( ಕತೆಯನ್ನು ಹಾಡುತ್ತಿರು ಬಾಲ ಬಸಪ್ಪಗಳು ಗೋಣಿ ಬಸಪ್ಪನ ಪರಂಪರೆಯಲ್ಲಿ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿಕೊಳ್ಳಲು, ಹಾಗು ಕೂಲಹಳ್ಳಿ ಮಠದಲ್ಲಿ ಸಾಂಸ್ಕೃತಿಕ ಹಕ್ಕುಗಳನ್ನು ಪಡೆಯಲು ಪ್ರಸಂಗ ಸೃಷ್ಟಿಸುತ್ತಾರೆ. ಶಿವನಯ್ಯ ಹೂಡಿದ ಮಾಟದ ತಂತ್ರಕ್ಕೆ ಗೋಣಿ ಬಸವ ಸತ್ತು ಬಿಡುತ್ತಾನೆ, ಆಗ ಹರಪನಳ್ಳಿಮಠದ ಸಂನ್ಯಾಸಿ ತೋಟದಿಂದ ಬಾಲಬಸವ ಅವನ ಜೀವ ಪಡೆಯಲು ಕೂಲಹಳ್ಳಿ ಮಠಕ್ಕೆ ಬರುತ್ತಾನೆ. ಬಹಳ ಸೂಕ್ಷ್ಮವಾದ ಒಂದು ರೂಪಾಂತರದಲ್ಲಿ ನಡೆಯುತ್ತದೆ. ಬಾಲ ಬಸಪ್ಪ ತನ್ನ ತಲೆ ಚಚ್ಚಿಕೊಂಡು ಹಾವಾಗುವುದು. ಮಾದಿಗ ಕುಲದ ಅಸ್ಪೃಶ್ಯನಾದ ಬಾಲ ಬಸವನಿಗೆ ಲಿಂಗಾಯತ ಮಠದಲ್ಲಿ ಮನುಷ್ಯನಾಗಿ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವನು ಹಾವಿನ ರೂಪತಾಳಿ ಮಠದ ಒಂದು ತೊಲೆಯಲ್ಲಿ ಇರುವ ಹಕ್ಕು ಪಡೆಯುತ್ತಾನೆ. ಕತೆಯ ಕೊನೆಯ ಭಾಗದಲ್ಲಿ ಪಾತ್ರ ಮತ್ತೆ ಎಂಟರಿಯಾಗಿ ತನ್ನ ಅಸ್ಪೃಶ್ಯತೆಯ ಅವಮಾನವನ್ನು ಕಥಾನಾಯಕನಿಗೆ ತಿರುಗಿಸಿ ಬಿಡುತ್ತಾನೆ. ಗೋಣಿ ಬಸವ ತನ್ನ ತಾಯಿಯನ್ನು ನೋಡುವ ತವಕದಲ್ಲಿ ಇನ್ನೇನು ಮಠ ನುಗ್ಗಬೇಕು ಆಗ ಹಾವಾಗಿದ್ದ ಬಸವ ಕಾಲಿಗೆ ಸುತ್ತಿಕೊಂಡು, ಒಂದು ಸಾರಿ ಮಠ ಬಿಟ್ಟೋದ ನಿನಗೆ ಮತ್ತೆ ಮಠಕ್ಕೆ ನುಗ್ಗುವ ಹಕ್ಕಿಲ್ಲ ಎಂದು ತಿರುಗೇಟು ಕೊಡುತ್ತಾನೆ.)

ಬಾಲಬಸವ ಮಲಿಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಬಸವ ನಿದ್ರೆ ಮಾಡುತಾನೇ | ಸೋಕೀರ ಮೂವ ತಾಜೀಜಿ |

ಹರಪನಹಳ್ಳಿ ಸನ್ಯಾಸಿ ತೋಟ ನೆಲಮಾಳಿಗೆ ಮಠದಾಗೆ ಬಲಬಸಪ್ಪ ನಿದ್ದಿ ಮಾಡ್ತಾನ್ರೀ. ಆ ನಿದ್ದಿ ಮಾಡ ಸಮಯದೊಳಗೆ ಗೋಣಿಬಸಪ್ಪ ಸತ್ತದ್ದು ಬಾಲಬಸಪ್ಪಗೆ ಸ್ವಪ್ನದಾಗ ಕಂಡಿತ್ರೀ. ಬಾಲಬಸವ ಮ್ಯಾಲಕೆದ್ದಾನು.“ಹಾ ಇದೇನಪ ಎಂದು ಕಾಣದ್ದು ಬೀಳದ್ದು ಸ್ವಪ್ನ ಇವತ್ತೇನು ಕಂಡ್ನೆಲ್ಲಾ’’. ಅಂದ್ಕಂಡ. ಅಂದ್ರೆ ಹೆ ಸ್ರಿಗೆ ಬಾಲಬಸವ, ನೆರಳಿಗೆ ಗೋಣಿ ಬಸವೇಶ್ವರ, ಬಸವನ್ನ ಬಿಟ್ಟು ಬಾಲ ಇಲ್ಲ, ಬಾಲ ಬಿಟ್ಟು ಬಸವ ಇಲ್ಲ. ಗುರುಗಳೇ ಅಂದು ಹೊರಟ.

ಬರತೀನೋ ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ನೆಲಮಾಳಿಗಿ ಬಿಡುತಾನಯ್ಯೋ | ಸೋಕೀರ ಮೂವ ತಾಜೀಜಿ |
ಓಡಿ ಓಡಿ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಹರಪ್ನಳ್ಳಿಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಚಿಕ್ಕಳ್ಳಿಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |

ಚಿಕ್ಕಳ್ಳಿಗೆ ಬಂದಾನು. ಚಿಕ್ಕಳ್ಳಿ ಮೇಟಿ ಬಣಕಾರ

[1] ಪಡಸಾಲಿ ಮ್ಯಾಲ ಕುತ್ಕಂಡು ಕಣ್ಣೀರಾಕ್ತಾನು. ‘ಗುರು ಸತ್ತನಪಾ, ಮಠ ಮುಣುಗಿತಪ್ಪಾ, ಕೂಲಹಳ್ಳಿ ಮಠಕೆ ಎಂಗ ಹೋಗೋನಪಾ,’ ಅಂತ ಕಣ್ಣೀರಾಕ್ತಾ ಕುಂತಾಗ ಬಾಲಬಸಪ್ಪ ಮುಂದೆ ಬಂದಾನು. ‘ಆ ಬಣಕಾರ್ರೇ ಯಾಕ್ರೀ ದುಃಖ ಮಾಡ್ತೀರಿ’. ‘ಏನು ಮಾಡ್ಬೇಕಪ್ಪಾ ಬಾಲಬಸವ, ಗೋಣಿ ಬಸವೇಶ್ವರ ಐಕ್ಯವಾದ್ನಪಾ ಸತ್ತೋದ. ಮಠ ಮುಣುಗಿತು’ ಅಂದಾಗ ಬಾಲಬಸವ ಹೇಳ್ತಾನೆ. ‘ಬಣಕಾರ್ರೇ ತಡಮಾಡಬೇಡ ಹೊಸ ಬಿಂದಿಗಿಯಾಗೆ ಹಾಲು ತಗೋ, ನನ್ನಿಂದೆ ಬಾ ನಿನ್ನ ಗುರುವಿನ ಪ್ರಾಣ.’

