(ಒಟ್ಟು ಕತೆಯ ಮಧ್ಯಕ್ಕೆ ಘಟನೆ ಸಂಭವಿಸುತ್ತದೆ. ಮಾಟದ ಅಂಗಿಯನ್ನು ಸ್ವತಃ ಸೋದರ ಮಾವನೇ ಬಂದು ತೊಡಿಸಿ ಅವನ್ನುಕೊಲ್ಸಿಸುತ್ತಾನೆ. ಹರಪನಹಳ್ಳಿ ಸಂನ್ಯಾಸಿ ತೋಟದಲ್ಲಿ ಇದ್ದ ಬಾಲ ಬಸಪ್ಪನಿಗೆ ಗುರುವ ಸತ್ತದ್ದು ಅರಿವಾಗುತ್ತದೆ.ಅವನು ಅಸ್ಪೃಶ್ಯ ಮಠವನ್ನು ನುಗ್ಗಲು ಹಾವಾಗ ಬೇಕಾಗುತ್ತದೆ.ಅಲ್ಲಿಂದಲೇ ಹಾವಾದರೆ ದಾರಿ ಹೋಕರು ಕೊಲ್ಲದೆ ಬಿಡುತ್ತಾರೆಯೇ? ಅದಕ್ಕೆ ಒಂದು ತಂತ್ರ ಬೇಕು. ಚಿಕ್ಕಳ್ಳಿ ಮೇಟಿ ಬಣಕಾರ ಗುರು ಸತ್ತ ಎಂದು ಇನ್ನು ಮುಂದೆ ಮಠ ಇಲ್ಲ, ಮಾನ್ಯರಿಲ್ಲ ಚಿಂತಿ ಮಾಡುತ್ತಾ ಕುಳಿತಿರುತ್ತಾನೆ. ಬಾಲಬಸವ ಅವನನ್ನು ಕರೆದುಕೊಂಡು ಊರ ಹೊರಗೆ ತನ್ನ ತಲೆಯನ್ನು ಕಲ್ಲಿನಿಂದ ಚಚ್ಚಿಕೊಂಡು ಹಾವಾಗಿ ಬಿಡುತ್ತಾನೆ. ಮೇಟಿ ಬಣಕಾರ ಅದಕ್ಕೆ ಯಾರು ಕಲ್ಲು ಹೊಡೆದು ಸಾಯಿಸಿದಂತೆ ರಕ್ಷಣಎ ಕೊಡುತ್ತಾನೆ. ಕತೆಯಲ್ಲಿ ತಂತ್ರಗಳು ಹೇಗೆ ಬಳಕೆಯಾಗುತ್ತವೆ ಎಂಬುದಕ್ಕೆ ಭಾಗ ಉತ್ತಮ ನಿರ್ದಶನವಾಗಿದೆ. ಸತ್ತ ಗುರುವನ್ನು ಅವನ ಪರಿವಾರದವರಾದ ಹಡೆದತಾಯಿ ಕನಕಮ್ಮ, ಪತ್ನಿ ವಡ್ಡಟ್ಟವ್ವ, ಪೂಜಾರಿ ಕಲ್ಲಪ್ಪ,ಸಾವಿರಾರು ಭಕ್ಕರು, ಸಾವಿರ ಸೂಳೇರು ಮಠದಿಂದ ಹೊತ್ತುಕೊಂಡು ಮಜ್ಜನ ಕಟ್ಟೆ ಮೇಲೆ ಹಾಕಿಕೊಂಡು ಹೆಣ ಕಾಯುವ ದ್ಯವನ್ನು ಭಾಷಿಕವಾಗಿ ಕಣ್ಣಿಗೆ ಕಟ್ಟುವಂತೆ ಕಲಾವಿದ ಚಿತ್ರಿಸುತ್ತಾನೆ. ಕಾವ್ಯದಲ್ಲಿ ಅನೇಕ ದೃಶ್ಯಗಳು ಭಾಷೆಯಲ್ಲಿ ಕಡೆದು ನಿಂತಿವೆ.)

ಸಿಂಹಾಸನಕ್ಕ ಬಂದಾರು. “ರಾಜಾಧಿರಾಜ ಜಯವಾತು, ಜಯವಾತು ಎಲ್ಲ ನಿಮ್ಮಂತೆ ಆತು’’, “ಮಕ್ಕಳಾ ಹಾಲು ಕುಡಿರಯ್ಯ, ಸಕ್ರಿ ತಿನ್ನರಯ್ಯ’’ ಶಿವನಪ್ಪ ಹೇಳ್ತಾನು. “ಅಯ್ಯೋ ರಾಜಾಧಿರಾಜ ಹಾಲು ಸಕ್ರಿಗೆ ಬೆಂಕಿ ಹಚ್ಚ’’. ‘ಯಾಕಯ್ಯ’ ‘ನೆಂದಮ್ಯಾಕ ಇಟ್ರ ನೆಲ ಸುಟ್ಟೊಕತೆ, ಕಲ್ಲೆಮ್ಯಾಕ ಇಟ್ರಾ ಕಲ್ಲಾ ಸುಟ್ಟೊಕತೆ, ಮರಕ್ಕ ಸಿಗಿಹಾಕಿದ್ರೆ ಮರ ಸುಟ್‌ಟಕ್‌ಕೋತ. ಎಲ್ಲೆಲ್ಲ ಇಳಿವುದಂಗ ಅವನತಾಗ ಒಯ್ಯಬಕಂತ್ರ’’ ಸಿದ್ಧರು ಹೇಳಯಾರು. ಮೊದ್ಲೆ

