೬೬
ಬ್ರಹ್ಮಚಾರಿಯಾಗಿಹ, ನಿರಾಪೇಕ್ಷೆಯಾಗಿಹ
ಧನಾಪೇಕ್ಷೆಯಿಲ್ಲದಿಹ, ಆಗಮವಿಡಿದು ಆಚರಿಸುತ್ತಿಹ
ಗುರುತತ್ತ್ವ ಶಿವತತ್ತ್ವ ಪರತತ್ತ್ವ ಸ್ವರೂಪಂಗಳನಱಿದಿಹ
ಈ ಐದು ನಿಯಮ ಯೋಗ, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೬೭
ವಜ್ರಾಸನ, ಪದ್ಮಾಸನ, ಸ್ವಸ್ತಿಕಾಸನ, ಗೋಮುಖಾಸನ, ಕುಕ್ಕುಟಾಸನ
ಅರ್ಧಾಸನ, ಮಂಡುಕಾಸನ, ಸಿಂಹಾಸನ, ಭದ್ರಾಸನ, ಸುಖಾಸನ
ಈ ಹತ್ತು ಆಸನ ಯೋಗ, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೬೮
ಇಂದ್ರಿಯಂಗಳಿಗೆ ಒಡೆಯನಹಂತಾ ಮನಸ್ಸನು
ಮನಸ್ಸಿಗೆ ಒಡೆಯನಹಂತಾ ಪವನ
ಆ ಪವನಂಗಳಂ ಸಮಾನಂಗೊಂಡು
ಇಂದ್ರಿಯಂಗಳನು ಸೂಸಲಿಯ್ಯದೆ,
ಸ್ಥಿರಚಿತ್ತನಾಗಿಹುದೆ ಪ್ರತ್ಯಹಾರಯೋಗ, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೬೯
ಶ್ರೀಗುರುಲಿಂಗ ಭಾವವಿಲ್ಲದ ನಿರ್ಭಾವ ಲಿಂಗವ ಭಾವಸ್ಥಲಕ್ಕೆ ತಂದ,
ಆ ಭಾವಸ್ಥಲದ ಲಿಂಗವ ಮನ ಸ್ಥಲಕ್ಕೆ ತಂದ
ಆ ಮನಸ್ಥಲದ ಲಿಂಗವ ದೃಷ್ಟಿ ಸ್ಥಲಕ್ಕೆ ತಂದ
ಆ ದೃಷ್ಟಿಸ್ಥಲದ ಲಿಂಗವ ಕರಸ್ಥಲಕ್ಕೆ ತಂದ
ಆ ಕರಸ್ಥಲದ ಮೂರ್ತಿಯ ಧ್ಯಾನಿಸುವದೆ ಧ್ಯಾನಯೋಗ. ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೭೦
ಆ ಧ್ಯಾನವನೆ ಚರಿಸದಿಹುದೀಗ ಅಂತಃಕರಣ
ಚತುಷ್ಟಯಂಗಳು ಸುಸ್ಥಿರವಾಗಿಹುದೆ ಸಮಾಧಿಯೋಗ, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೭೧
ಇಂತು ಅಷ್ಟಾಂಗಯೋಗ, ಜಂಗಮ ಭಕ್ತಿಯ ವಿವರ :
ಅದೆಂತೆಂದಡೆ;
ಶುದ್ಧವಹ ಪಾಕಪ್ರಯತ್ನಂಗಳಿಂದ, ಪ್ರಿಯ ವಾಕ್ಯಂಗಳಿಂದ, ಸಹಜಹಸ್ತದಿಂದ
ಕುಲಛಲ ಧನ ಯವ್ವನ ರೂಪು ವಿದ್ಯ ರಾಜ್ಯ
ತಪವೆಂಬ ಅಷ್ಟಮದಂಗಳ ಬಿಟ್ಟು
ಅಹಂಕಾರವಂ ಬಿಟ್ಟು ನಿರಹಂಕಾರ ಭರಿತನಾಗಿ
ಉಪಾಧಿಯ ಬಿಟ್ಟು ನಿರುಪಾಧಿಕನಾಗಿ
ದೇಹಗುಣದ ಬಿಟ್ಟು ನಿರ್ದೇಹಿಕನಾಗಿ,
ಅಪೇಕ್ಷೆಯಂ ಬಿಟ್ಟು ನಿರಾಪೇಕ್ಷಿತನಾಗಿ
ಜಂಗಮವೆ ಲಿಂಗವೆಂದು ಮನಶುಚಿಯಿಂದ ಮಾಡುವದು
ಭಕ್ತಿ ಜಂಗಮ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೭೨
ಇನ್ನು ಪ್ರಥಮಲಿಂಗ ದ್ವಿತೀಯಲಿಂಗ ತೃತೀಯಲಿಂಗದಲ್ಲಿ ಸಮುದ್ಭವವಾದ,
ಪ್ರಥಮ ದ್ವಿತೀಯ ತೃತೀಯ ಪ್ರಸಾದದ ವಿವರ, ಅದೆಂತೆಂದಡೆ :
ಪ್ರಥಮ ಲಿಂಗದಲ್ಲಿ ಶುದ್ಧ; ದ್ವಿತೀಯ ಲಿಂಗದಲ್ಲಿ ಸಿದ್ಧ; ತೃತೀಯ ಲಿಂಗದಲ್ಲಿ ಪ್ರಸಿದ್ಧ.
