ಕರ್ನಾಟಕದಲ್ಲಿ ಜನಪದ ಸಾಹಿತ್ಯ ಕುರಿತಂತೆ ಆಗಿರುವ ವ್ಯಾಖ್ಯಾನ, ವಿಭಾಗೀಕರಣದಲ್ಲಿ ಕೆಲವು ಸಮಸ್ಯೆಗಳು ಇವೆ.ಆದಿಮ ಕಾವ್ಯಗಳು ಮತ್ತು ಚಾರಿತ್ರಿಕ ಕಾವ್ಯಗಳು ಎಂದು ವಿಭಾಗೀಕರಿಸಿದಂತೆ ಉದ್ದಾಮವಾಗಿ ಆಧುನಿಕ ಎನ್ನುವ ಜನಪದ ಕಾವ್ಯಗಳು ಈಗ ಹುಟ್ಟಿಲ್ಲ. ಇದರಿಂದ ಜನಪದವೆಂದರೆ ಪ್ರಾಚೀನ ವಸ್ತುವನ್ನು ಒಳಗೊಂಡದ್ದು ಮಾತ್ರ ಎನ್ನುವ ನಿಲುವಿಗೆ ಬಂದಂತೆ ವಸಹಾತುಷಾಹಿ ಉಂಟುಮಾಡಿದ ಬಿಕ್ಕಟ್ಟು ಇದು. ಸಂಗೋಳ್ಳಿರಾಯಣ್ಣ ಮತ್ತು ಟಿಪ್ಪುವನ್ನು ಕುರಿತ ಲಾವಣಿಗಳ ನಂತರ ನಮಗೆ ಪೂರ್ಣ ಪ್ರಮಾಣವೆನ್ನುವ ಯಾವ ಜನಪದ ರಚನೆಗಳು ದೊರೆಯುವುದಿಲ್ಲ. ಕೆಲವು ಪಠ್ಯಗಳಲ್ಲಿ ಕಲಿ, ಕಾಲಜ್ಞಾನಗಳನ್ನು ಹೇಳುವ ಭಾಗದಲ್ಲಿ ಆಧುನಿಕ ವಿದ್ಯಮಾನಗಳು ಕಂಡು ಬಂದರು ಅವು ಆಂಶಿಕವಾಗಿ ಬಂದವು ಅಷ್ಟೆ, ಪೂರ್ಣ ಪ್ರಮಾಣದಲ್ಲಿ ಆಧುನಿಕತೆಯನ್ನೇ ವಸ್ತುವಾಗಿಸಿಕೊಂಡ ಕಥನಗಳು ಇಲ್ಲ. ಇದನ್ನು ಒಪ್ಪುವುದಾದರೆ,ಆಧುನಿಕ ಕಾಲದಲ್ಲಿ ಜನಪದವಿಲ್ಲವೆಂದೇ ಅರ್ಥ. ಇನ್ನು ಸೂಕ್ಷ್ಮವಾಗಿ ವಿಸ್ತರಿಸಿದರೆ ಅವರ ಅಭಿವ್ಯಕ್ತಿಯೇ ಸ್ಥಗಿತಗೊಂಡಿದೆ ಎಂದಂತೆ. ವಸಹಾತುಷಾಹಿಯ ನಂತರ ಜನಪದ ಯಾವ ರೂಪಾಂತರಗಳಲ್ಲಿ ತನ್ನ ಚಲನೆಯನ್ನ ಮುಂದುವರಿಸಿದಿದೆಯೊ ಅದನ್ನು ನಾವು ಜನಪದ ಎಂದು ಕರೆಯಲು ಸಿದ್ಧರಿಲ್ಲ. ಇದಕ್ಕೆ ಮುಖ್ಯ ಕಾರಣ ಜನಪವನ್ನು ನಿರ್ವಚಿಸುವಲ್ಲಿ ಇರುವ ಸಮಸ್ಯೆಗಳು ಮೊದಲ ಘಟ್ಟದಲ್ಲಿಜನಪದವೆಂದರೆ ಅದು ಅನಕ್ಷರಸ್ಥರ ಸೃಷ್ಟಿ ಎಂದು ವ್ಯಾಖ್ಯಾನಿಸಿದ್ದು ಮತ್ತು ಶಿಷ್ಟ ಪರಿಶಿಷ್ಟಎಂದು ವಿಭಾಗಿಸಿದ್ದು. ಆದರೆ ಜನಪದ ಅನಕ್ಷರಸ್ಥರ ಸೃಷ್ಟಿಯಾಗೇನು ಇಲ್ಲ. ಮಂಟೇಸ್ವಾಮಿ ಕತೆಯನ್ನು ಹಾಡು ನೀಲಾಗಾರರಲ್ಲಿ ಅಕ್ಷರಸ್ಥರು ಇರುತ್ತಾರೆ, ಅನಕ್ಷರಸ್ಥರು ಇರುತ್ತಾರೆ. ಆದರೆ ಪಠ್ಯವನ್ನು ನೋಡಿಕೊಂಡು ಹಾಡುವುದಿಲ್ಲ ನೆನಪಿನಲ್ಲಿಟ್ಕೊಂಡು ಹಾಡುತ್ತಿರುತ್ತಾರೆ. ಇದು ಮನುಷ್ಯನ ಮೆದುಳಿಗೆ ಸಂಬಂಧಿಸಿದ ಸಂಗತಿ. ನೆನಪಿನಲ್ಲಿ ಇಟ್ಟುಕೊಳ್ಳುವ ತಂತ್ರವನ್ನು ಕಾವ್ಯದ ಒಳಗೆ ಸೃಷ್ಟಿಸಿಕೊಳ್ಳುತ್ತಾರೆ. ಕೆಲವರು ವ್ಯಕ್ತಿ ಮತ್ತು ಸ್ಥಳನಾಮಗಳನ್ನು ನೆಪಿನ ತಂತ್ರವಾಗಿ ಬಳಸುತ್ತಾರೆ. ನಾನು ಕಂಡ ಹಾಗೆ ನೀಲಗಾರ ಮೋಳೆ ರಾಚಯ್ಯ ಈ ತಂತ್ರ ಬಳಸುತ್ತಿದ್ದ. ಕಲ್ಲೂರು ಬಂದ ತಕ್ಷಣ ಅವನ ಭಾವಕೋಶದಲ್ಲಿ ಕಲಿಭಾಗದ ಕತೆಯಲ್ಲ ಬಿಚ್ಚುಕೊಳ್ಳುತ್ತಿತ್ತು. ಹಾಗೆ “ಆದಿ ಕಲ್ಯಾಣದಲ್ಲಿ ಅಲ್ಲಮ’’ ಎಂದು ತಕ್ಷಣ ಕಲ್ಯಾಣದ ಕತೆಯೆಲ್ಲ ನೆನಪಾಗುತ್ತಿತ್ತು ಪ್ರಸ್ತುತ ಗೋಣಿ ಬಸಪ್ಪನ ಕಾವ್ಯದಲ್ಲಿ ಕಲಾವಿದ ತುಮನೆಪ್ಪ ಕೆಲವು ಪಲ್ಲವಿಗಳು ಬಂದ ತಕ್ಷಣ ಅವನ ಭಾವಕೋಶ ತೆರೆದುಕೊಂಡು ಪೂರ್ವಿಕರು ಹೇಳಿದ್ದೆಲ್ಲಾ ನೆನಪಿಗೆ ತಂದುಕೊಳ್ಳುತ್ತಿದ್ದ. ಅವನು ಕತೆಯಲ್ಲಿ ಹೇಳುವ ಊರುಗಳನ್ನು ನೋಡೇ ಇಲ್ಲ. ಆದ್ದರಿಂದ ಮೊದಲು ನಮಗೆ ಇವೆಲ್ಲಾ ಕಲ್ಪಿತ ಊರುಗಳೊ ಅಥವಾ ನಿಜ ಊರುಗಳೋ ಎಂದು ಅನುಮಾನ ಬರುತ್ತಿತ್ತು. ಆದರೆ ನಾವು ಕ್ಷೇತ್ರಕರ್ಯಕ್ಕೆ ಹೋದಾಗ ಆಶ್ಚರ್ಯವಾಗುವ ತರದಲ್ಲಿ ಕಲಾವಿದ ಹೇಳಿದ ಎಲ್ಲ ಊರುಗಳು ಸಿಕ್ಕಿವೆ. ಅಂದರೆ ಒಬ್ಬೊಬ್ಬ ಕಲಾವಿದ ಒಂದೊಂದು ತಂತ್ರವನ್ನು ಬಳಸಿ ತಮ್ಮ ನೆನಪಿನ ಕೋಶದಲ್ಲಿ ಇದು ಉಳಿಯುವಂತೆ ಮಾಡಿಕೊಳ್ಳುತ್ತಾರೆ. ಗುರುವಿನಿಂದ ಕತೆ ಕಲಿಯುವಾಗಲೇ ಈ ತಂತ್ರವನ್ನು ಕಲಿತಿರುತ್ತಾರೆ. ತುಂಬಾ ಪ್ರತಿಭೆ ಇರುವ ಕಲಾವಿದ ತನ್ನ ತಂತ್ರವನ್ನು ಅಲ್ಲಿ ಸೇರಿಸಿ ಕಾವ್ಯವನ್ನು ವಿಸ್ತರಿಸುವ ಕೆಲವೊಮ್ಮೆ ಸಂಕಲಿಸುವ ಕೆಲಸ ಮಾಡುತ್ತಿರುತ್ತಾನೆ.

ದಕ್ಷಿಣ ಕರ್ನಾಟಕದಲ್ಲಿ ಶಿಷ್ಟ ಕವಿ ನಂಜನಗೂಡಿನ ವೀರಭದ್ರ ರಚಿಸಿದ ಪಾರ್ಥನ ಜೋಗಿಹಾಡು (೨೦೦೪) ಈಗ ಜನಪದ ಪಠ್ಯವಾಗಿ ಮಾರ್ಪಟ್ಟು ಪುಸ್ತಕ ನೋಡದೆ ನೀಲಗಾರರು, ದೇವರಗುಡ್ಡರು, ಜೋಗಪ್ಪಗಳಿಂದ ಹಾಡಲ್ಪಡುತ್ತಿದೆ. ಹಾಗೆ ಮಿಣ್ಯದ ಗುರುಸಿದ್ಧಕವಿ ದೇವರಗುಡ್ಡರು ಹಾಡುತ್ತಿದ್ದ ಮಾದಪ್ಪನ ಕತೆಯನ್ನಿಟ್ಟುಕೊಂಡು ಮಹಾದೇಶ್ವರ ಸಾಂಗತ್ಯ (೧೮೩೭) ರಚಿಸಿದ್ದಾನೆ. ಅಂದರೆ ಜನಪದ ಕಾವ್ಯ, ಬರಹ- ಮೌಖಿಕ, ಅಕ್ಷರಸ್ಥರ – ನಿರಕ್ಷರಸ್ಥ ಎನ್ನುವ ಕಟ್ಟಳೆಯನ್ನು ಮೀರಿ ತನ್ನ ಚಲನೆಯನ್ನು ಮುಂದುವರಿಸಿಕೊಂಡು ಬಂದಿದೆ. ಮೌಖಿಕ ಕಾವ್ಯ ಪರಂಪರೆ ಆಧುನಿಕ ಕಾಲದಲ್ಲಿ ಅಗೋಚರವಾಗಿ ಅಕ್ಷರ ಜಗತ್ತಿನೊಡನೆ ತನ್ನ ಸಂಬಂಧವನ್ನು ಉಳಿಸಿಕೊಂಡಿದೆ. ಜನಪದ – ಶಿಷ್ಟ ಎನ್ನುವ ಬೇಧಭಾವ ಕಲೆಯಲ್ಲಿ ಇಲ್ಲ. ಅದು ತನ್ನ ಚಲನಶೀಲತೆಗೆ ಒಂದರಿಂದ ಒಂದು ಪಡೆಯುತ್ತಾ ಆಧುನಿಕಕಾಲದಲ್ಲೂ ಮುಂದುರಿದಿದೆ. ಜನಪದ ಎಂದು ಶಿಷ್ಟವನ್ನು ತದನ್ನ ಎದುರಾಳಿ ಎಂದುಕೊಂಡೇ ಇಲ್ಲ. ಅನಾದಿ ಕಾಲದಿಂದಲೂ ಅದು ಯಾವ ಮಡಿವಂತಿಕೆಯನ್ನು ಬೆಳೆಸಿಕೊಂಡು ಬಂದಿಲ್ಲ. ವಚನಕಾರರ ಕಾಲದಲ್ಲಿ ನಿಂತು ಹೋಗಿದ್ದ ಕಥನ ಮಾದರಿಗಳನ್ನು ಮತ್ತೆ ಹುಟ್ಟುಹಾಕಿದ ಹರಿಹರ ಬಸವರಾಜದೇವರ ರಗಳೆ (೧೧೬೫) ಬರೆಯಲು ಆಕಾರವಾಗಿಸಿಕೊಂಡದ್ದು ಶಿಷ್ಟವೆನಿಸಿದ್ದ ವಚನಗಳನ್ನಲ್ಲ, ಜನಪದರಲ್ಲಿದ್ದ ಬಸವಣ್ಣನನ್ನು ಹಾಗೆ ನೋಡಿದರೆ ವಚನಗಳು ಜನಪದವೇ. ಅದು ಬರಹಕ್ಕೆ ಬಂದದ್ದು ಮೂನ್ನೂರು ವರ್ಷಗಳ ನಂತರ ಕುಮಾರವ್ಯಾಸ ಕಾವ್ಯ ಶಿಷ್ಟವು ಹೌದು ಪರಿಶಿಷ್ಟವು ಹೌದು. ರತ್ನಾಕರವರ್ಣಿಗೆ ಭರತೇಶ ವೈಭವಕ್ಕೆ ಪ್ರೇರಣೆ ನೀಡಿದ್ದು ಜನಪದ. ದೇವಚಂದ್ರನಿಗೆ ಹೆಸರು ತಂದುಕೊಟ್ಟ ರಾಜಾವಳಿಗೆ ಪ್ರೇರಣೆ ಜನಪದ. ಇದರಲ್ಲಿ ಜನಪದಕ್ಕೆ ಪ್ರೇರಣೆಕೊಟ್ಟ ಶಿಷ್ಟ ಕೃತಿಗಳು ಇವೆ. ಪುರವಂತಿ ಮೇಳದ ಒಡುಪುಗಳಿಗೆ ಪ್ರೇರಣೆ ಕೊಟ್ಟದ್ದು ವಿರೂಪಾಕ್ಷಪಂಡಿತನ ಚೆನ್ನಬಸವ ಪುರಾಣ. ಇನ್ನು ಅನೇಕ ಪ್ರದರ್ಶನ ಕಲೆಗಳು ಶಿಷ್ಟ ಪಠ್ಯಗಳಿಂದ ಪ್ರೇರಣೆ ಪಡೆದಿವೆ. ಅಂದರೆ ಶಿಷ್ಟ ಜನಪದ ಪರಸ್ಪರ ಕೊಡುಕೊಳುವ ಕೆಲಸ ಮಾಡಿವೆ. ಅಂದರೆ ಜನಪದವನ್ನು ವ್ಯಾಖ್ಯಾನಿಸುವಾಗ ಶಿಷ್ಟ ಪರಿಶಿಷ್ಟ ಅಕ್ಷರಿ ನಿರಕ್ಷರಿ ಎಂದು ಗೆರೆ ಕೊರೆದುಕೊಂಡದ್ದರಿಂದ ಉಂಟಾದ ಸಮಸ್ಯೆಗಳು ಇವು.

