೯೧
ಶಿವತತ್ವವಿಲ್ಲದಂದು, ಸದಾಶಿವ ತತ್ವವಿಲ್ಲದಂದು,
ಮಹೇಶ್ವರ ತತ್ವವಿಲ್ಲದಂದು, ಕೇವಲ ತತ್ವವಿಲ್ಲದಂದು,
ಸಕಲ ತತ್ವವಿಲ್ಲದಂದು, ಶುದ್ಧತತ್ವವಿಲ್ಲದಂದು,
ಈ ತತ್ವಂಗಳೇನು ಏನೂ ಎನಲಿಲ್ಲದಂದು
ನಿರಂಜನ ಪ್ರಣವವಾಗಿದ್ದನಯ್ಯ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೯೨
ನಿರಂಜನ ಪ್ರಣವದ ನೆನಹು ಮಾತ್ರದಿಂದ ಅವಾಚ್ಯ ಪ್ರಣವ ಉತ್ಪತ್ಯವಾಯಿತ್ತು.
ಇನ್ನು ಅವಾಚ್ಯ ಪ್ರಣವದ ಸ್ಥಲದ ವಚನ, ಅದೆಂತೆಂದಡೆ :
ನಿರಾಳ ಶಾಂತ್ಯಾಂತೀತೋತ್ತರಕಲೆ, ನಿರಾಳ ಶಾಂತ್ಯಾತೀತ ಕಲೆಗಳಿಲ್ಲದಂದು,
ನಿರಾಳ ಶಾಂತಿ ಕಲೆ ನಿರಾಳ ವಿದ್ಯೆ ಕಲೆಗಳಿಲ್ಲದಂದು,
ನಿರಾಳ ಪ್ರತಿಷ್ಠಾಕಲೆ ನಿರಾಳ ನಿವೃತ್ತಿಕಲೆಗಳಿಲ್ಲದಂದು,
ನಿರಾಳ ಮಹಾ ಸಾದಾಖ್ಯ ನಿರಾಳ ಶಿವ ಸಾದಾಖ್ಯವಿಲ್ಲದಂದು,
ನಿರಾಳ ಅಮೂರ್ತಿ ಸಾದಾಖ್ಯ ನಿರಾಳ ಮೂರ್ತಿ ಸಾದಾಖ್ಯವಿಲ್ಲದಂದು,
ನಿರಾಳ ಕರ್ತು ಸಾದಾಖ್ಯ ನಿರಾಳ ಕರ್ಮ ಸಾದಾಖ್ಯವಿಲ್ಲದಂದು,
ಅವಾಚ್ಯ ಪ್ರಣವವಾಗಿದ್ದನು ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೯೩
ಆದಿಯನಾದಿಯಿಲ್ಲದಂದು, ಅಜಾಂಡ ಬ್ರಹ್ಮಾಂಡವಿಲ್ಲದಂದು,
ವ್ಯೋಮ ವ್ಯೋಮಾಕಾಶವಿಲ್ಲದಂದು, ಜೀವ ಪರಮರಿಲ್ಲದಂದು,
ಅಜಪಾ ಗಾಯತ್ರಿ ಇಲ್ಲದಂದು,
ಅನೇಕ ಕೋಟಿ ವೇದಾಗಮ ಶಾಸ್ತ್ರಪುರಾಣಂಗಳಿಲ್ಲದಂದು,
ಅದ್ವೈತಾದ್ವೈತವಿಲ್ಲದಂದು, ಶೂನ್ಯನಿಶೂನ್ಯವಿಲ್ಲದಂದು,
ಅವಾಚ್ಯ ಪ್ರಣವವಾಗಿದ್ದನು ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೯೪
ಬ್ರಹ್ಮ ವಿಷ್ಣು ರುದ್ರರಿಲ್ಲದಂದು, ಈಶ್ವರ ಸದಾಶಿವರಿಲ್ಲದಂದು,
ಉಮೆಯ ಕಲ್ಯಾಣವಾಗದಂದು, ರವಿ ಶಶಿಗಳ ಗಂಗೆಯ ಧರಿಸದಂದು,
ಸಚರಾಚರಗಳು ರಚನೆಗೆ ಬಾರದಂದು,
ಅವಾಚ್ಯ ಪ್ರಣವ ತಾನೆಯಾಗಿದ್ದನು, ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೯೫
ಮಹಾ ಸಾದಾಖ್ಯ, ಶಿವ ಸಾದಾಖ್ಯವಿಲ್ಲದಂದು,
ಅಮೂರ್ತ ಸಾದಾಖ್ಯ, ಮೂರ್ತ ಸಾದಾಖ್ಯವಿಲ್ಲದಂದು,
ಕರ್ತೃ ಸಾದಾಖ್ಯ ಕರ್ಮ ಸಾದಾಖ್ಯವಿಲ್ಲದಂದು,
ಶಾಂತ್ಯತೀತೊತ್ತರ ಕಲೆ, ಶಾಂತ್ಯತೀತಕಲೆಗಳಿಲ್ಲದಂದು
ಶಾಂತಿ ಕಲೆ ವಿದ್ಯಾಕಲೆಗಳಿಲ್ಲದಂದು, ಪ್ರತಿಷ್ಠಾ ಕಲೆ ನಿವೃತ್ತಿಕಲೆ ಇಲ್ಲದಂದು.
