೪೩೩
ತಿಲದೊಳಗಣ ತೈಲದಂತಿದ್ದುದು
ಶಿಲೆಯೊಳಗಣ ಪಾವಕನಂತಿದ್ದುದು
ಬೀಜದೊಳಗಣ ವೃಕ್ಷದಂತಿದ್ದುದು
ಅಱಿವಿನೊಳಗಡಗಿದ ಅಱುವಿನಂತಿದ್ದುದು ನೋಡಾ,
ಮಹಾಘನದಲ್ಲಿ ಲಿಯ್ಯವಾದ ಶರಣನ ನಿಲವು
ಅಪ್ರಮಾಣ ಕೂಡಲಸಂಗಮದೇವ.
೪೩೪
ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು
ಕುಱುಹಲ್ಲ, ಗುಣವಲ್ಲ, ರೂಪಲ್ಲ, ನಿರೂಪಲ್ಲ, ಹೊಸದಲ್ಲ, ಹಳೆದಲ್ಲ
ಒಳಗಲ್ಲ, ಹೊರಗಲ್ಲ, ಹಿಂದಲ್ಲ, ಮುಂದಲ್ಲ, ಕೆಳಗಲ್ಲ, ಮೇಲಲ್ಲ
ಎಂದುದು ನೋಡಾ ಶ್ರುತಿಗಳು.
ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು
ದಶಚಕ್ರಂಗಳಲ್ಲ, ಅವಸ್ಥೆಗಳೈದಲ್ಲ,
ಆಱಕ್ಷರವಲ್ಲ, ಆಱು ವರ್ಣವಲ್ಲ,
ಐದು ಮಂಡಲವಲ್ಲವೆಂದುದು ನೋಡಾ ಶ್ರುತಿಗಳು.
ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು
ಚತುರ್ದಶ ನಾಡಿಗಳಲ್ಲ, ಚತುರ್ದಶ ವಾಯುಗಳಲ್ಲ,
ಪಂಚವಿಂಶತಿ ತತ್ವವಲ್ಲ, ಅಷ್ಟವಿಂಶತಿ ತತ್ವವಲ್ಲ,
ಛತ್ತೀಸ ತತ್ವವಲ್ಲವೆಂದುದು ನೋಡಾ ಶ್ರುತಿಗಳು.
ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು
ಐವತ್ತೆರಡಕ್ಷರವಲ್ಲ, ಐದು ಭೂತವಲ್ಲ ಆಱು ಸಾದಾಖ್ಯವಲ್ಲ,
ಆಱು ಕಲೆಗಳಲ್ಲ, ಆಱು ಶಕ್ತಿಗಳಲ್ಲ,
ತುರ್ಯ ತುರ್ಯಾತೀತವಲ್ಲ, ಪುರುಷನಲ್ಲ,
ಪರವಲ್ಲವೆಂದುದು ನೋಡಾ ಶ್ರುತಿಗಳು.
ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು.
ವ್ಯೋಮ ವ್ಯೋಮಾತೀತವಲ್ಲ, ವಾಚಾಮಗೋಚರವಲ್ಲ,
ನಿತ್ಯನಿರಂಜನ ನಿರಾಳ ನಿರಾಮಯವಲ್ಲ,
ನಿರಾಮಯಾತೀತಕತ್ತತ್ತ
ಅತ್ಯತಿಷ್ಟದ್ದಶಾಂಗುಲವೆಂದುದು ನೋಡಾ ಶ್ರುತಿಗಳು,
ಅಪ್ರಮಾಣ ಕೂಡಲಸಂಗಮದೇವ.
೪೩೫
ಕರ್ಮ ಭಾವವು ಕೆಟ್ಟಡೊಂದು ನಿರ್ವಾಣವೆಂದು
ಶ್ರುತಿಗಳು ಸಾರುತ್ತಿವೆ ನೋಡಾ.
ಕಾರಣಭಾವ ಕೆಟ್ಟಡೊಂದು ನಿರ್ವಾಣವೆಂದು
ಶ್ರುತಿಗಳು ಸಾರುತ್ತಿವೆ ನೋಡಾ.
ನಿಂದಾವಾಸನೆಯು ಕೆಟ್ಟಡೊಂದು ನಿರ್ವಾಣವೆಂದು
ಶ್ರುತಿಗಳು ಸಾರುತ್ತಿವೆ ನೋಡಾ.