. ಜನಪದದ ರೂಪಾಂತರಗಳು

ಹೊಸ ಹೊಸ ಸಂವಹನ ರೂಪಗಳು ಕಾಣಿಸಿಕೊಂಡ ಮೇಲೆ ಜನಪದದ ಸವಂಹನ ದಾರಿಗಳು ಹೆಚ್ಚಾಗಿವೆ. ಆಯಾಯ ದೈವಕ್ಕೆ ನಡೆದುಕೊಳ್ಳುವ ಒಕ್ಕಲಿನವರ ಮುಂದೆ, ಹಬ್ಬ ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಮಾತ್ರ ಸಂವಹನಗೊಳ್ಳುತ್ತಿದ್ದ ಜನಪದ ಕಾವ್ಯಗಳು ಆಧುನಿಕ ಕಾಲದಲ್ಲಿ ಬೇರೆ ಬೇರೆ ರೂಪಾಂತರಗಳಲ್ಲಿ ತನ್ನ ಸಂವಹನವನ್ನು ಇನ್ನು ಹೆಚ್ಚಿಸಿಕೊಂಡಿದೆ.

ಮುದ್ರಿತ ಪಠ್ಯವನ್ನು ಅನುಸರಿಸಿರುವ ಓದುವ ವರ್ಗ: ಜನಪದ ಪಠ್ಯವಂದು ಸಂಪಾದಿತವಾದ ನಂತರ ಅದು ಬೆಂಗಳೂರಿನ ಅಥವಾ ದಿಲ್ಲಿಯ ಕನ್ನಡಿಗನಿಗೂ ಓದಲು ಸಾಧ್ಯವಾಗುತ್ತದೆ. ಚಿಕ್ಕಲ್ಲೂರಿನಲ್ಲಿ ನೀಲಗಾರಿನೊಬ್ಬ ಏನು ಹಾಡುತ್ತಾನೆ ಎಂಬುದು ಚಿಕ್ಕಲ್ಲೂರು ಗೊತ್ತಿಲ್ಲದಿರುವ ಅನೇಕ ಓದುಗರಿಗೆ ಇದು ತಲುಪುತ್ತದೆ. ಅಂದರೆ ಜನಪದ ಪಠ್ಯಕ್ಕೆ ಪ್ರೇಕ್ಷಕರಷ್ಟೇ ಅಲ್ಲದೆ ಓದುಗ ವರ್ಗವೊಂದು ನಿರ್ಮಾಣವಾಗಿದೆ. ಇದು ಜನಪದ ಬೆಳವಣಿಗೆಯನ್ನು ಹೇಳುತ್ತಿದೆಯೇ ಹೊರತು ನಾಶವನ್ನಲ್ಲ.

ಕ್ಯಾಸೆಟ್ಗಳ ಮೂಲಕ ನಿರ್ಮಾಣವಾಗಿರುವ ಶೋತೃಗಳು : ಇವರಲ್ಲಿ ಆ ದೈವಕ್ಕೆ ನಡೆದುಕೊಳ್ಳುವವರು ಮಾತ್ರ ಕ್ಯಾಸೆಟ್ ಕೊಳ್ಳುವುದಿಲ್ಲ. ಮನೆಯಲ್ಲಿ ರೇಕಾರ್ಡರ್ ಇಟ್ಟುಕೊಂಡಿರುವವರು, ಸಂಗೀತ ಪ್ರೇಮಿಗಳು, ಆಟೋಚಾಲಕರು, ಬಸ್‌ಡ್ರೈವರ್‌ಗಳು, ಅವರ ಗಿರಾಕಿಗಳು ಇಲ್ಲೆಲ್ಲಾ ಇದು ಸಂವಹನಗೊಳ್ಳುತ್ತಿದೆ.

ಟಿ.ವಿ. ಮತ್ತು ಸಿನಿಮಾ ನೋಡುವ ವರ್ಗ: ಇದರ ವ್ಯಾಪ್ತಿ ಉಳಿದೆಲ್ಲವುಕ್ಕಿಂತಲೂ ದೊಡ್ಡದು. ಸ್ಪೈಸ್ ಮೊಬೈಲ್‌ನ ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮ ಯಕ್ಷಗಾನ ಕಲಾವಿದ ಬೇಕು. ಇತ್ತೀಚೆಗೆ ಜನಪದವನ್ನು ಸಮರ್ಥವಾಗಿ ಬಳಸಿರುವ ಎಲ್ಲ ಸಿನಿಮಾಗಳು, ಜಾಹೀರಾತು ಯಶಸ್ವಿಯಾಗಿವೆ. ಉದಾ. ಜನುಮದ ಜೋಡಿ, ಜೋಗಿ ಚಿತ್ರಗಳ ಯಶಸ್ಸಿಗೆ ಜನಪದ ಅಂಶಗಳು ಕಾರಣವಾಗಿವೆ. ಅಂದರೆ ಜನಪದ ಈ ರೂಪಾಂತರಗಳಲ್ಲಿ ಮುಂದುವರಿದಿದ್ದರು ನಾವು ಇದನ್ನು ಜನಪದವೆಂದು ಕರೆದುಕೊಂಡಿಲ್ಲ.

ಶತಮಾನದ ಕನ್ನಡ ಸಾಹಿತ್ಯ ಜನಪದದೊಡನೆ ನಡೆಸಿದ ಅನುಸಂಧಾನದ ಚರಿತ್ರೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬ್ರಿಟಿಷ್ ವಸಾಹತುಷಾಹಿ ರಾಷ್ಟ್ರೀಯ ಚರಿತ್ರೆ ಮಾದರಿಯನ್ನು ಹುಟ್ಟು ಹಾಕಿದಾಗ ಓದು ಬರಹ ಕಲಿತವರು ಕನ್ನಡದಲ್ಲಿ ಒಂದು ಗದ್ಯ ಮಾದರಿಯ ಬರಹವನ್ನು ಹೆಚ್ಚು ಚಾಲ್ತಿಗೆ ತಂದರು. ಇದಕ್ಕೂ ಪೂರ್ವದಲ್ಲಿ ಕೈಫಿಯತ್ತುಗಳಲ್ಲಿ, ಬಖೈರುಗಳಲ್ಲಿ, ಪ್ರಸಿದ್ಧ ಮಠಗಳ ನ್ಯಾಯ ತೀರ್ಮಾನಗಳಲ್ಲಿ ಈ ಗದ್ದಯ ಚಾಲ್ತಿಯಲ್ಲಿತ್ತು. ಆದರೆ ಪುರಾಣ, ಕಾವ್ಯ, ಧರ್ಮಶಾಸ್ತ್ರಗಳಲ್ಲಿ ಇದು ಬಳಕೆಯಾಗುತ್ತಿರಲಿಲ್ಲ. ಇವೆಲ್ಲ ಪವಿತ್ರ ಅಭಿವ್ಯಕ್ತಿ ಮಾದರಿಗಳು ಎನ್ನುವ ಕಲ್ಪನೆ ಇದ್ದುದರಿಂದ ಅಲ್ಲಿ ಈ ಗದ್ಯ ಮಾದರಿ ಬಳಕೆಗೆ ಬರಲಿಲ್ಲ. ಆದರೆ ಬ್ರಿಟಿಷರಿಗೆ ಸಂವಹನ ದೃಷ್ಟಿಯಿಂದ ಹಾಗೂ ವಾಸ್ತವವಾದಿ ಲಕ್ಷಣಗಳು ಹೆಚ್ಚು ಗದ್ಯದಲ್ಲಿ ಇದ್ದುದರಿಂದ ಈ ಮಾದರಿಯಲ್ಲೇ ಕರ್ನಾಟಕದ ಚರಿತ್ರೆಯನ್ನು ಕಟ್ಟುವುದು ಅನಿವಾರ‍್ಯವೆಂದು ಈ ಗದ್ಯ ಮಾದರಿಯ ಬೆಳವಣಿಗೆಗೆ ಹೆಚ್ಚು ಉತ್ತೇಜನ ನೀಡಿತು. ಭಾರತದ ಮತ್ತು ಕರ್ನಾಟಕದ ಚರಿತ್ರೆಯನ್ನು ಪುನರ್ ನಿರ್ಮಾಣ ಮಾಡುವ ಭರದಲ್ಲಿ ಮೊದಲಿಗೆ ಗೆಜೆಟಿಯರ್‌ಗಳನ್ನು ಬರೆಸುವಲ್ಲಿ ಈ ಗದ್ಯ ಮಾದರಿ ಪ್ರಧಾನ ಪಾತ್ರ ವಹಿಸಿದೆ. ಆದರೆ ಇವುಗಳ ನಿರ್ಮಾಣಕ್ಕೆ ಬಳಸಿಕೊಂಡ ಆಕರಗಳು ಮಾತ್ರ ವೈದಿಕ ಬರೆದ ವ್ಯಾಖ್ಯಾನ ಟೀಕುಗಳು. ಇನ್ನೊಂದು ಶಾಸನಗಳಲ್ಲಿ ವ್ಯಕ್ತವಾದ ರಾಜ ಮಹಾರಾಜರ ಆಡಳಿತದ ಬಗೆಗಳು. ಅಂದರೆ ಬರಹ ಮಾತ್ರ ಅಧಿಕೃತ ಎನ್ನುವ ನಂಬಿಕೆಯಿಂದ ಈ ಚರಿತ್ರೆಗಳು ರಚನೆಯಾಗಿವೆ. ಕರ್ನಾಟಕದ ಚರಿತ್ರೆಯಲ್ಲಿ ಇದು ಇತ್ತೀಚಿನವರೆಗೂ ತುಂಬಾ ಪ್ರಭಾವಿಯಾಗಿ ಕೆಲಸ ಮಾಡಿದೆ. ಆದರೆ ಪ್ರಾರಂಭದಲ್ಲಿ ಬಂದ ಯುರೋಪಿನ ಶಿಕ್ಷಣತಜ್ಞರಿಗೆ ಇದೇ ಕರ್ನಾಟಕ ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುತ್ತಿದೆ ಎಂಬುದರ ಬಗ್ಗೆ ಅನುಮಾನಗಳನ್ನು ಹುಟ್ಟಾಕಿದೆ. ಆದ್ದರಿಂದ ಮೊದಲ ಘಟ್ಟದ ವಿದ್ವಾಂಸರಾದ ಕಿಟ್ವಲ್ ಮೊಗ್ಲಿಂಗ್, ಮೆಕೆಂಜಿ, ಪ್ಲೀಟ್, ಮುಂತಾದವರು ಮೊಟ್ಟಮೊದಲಿಗೆ ಜನಪದ ಸ್ಥಳ ಪುರಾಣಗಳ ಸಂಗ್ರಹಕ್ಕೆ ನಿಂತರು. ಇದರೊಟ್ಟಿಗೆ ಕೆಲವು ಮಿಷನರಿಗಳು, ಕ್ಷೇತ್ರತಜ್ಞರು ಅಬ್ಬೇದುಬೆ, ಪ್ರಾನಿಸ್ಸ್‌ಬೇಕನ್, ಥರ್ಸ್ಟನ್, ಮುಂತಾದವರು ಜನಪದ ಬದುಕಿನ ವಿವರಗಳಿಗೆ ಕೈ ಹಾಕಿದರು. ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ಮಿಷಿನರಿಗಳಿಂದ ಕ್ರೈಸ್ತ ಧರ್ಮದ ಪ್ರಸಾರದ ಹೆಸರಿನಲ್ಲಿ ಈ ತರದ ಬರಹ ಚಟುವಟಿಕೆಗೆ ಪ್ರಾರಂಭಿಸಿದರು. ೧೯೨೩ರಲ್ಲಿ ಬಿ.ಎಂ.ಶ್ರೀ.ಯವರು ಇಂಗ್ಲಿಷ್ ಗೀತಗಳನ್ನು ಕನ್ನಡಕ್ಕೆ ತಂದರು. ಅದರ ಬೆನ್ನಲ್ಲೇ ಸಂಸ್ಕೃತ ಕಾವ್ಯ ಮೀಮಾಂಸೆ, ಇಲಿಯಡ್ ಒಡೆಸ್ಸಿ ಮಹಾಕಾವ್ಯಗಳು, ಗ್ರೀಕ್ ನಾಟಕಗಳು, ಪಾಶ್ಚಾತ್ಯ ಕಾವ್ಯ ಮೀಮಾಂಸೆ, ಜಗತ್ತಿನ ಬೇರೆ ಬೇರೆ ಸಾಹಿತ್ಯವನ್ನು ಓದುವ ಅವಕಾಶ, ಕನ್ನಡದಲ್ಲಿ ಕಾಣಿಸಿಕೊಂಡು ಅದರ ಪ್ರಭಾವದ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ನಿರ್ವಚಿಸುವ ಪ್ರಯತ್ನಗಳು ನಡೆದವು. ಯುರೋಪಿನ ಶಿಕ್ಷಣತಜ್ಞರಿಂದಲೇ ಜನಪದ ಸಂಪಾದನ ಕಾರ್ಯಗಳು ಪ್ರಾರಂಭವಾದವು.