ನಿಃಕಲಶಕ್ತಿ ಪರಶಕ್ತಿ ಕ್ರಿಯಾಶಕ್ತಿ ಜನನಕ್ಕೆ ಬಾರದಂದು,
ಆದಿಶಕ್ತಿ ಇಚ್ಛಾಶಕ್ತಿ ಜನನಕ್ಕೆ ಬಾರದಂದು,
ಜ್ಞಾನಶಕ್ತಿ ಕ್ರಿಯಾಶಕ್ತಿ ಜನನಕ್ಕೆ ಬಾರದಂದು,
ಅವಾಚ್ಯ ಪ್ರಣವವಾಗಿದ್ದನು ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೯೬
ಅವಾಚ್ಯ ಪ್ರಣವದ ನೆನಹುಮಾತ್ರದಲ್ಲಿ ಕಲಾಪ್ರಣವ ಉತ್ಪತ್ಯ,
ಇನ್ನು ಕಲಾಪ್ರಣವದ ಸ್ಥಲದ ವಚನ ಆದೆಂತೆಂದಡೆ :
ಅವಾಚ್ಯ ಪ್ರಣವದ ನೆನಹುಮಾತ್ರದಲ್ಲಿ, ಚಿನ್ನಾದ, ಚಿದ್ಬಿಂದು ಚಿತ್ಕಲೆ ಉತ್ಪತ್ಯ,
ಚಿನ್ನಾದ ಕಲೆ, ದ್ವಾದಶ ಕಲೆ, ಚಿದ್ಬಿಂದುವಿನ ಕಲೆ, ಷೋಡಶ ಕಲೆ,
ಚಿತ್ಕಳೆಯ ಕಲೆ ದಶಕಲೆ,
ಈ ಮೂವತ್ತೆಂಟು ಕಲೆಗಳು ಏಕವಾಗಿ ಕಲಾಪ್ರಣವ ಉತ್ಪತ್ಯ, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೯೭
ಆ ಕಲಾಪ್ರಣವದ ಮೂವತ್ತೆಂಟು ಕಲೆಗಳ ಕಾಂತಿ, ಅದೆಂತೆಂದಡೆ :
ಒಂದೊಂದು ಕಲೆಗಳು ಹೊಳವುತ್ತಿಹ ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು,
ಒಂದೊಂದು ಕಲೆಗಳು ಕೋಟಿ ಮಿಂಚುಗಳಿಗೆ ಸಮಾನವಹ ಪ್ರಭೆಯನುಳ್ಳುದು,
ಜ್ಞಾನ ಸ್ವರೂಪವಹ ಸೂಕ್ಷ್ಮಕಲೆಗಳೇಕವಾಗಿ ಮೂವತ್ತೆಂಟು ಕೋಟಿ ಮಿಂಚುಗಳಿವೆ
ಸಮಾನವಹ ಪ್ರಭೆಯನುಳ್ಳ ಚಿತ್ಕಳಾಪ್ರಣವವು ಶಿಖಾಗ್ರದಲ್ಲಿಹುದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೯೮
ರಹಸ್ಯೇ-
ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ |
ತಸ್ಯೋರ್ದ್ವಂಚ ಶಿಖಾ ಸೂಕ್ಷ್ಮಂ ಚಿದ್ರೂಪಂ ಪರಮಂ ಕಲಾ|| ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೯೯
ಚಿತ್ಕಲಾ ಪ್ರಣವವು ಉಪಮಿಸಬಾರದ ಉಪಮಾತೀತವು,
ಮನಾತೀತವು, ವರ್ಣಾತೀತವು, ತತ್ವಾತೀತವು, ಜ್ಞಾನಾತೀತವು,
ನಿರಂಜನ ಕಲಾಪ್ರಣವ ಸೂಕ್ಷ್ಮವಾಗಿಹುದು, ನೋಡಾ,
ಅಪ್ರಮಾಣ ಕೂಡಲಸಂಗಮದೇವನು.

