. ಕಲ್ಯಾಣವೆಂಬ ಕಲ್ಯಾಣ

ಕುಲ ಮತ್ತು ಕಸುಬು ಎರಡನ್ನು ಕಳೆದುಕೊಂಡ ಸೂಕ್ಷ್ಮ ಅಲ್ಪಸಂಖ್ಯಾತ ಗುಂಪೊಂದನ್ನು ಕೇಂದ್ರವಾಗಿಸಿಕೊಂಡು ‘ದೇವ-ದೇವಿ’ ಕೃತಿಯನ್ನು ಬರೆದೆ. ಕುಲ ಮತ್ತು ಜಾತಿ ಹೇಗೆ ಅಭಿನ್ನ, ಜಾತಿಯಾಧಾರಿತ ಸರ್ಕಾರಿ ಮೀಸಲಾತಿಯಿಂದ ಕುಲಮೂಲ ಗುಂಪುಗಳು ಹೇಗೆ ಹೊರಗುಳಿದುಬಿಡುತ್ತದೆ, ಎಂಬುದನ್ನು ನನ್ನ ಅಧ್ಯಯನದ ಮುಖ್ಯ ಪ್ರಮೇಯವಾಗಿತ್ತು.

ಇದಕ್ಕೆ ಆಕರಗಳನ್ನು ಒದಗಿಸಲು ಪ್ರಬಲಕೋಮಿನವರು, ಫ್ಯೂಡಲ್ ಕ್ಲಾಸಿನವರು ಈ ಗುಂಪಿನ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಅವರನ್ನು ಕುಲದಿಂದ ಹೊರಗಾಗುವಂತೆ ಮಾಡುವುದು, ಮುಂದೆ ಈ ತರದ ಶೋಷಣೆಗೆ ಒಳಗಾದ ಕುಟುಂಬಗಳೇ ಒಂದು ಗುಂಪಾಗಿ ತಮ್ಮ ತರದ ಸಾಮ್ಯತೆ ಇರುವ, ಕುಲದಿಂದ ಹೊರಗಾದವರೊಡನೆ ವೈವಾಹಿಕ ಸಂಬಂಧ ಬೆಳೆಸಿ ಸಂತಾನ ಕಾಪಾಡಿಕೊಂಡು ಕುಲ ಜಾಗೃತಿಯೇ ಮುಖ್ಯವಾಗಿಸಿಕೊಳ್ಳುವುದು ಇತ್ಯಾದಿಗಳನ್ನು ವಿವರಿಸಿ, ಇದು ನನ್ನ ಅಧ್ಯಯನದ ಮುಖ್ಯ ಫಲಿತ ಎಂದು ನಂಬಿಕೊಂಡಿದ್ದೆ. ಆದರೆ ಈ ಕೃತಿಯನ್ನು ಓದಿದ ಅದೇ ಕುಲದ ಕೆಲವು ಮಂದಿ ಪ್ರತಿಕ್ರಿಯಿಸಿದ ರೀತಿ ನನ್ನನ್ನು ದಂಗು ಬಡಿಸಿತು. ಕುಲದ ಆಂತರಿಕ ಸಂಗತಿಯೊಂದನ್ನು ನೀವು ಬಹಿರಂಗ ಪಡಿಸಿದರೆ ಕುಲಕ್ಕೆ ಅವಮಾನ ಮಾಡುವುದನ್ನು ಬಿಟ್ಟರೆ ನಿಮ್ಮ ಅಧ್ಯಯನದಿಂದ ಯಾವ ಪ್ರಯೋಜನವು ಇಲ್ಲ ಎಂದು ಬೇಸರ ಮಾಡಿಕೊಂಡರು. ಈ ಕುರಿತು ನಾನು ಮತ್ತೊಮ್ಮೆ ಅವರೊಂದಿಗೆ ಮಾತು ಕತೆ ಮಾಡಿದಾಗ ಅವರ ನಿಲುವು ನನಗೆ ಸರಿಯೆನಿಸಿತು. ಏಕೆಂದರೆ ಕುಲದ ಆಂತರಿಕ ಸಂಗತಿ ಬಹಿರಂಗವಾದರೆ ಬೇರೆ ಜಾತಿಯವರು ಇವರನ್ನು ಕುಲಗೆಟ್ಟವರು ಎಂದು ನೋಡುವಲ್ಲಿ ಆಸಕ್ತಿ ವಹಿಸುತ್ತಾರೆಯೇ ಹೊರೆತು, ಏಕೆ ಕುಲಗೆಟ್ಟರು ಎಂಬುವುದನ್ನು ನೋಡುವುದಿಲ್ಲ. ತುಂಬಾ ಅಲ್ಪಸಂಖ್ಯಾತರಾದ ಇವರು ಜಾತಿ ಎಂಬ ಕ್ಯಾನ್‌ವಾಸಿನೊಳಗೆ ಬರಲು ಸಾಧ್ಯವಿಲ್ಲದಷ್ಟು ವರ್ಣಸಂಕರಕ್ಕೆ ತೆತ್ತುಕೊಂಡವರು. ಈಗ ಕುಲಸಂಗೋಪನೆಯಾಗುತ್ತಿರುವ ಹೊತ್ತಿನಲ್ಲಿ ಪಿತೃ ಪ್ರಧಾನ ವ್ಯವಸ್ಥೆಯ ಪ್ರತೀಕವಾದ ಜಾತಿಯಿಂದ ಗುರುತಿಸಿಕೊಂಡರೇ ನಮ್ಮನ್ನು ಕುಲಗೆಡಿಸಿದ ಪ್ರಬಲ ಕೋಮಿನ ಪಿತೃಗಳನ್ನೇ ತಂದೆಯೆಂದು ಒಪ್ಪಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಬಳಿಗಳೇ ನಮ್ಮ ಜಾತಿ ಎಂದು ಕರೆದುಕೊಂಡು ಕುಲಾಚಾರದ ಬಗ್ಗೆ ಅಪಾರ ನಂಬಿಕೆ ಇಟ್ಟುಕೊಂಡವರಾಗಿದ್ದಾರೆ. ಈ ಅರಿವು ನನ್ನ ಆಲೋಚನೆಯನ್ನು ತಿದ್ದಿಕೊಳ್ಳಲು ಸಾಧ್ಯವಾಗಿದೆ. ಸಾಂಸ್ಥಿಕ ರಚನೆಯ ಅಧ್ಯಯನದಿಂದ ಆಚೆಗೆ ಹುಟ್ಟಿದ ಅವರ ಅರಿವು ನನ್ನ ಅಧ್ಯಯನವನ್ನು ತಿದ್ದಿಕೊಳ್ಳುವಷ್ಟು ಯೋಗ್ಯವಾಗಿದೆ.

ಸಾಂಸ್ಥಿಕ ರಚನೆಯ ಒಳಗೆ ಹುಟ್ಟುವ ಅಧ್ಯಯನಗಳು ಅದರಲ್ಲೂ ಸಮಾಜ ಶಾಸ್ತ್ರೀಯ ಅಧ್ಯಯನ ಫಲಿತಗಳೆಂದು ತೃಪ್ತಿಪಟ್ಟುಕೊಳ್ಳುತ್ತಿವೆ. ಸಮಸ್ಯೆಯನ್ನು ಪರಹರಿಸುವ ಯಾವ ಅವಕಾಶಗಳು ಅಧ್ಯಯನಗಳ ಕಡೆ ಇಲ್ಲ. ಅಕಾಡೆಮಿಕ್ ಅಧ್ಯಯನಗಳ ಮಿತಿ ಇದು. ಯಾವ ಸರ್ಕಾರಗಳು ಇಂದು ವಿಶ್ವವಿದ್ಯಾಲಯದ ಅಧ್ಯಯನಗಳನ್ನು ಸರ್ಕಾರದ ಪಾಲಿಸಿಯಾಗಿ ತರುತ್ತಿಲ್ಲ, ಸರ್ಕಾರ-ಸಂಘ ಸಂಸ್ಥೆಗಳಿಂದ ಯಾವ ಮೂಲಭೂತ ಸೌಲಭ್ಯವೂ ಇಲ್ಲದೆ ಅನೇಕ ಸಮುದಾಯಗಳು ಇಂದು ಜೀವನ ಸಾಗಿಸುತ್ತಿವೆ. ಜಾಗತೀಕರಣದ ಈ ಹೊತ್ತಿನಲ್ಲಿ ಸರ್ಕಾರಗಳೇ ಅಪ್ರಸ್ತುತವಾಗುತ್ತಿವೆ. ಉದಾಹರಣೆಗೆ ಅಲ್ಪಸಂಖ್ಯಾತರಿಗೆ ದುರ್ಬಲ ವರ್ಗದವರಿಗೆ ಮೀಸಲಾತಿ ಇದೆ. ಆದರೆ ಜಾಗತೀಕರಣದ ಪರಿಣಾಮವಾಗಿ ಸರ್ಕಾರಿ ಉದ್ಯೋಗ ನೇಮಕಾತಿಗಳೇ ಕಡಿಮೆ ಆಗಿವೆ. ಇನ್ನು ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶಿಕ್ಷಣ ಕ್ಷೇತ್ರ ಖಾಸಗೀಕರಣಗೊಂಡು ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉಳ್ಳವರ ವಿರುದ್ಧ ಸ್ಪರ್ಧೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ಸರ್ಕಾರದ ಇನ್ನೂ ಅನೇಕ ತರದ ಯೋಜನೆಗಳು ಇಂದು ಅರ್ಥ ಕಳೆದುಕೊಳ್ಳುತ್ತಿವೆ. ಆದ್ದರಿಂದ ಸಾಂಸ್ಥಿಕ ರಚನೆಗಳ ಆಚೆಗೆ ಹುಟ್ಟುವ ಯಾವ ಅರಿವು, ಸಾಂಸ್ಕೃತಿಕ ವಿದ್ಯಮಾನಗಳು ಅವರನ್ನು ಉಳಿಸಿದೆ ಎಂಬುದನ್ನು ಗಮನಿಸುವ ಅಗತ್ಯವಿದೆ.

ಭೌತಿಕ ಶೂನ್ಯತೆಗಳು ಉಂಟಾದಾಗ ಸಾಂಸ್ಕೃತಿಕ ಅವಲಂಬನೆಗಳು ಬಹುದೊಡ್ಡ ಪಾತ್ರವಹಿಸುತ್ತವೆ. ಇಲ್ಲದೆ ಅಗತಯಗಳನ್ನು ಮರೆತು ಇರುವ ಅಗತ್ಯಗಳಲ್ಲೇ ಬದುಕುವ ಜೀವನ ವಿಧಾನವನ್ನು ಅದು ಕಲಿಸಿರುತ್ತದೆ. ನಮ್ಮ ಸಂಶೋಧನೆಗಳು, ವಿಶ್ವ ವಿದ್ಯಾಲಯಗಳು ಸಾಂಸ್ಥಿಕ ರಚನೆಗಳ ಆಚೆಗೆ ಹುಟ್ಟುವ ಅರಿವನ್ನು ಅವಜ್ಞೆ ಮಾಡುತ್ತಲೇ ಬಂದಿದೆ. ಪ್ರಭುತ್ವದ ಗಮನಕ್ಕೆ ತಂದು ಸರಿಪಡಿಸಬಲ್ಲವೆವು ಎನ್ನುವ ಅವಕಾಶ ಈಗ ಅಧ್ಯಯನಗಳಿಗೆ ಇಲ್ಲ. ಅಧ್ಯಯನಗಳು ಎದುರಿಸುತ್ತಿರುವ ಬಹು ದೊಡ್ಡಬಿಕ್ಕಟ್ಟು ಇದು. ಈ ಅರಿವು ಎಚ್ಚರಗಳ ನಡುವೆ ನಾನು ಮತ್ತೊಂದು ಸಮಸ್ಯಾತ್ಮಕ ಕುಲವೆನಿಸಿಕೊಂಡಿರುವ ಬಾಲಬಸಪ್ಪಗಳ ಅಧ್ಯಯನಕ್ಕೆ ಕೈ ಹಾಕಿದ್ದೇನೆ, ಸಾಂಸ್ಕೃತಿಕ ಅಧ್ಯಯನವೆಂದರೆ ಕಲಿತ ನಾವು ಅವರಿಗೆ ಕಲಿಸುವುದಷ್ಟೇ ಅಲ್ಲ, ಅವರಿಂದಲೂ ನಾವು ಕಲಿಯಬೇಕಾದ್ದು ಇದೆ. ಅಂದರೆ ಭೌತಿಕ ಸೌಲಭ್ಯಗಳಿಂದ ವಂಚಿತವಾದ ಸಮುದಾಯಗಳು ತಮ್ಮ ಸವವಲಾಗಾಗಿ ಯಾವ ತಂತ್ರಗಳನ್ನು ಬಳಸಿ ಬದುಕಿವೆ ಮತ್ತು ಯಾವ ಸಾಂಸ್ಕೃತಿಕ ಒತ್ತಾಸೆಗಳು ಇವರ ಜೀವನ ವಿಧಾನವನ್ನು ರೂಪಿಸಿವೆ ಎಂಬುದು ನನ್ನ ಅಧ್ಯಯನದ ಮುಖ್ಯ ಆಸಕ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆಯನ್ನು ಸಾಂಸ್ಕೃತಿಕವಾಗಿ ಕಾಪಾಡಿರುವ ಬಹುದೊಡ್ಡ ಪರಿಕಲ್ಪನೆ ಕಲ್ಯಾಣ. ಅದರಲ್ಲೂ ಕೆಳವರ್ಗದ ಸಾಂಸ್ಕೃತಿಕ ಆಶಯಗಳನ್ನು ಪ್ರತಿಬಿಂಬಿಸುವಲ್ಲಿ ಕಲ್ಯಾಣದ ಪಾತ್ರ ಬಹು ದೊಡ್ಡದು. ಕರ್ನಾಟಕವನ್ನು ಕಾಡಿರುವ ಬಹುದೊಡ್ಡ ಕನಸು ಈ ಕಲ್ಯಾಣವೆಂಬ ಕಲ್ಯಾಣ.

ಕಲ್ಯಾಣವೆಂದರೆ ಒಂದು ಭೌತಿಕವಾದ ಊರಲ್ಲ. ಅದು ಕರ್ನಾಟಕ ಸಂಸ್ಕೃತಿಯ ಅನೇಕ ಆಶಯಗಳ ಬಹುದೊಡ್ಡ ಪರಿಕಲ್ಪನೆ. ಈ ಪರಿಕಲ್ಪನೆಯನ್ನು ಚರಿತ್ರೆಯಲ್ಲಿಟ್ಟು ಅರ್ಥೈಸುವ ಪ್ರಯತ್ನ ಮಾಡಿದರೆ ಅದು ಕೆಳವರ್ಗದವರ ಚರಿತ್ರೆಯಾಗಿ ರೂಪುಗೊಳ್ಳುತ್ತಿತ್ತು. ಏಕೆಂದರೆ ಈ ಮಧ್ಯಕಾಲೀನ ಎನ್ನುವ ಅಸಮರ್ಪಕ ವಿಭಾಗೀಕರಣದಲ್ಲಿ ಬದುಕಿದ್ದ ಕೆಲವು ವ್ಯಕ್ತಿಗಳ ಬದುಕು ದೈವೀಕರಣಗೊಂಡಿದೆ. ಈ ಕಾಲಘಟ್ಟದ ಅನೇಕ ವ್ಯಕ್ತಿಗಳನ್ನು ಸಮುದಾಯಗಳು ತಮ್ಮ ಸಾಂಸ್ಕೃತಿಕ ನಾಯಕರೆಂದು ಕರೆದುಕೊಂಡು ಆರಾಧಿಸುತ್ತಿದ್ದಾರೆ. ವ್ಯಕ್ತಿಯೊಬ್ಬ ಹೇಗೆ ದೈವವಾಗುತ್ತಾನೆ ಎಂಬುದ ಕಾವ್ಯ ಎತ್ತಿಕೊಳ್ಳುವ ಪ್ರಶ್ನೆಯಾದರೆ, ಏಕೆ ದೈವವಾಗುತ್ತಾನೆ ಎಂಬುದು ಸಮಾಜ ಎತ್ತುವ ಪ್ರಶ್ನೆ. ಇವೆರಡನ್ನು ಮೇಳೈಸಿಕೊಳ್ಳಬೇಕಾದ್ದು ಇಂದಿನ ಅಧ್ಯಯನಗಳ ಅಗತ್ಯ.

ನಾನು ಈ ಅಧ್ಯಯನಕ್ಕೆ ಮುಖ್ಯ ಆಕಾರವಾಗಿ ಬಳಸುತ್ತಿರುವುದು ಲಿಖಿತಾಧಾರಗಳನ್ನಲ್ಲ, ಶಾಸನಾಧಾರಗಳನ್ನಲ್ಲ, ಮೌಖಿಕ ಅಭಿವ್ಯಕ್ತಿ ಧಾರೆಗಳನ್ನು ಮಾತ್ರ. ಜನಪದರು ಏನೇನೋ ಕಲ್ಪಿಸಿ ಹೇಳುತ್ತಾರೆ, ಅವರಿಗೆ ಶಿಕ್ಷಣವಿಲ್ಲ, ನಾಗರಿಕತೆ ಇಲ್ಲ, ಅವರನ್ನು ತಿದ್ದಿ ಸರಿಪಡಿಸಬೇಕೆನ್ನುವ ಧೋರಣೆಗಳೇ ನಮ್ಮ ಅಧ್ಯಯನಗಳಲ್ಲಿ ಕಾಣಿಸಿಕೊಂಡಿವೆ. ಜನಪದವು ಒಂದು ಅಧ್ಯಯನ ಆಕರವೆಂದು ತೋರಿಸುವುದು ಈ ಅಧ್ಯಯನದ ಸವಾಲಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಮೌಖಿಕ ಕಥನವನ್ನು ಕಟ್ಟುವ ಕಥನಕಾರರಲ್ಲಿ ಕೆಳವರ್ಗದವರೇ ಹೆಚ್ಚಿದ್ದಾರೆ.