ನಾನು ಪಡೆದೆ ಕೊಡ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವಿನ ಪ್ರಾಣ ಪಡಿತೀನೀ | ಸೋಕೀರ ಮೂವ ತಾಜೀಜಿ |
ನೀನೆ ತಡ ಮಾಡಬ್ಯಾಡೋ | ಸೋಕೀರ ಮೂವ ತಾಜೀಜಿ |

“ಈಗ್ಲೆ ನಡ್ರೀ ತಡ ಮಾಡಬಾರ್ದು’’. ಆಗ ನೋಡ್ರಿ ಮೇಟಿಬಣಕಾರ ಹೊಸ ಬಿಂದಿಗಾಯಗ ಹಾಲು ತಗಂಡಾನು ಮುಂದು ಮುಂದು ಬಾಲಬಸವ ಹಿಂದೆ ಹಿಂದೆ ಬಣಕಾರ ಕೂಲಹಳ್ಳಿ ಕೆರೆಯಂಗಳದಾಕ ಬಂದಾರು. ಕೆರೆಯಂಗಳದಾಗೆ ತೋಪು ಇಲ್ಲದ ದುರುಗಮ್ಮನ ಗುಡಿ ಅಲ್ಲಿಗೆ ಬಂದಾರು. ಅಲ್ಲಿ ಹೇಳ್ತಾನ್ರೀ ಬಾಲಬಸವ ‘ಆ ಬಣಕಾರ್ರೇ ಈಗ ನಾನು ಮನುಷ್ಯನೋಗಿ ಸರ್ಪ ಆಕ್ತೀನಿ. ಹೆದರಬ್ಯಾಡ ನನ್ನ ಹೊಡದಾರು, ಬಡದಾರು ಆ ಮಜ್ಜನ ಬಾವಿಗೆ ತಗಂಡೋಗಿ ನನ್ನ ಬಿಡಪ್ಪಾ. ಗುರುವಿನ ಪ್ರಾಣ ಪಡದುಬಿಡ್ತೀನಿ‘. ಅಂಗಂದು ಬಾಲಬಸವ ಕೈತುಂಬ ಕಲ್ಲತಗಂಡಾನು. ತೆಲಿ ಮ್ಯಾಗ ಜಜ್ಜಿಕೊಂಡು ಬಿಟ್ಟ, ಚರ್ಮ ಸುಲುದು ಕೆಳಗ ಬಿತ್ತು.ಸರ್ಪ ಆದ. ಆಗ ಮುಂದೆ ಮುಂದೆ ಬಣಕಾರ ಹಿಂದೆ ಹಿಂದೆ ಸರ್ಪ, ಸರ್ಪನ್ನ ಕರಕಂಡು ಬಣಕಾರ.

ಬಾವಿಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಜಾಡು ಬಿಡ್ಸುತ್ತಾ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |

ಜಾಡು ಬಿಡಸ್ತಾ ಕಾಲ ದೆಸೆಗೆ ಬಂದು ಸರ್ಪಾಗಿ ಮೊಖ ಎತ್ತಿ ನೋಡ್ದ, ಸತ್ತ ಶವ ಬಾವಿ ಮೆಟ್ಲ ಮ್ಯಾಲೆ ಹಾಕ್ಯಾರು.

ಸರ್ಪ ಪಾದದ ಮ್ಯಾಲೆ | ಹೊರಳಿತೊ | ತಾನಿ ತಂದಿನಿ ನಾನೋ |
ಜಲುಮ ತಿರುಗಾಲಿಲ್ಲೋ | ತಾನಿ ತಂದಿನಿ ನಾನೋ |
ತೊಡಿಮ್ಯಾಲೆ ಹೊರಳಿತೋ | ತಾನಿ ತಂದಿನಿ ನಾನೋ |
ಜಲುಮ ತಿರುಗಾಲಿಲ್ಲೋ | ತಾನಿ ತಂದಿನಿ ನಾನೋ |
ಹೊಟ್ಟಮ್ಯಾಲೆ ಹೊರಳೀತೋ | ತಾನಿ ತಂದಿನಿ ನಾನೋ |
ಜಲುಮ ತಿರುಗಾಲಿಲ್ಲೋ | ತಾನಿ ತಂದಿನಿ ನಾನೋ |
ಎದಿಮ್ಯಾಲೆ ಹೊರಳತೋ | ತಾನಿ ತಂದಿನಿ ನಾನೋ |
ಜಲುಮ ತಿರುಗಾಲಿಲ್ಲೋ | ತಾನಿ ತಂದಿನಿ ನಾನೋ |
ಮುಖದ ಮ್ಯಾಲೆ ಹೊರಳೀತೋ | ತಾನಿ ತಂದಿನಿ ನಾನೋ |
ಜಲುಮೆ ತಿರುಗಾಲಿಲ್ಲೋ | ತಾನಿ ತಂದಿನಿ ನಾನೋ |
ಏನೇನು ಮಾಡಿದರೂ ಜಲುಮ ತಿರುಗಾಲಿಲ್ಲೋ | ತಾನಿ ತಂದನಿ ನಾನೋ |

ಸರ್ಪ ಶವದ ಪಾದದ ಬಳಿಗೆ ಬಂದು

ಕಣ್ಣೀಗ ನೀರಾ ತಂದಾನೇ ನೋಡೂ | ರಾಮ ತಾಜೀಜಿ |
ಓಡಿ ಗೋಳಾಡಿ ಬೋರಾ ಮಾಡ್ಯಾನೂ | ರಾಮ ತಾಜೀಜಿ |
ಯಂಗೆ ಪ್ರಾಣ ಪಡಿಯಾಲೀ ನಾನು | ರಾಮ ತಾಜೀಜಿ |
ಏನೇನೂ ಮಾಡಿದರೇ ತಿರುಗಾಲಿಲ್ಲೋ | ರಾಮ ತಾಜೀಜಿ |
ಜಲುಮೆ ತಾನೇ ತಿರುಗಾಲಿಲ್ಲೋ | ರಾಮ ತಾಜೀಜಿ |

ಸರ್ಪ ಕಣ್ಣೀರ್ ಅಕ್ಕತೈತೆ. ಸಾವಿರಾರು ಭಕ್ತರು ಹೊಯ್‌ಕೆಂತಾರೆ. ನೆರದ ಸೂಳೇರು ಚವುರ ಹೊಡಿತಾರೆ, ಅಳ್ತಾರೆ, ಏನು ಮಾಡಿದ್ರು ಜಲುಮ ತಿರುಗಲಿಲ್ಲ. ಆಗ ಸರ್ಪ, ದುಃಖ ಅಡಗಿಸಿ ಮುಖವೆತ್ತಿ ನೋಡಿ, ಎಡಗಾಲ ಹೆಬ್ಬೆಟ್ಟು ಕಚ್ಚಿ ಬಿಡ್ತುರಿ. ಎಡಗಾಲ ಹೆಬ್ಬೆಟ್ಟು ಕಚ್ಚಿ ಹಂಗೇ

