ಇಂಡಿಯಾದಿಂದ ಬಂದ ಪ್ರೊಫೆಸರ್ ಒಬ್ಬರು ನಾನಿದ್ದ ಹೋಟೇಲಿನಲ್ಲಿಯೆ ಉಳಿದುಕೊಂಡಿದ್ದರು; ನಾಲ್ಕೈದು ದಿನ ಮಾಸ್ಕೋದಲ್ಲಿದ್ದು ಅನಂತರ ಕೀವ್ ವಿಶ್ವವಿದ್ಯಾಲಯಕ್ಕೆ ಅವರು ಹೊರಡುವುದಿತ್ತು. ಅವರು ಉಪಹಾರ ಮುಗಿಸಿಕೊಂಡು ನನ್ನ ಕೊಠಡಿಗೆ ಬಂದು, ಈ ನಗರದಲ್ಲಿ ಏನೇನು ನೋಡಬಹುದು ಎಂಬ ಬಗ್ಗೆ ನನ್ನನ್ನು ಕೇಳಿದರು. ಅದೂ ಇದೂ ಮಾತನಾಡುವಾಗ ಒಂದು ಸಂಗತಿ ಹೇಳಿದರು: “ನೋಡಿ ಇವರೆ….. ನಿನ್ನೆ ಬೆಳಿಗ್ಗೆ ಏನಾಯಿತಂತೀರಿ; ನಾನು ಯಥಾಪ್ರಕಾರ ಉಪಹಾರಕ್ಕೆಂದು ಕೆಳಗಿನ ಕೆಫೆಗೆ ಹೋದೆ. ಒಂದು ಮರದ ಟ್ರೇಯಲ್ಲಿ ಗಾಜಿನ ಬಟ್ಟಲಿರಿಸಿಕೊಂಡು ಕ್ಯೂ ನಿಂತೆ. ಟೇಬಲ್ಲಿನ ಮೇಲೆ ಜೋಡಿಸಿದ್ದ ಒಂದೊಂದು ಆಹಾರ ಪದಾರ್ಥಗಳನ್ನು ಬೇಕಾದ್ದನಾಯ್ದುಕೊಂಡು, ಟೇಬಲ್ಲಿನ ತುದಿಯಲ್ಲಿ, ಹಣ ತೆಗೆದುಕೊಳ್ಳುವ ಮಹಿಳೆಯ ಬಳಿ ನಿಂತು ಕೋಟಿನ ಜೇಬಿಗೆ ಕೈ ಹಾಕಿದೆ. ಜೇಬಲ್ಲಿ ಪರ್ಸೇ ಇಲ್ಲ ! ಕೂಡಲೆ ನೆನಪಾಯಿತು. ಅದು ಮಹಡಿಯ ಮೇಲೆ ನನ್ನ ಕೋಣೆಯ ಬೇರೊಂದು  ಕೋಟಿನ ಜೇಬಿನಲ್ಲಿದೆ ಎಂದು; ತಪ್ಪಿ ನಾನು ಬೇರೊಂದು ಕೋಟು ಹಾಕಿಕೊಂಡು ಬಂದಿದ್ದೆ. ಹಣ ತೆಗೆದುಕೊಳ್ಳುವ ಮಹಿಳೆಗೆ ವಿವರಿಸಿದೆ; ಆಮೇಲೆ ಎಂಟನೆ ಮಹಡಿಯಲ್ಲಿರುವ ಕೊಠಡಿಗೆ ಹೋಗಿ ತಂದುಕೊಡುತ್ತೇನೆ, ಈಗ ಉಪಹಾರವನ್ನು ಮಾಡಿದ ಮೇಲೆ – ಎಂದೆ. ಆ ಗಂಟುಮೋರೆಯ ಮಹಿಳೆ ಒಪ್ಪಲಿಲ್ಲ; ಮೊದಲು ಹೋಗಿ ದುಡ್ಡು ತಂದುಕೊಟ್ಟು ಆಮೇಲೆ ಬೇಕಾದರೆ ಉಪಹಾರ ಮಾಡಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟಳು. ಸರಿ, ನಾನು ಉಪಹಾರದ ತಟ್ಟೆಯನ್ನಲ್ಲಿಯೇ ಇಟ್ಟು ಮತ್ತೆ ಕೊಠಡಿಗೆ ಬಂದು ಹಣ ತೆಗೆದುಕೊಂಡು ಹೋಗಿ, ಆ ಮಹಾತಾಯಿಗೆ ಸಲ್ಲಿಸಿ, ಬೆಳಗಿನ ಉಪಹಾರ ಮಾಡಬೇಕಾಯಿತು. ನೋಡಿ, ಇವರೆಂಥ ಸೌಜನ್ಯವಿಲ್ಲದ ಜನ. ಅದೂ ಒಂದೇ ಹೋಟೆಲು, ಒಂದೇ ವ್ಯವಸ್ಥೆಯ ಬೇರೆಯ ಭಾಗ. ಬೇರೆ ದೇಶದಿಂದ ಬಂದಿದ್ದಾರೆ ಈ ಜನ, ಹೇಗೂ ನಮ್ಮ ಹೋಟೆಲಲ್ಲೇ ಇದ್ದಾರೆ; ಅಕಸ್ಮಾತ್ ‘ಪರ್ಸ್’ ಅನ್ನು ಮೇಲಿನ ಮಹಡಿಯಲ್ಲಿ ಬಿಟ್ಟಿದ್ದಾರೆ; ಉಪಹಾರ ತೆಗೆದುಕೊಂಡು ಮುಗಿಸಿ ಹಣ ತಂದುಕೊಡಲಿ, ಚಿಂತೆಯಿಲ್ಲ- ಅನ್ನುವ ಭಾವನೆಗಳೇ ಅವರ ತಲೆಯಲ್ಲಿ ಸುಳಿಯುವುದಿಲ್ಲ. ಎಲ್ಲರೂ ಯಂತ್ರಗಳು; ಬರೀ ಲೆಕ್ಕಾಚಾರ…… ನೋಡಿ, ಇನ್ನೂ ಒಂದು ಸಂಗತಿ. ನನಗೊಬ್ಬ ದ್ವಿಭಾಷಿಯನ್ನು ಕೊಟ್ಟಿದ್ದಾರಲ್ಲ; ಆತನಿಗೂ ನಾನೇ, ನನ್ನ ಖರ್ಚಲ್ಲೇ ದಿನವೂ ಮಧ್ಯಾಹ್ನದ ಊಟಕ್ಕೆ ತೆರಬೇಕು; ನನಗೆ ಈ ಸರ್ಕಾರ ಕೊಡುವುದು ದಿನಕ್ಕೆ ಏಳು ರೂಬಲ್ಲು; ಸಹಾಯಕನಾದ ದ್ವಿಭಾಷಿಗೆ ಮೂರುವರೆ ರೂಬಲ್ಲು. ಹೀರುವಾಗ ಈತ ದಿನಾ ನನ್ನ ಖರ್ಚಲ್ಲೆ ತಿಂದು, ತನ್ನ ಮೂರೂವರೆ ರೂಬಲ್ಲನ್ನು ಜೇಬಿಗೆ ಇಳಿಯಬಿಡುತ್ತಾನೆ. ಬೇರೆ ದೇಶದಿಂದ ಬಂದ ಈ ಪ್ರೊಫೆಸರ್‌ಗೆ, ಕಡೆ ಕಡೆಗೆ ಹಣ ಸಾಲದೆ ಹೋದೀತು; ಅವರ ಖರ್ಚಿನಲ್ಲಿ ನಾನು ನಿಭಾಯಿಸಬಾರದು ಎಂಬ ವಿವೇಕವೇ ಇಲ್ಲ ಈ ಜನಕ್ಕೆ. ಅಂತೂ ಮೂರೇ ದಿನದಲ್ಲಿ ನನಗೆ ಸಾಕಾಗಿ ಹೋಗಿದೆ ಎಂದರು.