ಈ ಮೂಱು ನಿರ್ವಾಣವನೊಳಕೊಂಡು ಇಹುದೊಂದು ಮಹಾನಿರ್ವಾಣವೆಂದು
ಶ್ರುತಿಗಳು ಸಾರುತ್ತಿವೆ ನೋಡಾ.
ಆ ಮಹಾ ನಿರ್ವಾಣವನೊಳಕೊಂಡು ಅಖಂಡಿತ ಅಪ್ರಮಾಣ,
ಅಗೋಚರವಾಗಿಹುದೊಂದು ನಿರ್ವಾಣ ನೋಡಾ.
ಆ ನಿರ್ವಾಣವ ಶ್ರುತಿಗಳು ಅತ್ಯತಿಷ್ಠದ್ದಶಾಂಗುಲವೆಂದವು ನೋಡಾ;
ಅಪ್ರಮಾಣ ಕೂಡಲಸಂಗಮದೇವ.
೪೩೬
ಅಕಾರವೆಂಬೆನೆ ಉಕಾರವಾಗಿಹುದು
ಉಕಾರವೆಂಬೆನೆ ಮಕಾರವಾಗಿಹುದು ನೋಡಾ.
ಮಕಾರವೆಂಬೆನೆ ಓಂಕಾರವಾಗಿಹುದು
ಓಂಕಾರವೆಂಬೆನೆ ಅಚಲವಪ್ಪ ನಿರಾಳವಾಗಿಹುದು ನೋಡಾ.
ನಿರಾಳವೆಂಬೆನೆ ನಿರಂಜನವಾಗಿಹುದು
ನಿರಂಜನವೆಂಬೆನೆ ನಿರಾಮಯವಾಗಿಹುದು ನೋಡಾ.
ನಿರಾಮಯವೆಂಬೆನೆ ನಿರಾಮಯಾತೀತವಾಗಿಹುದು
ನಿರಾಮಯಾತೀತವೆಂಬೆನೆ ನಿರಾಮಯಾತೀತಕತ್ತತ್ತವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
೪೩೭
ಬಿಂದುವಾಗಿದ್ದು ಅಲ್ಲದೆ,
ನಾದವಾಗಿಹ ಘನವನಾರೂ ಅಱಿಯರು.
ನಾದವಾಗಿದ್ದು ಅಲ್ಲದೆ,
ಕಲೆಯಾಗಿಹ ಘನವನಾರೂ ಅಱಿಯರು.
ನಾದಬಿಂದುಕಲೆಯಾಗಿ ಅಲ್ಲದೆ,
ನಾದಬಿಂದುಕಲಾತೀತವಾಗಿಹ ಘನವನಾರೂ ಅಱಿಯರು
ನಾದಬಿಂದುಕಲಾತೀತವಾಗಿಹ ಘನವ ಮೀಱಿ
ಅತ್ತತ್ತವಾಗಿಹ ಮಹಾಘನವನಾರೂ ಅಱಿಯರು,
ಅಪ್ರಮಾಣ ಕೂಡಲಸಂಗಮದೇವ.
೪೩೮
ವೇದಾಗಮ ಪುರಾಣಂಗಳನೋದಿ
ಕಂಡೆನೆಂಬ ಭ್ರಾಂತರ ನೋಡಾ.
ವೇದಂಗಳನೋದಿ ಕಾಣದೆ
ವೇದಾತೀತವೆಂದುದು ನೋಡಾ.
ಆಗಮಂಗಳನೋದಿ ಕಾಣದೆ
ಆಗಮಾತೀತನೆಂದುದು ನೋಡಾ.
ಶಾಸ್ತ್ರಂಗಳನೋದಿ ಕಾಣದೆ
ಶಾಸ್ತ್ರಾತೀತನೆಂದುದು ನೋಡಾ.
ಪುರಾಣಂಗಳನೋದಿ ಕಾಣದೆ
ಪುರಾಣಾತೀತನೆಂದುದು ನೋಡಾ.
ಉಪನಿಷತ್ತುಗಳೋದಿ ಕಾಣದೆ
ಉಪಮಾತೀತನೆಂದುದು ನೋಡಾ.