ಉರಿಯ ಎಳೆಯತೈತೇ | ಸೋಕೀರ ಮೂವ ತಾಜೀಜಿ |
ಅಂಗೇ ಉರಿಯ ಎಳೆಯತೈತೇ | ಸೋಕೀರ ಮೂವ ತಾಜೀಜಿ |
ಸರ್ಪ ಹೊಟ್ಯಾಕ ಎಳೆಯತೈತೇ | ಸೋಕೀರ ಮೂವ ತಾಜೀಜಿ |
ಗುರುವೆ ನಿಚ್ಚಳಾಗುತಾನೇ | ಸೋಕೀರ ಮೂವ ತಾಜೀಜಿ |
ಗುರುವೆ ಕಣ್ಣಾ ತಗದಾನಯ್ಯೋ | ಸೋಕೀರ ಮೂವ ತಾಜೀಜಿ |
ಗೋಣಿಬಸವ ಬದುಕ್ಯಾನೆ ಸರ್ಪ ಬಿದ್ದು ಸತ್ತಾತೇ | ಸೋಕೀರ ಮೂವ ತಾಜೀಜಿ |

ಸರ್ಪ ಸತ್ತೋತ್ರೀ. ಗೋಣಿ ಬಸವೇಶ್ವರ ಎದ್ದು ಕೂತ್ನಂತೆ. ಆಗ ಗೋಣಿ ಬಸವ ಎದ್ದುಕುಂತು ನೋಡ್ತಾನ್ರೀ ಸರ್ಪ ಸತ್ತು ಬಿದೈತೆ. ಆಗ ಗೋಣಿ ಬಸವೇಶ್ವರ “ಮಗು ಮಗು, ನನ್ನ ಪ್ರಾಣಕಕ ತಂದೆಗಳು ಆಗಲಿಲ್ಲ, ಹಡದ ತಾಯಿ ಆಗಲಿಲ್ಲ. ಹೆಂಡ್ತಿ ಆಗಲಿಲ್ಲ. ನೆರಗಿರಸ್ತಯ್ಯ[2] ನನ್ನ ಪ್ರಾಣ ಪಡ್ಕಂಡೆ, ನಿನ್ನ ಪ್ರಾಣ ಕಳಕಂಡೆ’’

ಗೋಣಿಬಸವೇಶ್ವರ ಆಗ ದುಃಖದಿಂದ

ಕಣ್ಣಿಗೆ ನೀರಾ ತಂದಾನೇ ನೋಡೂ | ಐರಾಮ ತಾಜೀಜಿ |
ಗೋಳಿ ಹಾರಾಡಿ ಮಾಡ್ಯಾನೇ ನೋಡೂ | ಐರಾಮ ತಾಜೀಜಿ |
ಎಂಗೆ ಪ್ರಾಣ ಪಡಿಯಾಲೀ ನಾನೂ | ಐರಾಮ ತಾಜೀಜಿ |

ಗೋಣಿ ಬಸವೇಶ್ವರ ಕಣ್ಣೀರಾಕಿ ‘ಕಲ್ಲಪ್ಪ ಆ ಬೆತ್ತ ಕೊಡಪ್ಪ’ ಕಲ್ಲಪ್ಪ ಓಡಿಬಂದು ಬೆತ್ತ ಕೊಟ್ಟಾನು. ಗೋಣಿ ಬಸವೇಶ್ವರ ಸರ್ಪ ತಗಂಡು ತೊಡಿಮ್ಯಾಲೆ ಇಟ್ಗಂಡ. ಬೆತ್ತ ಹಿಡ್ಕಂಡು ತೆಲಿಮ್ಯಾಗಲಿಂದ ಬಾಲದ ಕಡಿಗೆ ಮೂರೇಟು ಬೆತ್ತದಿಂದ ಎಳೆದ.

ಸರ್ಪ ಕಣ್ಣ ತಗದೈತಯ್ಯೋ | ಸೋಕೀರ ಮೂವ ತಾಜೀತಿ |
ಗುರುವಿನ ಮುಕ ನೋಡುಥತೈತೇ | ಸೋಕೀರ ಮೂ ತಾಜೀಜಿ |

ಗುರುವಿನ ಮುಖ ನೋಡಿ ಉರಿ ತಾಳಲಾರದ ಗೋಣಿ ಬಸವಪ್ಪನ ತೊಡಿ ಬಿಟ್ಟು ಬಾವ್ಯಾಕ ಹೋತು. ಬಾವಿ ನೀರಾಗ ಮೂರೇಟು ಮುಣುಗಿ ಮ್ಯಾಕ ಬಂದು, ಆ ವಿಷಯ ಉರಿಯನ್ನು ಬಾವ್ಯಾಕ ಕಕ್ಕಿ ಬಿಡ್ತು. ಕಕ್ಕಿದ ಮ್ಯಾಗ ಸರ್ಪ ನಿಚ್ಚಳ್ತಂತ್ರೀ. ಆ ಉರಿ ಕಕ್ಕಿದ್ದಕ್ಕೆ ಆ ಬಾವ್ಯಾಗ ನೀರು ಹಚ್ಚಾಕ[3] ಆತಂತ್ರೀ. ವಡವಡಕಾತಂತ್ರೀ. ಅವಗ ಹಚ್ಚಗಾದ ನೀರು, ವಡವಡಕಾದ ನೀರು ಇನ್ನವರೆಗೆ

ನೀರು ಹಚ್ಚಗ ಹರದಾವಯ್ಯೋ | ಸೋಕೀರ ಮೂವ ತಾಜೀಜಿ |
ವಡುವಡಕ[4] ಅದಾವಯ್ಯೋ | ಸೋಕೀರ ಮೂವ ತಾಜೀಜಿ |

