‘ಬಾಲ ಬಸವ ಸಂಪ್ರದಾಯ’ ಯೋಜನೆಗೆ ಸಂಬಂಧಪಟ್ಟಂತೆ ಕ್ಷೇತ್ರಕಾರ್ಯಕ್ಕೆ ಹೋಗುವುದು, ಬರುವುದು, ನೂರಾರು ವಕ್ತೃಗಳ ಸಂಬಂಧ, ಕಲಾವಿದರ ಒಡನಾಟ, ಈ ಸಂಪ್ರದಾಯಕ್ಕೆ ಸಂಬಂಧಪಟ್ಟ ಕಾವ್ಯ, ಕತೆ, ಐತಿಹ್ಯಗಳು, ಹಬ್ಬ-ಹರಿದಿನ, ಜಾತ್ರೆಗಳು, ನದಿ-ಬೆಟ್ಟ, ಬಯಲುಗಳೊಂದಿಗೆ ಕಳೆದ ಐದು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಒಂದೊಂದು ಯೋಜನೆಯು ಒಂದು ಮಹಾಯಾತ್ರೆಯ ಅನುಭವವನ್ನೇ ತಂದುಕೊಟ್ಟಿದೆ. ಒಟ್ಟು ಐದು ವರ್ಷದ ಈ ಅವಧಿಯ ಕೆಲಸಗಳನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಕೆಲಸ ಮುಗಿಸಿದ್ದೇನೆ. ಮೊದಲೆರಡು ವರ್ಷ ಕ್ಷೇತ್ರ ವೀಕ್ಷಣೆ, ಕಲಾವಿದರ ಆಯ್ಕೆ, ಪ್ರಥಮ ಮಾಹಿತಿ ಸಂಗ್ರಹ, ವಕ್ತೃಗಳ ವಿಶ್ವಾಸ ಗಳಿಸುವಲ್ಲೇ ಕಳೆದು ಹೋಗುತ್ತದೆ. ಎರಡನೇ ಹಂತದಲಿ ಮುಖ್ಯ ಕಲಾವಿದರನ್ನು ಇಟ್ಟುಕಂಡು ಅವನು ಹಾಡುವ ಎಲ್ಲ ಕಥನಗಳನ್ನು ಸಂಗ್ರಹಿಸಿದ್ದೇನೆ. ಅವುಗಳಲ್ಲಿ ಸಾಹಿತ್ಯಕವಾಗಿ ಉತ್ತಮವಾದ ಹಾಗೂ ಈ ಪರಂಪರೆಯನ್ನು ಪ್ರತಿನಿಧಿಸುವ ಒಂದು ಕಾವ್ಯವನ್ನು ಆಯ್ಕೆಮಾಡಿ ಸಂಪಾದಿಸಿ, ಕಾವ್ಯ ಸ್ವರೂಪ, ಪರಂಪರೆಯ ಸಂಬಂಧ ಇತ್ಯಾದಿಗಳನ್ನು ಈ ಕೃತಿಯಲ್ಲಿ ತಂದಿದ್ದೇನೆ. ಮೂರನೇ ಹಂತದಲ್ಲಿಈ ಪರಂಪರೆಯನ್ನು ಕುರಿತ ವಿಶ್ಲೇಷಣಾತ್ಮಕ ಸ್ವತಂತ್ರ ಕೃತಿಯ ಕೆಲಸ ಸಾಗಿದೆ. ಕ್ಷೇತ್ರಕಾರ್ಯಧ ಅನುಬವವನ್ನು ಹಿನ್ನೆಲೆಯಾಗಿಟ್ಟುಕೊಂಡು ಕಥನ ಮಾದರಿಯಲ್ಲಿ ಯೋಜನೆಯನ್ನು ಸ್ಥೂಲವಾಗಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.

. ಸತ್ತ ಹಸುವಿನ ಮುಂದೆ ಧಣಿ ಆಳಾಗುವ ಪರಿ

ಮಂಟೇಸ್ವಾಮಿ ಕೃತಿಯಲ್ಲಿ ವಚನ ಚಳುವಳಿಯಿಂದ ಪ್ರೇರಿತವಾದ ಕೆಳಸಮುದಾಯಗಳಲ್ಲಿ ಬಾಲಬಸವ ಸಂಪ್ರದಾಯವು ಒಂದು ಎಂದು ದಾಖಲಿಸಿದ್ದೇ, ಇದಕ್ಕೆ ಆಧಾರವೆಂದರೆ ಡಾ. ಎಲ್ಲಪ್ಪ ಕೆಕೆಪುರ ಅವರು ಸುಧಾ ಪತ್ರಿಕೆಯಲ್ಲಿ ಬರೆದಿದ್ದ ಲೇಖನ (ದಿನಾಂಕ ೪ ಮಾರ್ಚ್ ೧೯೯೯) ಇಷ್ಟು ಬಿಟ್ಟರೇ ಬೇರೇನೂ ಈ ಸಂಪ್ರದಾಯದ ಬಗ್ಗೆ ಮಾಹಿತಿಗಳು ಇರಲಿಲ್ಲ. ಇದರ ನಡುವೆ ನನ್ನ ಮಾರ್ಗದರ್ಶನದಲ್ಲಿ ಡಾ. ಸತೀಶ ಪಾಟೀಲ ಪಂಚಗಣಾಧೀಶ್ವರ ಬಗ್ಗೆ ಅಧ್ಯಯನ ಮಾಡಿದ. ಪಂಚಗಣಾಧೀಶ್ವರರಲ್ಲಿ ಮದ್ದಾನೇಶನು ಒಬ್ಬ. ಅವನ ಮಗ ಗೋಣಿಬಸಪ್ಪ ಬಾಲಬಸಪ್ಪಗಳ ದೈವ. ಇದರ ನಂತರ ನಾನು ಈ ಯೋಜನೆಯನ್ನು ರೂಪಿಸಿದೆ. ಮೊದಲು ಈ ಕಥನವನ್ನು ಹಾಡುವ ಕಲಾವಿದರಾದ ಬಾಲಬಸಪ್ಪಗಳ ಹುಡುಕಾಟ ಮಾಡಿದೆ. ಆಗ ನಮಗೆ ಸಿಕ್ಕ ಏಕೈಕ ಕಲಾವಿದ ತುಮನೆಪ್ಪ. ಇಲ್ಲಿಂದಲೇ ನಮ್ಮ ಸಮಸ್ಯೆ ಶುರುವಾಯಿತು. ಯಾವುದೇ ಒಂದು ಕಲೆ ಸಂಪ್ರದಾಯದ ಭಾಗವಾದರೆ ಸಂಪ್ರದಾಯ ನಶಿಸಿಹೋದರೆ ಕಲೆಯೂ ನಶಿಸಿಹೋಗುತ್ತದೆ. ಆದ್ದರಿಂದ ಬಲಬಸಪ್ಪಗಳ ಸಂಪ್ರದಾಯ ಸಮಸ್ಯಾತ್ಮಕ ಸಂಗತಿಯಿಂದ ಕೂಡಿದೆ ಎಂದೆನಿಸಿತು. ಈ ಸಂಪ್ರದಾಯದ ಕಥನವನ್ನು ಹಾಡುವ ಕೊನೆಯ ಕೊಂಡಿಯಾಗಿರುವ ತುಮನೆಪ್ಪ, ಈ ಕತೆಯನ್ನು ಹಾಡುತ್ತಲೇ ಆ ಸಂಪ್ರದಾಯದ ಎಲ್ಲ ಸಮಸ್ಯೆಗಳನ್ನು ನೀಸಿದ್ದಾನೆ. ಈ ಸಮಸ್ಯೆ ಏನೆಂದರೆ, ಮೂಲತಃ ಮಾದಿಗ ಕುಲದವರಾದ ಬಾಲಬಸಪ್ಪಗಳು ಲಿಂಗಾಯತರಾಗಿ ದೀಕ್ಷೆ ತೆಗೆದುಕೊಂಡ ಮೇಲೆ ಮಾದಿಗ ಕುಲದಿಂದ ಹೊರಗಾಗಿ ಗುರುವಿನ ಸ್ಥಾನಕ್ಕೆ ಏರುತ್ತಾರೆ (ಈ ದೀಕ್ಷೆಯ ನಂತರದಲ್ಲೇ ಅವರು ಕಾಲಜ್ಞಾನ ಸಾರುವುದು, ಈ ಕಥನಗಳನ್ನು ಹಾಡುವುದು). ಹೀಗೆ ಕುಲದಿಂದ ಉನ್ನತ ಸ್ಥಾನ ಸಿಕ್ಕ ಮೇಲೆ ಇವರಿಗೆ ಮಾದಿಕ ಕುಲದವರು ಹೆಣ್ಣು ಕೊಡಲು ಹೆದರುತ್ತಾರೆ. ಆ ಕಡೆ ಲಿಂಗಾಯತರು ಇವರನ್ನು ಜಾತಿಗೆ ಸೇರಿಸಿಕೊಳ್ಳದೆ ಅತಂತ್ರರಾಗುತ್ತಾರೆ. ಇದರ ಪರಿಣಾಮವಾಗಿ ಬಾಲಬಸಪ್ಪಗಳಿಗೆ ಹೆಣ್ಣು ಮಕ್ಕಳು ಹುಟ್ಟಿದರೆ ಬಸವಿಯಾಗಿ ಬಿಡುವ ಪದ್ಧತಿಯೂ ಇದೆ. ಗಂಡುಗಳಿಗೆ ಮಾದಿಗ ಕುಲದಿಂದ ಹೆಣ್ಣನ್ನು ಬಸವಿಯಾಗಿ ಬಿಡುವ ಪದ್ಧತಿಯೂ ಇದೆ. ಗಂಡುಗಳಿಗೆ ಮಾದಿಗ ಕುಲದಿಂದ ಹೆಣ್ಣನ್ನು ತಂದು ಅವಳನ್ನು ಲಿಂಗಾಯತೀಕರಣಗೊಳಿಸಿ ನಂತರ ಮದುವೆ ಮಾಡುತ್ತಾರೆ. ದೇವದಾಸಿ ಪದ್ಧತಿ ಈ ಸಂಪ್ರದಾಯದ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ನಾವು ತುಮನೆಪ್ಪನನ್ನು ಹುಡಿಕಿಕೊಂಡು ಕೂಲಹಳ್ಳಿಯ ಜಾತ್ರೆಗೆ ಹೊರಟೆವು. ಇದು ಈ ಯೋಜನೆಯ ಮೊದಲ ಕ್ಷೇತ್ರಕಾರ್ಯ ಎಂಬ ಉತ್ಸಾಹವಿದ್ದರೂ, ಬಳ್ಳಾರಿಯ ಭೀಕರ ಬೇಸಿಗೆಗೆ ದಣಿದಿದ್ದೆವು. (ಎಲ್ಲ ಕಡೆ ಬಹುವಚನ ಬಳಸಿರುವುದಕ್ಕಮ ಮುಖ್ಯ ಕಾರಣ ಡಾ. ಸತೀಶ ಪಾಟೀಲ ನನ್ನ ಎಲ್ಲ ಕ್ಷೇತ್ರಕಾರ್ಯಗಳಲ್ಲೂ ಜೊತೆಗಿದ್ದ).