೧೮೭೩ರಲ್ಲಿ ಕಿಟ್ಟಲ್‌ರು ಕೊಡವರ ಆಚಾರಗಳನ್ನು ಕುರಿತಂತೆ ಕೊಡವರ ಮೂಢನಂಬಿಕೆಗಳು ಎನ್ನುವ ಲೇಖನವನ್ನು, ನಂತರ ಕೊಡವರ ಮದುವೆ ಸಂಪ್ರದಾಯ, ಹಳೆ ಮೈಸೂರು ಪ್ರಾಂತ್ಯದ ಮಾಸ್ತಿಕಲ್ಲು ಇತ್ಯಾದಿಗಳ ಬಗ್ಗೆ ಜರ್ನಲ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಪ್ಲೀಟರು ೧೮೮೫-೯೦ರಲ್ಲೇ ಕನ್ನಡದ ಐದು ಲಾವಣಿಗಳನ್ನು ಸಂಗ್ರಹಿಸಿ ಇಂಡಿಯನ್ ಆಂಟಿಕ್ವಿಟಿ ಪತ್ರಿಕೆಯಲ್ಲಿ ಕ್ರಮಬದ್ಧವಾಗಿ ಪ್ರಕಟಿಸುತ್ತಾ ಬಂದರು. ನಂತರ ಮೆಕೆಂಜಿ ಅದೇ ಪತ್ರಿಕೆಯಲ್ಲಿ ವಿಲೇಜ್ ಪೀಸ್ಟ್ ಎಂಬ ಲೇಖನದಲ್ಲಿ ಬೆಂಗಳೂರಿನ ಅಕ್ಕಿ ತಿಮ್ಮನಹಳ್ಳಿ ಗ್ರಾಮದೇವತೆಯ ಆಚರಣೆ ಕುರಿತು ಬರೆದರು. ಇವರು ಕರ್ನಾಟಕದ ಸ್ಥಳ ಪುರಾಣಗಳ ಸಂಗ್ರಹ ಮಾಡಿದರೂ ಪ್ರಕಟ ಪಡಿಸಲಿಲ್ಲ. ಇದರ ಮುಂದುವರಿಕೆಯಾಗಿ ಹಲಸಂಗಿ ಗೆಳೆಯರು ಪ್ರಥಮದಲ್ಲಿ ಜನಪದ ಸಂಗ್ರಹಗಳಿಗೆ ಕೈ ಹಾಕಿದರು. ಜನಪದಕ್ಕೂ ಸಾಹಿತ್ಯದ ಎಲ್ಲ ರಮ್ಯತೆಯ ಲಕ್ಷಣಗಳು ಇವೆ ಎಂದು ಪ್ರತಿಪಾದಿಸಿದರು. ಇವರ ಕಾಲದಲ್ಲಿ ಗರತಿಯ ಹಾಡು, ಮಲ್ಲಿಗೆದಂಡೆ, ಹಳ್ಳಿಯ ಹಾಡು ಸಂಗ್ರಹಗಳು ಬಂದವು. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕ.ರಾ.ಕೃ. ಅವರು ನುಚ್ಚಾಯ್ತು ನೀರ ಹೊಳೆಯಾಗೆ, ಅರ್ಚಕ ರಂಗಸ್ವಾಮಿಯವರು ಹಳ್ಳಿಯ ಬದುಕು ಇತ್ಯಾದಿ ಸಂಗ್ರಹಗಳು ಪ್ರಕಟಗೊಂಡವು. ಇವೆಲ್ಲ ತ್ರಿಪದಿಗಳು, ಬಿಡಿಪದಗಳು, ಲಾವಣಿಗಳಾಗಿದ್ದು ಹಾಡುವ ಗೇಯತೆಯನ್ನು ಒಳಗೊಂಡ ಕಾವ್ಯಗಳು. ಇಲ್ಲೆಲ್ಲಾ ಸಂಗ್ರಹಕ್ಕೆ ತೊಡಗುವಾಗ ಅವರು ಅನಕ್ಷರಸ್ಥರು, ಎನ್ನುವ ಧೋರಣೆ ಕೆಲಸ ಮಾಡಿರುವುದರಿಂದ ಮೂಲ ಪಠ್ಯ ಒಂದಿದೆ ಎನ್ನುವ ಧೋರಣೆ ಇರುವುದರಿಂದ ಮತ್ತು ಅದು ಶಿಷ್ಟ ಸಾಹಿತ್ಯಕ್ಕೆ ಸರಿಸಮ ಎನ್ನುವ ನಿಲುವು ಇದ್ದುದರಿಂದ, ಇವರ ದೃಷ್ಟಿಕೋನಕ್ಕೆ ಒಗ್ಗದ ಕೆಲವು ರಚನೆಗಳನ್ನು ಕೈಯಾರೇ ತಿದ್ದಿ ಹೊಂದಿಸಿಕೊಂಡಿದ್ದಾರೆ. ಇದರ ವಿವರಗಳು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ವರು ಹಳ್ಳಿಯ ಹಾಡುಗಳಿಗೆ ಬರೆದ ಮುನ್ನುಡಿಯಲ್ಲಿ ಸಿಗುತ್ತದೆ. ನವೋದಯ ಕಾಲದ ಮುಖ್ಯ ಸೃಜನಶೀಲ ಬರಹಗಾರರಾದ ಬಿ.ಎಂ.ಶ್ರೀ. ಬೇಂದ್ರೆ, ಮಾಸ್ತಿ, ಕಾರಂತ, ಕುವೆಂಪು, ಇವರುಗಳು ಜನಪದ ಸಾಹಿತ್ಯ ಕುರಿತು ಅನೇಕ ಲೇಖನಗಳನ್ನು ಬರೆದರೇ ಹೊರೆತು, ಸಂಗ್ರಹಕ್ಕೆ ಕೈ ಹಾಕಲಿಲ್ಲ. ಆದರೆ ಕಾರಂತರು ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡು ಆಧುನಿಕ ಕಾಲದಲ್ಲಿ ಅದನ್ನು ಉಳಿಸಿಕೊಳ್ಳಲು ಬೇಕಾದ ಬದಲಾವಣೆಗಳನ್ನು ತಂದು, ಈ ಕಾಲದಲ್ಲೂ ಯಕ್ಷಗಾನ ಜೀವಂತವಾಗಿ ಉಳಿಯುವುದಕ್ಕೆ ಕಾರಣರಾದರು. ಆದರೆ ನವೋದಯ ಕಾಲಕ್ಕೆ ಶಿಷ್ಟ ಪರಿಶಿಷ್ಟ ಎನ್ನುವ ಧೋರಣೆಯೊಂದು ಹೇಗೋ ಸೇರಿಕೊಂಡು ಕೆಲಸ ಮಾಡಿದೆ. ಅಂದರೆ ಈ ಕಾಲಕ್ಕಾಗಲೇ ಆ ಭಿನ್ನತೆ ಬಂದು ಹೋಗಿತ್ತು (ಇದಕ್ಕೆ ಪೂರ್ವದಲ್ಲಿ ಈ ರೀತಿಯ ಒಡಕು ಪ್ರಾಚೀನ ಸಾಹಿತ್ಯದಲ್ಲಿ ಇರಲಿಲ್ಲಾ ಎಂಬುದು ಗಮನಾರ್ಹ). ಇದು ನಿರಕ್ಷರರ ಸೃಷ್ಟಿಯಾದರೂ ಇದಕ್ಕೆ ಸಾಹಿತ್ಯದ ಎಲ್ಲ ಲಕ್ಷಣಗಳು ಇವೆ ಎನ್ನುವುದು ನವೋದಯದವರ ನಿಲುವುವಾಗಿತ್ತು. ಜನಪದವೂ ಸಾಹಿತ್ಯ ಎಂದು ಸರ್ಮಥಿಸುವುದು ಅವರಿಗೆ ಅನಿವಾರ‍್ಯವಾಗಿತ್ತು. ಏಕೆಂದರೆ ಬರಹ ಪರಂಪರೆ ಆ ತರದ ಒಂದು ಒತ್ತಡವನ್ನು ನಿರ್ಮಾಣ ಮಾಡಿತ್ತು. ಶಿಷ್ಟ ಪರಂಪರೆಯಿಂದ ಅದನ್ನು ಹೊರಗಿಡುವ ಬಹುದೊಡ್ಡ ಹುನ್ನಾರ ಇತ್ತು.

ನಂತರ ಐವತ್ತರ ದಶಕದಲ್ಲಿ ನವ್ಯ ಸಾಹಿತ್ಯ ಕನ್ನಡದಲ್ಲಿ ಬಂತು. ಯುರೋಪಿಯನ್ ಸಾಹಿತ್ಯ ಮಾದರಿಯನ್ನೇ ಮುಖ್ಯ ನೆಲೆಯಾಗಿಸಿಕೊಂಡ ಇದು ಬಹು ಬೇಗ ತನ್ನ ಅವನತಿಯನ್ನು ಕಂಡಿತು. ಎಪ್ಪತ್ತರ ದಶಕದ ಕನ್ನಡ ಸಾಹಿತ್ಯ ಜನಪದದೊಡನೆ ವಿಸ್ತಾರವಾದ ಅನುಸಂಧಾನ ನಡೆಸಿದೆ. ಇದಕ್ಕೆ ಆ ಕಾಲದ ಒಂದು ಬಿಕ್ಕಟ್ಟು ಇದೆ. ಅದು ನವ್ಯ ಸಾಹಿತ್ಯ ಉಂಟುಮಾಡಿದ ಬಿಕ್ಕಟ್ಟು ಕಲೆಯ ಸೃಷ್ಟಿಗೆ ಸಂಬಂಧಿಸಿದಂತೆ ನಮ್ಮ ಎಲ್ಲ ಕಲಾಪ್ರಕಾರಗಳು ವಾಸ್ತವವಾದಿ ಮಾದರಿಯನ್ನು ಬೆನ್ನತ್ತಿ ಮನುಷ್ಯನ ಪ್ರಜ್ಞೆಗೆ ಎಲ್ಲಿಲ್ಲದ ಬೆಲೆ ತಂದುಕೊಂಡು, ಮನುಷ್ಯ ಮಾತ್ರ ಅಂತಿಮ ಎನ್ನುವ ದಿಕ್ಕಿನತ್ತ ಚಲಿಸಿ, ಕಲೆಯೆಂದರೆ ಮಾತು, ಕಲೆಯೆಂದರೆ ತರ್ಕ, ಕಲೆಯೆಂದರೆ ಮನುಷ್ಯ ಮಾತ್ರ, ಎನ್ನುವ ಅತಿಗೆ ಹೋಗಿ ಡ್ರೈ ಆಗಿತ್ತು. ಆಗ ಮತ್ತೆ ಜನಪದ ತಂತ್ರ, ಸಂಗೀತ ಇತ್ಯಾದಿಗಳನ್ನು ಬಳಸಿಕೊಂಡು ಸೃಜನಶೀಲ ಕೃತಿಗಳು ಹುಟ್ಟಿದವು.

ಹಿಂದೆ ೧೯ನೇ ಶತಮಾನದಲ್ಲೇ ವಸಾಹತುಷಾಹಿ ಪ್ರಭಾವವನ್ನು ಮನಗಂಡ ಪತ್ತಾರ್ ಮಾಸ್ತರ್ ಸಂಗ್ಯಾ ಬಾಳ್ಯರ ಬದುಕಿನಲ್ಲಿ ನಡೆದ ಘಟನೆಯೊಂದಕ್ಕೆ ಸಣ್ಣಾಟದ ರೂಪಕೊಟ್ಟ ಜನಪದರು ಸೃಷ್ಟಿಸಿದ ಆ ರೂಪಕ್ಕೆ ಅವನು ಋಣಿಯಾಗಿ ತನ್ನ ನಿಲುವನ್ನು ಉಳಿಸಿಕೊಂಡ, ನಂತರ ಚಂದ್ರಶೇಖರ ಕಂಬಾರರು ಅದನ್ನು ನಗರ ಪ್ರೇಕ್ಷಕರಿಗೆ ಸಂವಹನಗೊಳಿಸುವ ದೃಷ್ಟಿಯಿಂದ ಅದೇ ಹೆಸರಿನಲ್ಲಿ ನಾಟಕ ಬರೆದು ಖ್ಯಾತಿಗೆ ತಂದರು. ಇತ್ತೀಚಿಗೆ ಎಂ.ಎಂ. ಕಲಬುರ್ಗಿಯವರು ಖರೇ ಖರೇ ಸಂಗ್ಯಾ ಬಾಳ್ಯ ನಾಟಕ ಶ್ರೇಷ್ಠ ಪ್ರದರ್ಶನವಾಗಿದ್ದರೂ ವಿವಾದಕ್ಕೆ ಒಳಗಾಗಿದೆ. ರಂಗ ಸಂಗೀತ, ಆಚರಣೆ, ರಂಗತಂತ್ರಗಳನ್ನು ಅಭ್ಯಾಸ ಮಾಡಿ ‘ಆಧುನಿಕ ಜನಪದ ನಾಟಕ’ ಎನ್ನುವ ಹೆಸರಿನಲ್ಲಿ ಎಪ್ಪತ್ತರ ದಶಕದಲ್ಲಿ ಅನೇಕ ನಾಟಕಗಳು ಸೃಷ್ಟಿಯಾದವು. ನಂತರ ಇದರ ಮುಂದುವರಿಕೆಯಾಗಿ ಜನಪದ ವಸ್ತುವನ್ನು ಅನುಸರಿಸಿ ಅಸಂಖ್ಯಾತ ನಾಟಕಗಳು ಸೃಷ್ಟಿಯಾಗಿವೆ. ಜನಪದರ ಫಾರ‍್ಮನ್ನು ಮಾತ್ರ ಧ್ಯಾನಿಸಿ ಹುಟ್ಟಿದ ಕೃತಿಗಳು ದೇವನೂರು ಮಹಾದೇವ ಅವರ ಕುಸುಮಬಾಲೆ, ಚಂದ್ರಶೇಖರ ಕಂಬಾರರ ಚಕೋರಿ ಮುಂತಾದವು. ಜನಸಮುದಾಯದ ತಾತ್ವಿಕತೆಯನ್ನೇ ಮುಖ್ಯವಾಗಿಸಿಕೊಂಡು ಬಂದದ್ದು ಕೆ.ಬಿ.ಸಿದ್ದಯ್ಯನವರ ದಕ್ಕಲದೇವಿ ಕಾವ್ಯ. ಈ ತರದ ರೂಪಾಂತರಗಳಲ್ಲಿ ಜನಪದ ಜೀವಂತವಾಗಿದೆ.

