(ಬಾಲ ಬಸಪ್ಪನಿಂದ ಗೋಣಿ ಬಸಪ್ಪ ಬದುಕಿ ಬಂದ ಮೇಲೆ ಶಿವನಪ್ಪ ಕೊಡುವ ಏಳು ತರದ ಶಿಕ್ಷೆಗಳು ಏಳು ಪವಾಡ ಮಾಡಿ ಗೆಲ್ಲುತ್ತಾನೆ. ಕಲ್ಲುಗಾಣದಲ್ಲಿ ಸಕ್ಕಿರಿಯಾಗಿ ಉದುರುವುದು, ಸುಣ್ಣದ ಚೀಲದಲಲಿ ಕಟ್ಟಿ ಕೆರೆಯಲ್ಲಿ ಮುಳಿಗಿಸಿದಾಗ ಬದುಕಿ ಬಂದು ಕಂಠಿನಾಗಮ್ಮನ ಅಂಗಡಿಯಲ್ಲಿ ವ್ಯಾಪಾರ ಮಾಡುವುದು, ಅವನನ್ನು ಬಟ್ಟ ಬಟ್ಟಗೆ ಕಡಿದು ತೆಗ್ಗಿನಾಗ ಹಾಕಿ ಮಣ್ಣು ಮುಚ್ಚಿಸಿದಾಗ, ಬದುಕಿ ಬಂದು ಶಿವಸ್ಥಾನದ ಕಟ್ಟೆಯ ಮೇಲೆ ಕಂದನಾಗೆ ಆಡುತ್ತಾ ಇಬತ್ತಿ ಇತನ್ನುವುದು. ಕೂಲಹಳ್ಳಿಯಲ್ಲಿ ದನದ ಕೊಟ್ಟಿಗೆಯಲ್ಲಿ ಅವಿತು ಕುಂತಾಗ ಕೊಟ್ಟಿಗೆಗೆ ಬೆಂಕಿ ಹಾಕಿಸಿ ಸುಟ್ಟಾಗ ಬುದುಕಿ, ಪಂಚ ಪಗಡೆಯಾಡುವುದು. ಗವಿಯಲ್ಲಿ ಅವಿತು ಕೊಂಡಾಗ ಇಡೀ ಗವಿಗೆ ಬೇಡರ ಸೈನ್ಯ ಹೂದಾರ (ಮೆಣಸಿನಕಾಯಿ ಘಾಟು) ಹಾಕಿದಾಗ ಬೇಡರ ಸಾವಿರ ಸೈನ್ಯಕ್ಕೆ ಕಣ್ಣು ಹೋಗುವಂತೆ ಮಾಡಿ ಬದುಕಿ ಬಂದು ಮತ್ತೇ ಅವರಿಗೆ ಕಣ್ಣು ಹೋಗುವಂತೆ ಮಾಡಿ ಬದುಕಿ ಬಂದು ಮತ್ತೇ ಅವರಿಗೆ ಕಣ್ಣು ಕೊಡುವುದು. (ಗೋಣಿಬಸಪ್ಪ ತರದ ಉದಾರತೆಗಳನ್ನು ಮರೆಯುವಾಗೆಲ್ಲಾ ಕಲಾವಿದ ಒಂದು ನುಡಿಗಟ್ಟನ್ನು ಎಲ್ಲ ಕಡೆ ಬಳಸಿದ್ದಾನೆ. ಬಸವನಾಗಿ ಬಾಳಿನೀ. ಬಡಿಯೋರಿಗೆ ಬೆನ್ನ ಕೊಡಬೇಕು, ಬೈಯೋರಿಗೆ ಬಾಯಿ ಕೊಡಬೇಕು, ಬಾಗೋರು ಎದುರಿಗೆ ಬಂದರೆ, ತಲಿಬಾಗಿ ಹೋಗಬೇಕು ವಿಷಾ ನೀಡಿದರೆ ಹಾಲಂದು ಕುಡಿಬೇಕು, ಕರ್ಮ ಮಾಡಿದೋರಿಗೆ ಧರ್ಮ ಮಾಡಬೇಕು’’ ಇದೇ ತರದ ಇನ್ನೊಂದು ನುಡಿಗಟ್ಟು ಶಿವನಪ್ಪ ಕೊಟ್ಟ ಶಿಕ್ಷೆಯನ್ನೆಲ್ಲ ಗೆದ್ದು ಬಂದ ಮೇಲೆ ಬಳಸುತ್ತಾನೆ. ಊರುಕಟ್ಟಿ ಒಕ್ಕಲು ಮಾಡಬೇಕು, ಅದು ಮಹಾಪುಣ್ಯ. ತೇರು ಕಟ್ಟಿ ಪುರಸೆ ಮಾಡಬೇಕು, ಅದು ಮಹಾಪುಣ್ಯ. ಕೆರೆ ಬಾವಿ ಕಟ್ಟಿ, ಬಡ ಬಗ್ಗರಿಗೆ ಅನ್ನದಾನ ಮಾಡಬೇಕು, ಅದು ಮಹಾಪುಣ್ಯ. ಅನ್ನದಾನ, ಕನ್ಯಾದಾನ ಕೊಟ್ಟು ಮದುವಿ ಮಾಡಬೇಕು, ಅದು ಮಹಾಪುಣ್ಯ. ನನ್ನ ಪರದೇಶಿ ಮಾಡಿ ಏನು ಪುಣ್ಯ ಪಡಿದಿರೋ’’) ಅಳಿಲುಗೊಂಗಡಿ ಹಾಸಿಕೊಂಡು ನದಿ ದಾಟುವುದು, ತಾನು ತಿರುಗಿದ್ದಂತೆ ತೆಂಗಿನ ಮರವನ್ನು ತಿರುಗಿಸುವುದು ರೀತಿ ಏಳು ಪವಾಡಗಳನ್ನು ಇಲ್ಲಿ ಮರೆಯುತ್ತಾನೆ. ಏಳು ಪವಾಡದ ಕತೆಯನ್ನು ಕಲಾವಿದ ಮೂರೇ ತಂತ್ರಗಳ ಕಟ್ಟಿಕೊಡುತ್ತಾನೆ. ಇಲ್ಲಿ ಕಥನಕ್ಕೆ ಒಂದು ಓಟ ಇದೆ. ಶಿವನಯ್ಯ ಅಥವಾ ಅವನ ಸೈನ್ಯ ಬರುತ್ತದೆ. ಗೋಣಿಬಸಪ್ಪನನ್ನು ಹಿಡಿವುದು, ಶಿವನಯ್ಯ ಘಹಘಹಿಸಿ ನಗುವುದು, ಮೀಸೆ ತಿರುವುದು, ಸಾರಿ ಅವನು ಶಿಕ್ಷೆಯಿಂದ ಉಳಿದುಕೊಳ್ಳುತಾನಾ? ಎಂದು ದಂಡಿನ ಮಲ್ಲಣಆರ್ಯನನ್ನು ಕೇಳುವುದು, ಅವನು ಸಾಧ್ಯವಿಲ್ಲ ಎಂದು ಹೇಳುವುದು, ಶಿಕ್ಷ ಚಾಲೂ ಮಾಡುವುದು ಗೋಣಿ ಬಸಪ್ಪ ತಪ್ಪಿಸಿಕೊಳ್ಳುವುದು, ಮತ್ತೇ ಅವನು ಕಾಣಿಸಿಕೊಂಡಾಗ ಇಡ್ಕಳೀ, ಇಡ್ಕಳೀ, ಎಂದು ಬೆನ್ನತ್ತುವುದು. ಏಳು ಪವಾಡಗಳಲ್ಲೂ ಇದು ಪುನರಾವರ್ತನೆಯಾಗುತ್ತದೆ.)

ಗೋಣಿ ಬಸವಶ್ವರ ದುಃಖ ಮಾಡ್ತಾನ್ರೀರ ಗೋಣಿಬಸಪ್ಪನ ಚಂಡು ಮುರೀತಾರ ಸೊಕ್ಕಿನ ಶಿವನಯ್ಯ ಕ್ಯಾಕಿ ಹೊಡಿತಾನು. ಕೇಕಿ ಹಾಕಿ ನಗುತಾನು. ಗೊಂಡದ ಮೀಸಿ ತಿರುವುತಾನು. ಅಹಂಕಾರ, ತೋರಿಸ್ತಾನು. ‘ಆ ದಂಡಿನ ಮಲ್ಲಣಾರ‍್ಯ ಹಿಂಗಾದ್ರೆ ಇವ್ನು ಸಾಯಂಗಿಲ್ಲಯ್ಯ, ಇವ್ನು ಪ್ರಾಣ ತಗದು ಎಲ್ಲ ಖಂಡ ಖಂಡ ಬ್ಯಾರೆ ಬ್ಯಾರೆ ಮಾಡ್ಬಿಟ್ಟಾರು, ಮಾಂಸ ನೋಡ್ತಾನು, ಕ್ಯಾಕಿ ಹೊಡಿತಾನು, ಕೇಕು ಹಾಕಿ ನಗುತಾನು’ “ಆ ದಂಡಿನ ಮಲ್ಲಾಣಾರ‍್ಯ ಹಿಂಗಾದ್ರೆ ಇವ್ನು ಸಾಯಂಗಿಲ್ಲ, ಬಟ್ಟಿ ಬಟ್ಟಿಗೆ ಅವ್ನ ಮದ್ದು ಮಾಂಸ ಕೊಚ್ಚಿ ಬಿಡ್ರಯ್ಯ, ಆಗ ಬಟ್ಟಿ ಬಟ್ಟಿಗೆ ಅವ್ನ ಮಾಂಸ ಕೊಚ್ಚಿ ಬಿಟ್ಟಾರು, ಮಾಂಸದ ರಾಶಿ ಮಾಡ್ಸಿಟ್ಟಾರು. ಶಿವನಯ್ಯ ಮಾಂಸದ ರಾಶಿ ನೋಡ್ತಾನು ಪಕ, ಪಕ ನಗುತಾನು, ಕಿಲಿ ಕಿಲಿ ನಗುತಾನು ಮೀಸಿ ತಿರುವುತಾನು “ಆ ದಂಡಿನ ಮಲ್ಲಣಾರ‍್ಯ ಇವ್ನು ಗಾಡಿಕಾರ, ಮೋಡಿಕಾರ. ಹಿಂಗ ಮಾಡಿದ್ರ ಇವ್ನಿಗೆ ಮರಣಿಲ್ಲ. ಆ ಗಾಣದ ಸಿದ್ದಲಿಂಗಪ್ಪನ್ನ ಕರ‍್ಸಿ ಕಲ್ಲ ಕಾಣಕ್ಕ ಹಾಕ್ಸಿ ಮಾಂಸ ತಿರುವಿ ಬಿಡಕಪ’’ ಅಂದ ‘ಆಗ್ಲಿ ಬುದ್ದಿ’ ಅಂದು ನೋಡ್ರಿ ಮ್ಯಾಗ್ಲ ಪ್ಯಾಟ್ಟಾಗೆ ಗಾಣಿಗ್ರ ಸಿದ್ಲಿಂಗಪ್ಪನ್ದು ಕಲ್ಲು ಗಾಣ ಇತ್ರಿ. ಕಲ್ಲಗಾಣಕ್ಕ ಏರ‍್ಯಾರು, ಮದ್ದು ಮಾಂಸನ್ನೆಲ್ಲ ಕಲ್ಲ ಗಾಣಕ್ಕ ತುಂಬ್ಯಾನು ಶಿವನಪ್ಪ.

ಕಲ್ಲಗಾಣಕ್ಕ ತಿರುವ್ಸುತಾನೇ | ಸೋಕೀರ ಮೂವ ತಾಜೀಜಿ |
ರಾಜ ಕ್ಯಾಕಿ ಹೊಡಿಯುತಾನೇ | ಸೋಕೀರ ಮೂವ ತಾಜೀಜಿ |
ಠೀಕಾ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |

ಕಲ್ಲುಗಾಣ್ದಗ ತಿರುಗುಸುತಾನು, ಕ್ಯಾಕಿ ಹಾಕಿ ನಗುತಾನು, ಟೀಕಾಕಿ ನಗುತಾನು ಮತ್ತೆ ಕಲ್ಲುಗಾಣ ತಿರುಗುಸ್ತಾನು ಬಗ್ಗಿ ಬಗ್ಗಿ ನೋಡ್ತಾನೆ. “ಆ ಇನ್ನು ನುರ‍್ತಿಲ್ಲಯ್ಯೋ’’

[1] ತಿರುವು’’ ಅಂತಾನೆ. ಮತ್ತೆ ತಿರುಗಿದಾಗ ಗೋಣಿ ಬಸವೇಶ್ವರ ಕಲ್ಲುಗಾಣದಾಗೆ

ಸಕ್ಕರಾಗಿ ಬೀಳುತಾನೇ | ಸೋಕೀರ ಮೂವ ತಾಜೀಜಿ |
ಕಲ್ಲುಗಾಣಾ ತಿರುವುತಾರೇ | ಸೋಕೀರ ಮೂವ ತಾಜೀಜಿ |
ಅವ್ರೆ ಸಕ್ಕಿರಿ ತಿಂಬತಾರೇ | ಸೋಕೀರ ಮೂವ ತಾಜೀಜಿ |

ಸಕ್ಕಿರಿ ತಿಂಬತಾರೆ, ಕಲ್ಲುಗಾಣ ತಿರುವುತಾರೆ. “ಆ ದಿಂಡಿನ ಮಲ್ಲಣಾರ‍್ಯ ಇದರಾಗ ಬದುಕ್ಯಾನೇನ?’’ “ಅಯ್ಯೋ ಬುದ್ದಿ ಕಲ್ಲಗಾಣರೀ. ಅದರಾಕ ಮದ್ದು ಮಾಂಸ ಹಾಕಿ ತಿರುವಿ ಬಿಟ್ಟೀವಿ. ಅದರಾಗ ಬದುಕಾದುಂಟೇ? ಇಲ್ಲಿಗೆ ಹೋತು ಇಲ್ಲಿಗೆ ಸತ್ತ ಸತ್ತ ಸತ್ತ’’ ಅಂದ. “ನಡ್ರೆಯ್ಯ ಕೂಲಳ್ಳಿ ಗೋಗಿ ಮಠಕ್ಕ ಮುತ್ತಿಗೆ ಹಾಕಿಬಿಡ್ತೀನಿ’’ ಅಂತಂದು ಶಿವನಪ್ಪ ಅಂದ. ಶಿವನಪ್ಪ ಹನ್ನೆರಡು ಸಾವಿರ ಬೇಡ್ಕಿ ತಗಂಡು ಅದೇ ಸಿದ್ಲಿಂಗಪ್ಪನ ಮನೆ ಮುಂದೆ ಬರಾಕತ್ತಾನ್ರೀ ಕೂಲಳ್ಳಿ ಮಠಕ್ಕ ಹೋಗಾಕ. ಬರ ಕರಗ ಗೋಣಿಬಸವೇಶ್ವರ ಕಲ್ಲುಗಾಣ್ದಲ್ಲಿ ಬಿದ್ದೋನು ಅದೇ ಗಾಣಿಗ್ರು ಸಿದ್ಲಿಂಗಪ್ಪ ನ ಪಟ್ಟದಾನಿ ಮ್ಯಾಲೆ ಕುತ್ಗಂಡು.

