೪೫೫
ನಿರಾಮಯವೆಂಬ ಬಾವಿಗೆ
ನಿರಂಜನವೆಂಬ ಹುಲ್ಲೆ ತೃಷ್ಣೆಯಾಗಿ ಬಂದು
ನಿರಾಳವೆಂಬ ಅಮೃತವನುಂಡು
ತೃಷ್ಣೆಯಡಗಿ ಸಾಲದೆ ಕುಣಿಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೫೬
ರೂಪಿಲ್ಲದೆ ಇಹುದು ನೋಡಾ ಜೀವಾತ್ಮನು.
ನೆಲೆಯಿಲ್ಲದೆ ಇಹುದು ನೋಡಾ ಅಂತರಾತ್ಮನು.
ಜೀವಾಂತರಾದಿಗಳ ಶಿರೋಮಧ್ಯದಲ್ಲಿ ಯಂತ್ರವಾಹಕನಾಗಿ
ಆಡಿಸುತ್ತಿಹನು ನೋಡಾ ಪರಮಾತ್ಮನು,
ಅಪ್ರಮಾಣ ಕೂಡಲಸಂಗಮದೇವ.

೪೫೭
ದೇಹ ಪ್ರಾಣ ಇಂದ್ರಿಯಕರಣಂಗಳ ಕೂಡಿ
ವರ್ತಿಸುತ್ತಿಹುದು ನೋಡಾ ಜೀವಾತ್ಮನು.
ದೇಹ ಪ್ರಾಣ ಇಂದ್ರಿಯಂಗಳನತಿಗಳೆದು ಕರಣಂಗಳ ಕೂಡಿ
ವರ್ತಿಸುತ್ತಿಹುದು ನೋಡಾ ಅಂತರಾತ್ಮನು.
ದೇಹ ಪ್ರಾಣ ಇಂದ್ರಿಯಕರಣಂಗಳನತಿಗಳೆದು
ಒಬ್ಬನೆ ನಿಶ್ಚಿಂತನಾಗಿಹನು ನೋಡಾ ಪರಮಾತ್ಮನು
ಅಪ್ರಮಾಣ ಕೂಡಲಸಂಗಮದೇವ.

೪೫೮
ಕಣ್ಣಿಲ್ಲದಂಧಕ ಕಾಲಿಲ್ಲದ ಪಶುವ ಮೇಸುವ ನೋಡಾ.
ಕಣ್ಣಿಲ್ಲದಂಧಕ ತಗುಳುವ ಕಾಲಿಲ್ಲದ ಪಶುವೊಡದು,
ಗಗನದಲ್ಲಿ ತಲೆಯಿಲ್ಲದ ವ್ಯಾಘ್ರ ಹಿಡಿದು ನುಂಗಿತ್ತು ಕಂಡು
ಬೆರಗಾದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೫೯
ಕೋಣನ ಬಸುರಲ್ಲಿ ಒಂದು ಕಪಿ ಹುಟ್ಟಿ ಕುಣಿವುದ ಕಂಡೆನು.
ಕುಂಡಲಿಯ ಮಧ್ಯದಲ್ಲಿ ಒಂದು ಮುಂಡ ಹುಟ್ಟಿ
ಕುಣಿದ ಕಪಿಯ ಕಂಡು ಬೆಱಗಾದೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬೦
ಆಣವ ಮಾಯೆ ಕಾರ್ಮಿಕವೆಂಬ ಮೂಱು ಕಲ್ಲನಿರಿಸಿ
ಜ್ಞಾನೇಂದ್ರಿಯ ಕಮೇಂದ್ರಿಯವೆಂಬ ಹೊಟ್ಟ ನೀಡಿ
ಅಷ್ಟಮದವೆಂಬ ಕಟ್ಟಿಗೆಯ ತಂದು ಜ್ಞಾನಾಗ್ನಿಯೆಂಬ ಕಿಚ್ಚನೊಟ್ಟಿ
ತನುವೆಂಬ ಭಾಜನವ ತೊಳದು
ಸ್ವಯಂ ಪ್ರಕಾಶವೆಂಬ ಉದಕವ ತುಂಬಿ, ಮನವೆಂಬ ಸಯಿಧಾನವ ನೀಡಿ
ಜ್ಞಾನಾಗ್ನಿಯಲ್ಲಿ ಪಾಕವಾದ ಪ್ರಸಾದವನು ಮಹಾಲಿಂಗಕ್ಕೆ ಅರ್ಪಿಸುವ
ಮಹಾಮಹಿಮರ ತೋರಾ,
ಅಪ್ರಮಾಣ ಕೂಡಲಸಂಗಮದೇವ.