. ಸಂಪಾದಿತ ಪಠ್ಯದ ಮೂರು ಮುಖ್ಯ ನೆಲೆಗಳು

ಪಠ್ಯದ ದೃಷ್ಟಿಕೋನ: ಕರ್ನಾಟಕದ ಮೌಖಿಕ ಪಠ್ಯಗಳ ಸಂಗ್ರಹ ಸಂಪಾದನೆಗಳಲ್ಲಿ ಮೂರು ಮುಖ್ಯ ನೆಲೆಯನ್ನು ಹೊಂದಿರುತ್ತದೆ. ಅದು ಪಠ್ಯದಿಂದಲೇ ಹೊಮ್ಮುವ ದೃಷ್ಟಿಕೋನ, ಕಲಾವಿದನಿಂದ ಹೊಮ್ಮುವ ದೃಷ್ಟಿಕೋನ, ಸಂಪಾದಕನ ದೃಷ್ಟಿಕೋನ.

ಜನಪದದ ಇತರ ಪ್ರಕಾರಗಳನ್ನು ಗಮನದಲ್ಲಿಟ್ಟುಕೊಮಡು ಕಾವ್ಯ ಪ್ರಕಾರವನ್ನು ಮಾತ್ರ ಇಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿದೆ. ಮೌಖಿಕ ಪಠ್ಯ ಕಲಾವಿದನೊಬ್ಬನ ಸೃಷ್ಟಿಯಲ್ಲ. ಅವನ ಪೂರ್ವಜರು ಇದ್ದಾರೆ. ಅವನಿಗೆ ಒಂದು ಚೌಕಟ್ಟು ಕೊಟ್ಟಿದ್ದಾರೆ. ಆ ಚೌಕಟ್ಟನ್ನು ಕಲಾವಿದ ಮೀರುವುದಿಲ್ಲ. ಹಾಗೆಂದು ಅವನು ಪೂರ್ವಜರು ಹೇಳಿದ್ದನ್ನೇ ಬಾಯಿ ಪಾಠ ಮಾಡಿ ಒಪ್ಪಿಸುತ್ತಿಲ್ಲ. ಗೋಣಿ ಬಸವನ ಕತೆಯನ್ನು ಕೇಳುವ ಜಂಗಮನಿಗೆ ಇದು ಐದು ಮಂದಿ ಶರಣರ ಕತೆ ಎನಿಸಿದರೆ, ಬೇಡರಿಗೆ ಲಿಂಗಾಯತರ ಬೇಡರ ಸಂಘರ್ಷವೆನಿಸುತ್ತದೆ, ಬಾಲ ಬಸವರಿಗೆ ದೇವದಾಸಿ ಪದ್ಧತಿಯ ಘೋರ ಕಥಾನಕವೆನಿಸುತ್ತದೆ. ಅಂದರೆ ಒಂದು ಉತ್ತಮ ಪಠ್ಯ ತನ್ನ ಒಡಲಿನಲ್ಲೇ ಎಲ್ಲ ಕಾಲಕ್ಕೂ ಬೇಕಾಗುವ ಸ್ಪೇಸನ್ನು ಬಚ್ಚಿಟ್ಟುಕೊಂಡಿರುತ್ತದೆ. ಈ ಕಾಲದ ಕಲಾವಿದ ತನ್ನ ಪೂರ್ವಜರನ್ನು ಗೌರವಿಸುತ್ತಲೇ ತನ್ನ ಕಾಲದ ಅನೇಕ ಸಂಗತಿಗಳನ್ನು ಸೇರಿಸುತ್ತಾ ಪಠ್ಯವನ್ನು ಮರು ರೂಪಿಸುತ್ತಿರುತ್ತಾನೆ. ಇದರಲ್ಲಿ ಪರಿಸರದ ಪಾತ್ರ ಮುಖ್ಯವಾದದ್ದು ಅದನ್ನು ಕಲಾವಿದನಾಗಲೀ, ಸಂಪಾದಕನಾಗಲೀ, ಬದಲಿಸಲು ಬರುವುದಿಲ್ಲಾ. ಎರಡನೆಯದು: ಘಟನೆ ಮತ್ತು ಅದಕ್ಕೆ ಸಂಬಂಧಿಸಿದ ಪಾತ್ರಗಳನ್ನು ಬದಲಿಸಲು ಸಾಧ್ಯವಿಲ್ಲ. ಪಠ್ಯವನ್ನು ಇಟ್ಟುಕೊಂಡು ಮುಂದಿನ ಇಬ್ಬರು ಎಷ್ಟೇ ತಮ್ಮತನವನ್ನು ತೋರಿಸುವ ಪ್ರಯತ್ನ ಮಾಡಿದರು ಇವೆರಡಕ್ಕೆ ಋಣಿಯಾಗಿರುತ್ತಾರೆ. ಜನಪದ ಕಾವ್ಯಗಳು ಪರಿಸರದೊಟ್ಟಿಗೆ ಒಂದು ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಮಂಟೇಸ್ವಾಮಿ ಕಾವ್ಯದಲ್ಲಿ ಕಾವೇರಿ ಹೊಳೆಯ ಪಾತ್ರವಿಲ್ಲದೆ ಕತೆಯನ್ನು ಊಹಿಸಲು ಸಾಧ್ಯವಿಲ್ಲ. ಮಾದಪ್ಪನ ಕತೆಯಲ್ಲಿ ಏಳುಮಲೆಗಳ ಪಾತ್ರವಿಲ್ಲದೆ ಕತೆ ನಡೆಯುವುದಿಲ್ಲ. ಪ್ರಸ್ತುತ ಗೋಣಿಬಸಪ್ಪನ ಕಾವ್ಯದಲ್ಲಿ ತುಂಗಭದ್ರ ನದಿ ಹಮ್ಮಿಗೆ ಹೊಳೆಯಾಗಿ ಬರುತ್ತದೆ. ಒಮ್ಮೆ ತನ್ನನ್ನೇ ಸೀಳಿಕೊಂಡು ದಾರಿಯಾಗಿ ಬಿಡುತ್ತದೆ. ಗವಿತಾಯಮ್ಮ ಮಾತಾಡುತ್ತಾಳೆ ಅಂದರೆ ಪರಿಸರವೇ ಪಾತ್ರವಾಗಿರುತ್ತದೆ. ಅಂದರೆ ಕಾವ್ಯದ ಸ್ವರೂಪವನ್ನು ಪರಿಸರವೂ ನಿರ್ಣಯಿಸುತ್ತಿರುತ್ತದೆ. ಇವು ಪಠ್ಯದಲ್ಲಿ ಎಲ್ಲ ಕಾಲಕ್ಕೂ ಇರುವ ಅಂಶಗಳು. ಕಲಾವಿದನಾಗಲಿ, ಸಂಪಾದಕನಾಗಲಿ ಬದಲಿಸಲು ಬಾರದ ಅಂಶಗಳು.

ಕಲಾವಿದನ ದೃಷ್ಟಿಕೋನ

ಮಧ್ಯಕಾಲೀನ ಚಾರಿತ್ರಿಕ ಕಾವ್ಯಗಳೆಂದು ಕರೆದರೂ, ಶಿಷ್ಟ ಪಠ್ಯಗಳು ಹಾಗೆ ಒಂದು ಕಾಲಕ್ಕೆ ಬದ್ಧವಾಗಿರುವುದಿಲ್ಲ. ಜನಪದರಿಗೆ ಕಾಲ ಮತ್ತು ಸ್ಥಳಗಳ ಬಗ್ಗೆ ಅವರೇ ಆದ ನಿಲುವುಗಳಿವೆ. ಅವರಿಗೆ ಹಿಂದಿನ ಘಟನೆಗಳನ್ನು ಒಂದಾದ ಮೇಲೆ ಒಂದು ಎಂದು ಜೋಡಿಸುವುದು ಮುಖ್ಯವಲ್ಲ. ನಮ್ಮ ಮನಸ್ಸು ಹೇಗೆ ಅಲೋಚನೆ ಮಾಡುತ್ತದೆಯೋ ಹಾಗೆ ಅವರು ಚರಿತ್ರೆಯನ್ನು ಕಟ್ಟುವುದು. ಆದ್ದರಿಂದ ಇಲ್ಲಿ ಬಸವಣ್ಣ ಯಾವ ಯಾವ ರೂಪಗಳಲ್ಲಿ ಬೆಳೆದ ಎಂಬುದನ್ನು ಕಟ್ಟುತ್ತಾರೆಯೇ ಹೊರತು ಕೇವಲ ಚಾರಿತ್ರಿಕ ಬಸವಣ್ಣನಿಗೆ ಮಾತ್ರ ಸೀಮಿತವಾಗುವುದಿಲ್ಲ. ಅವನ ಆಲೋಚನೆಗಳನ್ನು ಹೋಲುವ ೧೯ನೇ ಶತಮಾನದಲ್ಲಿ ಒಬ್ಬ ಕಾಣಿಸಿಕೊಂಡರೇ ಅವರಿಬ್ಬರನ್ನು ಸಮೀಕರಿಸಿ ಕತೆ ಮಾಡುತ್ತಾರೆ. ಇನ್ನೊಂದು ಉದಾಹರಣೆ ಅಲ್ಲಮ ಮತ್ತು ಮಂಟೇಸ್ವಾಮಿಗಳು, ಕಥನಕಾರರಿಗೆ ಅಭಿನ್ನರು. ಆದ್ದರಿಂದ ಹನ್ನರಡನೆ ಕಾವ್ಯದುದ್ದಕ್ಕೂ ಮಂಟೇದರನ್ನು ಅಲ್ಲಮ ಎಂದೇ ಕರೆದುಕೊಂಡಿದ್ದಾರೆ. ಹದಿನೈದನೇ ಶತಮಾನದ ಕೊಡೇಕಲ್ಲು ಬಸವಣ್ಣನನ್ನು ಕಲ್ಯಾಣದ ಬಸವಣ್ಣ ಎಂದೇ ಕರೆಯುತ್ತಾರೆ. ಆದ್ದರಿಂದ ಗೋಣಿ ಬಸಪ್ಪನ ಕತೆಯನ್ನು ಹಾಡುವ ತುಮನೆಪ್ಪನಿಗೆ ಚರಿತ್ರೆ ಎಂದರೆ ಅದು ಕಳೆದುಹೋದ ಸಂಗತಿಯಲ್ಲ. ಈಗಲೂ ಇರುವುದು. ಗೋಣಿ ಬಸಪ್ಪನ ಬದುಕಿನ ತಲ್ಲಣಗಳನ್ನು ನೆಪವಾಗಿಟ್ಟುಕೊಂಡು ತಮ್ಮ ಸಮುದಾಯದಲ್ಲಿರುವ ದೇವದಾಸಿ ಪದ್ಧತಿಯನ್ನು ಕುರಿತು ಮಾತಾಡುತ್ತಿದ್ದಾನೆ. ಕಾವ್ಯವನ್ನು ಸಮಕಾಲೀನಗೊಳಿಸುವ ಮತ್ತು ಜನಪದರು ಚರಿತ್ರೆಯನ್ನು ಪಲ್ಟಿ ಹೊಡೆಸುವ ಕ್ರಮವಿದು. ಈಗ ಆಗಿರುವ ಮಹಾಕಾವ್ಯಗಳ ಸಂಗ್ರಹದಲ್ಲಾಗಲೀ, ಕಥನಗಳ ಸಂಗ್ರಹದಲ್ಲಾಗಲೀ, ಕಲ್ಯಾಣವನ್ನು ನೆನೆಯುವ ಕಾವ್ಯಗಳೇ ಹೆಚ್ಚು. ಇವು ಕಡ್ಡಾಯವಾಗಿ ತಮ್ಮ ಸಾಂಸ್ಕೃತಿಕ ಚರಿತ್ರೆಯನ್ನು ಕಲ್ಯಾಣದಿಂದ ಪ್ರಾರಂಭಿಸುತ್ತವೆ. ದಕ್ಷಿಣ ಕರ್ನಾಟಕದಲ್ಲಿ ನೀಲಗಾರರು. ದೇವರಗುಡ್ಡರು, ಉತ್ತರ ಕರ್ನಾಟಕದಲ್ಲಿ ಸಾರುವಯ್ಯಗಳು ಹಾಡುವಾಗ ಕಲ್ಯಾಣವೇ ಎಲ್ಲ ಆಶಯಗಳ ಕೇಂದ್ರ.