ಇಳ್ಯಾವ ಮೆಲಿಯಾತಾನೇ | ಸೋಕೀರ ಮೂವ ತಾಜೀಜಿ |
ಕಾಲಾಕ ಆಡುತಾನೇ | ಸೋಕೀರ ಮೂವ ತಾಜೀಜಿ |
ದಂಡನೋಡಿ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |

ದಂಡ ನೋಡಿ ನಗ್ತಾನು ತಿಂತಾನು. ಗಾಣಿಗ್ರ ಸಿದ್ಲಿಂಗಪ್ಪಗ ಹೇಳ್ತಾನ “ಆ ಸಿದ್ಲಿಂಗಪ್ಪ ದೊಡ್ಡ ಭಕ್ತ ನೀನು. ಮರಿಸ್ವಾಮಿ ಗೋಣಿಬಸಪ್ಪಗ ಗಾಣಕ್ಕೆ ಕೊಡಬೌದೇನಯ್ಯ, ಮುಳ್ಳು ಗಾಣಕ್ಕ ಕೊಡಬೌದೇನಯ್ಯ’’, ಅಂದ “ಗುರುಗಳೇ ಗುರುಗಳೇ ಕಾಣದ ಕಣ್ಣು, ಕೇಳ್ದ ಕಿವಿ, ಮೋಸ ಮಾಡಿದ ಗಂಡು ಶಿವನಯ್ಯ, ಮೋಸ ಮಾಡ್ಯಾನ್ರಿ.’’

ತಪ್ಪಾತೋ ನನ್ನಾ ಗುರುವೇ | ಸೋಕೀರ ಮೂವ ತಾಜೀಜಿ |
ತಡಿಯಾತೋ ನನ್ನಾ ಗುರುವೇ | ಸೋಕೀರ ಮೂವ ತಾಜೀಜಿ |
ಬಿದ್ದ ಬಿದ್ದ ಬೇಡುತಾನೇ | ಸೋಕೀರ ಮೂವ ತಾಜೀಜಿ |
ಸಿದ್ಲಿಂಗಪ್ಪ ಬೇಡುತಾನೇ | ಸೋಕೀರ ಮೂವ ತಾಜೀಜಿ |

ಗೋಣಿಬಸವ ಮುಸಿ ಮುಸಿ ನಗ್ತಾ ಕುಂತಾನು ಶಿವನಯ್ಯ ಬೇಡ್ಕಿ ತಗೊಂಡು ಬರ್ತಾನು. ಬಂದು ‘ಆ ದಂಡಿ ನ ಮಲ್ಲಣಾರ‍್ಯ ತಡಮಾಡಬ್ಯಾಡ ಬಾರಯ್ಯ’, ಅಂತ ಹಿಂದ್ಕ ತಿರುಗಿ ಹಿಂಗ ಅನ್ನಕರಗ ನೋಡಿಬಿಟ್ಟ. “ಆ ದಂಡಿನ ಮಲ್ಲಣಾರ‍್ಯ ಇಲ್ಲೇ ಅದಾನ ಹಿಡ್ಕಳ್ರಯ್ಯ

ಹಿಡಕಳ್ರೀಅಂಬತಾನೇ | ಸೋಕೀರ ಮೂವ ತಾಜೀಜಿ |
ಗುರುಗೆ ಮರಣ ಬಂದಾವಯ್ಯೋ | ಸೋಕೀರ ಮೂವ ತಾಜೀಜಿ |

ಹನ್ನೆರಡು ಸಾವಿರ ಬೇಡ್ಕಿ ತೆಕ್ಕ ಬಡ್ದು ಹಿಡದಬಿಟ್ಟಾರು. ಹನ್ನೆರಡು ಸಾವಿರ ಗುದ್ದು ಗುದ್ದ್ಯಾರು. “ದಂಡಿನ ಮಲ್ಲಣಾರ‍್ಯ, ನೋಡಿದೇನಯ್ಯ ಗುಡಿಕಾರ ಮೋಡಿಕಾರ ಇವ್ನಿಗೆ ಮರಣಿಲ್ಲಯ್ಯ, ನೋಡ್ರಿ ಹನ್ನರೆಡು ಮಾರುದ್ದ ನೂಲು ಹಗ್ಗ ತರಿಸ್ಯಾನು, ನೂಲು ಹಗ್ಗ ತರ‍್ಸಿ ಗೋಣಿಬಸವನ ಚಂಡು ತಗಂಡು ತೊಡಿಯಾಕ ಒತ್ತಿ ಎಡಮುರುಗಿ[2] ಬಿರುದು ಕಟ್ಟಿಬಿಟ್ಟಾರು. ಎಡಮುರುಗಿ ಕಟ್ಟಿ ಸುಡೋ ಮಣ್ಣಾಗ ಹೂಳಿಬಿಟ್ಟಾರು. ಹೂಳಿಬಿಟ್ಟು ಶಿವನಯ್ಯ ಒಂದು ಖಂಡುಗ ಸುಣ್ಣ ಸುಡಿಸ್ಯಾನು, ಒಂದು ಖಂಡುಗ ಸುಣ್ಣ ಸುಡಿಸಿ, ಗುಡಾರ ಹೊಲಿಸ್ಯಾನು, ಸುಣ್ಣ ಅಡಿಗೆ ಹಾಕಿದ ನೋಡ್ರಿ ಅದನ್ನ ಕಟ್ಟಿದ. ನೂಲಹಗ್ಗ ಬಿಚ್ಚಲಿಲ್ಲ. ಸುಣ್ಣದಾಗಿಟ್ಟ, ಮತ್ತ ಮ್ಯಾಲೆ ಹತ್ತು ಚೀಲ ಹಾಕಿದ. ಬಾಯಿ ಹೊಲ್ದಾರು. ‘’ಆ ದಂಡಿನ ಮಲ್ಲಣಾರ‍್ಯ, ತಗೊಳ್ರಯ್ಯ ಹರಪನಳ್ಳಿ ಹಿರೇಕೆರಿಗೆ ತಗಂಡು ಹೋಗ್ಬೇಕು ಇವ್ನು’ ಅಂತೇಳಿ ಶಿವ್ನಪ್ಪ ಗೋಣಿಬಸಪ್ಪನ್ನು ಸುಣ್ಣದಾಗ ಇಟ್ಟಕಂಡ ಹಿರೇಕೇರಿಗೆ

ಹೊತ್ತಕಂಡೇ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಹಿರೇಕೇರಿಗೆ ಒಯ್ಯುತ್ತಾರೇ | ಸೋಕೀರ ಮೂವ ತಾಜೀಜಿ |
ಕೆರಿಗೆ ತಗಂಡು ಹೋಗುತಾರೇ | ಸೋಕೀರ ಮೂವ ತಾಜೀಜಿ |

ಕೆರಿಗೆ ತಗಂಡು ಹೋಗ್ಯಾರು “ಆ ದಂಡಿನ ಮಲ್ಲಣಾರ‍್ಯ, ಹಿರೇಕೆರ‍್ಯಾಗ ಒಗದು ಬಿಡ್ರಯ್ಯ’’ ನೋಡ್ರಿ ಹರಪ್ನಳ್ಳಿ ಹಿರೇಕೆರಿಯಾಗೆ ಒಂದು ಖಂಡಗ ಸುಣ್ಣ ಮತ್ತ ಗೋಣಿಬಸಪ್ಪನ್ನ ಕೆರಿಯಾಕ ಒಗದುಬಿಟ್ಟಾರು. ಕೆರಿಯಾಕ ಬಿದ್ದ ತಕ್ಷಣಕ ಖಂಡಗ ಸುಣ್ಣ

ಪಳ್ಳ ಪಳ್ಳ ಕುದಿಯಾತಾನೇ | ಸೋಕೀರ ಮೂವ ತಾಜೀಜಿ |
ರಾಜ ಕ್ಯಾಕಿ ಹೊಡಿಯುತಾನೇ | ಸೋಕೀರ ಮೂವ ತಾಜೀಜಿ |
ಠೀಕಾಕಿ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |

ಕ್ಯಾಕಿ ಹೊಡಿತಾನು, ಠೀಕಾಕಿ ನಗುತಾನು. ಗೋಣಿಬಸವೇಶ್ವರ ಖಂಡಗ ಸುಣ್ಣದೊಳಗೇ

ಕುದಿಯಾತಾನೇ ಗೋಣೀಬಸವೋ | ಆ ಶಿವನೆನೆಯವ ದೇವೈ |
ಖಂಡುಗ ಸುಣ್ಣ ನನ್ನಾದೈವೇ | ಶಿವನೆನೆಯವ ದೇವೈ |
ಪಳ್ಳ ಪಳ್ಳ ಕುದಿಯಾತೈತೇ | ಶಿವನೆನೆಯವ ದೇವೈ |
ಗುರುವೇ ಸುಣ್ಣದಾಗೆ ಕುದಿಯಾತಾನೇ | ಶಿವನೆನೆಯವ ದೇವೈ |
ಶಿವನಪ್ಪ ಮೋಸಾ ಮಾಡ್ಯಾನಲ್ಲೋ | ಶಿವನೆನೆಯವ ದೇವೈ |

“ದಂಡಿನ ಮಲ್ಲಣಾರ‍್ಯ ಇದರಾಗ ಉಳಕಂಡಾನೇನಾ?’’ “ಅಯ್ಯೋ ಬುದ್ದೀ ಎಂಥ ಮಾತು ಹೇಳ್ತೀರೀ. ಸುಣ್ಣ ಇದು ಮದ್ದು ಮಾಂಸ ಸುಟ್ಟು ಬೂದಿ ಮಾಡಿಬಿಡ್ತತೆ. ಇದು ಇಷ್ಟು ದೀವ್ಸ ಹೇಳಿದ್ದು ಸುಳ್ಳು ಇವತ್ತು ಖರೇವು ನೋಡ್ರಿ. ಸುಣ್ಣದಾಗ ಉಳಿಯಾದುಂಟೇನ್ರೀ ಮನುಷ್ಯ ಹೋದ ಹೋದ’’. “ಆ ಅಂಗಾರ ನಡ್ರಿ ಮತ್ತೆ ಕೂಲಿಳ್ಳಿ ಗೋಗಿ ಮಠಕ್ಕ ಮುತ್ತಗಿ ಹಾಕಿಬಿಡ್ತಿನಿ. ಗದ್ದಿಗಿ ಹತ್ತಿಬ್ಡೀನಿ. ಶಿವನಯ್ಯ ಕೆರಿಯಾಕ ಹಾಕಿ, ಕೆರಿ ಏರಿ ಕೆಳಾಕ ಇಳೀತಾನ್ರೀ. ಕೆರಿ ಏರಿ ಇಳದ ಮ್ಯಾಕ ಕೆರಿಯಾಕ ಖಂಡುಗ ಸುಣ್ಣ ಪಳಪಳ ಕುದಿಯಾದು. ಅಡ್ಯಾಗ್ಲ ಸುಣ್ಣ ಕರ್ರಗ ಆತು, ಮ್ಯಾಗ್ಲು ಸುಣ್ಣ ಜಾಜಿ ಮಲ್ಲಿಗಿ, ಸೂಜಿ ಮಲ್ಲಿಗಿ ಆಥು. ಕಟ್ಟಿದ ನೂಲು ಹಗ್ಗ ಅಂತರಗಂಗಿ ಬಳ್ಳಿ ಆತು.ಆ ಒಲಿದ ಅಂಡಿಗಿ ಚೀಲ ಕುದುರಿ ಕೊಳಗದ ಎಲಿ[3] ಆತು. ಎಲಿ ಆದಗ ಗೋಣಿಬಸವೇಶ್ವರದ ಅದು ಹರಪನಳ್ಳಾಯಗೆ ಕಂಠಿ ನಾಗವ್ವನ

ಅಂಗಡ್ಯಾಗ ಕುಂತಾನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ವ್ಯಾಪಾರ ಮಾಡುತಾನೇ | ಸೋಕೀರ ಮೂವ ತಾಜೀಜಿ |

ವ್ಯಾಪಾರ ಮಾಡ್ತಾನ್ರೀ. ಗೋನುಗಳು, ವಸ್ತ್ರದಾನಗಳು, ಅನ್ನದಾನಗಳು, ಚಿನ್ನದಾನಗಳು ಸಾಲ ಬಂಜಿಯರಿಗೆ

ಮಕ್ಕಳ ಫಲವ ಕೊಡ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಮಕ್ಕಳಕೊಡ್ತಾನಯ್ಯೋ | ಸೋಕೀರ ಮೂವ ತಾಜೀಜಿ |

ಕಂಠಿ ನಾಗಮ್ಮ ಭಾಗ್ಯ ಮಾಡ್ಕೆಂಡಳು ರೀ, ಯಾರಿಂದ, ಗುರುವಿಂದ, ಗೋಣಿ ಬಸವೇಶ್ವರ ಅಂಗಡ್ಯಾಗ ಕುತ್ಗಂಡು ವ್ಯಾಪಾರ ಮಾಡ್ತಾನು. ಸುಣ್ಣದಾಗಿದ್ದ ಎದ್ದು ಬಂದು. ಆಗ ಶಿವನಯ್ಯ ಆ ಕಂಠಿ ನಾಗಮ್ಮನ ಅಂಗಡಿ ಮುಂದೆ ಬರ‍್ತಾನ. ಆ ಮನಿ ಮುಂದಕ್ಕ ಬಂದು. “ಆ ದಂಡಿನ ಮಲ್ಲಣಾರ‍್ಯ ತಡ ಮಾಡಬ್ಯಾಡ್ರಿ ಬರ್ರಯ್ಯ’’. ಹಿಂದಕ್ಕ ತಿರುಗಿ ಕರಿಯ ಕರಗ ನೋಡಿ ಬಿಟ್ಟ. ಆ ದಂಡಿನ ಮಲ್ಲಣಾರ‍್ಯ ಇಲ್ಲೇ ಅದಾನಯ್ಯ.’’