ಜಾತ್ರೆ ಮಾಳದಲ್ಲಿ ಹ್ಯಾರಡದಿಂದ ಬಂದಿದ್ದ ಒಂದು ಬಂಡಿಯ ಜನ ಗುಂಪು ಕಟ್ಟಿ ಉಸಿರು ಬಿಡುತ್ತಾ ನಿಂತಿದ್ದರು. ಏನೆಂದು ವಿಚಾರಿಸಿದಾಗ ಆ ಬಂಡಿಗೆ ಕಟ್ಟಿದ ಒಂದು ರಾಸು ದಣದು ಕೂಲಹಳ್ಳಿಯನ್ನು ತಲುಪಿ ಪ್ರಾಣತ್ಯಾಗ ಮಾಡಿತ್ತು. “ಈ ಸಾರಿಯ ಜಾತ್ರೆ ಅವರ ಪಾಲಿಗೆ ಕೆಟ್ಟ ಅನುಭವವಲ್ಲವೇ’’ ಎಂದು ಚರ್ಚೆ ಮಾಡುತ್ತಾ ಬೇಸರದಿಂದ ಮಾದರ ಕೇರಿಯ ತುಪನೆಪ್ಪನ ಬೀಗರ ಮನೆ ಹುಡುಕಿದೆವು. ಗೊಲ್ಲರ ಹಟ್ಟಿಯಿಂದ ತುಮನೆಪ್ಪ ಇಲ್ಲಿಗೆ ಬಂದೇ ಬರುತ್ತಾನೆ ಎಂಬುದು ನಮ್ಮ ನಂಬಿಕೆಯಾಗಿತ್ತು. ಆದರೆ ತುಮನೆಪ್ಪ ಮದ್ಯಾನವಾದರು ಬಂದಿರಲಿಲ್ಲ. “ಬರಬಹುದು ಕುಳಿತುಕೊಳ್ಳಿ’’ ಎಂದು ಜಗಲಿ ಮೇಲೆ ಚಾಪೆ ಹಾಸಿದರು. ನಾವು ನಮ್ಮ ಬಯಾಡೇಟ ಕೊಟ್ಟೆವು. ಅವರು ಅದನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿದೆ ಸತ್ತ ಹ್ಯಾರಡದ ಹಸು ಎಷ್ಟು ಹೊತ್ತಿಗೆ ಕೇರಿ ತಲುಪುತ್ತದೆ ಎಂಬುದರ ಬಗ್ಗೆ ಮಾತನಾಡುತ್ತಿದ್ದರು. “ಪೂಜೆಗೆ ಬಂದವರು ಎಲ್ಲಿ ಹೂತುಬಿಡುತ್ತಾರೋ’’ ಎಂದು ಒಬ್ಬರು. “ಇಲ್ಲ. ಅದನ್ನು ಇಲ್ಲಿ ಹೂಳಲು ಅವರಿಗೆ ಸ್ಥಳವಿಲ್ಲ ಆದ್ದರಿಂದ ಬಂದೇ ಬರುತ್ತದೆ’’ ಎಂದು ಒಬ್ಬರು. ಒಂದು ರಾಸು, ಅದು ಜಾತ್ರೆಯ ದಿನ ಹಗ್ಗದ ಬೆಲೆಗೆ ಕೇರಿಯಲ್ಲ ತಿಂದರೂ ಉಳಿಯುವಷ್ಟು ಊಟ, ಇವೆಲ್ಲ ಕನಸುಗಳ ಕೂಟ ಆದಾಗಿತ್ತು. ತಮಟೆ ಹೊಡೆದುಕೊಂಡು ಬಂಡಿಯ ಮೇಲೆ ಮೆರವಣಿಗೆಯಲ್ಲಿ ರಾಸು ಕೇರಿ ತಲುಪಿತು. ಒಂದು ಕಡೆ ದುಃಖ ಮತ್ತೊಂದು ಕಡೆ ಸಂಭ್ರಮವಾಗುವ ಪರಿ ಕಂಡು ನಮ್ಮ ಕ್ಷೇತ್ರಕಾರ್ಯದ ಮುಖ್ಯ ಉದ್ದೇಶವನ್ನು ಬದಿಗಿಟ್ಟು ಈ ಕುರಿತೇ ಮಾತಾಡಲು ಪ್ರಯತ್ನಿಸಿದೆವು. “ಎಷ್ಟು ದುಡ್ಡು ಕೊಟ್ಟೀರಿ’’ ಎಂಬುಕ್ಕೆ ಅವರು “ಈ ಹಿಂದೆ ಕೊಟ್ಟದ್ದಕ್ಕಿಂತ ಕಡಿಮೆ’’ ಎಂದರು. ಏಕೆಂದರೆ ಅವರು ಪರಸ್ಥಳದವರು, ಅವರಿಗೆ, ಹೂಳುವ ಹಕ್ಕು ಇಲ್ಲಿ ಇಲ್ಲ, ಎಂಬುದು ಅವರ ತರ್ಕ ಮತ್ತು ಸತ್ತ ನಂತರ ಆ ವಸ್ತುವಿನ ನಿಜವಾದ ವಾರಸುದಾರರು ಇವರೇ, ಏಕೆಂದರೆ ತಿನ್ನುವ ತಾಕತ್ತು ಇರುವುದು ಇವರಿಗೆ ಮಾತ್ರ ಆದ್ದರಿಂದ ಸತ್ತ ಹಸುವಿನ ಮುಂದೆ ನಾವು ಧಣಿ ಅವರು ಆಳು ಎನ್ನುವ ವಿಚಿತ್ರ ಗತ್ತಿನಲ್ಲಿ ತಮ್ಮ ವ್ಯಾಪಾರದ ಗೆಲುವಿನ ಸಂಭ್ರಮವನ್ನು ವಿವರಿಸಿದರು.’’ ಊರಿನಲ್ಲಿ ಸತ್ತ ರಾಸುಗಳಿಗೆ ಇದಕ್ಕಿಂತ ಬೆಲೆ ಏಕೆ ಹೆಚ್ಚು ಎಂದು ಕೇಳಿದೆವು. “ನಾವು ಕಡಿಮೆ ಬೆಲೆಗೆ ಹಠ ಹಿಡಿದು ಕುಂತರೇ ಅವರೂ ಹಠಕ್ಕೆ ಬಿದ್ದು ಹೂಳಿಸಿ ಬಿಡುತ್ತಾರೆ. ಆದರೆ ಈ ಆವಕಾಶ ಹ್ಯಾರಡದವರಿಗೆ ಇರಲಿಲ್ಲ ನಾವು ಕೇಳಿದ ಬೆಲೆಗೆ ಕೊಟ್ಟರು’’ ಎಂದರು. ನಾವು ಕೇರಿಯಲ್ಲಿ ಅರೆಯುತ್ತಿದ್ದ ಮಸಾಲೆಯ ಸುವಾಸನೆಯನ್ನು ಆಘ್ರಾಣಿಸುತ್ತಾ, ತುಮನೆಪ್ಪನ ದಾರಿ ಕಾಯುತ್ತ ಕುಂತೆವು. ತುಂಬಾ ಹೊತ್ತಿನ ಮೇಲೆ ತುಮನೆಪ್ಪ ಬಂದ, ಬೀಗರ ಮನೆಯ ನೀರು ನೆಳ್ಳು ಉಪಚಾರವಾದ ಮೇಲೆ ಅವನಿಗೆ ಪಾತ್ರೆ ಪಡಿಕೊಟ್ಟು ಹೊರಗಡೆ ಅಡಿಗೆ ಮಾಡಿಕೊಳ್ಳಲು ತಿಳಿಸಿದರು. ಏಕೆಂದರೆ ಅವನು ಬಾಲಬಸಪ್ಪ ಲಿಂಗಾಯತನಾಗಿದ್ದಾನೆ. ಅವನು ಮಾಂಸದೂಟಕ್ಕೆ ಸಲ್ಲುವುದಿಲ್ಲ. ನಾವು ಆ ರಾತ್ರಿ ಅಲ್ಲೇ ತಂಗಿದ್ದು ತುಮನೆಪ್ಪನ ಹಿಂದೆ ಓಡಾಡಿ ಜಾತ್ರೆಗೆ ಬರುವ ಬಾಲಬಸಪ್ಪಗಳ ಜೊತೆ ಮಾತಾಡುತ್ತಿದ್ದೆವು. ಆಗೆಲ್ಲ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಿದ್ದ ಹೆಸರು ಧನಂಜಯ ಶಾಸ್ತ್ರಿಗಳದು. ನೀವು ಬಾಲಬಸಪ್ಪಗಳ ಮೇಲೆ ಅಧ್ಯಯನ ಮಾಡುವವರು ಧನಂಜಯ ಶಾಸ್ತ್ರಿಗನು ಭೇಟಿಯಾಗದಿದ್ದರೆ ನಿಷ್ಪ್ರಯೋಜನ ಎಂದು ಶಾಸ್ತ್ರಿಗಳನ್ನು ಹೊಗಳುವರು ಆದರೆ ಯಾರು ವಿಳಾಸ ಕೊಡುತ್ತಿಲ್ಲಾ. “ಅವರೇನು ಬ್ರಾಮುಡರ, ಶಾಸ್ತ್ರಿ ಎಂದು ಹೆಸರಿಟ್ಟುಕೊಂಡಿದ್ದಾರೆ’’ ಎಂದಾಗ “ಇಲ್ಲ ಅವರೂ ನಮ್ಮ ಬಾಲಬಸಪ್ಪಗಳ ಜಾತಿ’’ ಎಂದರು. ಕುಲದಿಂದ ಮಾದಿಗರಾಗಿ ಬ್ರಾಮುಡರನ್ನು ಮೀರಿಸುವ ಖ್ಯಾತಿ ಇವರಿಗೆ ಹೇಗೆ ಬಂತು ಎಂದು ನಾವು ಬಾಲಬಸಪ್ಪಗಳ ಇನ್ನೊಂದು ಕೊಂಡಿ ಹುಡುಕುವುದು ಮುಂದಿನ ಕ್ಷೇತ್ರಕಾರ್ಯದ ಮೊದಲ ಅಜೆಂಡವಾಗಿಸಿಕೊಂಡು ಮನೆ ಸೇರಿದೆವು.