ತಿರುಕನ್ನ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ |
ತಿರುಕನ್ನ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ |

“ಆ ಮಕ್ಕಳಾ ಶಾಂತಿ ಆಗ್ರಪಾ’’ ಅಂದು ಶಿವನಪ್ಪ ಪಕ ಪಕ ನಗುತಾನು. ಗೊಂಡದ ಮೀಸಿಮ್ಯಾಗ ಕೈಯ ಇಟ್ಟಾನು. ‘ಆ ಗಾಣಿಗ್ರ ಬರೀ ಅಂಗಿ ಒಯ್ದರೇ ಜನ ಒಪ್ಪಾದಿಲ್ಲ ನಮ್ಮ ಮನಸ್ಸು ಒಪ್ಪಾದಿಲ್ಲ. ಮೂವತ್ತು ಎತ್ತಿನಮ್ಯಾಗೆಲ ಹಾಲು ಮಾಲು ಏರ್ರೆಯ್ಯ’ಅಂದು ಮೂವತ್ತು ಎತ್ತಿನ ಮ್ಯಾಲೆ ಹಾಲು ಮಾಲು ಏರ್ರೆಯ್ಯ ಅಂದು ಮೂವತ್ತು ಎತ್ತಿನ ಮ್ಯಾಲೆ ಹಾಲು ಮಾಲು ಏರ‍್ಸ್ಯಾನು. ಮಾಟಡದ ಅಂಗಿ, ಬಂಗಾರ ಅಂಗಿ, ಮೊರಮಿ ಅಂಗಿ ತಗೊಂದು ಅವತ್ತು ಶಿವಪ್ಪ ತಾನೇ ಹೊಂಟ. ಕೆಂದ ಕುದುರಿ ಮ್ಯಾಲ ಕುಂತಾನು ಎಡಗೈ ಡಾಲು,

[1] ಖಡ್ಗ ತಗಂಡಾನು. ಅಡಗ (ಊಟ) ಬೇಕಾದ್ರ ಭಂಟರನ್ನು ಹಿಂದ ಕರೆದುಕೆಂಡ, ತನ್ನ ಸೈನ್ಯ ತಗಂಡು ಹರಪನಳ್ಳ್ಯಾಗ ಹೊರಡತಾನು. ಇಲ್ಲಿ ಹೊಂಡಾದು ಕೂಲಳ್ಯಾಗ ಗೋಣಿಬಸಪ್ಪಗ ಅರಿವಿಕಾತಂತ್ರೀ. ಗೋಣಿ ಬಸವೇಶ್ವರ ದುಃಖ ಮಾಡ್ತಾನೆ. ‘ಅಮ್ಮ ತಾಯಿ ಕನಕಮ್ಮನವರೇ’

ನಮ್ಮ ಯಾಕೆ ಹಡದೀಯವ್ವೋ | ಶಿವನೆನೆಯವ ದೇವೈ |
ಮಾರಿ ಮ್ಯಾಲೆ ಮಾಸಾ[2] ಹಾಕೀ | ಶಿವನೆನೆಯವ ದೇವೈ |
ಕೊಲ್ಲಾ ಬಾರಾದಿತ್ತೇ ಏನೇ | ಶಿವನೆನೆಯವ ದೇವೈ |
ಗೋಣ ಮುರಿದೂ | ಶಿವನೆನೆಯವ ದೇವೈ |
ನನ್ನಂತ ಪರದೇಶಿ ಇರಬಾರದೂ | ಶಿವನೆನೆಯವ ದೇವೈ |
ಇಲ್ಲಿಗೆ ಮರಣಆ ಬಂದಾವಲ್ಲೊ | ಶಿವನೆನೆಯ ದೇವೈ |