ಇನ್ನೂ ತಮ್ಮ ಅನುಭವಗಳನ್ನು ಹೇಳುತ್ತಿದ್ದರೋ ಏನೋ; ಆ ವೇಳೆಗೆ ನನ್ನ ದ್ವಿಭಾಷಿ ವೊಲೋಜ ಬಾಗಿಲು ಬಡಿದು, ಒಳಗೆ ಬಂದ. ಅಸ್ಸಾಮಿನ ಸ್ನೇಹಿತರ ಅನುಭವ ವಾಸ್ತವವಾದದ್ದೆ. ನಾನು ಬಂದ ಮೊದಲ ದಿನದ ಪಾಡು ನನಗೆ ನೆನಪಿಗೆ ಬಂತು. ಈ ಜನ ಒಮ್ಮೊಮ್ಮೆ ಕೇವಲ ಲೆಕ್ಕಾಚಾರದಿಂದ ಯಾಕೆ ನಡೆದುಕೊಳ್ಳುತ್ತಾರೆ? ಬಹುಶಃ ಇವರೆಲ್ಲ ಸರ್ಕಾರದ ಬಿಗಿ ನೀತಿಯ ಯಂತ್ರದ  ಒಂದು ಭಾಗವಾಗಿರುವುದರಿಂದ, ಯಾವುದು ಯಾವ್ಯಾವಾಗ ಹೇಗೆ ಕ್ರಮಬದ್ಧವಾಗಿ ನಡೆದುಕೊಂಡು ಹೋಗಬೇಕೊ, ಆ ಒಂದು ಕ್ರಮಬದ್ಧತೆಯ ಕೀಲು ಮೊಳೆಗಳಾಗಿದ್ದಾರೆಂದು ತೋರುತ್ತದೆ.  ಆದರೆ ಈ ಕ್ರಮಬದ್ಧತೆ ಮನುಷ್ಯತ್ವದ ಅವಶ್ಯಕವಾದ ಕೆಲವು ಮೌಲ್ಯಗಳನ್ನೂ ಕಡೆಗಣಿಸುವ ರೀತಿಯಲ್ಲಿರುವುದು ಅಷ್ಟು ಹಿತವಾಗಿಲ್ಲ.

ಹನ್ನೊಂದು ಗಂಟೆಯ ಮೇಲೆ ಟಾಲ್‌ಸ್ಟಾಯ್ ಮ್ಯೂಸಿಯಂ ನೋಡಲೆಂದು ಹೋದೆವು; ರಿಪೇರಿಗೆಂದು ಬಾಗಿಲು ಹಾಕಿತ್ತು. ಅಲ್ಲಿಂದ ಪುಷ್ಕಿನ್ ಮ್ಯೂಸಿಯಂಗೆ ಹೋದೆವು. ಇಲ್ಲೂ ನಮ್ಮ ಪಾದರಕ್ಷೆಗಳ ಮೇಲೆ ಬಟ್ಟೆಯ ಬೂಡ್ಸು ಧರಿಸಬೇಕು. ಒಬ್ಬ ಕವಿಯನ್ನು ಕುರಿತು ಏನೆಲ್ಲವನ್ನೂ ಸಂಗ್ರಹಿಸಿಡಬಹುದೊ, ಅಷ್ಟನ್ನೂ ಕೂಡಿಸಿದ್ದಾರೆ. ಅವನ ಜೀವನ ಪಟ; ಅವನು ಆಭ್ಯಸಿಸಿದ ಕೃತಿಗಳು; ಅವನ ಸಹಜವಾದ, ಹಾಗೂ ವಿಸ್ತರಿಸಿದ ಹಸ್ತಾಕ್ಷರಗಳು; ಅವನ ಪರಿವಾರ; ಅವನ ಮಿತ್ರರ ಚಿತ್ರಗಳು; ಅವನು ಸಂಚರಿಸಿದ ಸ್ಥಳಗಳು; ಬೇರೆ ಬೇರೆಯ ಭಾಷೆಗೆ ಅನುವಾದಿತವಾದ ಅವನ ಕೃತಿಗಳ ವಿವರ; ಅವನು ಬಳಸಿದ ಸಾಮಗ್ರಿಗಳು – ಇತ್ಯಾದಿ. ಅನೇಕ ಕೊಠಡಿಗಳಲ್ಲಿ ಹರಹಿಕೊಂಡ ಈ ಮ್ಯೂಸಿಯಂ ರಷ್ಯದ ಬಹು ದೊಡ್ಡ ಕವಿ ಪುಷ್ಕಿನ್ನನಿಗೆ ಸಲ್ಲಿಸಿರುವ  ಮಹತ್ವದ ಗೌರವದ ಒಂದು ರೂಪವಾಗಿದೆ.