. ಶಾಸ್ತ್ರಿಗಳ ಶವ ದರುಶನ

ಧನಂಜಯ ಶಾಸ್ತ್ರಿಗಳ ವಿಳಾಸ ಹುಡುಕಲು ಮತ್ತೆ ನಮ್ಮಲ್ಲಿದ್ದ ಏಕೈಕ ಜಾತಕ ಡಾ. ಎಲ್ಲಪ್ಪ ಅವರ ಲೇಖನ. ಅವರು ಸಹ ಶಾಸ್ತ್ರಿಗಳನ್ನು ಈ ಪರಂಪರೆಯ ಗಣಿ ಎನ್ನುವ ತರ ಚಿತ್ರಿಸಿದ್ದರು. ಆದರೆ ಲೇಖನದಲ್ಲಿ ಅವರ ವಿಳಾಸವಿರಲಿಲ್ಲ. ನಾವು ಡಾ. ಎಲ್ಲಪ್ಪ ಅವರನ್ನು ಭೇಟಿಯಾದರೆ ವಿಳಾಸ ಸಿಗುತ್ತದೆ ಎಂದು ಲೈಕ್ಕಹಾಕಿ ಬಾಗಲಕೋಟೆಗೆ ಹೊರಟೆವು. ಡಾ. ಎಲ್ಲಪ್ಪ ಅವರು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಗಳು. ಅವರನ್ನು ಭೇಟಿಯಾಗಿ ಧನಂಜಯ ಶಾಸ್ತ್ರಿಗಳಿಗೆ ಕೇಳಿದೆವು. ಅವರು ತುಂಬ ಭಾವುಕರಾಗಿ ಒಂದು ಅರ್ಧಗಂಟೆ ಅವರ ಗುಣಗಾನ ಮಾಡಿದರು. ಆದರೆ ವಿಳಾಸ ಮಾತ್ರ ಹೇಳುತ್ತಿಲ್ಲ. ನಮಗೆ ಇವರು ಇಷ್ಟು ದೊಡ್ಡ ಅಧಿಕಾರಿ ಅವರ ವಿಳಾಸವೇಕೆ ಇಟ್ಟುಕೊಳ್ಳುತ್ತಾರೆ ಎನ್ನುವ ಅನುಮಾನ ಶುರುವಾಗಿ, ಅವರು ಹೊಗಳುವುದನ್ನು ಸಹಿಸಲಾಗದೆ ತಾಳ್ಮೆ ಕಳೆದುಕೊಂಡು ‘ಸಾರ್ ಎಲ್ಲರೂ ಶಾಸ್ತ್ರಿಗಳ ಹೆಸ್ರು ಹೇಳುತ್ತಾರೆ. ಕೊಂಡಾಡುತ್ತಾರೆ ಆದರೆ ವಿಳಾಸ ಮಾತ್ರ ಯಾರು ಕೊಡುತ್ತಿಲ್ಲ’ ಎಂದೆವು. ಆಗ ಅವರು ಧನಂಜಯ ಶಾಸ್ತ್ರಿಗಳ ಸ್ಪಷ್ಟ ವಿಳಾಸ ಕೊಟ್ಟರು. ನಾವು ಬಂದದ್ದು ಸಾರ್ಥಕವಾಯಿತು ಎಂದು ಅವರಿಗೆ ವಂದನೆಗಳನ್ನು ತಿಳಿಸಿ, ಊರು ಸೇರಿದ ನಾಳೆಗೆ ಮೊಳಕಾಲ್ಮೂರು ತಾಲೂಕು, ರಾಂಪುರ ಹೋಬಳಿಕೆರೆ ಕೊಂಡಪುರ ಗ್ರಾಮ ಹುಡುಕಿಕೊಂಡು ಹೊರೆಟೆವು. ರಾಂಪುರ ನಮಗೆ ಈಗಾಗಲೇ ಪರಿಚಿತವಾದ ಊರಾದ್ದರಿಂದ ಬೆಳಿಗ್ಗೆ ಬಸ್ಸು ಹತ್ತಿ ಹನ್ನೊಂದಕ್ಕೆ ಅಲ್ಲಿ ಸೇರಿದೆವು. ಅಲ್ಲಿಂದ ಕೆರೆಕೊಂಡಾಪುರಕ್ಕೆ ಹೋಗಬೇಕಿತ್ತು. ನಾನು ಇನ್ನೇನು ಕೆಲವೇ ಕ್ಷಣಗಳಲ್ಲಿ ಬಾಲಬಸವ ಸಂಪ್ರದಾಯದ ಗಣಿಯ ದರ್ಶನ, ಅವರ ಹತ್ತಿರ ಇರುವ ಕಾಲಜ್ಞಾನ ಹಸ್ತಪ್ರತಿಗಳು, ಆರವತ್ತು ಎಪ್ಪತ್ತು ವರ್ಷ ಕಾಲಜ್ಞಾನ ಸಾರಿದ ಅನುಭವ, ಈ ಸಂಪ್ರದಾಯ ಏಕೆ ಸಂಸ್ಕೃತೀಕರಣಗೊಂಡಿತು, ಈಗ ಏಕೆ ಅವನತಿ ಇತ್ಯಾದಿಗಳೆಲ್ಲ ತಲೆಗೆ ಬಂದು ಶಾಸ್ತ್ರಿಗಳ ಭೇಟಿಯನ್ನು ಅರ್ಥಪೂರ್ಣವಾಗಿಸಲು ಯಾವ ತರದ ಪ್ರಶ್ನೆಗಳನ್ನು ಕೇಳಬೇಕು, ಮಾಹಿತಿ ಪಡೆಯಬೇಕು ಎಂಬುದರ ಬಗ್ಗೆ ಒಂದು ರಿಹರ್ಸಲ್ ಮಾಡಿಕೊಂಡು, ಚಾ ಅಂಗಡಿಗೆ ಹೋದೆವು. ಶಾಸ್ತ್ರಿಗಳನ್ನು ಕಾಣುವ ಉತ್ಸಾಹದಲ್ಲಿ ಸತೀಶ “ಸಾರ್ ಮೊದಲು ಅಲ್ಲಿಗೆ ಹೋಗಿ ಬಿಡೋಣ’’ ಎಂದ. ನಾನು “ಇನ್ನೇನು ಅವರ ಭೇಟಿಯಷ್ಟೇ ಸ್ವಲ್ಪ ಕೂಲ್ ಆಗು’’ ಎಂದೆ. ಒಂದು ಲಿಂಗಾಯತ ಹೋಟೆಲ್‌ನಲ್ಲಿ ಟೀಗೆ ಆಡರ್ರ‍್ ಮಾಡಿ ತುಂಬಾ ಸೀರಿಯಸ್ ಆಗಿದ್ದ ಸತೀಶನಿಗೆ ಚೇಷ್ಟೆ ಮಾಡಲು “ನಾನು ಮೇಗಾನೆ ರಿಟರ್ನ್ ಗೊತ್ತಿರಲಿ’’ ಎಂದೆ. ಅವನು ನಾನು ವಿದೇಶಿ ಪ್ರಾವಾಸ ಮಾಡಿದ್ದೇನೆ ಎಂದು ತಿಳಿದು “ಮೆಗಾನೆ ಯಾವ ದೇಶ ಸಾರ್’’ ಎಂದ. “ನಮ್ಮ ಕರ್ನಾಟಕನೇ’’ ಎಂದೇ. “ನಾನು ನೀವು ಹೇಳಿದ ಗತ್ತು ನೋಡಿ ವಿದೇಶ ಇರಬಹುದೆಂದು ಕೊಂಡೆ ಸಾರ್’’ ಎಂದ. “ಅಲ್ಲಪ್ಪಾ, ನಾವು ಎಷ್ಟು ಮಂದಿ ಮೇಗಾನೆ ನೋಡಿದ್ದೇವೆ, ಆ ದಟ್ಟ ಕಾಡಿನಲ್ಲಿ ಹೋಗುವುದಕ್ಕೆ ಒಂದು ದಿನ ಬರುವುದಕ್ಕೆ ಒಂದು ದಿನ, ಎಂಥ ಸುಂದರವಾದ ಪ್ರಕೃತಿ. ಬೆಟ್ಟದ ತುಟ್ಟತುದಿಯಲ್ಲಿ ಆಧುನಿಕ ಸೌಲಭ್ಯಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಸೌಲಭ್ಯಗಳೇ ಇಲ್ಲದೇ ಬದುಕುವ ಕುಣಬಿ ಬುಡಕಟ್ಟಿನವರು, ಇದು ನನಗೆ ವಿದೇಶಕ್ಕಿಂತಲೂ ಉತ್ತಮ ಅನುಭವವಾಗಿದೆ. ಇದನ್ನು ಬಯಾಡೇಟದಲ್ಲಿ ಸೇರಿಸಿಕೊಂಡಿದ್ದೇನೆ, “ಮೇಗಾನೆ ರಿಟರ್ನ್ ಎಂದು’’. “ಸಾರ್, ಹಾಗಾದರೆ ಈ ಧನಂಜಯ ಶಾಸ್ತ್ರಿಗಳು ಈ ಸಂಪ್ರದಾಯದ ಜ್ಞಾನನಿಧಿ. ಇವರ ಬಗ್ಗೆ ಈ ಹೋಟೆಲ್‌ನಲ್ಲಿ ಯಾರಿಗೆ ಗೊತ್ತಿದೆ, ಈ ದೇಸಿ ಜ್ಞಾನ ಎಂಬುದು ಆಧುನಿಕ ಸೌಲಭ್ಯ ಪಡೆದವರಿಗೆ ಒಂದು ಪ್ಯಾಷನ್ ಆಗಿದೆ. ಆದರೆ ಹಳ್ಳಿಯ ಜನರು ಆಧುನಿಕರಾಗಲು ಕ್ಷಣಕ್ಷಣಕ್ಕೂ ಪರಿತಪಿಸುತ್ತಿದ್ದಾರೆ.’’ ಎಂದು ತಿರುಗೇಟುಕೊಟ್ಟ. ನಾನು ಕ್ಷಣಕಾಲ ಸುಮ್ಮನಾಗಿ “ನಿನ್ನ ಪಕ್ಕ ಕುಂತಿರುವ ಆ ಹಳ್ಳಿಯವನನ್ನು ಧನಂಜಯ ಶಾಸ್ತ್ರಿಗಳ ವಿಳಾಸ ಕೇಳು’’ ಎಂದೆ. ಅವನು “ಗ್‌ತಿಲ್ಲ’’ ಎಂದು ಟೀ ಕುಡಿದು ಎದ್ದು ಹೋದ. ಆದರೆ ನಮ್ಮ ಮಾತನ್ನು ಕೇಳಿಸಿಕಂಡ ಆ ಹೋಟಲಿನ ಮಾಲೀಕಳು ಧನಂಜಯ ಶಾಸ್ತ್ರಿಗಳ ವಿಳಾಸ ಟ್‌ಟಳು. ನಾವು ಕರೆಕೊಂಡಾಪುರಕ್ಕೆ ಆಟೋ ಹತ್ತಿ “ಧನಂಜಯಶಾಸ್ತ್ರಿಗಳ ಮನೆ’’ ಎಂದೆವು. ಆಟೋದವನು ನೇರ ಹೋಗಿ ಶಾಸ್ತ್ರಿಗಳ ಮನೆ ಮುಂದೆ ನಿಲ್ಲಿಸಿದ. ನಾನು ಸತೀಶನಿಗೆ “ಆಟೋ ಡ್ರೈವರ್‌ಗೂ ಧನಂಜಯಶಾಸ್ತ್ರಿಗಳ ಮನೆ ಗೊತ್ತು’’ ಎಂದು ಕಿಚಾಯಿಸಿದೆ. ಇಳಿದ ತಕ್ಷಣ ಮನೆಗೆ ನುಗ್ಗುವ ಮೊದಲು ಒಂದು ಧಂ ಎಂದು ಅಲ್ಲೇ ನಿಂತೇ. ತಕ್ಷಣ ಒಂದಷ್ಟು ಮಂದಿ “ಬನ್ನಿ ಬನ್ನಿ’’ ಎಂದು ಹೊರಗೆ ಬಂದುಬಿಟ್ಟರೂ “ನಾವು ಬರುವ ಸುದ್ದಿ ಇವರಿಗೇನಗೆ ಗೊತ್ತಯಿತು, ಈ ಆಟೋದವನು ಯಾವುದೋ ಬ್ರಾಮುಡರ ಮನೆಗೆ ತಂದು ಸಿಕ್ಕಿಸಿದ್ದಾನೆ, ಅವರು ಮಾತ್ರ ಅಪರಿಚಿತರನ್ನು ಗೌರವವಾಗಿ ಸಂಭೋಧಿಸುವ ಸುಸಂಸ್ಕೃತರು ಎಂದು ಗೊಣಗುತ್ತಾ’’. “ಇದು ಧನಂಜಯ ಶಾಸ್ತ್ರಿಗಳ ಮನೆ ತಾನೆ’’ ಎಂದೆ. “ಹೌದು ಬನ್ನಿ’’ ಎಂದರು. ತಕ್ಷಣ ನನ್ನ ಕಣ್ಣು ಮನೆ ಮುಂದೆ ಉರಿಯುವ ಕೊಳ್ಳಿ ಕಡೆ ಹೋಯಿತು. “ಶಾಸ್ತ್ರಿಗಳು ಇದ್ದಾರಾ’’ ಎಂದು ಸತೀಶ ಕೇಳೇಬಿಟ್ಟ. ಅವರು ಮೌನವಾಗಷ್ಟೆ ನಿಂತರು. ಹೊರ ಜಗಲಿಯ ಮೇಲೆ ಶಾಸ್ತ್ರಿಗಳು ಕಾಲಜ್ಞಾನ ಸಾರುವಾಗ ಧರಿಸುವ ಉಡುಪುಗಳಿಂದ ಅವರ ಹೆಣ ಸಿಂಗಾರಗೊಂಡಿತ್ತು. ಅವರ ದರುಶನ ಮಾಡಿ, ಒಂದೂ ಮಾತಾಡದೆ ಮನೆ ದಾರಿ ಹಿಡಿದೆವು. ಮಾದಿಗ ಕುಲದಿಂದ ಬಂದ ಧನಂಜಯರು ಶಾಸ್ತ್ರಿಗಳಾದ ಬಗೆ ಕೊನೆಗೂ ಅವರಿಂದ ತಿಳಿಯಲಿಲ್ಲ.

