ಬಾಲ ಗಂಧರ್ವಬಾಲಕ ನಾರಾಯಣ ರಾಜಹನ್ಸನ ಸಂಗೀತವನ್ನು ಕೇಳಿ ಲೋಕಮಾನ್ಯ ತಿಲಕರು, ನೀನು ಬಾಲ ಗಂಧರ್ವನೇ ಸರಿ ಎಂದರು. ಮೂವತ್ತು ವರ್ಷಗಳ ಕಾಲ ಈ ಹೆಸರು ಮರಾಠಿ ರಂಗಭೂಮಿಯನ್ನು ಬೆಳಗಿತು. ಹೆಂಗಸರೂ ಸರಿಗಟ್ಟಿಲಾರದಂತೆ ಇವರು ಸ್ತ್ರೀ ಪಾತ್ರಗಳನ್ನು ಅಭಿನಯಿಸಿದರು. ಪ್ರೇಕ್ಷಕರಿಗಾಗಿ ರಂಗಭೂಮಿಯನ್ನು ಅದ್ಭುತವಾಗಿ ಸಜ್ಜು ಮಾಡಿದರು. ಭಾರತದ ಅಮರ ಸಂಗೀತನಟರ ಪಂಕ್ತಿಗೆ ಸೇರಿದರು.

 ಬಾಲ ಗಂಧರ್ವ

ಇದು ೧೮೯೮ ರ ಸುಮಾರಿಗೆ ಪುಣೆಯಲ್ಲಿ ನಡೆದ ಘಟನೆ. ಆಗಿನ್ನೂ ನಮ್ಮ ದೇಶಕ್ಕೆ ಸ್ವಾತಂತ್ರ  ಸಿಕ್ಕಿರಲಿಲ್ಲ. ಸ್ವಾತಂತ್ರ ವನ್ನು ತಂದುಕೊಡಲೆಂದು ಹಲವಾರು ನಾಯಕರು ಹೋರಾಟವನ್ನು ಆರಂಭಿಸಿದ್ದರು. ಅವರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಒಬ್ಬರು. ‘ಸ್ವರಾಜ್ಯ ನನ್ನ ಅಜನ್ಮಸಿದ್ಧ ಹಕ್ಕು. ನಾನು ಪಡೆದೇ ತೀರುತ್ತೇನೆ’  ಎಂಬುದಾಗಿ ಸಾರಿದವರು ತಿಲಕರು. ಈ ಉದ್ದೇಶಕ್ಕಾಗಿ ಅವರು ‘ಕೇಸರಿ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದರು.

ನೀನು ಬಾಲ ಗಂಧರ್ವನೇ

ಒಂದು ದಿನ ಕೇಸರಿ ಪತ್ರಿಕೆಯಲ್ಲಿ ಕೆಲಸ ಮಾಡುವವರೆಲ್ಲ ತಿಲಕರ ಮನೆಯಲ್ಲಿ ಸೇರಿದ್ದರು. ಇವರ ನಡುವೆ ಹತ್ತು ವರ್ಷದ ಒಬ್ಬ ಬಾಲಕನೂ ಇದ್ದ. ತಿಲಕರು ಪತ್ರಿಕೆಯ ವಿಚಾರವಾಗಿ ಚರ್ಚೆ ಮಾಡುತ್ತಿದ್ದರು. ಆಗ ಅವರ ದೃಷ್ಟಿ ಆ ಹುಡುಗನ ಮೇಲೆ ಬಿದ್ದಿತು.

ದುಂಡು ಮುಖದ, ಮಿಂಚುವ ಕಣ್ಣುಗಳ ಹುಡುಗ ಚುರುಕಾಗಿದ್ದ. ಹುಡುಗನ ಬಳಿ ಕುಳಿತಿದ್ದ ಮಿತ್ರರನ್ನು ತಿಲಕರು, ‘‘ಯಾರು ಈ ಹುಡುಗ?’’ ಎಂದು ಕೇಳಿದರು.

‘‘ಈತ ನಮ್ಮವನೇ. ನಿಮ್ಮನ್ನು ತೋರಿಸಲೆಂದು ಕರೆದು ತಂದೆ. ಹುಡುಗ ತುಂಬಾ ಚೆನ್ನಾಗಿ ಹಾಡುತ್ತಾನೆ’’ ಎಂದರು  ಅವರು. ತಿಲಕರು ಮತ್ತೆ ಹುಡುಗನತ್ತ ತಿರುಗಿದರು. ‘‘ಏನು ಮಗು ನಿನ್ನ ಹೆಸರು?’’ ಎಂದು ಕೇಳಿದರು. ಹುಡುಗ ಧೈರ್ಯವಾಗಿ, ‘‘ನಾರಾಯಣ ಶ್ರೀಪಾದ ರಾಜಹನ್ಸ’’ ಎಂದು ಉತ್ತರಿಸಿದ.

‘‘ಭೇಷ್! ಎಲ್ಲಿ ಒಂದು ಹಾಡು ಹೇಳು’’ ಎಂದರು ತಿಲಕರು. ನಾರಾಯಣನಿಗೆ ಸಂತೋಷವಾಯಿತು. ತನಗೆ ಅಚ್ಚುಮೆಚ್ಚಾಗಿದ್ದ ಒಂದು ಹಾಡನ್ನು ಹಾಡಲಾರಂಭಿಸಿದ.

ಅವನ ದನಿ ಇಂಪಾಗಿತ್ತು. ಶಬ್ದಗಳನ್ನು ಸ್ಪಷ್ಟವಾಗಿ ಉಚ್ಚರಿಸುತ್ತಿದ್ದ. ಹಾಡನ್ನು ಆಸಕ್ತಿಯಿಂದ ಹೇಳುತ್ತಲಿದ್ದ. ಎಲ್ಲರೂ ಮೈಮರೆತು ಕುಳಿತರು. ಕೋಣೆಯೊಳಗೆ ಬೆಳದಿಂಗಳು ಬಿದ್ದಂತೆ ಆಯಿತು. ತಣ್ಣನೆಯ ಗಾಳಿಯು ಬೀಸಿದಂತಾಯಿತು. ಹುಡುಗ ಹಾಡುನಿಲ್ಲಿಸಿ ಕೈಮುಗಿದ.

ತಿಲಕರು ‘ಭಲೆ!’ ಎಂದರು. ಎದ್ದು ಹುಡುಗನ ಬಳಿ ಬಂದರು. ಅವನ ಹೆಗಲ ಮೇಲೆ ಕೈಹಾಕಿ ಹತ್ತಿರ ಕರೆದುಕೊಂಡರು. ಅಕ್ಕರೆಯಿಂದ ಅವರು ನುಡಿದರು: ‘‘ಸೊಗಸಾಗಿ ಹಾಡುತ್ತೀಯ ಮಗು. ನೀನು ಬಾಲ ಗಂಧರ್ವನೇ ಸರಿ.’’

ಗಂಧರ್ವರೆಂದರೆ ಇಂದ್ರನ ಆಸ್ಥಾನದ ಗಾಯಕರು. ದೇವತೆಗಳಲ್ಲಿ ಸಂಗೀತ ಬಲ್ಲವರೆಂದರೆ ಗಂಧರ್ವರಂತೆ. ಹುಡುಗನ ಹಾಡುಗಾರಿಕೆ ಆ ಗಂಧರ್ವರ ಹಾಡುಗಾರಿಕೆಗೆ ಸಮ ಎಂದರು ತಿಲಕರು. ಅಂದಿನಿಂದ ನಾರಾಯಣ ಶ್ರೀಪಾದ ರಾಜಹನ್ಸನನ್ನು ಎಲ್ಲರೂ ‘ಬಾಲ ಗಂಧರ್ವ’ ಎಂದು ಕರೆಯಲು ಆರಂಭಿಸಿದರು. ಮುಂದೆ ಈ ಹೆಸರು ಭಾರತದಲ್ಲೆಲ್ಲ ವಿಖ್ಯಾತವಾಯಿತು.

ಸಂಗೀತದ ಹುಚ್ಚು

ನಾರಾಯಣ ಶ್ರೀಪಾದ ರಾಜಹನ್ಸ ೧೮೮೮ ನೇ ಇಸವಿ  ಜೂನ್ ತಿಂಗಳ ೨೬ ರಂದು ಪುಣೆಯಲ್ಲಿ ಹುಟ್ಟಿದ. ಇವನ ತಂದೆಯವರಿಗೆ ನೀರಾವರಿ ಇಲಾಖೆಯಲ್ಲಿ ನಕ್ಷೆಗಳನ್ನು  ಬರೆಯುವ ಕೆಲಸ. ಇವರದು ಮಧ್ಯಮವರ್ಗದ ಒಂದು ಕುಟುಂಬ. ನಾರಾಯಣನ ತಂದೆಯವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ. ಸಿತಾರ್ ವಾದ್ಯವನ್ನು ನುಡಿಸುವುದರಲ್ಲಿ ಇವರು ಪ್ರವೀಣರು. ತಂದೆ ಸಿತಾರ್ ಹಿಡಿದು ನುಡಿಸುವಾಗಲೆಲ್ಲ ನಾರಾಯಣ ಅದನ್ನು ಕೇಳುತ್ತ ಕುಳಿತಿರುತ್ತಿದ್ದ.

ನಾರಾಯಣ ಬೆಳೆದು ದೊಡ್ಡವನಾದ. ಶಾಲೆಗೆ ಹೋಗತೊಡಗಿದ. ಓದುವುದರಲ್ಲಿ ಅವನಿಗೆ ಮನಸ್ಸಿರಲಿಲ್ಲ. ಬರೆಯುವುದೆಂದರೆ ಬೇಸರ. ಆದರೆ ಸಂಗೀತ ಕೇಳುವ ಹುಚ್ಚು. ಶಾಲೆ ತಪ್ಪಿಸಿ ಯಾವುದೋ ಮರ ಹತ್ತಿ ಕುಳಿತು ಹಾಡುತ್ತಿದ್ದ. ಎಲ್ಲೋ ಕೇಳಿದ ಹಾಡನ್ನು ಗುಣಗುಣಿಸುತ್ತಿದ್ದ. ಬಂಧುಬಳಗದವರಿಗೂ ಇವನ ಸಂಗೀತಾಭಿರುಚಿಯ ಅರಿವಾಯಿತು. ಈ ಸಮಯದಲ್ಲೇ ತಿಲಕರು ಬಾಲ ಗಂಧರ್ವ ಎಂಬ ಹೆಸರನ್ನು ಇಟ್ಟರು.

ನಾರಾಯಣ ಕಷ್ಟಪಟ್ಟು ಸೆಕೆಂಡರಿ ಶಾಲೆಗೆ ಬಂದ. ಇಂಗ್ಲಿಷಿನ ಎರಡನೇ ತರಗತಿಯವರೆಗೂ ಓದಿದ. ಓದು ಅವನಿಗೆ ಬೇಡವಾಗಿತ್ತು. ನಾರಾಯಣನ ತಂದೆ ಮಗನಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸುವುದೇ ಉತ್ತಮ ಎಂದು ನಿರ್ಧರಿಸಿದರು.

ಈ ಸಮಯದಲ್ಲಿಯೇ ಅನಿರೀಕ್ಷಿತವಾದ ಒಂದು ಘಟನೆ ನಡೆಯಿತು. ನಾರಾಯಣನ ತಂದೆಯವರು ಒಂದು ಅಪಘಾತಕ್ಕೀಡಾದರು. ಈ ಅಪಘಾತದಿಂದಾಗಿ ಅವರು ಸರ್ಕಾರಿ ಕೆಲಸವನ್ನು ಮಾಡುವ ಶಕ್ತಿಯನ್ನು ಕಳೆದುಕೊಂಡರು. ಸರ್ಕಾರ ಅವರನ್ನು ಕೆಲಸದಿಂದ ತೆಗೆದುಹಾಕಿತು. ಮೊದಲೇ ಆ ಕುಟುಂಬ ಕಷ್ಟದಲ್ಲಿತ್ತು. ಈಗ ಇನ್ನೂ ಹೆಚ್ಚು ಕಷ್ಟಗಳು ಆರಂಭವಾದವು. ಆದರೂ ನಾರಾಯಣನ ತಂದೆಯವರು ಹಿಂದಿನ ತಮ್ಮ ನಿರ್ಧಾರವನ್ನು ಕೈಬಿಡಲಿಲ್ಲ. ಅವರು ಮಗನನ್ನು ಕೊಲ್ಲಾಪುರಕ್ಕೆ ಕಳುಹಿಸಿದರು. ಅಲ್ಲಿ ನಾರಾಯಣನಿಗೆ ಹೆಚ್ಚಿನ ಸಂಗೀತ ಶಿಕ್ಷಣಕ್ಕೆ ಏರ್ಪಾಟು ಮಾಡಿದರು.