ಆಗ ಗೋಣಿಬಸವೇಶ್ವರನ ಹತ್ರಕ ಬಂದು, ಆತನ ಪಾದ್ಕ ಬಿತ್ತಂತ್ರೀ ಸರ್ಪ | ಆಗ ಗೋಣಿ ಬಸವೇಶ್ವರ ಹೇಳ್ದೆ. “ಮಗು ಮಗು ಹೆಸ್ರುಗೆ ಬಾಲಬಸವ ನೆರವಿಗೆ ಗೋಣಿ ಬಸವೇಶ್ವರ. ಬಸವನ್ನ ಬಿಟ್ಟು ಬಾಲ ಇಲ್ಲ, ಬಾಲ ಬಿಟ್ಟು ಬಸವ ಇಲ್ಲ, ಮಗು, ನನ್ನ ಪ್ರಾಣ ಪಡದೆಪ್ಪ, ನೀನು ಏನು ಕೇಳ್ತಿ ಕೇಳಪ್ಪಬ, ನೀನು ಕೇಳಿದ್ದು ಅಂದಂತ್ರೀ. ಕೊಟ್ಟಬುಡ್ತೀನಿ’’ ಆಗ ಬಾಲ ಬಸಪ್ಪ ಕೇಳಿದ್ದಂತೆ. “ಏನೂ ಬ್ಯಾಡ್ರೀ, ನಿಮ್ಮ ಪ್ರಾಣ ಪಡದಿದ್ದಕ್ಕಾಗಿ ನನ್ನ ಕುಟುಂಬ ಸಹಿತವಾಗಿ ನಿನ್ನ ಮಠಕ್ಕೆ ಬಂದ್ರೆ ನಾನು ತಿಂಗಳ ಇರ‍್ಲಿ ವರ್ಷ ಇರ‍್ಲಿ, ಒಂದಿನ ಇರ‍್ಲಿ, ಬರೋವರಿಗೂ ನನಿಗೆ ಅನ್ನ ಬುತ್ತಿ ಅಳೀಬೇಕು ಮತ್ತು ಮೂರು ವರ್ಷಕ್ಕೆ ಒಂದ್ಸಲ ಒಂದು ಬಾಲದಾನ[5] ಕೊಡ್ಬೇಕು, ನಿನ್ನ ಪರುಸೇಲಿ, ಜ್ಯಾತ್ರಾಗೆ ಬಂದಂತ ಹಾಲು ಮಾಲನ್ಯಾಗ ನಾಕಾಣಿ ಭಾಗ, ಭಾಗ ಕೊಡ್ಬೇಕು. ಮತ್ತೆ ನೀನು ಉಣ್ಣಾಕ ಕುಂತಾಗ ನನ್ನ ಶಬ್ದ ನಿನ್ನ ಕಿವ್ಯಾಗ ಬಿದ್ರೆ ನೀನು ತುತ್ತು ಎತ್ತಬಾರ್ದು, ನನಗೆ ಮೊದ್ಲು ನೀಡಿ ಹಿಂದಗಡೆ ನೀನು ಊಟ ಮಾಡ್ಬೇಕು’’ ಅಂದ. ಗೋಣಿಬಸವ ಅದಕ್ಕೆ ‘ಊಂ’ ಅಂದ. ‘ಹರಪನಹಳ್ಳಿ ಸಂನ್ಯಾಸಿತೋಟ, ನೆಲಮಾಳಿಗೆ ಬಿಟ್ಟು ಬಂದೀನಿ, ಬಂದೋನು ತಿರುಗಿ ಹೋಗದಿಲ್ಲ ನಿಮ್ಮ ತಂದಿ ಮದ್ದಾನಸ್ವಾಮಿ ಮಠದಾಗ ಎಡಗಡಿಗೆ ಒಂದು ತ್ವಲಿಯಾಗ ಇರ‍್ತೀನಿ. ನನ್ನ ನರಮಾನವರು ನೋಡಬಾರ್ದು ಅಲ್ಲಿ ಇಡಿಗ್ವಾಡಿ[6] ಕಟ್ಟಿಸಿಬಿಡು.’

ಇಲ್ಲೇ ನಾನೇ ಇರ್ತಿನಯ್ಯೋ | ಸೋಕೀರ ಮೂವ ತಾಜೀಜಿ |
ಬಾಲಬಸವ ಹೇಳುತಾರೇ | ಸೋಕೀರ ಮೂವ ತಾಜೀಜಿ |
ಗೋಣಿಬಸವ ಕೇಳುತಾನೇ | ಸೋಕೀರ ಮೂವ ತಾಜೀಜಿ |

“ಬಸವಾ ಅಂದ್ರ ಬಗಲಾಗ ಇರ‍್ತೀನಿ. ನೀನು ಎಲ್ಲಿಗ್ಯಾರ ಹೊಂಟ್ರೆ ನಾನು ಅಡ್ಡಬಂದ್ರೆ ಹಿಂದಕ್ಕ ತಿರಗಬೇಕು’’ “ಆಗ್ಲೆಪ, ಆಗೇ ಆಗ್ಲೆಪ ಮಗು, ನಿನ್ನಂತೆ ನೆಡಸ್ತೀನಪಾ, ವಾಕ್ಯಾಕ ತೆಪ್ಪೋದಿಲ್ಲಪ್ಪ’’ ಅಂದು ಅಲ್ಲೇ ಪ್ರಮಾಣಗಲು ನಡದ್ವು. ಗುರುವಿನ ಪ್ರಾಣ ಪಡ್ಕಂಡು ಬಾಲಬಸಪ್ಪ ಮುಂದೆ ಮುಂದೆ, ಹಿಂದೆ ಹಿಂದೆ ಗೋಣಿ ಬಸವೇಶ್ವರ ಸಾವಿರಾರು ಭಕ್ತರು, ಸಾವಿರಾರು ಸೂಳೇರು ಮಜ್ಜನ ಬಾವಿ ಬಿಟ್ಟು

ಮಠಕ್ಕೆ ತಾವೆ ಬರ್ತಾರಯೋಯ್ | ಸೋಕೀರ ಮೂವ ತಾಜೀಜಿ |
ತನ್ನ ಮಠಕ್ಕೆ ಬರ್ತಾರಯ್ಯೋ | ಸೋಕೀರ ಮೂವ ತಾಜೀಜಿ |

ಸರ್ಪ ಮದ್ದಾನಸ್ವಾಮಿ ಮಠದಾಕ ಹೋಗಿ, ಮಠದ ಎಡಗಡಿಗೆ ಒಂದು ತೊಲಿಂiiiಗ ಸೇರ‍್ಕಂಡ. ಆಗ ಗೋಣಿ ಬಸವೇಶ್ವರ, ಸಾವ್‌ರಾರು ಸೂಳೇರು, ಸಾವ್‌ರಾರು ಭಕ್ತರು ಮಠಕ್ಕೆ ಬಂದಾರು. ಶಿವನಯ್ಯ ಮಠ ನೋಡ್ತಾನು, ಬಿರಿ ಬಿರಿ ಕಣ್ಣ ಬಿಡ್ತಾನು, ಹಲ್ಲು ಕಡಿತಾನು,ಗೊಂಡನ ಮೀಸಿಮ್ಯಾಲೆ ಕೈ ಹಾಕ್ತಾನು. “ಇದೇನಯ್ಯ ಎದ್ದು ಬಂದ್ನಲ್ಲೋ’’ ಅಂದು ಕೆಕ್ಕರಿಸಿಕೊಂಡು ನೋಡ್ತಾನು. ಹೌಹಾರಿ ನೋಡ್ತಾನು ಗೋಣಿ ಬಸವೇಶ್ವರ ಶಿವನಪ್ಪನ ಬಳಿಗೆ ಬಂದು. ‘ಆ ಶಿವನಪ್ಪನವರೇ, ಊರು ಕಟ್ಟಿ ಒಕ್ಕಲು ನೆಡ್ಸು, ಅದು ಮಹಾಪುಣ್ಯ. ತೇರು ಕಟ್ಟಿ ಪರಿಸಿ ಮಾಡ್ಸು, ಅದು ಮಹಾಪುಣ್ಯ. ಕೆರೆಬಾವಿ ಕಟ್ಸು, ಅದು ಮಹಾಪುಣ್ಯ. ಬಡವರಿಗೆ ಬಗ್ಗರಿಗೆ ಕನ್ಯಾದಾನ ಕೊಟ್ಟು ಲಗ್ನಾ ಮಾಡ್ಸು, ಅದು ಮಹಾಪುಣ್ಯ’

