಆಚಾರ್ಯರೆಂಬರು.
ತತ್ವ ಮೂವತ್ತಾಱನಱಿಯರು ಆಚಾರ್ಯರೆಂಬರು.
ಮೂವತ್ತೆಂಟು ಕಲೆಗಳಱಿಯರು ಆಚಾರ್ಯರೆಂಬರು.
ಅಱುವತ್ತುನಾಲ್ಕು ಕಲೆ ಜ್ಞಾನವನಱಿಯರು ಆಚಾರ್ಯರೆಂಬರು.
ಅಲ್ಲಲ್ಲ ಅವ ಅನಾಚಾರ್ಯನೆಂದು ಆದಿ ವೇದಂಗಳು,
ಹೇಳುತ್ತಿಹುದು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೪೧೨
ಆಣವ ಮಾಯೆ ಕಾರ್ಮಿಕವೆಂಬ ಮಲತ್ರಯಂಗಳಲ್ಲಿ
ಬಿದ್ದು ಹೊರಳಾಡುತ್ತಿಹರು.
ಗುರುವೆಂಬ ನುಡಿಗೆ ನಾಚರು
ಪರಧನ ಪರಸ್ತ್ರೀಗೆಯಳುಪ್ಪುತ್ತಿಹರು.
ಗುರುವೆಂಬ ನುಡಿಗೆ ನಾಚರು.
ಜಾಗ್ರ ಸ್ವಪ್ನ ಸುಷುಪ್ತಿಯ ಕೆಡಿಸಿ
ತುರ್ಯ ತುರ್ಯಾತೀತವ ಬೆರಸಲಱಿಯರು
ಗುರುವೆಂಬ ನುಡಿಗೆ ನಾಚರು.
ಆ ತುರ್ಯಾತೀತಕತ್ತ ವ್ಯೋಮಾತೀತವಾಗಿಹ
ಮಹಾಘನದಲ್ಲಿ ಬೆರಸಿ

[1]ಬೆರಗಾಗ[2]ಲಱಿಯದೆ
ಗುರುಲಿಂಗ ಜಂಗಮವೆಂಬ ಪಂಚ ಮಹಾಪಾತಕರ ನೋಡಿ
ನಾಚಿತ್ತು ನಾಚಿತ್ತು ನೋಡಾ ಎನ್ನ ಮನ,
ಅಪ್ರಮಾಣ ಕೂಡಲಸಂಗಮದೇವ.

