(ಒಟ್ಟು ಕತೆಯಲ್ಲಿ ಎರಡು ಮಾಟದ ಪ್ರಸಂಗಗಳು, ಏಳು ಪವಾಡಗಳು ಬರುತ್ತವೆ ಒಂದು ನಿರ್ದಿಷ್ಟವಾದ ತಾಳ ಲಯ ಭಾಷಿಕ ವಿವರಗಳಲ್ಲಿ ಇದು ನಡೆಯುತ್ತದೆ. ಪುನಾರವರ್ತನೆ ಇಲ್ಲಿ ಸಾಮಾನ್ಯ. ಪ್ರಸಂಗ ಅನೇಕ ಕ್ರಿಯೆಗಳ ಮೊತ್ತ ಆದ್ದರಿಂದ ಯಾವ ಕ್ರಿಯೆಗೆ ಯಾವ ದಾಟಿ ಬಳಸಬೇಕು ಎಂಬ ತರ್ಕವಿದೆ. ಇಲ್ಲಿ ಕತೆ ವಾಸ್ತವವಾದಿ ಚೌಕಟ್ಟನ್ನು ಮೀರುವುದರಿಂದ ಅಸಾಮಾನ್ಯ ಕಲ್ಪನೆಗಳ ಲೋಕವೇ ಸೃಷ್ಟಿಯಾಗುತ್ತದೆ. ಮೊದಲು ಮಾಟದ ಮೂರು ಗೊಂಬಿಗಳನ್ನು ಕಾಳಿಕೊಂಡನೇ ಮಾಡಿ, ಕೂಲಹಳ್ಳಿ ಮಠದಲ್ಲಿ ಗೋಣಿ ಬಸಪ್ಪನ ಮಠದ ಬಾಗಿಲಾಗ ಒಂದು, ಅವನು ಸ್ನಾನ ಮಾಡುವ ಮಜ್ಜನ ಬಾವಿಯಲ್ಲಿ ಒಂದು, ಅವನು ಕೂರುವ ಗದ್ದಿಗೆ ಕೆಳಗೆ ಒಂದು ಮೂರು ಗೊಂಬೆಗಳನ್ನು ಊಳುವುದು. ಅದನ್ನೆಲ್ಲ ನಾಯಕ ವಿಚಿತ್ರ ವಿಷಾದದ ದನಿಯಲ್ಲಿ ನಿವಾರಿಸಿಕೊಳ್ಳುವುದು. ಕೊನೆಗೆ ಗೊಂಬಿಗಳನ್ನು ಸುಟ್ಟು ಬಂಗಾರವಾಗಿಸಿ ವಾಲಿಕಪ್ಪು ಮಾಡಿಕೊಳ್ಳುವುದರಲ್ಲಿ ಮೊದಲ ಮಾಟ ನಿಃಪ್ರಯೋಜಕವಾಗುತ್ತದೆ. ಮುಂದಿನ ಮಾಟ ಹೆಚ್ಚು ತೀವ್ರವಾಗುತ್ತದೆ. ಅದನ್ನು ಮನುಷ್ಯ ಮಾಡುವುದಿಲ್ಲ. ಗಾಳಿ ಪೂಜಪಟ್ಟಣದ ಸಿದ್ಧರು ಇಟ್ಟುಕೊಂಡಿರುವ ದೆವ್ವಗಳ ಮೂಲಕ ಮಾಡಿಸುತ್ತಾರೆ. ಮಾಟವಿದ್ಯೆಯನ್ನು ಮಾಡಿಸಿಕೊಂಡು ಬರಲು ಹರಪನಹಳ್ಳಿಯ ಗಾಣಿಗರನ್ನು ಗಾಳಿಪೂಜ ಪಟ್ಟಣಕ್ಕೆ ಕಳುಹಿಸುತ್ತಾನೆ. ಆಗ ಕಲಾವಿದ ಅವರು ಯಾವ ಯಾವ ಊರುಗಳನ್ನು ದಾಟಿಹೋದರು ಎನ್ನುವ ಒಂದು ಮ್ಯಾಪ್ ಕೊಡುತ್ತಾನೆ ಮತ್ತು ಪ್ರಯಾಣಕ್ಕೆ ಒಂದೇ ಪಲ್ಲವಿಯನ್ನು ಬಳಸುತ್ತಾನೆ, ತುಮನೆಪ್ಪ ಯಾವ ಊರುಗಳನ್ನು ನೋಡಿಲ್ಲ ನಾವು ಬ್ಯಾಡಗಿ ತಾಲೂಕು ಗಾಳಿ ಪೂಜ ಪಟ್ಟಣಕ್ಕೆ ಕ್ಷೇತ್ರಕಾರ್ಯಕ್ಕೆ ಹೋದಾಗ ಎಲ್ಲ ಊರುಗಳು ಇದ್ದವು. ಗಾಣಿಗರು ಎಂಟು ದಿನದ ದಾರಿಯನ್ನು ದಿನ ಮದ್ಯಾನಕ್ಕೆ ಹೋಗಿ ಬಿಡುತ್ತಾರೆ. ಸಿದ್ದರು ದೆವ್ವಗಳನ್ನು ಕರೆಯುವುದು. ಕತ್ತಿ ಮುಖದವು. ಕುದುರೆ ಮುಖದವು, ಮಂಗನ ಮುಖದವು, ಮುಖವೇ ಇಲ್ಲದವು ಬರುವುದು, ಅವುಗಳನ್ನು ರಾತ್ರಿ ಸೆರಮನೆಗೆ ತಳ್ಳುವುದು, ಅವು ಕಚಪಚ ತಿಂದು ಮಾಟದ ಅಂಗಿ ಹೊಲಿಯುವುದು, ನಾಟಕೀಯತೆಯ ಪರಮಾವಧಿಯನ್ನು ಇಲ್ಲಿ ಕಲಾವಿದ ಮೆರೆಯುತ್ತಾನೆ. ಮಾಟದ ಪೂಜೆಗೆಲ್ಲಾ ಬಳಕೆಯಾಗುವ ಶುಶ್ರಾವ್ಯವಾದ ಪಲ್ಲವಿ.