ನನ್ನಂತೋನ ಪರದೇಶಿ ಮಾಡಿ ಸೋಕೀರ ಮೂವ ತಾಜೀಜಿ |
ಏನು ಪುಣ್ಯ ಪಡೆದೇ | ಸೋಕೀರ ಮೂವ ತಾಜೀಜಿ |
ಗೋಣಿ ಬಸವ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಶಿವನಯ್ಯ ಪಿಳಿ ಪಿಳಿ ಕಣ್ಣುಬಿಟ್ಟು ನೋಡ್ತಾನು ಹಲ್ಲು ಕಡದಾನು ಶಿವನಪ್ಪ

ಮಠಬಿಟ್ಟೇ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಹರಪ್ಪನಳ್ಳಿಗೆ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಗುರುವೆ ಗದ್ದಿಗೆ ಹತ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಗುರುಗದ್ದಿಗ ಹತ್ಯಾನು. ಶಿವನಯ್ಯ ಚಿಕ್ಕಳ್ಲಿ, ಯಡತ್ನಳ್ಳಿ, ಕರಿಕಲ್ಲಾಕ ಹೋದ. ಕರಿಕಲ್ಲಾಕ ಹೋದಾಗ ಗೋಣಿ ಬಸವೇಶ್ವರ ತನ್ನ ದೃಷ್ಟಿನ ಶಿವನಪ್ಪನ ಬಿಟ್ಟ. ಗೋಣಿ ಬಸಪ್ಪನ ಬರೀ ದೃಷ್ಟಿ ಬಡದಿದ್ಕೆ ಶಿವನಯ್ಯ ಕರಿ ಕಲ್ಲಾಗೆ ರಕ್ತದ ಕಾಲಮಡಿಯ[7] ಮುಡುದಾನಯ್ಯೋ ಆ ಸೋಕೀರಮೂವ ತಾಜೀಜಿ.

ಕಾಲಮಡಿಯ ಮುಡದಾನಯ್ಯೋ | ಸೋಕೀರ ಮೂವ ತಾಜೀಜಿ |
ರಕ್ತದ ಉಚ್ಚಿ ಒಯ್ದಾನಯ್ಯೋ | ಸೋಕೀರ ಮೂವ ತಾಜೀಜಿ |

ರಕ್ತದ ಉಚ್ಚಿ ಹೊಯ್ದು, ಮೂರ್ಚಿ ಹೋಗಿ ಬಿದ್ನಂತ್ರೀ ಕರಿಕಲ್ಲಾಗ, ಶಿವಯ್ಯ ಅಂಗ ಬಿದ್ದಾಗ ನಾಕು ಮಂದಿ ಗಾಣಿಗ್ರು, ದಂಡಿನವ್ರು, ಬೇಕಾದ ಭಂಟ್ರು ಹಿಂದೆ ಹೋಗಿದ್ರಲ್ಲ ಅವ್ರು ಸೇರಿ, ಗೋಣಿ ಬಸಪ್ಪನ ಸತ್ತಾಗ ಎಂಗ ಬಾವಿಗೆ ಓಯ್ದಿದ್ರೋ, ಅದ್ರಂತೆ ಶಿವನಪ್ಪನ್ನ ಒಂಟಿಬಡಿಗಿ ಕಟ್ಕೆಂಡು ಒಂಟಿಬಡಿಗಿ ಒತ್ಗಂಡೇ.

ಹರಪನಳ್ಳಿಗೆ ಒಯ್ಯತಾರೇ | ಸೋಕೀರ ಮೂವ ತಾಜೀಜಿ |
ಹರಪನಳ್ಳಿಗೆ ಒಯ್ಯತಾರೇ | ಸೋಕೀರ ಮೂವ ತಾಜೀಜಿ |

ಹರಪ್ನಳ್ಳಿಗೆ ಹೋಗಿ ಶಿವನಪ್ಪನ್ನ ಸಿಂಹಾಸನದ ಮ್ಯಾಲೆ ವಗದಾರು. ಆಗ ಗದ್ದಿಗಿ ಆಳ್ತಾ ಇರೋ ಗೋಣಿಬಸವ ಮರುಗ್ತಾನೆ. ಅಂದ್ರೆ “ವೈರಿ ಕಳ್ಕೆಂಡು ಬೈರೂಪ[8] ಮಾಡ್ಬರ್ದಯ್ಯ. ವೈರಿ ಇದಿರಿಗೆ ಮಾಡ್ಬೇಕು ಬೈರೂಪ ಅದು ಚೆಂದ. ಅಂದ್ರೆ ಬಸವಾಗಿ ಬಾಳೀನಿ. ಬಡವರಿಗೆ’’ ಬೆನ್ನ ಕೊಟ್ಟೀನಿ. ಬೈಯ್ಯರಿಗೆ ಬಾಯಿ ಕೊಟ್ಟೀನಿ. ಭಾಗಾಗಿ ವೈರಿ ಬಂದ್ರೆ ತಲೆ ಬಾಗಿ ಹೋಗೀನಿ. ವಿಷ ನೀಡಿದ್ರೆ ಹಾಲಂದು ಕುಡುದುಬಿಟ್ಟೀನಿ ಕರ್ಮ ಮಾಡಿದವರಿಗೆ ಧರ್ಮ ಮಾಡಿ ಅನ್ಯಾಯಕೆ ಮುಖ ತೊಳಿಬಾರ್ದಂದು’’ ತನ್ನ ದೃಷ್ಟೀನ ಹಿಂದಕ ತಗಂಡು ಗೋಣಿ ಬಸವೇಶ್ವರ. ಆಗ ಶಿವನಯ್ಯ ನಿಚ್ಚಳಾದ. ನಿಚ್ಚಳಾಗಿ ಸೊಕ್ಕಿನ ಶಿವನಯ್ಯ ಮತ್ತೇನ್ಮಾಡ್ತಾನ್ರೀ. ‘ಏ ಗಾಣಿಗ್ರಾ ಅವ್ನು ಗಾಡಿಕಾರ, ಮೋಡಿಕಾರ, ಸಿದ್ದರ ಕೂಡ ಆಡಿ ಸಿದ್ದವಿದ್ಯ ಕಲ್ತ ಬಿಟ್ಟಾನೆ. ಅವ್ನಿಗೆ ಅಂತ್ರ ಅತ್ತೋದಿಲ್ಲ. ಮಂತ್ರ ಅತೋದಿಲ್ಲ. ಮಂತ್ರ ಅತ್ತೊದಿಲ್ಲ. ಮಹಿಮದ ಪುರುಷ ಆದ್ರೆ ಅಂಗಾ ಇವ್ನು ಸಾಯದಿಲ್ಲಯ್ಯ’, ‘ಏನ್ಮಾಡಬೇಕ್ರಿ ಮತ್ತೆ’, ‘ಏನಿಲ್ಲ ಕೂಲಳ್ಳಿ ಮಠಕ್ಕೋಗಿ ಸುಳ್ಳು ಹೇಳ್ಬೇಕಪಾ’, ‘ಏನಂತಾ’ ‘ಶಿವನಪ್ಪಾ ಉಗ್ಗಿ ಮಾಡ್ಸ್ಯಾನೆ, ಅಯ್ಯಗಳಿಗೆ ನೀಡ್ಸಾನೆ. ನಿನ್ನ ಭಿನ್ನಕ್ಕೆ ಕರಿಯಾಕೆ ಕಳ್ಸಾನೆ, ಬರ್ರಿ ಸ್ವಾಮಿ ಅಂದು ಸುಳ್ಳು ಹೇಳಿ’ ಗೋಣಿಬಸವನ್ನ.