೪೧೩
ಪಂಚಾಕ್ಷರ ಪಂಚವಕ್ತ್ರವನಱಿ[3]ದು[4]
ಅಕಾರ ಉಕಾರ ಮಕಾರ ನಾದ ಬಿಂದು ಕಲೆಯ ತಿಳಿದು
ಪ್ರಣವಸ್ವರೂಪವನಱಿದು
ನಿರಾಳ ನಿರಂಜನ ನಿರಾಮಯ ನಿರಾಮಯಾತೀತದೊಳು
ಸುಳಿವ ನಿಜ ಸುಳುಹಿಂಗೆ ಭವಂ ನಾಸ್ತಿಯಾದ ಬಳಿಕ
ಗುರುವೆನ್ನಬಹುದು, ಲಿಂಗವೆನ್ನಬಹುದು,
ಜಂಗಮವೆನ್ನಬಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧೪
ಅಕಾರ ಉಕಾರ ಮಕಾರವನಱಿದು
ಅಕಾರದೊಳಗೆ ಅಕಾರವನಱಿದು
ಅಕಾರದೊಳಗೆ ಉಕಾರವನಱಿದು
ಅಕಾರದೊಳಗೆ ಮಕಾರವನಱಿದು
ಅಕಾರದೊಳಗೆ ಓಂಕಾರವನಱಿದು
ಅಕಾರದೊಳಗೆ ನಿರಾಳವನಱಿದು
ಅಕಾರದೊಳಗೆ ನಿರಾಮಯವನಱಿದು
ಅಕಾರದೊಳಗೆ ನಿರಾಮಯಾತೀತವನಱಿದು
ನಿರಾಮಯತೀತದಲ್ಲಿ ನಿಃಷ್ಪತಿಯಾಗಿ
ಸುಳಿವ ನಿಜಸುಳಿಹಿಂಗೆ ಭವಂನಾಸ್ತಿಯಾದ ಬಳಿಕ
ಗುರುವೆನ್ನಬಹುದು, ಲಿಂಗವೆನ್ನಬಹುದು, ಜಂಗಮವೆನ್ನಬಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧೫
ಉಕಾರದೊಳಗೆ ಉಕಾರವನಱಿದು
ಉಕಾರದೊಳಗೆ ಅಕಾರವನಱಿದು
ಉಕಾರದೊಳಗೆ ಮಕಾರವನಱಿದು
ಉಕಾರದೊಳಗೆ ಓಂಕಾರವನಱಿದು
ಉಕಾರದೊಳಗೆ ನಿರಾಳವನಱಿದು
ಉಕಾರದೊಳಗೆ ನಿರಂಜನವನಱಿದು
ಉಕಾರದೊಳಗೆ ನಿರಾಮಯವನಱಿದು
ಉಕಾರದೊಳಗೆ ನಿರಾಮಯಾತೀತವನಱಿದು
ಆ ನಿರಾಮಯಾತೀತದಲ್ಲಿ ಲಿಯ್ಯವಾಗಿ ಸುಳಿವ
ನಿಜಸುಳುಹಿಂಗೆ ಭವಂನಾಸ್ತಿಯಾದ ಬಳಿಕ
ಗುರುವೆನ್ನಬಹುದು, ಲಿಂಗವೆನ್ನಬಹುದು. ಜಂಗಮವೆನ್ನಬಹುದು
ಆ ಮಹಾಶರಣನ-
ಓಂ ವಿಶ್ವಾಧಿಕೋರುದ್ರೋ ಮಹರ್ಷಿ
ಸರ್ವೊ ಮಹೇಶ ರುದ್ರಸ್ತಸ್ಮೈ ರುದ್ರಾಯ ನಮೋಸ್ತು ಎಂದು
ವೇದಂಗಳು ಹೊಗಳಿ ನಮೋ ನಮೋ ಎನುತ್ತಿದ್ದುದೆಂದು
ನಿರಾಮಯಾತೀತಾಗಮದಲ್ಲಿ ಕೊಂಡಾಡುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧೬
ಮಕಾರದೊಳಗೆ ಮಕಾರವನಱಿದು
ಮಕಾರದೊಳಗೆ ಅಕಾರವನಱಿದು
ಮಕಾರದೊಳಗೆ ಉಕಾರವನಱಿದು
ಮಕಾರದೊಳಗೆ ಓಂಕಾರವನಱಿದು
ಮಕಾರದೊಳಗೆ ನಿರಾಳವನಱಿದು
ಮಕಾರದೊಳಗೆ ನಿರಂಜನವನಱಿದು
ಮಕಾರದೊಳಗೆ ನಿರಾಮಯವನಱಿದು
ಮಕಾರದೊಳಗೆ ನಿರಾಮಯಾತೀತವನಱಿದು
ಆ ನಿರಾಮಯಾತೀತದಲ್ಲಿ ಬೆರಸಿ ನಿಶ್ಚಿಂತನಾಗಿ
ಸುಳಿವ ನಿಜಸುಳುಹಿಂಗೆ ಭವಂನಾಸ್ತಿಯಾದ ಬಳಿಕ