೧೦೦
ರಹಸ್ಯೇ,
ವಾಚಾತೀತಂ ಮನೋತೀತಂ ವರ್ಣಾತೀತಂ ಚ ತತ್ಪದಃ |
ಜ್ಞಾನಾತೀತನಿರಂಜನ್ಯಂ ಕಲಾಯಾಂ ಸೂಕ್ಷ್ಮಭಾವಯೇತ್ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೦೧
ಅಷ್ಟ ಕುಲ ಪರ್ವತಂಗಳುತ್ಪತ್ಯವಾಗದಂದು,
ಅಷ್ಟ ದಿಗ್ಜಂಗಳುತ್ಪತ್ಯವಾಗದಂದು,
ಅಷ್ಟ ಸರ್ಪಂಗಳುತ್ಪತ್ಯವಾಗದಂದು,
ಅಷ್ಟ ದಿಕ್ಕುಗಳುತ್ಪತ್ಯವಾಗದಂದು,
ಅಷ್ಟ ದಿಕ್ಪಾಲಕರುತ್ಪತ್ಯವಾಗದಂದು,
ಮಹಾ ಮೇರು ಕೈಲಾಸ ಉತ್ಪತ್ಯವಾಗದಂದು,
ಅಷ್ಟ ವಸುಗಳು, ದ್ವಾದಶಾದಿತ್ಯರುತ್ಪತ್ಯವಾಗದಂದು,
ಏಕಾದಶ ರುದ್ರರುತ್ಪತ್ಯವಾಗದಂದು,
ದ್ವಾದಶರಾಸಿ, ನಕ್ಷತ್ರ ನವಗ್ರಹಂಗಳಿಲ್ಲದಂದು,
ಅಗ್ನಿ ಮಂಡಲ ಅದಿತ್ಯಮಂಡಲ ಉತ್ಪತ್ಯವಾಗದಂದು,
ಚಂದ್ರಮಂಡಲ ತಾರಾಮಂಡಲ ಉತ್ಪತ್ಯವಾಗದಂದು,
ಏನು ಏನೂ ಏನಲಿಲ್ಲದಂದು ಚಿತ್ಕಲಾ ಪ್ರಣವವಾಗಿದ್ದನು, ನೋಡಾ,
ಇಲ್ಲದಂತೆ, ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೧೦೨

ಏನು ಏನೂ ಎನಲಿಲ್ಲದ ಮಹಾಘನ ಚಿತ್ಕಲಾ ಪ್ರಣವದ ನೆನಹು ಮಾತ್ರದಲ್ಲಿ
ಅನಾದಿ ಪ್ರಣವದ ಉತ್ಪತ್ಯ.
ಇನ್ನು ಅನಾದಿ ಪ್ರಣವಸ್ಥಲದ ವಚನ, ಅದೆಂತೆಂದಡೆ:
ಆದಿ ಆಕಾರ ಉಕಾರ ಮಕಾರವಿಲ್ಲದಂದು,
ಆದಿ ನಾದ ಬಿಂದು ಕಲೆ ಇಲ್ಲದಂದು,
ಆದಿ ಪ್ರಕೃತಿ ಪ್ರಾಣವಿಲ್ಲದಂದು,
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವವೆಂಬ
ಜ್ಯೋತಿರ್ಲಿಂಗವಿಲ್ಲದಂದು,
ಓಂಕಾರವೆಂಬ ಅನಾದಿ ಪ್ರಣವವಾಗಿದ್ದನು, ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೧೦೩
ಆದಿ ರುದ್ರ ಆದಿ ಈಶ್ವರ ಆದಿ ಸದಾಶಿವರಿಲ್ಲದ ಮುನ್ನ ಮುನ್ನ
ಆದಿ ಆಕಾರ ಉಕಾರ ಮಕಾರಕ್ಕೆ ಆದಿ ನಾದ ಬಿಂದು ಕಲೆ
ಆಧಾರ ವಾಗದ ಮುನ್ನ ಮುನ್ನ,
ಆ ಆದಿ ನಾದ ಬಿಂದು ಕಲೆಗೆ
ಆ ಆದಿ ಪ್ರಕೃತಿಗಳಾಧಾರವಾಗದ ಮುನ್ನ ಮುನ್ನ,