ಪ್ರಸ್ತುತ ಅಧ್ಯಯನಕ್ಕೆ ಮೂರು ನೆಲೆಗಳು ಒಳಗೊಳ್ಳುವ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಗೋಣಿ ಬಸಪ್ಪನ ಕಾವ್ಯ ಮತ್ತು ಆ ದೈವಕ್ಕೆ ನಡೆದುಕೊಳ್ಳುವ ಸಮುದಾಯದ (ಲಿಂಗಾಯತ, ಕುರುಬ, ಬೇಡ, ಮಾದಿಗ) ಸಂಘರ್ಷಗಳು. ಈ ಪರಂಪರೆಯನ್ನು ಕಾಡಿರುವ ದೇವದಾಸಿ ಪದ್ಧತಿ. ಈ ಮೂರು ಇಲ್ಲಿ ಒಂದನ್ನೊಂದು ಎಣೆದುಕೊಂಡಿದೆ. ಲಿಂಗಾಯತ, ಬೇಡ, ಕುರುಬ ಹಾಗೂ ಮಾದಿಗ ಕುಲದ ಸ್ಮೃತಿಗಳು ಇಲ್ಲಿ ಕೆಲಸ ಮಾಡಿವೆ. ಕಾವ್ಯ ಅನುಸರಿಸಿರುವ ಅಭಿವ್ಯಕ್ತಿ ಕ್ರಮ. ಕಥನ ಮಾದರಿ ಹಾಗೂ ಸಾಮಾಜಿಕ ಸಂಘರ್ಷಗಳ ಸ್ವರೂಪವನ್ನು ಗುರುತಿಸುವುದು ನನ್ನ ಅಧ್ಯಯನದ ಮೊದಲ ಹಂತದ ಕೆಲಸವಾಗಿದೆ. ಆದ್ದರಿಂದ ಮೊದಲು ಕಾವ್ಯವನ್ನು ಸಂಪಾದಿಸುವ ಕೆಲಸ ಮಾಡಿದ್ದೇನೆ. ಈ ಯೋಜನೆಯ ಎರಡನೇ ಹಂತದ ಕೆಲಸವಾಗಿ ಸಮುದಾಯ ಮತ್ತು ಪದ್ಧತಿಗಳ ವಿಶ್ಲೇಷಣೆ ಬರುತ್ತವೆ.

ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲೇ ಕಲ್ಯಾಣವನ್ನು ಕೇಂದ್ರವಾಗಿಸಿಕೊಂಡ ಅಪಾರವಾದ ಮೌಖಿಕ ಕಥನಗಳಿವೆ. ಇನ್ನು ಹಂಪಿಯ ಸುತ್ತಮುತ್ತ ಕಲ್ಯಾಣ ಕಥನಗಳಿಲ್ಲವೇ ಎಂಬುದು ನನ್ನ ಹುಡುಕಾಟವಾಗಿತ್ತು. ಕಲ್ಯಾಣದ ದೃಷ್ಟಿಯಿಂದ ತುಂಗಭದ್ರೆಯ ಮೈಯಾಗಿರುವ ಈ ಹಂಪಿ ಏಕೆ ಮುಖ್ಯವೆಂದರೆ, ವಚನಕಾರರ ಆಶಯಗಳು ಪುನರ್‌ಸೃಷ್ಟಿಸುವ, ಪುನರ್ ಸ್ಥಾಪನೆ ಮಾಡುವ ಕೆಲಸಗಳಿಗೆ ಹಂಪಿಯೇ ಮುಖ್ಯ ಭೂಮಿಕೆಯಾಗಿತ್ತು. ದೊರೆ ಪ್ರೌಢರಾಯನ ಬೆಂಬಲದಿಂದ ವಚನಗಳನ್ನೇ ಆಧರಿಸಿ ಅನೇಕ ಚಟುವಟಿಕೆಗಳು ನಡೆದಿವೆ. ವಚನಕಾರರನ್ನು ಇಟ್ಟುಕೊಂಡು ಹರಿಹರ, ರಾಘವಾಂಕ, ಚಾಮರಸ, ವಿರೂಪಾಕ್ಷಪಂಡಿತ, ಮುಂತಾದವರು ಕಾವ್ಯಗಳನ್ನು ಬರೆದರು, ವಚನಗಳನ್ನೇ ಆಕರವಾಗಿಸಿಕೊಂಡು ಕಲ್ಲುಮಠದ ಪ್ರಭುದೇವ, ಮಹಾಲಿಂಗದೇವ, ಮಗ್ಗೆಯ ಮಾಯಿದೇವ, ಕರಸ್ಥಲದ ನಾಗಿದೇವ, ಮುಂತಾದವರು ಶಾಸ್ತ್ರ ಕೃತಿಗನು ರಚಿಸಿದರು, ಶಿವಗಣಪ್ರಸಾದಿ ವಚನಗಳನ್ನು ಸಂಕಲಿಸಿ ಶೂನ್ಯ ಸಂಪಾದನೆಯನ್ನು ಬರೆದ. ವಿಜಯ ಕಲ್ಯಾಣ ಎಂದು ವಿದ್ವಾಂಸರು ಗುರುತಿಸಿರುವಂತೆ ಕಲ್ಯಾಣದ ಎರಡನೇ ಕೆಲಸ ಪ್ರಾರಂಭವಾದದ್ದೇ ಇಲ್ಲಿ. ಚಾತುರಾಚಾರ್ಯರ ಕಲ್ಪನೆಯಿಂದ ಹುಟ್ಟಿದ ಪಂಚಾಚಾರ್ಯರು ಮತ್ತು ವಿರಕ್ತಮಠಗಳ ಸಂಘರ್ಷ, ಸಿದ್ಧಲಿಂಗಯತಿಗಳ ಸಾಂಘಿಕ ಕೆಲಸಗಳು ಈ ಎಲ್ಲ ಚಟುವಟಿಕೆಗಳಿಗೆ ಯಾವ ಪ್ರತಿಕ್ರಿಯೆಯನ್ನು ತೋರದೆ ಜನಪದ ಜಗತ್ತು ಮೌನವಾಗಿರಲು ಸಾಧ್ಯವಿಲ್ಲ. ಮೌಖಿಕ ಜಗತ್ತು ಇದಕ್ಕೆ ಬಲವಾಗಿ ಪ್ರತಿರೋಧ ಒಡ್ಡಿದೆ ಎಂಬುದು ಮೋನ್ನ ಊಹೆಯಾಗಿತ್ತು. ಆದರೆ ಇದುವರೆಗಿನ ಈ ಭಾಗದ ಜನಪದ ಸಂಪಾದನೆಗಳಲ್ಲಿ ಕಲ್ಯಾಣದ ಕತೆ ಮಾತ್ರ ಪ್ರಕಟವಾಗಿರಲಿಲ್ಲ. ಈ ಹುಡುಕಾಟಕ್ಕೆ ಉತ್ತರವಾಗಿ ನನಗೆ ಗೋಚರಿಸಿದ್ದು ಬಾಲಬಸಪ್ಪಗಳು ಹಾಡುವ ಗೋಣಿ ಬಸಪ್ಪನ ಕಾವ್ಯ.

. ಬಾಲಬಸಪ್ಪಗಳಿಗೊಂದು ಪೂರ್ವಪೀಠಿಕೆ: ಅರ್ಥಾತ್ ಕರ್ನಾಟಕದಲ್ಲಿ ಬಸವರೆಷ್ಟು?

ಶೈವ ಪರಂಪರೆಯಲ್ಲಿ ಗಣ ಎಂಬ ಪರಿಕಲ್ಪನೆ ಪ್ರಾಚೀನವಾದುದು. ಸಾಮೂಹಿಕ ಉತ್ಪಾದನೆ ಸಾಮೂಹಿಕ ಹಂಚಿಕೆ ಹಾಗೂ ಸಾಂಘಿಕ ವ್ಯಕ್ತಿತ್ವ ಎಂಬ ಅರ್ಥ ಪರಂಪರೆಯಿಂದ ಹುಟ್ಟಿ, ಚರಿತ್ರೆಯ ಅವಸ್ಥಾಂತರಗಳಲ್ಲಿ ಬೇರೆ ಬೇರೆ ಅರ್ಥವನ್ನು ಪಡೆಯುತ್ತ ವೀರಶೈವವನ್ನು ಕಾಡಿದ ಬಹುಮುಖ್ಯ ಪರಿಕಲ್ಪನೆ ಈ ಗಣ. “ಪ್ರಥಮ, ರುದ್ರ ತ್ರಿಷಷ್ಟಿ ಪುರಾತನ, ವೃಷಭ, ಷೋಡಶ, ತೇರಸ, ದಶಗಣ, ಬಸವಾದಿ ಅಸಂಖ್ಯಾತ ಗಣ. ಇವುಗಳಲ್ಲಿ ಪ್ರಥಮ ರುದ್ರ ಲೌಕಿಕ ಗಣಗಳಲ್ಲ. ಅವರು ಶಿವ ಲೋಕದ ಶಿವ ಗಣಕ್ಕೆ ಸೇರಿದವರು. ಇನ್ನುಳಿದ ಆರು ಗಣಗಳು ಕಾಲದಿಂದ ಕಾಲಕ್ಕೆ ಕ್ರಮವಾಗಿ ವೀರಶೈವ ಪೂಜ್ಯರಾದ ಚಾರಿತ್ರಿಕ ವ್ಯಕ್ತಿಗಳು, ಸಾಂಘಿಕ ಸಮೂಹಗಳು’’ (ಬಸವರಾಜು ಎಲ್.ಪು, ೬ ೧೯೯೦) ಈ ಗಣ ಸಂಖ್ಯೆ ಕಾಲದಿಂದ ಕಾಲಕ್ಕೆ ಏರುಪೇರಾಗಿದೆ. ಲಕ್ಕಣ್ಣ ದಂಡೇಶ ತನ್ನ ಶಿವತತ್ವ ಚಿಂತಾಮಣಿಯಲ್ಲಿ (೧೪೫೦) ಬಸವಾದಿ ಪ್ರಥಮರು ಆದ ಮೇಲೆ ತನ್ನ ಕಾಲದವರೆಗಿನ ಶಿವಶರಣರನ್ನು ನೂತನ ಗಣಂಗಳೆಂದು ಕರೆದು ೩೮ನೇ ಸಂಧಿಯಲ್ಲಿ ಆದ್ಯಂತವಾಗಿ ಸೇರಿಸಿದ್ದಾನೆ.

ಇವನ ನಂತರದಲ್ಲಿ ಎಡೆಯೂರು ಸಿದ್ಧಲಿಂಗೇಶ್ವರ ೭೦೧ ಗಣಗಳ ಪರಿಕಲ್ಪನೆಯನ್ನು ತಂದುಕೊಂಡು ವೀರಶೈವ ಧರ್ಮದ ಸಾಂಸ್ಥಿಕತೆಗೆ ಉತ್ತೇಜನ ನೀಡಿದ ವ್ಯಕ್ತಿ. ಇವನಿಗೆ ಮೊದಲು ಗುಬ್ಬಿಯ ಮಲ್ಲಣ ಗಣಭಾಷ್ಯರತ್ನಮಾಲೆ (೧೪೭೫) ಎಂಬ ಕೃತಿಯನ್ನೇ ರಚಿಸಿದ. ವಿರೂಪಾಕ್ಷಪಂಡಿತ ಚೆನ್ನಬಸವ ಪುರಾಣ (೧೫೦೬) ಬರೆದು ಮುಂದಿನ ವೀರಶೈವ ವ್ಯಕ್ತಿಗಳನ್ನು ಸ್ಮರಿಸಿದರು. ಇದೇ ತರಹ ವೀರಶೈವ ಸಂತ ಪರಂಪರೆಯನ್ನು ನೆನಪಿಸುವ ಮತ್ತೊಂದು ಕೃತಿ ಸಿದ್ಧನಂಜೇಶನ ಗುರುರಾಜ ಚಾರಿತ್ರ (೧೬೦೦). ಶುದ್ಧಾಂಗವಾಗಿ ಇವರು ಗಣ ಎಂಬ ಪರಿಭಾಷೆ ಬಳಸದಿದ್ದರು ಇವೆಲ್ಲ ವೀರಶೈವ ಸಂತ ಪರಂಪರೆಯನ್ನು ಮುಂದುವರಿಸಿದ ಪರಿಕಲ್ಪನೆಗಳೇ ಆಗಿವೆ.

ಪ್ರಥಮ ಮತ್ತು ರುದ್ರ : ಅಲೌಕಿಕ ಗಣಗಳೆಂದು ಹಿಂದೆ ತಿಳಿಸಲಾಗಿದೆ. ವೇದಗಳ ಕಾಲದಲ್ಲಿ ಶಿವನ ಆರಾಧನೆ ಇರಲಿಲ್ಲ. ಇದ್ದದ್ದು ರುದ್ರನ ಆರಾಧನೆ ಮಾತ್ರ. ಮುಕ್ತಕಗಳಾಗಿದ್ದ ವೇದಗಳು ಆಗಮನ ರಚನೆಯ ಪೂರ್ವದಲ್ಲಿ ಎಲ್ಲ ವರ್ಗದ ಜನರನ್ನು ಒಳಗೊಂಡು, ಯಜ್ಞ-ಯಾಗಾಧಿಗಳನ್ನು ಮಾಡಿ ಪ್ರಕೃತಿಯ ದೈವಗಳನ್ನು ಸಂಪ್ರೀತಗೊಳಿಸುತ್ತಿದ್ದವು. ಇದು ಸಹ ಸಾಂಘಿಕತೆಯನ್ನೇ ಸಂಕೇತಿಸುತ್ತದೆ.

ವೃಷಭ ಗಣ : ಇಲ್ಲಿಂದ ಲೌಕಿಕ ಗಣಗಳ ಉತ್ಪತ್ತಿ. ಶಿವನ ವಾಹನವಾದ ನಂದಿಯು ಶಾಪಗ್ರಸ್ತನಾಗಿ ಲೌಕಿಕ ಗಣವಾಗುತ್ತಾನೆ. ಇಲ್ಲಿಂದ ಮುಂದೆ ಹುಟ್ಟುವ ವೀರಶೈವ ಶರಣರೆಲ್ಲ ಇವನ ಅಂಶವೆಂದು ಗುರುತಿಸುವುದನ್ನು ಕಾಣುತ್ತೇವೆ. “ಮೂರನೆಯವರಾದ ವೃಷಭ ಗಣದವರು ವೀರಶೈವಕ್ಕೆ ಮೂಲಬಿಂದುವಾಗಿರಬಹುದಾದ ಪಾಶುಪತ ಪಂಥದ ಸಂತ ಪರಂಪರೆಗೆ ಸೇರಿದವರು’’ (ಬಸವರಾಜು ಎಲ್. ಪುಟ ೬, ೧೯೯೦). ಬಸವಣ್ಣನನ್ನು ಮುಂದೆ ನಂದಿಯ ಅವತಾರ ಎಂದು ಕರೆಯಲಾಗಿದೆ. ನಂತರದ ಎಲ್ಲ ವೀರಶೈವ ಪರಂಪರೆಯಲ್ಲಿ ಇದು ಪಾತ್ರ ವಹಿಸಿದೆ. ಈ ಗಣಗಳ ಸದಸ್ಯರ ಬಗ್ಗೆ ಸಿದ್ದನಂತಜೈಶನ ಗುರುರಾಜ ಚಾರಿತ್ರದಲ್ಲಿ ವಿವರಿಸುತ್ತಾ ಅಭಿರಾಮ, ಗೌತಮ, ಶಿಖಂಡಿಸ್ವಾಮಿ, ನಕುಲೀಶ ಮುಂತಾದವರೇ ಈ ವೃಷಭ ಗಣದವರೆನ್ನುತ್ತಾನೆ.

ತ್ರಿಷಷ್ಟಿ ಪುರಾತನ ಗಣ: ಇವರು ತಮಿಳುನಾಡಿನ ೬೩ ಪುರಾತನ ಗಣ. ಕ್ರಿ.ಶ. ೫ನೇ ಶತಮಾನದಿಂದ ೯ನೇ ಶತಮಾನದವರೆಗೆ ಇದ್ದ ತಮಿಳುನಾಡಿನ ಶೈವೋಪಾಸಕರು. ತಮಿಳುನಾಡಿನ ೧೧ನೇ ಶತಮಾನದ ಕವಿ ಶೇಕ್ಕಿಳಾರ್ ಇವರನ್ನು ಕುರಿತು ಪೆರಿಯ ಪುರಾಣ (೧೨ನೇ ಪೂವಾರ್ಧ)ವನ್ನು ಬರೆದ. ಕನ್ನಡದಲ್ಲಿ ಇವರನ್ನು ಕುರಿತು ಹರಿಹರ, ಸುರಂಗ ಕವಿಗಳು ಮತ್ತು ನಿಜಗುಣ ಶಿವಯೋಗಿಗಳು ಕಾವ್ಯಗಳನ್ನು ರಚಿಸಿದ್ದಾನೆ. ೬೩ ಪುರಾತನರಲ್ಲಿ ಅಪ್ಪರ್, ಸುಂದರರ್, ತಿರುಜ್ಞಾನ ಸಂಬಂಧರ್ ಮತ್ತು ಸಮಯಾರ್ಚಾಯರು, ಇವರು ತೇವಾರಂ ಎಂಬ ಕಾವ್ಯಗಳನ್ನು ರಚಿಸಿದರು ಕರ್ನಾಟಕದಲ್ಲಿ ೧೨ನೇ ಶತಮಾನದಲ್ಲಿ ನಡೆದ ಶರಣ ಚಳುವಳಿಗೆ ಇವರ ಪ್ರಭಾವವು ಕಾರಣವಾಗಿದೆ. ಮೊಟ್ಟಮೊದಲಿಗೆ ಸ್ತ್ರೀಯರನ್ನು ಒಳಗೊಂಡ ಮೂಮೆಂಟ್ ಇದು ಇದೇ ಪ್ರಬಾವದಿಂದ ಶರಣರು ತಮ್ಮ ಚಳವಳಿಯಲ್ಲಿ ಸ್ತ್ರೀ ಪ್ರಾತಿನಿಧ್ಯ ಉಳಿಸಿಕೊಂಡಿದ್ದಾರೆ. ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ೬೩ ಪುರಾತನರ ವಿಗ್ರಹಗಳು ಸ್ಥಾಪನೆಯಾಗಿವೆ. ಬಸವಣ್ಣ ತನ್ನ ವಚನಗಳಲ್ಲಿ ಇವರನ್ನು ನೆನೆಯುತ್ತಾನೆ. ತಮಿಳುನಾಡಿನವರಾದರು ಕನ್ನಡದ ವೀರಶೈವ ಗಣ ಪರಂಪರೆಯಲ್ಲಿ ಇವರು ಪೂಜ್ಯರಾಗಿದ್ದಾರೆ.