೪೬೧
ನಾದವೆಂಬ ಕೆಱೆಯೊಳಗೆ ಬಿಂದುವೆಂಬ ಅಮೃತವ ತುಂಬಿ
ಪಂಚೇಂದ್ರಿಯವೆಂಬ ಗದ್ದೆಗೆ ಕರಣಂಗಳೆಂಬ ಕಾಲುವೆಯ ತಿದ್ದಿ
ಜಾತಿ-ವಿಜಾತಿಯೆಂಬ ಕೆಸರನುತ್ತು, ಪುಣ್ಯಪಾಪವೆಂಬ ಕಳೆಯ ಕಿತ್ತು
ಓಂನಮಶಿವಾಯವೆಂಬ ಬೀಜವ ಬಿತ್ತಿ
ಸ್ವಯಂಪ್ರಕಾಶವೆಂಬ ಅಗ್ಘವಣೆಯ ಕಟ್ಟಿ
ಪರಮಾನಂದವೆಂಬ ಬೆಳೆಯಾದವು,
ಆಣವ ಮಾಯೆ ಕಾರ್ಮಿಕವೆಂಬ ಹಂದಿಯ
ಹೊದ್ದಲೀಸದೆ ಹೆಡನೊತ್ತಿದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬೨
ಕಾಲಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ತಲೆಯಿಲ್ಲದ ಶಿಷ್ಯಂಗೆ ಕಾಲಿಲ್ಲದ ಗುರು.
ಕಾಲಿಲ್ಲದ ಗುರುವನು ತಲೆಯಿಲ್ಲದ ಶಿಷ್ಯನಱಿಯನು.
ತಲೆಯಿಲ್ಲದ ಶಿಷ್ಯನು ಕಾಲಿಲ್ಲದ ಗುರುವಱಿಯನು.
ಕಾಲಿಲ್ಲದ ಗುರುವ ತಲೆಯಿಲ್ಲದ ಶಿಷ್ಯನಱಿದಡೆ
ಕಾಲಿಲ್ಲದ ಗುರು ಆ ತಲೆಯಿಲ್ಲದ ಶಿಷ್ಯನ
ನುಂಗಿತ್ತ ಕಂಡು ಬೆರಗಾದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬೩
ಆವುದೊಂದು ರೂಪನು ಕಂಗಳು ಕಾಣವು
ಆವುದೊಂದು ಶಬ್ದವ ಕಿವಿಗಳು ಕೇಳವು
ಆವುದೊಂದು ಪರಿಣಾಮವ ಮನವಱಿಯದು
ಆವುದೊಂದು ರುಚಿಯ ಜಿಹ್ವೆಯಱಿಯದು
ಆವುದೊಂದು ಪರಿಮಳ ನಾಶಿಕವಱಿಯದು
ಆವುದೊಂದು ಸ್ಪರ್ಶನವ ತ್ವಕ್ಕಱಿಯದು
ಎಲ್ಲರಲ್ಲಿಯ ಅಱಿವ ಮಹಾಘನ ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವ ಆಱೂ ಅಱಿಯರು
ಅಪ್ರಮಾಣ ಕೂಡಲಸಂಗಮದೇವ.

೪೬೪
ಶಿವನುಡಿದಕ್ಷರವೆಂಬ ಅಣ್ಣಗಳು ನೀವು ಕೇಳಿರೆ,
ಶಿವನು ಐದು ವರ್ಣವೆಂಬ ಅಣ್ಣಗಳು ನೀವು ಕೇಳಿರೆ,
ಶಿವನು ನಿರ್ಮಲನೆಂಬ ಅಣ್ಣಗಳು ನೀವು ಕೇಳಿರೆ,
ಶಿವನು ನಿಃಕಲನೆಂಬ ಅಣ್ಣಗಳು ನೀವು ಕೇಳಿರೆ,
ಶಿವನು ಐದಕ್ಷರವಲ್ಲ, ಐದು ವರ್ಣವಲ್ಲ, ನಿರ್ಮಲನಲ್ಲ
ನಿಃಕಲನಲ್ಲ ನಿಃಕಲಾತೀತನು ನೋಡಾ ನಮ್ಮ
ಅಪ್ರಮಾಣ ಕೂಡಲಸಂಗಮದೇವ.

೪೬೫
ಶಿವನು ಐದಕ್ಷರವು ಆಗಬಲ್ಲ, ಐದು ವರ್ಣವು ಆಗಬಲ್ಲ
ನಿರ್ಮಲನು ಆಗಬಲ್ಲ, ನಿಃಕಲನು ಆಗಬಲ್ಲನು.
ನಿಃಕಲಾತೀತನಾಗಿ ಏನೂ ಎನಲಿಲ್ಲದ ಮಹಾಘನ
ಶೂನ್ಯನಾಗಬಲ್ಲನಯ್ಯಾ, ನಮ್ಮ ಅಪ್ರಮಾಣ ಕೂಡಲಸಂಗಮದೇವ.