ಹಿಡಕಂಡೆ ಬರಬೇಕಯ್ಯೋ | ಸೋಕೀರ ಮೂವ ತಾಜೀಜಿ |
ಅವ್ನಿಗೆ ನಾನೇ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ |
ಅವ್ನ ಗದ್ದಿಗೆ ಹತ್ತುತೀನೇ | ಸೋಕೀರ ಮೂವ ತಾಜೀಜಿ |
ಶಿವನಪ್ಪ ಹೇಳತಾನೇ | ಸೋಕೀರ ಮೂವ ತಾಜೀಜಿ |

‘ಆ ಹೋಗ್ರಯ್ಯ ಕರ‍್ಕಂಡು ಬಾ ಹೋಗ್ರಿ ಸುಳ್ಳು ಹೇಳಿ’ ಅಂದಾಗ ನಾಕು ಮಂದಿ ಗಾಣಿಗ್ರು ಹರಪ್ನಳ್ಳಾಗ ಕೇಳ್ಕೆಂಡು ಕರಿಯಾಕ ಹೊಂಡುತಾರೆ. ಅವ್ರು ಮಾತಾಡೋದು ಅವ್ರು ಕರೆಯಾಕ ಬರೋದು, ಎಲ್ಲ ಗೋಣಿ ಬಸಪ್ಪಗ ಇಲ್ಲಿ ಅರಿವಿಕಿ ಆಕೇತಿ. ಗೊತ್ತಾಗ್ತದೆ. ‘ಅಂದ್ರೆ ಅವ್ರಿಗಿಂತ ಮೊದ್ಲೆ ಹೋಗ್ಬೇಕಪ. ನಾನು ಅವ್ರು ಕರಿಯತನ್ಕ ಯಾಕೀರಬೇಕಿಲ್ಲ’, ಅಂದು ‘ಅಮ್ಮ ಹಡದತಾಯಿ ಕನಕಮ್ಮ, ಕಲ್ಲಪ್ಪ, ವಡ್ಡೆಟ್ಟವ್ವ ಇಲ್ಲಿ ಬರ್ರೆಪಾ’ ‘ಮತ್ತೇನಪಾ‘, ‘ಏನಿಲ್ಲ ಕನಕಮ್ಮನವರೇ ಹರಪ್ನಳ್ಳಿಗೆ ಹೋಗಿ ಬಾಳ ದಿವ್ಸ ಅಗೈತೆ. ಆದ್ರೂ ಹರಪ್ನಳ್ಳಿಗೆ ಹೋಗಿ ಗಾಣಿಗ್ರು ಓಣಿ ಯಾಗ.’

ಭಿಕ್ಷೆ ಮಾಡಿ ಬರ್ತಿನವ್ವೋ | ಸೋಕೀರ ಮೂವ ತಾಜೀಜಿ |
ಹರಪನಳ್ಳಿಗೆ ಹೋಗುತೀನೇ | ಸೋಕೀರ ಮೂವ ತಾಜೀಜಿ |

ಅಂಗಂದ ತಕ್ಷಣಕ್ಕೆ ತಾತಿ ಕೈ ಹಿಡ್ಕಂಡಾಳೆ, ಹೆಂಡ್ತಿ ಪಾದ ಹಿಡ್ಕಂಡಾಳೆ, ಕಲ್ಲಪ್ಪ ಹಸ್ತ ಹಿಡ್ಕಂಡಾನೆ, ಮಗು ಬಸವಣ್ಣಾ

ಹರಪನಳ್ಳಿಗೆ ಹೋಗಬ್ಯಾಡೋ | ಸೋಕೀರ ಮೂವ ತಾಜೀಜಿ |
ನೀನು ತಿರುಗಿ ಬರೋದಿಲ್ಲೋ | ಸೋಕೀರ ಮೂವ ತಾಜೀಜಿ |

ಗೋಣಿ ಬಸವೇಶ್ವರ ಹರಪನಳ್ಳಿಗೆ ಹೋಗಿದ್ದೇ ಆದ್ರೆ ಹರಪ್ನಳ್ಳಿ ಹನ್ನೆರಡು ಸಾವಿರ ಬೇಡ್ಕಿ[9] ಐತೆಪಾ. ಸೊಕ್ಕಿನ ಬೇಡ್ರು, ಠಕ್ಕ ಬೇಡ್ರು, ನಿನ್ನ ಕಂಡ ಕೂಡ್ಲೆ.