ಹಿಡಕಳ್ರೀ ಎಂಬತಾನೇ | ಸೋಕೀರ ಮೂವ ತಾಜೀಜಿ |
ಹನ್ನೆರಡು ಸಾವಿರ ಬೇಡ್ಕೇ | ಸೋಕೀರ ಮೂವ ತಾಜೀಜಿ |
ಮನಿಗೆ ಮುತ್ತಿಗಿ ಹಾಕ್ಯಾರಯ್ಯೋ | ಸೋಕೀರ ಮೂವ ತಾಜೀಜಿ |

ಮುತ್ತಿಗಿ ಹಾಕ್ಯಾರು. ಗೋಣಿಬಸಪ್ಪನ ತೆಕ್ಕೆ ಬಡ್ದು ಹಿಡ್ಕಂಡ ಹೋಗ್ಯಾರು. ಹಿಡ್ದು ನಿಂತಾರು. ಹಿಡ್ದು ನಿಂತಮ್ಯಾಗ ಕಂಠಿನಾಗಮ್ಮ ದೊಡ್ಡ ಭಕ್ತಳು. ಗೋಣಿ ಬಸಪ್ಪನ ನಡು ಇಡ್ಕಂಡು ಶಿವನಪ್ಪಗ ಬೇಡ್ಕಂತಾಳೆ. “ಶಿವನಯ್ಯ ಶಿವನಯ್ಯ ಮರಿಸ್ವಾಮಿ ಗೋಣಿ ಬಸವೇಶ್ವರನ್ನು

ಹೊನ್ನ ಕೊಡ್ತೀನಿ ಕೈಯಾ ಬಿಡೋ | ಸೋಕೀರ ಮೂವ ತಾಜೀಜಿ |
ಚಿನ್ನ ಕೊಡ್ತೀನಿ ಕೈಯಾ ಬಿಡೋ | ಸೋಕೀರ ಮೂವ ತಾಜೀಜಿ |
ನೀನೇ ಕೇಳಿದ್ದ ಕೊಡ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ನಮ್ಮ ಸ್ವಾಮಿಗೆ ಕೈಯಾ ಬಿಡೋ | ಸೋಕೀರ ಮೂವ ತಾಜೀಜಿ |

‘ಶಿವನಪ್ಪ ಬಿಟ್ಟುಬಿಡಯ್ಯ ಆ ಅಂಗಡಿ ಅಂಗಡೀನ ಕೊಡ್ತೀನಿ ಕೈಬಿಡಪಾ’ ಅಂದಾಗ ನೋಡ್ರಿ ಸೊಕ್ಕಿನ ಶಿವನಯ್ಯ ಅಂತಾನ್ರೀ ಕಂಠಿನಾಗಮ್ಮಗ. “ಆ ದಂಡಿನ ಮಲ್ಲಣಾರ‍್ಯ ಅವಳ್ಳೇನು ನೋಡ್ತೀರೀ, ಆಳಿಗೊಂದು ಗುದ್ದು ಹಾಕಿಬಿಡ್ರಲೇ’’ ಅಂದಾಗ ಗೋಣಿಬಸವೇಶ್ವರ ಹೇಳ್ತಾನೆ. “ನಾಗಮ್ಮ ಒಪ್ಪಿದೆ ಭಾವಕ್ಕೆ ನಿಷ್ಠೆಗುಣಕ್ಕೆ ಬಾಳೆ ಹಣ್ಣಿನಂತೆ ಭಕ್ತಳವ್ವ.’’

ಕೈಯಾ ಬಿಡೇ ನನ್ನ ಮಗಳೇ | ಸೋಕೀರ ಮೂವ ತಾಜೀಜಿ |
ಬಿಟ್ಟೇ ಬಿಡೇ ನಾಗವ್ವೋ | ಸೋಕೀರ ಮೂವ ತಾಜೀಜಿ |

ಬಿಟ್ಟುಬಿಡಮ್ಮ ಅಂದಾಗ ಕೈಬಿಟ್ಟು ಬಿಟ್ಟಾಳು. ಗೋಣಿಬಸಪ್ಪನ ತಗಂಡು ಹನ್ನೆರಡು ಸಾವಿರ ಬೇಡ್ಕೆ ತಗಂಡು ಎಲ್ಲಿಗೆ ಬರ‍್ತಾನು. ಗೋಣಿಬಸಪ್ಪನ್ನ ಹಿಡ್ಕಂಡೇ.

ಜಿಗಟೇರಿಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ತನ್ನ ರಿಗೆ ತಂದಾನಯ್ಯೋ | ಸೋಕೀರ ಮೂವ ತಾಜೀಜಿ |

ಚಿಗಟೇರಿಗೆ ತಂದಾನು. ಶಿವನಪ್ಪನ್ನ ದೇವತಾ ಅರಮನಿಯೊಳಗೆ, ದೇವರಕ್ವಾಣಿಯೊಳಗೆ ನೆಲಭವನ ಕಡಿದಾನು ಮತ್ತೆ ಗೋಣಿಬಸಪ್ಪನ ಬಟ್ಟಿಬಟ್ಟಿಗೆ ಕಡ್ಡು ಮದ್ದು ಮಾಂಸದ ರಾಶಿ ಮಾಡಿ, ಆ ತೆಗ್ಗಿನಾಕ ಹಾಕಿ ಮ್ಯಾಲೆ ಮಣ್ಣು ಮುಚ್ಚಿಬಿಟ್ಟಾನು. “ಇದರಗ ಉಳಿದಾ ನೇನಯ್ಯ’’, “ಅಯ್ಯೋ ಬುದ್ದಿ ಇನ್ನು ಸಾಧ್ಯ ಇಲ್ಲೀ. ಬಟ್ಟಿ ಬಟ್ಟಿಗಾಗಿ ಕಡ್ಡು ತೆಗ್ಗಿನಾಕ ಹಾಕಿ ಮ್ಯಾಲೆ ಮಣ್ಣು ಮುಚ್ಚಿ ಬಿಟ್ಟೀವಿ. ಇನ್ನ್ಯಂಗ ಬರ‍್ತಾನ್ರೀ ಇಲ್ಲಿಗೆ ಮುಗಿತ್ರೀ ಸತ್ತ ಸತ್ತ ಸತ್ತ’’ ಹನ್ನೆರಡು ಸಾವಿರ ಬೇಡ್ಕಿ ಕೊಂಡಾಡ್ತತೆ, ನಗತೈತೆ, ಕ್ಯಾಕಿ ಹೊಡಿತೈತೆ, ಶಿವನಯ್ಯ ಮೀಸಿ ತಿರುವು ತಾನು, ಹಲ್ಲು ಕಡಿತಾನು ಮತ್ತೆ “ನಡ್ರೆಯ್ಯ ಕೂಲಹಳ್ಳಿಗೆ ಹೋಗಿ ಮಠಕ ಮುತ್ತಿಗಿ ಹಾಕಿಬಿಡ್ತೀನಿ. ಇವ್ನ ಗದ್ದಿಗಿ ಹತ್ತಿಬಿಡ್ತಿನಿ.’’ ಮಾತಾಡ್ತ ಕುಂತಾರ್ರೀ, ಚಿಗಟೇರ‍್ಯಾಗ, ಆತನ ದೇವತಾ ಅರಮಿನಿಯಾಗ ಮಾತಾಡ್ತಾ ಕುಂತಗ ಗೋಣಿಬಸವೇಶ್ವರ ನೆಲಭವಕ್ಕ ಇದ್ದವನು. ಕೂಲಹಳ್ಳಿಗ ಶಿವಸ್ಥಾನದ ಕಟ್ಟಿಮಾಯ್ಗ

ಕಂದನಾಗಿ ಆಡತಾನೇ || ಸೋಕೀರ ಮೂವ ತಾಜೀಜಿ |
ಬತ್ತಿ ತಿಂಬಾತಾನೇ | ಸೋಕೀರ ಮೂವ ತಾಜೀಜಿ |

ಹಡ್ಡತಾಯಿ ಕನಕಮ್ಮಗ ಮಗ ಹೋದ ತಿರುಗಿ ಬರಲಿಲ್ಲ. ಹುಚ್ಚು ಹಿಡೀತು. ಹುಚ್ಚು ಬಂದು ಮಠದಾಗೆ “ಮಗು ಬಸವಣ್ಣ ಎಲ್ಲಿ ಹೋದ್ಯಪಾ ನಮ್ಮನ್ನ ಮರ‍್ತೇನಪ ನಮ್ಮನ್ನು ಬಿಟ್ಟು ಹೋದೇನಪಾ, ಅಳ್ತಾ, ಅಳ್ತಾ ಕರೀತಾ ಮಠದಾಗ ಸುತ್ತರಿತಾ ನೋಡ್ತಾಳೆ. ಮಗನನ್ನು ಧ್ಯಾನ ಮಾಡ್ತಾಳೆ. ಸತ್ತಂತ ನೋಡ್ತಾ ನಗುತಾ, ಅಳುತಾ, ಹುಚ್ಚುರು ಮಾಡ್ದೆಂಗ ಮಾಡ್ಕೆಂತ, ಶಿವ ಸನ್ನಿಧಿಯ ಕಟ್ಟಿಗೆ ಬರ‍್ತಾಳು, ನೋಡ್ತಾಳ್ರೀ, ಕಸು ಐತ್ರೀ ‘ಹಾ ಏನಪಾ’

ಹುಟ್ಟಿದೇನೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |
ಹುಚ್ಚು ನಿಚ್ಚಳಾಗುತೈತೇ | ಸೋಕೀರ ಮೂವ ತಾಜೀಜಿ |
ತಾಯಿ ಹುಚ್ಚು ನಿಚ್ಚಳಾಗುತೈತೇ | ಸೋಕೀರ ಮೂವ ತಾಜೀಜಿ |
ಮಗನ ಬಾಚಿ ಎತ್ತ್ಯಾಳಯ್ಯೋ | ಸೋಕೀರ ಮೂವ ತಾಜೀಜಿ |

ಮಗನ್ನ ಬಾಚಿ ಎತ್ತ್ಯಾಳು. ಅಪ್ಪಿಗೆಂಡು, ಮನಿಗೆ ತಗಂಡು ಹೋಗ್ಯಾಳು. ತಲಿ ಎರಿತಾಳು, ಸಕ್ಕರಿ ತಿನ್ನುಸ್ತಾಳು. ಮತ್ತೆ ಹುಟ್ಟಿದೆಪಾ, ಮತ್ತೆ ಹುಟ್ಟಿದೆಪಾ ಅಳ್ತಾ ಕಣ್ಣೀರಾಕ್ತಾ, ಮಗನಿಗೆ ಹಾಲು ಸಕ್ಕಿರಿ ತಿನ್ನಸ್ತಾಳ. ನೋಡ್ರಿ ಗೋಣಿಬಸವೇಶ್ವರ, ಮಹಿಮದ ಪುರುಷ ಕಲಿಯುಗದ ಪುರುಷ ಒಂಬತ್ತು ತಿಂಗಳ ಕೂಸು ಹೋಗಿ ಒಂಬತ್ತು ವರ್ಷದವನಾದ್ನಂತ್ರೀ, ಒಂಬತ್ತು ವರ್ಷಧನಾದಾಗ “ಆ ಕಲ್ಲಪ್ಪ ತಡಮಾಡಬ್ಯಾಡಯ್ಯ ಚಿಗಟೇರಿ ಶಿವನಯ್ಯ ಹನ್ನೆರಡು ಸಾವಿರ ಬೇಡ್ಕಿ ತಗಂಡು. ಸನ್ನಿಧಿಗೆ ಬರ್ತಾನಪಾ, ತಡಮಾಡ ಬ್ಯಾಡ ಹೂವಿನ ತೋಟಕೆ ಹೋಗಿ ನೂರೊಂದು ಪುಷ್ಟ ತಗಂಡಬಾ ನೂರೊಂದು ಪುಷ್ಟ ತಂದು ನೆನಿಅಕ್ಕಿ, ನೆಲಿಗಡಲಿ, ಗೊನಿಮುರುದ ಬಾಳೆಹಣ್ಣು, ತೆಂಗಿನಕಾಯಿ ಊದು ಕರ್ಪೂರ ತಗಂಡು ಗವಿಯಾಗೆ, ನೆಲಮಾಳಿಗೆಯಾಗೆ ಅಂದ್ರೆ ಹಸಿಪೆಳಿ[4] ಮುಸಿಕಿನಬಾವಿ ಚೆನ್ನಬಸವಣ್ಣನ ಆಣೆ, ಆ ಚೆನ್ನಬಸವಣ್ಣನ ಪೂಜಿ ಮಾಡಪಾ.’’

ಮಠ ಬಿಟ್ಟೇ ಹೋಗತೀನೇ | ಸೋಕೀರ ಮೂವ ತಾಜೀಜಿ |
ಕಾದವರ ಕಾಲಾಗೇ | ಸೋಕೀರ ಮೂವ ತಾಜೀಜಿ |
ಶಿವನಪ್ಪನ ಕಾಲಾಗೇ | ಸೋಕೀರ ಮೂವ ತಾಜೀಜಿ |
ಹೋಗತೀನೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |
ನೀನೇ ತಡ ಮಾಡಬ್ಯಾಡೋ | ಸೋಕೀರ ಮೂವ ತಾಜೀಜಿ |

“ಕಲ್ಲಪ್ಪ ತಡಮಾಡಬ್ಯಾಡಪಾ ಹತ್ರಕ ಬರ್ತಾನು, ಸಮೀಪಕ ಬಂದಾ ಹೋಗಯ್ಯ. ಆಗ ಕಲ್ಲಪ್ಪ ಹೂವಿನ ತ್ವಾಟಕ್ಕ ಹೋಗ್ಯಾನು ನೂರೊಂದು ಪುಷ್ಪತಂದಾನು ನೆನಿಅಕ್ಕಿ, ನೆಲಗಡಲಿ, ಗೊನಿಮುರದ ಬಾಳೆಹಣ್ಣು ಹಸೆ ತೆಂಗಿನಕಾಯಿ ಊದು ಕರ್ಪೂರ ತಗಂಡು ಮುಂದೆ ಮುಂದೆ ಕಲ್ಲಪ್ಪ ಹಿಂದು ಹಿಂದೆ ಗೋಣಿಬಸವೇಶ್ವರ ನೆಲಭವನಕ ಇಳಿದಾರು ನೆಭವನದಲ್ಲಿ ಹಸಿಪೆಳಿ ಉಸುಕಿನ ಬಾವಿ ಹತ್ರ ಚನ್ನಬಸವಣ್ಣನ ಪೂಜಿ ಮಾಡ್ತೀನ್ರೀ. ಪೂಜಾರಿ ಕಲ್ಪಪ್ಪ ಪೂಜಿ ಮಾಡ್ತಾನು.