ಗುರುವೆನ್ನಬಹುದು, ಲಿಂಗವೆನ್ನಬಹುದು, ಜಂಗಮವೆನ್ನಬಹುದು
ಎಂದು ವೇದಂಗಳು ಆ ಮಹಾಶರಣನ ಮಸ್ತಕದಲ್ಲಿ ಹೊತ್ತುಕೊಂಡು
ಓಂ ನಮೋ ಅಪ್ರಮಾಣ ಅಗೋಚರಾಯ
ಅನಾದಿರುದ್ರೌನದ್ವೀತಿಯಾಯತಸ್ಮೈ ನಮೋ ನಮೋ
ಎನುತ್ತಿರ್ದುದೆಂದು ಅಸಿಪದಾತೀತಾಗಮದಲ್ಲಿ
ಹೇಳುತ್ತಿಹುದು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೪೧೭
ಮಂತ್ರ ಹನ್ನೊಂದು ಪದ ತೊಂಬತ್ತುನಾಲ್ಕನಱಿದು
ಮೇಲಾಗಿ ಮನಮಹಾ ಘನದಲ್ಲಿ ನಿಂದಡೆ
ಆಚಾರ್ಯನೆಂದುದು ನೋಡಾ ಶ್ರುತಿಗಳು.
ವರ್ಣ ಐವತ್ತೆರಡು ಭುವನ ಇನ್ನೂಱ ಇಪ್ಪತ್ತುನಾಲ್ಕು
ಭುವನನಱಿದು, ಮೂವತ್ತಾಱು ತತ್ವವನಱಿದು, ಷಷ್ಠಕಲೆಗಳ ತಿಳಿದು
ಮೇಲಾಗಿ ಮನ ಮಹಾಘನದಲ್ಲಿ ನಿಂದಡೆ ಆಚಾರ್ಯನೆಂದುದು ನೋಡಾ ಶ್ರುತಿಗಳು.
ಮೂವತ್ತೆಂಟು ಕಲೆಗಳ ಅಱುವತ್ತುನಾಲ್ಕುಕಲೆ ಜ್ಞಾನವನಱಿದು
ಮೇಲಾಗಿ ಮನ ಮಹಾಘನದಲ್ಲಿ ನಿಂದಡೆ ಅವರ
ವೇದಂಗಳು ಜಗದಾರಾಧ್ಯರೆಂದು ನಮೋ ನಮೋ ಎನುತ್ತಿದ್ದುದೆಂದು
ಇತಿಹಾಸ ಪುರಾಣದಲ್ಲಿ ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧೮
ಪಂಚಾಕ್ಷರ ಪಂಚವಕ್ತ್ರಂಗಳ ನೆಲೆಯನಱಿದು
ಅಕಾರ ಉಕಾರ ಮಕಾರ ನಾದ ಬಿಂದು ಕಳೆಗಳ ತಿಳಿದು
ಪ್ರಣವಸ್ವರೂಪವನಱಿದು ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವನಱಿದು, ಆ ನಿರಾಮಯಾತೀತದೊಳು
ಮನಲಿಯ್ಯವಾಗಿ ಸುಳಿವ ನಿಜಸುಳುಹಿಂಗೆ ಭವಂ ನಾಸ್ತಿಯಾದ ಬಳಿಕ
ಗುರುವೆನ್ನಬಹುದು, ಲಿಂಗವೆನ್ನಬಹುದು, ಜಂಗಮವೆನ್ನಬಹುದು
ಆ ಮಹಾಶರಣನ ಶ್ರೀಪಾದಕ್ಕೆ ವೇದಂಗಳು ಇರುಳು ಹಗಲು
ಎಡೆಬಿಡದೆ ನಮೋ ನಮೋ ಎನುತ್ತಿದ್ದುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೧೯
ಆಣವ ಮಾಯೆ ಕಾರ್ಮಿಕವೆಂಬ ಮಲತ್ರಯಂಗಳ ಹೊದ್ದದೆ
ಪರಧನ ಪರಸ್ತ್ರೀಗಳುಪದೆ ಜಾಗ್ರಸ್ವಪ್ನಸುಷುಪ್ತಿಯೆಂಬ ಮೂಱವಸ್ಥೆಯಗೆಲಿದು
ತೂರ್ಯವನೊಡಗೂಡಿ ತುರ್ಯಾತೀತನಾಗಿ ಆ ತೂರ್ಯಾತೀತಕ್ಕತ್ತ
ವ್ಯೊಮಾತೀತವಾಗಿಹಾತನೆ ಗುರು, ಆತನೆ ಲಿಂಗ, ಆತನೆ ಜಂಗಮ
ಆತನೆ ಮಹಾಶರಣ ಆತನೆ ನಿತ್ಯನಿರಂಜನ ನಿರಾಮಯ,
ನಿರಾಮಯಾತೀತನು, ಆತನೆ ನಮ್ಮ ಅಪ್ರಮಾಣ ಕೂಡಲಸಂಗಮದೇವ.