ಶುದ್ಧ ಗುರುಪ್ರಸಾದ, ಸಿದ್ಧಲಿಂಗಪ್ರಸಾದ, ಪ್ರಸಿದ್ಧ ಜಂಗಮಪ್ರಸಾದ.
ಶಿವಜ್ಞಾನ ಮಹಾಪ್ರಸಾದ, ಇಂತು ಚತುರ್ವಿದ ಪ್ರಸಾದ.

ಇನ್ನು ಲಿಂಗೋದಕ, ಪಾದೋದಕ, ತ್ರಿವಿಧೋದಕ, ಪ್ರಸಾದೋದಕ
ಅದೆಂತೆಂದಡೆ :
ಲಿಂಗೋದಕ ಶಿವಮಂತ್ರ ಸಂಸ್ಕಾರದಿಂದಾದುದು
ಲಿಂಗಕ್ಕೆ ಮಜ್ಜನೆಕ್ಕೆರದುದೆ ಪಾದೋದಕ
ಲಿಂಗವಾರೋಗಣೆಯ ಮಾಡಿ ಮಿಕ್ಕುದೆ ಪ್ರಸಾದೋದಕ.
ಲಿಂಗೋದಕದಲ್ಲಿ ಪಾಕಪ್ರಯತ್ನ ಮಜ್ಜನಾದಿಗಳ ಮಾಡುವದು.
ಪಾದೋದಕದಲ್ಲಿ ಮುಖಪ್ರಕ್ಷಾಲನವ ಮಾಡುವದು;
ಮಸ್ತಕದ ಮೇಲೆ ತಳಿದು ಕೊಂಬುವದು
ಪ್ರಸಾದೋದಕವ ಭುಂಜಿಸುವದು ನೋಡಾ, ಅಪ್ರಮಾಣ ಕೂಡಲಸಂಗಮದೇವ.

೭೩
ಇನ್ನು ಷಟ್ಸ್ಥಲ ಅದೆಂತೆಂದಡೆ :
ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವ
ಲಿಂಗ ಜಂಗಮ ಒಂದೆ ಎಂಬ ಬುದ್ಧಿಯಾಗಿರುವ
ಲಾಂಛನಧಾರಿಗಳ ಕಂಡಡೆ ವಂದಿಸುವದೀಗ ಭಕ್ತಸ್ಥಲ ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೭೪
ಪರಸ್ತ್ರೀ ಪರಧನದಾಸೆಯ ಬಿಟ್ಟು ಶುದ್ಧನಾಗಿ
ಲಿಂಗನಿಷ್ಠೆಯುಳ್ಳಾತನು ಮಾಹೇಶ್ವರಸ್ಥಲ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೭೫
ಲಿಂಗ ಪ್ರಸಾದವ ಲಿಂಗ ನೆನಹಿನಿಂದ ಭೋಗಿಸುವದು,
ಅನರ್ಪಿತವ ಬಿಡುವುದೀಗ ಪ್ರಸಾದಿ ಸ್ಥಲ ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೭೬
ಪ್ರಾಣವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ
ಸುಖದುಃಖ ಭಯವು ತನಗಿಲ್ಲದಿಹುದೀಗ ಪ್ರಾಣಲಿಂಗಿಸ್ಥಲ, ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೭೭
ಲಿಂಗವೇ ಪತಿಯಾಗಿ, ತಾನು ಸತಿಯೆಂಬ ಭಾವದಲ್ಲಿ ಆಚರಿಸಿ
ಪಂಚೇಂದ್ರಿಯ ಸುಖಂಗಳ ಬಯಸದಿಹುದೀಗ ಶರಣಸ್ಥಲ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೭೮
ಕ್ಷೀರದೊಳಗಣ ಘೃತದಂತೆ, ತಿಲದೊಳಗಣ ತೈಲದಂತೆ,
ಪುಷ್ಪದೊಳಗಣ ಪರಿಮಳದಂತೆ, ಉಪ್ಪು ಉದಕವ ಕೂಡಿದಂತೆ,
ವಾರಿಕಲ್ಲು ವಾರಿಯ ಕೂಡಿದಂತೆ, ಕರ್ಪುರವು ಜ್ಯೋತಿಯ ಕೂಡಿದಂತೆ,
ಮನಲಿಂಗದಲ್ಲಿ ಲೀಯವಾಗಿಹುದೀಗ ಐಕ್ಯ ಸ್ಥಲ ನೋಡಾ;
ಅಪ್ರಮಾಣ ಕೂಡಲಸಂಗಮದೇವ.

೭೯
ಹೀಗೆಂದು ಆ ಶಿಷ್ಯಂಗೆ ಬೋಧಿಸಿ, ಕೃತಾರ್ಥನ ಮಾಡಿದ
ಸದ್ಗುರು ಲಿಂಗಗೆ ನಮೋ ನಮೋಯೆಂದು ಬದುಕಿದೆನು, ಕಾಣಾ,
ಅಪ್ರಮಾಣ ಕೂಡಲಸಂಗಮದೇವ.

