ಸುಮಾರಾಗಿ ಭೂಮಿ ಮತ್ತು ಸೂರ್ಯ ಒಟ್ಟೊಟ್ಟಿಗೆ ವಿಕಾಸವಾದುವು. ಇದು ನಡೆದದ್ದು 450ಕೋಟಿ ವರ್ಷಗಳ ಹಿಂದಿನಿಂದ.

ಭೂಮಿ ರೂಪುಗೊಂಡು ಸುಮಾರು 400ಕೋಟಿ ವರ್ಷಗಳ ತನಕವೂ ಅದರ ಹವಾಗುಣದಲ್ಲಿ ಭಾರೀ ವೈಪರೀತ್ಯಗಳು ಕಾಣಿಸಿಕೊಂಡುದಕ್ಕೆ ಪುರಾವೆಯಿಲ್ಲ. ಈ ಅವಧಿಯಲ್ಲಿ ಸೌರ ವಿಕಿರಣದ ತೀವ್ರತೆ ಸೇಕಡ 25-30ರಷ್ಟು ಹೆಚ್ಚಾಗಿತ್ತು. ಆದರೂ ಇಡೀ ಭೂಮಿ ಹಿಮಾವೃತವಾಗಲಿಲ್ಲ. ಇಂದಿಗಿಂತ ಬಹಳಷ್ಟು ಕ್ಷೀಣವಾದ ಸೂರ್ಯಕಿರಣಗಳು ಭೂಮಿಯನ್ನು ತೋಯುತಿದ್ದರೂ ಹಿಮವೇಕೆ ಹರಡಿಕೊಂಡಿರಲಿಲ್ಲ? ಖ್ಯಾತ ಖಗೋಲತಜ್ಞ ಮತ್ತು ವಿಜ್ಞಾನ ಬರಹಗಾರ ಕಾರ್ಲ್ ಸಗಾನ್ ಇದನ್ನು ‘ಬಾಲಸೂರ್ಯನ ವಿರೋಧಾಭಾಸ’ಎಂದು ಕರೆದರು (1972).

ಅಮೆರಿಕದ ಪವನ ವಿಜ್ಞಾನಿ ಜಿಮ್ ಕಾಸ್ಟಿಂಗ್ ಈ ವಿರೋಧಾಭಾಸವನ್ನು ವಿವರಿಸಲು ಪ್ರಯತ್ನಿಸಿದರು (1993). 400 ಕೋಟಿ ವರ್ಷಗಳ ಹಿಂದೆ ಭೂಮಿಯ ವಾತಾವರಣದಲ್ಲಿ ಅಧಿಕ ಪ್ರಮಾಣದಲ್ಲಿದ್ದುದು ಕಾರ್ಬನ್ ಡೈಆಕ್ಸೈಡ್ ಎಂದು ತಮ್ಮ ಲೆಕ್ಕಾಚಾರಗಳಿಂದ ತೋರಿಸಿದರು.  ಕಾರ್ಬನ್ ಡೈಆಕ್ಸೈಡ್ -ಒಂದು ‘ಹಸಿರು ಮನೆ’ಅನಿಲ. ಅಂದರೆ, ಸೂರ್ಯ ವಿಕಿರಣದಲ್ಲಿ ಬಂದ ಉಷ್ಣವನ್ನು ಹೊರಗೆ -ಬಾಹ್ಯ ವ್ರೋಹೋಗಲು ಬಿಡದ ಅನಿಲ -ಈ ಕಾರ್ಬನ್ ಡೈಆಕ್ಸೈಡ್. ಆದ್ದರಿಂದ ಭೂಮಿಯ ಉಷ್ಣವನ್ನು ಕಾಪಾಡುವ ರಕ್ಷಣಾವರಣವಾಗಿ ಅದು ವರ್ತಿಸಿತು. ಉಷ್ಣ ಹಾಗೇ ಉಳಿದುದರಿಂದ ನೀರು ಹಿಮವಾಗುವುದು ತಪ್ಪಿಹೋಯಿತು.

ಡೆನ್ಮಾರ್ಕ್‌ನ ಮಿನಿಕ್ ರೋಸಿಂಗ್ ನೀಡಿದ ವಿವರಣೆಯೇ ಬೇರೆ. ಭೂಮಿಯ ವಾತಾವರಣದ ಪ್ರಾರಂಭದಲ್ಲಿ ಮೋಡದ ಪದರ ಇಂದಿಗಿಂತ ತುಂಬ ತೆಳ್ಳಗಿತ್ತು. ಇದರಿಂದ ಭೂಮಿಯ ಮೇಲೆ ಬೀಳುವ ಸೂರ್ಯಕಿರಣಗಳಿಗೆ ಬರುವ ತಡೆ ಅಂದು ಕಡಿಮೆಯಾಗಿತ್ತು. ಭೂಮಿಯ ನೀರು ಈ ಕಾರಣದಿಂದ ನೀರಾಗಿಯೇ ಉಳಿಯಿತು. ಶೀತ ಹೆಚ್ಚಿ ಹಿಮಪದರ ಹರಡಲಿಲ್ಲ.  ಇದು ರೋಸಿಂಗ್ ಅವರ ತರ್ಕ.