ಗೋಣಿಬಸವೇಶ್ವರ ಕಣ್ಣೀರಾಕ್ತಾನೆ, ದುಃಖ ಮಾಡ್ತಾನೆ, ತಾಯಿ ಕನಕಮ್ಮ, ಹೆಂಣ್ತಿ ವಡ್ಡೆಟ್ಟವ್ವ, ಪೂಜಾರಿ, ಕಲ್ಲಪ್ಪ ಕೇಳ್ತಾರ. “ಯಾಕ ಸಂಕಟ ಬಂತಪ್ಪ,ಯಾಕ ಅಳ್ತಿಯಪ್ಪ, ಯಾಕ ಸಾಯ್ತಿಯಪ್ಪ’’ ದುಃಖದಲ್ಲಿ ಮುಳುಗಿ ನಾಕುಮಂದಿ ಈಜಾಡ್ತಾರು. ನೋಡ್ರೀ ಕಡೇ ಸ್ವಾಮಾರ ಕಡಿ ಇಲ್ಲದ ಪರಿಸಿ ಕೂಡಿಬಿಡ್ತೀರಿ ಕೂಲಳ್ಳಿ ಮಠಕ, ಸೇರಬಿಟ್ಟಾರೆ ಭಕ್ತರು ಮಠಕೆ, ಸಾವಿರ ಸೂಳೇರು ಚೌರ ಬೀಸ್ತಾರು, ಭಕ್ತರರು ಗುರುವಿನ ಪಾದಕ್ಕೆ ಬಿದ್ದು ಬಿದ್ದು ಬೇಡ್ಕೇಂತಾರು, ಕಡೇ ಸ್ವಾಮಾರ ಕಾಲು ಇಕ್ಯಾಕ ಜಾಗ ಸಿಗಲವ್ದರೀ, ಅಂಗ ಭಕ್ತರು ಸೇರಿಬಿಟ್ಟಾರೆ ಮಠಕ, ಅವತ್ತಿಂದಿನ ಶಿವನಯ್ಯ ಮಾಟದ ಅಂಗಿ ತಗೊಂಡು ಬೇಕಾದ ಮಂದಿನ ಹಿಂದ ತಗಂಡು, ತನ್ನ ಸೈನ್ಯ ತಗಂಡು ಹರಪ್ನಳ್ಳಿ ಮ್ಯಾಗಳ ಪೇಟ್ಯಾಗ ಬಾಣಗೇರ‍್ಯಾಗೆ ಅವುನ ಬರ‍್ತಾನ್ರೀ, ಬಾಣಗೇರ‍್ಯಾಗ ಬರಾಕರಗೆ ಮುಸುಲ್ಮಾನ್ರಾ ಅಣ್ಣಾ ತಮ್ಮ ಶಿವಪ್ಪನಿಗೆ ಶಕುನ ತೋರ‍್ಸತಾರೆ, ಏನ್ ಶಕುನ ಅಂದ್ರೆ ಅಣ್ಣ, ತಮ್ಮ ಹಾವಾಗಿ ಪೋಳ್ಳ್ಯ[3] ಶಕುನ ಕೆಂಡು ಹಾದಿಗಡ್ಡ ಮಕ್ಕಂಡು ಬಿಟ್ಟಾರೆ. ತಿಳಿದಂತವುರ ಜ್ಞಾನಿಗಳು ಶಿವಪ್ಪಗ ಹೇಳ್ತಾರೆ. “ರಾಜಾಧಿರಾಜ ಹಾವ್ ಕಂಡಿವಯ್ಯ, ವಿಷ ಕಂಡೀವಿ. ಇವತ್ತು ಪಯಣ ಬ್ಯಾಡ.’’

ಹಿಂದಕ್ಕ ತಿರುಗಯ್ಯೋ | ಸೋಕೀರ ಮೂವ ತೀಜೀಜಿ |
ಬ್ಯಾಡೋ ಬ್ಯಾಡೋ ನನ್ನ ರಾಜಾ | ಸೋಕೀರ ಮೂವ ತಾಜೀಜೀ |
ತಿಳಿದವರೆ ಹೇಳತಾರೇ |ಸೋಕೀರ ಮೂವ ತಾಜೀಜಿ |
ಬುದ್ದಿವಂಥರು ಹೇಳುತ್ತಾರೇ | ಸೋಕೀರ ಮೂವ ತಾಜೀಜಿ |

“ರಾಜಾಧಿರಾಜ ಬ್ಯಾಡ್ರಿ ವಿಷಕಂಡ್ವಿ ಇವತ್ತು ಪಯಣ ಬ್ಯಾಡ ಹಿಂದಕ ತಿರುವು ಅಂತಾರೆ. ಸೊಕ್ಕಿನ ಶಿವನಯ್ಯ ಏನಂತಾನು’’ ಎಲೈ ದಂಡಿನ ಮಣಿಗಾರರ ಆ ಶಕುನ ನೋಡಿ ಹಿಂದಕ ಹೋಗಾಕೆ ನಾನು ಹೀರೇಮಗನ ಲಗ್ನಕ ಹೋಗೋದಿಲ್ಲ. ಚಿಕ್ಕ ಮಗಳ ಕಾರ‍್ಯಕ್ಕೆ ಹೋಗದಿಲ್ಲಯ್ಯ. ತಿರುಕನ್ನ ಕೊಲ್ಲಾಕೆ.