ಅನಂತರ ‘ಟಾಲ್‌ಸ್ಟಾಯ್ ಎಸ್ಟೇಟ್ ಮ್ಯೂಸಿಯಂ’ಗೆ ಹೋದೆವು. ಇದು ವಾಸ್ತವವಾಗಿ  ಮಾಸ್ಕೋದಲ್ಲಿರುವ ಟಾಲ್‌ಸ್ಟಾಯ್ ಅವರ ಮನೆ. ಟಾಲ್‌ಸ್ಟಾಯ್ ಬದುಕಿದ್ದದ್ದು ದೂರದ ಯಾಸ್ನಾಯಾ ಪೋಲಾಯ್ನ ಎಂಬ ಹಳ್ಳಿಯಲ್ಲಿ. ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಮಾಸ್ಕೋ ನಗರದ ಈ ಮನೆಯನ್ನು ಅವರು ಕೊಂಡಿದ್ದರು. ಈ ಮನೆಯ ಸುತ್ತ ಕಾಡು.  ಟಾಲ್‌ಸ್ಟಾಯ್ ಹನ್ನೊಂದು ಛಳಿಗಾಲವನ್ನು ಇಲ್ಲಿ ಕಳೆದರಂತೆ. ಈ ಮನೆಗೆ ವಿದ್ಯುದ್ದೀಪ ಹಾಕಿಲ್ಲ; ಟಾಲ್‌ಸ್ಟಾಯ್ ಬದುಕಿದ್ದಾಗ ಅದು ಹೇಗೆ ಕಾಣುತ್ತಿತ್ತೊ, ಹಾಗೇ ಇವತ್ತಿಗೂ ಇದೆ. ಟಾಲ್‌ಸ್ಟಾಯ್ ಇರುತ್ತಿದ್ದ, ಹಾಗೂ ಅಭ್ಯಾಸದ ಕೋಣೆಗಳನ್ನು ನೋಡಿದೆವು.