ಕರ್ನಾಟಕದ ಚರಿತ್ರೆಯಲ್ಲಿ ವಿಜಯನಗರ ಸಾಮ್ರಾಜ್ಯರ ಅರಸರು ಎಷ್ಟೇ ಪ್ರಭಾವಿಗಳಾದರೂ ಕುಮಾರರಾಮನನ್ನು ಹೊರತುಪಡಿಸಿ ಒಬ್ಬ ರಾಜನ ಬಗ್ಗೆ ಒಂದು ಸಣ್ಣ ಜನಪದ ಕತೆಯೂ ಇಲ್ಲ. ಸಮುದಾಯದಿಂದ ಈ ರಾಜರು ಎಷ್ಟು ದೂರವಿದ್ದರು ಎಂಬುದಕ್ಕೆ ಇದು ಸಾಕ್ಷಿ. ಆದರೆ ಕಲ್ಯಾಣ ಕುರಿತು ನೂರಾರು ಕತೆಗಳು ಇವೆ. ಜನಪದ ಕಥನಕಾರರು ಚರಿತ್ರೆಯ ಬಹು ಮುಖ್ಯ ಘಟನೆಯನ್ನು ತಾವು ಹಾಡುವ ಕತೆಯಲ್ಲಿ ಸಮೀಕರಿಸುವ ಪ್ರಯತ್ನ ಮಾಡುತ್ತಾರೆ. ಮಂಟೇಸ್ವಾಮಿ ಕತೆಯಲ್ಲಿ ಮೈಸೂರು ಅರಸರನ್ನು ತರುವುದು. ಮಧ್ಯ ಕರ್ನಾಟಕದ ಚರಿತ್ರೆಯಲ್ಲಿ ಹರಪನಹಳ್ಳಿ ಪಾಳೇಗಾರರನ್ನು ತರುವುದು, ಇದು ಅವರಿತವಾಗಿ ನಡೆಯುತ್ತಿರುತ್ತವೆ. ಹಾಗೆ ಚಾರಿತ್ರಿಕ ಊರುಗಳನ್ನು ತಮ್ಮ ಕಾಲದ ಕತೆಯಲ್ಲಿ ಸೇರಿಸಿಕೊಳ್ಳುವುದು. ಉದಾ: ಮಂಟೇಸ್ವಾಮಿ ಕತೆಯಲ್ಲಿ ಮುಟ್ಟನಳ್ಳಿ ಎಂಬ ಊರು ಬರುತ್ತದೆ. ಆ ಊರಿಗೆ ಮುಟ್ಟನಳ್ಳಿ ಎಂಬ ಹೆಸರು ಮಂಟೇಸ್ವಾಮಿಗಳು ಬರುವುದಕ್ಕಿಂತ ಪೂರ್ವದಲ್ಲೇ ಇತ್ತು. ಆದರೆ ಕಲಾವಿದ ಅದನ್ನು ಮಂಟೇಸ್ವಾಮಿಗಳಿಗೆ ಸಮೀಕರಿಸಬೇಕು. ಅದಕ್ಕೆ ಒಂದು ತಂತ್ರವನ್ನು ಬಳಸುತ್ತಾನೆ. ದೊಡ್ಡಮ್ಮ ತಾಯಿ ಅಲ್ಲಿ ಮುಟ್ಟಾದಳು ಅದರಿಂದ ಅದಕ್ಕೆ ಮುಟ್ಟನಳ್ಳಿ ಎಂಬ ಹೆಸರು ಬಂತು ಎಂದು ಹೇಳಿಬಿಡುತ್ತಾನೆ. ಹಾಗೆ ಕಲಿ ಸಾರಿದ ಊರು ಕಲ್ಲೂರು ಎಂದು ಕರೆದುಕೊಳ್ಳುತ್ತಾನೆ. ಇವೆಲ್ಲಾ ಪೂರ್ವದಲ್ಲೇ ಈ ಹೆಸರಿನಲ್ಲೇ ಇದ್ದ ಊರುಗಳು. ಈಗ ಭಿನ್ನ ಅರ್ಥದಲ್ಲಿ ವ್ಯಾಖ್ಯಾನಗೊಳ್ಳುತ್ತವೆ. ಇದು ಜನಪದ ಪಠ್ಯಗಳಲ್ಲಿ ಮಾತ್ರ ನಡೆಯುತ್ತದೆ. ಹಾಗೆ ಗೋಣಿ ಬಸಪ್ಪನ ಕಾವ್ಯದಲ್ಲಿ ಹರಪನಳ್ಳಿ ಪ್ರಸಿದ್ಧ ಪಾಳೇಗಾರ ಸೋಮಶೇಖರನ ಕಾಲಕ್ಕೂ ಗೋಣಿ ಬಸವ ಕಾಲಕ್ಕೂ ಯಾವ ಸಂಬಂಧಗಳೂ ಇಲ್ಲ. ಆದರೆ ಅವನ ದರ್ಪ ಆಡಳಿತ ಇವೆಲ್ಲ ಜನರಲ್ಲಿ ಜನಜನಿತವಾಗಿವೆ. ಅವರ ಸ್ಮೃತಿಯಲ್ಲಿ ಇದು ಅಚ್ಚಳಿಯದಂತೆ ಇದೆ. ಆದ್ದರಿಂದ ಗೋಣಿ ಬಸಪ್ಪನ ಯುದ್ಧದ ಸಂಘರ್ಷಕ್ಕೆ ಸೋಮಶೇಖರನನ್ನೇ ನಿಲ್ಲಿಸುತ್ತಾರೆ. ಆದರೆ ಅವನೊಟ್ಟಿಗೆ ನಿಜವಾಗಿ ಯುದ್ಧಮಾಡಿದ ಪಾಳೇಗಾರ ತುಂಬ ದುರ್ಬಲವಾದ ಮನುಷ್ಯ.

ಅನಾದಿ ಕಾಲದಿಂದಲೂ ಲಿಂಗಾಯತರು, ಭೂಮಾಲೀಕರಾಗಿ ಬೇಡರ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದುದರ ಬಗ್ಗೆ ಅವರಿಗೆ ನೋವಿದೆ. ಆದ್ದರಿಂದ ಗೋಣಿ ಬಸಪ್ಪನನ್ನೂ ದೇವದಾಸಿ ಮಗನೊಬ್ಬನ ಯಶಸ್ಸಿನ ಕಥನವಾಗಿ ಕಟ್ಟುತ್ತಾರೆ. ಜನಪದದ ಈ ತಂತ್ರಗಳ ಅರಿವಿಲ್ಲದ ನಾವು ಇದು ಅವೈಜ್ಞಾನಿಕ ಎಂದು ಕಡೆಗಣಿಸಿದ್ದು ಇದೆ. ಅಂದರೆ ಸ್ಥಳ ಮತ್ತು ಕಾಲಕ್ಕೆ ಸಂಬಂಧಿಸಿದಂತೆ ಅವರ ಕ್ರಮ ಬರಹದ ಮಾದರಿಗಿಂತ ಭಿನ್ನವಾದದ್ದು.

ಸಂಪಾದಕನ ದೃಷ್ಟಿಕೋನ

ನಗರ ಕೇಂದ್ರಿತ ಜೀವನ ಕ್ರಮ ಹೆಚ್ಚಾದಂತೆ ಹಳ್ಳಿ ಮತ್ತು ನಗರ ಎನ್ನುವ ಬಿರುಕು ಉಂಟಾದಾಗ ಜನಪದದ ರೂಪಾಂತರಗಳು ಹುಟ್ಟಿಕೊಂಡಿವೆ. ಭಾಷಿಕ ರಚನೆ ಮತ್ತು ಸಂವಹನದಲ್ಲೂ ಈ ಬಿರುಕು ಉಂಟಾದಾಗ ಒಂದು ಪಠ್ಯದ ಸಂವಹನಕ್ಕೆ ಎರಡು ಮಾದರಿಗಳು ಬೇಕಾದವು. ಆಗ ಮೌಖಿಕ ಪಠ್ಯವೊಂದು ಒಬ್ಬ ವ್ಯಕ್ತಿಯಿಂದ ಲಿಖಿತ ಪಠ್ಯವಾಗಿ ಮೂಡಬೇಕಾಯಿತು. ಇಲ್ಲಿ ಮಧ್ಯವರ್ತಿಯೊಬ್ಬನ ಅವಶ್ಯಕತೆ ಹುಟ್ಟಿದೆ. ಈ ಹುಟ್ಟು ಎಂಥ ಬಿಕ್ಕಟ್ಟನ್ನು ಉಂಟುಮಾಡಿದೆ ಎಂದರೆ ಪ್ರಾಣವನ್ನೆ ಮರೆಸಿ ಬಿಂಬವನ್ನು ಮೆರೆಸುತ್ತಿದೆ. ಕಾವ್ಯವನ್ನು ಅರ್ಥೈಸಲು ಬೇಕಾದ ಪರಿಕರಗಳೇ ಮುಖ್ಯವಾಗಿ ಕಾವ್ಯ ಹುಟ್ಟಿಗೆ ಬೇಕಾದ ಪ್ರಾಣ ಯಾವುದಿತ್ತೊ ಅದೇ ಗೌಣವಾಗಿದೆ. ಇದು ನಮ್ಮ ಕಾಲದ ಅಧ್ಯಯನಗಳ ಸಂಕಷ್ಟವಾಗಿದೆ. ಶಿಷ್ಟ ಪಠ್ಯಗಳು ಹೇಗೆ ಸಂಪಾದಕನೆಂಬ ಒಬ್ಬ ಮಧ್ಯವರ್ತಿಯನ್ನು ಹುಟ್ಟಿಸಿಕೊಂಡವೋ, ಹಾಗೆ ಜನಪದಲ್ಲೂ ಒಬ್ಬ ಸಂಪಾದಕ ಹುಟ್ಟಿದ್ದಾನೆ. ಕರ್ನಾಟಕದಲ್ಲಿ ಜನಪದ ಪಠ್ಯಗಳ ಸಂಪಾದನೆಗೆ ನೂರು ವರ್ಷಗಳ ಚರಿತ್ರೆ ಇದ್ದರೂ ಇದರ ತಾತ್ವಿಕಾಂಶಗಳ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ. ಮೊದಲಘಟ್ಟದ ಸಂಗ್ರಹಕಾರರು ಗ್ರಂಥ ಸಂಪಾದನೆಯ ಕ್ರಮವನ್ನೇ ಅನುಸರಿಸಿ ಒಂದು ಉತ್ತಮ ಪಠ್ಯ (ಉತ್ತಮ ಕಲಾವಿದ) ಎಂದು ಗುರುತಿಸಿಕೊಂಡು ಇತರ ಕಲಾವಿದರು ಹಾಡುವ ಪಠ್ಯಗಳನ್ನು ಪೂರಕ ಪಠ್ಯಗಳೆಂದು ಕರೆದು ಸಂಗ್ರಹ ಕಾರ್ಯ ಮಾಡಿದರು. ಆದರೆ ಜನಪದದಲ್ಲಿ ಒಬ್ಬ ಕಲಾವಿದ ಉತ್ತಮ ಎನ್ನುವಲ್ಲಿ ಅನೇಕ ಸಮಸ್ಯೆಗಳಿವೆ. ಈಗ ಚಿತ್ರದುರ್ಗದ ಭಾಗದ ಕಲಾವಿದ ಪಂಚ ಗಣಾಧೀಶ್ವರರ ಕತೆ ಹಾಡುವಾಗ ಅಲ್ಲಿನ ಪ್ರಾಕೃತಿಕ ವಿವರಗಳಾದ ಕೋಟೆ ಗವಿಗಳಿಗೆ ಹೆಚ್ಚು ಮಾನ್ಯತೆ ಕೊಟ್ಟರೇ, ಬಳ್ಳಾರಿ ಜಿಲ್ಲೆಯ ಕಲಾವಿದ ನದಿ ದಾರಿಗಳಿಗೆ ಹೆಚ್ಚು ಮಾನ್ಯತೆ ಕೊಡುತ್ತಾನೆ. ಇದರಲ್ಲಿ ಎರಡೂ ಶ್ರೇಷ್ಠ. ಜನಪದದಲ್ಲಿ ಮೂಲ ಪಠ್ಯ ಎನ್ನುವುದು ಇಲ್ಲ. ಶ್ರೇಷ್ಠ ಎನ್ನುವುದೂ ಇಲ್ಲ. ಎಲ್ಲ ಪಠ್ಯಗಳು ಶ್ರೇಷ್ಠವೇ ಆಗಿದೆ. ಇಲ್ಲಿ ಪ್ರತಿಪಠ್ಯಗಳು ಏಕೆ ಹುಟ್ಟಿವೆ ಎನ್ನುವ ತಾತ್ವಿಕ ಚರ್ಚೆ ಅಷ್ಟೇ ಮುಖ್ಯ. ಎರಡನೇ ಘಟ್ಟದ ಸಂಗ್ರಹಗಳಲ್ಲಿ ಏಕ ವ್ಯಕ್ತಿ ಪಠ್ಯಗಳು (ಏಕವ್ಯಕ್ತಿ ಹಾಡಿದ್ದು) ಉಚಿತ ಎಂದು ಸಂಗ್ರಹಗಳು ನಡೆದಿವೆ. ಈ ಕ್ರಮದಲ್ಲೂ ಅನೇಕ ತೊಡಕುಗಳು ಇವೆ. ಅದು ಬರಹ ಮತ್ತು ಮೌಖಿಕದ ಮೂಲಭೂತ ಸಮಸ್ಯೆಗಳು ಬರಹ ಯಾವುದಾದರು ಒಂದು ಹೆಸರಿನ ಅಧಿಕೃತತೆಯನ್ನು ಕೇಳುತ್ತದೆ. ಮೌಖಿಕಕ್ಕೆ ಈ ಅಧಿಕೃತತೆಯ ಹಂಗಿಲ್ಲ. ಈಗ ಒಬ್ಬ ಕಲಾವಿದನಿಂದ ಒಂದು ಕಾವ್ಯವನ್ನು ಹಾಡಿಸಿ ಅವನ ಹೆಸರನ್ನು ಸೇರಿಸುವುದು ಹೇಗೆ? ಆಯ್ತು, ಅವನ ಹೆಸರನ್ನು ಸೇರಿಸೋಣ, ಅವನ ಹಿಂದಿನ ಗುರು ಇದ್ದಾನಲ್ಲ ಇದು ಪರಂಪರೆಯಿಂದ ಪರೆಂಪರೆಗೆ ಹಿಂದೆ ಹಿಂದೆ ಹೋಗುತ್ತಲೇ ಇರುತ್ತದೆ. ಶಿಷ್ಟಕೃತಿಗಳಿಗೆ ಇರುವ ಕಾಪಿರೈಟ್ ಸಮಸ್ಯೆಯನ್ನು ಜನಪದ ಕೃತಿಗಳಿಗೆ ಅನ್ಯಯಿಸುವುದಾದರು ಹೇಗೆ? ಅರಿವನ್ನು ಹಣ ತೆತ್ತು ಪಡೆಯಬೇಕು ಎಂಬಲ್ಲಿ ಹುಟ್ಟಿದ ಸಮಸ್ಯೆ ಇದು. ಆದರೆ ಜನಪದದಲ್ಲಿ ಅರಿವನ್ನು ಯಾರೋ ಒಬ್ಬರ ಹೆಸರಿಗೆ ಸೀಮಿತಗೊಳಿಸುವ ಕ್ರಮವಿಲ್ಲ.