ಬೆಳಗುವೆನಾರತೀಯ ರಾಜಾರಮಣರಿಗೇ
ಬೆಳಗುವನಾರತಿಯಾ
ಮಾದೇವಿ ಬನಶಂಕರಿ ಬಾಲಾನ ಸಲುವಮ್ಮಾ
ಬೆಳಗುವನಾರತಿಯಾ
ಮಲತಾಯಿ ಮಾತಾ ಕೇಳೀ ದೇಶಸಂಚಾರ ಸೇರಿ
ಬೆಳಗುವನಾರತಿಯಾ

ಗೋಣಿಬಸವೇಶ್ವರ ಆರತಿ ಮಾಡ್ಯಾನು. ಬಸವಣ್ಣಾ ಹೋಗುತೀನಪ್ಪ ಈವತ್ತು ಮಠಬಿಟ್ಟು ಹೋದೋನು ಇನ್ನು ಯಾವ ಕಾಲಕ್ಕೇ ತಿರುಗಿ ನಾನು ಬರೋದಿಲ್ಲಾ. ಮಗು ಕಲ್ಲಪ್ಪ ಮ್ಯಾಲಕ್ಕ ಅತ್ತಪ್ಪ ಹರ್ತಕ್ಕ ಬಂದಾನು. ಸನಿಹಕ್ಕೆ ಬಂದಾನು ಶಿವನಪ್ಪ ಬಂದು ಕೇಳಿದ್ರೆ ನಿನ್ನ ಕಡುದು ಹಾಕಿದ್ರೂ

ನನ್ನ ಸುದ್ದಿ ಹೇಳಬ್ಯಾಡೋ | ಸೋಕೀರ ಮೂವ ತಾಜೀಜಿ |
ಗೋಣಿಬಸವ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಆಗ್ಲಿ ಗುರುಗಳೇ ಅಂದ. ಆಗ ಮುಂದು ಮುಂದು ಕಲ್ಲಪ್ಪ ಹಿಂದು ಹಿಂದೆ ಗೋಣಿ ಬಸವೇಶ್ವರ, ಹೊರಗೆ ಬಂದು ದನದ ಮನಿ ಬೀಗ ತಗದಾನು, ಆದ್ರೆ ದನದ ಮನಿಯೊಳಗೆ ದಡಿ ಹಾಕ್ದ. ಕೈದಂಡು, ಕಾಲದಂಡು ಇಟ್ಟ “ಆ ಗುರುಗಳೇ ದಯಮಾಡ್ರಿ ಒಳಗೆ, ಆಗ ಗೋಣಿಬಸವೇಶ್ವರ ಶಿವನಪ್ಪನ ಕಾಲಾಗೆ ದನದ ಮನಿಯಾಕೆ ಹೋದ. ಆದ್ರೆ ಕಾಟಗರ ಕಾಲ್ದಾಗ ಗೋಣಿಬಸವೇಶ್ವರ ದನದ ಮನಿಯೊಳಗೆ ಗ್ವಾಜಲ[5] ಗುಂಡಿಗೆ’’

ತಲಿಕೊಟ್ಟೇ ಮಲಿಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ದನದ ಮನಿಗೆ ಮಲಿಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

“ಆ ಕಲ್ಲಪ್ಪ ತಡ ಮಾಡಬ್ಯಾಡಯ್ಯ ಕದ ಮುಚ್ಕೆಂಡು ಬೀಗ ಹಕ್ಕೆಂಡು ಬಿಡಪಾ.’’ ಕದ ಮುಚ್ಚಿ ಬೀಗ ಹಾಕ್ಯಾನು ಕಲ್ಲಪ್ಪ ಮಠದಾಗ ಬಂದು ನೋಡ್ರಿ ಮದ್ದಾನಸ್ವಾಮಿ ಮಾಡ್ತಾ ನಿಂತಾನು. ಕಲ್ಲಪ್ಪ, ಗೋಣಿಬಸಪ್ಪ ಮಠದ ಹೊರಗೆ ದನದ ಮಿನಿಯಾಗ ನಿಂತಾನು. ಸೊಕ್ಕಿನ ಶಿವನಯ್ಯ ಹನ್ನರೆಡು ಸಾವಿರ ಬೇಡ್ಕಿ ತಗಂಡು ಧೀನ್ ಧೀನ್ ಅನ್ತಾ ಮಠಕ್ಕ ಹೋಗ್ತಾನು. ಮಠದಾಗ ಹೋಗಕರಗ ಎತ್ಲಾಗನ ನೋಡ್ರಿ ಯಾಕಡಿಗರ ನೋಡ್ರಿ ಝಲ್ ಅಂಬಾ ಕಾವಲು ಐತೆ. ಗೋಣಿಬಸಪ್ಪನ ಗದ್ದಿಗಿ ಮ್ಯಾಲೆ ಹಾಲು ಉಕ್ಕಿ ಹರೀತಾವೆ. ಶಿವನಯ್ಯ ನೋಡ್ದ. “ಆ ದಂಡಿನ ಮಲ್ಲಣಾರ‍್ಯ ಎತ್ಲಾಗ ಯಾಕಡಿಗರ ನೋಡಪಾ ಝಲ್ ಅಂಬಾ ಕಾವಲು ಐತೆ. ಅವನ ಗದ್ದಿಗಿ ಮ್ಯಾಲೆ ಹಾಲು ಉಕ್ಕಿಹರಿತಾವಲೇ ಇಲ್ಲೇವರೆಗೇ’’

ಗೋಣಿಬಸವ ಸತ್ತೇ ಇಲ್ರೋ || ಸೋಕೀರ ಮೂವ ತಾಜೀಜಿ |
ಬರ್ರೆಲೆ ಹೋಗೋಣೋ | ಸೋಕೀರ ಮೂವ ತಾಜೀಜಿ |
ಪೂಜಾರೀ ಕೇಳಾನೂ | ಸೋಕೀರ ಮೂವ ತಾಜೀಜಿ |

ಮಠಕ್ಕ ಬಂದುಬಿಟ್ಟಾನು. ಆಗ ಶಿವನಪ್ಪ ಕೇಳ್ತಾನ್ರೀ ಪೂಜಾರಿ ಕಲ್ಲಪ್ಪನ್ನ. “ಲೇ ಪೂಜಾರಿ ಕಲ್ಲಪ್ಪ, ತಡಿಲೇ ಗಂಟಿ ಮಿಸುಕಸ[6] ಬ್ಯಾಡ, ಧೂಪದಾರತಿ ಎತ್ತಬ್ಯಾಡ ಕೆಳಗಿಡಲೇ’’ ಕಲ್ಲಪ್ಪ ಗದ ಗದ ನಡುಗಿ ಕೆಳಗ ಇಟ್ಟುಬಿಟ್ಟಾನು. ಕೈ ಮುಕ್ಕಂಡು ನಿಂತಾನು. ‘ಲೇ ಸುಳ್ಳು ಹೇಳಬ್ಯಾಡ ಗೋಣಿಸಬವ ಎತ್ಲಾಗ ಹೋದ’

ಯಾಕಡಿಗೆ ಹೋದನಲೇ | ಸೋಕೀರ ಮೂವ ತಾಜೀಜಿ |
ಹೇಳೇ ಪೂಜಾರಿ | ಸೋಕೀರ ಮೂವ ತಾಜೀಜಿ |

‘ಹೇಳಲೇ’ ಅಂತಾನ್ರೀ. ಆಗ ಪೂಜಾರ ಕಲ್ಲಪ್ಪ ಹೇಳ್ತೀನ್ರೀ ‘ಆ ಶಿವನಪ್ಪನವರೇ ಅವ್ನು ಭಿಕ್ಷುಕ ನಾಟ ಹೆಂಡ್ರು ಮಕ್ಳು ದಾಸ್ಯ ಇಲ್ಲ. ಮಠಮಾನ್ಯ ದ್ಯಾಸ ಇಲ್ಲ. ಇವತ್ತಿಗೆ ಒಂಬತ್ತು ವರುಷಾತು ನೋಡ್ರಿ, ಅವ್ನ ಮುಖ ನೋಡ್ಲಿಲ್ದ. ನಿಮ್ಮೂರು ಕಡಿಗೆ ಭಿಕ್ಷುಕ ಹೋದ. ಅವತ್ತು ನೋಡ್ದ ಮುಖ.

ಇಲ್ಲೇವರೆಗೆ ನೋಡೇ ಇಲ್ಲೋ | ಸೋಕೀರ ಮೂವ ತಾಜೀಜಿ |
ಪೂಜಾರಿ ಸುಳ್ಳು ಹೇಳುತಾನೇ | ಸೋಕೀರ ಮೂವ ತಾಜೀಜಿ |

ಪೂಜಾರಪ್ಪ ಸುಳ್ಳು ಹೇಳ್ತಾನ್ರೀ, ಶಿವನಪ್ಪ ಇದಿರಿಗೆ ಸೊಕ್ಕಿನಶಿವನಯ್ಯ, ಮೊದಲೇ ಸೊಕ್ಕಿನ ಜಾತಿ “ಅದದ್ದಾಗ್ಲಿ ದಂಡಿನ ಮಲ್ಲಣಾರ‍್ಯ ಆ ಪೂಜಾರೀನ ಏನ್ ನೋಡ್ತೀರಿ. ಅಡ್ಡ ಹಿಡ್ದು ಅವ್ನ ಕಡಿದು ಬಿಡ್ರಲೇ ಅತ್ಲಾಗ’’. ಅಂದಾಗ ಪೂಜಾರೆಪ್ಪ ದಬದಬ ಉಚ್ಚಿ ಹೊಯ್ಯಕೆಂಡ ಬಿಟ್ಟ. “ಅಯ್ಯೋ ಪರಮಾತ್ಮ ನಾನು ನೋಡಿದ್ರೆ ಪೂಜಾರಪ್ಪಾ ಹೊಡ್ದ್ರೆ ಸಾಯ್ತಿನಿ. ಬಡ್ದರೇ ಸತ್ತು ಹೊಕ್ಕೀನಿ. ಅವ್ನಂತೂ ಸತ್ಯವಂತ ಶರಣ ಎದ್ದೆದು ಬರ‍್ತಾನೆ. ರಾಜಾಧಿರಾಜ ಶಿವನಪ್ಪನವರೇ ಆ ತಡ್ರಿ ತಡ್ರೀ ನನ್ನ ಕಡಿಬ್ಯಾಡ್ರೀ ದನ್ದ ಮನಿಯಾಗೆ’’

ಮಲಗ್ಯಾನ ಹೋಗ್ರಯ್ಯೋ | ಸೋಕೀರ ಮೂವ ತಾಜೀಜಿ |
ಪೂಜಾರೀ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಕಲ್ಲಪ್ಪನ ಅಂತರಕ್ಕ ಹೊಗದಾರು. ಓಡಿ ಬಂದು ಆ ದನ್ದ ಮನಿಗೆ ಮುತ್ತಿಗೆ ಹಾಕಿ ಬಿಟ್ಟಾರು. “ಆ ದಂಡಿನ ಮಲ್ಲಣಾರ‍್ಯ ಗದ್ಲ ಮಾಡಬ್ಯಾಡಯ್ಯ ಗಲಾಟ ಮಾಡಬ್ಯಾಡ್ರಯ್ಯ’’ ಶಿವನಯ್ಯ ಕೆಂದಗುದರಿ ಮ್ಯಾಲ ಕುತಗಂಡು ತಿರುಗ್ತಾನು, ಮನಿ ಸುತ್ತರೀತಾನು, ಮೀಸಿ ತಿರುವುತಾನು, ಹಲ್ಲು ಕಡಿತಾನು, ದಂಡಿನ ಮಲ್ಲಣಾರ‍್ಯ ದನ್ದ ಮನಿಗೆ ಮುತ್ತಿಗೆ ಹಾಕಿಬಿಟ್ಟಾರು. ಶಿವನಯ್ಯ ಕೋಡಿಹಳ್ಳಿ[7] ಯಿಂದ ಒಂದು ಬಂಡಿ ಹುಲ್ಲುಕಡ್ಡಿ ತರ‍್ಸಿದ. ಪಿಡಿ ಕಟ್ಟಿದ, ಪಿಡಿಗೆ ಬೆಂಕಿ ಇಟ್ಟ, ಸೊಕ್ಕಿನ ಶಿವನಯ್ಯ ದನ್ದ ಮನಿಗೆ

ಸುತ್ತ ಬೆಂಕಿ ಇಟ್ಟಾರಯ್ಯೋ | ಸೋಕೀರ ಮೂವ ತಾಜೀಜಿ |
ದನ್ದ ಮನಿಗೋ ನನ್ನಾ ದೈವೇ | ಸೋಕೀರ ಮೂವ ತಾಜೀಜಿ |
ಅವರೇ ಬೆಂಕಿ ಇಟ್ಟಾರಯ್ಯೋ | ಸೋಕೀರ ಮೂವ ತಾಜೀಜಿ |
ಒಳಗೇ ಮಲಿಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ದಗ್ಗ ದಗ್ಗ ಉರಿಯತೈತೇ | ಸೋಕೀರ ಮೂವ ತಾಜೀಜಿ |
ದನದ ಮನೆ ಉರಿಯಾತೈತೇ | ಸೋಕೀರ ಮೂವ ತಾಜೀಜಿ |

ರಾಜ ಕೇಕಿ ಹಾಕಿ ನಗುತಾನು, ಟೀಕಾ ಕಿ ನಗುತಾನು, ಪಕಪಕ ನಗುತಾನು, ಕೋಡಿಹಳ್ಳಿಯವ್ರು ಒಂದು ಬಂಡಿ ಪುಂಡಿ ಕಡ್ಡಿ ಕೊಟ್ಟಿದ್ರಿಂದ ಒಂದು ಕೆಂಡ ಹೋಗಿ ಕೋಡಿಹಳ್ಳಿಗೆ ಬಿತ್ತಂತ್ರೀ. ಇಲ್ಲಿ ದನ್ದಮನಿ ಸುಟ್ಟಂಗೆ

ಕೋಡಿಹಳ್ಳಿ ಸುಡುತೈತಯ್ಯೋ | ಸೋಕೀರ ಮೂವ ತಾಜೀಜಿ |
ಸುಟ್ಟು ಬೂದಿ ಆಗುತೈತೇ | ಸೋಕೀರ ಮೂವ ತಾಜೀಜಿ |