೪೬೬
ತ್ರಿಪುರಂಗಳ ಕೆಡೆ ಮೆಟ್ಟಿ, ತುರ್ಯ ತುರ್ಯಾತೀತವ ದಾಂಟಿ
ವ್ಯೋಮಾತೀತಕತ್ತತ್ತವಾಗಿಹ ಮಹಾಘನದಲ್ಲಿ ನಿಂದ ಶರಣನು
ಉದಯಾಸ್ತಮಾನವೆಂಬೆರಡಱಿದ ಶಿವಯೋಗಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬೭
ಮಹಾವಾಯುವ ಹಿಡಿದು ಮೂಲಜ್ವಾಲೆಯನೆಬ್ಬಿಸಿ,
ಅಗ್ನಿಮಂಡಲ ಆದಿತ್ಯಮಂಡಲ ಚಂದ್ರಮಂಡಲವ ದಾಂಟಿ,
ಹರಿ ವಿರಿಂಚಿಗಳಱಿಯದ ಮಹಾಬಾಗಿಲ ತೆಗೆದು,
ಮೇಲಣ ಬಯಲಾನಂದಾಮೃತವನುಂಡು,
ನಿರ್ವಯಲಿಲ್ಲ ನಿಂದನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬೮
ಎಡ ಬಲನ ತಡೆದು, ಮೇರುಗಿರಿ ಶಿಖರ
ಪಶ್ಚಿಮ ದ್ವಾರದಲ್ಲಿ ನಿಲಿಸಿದಡೆ,
ಆ ಶಿಖರದ್ವಾರದ ಮಧ್ಯದಲ್ಲಿ ಅಮಲನಾದವನು
ಅಮಲಾತೀತವೆಂಬ ಮಹಾನಾಟ್ಯವನು ಕಾಣಬಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೬೯
ಜಂಬುಕ ಹದಿನಾಲ್ಕು ವಿಷಯವನುಂಡು ಸತ್ತವು ನೋಡಾ !
ಹಿರಿಯ ಕುದುರೆ ಹತ್ತು ಏಕಮುಖವಾಯಿತ್ತು ನೋಡಾ !
ತುರ್ಯ ತುರ್ಯಾತೀತದಲ್ಲಿ ಲಿಯ್ಯವಾಯಿತ್ತು.
ಆ ತುರ್ಯಾತೀತ ಮಹಾಘನ ಗಂಭೀರದಲ್ಲಿ ಲಯವಾಯಿತ್ತು ನೋಡಾ !
ಅಪ್ರಮಾಣ ಕೂಡಲಸಂಗಮದೇವ.

೪೭೦
ಪದ್ಮವೊಂದು ಮೊಗ್ಗೆ ಮೂಱುಂಟು ನೋಡಾ !
ಮೂಱು ವಿಕಸಿತವಾಗಿ ಸ್ವಯಂ ಪ್ರಕಾಶದ ಬೆಳಗಿನೊಳಗೆ
ಓಲಾಡುತ್ತಿದ್ದೆನು.
ಆ ಸ್ವಯಂಪ್ರಕಾಶದ ಬೆಳಗಿನ ಬೆಳಗನೊಳಕೊಂಡು
ಆ ಸ್ವಯಂಪ್ರಕಾಶದ ಬೆಳಗು ತಾನಾದ ಶರಣನ
ಪೂರ್ವವೆಂದು ಅವರ ಶ್ರೀಪಾದಕ್ಕೆ ನಮೋನಮೋ
ಎನುತಿರ್ದವು ನೋಡಾ ಶ್ರುತಿಗಳು,
ಅಪ್ರಮಾಣ ಕೂಡಲಸಂಗಮದೇವ.

೪೭೧
ಏಳು ಸುತ್ತಿನ ಕೋಟೆಗೆ ಒಂಬತ್ತು ಬಾಗಿಲು,
ಇಪ್ಪತ್ತೈದು ಗ್ರಾಮ ನೋಡಾ !
ಇಪ್ಪತ್ತೈದು ಗ್ರಾಮದೊಳಗೆ ಎಂಟಾನೆ ಹತ್ತು ಕುದುರೆ
ಅಱುವತ್ತಾಱು ಕೋಟಿ ಕಾಲಾಳು
ಐವರು ತಳವಾರರು ನಾಲ್ವರು ಪ್ರಧಾನಿಗಳು.
ಏಳು ಮಂದಿ ಅರಸರು, ಒಬ್ಬ ರಾಯನು,
ಇಷ್ಟನು ಕೂಡಿಕೊಂಡು ಹನ್ನೆರಡು ಗಾವುದ ದಾಳಿ ಹೋಗಿ,
ಎಂಟುಗಾವುದ ತಿರುಗಲೊಡನೆ
ಆ ಇಪ್ಪತ್ತೈದು ಗ್ರಾಮವನು ಎಂಟಾನೆಯನು
ಹತ್ತು ಕುದುರೆಯನು ಅಱುವತ್ತಾಱುಕೋಟಿ ಕಾಲಾಳನು
ಐವರು ತಳವಾರರನು ನಾಲ್ವರು ಪ್ರಧಾನಿಗಳನು
ಏಳು ತಳವಾರರನು ನಾಲ್ವರು ಪ್ರಧಾನಿಗಳನು
ಏಳು ಮಂದಿ ಅರಸುಗಳನು ಒಬ್ಬ ರಾಯನನು
ಒಬ್ಬ ಸೂಳೆ ನುಂಗಿದಳು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೪೭೨
ಒಂದಾದೆನೆಂಬ ಅಣ್ಣಗಳು ನೀವು ಕೇಳಿರೆ,
ಎರಡೆಂಬ ಅಣ್ಣಗಳು ನೀವು ಕೇಳಿರೆ,
ಒಂದಾದಡೊಂದು ಮೋಕ್ಷವಿಲ್ಲ ಕೇಳಿರಣ್ಣಾ,
ಎರಡಾದಡೆ ಬೇಱಾಯಿತ್ತು ಕೇಳಿರಣ್ಣಾ,
ಒಂದಾಗಿ ನಿಂದುದು ಮೋಕ್ಷವಿಲ್ಲ,
ಎರಡಾಗಿ ಹೋದರು ಮೋಕ್ಷವಿಲ್ಲ,
ನಿಲ್ಲದೆ ನಿಂದ ನಿಲವಿಂಗೆ ನಮೋ ನಮೋ ಎಂಬೆ ನೋಡಾ !
ಅಪ್ರಮಾಣ ಕೂಡಲಸಂಗಮದೇವ.

೪೭೩
ಒಂದೆಂಬೆನೆ ಎರಡಾಗಿ ತೋಱುತ್ತಿದೆ
ಎರಡೆಂಬೆನೆ ಒಂದಾಗಿ ತೋಱುತ್ತಿದೆ
ಒಂದೆಂಬುದು ಅದ್ವೈತಿಯ ಮತ,
ಎರಡೆಂಬುದು ದ್ವೈತಿಯ ಮತ,
ಒಂದಲ್ಲ ಎರಡಲ್ಲ ಅಪ್ರಮಾಣ ಕೂಡಲಸಂಗಮದೇವ,
ನಿಮ್ಮ ಶರಣನ ಪರಿಯು ಬೇಱಿ.

೪೭೪
ಬೀಜವಿಲ್ಲದೆ ಅಂಕುರವಿಲ್ಲ, ಬೀಜವಿಲ್ಲದೆ ಅಂಕುರವ ಕಾಣಬಾರದು.
ಆ ಬೀಜವು ಅಂಕುರವು ಒಂದೆಂಬೆನೆ ಒಂದಲ್ಲ;
ಎರಡೆಂಬೆನೆ ಎರಡಲ್ಲ; ಬೀಜಾಂಕುರದನ್ಯಾಯ.
ಬಿಚ್ಚಿ ಬೇಱಲ್ಲ ಬೆರಸಿ ಒಂದಲ್ಲ
ಅಪ್ರಮಾಣ ಕೂಡಲಸಂಗಾ ನಿಮ್ಮ ಶರಣನು.

೪೭೫
ಅದೆ ಇದೆಂಬ ಅಣ್ಣಗಳು ನೀವು ಕೇಳಿರೆ,
ಅಯನಿಯಾ ನಾಯಿ, ನಿಯದಾ ನಾಯಿ ಎಂಬ ಶ್ರುತಿ ಹುಸಿ.
ಅಯನಿಯಲ್ಲ ನಿಯದಲ್ಲ,
ಅಪ್ರಮಾಣ ಕೂಡಲಸಂಗಾ ನಿಮ್ಮ ಶರಣ ನಿಂದ ನಿಲವಿಂಗೆ
ನಮೋ ನಮೋ ಎಂಬೆನು.