ಆದರೆ ಅಂದಿಗೆ ಮೋಡದ ಪದರ ಏಕೆ ತೆಳುವಾಗಿತ್ತು?ಮೋಡಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಇದಕ್ಕೆ ಕಾರಣ ಹುಡುಕ ಬೇಕು. ನೀರಾವಿ ಹನಿಗಟ್ಟಬೇಕಾದರೆ ಸೂಕ್ಷ್ಮಕಣಗಳು ಅಗತ್ಯ. ಇವುಗಳೇ ನೀರಿನ ಹನಿ ರೂಪಗೊಳ್ಳುವ ಬೀಜ ಅಥವಾ ನೂಕ್ಲಿಯಸ್‌ಗಳಂತೆ ವರ್ತಿಸುತ್ತವೆ. ಪ್ರಾರಂಭದಲ್ಲಿ ಇಂಥ ಕಣಗಳನ್ನು ಉತ್ಪಾದಿಸುವ ಶೈವಲಗಳಾಗಲೀ ಸಸ್ಯಗಳಾಗಲೀ ಇರಲಿಲ್ಲ.

380ಕೋಟಿ ವರ್ಷ ಹಿಂದಿನ ಪರ್ವತ ಶಿಲೆಯ ಚೂರುಗಳನ್ನು ಆಯ್ದು ರೋಸಿಂಗ್ ಅವರ ತಂಡ ವಿಶ್ಲೇಷಿಸಲು ನಿರ್ಧರಿಸಿತು. ಪಶ್ಚಿಮ ಗ್ರೀನ್‌ಲೆಂಡ್‌ನ ‘ಇಸುವ’ತಳಶಿಲೆಯ ಚೂರುಗಳನ್ನು ಇದಕ್ಕಾಗಿ ಆರಿಸಿದರು. ಅಷ್ಟೇ ಅಲ್ಲ, ಕಾರ್ಬನ್ ಡೈಆಕ್ಸೈಡಿನ ಪ್ರಮಾಣ ಹೆಚ್ಚು ಕಡಿಮೆ ಸ್ಥಿರವಾಗಿತ್ತೇ, ಭಾರೀ ಅಂತರದ ಮೌಲ್ಯಗಳ ಮಧ್ಯೆ ಓಲಾಡುತ್ತಿತ್ತೆ ಎಂಬುದನ್ನು ತಿಳಿಯಲು ಪ್ರಯತ್ನಿಸಿದರು. ಇಸುವ ಶಿಲೆಯ ವಿಶ್ಲೇಷಣೆ ಇದಕ್ಕೂ ಸಹಾಯಕವಾಯಿತು. ಆಗ ನೂರರಲ್ಲಿ ಒಂದರಷ್ಟು ಕಾರ್ಬನ್ ಡೈಆಕ್ಸೈಡ್ ಇದ್ದುದು ಖಚಿತವಾಯಿತು. ಇಂದಿರುವ ಕಾರ್ಬನ್ ಡೈಆಕ್ಸೈಡ್‌ಗೆ ಹೋಲಿಸಿದರೆ ಮೂರು-ನಾಲ್ಕು ಪಟ್ಟಿನಷ್ಟು ಅಂದು ಇತ್ತು. ಆದರೆ ಸೈದ್ಧಾಂತಿಕವಾಗಿ ಲೆಕ್ಕ ಹಾಕಿದ ಸೇಕಡ 30ರಷ್ಟು ಕಾರ್ಬನ್ ಡೈಆಕ್ಸೈಡ್ ಅಂದಿಗೂ ಇರಲಿಲ್ಲ! ಅಂದರೆ ಕೋಟಿಗಟ್ಟಲೆ ವರ್ಷಗಳ ಭೂಇತಿಹಾಸದಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಬಾಲಸೂರ್ಯನ ವಿರೋಧಾಭಾಸವನ್ನು ಕಿತ್ತುಹಾಕುವಷ್ಟು ಪ್ರಬಲವಾಗಿರಲಿಲ್ಲ.

ಆದರೆ ಕಾರ್ಲ್ ಸಗಾನ್ ವ್ಯಕ್ತಪಡಿಸಿದ ವಿರೋಧಾಭಾಸ ರೋಸಿಂಗ್ ಅವರ ವಿವರಣೆಯಿಂದ ಇಲ್ಲದಾದಂತಾಯಿತು.