೮೦
ಮತ್ತಂ ಆ ಶಿಷ್ಯನು ಸದ್ಗುರುಸ್ವಾಮಿಗೆ ದೀರ್ಘದಂಡ ನಮಸ್ಕಾರವಂ ಮಾಡಿ,
ಭಯ ಭಕ್ತಿಯಿಂದ ಎಲೆ ಸದ್ಗುರುಸ್ವಾಮಿ,
ಲೋಕಾದಿಲೋಕಂಗಳೇನು ಎನಲಿಲ್ಲದಂದು,
ಶಿವನು ಹೇಂಗಿರ್ದ್ದನೆಂಬುದನು ನಿರಂಜನ ಪ್ರಣಾಮದುತ್ಪತ್ಯವನು,
ಅವಾಚ್ಯ ಪ್ರಣವದುತ್ಪತ್ಯವನು, ಕಲಾಪ್ರಣವದುತ್ಪತ್ಯದ ಭೇದವನು,
ಅನಾದಿ ಪ್ರಣವದುತ್ಪತ್ಯದ ಭೇದವನು,
ಅಕಾರ, ಉಕಾರ, ಮಕಾರದುತ್ಪತ್ಯವನು,
ನಾದ ಬಿಂದು ಕಳೆಗಳ ಭೇದವನು, ಅಕಾರ ಉಕಾರ ಮಕಾರದಲ್ಲಿ ತಾರಕಸ್ವರೂಪ,
ದಂಡಕಸ್ವರೂಪ, ಕುಂಡಲಾಕಾರ, ಅರ್ಧಚಂದ್ರಕ, ದರ್ಪಣಾಕಾರ,
ಜ್ಯೋತಿಸ್ವರೂಪದುತ್ಪತ್ಯವನು, ಅದಕ್ಕೆ ಅಧಿದೇವತೆಯನು,
ತಾರಕಸ್ವರೂಪ, ದಂಡಸ್ವರೂಪ, ಕುಂಡಲಾಕಾರ,
ಅರ್ಧಚಂದ್ರಕ, ದರ್ಪಣಾಕಾರ, ಜ್ಯೋತಿಸ್ವರೂಪವನು
ಅಕಾರ, ಉಕಾರ, ಮಕಾರದಲ್ಲಿ ಅಡಗಿದ ಭೇದವನು,
ಅಕಾರ, ಉಕಾರ, ಮಕಾರ ನಾದಿಬಿಂದು ಕಳೆ,
ಪ್ರಕೃತಿ 8ಪ್ರಣವದಕ್ಕೆ

[1] ಆಧಾರಂಗಳ ಭೇದವನು.
ನಾದಬಿಂದು ಉಕಾರ ಮಕಾರವು ಕೂಡಿ ಶಿವಶಕ್ತಿಯಾಗಿ ಓಂಕಾರದ ಭೇದವನು,
ಆದಿಪ್ರಣವದುತ್ಪತ್ಯದ ಭೇದವನು, ದಶಚಕ್ರ ಉತ್ಪತ್ಯದ ಭೇದವನು.
ದಶಚಕ್ರದ ನೆಲೆಯನು, ದಶಚಕ್ರದ ನಿವೃತ್ತಿಯನು, ನವಪದ್ಮದುತ್ಪತ್ಯವನು,
ನವಪದ್ಮದ ನೆಲೆಯನು, ನವಪದ್ಮದ ನಿವೃತ್ತಿಯನು.
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ತಾರಕಸ್ವರೂಪ,
ದಂಡಕಸ್ವರೂಪ, ಕುಂಡಲಾಕಾರ, ಅರ್ಧಚಂದ್ರಕ, ದರ್ಪಣಾಕಾರ,
9ಅತಿಸೂಕ್ಷ್ಮ ಪಂಚಾಕ್ಷರಿಯ ಉತ್ಪತ್ಯವನು,
ಅತಿಸೂಕ್ಷ್ಮ ಪಂಚಾಕ್ಷರಿಯ ನೆಲೆಯನು,
ಅತಿಸೂಕ್ಷ್ಮ ಪಂಚಾಕ್ಷರಿಯ ನಿವೃತ್ತಿಯನು,[2]
ಜ್ಯೋತಿಸ್ವರೂಪದ ಕಾಂತಿಯನು, ಅತಿ ಸೂಕ್ಷ್ಮ ಪಂಚಾಕ್ಷರದ ಕಾಂತಿಯನು.
ಚಿದಾತ್ಮ ಪರಮಾತ್ಮನುತ್ಪತ್ಯವನು, ಚಿದಾತ್ಮ ಪರಮಾತ್ಮನ ನೆಲೆಯನು,
ಚಿದಾತ್ಮ ಪರಮಾತ್ಮನ ನಿವೃತ್ತಿಯನು, ಚಿದಾತ್ಮ ಪರಮಾತ್ಮನ ಕಾಂತಿಯನು.
ಐವತ್ತೆರಡಕ್ಷರದುತ್ಪತ್ಯವನು, ಐವತ್ತೆರಡಕ್ಷರದ ನೆಲೆಯನು,
ಐವತ್ತೆರಡಕ್ಷರದ ನಿವೃತ್ತಿಯನು.