. ಇನ್ನೊಬ್ಬ ಶಾಸ್ತ್ರಿ ಹುಟ್ಟಿದ್ದಾನೆ

ಶಾಸ್ತ್ರಿಗಳು ಸತ್ತ ನಂತರ ನಾವು ಒಂದು ವರ್ಷ ಆ ಕಡೆ ತಿರುಗಿ ನೋಡಲಿಲ್ಲ, ಅವರ ಕುಟುಂಬದವರೆಲ್ಲಾ ವಿದ್ಯಾವಂತರಾಗಿ ಬೇರೆ ಬೇರೆ ಕಡೆ ನೌಕರಿ ಮಾಡಿಕೊಂಡು ಸೆಟ್ಲಾಗಿದ್ದಾರೆ, ಅವರಿಗೆ ಶಾಸ್ತ್ರಿಗಳ ವೃತ್ತಿಯನ್ನು ಮುಂದುವರಿಸುವಲ್ಲಿ ಆಸಕ್ತಿ ಇಲ್ಲ ಎಂದು ಕೇಳಿದ್ದೆ. ಆದರೆ ಅವರ ಕೊನೆಯ ಮಗ ಪರಮೇಶಿ ನಿರುದ್ಯೋಗಿಯಾಗಿ ಊರಲ್ಲೇ ಇದ್ದ. ಅವನು ಶಾಸ್ತ್ರಿಗಳ ಪರಂಪರೆ ಮುಂದುವರಿಸಿದ್ದಾನೆ ಎಂದು ಸುದ್ದಿ ಗೊತ್ತಾಯಿತು. ನಾನು ಸತೀಶನಿಗೆ “ಕೆರೆಕೊಂಡಾಪುರಕ್ಕೇ ಮತ್ತೊಮ್ಮೆ ಹೋಗಿ ಬರೋಣಾ ಬಾ’’ ಎಂದೆ. ಅವನು “ಸಾರ್, ಶಾಸ್ತ್ರಿಗಳ ಮಗ ಇದನ್ನು ಮುಂದುವರಿಸಿದರು ಅದು ಶಾಸ್ತ್ರಿಗಳ ಮುಂದುವರಿಕೆಯಾಗಿರುವುದಿಲ್ಲ, ಹೊಟ್ಟೆ ಪಾಡಿನ ಬೇರೊಂದು ತರದ ಮುಂದುವರಿಕೆಯೇ ಆಗಿರುತ್ತದೆ’’ ಎಂದ. “ಆಯ್ತು ಮಾರಾಯ, ಬೇರೊಂದು ರೀತಿ ಮುಂದುವರಿಕೆಯನ್ನಾದರು ನೋಡೋಣಾ ಬಾ’’ ಎಂದೆ.