೪೭೬
ಉರಿಯ ಬೀಜದ ಬಾಯಲ್ಲಿ ಎರಡು ಪಕ್ಷಿ ಹುಟ್ಟಿತ್ತು ನೋಡಾ,
ಒಂದು ಪಕ್ಷಿಯೆ ಆದಿ, ಒಂದು ಪಕ್ಷಿಯೆ ಅನಾದಿ ನೋಡಾ,
ಒಂದು ಪಕ್ಷಿಯೆ ಸಕಲ, ಒಂದು ಪಕ್ಷಿಯೆ ನಿಃಕಲ.
ಎರಡು ಪಕ್ಷಿಯು ಕೂಡಿ ಸಕಲ ನಿಃಕಲವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೭೭
ಪರಬ್ರಹ್ಮ ಸ್ವರೂಪವಾಗಿಹ ಪ್ರಣವದ ಬಾವಿಯೊಳಗೆ
ಪರಮಾನಂದವೆಂಬ ಜಲವಿಹುದು.
ನಿರಾಳವೆಂಬ ನೇಣಿನಲ್ಲಿ ನಿರಂಜನವೆಂಬ ಮಡಕೆಯ ಕಟ್ಟಿ
ಪರಮಾನಂದವೆಂಬ ಜಲ ಸೇದಬಲ್ಲಾತನೆ ಶಿವಯೋಗಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೭೮
ಅನಂತ ಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶವಾಗಿಹ
ಪರಂಜ್ಯೋತಿಯಲ್ಲಿ ನಿರಾಮಯ ಬೀಜ ಹುಟ್ಟಿತ್ತು ನೋಡಾ !
ನಿರಾಮಯ ಬೀಜದಲ್ಲಿ ನಿರಾಳ ನಿರಂಜನವೆಂಬ ವೃಕ್ಷ ತಲೆದೋಱಿ,
ಉದಯಾಸ್ತಮಾನವೆಂಬೆರಡಱಿದ ಶರಣಂಗೆ,
ಅನಂತಕೋಟಿ ಶಾಖಾದಿಗಳಾದವು ನೋಡಾ,
ಪರಮಾನಂದವೆಂಬ ಹೂವಾಯಿತ್ತು.
ಪರಮ ಪರಿಣಾಮವೆಂಬ ಕಾಯಾಯಿತ್ತು.
ಪರಮ ಪರಿಣಾಮದ ತೃಪ್ತಿಯೆಂಬ ಹಣ್ಣಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೭೯
ಸಮತೆ ಸಮಾಧಾನವೆಂಬ ಭೂಮಿಯ ಮೇಲೆ
ನಿರಂಜನವೆಂಬ ಅಶ್ವಂಗೆ ನಿರಾಳವೆಂಬ ಹಲ್ಲಣವೆ ಬಿಗಿದು,
ಜ್ಞಾನವೆಂಬ ವಾಗ್ಯವನಿಕ್ಕಿ, ನಿರಾಮಯವೆಂಬ ರಾವುತನೇರಿ
ಮುನ್ನೂಱಱುವತ್ತಗಾವುದ ದಾಳಿಹೋಗಿ ತಿರುಗಿದ ನೋಡಾ.
ಈ ಅನುಭಾವವ ತಿಳಿದು ಅನುಭವಿಸಬಲ್ಲಾತನು ಪರಮಯೋಗಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೦
ಸೊಂಬರಿಹರು ಶುದ್ಧ ಬಯಲಲ್ಲಿ ನೋಡಾ,
ಸೊಂಬರಿಹರು ಶುದ್ಧ ಪ್ರಕಾಶದಲ್ಲಿ ನೋಡಾ,
ಸೊಂಬರಿಹರು ಶುದ್ಧ ಬಯಲಾತೀತದಲ್ಲಿ ನೋಡಾ,
ಸೊಂಬರಿಹರು ಅತ್ಯತಿಷ್ಟದ್ದಶಾಂಗುಲದಲ್ಲಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೧
ಸೊಂಬರಿಹರು ನಿರಾಳಮಯದಲ್ಲಿ
ಸೊಂಬರಿಹರು ನಿರಂಜನ ಪ್ರಕಾಶದಲ್ಲಿ
ಸೊಂಬರಿಹರು ನಿರಾಮಯದಲ್ಲಿ
ಸೊಂಬರಿಹರು ನಿರಾಮಯಾತೀತದಲ್ಲಿ
ಸೊಂಬರಿಹರು ಅತ್ಯತಿಷ್ಟದ್ದಶಾಂಗುಲದಲ್ಲಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೨
ಏನು ಏನೂ ಎನಲಿಲ್ಲದ ಹಾಳು ಬೆಟ್ಟದ ಮೇಲೊಂದು
ತಲೆಯಿಲ್ಲದ ಹುಲಿ ಹುಟ್ಟಿತ್ತು ನೋಡಾ.
ಆ ಹುಲಿ ಮೇಲಕೆ ಹದಿನಾಲ್ಕು ಸಾವಿರದ ನಾನೂಱಗಾವುದ
ನೆಗೆಯಿತ್ತು ನೋಡಾ
ಆ ಹುಲಿ ಒಂದು ಹುಲ್ಲೆಯ ಕಂಡು ತಿರುಗಿ
ಮೂಱೇಳು ಸಾವಿರದುಱನೂಱುಗಾವುದ ತಿರುಗಿ
ಹುಲ್ಲೆಯ ಹಿಡಿದು ನುಂಗಿ
ಹದಿನಾಲ್ಕು ಸಾವಿರದ ನಾನೂಱುಗಾವುದ ತಿರುಗಿತ್ತು.
ಇದನಱಿದು ಅನುಭವಿಸಬಲ್ಲಾತನೆ ಮಹಾಶರಣ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೩
ಎಂಟೆರಡೆಂಟೆರಡೆಂಬರು ಎಂಟೆರಡೆಂಟೆರಡೆಂಬ ಅಣ್ಣಗಳು ನೀವು ಕೇಳಿರೆ;
ಎಂಟೆರಡೆಂಟೆರಡೆಂಬ ಭೇದವನಱಿಯದಿದ್ದೆನು ನೋಡಾ ಅನೇಕ ಕಾಲವು,
ಎಂಟೆರಡೆಂಟೆರಡೆಂಬ ಭೇದವನಱಿಯಿಸಿದನೆನ್ನ ಸದ್ಗುರು ಸ್ವಾಮಿ;
ಎಂಟೆರಡೆಂಟೆರಡೆಂಬ ಭೇದವನಱಿವಿಂದಱಿದಡೆ
ಎಂಟೆರಡೆಂಬ ಭೇದ ಲಿಂಗಾಂಗ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೪
ಬೀಜವ ವೃಕ್ಷ ನುಂಗಿ ತೋಱಿದ ಘನವನೇನೆಂಬೆ ನೋಡಾ,
ವೃಕ್ಷ ಬೀಜವ ನುಂಗಿ ತೋಱಿದ ಘನವನೇನೆಂಬೆ ನೋಡಾ,
ಈ ಎರಡರ ಭೇದವನು ಉಪಮಿಸಬಾರದು.
ಬೀಜವೃಕ್ಷನ್ಯಾಯ ಲಿಂಗಾಂಗ ಭೇದ
ಬಿಚ್ಚಿ ಬೇಱಿಲ್ಲ ಬೆರಸಿ ಒಂದಲ್ಲ,
ಅಪ್ರಮಾಣ ಕೂಡಲಸಂಗಮದೇವ.