ಅಲ್ಲಿ ಕೋಡಿಹಳ್ಳಿ ಸುಟ್ಟು ಬೂದಿ ಆತು. ಇಲ್ಲಿ ದನ್ದ ಮನಿ ಸುಟ್ಟು ಬೂದಿ ಆತು. ಆದ್ರಿಂದ ಕೋಡಿಹಳ್ಳಿಯವ್ರು ಪಂಡಿಕಡ್ಡಿ ಕೊಟ್ಟದಿರಂದ ‘ಸುಟ್ಟ ಕೋಡಿಹಳ್ಳಿ’, ‘ಸುಟ್ಟ ಕೋಡಿಹಳ್ಳಿ’ ಅಂತ ಕೋಡಿಹಳ್ಳಿಗೆ ಅಂತಾರ್ರೀ. ‘ಆ ದಂಡಿನ ಮಲ್ಲಣಾರ‍್ಯ ಇದ್ಯಾರಗೂ ಉಳ್ಕಂಡನೇನ ಬೆಂಕ್ಯಾಗ ’ ‘ಅಯ್ಯೋ ಅಗ್ನಿದೇವ ಭಾಳ ಕೆಟ್ಟೌನು. ಇದು ಹಸೇದು, ಇದು ಒಣಗಿದ್ದು. ಇದು ಬಿಸೇದು ಅಂಬಾದಿಲ್ಲ.ಎಲ್ಲಾ ಸುಟ್ಟಿ ಬೂದಿ ಮಾಡಿಬಿಡ್ತಾನ್ರೀ ಮಹಾ ಕೆಟ್ಟೋನು ಅಗ್ನಿದೇವ. ಇದ್ರಾಗ ಉಳ್ದಾನೇ ಎಲ್ಲ ಸುಟ್ಟು ಬೂದಿ ಆಗೇನು. ಇಲ್ಲಿಗೆ ಹೋತ್ರಿ. ಇಲ್ಲಿಗೆ ಸತ್ತ’. ‘ಆ ನಡಿಮತ್ತೇ ಮಠ ಹತ್ತಿಬಿಡ್ತಿನಿ. ಗದ್ಗಿ ಹತ್ತಿಬಿಡ್ತಿನಿ’. ಅಂದು ಮಠದ ಬಗ್ಲಕೆ ಬರ್ತಾನ್ರೀ. ದಂಡು ತಗಂಡು ಶಿವನಯ್ಯ. ಮಠದ ಬಾಗ್ಲಿಗೆ ಬಂದಾಗ ಗೋಣಿಸಬವೇಶ್ವರ ದನ್ದ ಮನಿಯಾಗ ಮಕ್ಕಂಡೋನು. ಬೆಂಕಿಯಾಗ ಸುಟ್ಟೋನು. ಮಠದ ಹೊರಗೆ ಅದು ಶಿವಸ್ಥಾನದ ಕಟ್ಟಿಮ್ಯಾಗೆ

ಪಂಚಪಗಡಿ ಆಡುತಾನೇ || ಸೋಕೀರ ಮೂವ ತಾಜೀಜಿ |
ದಂಡು ನೋಡಿ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |

ದಂಡುನೋಡಿ ನಗುತಾನು. ಪಂಚ ಪಗಡಿ ಆಡ್ತಾನು, ಶಿವನಯ್ಯ ಹಿಂದಕ್ಕ ತಿರುಗಿ “ಆ ದಂಡಿನ ಮಲ್ಲಣಾರ‍್ಯ ತಡಮಾಡಬ್ಯಾಡ್ರಿ ಬರ್ರೆಯ್ಯ’’ ಹಿಂದಕ್ಕೆ ತಿರುಗಿ ಹಿಂಗ ಅನ್ನಕರಗ ಮತ್ತೆ ಗೋಣಿಬಸವ ಕಂಡುಬಿಟ್ಟ. ಆ ದಂಡಿನ ಮಲ್ಲಣಾರ‍್ಯ ಅಲ್ಲೇ ಅದನ್ರಯ್ಯ.

ಹಿಡ್ಕಳ್ರೀ ಅಂಬತಾನೇ | ಸೋಕೀರ ಮೂವ ತಾಜೀಜಿ |
ಹಿಡ್ಕಳ್ರೀ ಅಂಬತಾನೇ | ಸೋಕೀರ ಮೂವ ತಾಜೀಜಿ |

ಅಂದತಕ್ಷಣಕ್ಕೆ ಹನ್ನೆರಡು ಸಾವಿರ ಬೇಡ್ಕಿ ಹಿಂದಕ್ಕ ತಿರುಗಿಬಿಟ್ಟಾರು. ಶಿವನಯ್ಯ ಹಿಂದಕ್ಕ ತಿರುಗ್ಯಾನು. ತಿರುಗ ತಡ ಮ್ಯಾಲಕೆದ್ದಾನು. ಗೋಣಿಬಸವೇಶ್ವರ, “ಹಡದ ತಾಯಿ ಕನಕಮ್ಮ, ವಡ್ಡೆಟ್ಟವ್ವ, ಪೂಜಾರಿ ಕಲ್ಲಪ್ಪ ಹೋಗ್ತಿನಪಾ ಇದೇ ಕಡೇದು ಇವತ್ತು ಮಠ ಬಿಟ್ಟು ಹೋದೌನು.

ಯಾಕಾಲಕ್ಕ ಬರೋದಿಲ್ಲೋ | ಸೋಕೀರ ಮೂವ ತಾಜೀಜಿ |
ಹೋಗಲೇನೋ ನನ್ನದೈವೇ | ಸೋಕೀರ ಮೂವ ತಾಜೀಜಿ |
ಹೋಗಲೇನೋ ಕಲ್ಲಪ್ಪನವರೇ ಸೋಕೀರ ಮೂವ ತಾಜೀಜಿ |
ಹೋಗ್ತೀನಮ್ಮಾ ಬೇಕಾದ್ದು ಬಂದ್ರೆ | ಸೋಕೀರ ಮೂವ ತಾಜೀಜಿ |
ಕಾಪಾಡೋ ಬೆಟ್ಟದ ಮಲ್ಲೋ | ಸೋಕೀರ ಮೂವ ತಾಜೀಜಿ |
ಕಾಯಪ್ಪೋ ಬೆಟ್ಟದ ಮಲ್ಲೋ | ಸೋಕೀರ ಮೂವ ತಾಜೀಜಿ |
ಬೆಟ್ಟದ ದಾರಿ ಹಿಡ್ದಾನಯ್ಯೋ | ಸೋಕೀರ ಮೂವ ತಾಜೀಜಿ |

ಬೆಟ್ಟದ ದಾರಿ ಹಿಡ್ದು ಮುಂದು ಮುಂದು ಗೋಣಿಬಸವ ಓಡಿ ಹೋಗ್ತಾನು. ಹನ್ನೆರಡು ಸಾವಿರ ಬೇಡ್ಕಿ ಹಿಂಬಾಲ ಹತ್ತಿ ಬಿಟ್ಟಾರು. ಆಗ ಅಂತಾನ ಶಿವನಯ್ಯ “ಆ ದಂಡಿನ ಮಲ್ಲಣಾರ‍್ಯ ಆಯ್ತಯ್ಯ ಅವ್ನೆಲ್ಲನ ಹೋಗ್ಲೆಪಾ ಗುದ್ನಾಕ[8] ಹೊಕ್ಕಳ್ಳಯ್ಯ ಅವ್ನ ಹಿಡ್ದು, ಅವ್ನ ಕಡ್ದು ಅವ್ನ ಡಿಭ ಬಿಟ್ಟು ಅವ್ನ ತಲಿ ತಗಂಡು ನನ್ನ ಸಿಂಹಾಸನಕ್ಕೆ ಬರ್ರೆಯ್ಯ’’ ಆ ದಂಡಿಗೆ ಹೇಳ್ದ ಶಿವನಪ್ಪ ಹಿಂದಕ್ಕೆ ತಿರುಗಿ ಹೋಗಿ ಹರಪನಳ್ಲಿಸಿಂಹಾಸನ ಸೇರ‍್ಕೆಂಡ. ಹನ್ನೆರಡು ಸಾವಿರಬೇಡ್ಕಿ ಗೋಣಿ ಬಸಪ್ಪಗೆ

ಹಿಂಬಾಲತ್ತ್ಯಾರಯೋಯ | ಸೋಕೀರ ಮೂವ ತಾಜೀಜಿ |
ಗುರುವೆ ಓಡಿ ಓಡಿ ಹೋಗುತಾನೇ |ಸೋಕೀರ ಮೂವ ತಾಜೀಜಿ |
ಗುರುವನ್ನ ಹಿಂಬಾಲತ್ತ್ಯಾರಯ್ಯೋ | ಸೋಕೀರ ಮೂವ ತಾಜೀಜಿ |

ಬೆಟ್ಟಕ ಹೋಗ್ಯಾನು. ಬೆಟ್ಟಕ ಹೋಗಿ “ಎಲ್ಲಿಗೋಗ್ಲಿ ಎತ್ತಾಗ ಹೋಗ್ಲಿ’’ ಅಂದು ಬೆಟ್ಟದ ಹುಲಿಗವಿಯ ಬಾಗ್ಲಿಗೆ ಹೋದ. ‘ಇದರಾಕ ಹೊಕ್ಕಂಡು ಬಿಡ್ಬೇಕಪಾ ಎಂಗ ಹಿಡೀತಾರೆ ಎಂಗ ಕಡಿತಾರೇ’ ಅಂದು ಗವಿಗೆ ಹರಕಿ ಕಟ್ಕೆಂಡ. ಏನಂತ. ‘ಏನಂತ, ‘ಅನಾಥನಮ್ಮಾ ನನ್ನಂಥ ಅನಾಥನಿಗೆ, ಪರದೇಶಿಗೆ ಹೊಟ್ಟೆಯೊಳಗೆ ಇಟ್ಕಂಡು ಜ್ವಾಪಾನ ಮಾಡಿದ್ರೆ ನನ್ನ ಮಠ ಮುಳುಗೋವರ‍್ಗೆ ನನ್ನ ಮಠದ ಮಕ್ಕಳನ್ನ ನಿನ್ನ ಬಾಗಿಲಿಗ

ಜ್ವಾಳೀ ನಾನೇ ಒಪ್ಪುಸ್ತೀನೇ | ಸೋಕೀರ ಮೂವ ತಾಜೀಜಿ |
ಹೊಟ್ಟಿ ಒಳಗೆ ಇಟ್ಟಗಾಳವ್ವೋ | ಸೋಕೀರ ಮೂವ ತಾಜೀಜಿ |

ಈತನ ಸಂಕಟಕ್ಕೆ ಬೇಡ್ಕಂಣಾ ಕರಗಾ, ಒಳಗೆ ಅದ್ವಾರೀ ಒಂಬತ್ತು ಹುಲಿಗಳು ಈತ ಬೇಡ್ಕೆಣದಕೆ, ಅಡ್ಡ ಬೀಳದ್ಕೆ, ಒಂಬತ್ತು ಹುಲಿಗಳು ನೋಡ್ತಾವೆ ಬಗ್ಗಿ ಬಗ್ಗಿ ನೋಡ್ತಾವ. ಆ ಹುಲಿ ಮಾತಾಡ್ತಾವ್ರೀ ಒಳಗೆ ‘ಯಾನಯ್ಯ ನಮ್ಮ ಗುರುವಪ್ಪಾ ನಮ್ಮ ಗುರವಿಗೆ ಬಂದ ಕಷ್ಟ ನಮಗೆ ಬಂದುಗಿದ್ದೀತು ಲೇ ಗವಿ ಹೋರಗ ಒಂಬತ್ತು ಹುಲಿಗುಳು ಗವಿ ಬಿಟ್ಟು ಬಂದು.

ಗುರುವಿನ ಪಾದಕ್ಕೆ ಬೀಳಾತಾವೇ | ಶಿವನೆನೆಯವ ದೇವೈ |
ಬಿದ್ದೇ ಬಿದ್ದೇ ಬೇಡುತಾವೇ | ಶಿವನೆನೆಯವ ದೇವೈ |

ಗುರುವಿನ ಪಾದ್ಯ ಬಿದ್ದು ಬೇಡ್ಕೆಂಡು ಒಂಬತ್ತು ಹುಲಿಗಳು ಗವಿಬಿಟ್ಟು ಹೋದ್ವಂತ್ರೀ. ಗೋಣಿಬಸವೇಶ್ವರ

ಗವಿಯಾಗ ಹೋಕ್ಕಾನಯ್ಯೋ | ಸೋಕೀರ ಮೂವ ತಾಜೀಜಿ |
ಗವಿಯಾಗ ಹೋಕ್ಕಾನಯ್ಯೋ | ಸೋಕೀರ ಮೂವ ತಾಜೀಜಿ |

ಗವಿಯಾಕ ಹೊಡ್ಕಂಡ. ಒಂದು ಉಡ, ಮೊಲ ಯಂಗ ರಾವುತತೋ[9] ಅಂಗ ರಾಯ್‌ಕೆಂಡು ಗವಿಯಾಗ ಮಕ್ಕಂಡಾನು. ಮಲಗಿದಾಗ ಅಂದ್ರ ನೋಡ್ರೀ ಹನ್ನೆರಡು ಸಾವಿರ ಬೇಡ್ಕಿ ಗವಿಯಾಗ ಬಂದು ಮುತ್ತಿಗಿ ಹಾಕಿಬಿಟ್ಟಾರು. “ಏನಯ್ಯ ಎಲ್ಲೆ ಹೋದ’’ ಈಗ ಗವಿಯಾಗ ಹೋದ “ಆ ಪರ‍್ವವಿಲ್ಲಸಿಕ್ಕ ಸಿಕ್ಕ ಇನ್ನ ಹೆದರಬ್ಯಾಡ್ರಯ್ಯ ಸಿಕ್ಕ ಬಿಟ್ಟ. ಗವಿಯತ್ರ ಬಂದು ಮುತ್ತಿಗಿ ಹಾಕಿಬಟ್ಟಾರು. ಗವಿ ಬಾಗಿಲಿಗೆ ಒಂದು ದಿಂಡು ಉಳುಸ್ಯಾರು. ಇವ್ನು ಗಾಡಿಕಾರ, ಮೋಡಿಕಾರ ಮಹಿಮಪುರುಷ ಅಂತ್ಹೇಳಿ. ಗವಿ ಬಾಗಿಲಿಗೆ ದಿಂಡು ಉಳಿಸಿ ನೋಡ್ರಿ ಕಾಗದಳ್ಳಿ, ದಿಡಿಗಾರ‍್ನಳ್ಳಿಯಿಂದ ಏಳು ಖಂಡಿಗಿ ಮೆಣಸಿನಕಾಯಿ ತರಿಸ್ಯಾರು, ಏಳು ಖಂಡಿಗಿ ಮೆಣಸಿನಕಾಯಿ ತರ‍್ಸಿ ಗವಿಗೆ ತುಂಬಿಟಾರು. ಹನ್ನೆರಡು ಸಾವಿರ ಬೇಡ್ಕಿ ಸೊಕ್ಕಿನ ಬ್ಯಾಡ್ರು ಗವಿಗೆ

ಹೂದಾರ[10] ಎತ್ತಾಯರಯ್ಯೋ | ಸೋಕೀರ ಮೂವ ತಾಜೀಜಿ |
ಅವ್ರು ಕ್ಯಾಕಿ ಹೊಡೆಯತಾರೇ | ಸೋಕೀರ ಮೂವ ತಾಜೀಜಿ |
ಠೀಕಾರಿ ನಗುತಾರಯ್ಯೋ |ಸೋಕೀರ ಮೂವ ತಾಜೀಜಿ |
ಅವ್ನೆ ತೆಲಿ ತಿರುಗಾತಾರೇ | ಸೋಕೀರ ಮೂವ ತಾಜೀಜಿ |