ಆ ಉಪಮಾತೀತವೆಂಬ ಮಹಾಘನವ
ನಮ್ಮ ಅಪ್ರಮಾಣ ಕೂಡಲಸಂಗನ ಶರಣರು ಬಲ್ಲರು.
೪೩೯
ಗುರುಕರುಣವಿಲ್ಲದೆ-
ವೇದಾಗಮ ಶಾಸ್ತ್ರ ಪುರಾಣಂಗಳನೋದಿ ಕಾಣದೆ ಹೋದರು.
ಅದು ಕಾರಣವೆ,
ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಸುದ್ದಿ, ಪುರಾಣ ಪುಂಡರಗೋಷ್ಠಿ.
ಎಂಬ ಶರಣರ ವಾಕ್ಯ ದಿಟ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
೪೪೦
ಅನೇಕ ವೇದಾಗಮ ಶಾಸ್ತ್ರ ಪುರಾಣವನೋದಿ ಕೇಳಿದಡೇನು?
ಮನದ ಕತ್ತಲೆ ಹರಿಯದು ನೋಡಾ.
ಓಂಕಾರವೆಂಬ ಕಂಬದಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ
ಪಣಿತೆಯನಿಡಿಸಿ ಅಷ್ಟಮದವೆಂಬ ಬತ್ತಿಯ ತೀವಿ,
ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ತೈಲವ ನೆರೆದು,
ಜ್ಞಾನಾಗ್ನಿಯ ಮುಟ್ಟಿಸಿ ಸ್ವಯಂ ಪ್ರಕಾಶವ ಬೆಳಗುವದು ನೋಡಾ,
ಅನಂತಕೋಟಿ ಸೂರ್ಯ ಚಂದ್ರಾಗ್ನಿಮಯವಾಗಿ ಮಹಾಜ್ಯೋತಿ ಬೆಳಗುತ್ತಿಹುದು.
ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯೆ ಕಾರ್ಮಿಕವೆಂಬ
ಹುಳುಗಳು ಬಿದ್ದು ಸತ್ತವು.
ಹೃದಯದ ಕತ್ತಲೆ ಹರಿಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
೪೪೧
ದೇಹವ ೪೪೨ ೪೪೩ ೪೪೪ ೪೪೫ ೪೪೬ ೪೪೭ ೪೪೮ ೪೪೯ ೪೫೦ ೪೫೧ ೪೫೨ ೪೫೩ ೪೫೪ [1] ಱಿ (ತಾ.ಪ್ರ. ೫೮೬)
ತಾನೆಂಬ ಪಱವಳಿದು ಪೃಥ್ವಿ ಅಪ್ಪು ತೇಜವಾಯಂ ಆಕಾಶವಳಿದು,
ತುರ್ಯ ತುರ್ಯಾತೀತವಳಿದು ವ್ಯೋಮವಳಿದು,
ವ್ಯೋಮಾತೀತಕತ್ತತ್ತವಾಗಿಹ ಅಪ್ರಮಾಣ ಕೂಡಲಸಂಗಯ್ಯನಲ್ಲಿ
ಲಿಯ್ಯವಾದ ಮಹಾಶರಣನ ನಿಲವಿಂಗೆ ನಮೋ ನಮೋ ಎನುತಿರ್ದೆನು.
ನಿರಾಮಯಾತೀತದಲ್ಲಿ ಪುಟ್ಟಿದ ಶರಣನು
ನಿರಾಮಯಾತೀತದಲ್ಲಿ ಬೆರಸಿದಡೆ,
ನಿರಾಮಯಾತೀತವಾಗಿಹುದು ನೋಡಾ ಜನನವು,
ಅಪ್ರಮಾಣ ಕೂಡಲಸಂಗಮದೇವ.
ಹೆಣ್ಣೆಂಬೆನೆ ಹೆಣ್ಣಲ್ಲ ಗಂಡೆಂಬೆನೆ ಗಂಡಲ್ಲ
ನಪುಂಸಕನೆಂಬೆನೆ ನಪೂಂಸಕನಲ್ಲ ನೋಡಾ
ಎನೂ ಅಲ್ಲದ ನಿರಾಮಯಾತೀತದಲ್ಲಿ
ಲಿಯ್ಯವಾದ ಶರಣಂಗೆ ನಿರಾಮಯಾತೀತವಾಗಿಹುದು ನೋಡಾ ಜನನವು,
ಅಪ್ರಮಾಣ ಕೂಡಲಸಂಗಮದೇವ.