ಆ ಆದಿ ಪ್ರಕೃತಿಗೆ ಪ್ರಾಣವಾಧಾರವಾಗದ ಮುನ್ನ ಮುನ್ನ,
ಆ ಪ್ರಾಣಕ್ಕೆ ಲಿಂಗವಾಧಾರವಾಗದ ಮುನ್ನ ಮುನ್ನವೆ,
ಓಂಕಾರವೆಂಬ ಅನಾದಿ ಪ್ರಣವವಾಗಿದ್ದನು ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೧೦೪
ಆದಿ ಅಕಾರದಲ್ಲಿ ತಾರಕ ಸ್ವರೂಪ, ದಂಡ ಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನವೆ,
ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿ ಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನವೆ,
ಆದಿ ಆಕಾರ ಉಕಾರ ಮಕಾರ ಈ ಮೂಱು ಏಕವಾಗಿ,
ಅಖಂಡ ಜೋತಿರ್ಮಯವಾಗಿಹ ಗೋಳಕಾಕಾರ ಪ್ರಣವ
ಉತ್ಪತ್ಯವಾಗದ ಮುನ್ನ ಮುನ್ನವೆ,
ಓಂಕಾರವೆಂಬ ಅನಾದಿ ಪ್ರಣವವಾಗಿದ್ದನು, ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೧೦೫
ಮಂತ್ರ ಹನ್ನೊಂದು ವಿಶಾಲ್ಯವಾಗದಂದು,
ಪದ ತೊಂಬತ್ತು ನಾಲ್ಕು ವಿಶಾಲ್ಯವಾಗದಂದು,
ವರ್ಣ ಐವತ್ತೆರಡು ವಿಶಾಲ್ಯವಾಗದಂದು,
ಇನ್ನೂ

[1]ರು[2] ಇಪ್ಪತ್ತುನಾಲ್ಕು ಭುವನ ವಿಶಾಲ್ಯವಾಗದಂದು,
ತೊಂಬತ್ತಾಱು ತತ್ವ ವಿಶಾಲ್ಯವಾಗದಂದು,
ಅಱುವತ್ತು ನಾಲ್ಕು ಕಲೆ ವಿಶಾಲ್ಯವಾಗದಂದು,
ಓಂಕಾರವೆಂಬ ಅನಾದಿ ಪ್ರಣವವಾಗಿದ್ದನು, ನೋಡಾ, ಇಲ್ಲದಂತೆ,
ನಮ್ಮ ಅಪ್ರಮಾಣ ಕೂಡಲಸಂಗಮದೇವನು.

೧೦೬
ಓಂಕಾರವೆಂಬ ಅನಾದಿ ಪ್ರಣವದ ನೆನಹುಮಾತ್ರದಲ್ಲಿ
ಆದಿ ಅಕಾರ ಮಕಾರ ಉತ್ಪತ್ಯವಾಯಿತ್ತು.
ಇನ್ನು ಆದಿ ಅಕಾರ ಉಕಾರ ಮಕಾರ ಆದಿ ನಾದ ಬಿಂದು ಕಲೆ
ಆ ಆದಿ ಪ್ರಕೃತಿ ಪ್ರಾಣಕ್ಕೆ ಆಧಾರಂಗಳನು
ಆ ಆದಿ ಅಕಾರ ಉಕಾರ ಮಕಾರದಲ್ಲಿ ತಾರಕ ಸ್ವರೂಪ ದಂಡ ಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪ ಉತ್ಪತ್ಯ ಲಯ
ಆ ಅಕಾರ ಉಕಾರ ಮಕಾರ ಈ ಮೂಱು ಏಕವಾಗಿ
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವವಾಯಿತ್ತು.