ಪ್ರದರ್ಶನ ಪಠ್ಯವೊಂದನ್ನು ಓದಿನ ಪಠ್ಯವಾಗಿ ಮಾಡುವುದು ಸಂಪಾದಕನ ಕೆಲಸವಾಗಿದೆ. ಈ ತರದ ಪಠ್ಯವನ್ನು ಅವನು ಆಯ್ಕೆ ಮಾಡಿಕೊಳ್ಳುವಲ್ಲೇ ಒಂದು ದೃಷ್ಟಿಕೋನ ಕೆಲಸ ಮಾಡಿದೆ. ಆದರೆ ಇವನು ಕೂ ಸ್ವತಂತ್ರನಲ್ಲ. ಕಲಾವಿದ ಹೇಗೆ ತನ್ನ ಪೂರ್ವಜನರಿಗೆ ಋಣಿಯಾಗಿರುತ್ತಾನೋ ಹಾಗೆ ಇಲ್ಲಿ ಸಂಪಾದಕ ಕಲಾವಿದನಿಗೆ ಋಣಿಯಾಗಿಯೇ ಕೆಲಸ ಮಾಡಬೇಕು. ಆದರೆ ಪಠ್ಯವನ್ನು ತಿರುಚುವ ಯಾವ ಹಕ್ಕು ಇಲ್ಲದೆ ತನ್ನ ಧೋರಣೆಯನ್ನು ತೋರಿಸಬೇಕು. ಮೊದಲೇ ಹೇಳಿದ ಹಾಗೆ ಪ್ರದರ್ಶನ ಪಠ್ಯವನ್ನು ಓದಿನ ಪಠ್ಯವಾಗಿ ಮಾರ್ಪಡಿಸುವುದು ಅವನ ಸವಾಲು, ಕಾವ್ಯದ ತಾಳ ಲಯಗಳ ಬಗ್ಗೆ ಇವನಿಗೆ ಅರಿವಿರಬೇಕು. ಒಂದು ಪ್ರದರ್ಶನ ಪಠ್ಯದಲ್ಲಿ ದೃಶ್ಯ ಮತ್ತು ಶ್ರವ್ಯ ಎರಡು ಇರುತ್ತವೆ. ಕಲಾವಿದ ತನ್ನ ಹಾವ ಭಾವಗಳಲ್ಲೇ ಕತೆ ಇಂಪಾರ್‌ಟೆನ್ಸ್ ತೋರಿಸುತ್ತಿರುತ್ತಾನೆ. ಇದನ್ನು ಓದಿನ ಪಠ್ಯದಲ್ಲಿ ಭಾಷಿಕವಾಗಿ ಮೂಡಿಸುವ ಸ್ವಾತಂತ್ರ್ಯ ಸಂಪಾದಕನಿಗೆ ಇಲ್ಲ. ಆದರೂ ಕಾವ್ಯವನ್ನು ವಿಭಾಗೀಕರಿಸುವಲ್ಲಿ ಪಠ್ಯದ ವಿವರಗಳಲ್ಲೇ ಇರುವ ಸಾಲುಗಳನ್ನು ತೆಗೆದು ಕಾವ್ಯಾತ್ಮಕ ಶೀರ್ಷಿಕೆಗಳನ್ನು ಕೊಡುವಲ್ಲಿ ಆ ಪಠ್ಯದ ಕೇಂದ್ರಪ್ರಜ್ಞೆಯನ್ನು ಭಾಷಿಕವಾಗಿ ಮೂಡಿಸಬೇಕಾಗುತ್ತದೆ. ಶ್ರವ್ಯದಲ್ಲಿ ಪುನರಾವರ್ತನೆ ನಡೆಯುತ್ತದೆ. ಆದರೆ ಓದಿನಲ್ಲಿ ಇದು ನಡೆಯುವುದಿಲ್ಲ. ಸಂಪಾದಕ ಪುನರಾವರ್ತನೆಯನ್ನು ತೆಗೆಯಬೇಕು. ಗಾತ್ರವನ್ನು ಹಿಗ್ಗಿಸಿ ಮಹಾಕಾವ್ಯವೆಂದು ಕರೆಯುವ ಅಭ್ಯಾಸ ನಮ್ಮಲ್ಲಿ ಇದೆ. ಪುನರಾವರ್ತನೆಗಳನ್ನು ಸೇರಿಸಿ ಗಾತ್ರವನ್ನು ದೊಡ್ಡದು ಮಾಡಿ ಮಹಾಕಾವ್ಯವೆಂದು ಕರೆದು ಬಿಡುವುದು. ಮಹಾಕಾವ್ಯದ ಎಲ್ಲ ಲಕ್ಷಣಗಳಿರುವ ಹೆಚ್ಚು ಕಾವ್ಯಾತ್ಮಕವಾಗಿರುವ ಮಂಟೇಸ್ವಾಮಿ ಪಠ್ಯ ಗಾತ್ರದಲ್ಲಿ ಉಳಿದ ಬೃಹತ್ ಪಠ್ಯಗಳಿಗಿಂತ ಕಿರಿದು. ಗಾತ್ರವನ್ನು ಹಿಗ್ಗಿಸುವ ಕುಗ್ಗಿಸುವ ಕೈ ಬಾಯಿ ಚಳಕ ಕಲಾವಿದನದು. ಅವನು ಒಂದು ಕತೆಯನ್ನು ಆಯ್ಕೆ ಮಾಡಿಕೊಂಡರೆ ಅದನ್ನು ಮೂರು ರಾತ್ರಿಯೂ ಹಾಡಬಲ್ಲ ಒಂದೇ ರಾತ್ರಿಗೂ ಮುಗಿಸಬಲ್ಲ. ಏಕೆಂದರೆ ಅವನು ಒಂದೇ ಒಂದು ಕತೆಯನ್ನು ಕಲಿತಿರುವುದಿಲ್ಲ. ಉದಾ: ಬಾಲಬಸಪ್ಪನಾದ ತುಮನೆಪ್ಪ ಗೋಣಿ ಬಸವನ ಕತೆಯನ್ನು ಹಾಡುತ್ತಾನೆ, ಇಗ್ನಾವತಿ ಕತೆಯನ್ನು ಹಾಡುತ್ತಾನೆ. ಶೀಲವತಿಯ ಕತೆಯನ್ನು ಹಾಡುತ್ತಾನೆ, ಮರುಳುಸಿದ್ಧನ ಕತೆಯನ್ನು ಹಾಡುತ್ತಾನೆ, ಸಂಡೂರು ರಾಜನಕತೆಯನ್ನು ಹಾಡುತ್ತಾನೆ. ಎಲ್ಲ ಕತೆಗೂ ಬಳಸಬಹುದಾದ ಕೆಲವು ಸಿದ್ಧ ವರ್ಣನೆಗಳು ಇರುತ್ತವೆ. ಕತೆಯನ್ನು ಹಿಗ್ಗಿಸಬೇಕೆಂದಾಗ ಈ ತಂತ್ರ ಬಳಸುತ್ತಾನೆ. ಓದಿನ ಪಠ್ಯ ರೂಪಿಸುವ ಸಂಪಾದಕನಿಗೆ ತಾನು ಸಂಪಾದಿಸುತ್ತಿರುವ ಈ ಪಠ್ಯಕ್ಕೆ ಈ ವರ್ಣನೆ ಅಗತ್ಯವೇ ಎಂದು ಗೊತ್ತಿರಬೇಕು. ಆದ್ದರಿಂದ ಕಲಾವಿದ ಹಾಡುವ ಇತರ ಪಠ್ಯಗಳ ಪರಿಚಯವು ಸಂಪಾದಕನಿಗೆ ಇರಬೇಕು. ಈಗ ಕರ್ನಾಟಕದಲ್ಲಿ ಜನಪದ ಸಂಪಾದನೆಗಳಲ್ಲಿ ಎರಡು ಮಾದರಿಗಳು ನಮ್ಮ ಮುಂದಿವೆ. ಗ್ರಂಥ ಸಂಪಾದನೆಯ ಮಾದರಿಯನ್ನು ಅನುಸರಿಸಿದ ಪ್ರೊ. ಪಿ.ಕೆ. ರಾಜಶೇಖರ ಅವರು ‘ಮಲೆ ಮಹದೇಶ್ವರ ಕಾವ್ಯ’ ಸಂಪಾದಿಸಿದರು. ನಂತರ ಪ್ರೊ. ಹಿ.ಚಿ.ಬೋರಲಿಂಗಯ್ಯನವರು ಒಬ್ಬ ಗಾಯಕನನ್ನೇ ಇಟ್ಟುಕೊಮಡು (ಮಂಟೇಸ್ವಾಮಿ) ಕಾವ್ಯ ಸಂಪಾದಿಸಿದರು. ಈ ಎರಡು ಮಾದರಿಗಳು ಮೇಲೆ ಹೇಳಿದ ಸಮಸ್ಯೆಗಳನ್ನು ಅನುಭವಿಸಿವೆ.

ಸಂಪಾದಿತ ಪಠ್ಯಗಳಲ್ಲಿ ಒಂದು ಮಾದರಿ ಹೇಗೋ ರೂಢಿಗೆ ಬಂದಿದೆ. ಪ್ರಸ್ತಾವನೆ, ಕಥಾಸಾರ, ಕಠಿಣ ಪದಗಳಿಗೆ ಅರ್ಥ. ಇದು ಹಳೆಗನ್ನಡ ಪಠ್ಯಗಳಿಗೆ ಮಾತ್ರ ಒಗ್ಗುವ ಮಾದರಿ. ಹಳೆಗನ್ನಡಗಳು ಈಗ ಬಳಕೆಯಲ್ಲಿ ಇಲ್ಲದ ಭಾಷೆ. ಆದರೆ ಜನಪದ ಭಾಷೆ ಈಗಲೂ ಬಳಕೆಯಲ್ಲಿದೆ. ಇಲ್ಲಿ ಕಠಿಣವೆಂದರೆ ಉಚ್ಚಾರಣೆಯಲ್ಲಿ ಆಗಿರುವುದು. ಇದನ್ನು ಶಿಷ್ಟ ಕನ್ನಡಕ್ಕೆ ಸಮೀಕರಿಸಿ ಬಿಟ್ಟರೆ ಅದು ತನ್ನ ಸ್ಥಳೀಯ ಲಕ್ಷಣವನ್ನೇ ಕಳೆದುಕೊಳ್ಳುತ್ತದೆ. ಈ ಉಚ್ಚಾರಣೆ ಬಂಧದಲ್ಲೇ ಅದರ ಚೆಂದ ಇರುವುದು. ಸಂಪಾದಕ ಇದನ್ನು ಮಧ್ಯಮವರ್ಗದ ಭಾಷೆಗೆ ತರ್ಜುಮೆ ಮಾಡದಿದ್ದರೂ ಅದು ಓದುಗರಿಗೆ ಅರ್ಥವಾಗುತ್ತದೆ. ಇನ್ನು ಕಥಾಸಾರವೂ ಪಠ್ಯವನ್ನು ಕಡ್ಡಾಯವಾಗಿ ಓದುವಂತೆ ಪ್ರೇರೇಪಿಸಬೇಕು. ಏಕೆಂದರೆ ಪಠ್ಯವನ್ನು ಓದದೇ ಕಥಾಸಾರವನ್ನು ಓದಿ ಬರೆಯುವ ಹವ್ಯಾಸ ಜನಪದ ಕಾವ್ಯಗಳಿಗೆ ಅಂಟಿಕೊಂಡಿದೆ. ವಿದ್ಯಾರ್ಥಿಗಳಿಗೆ ಸರಳವಾಗಿ ಇದು ಸಿಗುವುದರಿಂದ ಒಳಗಿನ ಪಠ್ಯವನ್ನು ಅವರು ಓದುವುದೇ ಇಲ್ಲ. ಪಠ್ಯದೊಳಗಿರುವ ತಾಳ ಲಯ ನಾದಗಳನ್ನೆಲ್ಲಾ ಕಥಾಸಾರದಲ್ಲಿ ಹಿಡಿದಿಡಲು ಸಾಧ್ಯವೇ ಇಲ್ಲ. ಕಥಾಸಾರ ಪಠ್ಯವನ್ನು ಓದುವಂತೆ ಒತ್ತಾಯಿಸಬೇಕು.

. ತುಂಗೆಭದ್ರೆಯ ಮಡಿಲಲ್ಲಿ ಮೌಖಿಕ ಸಾಹಿತ್ಯ….