ಈ ದಿನ  ಅಸಾಧ್ಯ ತುಂತುರು ಮಳೆ. ಭಾನುವಾರವಾದ್ದರಿಂದ ಇಡೀ ನಗರ ಸ್ತಬ್ಧವಾಗಿತ್ತು. ಯಾವುದೂ ಸ್ಪಷ್ಟವಾಗಿ ಕಾಣದಂಥ ಮಬ್ಬು. ನಾನು ಮಧ್ಯಾಹ್ನದ ಊಟಕ್ಕೆ ಮಹಾದೇವಯ್ಯನವರ ಮನೆಗೆ ಹೋಗಬೇಕಾಗಿತ್ತು. ಒಂದು ಗಂಟೆಯ ವೇಳೆಗೆ, ಅವರು ವಾಸಿಸುತ್ತಿದ್ದ ಬಡಾವಣೆಯ ಹನ್ನೆರಡು ಹಂತದ ಮನೆಯ ಮುಂದೆ, ಕಾರು ನಿಲ್ಲಿಸಿ, ಇದೆ ನಿಮ್ಮ ಮಿತ್ರರ ಮನೆ ಎಂದು ಇಳಿಸಿ ‘ಗುಡ್ ಬೈ’  ಎಂದು ನನ್ನ ದ್ವಿಭಾಷಿ ಕಾರಲ್ಲಿ ಹೊರಟೇ ಹೋದ. ನಾನು ಅಭ್ಯಾಸಬಲದಿಂದ ಮೆಟ್ಟಿಲೇರಿ, ಎಡಕ್ಕೆ ತಿರುಗಿ, ಬಾಗಿಲೊಂದನ್ನು ದಬ್ಬಿ, ಮತ್ತೆ ಬಲಕ್ಕೆ ತಿರುಗಿ ಎರಡನೆ  ಮಹಡಿಯ ಓಣಿಯಲ್ಲಿ ನಡೆದು, ಮತ್ತೆ ಎಡಕ್ಕೆ ತಿರುಗಿ ಹೋಗಿ ನೋಡುತ್ತೇನೆ, ಬಾಗಿಲ ಮೇಲೆ ಒಂಬತ್ತನೆ ನಂಬರ್ ಇದೆ. ಆದರೆ ನನಗೆ ಅದೇ ಮಹಡಿಯಲ್ಲಿ ಪರಿಚಿತವಾದದ್ದು ನೂರಾ ಇಪ್ಪತ್ತುಮೂರನೆ ನಂಬರ್. ನಾನು ಬೇರೊಂದು ಬ್ಲಾಕ್‌ಗೆ ಬಂದಿದ್ದೇನೆಂಬ ಅರಿವಾಯಿತು. ಒಂದೇ ಥರದ ಎತ್ತರವಾದ ಮನೆಗಳು, ಅವುಗಳೊಂದಿಗೆ ಯಾವ ಎತ್ತರವಾದ ಮನೆಯ ಒಳಗಿನ ಮನೆಯಲ್ಲಿ ನನ್ನ ಮಿತ್ರರ ವಸತಿಯಿದೆಯೊ ತಿಳಿಯಲಿಲ್ಲ. ಸುರಿಯುವ ಮಳೆಯಲ್ಲಿ ಮತ್ತೊಂದು ಮನೆಯ ಆವರಣಕ್ಕೆ ಹೊಕ್ಕೆ. ಅಲ್ಲಿ ಕೆಳ ವರಾಂಡದಲ್ಲಿ ಕೂತ ನಾಲ್ಕು ಜನರನ್ನು ಕೇಳಿದೆ – ಇಂಗ್ಲಿಷಿನಲ್ಲಿ. ಅವರಾರಿಗೂ ಅರ್ಥವಾಗಲಿಲ್ಲ. ಕೈ ಅಲ್ಲಾಡಿಸಿದರು. ಮುಂದಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ಈ ಊರಲ್ಲಿ ನನ್ನ ಇಂಗ್ಲಿಷ್ ನಡೆಯುವುದಿಲ್ಲ; ನನಗೆ ರಷ್ಯನ್ ಬಾರದು. ನನ್ನ ದ್ವಿಭಾಷಿಯಿಲ್ಲದೆ ನಾನೇ ನೇರವಾಗಿ ನೋಡುತ್ತೇನೆಂದು ಹೋದರೆ, ನಾನು ವಾಪಸು ಹೋಟೆಲಿನ ಕೊಠಡಿಗೆ ಬರುವುದೂ ಕಷ್ಟ. ಈ ದಿನವಂತೂ ದ್ವಿಭಾಷಿ ಸುರಿಯುವ ಮಳೆಯಲ್ಲಿ ಇಳಿಸಿ ಹೊರಟು ಹೋದ. ಈಗ ನನ್ನ ಮಿತ್ರರ ಮನೆ ಹುಡುಕುವುದು ಹೇಗೆ ? ಸದ್ಯ ನಾನು ನಿಂತ ಬಡಾವಣೆಯಂತೂ ಅವರಿದ್ದದ್ದೆ. ಅಂತೂ ಇಂತೂ ಮಳೆಯಲ್ಲಿ ಅತ್ತಿಂದಿತ್ತ ಓಡಾಡಿ, ಬೇಸರವಾಗಿ  ಅವರಿದ್ದ ಎತ್ತರವಾದ ಮನೆಯ ಕೆಳಗಿನ ಹಂತದ ಮುಂಬಾಗಿಲ ಕೆಳಗೆ ನಿಂತಿದ್ದೆ. ನನ್ನ ಮಿತ್ರರು, ಆ ಮಳೆಯಲ್ಲಿ ಏನೋ ಸಾಮಾನು ತರಲು ಅಂಗಡಿಗೆ ಹೋಗಿದ್ದು ಮನೆಗೆ  ಹಿಂತಿರುಗುತ್ತಿದ್ದರು. ಕೆಳಹಂತದಲ್ಲಿ ನಿಂತ ನನ್ನನ್ನು ಗುರುತಿಸಿ ಮೇಲಕ್ಕೆ ಕರೆದುಕೊಂಡು ಹೋದರು. ಭಾನುವಾರದ ಊಟಕ್ಕೆ ಸಂಚಕಾರ ಒದಗಲಿಲ್ಲ.

ಸಂಜೆ ಆರುಗಂಟೆಗೆ ಹೋಟೆಲಿನ ಹತ್ತಿರ ವೊಲೋಜನಿಗೆ ಬರಲು ಹೇಳಿದ್ದೆ. ಈ ಸಂಜೆ ಬ್ಯಾಲೆ ‘ಸ್ವಾನ್‌ಲೇಕ್’ಗೆ ಟಿಕೆಟ್ಟು ತೆಗೆಸಿ ಆಗಿತ್ತು. ಬೆಳಗಿನಿಂದ ಹಿಡಿದ ತುಂತುರು ಮಳೆ ಬಿಟ್ಟಿರಲಿಲ್ಲ ; ಜತೆಗೆ ಥಂಡಿಗಾಳಿ.  ಹೊರಗೆ ಬಂದರೆ  ಒಂದೈದು ನಿಮಿಷದಲ್ಲಿ ಕಣ್ಣು-ಕಿವಿ-ಮೂಗುಗಳು ಮರಗಟ್ಟುತ್ತಿದ್ದವು. ಇಂಥ ಹವೆಯಲ್ಲಿ ಹೇಗೋ  ಮಾಡಿ ಒಂದು ಟ್ಯಾಕ್ಸಿ ಹಿಡಿದು ಬಾಲ್‌ಷೋಯ್ ಥಿಯೇಟರ್‌ಗೆ ಬಂದೆವು. ಮಳೆಯ ಮಬ್ಬನ್ನು ತೂರಿ ಎತ್ತರವಾದ ಕಂಬಗಳ ಈ ಭವನಗಳನ್ನು ಹೊಕ್ಕು ಒದ್ದೆ ಮುದ್ದೆಯಾದ ನಮ್ಮ ಮೇಲಂಗಿಗಳನ್ನು ಕಳಚಿಕೊಟ್ಟು ನಮ್ಮ ಸ್ಥಳಗಳನ್ನು ಹಿಡಿದೆವು.