ಯಾತರ ಸಾಲವಳಿಯೋ | ಸೋಕೀರ ಮೂವ ತಾಜೀಜಿ |
ಅವ್ನ ಕೊಂದೆ ಬರಬೇಕಯ್ಯೋ | ಸೋಕೀರ ಮೂವ ತಾಜೀಜಿ |

ನಡ್ರೆಯ್ಯ, ಅಂದು ಸೊಕ್ಕಿನ ಶಿವನಯ್ಯ ಮಾಟದ ಅಂಗಿ ತಗಂಡು ಧಿನ್ ಧಿನ್ ಅನ್ತ ಕಡೇ ಸ್ವಾಮಾರ ದಿವ್ಸ ಮಠಕ ಹೋಗುತಾನ್ರೀ. ಮಠಕ್ಕ ಹೋಗಕರಗ ಭಕ್ತರು, ಸಾವಿರ ಸೂಳೇರು ಆತನಿಗೆ ಹೆದ್ರಿ ಜಾಡು[4] ಬಿಡುತ್ತಾರೆ. “ಅ ರಾಜಬಂದ ರಾಜ ಬಂದ, ಬಾಜು ಬಿಡ್ರಿ, ಜಾಡ್ ಬಿಡ್ರಿ’’ ಅಂದು ಬಾಜು ಬಿಡ್ಸುತಾರೆ. ಶಿವನಪ್ಪನ ಒಳಗ ಕರಕಂಡು ಹೋಗ್ತಾರೆ. ನೋಡ್ರಿ, ಗೋಣಿ ಬಸವೇಶ್ವರಗ ಶಿವನಪ್ಪನಿಗೆ ಇದಿರ ಬದರ ಗದ್ದಿಗಿ ಮಾಡ್ಯಾರು. ಸೊಕ್ಕಿನ ಶಿವನಯ್ಯ ತನ್ನ ಸೊಕ್ಕಿನಿಂದ ರಾಜ್ಯದ ಅಹಂಕಾರದಿಂದ ದಡದಡ ಸದರು ಹತ್ತಿ ಮ್ಯಾಲ ಕೂತ್ಕಂಡು ಬಿಟ್ಟ. ಶಿವನಪ್ಪ ಕುಂತಾಗ ಗಕೋಣಿಬಸವೇಶ್ವರ ಬಂದ. ಬಂದು ಶಿವನಪ್ಪನ ಕೇಳ್ತನ್ರೀ “ಆ ಶಿವನಪ್ಪನವರೇ ಒಂದು ಲೋಬಾನ ಎಂದು ನಮ್ಮ ದೇವ್ರಿಗೆ ನೀನು ಸುಟ್ಟೋನಲ್ಲ. ಕಾಸಿನ ಲೋಬಾನ[5] ನಮ್ಮ ದೇವ್ರಿಗೆ ಸುಟ್ಟಿಲ್ಲ ಆದ್ರೆ, ಇತ್ಲಾಕ ಯಾಕ ಬಂದೀರಿ’’ ಅಂತ ಗೋಣಿಬಸಪ್ಪ ಕೇಳ್ತಾನೆ. ಶಿವನಪ್ಪ ಹೇಳ್ತಾನು. “ಎಲೈ ಗೋಣಿಬಸವ’’ ಹಿರೇರು ಮಾಡಿದ್ದ ಹರಕಿ ಇತ್ತಲೇ ಒಪ್ಪಸಾಕ ಬಂದೀನಿ. ಅದರಾಗ ಬಂಗಾರದ ಅಂಗಿ ಐತಿ ತೊಟ್ಟಕಳಲೇ ನೋಡಿ ಹೋಗಿಬಿಡ್ತೀನಿ’’. “ಆ ಕಲ್ಲಪ್ಪ ಅಂಗಿ ಕೊಡಪ್ಪ’’ ಅಂದಾಗ ಶಿವನಪ್ಪ ಅಂತಾನೆ. “ಬಸವ ಯಾರು ಮುಟ್ಟಂಗಿಲ್ಲ ಯಾರು ಹಿಡಿಯಂಗಿಲ್ಲ. ಯಾರು ತಂದು ಕೊಡಂಗಿಲ್ಲ. ನೀನಾಗಿ ಬೇಕಾದ್ರೆ ಇಳಿದು ತಗಂಡು ತೊಟ್ಟಕಳಲೇ’’ ಅಂದ. “ಆಗ್ಲಿ ಸಿವನಪ್ಪನವರೆ’’ ಅಂದು ಗೋಣಿಬಸವ ಹತ್ತಿದ ಸದರು ಕೆಳಗಿಳಿದಾನು. ಗೋಣಿಬಸವೇಶ್ವರ ಉಗ್ಗದ ಸ್ವಾರ‍್ಯಾಗ ಕೈಯಿಟ್ಟ, ಮಾಟದ ಅಂಗಿ ತಗಂಡು ಬಿಟ್ಟು ಮೊರವಿ ಅಂಗಿ ತಗಂಡು ಎಡಗಡೆ ಕೆಂಪು ತೊಟ್ಟ, ಬಲಗಡೆ ಕೆಂಪು ತೊಟ್ಟ, ಬಂಗಾರದ ಅಂಗಿ ತೊಟ್ಟಕಂಡ ಬಿಟ್ಟ. ಮಾಟದ ಅಂಗಿ ತೊಟ್ಟ ಕೊಂಡು ಗದ್ದಿಗಿ ಮ್ಯಾಗ ಕುತ್ಗಂಡ. ಪೂಜಾರಿ ಕಲ್ಲಪ್ಪ ಅಂಗಿ ಕಸಿ[6] ಕಟ್ಟತಾನೆ. ಅಂಗಿಕಸಿ ಕಟ್ಟಿದಾಗ ಹರಪನಳ್ಳಿ ದೊಡ್ಡ ಭಕ್ತಳು ಕಂಠಿ ನಾಗಮ್ಮ ಒಂಬತ್ತು ಹೊನ್ನಿಂದು ಪೇಟ ನೀಡಿದ್ಲು, ಅದನ್ನ ಸುತ್ತಗೆಂಡು ಬಿಟ್ಟ. ಮತ್ತು ಗುಮ್ಮಗೋಳ ಪಿಕನಗೌಡ ಒಂಬತ್ತು ಹೊನ್ನಿಂದು ಬೆತ್ತ ಕೊಟ್ಟಿದ್ದ. ಅದ್ನ ಕೈಯ್ಯಾಗ ಹಿಡ್ಕಂಡ. ಮತ್ತು ಮೈಲಾರ ದೊಡ್ಡ ಬೀರಪ್ಪ ಒಂಬತ್ತು ಹೊನ್ನಿಂದು ಶಲ್ಯ ನೀಡಿದ್ದ, ಅದ್ನ ಅಡ್ಡ ಅಕ್ಕೆಂಡ. ಪೂಜಾರಿ ಕಲ್ಲಪ್ಪ ಪೂಜಿ ಮಾಡ್ತಾನೆ. ಬಂಗಾರದ ಅಂಗಿ ತೊಟ್ಟ ಕಂಡಾನೆ. ಸಾವಿರ, ಸೂಳೇರು ಚೌರಬೀಸ್ತಾರ. ಸಾವಿರಾರುಕ್ತರು ಪಾದಕ್ಕ ಬಿದ್ದು ಬಿದ್ದು ಬೇಡ್ಕಂತಾರೆ. ಆಗ ಸೊಕ್ಕಿನ ಶಿವನಯ್ಯ ವಾರಿ ನೋಡ ನೋಡ್ತಾನು. ಬಿರಿ ಬಿರಿ ಕಣ್ಣಿ ಬಿಡ್ತಾನು. ಹಲ್ಲು ಕಡಿತಾನು, ಮೀಸಿ ಮ್ಯಾಲೆ ಕೈ ಹಾಕ್ತಾನು. ‘ಏನಯ್ಯ ಏನೂ ಆಗವಲ್ದಲಾ’’ ಅಂತ ಕೇಳ್ತಾನು. “ಅಯ್ಯೋ ತಡ್ರಿ ಬುದ್ಧಿ ತೊಟ್ಟಕಂಡ ಕೂಡ್ಲೆ ಯಂಗ ಹಾಕ್ತದೆ’’. ಅಂತ ಸಿದ್ಧರು ಹೇಳ್ತಾರು. ಹಡದ ತಾಯಿ ಕನಕವ್ವ ಮಗನಿಗೆ ನೋಡಿ ಹೆಮ್ಮೆ ಪಡ್ತಾಳೆ, ಹೆಣ್ತಿ ವಡ್ಡೆಟ್ಟವ್ವ ಗಂಡನ ನೋಡಿ ಕಿಲಿಕಿಲಿ ನಗುತ್ತಾಳೆ. ಪೂಜಾರಿ ಕಲ್ಲಪ್ಪ ಪೂಜಿ ಮಾಡ್ತಾನೆ. ಮಾಡ ಸಮಯದಾಗ ಒಂದು ತಾಸು, ಎರಡು ತಾಸು ಮೂರೆ ತಾಸಿನೊಳಗೆ ಏನಾತ್ರೀ ಗೋಣಿ ಬಸಪ್ಪನ್ನ ಎಡಗಾಲಿನ ಹೆಬ್ಬೆಟ್ಟನಾಗೆ ಒಂದು ಸಾಸ್ವಿ[7] ಕಾಳಿಷ್ಟು ಉರಿ ಬಿತ್ತರಿ.