ಷೋಡಶ ಗಣ: ಈ ಗಣದ ಸದಸ್ಯರೆಂದರೆ ಹೊನ್ನಯ್ಯ, ಪಾಂಡ್ಯನಾಯಕ ನಾಗಿದೇವ, ಗುಡ್ಡವ್ವೆ, ಚಿಕ್ಕುಲಿಗೆನಾಗಯ್ಯ, ಕಂದುಲಿಗೆನಾಗಿದೇವ, ಪಡಿಹಾರಿಸೋಮಯ್ಯ ಬಾಚಲದೇವಿ, ಕಿನ್ನರಬ್ರಹ್ಮಯ್ಯ ಮುಂತಾದವರು. ಇವರಲ್ಲಿ ಪ್ರಮುಖವಾದವಳು ಗುಡ್ಡವ್ವೆ. ಇವಳ ಬಗ್ಗೆ ಲಕ್ಕಣದಂಡೇಶ ತನ್ನ ಶಿವತತ್ವಚಿಂತಾಮಣಿಯಲ್ಲಿ ಬರೆದಿದ್ದಾನೆ. ಶಿವನ ಉಗ್ರ ಉಪಾಸಕರಾದ ಈ ಷೋಡಶ ಗಣದವರು ತಮ್ಮ ತಲೆಗಳನ್ನು ಕಡಿದುಕೊಂಡು ಕೈಲಸಾವನ್ನು ಸೇರಿದವರಾಗಿದ್ದಾರೆ.

ತೇರಸ : ಇವರು ವೀರಶೈವಕ್ಕೆ ಧಕ್ಕೆ ಬದಾಗ ಅದರ ರಕ್ಷಣೆಗಾಗಿ ಪ್ರಾಣವನ್ನು ಪಣವಾಗಿಟ್ಟ ಮಾರುಡಿಗೆ ನಾಚಯ್ಯನೆಂಬುವನು ಬೆಂಬಲಿಗರಾಗಿದ್ದ ವೀರಶಿವ ಸಹೋದರರು. “ಹರಿಹರನು ಮಾರುಡಿಗೆ ನಾಚಯ್ಯನ ರಗಳೆಯಲ್ಲಿ ತೇರಸರ ಪ್ರಸ್ತಾಪ ಮಾಡಿ ಅವರಿಗೂ ನಾಚಯ್ಯನಿಗೂ ಇದ್ದ ಸಂಬಂಧವನ್ನು ಸ್ಪಷ್ಟಪಡಿಸಿದ್ದಾನೆ’’ (ಎಲ್.ಬಸವರಾಜು, ಪು. ೯, ೧೯೬೩). ಈ ತೇರಸ ಗಣದ ಇನ್ನಿತರ ಸದಸ್ಯರೆಂದರೆ ಸಿಂಗಿದೇವ, ಬೊಮ್ಮಶೆಟ್ಟಿ, ಸಾತ್ವಿಕಸಂಗಯ್ಯ, ಪಡಿಹಾರಿ ಬಸವ, ನಿಜಸಂಗವ್ವ ಹೋವಿನಬಾಚಿದೇವ, ಮುಂತಾದವರು.

ದಶಗಣ : ತನ್ನ ಬಳಿ ಬಂದ ದಶಗಣದ ಸಿಂಗಿದೇವನಿಗೆ ಮಾರುಡಿಗೆ ನಾಚಯ್ಯನ ಶಿಷ್ಯನಾಗಿದ್ದಾನೆ. ಈಗಣದ ಇನ್ನಿತರ ಸದಸ್ಯರೆಂದರೆ ಬೊಪ್ಪಲದೇವಿ, ಕಾಳವ್ವೆ ಚಾರುಬೀಚಯ್ಯ, ಮಾಯಿದೇವ, ಮೈಲಿಸಿಂಗದೇವ, ಕಾಮಲದೇವ ಮುಂತಾದವರು ಇದ್ದಾರೆ.

. ಬಸವಾದಿ ಅಸಂಖ್ಯಾತ ಗಣ

ಇಲ್ಲಿಂದ ಬಸವಣ್ಣನ ಪಾತ್ರ ಬರುತ್ತದೆ. ಶುದ್ಧಾಂಗವಾಗಿ ಚಾರಿತ್ರಿಕ ವ್ಯಕ್ತಿಯೊಬ್ಬ ವೃಷಭ ಗಣನ ಅವತಾರದಲ್ಲಿ ಹುಟ್ಟುತ್ತಾನೆ. ಈ ಹಿಂದಿನ ಗಣ ಕಲ್ಪನೆಯಲ್ಲಿ ಅದು ಪ್ರಾಣಿಯೂ ಆಗಿರಬಹುದು, ಬೆಳೆಯಾಗಿರಬಹುದು (ಜನಪದರಲ್ಲಿ ಈಗಲೂ ಬಸವಣ್ಣ ಎಂದರೆ ವ್ಯಕ್ತಿ ಮತ್ತು ಪ್ರಾಣಿಗಳ ನಡುವೆ ವ್ಯತ್ಯಾಸವಿಲ್ಲದ ಪರಿಕಲ್ಪನೆ). ಬಸವಣ್ಣನ ಕಾಲಕ್ಕಾಗಲೇ ಸಾಮೂಹಿಕ ಉತ್ಪಾದನೆ, ಹಂಚಿಕೆ ಎಂಬ ಪರಿಕಲ್ಪನೆ ಸೀಮಿತಾರ್ಥದ ಬಳಕೆಯ ದಾರಿ ಕಂಡುಕೊಂಡಿತ್ತು. ಇದಕ್ಕೆ ಕಾರಣ ಗಣ ಸಮೂಹದಲ್ಲಿ, ಚರಿತ್ರೆಯ ಪೂರ್ವದಲ್ಲಿ ಉಂಟಾದ ವಿಪ್ಲವ, ರಕ್ತ ಸಂಬಂಧದಲ್ಲೇ ಕೊಡುವ ತರುವ ಸಂಬಂಧಗಳಿಂದ ಜೈವಿಕವಾದ ಸಮಸ್ಯೆಗಳು ಕಾಣಿಸಿಕೊಂಡವು. ರಕ್ತಸಂಬಂಧವನ್ನು ಬದಲಿಸಿದಾಗ ಹುಟ್ಟುವ ಸಂತಾನ ಇದಕ್ಕಿಂತ ಉನ್ನತವಾಗಿತ್ತು. ಆಗ ಗಣಗಳಲ್ಲಿ ಇದನ್ನು ಬದಲಿಸುವುದೇ ಮುಖ್ಯ ಸಂಗತಿಯಾಗಿ ಕಾಣಿಸಿಕೊಂಡಿತು. ಇಲ್ಲಿಂದ ರಕ್ತ ಸಂಬಂಧವನ್ನು ಬದಲಿಸಲು ಕುಲ ಕಲ್ಪನೆಯನ್ನು ಹುಟ್ಟು ಹಾಕಿಕೊಂಡರು. ಈ ಕುಲ ಕಲ್ಪನೆ ಹೇಗೆ ವಿಸ್ತಾರವಾಯಿತೆಂದರೆ, ವೃತ್ತಿಗಳೇ ಕುಲದ ಹೆಸರುಗಳಾಗಿ ಮಾರ್ಪಟ್ಟವು. ಇವೆಲ್ಲ ಚರಿತ್ರೆಯ ಪೂರ್ವದ ಸಂಗತಿಗಳು. ನಂತರ ಸಾಮ್ರಾಜ್ಯಗಳ ಉಗಮಗಳು ಕಾಣಿಸಿಕೊಂಡವು. ಇವು ವೃತ್ತಿಮೂಲ ಗುಂಪುಗಳನ್ನು ಸಂಘಟಿಸಿ, ಆ ಮೂಲಕ ಒಂದು ಶಕ್ತಿಯನ್ನು ಬೆಳೆಸಿ, ಒಂದನ್ನು ಮತ್ತಂದರ ಮೇಲೆ ಎತ್ತಿಕಟ್ಟಿ, ಸಾಮ್ರಾಜ್ಯಗಳನ್ನು ವಿಸ್ತರಿಸುವುದಕ್ಕೆ ಸಮುದಾಯಗಳನ್ನು ಬಳಸಿಕೊಂಡವು. ಇಲ್ಲಿಂದ ಸಮುದಾಯಗಳಲ್ಲಿ ಅಭದ್ರತೆ, ದಾಳಿ, ದಮನಕಾರಿ ಅಂಶಗಳು ಕಾಣಿಸಿಕೊಂಡವು. ಪ್ರಭುತ್ವಗಳು ಸಮುದಾಯಗಳನ್ನು ಅಭದ್ರತೆಗೆ ಸಿಲುಕಿಸಿ ಅವರ ಶ್ರಮ ಸಂಪಾದನೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ದಾರಿ ಕಂಡುಕೊಂಡವು. ಆ ಮೂಲಕ ಸಂಪತ್ತಿನ ಕೇಂದ್ರಗಳಾಗಿ ಪ್ರಭುತ್ವಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡವು. ಅಂದರೆ ಉತ್ಪಾದನೆ ಮಾಡುತ್ತಿದ್ದ ವೃತ್ತಿ ಮೂಲ ಸಮುದಾಯಗಳಲ್ಲಿ ಐರಾರ್ಕಿಯನ್ನು ತಂದರು. ಇಲ್ಲಿಂದ ಕುಲ ಜಾತಿಗಳಾಗಿ ರೂಪಾಂತರ ಪಡೆದವು. ಈ ಜಾತಿ ವ್ಯವಸ್ಥೆಯನ್ನು ರಕ್ಷಿಸುವುದೇ ರಾಜಧರ್ಮವಾಯಿತು. ಹೀಗೆ ಗಣ ಕುಲವಾಗಿ, ಕುಲ ಜಾತಿಗಳಾಗಿ ಮಾರ್ಪಟ್ಟವು.

೧೨ನೇ ಶತಮಾನದ ಬಸವಣ್ಣನ ಕಾಲಕ್ಕೆ ಜಾತಿ ಎಂಬುದು ವಾಸ್ತವವಾಗಿ ಸಾಮಾಜಿಕ ಸಮಸ್ಯೆಯಾಗಿ ಕಾಣಿಸಿಕೊಂಡಿದೆ. ಇದರ ಹಿಂದಿನ ಸಾಂಸ್ಕೃತಿಕ ಕಥನಗಳನ್ನು ಗಮನಿಸಿದರೆ ಅವುಗಳಲ್ಲಿ ಕುಲ ಸಂಘರ್ಷಗಳನ್ನು ಮಾತ್ರ ಕಾಣಲು ಸಾಧ್ಯ. ಅದು ಮಹಾಭಾರತದ ಕಥೆಯಾಗಬಹುದು, ಎಲ್ಲಮ್ಮನ ಕಥೆಯಾಗಬಹುದು, ಜುಂಜಪ್ಪನ ಕಥೆಯಾಗಬಹುದು, ಮೈಲಾರನ ಕಥೆಯಾಗಬಹುದು. ಈ ಪ್ರಿಮಿಟೀವ್ ಕಥನಗಳಲ್ಲಿ ಜಾತಿ ಒಂದು ಸಮಸ್ಯೆಯಾಗಿಲ್ಲ, ಅಲ್ಲಿ ರಕ್ತಸಂಬಂಧಿಗಳ ಜಗಳವಿದೆ. ದಾಯಾದಿಗಳ ಜಗಳವಿದೆ, ಹೆಣ್ಣನ್ನು ಕೊಡುವ ಅದರಿಂದ ತೊಂದರೆಗೆ ಸಿಕ್ಕಿಕೊಳ್ಳುವ ಕಥನವಿದೆ. ಆದರೆ ಅವರಾರಿಗೂ ಜಾತಿ ಒಂದು ಸಮಸ್ಯೆಯಾಗಿಲ್ಲ. ಅಂದರೆ ೧೨ನೇ ಶತಮಾನದಲ್ಲಿ ಜಾತಿ ಒಂದು ಸಾಮಾಜಿಕ ಸಮಸ್ಯೆಯಾದ್ದರಿಂದ ಅಲ್ಲಿಂದ ಮುಂದಿನ ಎಲ್ಲ ಕಥನಗಳು ಇದನ್ನು ಕೇಂದ್ರವಾಗಿಸಿಕೊಂಡಿವೆ.

ಪ್ರಭುತ್ವ – ಸಮುದಾಯ ಎರಡನ್ನ ಕಂಡಿದ್ದ ಬಸವಣ್ಣ ಇದಕ್ಕೆ ಉತ್ತರ ಹುಡುಕುವ ಸಂಕಷ್ಟಕ್ಕೆ ನಿಂತ. ಮೊದಲು ಹಿಂದಿನ ಶಾಸ್ತ್ರ ಆಚರಣೆಗಳಾದ ಜನಿವಾರವನ್ನು ಕಿತ್ತಕಿದ, ನಂತರ ಪ್ರಭುತ್ವದ ಮೂಲಕ ಸರಿಪಡಿಸಲು ಭಂಡಾರಿಯಾದ. ಸಂಸ್ಕೃತವನ್ನು ನಿರಾಕರಿಸಿ ಈಗಾಗಲೇ ಶರಣರು ಬಳಸಿದ್ದ ವಚನ ಎಂಬ ಅಭಿವ್ಯಕ್ತಿ ಮಾದರಿಯನ್ನು ಹೆಚ್ಚು ಪ್ರಚಲಿತಗೊಳಿಸಿದ. ದಾಸೋಹ ಎನ್ನುವ ಪರಿಕಲ್ಪನೆಯನ್ನು ತಂದು ಗಣ ಮೂಲದ ಪರಿಕಲ್ಪನೆಯಾದ “ಸಾಮೂಹಿಕ ಊಟ’’ ಎಂದು ತನ್ನ ಗಣಗಳನ್ನು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಎಂದು ವಿಸ್ತರಿಸಿದ. ಎಲ್ಲ ಜಾತಿಗಳು ನನ್ನ ದಾಸೋಹದಲ್ಲಿ ಉಣ್ಣಬೇಕೆಂದು ಕನಸು ಕಂಡ. ಜಂಗಮರ ಭಯಂಕರ ಪ್ರತಿಭಟನೆ ಅನುಭವಸಿದ. ನಂತರ ದಾರಿಕಾಣದೆ ಕುಲಗಳನ್ನು ಒಂದು ಗೂಡಿಸುವ ಪ್ರಯತ್ನದಲ್ಲಿ ಹರಳಯ್ಯನ ಮಗ, ಮಧುವರಸನ ಮಗಳ ಸಂಬಂಧಕ್ಕೆ ಅನುಮತಿಸಿದ. ಕೊನೆಗೆ ಕಲ್ಯಾಣ ಕ್ರಾಂತಿಯನ್ನು ಕಂಡು ಕೂಡಲಸಂಗಮದಲ್ಲಿ ಕೊನೆಯಾದ. ಅಂದರೆ ಗಣ ವಿಸ್ತರಣೆ ಅವನ ಬಹುದೊಡ್ಡ ಸಾಧನೆ.