ಕೇಕಾಕಿ ನಗುತಾರು, ಕೇಕಿ ಹಾಕು ಕೂಗುತಾರು ‘ಲೇ ಮ್ಯಾಕ ಹತ್ತಿ ನೋಡ್ರಲೇ’ ನೋಡ್ರಿ ಮ್ಯಾಲಕತ್ತಿ ನೋಡುತಾರು. ಒಂದು ಸೂಜಿಗ್ತ್ರ ಹೋಗಿ ಕಡಿಗೆ ಹೊಂಟ್ರೇ ಸೊಕ್ಕಿನ ಬ್ಯಾಡ್ರು

ಉಚ್ಚಿ ಹೊಯ್ದೇ ಮುಚ್ಚುತಾರೇ | ಸೋಕೀರ ಮೂವ ತಾಜೀಜಿ |
ಗವಿಗೆ ಹೂದಾರ ಎತ್ತರಯ್ಯೋ | ಸೋಕೀರ ಮೂವ ತಾಜೀಜಿ |
ಗಾಟದಾಗ ದುದಿಯತಾನೋ | ಸೋಕೀರ ಮೂವ ತಾಜೀಜಿ |

ಸೊಕ್ಕಿನ ಬ್ಯಾಡ್ರು ಉಚ್ಚಿ ಹೊಯ್ದು ಮುಚ್ಚುತಾರೇ, ಕ್ಯಾಕಿ ಹೊಡಿತಾರೆ, ಗಾಟದಾಗ ಕುದೀತಾನ್ರೀ “ಅಲ್ಲಯ್ಯ ಇನ್ನು ಬದುಕ್ಯಾನೇನೋ’’ “ಏಯ್ ಯಾತ್ರ ಮಾತ ಆಡ್ತೀರಿ. ಈ ಗಾಟದಾಗ ಎಲ್ಲಿ ಬದುಕಿರ‍್ತಾನೆ. ಸತ್ತೋಗಿರ‍್ತಾನೆ. ನಡ್ರೆಯ್ಯ ಹೋಗಿರಾಜಗ ಹೇಳಾನು, ನಡ್ರೀ ಇನ್ನಾತು ಇನ್ನ ಸತ್ತೋಗಿ ಬಿಟ್ಟ’’ ಅಂದ್ಹೇಳಿ ಹನ್ನೆರಡು ಸಾವಿರ ಬೇಡ್ಕಿ ನೋಡ್ರಿ ಸ್ವಾಗಿ ದಿಕ್ಕಿಗೆ ಹಿಂಬಾಲತ್ತಿದಾಗ ನೋಡ್ರಿ ಗೋಣಿಬಸವೇಶ್ವರ ಕಾಟಗರ[11] ಕಾಲಾಗೆ ಹನ್ನೆರಡು ವರ್ಷ ಹೊಟ್ಟಿಗೆ ಅನ್ನ ಇಲ್ಲ, ನೀರು ನಿದ್ರಿ ಇಲ್ಲ ಅವ್ರು ಕಾಲವೊಳಗೆ, ಅಲ್ಲಿಗೆ ಮೈ ಬೆಚ್ಚಗಾತ್ರೀ ಗೋಣಿಬಸವೇಶ್ವರ. ಎಲ್ಲಿ ತನ್ಕ ಇವು ಕೈಯ್ಯಾಗ ಉರೀಲಪ್ಪಾ ಜೋಳಿಗ್ಯಾಗ ಇದ್ದಂತಾ ವಿಭೂತಿ ಬೂದಿ ತಗಂಡ ಅವ್ರು ಕಡೀಗೆ ಒಗದುಬಿಟ್ಟ. ಹನ್ನೆರಡು ಸಾವಿರ ಕಣ್ಣಗಳೇ

ಗೆಜ್ಜಗ ಬೆಳದೆ ಹೋಗುತಾವೇ | ಸೋಕೀರ ಮೂವ ತಾಜೀಜಿ |
ಗುರುವೆ ಕಣ್ಮ ಕಳದಾನಯ್ಯೋ | ಸೋಕೀರ ಮೂವ ತಾಜೀಜಿ |

ಹನ್ನೆರಡು ಸಾವಿರ ಕಣ್ಣು ಹೋದ್ವಂತ್ರೀ. ಕಣ್ಮು ಹೋದಬಳಿಕ ಕಲ್ಲಿಗೊಬ್ಬೋನು, ಮುಳ್ಳಿಗೊಬ್ಬೋನು ಮರಕೊಬ್ಬೋನು ಬಿದ್ದು ಬಿಟ್ಟಾರು. ಕಣ್ಣು ನೋವಾಗಿ ಇಲ್ದದಾದ ಬಳಿಕ ಏನು ಕಾಣವಲ್ದು. ಶಾಪ ಹಾಕಿದಂಗಾತ್ರೀ ಹನ್ನೆರಡು ಸಾವಿರ ಬೇಡ್ಕಿಂಗೆ ಎಲ್ಲೂ, ಮುಳ್ಳಾಗ ಬಿದ್ದು ಬಿಟ್ರು. ಆಗ ಬಿದ್ದಾಗ ಹನ್ನೆರಡು ಸಾವಿರ ಬೇಡ್ಕಿ ಮತ್ತೆ ಗೋಣಿಬಸಪ್ಪನ್ನ ಬೇಡ್ಕೆಂತಾರೆ. ಗುರುಗಳೇ ಗುರುಗಳೇ ಶಿವನಪ್ಪನ ಮಾತು ಕೇಳಿ ನಿನ್ನ ಮ್ಯಾಲೆ ಬಂದೀವ್ರೀ ಆದ್ರೆ ಇದೇ ಕಡೇದು ನಮಗೆ ಕಣ್ಣು ಕೊಟ್ರೇ.

ನಮ್ಮ ಊರಿಗೆ ಹೋಗತೀವೇ | ಸೋಕೀರ ಮೂವ ತಾಜೀಜಿ |
ಇಲ್ಲಿಗೆ ಕಣ್ಣ ಕೋಡೋ ಗುರವೇ | ಸೋಕೀರ ಮೂವ ತಾಜೀಜಿ |
ನಾವೇ ಹೆಂಡ್ರ ಮಕ್ಳ ಜೊತಿ ಕಳಿಯತೀವೀ | ಸೋಕೀರ ಮೂವ ತಾಜೀಜಿ |

ಬೇಡ್ಕೆಂತಾರು. ಅಡ್ಡ ಉದ್ದ ಬೀಳುತಾರು, ಸವರ‍್ಯಾಡತಾರು. ಗೋಣಿಬಸವೇಶ್ವರ ಅವರ ಅಂಗಾಲಾಚದ್ಕೆ ನಿಂತು ನೋಡಿದ. ‘ಆಹಾ ನೋಡ್ರೆಪಾ ಎಷ್ಟು ಬೇಡ್ಕಂತಾರೆ ಬಸವಾಗಿ ಬಾಳಿನಪಾ ಬಡವರಿಗೆ ಬೆನ್ನೂ ಕೊಟ್ಟೀನಿ. ಬೈಯೋರಿಗೆ ಬಾಯಿಕೊಟ್ಟೀನಿ. ಬಾಗಿ ಹೋಗಾರಿಗೆ ತಲಿಬಾಗಿ ಹೋಗೀನಿ. ಆದ್ರೆ ಇವ್ರಿಗೆ ಕಣ್ಣು ಕೊಡಬೇಕಪ್ಪಾ ಪಾಪಕ್ಕ ಮಖ ತೊಳಿಬಾರ್ದಪಾ’ ಅಂತೇಲಿ ಜೊಳಿಗ್ಯಾಗ ಇದ್ದಂತ ವಿಭೂತಿ ಬೂದಿ ತಗಂಡಾ ‘ಜಯ’ ಅಂದು ವಗದುಬಿಟ್ಟ. ವಗದಾಗ ಹನ್ನೆರಡು ಸಾವಿರ ಬೇಡ್ಕಿ ಕಣ್ಣು ಬೆಳ್ಳಿ ಬಟ್ಲು ಹೂಡಿ ದಂಗಾತಂತ್ರೀ ಎಲ್ಲಿಗೂ ಮತ್ತೆ ಕಣ್ಣ ಬಂದ್ವಂತೆ. ಕಣ್ಣು ಬಂದಾಗ ಸೊಕ್ಕಿನ ಬ್ಯಾಡ್ರು ವನಂತೆ ಮಾತಡ್ಕೆಂತಾರೇ.

ಎತ್ಲಾಗೋದೇ ಗೋಣಿಬಸವೋ | ಸೋಕೀರ ಮೂವ ತಾಜೀಜಿ |
ಯಾಕಡಿಗೆ ಹೋದನಲೇ | ಸೋಕೀರ ಮೂವ ತಾಜೀಜಿ |
ಹಿಂಬಾಲು ಹತ್ತರಲೇ | ಸೋಕೀರ ಮೂವ ತಾಜೀಜಿ |
ಪಾಣಿ ಪಳ್ಳಿ[12] ಹೊಡೀರಲೇ | ಸೋಕೀರ ಮೂವ ತಾಜೀಜಿ |
ಒಳಗೆರಿ[13] ಮುರೀರಲೇ | ಸೋಕೀರ ಮೂವ ತಾಜೀಜಿ |
ಮತ್ತೆ ಹಿಂಬಾಲತ್ತ್ಯಾರಯ್ಯೋ | ಸೋಕೀರ ಮೂವ ತಾಜೀಜಿ |

‘ಆ ಆಯ್ತಪಾ ಸೊಕ್ಕಿನಬ್ಯಾಡ್ರು ಮತ್ತೆ ಹಿಂಬಾಲ ಹತ್ತಿದ್ರು ನನ್ನ ಬಿಡಾದಿಲ್ಲ’. ಆಯ್ತಪಾ ಅಲ್ಲಿ ನೋಡ್ರಿ ಹರಪ್ನಳ್ಳಿ ಬ್ಯಾಡ್ರಿಗೆ ಗೋಣಿಬಸವೇಶ್ವರ ಶಾಪಾ ಕೊಡ್ತಾನ್ರೀ. “ಮಕ್ಳ ಮಕ್ಳ ಗುರು ಅನ್ನದಲೇ ನನ್ನ ಇಷ್ಟರಮಟ್ಟಿಗೆ ನಿರ್ಬಂಧ ಮಾಡ್ತಿರಪಾ ನಾನು ಕೊಟ್ಟ ಶಾಪ ಯಾವತ್ತು ತಪ್ಪದಿಲ್ಲ ನಿಮ್ಮ ಹೆಂಡ್ರು ತಲಿಮ್ಯಾಗಳ ಪುಟ್ಟಿ ಹೆಗಲ ಮ್ಯಾಗಳ ದೋಟಿ’’

ಯಾವಕಾಲಕ್ಕು ತಪ್ಪಬ್ಯಾಡೋ | ಸೋಕೀರ ಮೂವ ತಾಜೀಜಿ |
ಗುರುವೆ ಶಾಪ ಕೊಟ್ಟಾನಯ್ಯೊ | ಸೋಕೀರ ಮೂವ ತಾಜೀಜಿ |

ಶಾಪ ಕೊಟ್ನಂತ್ರೀ. ಆಗ್ಗೆ ಕೊಟ್ಟ ಶಾಪ ಹರಪ್ನಳ್ಳಿ ಬ್ಯಾಡ್ರಿಗೆ

ಇನ್ನವರಿಗೆ ಕೀಳಾಲೆಲ್ರೀ | ಸೋಕೀರ ಮೂವ ತಾಜೀಜಿ |
ಇನ್ನವರಿಗೆ ಇಳಾದಿಲ್ಲೋ | ಸೋಕೀರ ಮೂವ ತಾಜೀಜಿ |

ಇನ್ನಾವರಿಗೆ ಬಡತನ ತಪ್ಪಿಲ್ರೀ. ಹರಪ್ನಳ್ಳಿ ಬ್ಯಾಡ್ರಿಗೆ ಹೆಗಲಮ್ಯಾಗಲ ದೋಟಿ, ತಲಿ ಮ್ಯಾಗಲ ಪುಟ್ಟಿ ಹೊತ್ಗಂಡು ಹೆಂಡ್ರು ಕೌಳಿಹಣ್ಣು, ಬಿಕ್ಕಿಹಣ್ಣು ಮಾರ‍್ಕೆಂಡು ಜೀವನ ಮಾಡ್ತಾರೆ. ಹೊಲದಾಗ ಬೆಳಿ ಕಾಣ್ತತೆ. ಆದ್ರೆ ಮನಿಗೆ ಬರದ್ರಾಗ ಬೂದಿ ಅಕ್ಕಾತೆ. ಆಗ ಕೊಟ್ಟ ಶಾಪ ಇಲ್ಲೇವರ‍್ಗೆ ತಪ್ಪಿಲ್ಲ. ಅವ್ರಿಗೆ ಶಾಪ ಕೊಟ್ಟು ಇವುರ‍್ನ ಎಲ್ಲಿಗೆ ತಗೊಂಡು ಹೋಗ್ಬಾರ‍್ದಪಾ ಹಮ್ಮಿಗಿ ಹೊಳಿಗ ತಗಂಡೋಗಬೇಕು. ಹಮ್ಮಿಗಿ ಒಳಗೆ

ಓಡಿ ಓಡಿ ಹೋಗತಾನೇ | ಸೋಕೀರ ಮೂವ ತಾಜೀಜಿ |
ಹಮ್ಮಿಗಿ ಹೊಳಿಗೆ ಹೋಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಮತ್ತೆ ಹಿಂಬಾಲತ್ತ್ಯಾರಯ್ಯೋ | ಸೋಕೀರ ಮೂವ ತಾಜೀಜಿ |
ಬಿಡ್ದ ಹಿಂಬಾಲತ್ತ್ಯಾರಯ್ಯೋ | ಸೋಕೀರ ಮೂವ ತಾಜೀಜಿ |
ಹಮ್ಮಿಗಿ ಹೊಳೆಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |

ಹಮ್ಮಿಗಿ ಹೊಳಿಗೆ ಬಂದಾನು. ಹಮ್ಮಿಗಿ ಹೊಳಿಗೆ ಬಂದು ಗೋಣಿಬಸವೇಶ್ವರ ನಾಲ್ಕು ಮಂದಿ ಹಮ್ಮಿಗ್ರು ಹರಿಗೋಲ ನೆಡೆಸೋರ‍್ನ ಬೇಡ್ಕೆಂತಾನೆ. ‘ಮಕ್ಳ ಮಕ್ಳ ತಡಮಾಡ ಬ್ಯಾಡ್ರಪಾ ನಾನ್ ಗುರುವಪಾ ನನ್ನ ಆಕಡಿ ದಡ ಸೇರ‍್ಸರಪಾ’. ಬೇಡ್ಕಣ ಕರಗಾ ನಾಲ್ಕು ಮಂದಿ ಹಮ್ಮಿಗ್ರು ಮದ್ಯಪಾನ ಮಾಡ್ಯಾರೆ ಎಚ್ಚರಿಲ್ಲ ಅವ್ರಿಗೆ, ‘ಲೇ ಗುರುವಾದ್ರೆ ನೀನಾದಿ ಕುತ್ಗಳ, ಇವ್ನು ಗುರು ಅಂತಂದು, ಪರಮಾತ್ಮ ಅಂತಂದು ಇವ್ನಬ್ಬೊನಿಗೆ ಹರಿಗೋಲ ಆಕಕಂತೆ. ಜನ ಬರಲಯ್ಯ, ಕರಕಂಡು ಹೊಕ್ಕೀವಿ ಕುತ್ಗಳ. ಗುರುವಾದ್ರೆ ನೀನಾದ. ‘ಅಲಕ್ಷ ಮಾಡ್ತಾರು, ಕೀಟ್ಲೆ ಮಾಡ್ತಾರು. ‘ಮಕ್ಳ ಮಕ್ಳ ನನಿಗಿವತ್ತು ಕಷ್ಟ ಐತಪ್ಪಾ. ಅವ್ರು, ಬಂದ್ರ, ನನಿಗೆ ಉಳುವಿಲ್ಲಪಾ ಆದ್ರೆ ನಾನು ಅನಾಥ ಅದೀನಿ ಮೊದ್ಲು ಕಳ್ಸಿಬಿಡ್ರಪಾ’ ಏನ್ ಹೇಳಿದ್ರು ಅವರು ಗುರುವಿನ ಮಾತ್ ಕೇಳಲಿಲ್ಲಾ ಅಲಕ್ಷ ಮಾಡ್ ಬಿಟ್ಟರು. ಸೈನ್ಯ ಸನೀಲೆ[14] ಬಂದ್ ಬಿಡ್ತು. ‘ಅಲೇಲೇ ನಾನು ಉಳೀದಿಲ್ಲ, ದಂಡು ಬಂತಪಾ ಈಗೇನ್ ಗತಿ ಮಾಡ್ಲಿ ಹೊಳಿ ಅಡ್ಡಾತು’ ಅಂದು ಏನ್ ಮಾಡ್ತಾನೆ. ಪಾತಾಳ ಗಂಗಮ್ಮಗೆ ಬೇಡ್ಕಂತಾನೆ. ‘ನೋಡಮ್ಮ ನಾನು ಅನಾಥ ಪರದೇಶಿ, ನನಿಗೆ ತಾಯಿಲ್ಲ, ತಂದಿಲ್ಲ ಅನಾಥ ನನ್ನ ಹೊಟ್ಟ್ಯಾಗ ಇಟ್ಕಂಡು ಜ್ವಾಪಾನ ಮಾಡಿದ್ರೆ ಆ ಕಡಿ ದಾಡಿಸಿದ್ರೆ, ಬತ್ಲ ಬಾಯಿ ಕಡ್ಸಿತೀನಿ ಕರಿಸೀರಿ ಉಡ್ಸೀನಿ. ಮುತ್ತಿನ ಉಡಿ ಅಕ್ಕಿ ತುಂಬ್ಸತೀನಿ. ನಿನ್ನ.

ನಿತ್ಯಾಪೂಜಿ ಮಾಡುತೀನೇ | ಸೋಕೀರ ಮೂವ ತಾಜೀಜಿ |
ಹೊಟ್ಟವಳಗ ಇಟ್ಕಾಳವ್ವೋ | ಸೋಕೀರ ಮೂವ ತಾಜೀಜಿ |
ಬಿದ್ದೆ ಬಿದ್ದೇ ಬೇಡುತಾನೇ | ಸೋಕೀರ ಮೂವ ತಾಜೀಜಿ |

ಬಿದ್ದು ಬಿದ್ದು ಬೇಡ್ತಾನು. ನೋಡ್ರಿ ಪಾತಾಳಗಂಗಮ್ಮ ಪಾತಾಳಕ್ಕೋಗಿ ಬಿಟ್ಟಾಳು. ಪಾತಾಳ ಗಂಗಮ್ಮ ಆನಿ ಉದ್ದ ತೆರಿಗಟ್ಟಿ ಅಂಗ ನಿಂತ್ಗಂಡು ಬಿಟ್ಟಾಳು. ಗುರುವಿಗೆ ದಾರಿ ಆತಂತ್ರೀ ಆಗ ತಡ ಮಾಡ್ದಂಗೆ ಗೋಣಿಬಸವೇಶ್ವರ ಆಳಲಿಗೊಂಗಡಿ[15] ಮುರ‍್ದು ಗದ್ದಿಗಿ ಮಾಡ್ಯಾನು, ಗದ್ದಿಗಿ ತಗಂಡು ನೀರಿನ ಮ್ಯಾಲಿಟ್ಟು ಗದ್ದಿಗಿ ಮ್ಯಾಲ ಕುತ್ಗಂಡ ಕೈಗೆ ಬೆತ್ತ ತಗಂಡ ಹುಟ್ಟು ಮಾಡ್ಕೆಂಡ ‘ಬಸವಾ’ ಅಂದ ಹರಿಗೋಲ ತಿರುವಿದಂಗೆ

ಗುರುವಿನ ಗದ್ದಿಗಿ ತಿರುಗಾತೈತೇ | ಶಿವನೆನೆಯವ ದೇವೈ |
ಗುರುವೇ ಹೊಳೆಯಾಗ ಹೋಗಾತಾನೇ | ಶಿವನೆನೆಯವ ದೇವೈ |
ಗದ್ದಿಗಿ ಮ್ಯಾಲೇ ಹೋಗಾತಾನೇ | ಶಿವನೆನೆಯವ ದೇವೈ |

ಗದ್ದಿಗಿ ಮ್ಯಾಲ ಹೋಕ್ತಾನ್ರೀ ನೀರಾಗ. ನಾಲ್ಕು ಮಂದಿ ಹಮ್ಮಿಗ್ರು ‘ಅಲ್ನೋಡಲೇ, ಅಲ್ಲೋ ಅವ್ನೋಬ್ಬನೆ ಎಂಗ ಹೊಕ್ಕಾನ್ ನೋಡೋ

ಪಕ ಪಕ ನಗುತಾರಯ್ಯೋ | ಸೋಕೀರ ಮೂವ ತಾಜೀಜಿ |
ಬಿದ್ದೆ ಬಿದ್ದೆ ನಗುತಾರಯ್ಯೋ | ಸೋಕೀರ ಮೂವ ತಾಜೀಜಿ |
ಗುರುವಿನ ಗದ್ದಿಗಿ ಹೋಗತೈತೇ | ಸೋಕೀರ ಮೂವ ತಾಜೀಜಿ |
ಗುರುವಿನ ಗದ್ದಿಗಿ ಹೋಗತೈತೇ | ಸೋಕೀರ ಮೂವ ತಾಜೀಜಿ |

ಆ ಕಡೆ ದಂಡಿಗೆ ಹೋಗ್ಯಾನು ಆ ಕಡೆ ದಂಡಿಗೆ ಹೋದ ಬಳಿಕ ನಾನಕು ಮಂದಿ ಹಮ್ಮಿಗರು ಮದ್ಯಪಾನ ಮಾಡಿದ್ದು ನಿಚ್ಚಳಾದ್ರು. ‘ಮೊದ್ಲೇ ಆತ ಹೇಳಿದ್ನಪಾ ನಾನೊಬ್ಬ ಗುರುವು, ದೊಡ್ಡ ಮಹಾತ್ಮ ಆಕಡೆ ದಾಟಿಸ್ರೀ ಅಂದ ಪಾಪ. ನೋಡ್ಲೇ ನೀರಿನ್ ಮ್ಯಾಲ ಒಬ್ಬನ ಹೋಗ್ಬಿಟ್ಟ.’ ಗೋಣಿಬಸವೇಶ್ವರಗ ಬೇಡ್ಕಂತಾರೆ ಆವಾಗ ಬೇಡ್ಕೆಣಕರಗ ಗೋಣಿಬಸವೇಶ್ವರ ನಾಕು ಮಂದಿ ಹಮ್ಮಿಗರಿಗ ಶಾಪ ಕೊಡ್ತಾನ್ರೀ. ‘ಮಕ್ಳ ನಾನೇನು ಬೇಡ್ಕೆಂಡ್ರೂ ಕೂಡ ನಿಮಗೆ ಕರುಣ ಹುಟ್ಟಲಿಲ್ಲ. ನನ್ನ ಈ ಕಡಿಗೆ ತಗಂಡು ಬರ‍್ಲಿಲ್ಲ. ಹೋಳಿ ಹುಣ್ಣಿಮೆ ದಿನಾ

ನಿಮ್ಮ ಮನಿ ಸುಡಾಲಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ಶಾಪ ಕೊಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |

ಶಾಪ ಕೊಟ್ನಂತ್ರೀ. ಆ ಕಾಲಕ್ಕ ಕೊಟ್ಟ ಶಾಪ ಈಗಲೂ ಅಂಬಿಗರಿಗೆ ಐತ್ರೀ. ಇನ್ನಾವರಿಗೆ ತಪ್ಪಿಲ್ರೀ. ಅವರು ದ್ಯಾಸ[16] ಮಾಡ್ಕೆಂಡು ಹೋಳಿ ಹುಣ್ಣಿಮೆ ದಿನಬ್ಬಾರೆ[17] ಗುಡ್ಸಲಾಕಿ ಅದಕ್ಕೆ ಬೆಂಕಿ ಇಡ್ತಾರೆ. ಮತ್ತೆ ದ್ಯಾಸ ಮರತ್ರೆ ಅವರ ಬಾಳೇವು ಮಾಡಾ ಮನಿಸುಡ್ತಾವ್ರಿ.

ಗದ್ದಿಗಿ ತಗಂಡ ಅದನ್ನ ಬಿಚ್ಚಿದ್ದಂತೆ. ನೂರ ಒಂದು ಲಿಂಗ ಪರ‍್ವತವಾದ್ವಂತೆ. ಆ ಲಿಂಗ ಕಲ್ಲಾಗ ಹುಟ್ಟದ್ವಂತೆ. ಆ ಲಿಂಗ ನೋಡಿ ‘ಇಲ್ಲಿ ನೂರೊಂದು ಲಿಂಗ ಪರ‍್ವತವಾದ್ವಪ್ಪ ಇದು ಲಿಂಗದಳ್ಳಿ’ ಅಂದ ಲಿಂಗದಳ್ಳಿ ಎಂದು ಬೆಟ್ಟಕ ನೋಡಿ ಕೈ ಬೀಸಿದ ಹುಲಿರಾಜ.

ಓಡಿ ಓಡಿ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಓಡಿ ಓಡಿ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |

ಈ ಹುಲಿ ಕತೆ ಆಗಿರ‍್ಲಿ. ಇತ್ಲಾಗ ಹನ್ನೆರಡು ಸಾವಿರ ಸೊಕ್ಕಿನ ಬ್ಯಾಡ್ರು ಓಡಿ ಬಂದು ಬಿಟ್ಟಾರು. ‘ಎಲ್ಲಿ ಹೋದ್ನಂಲೇ, ಎತ್ಲಾಗ ಹೋದ್ನಲೇ. ‘ಅಯ್ಯೋ ಹೊಳಿ ದಾಟಿಬಿಟ್ಟು ಓಡೋದಾ’. ‘ಅಲ್ಲಲ್ಲೇ ಎಂಗ ಮಾಡನಲೇ ಮತ್ತೇ. ಅಲ್ಲಪಾ ಈಗ ನಾವೆಲ್ಲರೂ ತೆಪ್ಪದಾಗ ಕುತ್ಗಂಡು ಹೊಕ್ಕೀವು ಬಿಡು ಆಕಡಿಗೆ. ಅದು ಮೆಲ್ಲಕ ಹೋದ್ರೆ ಆಕಡಿಗೆ ಹೋಗತ್ಗೆ ಅವ್ನು ಕಣ್ಣಿಗೆ ಕಾಣ್ದಂಗ ಹೋಗಿ ಬಿಡ್ತಾನೆ. ಸಿಗಾದಿಲ್ಲ’ ಅಂದು ‘ಅವ್ನೋದ ಜಾಡ್ನಾಗ ನಾವು ಹೋಗಾನು ನಡ್ರೆ’ ಅಂದು ಹನ್ನೆರಡು ಸಾವಿರ ಬೇಡ್ಕಿ ಹೋಳಿಯಾಕೇ

ದುಮುದುಮು ಹಾರುತಾರೇ | ಸೋಕೀರ ಮೂವ ತಾಜೀಜಿ |
ನಾನು ಮುಂದ ನೀನು ಮುಂದ | ಸೋಕೀರ ಮೂವ ತಾಜೀಜಿ |
ಹೊಳಿಯಾಕೆ ಹಾರುತಾರೇ | ಸೋಕೀರ ಮೂವ ತಾಜೀಜಿ |

ಹೊಳಿಯಾಕ ಹಾರಿದ ತಕ್ಷಣಕ್ಕೆ ಹನ್ನೆರಡು ಸಾವಿರ ಬೇಡ್ಕಿರ ಗಂಗಮ್ಮ.