ಕೂತ ಮೇಲೆ ಒಮ್ಮೆ ಸುತ್ತಮುತ್ತ ನೋಡಿದರೆ ಇದೇನು ನಾಟ್ಯ ಗೃಹವೋ, ನಮ್ಮ ಹಳೆಯ ಪುರಾಣಗಳಲ್ಲಿ ಬರುವ ಇಂದ್ರಸಭಾ ಭವನವೋ ಅನ್ನಿಸಿತು. ಕುದುರೆ ಲಾಳದಾಕಾರದ  ವಿಸ್ತಾರವಾದ ಪ್ರೇಕ್ಷಾಂಗಣ ; ಎರಡು ಸಾವಿರ ಜನ ಕೂತು ನೋಡಲು ಅನುಕೂಲವಾದ ಪೀಠಗಳು. ಐದು ಹಂತಗಳ ಸುವರ್ಣ ವರ್ಣದ ಬಾಲ್ಕನಿಗಳಿಂದ,  ಅದ್ಭುತವಾದ ಕಿನ್‌ಕಾಪಿನ ಪರದೆಗಳಿಂದ, ಸುಂದರವಾದ ಚಿತ್ರಗಳನ್ನು ಬಿಡಿಸಿದ ಭಿತ್ತಿಗಳಿಂದ, ಮೋಂಬತ್ತಿಯಾಕಾರದ ದೀಪದ ಗೊಂಚಲುಗಳಿಂದ ರಾರಾಜಿಸುತ್ತಿದ್ದ ಈ ನಾಟ್ಯಮಂದಿರ ಯಾರನ್ನಾದರೂ ಬೆರಗುಗೊಳಿಸುತ್ತದೆ. ಇದರ ನಾಟ್ಯ ವೇದಿಕೆ ತುಂಬ ಅಗಲ ಹಾಗೂ ಎತ್ತರವಾಗಿದೆ. ಒಂದು ಸಲಕ್ಕೆ ಸುಮಾರು ಐವತ್ತಕ್ಕೂ ಮೀರಿದ ನಟರು, ಅಥವಾ ನರ್ತಕರು ಕಾಣಿಸಿಕೊಳ್ಳಬಹುದು.

ಇದು ಅತ್ಯಂತ ಪ್ರಾಚೀನವಾದ ನಾಟ್ಯಮಂದಿರ  ಮಾಸ್ಕೋದಲ್ಲಿ. ಜಾರ್ ಚಕ್ರವರ್ತಿಗಳ ಕಾಲದ್ದು. ೧೭೮೦ ರಂದು ಮೊದಲು ಇದನ್ನು ನಿರ್ಮಿಸಲಾಗಿತ್ತು. ೧೮೦೫ರ ವೇಳೆಗೆ ಬೆಂಕಿಯಿಂದ ಹಾಳಾದ ಇದನ್ನು ೧೮೫೬ ರಲ್ಲಿ ಪುನರ್ ನಿರ್ಮಿಸಲಾಯಿತು. ಮತ್ತೆ ೧೯೫೬ರಲ್ಲಿ ಸುಧಾರಿಸಲಾಯಿತು. ಈ ನಾಟ್ಯ ಶಾಲೆಯಲ್ಲಿ ನೂರಾರು ‘ಬ್ಯಾಲೆ’ಗಳು ಪ್ರದರ್ಶಿತವಾಗಿವೆ.

ಬಾಲ್‌ಷೋಯ್ ರಂಗಮಂದಿರ, ರಷ್ಯದ ಇತಿಹಾಸದಲ್ಲಿ ಬಹು ಮುಖ್ಯ ಘಟನೆಗಳು ಜರುಗಿದ ಸ್ಥಳವೂ ಹೌದು. ಕ್ರಾಂತಿನಾಯಕ ಲೆನಿನ್ ತನ್ನ ಅನೇಕ ಸಭೆಗಳನ್ನು ಇಲ್ಲಿ ಕರೆಯುತ್ತಿದ್ದನಂತೆ. ೧೯೧೮ ರಂದು ಮೊಟ್ಟ ಮೊದಲ ಸೋವಿಯತ್ ಸಂವಿಧಾನವನ್ನು ಸರ್ವಾನುಮತದಿಂದ ಐದನೆಯ ಸಮಗ್ರ ರಷ್ಯಾ ಕಾಂಗ್ರೆಸ್ ಅಂಗೀಕರಿಸಿದ್ದು ಇಲ್ಲಿ. ೧೯೨೨ ನೇ ನವೆಂಬರ್ ೨೦ ರಂದು ಲೆನಿನ್ ತನ್ನ ಕಟ್ಟಕಡೆಯ ಸಾರ್ವಜನಿಕ  ಸಭೆಯನ್ನು ಕರೆದು, ‘ಸಮಾಜವಾದ ಎಂಬುದು ಇನ್ನು ದೂರವಿಲ್ಲ; ಸಮಗ್ರ ರಷ್ಯಾ ಸವಾಜವಾದೀ ರಷ್ಯವಾಗಿ ಪರಿವರ್ತಿತವಾಗುತ್ತದೆ’ ಎಂದು ಘೋಷಿಸಿದ್ದು ಇಲ್ಲಿ.

ಈ ರಂಗಮಂಟಪದ ಪರದೆಯ ತುದಿಯಲ್ಲಿ ಲೆನಿನ್ನನ ಚಿತ್ರವಿದೆ; ಪರದೆಯ ತುಂಬ ಕುಡುಗೋಲು-ಸುತ್ತಿಗೆಯ ಚಿತ್ರಗಳು. ಕಿಕ್ಕಿರಿದು ನೆರೆದ ಜನಸಮೂಹ ಪ್ರದರ್ಶನದ ಆರಂಭದ ಬಗ್ಗೆ ಉತ್ಸುಕರಾಗಿದ್ದರು. ಈ ದಿನದ ಪ್ರದರ್ಶನ, ದೇಶ ವಿದೇಶಗಳಲ್ಲಿ ಸುಪ್ರಸಿದ್ಧವಾಗಿರುವ  ‘ಸ್ವಾನ್‌ಲೇಕ್’ (ಹಂಸ ಸರೋವರ) ಎಂಬ ಬ್ಯಾಲೆ, ಈ ಪ್ರದರ್ಶನಕ್ಕೆ  ಟಿಕೇಟು ಸಿಗಬೇಕಾದರೆ ತಿಂಗಳುಗಟ್ಟಲೆ ಕಾಯಬೇಕಾ ಗುತ್ತದಂತೆ ಇಲ್ಲಿನ ಜನ.