ಮಹಾರಾಜರದೇ ವ್ಯವಸ್ಥೆ

ಕೊಲ್ಲಾಪುರವು ಸಂಗೀತ ಕಲೆಗಳ ತೌರುಮನೆಯಾಗಿತ್ತು. ಅಲ್ಲಿ ಕಲೆಗೆ ಉತ್ತಮ ಪ್ರೋತ್ಸಾಹವಿತ್ತು. ನಾರಾಯಣನ ಶಿಕ್ಷಣ ಚೆನ್ನಾಗಿಯೇ ಮುಂದುವರಿಯಿತು. ಇದೇ ಸಮಯದಲ್ಲಿ ಕೊಲ್ಲಾಪುರದಲ್ಲಿ ದೊಡ್ಡದೊಂದು ಸಮಾರಂಭವು ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಛತ್ರಪತಿ ಸಾಹು ಮಹಾರಾಜರು ವಹಿಸಿದ್ದರು. ಈ ಸಭೆಯಲ್ಲಿ ಒಂದು ಹಾಡನ್ನು ಹೇಳುವ ಅವಕಾಶ ನಾರಾಯಣನಿಗೆ ಒದಗಿಬಂದಿತು. ಈತನ ಹಾಡನ್ನು ಕೇಳಿ ಮಹಾರಾಜರು ಸಂತಸಪಟ್ಟರು. ಇವನ ವಿಷಯವನ್ನೆಲ್ಲ ಕೇಳಿ ತಿಳಿದುಕೊಂಡರು. ಸಾಹು ಮಹಾರಾಜರು ಕಲೆಯ ಉಪಾಸಕರಾಗಿದ್ದರು. ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಾರಾಯಣನ ಪ್ರತಿಭೆಯನ್ನು ಅವರು ಗುರುತಿಸಿದರು. ಇವನ ಬಡತನದ ವಿಷಯ ಅವರಿಗೆ ತಿಳಿಯಿತು. ಸಾಹು ಮಹಾರಾಜರು ನಾರಾಯಣನ ಶಿಕ್ಷಣಕ್ಕಾಗಿ ಇನ್ನೂ ಹೆಚ್ಚಿನ ವ್ಯವಸ್ಥೆಯನ್ನು ಮಾಡಿದರು.

ಶಾಸ್ತ್ರೀಯ ಸಂಗೀತವನ್ನು ಕಲಿಯುವುದು ಸುಲಭದ ಕಾರ್ಯವೇನಲ್ಲ. ಇದಕ್ಕೆ ಸತತವಾದ ಅಭ್ಯಾಸ ಬೇಕು. ತಾಳ್ಮೆ ಬೇಕು. ಶ್ರದ್ಧೆ ಇರಬೇಕು. ಪ್ರತಿನಿತ್ಯ ಹಲವು ಗಂಟೆಗಳವರೆಗೆ ಪಟ್ಟು ಹಿಡಿದು ಕುಳಿತು ಹಾಡಬೇಕು. ನಾರಾಯಣ ತಾಳ್ಮೆ, ಶ್ರದ್ಧೆಗಳಿಂದ ಸಂಗೀತವನ್ನು ಕಲಿಯಲಾರಂಭಿಸಿದ.

ಕಿರ್ಲೋಸ್ಕರ್ ನಾಟಕ ಮಂಡಳಿ

ಆಗ ಕಿರ್ಲೋಸ್ಕರ್ ನಾಟಕ ಮಂಡಳಿಯವರ ಮರಾಠಿ ನಾಟಕಗಳು ಎಲ್ಲೆಲ್ಲೂ ಜನಪ್ರಿಯವಾಗಿದ್ದವು. ಅಣ್ಣಾಸಾಹೇಬ್ ಕಿರ್ಲೋಸ್ಕರ್ ಎಂಬವರು ಈ ನಾಟಕ ಮಂಡಳಿಯ ಸಂಸ್ಥಾಪಕರಾಗಿದ್ದರು. ಹಿಂದೆ ಮರಾಠಿಯಲ್ಲಿ ನಾಟಕದ ಬೇರೆಬೇರೆ ರೂಪಗಳಿದ್ದವು. ಲಲಿತ, ತಮಾಷ, ದಶಾವತಾರ ಎಂದೆಲ್ಲ ಈ ನಾಟಕಗಳನ್ನು ಕರೆಯುತ್ತಿದ್ದರು. ಈ ನಾಟಕಗಳಿಗೆ ಅನೇಕ ಪರದೆಗಳು ಬೇಕಿರಲಿಲ್ಲ. ರಂಗಮಂಟಪದ ಆವಶ್ಯಕತೆ ಇರಲಿಲ್ಲ. ಹಿಂದೆ ಒಂದು ಪರದೆ, ಹಿಮ್ಮೇಳದ ನಾಲ್ಕು ಜನ, ಒಂದೆರಡು ಪಕ್ಕವಾದ್ಯಗಳು-ಇಷ್ಟಿದ್ದರೆ ನಾಟಕ ನಡೆಯುತ್ತಿತ್ತು. ಕಾಲ ಕಳೆದಂತೆ ಸಂಸ್ಕೃತ ನಾಟಕಗಳು, ಇಂಗ್ಲಿಷ್ ನಾಟಕಗಳು ಮರಾಠಿ ರಂಗಭೂಮಿಯ ಮೇಲೆ ಬಂದವು.

ಅಣ್ಣಾಸಾಹೇಬ್ ಕಿರ್ಲೋಸ್ಕರ್ ಮತ್ತೂ ಒಂದು ಹೆಜ್ಜೆ ಮುಂದೆ ಹೋದರು. ಒಳ್ಳೆಯ ಸಂಗೀತಗಾರರನ್ನು ಅವರು ನಾಟಕ ಮಂಡಳಿಗೆ ಸೇರಿಸಿಕೊಂಡರು. ಅವರ ನಾಟಕಗಳಲ್ಲಿ ಹಲವಾರು ಹಾಡುಗಳೂ ಇರುತ್ತಿದ್ದವು. ನಾಟಕಗಳನ್ನು ನೋಡುವವರಿಗೆ ಇಂಪಾದ ಸಂಗೀತವನ್ನು ಕೇಳುವ ಅವಕಾಶವೂ ಲಭಿಸುತ್ತಿತ್ತು. ಸಂಸ್ಕೃತ ಮತ್ತು ಇಂಗ್ಲಿಷ್ ನಾಟಕಗಳಿಂದ ಅಣ್ಣಾ ಸಾಹೇಬರು ಪ್ರಭಾವಿತರಾಗಿದ್ದರು. ಹೀಗಾಗಿ ಅವರು ನಾಟಕಗಳನ್ನು ಆಧುನಿಕ ರೀತಿಯಲ್ಲಿ ಪ್ರದರ್ಶಿಸಲು ಆರಂಭಿಸಿದರು.

ಮಂಡಳಿಗೆ ಬೇಡ

ನಾರಾಯಣನು ಕಿಲೋಸ್ಕರ್ ನಾಟಕ ಮಂಡಳಿಯ ನಾಟಕಗಳನ್ನು ನೋಡಿದನು. ಅಲ್ಲಿ ಹಾಡಲು, ಅಭಿನಯಿಸಲು ಅವಕಾಶವಿತ್ತು. ತಾನು ಚೆನ್ನಾಗಿ ಹಾಡಬಲ್ಲೆ. ಬೇಕೆಂದರೆ ಅಭಿನಯಿಸಲೂ ಬಲ್ಲೆ. ತಾನು ಏಕೆ ನಾಟಕದ ನಟನಾಗಬಾರದು ಎನಿಸಿತು, ನಾರಾಯಣನಿಗೆ. ಅವನ ಸ್ನೇಹಿತರು, ನೆಂಟರು ಈ ವಿಷಯದಲ್ಲಿ ಅವನನ್ನು ಹುರಿದುಂಬಿಸಿದರು. ಈ ಆಸೆಯಿಂದ ನಾರಾಯಣನು ಒಂದು ದಿನ ಕಿರ್ಲೋಸ್ಕರ್ ನಾಟಕ ಮಂಡಳಿಯ ವ್ಯವಸ್ಥಾಪಕರಲ್ಲಿಗೆ ಹೋದನು. ಅವರು ನಾರಾಯಣನ ಹಾಡುಗಾರಿಕೆಯನ್ನು ಕೇಳಿದರು. ಅಭಿನಯವನ್ನು ನೋಡಿದರು.

ಆಗ ನಾರಾಯಣನಿಗೆ ಸುಮಾರು ಹನ್ನೆರಡು ವರ್ಷ. ಅವನು ಇಂಪಾಗಿ ಹಾಡುತ್ತಿದ್ದ. ಆದರೆ ಧ್ವನಿ ಇನ್ನೂ ಎಳೆಯ ಧ್ವನಿ. ನಾಟಕದ ಪಾತ್ರಗಳಿಗೆ ಈ ಧ್ವನಿ ಸಾಲುತ್ತಿರಲಿಲ್ಲ. ನಾಟಕದ ಮಂಡಳಿಯವರು ಈ ಕಾರಣವನ್ನೇ ಮುಂದೆ ಮಾಡಿ ನಾರಾಯಣನನ್ನು ನಾಟಕ ಮಂಡಳಿಗೆ ಸೇರಿಸಿಕೊಳ್ಳಲು ನಿರಾಕರಿಸಿದರು.

ಮಂಡಳಿಗೆ ಚಿಂತೆ

ಏನೇನೋ ಆಸೆ ಇಟ್ಟುಕೊಂಡು ಹೋಗಿದ್ದ ನಾರಾಯಣನಿಗೆ ನಿರಾಶೆಯಾಯಿತು. ಅವಮಾನವೂ ಆಯಿತು. ಅವನು ಊರಿಗೆ ಹಿಂತಿರುಗಿದ. ತನ್ನ ಸಂಗೀತ ಸಾಧನೆಯನ್ನು ಮತ್ತೆ ಮುಂದುವರಿಸಿದ. ಆದರೆ ಈ ಬಾರಿ ಹಟ, ಛಲ. ನಾಟಕ ಮಂಡಳಿಯವರು ತನ್ನನ್ನು ನಿರಾಕರಿಸಿದರಲ್ಲವೆ? ತಾನು ಆ ನಾಟಕದ ಮಂಡಳಿಗೆ ಸೇರಲೇಬೇಕು ಎಂದು ನಿರ್ಧರಿಸಿದ.

ಇದೇ ಸಮಯದಲ್ಲಿ ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಒಂದು ಘಟನೆ ನಡೆಯಿತು. ಆ ಕಾಲದಲ್ಲಿ ನಾಟಕದಲ್ಲಿನ ಸ್ತ್ರೀ ಪಾತ್ರಗಳನ್ನು ಸ್ತ್ರೀಯರು ಮಾಡುತ್ತಿರಲಿಲ್ಲ. ಹೆಂಗಸರು ಬಣ್ಣ ಹಚ್ಚಿಕೊಂಡು ಸಾವಿರಾರು ಜನರ ಎದುರು ಅಭಿನಯಿಸುವುದು ಅವಮಾನ ಎಂದು ತಿಳಿಯುತ್ತಿದ್ದರು. ಈ ಕಾರಣದಿಂದಾಗಿ ಪುರುಷರೇ ಸ್ತ್ರೀಯರ ಪಾತ್ರಗಳನ್ನು ಮಾಡಬೇಕಾಗಿತ್ತು. ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಬಾಹುರಾವ್ ಕೋಲ್‌ಹಾಟಕರ್ ಎಂಬವರು ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ಇವರು ಒಳ್ಳೆಯ ಗಾಯಕರಾಗಿದ್ದರು. ಜೊತೆಗೆ ಉತ್ತಮ ನಟರೂ ಆಗಿದ್ದರು. ಇವರು ೧೯೦೨ ರಲ್ಲಿ ತೀರಿಕೊಂಡರು. ಅವರ ಸಾವಿನಿಂದಾಗಿ ಬರಿದಾದ ಸ್ಥಳವನ್ನು ತುಂಬಿಕೊಳ್ಳುವುದು ಹೇಗೆ? ಇನ್ನು ಮುಂದೆ ತಮ್ಮ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಮಾಡುವವರು ಯಾರು? ಮಂಡಳಿಯವರಿಗೆ ಚಿಂತೆ ಯಾಯಿತು.