ಅದೆಂತೆಂದಡೆ:
ಓಂಕಾರವೆಂಬ ಅನಾದಿ ಪ್ರಣವದ ನೆನಹು ಮಾತ್ರದಲ್ಲಿ
ಆದಿ ಅಕಾರ ಉಕಾರ ಮಕಾರ ಉತ್ಪತ್ಯ
ಆ ಆದಿ ಅಕಾರ ಉಕಾರ ಮಕಾರ ಈ ಮೂಱು ಬೀಜಾಕ್ಷರ
ಅಕಾರವೇ ಆದಿ ನಾದ, ಉಕಾರವೆ ಆದಿ ಬಿಂದು, ಮಕಾರವೆ ಆದಿ ಕಲೆ
ಅಕಾರವೆ ಆದಿರುದ್ರ, ಉಕಾರವೆ ಆದಿ ಈಶ್ವರ, ಮಕಾರವೆ ಆದಿ ಸದಾಶಿವನು
ಇಂತೀ ಆದಿ ಅಕಾರ ಉಕಾರ ಮಕಾರಕ್ಕೆ ಆ ಆದಿ ನಾದ ಬಿಂದು ಕಲೆಯೇ ಆಧಾರ
ಆ ಆದಿ ನಾದ ಬಿಂದು ಕಲೆಗೆ ಆ ಆದಿ ಪ್ರಕೃತಿಯೆ ಆಧಾರ
ಆ ಆದಿ ಪ್ರಕೃತಿಗೆ ಪ್ರಾಣಮಾತ್ರೆಯೆ ಆಧಾರ
ಆ ಪ್ರಾಣ ಮಾತ್ರೆಗೆ ಅಖಂಡ ಜ್ಯೋತಿರ್ಮಯಲಿಂಗವೆ ಆಧಾರ
ಆ ಎಂದರೆ ಅನಾಹತ ಉ ಎಂದರೆ ನಾದವಳಿಯಿತ್ತು
ಮ ಎಂಬಲ್ಲಿ ಆದಿ ಬಿಂದು ಬಿಂದು ಕೂಡಲು ಶಿವಶಕ್ತಿಯಾಗುತ್ತಂ
ಇಹಂತಾ ಓಂಕಾರವಾಯಿತ್ತು ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೦೭
ಅಕಾರವೆಂಬ ಪ್ರಣವದಲ್ಲಿ,-
ದಂಡಶ್ಚ ತಾರಕಾಕಾರೋ ಭವತಿ ಓಂ ಆದಿರುದ್ರೋ ಅಧಿದೇವತಾ
ಅಕಾರಂ ಚ ಲಯಂ ಪ್ರಾಪ್ತಿಃ ಪಂಚಮಂ ಪ್ರಣವಾಂಶಿಕೆ.
ಉಕಾರವೆಂಬ ಪ್ರಣವದಲ್ಲಿ,-
ಕುಂಡಲಂ ಚಾರ್ಧಚಂದ್ರೋ ಭವತಿ ಓಂ ಆದಿಈಶ್ವರೋ ದೇವತಾ
ಉಕಾರಂ ಚ ಲಯಂ ಪ್ರಾಪ್ತಿಃ ಷಷ್ಟಮಂ ಪ್ರಣವಾಂಶಿಕೆ.
ಮಕಾರವೆಂಬ ಪ್ರಣವದಲ್ಲಿ,
ದರ್ಪಣಂ ಚ ಜ್ಯೋತಿ ರೂಪೋ ಭವತಿ, ಓಂ ಆದಿ ಸದಾಶಿವೊ ಅಧಿದೇವತಾ
ಮಕಾರಂ ಲಯಃ ಪ್ರಾಪ್ತಿಃ ಸಪ್ತಮಂ ಪ್ರಣವಾಂಶಿಕೆ |
ಅಕಾರಂ ಚ ಉಕಾರಂ ಚ ಮಕಾರಂ ಚ ಧನಂಜಯಂ |
ಇದಮೇಕಂ ಸಮುತ್ಪನ್ನಂ ಓಂಮಿತಿ ಜ್ಯೋತಿ ರೂಪಕಂ || ಎಂದುದಾಗಿ
ಅಪ್ರಮಾಣ ಕೂಡಲಸಂಗಮದೇವ.