08_35_GBK-KUH

ಹರಹರ ಭಗವಂತ | ತಾನಿ ತಂದನಿ ನಾನೋ |
ಹೆಬ್ಬಟ್ಟಿನ ಉರಿಯಣ್ಣೋ | ತಾನಿ ತಂದನಿ ನಾನೋ |
ಕಣ್ಣಕಾಲಿಗೆ ಏರೆ | ತಾನಿ ತಂದನಿ ನಾನೋ |
ಕಣ್ಣಕಾಲಿನ ಉರಿಯಣ್ಣೋ | ತಾನಿ ತಂದನಿ ನಾನೋ |
ಮಣಕಾಲಿಗೆ ಏರೈತೇ |ತಾನಿ ತಂದನಿ ನಾನೋ |
ಮಣಕಾಲಿನ ಉರಿಯಣ್ಣೋ | ತಾನಿ ತಂದನಿ ನಾನೋ |
ತೊಡಿಯಾಕೆಏರೈತೇ | ತಾನಿ ತಂದನಿ ನಾನೋ |
ತೊಡಿಯಾಕೆ ಉರಿಯಣ್ಣೋ | ತಾನಿ ತಂದನಿ ನಾನೋ |
ನಡುದಾಕೆ ಏರೈತೇ | ತಾನಿ ತಂದನಿ ನಾನೋ |
ನಡುದಾಗ ಉರಿಯಣ್ಣೋ | ತಾನಿ ತಂದನಿ ನಾನೋ |
ಎದಿಯಾಕೆ ಏರೈತೇ | ತಾನಿ ತಂದನಿ ನಾನೋ |
ಎದಿಯಾಗಳ ಉರಿಯಣ್ಣೋ | ತಾನಿ ತಂದನಿ ನಾನೋ |
ಕಂಠಕ್ಕ ಏರೈತೇ | ತಾನಿ ತಂದನಿ ನಾನೋ |
ಕಂಠದ ಉರಿಯಣ್ಣೋ | ತಾನಿ ತಂದನಿ ನಾನೋ |
ಮಸ್ತಕ ಏರೈತೇ | ತಾನಿ ತಂದನಿ ನಾನೋ |

ಅಂಗಿ ಉರಿ ನೆತ್ತಿ ಸುಳಿಗೆ ಬಡದಾಗ ಗೋಣಿ ಬಸವೇಶ್ವರ

ದಗ್ಗ ದಗ್ಗ ಉರಿಯಾತಾನೇ | ಸೋಕೀರ ಮೂವ ತಾಜೀಜಿ |
ಡಿಂಭಕ ಬೆಂಕಿ ಬಿದ್ದಾವಯ್ಯೋ | ಸೋಕೀರ ಮೂವ ತಾಜೀಜಿ |
ದಗ್ಗ ದಗ್ಗ ಉರಿದಾನೇ | ಸೋಕೀರ ಮೂವ ತಾಜೀಜಿ |
ಸತ್ತು ಕೆಳಗೆ ಬಿದ್ದಾನೇ | ಸೋಕೀರ ಮೂವ ತಾಜೀಜಿ |

ಗೋಣಿ ಬಸವೇಶ್ವರ ದಗ್ಗ ದಗ್ಗ ಉರುದು ಸುಟ್ಟು ಸತ್ತು ತೆಳಕ ಬಿದ್ದನಂತ್ರೀ | ಶಿವನಯ್ಯ

ರಾಜ ಕ್ಯಾಕಿ ಹೊಡಿಯತಾನೇ | ಸೋಕೀರ ಮೂವ ತಾಜಿಜಿ |
ಠೀಕಾಗಿ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |

ಕ್ಯಾಕಿ ಹೊಡಿತಾನು. ಸಾವ್‌ರಾರು ಭಕ್ತರನ್ನು ಮಠಬಿಟ್ಟು ಹೊಂಡಸ್ತಾನು. “ಆ ಭಕ್ತರ, ಇಲ್ಲಿಗೆ ಈ ಮಠ ನನ್ನಸ್ವಾಧೀನಾತು. ಇವ್ನ ಹಿರೇ ತೋಪು ನನ್ನ ಸ್ವಾಧೀನಾತು. ಆ ಕರಕಿ ಪಟ್ಟಿ[8] ಮಾನೇವ[9] ನನ್ನ ಸ್ವಾಧೀನಾತು ಇವ್ನಹೆಂಣ್ತಿ.’’

ನನ್ನ ವಾಸಿ ಆಗ್ಯಾಳಯ್ಯೋ | ಸೋಕೀರ ಮೂವ ತಾಜೀಜಿ |
ಮಠ ಬಿಟ್ಟೆ ಹೊಂಡಸ್ತಾನೇ | ಸೋಕೀರ ಮೂವ ತಾಜೀಜಿ |

ರಾಜಾಧಿರಾಜ ಶಿವನಯ್ಯ ಮಠಬಿಟ್ಟು ಹೊಂಡಸ್ತಾನ್ರಿ ಭಕ್ತರನ್ನು ಸಾವ್‌ರಾರು ಸುಲೇರನ್ನ ಹೊಂಡಸ್ತಾನ್ರೀ.

ಇಲ್ಲಿಗೆ ಮಠಾ ಮುಳಿಗ್ಯಾದಯ್ಯೋ | ಶಿವನೆನೆಯವ ದೇವೈ |
ನಮ್ಮೇ ಗುರುವೇ ಸತ್ತಾನಯ್ಯೋ | ಶಿವನೆನೆಯವ ದೇವೈ |
ಯಾರಿಗೆ ಗುರುವೇ ಅನ್ನಬೇಕೋ | ಶಿವನೆನೆಯವ ದೇವೈ |
ಯಾರ ಪಾದಕ ಬೀಳಾಲಯ್ಯೋ | ಶಿವನೆನೆಯವ ದೇವೈ |
ಇಲ್ಲಿಗೆ ಗುರುವಿಗೆ ಕಳಾಕೊಂಡೋ | ಶಿವನೆನೆಯವ ದೇವೈ |
ಯಾರಿಗೆ ಚೌರ ಬೀಸಾಲಯ್ಯೋ | ಶಿವನೆನೆಯವ ದೇವೈ |
ಯಾರಿಗೆ ಗುರುವೇ ಅನ್ನಾವಯ್ಯೋ | ಶಿವನೆನೆಯವ ದೇವೈ |