ನಾರಾಯಣನ ಬಳಿಗೆ ಮಂಡಳಿಯೇ ಬಂದಿತು

ಆಗ ಅವರ ದೃಷ್ಟಿ ನಾರಾಯಣನ ಮೇಲೆ ಬಿದ್ದಿತು. ನಾರಾಯಣ ಚೆನ್ನಾಗಿ ಹಾಡುವುದನ್ನು ಅವರು ಕೇಳಿದ್ದರು. ಅವನ ಮೈಕಟ್ಟು, ಮುಖಭಾವ, ಧ್ವನಿ ಸ್ತ್ರೀ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ತಾನು ನಾಟಕದ ನಟನಾಗಬೇಕೆಂಬ ಆಸೆಯಿಂದ ಅವನು ಹಿಂದೊಮ್ಮೆ ತಮ್ಮಲ್ಲಿಗೆ ಬಂದುದು ಕಿರ್ಲೋಸ್ಕರ್ ನಾಟಕ ಮಂಡಳಿಯವರಿಗೆ ನೆನಪಿತ್ತು. ಅಂತೂ ಯಾರನ್ನು ಅವರು ಬೇಡವೆಂದು ತಿರಸ್ಕರಿಸಿದ್ದರೋ ಅವರೇ ಮತ್ತೆ ಬೇಕಾಯಿತು. ನಾರಾಯಣನು ನಟನಾಗಿ ನಾಟಕ ಮಂಡಳಿಯನ್ನು ಸೇರಿಕೊಂಡನು. ಆಗ ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಸಂಗೀತ ಶಿಕ್ಷಕರಾಗಿ ಭಾಸ್ಕರ ಬುವಾ ಬಖಲೆ ಎಂಬವರಿದ್ದರು. ಇವರು ನಾರಾಯಣನಿಗೆ ಬೇಕಾದ ಶಿಕ್ಷಣವನ್ನು ನೀಡುವ ಹೊಣೆ ಹೊತ್ತರು.

ಆದರೆ ನಾರಾಯಣನ ಪೋಷಕರು ತುಂಬಾ ಕಷ್ಟದಲ್ಲಿದ್ದರು. ಅವರು ಜೀವನ ಸಾಗಿಸುವುದೇ ಅಸಾಧ್ಯವಾಗಿತ್ತು. ಮಗ ನಟನಾಗಿ ನಾಟಕದವರ ಹಿಂದೆ ಹೋದರೆ ತಮ್ಮ ಗತಿ ಏನು, ಎಷ್ಟೇ ಆಗಲಿ ನಟನ ಜೀವನದಲ್ಲಿ ಆದಾಯ ಅನಿಶ್ಚಿತ ಎಂಬುದಾಗಿ ಅವರು ಹೆದರಿದರು. ಆಗ ಲೋಕಮಾನ್ಯ ತಿಲಕರು ಅವರಿಗೆ ನೆರವಾಗಲು ಮುಂದೆ ಬಂದರು. ಅಗತ್ಯವಾದರೆ ೨೦,೦೦೦ ರೂಪಾಯಿಗಳನ್ನು ಕುಟುಂಬಕ್ಕೆ ಕೊಡಿಸುವ ವ್ಯವಸ್ಥೆ ಮಾಡಿದರು.

ನಾರಾಯಣ ಶಕುಂತಲೆ ಆದ

ಕಿರ್ಲೋಸ್ಕರ್ ನಾಟಕ ಮಂಡಳಿಯ ಸಂಸ್ಥಾಪಕರಾದ ಅಣ್ಣಾಸಾಹೇಬ್ ಕಿರ್ಲೋಸ್ಕರ್ ಒಳ್ಳೆಯ ಲೇಖಕರೂ ಆಗಿದ್ದರು. ಅವರು ಕಾಳಿದಾಸ ಮಹಾಕವಿಯ ‘ಶಾಕುಂತಲ’ ನಾಟಕವನ್ನು ಮರಾಠಿಗೆ ಅನುವಾದ ಮಾಡಿದ್ದರು. ಅಲ್ಲದೆ ‘ಸುಭದ್ರ’ ಹಾಗೂ ‘ರಾಮರಾಜ್ಯ ವಿಯೋಗ’ ಎಂಬ ಎರಡು ಪೌರಾಣಿಕ ನಾಟಕಗಳನ್ನೂ ಬರೆದಿದ್ದರು. ಶಾಕುಂತಲ ನಾಟಕವು ನಾರಾಯಣನ ಪ್ರತಿಭೆಯನ್ನು ಲೋಕಕ್ಕೆ ಪರಿಚಯ ಮಾಡಿಕೊಡಲು ಸಾಧನವಾಯಿತು. ನಾರಾಯಣ ಶ್ರೀಪಾದ ರಾಜಹನ್ಸನು ಶಕುಂತಲೆಯಾಗಿ ಮೊಟ್ಟಮೊದಲು ರಂಗಮಂಚವನ್ನೇರಿದನು.

೧೯೦೫ ನೇ ಇಸವಿ ಅಕ್ಟೋಬರ್ ೨೫ನೇ ದಿನಾಂಕ. ಮೀರಜ್ ನಗರದಲ್ಲಿ ಎರಡು ಮಹಡಿಗಳ ಭವ್ಯ ನಾಟಕಮಂದಿರ ಒಂದನ್ನು ಅದೇ ಕಟ್ಟಿ ಮುಗಿಸಿದ್ದರು. ಅದರಲ್ಲಿ ಕಿರ್ಲೋಸ್ಕರ್ ನಾಟಕ ಮಂಡಳಿಯವರ ನಾಟಕ ‘ಶಾಕುಂತಲ’. ಶಕುಂತಲೆಯ ಪಾತ್ರ ವಹಿಸುವವರು ಬಾಲ ಗಂಧರ್ವರು. ತಿಲಕರ ಮೆಚ್ಚುಗೆಯನ್ನು ಗಳಿಸಿದ ಬಾಲ ಗಂಧರ್ವರನ್ನು ನೋಡಬೇಕು, ಅವರ ಹಾಡನ್ನು ಕೇಳಬೇಕು ಎನ್ನುವವರೇ ಎಲ್ಲ. ಈ ಉದ್ದೇಶದಿಂದ ನಾ ಮುಂದು ತಾ ಮುಂದು ಎಂದು ಸಾವಿರಾರು ಜನ ನಾಟಕ ಮಂದಿರದತ್ತ  ಧಾವಿಸಿದರು. ನಾಟಕ ಆರಂಭವಾಗಲು ಒಂದು ಗಂಟೆ ಇದೆ ಅನ್ನುವಾಗಲೇ ನಾಟಕ ಮಂದಿರ ತುಂಬಿಹೋಯಿತು. ಮೀರಜ್‌ನ ಮಹಾರಾಜರು ಅಂದಿನ ಪ್ರದರ್ಶನವನ್ನು ವೀಕ್ಷಿಸಲು ಕುತೂಹಲದಿಂದ ಕಾದಿದ್ದರು.

ಗಂಟೆಯ ಸದ್ದಾಯಿತು. ಪಕ್ಕವಾದ್ಯಗಳು ನುಡಿಯ ಲಾರಂಭಿಸಿದವು. ಮುಂದಿನ ಪರದೆ ಸರಿಯಿತು. ಕಾಳಿದಾಸ ಮಹಾಕವಿಯ ಅಮರ ಕೃತಿ ‘ಶಾಕುಂತಲ’ ನಾಟಕವು ಪ್ರಾರಂಭವಾಯಿತು.

ಶಕುಂತಲೆಯ ಕಥೆ

ದೊರೆ ದುಷ್ಯಂತನು ಬೇಟೆಯಾಡುತ್ತಾ ಹೊರಟವನು ಕಣ್ವಋಷಿಗಳ ಆಶ್ರಮಕ್ಕೆ ಬರುತ್ತಾನೆ. ಅಲ್ಲಿ ಶಕುಂತಲೆ ಸಖಿಯರೊಡನೆ ಹೂಗಿಡಗಳಿಗೆ ನೀರು ಹಾಕುತ್ತಿರುತ್ತಾಳೆ. ದುಷ್ಯಂತ ಅವಳನ್ನು ನೋಡುತ್ತಾನೆ. ಅವಳ ರೂಪಕ್ಕೆ ಮನಸೋಲುತ್ತಾನೆ. ಅವಳೂ ದೊರೆಯನ್ನು ನೋಡುತ್ತಾಳೆ. ಇಬ್ಬರಿಗೂ ಮದುವೆ ಆಗಬೇಕೆಂಬ ಮನಸ್ಸಾಗುತ್ತದೆ. ಗಾಂಧರ್ವ ವಿವಾಹವನ್ನು ಮಾಡಿಕೊಳ್ಳುತ್ತಾರೆ. ರಾಜನು ಅರಮನೆಗೆ ಹಿಂತಿರುಗುತ್ತಾನೆ. ದೂರ್ವಾಸ ಋಷಿಗಳ ಶಾಪದಿಂದ ಶಕುಂತಲೆಯನ್ನು ಮರೆಯುತ್ತಾನೆ.

ಶಕುಂತಲೆ ಗರ್ಭಿಣಿಯಾಗುತ್ತಾಳೆ

ಆಸ್ಥಾನಕ್ಕೆ ಬಂದ ಶಕುಂತಲೆಯನ್ನು ದುಷ್ಯಂತ ಗುರುತು ಸಿಕ್ಕದೆ ತಿರಸ್ಕರಿಸುತ್ತಾನೆ. ಅವಳು ದೂರವಾದ ಮೇಲೆ ಹಿಂದಿನದೆಲ್ಲಾ ನೆನಪಾಗುತ್ತದೆ. ಆತ ಪಶ್ಚಾತ್ತಾಪಪಡುತ್ತಾನೆ. ಕೊನೆಯಲ್ಲಿ ದುಷ್ಯಂತ ಶಕುಂತಲೆಯರು ಒಂದಾಗುತ್ತಾರೆ.

ಅದ್ಭುತವಾದ ಅಭಿನಯ

ನಾಟಕದಲ್ಲಿ ಶಕುಂತಲೆಯದೇ ಪ್ರಮುಖ ಪಾತ್ರ. ನಾಟಕದ ಉದ್ದಕ್ಕೂ ಬಾಲ ಗಂಧರ್ವರು ಅದ್ಭುತವಾಗಿ ಅಭಿನಯಿಸಿದರು. ಅವರು ರಂಗಭೂಮಿಯ ಮೇಲೆ ಕಾಣಿಸಿಕೊಂಡುದೇ ತಡ, ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಬಾಲಗಂಧರ್ವರು ಸಖಿಯರೊಡನೆ ಗಿಡಬಳ್ಳಿಗಳಿಗೆ ನೀರನ್ನು ಎರೆಯುತ್ತ ಕಿಲಕಿಲನೆ ನಕ್ಕರು. ದುಂಬಿಯೊಂದು ಅಟ್ಟಿಸಿಕೊಂಡು ಬಂದಾಗ ಬೆದರಿ ಓಡಿದರು. ಆಗ ದೊರೆ ದುಷ್ಯಂತ ಮರೆಯಿಂದ ಓಡಿ ಬಂದು ಎದುರು ನಿಂತ. ದೊರೆಯನ್ನು ನೋಡಿ ಗಾಬರಿಯಾದರು. ಅವನು ಪ್ರೀತಿಯ ಮಾತುಗಳನ್ನು ಅಂದಾಗ ನಾಚಿ ತಲೆ ತಗ್ಗಿಸಿ ನಿಂತರು. ಆಶ್ರಮ ಬಿಟ್ಟು ಹೊರಟಾಗಲಂತೂ ಪ್ರೇಕ್ಷಕರೆಲ್ಲ ಅವರೊಡನೆ ಅತ್ತರು. ‘ನೀನು ನನ್ನ ಹೆಂಡತಿಯಲ್ಲ, ಹೋಗು’ ಎಂದು ದೊರೆ ನುಡಿದಾಗ ಅವರ ಅಭಿನಯ ಶ್ರೇಷ್ಠ ಮಟ್ಟವನ್ನು ಮುಟ್ಟಿತ್ತು. ಬಾಲ ಗಂಧರ್ವರ ಸಂಗೀತ ಈ ಅಭಿನಯಕ್ಕೆ ಹೆಚ್ಚಿನ ಕಳೆ ನೀಡಿತು. ಬಾಲ ಗಂಧರ್ವರ ಜೀವನದಲ್ಲಿ ಅಂದು ಸೂರ್ಯೋದಯವಾಯಿತು. ಮರಾಠಿ ರಂಗಭೂಮಿಯು ಹೊಸ ಯುಗಕ್ಕೆ ಕಾಲಿಟ್ಟಿತು.