ನಿರಾಮಯಾತೀತದಲ್ಲಿ ಹುಟ್ಟಿದ ನೋಡಾ ಶರಣನು.
ನಿರಾಮಯಾತೀತದಲ್ಲಿ ಬೆಳೆದನು ನೋಡಾ ಶರಣನು.
ನಿರಾಮಯಾತೀತದಲ್ಲಿ ಲಿಯ್ಯವಾದ ನೋಡಾ ಶರಣನು.
ನಿರಾಮಯಾತೀತದಲ್ಲಿ ಲಿಯ್ಯವಾದ ಶರಣ ಜನನವು
ನಿರಾಮಯಾತೀತವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ರೂಪಿಲ್ಲದವನಱಿದನೆಂದು ನಿರೂಪಲ್ಲದ ಮಾಮರದ ತುದಿಗೆ
ಮೆಲಲಿಲ್ಲದ ಹಣ್ಣ ಮೆದ್ದು ಪರಿಣಾಮಿಸಿ
ಬಯಲಿಲ್ಲದ ನಿರ್ವಯಲಿಲ್ಲ ಬಯಲಾದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಆತ್ಮತತ್ವ ಇಪ್ಪತ್ತೈದು, ವಿದ್ಯಾತತ್ತ್ವ ಹತ್ತು ಶಿವತತ್ತ್ವವೊಂದು
ಅದೆಂತೆಂದಡೆ :
ಭೂತಾದಿ ಪಂಚಕಂಗಳೈದು, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು
ಶಬ್ದಾದಿ ವಿಷಯಂಗಳೈದು ವಾಗಾದಿ ಕರ್ಮೇಂದ್ರಿಂಯಂಗಳೈದು
ಮನಸಾದಿ ಪಂಚಕಂಗಳೈದು, ಆತ್ಮತತ್ವ ಇಪ್ಪತ್ತೈದು,
ಕರ್ಮಸಾದಾಖ್ಯ ಕರ್ತೃಸಾದಾಖ್ಯ ಮೂರ್ತಸಾದಾಖ್ಯ,
ಅಮೂರ್ತ ಸಾದಾಖ್ಯ ಶಿವಸಾದಾಖ್ಯ.
ನಿವೃತ್ತಿಕಲೆ ಪ್ರತಿಷ್ಠಾಕಲೆ ವಿದ್ಯಾಕಲೆ ಶಾಂತ್ಯಕಲೆ ಶಾಂತ್ಯಾತೀತಕಲೆ.
ಇಂತು ವಿದ್ಯಾತತ್ವ ಹತ್ತು ಶಿವತತ್ವವೊಂದು
ಇಂತು ಮೂವತ್ತಾಱು ತತ್ವಂಗಳೊಳಗೆ
ಶಿವತತ್ವವೆ ತತ್ಪದ ಆತ್ಮತತ್ವವೆ ತ್ವಂಪದ ವಿದ್ಯಾತತ್ತ್ವವೆ ಅಸಿಪದ
ಅಕಾರದಲ್ಲಿ ತತ್ಪದ ಐಕ್ಯವಾಯಿತ್ತು.
ಉಕಾರದಲ್ಲಿ ತತ್ಪದ ಐಕ್ಯವಾಯಿತ್ತು.
ಮಕಾರದಲ್ಲಿ ಅಸಿಪದ ಐಕ್ಯವಾಯಿತ್ತು.
ಮಕಾರ ಅಕಾರ ಉಕಾರ ಏಕಾರ್ಥವಾಗಿ
ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗವಾಯಿತ್ತು.
ಆ ಷಟ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗದಲ್ಲಿ
ತತ್ಪದ ತ್ವಂಪದ ಅಸಿಪದ ನಿಕ್ಷೇಪವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಷಟ್ಸ್ಥಲಬ್ರಹ್ಮ ಷಟ್ಸ್ಥಲಬ್ರಹ್ಮವೆಂಬ ಷಟ್ಸ್ಥಲಬ್ರಹ್ಮದ ಭೇದವನಾರು ಬಲ್ಲರು?