ವಚನಕಾರರು ಅಭಿವ್ಯಕ್ತಿಧಾರೆಗಳನ್ನು ಶಿಷ್ಟ ಮತ್ತು ಸಂಸ್ಕೃತ ಚೌಕಟ್ಟಗಳಿಂದ ಬಿಡುಗಡೆಗೊಳಿಸಿ ಅಚ್ಚಗನ್ನಡದ ವಚನಗಳಿಗೆ ಆದ್ಯತೆಯನ್ನು ತಂದು ಕೊಟ್ಟಿದ್ದು, ಕೆಳವರ್ಗದ ಮೌಖಿಕಧಾರೆಗಳ ಅಭಿವ್ಯಕ್ತಿಗೆ ಇದು ನಾಂದಿಯಾಯಿತು. ತಡವಾಗಿಯೇ ಆದರೂ ಬಚ್ಚಿಟ್ಟ ತಮ್ಮ ಚರಿತ್ರೆಗಳನ್ನು ಪುರಾಣೀಕರಿಸಿ ಹಾಡಲು ಕಲಿತವು. ತಡೆದಿಟ್ಟ ನದಿಯಂತೆ ಅಡಗಿದ್ದ ಅವರ ಅಭಿವ್ಯಕ್ತಿ ತಮ್ಮ ಪೂರ್ವಿಕರ ಬದುಕನ್ನು, ತಮ್ಮ ಪರವಾದ ಘಟನೆಗಳನ್ನು ಕಲೆಯಾಗಿಸುವ ಕಥನಶಕ್ತಿಯನ್ನು ಕಲಿಸಿತು. ಆದ್ದರಿಂದಲೇ ಅನೇಕ ಸಾಂಸ್ಕೃತಿಕ ನಾಯಕರು ಈ ಕಾಲಘಟ್ಟದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ತಮ್ಮ ಕಾಲದಲ್ಲಿ ವೀರಶೈವ ಸಾಂಸ್ಥಿಕವಾಗುತ್ತಿದ್ದುದನನು ಕಂಡು ಪ್ರತಿಭಟಿಸಿದರು. ಅಂದರೆ ಕೆಳವರ್ಗದವರು, ಕುಶಲ ಕರ್ಮಿಗಳು, ಕಾಯಕ ಪ್ರಧಾನ ಪರಂಪರೆಯವರೂ, ತಮ್ಮ ಸ್ಮೃತಿಗಳಿಂದ ಸಾಂಸ್ಕೃತಿಕ ಅನನ್ಯತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದರು. ಬಸವಣ್ಣನ ನಂತರ ಮಧ್ಯಕಾಲೀನ ಚರಿತ್ರೆಯಲ್ಲಿ ಅದರಲ್ಲೂ ೧೫, ೧೬, ೧೭ನೇ ಶತಮಾನದಲ್ಲಿ ಅಸಂಖ್ಯಾತ ಕೆಳವರ್ಗಗಳ ಸಾಂಸ್ಕೃತಿಕ ನಾಯಕರು ಹುಟ್ಟಿದ್ದಾರೆ. ಉದಾ. ಮರುಳಸಿದ್ದ, ಮಂಟೇಸ್ವಾಮಿ, ಮಾದಪ್ಪ, ಮದ್ದಾನೇಸ್ವರ, ಗೋಣಿಬಸವ ನಿರ್ವಾಣಯ್ಯ, ನಾಯಕನಹಟ್ಟಿ ತಿಪ್ಪೇಸ್ವಾಮಿ. ತಿಂಥಿಣಿಮೋನಪ್ಪ, ಕೊಡೇಕಲ್ಲು ಬಸವಣ್ಣ ಶಿರಹಟ್ಟಿಫಕೀರೇಶ್ವರ, ಸಾವಳಿಗಿಶಿವಲಿಂಗ, ದೊಡ್ಡಮ್ಮತಾಯಿ, ರಾಚಪ್ಪಜಿ, ಹುಣಸನಾಳಯ್ಯ, ಫಲಹಾರದಯ್ಯ ಮುಂತಾದವರು. ಈ ಮೌಖಿಕ ಪಠ್ಯಗಳ ಲಕ್ಷಣವೆಂದರೆ, ಪ್ರಾರಂಭದ ಭೂಮಿ ಸೃಷ್ಟಿಯ ಕತೆಗೆ ತಮ್ಮ ಪುರಾತನರನ್ನು ಸೇರಿಸಿಕೊಳ್ಳುವುದು,ಅಂದರೆ ಅವರ ಪುರಾತನರ ದೇಹವೇ ಭೂಮಿಯಾಗುವುದು. ಅಲ್ಲಾಡುವ ಭೂಮಿಯನ್ನು ಹೆಪ್ಪುಗಟ್ಟಿ ನಿಲ್ಲಿಸಿ ಹೆಪ್ಪುಮುನಿಯಾಗುವುದು. ಕೈಲಾಸದ ಶಿವನಿಗಿಂತಲೂ ದೊಡ್ಡವರು ಎನ್ನುವುದು (ಧರೆಗೆ ದೊಡ್ಡವರು), ಶಿವನ ಕಲ್ಯಾಣಕ್ಕೆ ತಂಗಡಿ ಗಿಡದಿಂದ ತಾಳಿ ಮಾಡಿ ಕೊಡುವುದು ಇತ್ಯಾದಿ.

ಎರಡನೆಯದು ಒಟ್ಟು ಕಥಾ ಹಂದರವನ್ನು ಮೂರು ಕಾಲಘಟ್ಟಗಳಲ್ಲಿ ನಡೆಸುವುದು ಕೈಲಾಸ, ಕಲ್ಯಾಣ, ಕಲಿ. ಈ ಮೂರು ಕಾಲಗಳಲ್ಲೂ ಅವರ ನಾಯಕರು ಒಂದು ಕಾಲಾತೀತ ಚಲನೆಯನ್ನು ಮಾಡುವುದು. ಕಲ್ಯಾಣದ ಕತೆಗಳಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಗಳಲ್ಲಿ ಜಂಗಮರೇ ತುಂಬಿ ಹೋಗಿದ್ದಾರೆ ಎನ್ನುವುದು. ಬಸವಣ್ಣನ ಕಾಲದಲ್ಲಿ ನಮಗೆ ಈ ದಾಸೋಹದಲ್ಲಿ ಉಣ್ಣುವ ಹಕ್ಕಿತ್ತು. ಈಗ ಅಸ್ಪೃಶ್ಯತೆ ಉಂಟಾಗಿದೆ ಎಂದು ಜಂಗಮರನ್ನು ವಿಡಂಬನೆ ಮಾಡುವುದು. ಹಸಿವು ಮತ್ತು ಅಸ್ಪೃಶ್ಯತೆಯ ಸಂಕಟಗಳನ್ನು ಪ್ರತಿಮಾತ್ಮಕವಾಗಿ ತರುವುದು. ವಿರೋಧಿಗಳನ್ನು ಗೆಲ್ಲಲು ಸಾಧ್ಯವಾಗದೆ ಪವಾಡಗಳನ್ನು ಮಾಡಿ ಅವರನ್ನೆಲ್ಲಾ ಶರಣಾಗತಿಸುವುದು. ನಂತರ ಕಲ್ಯಾಣವನ್ನು ಬರಿದು ಮಾಡಿ ಕಲಿಗೆ ಬರುವುದು.

ಇವು ಮಧ್ಯಕಾಲೀನ ಎಲ್ಲ ಕಥನಗಳಲ್ಲೂ ಇರುವ ಸಾಮಾನ್ಯ ಲಕ್ಷಣಗಳು. ಜನಪದರಲ್ಲಿ ಗಣ ಎನ್ನುವ ಪರಿಕಲ್ಪನೆ ವಿಸ್ತರಿಸಿದ್ದು ಈ ಕ್ರಮದಲ್ಲಿ. ಬಸವಣ್ಣ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಎಂದು ಕರೆದದ್ದು ಪಂಚಗಣಾಧೀಶ್ವರರ ಪರಿಕಲ್ಪನೆಗೆ ಮೂಲ ಬಿಂದುವಾಯಿತು. ಮೌಖಿಕ ಸಾಹಿತ್ಯದಲ್ಲಿ ಇದು ಈ ರೂಪ ಪಡೆದರೆ ಶಿಷ್ಟ ವೀರಶೈವದಲ್ಲಿ ಪಂಚಾಚಾರ್ಯರ ಉಗಮಕ್ಕೆ ಕಾರಣವಾಯಿತು. ಬಸವಣ್ಣ ಏನೋ ಈ ಪರಿಧಿಯನ್ನು ಮೀರಿ ಹೊರಬಂದ. ಆದರೆ ನಂತರದ ವೀರಶೈವ ಸಾಂಘಿಕರು ಈ ಜನಪದ ಸೃಷ್ಟಿಗೆ ದಿಕ್ಕೆಟ್ಟು ತಮ್ಮ ಸಾಂಸ್ಕೃತಿಕ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂದು ಮತ್ತೆ ಶಿಷ್ಟ ವೀರಶೈವರ ಗಣ ಚೌಕಟ್ಟನ್ನು ಹುಡುಕಿ ಅದರಲ್ಲಿ ಸೇರಿಕೊಳ್ಳುವ ಆಸಕ್ತಿಯನ್ನಷ್ಟೇ ತೋರಿಸಿದ್ದಾರೆ.

. ನೂತನ ಗಣಂಗಳು : (ನೂರೊಂದು ಯತಿಗಳು)

ವಿಜಯನಗರದ ಅರಸು ಪ್ರೌಢದೇವರಾಯನ ಕಾಲಕ್ಕೆ ವೀರಶೈವ ಧರ್ಮಕ್ಕೆ ಪ್ರಭುತ್ವದ ಬೆಂಬಲ ಸಿಕ್ಕಿತು. ವಚನ ಚಳುವಳಿ ನಡೆದು ಇನ್ನೂರು ವರ್ಷಗಳೇ ಆಗಿದ್ದವು. ಅದುವರೆಗೂ ವಚನಗಳು ಮೌಖಿಕ ಪರಂಪರೆಯಲ್ಲಿ ಹಾಗೂ ಆಚರಣಾತ್ಮಕವಾಗಷ್ಟೇ ತಮ್ಮಸತ್ವವನ್ನು ಉಳಿಸಿಕೊಂಡಿದ್ದವು. ಆದರೆ ಜೈನ ವೈದಿಕ ಧರ್ಮಗಳಿಗೆ ಅದರದೇ ಆದ ಆಕರ ಶಾಸ್ತ್ರಗಳುದವು, ಧರ್ಮಶಾಸ್ತ್ರಗಳಾದವು. ಆ ಮೂಲಕ ಅವು ಪ್ರತಿಷ್ಠಿತ ಧರ್ಮಗಳೆನಿಸಿಕೊಂಡವು. ಆದರೆ ವೀರಶೈವವನ್ನು ಅನುಸರಿಸುವ ಅಸಂಖ್ಯಾತ ಭಕ್ತರಿದ್ದರು. ಅವರಿಗೆ ಧರ್ಮಶಾಸ್ತ್ರಗಳು ಇರಲಿಲ್ಲ. ಧರ್ಮಶಾಸ್ತ್ರಗಳನ್ನು ಸೃಷ್ಟಿಸಿ ಆ ಮೂಲಕ ವೀರಶೈವಕ್ಕೂ ಒಂದು ಸಾಂಸ್ಥಿಕ ರೂಪ ಕೊಡಬೇಕಾದದ್ದು ಆ ಕಾಲದ ಒತ್ತಡವಾಗಿತ್ತು. ವೀರಶೈವ ಧರ್ಮವನ್ನು ಸಂಘಟಿಸುವುದಕ್ಕೆ ಶಾಸ್ತ್ರಕಾರರಿಗೆ, ಕವಿಗಳಿಗೆ ಉತ್ತೇಜನ ನೀಡಲಾಯಿತು. ಬಸವಣ್ಣನನ್ನು ಕುರಿತಂತೆ ಈಗಾಗಲೇ ಹರಿಹರಿ, ಪಾಲ್ಕುರಿಕೆ ಸೋಮನಾಥ, ಭೀಮಕವಿ ಮುಂತಾದವರು ಕಾವ್ಯಗಳನ್ನು ರಚನೆ ಮಾಡಿದ್ದರು. ಇದರ ಮುಂದುವರಿಕೆಯ ತರದಲ್ಲಿ ಶಿವಗಣ ಪ್ರಸಾದಿ ವಚನಗಳನ್ನೇ ಆಧಾರವಾಗಿಟ್ಟುಕೊಂಡು ಯಾವ ವಚನಗಳನ್ನು ಯಾರು ಯಾವ ಸಂದರ್ಭದಲ್ಲಿ ಹೇಳಿರಬಹುದೆಂದು ಅವುಗಳಿಗೆ ಒಂದು ಸನ್ನಿವೇಶವನ್ನು ಕಲ್ಪಿಸಿ, ವಚನಗಳಿಗೆ ಒಂದು ನಾಟಕೀಯತೆಯನ್ನು ತಂದುಕೊಂಡು ಶೂನ್ಯಸಂಪಾದನೆ ಎಂಬ ಹೊಸ ಪ್ರಕಾರವನ್ನೇ ಸೃಷ್ಟಿಸಿದ. ಇವನಿಗೂ ಪೂರ್ವದಲ್ಲಿ ಮಹಾಲಿಂಗ ದೇವ ವಚನಗಳನ್ನು ಷಟ್ಸ್ಥಲಾನುಕ್ರಮದಲ್ಲಿ ಜೋಡಿಸುವ ಪ್ರಯತ್ನ ಮಾಡಿದ್ದ. ಅದನ್ನೇ ಅನುಸರಿಸಿ ಕಲ್ಲುಮಠದ ಪ್ರಭುದೇವ ಲಿಂಗಲೀಲಾ ವಿಲಾಸ (೧೪೩೧) ಎನ್ನುವ ಕೃತಿ ಬರೆದು ವಚನಾಗಮ ಎಂದು ಕರೆದು. ಹೇಗೆ ವೇದಗಳಿಗೆ ಆಗಮಗಳು ಮುಖ್ಯವೋ ಹಾಗೆ ವಚನಗಳಿಗೆ ಆಚರಣಾ ಮಾರ್ಗವು ಮುಖ್ಯ ಎಂದು ಪ್ರತಿಪಾದಿಸಿದ. ಈ ತರದ ಬರಹ ಪರಂಪರೆಯನ್ನೇ ಆಧಾರವಾಗಿಟ್ಟುಕೊಂಡು ಲಕ್ಕಣ್ಣ ದಂಡೇಶ ನೂತನ ಗಣಂಗಳು ಎನ್ನುವ ಕಲ್ಪನೆಯನ್ನು ಹುಟ್ಟುಹಾಕಿ ವೀರಶೈವ ಕವಿಗಳನ್ನು ಸಂಘಟಿಸುವ ಪ್ರಯತ್ನ ಮಾಡಿದ. ಈ ಗುಂಪಿನಲ್ಲಿ ಕಲ್ಲುಮಠದ ಪ್ರಭುದೇವನನ್ನು ಒಳಗೊಂಡ ಹಾಗೆ ಕರಸ್ಥಲದ ವೀರಣ್ಣ, ಗುಬ್ಬಿಯ ಮಲ್ಲಣ, ನಾಗಿದೇವ, ಕುಮಾರಬಂಕನಾಥ, ಮಗ್ಗೆಯ ಮಾಯಿದೇವ, ಬತ್ತಲೇಶ ಮುಂತಾದ ಶರಣರು ಇದ್ದಾರೆ. ಇವರಲ್ಲಿ ಸಂಖ್ಯೆಯ ದೃಷ್ಟಿಯಿಂದ ನೂರೊಂದು ಶರಣರು ಇಲ್ಲದಿದ್ದರೂ ಆ ಕಾಲದಲ್ಲಿ ವಚನಗಳನ್ನು ಆಧರಿಸಿಕೊಂಡು ಟೀಕು, ವ್ಯಾಖ್ಯಾನಗಳನ್ನು ಬರೆದ ಬಹುದೊಡ್ಡ ಪಡೆ ಇತ್ತು. ಇವರು ವಚನಗಳನ್ನು ಆಧಾರವಾಗಿಸಿಕೊಂಡು ಅವುಗಳನ್ನು ವೀರಶೈವ ಪರಪಂರೆಯ ಧಾರ್ಮಿಕ ಪಠ್ಯಗಳನ್ನು ಸೃಷ್ಟಿಸಿ ವಚನಗಳಿಗೆ ಒಂದು ಆಚರಣಾ ಮಾರ್ಗವನ್ನು ತಂದು ಸಾಂಸ್ಥಿಕಗೊಳಿಸಿ ವಚನಗಳನ್ನು ವೀರಶೈವ ಆಚರಣಾ ಪಠ್ಯಗಳಾಗಿ ಮಾರ್ಪಡಿಸಿದರು. ಆದರೆ ಶೂನ್ಯ ಸಂಪಾದನೆ ಇದಕ್ಕಿಂತ ಭಿನ್ನ ಪಠ್ಯವಾಗಿ ಉಳಿದುಬಿಟ್ಟಿತು. ಶಿವಗಣಪ್ರಸಾದಿಗೆ ಈ ಒತ್ತಡಗಳು ಇರಲಿಲ್ಲ. ಅವನು ಅಲ್ಲಮನನ್ನು ಸಹಜವಾಗಿ ಚಿತ್ರಿಸಿದ. ಕೈಲಾಸ ಗಣಗಳಲ್ಲಿ ಒಬ್ಬನಾದ ಅಲ್ಲಮ ಸಹಜ ಕಾಮ ತೃಪ್ತಿಗಾಗಿ ಭೂಲೋಕಕ್ಕೆ ಬಂದು ಕಾಮಲತೆಯನ್ನು ಅನುಭವಿಸಿ ಅವಳು ಸತ್ತಾಗ ವೈರಾಗ್ಯ ಪಡೆದವನು. ಇದು ಸಾಂಸ್ಥಿಕ ರಚನೆಗೆ ಒಪ್ಪದ ಸಂಗತಿಯಾಗಿ ವೀರಶೈವ ಕವಿಗಳನ್ನುಕಾಡಿದೆ. (ಹರಿಹರ ಸಹ ಇದೇ ರೀತಿ ಯಾವ ಸಾಂಸ್ಥಿಕ ಒತ್ತಡಗಳಿಗೂ ಸಿಕ್ಕದೆ, ಪ್ರಭುದೇವರ ರಗಳೆ ಬರೆದಿದ್ದ. ಅದೇ ಶಿವಗಣಪ್ರಸಾದಿಗಳಿಗೂ ಸ್ಫೂರ್ತಿ ಕೊಟ್ಟಿದ್ದು) ನಂತರ ಶಿವಗಣಪ್ರಸಾದಿಯ ಈ ಮುಕ್ತ ಧೋರಣೆಯನ್ನು ತಿದ್ದಲು ಮೂರು ಶೂನ್ಯಸಂಪಾದನೆಗಳು ಸೃಷ್ಟಿಯಾಗಬೇಕಾಯಿತು. ಈ ಎಲ್ಲ ಚಟುವಟಿಕೆಯ ಪ್ರೌಢದೇವರಾಯನ ಕಾಲದಲ್ಲಿ ನಡೆದದ್ದರಿಂದ ಇದನ್ನು ನೂರೊಂದು ಯತಿಗಣಗಳ ಚಟುವಟಿಕೆ ಎಂದು ಕರೆಯಲಾಗಿದೆ. ಇದು ವೀರಶೈವದ ಅಕಾಡೆಮಿಕ್ ಚಟುವಟಿಕೆಗಳು ಈ ಕಾಲದಲ್ಲಿ ಅಸಂಖ್ಯಾತ ವೀರಶೈವ ಕೃತಿಗಳು ರಚನೆಯಾಗಿವೆ. ಅಂದರೆ ವೈದಿಕ ಪರಂಪರೆಗೆ ಸವಾಲಾಗಿ ವೀರಶವ ಆಕರಗಳು ನಿರ್ಮಾಣವಾಗಿವೆ. ಈ ನಿರ್ಮಾಣ ಪ್ರಕ್ರಿಯೆಯಲ್ಲಿ ವಚನ ಚಳುವಳಿಯ ಮುಖ್ಯ ಆಶಯಗಳು ಹೊರಸರಿದು ವೀರಶೈವ ಧರ್ಮದ ಸಾಂಸ್ಥಿಕತೆಗಷ್ಟೇ ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಪ್ರಭುತ್ವದ ಸಂಬಂಧದಿಂದ ಇಷ್ಟೆಲ್ಲ ಸಾಧ್ಯವಾಗಿದೆ.