ಒಂದು ಅಮಾವಾಸ್ಯೆ ದಿನ ನಾವು ಕೆರೆಕೊಂಡಾಪುರದ ಶಾಸ್ತ್ರಿಗಳ ಮನೆ ಮುಂದೆ ಇಳಿದೆವು. ಶಾಸ್ತ್ರಿಗಳ ಮನೆ ಮುಂದಿನ ಅಂಗಳ ತುಂಬಿತ್ತು. ಅಲ್ಲಿ ಅಂತ್ರ ಕಟ್ಟಿಸುವವರು, ಕಾಯಿ ಬರೆಸುವವರು, ತಮ್ಮ ಕಷ್ಟಗಳ ಸರಮಾಲೆಯನ್ನೇ ಒಪ್ಪಿಸುವವರು, ಕಾಯಿ ಬರೆಸುವವರು, ತಮ್ಮ ಕಷ್ಟಗಳ ಸರಮಾಲೆಯನ್ನೇ ಒಪ್ಪಿಸುವವರು ಗುಂಪುಗುಂಪಾಗಿ ನೆರೆದಿದ್ದರು. ಶಾಸ್ತ್ರಿಗಳ ಶವ ಕೂರಿಸಿದ್ದ ಜಾಗದಲ್ಲೇ ಪರಮೇಶಿ ಟೀಶರ್ಟ್ ಧರಿಸಿ, ಕೈಗೆ ವಾಚು ಕಟ್ಟಿಕೊಂಡು ಶಾಸ್ತ್ರಿಗಳು ಬರೆದಿದ್ದ ಪುಸ್ತಕಗಳನೆಲ್ಲಾ ಮುಂದೆ ಇಟ್ಟುಕೊಂಡು ತಗಡಿನ ಮೇಲೆ, ತೆಂಗಿನ ಕಾಯಿಗಳ ಮೇಲೆ, ಕುಂಡಲಿಗಳನ್ನು ಬರೆಯುತ್ತಿದ್ದ. ನಮ್ಮನ್ನು ಕಂಡು “ನಮ್ಮ ತಂದೆ ಸತ್ತ ದಿನ ಬಂದವರು’’ ಎಂದು ಗುರುತಿಸಿ ಬರಮಾಡಿಕೊಂಡ. ನಾವು ಅವನ ಮುಂದೆ ಈಗಾಗಲೇ ನೆರೆದಿದ್ದ ಗಿರಾಕಿಗಳಂತೆ ವಿನಯ ತೋರಿಸಿ ಕುಂತುಕೊಂಡೆವು. ಕೆಲಹೊತ್ತು ಸುಮ್ಮನಿದ್ದು, ನಂತರ ಮೌನ ಮುರಿದು “ಶಾಸ್ತ್ರಿಗಳ ಎಲ್ಲಾ ವಿದ್ಯೆಯನ್ನು ನೀವು ಮುಂದುವರಿಸುತ್ತಿದ್ದೀರಾ?’’ “ಇಲ್ಲಾ ಸಾರ್, ನಮ್ಮ ತಂದೆಯವರಿಗೆ ವಯಸ್ಸು ಆದಾಗಲೇ ಕಾಲಜ್ಞಾನ ಸಾರೋದು, ಊರಾಡುವುದು ನಿಂತು ಹೋಯಿತು. ಅವರು ನುಡಿದದ್ದು ಮುಕ್ಕಾಲು ಭಾಗ ನಡೆದೋಗಿದೆ, ಇದೋ ನಮ್ಮ ಈ ವೃತ್ತಿಯೂ ನಿಂತು ಹೋಗುತ್ತದೆ ಎಂದು ಅವರೇ ಸಾರಿದ್ದಾರೆ, ಅಲ್ಲಿ ತನಕ ನೋಡೋಣಾ’’ ಎಂದ.

ಅವನ ಚಾಣಾಕ್ಷತೆಗೆ ಚಾರ್ಜ್ ಆದ ಸತೀಶ ಇನ್ನೂ ಏನೇನೋ ಕೇಳುತ್ತಲೇ ಇದ್ದ. ಬೆಳಗಿನಿಂದ ಬರೆದು ಬರೆದು ಸುಸ್ತಾದವನಂತೆ ನಟಿಸುತ್ತಾ, ಈಗ ಬಂದು ಕಾಯಿ ಒಪ್ಪಿಸಿ “ಬರೆದು ಕೊಡಿ’’ ಎಂದು ಕೇಳುವವರನ್ನು ಅಸಹನೆಯಿಂದ “ನಾಳೆ ಬನ್ನಿ’’ ಎಂದು ಹೇಳುತ್ತಿದ್ದ. ಅವನು ಒಂದು ತಾಯತ ಬರೆದರೆ ಅವನಿಗೆ ಇವತ್ತು ರೂಪಾಯಿ ಸಿಗುತ್ತಿತ್ತು. ನಾವು ಪ್ರಶ್ನೆ ಕೇಳಿದಾಗಲೆಲ್ಲಾ ಅವನ ಕಂಠಪತ್ರದ ಬರಹ ನಿಲ್ಲುತ್ತಿತ್ತು. ನೆರೆದಿದ್ದ ಜನ “ಮೊದಲು ಕೆಲಸ ಆಮೇಲೆ ಮಾತು’’ ಎಂದು ನಮ್ಮನ್ನು ಆಕ್ಷೇಪಿಸುತ್ತಿದ್ದರು. ಆದರೆ ನಮ್ಮ ಮಾತುಗಳಿಂದ ಪರಮೇಶಿಯ ಸಹನೆ ಕೆಟ್ಟಿರಲಿಲ್ಲ.

ಸಂಶೋಧನೆಯ ನೆಪದಲ್ಲಿ ಒಂದು ದಿನ ಬಂದು ನಮ್ಮನ್ನು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಚಾರಕ್ಕೆ ತರುವವರು ಮತ್ತು ಖಾಯಂ ಗಿರಾಕಿಗಳು ಇಬ್ಬರನ್ನು ಪರಮೇಶಿ ಅದ್ಭುತವಾಗಿ ಮೇನೇಜು ಮಾಡುತ್ತಿದ್ದ. ಶಾಸ್ತ್ರಿಗಳಿಗಿಂತಲೂ ಒಂದು ಕೈ ಮೇಲಾಗಿಯೇ ಅವನ ಸಂಪಾದನೆ ಇತ್ತು. ಆಧುನಿಕತೆ ಬೆಳೆದಂತೆ ಸಂಪ್ರದಾಯಗಳು ಕ್ಷೀಣಿಸಿ ಹೋಗುತ್ತವೆ ಎನ್ನುವ ಮಾಮೂಲಿ ಹೇಳಿಕೆಗೆ ವ್ಯತಿರಿಕ್ತವಾಗಿತ್ತು ಆ ದೃಶ್ಯ. ಸತೀಶನನ್ನು ಅಲ್ಲೇ ಬಿಟ್ಟು ಹೊರಗೆ ಬಂದು, ತಾಯತ ಪಡೆದು ಅವನ ಕಾಲಿಗೆ ನಮಸ್ಕಾರ ಮಾಡಿ ಹೊರೆಗೆ ಹೋಗುವವರನ್ನು ತಡೆದು “ನೀವು ಯಾವ ಮತ’’ (ಜಾತಿ) ಎಂದು ಪ್ರಶ್ನಿಸುತ್ತಿದ್ದೆ. ಶ್ರೇಣೀಕೃತ ವ್ಯವಸ್ಥೆಯ ಅತ್ಯಂತ ಕೆಳಸ್ತರದಲ್ಲಿರುವ ಮಾದಿಗರ ಹುಡುಗನಿಗೆ ಲಿಂಗಾಯತ, ಒಕ್ಕಲಿಗ, ಕುರುಬ, ಬೇಡ, ಸಕಲೆಂಟು ಜಾತಿಗಳು ಪಾದಮುಟ್ಟಿ ನಮಸ್ಕಾರ ಮಾಡುತ್ತಿದ್ದರು, ಬಾಲಬಸಪ್ಪಗಳ ಪರಂಪರೆ ಕಲಿಸಿದ ಬಹುದೊಡ್ಡ ಗುಣ ಇದು.