ಏಕಾಕ್ಷರದುತ್ಪತ್ಯವನು, ತ್ರಿಯಾಕ್ಷರದುತ್ಪತ್ಯವನು, ಸಹಸ್ರಾಕ್ಷರದುತ್ಪತ್ಯವನು,
ಏಕಾಕ್ಷರದ ನೆಲೆಯನು, ತ್ರಿಯಾಕ್ಷರದ ನೆಲೆಯನು, ಸಹಸ್ರಾಕ್ಷರದ ನೆಲೆಯನು,
ಏಕಾಕ್ಷರದ ನಿವೃತ್ತಿಯನು, ತ್ರಿಯಾಕ್ಷರದ ನಿವೃತ್ತಿಯನು,
ಸಹಸ್ರಾಕ್ಷರದ ನಿವೃತ್ತಿಯನು,
ಷಡ್ವಿಧ ಮುಖಂಗಳುತ್ಪತ್ಯವನು, ಷಡ್ವಿಧ ಮುಖಂಗಳ ನೆಲೆಯನು,
ಷಡ್ವಿಧ ಮುಖಂಗಳ ನಿವೃತ್ತಿಯನು, ಷಡ್ವಿಧ ಭೂತಂಗಳುತ್ಪತ್ಯವನು,
ಷಡ್ವಿಧ ಭೂತಂಗಳ ನೆಲೆಯನು, ಷಡ್ವಿಧ ಭೂತಂಗಳ ನಿವೃತ್ತಿಯನು,
ಷಡ್ವಿಧ ಲಿಂಗದುತ್ಪತ್ಯವನು, ಷಡ್ವಿಧ ಲಿಂಗಗಳ ನೆಲೆಯನು,
ಷಡ್ವಿಧ ಲಿಂಗಗಳ ನಿವೃತ್ತಿಯನು, ಷಡ್ವಿಧ ಕಲೆಗಳುತ್ಪತ್ಯವನು,
ಷಡ್ವಿಧ ಕಲೆಗಳ ನೆಲೆಯನು, ಷಡ್ವಿಧ ಕಲೆಗಳ ನಿವೃತ್ತಿಯನು,
ಷಡ್ವಿಧ ಸಾದಾಖ್ಯದುತ್ಪತ್ಯವನು, ಷಡ್ವಿಧ ಸಾದಾಖ್ಯದ ನೆಲೆಯನು,
ಷಡ್ವಿಧ ಸಾದಾಖ್ಯದ ನಿವೃತ್ತಿಯನು, ಷಡ್ವಿಧ ಹಸ್ತಂಗಳುತ್ಪತ್ಯವನು
ಷಡ್ವಿಧ ಹಸ್ತಂಗಳ ನೆಲೆಯನು, ಷಡ್ವಿಧ ಹಸ್ತಂಗಳ ನಿವೃತ್ತಿಯನು,
ನವಶಕ್ತಿಯ ಉತ್ಪತ್ಯವನು, ನವಶಕ್ತಿಯ ನೆಲೆಯನು.
ನವಶಕ್ತಿಯ ನಿವೃತ್ತಿಯನು, ನವ ಅಧಿದೇವತೆಗಳುತ್ಪತ್ಯವನು,
ನವ ಅಧಿದೇವತೆಗಳ ನೆಲೆಯನು, ನವ ಅಧಿದೇವತೆಗಳ ನಿವೃತ್ತಿಯನು,
ಅಷ್ಟನಾದದುತ್ಪತ್ಯವನು, ಅಷ್ವನಾದದ ನೆಲೆಯನು, ಅಷ್ಟನಾದದ ನಿವೃತ್ತಿಯನು,
ಷಡ್ವಿಧ ಭಕ್ತಿಯ ಉತ್ಪತ್ಯವನು, ಷಡ್ವಿಧ ಭಕ್ತಿಯ ನೆಲೆಯನು,
ಷಡ್ವಿಧ ಭಕ್ತಿಯ ನಿವೃತ್ತಿಯನು, ಷಡ್ವಿಧ ಪರಿಣಾಮದುತ್ಪತ್ಯವನು.
ಷಡ್ವಿಧ ಪರಿಣಾಮದ ನೆಲೆಯನು, ಷಡ್ವಿಧ ಪರಿಣಾಮದ ನಿವೃತ್ತಿಯನು.
ಚತುರ್ವೇದದುತ್ಪತ್ಯವನು, ಚತುರ್ವೇದದ ನೆಲೆಯನು,
ಚತುರ್ವೇದದ ನಿವೃತ್ತಿಯನು,
ಅಜಪೆ ಗಾಯತ್ರಿ ಉತ್ಪತ್ಯವನು, ಅಜಪೆ ಗಾಯತ್ರಿ ನೆಲೆಯನು,
ಅಜಪೆ ಗಾಯತ್ರಿಯ ನಿವೃತ್ತಿಯನು, ಷಡ್ವಿಧ ಚಕ್ರಾರ್ಪಣದ ಭೇದವನು,
ಇಷ್ಟಪ್ರಾಣ ಭಾವಲಿಂಗದ ಭೇದವನು, ಇಷ್ಟಪ್ರಾಣ ಭಾವಲಿಂಗದಲ್ಲಿ
ತಾರಕಸ್ವರೂಪ, ದಂಡಕಸ್ವರೂಪ ಕುಂಡಲಾಕಾರ.