ದೀಪಗಳಾರಿ ವಿಸ್ತಾರವಾದ ಪರದೆ ಸರಿಯಿತು. ಭಾರೀ ಅರಮನೆಯ ಒಂದು ಅಂಗಳ. ಅರಮನೆಯಲ್ಲಿ ಒಂದು ಉತ್ಸವ;  ಇದರಲ್ಲಿ ತಾಯಿಯಾದ ರಾಣಿ ಮಗನಿಗೆ ಒಂದು ಖಡ್ಗವನ್ನು ಉಡುಗೊರೆಯಾಗಿ ನೀಡುತ್ತಾಳೆ. ಇದಿಷ್ಟೆ ಮೊದಲ ದೃಶ್ಯ. ಹಬ್ಬದ ಸಂಭ್ರಮ ಬರೀ ಕುಣಿತದಿಂದ, ನಮಗೆ ಮನದಟ್ಟಾಗುತ್ತದೆ. ಹಿನ್ನೆಲೆಯ ಸಂಗೀತದ ಏರಿಳಿತವಂತೂ, ಈ ನಾಟ್ಯದ ಭಾವಕ್ಕೆ ಜೀವ ತುಂಬುತ್ತದೆ. ಮೊದಲ ದೃಶ್ಯದ ಅವಧಿ ಅರ್ಧಗಂಟೆ. ದೃಶ್ಯಾಂತ್ಯದ ಶಿಖರಕ್ಕೇರಿದ ನಾಟ್ಯದ ಭಂಗಿಗೆ ಇಡೀ ಸಭಾಭವನ ಚಪ್ಪಾಳೆಯ ಮಳೆಗರೆಯುತ್ತದೆ. ಜಗ್ಗನೆ ದೀಪಗಳು ಹತ್ತಿ, ಹತ್ತು ನಿಮಿಷದ ವಿರಾಮ.

ಎರಡನೆಯ ದೃಶ್ಯ, ಒಂದು ಸರೋವರ ತೀರದ ಆವರಣವನ್ನು ತೆರೆಯುತ್ತದೆ. ಹಂಸಗಳ ಹಿಂಡೊಂದು ಕಾಣಿಸಿಕೊಳ್ಳುತ್ತದೆ. ಬೆಳ್ಳನೆಯ ಉಡುಗೆಯ ಸೊಂಟದ ಬಳಿ ಹೂವಿನ ಆಕಾರದಲ್ಲಿ ಸುತ್ತುವರಿದ ನಿರಿಗೆಯ, ಮಾಟವಾದ ಕಾಲುಗಳ ಸ್ತ್ರೀಯರು ಹಂಸಗಳ ವಿಹಾರವನ್ನು ಕುಣಿದು ತೋರಿಸುತ್ತಾರೆ. ಅದಕ್ಕೆ ತಕ್ಕ ವಾದ್ಯವೃಂದ. ಈ ಹಂಸಗಳ ನಡುವೆ ರಾಜಕುಮಾರ ಸುಂದರಿಯೊಬ್ಬಳನ್ನು ಕಂಡು ಕಣ್‌ಬೇಟಗೊಂಡು ಮರುಳಾಗುತ್ತಾನೆ. ಆ ವೇಳೆಗೆ ಮಾಟಗಾರನೊಬ್ಬ ಪ್ರವೇಶಿಸುತ್ತಾನೆ. ದುಷ್ಟಶಕ್ತಿಯ ಪ್ರಭಾವವನ್ನು ಆತನ ಕುಣಿತ ಪ್ರದರ್ಶಿಸುತ್ತದೆ. ಕುಣಿತ ತೋರಿಸುತ್ತದೆ. ಆತ ರಾಜಕುಮಾರ ಒಲಿದ ಚೆಲುವೆಯನ್ನು ಹಂಸವನ್ನಾಗಿ ಪರಿವರ್ತಿಸಿ, ತನ್ನ ಮಗಳನ್ನು  ರಾಜಕುಮಾರನ ಮನವೊಲಿಸಲು ಬಿಡುತ್ತಾನೆ. ಆದರೆ ರಾಜಕುಮಾರ ಮೊದಲೊಲವಿನ ಚೆಲುವೆಗಾಗಿ ಕೊರಗುತ್ತಾ, ಮಾಟಗಾರನ ಮಗಳನ್ನು ಲಕ್ಷಿಸುವುದಿಲ್ಲ.

ಮೂರನೆಯ ದೃಶ್ಯದಲ್ಲಿ, ರಾಣಿ ತನ್ನ ಮಗನಿಗೆ ವಿವಿಧ ದೇಶದ ರಾಜಕುಮಾರಿಯನ್ನು ತೋರಿಸಿ, ಅವನ ಮದುವೆಗೆ ಪ್ರಯತ್ನಿಸುತ್ತಾಳೆ. ರಾಜಕುಮಾರ ಹಂಸಸರೋವರದ ಬಳಿ ಮೊದಲು ಕಂಡ ಚೆಲುವೆಯನ್ನಲ್ಲದೆ ಬೇರಾರನ್ನೂ ವರಿಸೆನೆಂಬಂತೆ, ಉಳಿದಾವ ರಾಜಕುಮಾರಿಯರನ್ನೂ ಒಲಿಯಲು ನಿರಾಕರಿಸುತ್ತಾನೆ.