ನಾಲ್ಕು ದಿಕ್ಕುಗಳಿಗೆ ಹಬ್ಬಿದ ಕೀರ್ತಿ

ಮೀರಜ್ ನಗರದಿಂದ ಬಾಲ ಗಂಧರ್ವರ ಕೀರ್ತಿ ಮುಂಬಯಿ ಮಹಾನಗರಕ್ಕೂ ತಲುಪಿತು. ಮುಂಬಯಿಯಲ್ಲಿ ಆಗ ಚಲನಚಿತ್ರಗಳು ಜನಪ್ರಿಯವಾಗಿದ್ದವು. ಅವು ಮೂಕ ಚಿತ್ರಗಳು. ಪರದೆಯ ಮೇಲಿನ ಜನ ತುಟಿಯಾಡಿಸುತ್ತಿದ್ದರು; ಆದರೆ ಮಾತು-ಹಾಡು ಕೇಳಿಸುತ್ತಿರಲಿಲ್ಲ. ಇಂತಹ ಸಮಯದಲ್ಲಿ ಬಾಲ ಗಂಧರ್ವರ ನಾಟಕಗಳು ಜನರನ್ನು ಆಕರ್ಷಿಸಿದವು. ಸ್ತ್ರೀವೇಷ ಧರಿಸಿ ರಂಗದ ಮೇಲೆ ಬಂದು ಹಾಡುವ-ಅಭಿನಯಿಸುವ ಬಾಲ ಗಂಧರ್ವರು ಬಹು ಬೇಗನೆ ಜನಪ್ರಿಯರಾದರು.

ಮುಂಬಯಿ, ಪುಣೆ, ಮೀರಜ್ ಮೊದಲಾದ ನಗರಗಳು ಕಲಾಭಿಮಾನಿಗಳ ತೌರುಮನೆಗಳಂತೆ ಇದ್ದವು. ಅಲ್ಲಿ ಯಾವನೇ ಸಂಗೀತಗಾರ-ನಟ ತನ್ನ ಸಂಗೀತ, ಅಭಿನಯಗಳಿಂದ ಸೈ ಅನ್ನಿಸಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು. ಜನರು ಅತಿ ಸೂಕ್ಷ್ಮವಾಗಿ ಎಲ್ಲವನ್ನೂ ನೋಡುತ್ತಿದ್ದರು. ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದರು. ಇಂತಹ ಪ್ರದೇಶಗಳಲ್ಲಿಯೇ ಬಾಲ ಗಂಧರ್ವರು ಒಳ್ಳೆಯ ಹೆಸರನ್ನು ಪಡೆದರು. ಚಿಕ್ಕ ವಯಸ್ಸಿನಲ್ಲೇ ಅವರು ಎಲ್ಲರ ಮೆಚ್ಚುಗೆಯನ್ನು ಗಳಿಸಿದರು. ಕಿರ್ಲೋಸ್ಕರ್ ನಾಟಕ ಮಂಡಳಿಯ ವ್ಯವಸ್ಥಾಪಕರು ತಮಗೆ ಅಸಾಧಾರಣ ನಟ ದೊರೆತ ಎಂದು ಸಂತಸ ಪಟ್ಟರು.

ಹೊಸ ವಿಚಾರಗಳು

ಬಾಗ ಗಂಧರ್ವರು ಕೆಲವೇ ವರ್ಷಗಳಲ್ಲಿ ಪ್ರಬುದ್ಧ ನಟರೆನಿಸಿಕೊಂಡರು. ಅವರ ಜನಪ್ರಿಯತೆ ಹೆಚ್ಚಿತು. ನಾಟಕ, ಅಭಿನಯ, ರಂಗಸಜ್ಜಿಕೆಗಳ ಬಗ್ಗೆ ಅವರಲ್ಲಿ ಹೊಸ ಹೊಸ ವಿಚಾರಗಳು ಮೂಡಲಾರಂಭಿಸಿದವು. ಪ್ರಖ್ಯಾತ ನಾಟಕಕಾರರ ಪರಿಚಯ ಅವರಿಗಾಯಿತು. ಇವರಲ್ಲಿ ಮರಾಠಿಯ ಪ್ರಖ್ಯಾತ ನಾಟಕಕಾರ ಖಾಡಿಲ್ಕರ್ ಅವರೂ ಒಬ್ಬರು. ಖಾಡಿಲ್ಕರ್ ಅವರು ಬಾಲ ಗಂಧರ್ವರ ಮನಸ್ಸಿನಲ್ಲಿ ಕೆಲವು ಹೊಸ ವಿಚಾರಗಳನ್ನು ಬಿತ್ತಿದರು. ರಂಗದ ಮೇಲೆ ಮಾಡಬಹುದಾದ ಬದಲಾವಣೆಗಳ ಕುರಿತು ಹೇಳಿದರು. ನಾಟಕಗಳನ್ನು ಉನ್ನತ ಮಟ್ಟದಲ್ಲಿ ಹೇಗೆ ಪ್ರವರ್ತಿಸಬಹುದು ಅನ್ನುವುದರ ಕುರಿತು ಇಬ್ಬರೂ ಚರ್ಚೆ ಮಾಡಿದರು.

ಸ್ವತಂತ್ರ ನಾಟಕ ಮಂಡಳಿ

ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಬಾಲ ಗಂಧರ್ವರು ಪ್ರಮುಖ ನಟರಾಗಿದ್ದರು. ಅಲ್ಲಿ ಅವರಿಗೆ ತಕ್ಕ ಗೌರವ ಇದ್ದೇ ಇತ್ತು. ಆದರೆ ನಾಟಕ ಮಂಡಳಿಯ ಮಾಲಿಕರಾಗಿ ಇನ್ನೊಬ್ಬರಿದ್ದರು. ತಮ್ಮ ಪಾತ್ರಗಳನ್ನು ಮಾಡಿಕೊಂಡು ಹೋಗುವುದಷ್ಟೇ ಬಾಲ ಗಂಧರ್ವರ ಕರ್ತವ್ಯವಾಗಿತ್ತು. ಮನಸ್ಸಿನಲ್ಲಿ ಮೂಡಿದ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ತಮ್ಮದೇ ಆದ ಒಂದು ನಾಟಕ ಮಂಡಳಿಯನ್ನು ತೆರೆಯುವ ವಿಚಾರವನ್ನು ಅವರು ಮಾಡಿದರು. ಇದಕ್ಕೆ ಖಾಡಿಲ್ಕರ್ ಅವರ ಪ್ರೋತ್ಸಾಹ ಇದ್ದೇ ಇತ್ತು.

೧೯೧೩ ರಲ್ಲಿ ಬಾಲ ಗಂಧರ್ವರು ಕಿರ್ಲೋಸ್ಕರ್ ನಾಟಕ ಮಂಡಳಿಯಿಂದ ಹೊರಬಿದ್ದರು. ಹಾಗೂ ತಮ್ಮದೇ ಆದ ನಾಟಕ ಮಂಡಳಿಯೊಂದನ್ನು ತೆರೆದರು. ನಾಟಕಕಾರರಾದ ಖಾಡಿಲ್ಕರ್, ಕೋಲ್‌ಹಾಟಕರ್ ಮೊದಲಾದವರು ಬಾಲ ಗಂಧರ್ವರ ಸಂಗೀತ ಪ್ರೌಢಿಮೆ, ಅಭಿನಯ ಸಾಮರ್ಥ್ಯವನ್ನು ಗಮನದಲ್ಲಿರಿಸಿಕೊಂಡು ಹಲವು ನಾಟಕಗಳನ್ನು ಬರೆದರು. ಬಾಲ ಗಂಧರ್ವರು ಆ ನಾಟಕಗಳನ್ನು ಜೀವಂತವಾಗಿ ಅಭಿನಯಿಸಿದರು. ಹೀಗೆ ಬಾಲ ಗಂಧರ್ವರು ಜೀವಂತಗೊಳಿಸಿದ ನಾಟಕಗಳಲ್ಲಿ ‘ಸ್ವಯಂವರ’ , ‘ಏಕಚ್ ಪ್ಯಾಲ’  ‘ಮಾನಾಪಮಾನ’  ‘ಸಂಶಯ ಕಲ್ಲೋಲ’  ಮುಖ್ಯವಾದ ನಾಟಕಗಳು.

‘ಸ್ವಯಂವರ’ ಖಾಡಿಲ್ಕರ್ ಅವರ ನಾಟಕ. ಇದು ರುಕ್ಮಿಣಿ-ಶ್ರೀಕೃಷ್ಣರ ಜೀವನಕ್ಕೆ ಸಂಬಂಧಪಟ್ಟ ಪೌರಾಣಿಕ ಕಥೆ. ಈ ನಾಟಕದಲ್ಲಿ ಬಾಲ ಗಂದರ್ವರು ರುಕ್ಮಿಣಿಯ ಪಾತ್ರವನ್ನು ವಹಿಸುತ್ತಿದ್ದರು. ಪುರಾಣ ಕಾಲದ ಶ್ರೀಮಂತ ಉಡುಪು ಧರಿಸಿ ಬಾಲ ಗಂಧರ್ವರು ರಂಗದ ಮೇಲೆ ಬರುತ್ತಿದ್ದರು. ನಾಟಕದಲ್ಲಿ ರಂಗಸಜ್ಜಿಕೆಗೆ ಹೆಚ್ಚಿನ ಅವಕಾಶವಿತ್ತು. ಸಂಗೀತಕ್ಕೆ ಮುಖ್ಯ ಸ್ಥಾನವಿತ್ತು. ಬಾಲ ಗಂಧರ್ವರ ಅಭಿನಯ ಇವೆಲ್ಲಕ್ಕೂ ಕಳೆಗಟ್ಟುತ್ತಿತ್ತು. ಈ ನಾಟಕ ಪ್ರದರ್ಶನವಾದಾಗಲೆಲ್ಲ ನಾಟಕಮಂದಿರ ತುಂಬಿರುತ್ತಿತ್ತು. ಬಾಲಗಂಧರ್ವರು ಹಾಕುತ್ತಿದ್ದ ಹಾಡುಗಳು ಎಲ್ಲರ ತುಟಿಗಳ ಮೇಲೂ ನಲಿದಾಡುತ್ತಿದ್ದವು.

‘ಏಕಚ್ ಪ್ಯಾಲ’ (ಒಂದೇ ಲೋಟ) ಬಾಲ ಗಂಧರ್ವರು ಅಭಿನಯಿಸುತ್ತಿದ್ದ ಇನ್ನೊಂದು ನಾಟಕ. ಗಡಕರಿಯವರ ಈ ನಾಟಕದಲ್ಲಿ ಬಾಲ ಗಂಧರ್ವರು ವಹಿಸುತ್ತಿದ್ದ ಪಾತ್ರ ಆದರ್ಶ ಹಿಂದು ಸ್ತ್ರೀಯದು. ಇವಳ ಹೆಸರು ಸಿಂಧು. ಪತಿಯೇ ದೇವರು ಎಂದು ತಿಳಿದವಳು ಸಿಂಧು. ಗಂಡನಿಗೆ ವಿಧೇಯಳಾಗಿ, ಬಂದ ಕಷ್ಟಗಳನ್ನೆಲ್ಲ ಸಹಿಸುವಳು. ಕುಡಿತದ ಕೆಟ್ಟ ಪರಿಣಾಮವನ್ನು ಈ ನಾಟಕ ಎತ್ತಿ ತೋರಿಸುತ್ತಿತ್ತು. ಕಠಿಣ ಹೃದಯದ ಪುರುಷರು ಕೂಡ ಬಾಲ ಗಂಧರ್ವರ ಅಭಿನಯವನ್ನು ಕಂಡು ಕಣ್ಣೀರು ಸುರಿಸುತ್ತಿದ್ದರು.