ಹಡದತಾಯಿ ಕನಕಮ್ಮ ಗೋಣಿಬಸವನನ್ನು ಕಂಡು

ನನ್ನ ಮನಿಯ ಮುರುದಾವಲ್ಲೋ | ಶಿವನೆನೆಯವ ದೇವೈ |
ಯಾರಿಗೆ ಮಗನೆ ಅನ್ನಾಲಯ್ಯೋ | ಶಿವನೆನೆಯವ ದೇವೈ |
ಯಾರ ಪಾದಕ ಬೀಳಲಯ್ಯೋ | ಶಿವನೆನೆಯವ ದೇವೈ |
ನನ್ನಾ ಮಗನೆ ಸತ್ತಾನಲ್ಲೋ | ಶಿವನೆನೆಯವ ದೇವೈ |

ಹೆಣ್ತಿ ವಡ್ಡೆಟ್ಟವ್ವ ಕೂಡಾ ಅಳ್ತಾಳ್ರೀ. ಅಯ್ಯೋ ಗುರುಗಳೇ

ರಂಡೀತನ ಬಂದೀತಲ್ಲೋ | ಶಿವನೆನೆಯವ ದೇವೈ |
ಯಾರಿಗೆ ಗಂಡಾ ಅನ್ನಾಲಯ್ಯೋ | ಶಿವನೆನೆಯವ ದೇವೈ |
ಯಾರಿಗೆ ಪಾದಕ ಬೀಳಲಯ್ಯೋ | ಶಿವನೆನೆಯವ ದೇವೈ |

ರಂಡೆಂಬ ಸೊಲ್ಲು ತಪ್ಪಾಲಿಲ್ಲಾ ಗಂಡನ್ನ ಮಾತ್ರ ನೋಡಾಲಿಲ್ಲಾ ಪೂಜಾರಪ್ಪ ಕೂಡ ಅಳ್ತಾ ಗುರುಗಳೇ

ಯಾರಿಗೆ ಪೂಜೀ ಮಾಡಲಯ್ಯೋ | ಶಿವನೆನೆಯವ ದೇವೈ |
ಯಾರಿಗೆ ಸೇವಾ ಮಾಡಾಲಯ್ಯೋ | ಶಿವನೆನೆಯವ ದೇವೈ |

ನೋಡ್ರಿ ಇರುವಿ ಗೂಡಿಗೆ ಬೆಂಕಿ ಇಟ್ಟಂಗಾತು. ಮಠ ಮುಣಗಿತು. ಮಾನ್ಯ ಮುಣುಗಿತು. ಪೂಜಾರಿ ಕಲ್ಲಪ್ಪನ್ನ ಶಿವನಯ್ಯ ಗುಡಿಕಂಬಕ್ಕ ಕಟ್ಟಿಸಿಬಿಟ್ಟಾನು. ಕಲ್ಲಪ್ಪ ಕಂಬದಾಗ ಅಳ್ತಾನೆ. ಹಡದತಾಯಿ ಕನಕಮ್ಮಗೆ, ಹೇಣ್ತಿ ವಡ್ಡೆಟ್ಟವ್ವಗೆ ಒಳಗೆ ಹಾಕಿ ಕದಮುಚ್ಚಿ ಬೀಗ ಹಾಕಿಬಿಟ್ಟಾನು. ಯಾರು ತಡಿ ಅನ್ನಂಗಿಲ್ಲ, ರಾಜಕೀಯ, ಎದುರು ಬೆದುರಿ ಎಲ್ರು ಮಠ ಬಿಟ್ಟು ಹೊಕ್ಕಾರೆ, ಒಯ್‌ಕೆಂತಾರೆ.

ಗುರುವೇ ಸತ್ತೇ ಬಿದ್ದಾನಯ್ಯೋ | ಶಿವನೆನೆಯವ ದೇವೈ |
ಪ್ರಾಣಕ್ಕೆ ಆಧಾರ ಮೊದಲಿಲ್ಲೋ | ಶಿವನೆನೆಯವ ದೇವೈ |

ಗೋಣಿ ಬಸವೇಶ್ವರ ಕೂಲಳ್ಳಿ ಮಠದಾಗೆ ಸತ್ತ ಬಿದ್ದಾನೆ.ಸತ್ತಂತ ಗುರುವಿನ ನೋಡಿ ಶಿವನಯ್ಯ ಕೇಕಿ ಹಾಕಿ ನಗುತಾನೆ. ಆಗ ಪೂಜಾರಿ ಕಲ್ಲಪ್ಪನ್ನ ಕಂಬಕ್ಕ ಕಟ್ಟಿಸಿದ್ನಲ್ಲೀ ಆ ನೂಲ ಹಗ್ಗ ಕಿತ್ತು ಹೊಗದು.