೪೮೫
ನಾದವ ಬಿಂದು ನುಂಗಿ ಬಿಂದುವ ನಾದ ನುಂಗಿ
ತೋಱಿತ್ತು ನೋಡಾ.
ಆ ನಾದ ಬಿಂದು ಕಳೆ ನುಂಗಿ ತೋಱಿದ ಮಹಾಘನವ
ಏನೆಂದು ಉಪಮಿಸುವೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೬
ಸರ್ಪನ ಬಾಯಲ್ಲಿ ಚಂದ್ರಸೂರ್ಯರುತ್ಪರ್ಯವಾಗಿ
ಮಹಾ ಮೇರುವ ತಿರುಗುವರು.
ಆ ಸರ್ಪಂಗೆಯು ಚಂದ್ರಸೂರ್ಯರಿಗು
ಅನೇಕ ಕಾಲ ಹಗೆಗಳಾಗಿಹವು.
ಆ ಸರ್ಪನು ಚಂದ್ರಸೂರ್ಯರ ಸಂಧಿಸಿ ಹಿಡಿಯಿತ್ತು ನೋಡಾ,
ಈ ಭೇದ೧ವನಱಿದ ಶರಣನು
ಉದಯಾಸ್ತಮಾನವೆಂದಱಿದ ಶಿವಯೋಗಿ ನೋಡಾ,

[1]
ಅಪ್ರಮಾಣ ಕೂಡಲಸಂಗಮದೇವ.

೪೮೭
ಹುಸಿವರ್ಣವಾಗಿ ಪಂಚಭೂತವಲ್ಲ
ಉದಯಾಸ್ತಮಾನವಾಗಿಹ ಚಂದ್ರಸೂರ್ಯರಲ್ಲ
ಆಱಿವರ್ಣಂಗಳಲ್ಲ, ಅರೂಪಲ್ಲ, ನಿರೂಪಲ್ಲ
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವ
ರೂಪೆಂದು ಕಾಬವ ಭವಭಾರಿಗಳ
ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ತಿರುಗಿ ತಿರುಗಿ
ಹುಟ್ಟಿಸದೆ ಮಾಣ್ಬನೆ;
ನಮ್ಮ ಅಪ್ರಮಾಣ ಕೂಡಲಸಂಗಮದೇವ.