ಚಂಡ[10] ಮುರ್ದೆ ಬಿಡ್ತಾರಯ್ಯೋ | ಸೋಕೀರ ಮೂವ ತಾಜೀಜಿ |
ಹೋಗ ಬ್ಯಾಡೋ ನನ್ನ ಮಗ್ನೇ | ಸೋಕೀರ ಮೂವ ತಾಜೀಜಿ |
ಮಗ್ನೆ ಪಾದ್ಕ ಬೀಳುತಾಳೇ ಸೋಕೀರ ಮೂವ ತಾಜೀಜಿ |
ಬಿದ್ದೆ ಬಿದ್ದೆ ಬೇಡುತಾಳೇ | ಸೋಕೀರ ಮೂವ ತಾಜೀಜಿ |

“ಹಡೆದತಾಯಿ ಕನಕಮ್ಮ ಎಂಥ ಮಾತು ಹೇಳ್ತೀಯಮ್ಮ ನೆಪ್ಪಿನ ಗೋಣಿಬಸವ ಗಟ್ಟಿಗೆ ನಿಂತೀನಮ್ಮ ಮುಂದ ಕೆಟ್ಟಕಾಲ ಹಿಂದ್ಕ ಕೆಡವರ ಗಂಡ ಅಲ್ಲೇನೇ’’

ಮಠ ನಾನೇ ಕಟ್ಟಿಸ್ತೀನೀ | ಸೋಕೀರ ಮೂವ ತಾಜೀಜಿ |
ಹರಪನಳ್ಳಿಗೆ ಹೋಗತೀನೇ | ಸೋಕೀರ ಮೂವ ತಾಜೀಜಿ |
ಹನ್ನೆರಡು ಸಾವಿರ ಬೇಡ್ಕೀನ | ಸೋಕೀರ ಮೂವ ತಾಜೀಜಿ |
ಹಾಳು ಮಾಡಿ ಬರ್ತೀನವ್ವೋ | ಸೋಕೀರ ಮೂವ ತಾಜೀಜಿ |

“ಹೋಗ್ತಿನಮ್ಮ, ಮಗು ಕಲ್ಲಪ್ಪ, ವಡ್ಡೆಟ್ಟವ್ವ ಹೋಗಿಬರ‍್ತೀನಿ’’ ಆಗ ತಾಯಿ ಅಂತಾಳೆ ಕನಕಮ್ಮ “ಮಗು ಮಗು ಎಷ್ಟು ನಂಬಿಗಿ ಇಲ್ಲಪ್ಪ, ನೀನು ಏನು ಹೇಳಿದ್ರು ನಾನು ಕೇಳೋದಿಲ್ಲ. ಹೆದ್ರು ತಿರುಗಿ ಬರೋದಿಲ್ಲ. ನಾನು ಮುದುಕಿ, ಮುಪ್ಪಿನ ಕಾಲಪಾ ನನ್ನ ಕೈಲಿ ಆಗೋದಿಲ್ಲ, ಅದ್ಕ ನಿನ್ನ ಹೆಂಡ್ತಿನಾ’’

ನಿನ್ನ ಹಿಂದೆ ಕರಕೊಂಡು ಹೋಗೋ | ಸೋಕೀರ ಮೂವ ತಾಜೀಜಿ |
ನಿನಗೆ ಉಕ್ಕಿನ ಕಾವಲೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |

‘ನಿನ್ನ ಹೆಣ್ತಿ ಕರ‍್ಕಂಡೋಗಪಾ’ ಅಂದಾಗ ಗೋಣಿ ಬಸವ ಹೆಂಡ್ತಿಗೆ ಹೇಳ್ತಾನ್ರೀ. ‘ಮಡದಿ ವಡ್ಡೆಟ್ಟಮ್ಮ ನನ್ನ ಮಾತು ಕೇಳು ನೀನು ಏನಿಲ್ಲ ಮುಂಗೈಗೈ ಜೋಳಿಗಿ ಹಾಕು, ಕೈಯ್ಯಾಗ ಒಂದು ಬೆತ್ತ ಹಿಡ್ಕ, ಹಣಿ ಮೇಲೆ ವಿಭೂತಿ ಬಡ್ಕ, ಈ ಕೂಲಳ್ಳಿ ಬಾಗಲಾಗೆ ಕಂತಿಭಿಕ್ಷೆ ಮಾಡ್ಕೆಂಡು ಬದ್ಕು ಹನ್ನೆರಡು ವರ್ಷ.’

ಗಂಡನ್ನ ನಂಬಾಬೇಡೇ | ಸೋಕೀರ ಮೂವ ತಾಜೀಜಿ |
ಹೋಗತೀನೆ ನನ್ನ ಮಡದೀ | ಸೋಕೀರ ಮೂವ ತಾಜೀಜಿ |
ಹರಪನಳ್ಳಿಗೆ ಹೋಗತೀನೆ | ಸೋಕೀರ ಮೂವ ತಾಜೀಜಿ |

ಹೋಗ್ತಿನಿ ಅಂದಾಗ ನೋಡ್ರಿ ಕನಕವ್ವ, ವಡ್ಡೆಟ್ಟವ್ವ, ಕಲ್ಲಪ್ಪ ಕಣ್ಣೀರಾಕ್ತಾರ, ದುಃಖ ಮಾಡ್ತಾರು. ಹಠಿ ಬಿದ್ದು ಗೋಣಿಬಸವ ಹೊಂಟ. ಆಗ ಶಿವನಯ್ಯ ರಕ್ತದ ಕಾಲಮಡಿ ಮಾಡಿದ್ನಲ್ಲೀ ಅಲ್ಲಿಗೆ ಗೋಣಿಬಸವೇಶ್ವರ ಹೋದ. ನಾಕು ಮಂದಿ ಗಾಣಿಗ್ರು ಅಲ್ಲಿ ಇದಿರಿಗೆ ಬಂದ್ರು “ಗುರುಗಳೇ ಗುರುಗಳೇ ನಮಸ್ಕಾರ ಬುದ್ಧಿ’’ ಅಂದ್ರು. “ಏನ್‌ರಯ್ಯ ಯಾಕೋ ಉದಯಕ್ಕ ಬಂದ್ರಿ. ರಾತ್ರಿ ಸ್ವಪ್ನ ಬಿದ್ದಿತಪ ನನಿಗೆ’’, ‘ಏನಂತ ಅಂತಾ ಬುದ್ದಿ’, ‘ಏನಿಲ್ಲ ಶಿವನಯ್ಯ ಹೋಳಿಗಿ ಉಗ್ಗಿ ಮಾಡ್ದೆಂಗಿತ್ತು. ಐಯ್ಯಗಳಿಗೆ ನೀಡಿಸ್ದಂಗಿ ನನ್ನ ಭಿನ್ನಕ್ಕೆ ಕರೆಕಳ್ಸಿದಾಗಿತ್ತಯ್ಯ ಸಪ್ನ ಬಿದ್ದಿತ್ತು. ಆಸಿ ಕೆಟ್ಟದ್ದು ತಂಗಳು ಉಣ್ಣದಂಗೆ ಬಂದೆ, ಭಿಕ್ಷದ ಊಟ.’