‘ಸಂಶಯ ಕಲ್ಲೋಲ’ ಒಂದು ನಗೆನಾಟಕ. ಇದರಲ್ಲಿ ಬಾಲಗಂಧರ್ವರು ರೇವತಿಯಾಗಿ ಅಭಿನಯಿಸುತ್ತಿದ್ದರು. ರೇವತಿ ಸಾಹುಕಾರನೊಬ್ಬನ ಹೆಂಡತಿ. ಅವಳಲ್ಲಿ ಗಂಡನ ಶ್ರೀಮಂತಿಕೆಗೆ ತಕ್ಕಂತೆ ಬೆಡಗು-ಬಿನ್ನಾಣವಿತ್ತು. ಇಷ್ಟು ಸಾಲದೆಂದು ಕುಯುಕ್ತಿಯೂ ಸೇರಿಕೊಂಡಿತ್ತು. ಈ ಎಲ್ಲ ಭಾವಗಳನ್ನೂ ಬಾಲ ಗಂಧರ್ವರು ತಮ್ಮ ನಟನೆಯ ಮೂಲಕ ತೋರಿಸುತ್ತಿದ್ದರು. ಪ್ರೇಕ್ಷಕರು ರೇವತಿಯ ವಯ್ಯಾರ, ಮೋಸ, ಕಪಟತನವನ್ನು ಕಂಡು ಹಲ್ಲುಕಚ್ಚುತ್ತಿದ್ದರು. ಕುಳಿತಲ್ಲಿಂದಲೇ ಅವಳನ್ನು ಶಪಿಸುತ್ತಿದ್ದರು. ಬಾಲ ಗಂಧರ್ವರ ಅಭಿನಯ ಅಷ್ಟೊಂದು ಸಹಜವಾಗಿ ಇರುತ್ತಿತ್ತು.

ಎಲ್ಲರನ್ನೂ ಬೆರಗು ಗೊಳಿಸಿದ ಹೆಣ್ಣು

ಬಾಲ ಗಂಧರ್ವರನ್ನು ರುಕ್ಮಿಣಿಯಾಗಿ, ರೇವತಿಯಾಗಿ, ಸಿಂಧುವಾಗಿ ನೋಡಿದವರಿಗೆಲ್ಲ ಒಂದು ಆಶ್ಚರ್ಯ ಕಾದಿರುತ್ತಿತ್ತು. ಗಂಡಸು ಹೆಂಗಸಿನ ಪಾತ್ರವನ್ನು ಇಷ್ಟು ಚೆನ್ನಾಗಿ ಅಭಿನಯಿಸುವುದು ಸಾಧ್ಯವೆ ಎಂದು ಅವರು ಮೂಗಿನ ಮೇಲೆ ಬೆರಳಿಡುತ್ತಿದ್ದರು.

ಅವರ ದುಂಡನೆಯ ಮುಖ, ಹೊಳೆಯುವ ಕಣ್ಣುಗಳು ಅವರಿಗೆ ಸಹಾಯಕವಾಗಿದ್ದವು. ಮಾಟವಾದ ಮೈ ಅವರಿಗಿತ್ತು. ಸೀರೆ ಉಡುವುದರಲ್ಲಿ, ಆಭರಣ ತೊಡುವುದರಲ್ಲಿ ಅವರು ನಿಪುಣರಾಗಿದ್ದರು. ಹೆರಳು ಹಾಕಿಕೊಂಡು, ಹೂ ಮುಡಿದು, ಕುಂಕುಮವಿಟ್ಟುಕೊಂಡು ಅವರು ರಂಗದ ಮೇಲೆ ಬಂದರೆ ‘ಈ ಪಾತ್ರವನ್ನು ಅಭಿನಯಿಸುವವರು ಹೆಣ್ಣಲ್ಲ’ ಎಂದು ಹೇಳುವುದು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.

ಉಡುಗೆತೊಡಿಗೆಯಂತೆಯೇ ಸ್ತ್ರೀಯರ ಭಾವಭಂಗಿಗಳನ್ನೂ ಬಾಲ ಗಂಧರ್ವರು ಚೆನ್ನಾಗಿ ತೋರಿಸುತ್ತಿದ್ದರು. ಹೆಂಗಸರಂತೆ ನಡೆಯುವುದು, ನಿಲ್ಲುವುದು, ಕುಳಿತುಕೊಳ್ಳುವುದು ಅವರಿಗೆ ಗೊತ್ತಿತ್ತು. ಹೆಂಗಸರಂತೆ ನಾಚುವುದು, ಕೋಪಿಸಿಕೊಳ್ಳುವುದು, ನಗುವುದು ಬಾಲ ಗಂಧರ್ವರಿಗೆ ರಕ್ತಗತವಾಗಿತ್ತು.

ಹೆಂಗಸರಂತೆ ಮಾತನಾಡುವುದನ್ನು ಕೂಡ ಬಾಲ ಗಂಧರ್ವರು ಅಭ್ಯಾಸ ಮಾಡಿದ್ದರು. ‘ಸ್ವಯಂವರ’ ನಾಟಕದಲ್ಲಿ ರುಕ್ಮಿಣಿ ತನ್ನ ಅಣ್ಣನಿಗೆ ಶ್ರೀಕೃಷ್ಣ ಬಂದುದನ್ನು ‘ಅಣ್ಣಾ, ಅವರು ಬಂದರಲ್ಲಾ’ (ದಾದಾ ತೇ ಆಲೆ ನಾ) ಎಂಬ ನಾಲ್ಕು ಮಾತುಗಳ ಮೂಲಕ ತಿಳಿಸುತ್ತಾಳೆ. ಈ ನಾಲ್ಕು ಮಾತುಗಳಲ್ಲಿ ಬಾಲ ಗಂಧರ್ವರು ರುಕ್ಮಿಣಿಗೆ ಶ್ರೀಕೃಷ್ಣನ ಮೇಲಿರುವ ಪ್ರೀತಿಯನ್ನು, ಅವನನ್ನು ಕಾಣುವ ಕಾತರವನ್ನು, ಸಂತಸವನ್ನು ವ್ಯಕ್ತಪಡಿಸುತ್ತಿದ್ದರು. ನಾಟಕದಲ್ಲಿ ಎಲ್ಲ ಮಾತುಗಳನ್ನೂ ಅವರು ಹೀಗೆಯೇ ಹೇಳುತ್ತಿದ್ದರು. ಆದ್ದರಿಂದಲೇ ಈ ಮಾತುಗಳು ಪ್ರೇಕ್ಷಕರ ಹೃದಯಗಳನ್ನು ತಲುಪುತ್ತಿದ್ದವು.

ಸಂಗೀತ ಸುಧೆ

ಬಾಲ ಗಂಧರ್ವರು ಶ್ರೇಷ್ಠ ಸಂಗೀತಗಾರರಾಗಿದ್ದರಿಂದ ಅವರ ನಾಟಕಗಳೆಂದರೆ ಸಂಗೀತದ ರಸದೂಟದಂತೆ ಇರುತ್ತಿದ್ದವು. ಸಂತೋಷ, ದುಃಖ, ಸಿಟ್ಟು ಎಲ್ಲವೂ ನಾಟಕದಲ್ಲಿ ಸಂಗೀತವಾಗಿ ಹರಿಯುತ್ತಿತ್ತು. ಎಷ್ಟೋ ಜನ ಬಾಲ ಗಂಧರ್ವರ ಹಾಡುಗಳನ್ನು ಕೇಳಲೆಂದೇ ಪ್ರತಿದಿನ ಅವರ ನಾಟಕಗಳಿಗೆ ಹೋಗುತ್ತಿದ್ದರು.

ಅವರ ಕಾಲದಲ್ಲಿ ದೊಡ್ಡ ಸಂಗೀತಗಾರರಿದ್ದರು. ಗಾಯಕರ ಪ್ರಪಂಚವೇ ಬೇರೆ ಇತ್ತು. ಆದರೂ ಬಾಲ ಗಂಧರ್ವರನ್ನು ಜನ ಕೇವಲ ನಾಟಕದ ನಟ ಎಂಬುದಾಗಿ ಮಾತ್ರ ತಿಳಿದಿರಲಿಲ್ಲ. ಅವರನ್ನು ಸಂಗೀತಗಾರರೆಂದು ಕೂಡ ಒಪ್ಪಿಕೊಂಡಿದ್ದರು. ಅಲ್ಲಾದಿಯಾ ಖಾನರೆಂಬವರು ಆ ಕಾಲದ ಶ್ರೇಷ್ಠ ಸಂಗೀತಗಾರರು. ಇವರು ಕೂಡ ಬಾಲ ಗಂಧರ್ವರು ಹಾಡುವುದನ್ನು ಆಸಕ್ತಿಯಿಂದ ಕುಳಿತು ಕೇಳುತ್ತಿದ್ದರಂತೆ. ಕರ್ನಾಟಕದ ರಸಿಕ ಜನ, ಖ್ಯಾತ ಸಂಗೀತಗಾರರು ಬಾಲ ಗಂಧರ್ವರ ಸಂಗೀತವನ್ನು ಮೆಚ್ಚಿಕೊಂಡಿದ್ದರು. ಬಾಲ ಗಂಧರ್ವರು ನಾಟಕ ರಂಗದ ಮೇಲೆ ಹೆಸರು ಗಳಿಸಲು ಅವರು ಒಳ್ಳೆಯ ಸಂಗೀತಗಾರರಾಗಿದ್ದುದೂ ಒಂದು ಕಾರಣ.

ಪ್ರೇಕ್ಷಕರಿಗಾಗಿ

ತಮ್ಮದೇ ಆದ ನಾಟಕ ಮಂಡಳಿಯನ್ನು ಆರಂಭಿಸಿದ ಮೇಲೆ ಬಾಲ ಗಂಧರ್ವರು ರಂಗಭೂಮಿಯ ಸುಧಾರಣೆಗೆ ತೊಡಗಿದರು. ರಂಗಸಜ್ಜಿಕೆಗಾಗಿ ಬಹಳ ಹಣವನ್ನು ಖರ್ಚು ಮಾಡಿದರು. ಪೌರಾಣಿಕ ನಾಟಕಗಳಿಗೆ ಆ ಕಾಲದ ದೃಶ್ಯಗಳನ್ನೇ ಬರೆಸಿದರು. ಪಾಂಡವರ ಅರಮನೆ ಎಂದರೆ ಅದೊಂದು ಅರಮನೆಯೇ. ಪ್ರೇಕ್ಷಕರಿಗೆ ಅಲ್ಲಿ ಏನೂ ಕೊರತೆ ಕಾಣಿಸಬಾರದು. ಅರಮನೆಯ ಕಂಬಗಳು, ದ್ವಾರಗಳು, ಎಲ್ಲವೂ ಅದ್ಭುತ. ಈ ಉದ್ದೇಶಕ್ಕಾಗಿ ಕೈಲಿದ್ದ ಹಣ ಖರ್ಚಾಗಲಿ, ಸಾಲವಾದರೂ ಸರಿ; ನಾಟಕ ಸಪ್ಪೆಯಾಗಬಾರದು, ನಟಿ-ನಟಿಯರ ಉಡಿಗೆ-ತೊಡಿಗೆಯ ವಿಷಯದಲ್ಲೂ ಹೀಗೆಯೇ. ನಾಟಕದಲ್ಲಿ ಬರುವ ದೊರೆಗಳಿಗೆಲ್ಲ ಚಿನ್ನದ ಮೆರಗು ಹಾಕಿದ ಕಿರೀಟಗಳು. ಅವರ ಭುಜಕೀರ್ತಿ, ತೋಳಬಂದಿಗಳಿಗೆಲ್ಲ ಬಂಗಾರದ ಜರಿ. ಅವರೆಲ್ಲ ನಿಜವಾಗಿಯೂ ರಾಜರೇನೋ ಅನ್ನುವ ಹಾಗೆ ಕಾಣಿಸುತ್ತಿದ್ದರು. ರಾಣಿಯ ಪಾತ್ರ ವಹಿಸುವವರಿಗೆ ನಿಜವಾದ ಚಿನ್ನದ ಆಭರಣಗಳು. ರೇಷ್ಮೆಯ ಸೀರೆ, ವಸ್ತ್ರಗಳು.