ಓಡಿ ಓಡಿ ಬರ್ತಾನಯ್ಯೋ | ಸೋಕೀರ ಮೂವ ತಾಜೀತಿ |
ಪೂಜಾರಿ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |

ಓಡಿ ಬಂದಾನು ಗೋಣಿ ಬಸವೇಶ್ವರ ಸತ್ತಂತ ದೇಹ ತಗಂಡು ಮಜ್ಜನ ಬಾವಿಗೆ

ಓಡಿ ಓಡಿ ಹೋಗತಾನೇ | ಸೋಕೀರ ಮೂವ ತಾಜೀಜಿ |
ಬಾವಿಗೆ ಒಯ್ಯುತಾನೇ | ಸೋಕೀರ ಮೂವ ತಾಜೀಜಿ |
ಸಾವುರಾರೇ ಪಟ್ಟಣಯ್ಯೋ | ಸೋಕೀರ ಮೂವ ತಾಜೀಜಿ |
ಗುರುಗೆ ಹಿಂಬಾಲತ್ತ್ಯಾರಯೋ | ಸೋಕೀರ ಮೂವ ತಾಜೀಜಿ |
ಸಾವುರಾರೇ ಸೂಳೇರಯ್ಯೋ | ಸೋಕೀರ ಮೂವ ತಾಜೀಜಿ |
ಗುರುಗೆ ಹಿಂಬಾಲತ್ತ್ಯಾರಯ್ಯೋ | ಸೋಕೀರ ಮೂವ ತಾಜೀಜಿ |

ಮಜ್ಜನ ಬಾವಿಗೆ ತಗಂಡು ಹೋಗ್ಯಾರು, ಮಜ್ಜನ ಬಾವ್ಯಾಗ ಗುರುವಿನ ಪ್ರಾಣ ತಿರುಗ್ಲಿ ಅಂದು ಬಾವ್ಯಾಕೆ ತೆಗ್ಗು ತಗೀತಾರು, ಹೊಳಿನೀರು ಹೊಯ್ಯುತಾರು, ಏರಿನೀರಿ[10] ಎರಿತಾರು, ಗುರುಗೆ ಗಾಳಿ ಹೊಡಿತಾರೆ. ಏನು ಮಾಡಿದರು.

ಗುರುಗೆ ಜನುಮ ತಿರುಗಾಲಿಲ್ಲೋ | ಸೋಕೀರ ಮೂವ ತಾಜೀಜಿ |
ಗುರುಗೆ ಜನುಮ ತಿರುಗಾಲಿಲ್ಲೋ | ಸೋಕೀರ ಮೂವ ತಾಜೀಜಿ |

ನುಮ ಏನು ಮಾಡಿದ್ರೂ ತಿರುಗಲಿಲ್ಲೀ, ಸತ್ತ ಶವ ಬಾವಿ ದಂಡಿ ಮ್ಯಾಲ ಹಾಕ್ಯಾರು, ಸಾವಿರಾರು ಭಕ್ತರು, ಸಾವಿರಾರು ಸೂಳೇರು, ಅತ್ಕಂತಾ ಕುತ್ಗಂಡು ಬಿಟ್ಟಾರು. ಆದ್ರೆ ಇಲ್ಲಿಗೆ ಮಠ ಮುಳುಗಿತ್ರಪಾ, ಗುರುವು ಇಲ್ಲದ ಬಳಿಕ ಮಠಕ ಎಂದ ಬರೋನಪಾ, ಯಾರಿಗೆ ಗುರು ಅನ್ನನಪಾ, ಯಾರ ಪಾದಕ ಬೀಳನಪಾ ಅಂದು ದುಃಖ ಮಾಡ್ತಾ ಕುಂದ ಹೊತ್ತಿನಾಗೆ. ಪ್ರಾಣ ಆದೋರಿಲ್ಲ, ಜನ್ಮ ಪಡೆಯಂಗಿಲ್ಲ. ಆ ಸಮಯದೊಳಗೆ ಹರಪನಳ್ಳಿ ಮ್ಯಾಸಗೇರ‍್ಯಾಗೆ ನೆಲಮಾಳಿಗೆ ಮಠ ಸನ್ಯಾಸೀ ತೋಟದಾಗೆ.[1] ಡಾಲು = ಕಡಿವಾಣ

[2] ಮಾಸಾ – ಬಟ್ಟೆ

[3] ಪೋಳ್ಕ – ನುಲಿದುಕೊಂಡು

[4] ಜಾಡು – ದಾರಿ

[5] ಲೋಬಾನ – ಧೂಪ

[6] ಅಂಗಿಕಸಿ – ಉಡುಗೆ ಕಟ್ಟುವುದು

[7] ಸಾಸ್ವಿ – ಸಾಸುವೆ

[8] ಕರಕಿಪಟ್ಟ- ಭೂಮಿಪಟ್ಟ

[9] ಮಾನೇವು – ಆಸ್ತಿ

[10] ಎರಿತಾರು – ನೀರು ಎರೆಯುವುದು