ಇಲ್ಲಿಯ ಪರಿಯಂತರ ಗುರುಲಿಂಗ ಜಂಗಮವೆಂದು ಸುಳಿವ ಮಹಾತ್ಮರ ನಿರಸನವ ಮಾಡಿದ ವಚನ ಸಮಾಪ್ತ ಮಂಗಳ ಮಹಾಶ್ರೀ ಶ್ರೀ ಶ್ರೀ ಶ್ರೀ.

೪೨೦
ಇನ್ನು ಮುಂದೆ ಅನುಭಾವದ ವಚನ ಅದೆಂತೆಂದಡೆ-
ಜಾಗ್ರಸ್ವಪ್ನಸುಷುಪ್ತಿಯೆಂಬ ಮೂಱವಸ್ಥೆಯು
ಅನಂತ ಭವದುಃಖಂಗಳ ತಹವು.
ಈ ಮೂಱು ಅವಸ್ಥೆಯ ಕೆಡಮೆಟ್ಟಿ ಸಾಕ್ಷಿಯಾಗಿಹ
ತೂರ್ಯ ಬೋಧೆಯ ಕಂಡವರ ಘನವನೇನೆಂದುಪಮಿಸುವೆ
ನೋಡಾ, ಅಪ್ರಮಾಣ ಕೂಡಲಸಂಗಮದೇವ.