ಜನಪದ ಕಾವ್ಯ ಸಂಪಾದನೆಯ ಮೇಲಿನ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ತುಂಗಭದ್ರ ನದಿ ಇಕ್ಕೆಲಗಳಲ್ಲಿ ಹುಟ್ಟಿ ಮೌಖಿಕ ಕಾವ್ಯವೊಂದರ ಕೆಲವು ಮೂಲಭೂತ ಲಕ್ಷಣಗಳನ್ನು ಗುರುತಿಸಲಾಗಿದೆ. ಬಳ್ಳಾರಿ, ದಾವಣೆಗೆರೆ, ಕೊಪ್ಪಳ ಹಾವೇರಿ ಜಿಲ್ಲೆಗಳ ಅಘೋಷಿತ ವ್ಯಾಪ್ತಿ ಈ ಕಾವ್ಯಕ್ಕೆ ಇದೆ. ನದಿಯ ಇಕ್ಕೆಲದ ಈ ಭಾಗ ತುಂಬಾ ಪ್ರಾಚೀನ ಜನವಸತಿ ಕೇಂದ್ರವಾಗಿದೆ. ಹೈನುಗಾರಿಕೆ ಮತ್ತು ಕೃಷಿ ಇಲ್ಲಿನ ಪ್ರಧಾನ ಕಸುಬು. ಮೈಲಾರ ಮತ್ತು ಎಲ್ಲಮ್ಮ ಆದಿಮ ದೈವಗಳು, ಜೋಕುಮಾರಸ್ವಾಮಿ, ಗುಳ್ಳವ್ವ ಮುಂತಾದ ಫಲ ಸಂಬಂಧಿ ದೈವಗಳು, ಹುಲಿಗೆಮ್ಮ, ಉಚ್ಚೆಂಗಮ್ಮ, ಮಲಿಯಮ್ಮ, ಬಳಾರಮ್ಮ, ಗಾಳೆಮ್ಮ ಮುಂತಾದ ಮಾತೃ ಪ್ರಧಾನ ದೈವಗಳು. ಗಾದ್ರಿಪಾಲನಾಯಕ, ಕಾಳಿಂಗರಾಯ, ಕೃಷ್ಣಗೊಲ್ಲ, ಮುಂತಾದ ಬುಡಕಟ್ಟುನಾಯಕರ ಕತೆಗಳು, ಕುಮಾರರಾಮ, ಬೆಬ್ಬುಲಿರೆಡ್ಡಿ ಮುಂತಾದ ಚಾರಿತ್ರಿಕ ವ್ಯಕ್ತಿಗಳು ಇದ್ದು ಇವೆಲ್ಲ ಸಂಪಾದಿತ ಪಠ್ಯಗಳಾಗಿ ಪ್ರಕಟಗೊಂಡಿವೆ. ಇನ್ನು ಪ್ರದರ್ಶನ ಕಲೆಗಳಲ್ಲಿ ಬಯಲಾಟಗಳು, ಹಗಲುವೇಷ, ಜೋಗುತಿ ಕುಣಿತ, ಅಲಾಯಿ ಕುಣಿತ, ಮೊಹರಂ, ಕುಣಿತ, ಗೊಂದಲಿಗರ ಕುಣಿತ ಇತ್ಯಾದಿಗಳು ಇವೆ. ಈ ಭಾಗದ ಹಿರಿಯ ಜಾನಪದ ತಜ್ಞರಾದ ಮುದೇನೂರುಸಂಗಣ್ಣ. ಜೋಳದರಾಶಿದೊಡ್ಡನಗೌಡರು, ನೇಗಿನಾಳ, ಬಸವರಾಜ ಮಲಶೆಟ್ಟಿ, ಸೊಂಥೈಮರ್, (ವಿದೇಶಿಯರಾದರು ಮೈಲಾರ ಲಿಂಗನ ಬಗ್ಗೆ ವಿಶೇಷ ಅಧ್ಯಯನ ಮಾಡಿದವರು) ಮುಂತಾದವರು ಮೊದಲ ತಲೆಮಾರಿನ ವಿದ್ವಾಂಸರಾಗಿದ್ದಾರೆ. ಎರಡನೇ ತಲೆಮಾರಿನಲ್ಲಿ ಎಸ್. ಎಸ್. ಹಿರೇಮಠ, ಪುರುಷೋತ್ತಮ ಬಿಳಿಮಲೆ, ದುರ್ಗಾದಾಸ್ ಮುಂತಾದವರು ಬರುತ್ತಾರೆ. ಇದಾದ ನಂತರ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೇಲೆ ವೈತ್ರಿಕಾಮಣ್ಣ, ಮಂಜುನಾಥ ಬೇವಿನಕಟ್ಟೆ, ಸ.ಚಿ.ರಮೇಶ, ಚಲುವರಾಜು, ವಿರೂಪಾಕ್ಷಿ ಪೂಜಾರಹಳ್ಳಿ, ಸುಬ್ಬಣ್ಣ ರೈ. ಪ್ರಭಾಕರ, ಹೆಬ್ಬಾಲೆ ನಾಗೇಶ, ಸಾವಿತ್ರಿ, ದೈವಜ್ಞ ಸೋಮಶೇಖರ, ತಾರಿಹಳ್ಳಿ ಹನುಮಂತಪ್ಪ, ಶೈಲಜ, ಸುಜಾತ ಅಕ್ಕಿ, ಮಾಧವ ಫೆರಾಜೆ ಮುಂತಾದ ಹೊಸ ತಲೆಮಾರಿನ ವಿದ್ವಾಂಸರು ಈ ಭಾಗದಲ್ಲಿ ಸಂಗ್ರಹ, ಸಂಪಾದನೆ ಹಾಗೂ ಅಧ್ಯಯನಗಳನ್ನು ಮಾಡಿದ್ದಾರೆ. ಹೇಗೆ ಕರ್ನಾಟಕದಲ್ಲಿ ಬೇರೆ ವಿಶ್ವವಿದ್ಯಾಲಯಗಳು ಇರುವ ಕಡೆ ಅದರ ಸುತ್ತ ಮುತ್ತ ಜನಪದ ಕೆಲಸಗಳಾಗಿವೆಯೋ ಹಾಗೆಯೇ ಇಲ್ಲಿಯು ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾದ ಒಂದು ದಶಕದಲ್ಲಿ ಹೆಚ್ಚು ಸಂಗ್ರಹ ಸಂಪಾದನೆಗಳು ಆಗಿವೆ. ಪ್ರಾಚೀನ ಕಾವ್ಯಗಳಲ್ಲಿ ಮಾತೃದೇವತಾ ಆರಾಧನ ಕಾವ್ಯಗಳು. ಫಲವಂತಿಕೆಗೆ ಸಂಬಂಧಿಸಿದ ಕಾವ್ಯಗಳು ಇವೆ. ಇವುಗಳ ಉದ್ದೇಶ ದೈವವನ್ನು ಸಂಪ್ರೀತಗೊಳಿಸುವುದಷ್ಟೇ. ಅಂದರೆ ಅವು ಆಚರಣಾತ್ಮಕ ವಿಧಾನದಿಂದ ಬಿಡುಗಡೆಗೊಂಡು ಪ್ರದರ್ಶನ ಮತ್ತು ರಂಜನೆಯನ್ನೇ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಂಡಿಲ್ಲ. ಆದರೆ ಚಾರಿತ್ರಿಕ ಪಠ್ಟಯಗಳಲ್ಲಿ ಪ್ರದರ್ಶನ ಗುಣವಿದೆ. ಅವು ಮುಂದೆ ಕುಂತ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ವರ್ತಿಸುತ್ತವೆ. ಆಧುನಿಕ ವಿದ್ಯಮಾನಗಳನ್ನು ಸೇರಿಸಿಕೊಳ್ಳುತ್ತಾ, ಮುಂದುವರಿಯುತ್ತವೆ.

ಉದಾ : ಕುಮಾರರಾಮನ ಕತೆಯನ್ನು ಹಾಡುವ ದರೋಜಿ ಈರಮ್ಮ, ಅಲ್ಲಿರುವ ಪ್ರೇಮ ಕಥಾನಕಗಳನ್ನು ಕಾಲೇಜು ಹುಡುಗರ ಪ್ರೇಮ ಕತೆಗಳಂತೆ ಚಿತ್ರಿಸುತ್ತಾಳೆ. ಹಗಲುವೇಷದ ವೆಂಕಟಾಪುರದ ರಾಮಪ್ಪ ತನ್ನ ಪ್ರದರ್ಶನ ಕಲೆಗೆ ಕೆಲವು ಸಿನಿಮಾ ಹಾಡುಗಳನ್ನು ಸೇರಿಸಿಕೊಮಡು ಹಾಡುತ್ತಾನೆ. ಹೊಸಕಾಲಕ್ಕೆ ಈ ತರದ ಸೇರ್ಪಡೆ ಅನಿವಾರ‍್ಯವಾದರಿಂದ ಕಲೆಗೆ ಏನೂ ನಷ್ಟವಾಗಿಲ್ಲ. ಆದರೆ ಈ ಭಾಗದಲ್ಲಿ ಕಲ್ಯಾಣದ ಕತೆಯನ್ನು ಕೇಂದ್ರವಾಗಿಸಿಕೊಂಡು ಹಾಡಿರುವ ಕಾವ್ಯಗಳು ಪ್ರಕಟವಾಗಿರಲಿಲ್ಲ. ಬಾಲಬಸಪ್ಪನಾದ ತುಮನೆಪ್ಪ ಈ ಕೊರತೆಯನ್ನು ಈ ಪಠ್ಯದ ಮೂಲಕ ತುಂಬಿದ್ದಾನೆ.

. ಗೋಣಿ ಬಸಪ್ಪನ ಕಾವ್ಯದ ವೈಶಿಷ್ಟ್ಯಗಳು

ಈ ಸಂಪ್ರದಾಯದ ಕೊನೆಕೊಂಡಿ ಎಂದು ಹೇಳಿಕೊಳ್ಳುವ ಬಳ್ಳಾರಿ ಜಿಲ್ಲೆ. ಕೂಡ್ಲಿಗಿ ತಾಲೂಕು, ಗೊಲ್ಲರ ಹಟ್ಟಿ ನಿವಾಸಿ ಬಾಲಬಸವ ತುಮನೆಪ್ಪ ಈ ಕತೆಯನ್ನು ಹಾಡಿದ್ದಾನೆ. ಹಿಮ್ಮೆಳದಲ್ಲಿ ಅವನ ಪತ್ನಿ ಹನುಮ್ಮಕ್ಕ, ಮಗ ಬಸವರಾಜ ಹಾಡಿದ್ದಾರೆ. ಗೋಣಿ ಬಸಪ್ಪನ ಕತೆಯಲ್ಲದೆ ಮರುಳಸಿದ್ಧನ ಕತೆ, ಹರಳಯ್ಯ ಕತೆ, ಇಗ್ನಾವತಿ, ಶೀಲವತಿ, ಸಂಡೂರ ರಾಜನ ಕಥೆ, ಇತ್ಯಾದಿಗಳನ್ನು ಹಾಡುತ್ತಾನೆ. ತನ್ನ ಕುಲವೃತ್ತಿಯಾದ ಕಾಲಜ್ಞಾನವನ್ನು ಮಾತ್ರ ಸಾಂಸ್ಕೃತಿಕ ಸಂದರ್ಭಗಳಲ್ಲಿ ಹಾಡುತ್ತಾನೆ. ಅದು ಪ್ರದರ್ಶನ ಕಲೆಯಲ್ಲ ಎಂಬುದು ಅವನ ನಂಬಿಕೆ.

ಒಂದು ಬೆಡಗಿನಿಂದ ಪ್ರಾರಂಭವಾಗುವ ಈ ಕತೆ ಮೂವತ್ತು ಪ್ರಸಂಗಗಳಿಂದ ಕೂಡಿದೆ. ಏಳು ಅದ್ಭುತ ರಂಜನೆಯ ಪವಾಡ ಕತೆಗಳಿವೆ. ಪಠ್ಯದ ವಸ್ತು ವಿಷಯವನ್ನು ಆಧರಿಸಿ ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಮಡ ವಿಭಾಗೀಕರಣವೇ ಹೊರತು, ಕಲಾವಿದ ಈ ತರ ಶೀರ್ಷಿಕೆಗಳನ್ನು ಕೊಟ್ಟು ಹಾಡುವುದಿಲ್ಲ. ಸಾಮಾನ್ಯವಾಗಿ ಕಾವ್ಯ ಕತೆಯ ವಿಸ್ತಾರತೆಗೆ ಅನುಗುಣವಾಗಿ ಅದರ ಪೂರ್ವಕಾಂಡಗಳು ನಿರ್ಧಾರವಾಗುತ್ತವೆ. ವ್ಯಾಪ್ತಿ ದೊಡ್ಡದಿದ್ದರೆ ಭೂಮಿ ಸೃಷ್ಟಿಯ ಕತೆಗಳು, ಜಾಂಬವಂತನ ಪ್ರವೇಶ, ಅವನ ಅಂಗಾಂಗಳೇ ಭೂ ಭಾಗಗಳಾಗುವುದು ಇತ್ಯಾದಿಗಳೆಲ್ಲ ಇರುತ್ತವೆ. ಇದನ್ನು ನಾವು ಜನಪದ ಮಹಾಕಾವ್ಯವೆಂದು ಕರೆದುಕೊಂಡಿದ್ದೇವೆ. ಈ ನಿಯಮಗಳನ್ನು ಕೆಲವೊಮ್ಮೆ ಜನಪದ ಕಥನಗಳೇ ಮುರಿದು ಕಟ್ಟುತ್ತವೆ. ಅಂದರೆ ಶಿಷ್ಟಕಾವ್ಯಗಳ ಹಾಗೆ ಇವು ನಿಯಮಬದ್ಧ ರಚನೆಗಳಲ್ಲ. ಪ್ರಸ್ತುತ ಗೋಣಿ ಬಸಪ್ಪನ ಕಾವ್ಯದಲ್ಲಿ ಸೃಷ್ಟಿಯ ಕತೆ ಬೆಡಗಿನ ರೂಪದಲ್ಲಿದೆ. ಸ್ಥಿತಿ, ಲಯಗಳು ಇವೆ. ಕೈಲಾಸದಲ್ಲಿ ಅವನ ಹುಟ್ಟು ಕಾಣಿಸಿಕೊಂಡು ಕಲಿಯಲ್ಲಿ ಬದುಕಿ ಗುಮ್ಮಗೋಳದಲ್ಲಿ ಶಿಲಾಮೂರ್ತಿಯಾಗುವಲ್ಲಿ ಕತೆ ಮುಗಿಯುತ್ತದೆ. ಕೈಲಾಸ ಮತ್ತು ಗುಮ್ಮಗೋಳ ಅಲೌಕಿಕ ನೆಲೆಗಳು ಅವು ಅಸಾಧಾರಣ ಹುಟ್ಟು ಅಸಾಮಾನ್ಯ ಸಾವಿಗೆ ಇರುವ ತಾಣಗಳು. ಒಟ್ಟು ಈ ಸೃಷ್ಟಿ ಸ್ಥಿತಿ ಲಯ ಎನ್ನುವ ಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ. ಹುಟ್ಟು ಮತ್ತು ಸಾವಿಗೆ ಎರಡೆರಡು ಪ್ರಸಂಗಗಳು ಮೀಸಲಾಗಿದ್ದು, ಪವಾಡಗಳಲ್ಲಿ, ಇಪ್ಪತ್ತೊಂದು ಪ್ರಸಂಗಗಳಲ್ಲಿ ಅವನ ಜೀವನ ಕಥಾನಕವನ್ನು ಕಟ್ಟಿ ಕೊಡಲಾಗಿದೆ.