ನೆಲನೆಪ್ಪು ಎರಡೆಂಬೋದ ತಾನೆ ಬಳಕಂಡಾ
ಒಲಿ ಎತ್ತೊಲಿ ಎಂಬೋದ ತಾನೆ ಬಳಕಂಡಾ
ಹಸುರಕ್ಕಿ ರಂಗವು ತಾನೆ ಬರಕೊಂಡಾ ||
ಹರಹರ ಭಗವಂತ ನಾನಿ ತಂದಾನ ||)

ಹರಹರ ಭಗವಂತ | ತಾನಿ ತಂದನಿ ನಾನೋ |
ಹಸರಕ್ಕಿ

[1] ಕೊಂಡಾನೋ | ತಾನಿ ತಂದನಿ ನಾನೋ |
ಅಳಿದಕ್ಕಿ[2] ಕೊಂಡಾನೋ | ತಾನಿ ತಂದನಿ ನಾನೋ |
ತೆಂಗಿನಕಾಯಿ ಕೊಂಡಾನೋ | ತಾನಿ ತಂದನಿ ನಾನೋ |
ಬಾಳಿಹಣ್ಣು ಕೊಂಡಾನೋ | ತಾನಿ ತಂದನಿ ನಾನೋ |

ಇಂಥ ಸಾಮಗ್ರಿಗಳನ್ನೆಲ್ಲ ತಗಂಡು ನೋಡ್ರೀ ಕಾಳಿಕೊಂಡಯ್ಯ ಮಾಟ ಮಾಡೋ ಮನಿಗೆ ತಗೊಂಡು ಹೋದ. ಮಾಟ ಮಾಡ್ತಾನ್ರೀ ಮನಿಸ್ವಾಮಿ ಗೋಣಿಬಸವೇಶ್ವರಗ.

ಹರಹರ ಭಗವಂತ | ತಾನಿ ತಂದನಿ ನಾನೋ |
ನೆಲನೆಪ್ಪುಡೆಂಬೋದೇ[3] | ತಾನಿ ತಂದನಿ ನಾನೋ |
ತಾನೆ ಬಳಕಂಡಾನೋ | ತಾನಿ ತಂದನಿ ನಾನೋ |
ಒಲಿ ಎತ್ತೊಲೆಂಬೋದೇ[4] | ತಾನಿ ತಂದನಿ ನಾನೋ |
ತಾನೆ ಬಳಕಂಡಾನೋ | ತಾನಿ ತಂದನಿ ನಾನೋ |
ಹಸರಕ್ಕಿ ರಂಗವೂ | ತಾನಿ ತಂದನಿ ನಾನೋ |
ತಾನಿ ಬರಿಯಾತಾನೇ | ತಾನಿ ತಂದನಿ ನಾನೋ |
ಐದಕ್ಕಿ ರಂಗವೂ[5] | ತಾನಿ ತಂದನಿ ನಾನೋ |
ನಾಲ್ಕ ಮೂಲಿಗೆ ನಾಕೋ | ತಾನಿ ತಂದನಿ ನಾನೋ |
ಇಡಿ ಹೊನ್ನು ಇಡುತಾನೇ | ತಾನಿ ತಂದನಿ ನಾನೋ |
ನಾಲ್ಕ ಮೂಲಿಗೆ ನಾಕೋ | ತಾನಿ ತಂದನಿ ನಾನೋ |
ತೆಂಗಿನಮುರಿಯ ಕಡದಾನೋ | ತಾನಿ ತಂದನಿ ನಾನೋ |
ತೆಂಗಿನಕಾಯಿ ಒಡದಾನೋ | ತಾನಿ ತಂದನಿ ನಾನೋ |
ಬಾಳಿ ಹಣ್ಣು ಹಿಡದಾನೋ | ತಾನಿ ತಂದನಿ ನಾನೋ |