ಅರ್ಧ ಚಂದ್ರಕದರ್ಪಣಾಕಾರ, ಜ್ಯೋತಿ ಸ್ವರೂಪವು ಅಡಗಿಹ ಭೇದವನು,
ಅಕಾರ, ಉಕಾರ, ಮಕಾರ ಈ ಮೂರು ಕೂಡಿ ಏಕಾರ್ಥವಾಗಿ,
ಅಖಂಡ ಜ್ಯೋತಿರ್ಮಯ ಲಿಂಗವಾದ ಭೇದವನು,
ಆತ್ಮನುತ್ಪತ್ಯವನು, ಆತ್ಮನ ನೆಲೆಯನು, ಆತ್ಮನ ನಿವೃತ್ತಿಯನು,
ಪ್ರಥ್ವಿ, ಅಪ್ಪು, ತೇಜ, ವಾಯು, ಆಕಾಶದುತ್ಪತ್ಯವನು,
ಪ್ರಥ್ವಿ, ಅಪ್ಪು, ತೇಜ, ವಾಯು, ಆಕಾಶದ ನೆಲೆಯನು,
ಪ್ರಥ್ವಿ, ಅಪ್ಪು, ತೇಜ, ವಾಯು, ಆಕಾಶದ ನಿವೃತ್ತಿಯನು,
ಷಟ್ ಶಕ್ತಿಗಳುತ್ಪತ್ಯವನು,
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನುತ್ಪತ್ಯವನು.
ಭಕ್ತ ಮಹೇಶ್ವರ ಪ್ರಸಾದ ಪ್ರಾಣಲಿಂಗಿ ಶರಣ ಐಕ್ಯನ ನೆಲೆಯನು.
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನ ನಿವೃತ್ತಿಯನು.
ಷಡ್ವಿಧ ಹಸ್ತದುತ್ಪತ್ಯವನು, ಷಡ್ವಿಧ ಹಸ್ತದ ನೆಲೆಯನು.
ಷಡ್ವಿಧ ಹಸ್ತಂಗಳ ನಿವೃತ್ತಿಯನು, ಷಡ್ವಿಧ ಲಿಂಗದುತ್ಪತ್ಯವನು.
ಷಡ್ವಿಧ ಲಿಂಗದ ನೆಲೆಯನು, ಷಡ್ವಿಧ ಲಿಂಗದ ನಿವೃತ್ತಿಯನು.
ಷಡ್ವಿಧ ಮುಖಂಗಳುತ್ಪತ್ಯವನು, ಷಡ್ವಿಧ ಮುಖಂಗಳ ನೆಲೆಯನು.
ಷಡ್ವಿಧ ಮುಖಂಗಳ ನಿವೃತ್ತಿಯನು, ಷಡ್ವಿಧ ಪರಿಣಾಮದುತ್ಪತ್ಯವನು,
ಷಡ್ವಿಧ ಪರಿಣಾಮದ ನೆಲೆಯನು, ಷಡ್ವಿಧ ಪರಿಣಾಮದ ನಿವೃತ್ತಿಯನು,
ಷಡ್ವಿಧ ಅರ್ಪಿತ ಅವಧಾನದ ಭೇದವನು, ನಿರಾಳ ದಶಚಕ್ರಂಗಳ ಭೇದವನು,
ನಿರಾಮಯ ಷಟ್ಸ್ಥಲದ ಭೇದವನು, ನಿರಂಜನ ದಶಚಕ್ರಂಗಳ ಭೇದವನು,
ನಿರಾಮಯಾತೀತ ಪಟ್ಸ್ಥಲದ ಭೇದವನು, ಷಟ್ಸ್ಥಲ ಬ್ರಹ್ಮದುತ್ಪತ್ಯವನು,
ಆ ಷಟ್ಸ್ಥಲ ಬ್ರಹ್ಮದಲ್ಲಿ ಮೂವತ್ತಾಱು ತತ್ತ್ವಂಗಳುತ್ಪತ್ಯವನು.
ಷಡಂಗಂಗಳುತ್ಪತ್ಯವನು, ಶಿವಶಕ್ತಿಗಳುತ್ಪತ್ಯವನು,
ಪ್ರೇರಕಾವಸ್ಥೆಯ ದರ್ಶನವನು,
ಮಧ್ಯಾವಸ್ಥೆಯ ದರ್ಶನದ ಭೇದವನು, ಕೆಳಗಾದವಸ್ಥೆಯ ದರ್ಶನವನು,
ಮೇಲಾದವಸ್ಥೆಯ ದರ್ಶನದ ಭೇದವನು, ಕೇವಲಾವಸ್ಥೆಯ ದರ್ಶನವನು,
ಸಕಲಾವಸ್ಥೆಯ ದರ್ಶನದ ಭೇದವನು, ಶುದ್ಧಾವಸ್ಥೆಯ ದರ್ಶನವನು,
ಪಂಚಮಲಂಗಳ ದರ್ಶನವನು, ನಿರ್ಮಲಾವಸ್ಥೆಯ ದರ್ಶನದ ಭೇದವನು,
ನಿರಾಳವಸ್ಥೆಯ ದರ್ಶನವನು, ನಿರಂಜನಾವಸ್ಥೆಯ ದರ್ಶನದ ಭೇದವನು,
ಜ್ಞಾನಾವಸ್ಥೆಯ ದರ್ಶನವನು, ಶಿವಾವಸ್ಥೆಯ ದರ್ಶನದ ಭೇದವನು, ಮಂತ್ರಾಧ್ವದುತ್ಪತ್ಯವನು,
ಮಂತ್ರಾಧ್ವದ ವರ್ತನೆಯನು, ಪದಾಧ್ವದುತ್ಪತ್ಯವನು, ಪದಾಧ್ವದ ವರ್ತನೆಯನು.