. ೭೦೧ ಗಣಂಗಳು

ವೀರಶೈವ ಧರ್ಮವಾಗಿ ಮಾರ್ಪಡಿಸಲು ಆಕರ ಸಾಮಗ್ರಿಯನ್ನು ನೂರಂದು ಯತಿಗಳು ಸಿದ್ಧಪಡಿಸಿದರು. ಆದರೆ ಅದನ್ನು ಕಾರ್ಯಗತ ಮಾಡಲು ಇನ್ನೊಂದು ನಾಯಕತ್ವ ಶಕ್ತಿ ಬೇಕಾಗಿತ್ತು. ಅದನ್ನು ಸಮರ್ಥವಾಗಿ ನಿರ್ವಹಿಸಿದ ವ್ಯಕ್ತಿ ಎಡೆಯೂರು ಸಿದ್ಧಲಿಂಗಯತಿ. ವೀರಶೈವದ ಆಕರ ಸಾಮಗ್ರಿಯನ್ನು ಇಟ್ಟುಕೊಂಡು ಅದನ್ನು ಸಂಸ್ಥೆಯಾಗಿ ಸ್ಥಾವರಗೊಳಿಸಿದ. ದಕ್ಷಿಣ ಕರ್ನಾಟಕದಲ್ಲಿ ಹರದನಹಳ್ಳಿಯಲ್ಲಿ ಜನಸಿದ ಈತ, ವೀರಶೈವ ಧರ್ಮವನ್ನು ಸಾಂಸ್ಥಿಕಗೊಳಿಸಲು ಅವಿರತವಾಗಿ ಶ್ರಮಿಸಿದ. ಆದರೆ ದಕ್ಷಿಣ ಕರ್ನಾಟಕದಲ್ಲಿ ವೀರಶೈವ ಅಷ್ಟು ಪ್ರಭಾವಿಯಾಗಿರಲಿಲ್ಲ. ಆದ್ದರಿಂದ ಈತ ದಕ್ಷಿಣದಿಂದ ಉತ್ತರಕ್ಕೆ (ಇದೇ ಕಾಲದಲ್ಲಿ ವೀರಶೈವಧರ್ಮಧ ಸಾಂಸ್ಥಿಕತೆಯನ್ನು ವಿರೋಧಿಸಿದ ಮೌಖಿಕ ಪರಂಪರೆಗಳು ಉತ್ತರ ಕರ್ನಾಟಕದ ವೀರಶೌವ ಪ್ರಬಾವದಿಂದ ಬಿಡುಗಡೆಗೊಳ್ಳಲು ದಕ್ಷಿಣಕ್ಕೆ ಚಲಿಸಿವೆ. ಉದಾ. ಮಂಟೇಸ್ವಾಮಿ, ಮಹಾದೇಶ್ವರರು) ಚಾಮರಾಜನಗರದಿಂದ ಹೊರಟು ತುಮಕೂರು ಮಾರ್ಗವಾಗಿ ಗೋಸಲದಿಂದ ಡಂಬಳದವರೆಗೆ ಬಹು ದೊಡ್ಡಯಾತ್ರೆಯನ್ನು ಮಾಡಿದ್ದಾನೆ. ಈ ಸಂದರ್ಭದಲ್ಲಿ ಅನೇಕ ಮಠಗಳನ್ನು ಹುಟ್ಟುಹಾಕಿದ. ಇವನು ತನ್ನ ಶಿಷ್ಯ ಪರಂಪರೆಗೆ ೭೦೧ ಗಣಂಗಳು ಎನ್ನುವ ಹೆಸರಿಟ್ಟ, ಬಸವಣ್ಣನನ್ನು ಹೊರತುಪಡಿಸಿದರೆ ವೀರಶೈವ ಗಣಂಗಳಲ್ಲಿ ಇಷ್ಟು ದೊಡ್ಡ ಗಣಂಗಳು ಮತ್ತೆಲ್ಲೂ ಇಲ್ಲ. ಸಾಂಸ್ಥಿಕ ಕೆಲಸಗಳಿಗಾಗಿ ಶಿಷ್ಯಪರಂಪರೆಯನ್ನು ಹುಟ್ಟುಹಾಕಿದ. ಈ ಶಿಷ್ಯ ಗಣಂಗಳ ಮುಖ್ಯ ಕೆಲಸವೇನೆಂದರೆ ವಚನಗಳನ್ನು ಸಂಪಾದಿಸುವುದು. ಇದಕ್ಕೆ ಸಂಪಾದನಾ ಸಮಯ ಎನ್ನುವ ಒಂದು ಸಮಯಾಚಾರವನ್ನೇ ಹುಟ್ಟುಹಾಕಿದ. ತನ್ನ ೭೦೧ ಶಿಷ್ಯ ಗಣಗಳನ್ನು ಕಟ್ಟಿಕೊಂಡು ವೀರಶೈವ ಮಠಗಳ ಸಂಖ್ಯೆಯನ್ನು ವಿಸ್ತರಿಸಿದ. ಚೀಲಾಳ ಸಮಯ, ಕುಮಾರ ಸಮಯ, ಸಂಪಾದನಾ ಸಮಯ ಎನ್ನುವ ಸಮಯಾಚಾರಗಳನ್ನು ಹುಟ್ಟುಹಾಕಿದ. ವಿರಕ್ತ ಪರಂಪರೆಯ ಬಹುದೊಡ್ಡ ಸಂಘಟನಾಕಾರನಾಗಿ ಬೆಳೆದ. ಶಿವಗಣಪ್ರಸಾದಿಯ ಶೂನ್ಯ ಸಂಪಾದನೆಯನ್ನು ಪ್ರಶ್ನೆ ಮಾಡಿ ಹುಟ್ಟಿದ ಎರಡು ಸಂಪಾದನೆಗಳು ಸಿದ್ಧಲಿಂಗಯತಿಗಳ ಶಿಷ್ಯರು ಸೃಷ್ಟಿಸಿದವು. ಈಗ ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಮಠಗಳಾದ ಮುರುಘಾಮಠ (ಮುರುಗೆಸ್ವಾಮಿ), ಸುತ್ತೂರುಮಠ (ಘನಲಿಂಗಸ್ವಾಮಿ) ಇಳಕಲ್ಲುಮಠ, ಡಂಬಳಮಠ, ಕೊಟ್ಟರು ಮಠ ಇನ್ನು ಮುಂತಾದ ಎಲ್ಲ ಮಠಗಳ ಮೂಲ ಪುರುಷರು ಸಿದ್ಧಲಿಂಗಯತಿಯ ಶಿಷ್ಯರು. ನೂರೊಂದು ಯತಿಗಳಕಾಲದಲ್ಲಿ ಈಗಾಗಲೇ ರಚಿತವಾದ ವಚನಗಳನ್ನು ವ್ಯಾಖ್ಯಾನಿಸುವುದು, ಟೀಕುಗಳನ್ನು ಬರೆಯುವುದು ಹಾಗೂ ಷಟ್ಸ್ಥಲಕ್ಕೆ ಅನುಗಣವಾಗಿ ಜೋಡಿಸುವುದನ್ನು ಕಾಣುತ್ತೇವೆ. ಆದರೆ ಸಿದ್ಧಲಿಂಗಯತಿಗಳು ಷಟ್ಸ್ಥಲಾನ್‌ರಮದಲ್ಲೇ ಸ್ವತಂತ್ರ ವಚನಗಳನ್ನು ಬರೆದು ಷಟ್ಸ್ಥಲಜ್ಞಾನಸಾರಮೃತ ಎನ್ನುವ ಕೃತಿಯನ್ನು ರಚಿಸಿದರು. ೧೨ನೇ ಶತಮಾನದ ವಚನಗಳ ಆಶಯಕ್ಕೆ ವಿರುದ್ಧವಾದ ರಚನೆ ಇದಾಗಿದೆ. ವೀರಶೈವ ಸಂಘಟನೆಗೆ ಉತ್ತರ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡರೂ ಕೊನೆಗೆ ಸಮಾಧಿಯಾಗಲು ದಕ್ಷಿಣದ ಎಡೆಯೂರನ್ನೇ ಆಯ್ಕೆ ಮಾಡಿಕೊಂಡದ್ದು ವಿಸ್ಮಯವಾಗಿದೆ. ಸಿದ್ಧಲಿಂಗಯತಿಯ ನಂತರ ಅನಕ ವೀರಶೈವ ಕೃತಿ ರಚನೆಗಳಲ್ಲಿ, ಸಾಂಘಿಕ ಚಟುವಟಿಕೆಗಳು ಕಾಣಿಸಿಕೊಂಡರೂ ಅದನ್ನು ಗಣ ಎನ್ನುವ ವ್ಯಾಪ್ತಿಯೊಳಗೆ ಇಟ್ಟು ನೋಡಿಲ್ಲ. ನಂತರದ ವೀರಶೈವ ಧರ್ಮವನ್ನು ಕುರಿತ ಬಹುಮುಖ್ಯ ಕೃತಿಗಳು ವಿರೂಪಾಕ್ಷಪಂಡಿತನ ಚನ್ನ ಬಸವ ಪುರಾಣ, ಸಿದ್ಧ ನಂಜೇಶನ ಗುರುರಾಜ ಚಾರಿತ್ರಗಳು. ಈ ಪಠ್ಯಗಳಲ್ಲಿ ಕೈಲಾಸದ ಗಣಗಳು, ಪಂಚವಿಂಶತಿ ಕತೆಗಳು, ೬೩ ಪುರಾತನರ ಕತೆಗಳು, ವೃಷಭಗಣ ಬಸವನಾಗಿ ಹುಟ್ಟುವುದು. ವೀರಶೈವದ ಸ್ಥಾಪನೆ, ಪಂಚಾಚಾರ, ಷಟ್ಸ್ಥಲ, ಅಷ್ಟಾವರಣ ಮುಂತಾದ ವಿವರಗಳಿವೆ.

ಚನ್ನಬಸವ ಪುರಾಣ ವೀರಶೈವರ ಪವಿತ್ರ ಗ್ರಂಥವಾಗಿದ್ದು, ಒಂದು ಪುರಾಣ ಪರಂಪರೆಯನ್ನು ಹುಟ್ಟು ಹಾಕಿದೆ. ವೀರಶೈವ ಮತ ಪರಂಪರೆಯಲ್ಲಿ ಭೀಮ ಕವಿಯ ಬಸವ ಪುರಾಣ ಮತ್ತು ಚನ್ನಬಸವ ಪುರಾಣ ಹೆಚ್ಚು ಪುರಾಣ ಪಠಣಕ್ಕೆ ಒಳಗಾಗಿರುವ ಪಠ್ಯಗಳು. ಇದಾದ ನಂತರ ಅದೃಷ್ಟ ಕವಿಯ ಪ್ರೌಢರಾಯನ ಕಾವ್ಯ (೧೫೮೦), ಶಾಂತಲಿಂಗ ದೇಶಿಕನ ಭೈರವೇಶ್ವರ, ರತ್ನಾಕರ ಕಥಾಮಣಿ ಸೂತ್ರ (೧೬೭೨), ಮಹಾಲಿಂಗೇಂದ್ರವಿಜಯ (೧೮೭೦) ಮುಂತಾದ ಕೃತಿಗಳು ವೀರಶೈವ ಧರ್ಮವನ್ನು ಕುರಿತ ಮುಖ್ಯ ಪಠಗಳಾಗಿವೆ.

ಅನಾಮಧೇಯ ಕವಿಯ ನಿರಂಜನವಂಶ ರತ್ನಾಕರ – ಈ ಕೃತಿ ೧೯ನೇ ಶತಮಾನದ ವೀರಶೈವ ಸಾಹಿತ್ಯ ಪುನಾರಚನೆಯ ಕಾಲದಲ್ಲಿ ತುಂಬ ಬಳಕೆಯಾದ ಕೃತಿ. ಬಹುಶಃ ಇದು ವೀರಶೈವ ಧರ್ಮವನ್ನು ಕುರಿತ ಕೊನೆಯ ಪ್ರಾಚೀನ ಪಠ್ಯ. ಈ ಕೃತಿಯ ಒಟ್ಟು ಬಂಧವನ್ನು ಗಮನಿಸಿದರೆ, ಕರ್ನಾಟಕಕ್ಕೆ ಬ್ರಿಟಿಶ್ ವಸಾಹತುಶಾಹಿ ಪ್ರವೇಶ ಆಗಿತ್ತು ಎನಿಸುತ್ತದೆ. ಭಾಷೆಯ ದೃಷ್ಟಿಯಿಂದ ಈ ಪಠ್ಯ ಒಂದು ಸಂಕ್ರಮಣಾವಸ್ಥೆಯನ್ನು ಅನುಭವಿಸಿದೆ. ಆ ಕಡೆ, ಸಂಪೂರ್ಣ ಪ್ರಾಚೀನವೂ ಅಲ್ಲದ, ಸಂಪೂರ್ಣ ಆಧುನಿಕವೂ ಅಲ್ಲದ ಸಂಕ್ರಮಣ ಪಠ್ಯ. ಜೈನಧರ್ಮವನ್ನು ಕುರಿತಂತೆ, ದೇವಚಂದ್ರನ, ರಾಜಾವಳಿ ಕತೆ (೧೮೦೪) ಯು ಇದೇ ಭಾಷೆಯನ್ನೇ ಹೋಲುತ್ತದೆ.ಸಿದ್ಧಲಿಂಗ ಯತಿಗಳ ವೀರಶೈವ ಚಟುವಟಿಕೆಯನ್ನು ಮುಖ್ಯ ಭಿತ್ತಿಯಾಗಿಸಿಕೊಂಡ ಈ ಕೃತಿ ವೀರಶೈವವನ್ನು ಕುರಿತ ಮೊದಲ ಜನಪದ ಪಠ್ಯದಂತೆ ಇದೆ. ಚರಿತ್ರೆಯನ್ನು ವಾಸ್ತವವಾದಿ ಕ್ರಮದಲ್ಲಿ ನೋಡಲು ಪ್ರಶ್ನಿಸಿದ ಮೊದಲ ವೀರಶೈವ ಪಠ್ಯ. ಆದ್ದರಿಂದ ಹತ್ತೊಂಬತ್ತನೇ ಶತಮಾನದಲ್ಲಿ ಎಲ್ಲ ವೀರಶೈವ ವಿದ್ವಾಂಸರು ಈ ಪಠ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಮತ್ತು ಬಹುಮುಖ್ಯ ಇತಿಹಾಸ ಆಕರವೆಂದು ಬಳಸಿದ್ದಾರೆ. ಈ ಪಠ್ಯದಲ್ಲಿ ಆ ಕಾಲದ ಅನೇಕ ಜನಪದ ಪರಂಪರೆಗಳನ್ನು ವೀರಶೈವ ಕರಿಸುವುದು. ಗೋಸಲಪೀಠ ಪರಂಪರೆಯಲ್ಲಿ ಕೆಳವರ್ಗಧವರಾದ ತಿಪ್ಪೇಸ್ವಾಮಿಯನ್ನು, ಮಹದೇಶ್ವರರನ್ನು ಸೇರಿಸಿಕೊಂಡಿರುವುದು, ದಕ್ಷಿಣದ ವೀರಶೈವ ಚಲನೆಯನ್ನು ಪ್ರಧಾನಧಾರೆಗೆ ತಂದಿರುವುದು, ಯಾರನ್ನೂ ಪುರಾಣೀಕರಿಸದೇ ಇತಿಹಾಸ ವ್ಯಕ್ತಿಗಳೆಂದು ನೋಡುವುದು ಈ ಪಠ್ಯದ ಮುಖ್ಯ ಲಕ್ಷಣಗಳಾಗಿವೆ. ಆದ್ದರಿಂದ ವಸಾಹತುಶಾಹಿ ಕಾಲದಲ್ಲಿ ಈ ಪಠ್ಯ ಹೆಚ್ಚು ಅಧ್ಯಯನದ ಆಕರವಾಗಿ ಬಳಕೆಯಾಗಿದೆ. ಗಣ ಎನ್ನುವ ಪರಿಭಾಷೆ ಈ ಕೃತಿಯ ಉದ್ದಕ್ಕೂ ಬಳಕೆಯಾಗಿದೆ.