೪೮೮
ಸರ್ಪನ ಹೆಸರ ಹೇಳಿದಡೆ ವಿಷ ಹತ್ತಿತ್ತು ನೋಡಾ.
ಅತ್ತತ್ತ ಏನ ಮಾಡುವೆ ಯಂತ್ರ ಮಂತ್ರವಾದಿಗಳಿಗಳವಲ್ಲ ನೋಡಾ.
ಒಂದಿಱುಹು ಅಱುವತ್ತಾಱು ಕೋಟಿ ಕೋಣನ ನುಂಗಿತ್ತು ನೋಡಾ.
ಸೊಳ್ಳೆಯ ಕಾಲ ಬೆರಳಲ್ಲಿ ಎಂಟಾನೆ ನಿಂತು ಆಡುತ್ತಿವೆ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೮೯
ಅನಾದಿ ಗಣೇಶ್ವರನ ನೆನಹುಮಾತ್ರದಲ್ಲಿ.
ಮೂಱು ಹುಲಿ ಹುಟ್ಟಿತ್ತು ನೋಡಾ.
ಒಂದು ಹುಲಿಗೆ ಆಱು ಮುಖ
ಒಂದು ಹುಲಿಗೆ ನಾಲ್ಕು ಮುಖ.
ಒಂದು ಹುಲಿಗೆ ಆಱು ಮುಖ
ಎರಡು ಹುಲಿಯು ನೆಗದಾಡುತ್ತಿಹುದು ನೋಡಾ,
ಆ ಎರಡು ಹುಲಿಯು ನೆಗದಾಡುವುದ ಕಂಡು
ಆ ನಾಲ್ಕು ಮುಖದ ಹುಲಿ ಆ ಎರಡು ಹುಲಿಯನು
ನುಂಗಿ ನುಂಗಿ ಉಗುಳಿತ್ತು ನೋಡಾ.
ಆ ಆಱು ಮುಖದ ಹುಲಿಗಳೆರಡು ಕೂಡಿ
ಆ ನಾಲ್ಕು ಮುಖದ ಹುಲಿಯ ನುಂಗಿ ಉಗುಳಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೯೦
ಕಣ್ಣಿಲ್ಲದೆ ನೋಡಿ ಕಾಮಿಸುವ ಶರಣ
ಕಾಲಿಲ್ಲದೆ ಗಮನಿಸಿ ಸುಳಿದಾಡುವ ಶರಣ
ಕೈಯಿಲ್ಲದೆ ಸೋಂಕಿ ಪರಿಣಾಮಿಸುವ ಶರಣ
ಬಾಯಿಲ್ಲದೆ ರುಚಿಸುವ ನೋಡಾ ಶರಣನು,
ಅಪ್ರಮಾಣ ಕೂಡಲಸಂಗಮದೇವ.

೪೯೧
ಶರಣನ ಸ್ವಾನುಭಾವವೆ ಕಣ್ಣಿಲ್ಲದ ನೋಟ
ಶರಣನ ಸ್ವಾನುಭಾವವೆ ಕಾಲಿಲ್ಲದ ಗಮನ
ಶರಣನ ಸ್ವಾನುಭಾವವೆ ಕೈಯಿಲ್ಲದ ಸೋಂಕು
ಶರಣನ ಸ್ವಾನುಭಾವವೆ ಬಾಯಿಲ್ಲದ ರುಚಿ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೯೨
ಶರಣನು ಸ್ವಾನುಭಾವದಲ್ಲಿ ಕಂಡನು ನಿರಾಮಯಾತೀತವ
ಶರಣನು ಸ್ವಾನುಭಾವದಲ್ಲಿ ಕಂಡು ಗಮನಿಸಿದ ನಿರಾಮಯಾತೀತವ
ಶರಣನು ಸ್ವಾನುಭಾವದಲ್ಲಿ ಕಂಡು ಗಮನಿಸಿ ಸವಿದು,
ಅಲ್ಲಿಯೆ ಲಿಯ್ಯವಾದ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೯೩
ಶರಣ ಸತ್ತು ಸುತ್ತಿದ್ದ ಪ್ರಪಂಚು ಕೆಟ್ಟವು ನೋಡಾ,
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವೆಂಬ-
ಮಹಾಗಣೇಶ್ವರನು ಹೊತ್ತುಕೊಂಡು ಹೋದರು ನೋಡಾ.
ಹೊತ್ತುಕೊಂಡು ಹೋಗಿ, ಅತ್ಯತಿಷ್ಟದ್ದಶಾಂಗುಲವೆಂಬ
ನಿಜಸಮಾಧಿಯ ತೆಗೆದು ನಿಕ್ಷೇಪಿಸಿದರು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೯೪
ಮೂಱು ಲೋಕವ ನುಂಗಿತ್ತು ನೋಡಾ ಒಂದು ಕಪ್ಪೆ,
ಆ ಕಪ್ಪೆಯ ನುಂಗಿದಳು ನೋಡಾ ಒಬ್ಬ ಸೂಳೆ,
ಆ ಸೂಳೆಯ ನುಂಗಿ ತೇಗಿತ್ತು ನೋಡಾ ಒಂದಿರುಹು,
ಅಪ್ರಮಾಣ ಕೂಡಲಸಂಗಮದೇವ.