ನಾಲ್ಕನೆಯ ದೃಶ್ಯದಲ್ಲಿ, ಮತ್ತೆ ಹಂಸ ಸರೋವರ. ರಾಜಕುಮಾರ ತಾನು ಕಂಡ ಚೆಲುವೆಗಾಗಿ ಹಂಬಲಿಸಿ ಅಲೆಯುತ್ತಾನೆ. ಮಾಟಗಾರನ ಮನಸ್ಸು ಕರಗಿ, ಆತ ರಾಜಕುಮಾರನಿಗೆ ಅವನೊಲಿದ ಚೆಲುವೆ ಲಭಿಸುವಂತೆ ಏರ್ಪಡಿಸುತ್ತಾನೆ.

ಈ ನಾಲ್ಕು ದೃಶ್ಯಗಳ ಸಂಗೀತ ರೂಪಕ ಜಾನಪದ ಕತೆಯಿಂದ ತೆಗೆದುಕೊಂಡ ವಸ್ತುವಿನದು. ಇದನ್ನು ಸಂಗೀತಕ್ಕೆ ಅಳವಡಿಸಿದಾತ ರಷ್ಯದ ಸುಪ್ರಸಿದ್ಧ ಸಂಗೀತಗಾರ ‘ಚಾಯ್‌ಕೊವಸ್ಕಿ’. ಒಲವಿನ ಗೆಲುವನ್ನು ಸಾರುವ ಈ ರೂಪಕ ಮೂರು ಗಂಟೆಗಳ ಕಾಲ ಬೆರಗುಗೊಳಿಸುವಂತೆ ಹರಹಿಕೊಂಡಿದೆ. ಕೇವಲ ಮುಂಗಾಲ ಬೆರಳ ಮೇಲೆ ಬುಗುರಿ ತಿರುಗುವ ನರ್ತಕಿಯರ ಕೌಶಲ; ನರ್ತಕಿಯರನ್ನು ಹೂಹಗುರವೆಂಬಂತೆ ಎತ್ತಿ ಗಾಳಿಯಲ್ಲಿ ತೇಲಿಸುವ ನರ್ತಕರ ಚಾತುರ್ಯ ತುಂಬ ಮೋಹಕವಾಗಿದೆ. ಇವರ ಬ್ಯಾಲೆಯ ನರ್ತನಗಳ ಮುಖ್ಯ ಸ್ಫೂರ್ತಿ ಸ್ಕೇಟಿಂಗ್ ಎಂಬ ಹಿಮ ಕ್ರೀಡೆಯೇ ಎಂದು ತೋರುತ್ತದೆ. ರಷ್ಯಾದಲ್ಲಿ ಬಹುಕಾಲ ಹಿಮಕವಿದ ಛಳಿಗಾಲಗಳಲ್ಲಿ ಮಂಜಿನಲ್ಲಿ ಜಾರುವ ಆಟ ‘ಸ್ಕೇಟಿಂಗ್’ ರಷ್ಯನ್ನರಿಗೆ ವಿಶೇಷ ಪ್ರಿಯವಾದದ್ದು. ಈ ಬ್ಯಾಲೆಗಳ ನರ್ತನ ಬಹುಮಟ್ಟಿಗೆ ಸ್ಕೇಟಿಂಗನ್ನು ಹೋಲುವಂತೆ ಕಾಣಿಸುತ್ತದೆ.

ಈ ಬ್ಯಾಲೆಯಲ್ಲಿ ಒಂದೊಂದು ದೃಶ್ಯ ಮುಗಿದಾಗ, ಅಥವಾ ನರ್ತಕ ಇಲ್ಲವೆ ನರ್ತಕಿ ಅಸಾಧಾರಣ ಕೌಶಲವನ್ನು  ಪ್ರಕಟಪಡಿಸಿದಾಗ  ಸಹಸ್ರಾರು ಜನ ಏಕಪ್ರಕಾರವಾಗಿ ಚಪ್ಪಾಳೆ ಹೊಡೆದು ತಮ್ಮ  ಮೆಚ್ಚಿಗೆಯನ್ನು ಸೂಚಿಸುತ್ತಾರೆ. ಆಯಾ ದೃಶ್ಯದ ತುದಿಗೆ ನರ್ತಕರು, ನರ್ತಕಿಯರು ಬಂದು ಈ ಜನದ ಚಪ್ಪಾಳೆಗಳನ್ನು ಬಾಗಿ ಸ್ವೀಕರಿಸುತ್ತಾರೆ. ಎರಡನೆಯ ದೃಶ್ಯದ ನಂತರ ಈ ರೂಪಕದ ಸಂಗೀತ – ನಿರ್ದೇಶಕನಿಗಾಗಿ ವಿಶೇಷವಾದ ಚಪ್ಪಾಳೆ ಸುರಿಯುತ್ತದೆ. ತಮ್ಮ ಕಲೆಗಾರರ ಬಗ್ಗೆ ಈ ಜನ ತೋರಿಸುವ ಅಭಿಮಾನ, ಪ್ರಶಂಸೆ ಅಪರೂಪದ್ದು.