ಷಟ್ಸ್ಥಲಬ್ರಹ್ಮದ ಭೇದವನಾರೂ ಅಱಿಯರು;
ಷಟ್ಸ್ಥಲಬ್ರಹ್ಮದ ಭೇದವಱಿದಡೆ, ಅಱಿಯದಂತಿರಬೇಕು.
ಷಟ್ಸ್ಥಲಬ್ರಹ್ಮದ ಭೇದವನಱಿದೆವೆಂಬರು, ಅಱಿದಪರಿಯಂತೊ?
ಷಟ್ಸ್ಥಲಬ್ರಹ್ಮದ ‘ನಿಃಶಬ್ದಬ್ರಹ್ಮಮುಚ್ಯತೆ’ ಎಂದು ಶ್ರುತಿಗಳು ಸಾರುತ್ತಿಹುದು.
ಷಟ್ಸ್ಥಲ ಬ್ರಹ್ಮದ ಭೇದವು ನಿಃಶಬ್ದಬ್ರಹ್ಮಗಲ್ಲದೆ ಅಱಿಯಬಾರದು.
ಅಱಿದಡೆ ಅಱಿಯದಂತಿರಬೇಕು; ಅಱಿದಡೆ ಅಱಿವುದು.
ಜಂಗಮವೆ ಲಿಂಗವೆಂದಱಿವುದು;
ಜಂಗಮ ಪಾದೋದಕ ಪ್ರಸಾದವನು ಲಿಂಗಕ್ಕೆ ಕೊಟ್ಟು ಕೊಳ್ಳಬಹುದು.
ಆ ಲಿಂಗ ಪ್ರಸಾದ ತಾಕೊಳ್ಳಬಹುದು.
ಆ ಲಿಂಗದೊಡನೆ ಸಹಭೋಜನ ಮಾಡಬಹುದು.
ಇಂತೀ ಭೇದವನಱಿಯದೆ ಉದ್ಧಂಡ ವೃತ್ತಿಯಲ್ಲಿ ಕೊಂಡನಾದಡೆ
ನಾಯಕ ನರಕ ತಪ್ಪದು ನೋಡಾ, ಅಪ್ರಮಾಣ ಕೂಡಲಸಂಗಮದೇವ.
ಭ್ರಮರನು ಚತುರ್ದಳ ಪದ್ಮದ ಮೇಲೆ ಆಡಿತ್ತು ನೋಡಾ.
ಭ್ರಮರನು ಚತುರ್ದಳ ಪದ್ಮದ ಮೇಲೆ ಆಡಿ ನೋಡಿ
ಷಡ್ದಳ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಷಡ್ದಳ ಪದ್ಮದ ಮೇಲೆ ಆಡಿ ನೋಡಿ
ದಶದಳ ಪದ್ಮಕ್ಕೆ ಬಂದಿತ್ತು ನೋಡಾ,
ಭ್ರಮರನು ದಶದಳ ಪದ್ಮದ ಮೇಲೆ ಆಡಿ ನೋಡಿ
ದ್ವಾದಶದಳ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ದ್ವಾದಶದಳ ಪದ್ಮದ ಮೇಲೆ ಆಡಿ ನೋಡಿ
ಷೋಡಶದಳ ಪದ್ಮಕ್ಕೆ ಬಂದಿತ್ತು ನೋಡಾ,
ಭ್ರಮರನು ಷೋಡಶದಳ ಪದ್ಮದ ಮೇಲೆ ಆಡಿ ನೋಡಿ
ದ್ವಿದಳ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ದ್ವಿದಳ ಪದ್ಮದ ಮೇಲೆ ಆಡಿ ನೋಡಿ
ಸಹಸ್ರದಳ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಸಹಸ್ರದಳ ಪದ್ಮದ ಮೇಲೆ ಆಡಿ ನೋಡಿ
ತ್ರಿದಳ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ತ್ರಿದಳ ಪದ್ಮದ ಮೇಲೆ ಆಡಿ ನೋಡಿ
ಏಕದಳ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಏಕದಳ ಪದ್ಮದ ಮೇಲೆ ಆಡಿ ನೋಡಿ
ಕಾಳಾಂಧರ ಪದ್ಮಕ್ಕೆ ಬಂದಿತ್ತು ನೋಡಾ.