ವರ್ಣಾಧ್ವದುತ್ಪತ್ಯವನು, ವರ್ಣಾಧ್ವದ ವರ್ತನೆಯನು,
ಭುವನಾಧ್ವದುತ್ಪತ್ಯವನು, ಭುವನಾಧ್ವದ ವರ್ತನೆಯನು,
ತತ್ವಾಧ್ವದುತ್ಪತ್ಯವನು, ತತ್ವಾಧ್ವದ ವರ್ತನೆಯನು,
ಕಲಾಧ್ವದುತ್ಪತ್ಯವನು, ಕಲಾಧ್ವದವರ್ತನೆಯನು,
ಗುರುಲಿಂಗಜಂಗಮವೆಂದು ಸುಳಿವ ಅಣ್ಣಗಳ,
ತಾಮಸ ನಿರಸನವ ಮಾಡಿ ನುಡಿದ ವಚನದ ಭೇದವನು,
ತಂ ಪದ, ತತ್ಪದ, ಅಸಿಪದಂಗಳ ಭೇದವನು,
ಆ ತ್ವಂಪದದ ಮಕಾರಂಗಳಲ್ಲಿ ಅಡಗಿಹ ಭೇದವನು,
ಆ ಅಕಾರ ‘ಉ’ಕಾರ ‘ಮ’ಕಾರ ಏಕವಾಗಿಹ ಷಟ್ಸ್ಥಲಬ್ರಹ್ಮವಾದ ಭೇದವನು
ವಚನಾನುಭಾವದ ಭೇದವನು ಅರಿಯನು,
ಎಲೆ ಸದ್ಗುರು ಸ್ವಾಮಿ ನಿರೂಪಿಸೆಂದು, ಆ ೧ಶಿಷ್ಯನಂ೧ {೧ – ೧ ವಿಶೇಷವನು (ತಾಪ್ರ ೭೬)} ಬೆಸಗೊಳಲು,
ಆ ಸದ್ಗುರುಸ್ವಾಮಿ ನಿರೂಪಿಸಿದ ವಚನ :
ಲೋಕಾದಿ ಲೋಕಂಗಳೇನೂವಿಲ್ಲದಂದು ಶಿವನು ಹೇಗಿರ್ದನೆಂದಡೆ :
ಪರಾಪರವಿಲ್ಲದಂದು ಆ ಪರಾಪರಕ್ಕುಪಕಾರವಾಗಿಹ ಪರಬ್ರಹ್ಮವಿಲ್ಲದಂದು, ಪರಶಿವವಿಲ್ಲದಂದು
ಅರ್ಧಶೂನ್ಯ, ಅಧಃಶೂನ್ಯ, ಮಧ್ಯಶೂನ್ಯವಾಗಿಹ
ನಿರಾಮಯ ಬ್ರಹ್ಮವಿಲ್ಲದಂದು, ಶಂಕರ, ಶಶಿಧರ, ವೃಷಭ ವಾಹನರಿಲ್ಲದಂದು
ಸುರಾಳ ನಿರಾಳವಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು,
ಬ್ರಹ್ಮ, ವಿಷ್ಣು, ರುದ್ರ, ಈಶ್ವರ ಸದಾಶಿವರಿಲ್ಲದಂದು
ಪ್ರಥ್ವಿ, ಅಪ್ಪು, ತೇಜ, ವಾಯು, ಆಕಾಶವಿಲ್ಲದಂದು
ಚಂದ್ರ ಸೂರ್ಯರಾತ್ಮರಿಲ್ಲದಂದು, ಏನು, ಏನೂ ಎನಲಿಲ್ಲದಂದು
ನಿರಂಜನಾತೀತನಾಗಿರ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವ.

೮೧
ಅನಂತಕೋಟಿ ಸೂರ್ಯ ಚಂದ್ರಾಗ್ನಿಮಯವಾಗಿಹ
ಪರಂಜ್ಯೋತಿ ಉದಯವಾಗದಂದು.