೧೦೮
ಇನ್ನು ಪ್ರಣವ ಲಕ್ಷಣ ಅದೆಂತೆಂದಡೆ :
ಪ್ರಥಮವು ತಾರಕಾಸ್ವರೂಪವಾಗಿಹುದು,
ಎರಡನೆಯದು ದಂಡ[3]ಸ್ವರೂಪವಾಗಿಹುದು,
ಮೂರನೆಯದು ಕುಂಡಲಾಕಾರವಾಗಿಹುದು,
ನಾಲ್ಕನೆಯದು ಅರ್ದಚಂದ್ರಾಕಾರವಾಗಿಹುದು,
ಐದನೆಯದು ದರ್ಪಣಾಕಾರವಾಗಿಹುದು,
ಆಱನೆಯದು ಜ್ಯೋತಿಸ್ವರೂಪವಾಗಿಹುದು,
ಇಂತೀ ಪ್ರಣವವು ಅತ್ಯಂತ ಗೌಪ್ಯವಾಗಿಹುದು, ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೦೯
ಸಾಕ್ಷಿ-
ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧ ಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಮಂ ಜ್ಯೋತಿರೂಪಕಂ |
ಇತಿ ಪ್ರಣವ ವಿಜ್ಞೇಯಂ ತತ್ತದ್ಗೋಪ್ಯಂ ವರಾನನೇ || ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೧೦
ಇದು ಎಂಟನೆಯ ಪ್ರಣವ
ನಿರಂಜನಾತೀತಾಗಮ ಅಸಿಪದಾತೀತಾಗಮದಲ್ಲಿ ಪ್ರಸಿದ್ಧವಾಗಿ
ಹೇಳುತ್ತಿಹುದೆಂದು ಸದ್ಗುರುಸ್ವಾಮಿ ಶಿಷ್ಯಂಗೆ ನಿರೂಪಿಸಿದನು.
ಇನ್ನು ದಶಚಕ್ರದ ಉತ್ಪತ್ಯ ಅದೆಂತೆಂದಡೆ :
ಚಕ್ರಾತೀತಾಗಮೆ ಶ್ರುತಿ |
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ನೆನಹುಮಾತ್ರದಲ್ಲಿ ಅನುಚಕ್ರ ಉತ್ಪತ್ಯ
ಅನುಚಕ್ರದಲ್ಲಿ ಪಶ್ಚಿಮ ಚಕ್ರ ಉತ್ಪತ್ಯ
ಪಶ್ಚಿಮ ಚಕ್ರದಲ್ಲಿ ಶಿಖಾಚಕ್ರ ಉತ್ಪತ್ಯ
ಶಿಖಾಚಕ್ರದಲ್ಲಿ ಬ್ರಹ್ಮಚಕ್ರ ಉತ್ಪತ್ಯ
ಬ್ರಹ್ಮಚಕ್ರದಲ್ಲಿ ಆಜ್ಞಾ ಚಕ್ರ ಉತ್ಪತ್ಯ
ಆಜ್ಞಾಚಕ್ರದಲ್ಲಿ ವಿಶುದ್ಧಿ ಚಕ್ರ ಉತ್ಪತ್ಯ
ವಿಶುದ್ಧಿ ಚಕ್ರದಲ್ಲಿ ಅನಾಹತ ಚಕ್ರ ಉತ್ಪತ್ಯ
ಅನಾಹತ ಚಕ್ರದಲ್ಲಿ ಮಣಿಪೂರಕ ಚಕ್ರ ಉತ್ಪತ್ಯ
ಮಣಿಪೂರಕ ಚಕ್ರದಲ್ಲಿ ಸ್ವಾಧಿಷ್ಠಾನ ಚಕ್ರ ಉತ್ಪತ್ಯ
ಸ್ವಾಧಿಷ್ಠಾನ ಚಕ್ರದಲ್ಲಿ ಆಧಾರ ಚಕ್ರ ಉತ್ಪತ್ಯ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧೧
ಅಥರ್ವಣವೇದೇ-
ಓಂಕಾರಸ್ಯ ಹೃದಯಜ್ಞಾನೇ ಅಣುಚಕ್ರೋಜನಿತಾ
ಅಣುಚಕ್ರೇ ಪಶ್ಚಿಮಂ ಜನಿತಾ ಪಶ್ಚಿಮೇ ಶಿಖಾಜನಿತಾ
ಶಿಖಾಚಕ್ರೇ ಬ್ರಹ್ಮ ಜನಿತಾ ಬ್ರಹ್ಮಚಕ್ರೇ ಆಜ್ಞಾ ಜನಿತಾ
ಆಜ್ಞಾಚಕ್ರೇ ವಿಶುರ್ದ್ಧಿಜನಿತಾ ವಿಶುದ್ಧೇಚ ಅನಾಹತಂ ಜನಿತಾ
ಅನಾಹತಚಕ್ರೇ ಮಣಿಪೂರಕಂ ಜನಿತಾ ಮಣಿಪೂರೇ ಸ್ವಾಧಿಷ್ಠಾನಂ ಜನಿತಾ
ಸ್ವಾಧಿಷ್ಠಾನೆ ಆಧಾರೋ ಜನಿತಾ, ಎಂದುದಾಗಿ,
ಅಪ್ರಮಾಣ ಕೂಡಲಸಂಗಮದೇವ.