ಭ್ರಮರನು ಆ ಕಾಳಾಂಧರ ಪದ್ಮದ ಮೇಲೆ ಆಡಿ ನೋಡಿ
ಸದ್ವಾಸನೆಯಕೊಂಡು ಅಲ್ಲಿಯೇ ಲಿಯ್ಯವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಕುಱುಹು ಕೆಟ್ಟು ಬೀಜದಲ್ಲಿ ಮೂಱು ನಿರಾಳವೃಕ್ಷ ಹುಟ್ಟಿತ್ತು.
ಒಂದು ವೃಕ್ಷ ಹನ್ನೆರಡು ಕೊಂಬಾದವು.
ಒಂದು ವೃಕ್ಷ ಹದಿನಾಱು ಕೊಂಬಾದವು.
ಒಂದು ವೃಕ್ಷ ಎಂಟು ಕೊಂಬಾದವು.
ಸದ್ವಾಸನೆಯೆಂಬ ಹೂವಾಯಿತ್ತು.
ಸಚ್ಚಿದಾನಂದವೆಂಬ ಕಾಯಾಯಿತ್ತು.
ನಿಃಶಬ್ದವೆಂಬ ಹಣ್ಣಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ಕುಂಡಲಿಶಕ್ತಿಯ ಬಾಯಲ್ಲಿ ಮೂಱು ಮಾತ್ರೆ ಹುಟ್ಟಿತ್ತು ನೋಡಾ.
ಒಂದು ಮಾತ್ರೆ ಆಱು ಮಾತ್ರೆಯಾಯಿತ್ತು.
ಒಂದು ಮಾತ್ರೆ ನಾಲ್ಕುಮಾತ್ರೆಯಾಯಿತ್ತು,
ಒಂದು ಮಾತ್ರೆ ಆಱು ಮಾತ್ರೆಯಾಯಿತ್ತು
ಈ ಹನ್ನೆರಡು ನಾಲ್ಕು ಹದಿನಾಱು ಮಾತ್ರೆಗಳಾದವು.
ಈ ಹದಿನಾಱು ಹದಿನಾಱು ಮೂವತ್ತೆರಡು ಮಾತ್ರೆಗಳಾದವು.
ಈ ಮೂವತ್ತೆರಡು ಮೂವತ್ತೆರಡು ಅಱುವತ್ತುನಾಲ್ಕು ಮಾತ್ರೆಗಳಾದವು.
ಈ ಭೇದವ ಬಲ್ಲಾತನೆ ಶಿವಯೋಗಿ ಲಿಂಗಾನುಭಾವಿ ಎಂಬೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ನಿರಾಮಯದೊಳು ನಿರಾಳಮಯವಾಗಿ ಹುಟ್ಟಿತ್ತು ನೋಡಾ.
ಒಂದು ಹೃತ್ಕಮಲ ಕರ್ಣಿಕೆ,
ಆ ಹೃತ್ಕಮಲ ಕರ್ಣಿಕೆ ಹನ್ನೆರಡೆಸಳಾಗಿಹುದು.
ಎಂಟೆಸಳೆ ಅಧೋಮುಖವಾಗಿಹುದು.
ನಾಲ್ಕೆಸಳೆ ಊರ್ಧ್ವಮುಖವಾಗಿಹುದು.
ಅಧೋಮುಖವಾಗಿಹ ಎಂಟೆಸಳ ಕರ್ಣಿಕೆಯ ಅಷ್ಟದಳ ಕಮಲ.
ಊರ್ಧ್ವಮುಖವಾಗಿಹ ನಾಲ್ಕೆಸಳ ಕರ್ಣಿಕೆಯೆ ಚೌಕಮಧ್ಯ,
ಆ ಎಂಟೆಸಳ ಕರ್ಣಿಕೆಯೆ ಸದ್ವಾಸನೆಯ ಜೀವಾತ್ಮನು.
ಆ ನಾಲ್ಕೆಸಳ ಕರ್ಣಿಕೆಯ ಸದ್ವಾಸನೆಯೆ ಪರಮಾತ್ಮನು.
ಈ ಜೀವ ಪರಮರಿಬ್ಬರನು ಬೆರಸಿ ಒಂದಾಗದೆ ಬಿಚ್ಚಿ ಬೇರಾಗದೆ
ನಿಲ್ಲಬಲ್ಲಾತನು ಪರಮಯೋಗಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
ನಿರಾಮಯದೊಳು ಹುಟ್ಟಿತ್ತು ನೋಡಾ ಒಂದು ಪದ್ಮ.