ರಾಜಸ, ತಾಮಸ, ಸಾತ್ವಿಕ ಗುಣತ್ರಯಂಗಳುತ್ಪತ್ಯವಾಗದಂದು,
ಅಕ್ಷರತ್ರಯಂಗಳುತ್ಪತ್ಯವಾಗದಂದು,
ಸರ್ಪನ ಮೇಲೆ ಪೃಥ್ವಿ ಹಾಸದಂದು,
ಮಹಾಮೇರು ಕೈಲಾಸವಿಲ್ಲದಂದು, ಗಂಗೆ ವಾಳುಕಸಮರುದ್ರರಿಲ್ಲದಂದು,
ಸ್ವರ್ಗ, ಮರ್ತ್ಯ, ಪಾತಾಳ ಲೋಕವಿಲ್ಲದಂದು,
ಭೂಲೋಕ, ಭುವರ್ಲೋಕ, ಮಹರ್ಲೋಕ, ಜನರ್ಲೋಕ,
ತಪರ್ಲೋಕ, ಸತ್ಯಲೋಕ, ಗೋಲೋಕ ಇಂತೀ ಮೇಲೇಳು ಲೋಕಂಗಳಿಲ್ಲದಂದು,
ಅತಲ, ವಿತಲ, ಸುತಲ, ತಲಾತಲ, ರಸಾತಲ
ನಿರಾತಲ ಪಾತಾಳ ಲೋಕಂಗಳೆಂಬ ಕಳೆಗೇಳು ಲೋಕಂಗಳಿಲ್ಲದಂದು,
ಮಲಯ, ಶಕ್ತಿ, ವಿಂದ್ಯಾ, ಮಹೇಂದ್ರ, [3]ರುಕ್ಷು10ವಂತ, ಸಹ್ಯವೆಂಬ
ಸಪ್ತಕುಲ ಪರ್ವತಂಗಳಿಲ್ಲದಂದು,
ಲವಣ, ಇಕ್ಷು, ಸುರೆಗುರು, ದಧಿ, ಕ್ಷೀರ, ಶುದ್ಧಜಲವೆಂಬ
ಸಪ್ತ ಸಮುದ್ರಂಗಳಿಲ್ಲದಂದು,
ತಲ, ರಸಾತಲ, ಪಾತಾಳ ಲೋಕಂಗಳೆಂಬ
ಕೆಳಗೇಳು ಲೋಕಂಗಳಿಲ್ಲದಂದು,
ಜಂಬುದ್ವೀಪ, ಪ್ಲಕ್ಷದ್ವೀಪ, ಕುಶದ್ವೀಪ, ಶಾಖದ್ವೀಪ.
ಶಾಲ್ಮಲೀದ್ವೀಪ, ಪುಕ್ಷ್ಕರದ್ವೀಪ, ಕ್ರೌಂಚದ್ವೀಪ,
ಇಂತೀ ಸಪ್ತ ದ್ವೀಪಂಗಳಿಲ್ಲದಂದು,
ನಾಲ್ವತ್ತೆಂಟು ಸಾವಿರ ಮುನಿಗಳಿಲ್ಲದಂದು
ಮೂವತ್ತಮೂಱು ಕೋಟಿ ದೇವರ್ಕಳಿಲ್ಲದಂದು.
ಸರ್ವಶೂನ್ಯ ನಿರಾಲಂಬವಾಗಿದ್ದಲ್ಲಿ, ನಿರಂಜನಾತೀತನಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೨
ಅವಾಚ್ಯ ತತ್ತ್ವತಲೆದೋಱದಂದು, ಕಲಾ ತತ್ತ್ವ ತಲೆದೋಱದಂದು,
ಅನಾದಿ ತತ್ತ್ವತಲೆದೋಱದಂದು, ಆದಿ ತತ್ತ್ವತಲೆದೋಱದಂದು,
ಚಿನ್ನಾದ, ಜಿದ್ಬಿಂದು, ಚಿತ್ಕಳೆ ತಲೆದೋಱದಂದು,
ನಾದ ಸುನಾದ ತಲೆದೋಱದಂದು,
ಮಹಾನಾದ ಗುಹ್ಯನಾದ ತಲೆದೋಱದಂದು, ಇವೇನು ಏನೂ ಎನಲಿಲ್ಲದಂದು,
ನಿರಂಜನಾತೀತನಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೩
ನಿರಂಜನ ಪ್ರಣವ ಅವಾಚ್ಯ ಪ್ರಣವ ಉತ್ಪತ್ಯವಾಗದತ್ತತ್ತ,
ಕಲಾಪ್ರಣವ ಅನಾದಿ ಪ್ರಣವ ಉತ್ಪತ್ಯವಾಗದತ್ತತ್ತ,
ಅಕಾರ ಉಕಾರ ಮಕಾರವೆಂಬ ಬೀಜ ಉತ್ಪತ್ಯವಾಗದತ್ತತ್ತ,
ನಾದ ಬಿಂದು ಕಳೆ ಉತ್ಪತ್ಯವಾಗದತ್ತತ್ತ,
ಪ್ರಕೃತಿ ಪ್ರಾಣ ಓಂಕಾರ ಉತ್ಪತ್ಯವಾಗದತ್ತತ್ತ,
ಲೋಕಾದಿ ಲೋಕಂಗಳೇನೂ ಉತ್ಪತ್ಯವಾಗದತ್ತತ್ತ,
ನಿರಂಜನ ಪ್ರಣವಾತೀತನಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೪
ಸಕಲ ತತ್ವವಿಲ್ಲದಂದು, ನಿಷ್ಕಲ ತತ್ವವಿಲ್ಲದಂದು
ಸಕಲ ನಿಷ್ಕಲ ತತ್ವವಿಲ್ಲದಂದು, ಪರಶಿವತತ್ವವಿಲ್ಲದಂದು,