. ಪಂಚ ಎಂಬ ಸಂಖ್ಯೆಗೆ ಹೊಂದಿಸುವುದು

ವೀರಶೈವದಲ್ಲಿ ಸಂಖ್ಯೆ ಐದು ತುಂಬಾ ಪವಿತ್ರವಾದದ್ದು ಎನ್ನುವ ನಂಬಿಕೆ ಇದೆ. ಪಂಚಾಕ್ಷರಿ ಮಂತ್ರ, ಶಿವನ ಪಂಚಮುಖ ಇತ್ಯಾದಿ. ಬಸವಣ್ಣ ಕಟ್ಟಿದ ಶರಣ ಧರ್ಮ ಹೆಚ್ಚು ಪ್ರವರ್ಧಮಾನಕ್ಕೆ ಬಂದು ಬಸವಾದಿ ಪ್ರಮಥರನ್ನು ಮುಖ್ಯವಾಗಿಸಿಕೊಂಡು ನೂರೊಂದು ಯತಿಗಳ ಕಾಲದಲ್ಲಿ ಬೌದ್ಧಿಕ ಕೆಲಸಗಳು, ಸಿದ್ಧಲಿಂಗ ಯತಿಗಳ ಕಾಲದಲ್ಲಿ ಮಠಗಳ ಸ್ಥಾಪನೆ, ಸಂಘಟನಾತ್ಮಕ ಚಟುವಟಿಕೆಗಳು ಪ್ರಾರಂಭವಾಗಿ ವಿರಕ್ತ ಮಠಗಲು ಪ್ರಬಲವಾದವು. ವಿಜಯನಗರ ಅರಸರು, ಕೆಳದಿ ಅರಸರು, ಮೈಸೂರು ಒಡೆಯರ ಬೆಂಬಲದಿಂದ ಪ್ರಭುತ್ವದ ನೆರವು ಅಧಿಕವಾಗಿ, ಮಠಕ್ಕೆ ಸಂಬಂಧಪಟ್ಟ ಆಸ್ತಿ ವಹಿವಾಟುಗಳು ಹೆಚ್ಚಾಗಿ, ಪ್ರಬಲ ಜಾತಿಯಾಗಿಯೂ ಕರ್ನಾಟಕದಲ್ಲಿ ಒಂದು ಮನ್ನಣೆ ಪಡೆಯಿತು. ಇದು ೧೨ನೇ ಶತಮಾನದಲ್ಲಿದ್ದ ಪ್ರೀಸ್ಟ್ ಕ್ಲಾಸ್‌ನವರಿಗೆ ಅದರಲ್ಲೂ ಜಂಗಮರಿಗೆ ಅನೇಕ ಕ್ರೈಸಿಸ್‌ಗಳನ್ನು ಉಂಟುಮಾಡಿತು. ದೇವಾಲಯಗಳ ನಿರಾಕರಣೆಯಿಂದ ಇವರಿಗೆ ಸಿಗುತ್ತಿದ್ದ ದಾನ ದತ್ತಿ ದಕ್ಷಿಣೆಗಳು ಇಲ್ಲವಾದವು. ವೇದಾಧ್ಯಯನ ಇವುಗಳೆಲ್ಲ ಅರ್ಥಹೀನ ಎನ್ನುವ ಕಲ್ಪನೆ ಬೆಳೆದು ಬಂದಿತ್ತು. ಬೌದ್ಧಿಕ ಕೆಲಸಗಳಲ್ಲೇ ನಿರಂತರವಾಗಿ ತೊಡಗಿಸಿಕೊಂಡಿದ್ದ ಇವರಿಗೆ ಒಕ್ಕಲುತನ ಒಗ್ಗಲಿಲ್ಲ. ಆದ್ದರಿಂದ ಇವರು ಭೂಹೀನರಾಗಿಯೂ ಉಳಿದರು ವ್ಯಾಪಾರದಲ್ಲಿ ಇವರಿಗೆ ಆಸಕ್ತಿ ಇರಲಿಲ್ಲ. ಆದರೆ ಬಸವಣ್ಣನ ಶರಣ ಧರ್ಮವನ್ನು ಅನುಸರಿಸಿದ ಅನೇಕ ಸಮುದಾಯಗಳು ಪ್ರತಿಷ್ಠಿತ ಜಾತಿಗಳಾಗಿ ಮತ್ತು ಆರ್ಥಿಕವಾಗಿ ಸಬಲರಾಗಿ ಬೆಳೆದರು. ಈ ಶರಣ ಧರ್ಮ ಹೆಚ್ಚು ಪ್ರಭಾವಿತವಾಗಿದ್ದ ಉತ್ತರ ಕರ್ನಾಟಕದಲ್ಲಿ ಈ ಪ್ರೀಸ್ಟ್ ಕ್ಲಾಸ್‌ನವರು (ಐನೋರು) ಹೆಚ್ಚಿದ್ದರು. ಬಸವಣ್ಣ ಪುರೋಹಿತಷಾಹಿಯನ್ನು ಎಷ್ಟೇ ವಿರೋಧಿಸಿದ್ದರು. ಉತ್ತರ ಕರ್ನಾಟಕದ ವೀರಶೈವ ಸಮುದಾಯ ಈ ಪ್ರೀಸ್ಟ್ ಕ್ಲಾಸಿನವರನ್ನು ಗುರುಗಳೆಂದು ಒಪ್ಪಿಕೊಂಡು ಹಬ್ಬಹರಿದಿನಗಳಲ್ಲಿ ಕರೆಸಿ ಪಾದಪೂಜೆಮಾಡಿ, ಅಷ್ಟು ಇಷ್ಟು ದಕ್ಷಿಣೆ ಕೊಟ್ಟು ಕಳುಹಿಸುವ ಒಂದು ಪರಿಪಾಠವನ್ನು ಬೆಳೆಸಿಕೊಂಡಿತ್ತು. ಇದೊಂದು ಆಚರಣಾತ್ಮಕ ಅಭ್ಯಾಸವಾಗಿ ಒಳಗೊಳಗೆ ಜನಪದ ಧರ್ಮವಾಗಿ ಬೆಳೆದುಕೊಂಡು ಬಂದಿತ್ತು. ಈ ಶರಣ ಧರ್ಮ ನೂರೊಂದು ಯತಿ ಪರಂಪರೆಯಲ್ಲಿ (ವಿಜಯನಗರ ಕಾಲ) ನಂತರ ಸಿದ್ಧಲಿಂಗ ಯತಿಗಳ ಕಾಲದಲ್ಲಿ ತೀವ್ರಾಗಿದ್ದಾಗಲೆಲ್ಲಾ, ಈ ಪ್ರೀಸ್ಟ್ ಕ್ಲಾಸಿನವರು ಯಾವುದೇ ಗೌರವ ಮನ್ನಣೆಗಳು ಇಲ್ಲದೆ ಪರಿಧಿಗೆ ಸರಿದ ಅಸಮಾಧಾನಿಗಲಾಗಿದ್ದರು. ಆದರೆ ಲಿಂಗಾಯತ ಸಮುದಾಯದಲ್ಲಿ ಇವರಿಗೆ ಒಂದು ಆಚಾರಣಾತ್ಮಕ ಮನ್ನಣೆಯಿತ್ತು. ಇದು ಮುಂದೆ ಗುರು – ವಿರಕ್ತ ಪೀಠಗಳ ಸಂಘರ್ಷಕ್ಕೆ ನಾಂದಿಯಾಯಿತು. ಗುರು ಪೀಠದವರು ತಮ್ಮ ಅನನ್ಯತೆಗಾಗಿ ಬಸವ ಪೂರ್ವದ ಶೈವ ಸಾಂಸ್ಕೃತಿಕ ಆಕರಗಳನ್ನು ಹುಡುಕಲು ಮತ್ತು ನಾವು ಬಸವಣ್ಣನಿಗಿಂತ ಶ್ರೇಷ್ಠರು ಎನ್ನುವುದಕ್ಕೆ ಆಕರಗಳನ್ನು ಸೃಷ್ಟಿಸಲು ಪ್ರಯತ್ನ ಮಾಡಿದರು. ಅದರಲ್ಲೂ ೧೯ನೇ ಶತಮಾನದ ಆದಿಯಲ್ಲೇ ಈ ಚಟುವಟಿಕೆ ತೀವ್ರವಾಗಿದೆ. ಇವರು ಸಂಸ್ಕೃತಿ ಕೃತಿಗಳಾದ ಶಿವಯೋಗಿ ಶಿವಾಚಾರ್ಯನ ಸಿದ್ಧಾಂತ ಶಿಖಾಮಣಿ (೧೩ನೇ ಶ.) ಶ್ರೀಕರಪಂಡಿತನ ಶ್ರೀಕರಭಾಷ್ಯ (೧೪ನೇ ಶತ.) ಮಗ್ಗೆಯ ಮಾಯಿದೇವನ ಶಿವಾನುಭಸೂತ್ರ (೧೫ನೇ ಶ.) ನಂದಿಕೇಶ್ವರನ ಲಿಂಗಧಾರಣ ಚಂದ್ರಿಕ (೭ನೇ ಶ.) ಮುಂತಾದ ಸಂಸ್ಕೃತ ಗ್ರಂಥಗಳನ್ನು ಆಕರಗಳಾಗಿ ಬಳಸುತ್ತಾ, ಪಂಚಾಚಾರ್ಯರ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಇದೇ ಕಾರಣಕ್ಕೆ ಬನಾರಸ್ ಕಾಶಿಪೀಠವನ್ನು, ಕೇದಾರ ಪಂಡಿತಾರಾಧ್ಯ ಪೀಠವನ್ನು ಉದ್ದೇಶ ಪೂರ್ವಕವಾಗಿ ಸೇರಿಸಿಕೊಂಡರು ಮತ್ತು ಸಿದ್ಧಾಂತ ಶಿಖಾಮಣಿ ಬಸವಪೂರ್ವದ ಕೃತಿಯೆಂದು ವಾದಿಸಿಸಿದರು. ಇತ್ತೀಚಗಷ್ಟೆ ಸಿದ್ಧಾಂತ ಶಿಖಾಮಣಿ ಹದಿಮೂರನೇ ಶತಮಾನದ್ದು ಎಂಬುದನ್ನು ಆಧಾರಗಳ ಸಹಿತವಾಗಿ ನಿರ್ಣಯಿಸಲಾಗಿದೆ. ಇದಕ್ಕಿಂತ ಮುಖ್ಯವಾಗಿ ಪಂಚಾಚಾರ‍್ಯರಲ್ಲಿ ಒಬ್ಬನಾದ ಮರುಳಸಿದ್ಧ ಮಾದಿಗರ ಮೂಲದವನು ಎನ್ನುವ ಚರ್ಚೆಗಳು ಪ್ರಾರಂಭವಾದವು. ದೇಪಕವಿ ಮರುಳಸಿದ್ಧ ಚಾರಿತ್ರ (೧೫೮೭) ವನ್ನು ಬರೆದು ಮರುಳಸಿದ್ಧ ಮಾದಿಗರ ಹುಡುಗ ಎಂದು ತಿಳಿಸಿದ. ಅ.ನ.ಕೃ. ಈ ಕೃತಿಯನ್ನು ಸಂಪಾದಿಸಿ, ಕಟ್ಟಾ ಸಂಪ್ರದಾಯವಾದಿ ಪಂಚಾಚಾರ್ಯರ ಪ್ರತಿರೋಧವನ್ನು ಎದುರಿಸಬೇಕಾಯಿತು. ಉಜ್ಜನಿಪೀಠ ಒಡೆದು ಸಿರಿಗೆರೆಪೀಠವಾಗಿ ಹೊರ ಬಂದಿತು. ಸಾದರು ಮರ್ಚೆಂಟ್ ಕ್ಲಾಸಿನವರಾಗಿದ್ದು, ಸಿರಿಗೆರೆ ಪೀಠಕ್ಕೆ ಹೆಚ್ಚಿನ ಬೆಂಬಲ ನೀಡಿದರು. ಸಿರಿಗೆರೆ ಪೀಠದವರು ಬಸವಣ್ಣನ ಅನುಯಾಯಿಗಳೆಂದು ತಾತ್ವಿಕವಾಗಿ ಗುರುತಿಸಿಕೊಂಡರು. ಈ ಎರಡು ಮಠಗಳ ಆಸ್ತಿ ಅಧಿಕಾರ ವಿವಾದಗಳಿಗೆ ಸಂಬಂಧಪಟ್ಟಂತೆ ಸಂಘರ್ಷಗಳು ೧೯ನೇ ಶತಮಾನದಲ್ಲಿ ತಾರಕಕ್ಕೆ ತಲುಪಿ ಕೋರ್ಟು ಕಛೇರಿಗಳ ಮೂಲಕ ವ್ಯಾಜ್ಯಕ್ಕೆ ನಿಂತಿವೆ. ೧೫ನೇ ಶತಮಾನದಿಂದಲೇ ಸಣ್ಣಗೆ ಕಾಣಿಸಿಕೊಂಡ ಈ ಸಂಘರ್ಷ ವೀರಶೈವ ಸಮಾಜದಲ್ಲಿ ಈಗಲೂ ಹೆಚ್ಚು ಜೀವಂತವಾಗಿರುವ ಸಮಸ್ಯೆ. ಇಷ್ಟು ಪ್ರಾಚೀನ ಸಾಂಸ್ಕೃತಿಕ ಇತಿಹಾಸವಿರುವ ಸಂಘರ್ಷಕ್ಕೆ ಜನಪದ ಸಾಹಿತ್ಯವು ಇನ್ನೊಂದು ವೀರಶೈವ ಜನಪದ ಗಣ ಪರಂಪರೆಯನ್ನೇ ಕಟ್ಟುವ ಮೂಲಕ ತನ್ನ ಸಾಂಸ್ಕೃತಿಕ ಅನನ್ಯತೆಯನ್ನು ಮಧ್ಯ ಕರ್ನಾಟಕದಲ್ಲಿ ಸ್ಥಾಪಿಸಿಕೊಂಡಿದೆ. ಅದೇ ಪಂಚಗಣಾಧೀಶ್ವರರು ಎನ್ನುವ ಮೂಮೆಂಟ್.

. ಪಂಚಗಣಾಧೀಶ್ವರರು

ಸುಮಾರು ೧೬ನೇ ಶತಮಾನದಲ್ಲಿ ಕೊಟ್ಟೂರು ಗುರುಬಸವೇಶ್ವರನನ್ನು (೧೫೬೦) ನಾಯಕತ್ವದಲ್ಲಿ ಈ ಚಳುವಳಿ ನಡೆದಿದೆ. ಕಲ್ಯಾಣದ ಕ್ರಾಂತಿಯಾದ ನಂತರ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ವಚನ ಪರಂಪರೆಯ ವಿಭಿನ್ನ ಧಾರೆಗಳು ಕಲ್ಟ್‌ಗಳಾಗಿ ಬೆಳೆದಿರುವುದನ್ನು, ಸುಮುದಾಯಗಳು ಇವುಗಳಿಗೆ ನಡೆದುಕೊಳ್ಳುವುದನ್ನು, ಇತ್ತೀಚಿನ ಅಧ್ಯಯನದಲ್ಲಿ ಗುರುತಿಸಲಾಗಿದೆ. ಆದರೆ ಮಧ್ಯ ಕರ್ನಾಟಕದಲ್ಲಿ ಬಹುದೊಡ್ಡ ಸಾಂಸ್ಕೃತಿಕ ವಿದ್ಯಮಾನವಾಗಿ ಪಂಚಗಣಾಧೀಶ್ವರ ಮೂಮೆಂಟ್ ಹುಟ್ಟಿಕೊಂಡಿದೆ. ಈ ಪರಂಪರೆ ತನ್ನ ಚಲನೆಗೆ ಮುಖ್ಯವಾಗಿ ಮೌಖಿಕ ಧಾರೆಗಳನ್ನು ಅವಲಂಬಿಸಿದೆ. ಆದರೆ ಕೊಟ್ಟರೂ ಗುರುಬಸವೇಶ್ವರರನ್ನು ಕುರಿತು ಶಿಷ್ಟ ಕಾವ್ಯಗಳಾದ ಸಿದ್ದನಂಜೇಶನ ಗುರು ಬಸವ ರಾಜ ಚಾರಿತ್ರ (೧೫೩೦) ಬಸವಲಿಂಗ ಕವಿಯ ಶ್ರೀ ಕೊಟ್ಟೂರು ಬಸವೇಶ್ವರ ಚಾರಿತ್ರ (೧೬೭೮) ಚೀಲಾಳ ಸ್ವಾಮಿಯ ಷಟ್ಸ್ಥಲ ಶಿವಾಯಣ (೧೭೦೦)ದಲ್ಲಿ ಇವರನ್ನು ಕುರಿತು ಪ್ರಸ್ತಾಪಿಸಿದ್ದಾನೆ. ಇಷ್ಟೆಲ್ಲ ಚಾರಿತ್ರಿಕ ಆಧಾರಗಳು ಕೊಟ್ಟೂರೇಶ್ವರನನ್ನು ಕುರಿತ ಇದೆ. ಆದರೂ ೧೯ನೇ ಶತಮಾನದಲ್ಲಿ ವೀರಶೈವ ಸಾಂಸ್ಕೃತಿಕ ಅನನ್ಯತೆಗಳನ್ನು ಕಟ್ಟಿಕೊಳ್ಳುವಾಗ ಈ ಪರಂಪರೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಲಿಲ್ಲ. ಈ ಕಾರಣದಿಂದಲೇ ಅದು ಜನಪದ ಪರಂಪರೆಯಲ್ಲಿ ಬಹು ದೊಡ್ಡ ಪರಂಪರೆಯಾಗಿ ಬೆಳೆಯಲು ಕಾರಣವಾಗಿದೆ. ಪಂಚಗಣಾಧೀಶ್ವರರು ಎಂಬುದು ಶುದ್ಧಾಂಗವಾಗಿ ಜನಪದ ಪರಿಕಲ್ಪನೆಯಲ್ಲ. ಪಂಚಾಚಾರ್ಯರಲ್ಲಿ ಹೇಗೆ ಐದು ಎಂಬ ಸಂಖ್ಯೆಗೆ ಪೀಠಾಧಿಪತಿಗಳನ್ನು ಕೂಡಿಸುವ ಪ್ರಯತ್ನ ಮಾಡಿದರೋ ಹಾಗೆ ಜನಪದರು ಮಾಡಿದ್ದಾರೆ. ಪಂಚಾಚಾರ್ಯರಲ್ಲಿ ಕೇದಾರದ ಪಂಡಿತಾರಾಧ್ಯ, ಕಾಶಿಯ ವಿಶ್ವಾರಾಧ್ಯ ಇದೇ ಕಾಲದವರು ಎಂಬುದಕ್ಕೆ ಆಧಾರಗಳಿಲ್ಲವೋ ಹಾಗೇ ಇಲ್ಲಿಯೂ ಅರಸೀಕೆರೆ ಕೋಲಶಾಂತೇಶ, ಹರಪನಹಳ್ಳಿ ಕೆಂಪೇಶ ಈ ಕಾಲಕ್ಕೆ ಒಗ್ಗುವ ವ್ಯಕ್ತಿಗಳಾಗಿಲ್ಲ. ಶಿಷ್ಟ ಸಾಹಿತ್ಯ ಹೇಗೆ ಕಟ್ಟುವ ಪ್ರಯತ್ನ ಮಾಡಿತ್ತೋ ಹಾಗೆ ಜನಪದವು ಕಟ್ಟುವ ಕೆಲಸ ಮಾಡುತ್ತದೆ. ಕೊಟ್ಟೂರು ಗುರುಬಸವ, ಕೂಲಹಳ್ಳಿ ಮದ್ದಾನೇಶ, ನಾಯಕನಹಟ್ಟಿ ತಿಪ್ಪೇಶರು ಮಾತ್ರ ಚಾರಿತ್ರಿಕ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಅರಸೀಕೆರೆ ಕೋಲಶಾಂತೇಶ, ಹರಪನಹಳ್ಳಿ ಕೆಂಪೇಶ ಇವರು ಇದೇ ಕಾಲದವರು ಎಂಬುದಕ್ಕೆ ಆಕರಗಳು ಇಲ್ಲ.