೧. ಸೋಕಿರ ಮೂವ ತಾಜೀಜಿ… ೨. ದೇವ ಶಿವನೆನ ಮಾದೇವೊ ಮನವೇ… ೩. ಶಿವನನಯನ ದೇವೈ… ೪. ಹರಹರ ಭಗವಂತ ತಾನಿ ತಂದನಿ ನಾನೋ… ೫. ಸುಖಿರಾಜ ಬಗದಿ… ೬. ಐ ರಾಮ ತಾಜೀಜಿ… ಇಷ್ಟು ಪಲ್ಲವಿಗಳಲ್ಲಿ ಈ ಕತೆಯನ್ನು ಹಾಡುತ್ತಾರೆ. ತುಂಬಾ ಬಳಕೆಯಾಗುವ ಸೊಲ್ಲು, ಸೋಕಿರ ಮೂವ ತಾಜೀಜಿ ಒಂದೊಂದು ಪಲ್ಲವಿಯನ್ನು ಯಾವ ಯಾವ ಭಾವಗಳಿಗೆ ಬಳಸಬೇಕೆಂಬ ತರ್ಕ ಇದೆ. ಆ ಪಲ್ಲವಿ ಬಂದ ತಕ್ಷಣ ಕಲಾವಿದನ ಭಾವಕೋಶದಲ್ಲಿ ಆ ಪಲ್ಲವಿಗೆ ಅನುಗುಣವಾದ ಆ ಭಾಗದ ಕತೆ ತಾನಾಗೇ ಬಿಚ್ಚಿಕೊಳ್ಳುತ್ತದೆ. ಸುಖಿ ರಾಜ ಬಗದಿ… ಎನ್ನುವ ಪಲ್ಲವಿಯನ್ನು ಪ್ರಯಾಣಕ್ಕೆ ಮಾತ್ರ ಬಳಸುತ್ತಾನೆ. ಇದು ಕತೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ತಂತ್ರವಾಗಿಯೂ ಕೆಲಸ ಮಾಡಿದೆ. ಈ ಪಲ್ಲವಿಗಳನ್ನು ಹಿಮ್ಮೇಳ ಹಿಡಿದ ಮಳೆ ಬಿಡದ ಹಾಗೆ ನಿಂತೇ ಹಾಡುತ್ತಿರುತ್ತದೆ. ಮುಖ್ಯ ಗಾಯಕ ಮೇಳದೊಟ್ಟಿಗೆ ಕತೆಯನ್ನು ಹಾಡಿ ನಂತರ ಹಾಡಿದ ಭಾಗವನ್ನು ಗದ್ಯದಲ್ಲಿ ವಿವರಿಸುತ್ತಾನೆ. ಈ ಗದ್ಯ ಭಾಗದಲ್ಲಿ ಹಾಡಿನಲ್ಲಿರುವ ವಸ್ತುವಿನ ಜೊತೆಗೆ ಅನೇಕ ಸ್ಥಳೀಯ ಸಂಗತಿಗಳು ಅದರದೇ ಆದ ಭಾಷೆಯ ಚೆಂದದಲ್ಲಿ ನಿರೂಪಿತವಾಗುತ್ತದೆ. ಉದಾ: ಕೂಲಹಳ್ಳಿ ಗಾಣಿಗರು ಶಿವನಯ್ಯನ ಆಜ್ಞೆ ಮೇರೆಗೆ ಒಂದು ರಾತ್ರಿ ಒಂದು ಹಗಲು ಗಾಳಿಪೂಜೆ ಪಟ್ಟಣಕ್ಕೆ ನಡೆದು ಗೋಣಿಬಸಪ್ಪನಿಗೆ ಮಾಟದ ಅಂಗಿಯನ್ನು ತರುವಾಗ ಅವರಿಗೆ ಹಸಿವಾಗಿ ಬಿಡುತ್ತದೆ. ಅವರು ಕೆಲಸಗಾರರು ಬುತ್ತಿ ತಂದಿದ್ದಾರೆ. ಆದರೆ ಮಾಟದ ಅಂಗಿಯನ್ನು ಕೆಳಗಿಟ್ಟರೇ ಅಪಾಯ. ‘ಓ ಅಲ್ಲಿ ಕಾಣುವ ಆಲದ ಮರಕ್ಕೆ ನೇತಾಕಿ ಬಿಡೋಣಾ’ ಎಂದು ಕೊಳ್ಳುತ್ತಾರೆ. ‘ಹೌದಪ್ಪ ಒಂದು ರಾತ್ರಿ ಒಂದು ಹಗಲು ಒಂದೇ ಉಸಿರಿನಲ್ಲಿ ಓಡಿ ಬಂದಿದ್ದೇವೆ. ಊಟ ಇಲ್ಲದೆ ಸತ್ತುಗಿತ್ತು ಹೋದೆವು’ ಎಂದು ಮರಕ್ಕೆ ನೇತಾಕಿ ಹೊಳೆ ದಂಡೆಯಲ್ಲಿ ಬುತ್ತಿ ಬಿಚ್ಚುತ್ತಾರೆ. ಇಡೀ ಆಲದ ಮರವೇ ಧಗಧಗವೇ ಉರಿಯುವ ದೃಶ್ಯ ಗೋಚರಿಸುತ್ತದೆ. ಆಗ ಹೊತ್ತ ಅಂಗಿಯನ್ನು ಹೊತ್ತುಕೊಂಡೇ ಅವರು ಮಾತಾಡುವುದರಲ್ಲಿ ಈ ಭಾಗದ ಮೌಖಿಕ ಭಾಷೆಯಲ್ಲಿ ಇರುವ ಎಲ್ಲ ಲಯಗಳು ಬಳಕೆಯಾಗಿವೆ. ಹೀಗೆ ಕಾವ್ಯ ತನ್ನ ಭಾಷಿಕ ವಿವರಗಳಿಂದ ಅನೇಕ ದೃಶ್ಯಗಳನ್ನು ಚಿತ್ರದಂತೆ ಕಟ್ಟಿಕೊಡುತ್ತದೆ. ಈ ತರದ ಅನೇಕ ಸ್ಥಳೀಯ ಭಾಷಿಕ ಸಂಗತಿಗಳಲ್ಲಿ ದೃಶ್ಯಗಳನ್ನು ಕಟ್ಟುವುದು ಕಾವ್ಯದುದ್ದಕ್ಕೂ ಇವೆ. ಸ್ಥಳೀಯ ಭಾಷೆಯ ರಚನೆ ಅದರ ಸ್ವರೂಪ ಕುರಿತ ಅಧ್ಯಯನಗಳು ಇದರಿಂದ ಸಾಧ್ಯ.

ಕಥನ ಮಾದರಿಗಳನ್ನು ಕುರಿತು : ಕತೆ ನಡೆಯುವುದು ಕೈಲಾಸ, ಕಲ್ಯಾಣ, ಕಲಿ ಮತ್ತು ಗುಮ್ಮಗೋಳದಲ್ಲಿ ಕಲಿಯೊಂದನ್ನು ಹೊರತುಪಡಿಸಿ ಉಳಿದ ಎಲ್ಲ ನೆಲೆಗಳು ಅಲೌಕಿಕ ನೆಲೆಗಳು. ಕಲ್ಯಾಣ ಗುಮ್ಮಗೋಳಗಳು ಚಾರಿತ್ರಿಕ ಊರುಗಳಾದರೂ, ಇಲ್ಲಿ ಪುರಾಣೀಕರಣಗೊಂಡ ಕಲ್ಪಿತ ಊರುಗಳು. ದೈವೀಕರಣಗೊಂಡಿರುವ ಪಾತ್ರಗಳು ಲೌಕಿಕ ಅಲೌಕಿಕ ಎಲ್ಲ ಕಡೆ ಚಲಿಸುತ್ತವೆ. ಆದರೆ ದೈವೀಕರಣಗೊಳ್ಳದ ಪಾತ್ರಗಳು ಕಲಿಯಲ್ಲಿ ಮಾತ್ರ ಇರಲು ಸಾಧ್ಯ. ಉದಾ: ಶಿವನಯ್ಯ, ಕನಕಮ್ಮ, ಪೂಜಾರಿಕಲ್ಲಪ್ಪ, ವಡ್ಡಟ್ಟವ್ವ, ಬಾಗಳಿಭೂಪ, ಮೇಟಿಬಣಕಾರ, ಪಿಕನಗೌಡ, ಕಂಠಿ ನಾಗಮ್ಮ ಇನ್ನು ಎಲ್ಲ ಕಡೆ ಚಲಿಸುವ ಪಾತ್ರಗಳು; ಪರಮಾತುಮ, ಬಸವಣ್ಣ, ಅರಳಯ್ಯ, ಗೋಣಿ ಬಸವ, ಐದುಮಂದಿ ಶರಣರು.

ಕಲ್ಯಾಣ, ಕೈಲಾಸ, ಗುಮ್ಮಗೋಳದಲ್ಲಿ ಕತೆಗೆ ಯಾವ ಸಂಘರ್ಷಗಳು ಇಲ್ಲ. ಅಲ್ಲಿ ಹುಟ್ಟುವ ಸಾಯುವ ಪ್ರಕ್ರಿಯೆಗಳು ಮಾತ್ರ ಇವೆ. ಕತೆಯ ಸಂಘರ್ಷ ಇರುವುದೇ ಕಲಿ ಭಾಗದ ಕಥನದಲ್ಲಿ, ಇಲ್ಲಿ ನಾಯಕ ಗೋಣಿ ಬಸವ, ಅವನ ಕಡೆಯವರು: ಕನಕಮ್ಮ, ಪೂಜಾರಿಕಲ್ಲಪ್ಪ, ಪಿಕನಗೌಡ, ಮೇಟಿಬಣಕಾರ, ಬಾಲಬಸಪ್ಪ, ಕಂಠಿನಾಗಮ್ಮ, ಖಳನಾಯಕ ಶಿವನಯ್ಯ ಇವನ ಕಡೆಯವರು; ಕಾಳಿಕೊಂಡಯ್ಯ, ಗಾಣಿಗರು, ಸಿದ್ದರು, ಬೇಡ್ಕಿ (ಬೇಡರ ಸೈನ್ಯ) ದಂಡಿನ ಮಲಣ್ಣ ಈ ಕತೆ ನಡೆಯುವ ಸ್ಥಳಗಳು; ಕೂಲಹಳ್ಳಿ, ಕೊಟ್ಟೂರು, ಬಾಗಳಿ, ಶೃಂಗಾರತೋಟ, ಹರಪನಹಳ್ಳಿ, ಕುಪ್ಪಿನಕೇರಿ, ಮದಲಘಟ್ಟ, ಗಾಳಿಪೂಜೆ ಪಟ್ಟಣ, ಹಮ್ಮಿಗೆ, ಮತ್ತು ಗುಮ್ಮಗೋಳ.

ಎರಡು ಮದುವೆ, ಕಲ್ಯಾಣದಲ್ಲಿ ಸಕ್ಕರಿ ಊಟ, ದೆವ್ವದ ಊಟ, ಮಾಟ ಮಂತ್ರ ಇತ್ಯಾದಿ ವರ್ಣನೆಗಳ ಭಾಗವು ಇದೆ. ಏಳು ಪವಾಡಗಳಿವೆ. ಪವಾಡಗಳಿಗೆ ಬಳಕೆಯಾಗುವ ವರ್ಣನೆಗಳು, ಆಚರಣೆಗಳಿಗೆ ಬಳಕೆಯಾಗುವ ವರ್ಣನೆಗಳು ಪ್ರಯಾಣಕ್ಕೆ ಬಳಕೆಯಾಗಿರುವ ವರ್ಣನೆಗಳು ಬೇರೆ ಬೇರೆ ಪಲ್ಲವಿಗಳಲ್ಲಿ ಇದೆ. ಒಂದಕ್ಕೆ ಬಳಸಿದ ಪಲ್ಲವಿಯನ್ನು ಮತ್ತೊಂದಕ್ಕೆ ಬಳಸಿಲ್ಲ. ಯಾವ ವರ್ಣನೆಗೆ ಯಾವ ಪಲ್ಲವಿ ಬಳಸಬೇಕೆಂಬುವುದರಲ್ಲೂ ಒಂದು ತರ್ಕ ಇದೆ. ಇಷ್ಟು ವಿಧಾನದಲ್ಲಿ ಕತೆಯ ಸೃಷ್ಟಿಯಿದೆ.

ಒಟ್ಟು ಕಾವ್ಯದಲ್ಲಿ ೩೪ ಕಥಾ ಪ್ರಸಂಗಗಳಿವೆ. ಯಾವ ವಿವರಗಳು ತಪ್ಪಿಹೋಗದ ಹಾಗೆ ಹತ್ತು ಸಂಧಿಗಳಾಗಿ ವಿಭಾಗ ಮಾಡಿಕೊಂಡು ಕತೆಯ ಒಳಗೆ ಇರುವ ಕಾವ್ಯಾತ್ಮಕ ಸಾಲುಗಳನ್ನು ತೆಗೆದು ಶೀರ್ಷಿಕೆಗಳಾಗಿ ಕೊಟ್ಟಿದ್ದೇನೆ. ಪ್ರತಿಯೊಂದು ಸಂಧಿಯ ಪ್ರಾರಂಭದಲ್ಲಿ ಆ ಸಂಧಿಯ ಕಾವ್ಯ ಧೋರಣೆ ಏನು ಎಂಬುದನ್ನು ಟಿಪ್ಪಣಿಗಳ ರೂಪದಲ್ಲಿ ಕೊಟ್ಟಿದ್ದೇನೆ.