೧೧೨
ಇನ್ನು ದಶಚಕ್ರಂಗಳ ನೆಲೆ, ಅದೆಂತೆಂದಡೆ :
ಗುದ ಸ್ಥಾನದಲ್ಲಿ ಆಧಾರ ಚಕ್ರ
ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನ ಚಕ್ರ, ನಾಭಿ ಸ್ಥಾನದಲ್ಲಿ ಮಣಿಪೂರಕ ಚಕ್ರ,
ಹೃದಯ ಸ್ಥಾನದಲ್ಲಿ ಅನಾಹತ ಚಕ್ರ, ಕಂಠಸ್ಥಾನದಲ್ಲಿ ವಿಶುದ್ಧಿ ಚಕ್ರ,
ಭ್ರೂ ಮಧ್ಯದಲ್ಲಿ ಆಜ್ಞಾಚಕ್ರ, ಬ್ರಹ್ಮ ರಂದ್ರದಲ್ಲಿ ಬ್ರಹ್ಮ ಚಕ್ರ,
ಶಿಖೆಯಲ್ಲಿ ಶಿಖಾಚಕ್ರ, ಪಶ್ಚಿಮದಲ್ಲಿ ಪಶ್ಚಿಮ ಚಕ್ರ,
ಅಣು ಚಕ್ರ ಏನೂ ಇಲ್ಲದ ಕಾಳುಗತ್ತಲೆ, ಕಾಣಾ,
ಅಪ್ರಮಾಣ ಕೂಡಲಸಂಗಮದೇವಾ.

೧೧೩
ಇನ್ನು ನವಪದ್ಮದುತ್ಪತ್ಯ, ಅದೆಂತೆಂದಡೆ:

ನಿರಂಜನಾತೀತಾಗಮೆ ಶ್ರುತಿಃ,
ನಿರಂಜನಾತೀತವೆಂಬ ಪದ್ಮಪುಷ್ಪದಲ್ಲಿ ಏಕಪದ್ಮೋಭವತಿ ಎಂದುದಾಗಿ,
ನಿರಂಜನಾತೀತವೆಂಬ ಪದ್ಮಪುಷ್ಪದಲ್ಲಿ ಏಕದಳಪದ್ಮ ಉದ್ಭವಿಸಿ,
ಪಶ್ಚಿಮ ಚಕ್ರವ ಮುಟ್ಟಿ ಅಪ್ರದರ್ಶನ ವರ್ಣವಾಗಿಹುದು.
ಆ ಏಕದಳ ಪದ್ಮದಲ್ಲಿ ತ್ರಿದಳ ಪದ್ಮೋದ್ಭವತಿ ಎಂದುದಾಗಿ,
ಆ ಏಕದಳ ಪದ್ಮದಲ್ಲಿ ತ್ರಿದಳ ಪದ್ಮಹುಟ್ಟಿ
ಶಿಖಾಚಕ್ರದಲ್ಲಿ ಮಹಾ ಜ್ಯೋತಿವರ್ಣವಾಗಿಹುದು.
ಆ ತ್ರಿದಳ ಪದ್ಮದಲ್ಲಿ ಸಹಸ್ರದಳ ಪದ್ಮೋದ್ಭವತಿ ಎಂದುದಾಗಿ,
ಆ ತ್ರಿದಳ ಪದ್ಮದಲ್ಲಿ ಸಹಸ್ರದಳ ಪದ್ಮ ಉದ್ಭವಿಸಿ
ಬ್ರಹ್ಮಚಕ್ರದಲ್ಲಿ ಜ್ಯೋತಿವರ್ಣವಾಗಿಹುದು.
ಆ ಸಹಸ್ರದಳ ಪದ್ಮದಲ್ಲಿ ದ್ವಿದಳ ಪದ್ಮೋದ್ಭವತಿ ಎಂದುದಾಗಿ,
ಆ ಸಹಸ್ರದಳ ಪದ್ಮದಲ್ಲಿ ದ್ವಿದಳ ಪದ್ಮ ಉದ್ಭವಿಸಿ
ಆಜ್ಞಾ ಚಕ್ರದಲ್ಲಿ ಮಾಣಿಕ್ಯವರ್ಣವಾಗಿಹುದು.