ತಗಂಡೇ ಹೋಗುತಾಳೇ | ಸೋಕೀರ ಮೂವ ತಾಜೀಜಿ |
ಮುಳುಗತಾರೇ ಏಳುತಾರೇ | ಸೋಕೀರ ಮೂವ ತಾಜೀಜಿ |
ಗೋಣಿಬಸವ ಅಂಬಾತಾರೇ | ಸೋಕೀರ ಮೂವ ತಾಜೀಜಿ |

ಮುಳುಗುತಾರು ಏಳುತಾರು ಗೋಣಿಬಸವನ್ನ ಧ್ಯಾನ ಮಾಡ್ತಾರೆ. ಹನ್ನೆರಡು ಸಾವಿರ ಬ್ಯಾಡ್ರು, ಹಮ್ಮಿಗಿ ಹೊಳಿಯಾಗೆ ಸತ್ತು ಹೋದ್ರಂತೆ, ನೀರಾಗ ಬಿದ್ದು. ಆಮೇಲೆ ಗೋಣಿಬಸವೇಶ್ವರನತ್ರ ಬಂದು ಹುಲಿರಾಜ ಕೈ ಮುಗಿತಂತೆ. ಹುಲಿಮ್ಯಾಲೆ ಕೈ ಆಡಿದ, ಗಾಗಡಿ ಬಳ್ಳಿ ಅರ್ ಕಂಡ ಕಡಿವಾಣ ಅಕ್ಕೆಂಡ, ಹುತ್ತಗ ಕೈಯಾಕಿ ಸರ್ಪನ ಹಿಡ್ಕಂಡ. ಹುಲಿಮೇಲೆ ಕುತ್ಗಂಡ. ಹೊಳಿಬಿಟ್ಟು

ಹಮ್ಮಿಗ್ಯಾಗಿ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಗುರುವೆ ಹೋಳಿಯ ದಾಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಹಮ್ಮಿಗಿಗೆ ಹೊಂಟ. ಊರು ಸನೀಪ ಹೋದ ಆಗ ಹೇಳ್ತಾನು ಹುಲಿರಾಜಗ, ‘ಹುಲಿರಾಜ ಈಗ ನಿನ್ನ ಕರ‍್ಕಂಡು ಊರಾಕ ಹೋಗ್ಬಿಡ್ತ ಇದ್ದೆ. ನಿನ್ನ ನೋಡಿ ಬಿಟ್ರೆ ನನ್ತಾಗ ಒಬ್ಬರೂ ಬರಾದಲ್ಲ, ಎದಿರಿಬಿಡ್ತಾರೆ, ಕದ ಮುಚ್ಗೆಂಡು ಬಿಡ್ತಾರೆ, ನನಿಗೆ ಯಾರು ಭಿಕ್ಷಾ ನೀಡಾದಿಲ್ಲ. ಊರತನ್ಕ ಬದ್ನೆಪ್ಪಾ ನನಿಗೆ ಸಾಕು ನೀನು ಬೆಟ್ಟ ಸೇರ‍್ಕ ನಾನು ಊರಾಕ ಹೋಗಿಬಿಡ್ತೀನಿ. ‘ಆಗ ಹುಲಿ ಕೈಬಿಟ್ನಂತೆ. ಹುಲಿ ಬೆಟ್ಟಕ್ಕ ಹೋತಂತ್ರೀ ಗೋಣಿಬಸವೇಶ್ವರ ಮುಂಗೈ ಜೋಳಿಗಿ ಅಕ್ಕೆಂಡ, ಬೆತ್ತ ಹಿಡ್ಕಂಡ ಹಮ್ಮಿಗ್ಯಾಗ

ಗುರುವೇ ಭಿಕ್ಷಾ ಮಾಡಾತಾನೇ | ಶಿವನೆನೆಯವ ದೇವೈ |
ಹಮ್ಮಿಗ್ಯಾಗೋ ನನ್ನ ದೈವೇ | ಶಿವನೆನೆಯವ ದೇವೈ |
ಕಂತಿಯ ಭಿಕ್ಷಾ ಮಾಡಾತಾನೇ | ಶಿವನೆನೆಯವ ದೇವೈ |
ಊರಾ ಎಲ್ಲಾ ಮುಗದೇ ಇಲ್ಲೋ | ಶಿವನೆನೆಯವ ದೇವೈ |

ಊರೆಲ್ಲ ಭಿಕ್ಷಾ ಮಾಡ್ತಾನ್ರೀ ಕಂತಿ ಭಿಕ್ಷಾ. ಗೋಣಿಬಸವೇಶ್ವರ ಶಿವನಪ್ಪನ ಕಾಲಾಗೆ ಹೊಳಿದಾಟಿ

ಹಮ್ಮಿಗಿ ತಾನೇ ಸೇರ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಹಮ್ಮಿಗಿ ಸೇರ‍್ಕೆಂಡು. ಭಿಕ್ಷಾ ಮಾಡ್ಕೆಂಡು ಮತ್ತ್ಯಾಕಿರಬೇಕು ಅತ್ಲಾಗ ಮುಂದು ಹೋಗಿ ಬಿಡಾನು, ಅಂದು ಹಮ್ಮಿಗಿ ಮುಗಿಸಿಕೊಂಡು, ಗುಮ್ಮಗೋಳ ದಾರಿ ಹಿಡ್ದ. ಗುಮ್ಮಗೋಳ ಹಮ್ಮಿಗಿ ನಡು ಮದ್ಯೆ ಒಂದು ತೋಟ ಬಂತ್ರೀ ಹಮ್ಮಿಗಿ ತ್ವಾಟಕ್ಕ ಬಂದ. ಅಲ್ಲಿ ತ್ವಾಟದ ದುಂಡಾಳು, ಸಂಬ್ಳದಾಳು ಕೇಳ್ತಾನು. ‘ಆ ಮಗು ಮಗು ನೀನು ಅರಸಾಗು, ಅಳುಮಗನಾಗು

09_35_GBK-KUH

ಇಲ್ಲಿಗೆ ಹನ್ನೆರಡು ವರ್ಷ ಹೊಟ್ಟಿಗಿ ಅನ್ನ ಇಲ್ಲ. ಕಣ್ಮಿಗೆ ನಿದ್ದಿ ಇಲ್ಲ. ನಿನ್ನ ತ್ವಾಟದಾಗೆ ಒಂದು ತೆಂಗಿನ ಕಾಯಿ ಕೊಡಪಾ ಕುಡ್ಡು ಹೋಗಿ ಬಿಡ್ತೀನಿ. ನಾನು ಒಬ್ಬ ಗುರು ಬಂದೀನಿ ಅಲಕ್ಷ ಮಾಡಬ್ಯಾಡಪಾ’. ಕೇಳ್ದಾಗ ನೋಡ್ರಿ ಆಳ ಮಗ ಹೇಳ್ತಾನು. ‘ಏ ಗುರವಾದ್ರೆ ನೀನಾದೆ ಮುಂದಕ್ಕ ದಯಮಾಡ್ರಿ. ದಯಮಾಡ್ರೀ’ ಅಂದ. ‘ಒಂದೇ ಒಂದು ಕಾಯಿ ಕೊಡಾ ಒಂದೀಟು ತಿಂದು ಹೊಕ್ಕೀನಿ’ ‘ಅಯ್ಯೋ ನಾನು ಅರಸಲ್ರೀ ಆಳುಮಗ. ಈಗ ಕೊಡ್ತೀನಿ ಬಿಡು, ಸಾಯಂಕಾಲ ನಮ್ಮ ನೌಕರ ಬಂದು ನನ್ನ ಬಡಿತಾನ ಹೋಗ್ರೀ’ ‘ಮಗು ನನ್ನ ಕಾಲಾಗ ಬಡ್ಸಿಕೆಳಪಾ, ಒಂದು ಕಾಯಿ ಕೊಡಪಾ ಗುರುವಿಗೆ ಇಲ್ಲ ಅನ್ಬಾರ್ದು’, ‘ಅಲೆಲೇ ಯಾವಾಗ ನೋಡಿದ್ರು ಬರೀ ಗುರು, ಗುರು ಅಂತಿ. ಬರ್ರೀ ಒಳಕ. ಈ ತೆಂಗಿನ ಮರ ಹುಟ್ಟಿ ಹನ್ನೆರಡು ವರ್ಷ ಆತು. ಇದು ಕಾಯಿಬಿಟ್ಟಿಲ್ಲ ಬಂಜಿ ಮರ. ಇದ್ನ ಕಾಯಿ ಬಿಡಂಗ ಮಾಡಯ್ಯ ಒಂದಲ್ಲ ಎಲ್ದು ಕೊಡ್ತೀನಿ. ನಮ್ಮ ಸವುಕಾರು, ಬಡದ್ರೆ ಬಡೀಲಿ’ ಗೋಣಿಬಸವೇಶ್ವರ ಮರ‍್ದ ಮ್ಯಾಲಕ್ಕ ನೋಡ್ದ ಆ ಸುಳಿಗೆ ತನ್ನ ದೃಷ್ಟಿ ಬಿಟ್ಟ. ಈಬುತ್ತಿ ತಗಂಡು ಮ್ಯಾಲಕ್ಕ ಉಗ್ಗಿದ ಜೋಳಿಗಿ ಅಕ್ಕೆಂಡು ಬೆತ್ತ ಹಿಡ್ಕಂಡು ಗೋಣಿ ಬಸವೇಶ್ವರ ತೆಂಗಿನ ಮರ ತಿರುಗುತಾನ್ರೀ. ಗೋಣಿಬಸಪ್ಪ ತಿರುಗಿದಂಗೆ…

ತೆಂಗಿನಮರ ತಿರುಗಾತೈತೇ | ಶಿವನೆನೆಯವ ದೇವೈ |
ಮೂರುಸುತ್ತಾ ತಿರುಗ್ಯಾನಯ್ಯೋ | ಶಿವನೆನೆಯವ ದೇವೈ |

ಸುತ್ತ ತಿರುಗಿ ಜೋಳಗಿ ಒಡ್ಡಿದ ತಕ್ಷಣಕ್ಕೆ ನೋಡ್ರಿ ಚಟಚಟ ಹೊಂಬಾಳಿ ಹೊಡ್ದು ಪಟ ಪಟ ಕಾಯಿಬಿಟ್ಟು ಆ ಮರ ಬಗ್ಗಿ ನೀಡಾಕ ಹೋತಂತ್ರೀ

ಗುರುವೇ ಜೋಳಿಗಿ ಒಡ್ಡ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ತೆಂಗಿನ ಮರವೇ ಬಗ್ಗಿ ನೀಡುತೈತೇ | ಸೋಕೀರ ಮೂವ ತಾಜೀಜಿ |

ಮಗು ನೋಡ್ದೇನಪಾ ಅಂದ. ಆಗ ಆಳು ಓಡಿ ಬಂದು ಗುರುವಿನ ಪಾದಹಿಡ್ಕಂಡು ‘ಗುರುಗಳೇ ನೀವ್ ದೊಡ್ಡ ಮಹಾತ್ಮರು. ಕಾಣದ ಕಣ್ಣು ಕೇಳಲ್ದ ಕಿವಿ ತಪ್ಪಾತ್ರೀ. ಕ್ಷಮಿಸಬೇಕ್ರೀ.’ ಅಂದು ಗುರುವಿನ ಪಾದ ಹಿಡ್ಕಂಡು ಬೇಡ್ಕಂಡ್ನಂತೆ. ‘ಆತು ಮಗು ಹೋಗ್ತೀನಪ್ಪಾ ಮುಂದೆ’. ನೋಡ್ರೀ ಹಮ್ಮಿಗಿ ತ್ವಾಟದಾಗೆ ಆಗ ಬಗ್ಗಿದ ತೆಂಗಿನ ಮರ ಈಗ್ಗೆ ಆದ್ರೂ ಎದ್ದಿಲ್ರೀ. ಬಗ್ಗಿದ್ದು ಬಗ್ಗಿದಂಗೇ ಐತ್ರೀ. ‘ಆ ಮಗು ಹೋಗ್ತಿನಿ’. ಅಂದ. ಗುರುಗಳೇ ಗುರುಗಳೇ ನನ್ನ ಮಾತು ಕೇಳ್ರಿ ಅಲಕ್ಷ ಮಾಡಬ್ಯಾಡ್ರೀ. ‘ಮತ್ತೇನು ಮಗು’ ‘ಏನಿಲ್ಲ ಈ ತ್ವಾಟ ಬ್ಯಾಡ, ಸವಕಾರ ಬ್ಯಾಡ. ನಿನಗೆ ಆಳು ಮಗನಾಗ್ತೀನಿ. ನಿನಗೆ ನಾನು ಶಿಷ್ಯ ಆಗ್ತೀನಿ.

ನಿನ್ನ ಹಿಂದೆ ಬರ್ತಿನಯ್ಯೋ | ಸೋಕೀರ ಮೂವ ತಾಜೀಜಿ |
ನನ್ನ ಕರ್ಕಂಡೋಗೋ ಗುರುವೇ | ಸೋಕೀರ ಮೂವ ತಾಜೀಜಿ |

‘ಆ ಮಗು ತಮ್ಮಿಷ್ಟ ಬಾರಪ್ಪಾ’ ಆಗ ತ್ವಾಟದಾಗೆ ಆಳು ಮಗ್ನ ಕರ‍್ಕಂಡು. ‘ಮಗು ಆಳಮಗಬ್ಯಾಡ, ಶಿಷ್ಯ ಬ್ಯಾಡಪಾ, ನನಗ ಬಿಲ್ಲಿಜವಾನ[18] ಆಗಪ್ಪಾ’ ಅಂದು ಬಿಲ್ಲಿ ಜವಾನನ ಮಾಡ್ಕೆಂಡು ಮುಂದು ಮುಂದು ಬಿಲ್ಲಿ ಜವಾನ, ಹಿಂದೆ ಹಿಂದೆ ಗೋಣಿಬಸವೇಶ್ವರ, ಹಮ್ಮಿಗಿ ತ್ವಾಟ ಬಿಟ್ಟೇ

ಗುಮ್ಮಗೋಳಕ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಗುರುವೇ ಹಮ್ಮಿಗಿ ಗುಮ್ಮಗೋಳಕ ಹೋಗುತಾರೇ | ಸೋಕೀರ ಮೂವ ತಾಜೀಜಿ |[1] ನುರ‍್ತಿಲ್ಲ – ಸವೆದಿಲ್ಲ

[2] ಎಡಮುರಗಿ – ಸುತ್ತಿ ಕಟ್ಟುವುದು

[3] ಕುದುರೆ ಕೊಳಗ ಎಲಿ – ನೀರೊಳಗೆ ಬೆಳೆಯುವ ಸುಂದರವಾದ ವೀಳ್ಯದೆಲೆ

[4] ಹಸಿಪೆಳಿ – ಎಳೆಮರ

[5] ಗ್ವಾಜಲ – ಗಂಜಳ

[6] ಮಿಸುಕು – ಅಲ್ಲಾಡು

[7] ಕೋಡಿಹಳ್ಳಿ – ಕೊಟ್ಟುರು ಹತ್ತಿರವಿರುವ ಗ್ರಾ

[8] ಗುದ್ನಾಕ – ಸಮಾಧಿ

[9] ರಾವುತ – ತವೆಯುತ

[10] ಹೂದಾರ – ಮೆಣಸಿನ ಘಾಟು

[11] ಕಾಟಗಾರ – ಕಾಟ ಕೊಡುವವ

[12] ಪಾಣಿಪಳ್ಳಿ – ಬಾರು ಕೋಲು

[13] ಒಳಗೆರಿ – ಮೊಣಕಾಲು

[14] ಸನೀಲೆ – ಸಮೀಪ

[15] ಅಳಿಲ ಗೊಂಗಡಿ – ಕಂಬಳಿ

[16] ದ್ಯಾಸ – ನೆನಪು

[17] ದಿನಬ್ಬಾರೆ – ದಿನಾ ಒಬ್ಬರೆ

[18] ಬಿಲ್ಲಿಗೆ ಜವಾನ – ಸೈನಿಕ