ಇಷ್ಟೆಲ್ಲ ಧಾರಾಳತನದಿಂದ ನಾಟಕಗಳ ಪ್ರದರ್ಶನಕ್ಕೆ ಸಜ್ಜುಮಾಡಿದುದು ಅವರ ಕೈಯನ್ನೇ ಕಚ್ಚಿತು. ಎಂದೂ ಅವರ ಜನಪ್ರಿಯತೆ ಮಾಸಲಿಲ್ಲ. ಆದರೂ ಅವರು ಖರ್ಚು ಮಾಡಿದ ಹಣವೆಲ್ಲ ಹಿಂದಕ್ಕೆ ಬರಲಿಲ್ಲ. ಒಂದು ಲಕ್ಷ ಎಂಬತ್ತು ಸಾವಿರ ರೂಪಾಯಿ ಸಾಲವಾಯಿತು.

ಅವರ ಸ್ನೇಹಿತರೂ, ಅವರ ಅಭಿನಯದಿಂದ ಸಂತೋಷಪಟ್ಟಿದ್ದ ನಾಟಕಪ್ರೇಮಿಗಳೂ ಸಹಾಯ ಮಾಡಲು ಮುಂದೆಬಂದರು.

ಆದರೆ ಬಾಲ ಗಂಧರ್ವರು ಸಹಾಯವನ್ನು ಸ್ವೀಕರಿಸಲಿಲ್ಲ.

ಜೊತೆಯವರಿಗಾಗಿ

ಬಾಲ ಗಂಧರ್ವರು ನಟರಿಗೆ ಕೈತುಂಬ ಸಂಬಳ ನೀಡುತ್ತಿದ್ದರು. ನಾಟಕದ ಉತ್ಪತ್ತಿಯನ್ನೆಲ್ಲ ನಟರಿಗಾಗಿ, ನಾಟಕಗಳಿಗಾಗಿ ಮೀಸಲಿಡುತ್ತಿದ್ದರು. ಅವರ ನಾಟಕ ಮಂಡಳಿಯು ಖ್ಯಾತ ಸಂಗೀತಗಾರರಿಗೆ, ಪಕ್ಕವಾದ್ಯಗಳನ್ನು ನುಡಿಸುವವರಿಗೆ, ಪರದೆಗಳನ್ನು ಬರೆಯುವ ಚಿತ್ರಗಾರರಿಗೆ ತೌರುಮನೆಯಾಗಿತ್ತು. ಮಂಡಳಿಗೆ ನಾಟಕಗಳನ್ನು ಬರೆದುಕೆಟ್ಟ ನಾಟಕಕಾರರು ಕೂಡ ಬಾಲ ಗಂಧರ್ವರಿಂದ ಸನ್ಮಾನಿಸ ಲ್ಪಟ್ಟಿದ್ದಾರೆ.

ತಮ್ಮ ಮಂಡಳಿಯ ಮೂಲಕ ಸುಮಾರು ಇಪ್ಪತ್ತು ನಾಟಕಗಳನ್ನು ಬಾಲ ಗಂಧರ್ವರು ಅಭಿನಯಿಸಿ ತೋರಿಸುತ್ತಿದ್ದರು. ಒಂದು ವಾರದಲ್ಲಿ ಮೂರು ದಿನ ಮಾತ್ರ ನಾಟಕ. ಉಳಿದ ದಿನಗಳಲ್ಲಿ ನಟರಿಗೆ ವಿಶ್ರಾಂತಿ ಇಲ್ಲವೇ ನಾಟಕ-ಸಂಗೀತದ ಅಭ್ಯಾಸ. ಇದು ಅವರ ನಾಟಕ ಮಂಡಳಿಯ ಪದ್ಧತಿಯಾಗಿತ್ತು.

ಪ್ರೇಕ್ಷಕರನ್ನು ಬಾಲ ಗಂಧರ್ವರು ತುಂಬಾ ಪ್ರೀತಿಯಿಂದ, ಗೌರವದಿಂದ ಕಾಣುತ್ತಿದ್ದರು. ಯಾರಾದರೂ ಪ್ರೇಕ್ಷಕರು ಅವರನ್ನು ಕಾಣಲು ಹೋದರೆ, ‘ನನ್ನಿಂದ ಏನು ಸೇವೆಯಾಗಬೇಕು, ಹೇಳಿ’  ಎನ್ನುತ್ತಿದ್ದರು. ಪ್ರೇಕ್ಷಕರನ್ನು ಅನ್ನದಾತ, ತಾಯಿ-ತಂದೆ, ದೇವರು ಎಂಬುದಾಗಿ ಸಂಬೋಧಿಸಿ ಕೈ ಮುಗಿಯುತ್ತಿದ್ದರು.

ಬಾಲ ಗಂಧರ್ವರು ರಂಗಭೂಮಿಯ ಮೇಲೆ ಮಹತ್ವದ ಬದಲಾವಣೆಗಳನ್ನು ಮಾಡಿದರು. ಆದರೆ ಯಾವ ಬದಲಾವಣೆಯೂ ಸಂಪ್ರದಾಯಕ್ಕೆ ವಿರೋಧವಾಗಿ ಇರುತ್ತಿರಲಿಲ್ಲ. ಹಿಂದಿನಿಂದ ನಡೆದು ಬಂದುದಕ್ಕೇ ಅವರು ಹೆಚ್ಚಿನ ಮೆರಗನ್ನು ನೀಡುತ್ತಿದ್ದರು.

ರಂಗಭೂಮಿಯ ಮಹತ್ವದ ದಿನ

ಹಿಂದೆಯೇ ಹೇಳಿದಂತೆ ಅದು ಸ್ವಾತಂತ್ರ  ಹೋರಾಟದ ಕಾಲ. ಲೋಕಮಾನ್ಯ ಬಾಲಗಂಗಾಧರ ತಿಲಕರು ದೇಶದ ಸ್ವಾತಂತ್ರ ಕ್ಕಾಗಿ ಒಂದು ನಿಧಿಯನ್ನು ಸಂಗ್ರಹಿಸುತ್ತಿದ್ದರು. ೧೯೨೧ ರ ಜುಲೈ ೮ ನೇ ತಾರೀಕಿನಂದು ಬಾಲ ಗಂಧರ್ವರ ಜನಪ್ರಿಯತೆ ಸ್ಪಷ್ಟವಾಯಿತು. ತಿಲಕರ ಸ್ವರಾಜ್ಯ ನಿಧಿಗಾಗಿ ಮುಂಬಯಿಯಲ್ಲಿ ‘ಮಾನಾಪಮಾನ’ ಎಂಬ ನಾಟಕವನ್ನು ಆಡಲಾಯಿತು. ಕಲಾದರ್ಶ ನಾಟಕ ಮಂಡಳಿಯ ನಾಯಕ ನಟ ಕೇಶವರಾವ್ ಭೋಸ್ಲೆ ಅನ್ನುವವರು ‘ಮಾನಾಪಮಾನ’ ನಾಟಕದ ನಾಯಕರಾದರು. ಬಾಲ ಗಂಧರ್ವರು ನಾಯಕಿ ‘ಭಾಮಿನಿ’ಯಾದರು. ಇಬ್ಬರೂ ಶ್ರೇಷ್ಠ ನಟರೇ. ನಾಟಕವೂ ಮರಾಠಿ ಭಾಷೆಯ ಉತ್ತಮ ಕೃತಿ. ಶಾಸ್ತ್ರೀಯ ಸಂಗೀತದ ಹಲವು ಇಂಪಾದ ರಾಗಗಳನ್ನು ನಾಟಕದಲ್ಲಿ ಅಳವಡಿಸಲಾಗಿತ್ತು.

ಈ ನಾಟಕ ಮುಂಬಯಿ ಮಹಾನಗರದ ಕಲಾ ಪ್ರೇಮಿಗಳನ್ನು ಕೈಮಾಡಿ ಕರೆಯಿತು. ಒಂದೇ ಒಂದು ಪ್ರದರ್ಶನದಿಂದ ತಿಲಕರ ಸ್ವರಾಜ್ಯ ನಿಧಿಗೆ ೧೬,೦೦೦ ರೂಪಾಯಿಗಳು ಸಂಗ್ರಹವಾದವು. ನಾಟಕ ಯಶಸ್ವಿಯಾಗಿ ನಡೆಯಿತು. ನಟರಿಬ್ಬರೂ ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಪ್ರದರ್ಶಿಸಿದರು. ಈ ನಾಟಕ ನಡೆದ ದಿನವನ್ನು ಮರಾಠಿ ರಂಗದ ನಾಟಕ ಮಹತ್ವದ ದಿನವೆಂದು ಕರೆಯಲಾಯಿತು. ಮರಾಠಿ ರಂಗಭೂಮಿಯ ಚರಿತ್ರೆಯನ್ನು ಬರೆದಿರುವ ಎಲ್ಲರೂ ಈ ದಿನವನ್ನು ಕೊಂಡಾಡಿದ್ದಾರೆ.

ಧಾರವಾಡದಲ್ಲಿ

ಬಾಲ ಗಂಧರ್ವರ ಕೀರ್ತಿ ಮಹಾರಾಷ್ಟ್ರದ ಹೊರಗೂ ಹಬ್ಬಿತು. ವಿಶೇಷವಾಗಿ ಕರ್ನಾಟಕದ ಜನ ಅವರ ನಾಟಕಗಳಿಗೆ ಪ್ರೋತ್ಸಾಹ ನೀಡಲಾರಂಭಿಸಿದರು. ಬಾಲ ಗಂಧರ್ವರು ಉತ್ತರ ಕರ್ನಾಟಕದ ಬೆಳಗಾಂ, ಬಿಜಾಪುರ, ಧಾರವಾಡ, ಹುಬ್ಬಳ್ಳಿ ಮುಂತಾದ ನಗರಗಳಿಗೆ ಬಂದು ನಾಟಕಗಳನ್ನಾಡಿ ಹೋಗುತ್ತಿದ್ದರು. ಅವರು ಒಮ್ಮೆ ಹೀಗೆ ಬಂದಾಗ ಧಾರವಾಡದಲ್ಲಿ ಒಂದು ಘಟನೆ ನಡೆಯಿತು. ಇದು ಅವರ ಧಾರಾಳತನಕ್ಕೆ, ಸೇವಾ ಮನೋಭಾವಕ್ಕೆ ಒಳ್ಳೆಯ ನಿದರ್ಶನವಾಗಿದೆ.

ಬಾಲ ಗಂಧರ್ವರ ‘ಮಾನಾಪಮಾನ’ ನಾಟಕವನ್ನು ನೋಡಿ ಮೆಚ್ಚಿಕೊಂಡ ಜನ ಅವರನ್ನು ಮಾನಪ್ಪ ಎಂಬುದಾಗಿ ಕರೆಯುತ್ತಿದ್ದರಂತೆ. ಈ ಮಾನಪ್ಪ ಧಾರವಾಡದ ಮರಾಠಿ ಮಂಡಳಿಯ ಸಹಾಯಾರ್ಥವಾಗಿ ಒಂದು ನಾಟಕವನ್ನು ಆಡಿದರು. ನಾಟಕಕ್ಕೆ ಬಹಳ ಜನರೂ ಬಂದಿದ್ದರು. ಹಣವೂ ಕೈತುಂಬ ಆಯಿತು. ಮಂಡಳಿಯ ಮ್ಯಾನೇಜರ್ ಮರಾಠಿ ಮಂಡಳಿಯ ಕಾರ್ಯದರ್ಶಿಗೆ ಒಂದು ಸಲಹೆಯನ್ನು ನೀಡಿದ್ದರು. ನಾಟಕ ಮಂಡಳಿಯ ಒಂದು ದಿನದ ಖರ್ಚನ್ನು ಮಂಡಳಿಗೆ ಕೊಟ್ಟು ಉಳಿದ ಹಣವನ್ನು ಮರಾಠಿ ಮಂಡಳಿಯವರು ತೆಗೆದುಕೊಳ್ಳಬೇಕೆಂಬುದೇ ಈ ಸಲಹೆ. ಈ ಸಲಹೆ ನಾಟಕ ಮುಗಿದ ಮೇಲೆ ಬಾಲ ಗಂಧರ್ವರ ಗಮನಕ್ಕೆ ಬಂದಿತು. ಬಾಲ ಗಂಧರ್ವರು ಮ್ಯಾನೇಜರ್ ಅವರನ್ನು ಕರೆಸಿದರು. ‘‘ನೀವು ಆ ಹಣವನ್ನು ಹಿಂದಿರುಗಿಸಿ. ನಾವು ನಾಟಕವಾಡಿದ್ದು ಧರ್ಮಾರ್ಥವಾಗಿ-ಕಂಪೆನಿಗೆ ಆದ ಖರ್ಚನ್ನು ತೆಗೆದುಕೊಳ್ಳುವ ಸಂಪ್ರದಾಯ ಬಾಲ ಗಂಧರ್ವ ನಾಟಕ ಮಂಡಳಿಗಿಲ್ಲ’’ ಎಂದರು. ಈ ಮಾತಿಗೆ ಮ್ಯಾನೇಜರ್, ‘‘ಆದರೆ….ಕಂಪೆನಿ ಕಷ್ಟಕಾಲದಲ್ಲಿದೆ’’ ಎಂದರು. ಬಾಲ ಗಂಧರ್ವರಿಗೆ ಮತ್ತೂ ಸಿಟ್ಟು ಬಂದಿತು. ಅವರೆಂದರು, ‘‘ಇದಕ್ಕೂ ಹೆಚ್ಚಿನ ಕಷ್ಟದ ಕಾಲಗಳನ್ನು ಕಂಪೆನಿ ಕಂಡಿದೆ. ದಯವಿಟ್ಟು ಆ ಹಣವನ್ನು ಹಿಂತಿರುಗಿಸಿ.’’  ಆದರೆ ಮ್ಯಾನೇಜರ್ ಆ ಹಣವನ್ನು ಹಿಂತಿರುಗಿಸಲಿಲ್ಲ. ಬಾಲ ಗಂಧರ್ವರ‍್ನು ಒಪ್ಪಿಸಬೇಕಾದರೆ ಅವರಿಗೆ ಸಾಕುಸಾಕಾಯಿತು.