ಇವರೆಲ್ಲ ಇವರ ಹೆಸರಿನ ಮುಂದೆ ಇರುವ ಊರುಗಳಲ್ಲಿ ಐಕ್ಯವಾಗಿದ್ದಾರೆ. ಈ ಎಲ್ಲ ಶರಣರು ಸಮಾಧಿಯಾಗಿರುವ ಸ್ಥಳಗಳಲ್ಲಿ ಜಾತ್ರೆ ಉತ್ಸವಗಳು ನಡೆಯುತ್ತವೆ. (ಹೆಚ್ಚಿನ ಮಾಹಿತಿಗಾಗಿ ಪಂಚಗಣಾಧೀಶ್ವರರು ಒಂದು ಅಧ್ಯಯನ, ಸತೀಶ ಪಾಟೀಲ, ಕನ್ನಡ ವಿಶ್ವವಿದ್ಯಾಲಯ, ಹಂಪಿ)

ಹೀಗೆ ಕೊಟ್ಟೂರು ಗುರು ಬಸವೇಶ್ವರನ ನಾಯಕತ್ವದಲ್ಲಿ ನಡೆದ ಈ ವೀರಶೈವ ಶರಣ ಚಳುವಳಿಯೊಳಗೆ ಒಂದು ಸಂಕರಶೀಲ ಸಂಗತಿಯೊಂದು ಸೇರಿಕೊಂಡಿದೆ. ಅದೇನೆಂದರೆ ಐದು ಮಂದಿ ಶರಣರಲ್ಲಿ ಒಬ್ಬನಾದ ಮದ್ದಾನೇಶ್ವರ ದೇವದಾಸಿಯಾಗಿದ್ದ ಬೇಡರ ಕನಕಮ್ಮನನ್ನು ಮದುವೆಯಾಗುತ್ತಾನೆ. ಇದರಿಂದ ಅವನು ಈ ಶಿಷ್ಟ ವೀರಶೈವದಿಂದ ಬಿಡುಗಡೆಗೊಂಡು ಜನಪದ ದೈವವಾಗುತ್ತಾನೆ. ಹೀಗೆ ಹೊರಗಾದ ವ್ಯಕ್ತಿಯನ್ನೇ ಕೇಂದ್ರವಾಗಿಸಿಕೊಂಡು ಆ ಸಮುದಾಯಗಳು ಈ ಪರಂಪರೆಯಲ್ಲಿ ಪ್ರವೇಶ ಪಡೆಯುತ್ತವೆ. ಬೇಡ ಸಮುದಾಯದವರು ಪಂಚಗಣಾಧೀಶ್ವರರಾದ ಇವರಿಗೆ ನಡೆದುಕೊಳ್ಳುತ್ತಾರೆ. ಹಾಗೂ ಅಸ್ಪೃಶ್ಯರಾದ ಬಾಲಬಸವ ಸಮುದಾಯದವರು ಈ ಸಾಂಸ್ಕೃತಿಕ ನಾಯಕರನ್ನು ತಮ್ಮ ಪೂರ್ವಿಕರೆಂದು ಕರೆದುಕೊಂಡು ಅವನ ಜೀವನ ವಿವರಗಳನ್ನು ಕತೆ ಕಟ್ಟಿ ಹಾಡುವುದರ ಮೂಲಕ ಒಂದು ಮಖಿಕ ಪರಂಪರೆಯನ್ನು ಬೆಳೆಸುತ್ತಾರೆ. ಇದರ ಪರಿಣಾಮವಾಗಿ ಹುಟ್ಟಿದ ಕಾವ್ಯಗಳಲ್ಲಿಗೋಣಿ ಬಸಪ್ಪನ ಕಾವ್ಯವು ಒಂದಾಗಿದೆ. ಗೋಣಿ ಬಸಪ್ಪನ ಕಾವ್ಯ ಪಂಗಣಾಧೀಶ್ವರರ ಎರಡನೇ ತಲೆಮಾರಿನ ಕಥೆ. ಪಂಚಗಣಾಧೀಶ್ವರರಲ್ಲಿ ಒಬ್ಬನಾದ ಮದ್ದಾನೇಶ್ವರ, ಗೋಣಿ ಬಸವನ ತಂದೆ, ತಾಯಿ ಬೇಡರ ಕನಕಮ್ಮ ಇವರಿಬ್ಬರಿಗೆ ಹುಟ್ಟಿದವನೇ ಗೋಣಿ ಬಸವ. ಜಾತೀಯತೆ ಪ್ರಬಲವಾಗಿದ್ದ ಹದಿನೈದನೇ ಶತಮಾನದಲ್ಲಿ ಈ ತರದ ಒಂದು ವಿದ್ಯಮಾನ ಮುಂದಿನ ವೀರಶೈವ ಪಠ್ಯಗಳಿಗೆತುಂಬಾ ಮುಜುಗರದ ಸಂಗತಿಯಾಗಿ ಕಾಡಿದೆ. ಅವರಿಗೆ ಹದಿನಾರನೇ ಶತಮಾನದ ವೀರಶೈವ ಸಂಘಟಕನಾದ ಕೊಟ್ಟೂರೇಶ್ವರ ಬೇಕು. ಆದರ ಆ ಪಟ್ಟಿಯೊಳಗೆ ಈ ತರ ಕುಲಗೆಟ್ಟ ಮದ್ದಾನೇಶ್ವರ ಇದ್ದಾನೆ. ಶಿಷ್ಟ ವೀರಶೈವ ಕವಿಗಳಿಗೆ ಈ ಸಂಕರಶೀಲತೆಯನ್ನು ವಿರಚಿಸುವುದು ಕಷ್ಟದ ಸಂಗತಿಯಾಗಿ ಶಿಷ್ಟಕಾವ್ಯಗಳಲ್ಲಿ ಈ ಪ್ರಸಂಗವನ್ನು ಕೈ ಬಿಟ್ಟಿದ್ದಾರೆ. ಆದ್ದರಿಂದ ಹದಿನಾರನೇ ಶತಮಾನದಲ್ಲಿ ಹುಟ್ಟಿದ ಈ ಬಹುದೊಡ್ಡ ಮೂಮೆಂಟ್ ಮುನ್ನೆಲೆಗೆ ಬರಲೇ ಇಲ್ಲ. ಆದರೆ ಮೌಖಿಕ ಪರಂಪರೆ ಇದನ್ನೇ ಕೇಂದ್ರವಾಗಿಸಿಕೊಂಡಿದೆ. ಒಟ್ಟು ಈ ಪರಂಪರೆಯಲ್ಲಿ ಮೂರು ಕುಲಗಳು ಸೇರ್ಪಡೆಯಾಗಿರುವುದರಿಂದ ಒಂದೊಂದು ಸಮುದಾಯ ಒಂದೊಂದು ಅನನ್ಯತೆಯ ಮೂಲಕ ತನ್ನ ಎಂಟ್ರಿಯನ್ನು ಉಳಿಸಿಕೊಂಡಿದೆ. ಕನಕಮ್ಮ ಬೇಡರ ಸಮುದಾಯದಲ್ಲಿದ್ದ ದೇವದಾಸಿ ಪದ್ಧತಿಯ ಪ್ರತೀಕವಾಗಿ ಬರುತ್ತಾಳೆ. ದೇವದಾಸಿ ಪದ್ಧತಿಯನ್ನು ಪ್ರಾಕ್ಟೀಸ್‌ನಲ್ಲಿ ಇಟ್ಟುಕೊಂಡಿರುವ ಮಾದಿಗ ಕುಲದವರು ಈ ದೈವಕ್ಕೆ ಭಕ್ತರು. ಗೋಣಿ ಬಸವನ ತಂದೆ ಲಿಂಗಾಯತ, ತಾಯಿ ಬೇಡರಾಕಿ, ಹೆಂಡತಿ ಕುರುಬರವಳು. ಈ ಕಾರಣದಿಂದ ಕುರುಬರ ಸೇರ್ಪಡೆ. ಇಷ್ಟೆಲ್ಲಾ ಸಂಕಷ್ಟಗಳನ್ನು ನಿಭಾಯಿಸಿಕೊಂಡು ದೈವವಾದ ಗೋಣಿಬಸವ ಜೀವನ ವಿವರವೇ ಗೋಣಿ ಬಸವನ ಕಾವ್ಯ.

. ಬಾಲ ಬಸವರು ಯಾರು?