. ತುಂಗಭದ್ರೆಯಿಂದಲೇ ಗೋಣಿ ಬಸಪ್ಪನ ಗದ್ದುಗೆ ಮುಳುಗಿಸುವ ಸಿಂಗಟಾಲೂರು ನೀರಾವರಿ ಯೋಜನೆ

01_35_GBK-KUH

ಮುಳುಗಡೆಯಾಗಲಿರುವ ಗೋಣಿ ಬಸಪ್ಪನ ಗದ್ದುಗೆ – ಗುಮ್ಮಗೋಳ

ಈ ಪುಸ್ತಕ ಬರುವ ಹೊತ್ತಿಗೆ ಗೋಣಿಬಸಪ್ಪನ ಗದ್ದುಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಳುಗಿ ಹೋಗುತ್ತದೆ. ನದಿ, ಗುಡ್ಡು, ಫಲವತ್ತಾದ ಸಾವಿರಾರು ಎಕರೆ ಭೂಮಿ, ತುಂಬಾ ಸುಂದರ ಪರಿಸರ. ಕಾವ್ಯದಲ್ಲಿ ಹಮ್ಮಿಗೆ ಹೊಳೆ ಎಂಬ ಹೆಸರಿನಲ್ಲಿ ತುಂಗಭದ್ರೆ ಕಾಣಿಸಿಕೊಳುತ್ತಾಳೆ. ಗೋಣಿ ಬಸಪ್ಪ ತನಗೆ ಕಷ್ಟ ಬಂದಾಗಲೆಲ್ಲ ತುಂಗಭದ್ರೆಯ ಮೊರೆಹೋಗುತ್ತಾನೆ. ಬೇಡರ ಸೈನ್ಯ ಗೋಣಿಬಸಪ್ಪನನ್ನು ಹಿಮ್ಮೆಟ್ಟಿ ಬಂದಾಗ ತುಂಗೇ ತನ್ನನ್ನೇ ಸೀಳಿಕೊಂಡು ದಾರಿ ಮಾಡಿಕೊಡುತ್ತಾಳೆ. ಅವನಿಗೆ ಬೇಸರವಾದಾಗಲೆಲ್ಲಾ ಅಳಿಲುಗೊಂಗಡಿ ಹಾಸುಕೊಂಡು ನದಿ ಮೇಲೆ ಕೂರುತ್ತಾನೆ, ಅದು ಅವನನ್ನು ಮುಳಿಗಿಸದೇ ತೇಲಿಸುತ್ತಾ ಅವನ ಕಷ್ಟವನ್ನು ನಿವಾರಿಸುತ್ತದೆ. ತಣ್ಣಗೆ ಹರಿಯುವ ಹೊಳೆ ಇಂದು ಅವನ ಗದ್ದುಗೆಯನ್ನೇ ಮುಳಿಗಿಸಬೇಕಾದ ಸಂಕಟಕ್ಕೆ ಸಿಕ್ಕಿಕೊಂಡಿದೆ. ಗವಿತಾಯಮ್ಮ ಮಾತಾಡಿದ ಗುಡ್ಡಗಳು, ಗೋಣಿ ಬಸಪ್ಪನನ್ನು ಹೊತ್ತು ಮೆರೆದ ಹುಲಿಗಳು, ಯಾವ ಸ್ಮೃತಿಗಳು ಗುಮ್ಮಗೋಳದ ಭೂಮಾಲಿಕರಿಗಾಗಲೀ ಮಠದವರಿಗಾಗಲೀ ಇಲ್ಲ. ವಿಷಾದಗಳೇ ಇಲ್ಲದೆ ಅವರು ಸರ್ಕಾರ ಕೊಡುವ ಲಕ್ಷಾಂತರ ರೂಪಾಯಿ ಪರಿಹಾರಧನದ ಕನಸು ಕಾಣುತ್ತಿದ್ದಾರೆ. ಮಠದವರಿಗೆ ಮುಳುಗಡೆಯಿಂದ ಕೋಟಿಗಟ್ಟಲೇ ದುಡ್ಡು ಬರುತ್ತದೆಯಂತೆ. ಅವರು ಹೊಸಪೇಟೆಯಲ್ಲಿ ಮಲ್ಲಿಗೆ ತರದ ಹೋಟೆಲ್ ಒಂದನ್ನು ಓಪನ್ ಮಾಡಿ ಶ್ರೀಮಂತರಾಗುವ ಕನಸು ಕಾಣುತ್ತಿದ್ದಾರೆ. ಅಸಂಖ್ಯಾತ ಶಿಲಾಮೂರ್ತಿಗಳಿರುವ ದೇವಸ್ಥಾನವನ್ನು ಇನ್ನೊಂದು ಕಡೆಯಾದರು ಪುನರ್ ಸ್ಥಾಪಿಸುವ ಬಗ್ಗೆ ಯಾವ ಪ್ರಯತ್ನಗಳು ನಡೆದಿಲ್ಲ. ಈ ತರದ ಮುಳುಗಡೆಗೆ ಆಸಕ್ತವಾಗಿರುವವರು ಭೂಮಾಲೀಕರು. ಏಕೆಂದರೆ ಅವರು ಭೂಮಿಯಿಂದ ಸಂಪಾದನೆ ಮಾಡುತ್ತಿದ್ದ ನೂರು ಪಟ್ಟು ಹಣ ಈಗ ಸಿಗುವ ಕಾಲ. ಮುಂದೆ ಯಾವ ಕಸುಬು ನಮ್ಮದು ಎಂಬುದು ಗೊತ್ತಿಲ್ಲ. ಆದರೆ ಕೋಟಿ ರೂಪಾಯಿಗಳ ಕನಸು ಮಾತ್ರ ಇದೆ. ಅವರು ಅರಿವಿಲ್ಲದಂತೆ ದುಡ್ಡನ್ನು ಹಾಳು ಮಾಡುವ ದುರಂತಕ್ಕೆ ಸಿದ್ಧರಾಗಿದ್ದಾರೆ. ಅವರು ಜಮೀನುಗಳನ್ನು ಕೇಳುವವರಿಲ್ಲ. ಪ್ರಗತಿಯ ಬೆನ್ನಹತ್ತಿದ ಸರ್ಕಾರ ಕೋಟಿ ರೂಪಾಯಿಯ ಕನಸುಗಳನ್ನು ಹುಟ್ಟಾಕಿದೆ. ನಿರ್ವಸತಿ ಕೇಂದ್ರಗಳಿಗೆ ಹೋಗಲು ನಿರಾಕರಿಸುತ್ತಿರುವವರು ಇವರ ಹೊಲ ಗದ್ದೆಗಳಲ್ಲಿ ದುಡಿದ ಭೂಹೀನರು ಮತ್ತು ಕೂಲಿಕಾರರು ಅವರಿಗೆ ಸರ್ಕಾರ ಮನೆ ಕೊಡುತ್ತದೆ. ಸರಿ, ಆದರೆ ದುಡಿಯಲು ಭೂಮಿಯೇ ಇಲ್ಲವಲ್ಲ ಎಂಬ ಆತಂಕ ಅವರದು. ಇನ್ನು ಮುಂದೆ ಗೋಣಿ ಬಸಪ್ಪನ ಜಾತ್ರೆ, ಆಚರಣೆ, ಹಬ್ಬ ಹರಿದಿನ ಯಾವುದೂ ಇರುವುದಿಲ್ಲ. ಈ ಸಾಂಸ್ಕೃತಿಕ ಶೂನ್ಯತೆಯನ್ನು ತುಂಬುವುದಾದರೂ ಹೇಗೆ? ಸರ್ಕಾರಗಳು ಪ್ರಗತಿಯ ಹೆಸರಿನಲ್ಲಿ ಈತರದ ಯೋಜನೆಗಳನ್ನ ತರುವಾಗ ಈ ತರದ ಸಾಂಸ್ಕೃತಿಕ ಸಂಗತಿಗಳಿಗೂ ಅಷ್ಟೇ ಮಹತ್ವ ಕೊಡಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಾಗಲಕೋಟೆ ಮುಳುಗಿದಾಗ ಬಬುಲಾದಿಯ ಯರನಾಳಸ್ವಾಮಿ ಗದ್ದುಗೆ ಹೇಳ ಹೆಸರಿಲ್ಲದಂತೆ ಮುಳುಗಿಹೋಯಿತು. ಅಲ್ಲಿ ಅತಿಯಾಗಿ ಮದ್ಯಪಾನ ಮಾಡುವವರನ್ನು ಅದರಿಂದ ಬಿಡುಗಡೆಗೊಳಿಸುವ ಒಂದು ಆಚರಣೆ ಇತ್ತು. ಈಗ ಪುನರ್ವಸತಿ ಕೇಂದ್ರಗಳಲ್ಲಿ ಅವರು ಯಾವ ಕೆಲಸಗಳು ಇಲ್ಲದೆ ಅನಾಥರಾಗಿ ಬದುಕುತ್ತಿದ್ದಾರೆ. ಆದ್ದರಿಂದ ಈ ತರದ ಗದ್ದುಗೆ ಆಚರಣಾ ಕೇಂದ್ರಗಳನ್ನು ಪುನಃ ಸ್ಥಾಪಿಸುವ ಕೆಲಸಗಳನ್ನು ಮಾಡದಿದ್ದರೆ, ಯೋಜನೆಗಳನ್ನ ಯಾರಿಗಾಗಿ ಮಾಡುತ್ತಾರೋ ಅವರೇ ಸಾಂಸ್ಕೃತಿಕವಾಗಿ ಅನಾಥರಾಗುತ್ತಾರೆ. ಮುಳುಗಡೆಯಾಗುತ್ತಿರುವ ಗುಮ್ಮಗೋಳದ ಬಸಪ್ಪನ ಗದ್ದುಗೆಗೆ ನಡೆದುಕೊಳ್ಳುವ ಭಕ್ತರು ಈ ಸಮಸ್ಯೆಗಳಿಂದ ಹೊರತಾಗಿಲ್ಲ.

ಶಾಸ್ತ್ರಿಗಳ ಹುಡುಕಾಟ, ತುಮನೆಪ್ಪನಿಂದ ಮೊದಲ ಸುತ್ತಿನ ಕಾವ್ಯ ಸಂಗ್ರಹ, ವಿ.ವಿ. ಕೆಲಸಗಳು ಇತ್ಯಾದಿಗಳು ಮುಗಿಯುವಲ್ಲಿ ಮತ್ತೇ ಕೂಲಳ್ಳಿ ಜಾತ್ರೆ ಬಂತು. ನಾವು ಕೂಲಳ್ಳಿಗೆ ಹೋದೆವು. ಈಗ ನಮ್ಮ ಗಮನ ಗೋಣಿ ಬಸಪ್ಪನ ಮೇಲೆ. ಏಕೆಂದರೆ ಕಾವ್ಯ ಓದಿದ ಮೇಲೆ ಈ ಪರಂಪರೆಯ ಕೇಂದ್ರ ವ್ಯಕ್ತಿ ಅವನಾಗಿದ್ದ. ದೇವದಾಸಿಯ ಮಗನಾದ ಗೋಣಿ ಬಸಪ್ಪ ದೈವವಾಗಲು ಮಾಡಿದ ಸಂಘರ್ಷಗಳು ರೋಚಕವಾಗಿದ್ದವು. ಪ್ರಬಲಕೋಮಿನವರು ಅವನಿಗೆ ಕೊಟ್ಟ ಶಿಕ್ಷೆ ಒಂದೆರಡಲ್ಲ. ಅದನ್ನು ಕಾವ್ಯದಲ್ಲಿ ಅವನು ಪವಾಡಗಳ ಮೂಲಕ ಗೆಲ್ಲುತ್ತಾನೆ. ಆದರೆ ವಾಸ್ತವದಲ್ಲಿ ಅವನು ಕೂಲಹಳ್ಳಿಯಿಂದ ರಾತ್ರೋರಾತ್ರಿ ಗಡೀಪಾರಾಗಿ ಗುಮ್ಮಗೋಳದಲ್ಲಿ ಸಮಾಧಿಯಾಗಬೇಕಾಯಿತು. ನೀವು ಕೂಲಳ್ಳಿ ಜಾತ್ರೆಗೆ ಹೋದರೆ ಅಲ್ಲಿ ಸೀಮೆಎಣ್ಣೆ ದೀಪ ಹಿಡಿದುಕೊಂಡ ಕೆಲವು ಹುಡುಗರು ಮೊದಲು ಗವಿ ತೋರಿಸುವ ಕೆಲಸ ಮಾಡುತ್ತಾರೆ. ಗವಿಯ ಕಾಲುಭಾಗಕ್ಕೆ ಹೋದರೆ ಅಲ್ಲಿ ಒಂದು ಗರಡಿ ಮನೆ, ಓಕುಳಿ ಹೊಂಡ, ಓದುವ ಶಾಲೆ, ಎಲ್ಲ ಸಿಗುತ್ತದೆ. ಅಲ್ಲಿಂದ ಮುಂದೆ ಹೋಗಲು ಸಾಧ್ಯವಿಲ್ಲ. “ಇದು ಗುಮ್ಮಗೋಳದ ತನಕ ಹೋಗುತ್ತದೆ’’ ಎಂದು ಹೇಳಿ ವಾಪಸ್ಸು ಕರೆದುಕೊಂಡು ಬರುತ್ತಾರೆ. ಇದು ನೋಡಿದರೆ ಸಂತರ ಪರಂಪರೆ ಇವರಿಗೆ ಗವಿಯಲ್ಲಿ ಸಾಮವಿದ್ಯೆ ಕಲಿಯುವ ಅಗತ್ಯವೇನಿತ್ತು ಎಂದು ಆಶ್ಚರ್ಯವಾಗುತ್ತದೆ. ನಿಜವಾಗಿ ಈ ಸಂತರು ತಮ್ಮ ಉಳಿವಿಗಾಗಿ ಎಲ್ಲ ಯುದ್ಧಕಲೆಗಳನ್ನು ಕಲಿತಿದ್ದಾರೆ. ಕಾವ್ಯದ ಕೊನೆಯಲ್ಲಿ ಗೋಣಿಬಸವ ತನ್ನ ಸೋದರ ಮಾವ ಚಿಗಟೇರಿ ಶಿವನಯ್ಯನನ್ನು ತಾನು ಕೊಲ್ಲದೆ ಪಿಕಿನಗೌಡರ ಮಕ್ಕಳಿಗೆ ಸಾಮವಿದ್ಯೆಯನ್ನು ಕಲಿಸಿ ಅವರಿಂದ ಕೊಲ್ಲಿಸುತ್ತಾನೆ. ನಾವು ಗವಿದಾರಿಯಿಂದಲೇ ಗುಮ್ಮಗೋಳಕ್ಕೆ ಹೋಗಬೇಕು ಎನ್ನುವ ಆಸೆ ಇದ್ದರೂ ಧೈರ್ಯ ಸಾಲದೆ ಹಿಂತಿರುಗಿದೆವು.