ನನಿಗೋಟು ನೀಡ್ಯಾನೇನೋ |ಸೋಕೀರ ಮೂವ ತಾಜೀಜಿ |
ಗಾಣಿಗ್ರೆಗೆ ಹೇಳತಾನೇ | ಸೋಕೀರ ಮೂವ ತಾಜೀಜಿ |

‘ಅಯ್ಯೋ ಬುದ್ದೀ ಅದ್ಕೆ ಬರ್ರೀ, ಕರಿಯಾಕ ಕಳ್ಸ್ಯಾರೆ. ಶಿವನಪ್ಪನ ಕಳ್ಸ್ಯಾನೆ ಕಂಡಬರೀ ಅಂ. ಬರೀ ಜಗ್ಗಿ ಹೊಡಿವಂತ್ರೀ ಉಗ್ಗೀನ.’ ‘ಅಂಗಾದ್ರೆ ನಡ್ರೆಯ್ಯ ಹೋಗಾನು.’ ಹರಪ್ನಳ್ಳಿಗೆ ಹೋಗ್ಯಾರು. ‘ಆ ಗಾಣಿಗರಾ ನಾನು ಮ್ಯಾಗಲ ಪ್ಯಾಟೆಗಳಿಂದ ಬರ‍್ತೀನಿ. ನಿಮ್ಮ ರಾಜಗ ಹೇಳು ಹೋಗ್ರಯ್ಯ ಬಂದಾ ಅಂತ.’ ನಾಕು ಮಂದಿ ಗಾಣಿಗ್ರು ಸಿಂಹಾಸನಕ್ಕೆ ಬಂದಾರು. ಗೋಣಿ ಬಸವೇಶ್ವರ ಮ್ಯಾಗಲ ಪ್ಯಾಟ್ಯಾಗ ಭಿಕ್ಷಾ ಮಾಡ್ತಾನ್ರೀ.

ಹಗ್ಗಿಲ್ಲದ ಕಟ್ಟಾ ಕಟ್ಟಿಸಿಕೊಂಡ
ಕೋಲಿಲ್ಲದೆ ಕೂಲಿ ಕೊಲಿಸಿಕೊಂಡ
ಆಡುಬಾರದು ಜೂಜಾಡಿದ
ಕೂಡ ಬಾರದ ಲಗಡಿ ಹೂಡಿದ

ಭಿಕ್ಷಾ ಮಾಡ್ತಾ ಗಾಣಿಗ್ರು ಕೇರಿಗುಂಟ ಸೀದಾ ಸಿಂಹಾಸನಕ್ಕ ಬಂದು ಮುಂದೆ ನಿಂತಾನು. ಶಿವನಪ್ಪ ಸಿಂಹಾಸನದ ಮ್ಯಾಲೆ ಕುಂತಾನು. ಸೊಕ್ಕಿನ ಶಿವನಯ್ಯ ಕೇಳ್ತಾನು ‘ಎಲೈ ಬಸವಾ ನಿಮ್ಮಪ್ಪ ಯಾರು ? ನಿಮ್ಮವ್ವ ಯಾರಲೇ?’ ‘ಆ ಶಿವನಪ್ಪನವರೇ ನಮ್ಮಪ್ಪ ಮದ್ದಾನಸ್ವಾಮಿಗಳು ನನ್ನ ತಾಯಿ ಕನಕಮ್ಮ ‘ಹೌಲ್ಲೇ ನಿಮ್ಮವ್ವ ನನಗಿ ಅಕ್ಕ’’

ನಾನೇ ಕಣೋ ಸ್ವಾದಾರ ಮಾವಾ | ಸೋಕೀರ ಮೂವ ತಾಜೀಜಿ |
ನಿಮ್ಮ ಮಾವ ಇದ್ದೇನಯ್ಯೋ | ಸೋಕೀರ ಮೂವ ತಾಜೀಜಿ |

ರಾಜಾಧಿರಾಜ, ಮಾವ ಆದ್ರೆ ನೀನಾದೆ, ರಾಜ ಆಗಿರ‍್ಬೌದಯ್ಯ ನನ್ನ ಮನಿ ಒಳಗ

ಸಂಬಳ ನೀನೇ ಇರ್ತಿಯೆನೋ |ಸೋಕೀರ ಮೂವ ತಾಜೀಜಿ |
ಮುತ್ತಿನ ಉಡುಗರಿ ಮಾಡುತೀನೇ | ಸೋಕೀರ ಮೂವ ತಾಜೀಜಿ |

ಗೋಣಿಬಸವೇಶ್ವರ ಕಾಲು ತುಳಿದು ನ್ಯಾಯ ತಗದ ಶಿವನಯ್ಯನ. ಬೆನ್ನ ಹಿಂದೆ ಇತ್ರಿ ಹನ್ನೆರಡು ಸಾವಿರ ಬೇಡ್ಕಿ. ಶಿವನಪ್ಪ ಹೇಳ್ತಾನು. ‘ಆ ದಂಡಿನ ಮಲ್ಲಾಣಾರ‍್ಯ ಇವನ್ದೇನು ನೋಡ್ಕಳ್ರೀ’ ಅಂದ. ಗೋಣಿಬಸಪ್ಪನ

ಮ್ಯಾಲಕ್ಕೆ ತೂರುತಾರೇ | ಸೋಕೀರ ಮೂವ ತಾಜೀಜಿ |
ಮ್ಯಾಲಕ್ಕ ತೂರಿದಾಗ, ಮ್ಯಾಲಕ್ಕ ಹೋಗಿ ಕೆಳಕ್ಕ ಬಿದ್ದಾಗ
ಭರ್ಚಿಳ ಇರಿಯುತಾರೆ | ಸೋಕೀರ ಮೂವ ತಾಜೀಜಿ |

ಹಿಂಗಾದ್ರೆ ಇವನಿಗೆ ಮರಣಿಲ್ಲಯ್ಯ, ಗೋಣಿಬಸಪ್ಪನ್ನ

ಅವರೇ ಚಂಡಾ ಮುರಿಯತಾರೇ | ಶಿವನೆನೆಯವ ದೇವೈ |
ನಂಗೇ ಮರಣ ಬಂದಾವೈಯ್ಯೋ | ಶಿವನೆನೆಯವ ದೇವೈ |
ಇದ್ರಗ ನಾನೇ ಉಳಿಯಾದಿಲ್ಲೋ | ಶಿವನೆನೆಯವ ದೇವೈ |
ಹೇಳಿದ ಮಾತಾ ಕೇಳಾಲಿಲ್ಲೋ | ಶಿವನೆನೆಯವ ದೇವೈ |
ತಾಯೀ ಮಾತಾ ಕೇಳಾಲಿಲ್ಲೋ | ಶಿವನೆನೆಯವ ದೇವೈ |
ನಮಿಗೆ ಸಾವೂ ಬಂದಾವೈಯ್ಯೋ | ಶಿವನೆನೆಯವ ದೇವೈ |[1] ಮೇಟಿಬಣಕಾರ – ಬಣಕಾರ

[2] ನೆರಗಿರಸ್ತ – ನೆರಯವನು

[3] ಹಚ್ಚಾಕ – ಹಸಿರಿಗೆ

[4] ವಡಕ ವಡಕಾ – ಒಡೆದ ಚೂರು ಚೂರು

[5] ಬಾಲದಾನ – ಕರುವಿನ ದಾನ

[6] ಇಡಿಗ್ವಾಡಿ – ಸಣ್ಣ ಗೋಡೆ

[7] ಕಾಲಮಡಿ – ಉಚ್ಚೆ

[8] ಬೈರೂಪ – ವೇಷ

[9] ಬೇಡ್ಕಿ – ಬೇಡರ ಸೈನ್ಯ

[10] ಚಂಡ – ರುಂಡ