ಕರ್ನಾಟಕದ ಆರನೇ ತಲೆಮಾರಿನ ಸಿತಾರ ವಾದಕ ಉಸ್ತಾದ್‌ ಬಾಲೇಖಾನರು ಕರ್ನಾಟಕದ ಹೆಸರಾಂತ ಸಿತಾರ ವಾದಕರಲ್ಲೊಬ್ಬರು. ಉತ್ತರ ಕರ್ನಾಟಕದಲ್ಲಿ ಸಿತಾರ ವಾದನಕ್ಕೆ ಸ್ಥಿರತೆ ತಂದು ಕೊಟ್ಟ, ದಕ್ಷಿಣ ಭಾರತದಲ್ಲಿ ಅದರ ಪರಂಪರೆಗೆ ಘನತೆ ಗೌರವ ತಂದ ನಾಡು ಕಂಡ ಅಪರೂಪದ ಕಲಾವಿದರು.

ಉಸ್ತಾದ್‌ ಬಾಲೇಖಾನರು ಜನಿಸಿದ್ದು ಧಾರವಾಡದಲ್ಲಿ ೧೯೪೨ರ ಆಗಸ್ಟ್‌ ೨೯ ರಂದು. ಸಿತಾರ ಪರಂಪರೆಯ ಮನೆತನ. ಅಜ್ಜ ‘ಸಿತಾರ ರತ್ನ’ ರಹಿಮತ್‌ಖಾನರು ಉತ್ತರ ಭಾರತದಿಂದ ದಕ್ಷಿಣಕ್ಕೆ ಬಂದು ಕರ್ನಾಟಕದಲ್ಲಿ ಸಿತಾರ ಪರಂಪರೆಗೆ ನಾಂದಿ ಹಾಕಿದವರು. ತಂದೆ ಪ್ರೊ. ಎ. ಕರೀಮ್‌ ಖಾನರು ಧಾರವಾಡ ಕರ್ನಾಟಕ ಕಾಲೇಜಿನ ಸಿತಾರ ಪ್ರಾಧ್ಯಾಪಕರಾಗಿದ್ದರು. ಇಂತಹ ‘ಸ್ವರ ಪರಿವಾರ’ದಲ್ಲಿ ಜನಿಸಿದ ಬಾಲೇಖಾನರಿಗೆ ಆರನೇ ವಯಸ್ಸಿನಲ್ಲಿ ತಂದೆಯಿಂದ ಸಿತಾರ ವಾದನದ ಪಾಠ. ಹತ್ತಾರು ವರ್ಷ ನಿರಂತರ ಶಿಕ್ಷಣ. ಸತತ ರಿಯಾಜ್‌ ಫಲವಾಗಿ ಬಾಲೇಖಾನರು ಸಿತಾರದ ಉಸ್ತಾದ್‌ರೆನಿಸಿ ಸಂಗೀತ ಲೋಕದಲ್ಲಿ ಸಿದ್ಧಿ ಪ್ರಸಿದ್ಧಿ ಪಡೆದರು.

ಉಸ್ತಾದ್‌ ಬಾಲೇಖಾನರ ಒಂಬತ್ತು ಜನ ಸಹೋದರರಲ್ಲಿ ಏಳು ಜನರು ಖ್ಯಾತ ಸಿತಾರ ವಾದಕರು. ಅವರೆಲ್ಲ ಇಂದು ಹೆಸರುವಾಸಿ ಸಿತಾರ ವಾದಕರಾಗಿದ್ದಾರೆ. ೧೯೬೮ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಸಿತಾರ ವಾದಕರಾಗಿ ಸೇರಿ ೨೦೦೩ ರವರೆಗೆ ಕಾರ್ಯ ನಿರ್ವಹಿಸಿ ಧಾರವಾಡದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಬಾಲೇಖಾನರು ಆಕಾಶವಾಣಿ ಹಾಗೂ ದೂರದರ್ಶನದ ‘ಎ’ ಶ್ರೇಣಿ ಕಲಾವಿದರು. ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಎರಡು ಸಾರಿ ಸಿತಾರ ನುಡಿಸಿ ದೇಶದ ಮಹಾನ್‌ ಕಲಾವಿದರೆಂಬ ಖ್ಯಾತಿಗೆ ಪ್ರಾಪ್ತರಾಗಿದ್ದಾರೆ. ಮುಂಬೈ, ಪುಣೆ, ಕೋಲ್ಕತ್ತಾ, ಬೆಂಗಳೂರು, ಮೈಸೂರು, ಬಾಗಲಕೋಟೆ ಹಾಗೂ ಕೀನ್ಯಾ, ಉಗಾಂಡಾ, ತಾಂಜಾನಿಯಾ, ಲಂಡನ್‌, ಮ್ಯಾಂಚೆಸ್ಟರ್ ಮತ್ತು ಪ್ಯಾರಿಸ್‌ಗಳಲ್ಲಿ ಸಿತಾರ ಝೇಂಕರಿಸಿದ ರಾಷ್ಟ್ರೀಯ ಕನ್ನಡಿಗ. ಲಂಡನ್‌ ದೂರದರ್ಶನದ ಗೌತಮಬುದ್ಧ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ಲಂಡನ್ನಿನಲ್ಲಿ ಪ್ರದರ್ಶನಗೊಂಡ ’Seasons of India’ ರೂಪಕಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಲ್ಲಿ ಎರಡು ಅವಧಿಗೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಗಾಯಕಿ ಅಂಗದಿಂದ ನುಡಿಸುವ ಬಾಲೇಖಾನರ ಸಿತಾರ ಕೇಳುವುದೇ ಒಂದು ಆನಂದ. ನಿಧಾನಗತಿಯ ಆಲಾಪ, ಲಯಬದ್ಧ ಜೋಡ್‌, ರಭಸದ ಝಾಲಾದಲ್ಲಿ ಚರಮಗತಿ ಬಾಲೇಖಾನರ ವಾದನನ ಶೈಲಿಯ ಗುಣಗಳು. ಅಂತೆಯೇ ‘ಬಾಲೇಖಾನರ’ ಸಿತಾರ ನುಡಿಯುವುದಿಲ್ಲ; ಅದು ಹಾಡುತ್ತದೆ’ ಎಂಬುದು ಸಂಗೀತ ವಿಮರ್ಶಕರ ಜನಜನಿತವಾದ ಮಾತು. ಬಾಲೇಖಾನರ ಶಿಷ್ಯ ಸಂಪತ್ತು ಅಪಾರ.

ಒಂದು ದಾಖಲೆಯ ಪ್ರಕಾರ ಅವರ ಶಿಷ್ಯರ ಸಂಖ್ಯೆ ೧೬೨. ಬಾಲೇಖಾನರ ಇಬ್ಬರು ಗಂಡು ಮಕ್ಕಳು (…………………..ಹಫೀಜ್‌ ಖಾನ “ಗುನ್ನು” ಸಿತಾರ ವಾದನದಲ್ಲಿ ತಂದೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಉಸ್ತಾದ್‌ ಬಾಲೇಖಾನರಿಗೆ ದೊರೆತ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೭), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೨೦೦೦-೦೧), ಷಷ್ಠ್ಯಬ್ಇ ಸಮಾರಂಭದ ಸಿತಾರವಾದ ಬಿರುದು ಹಾಗೂ ಅಭಿನಂದನ ಸಂಪುಟ (೨೦೦೩, ಪುಟ್ಟರಾಜ ಸಮ್ಮಾನ್‌ (೨೦೦೬) ಮುಂತಾದವುಗಳು ಉಲ್ಲೇಖನೀಯವಾಗಿವೆ.