. ಕತೆಯನ್ನು ಹಾಡುವ ಕಲಾವಿದ ತುಮನೆಪ್ಪಾ ಒಬ್ಬನೇ ಏಕೆ?

ಹಿಂದೆ ನೆಪಿಸಿದ ಹಾಗೆ ಒಂದು ಸಂಪ್ರದಾಯದ ಅವಿಭಾಜ್ಯ ಅಂಗವಾಗಿರುವ ಕಾವ್ಯ, ಆ ಸಂಪ್ರದಾಯ ಬೆಳೆದರೆ ತಾನು ಬೆಳೆಯುತ್ತದೆ.ಬಾಲಬಸಪ್ಪಗಳ ಸಂಪ್ರದಾಯದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅನಿವಾರ‍್ಯವಾಗಿ ಬಾಲ ಬಸವಿಯ ರಾಗಬೇಕಾದ್ದರಿಂದ ಮುಂದಿನ ಪೀಳಿಗೆಯವರು ಈ ಸಂಪ್ರದಾಯವನ್ನು ಬಿಡುತ್ತಿದ್ದಾರೆ. ತುಮನೆಪ್ಪನ ವಿವಾಹಿತ ಪತ್ನಿಯ ಮಗ ಬಾಲಬಸವ ದೀಕ್ಷೆಯನ್ನು ಸ್ವೀಕರಿಸಿಲ್ಲ. ಅವನು ಕೂಲಹಳ್ಳಿಯ ಮಾದರ ಕುಲದ ಹೆಣ್ಣೊಂದನ್ನು ಮದುವೆಯಾಗಿ ಅದೇ ಕುಲದಲ್ಲಿ ಮುಂದುವರಿದಿದ್ದಾನೆ. ಆದರೆ ತುಮನೆಪ್ಪನ ಉಪಪತ್ನ ಮತ್ತು ಮಕ್ಕಳು ಹಿಮ್ಮೇಳದಲ್ಲಿ ಇದ್ದಾರೆ. ಅವರು ಈ ಕಥನದ ಮುಂದಿನ ವಾರಸುದಾರರಾಗುತ್ತಾರೊ ಇಲ್ಲವೋ ಭವಿಷ್ಯದ ಮಾತು. ಈಗಂತೂ ಗೋಣಿ ಬಸಪ್ಪನ ಕತೆಯನ್ನು ಹಾಡಲು ಉಳಿದಿರುವ ಏಕೈಕ ಕಲಾವಿದ ತುಮನೆಪ್ಪ, ಆದ್ದರಿಂದ ನಮಗೆ ಬಹು ಪಠ್ಯಗಳನ್ನು ನೋಡಿ ಅಂತರ್ ಪಠ್ಯೀಯತೆ ಏಕೆ ಸೃಷ್ಟಿಯಾಗುತ್ತದೆ ಎಂಬುದನ್ನು ಹುಡುಕುವ ಸಮಸ್ಯೆ ಬರಲಿಲ್ಲ. ಆದರೆ ಕಲಾವಿದನ ಪ್ರತಿ ಪ್ರದರ್ಶನವು ಪ್ರತಿ ಪಠ್ಯಗಳಾಗಿ ರೂಪುಗೊಂಡಿರುತ್ತದೆ. ಇದರಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಾಗೇ ಉಳಿದಿತ್ತು. ನಾವು ಮೊದಲು ಗೊಲ್ಲರ ಹಟ್ಟಿಯಲ್ಲಿ ತುಮನೆಪ್ಪನ ಗುಡಿಸಲ ಮುಂದೆ, ಸಂಗ್ರಹ ಮಾಡಿದ್ದ ಪಠ್ಯವನ್ನು ಲಿಪ್ಯಂತರ ಮಾಡಿಕೊಂಡು ಮತ್ತೊಮ್ಮೆ ಅದೇ ಕಾವ್ಯವನ್ನು ಹಾಡಲು ಹೊಸಪೇಟೆಯ ನಮ್ಮ ಮನೆಗೆ ಕರೆಸಿಕೊಂಡೆವು. ಅವನಿಗೆ ಈ ವಾತಾವರಣ ಮುಜುಗರವಾಗಬಾರದೆಂದು ನಮ್ಮ ಮನೆ ಹಿಂದಿನ ಗುಡಿಸಿಲಿನಲ್ಲಿ ಕತೆಗೆ ಹಚ್ಚಿದೆವು. ಮೊದಲ ದಿನ ಗೋಣಿ ಬಸಪ್ಪನ ಕತೆ ಒಂದು ರಾತ್ರಿಯ ಕತೆ, ಬೆಳಗಿನ ಜಾವ ಐದು ಗಂಟೆಗೆ ಕತೆ ಮುಗಿಯಿತು. ಎರಡನೇ ದಿನ ಮರುಳಸಿದ್ಧನ ಕತೆ ಮಾಡಿಸಿದೆವು. ನಂತರ ತಂಡಕ್ಕೆ ಒಂದು ಸಿಹಿ ಊಟಕ್ಕೊಟ್ಟ ಬೀಳ್ಕೊಟ್ಟೆವು. ಮತ್ತೆ ಈ ಪಠ್ಯವನ್ನು ಲಿಪ್ಯಂತರ ಮಾಡಿ ಈ ಕಾವ್ಯಕ್ಕೆ ಮಾತ್ರ ಒಗ್ಗುವ ವರ್ಣನೆಗಳು ಯಾವುವು ಎಂಬ ಔಚಿತ್ಯವನ್ನು ಗುರುತು ಮಾಡಿ ಅವನ್ನು ಮಾತ್ರ ಪಠ್ಯದಲ್ಲಿ ಉಳಿಸಿಕೊಳ್ಳಲಾಗಿದೆ. ಮತ್ತೊಂದು ಬದಲಾವಣೆ ಎಂದರೆ ಎರಡು ಪ್ರದರ್ಶನಗಳಲ್ಲೂ ಬಿಡದೆ ಹಾಡಿದ ಘಟನೆಗಳನ್ನು ಉಳಿಸಿಕೊಂಡು ಅಲ್ಲಿ ಹಾಡಿದ್ದನ್ನು ಇಲ್ಲಿ ಏಕೆ ಬಿಟ್ಟ ಮತ್ತು ಅಲ್ಲಿ ಬಿಟ್ಟದನ್ನು ಇಲ್ಲೇಕೆ ಹಾಡಿದ ಎಂದು ತಾಳೆನೋಡಿ ಉಚಿತವೆನಿಸಿದ ಭಾಗಗಳನ್ನು ಉಳಿಸಿಕೊಂಡು ಪುನರಾವರ್ತನೆಯನ್ನು ಡಿಲಿಟ್ ಮಾಡಲಾಗಿದೆ. ಗೋಣಿ ಬಸಪ್ಪನ ಪಠ್ಯ ಅಥವಾ ತುಮನೆಪ್ಪ ಹಾಡುವ ಪಠ್ಯಗಳಲ್ಲಿ ಪ್ರದರ್ಶನಕ್ಕೆ ಪ್ರಾಮುಖ್ಯತೆ ಇಲ್ಲ. ತುಮನೆಪ್ಪನ ಎರಡು ಪ್ರದರ್ಶನಗಳನ್ನು ಗಮನಿಸಿ ಪಠ್ಯವನ್ನು ಲಿಪ್ಯಂತರ ಮಾಡಿ ನೋಡಿದಾಗ ಪಠ್ಯಗಳಲ್ಲಿ ಎದ್ದು ಕಾಣುವ ಬಿನ್ನತೆಗಳು ಇರಲಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಹಲವಾರು ಸಂಗತಿಗಳು ಗೋಚರಿಸುತ್ತವೆ. ಒಂದು: ಇದು ಇನ್ನು ಆಚರಣಾತ್ಮಕ ಗುಣಗಳಿಂದ ಬಿಡುಗಡೆಗೊಂಡು ಮುಂದೆ ಕುಂತ ಪ್ರೇಕ್ಷಕರ ಮನೋಭಾವಕ್ಕೆ ತಕ್ಕಂತೆ ವರ್ತಿಸುವುದಿಲ್ಲ. ತುಮನೆಪ್ಪ ಮುಂದೆ ಕುಂತ ನಮ್ಮನ್ನು ನೋಡುತ್ತಲೇ ಇರಲಿಲ್ಲ, ಹಿಮ್ಮೇಳವಂತು ಮಲೆ ಸುರಿವಂತ ತಾಳ ಲಯ ಕಿಂಚಿತ್ತು ಬದಲಾಗದಂತೆ ಹಾಡುತ್ತಿತ್ತು. ಈ ಕಾರಣದಿಂದ ಇದು ಆಚರಣಾ ಪಠ್ಯ. ಪ್ರದರ್ಶನ ಮಾಡುವುದು ಇದರ ಮುಖ್ಯಲಕ್ಷಣವಲ್ಲ. ಆದ್ದರಿಂದಲೇ ಬೇರೆ ಬೇರೆ ಪ್ರದರ್ಶನಗಳಲ್ಲಿ ಹೆಚ್ಚು ಭಿನ್ನತೆ ಕಾಣಿಸಲಿಲ್ಲ. ಎರಡನೇ ಸಂಗತಿ: ಹೆಚ್ಚು ತಂಡಗಳು ಇದನ್ನು ಹಾಡುತ್ತಿದ್ದಾಗ ಕಲಾವಿದನಿಗೆ ತನ್ನ ಅನನ್ಯತೆ ಏನು ಎಂಬ ಪ್ರಶ್ನೆ ಹುಟ್ಟಿ ಸ್ಪರ್ಧಾತ್ಮಕ ಮನೋಭಾವ ಬೆಳೆದು ಅಂತರ್ ಪಠ್ಯಗಳು ಸೃಷ್ಟಿಯಾಗುತ್ತವೆ. ನೀಲಗಾರರಲ್ಲಿ ಇದು ಎದ್ದು ಕಾಣುತ್ತದೆ. ಒಂದು ಪಠ್ಯವನ್ನು ಇನ್ನೊಂದು ಪಠ್ಯದೊಡನೆ ಇಡಲು ಸಾಧ್ಯವೇ ಇಲ್ಲ ಅಷ್ಟು ಭಿನ್ನತೆಗಳು ಇವೆ. ಇಲ್ಲಿ ತುಮನೆಪ್ಪನಿಗೆ ಆ ತರದ ಸ್ಪರ್ಧೆಗೆ ಅವಕಾಶವೇ ಇಲ್ಲ. ಆದ್ದರಿಂದ ಅವನು ಹಾಡುವ ಪಠ್ಯಗಳಲ್ಲಿ ಬೇರೊಬ್ಬರಿಂದ ಪಡೆಯುವ, ಅದನ್ನು ಇನ್ನಷ್ಟು ಉತ್ತಮಗೊಳಿಸುವ ಅಗತ್ಯವೇ ಬಂದಿಲ್ಲ.