ಸೂರ್ಯಚಂದ್ರಾಗ್ನಿ ಪ್ರಕಾಶವಾಗಿ ಆ ಪದ್ಮ ಹನ್ನೆರಡೆಸಳಾಗಿಹುದು.
ಎಂಟೆಸಳೆ ಅಧೋಮುಖವಾಗಿಹುದು, ಅದು ಅಷ್ಟದಳ ಕಮಲ.
ನಾಲ್ಕೆಸಳೆ ಊರ್ಧ್ವಮುಖವಾಗಿಹುದು, ಅದು ಚೌಕಮಧ್ಯ.
ಎಂಟೆಸಳ ಸಂಯೋಗವೆ ನಿರಾಳ ಪ್ರಣವ ಪೀಠ
ಆ ಪುಷ್ಪದ ಸದ್ವಾಸನೆ ತಾನೆ ನಮ್ಮ
ಅಪ್ರಮಾಣ ಕೂಡಲಸಂಗಮದೇವ.
ನಿರಾಳ ಅಷ್ಟದಳ ಕಮಲದೊಳು ನಿರಂಜನ ಚೌಕಮಧ್ಯ ನಾಲ್ಕೆಸಳ ನೋಡಾ,
ಅದರ ಬೀಜಾಕ್ಷರ ಭೇದವನಾರು ಬಲ್ಲರು?
ನಿರಂಜನ ಪ್ರಣವ ಅವಾಚ್ಯ ಪ್ರಣವ ಕಲಾ ಪ್ರಣವ ಅನಾದಿ ಪ್ರಣವ
ಅಕಾರ ಪ್ರಣವ ಉಕಾರ ಪ್ರಣವ ಮಕಾರ ಪ್ರಣವ ಆದಿ ಪ್ರಣವ
ಅಖಂಡ ಗೋಳಕಾಕಾರ ಪ್ರಣವ ಜ್ಯೋತಿ ಪ್ರಣವ ಮಹಾಜ್ಯೋತಿ ಪ್ರಣವ
ಅಖಂಡ ಮಹಾಜ್ಯೋತಿ ಪ್ರಣವ ನಿರಾಳ ಅಷ್ಟದಳ ಕಮಲ
ನಿರಂಜನ ಚೌಕಮಧ್ಯದ ಬೀಜಾಕ್ಷರದ ಭೇದವ ನಿಜಲಿಂಗೈಕ್ಯರು ಬಲ್ಲರಲ್ಲದೆ
ಮಿಕ್ಕಿನ ವೇಷಧಾರಿಗಳೆತ್ತ ಬಲ್ಲರಯ್ಯ,
ಅಪ್ರಮಾಣ ಕೂಡಲಸಂಗಮದೇವ.
ಊರ್ಧ್ವಮುಖ ಅಧೋಮುಖ ಸಮಾದಿಷ್ಟಿಯೆಂದು
ಅಂತರಂಗದಲ್ಲಿ ತ್ರಿವಿಧ ಮುಖಂಗಳುಂಟು,
ಅದೆಂತೆಂದಡೆ :
ಊರ್ಧ್ವಮುಖ ಹದಿನಾಱು ಮುಖವಾಗಿಹುದು.
ಅಧೋಮುಖ ಮುವತ್ತೆರಡು ಮುಖವಾಗಿಹುದು.
ಸಮಾದಿಷ್ಟಿ ಅಱುವತ್ತುನಾಲ್ಕು ಮುಖವಾಗಿಹುದು.
ಈ ತ್ರಿವಿಧ ಮುಖವನಱಿದು ಅರ್ಚಿಸಿ,
ಸಚ್ಚಿದಾನಂದವೆಂಬ ದ್ರವ್ಯವ ತ್ರಿವಿಧ ಮುಖದಲ್ಲಿ
ಅರ್ಪಿಸಬಲ್ಲಾತ ತ್ರಿವಿಧ ಪ್ರಸಾದಿ, ತ್ರಿವಿಧ ಪರಿಣಾಮಿ,
ತ್ರಿವಿಧ ಐಕ್ಯ ತಾನಾದ ಶರಣ ನೋಡಾ,
ಅಪ್ರಮಾಣ ಕೂಡಲಸಂಗಮದೇವ.
Leave A Comment