ಬಾಲಬಸವರು ಮೂಲತಃ ಮಾದಿಗ ಕುಲದವರು. ಬಸವಣ್ಣನ ದತ್ತು ಪುತ್ರರೆಂದು ಕರೆದುಕೊಳ್ಳುತ್ತಾರೆ. ಇವರು ಯಾವ ಕಾಲಘಟ್ಟದಲ್ಲಿ ವೀರಶೈವ ಧರ್ಮಕ್ಕೆ ಸೇರಿಕೊಂಡರು ಎಂಬುದು ತಿಳಿದು ಬಂದಿಲ್ಲ. ಕಲ್ಯಾಣದ ಕ್ರಾಂತಿಯ ನಂತರ ಅದರ ಪ್ರಭಾವಕ್ಕೆ ಒಳಗಾದ ಮಾದಿಗರ ಒಂದು ಕುಲ ತನ್ನಜೀವನ ಕ್ರಮದಲ್ಲಿ ವೀರಸೈವರನ್ನು ಅನುಸರಿಸಿಕೊಂಡು ತಾನೇ ಲಿಂಗಧಾರಣೆಯನ್ನು ಮಾಡಿಕೊಂಡು, ಮಾಂಸಾಹಾರವನ್ನು ತ್ಯಜಿಸಿ, ಮಾದಿಗರ ಮನೆಯಲ್ಲಿ ಉಣ್ಣುವುದನ್ನು ಬಿಟ್ಟು, ಹೆಣ್ಣನ್ನು ತಂದು ಅವಳನ್ನು ಲಿಂಗಾಯಿತೀಕರಿಸಿಕೊಂಡು ಮದುವೆ ಮಾಡಿಕೊಳ್ಳುವುದು. ಆ ಮೂಲಕ ಮಾದಿಗ ಕುಲದಿಂದ ಪ್ರತ್ಯೇಕವಾಗುವುದು. ವೃತ್ತಿಯಿಂದ ಇವರು ಕಾಲಜ್ಞಾನವನ್ನು ಸಾರುವ ಹಾಡುವ ಕುಲದವರು. ಆ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದವರು. ಬಸವರ್ಪೂದಲ್ಲೂ ಇದೇ ವೃತ್ತಿಯನ್ನು ಅನುಸರಿಸುತ್ತಿದ್ದರು. ಎಂದು ಊಹೆ ಮಾಡಬಹುದು. ಬಸವಣ್ಣನ ಕಲ್ಯಾಣದ ಕ್ರಾಂತಿಯ ನಂತರ ಇವರು ತಮ್ಮ ಕುಲವೃತ್ತಿಯನ್ನು ಉಳಿಸಿಕೊಳ್ಳಲು, ಅನಿವಾರ್ಯವಾಗಿ ಜೀವನಕ್ರಮವನ್ನು ಬದಲಿಸಿಕೊಳ್ಳಬೇಕಾದ ಒತ್ತಡ ಬಂದಾಗ ವೀರಶೈವರಂತೆ ದೀಕ್ಷಿತರಾಗಿ ತಾವೇ ವೀರಶೈವೀಕರಣಗೊಂಡಿದ್ದಾರೆ. ಈ ತರದ ಒಂದು ಜೀವನ ಕ್ರಮಕ್ಕೆ ಈಡಾದಾಗ ಸಹಜಡವಾಗಿ ಮಾದಿಗ ಸಮುದಾಯದಿಂದ ಪ್ರತ್ಯೇಕಿಕರಣಗೊಂಡು ಅವರಿಗೆ ಗುರುಸ್ಥಾನದಲ್ಲಿದ್ದಾರೆ. ಕಾಲಜ್ಞಾನ ಸಾರುವವೃತ್ತಿ ಇದ್ದುದರಂದ ಲಿಂಗಾಯತರಿಂದಲೂ ಸಾಂಸ್ಕೃತಿಕ ಮನ್ನಣೆ ಪಡೆದು ಅವರಿಂದ ಭಿಕ್ಷೆಗೆ ಅರ್ಹರಾಗಿದ್ದಾರೆ. ಈ ತರದ ಒಂದು ಬಾಹ್ಯ ಬದಲಾವಣೆ ಇವರ ವೃತ್ತಿಗೆ ಒಂದು ಚಾಲನೆಯನ್ನು ತಂದುಕೊಟ್ಟಿದ್ದರೆ, ಅವರ ವೈವಾಹಿಕ ಸಂಬಂಧಗಳಲ್ಲಿ ಬಹುದೊಡ್ಡ ಇಕ್ಕಟ್ಟನ್ನು ಉಂಟುಮಾಡಿದೆ. ಅದೇನೆಂದರೆ ಇವರ ವೀರಶೈವರಾಗಿ ಪರಿವರ್ತನೆಗೊಂಡಿದ್ದರೂ ಇವರಿಗೆ ವೀರಶೈವರಾರು ಹೆಣ್ಣು ಕೊಡುವುದಿಲ್ಲ. ಇಲ್ಲಿ ಮಾದಿಗ ಸಮುದಾಯದವರು ಇವರು ಗುರುಸ್ಥಾನದಲ್ಲಿರುವುದರಿಂದ ಅವರು ಇವರೊಟ್ಟಿಗೆ ವೈವಹಾಕಿ ಸಂಬಂಧಗಳನ್ನು ಮಾಡಲು ಹೆದರಿದ್ದಾರೆ. ಇಂಥ ಇಕ್ಕಟ್ಟಿನಲ್ಲಿ ಕೊನೆಗೆ ಬಾಲಬಸಪ್ಪಗಳು ಒಂದು ರಾಜಿ ಸೂತ್ರಕ್ಕೆ ಬರಬೇಕಾಯಿತು. ಅದೇನೆಂದರೆ ಮಾದಿಗರ ಮನೆಯಿಂದ ಹೆಣ್ಣು ಪಡೆದು ಅವಳನ್ನು ವೀರಶೈವೀಕರಣಗೊಳಿಸಿಕೊಂಡು ಗಂಡು ಮಕ್ಕಳಿಗೆ ಮದುವೆ ಮಾಡಿಕೊಂಡರು. ಆದರೆ ಇವರ ಹೆಣ್ಣು ಮಕ್ಕಳನ್ನು ಮದಾಗಿರು ಮದುವೆ ಮಾಡಿಕೊಂಡು ಮಾದಿಗೀಕರಣಗೊಳಿಸುವ ಅಗತ್ಯ ಬರಲಿಲ್ಲ. ಆದ್ದರಿಂದ ಬಾಲಬಸಪ್ಪಗಳಿಗೆ ಹುಟ್ಟಿದ ಹೆಣ್ಣು ಸಂತಾನವೆಲ್ಲ, ದೇವದಾಸಿಯರಾಗುವುದು ಒಂದು ಪದ್ಧತಿಯಂತೆ ಬೆಳೆದು ಬಂದಿದೆ. ಇವರನ್ನು ಬಾಲಬಸವಿಯರೆಂದು ಕರೆಯುತ್ತಾರೆ. ದೇವದಾಸಿ ಪದ್ಧತಿ ಕರ್ನಾಟಕದಾದ್ಯಂತ ಚಾಲ್ತಿಯಲ್ಲಿದ್ದ ಪುರಾತನ ಪದ್ಧತಿ, ಅದರಲ್ಲೂ ಮುಖ್ಯವಾಗಿ ಬೇಡರಲ್ಲಿ, ಹೊಲೆಮಾದಿಗರಲ್ಲಿ ಹೆಚ್ಚು ಇದ್ದ ಪದ್ಧತಿ, ಬಾಲಬಸಪ್ಪಗಳಿಗೆ ಈ ಪ್ರಾಚೀನ ಪದ್ಧತಿಗೆ ಮರಳುವುದು ಅನಿವಾರ‍್ಯವಾಗಿದೆ. ಅದಕ್ಕೆ ಮುಖ್ಯ ಕಾರಣ ವೀರಶೈವ ಧರ್ಮಕ್ಕೆ ಮತಾಂತರವಾಗಿರುವುದು. ಕಾಲಜ್ಞಾನ ಸಾರುವುದು ಮತ್ತು ಮಧ್ಯಕಾಲೀನ ಶರಣರ ಜೀವನವನ್ನು, ಮುಖ್ಯ ಘಟನೆಗಳನ್ನು ಕಥನವಾಗಿ ಕಟ್ಟಿಹಾಡುವುದು, ಊರಾಡುವುದು ಇವರ ಕಸುಬಾಗಿದೆ. ತಮ್ಮ ಕುಲದಲ್ಲಿ ನಡೆದ ಈ ತರದ ಒಂದು ವಿಘಟನೆಯಿಂದ ತೀರ ಅಲ್ಪಸಂಖ್ಯಾತರಾಗಿರುವ ಇವರು ಅಸಂಘಟಿತರಾಗಿದ್ದಾರೆ. ಈ ಸಂಪ್ರದಾಯವನ್ನು ಬಿಡುವ ಬಗ್ಗೆಯ ಕೆಲವು ಅಕ್ಷರಸ್ಥರು ಆಸಕ್ತರಾಗಿದ್ದಾರೆ. ಈ ಕತೆಯನ್ನು ಹಾಡಿರುವ ತುಮ್ಮನೆಪ್ಪನ ಮಗ ಬಾಲಬಸವ ದೀಕ್ಷೆ ಪಡೆದಿಲ್ಲ. ಅದಕ್ಕೆ ಮುಖ್ಯ ಕಾರಣ ಅವನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅವರನ್ನು ಬಸವಿಯಾಗಿ ಬೆಳೆಸಲು ವೈಯಕ್ತಿಕವಾಗಿ ಅವನಿಗೆ ಇಷ್ಟವಿಲ್ಲ. ಆದ್ದರಿಂದ ಅವನು ಮಾದಿಗ ಸಮುದಾಯದಲ್ಲೇ ಉಳಿದುಕೊಳ್ಳಲು ಆಸಕ್ತನಾಗಿದ್ದಾನೆ. ಇದೊಂದು ಧರ್ಮ ಸಂಕಟದ ಸಂಗತಿ, ಪುರಾತನ ಕಾಲದಿಂದಲೂ ಭಿಕ್ಷೆ ಮತ್ತು ಊರಾಡುವ ಕ್ರಮದಿಂದಬಲ ಬಸವರು ಸಂಪ್ರದಾಯಕ್ಕೆ ಒಗ್ಗಿ ಹೋಗಿದ್ದಾರೆ, ಇವರಿಗೆ ತಕ್ಷಣಕ್ಕೆ ಮತ್ತೊಂದು ಜೀವನ ವಿಧಾನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿದೆ. ಕೂಲಿ ಮತ್ತು ದುಡಿಮೆ ಇವರಿಗೆ ಕಷ್ಟದ ಕೆಲಸ. ವರ್ಷಕ್ಕೆ ಒಂದು ಬಾರಿ ಸುಗ್ಗಿಯ ಕಾಲದಲ್ಲಿ ಊರಾಡಿಕೊಂಡು ಬಂದರೆ (ಲಿಂಗಾಯತರು, ಕುರುಬರು, ಬೇಡರು ಮತ್ತು ಮಾದಿಗರು ಇವರಿಗೆ ಭಿಕ್ಷೆ ಕೊಡುತ್ತಾರೆ.) ಅದು ಅವರ ವರ್ಷದ ಊಟದ ಸಮಸ್ಯೆಯನ್ನು ಪರಿಹಾರ ಮಾಡುತ್ತಿತ್ತು. ಇದಕ್ಕಿಂತಲೂ ಮುಖ್ಯವಾದದ್ದು ಸಾಂಸ್ಕೃತಿಕ ಶೂನ್ಯತೆ. ಅವರ ಸಂಪ್ರದಾಯದ ಅನೇಕ ಆಚರಣೆಗಳಿಂದ ಧಾರ್ಮಿಕ ನೇಮ ನಿಯಮಗಳಿಂದ ಸಾಂಸ್ಕೃತಿಕ ಜೀವನ ವಿಧಾನವೊಂದು ರೂಪಗೊಂಡಿದೆ. ಅದನ್ನು ತುಂಬಿ ಕೊಳ್ಳುವುದು ಹೇಗೆ? ಆಧುನಿಕ ಜೀವನ ವಿಧಾನದಲ್ಲಿ ಇದನ್ನು ಹೇಗೊ ತುಂಬಿಕೊಳ್ಳಬಹುದು, ಆದರೆ ಅವರಲ್ಲಿ ಅಕ್ಷರಸ್ಥರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ. ಜೀವನ ನಿರ್ವಹಣೆಗೆ ಅವರಿಗೆ ಈ ಪದ್ಧತಿಯಿಂದ ಕಷ್ಟವೇ ಉಂಟಾಗಿಲ್ಲ. ಭಕ್ತರು ಇವರನ್ನು ತುಂಬ ಭಯಭಕ್ತಿಯಿಂದ ನಡೆಸಿಕೊಂಡಿದ್ದಾರೆ. ಕೆರೆಕೊಂಡಾಪುರದಲ್ಲಿ ಇರುವ ಒಂದು ಕುಟುಂಬದಲ್ಲಿ ಬಾಲಬಸಪ್ಪ ಧನಂಜಯ ಎಂಬವರಿಗೆ ಶಾಸ್ತ್ರಿಗಳೆಂದೇ ಹೆಸರಿದೆ. ಊರಿನಲ್ಲಿ ಜಾತಿಯವರು ಇವರಿಂದ ಶಾಸ್ತ್ರ ಕೇಳುವುದು, ಲಗ್ನ ಕಟ್ಟಿಸುವುದು ಮಾಡಿಸುತ್ತಾರೆ. ಅಷ್ಟು ಸಾಂಸ್ಕೃತಿಕ ಮನ್ನಣೆ ಇವರಿಗೆ ಇದೆ. ಇವೆಲ್ಲ ಸಂಪ್ರದಾಯವನ್ನು ಬಿಟ್ಟು ಸಾಂಸ್ಕೃತಿಕ ಶೂನ್ಯತೆಯನ್ನು ತುಂಬಿಕೊಳ್ಳುವುದು ಹೇಗೆ ಎನ್ನುವ ಧರ್ಮ ಸಂಕಟವನ್ನು ಎದುರಿಸುತ್ತಿದ್ದಾರೆ. ತುಮನೆಪ್ಪ ಹಾಡುವ ಗೋಣಿಬಸವನ ಕತೆ ಈ ಕುಲದ ಎಲ್ಲ ವೈರುಧ್ಯಗಳನ್ನು ಒಳಗೊಂಡಿದೆ.

ಬಾಲಬಸಪ್ಪಗಳ ತಾಣಗಳು

ಇವರು ಉತ್ತರ ಕರ್ನಾಟಕದಲ್ಲಿ ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ವದ ಊರುಗಳು ಕನಕಗಿರಿ, ಚಿತ್ರದುರ್ಗ, ಆಂಧ್ರ ಪ್ರದೇಶದ ರಾಯಲ ಸೀಮೆಯಾಗಿದೆ. ಮೊಳಕಾಲ್ಮೂರು ತಾಲೂಕು ಕೆರೆಕೊಂಡಾಪುರದಲ್ಲಿ ಎಂಟು ಮನೆಗಳಿವೆ. ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕು ಹೀಲದಳ್ಳಿಯಲ್ಲಿ ಹದಿನೆಂಟು ಮನೆಗಳಿವೆ. ಗದಗ ಜಿಲ್ಲೆ ಹರಲಾಪುರದಲ್ಲಿ ಇಪ್ಪತೈದು ಮನೆಗಳಿವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಭೈರದೇವರ ಗುಡ್ಡದಲ್ಲಿ ಆರು ಮನೆಗಳಿವೆ. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಗಂಜನಹಳ್ಳಿಯಲ್ಲಿ ಒಂದು ಮನೆತನವಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೊಗ್ಗಳ್ಳಿಯಲ್ಲಿ ಎರಡು ಮನೆತನಗಳು ಇವೆ. ಈಗ ಇರುವ ಬಾಲಬಸಪ್ಪಗಳ ತಾಣದಲ್ಲಿ ಸಂಖ್ಯೆಯ ದೃಷ್ಟಿಯಿಂದ ಹರಲಾಪುರದಲ್ಲಿ ಹೆಚ್ಚಿದ್ದಾರೆ. ಹೀಲದಲ್ಲಿಯಲ್ಲಿ ಹದಿನೆಂಟು ಮನೆಗಳಿವೆ. ಕಂಬದಮ್ಮ ಇವರ ಕುಲದೈವ ಈ ದೇವತೆಗೆ ಪ್ರತಿವರ್ಷ ಎಳ್ಳು ಅಮಾವಾಸ್ಯೆಗೆ ಮೂರು ದಿನ ಮೊದಲು ಜಾತ್ರೆಯಾಗುತ್ತದೆ. ತಮ್ಮ ಕುಲದೇವತೆಗೆ ಸಸ್ಯಾಹಾರವನ್ನು ಮಾತ್ರ ಎಡೆ ಹಾಕುತ್ತಾರೆ. ಆದರೆ ತಾವು ಮಾತ್ರ ಮಾಂಸಾಹಾರ ಸೇವನೆ ಮಾಡುವುದಾಗಿ ತಿಳಿಸಿದ್ದಾರೆ. ಇದೊಂದು ಊರನ್ನು ಬಿಟ್ಟರೇ ಉಳಿದ ಎಲ್ಲ ಊರಿನಲ್ಲಿರುವ ಬಾಲಬಸಪ್ಪಗಳು ಸಸ್ಯಾಹಾರಿಗಳು.

ಗೋಣಿ ಬಸಪ್ಪನಿಗೂ ಬಾಲ ಬಸಪ್ಪನಿಗೂ ಇರುವ ಕಥನ ಸಂಬಂಧ

ಗೋಣಿ ಬಸಪ್ಪನ ಕತೆಯಲ್ಲಿ ಬಾಲ ಬಸಪ್ಪನ ಪಾತ್ರ ತುಂಬ ಕಡಿಮೆ. ಚಿಗಟೇರಿ ಶಿವನಯ್ಯ ಮಾಟದ ಅಂಗಿ ಹೊಲಿಸಿ ಅದನ್ನು ಗೋಣಿ ಬಸಪ್ಪನಿಗೆ ತೊಡಿಸಿ ಸಾಯಿಸಿ ಬಿಡುತ್ತಾನೆ. ಆಗ ಸಂನ್ಯಾಸಿ ತೋಟದಲ್ಲಿ ವಾಸವಾಗಿದ್ದ ಬಾಲ ಬಸವನಿಗೆ ಇದು ಗೋಚರವಾಗಿ ಅವನುಕೂಲಹಳ್ಳಿ ಮಠಕ್ಕೆ ಬಂದು ಹಾವಿನ ರೂಪ ತಾಳಿ (ಏಕೆ ಹಾವಿನರೂಪವೆಂದರೆ ಅದು ಲಿಂಗಾಯತರ ಮಠ ಮಾದಿಗರಿಗೆ ಪ್ರವೇಶ ಇಲ್ಲ) ಅವನ ಹೆಬ್ಬೆಟ್ಟನ್ನು ಕಚ್ಚಿ ವಿಷ ತೆಗೆದು ಬಿಡುತ್ತಾನೆ, ಈ ಉಪಕಾರಕ್ಕೆ ಗೋಣಿ ಬಸಪ್ಪನಿಗೆ ಯಾವ ವರ ಬೇಕು ಎನ್ನುತ್ತಾನೆ. ಬಾಲಬಸಪ್ಪ ಎರಡು ವರ ಕೇಳುತ್ತಾನೆ. ಒಂದು – ಕೂಲಳ್ಳಿ ಜಾತ್ರೆಗೆ ಬಂದಾಗ ನಿನ್ನ ಮಠದ ಮುಂದೆ ಇರುವ ಜಂಬಯ್ಯನ ಗುಡಿಯ ಮುಂದೆ ಬಾಲ ಬಸಪ್ಪಗಳು ನೆರೆಯುತ್ತಾರೆ, ಅವರಿಗೆ ಅನ್ನಬುತ್ತಿ ಎರೆಯಬೇಕು, ಮೂರು ವರ್ಷಕ್ಕೆ ಒಮ್ಮೆ ಒಂದು ಬಾಲದಾನ (ಹಸು ಕೊಡಬೇಕು). ಜಾತ್ರೆಯಲ್ಲಿ ಬಂದ ಹಾಲುಮಾಲು (ಆದಾಯ)ನಲ್ಲಿ ನಾಕಾಣಿ ಭಾಗ ಕೊಡಬೇಕು. ನೀನು ಊಟಕ್ಕೆ ಕುಂತಾಗ ನನ್ನ ಶಬ್ದ ನಿನ್ನ ಕಿವಿಯಾಗೆ ಬಿದ್ದರೆ, ತುತ್ತ ಎತ್ತಬಾರದು ನನಗೆ ಮೊದಲು ನೀಡಿ, ಹಿಂದುಗಡೆ ನೀನು ಊಟಮಾಡಬೇಕು ಮತ್ತು ಹರಪನಹಳ್ಳಿ ಸಂನ್ಯಾಸಿ ತೋಟ ಬಿಟ್ಟು ಬಂದ್ದೀನಿ, ನಿನ್ನ ಮಠದಾಗ ಎಡಗಡೆ ಒಂದು ತೊಲೆಯಾಗ ಇರುತ್ತೇನೆ. ನರ ಮಾನವರ ಕಣ್ಣಿಗೆ ಬೀಳದಂಗೆ ಒಂದು ಇಡಿಗ್ವಾಡಿ ಕಟ್ಟಿಸಿಕೊಡು, ಎರಡು – ಮದ್ದಾನಸ್ವಾಮಿ ನಿನ್ನ ಕಿವಿಯಲ್ಲಿ ಧರಿಸಿರುವ ಕರ್ಣಕುಂಡಲಿಗಳನ್ನು ಕೊಡು ಎನ್ನುತ್ತಾನೆ. ಬಾಲಬಸಪ್ಪನಿಗೆ ಕರ್ಣ ಕುಂಡಲಿಗಳನ್ನು ಕೊಟ್ಟು ಇದನ್ನು ಧರಿಸಿಕೊಂಡು ನೀನು ನುಡಿದದ್ದೆಲ್ಲ ಸತ್ಯವಾಗುತ್ತದೆ ಎನ್ನುತ್ತಾನೆ. ಇದರ ಶಕ್ತಿ ಮದ್ಯಾನದವರೆಗೆ ಮಾತ್ರ ಇರುತ್ತದೆ. ಆದ್ದರಿಂದ ಬಾಲ ಬಸಪ್ಪಗಳು ಮದ್ಯಾನದ ಮೇಲೆ ಊರಾಡುವುದಿಲ್ಲ ಎರಡನೇ ವರವನ್ನು ತುಮನೆಪ್ಪ ಕತೆಯಲ್ಲಿ ಹಾಡಲಿಲ್ಲ ಮೌಖಿಕವಾಗಿ ಹೇಳಿದ. ಇಷ್ಟೇ ಕತೆಯ ವಿವರದಲ್ಲಿ ಅಸ್ಪೃಶ್ಯತೆ, ಹಸಿವು, ಸಾಂಸ್ಕೃತಿಕ ಗುರುತಿನ ಹಕ್ಕೊತ್ತಾಯಗಳು ಎದ್ದು ಕಾಣುತ್ತವೆ. ಕಾವ್ಯದಲ್ಲಿ ಈ ತರದ ಒಂದು ವಿಲ್ ಇದ್ದರೂ ಪ್ರಸ್ತುತ ಕೂಲಳ್ಳಿ ಜಾತ್ರೆಯಲ್ಲಿ ಇದಾವುದು ನಡೆಯುವುದಿಲ್ಲ. ಗೋಣಿ ಬಸಪ್ಪನ ಜೀವನವನ್ನು ಕುರಿತಂತೆ ಇರುವ ಸುದೀರ್ಘ ಕಥಾನಕ ಬಾಲಬಸಪ್ಪನನ್ನು ಕುರಿತು ಇಲ್ಲ. ಸೋಗಿಯ ಹರಿಜನ ಕಾಲೋನಿಯಲ್ಲಿ ಬಾಲ ಬಸಪ್ಪನ ಸಮಾಧಿಯಿದೆ ಎನ್ನುತ್ತಾರೆ. ಆದರೆ ಜಾತ್ರೆ ಇಲ್ಲ, ಬಾಲಬಸಪ್ಪಗಳಿಗೆ ಗೋಣಿಬಸಪ್ಪನು ದೈವವಾಗಿರುವುದಕ್ಕೆ ದೇವದಾಸಿ ಪದ್ಧತಿ ಎರಡು ಪರಂಪರೆಯಲ್ಲಿ ಇರುವುದೇ ಕಾರಣವಾಗಿರಬಹುದು.