೪೯೫
ಅಯ್ಯಾ ಎನ್ನ ಮನವ ಮಹಾಮಾಯೆ ಮುಚ್ಚಿಕೊಂಡ ಕಾರಣ
ಅನಂತ ಭವದಲ್ಲಿ ಬಂದೆನು ಅಯ್ಯಾ.
ಎನ್ನ ಮನ ಒಡೆದು ಚಿತ್ಪ್ರಕಾಶನಯನ ಮೂಡಿತ್ತು ನೋಡಾ ಅಯ್ಯಾ.
ಚಿತ್ಪ್ರಕಾಶನಯನ ಮೂಡಿ ಎನ್ನಸರ್ವಾಂಗವ ಭೇದಿಸಿ
ಅತ್ತತ್ತ ಮೀಱಿ ತೋಱಿತ್ತು ನೋಡಾ,
ಅಯ್ಯಾ ಎನ್ನ ಭವಬಂಧನದ ಬೇರ ಕಿತ್ತೀಡಾಡಿದೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೪೯೬
ಗಣೇಶ್ವರಿಯೆಂಬ ಮಹಾಶಕ್ತಿಗೆ ಆಱು ಮುಖವುಂಟು ನೋಡಾ.
ಆ ಗಣೇಶ್ವರಿಯೆಂಬ ಮಹಾಶಕ್ತಿ ಆಱು ಮಕ್ಕಳ ಹಡೆದಳು.
ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು,
ಇಬ್ಬರು ನಪುಂಸಕರು ನೋಡಾ.
ಇಬ್ಬರು ಗಂಡುಮಕ್ಕಳಿಗೆ ಹದಿನಾಱು ಹದಿನಾಱು ಮುಖ
ಇಬ್ಬರು ಹೆಣ್ಣುಮಕ್ಕಳಿಗೆ ಮೂವತ್ತೆರಡು ಮೂವತ್ತೆರಡು ಮುಖ.
ಇಬ್ಬರು ನಪುಂಸಕರಿಗೆ ಅಱುವತ್ತುನಾಲ್ಕು ಅಱುವತ್ತುನಾಲ್ಕು ಮುಖ ನೋಡಾ.
ಆ ಗಣೇಶ್ವರಿ ಎಂಬ ಮಹಾಶಕ್ತಿಯನು ಇಬ್ಬರು ಗಂಡುಮಕ್ಕಳು
ಇಬ್ಬರು ಹೆಮ್ಮಕ್ಕಳ ನಪುಂಸಕರಿಬ್ಬರನು ಮಹಾಘನಗಂಭೀರ ನುಂಗಿತ್ತು.
ಆ ಮಹಾ ಗಂಭೀರವನೊಂದು ಮದಾಳಿ ನುಂಗಿತ್ತ ಕಂಡೆನು ನೋಡಾ,
ಅಪ್ರಮಾಣ ಕೂಡಲಸಂಗಮದೇವ.


[1]     + ಉದಯಾಸ್ತಮಾನವಾಗಿಹ ಚಂದ್ರಸೂರ್ಯರಲ್ಲ, ಆಱುವರ್ಣಂಗಳಲ್ಲ, ಅರೂಪಲ್ಲ, ನಿರೂಪಲ್ಲ, ನಿರಾಳನಿರಂಜನ, ನಿರಾಮಯಾ ನಿರಾಮಯಾತೀತವರೂಪೆಂದು ಕಾಬವ ಭವಭಾರಿಗಳ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ತಿರುಗಿ ತಿರೆಗೆ ಹುಟ್ಟಿಸದೆ ಮಾಣ್ಬನೇ? ನಮ್ಮ (ತಾ.ಪ್ರ. ೭೬)