ಚಲನಚಿತ್ರದ ಜಗತ್ತಿನಲ್ಲಿ

ದಿನಗಳುರುಳಿದವು. ಚಲನಚಿತ್ರಗಳು ಎಲ್ಲೆಲ್ಲೂ ಪ್ರದರ್ಶನಕ್ಕೆ ಬರಲಾರಂಭಿಸಿದವು. ಜನ ಕೂಡ ಚಲನ ಚಿತ್ರಗಳನ್ನು ನೋಡಲು ಹಾತೊರೆಯತೊಡಗಿದರು. ನಾಟಕದ ನಟರೂ ಚಿತ್ರರಂಗಕ್ಕೆ ನುಗ್ಗತೊಡಗಿದರು.

ಸುಮಾರು ಮೂವತ್ತೈದು ವರ್ಷಗಳಿಂದ ರಂಗಭೂಮಿಯ ‘ರಾಣಿ’ ಯಾಗಿ ಮೆರೆದಿದ್ದರು ಬಾಲ ಗಂಧರ್ವರು. ಸ್ವಂತ ನಾಟಕ ಮಂಡಳಿಯನ್ನು ಕಟ್ಟಿ ಕಲಾಸೇವೆಯನ್ನು ಮಾಡಿದ್ದರು. ಇವರಿಗೂ ಚಲನಚಿತ್ರ ಪ್ರಪಂಚವು ಆಕರ್ಷಕವಾಗಿ ಕಂಡಿತು. ೧೯೩೪ ರಲ್ಲಿ ಬಾಲ ಗಂಧರ್ವರು ತಮ್ಮ ನಾಟಕ ಮಂಡಳಿಯನ್ನು ಮುಚ್ಚಿದರು. ಪುಣೆಯ ಪ್ರಭಾತ್ ಚಲನಚಿತ್ರ ಕಂಪೆನಿಯನ್ನು ಕೂಡಿಕೊಂಡರು. ಚಲನಚಿತ್ರಗಳನ್ನು ತೆಗೆಯುವ ವಿಚಾರ ಮಾಡಿದರು.

ಆದರೆ ಆ ರಂಗವು ಇವರು ತಿಳಿದಷ್ಟು ಸುಂದರವಾಗಿರ ಲಿಲ್ಲ. ಅಲ್ಲಿ ಎಲ್ಲವೂ ಕೃತಕವಾಗಿತ್ತು. ಬಾಲ ಗಂಧರ್ವರು ಒಂದು ಚಿತ್ರವನ್ನು ತೆಗೆದರು. ಅಷ್ಟಕ್ಕೇ ಅವರಿಗೆ ಸಾಕಾಯಿತು. ಅವರು ಪ್ರಭಾತ್ ಚಲನಚಿತ್ರ ಕಂಪೆನಿಯ ಸಂಬಂಧವನ್ನು ಕಡಿದುಕೊಂಡರು. ಮತ್ತೆ ನಾಟಕ ರಂಗಕ್ಕೆ ಬಂದರು. ಮುಂದೆ ಮತ್ತೂ ಒಂದು ಸಾರಿ ಚಲನಚಿತ್ರ ರಂಗಕ್ಕೆ ಅವರು ಹೋದರು. ಆಗಲೂ ಅವರಿಗೆ ಅಲ್ಲಿ ಯಶಸ್ಸು ಸಿಗಲಿಲ್ಲ. ಅವರು ನಾಟಕ ರಂಗದಲ್ಲಿ ಪಡೆದ ಸಂತೋಷ, ತೃಪ್ತಿಯನ್ನು ಅವರಿಗೆ ಚಲನಚಿತ್ರ ರಂಗ ಎಂದೂ ನೀಡಲಿಲ್ಲ.

ಅರವತ್ತು ವರ್ಷದಲ್ಲಿ – ನವವಧು

ಬಾಲ ಗಂಧರ್ವರಿಗೆ ನಡು ವಯಸ್ಸಾಯಿತು. ಅವರು ಪುರುಷ ಪಾತ್ರಗಳನ್ನು ಮಾಡಲಾರಂಭಿಸಿದರು. ಜನ ಒಪ್ಪಲಿಲ್ಲ. ಜನರ ಒತ್ತಾಯಕ್ಕೆ ಮಣಿದು ಸ್ತ್ರೀಪಾತ್ರಗಳನ್ನು ಮಾಡಬೇಕಾಯಿತು. ೧೯೪೮ ನೇ ಇಸವಿ. ಮುಂಬಯಿಯ ದಾದರಿನಲ್ಲಿ ಬಾಲ ಗಂಧರ್ವರ ನಾಟಕ. ಆಗ ಅವರಿಗೆ ಅರವತ್ತು ವರ್ಷ. ಅಂದಿನ ನಾಟಕವನ್ನು ನೋಡಿದ ಓರ್ವ ರಸಿಕರು ಹೀಗೆ ಹೇಳಿದರಂತೆ: ‘‘ಬಾಲ ಗಂಧರ್ವರಿಗೆ ವಯಸ್ಸಾಗಿದೆ ನಿಜ. ಆದರೆ ಅವರು ಸೀರೆಯುಟ್ಟು ರಂಗಭೂಮಿಯ ಮೇಲೆ ಬಂದರೆ ನಮಗೆ ನವವಧುವಿನಂತೆ ಕಾಣುತ್ತಾರೆ.’’

ಸ್ತ್ರೀಯರೇ ಅನುಕರಿಸುವಂತೆ

ಅಂದರೆ ಬಾಲ ಗಂಧರ್ವರು ಸ್ತ್ರೀವೇಷವನ್ನು ಅಷ್ಟು ಚೆನ್ನಾಗಿ ಧರಿಸುತ್ತಿದ್ದರು. ಸಮಾಜದ ಪ್ರತಿಷ್ಠಿತ ಮಹಿಳೆಯರು ಬಾಲ ಗಂಧರ್ವರ ‘ರೀತಿ’ಯನ್ನು-ಫ್ಯಾಷನ್ ಅನ್ನು ಅನುಕರಿಸುತ್ತಿದ್ದರು. ಅವರಂತೆ ಹೆರಳು ಹಾಕಿಕೊಳ್ಳುವುದು, ಅವರಂತೆ ಬೈತಲೆ ತೆಗೆಯುವುದು, ಸೀರೆ ಉಡುವುದು ಇದೆಲ್ಲಾ ಒಂದು ಫ್ಯಾಷನ್ ಆಯಿತು. ರಂಗಭೂಮಿಯ ಮೇಲೆ ಸ್ತ್ರೀವೇಷ ಧರಿಸುತ್ತಿದ್ದವರೆಲ್ಲ ಬಾಲ ಗಂಧರ್ವರಂತೆಯೇ ವೇಷ ಧರಿಸಲಾರಂಭಿಸಿದರು.

ಆದರೆ ವಯಸ್ಸಾದಂತೆ ಬಾಲ ಗಂಧರ್ವರು ಸ್ತ್ರೀ ವೇಷವನ್ನು ಕೈಬಿಡಬೇಕಾಯಿತು.

ಈ ಸಮಯದಲ್ಲೇ ಕರ್ನಾಟಕದ ಓರ್ವ ಹೆಣ್ಣು ಬಾಲ ಗಂಧರ್ವರ ಜೀವನದಲ್ಲಿ ಸುಳಿದುಬಂದಳು.

ಗೋಹರಾಬಾಯಿ

ಬಾಲ ಗಂಧರ್ವ ನಾಟಕ ಮಂಡಳಿ ಹುಬ್ಬಳ್ಳಿಯಲ್ಲಿ ನಾಟಕಗಳನ್ನು ಆಡುತ್ತಲಿತ್ತು. ಗೋಹರಾಬಾಯಿ ಎಂಬ ಬಿಜಾಪುರದ ಒಬ್ಬ ಗಾಯಕಿ ಬಾಲ ಗಂಧರ್ವರನ್ನು ಹುಡುಕಿಕೊಂಡು ಬಂದಳು. ಆಕೆ ಆಗಲೇ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಳು. ಅವಳು ಹಾಡಿದ ಒಂದು ಧ್ವನಿಮುದ್ರಿಕೆ ಹೊರಬಂದಿತ್ತು. ಬಾಲ ಗಂಧರ್ವರು, ಅವರ ತಾಯಿಯವರು ಗೋಹರಾಬಾಯಿಯ ಮನೆಗೆ ಹೋಗಿ ಅವಳ ಸುಸಂಸ್ಕೃತ ಆಚಾರವನ್ನು ನೋಡಿ ಮೆಚ್ಚಿಕೊಂಡರು. ಗೋಹರಾಬಾಯಿ ಬಾಲ ಗಂಧರ್ವ ನಾಟಕ ಮಂಡಳಿಯ ನಟಿಯಾದಳು.

ರಂಗಭೂಮಿಯ ಮೇಲೆ ಜೊತೆಯಾಗಿ

‘ಸಂಗೀತ ಮೃಚ್ಛಕಟಕಾ’ ಎಂಬ ನಾಟಕದಲ್ಲಿ ಗೋಹರಾಬಾಯಿ ವಸಂತಸೇನೆ, ಬಾಲ ಗಂಧರ್ವರು ಚಾರುದತ್ತ. ಗೋಹರಬಾಯಿಯ ಅಭಿನಯ ತುಂಬಾ ಸೊಗಸಾಗಿತ್ತು. ಬಾಲ ಗಂಧರ್ವರ ಪುರುಷ ಪಾತ್ರವೇ ಅವಳ ಎದುರು ಸಪ್ಪೆ ಎನಿಸಿತು. ಅನಂತರ ಮಾನಾಪಮಾನ ‘ತನ್ಹೋಪಾತ್ರ’  ಮುಂತಾದ ನಾಟಕಗಳಲ್ಲಿ ಅವರೀರ್ವರು ಅಭಿನಯಿಸಿದರು.

ಇವರಿಬ್ಬರಲ್ಲೂ ಪ್ರೀತಿವಿಶ್ವಾಸ ಬೆಳೆಯಿತು. ಗೋಹರಾ ಬಾಯಿ ಬಾಲ ಗಂಧರ್ವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದಳು. ಬಾಲ ಗಂಧರ್ವರು ಗೋಹರಾಬಾಯಿಯನ್ನು ಮದುವೆಯಾಗುತ್ತಾರೆಂಬ ಸುದ್ದಿಯೂ ಕೇಳಿ ಬಂದಿತು. ಇಬ್ಬರೂ ಬೇರೆಬೇರೆ ಜಾತಿಯವರಾಗಿದ್ದರು. ಅಲ್ಲಲ್ಲಿ ಟೀಕೆಗಳೂ ಕೇಳಿಬಂದವು. ಬಾಲ ಗಂಧರ್ವರು ಮಾತ್ರ ಗೋಹರಾಬಾಯಿಯನ್ನು ದೂರಮಾಡಲು ಸಿದ್ಧರಿರಲಿಲ್ಲ. ಇದಕ್ಕೆ ಒಂದು ಪ್ರಬಲ ಕಾರಣವೂ ಇತ್ತು.