೪೨೧
ಅಱಿದಾತ ದುಃಖಕ್ಕೊಳಗಾಗದೆ
ಅಂಧಕಾರವ ಮುಚ್ಚಿಕೊಂಡು ಕಾಣಲಾರದಿದ್ದ
ಮಹಾ ಮಾಯೆಯ ಕೆಡಮೆಟ್ಟಿ
ಮೇಲಾಗಿಹವೀಶಾನ್ಯ ತೂರ್ಯಬೋಧೆಯ
ತಿಳಿದು ಕಂಡಡೆ ಮುಕ್ತಿಯಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೨
ತನ್ನನಱಿಯದೆ ತಾನೆ ಕೆಟ್ಟೆನೆಂದವು ಶ್ರುತಿಗಳು
ತನ್ನನಱಿದಡೆ ತನಗೆ ಕೇಡಿಲ್ಲವೆಂದುದು ನೋಡಾ ಶ್ರುತಿಗಳು.
ತನ್ನನಱಿವ ಅಱಿವನಱಿಯದೆ
ತನ್ನನಚ್ಚಿಸುತ್ತ ತಾನಿದ್ದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೩
ಮೂಱವಸ್ಥೆಯ ನೆಲೆಯೆಂದು ಕಾಬವ
ಅಱಿವಿಲ್ಲದ ಅಜ್ಞಾನಿ ನೋಡಾ.
ಹೇಳಿದವಸ್ಥಾತ್ರಯ[5]ದೊ[6]ಳಿದ್ದಡೆ
ಜನನ ಮರಣ ತಪ್ಪದು ನೋಡಾ.
ಸಾಕ್ಷಾ ಅವಸ್ಥೆ ತುರ್ಯವ ತತ್ಪರವೆಂದಡೆ ಅಲ್ಲಲ್ಲ.
ಮೂಱವಸ್ಥೆಯ ಅರ್ಥ ತುರ್ಯವ ತತ್ಪರವೆಂದಡೆ
ಜನನ ಮರಣವಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೪
ಕಾಯ ಜೀವದ ಹೊಲಿಗೆ ಬಿಚ್ಚಲಱಿಯದಿದ್ದೆನು.
ಅನೇಕ ಕಾಲವು ಕಾಯ ಜೀವದ ಹೊಲಿಗೆಯ
ಬಿಚ್ಚಿ ತೋಱಿದನೆನ್ನ ಸದ್ಗುರುಸ್ವಾಮಿ.
ಜೀವ ಪರಮರ ಭೇದವನಱಿಯದೆ
ಅನೇಕ ಭವದಲ್ಲಿ ಬಂದೆನು.
ಅನೇಕ ಭವದಲ್ಲಿ ಬಂದ ಶಿಶುವನೆತ್ತಿಕೊಂಡು
ಜೀವ ಪರಮರ ಭೇದವ ತಿಳಿಹಿಸಿ
ಮತ್ತು ಬೆರಸುವ ಪರಿಯ ತೋಱಿದ
ಮಹಾಗುರುವಿಂಗೆ ನಮೋ ನಮೋ ಎನುತ್ತಿರ್ದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೫
ತಾನೆಂಬ ಅಱಿವ ಬಿಟ್ಟು ಮತ್ತೆಲ್ಲವನತಿಗಳದು
ಅದಂಥಾದಿಂಥಾದೆಂದು ಹೇಳಬಾರದ ತುರ್ಯಾತೀತವ
ಪರವೆಂದು ಶ್ರುತಿಗಳು ಸಾರುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೬
ಊನವಾಗಿಹ ದೇಹವ ಕೂಡಿಕೊಂಡು ಹೋಗಿ
ತಾನದಾಗಿ ಜೀವನು ತಾನೆಯಾಗಿ
ಸಾಯದೆ ಸತ್ತು ಮೋನವಾಗಿಹ
ತುರ್ಯಾತೀತವ ಮುಳುಗಿಕೊಂಡಿಹ
ಜ್ಞಾನನಾಯಕನೆ ಈಶನೆಂದು ಶ್ರುತಿಗಳು ಸಾರುತ್ತಿವೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೭
ಜೀವ ಕರಣ ದೇಹ ಇತ್ಯಾದಿಗಳು
ವಿಸ್ತೀರ್ಣವಾಗಿ ಅಡಗುವದಕ್ಕೆ ಇಂಬಾಗಿ
ವಿಷಯ ಭಾವವು ಕೆಟ್ಟ ಭಾವಕರ ಕಾರ್ಯ ಉಪಾದಿ ಅ[7]ಱಿ[8]ದು
ಸುಷುಪ್ತಿಯ ಹಾಂಗೆ ಪರಮ ವಿಕೃತಿಭಾವಂಗಳು ವಿಸ್ತೀರ್ಣವಾಗಿ
ಅಡಗಿ ಏನೂ ಇಲ್ಲದ ಅವಾಚ್ಯ ಪರಮ ಭಾವವಾಗಿಹ
ತುರ್ಯಾತೀತವ ಶ್ರುತಿಗಳು ಪರ ಉಡಲೆಂದುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೮
ಜಾಗ್ರಸ್ವಪ್ನ ಸುಷುಪ್ತಿ ತುರ್ಯ ತುರ್ಯಾತೀತ
ಈ ಐದು ಅವಸ್ಥೆಗಳಾಗಿ ಕೆಡುಹುದು.
ಪರವಲ್ಲ ಶಿವನಿಗೆ ಅವಸ್ಥೆಗಳೊಂದು ಕಾಲವು ಇಲ್ಲವೆಂದು
ಸಕಲಾಗಮ ಶಾಸ್ತ್ರಂಗಳಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೨೯
ತುರ್ಯವಡಗಿ ಹೇಳಬಾರದ ಹಾಳವರಿದಾದ-
ಪರಾಪರವೆಂಬರು ನೋಡಾ.
ವಿವರಿದಾದ ಪರಾಪರವೆಂಬ ತುದಿಗು
ಅಗೋಚರವೆಂಬುದನಾರು ಅಱಿಯರು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೩೦
ವಾಗಾದಿಗಳೈದು ವಚನಾದಿಗಳೈದು ಶ್ರೋತ್ರಾದಿಗಳೈದು
ಶಬ್ದಾದಿಗಳೈದು ಕರಣ ನಾಲ್ಕು
ಕರಣಂಗಳ ಮೇಲೆ ಪುರುಷನೊಬ್ಬನು
ಆ ಪುರುಷಗತ್ತತ್ತ ಪರಮ
ಆ ಪರಕತ್ತತ್ತ ವ್ಯೋಮ
ಆ ವ್ಯೋಮಕತ್ತತ್ತ ವ್ಯೋಮಾತೀತ
ಆ ವ್ಯೋಮಾತೀತವ ಶಿವನೆಂದು
ಸಕಲ ವೇದಾಗಮ ಶಾಸ್ತ್ರಂಗಳು ಸಾರುತ್ತಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೩೧
ಆ ವ್ಯೋಮಾತೀತವೆಂಬ ಮಹಾಘನದಲ್ಲಿ
ಲಿಯ್ಯವಾದ ಶರಣನ ನಿಲವದೆಂತೆಂದಡೆ :
ರವಿಯೊಳಗಣ ಬಿಂಬದಂತಿದ್ದುದು
ದರ್ಪಣದೊಳಗಣ ಪ್ರತಿಬಿಂಬದಂತಿದ್ದುದು
ಪುಷ್ಪದೊಳಗಣ ಪರಿಮಳದಂತಿದ್ದುದು
ಜ್ಯೋತಿಯೊಳಗಣ ಕರ್ಪುರದಂತಿದ್ದುದು ನೋಡಾ
ಮಹಾಘನದಲ್ಲಿ ಲಿಯ್ಯವಾದ ಶರಣನ ನಿಲವು
ಅಪ್ರಮಾಣ ಕೂಡಲಸಂಗಮದೇವ.

೪೩೨
ಶ್ಲೋಕದೊಳಗಣ ಅರ್ಥದಂತಿದ್ದುದು
ಫಲದೊಳಗಣ ರುಚಿಯಂತಿದ್ದುದು
ಕ್ಷೀರದೊಳಗಣ ಘೃತದಂತಿದ್ದುದು
ರತ್ನನೋಡಾ, ಮಹಾಘನದಲ್ಲಿ ಲಿಯ್ಯವಾದ ಶರಣನ ನಿಲವು,
ಅಪ್ರಮಾಣ ಕೂಡಲಸಂಗಮದೇವ.


[1]      ಬೇರಾಗ (ತಾ.ಪ್ರ. ೭೬)

[2]

[3]     ಯರು (ತಾ.ಪ್ರ. ೫೮೬)

[4]

[5]

[6]      ಗ (ತಾ.ಪ್ರ. ೭೬)

[7]     ಳಿ (ತಾ.ಪ್ರ. ೭೬)

[8]