ಬಾಲಬಸವ ಸಂಪ್ರದಾಯದ ಮೊದಲ ಸುತ್ತಿನ ಈ ಕೆಲಸಕ್ಕೆ ತುಮನೆಪ್ಪ ಮತ್ತು ಹಿಮ್ಮೇಳದಲ್ಲಿ ಅವನ ಪತ್ನಿ ಹನುಮಕ್ಕ, ಮಗ ಬಸವರಾಜ ಸಹಕರಿಸಿದ್ದರಿಂದ ಇದು ಅಕ್ಷರ ಜಗತ್ತಿಗೆ ಪರಿಚಯವಾಗುತ್ತಿದೆ. ನಾನು ಮೊದಲೇ ಹೇಳಿದ ಹಾಗೆ ಈ ಸಮಸ್ಯಾತ್ಮಕ ಸಂಪ್ರದಾಯದಿಂದ ಬಿಡುಗಡೆಗೊಳ್ಳದೆ ತುಮನೆಪ್ಪ ಅನೇಕ ಇಕ್ಕಟ್ಟುಗಳಲ್ಲಿ ಈ ಕಾವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾನೆ. ಮೊದಲ ಕೀರ್ತಿ ಅವನಿಗೆ ಮತ್ತು ಅವನ ಮನೆಯ ತಂಡಕ್ಕೆ ಸಲ್ಲಬೇಕು.

ಈ ಸಂಪ್ರದಾಯದ ಅನೇಕ ವಕ್ತೃಗಳು ನನಗೆ ಮಾಹಿತಿ ಕೊಟ್ಟಿದ್ದಾರೆ. ಅವರ ಹೆಸರುಗಳನ್ನು ನಾನು ಈಗಲೇ ತಿಳಿಸುವುದಿಲ್ಲ, ಏಕೆಂದರೆ ನನ್ನ ಎರಡನೇ ಸುತ್ತಿನ ಕೆಲಸ ಇನ್ನೂ ಮುಗಿದಿಲ್ಲ. ಯೋಜನೆ ಪೂರ್ಣಗೊಳ್ಳುವವರೆಗೆ ಅವರ ಒಡನಾಟದಲ್ಲಿ ಇರುತ್ತೇನೆ. ಗೆಳೆಯ ಸತೀಶ ನನ್ನೊಡನೆ ಹೆಣಗಾಡಿದ್ದಾನೆ, ಅದು ಕ್ಷೇತ್ರಕಾರ್ಯದಿಂದ ಹಿಡಿದು ಹಸ್ತಪ್ರತಿ ಸಿದ್ಧಗೊಳಿಸುವವರೆಗೆ ಅವನ ನೆರವು ಪಡೆದಿದ್ದೇನೆ. ಕೆರೆಕೊಂಡಾಪುರದ ಡಾ. ಎಲ್ಲಪ್ಪ, ಪರಮೇಶಿ, ಬಸವಣ್ಣನವರು ಗುಮ್ಮಗಳದ ಜನತೆ, ಮಠದ ಸ್ವಾಮಿಗಳ ಮಕ್ಕಳಾದ ದಿವಾಕರ, ಪ್ರಭಾಕರ, ಕೂಳ್ಳಿ ಭಕ್ತರು, ಹೀಲದಲ್ಲಿಯ ಬಾಲಬಸಪ್ಪಗಳು, ಇವರೆಲ್ಲಾ ನನ್ನ ಸ್ಮೃತಿಯಲ್ಲಿ ಉಳಿದಿದ್ದಾರೆ.

ಯೋಜನೆಗೆ ನಿರಂತರ ಸಹಕಾರ ನೀಡುತ್ತಿರು ವಿಶ್ವವಿದ್ಯಾಲಯದಲ್ಲಿ ಮಾನ್ಯ ಕುಲಪತಿಗಳು ಮತ್ತು ವಿಭಾಗದ ಪ್ರಾಧ್ಯಾಪಕರಾದ ಪ್ರೊ. ರಹಮತ್ ತರೀಕೆರೆ, ಡಾ. ಅಮರೇಶ ನುಗಡೋಣಿ, ಡಾ. ಬಿ.ಎಂ.ಪುಟ್ಟಯ್ಯ ಮತ್ತು ಕಛೇರಿಯ ಮಿತ್ರ ಕೋಳೂರು ಶಿವಲ್ಪ, ಸಂಶೋಧನ ವಿದ್ಯಾರ್ಥಿಯಾದ ಶ್ರೀ ಗಾದೆಪ್ಪ ಇವರೆಲ್ಲರ ಸಹಕಾರವನ್ನು ನೆನೆಯುತ್ತೇನೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಜೊತೆ ಈ ತರದ ಒಂದು ಸಂಪ್ರದಾಯ ನಮ್ಮಲ್ಲಿ ಇದೆ ಎಂದು ಗಮನಕ್ಕೆ ತಂದಾಗ ಅವರು ಆಸಕ್ತಿಯಿಂದ ನನ್ನ ಮುಂದಿನ ಕೆಲಸಗಳನ್ನು ಗಮನಿಸುತ್ತಾ ಬಂದಿದ್ದಾರೆ. ಅವರು ನಿರ್ದೇಶಕರಾಗಿರುವಾಗಲೇ ಈ ಯೋಜನೆ ಮೊದಲ ಕಂತಿನ ಕಾವ್ಯ ಪ್ರಕಟವಾಗುತ್ತಿದೆ. ಅವರಿಗೆ ನನ್ನ ಕೃತಜ್ಞತೆಗಳು. ಕೆ.ಕೆ. ಮಕಾಳಿ ಮುಖಪುಟ ಮಾಡುವುದಷ್ಟೇ ಅಲ್ಲದೆ ಬಾಗಳಿ, ಕೂಲಹಳ್ಳಿ, ಹಮ್ಮಿಗೆ, ಗುಮ್ಮಗೋಳ, ಸಿಂದೋಗಿಗೆ ಬಂದು ಫೋಟೋಗ್ರಾಪ್ಸ್ ಮಾಡಿದ್ದಾರೆ. ಅವರಿಗೆ ಕೃತಜ್ಞತೆಗಳು. ರೇಖಾಚ್ರಿಗಳನ್ನು ಬರೆದು ಕೊಟ್ಟ ಕಲಾವಿಭಾಗದ ಅಧ್ಯಾಪಕಿ ಕು. ಚರಿತಾಳಿಗೆ ಮತ್ತು ಸಹಾಯಕ ನಿರ್ದೇಶಕರಾದ ಸುಜ್ಞಾನಮೂರ್ತಿ ಪ್ರಕಟಣೆಯ ಹಂತದಲ್ಲಿ ಸಹಕರಿಸಿದ್ದಾರೆ ಅವರಿಗೆ ಕೃತಜ್ಞತೆಗಳು. ಯೋಜನೆಯ ಪ್ರಾರಂಭ ಕಾಲದಿಂದಲೂ ಬರೆದುಕೊಟ್ಟದನ್ನೆಲ್ಲಾ ಟಪಟಪನೇ ಟೈಪು ಮಾಡಿ ನನ್ನ ಬೆರಗುಗೊಳಿಸಿದ ಶರಣಬಸವನ ಸಹಕರಾ ನೆನೆಯುತ್ತಾ ಈ ಯೋಜನೆಯ ಮೊದಲ ಪುಟಗಳನ್ನು ಮುಗಿಸುತ್ತೇನೆ.