ಬ್ಯಾಲೆ ಮುಗಿದಾಗ ಹತ್ತೂವರೆ. ಇನ್ನೂ ಸುರಿಯುತ್ತಿತ್ತು ಮಳೆ. ಈ ಮಳೆ –  ಛಳಿಯಲ್ಲಿ  ದೂರದ ಹೋಟೆಲು ಸೇರುವುದು ಹೇಗೆ ? ಹವಾ ಚೆನ್ನಾಗಿದ್ದರೆ ಸ್ವಲ್ಪದೂರ ನಡೆದು  ಮೆಟ್ರೋ ಹಿಡಿಯಬಹುದಾಗಿತ್ತು.  ಹೀಗಾಗಿ ಟ್ಯಾಕ್ಸಿಗಾಗಿ ಬೀದಿಯಲ್ಲೆ  ಕ್ಯೂನಿಂತ ಜನದ  ಪಾಳಿಯನ್ನು ಸೇರಿದೆವು. ಇಲ್ಲಿ ಯಾವಾಗ ಬೇಕಾದರೂ ಟ್ಯಾಕ್ಸಿಗಳು ದೊರೆಯುತ್ತವೆ. ಸರ್ಕಾರ ಡ್ರೈವರುಗಳಿಗೆ ಸಂಬಳ ಗೊತ್ತು ಮಾಡಿ ದಿನಕ್ಕೆ ಇಷ್ಟು ಗಂಟೆ ಕೆಲಸ ಎಂದು ಗೊತ್ತು ಮಾಡಿರುತ್ತದೆ; ಕೆಲಸದ ಅವಧಿ ಮುಗಿದ ಮೇಲೆ ಆ ದಿನ ಟ್ಯಾಕ್ಸಿ ನಡೆದಷ್ಟು ದೂರವನ್ನು-ಮೀಟರ್ ನೋಡಿ, ಹಣ ಸಲ್ಲಿಸಿ ಹಿಂದಕ್ಕೆ ಒಪ್ಪಿಸಬೇಕು. ದರ ಒಂದು ಕಿಲೋಮೀಟರಿಗೆ ಹತ್ತು ಕೊಪೆಕ್ ಎಂದು ನನಗೆ ನೆನಪು. ಟ್ಯಾಕ್ಸಿ ಖಾಲಿ ಇದ್ದರೆ ಹಸಿರು ಬಣ್ಣದ ಬೆಳಕಿರುತ್ತದೆ ಮುಂಭಾಗದಲ್ಲಿ; ತುಂಬಿದ್ದರೆ ಕೆಂಪು. ನಾವು ನಮ್ಮೆಡೆಗೆ ಬರುವ ಹಸಿರು ಬೆಳಕಿನ ಟ್ಯಾಕ್ಸಿಗೆ ಕಾದೆವು. ಕೆಲವಂತೂ ಖಾಲಿ ಇದ್ದರೂ ನಿಲ್ಲದೆ ಹೊರಟೇ ಹೋದುವು; ಬಂದ ಇನ್ನೊಂದೆರಡು ಟ್ಯಾಕ್ಸಿಯ ಚಾಲಕರು ತಾವು ಈ ಟ್ಯಾಕ್ಸಿಯನ್ನು ಹಿಂದಿರುಗಿಸಲು ಹೋಗುತ್ತಿರುವುದಾಗಿಯೂ, ಆ ದಿಕ್ಕಿಗೆ ಬರುವವರನ್ನು ಮಾತ್ರ ಕೊಂಡೊಯ್ಯುವುದಾಗಿಯೂ ಹೇಳಿದರು; ಹಾಗೆ ಬಂದವರನ್ನು ಕರೆದುಕೊಂಡು ಹೋದರು. ನಾವು ಹೋಗುವ ದಿಕ್ಕಿಗೆ ಬರುವ ಟ್ಯಾಕ್ಸಿಗೆ ಏನು ಮಾಡುವುದು? ಬಂದ ಇನ್ನೊಂದೆರಡು ಟ್ಯಾಕ್ಸಿಗಳ ಮೇಲೆ, ಈ ಟ್ಯಾಕ್ಸಿ ಓಡಿಸುವ ಅವಧಿ ಹನ್ನೊಂದೂವರೆಗೆ ಮುಗಿಯುತ್ತದೆ ಎಂದು ಬೋರ್ಡು ಹಾಕಲಾಗಿತ್ತು. ಅಂತೂ ಇಂತೂ ಹನ್ನೊಂದೂವರೆಯ ವೇಳೆಗೆ ನಮಗೊಂದು ಟ್ಯಾಕ್ಸಿ ಸಿಕ್ಕಿತು. ಮಳೆಯಿಂದ ತೊಯ್ದು ದೀಪದ ಬೆಳಕು  ಶತಚ್ಛಿದ್ರವಾದ  ಬೀದಿಗಳಲ್ಲಿ ಹಾದು, ಕಡೆಗೆ ಹೋಟೆಲನ್ನು ಸುಖವಾಗಿ ತಲುಪಿದ್ದಾಯಿತು. ಇಳಿಯುವಾಗ ವೊಲೋಜ ಹೇಳಿದ : ‘ನಾಳೆಯ ಬೆಳಿಗ್ಗೆ ಒಂಬತ್ತೂವರೆಗೆ ಯಾಸ್ನಾಯಾ ಪೋಲಾಯ್ನಕ್ಕೆ ಹೋಗುವ ಕಾರ್ಯಕ್ರಮ ಇದೆ. ಕಾರು ಹೋಟೆಲಿನ ಬಳಿಗೆ ಬರುತ್ತದೆ; ಜತೆಗೆ ಇರಲಿ ನಿಮ್ಮ ಪಾಸ್‌ಪೋರ್ಟು; ಯಾಸ್ನಾಯಾ  ಪೋಲಾಯ್ನಕ್ಕೆ ಹೋಗುವುದಕ್ಕಾಗಿ ನಿಮ್ಮ ವೀಸಾ ಸಿದ್ಧವಾಗಿದೆ ಬೈಬೈ’  ಎಂದು ಅದೇ ಟ್ಯಾಕ್ಸಿಯಲ್ಲಿ ಮನೆಗೆ ಹೊರಟು ಹೋದ. ಸಂಜೆಯ ಊಟವನ್ನು ‘ಬ್ಯಾಲೆ’ಯ ಕಾರಣಕ್ಕಾಗಿ ತಪ್ಪಿಸಿಕೊಂಡ ನಾನು, ಬರೀ ಹೊಟ್ಟೆಯಲ್ಲೇ ಮೇಲೇರಿ ಕೋಣೆ ಸೇರಿದೆ.