ಆ ದ್ವಿದಳ ಪದ್ಮದಲ್ಲಿ ಷೋಡಶದಳ ಪದ್ಮೋದ್ಭವತಿ ಎಂದುದಾಗಿ,
ಆ ದ್ವಿದಳ ಪದ್ಮದಲ್ಲಿ ಶೋಷಷದಳ ಪದ್ಮ ಉದ್ಭವಿಸಿ
ವಿಶುದ್ಧಿ ಚಕ್ರದಲ್ಲಿ ಶ್ವೇತವರ್ಣವಾಗಿಹುದು.
ಆ ಷೋಡಶದಳ ಪದ್ಮದಲ್ಲಿ ದ್ವಾದಶದಳ ಪದ್ಮೋದ್ಭವತಿ ಎಂದುದಾಗಿ,
ಆ ಷೋಡಶದಳ ಪದ್ಮದಲ್ಲಿ ದ್ವಾದಶಗಳ ಪದ್ಮ ಉದ್ಭವಿಸಿ,
ಅನಾಹತ ಚಕ್ರದಲ್ಲಿ ಕುಂಕುಮ ವರ್ಣವಾಗಿಹುದು.
ಆ ದ್ವಾದಶದಳ ಪದ್ಮದಲ್ಲಿ ದಶದಳ ಪದ್ಮೋದ್ಭವತಿ ಎಂದುದಾಗಿ,
ಆ ದ್ವಾದಶದಳ ಪದ್ಮದಲ್ಲಿ ದಶದಳ ಪದ್ಮ ಉದ್ಭವಿಸಿ
ಮಣಿಪೂರಕ ಚಕ್ರದಲ್ಲಿ ಕೃಷ್ಣವರ್ಣವಾಗಿಹುದು.
ಆ ದಶದಳ ಪದ್ಮದಲ್ಲಿ ಷಡ್ದಳ ಪದ್ಮೋದ್ಭವತಿ ಎಂದುದಾಗಿ,
ಆ ದಶದಳ ಪದ್ಮದಲ್ಲಿ ಷಡ್ದಳ ಪದ್ಮ ಉದ್ಭವಿಸಿ
ಸ್ವಾಧಿಷ್ಠಾನ ಚಕ್ರದಲ್ಲಿ ಪಚ್ಚೆಯ ವರ್ಣವಾಗಿಹುದು.
ಆ ಷಡ್ದಳ ಪದ್ಮದಲ್ಲಿ ಚತುರ್ದಳ ಪದ್ಮೋದ್ಭವತಿ ಎಂದುದಾಗಿ,
ಆ ಷಡ್ದಳ ಪದ್ಮದಲ್ಲಿ ಚತುರ್ದಳ ಪದ್ಮ ಉದ್ಭವಿಸಿ
ಆಧಾರ ಚಕ್ರದಲ್ಲಿ ಅಗ್ನಿವರ್ಣವಾಗಿಹುದು ನೋಡಾ,
ಅಪ್ರಮಾಣ ಕೂಡಲಸಂಗಮದೇವಾ.

೧೧೪
ಇನ್ನು ಏಕಾಕ್ಷರ ತ್ರಯಾಕ್ಷರ ಸಹಸ್ರಾಕ್ಷರೋತ್ಪತ್ಯವೆಂತೆಂದಡೆ ;
ಅಸಿಪದಾತೀತಾಗಮೇ ಶ್ರುತಿಃ
ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿ ಏಕಾಕ್ಷರೋದ್ಭವತಿ ಎಂದುದಾಗಿ
ನಿಶ್ಶಬ್ದವೆಂಬ ಪರಬ್ರಹ್ಮದ ನೆನಹುಮಾತ್ರದಲ್ಲಿ ಏಕಾಕ್ಷರ ಉತ್ಪತ್ಯ,
ಆ ಏಕಾಕ್ಷರ ತಾನೆ ತ್ರಯಾಕ್ಷರವಾಯಿತ್ತು,
ಆ ತ್ರಯಾಕ್ಷರ ತಾನೆ ಸಹಸ್ರಾಕ್ಷರವಾದವು ನೋಡಾ,
ಅಪ್ರಮಾಣ ಕೂಡಲಸಂಗಮದೇವಾ.[1]     x (ತಾಪ್ರ ೭೬)

[2]

[3]     + ಕ (ತಾಪ್ರ ೭೬)