ತ್ಯಾಗ

ಗೋಹರಾಬಾಯಿ ಮಂಡಳಿಯ ನಟಿಯಾದ ಮೇಲೆ ಮಂಡಳಿ ಮುಂಬಯಿಗೆ ಬಂದಿತು. ಅಲ್ಲಿ ನಾಟಕಗಳಿಗೆ ಹೆಚ್ಚು ಉತ್ಪತ್ತಿ ಆಗಲಿಲ್ಲ. ಸಾಲ ಹೆಚ್ಚಾಯಿತು. ಸಾಲ ಕೊಟ್ಟಾತನು ಬಂದು ನಾಟಕದ ಸಾಮಾನುಗಳನ್ನೆಲ್ಲ ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಸ್ನೇಹಿತರು ದೂರ ಸರಿದರು. ಅಭಿಮಾನಿಗಳು ಹತ್ತಿರ ಬರಲಿಲ್ಲ. ಬಾಲ ಗಂಧರ್ವರು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಮಾಡಿದರು. ಧೈರ್ಯ ಸಾಕಾಗಲಿಲ್ಲ. ಯಾರಿಗೂ ಮುಖ ತೋರಿಸದೆ ಒಂದು ಕೋಣೆಯಲ್ಲಿ ಸೇರಿಕೊಂಡರು. ಆಗ ಗೋಹರಾಬಾಯಿ ಬಂದಳು. ಬಾಲ ಗಂಧರ್ವರನ್ನು ಒಪ್ಪಿಸಿ ಮೂರು-ನಾಲ್ಕು ದಿನಗಳಲ್ಲಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ತಂದುಕೊಟ್ಟಳು. ಸಾಹುಕಾರನ ಸಾಲ ತೀರಿತು. ನಾಟಕಗಳು ಎಂದಿನಂತೆ ಆರಂಭವಾದವು. ಗೋಹರಾಬಾಯಿ ಮುಂಬಯಿಯ ರಣಜಿತ್ ಸ್ಟುಡಿಯೋದಲ್ಲಿ ಈ ಹಣವನ್ನು ಬಂಡವಾಳದಂತೆ ಇಟ್ಟಿದ್ದಳು ಅಲ್ಲಿಯ ಹಣವನ್ನು ತಂದು ಬಾಲ ಗಂಧರ್ವರಿಗೆ ಕೊಟ್ಟಳು. ತಾನು ಬರಿಗೈ ಮಾಡಿಕೊಂಡು ನಿಂತಳು.

ಬಾಳಿನಲ್ಲೂ ಜೊತೆ

ಅವಳ ತ್ಯಾಗಕ್ಕೆ ಬಾಲ ಗಂಧರ್ವರು ಮನಸೋತರು. ಹಾಗೂ ಗೋಹರಾಬಾಯಿಯನ್ನು ಅವರು ಮದುವೆಯಾದರು. ೧೯೫೬ರಲ್ಲಿಯೇ ಬಾಲ ಗಂಧರ್ವರ ತಾಯಿ ತೀರಿಕೊಂಡಿದ್ದರು. ಗೋಹರಾಬಾಯಿ ಬಾಲ ಗಂಧರ್ವರಿಗೆ ಸಂಗಾತಿ ಆದಳು. ಗೋಹರಾಬಾಯಿ, ಪತಿ ಊಟ ಮಾಡದೆ ತಾನು ಊಟ ಮಾಡುತ್ತಿರಲಿಲ್ಲ. ಅವರನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಆಗಾಗ್ಗೆ ಇಬ್ಬರೂ ಕುಳಿತು ಹಾಡುತ್ತಿದ್ದರು.

ಅನಾಥರಾದರು

ಆದರೆ ಅವರ ದಾಂಪತ್ಯ ಜೀವನ ಬಹಳ ದಿನ ಮುಂದುವರಿಯಲಿಲ್ಲ. ಮದುವೆಯಾಗಿ ನಾಲ್ಕು-ಐದು ವರ್ಷಗಳು ಕಳೆದಿದ್ದವು. ಬಾಲ ಗಂಧರ್ವರಿಗೆ ಪಾರ್ಶ್ವವಾಯು ಹೊಡೆಯಿತು. ಅವರ ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡಿತು. ನಾಟಕ ಮಂಡಳಿ ನಿಂತುಹೋಯಿತು. ಪರದೆಗಳು, ವಾದ್ಯಗಳು ಗೆದ್ದಲಿಗೆ ಆಹಾರವಾದವು. ಬಾಲ ಗಂಧರ್ವರಿಗೆ ಕಷ್ಟದ ದಿನಗಳು ಆರಂಭವಾದವು. ಇಂತಹ ಕಾಲದಲ್ಲೂ ಗೋಹರಾಬಾಯಿ ಅವರ ಕೈಬಿಡಲಿಲ್ಲ. ಅವರ ಸೇವೆ ಮಾಡಿದಳು. ಅಲ್ಲಲ್ಲಿ ಭಜನಾ ಮಂಡಳಿಗಳನ್ನು ನಡೆಸುತ್ತ ಅವರು ಕಾಲ ತಳ್ಳಿದರು.

ಇಂತಹ ಒಂದು ಭಜನೆಯ ಕಾರ್ಯಕ್ರಮದಲ್ಲಿ ಗೋಹರಾಬಾಯಿ ಹಾಡಬೇಕಾಯಿತು. ‘ಪರಿಣಾಮ ಸಿಹಿಯಾಯಿತು’ ಎಂಬ ಸಂತ ಜ್ಞಾನದೇವರ ಅಭಂಗವನ್ನು ಅವಳು ಹಾಡಲಾರಂಭಿಸಿದಳು. ಹಾಡುತ್ತಿರುವಂತೆಯೇ ಅವಳ ಪ್ರಾಣಪಕ್ಷಿ ಹಾರಿತು. ಬಾಲ ಗಂಧರ್ವರು ಆಗ ನಿಜವಾಗಿಯೂ ಅನಾಥರಾದರು.

೧೯೬೪ ರಲ್ಲಿ ಬಾಲ ಗಂಧರ್ವರಿಗೆ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತು. ಮುಂಬಯಿ, ಪುಣೆ ನಗರಗಳಲ್ಲಿ ಅಭಿಮಾನಿಗಳು ಬಾಲ ಗಂಧರ್ವರನ್ನು ಸನ್ಮಾನಿಸಿದರು. ಮಹಾರಾಷ್ಟ್ರ ಸರ್ಕಾರವು ಬಾಲ ಗಂಧರ್ವರಿಗೆ ಮಾಸಾಶನವನ್ನು ನೀಡಿತು.

ಕಡೆಯ ತೆರೆ ಇಳಿಯಿತು

ಆದರೂ ರಂಗಭೂಮಿಯ ‘ಮಹಾರಾಣಿ’ಯ ಅಂತ್ಯ ಸುಖದಾಯಕವಾಗಿ ಇರಲಿಲ್ಲ. ಬಡತನ, ಪಾರ್ಶ್ವವಾಯು, ಕೊನೆಯಲ್ಲಿ ಬಂದ ಮೆದುಳಿನ ಒತ್ತಡ, ಇವೆಲ್ಲವುಗಳಿಂದ ಅವರು ಪ್ರಜ್ಞಾಹೀನರಾದರು. ಈ ಅವಸ್ಥೆಯಲ್ಲೇ ಬಾಲ ಗಂಧರ್ವರು ೧೯೬೭ ರ ಜುಲೈ ೧೫ ರಂದು ಕಾಲವಾದರು.

ಅಮರ ನಟ

ದಾಸ್ಯದಲ್ಲಿದ್ದ ಭಾರತದಲ್ಲಿ ಹೊಸ ಚೇತನ ಹೊರ ಹೊಮ್ಮುತ್ತಿದ್ದ ಕಾಲದಲ್ಲಿ ಬಾಲ ಗಂಧರ್ವರು ಮರಾಠಿ ರಂಗಭೂಮಿಗೆ ಬಂದರು. ಬಹುಮಟ್ಟಿಗೆ ಅವರು ಅಭಿನಯಿಸಿದ್ದು ಪೌರಾಣಿಕ ನಾಟಕಗಳಲ್ಲಿ. ಗುಲಾಮಗಿರಿಯಿಂದ ಎಚ್ಚೆತ್ತುಕೊಳ್ಳುತ್ತಿದ್ದ ನಾಡು ತನ್ನ ಹಿಂದಿನ ಕಾವ್ಯ ಮತ್ತು ಚರಿತ್ರೆಗಳು, ಹಿಂದಿನವರು ಬದುಕಿ ಬಾಳಿದ ರೀತಿ-ಇವುಗಳತ್ತ ದೃಷ್ಟಿಯನ್ನು ತಿರುಗಿಸುತ್ತಿತ್ತು. ಬಾಲ ಗಂಧರ್ವರು ಪ್ರಾಚೀನ ಕಾವ್ಯಗಳಲ್ಲಿನ ಕಥೆಗಳಿಗೆ ಜೀವಕೊಟ್ಟರು. ಅವುಗಳಲ್ಲಿ ತೋರಿದ ಬಾಳಿನ ರೀತಿಯನ್ನು ಮತ್ತೆ ಬೆಳಗಿದರು.

ಪೌರಾಣಿಕ ನಾಟಕಗಳಲ್ಲಿಯೂ ಸಾಮಾಜಿಕ ನಾಟಕದಲ್ಲಿಯೂ ಸಾಮಾನ್ಯವಾಗಿ ಒಬ್ಬರೇ ನಟರು ಹೆಸರು ಮಾಡಲಾರರು. ಗಂಭೀರ ನಾಟಕದಲ್ಲಿಯೂ ಹಾಸ್ಯ ನಾಟಕದಲ್ಲಿಯೂ ಒಬ್ಬರೇ ಯಶಸ್ವಿಯಾಗುವುದಿಲ್ಲ. ಒಂದೊಂದು ಬಗೆಯ ನಾಟಕಕ್ಕೆ ಬೇಕಾದ ಮನೋಧರ್ಮ, ಮಾತಿನ ರೀತಿ, ಅಭಿನಯ ಒಂದೊಂದು ಬಗೆಯದು. ಆದರೆ ಬಾಲ ಗಂಧರ್ವರು ಎಲ್ಲ ಬಗೆಯ ನಾಟಕಗಳಲ್ಲಿಯೂ ಪ್ರೇಕ್ಷಕರ ಮನಸ್ಸನ್ನು ಸೂರೆಮಾಡಿದರು. ಶಕುಂತಲೆಯಾಗಿ ಪ್ರೇಕ್ಷಕರ ಕಣ್ಣಿನಲ್ಲಿ ನೀರು ಹರಿಸಿದರು.. ಸಾಮಾಜಿಕ ನಾಟಕ ‘ಏಕಚ್ ಪ್ಯಾಲ’ ದಲ್ಲಿ ಸಿಂಧು ಆಗಿ ಪ್ರೇಕ್ಷಕರ ಕಣ್ಣಿನಲ್ಲಿ ನೀರು ಹರಿಸಿದರು; ‘ಸಂಶಯ ಕಲ್ಲೋಲ’ ಹಾಸ್ಯ ನಾಟಕದಲ್ಲಿ ಶ್ರೀಮಂತನ ಪ್ರೀತಿಯ ಹೆಣ್ಣಾಗಿ ಪ್ರೇಕ್ಷಕರಿಂದ ‘ಭೇಷ್’ ಎನ್ನಿಸಿಕೊಂಡರು. ಇದರ ಗುಟ್ಟು- ತಾವು ಅಭಿನಯಿಸುವ ಪಾತ್ರದ ಸ್ವಭಾವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ರಂಗಭೂಮಿಯ ಮೇಲೆ ಅವರು ಹೆಜ್ಜೆ ಇಡುತ್ತಿದ್ದುದು.

ಭಾರತದ ರಂಗಭೂಮಿಯ ಅಮರ ನಟರಲ್ಲಿ ಒಬ್ಬರು ಬಾಲ ಗಂಧರ್ವರು.