ನಿರಂಜನ ತತ್ವವಿಲ್ಲದಂದು, ಈ ತತ್ವಂಗಳೇನೂ ಎನಲ್ಲಿಲ್ಲದಂದು,
ನಿರಂಜನಾತೀತನಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೫
ಏನು ಏನೂ ಎನಲಿಲ್ಲದಂದುವ ಮಹಾಘನ ನಿರಂಜನಾತೀತನಾಗಿಹ ವಸ್ತು
ಲೋಕಾದಿ ಲೋಕಂಗಳ ಸೃಜಿಸಬೇಕೆಂದು ನೆನಹಮಾತ್ರದಲ್ಲಿಯೇ
ನಿರಂಜನಪ್ರಣವ ನಿರಂಜನಪ್ರಣವ ಉತ್ಪತ್ಯವಾಯಿತ್ತು;
ಇನ್ನು ನಿರಂಜನಪ್ರಣವದ ಸ್ಥಲದ ವಚನ ಅದೆಂತೆಂದಡೆ ;
ಮಂತ್ರಾಧ್ವಪದಾಧ್ವ ಜನನಕ್ಕೆ ಬಾರದಂದು
ವರ್ಣಾಧ್ವ ಭುವನಾಧ್ವ ಜನನಕ್ಕೆ ಬಾರದಂದು
ತತ್ವಾಧ್ವ ಕಲಾಧ್ವ ಜನನಕ್ಕೆ ಬಾರದಂದು,
ನಿರಂಜನ ಪ್ರಣವನಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೬
ಆಧಾರ ಸ್ವಾಧಿಷ್ಠಾನ ಚಕ್ರ ಉತ್ಪತ್ಯವಾಗದ ಮುನ್ನ,
ಮಣಿಪೂರಕ ಅನಾಹತ ಚಕ್ರ ಉತ್ಪತ್ಯವಾಗದ ಮುನ್ನ,
ವಿಶುದ್ಧಿ ಚಕ್ರ ಆಜ್ಞಾ ಚಕ್ರ ಉತ್ಪತ್ಯವಾಗದ ಮುನ್ನ,
ಬ್ರಹ್ಮಚಕ್ರ ಶಿಖಾಚಕ್ರ ಉತ್ಪತ್ಯವಾಗದ ಮುನ್ನ,
ಪಶ್ಚಿಮಚಕ್ರ ಅಣುಚಕ್ರ ಉತ್ಪತ್ಯವಾಗದ ಮುನ್ನ,
ನಿರಂಜನ ಪ್ರಣವವಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೭
ನಿರಾಳ ಜಾಗ್ರ ನಿರಾಳ ಸ್ವಪ್ನವಿಲ್ಲದತ್ತತ್ತ,
ನಿರಾಳ ಸುಷುಪ್ತಿ ನಿರಾಳ ತೂರ್ಯವಿಲ್ಲದತ್ತತ್ತ,
ನಿರಾಳ ವ್ಯೋಮ ನಿರಾಳ ವ್ಯೋಮಾತೀತವಿಲ್ಲದತ್ತತ್ತ,
ನಿರಂಜನ ಪ್ರಣವವಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೮
ನಿರ್ಮಲ ಜಾಗ್ರ ನಿರ್ಮಲ ಸ್ವಪ್ನವಿಲ್ಲದಂದು,
ನಿರ್ಮಲ ಸಂಷುಪ್ತಿ ನಿರ್ಮಲ ತುರ್ಯ್ಯವಿಲ್ಲದಂದು,
ನಿರ್ಮಲ ವ್ಯೋಮ ನಿರ್ಮಲ ವ್ಯೋಮಾತೀತವಿಲ್ಲದಂದು
ನಿರಂಜನ ಪ್ರಣವವಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೮೯
ಶಿವಜಾಗ್ರ ಶಿವ ಸ್ವಪ್ನವಿಲ್ಲದಂದು,
ಶಿವ ಸುಷುಪ್ತಿ ಶಿವ ತುರ್ಯವಿಲ್ಲದಂದು,
ಶಿವ ವ್ಯೋಮ ಶಿವವ್ಯೋಮಾತೀತ ವಿಲ್ಲದಂದು,
ನಿರಂಜನ ಪ್ರಣವವಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೯೦
ಜಾಗ್ರ ಜಾಗ್ರಜ್ಞಾನ ಸ್ವಪ್ನವಿಲ್ಲದ ಮುನ್ನ,
ಜ್ಞಾನ ಸುಷುಪ್ತಿ ಜ್ಞಾನ ತುರ್ಯವಿಲ್ಲದ ಮುನ್ನ,
ಜ್ಞಾನ ವ್ಯೋಮ ಜ್ಞಾನವ್ಯೋಮಾತೀತವಿಲ್ಲದ ಮುನ್ನ,
ನಿರಂಜನ ಪ್ರಣವವಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.


[1]     ಪ್ರಾಣಕ್ಕೆ (ತಾಪ್ರ ೭೬)

[2]      x (ತಾಪ್ರ ೫೮೬)

[3]     ೧-೧ ರದ್ರುಕ್ಷ (ತಾಪ್ರ ೭೬)