ಮಾಡ ಕರ್ತವ್ಯಲ್ಲ ಮಾಡ್ಕೊಂಡು ಚಲುವಾದಿ ಕಾಳಿಕೊಂಡಯ್ಯನ ಮನಿಯಾಗೆ ಗೋಣಿಬಸವೇಶ್ವರಗೇ

ಮಾಟದ ಗೊಂಬೇಯ ಮಾಡಾತಾನೇ | ಶಿವನೆನೆಯವ ದೇವೈ |
ಗುರುವಿಗೆ ಮರಣಾ ಬಂದಾವೈಯೋ | ಶಿವನೆನೆಯವ ದೇವೈ |
ಸೋದರ ಮಾವನ ನೋಡಾ ತಂಗೀ | ಶಿವನೆನೆಯವ ದೇವೈ |
ಸೋದರಮಾವನ ಸಾಲಾವಳಿ | ಶಿವನೆನೆಯವ ದೇವೈ |
ಮಾಟದ ಗೊಂಬೀ ಮಾಡುತಾನೇ | ಶಿವನೆನೆಯವ ದೇವೈ |
ಮೊರಮಿಯ ಗೊಂಬೀ[6] ಮಾಡಾತಾನೇ | ಶಿವನೆನೆಯವ ದೇವೈ |

ಮೊರಮಿಯ ಗೊಂಬಿ ಮಾಡ್ತಾನು. ಹರಪ್ನಳ್ಯಾಗ ಚಲುವಾದಿ ಕಾಳಿಕೊಂಡಯ್ಯನ ಮನಿಯಾಗೆ. ಮಾಡಿದಾಗ ಕೂಲಹಳ್ಳ್ಯಾಗ ಗೋಣಿಬಸವೇಶ್ವರಗ ಅರಿವಿಕಿ ಅತಂತ್ರೀ ಗೋಣಿಬಸವೇಶ್ವರ.

ಬಿದ್ದ ಬಿದ್ದ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |
ಪಕ ಪಕ ನಗುತಾನಯ್ಯೋ | ಸೋಕೀರ ಮೂವ ತಾಜೀಜಿ |

ನಗುತ್ತಾ ಪೂಜಾರಿನ ಕರ‍್ದ ‘ಕಲ್ಲಪ್ಪಾ ನೋಡ್ದೆನಯ್ಯ ನನ್ನಂತ ಗುರುಗಳಿಗ ಹರಪ್ನಳ್ಳಿಗೆ ಚಲುವಾದಿ ಮನಿಯಾಗೆ ಮಾಟ ಮಾಡಸ್ತಾರಪಾ’

ಚಲುವಾದಿ ಮನಿಯಾಗ | ಸೋಕೀರ ಮೂವ ತಾಜೀಜಿ |
ಮಗನಕೊಂದು ಬರಾನುಬಾರೋ | ಸೋಕೀರ ಮೂವ ತಾಜೀಜಿ |
ಗುರುವೇ ತಾನೇ ಹೇಳುತಾನೇ | ಸೋಕೀರ ಮೂವ ತಾಜೀಜಿ |
ಗೋಣಿ ಬಸವ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಆ ಸಮಯದಾಗೆ ಕಾಳಿಕೊಂಡಯ್ಯನ ಹೆಂಡ್ತಿ ಒಂಬತ್ತು ತಿಂಗ್ಳು ಮಗೂನ ಉಣಿಸ್ಯಾಳು, ಮೊಲಿ ಕುಡಿಸ್ಯಾಳು, ತೊಟ್ಲಾಕ ಹಾಕಿ, ಕೊಡ ಸಿಂಬಿ ತಗೊಂಡು ಬಾವಿ ನೀರೀಗೆ ಹೋಗ್ಯಾಳು. ಆಗ ಕಾಳಿಕೊಂಡಯ್ಯ ಮಾಟದ ಮನಿಯಾಗ ಮಾಟ ಮಾಡ್ತಾನ. ಮನಿಯಾಗ ಯಾರು ಇಲ್ರೀ ಕೂಸು ಒಂದೇ ಐತೆ. ಆ ಸಮಯದಾಗೇ ಗೋಣಿ ಬಸವೇಶ್ವರ ಎಂಥ ಕೇಡು ತೋರಿದ. ತೊಟ್ಲಾಗ ಇರಾ ಮಗ ಚಟ್ಟನೆ ಚೀರಿ, ಬೆಟ್ಟನೆ ಬೆದರಿ ಮೂಗು ಬಾಯಿಲಿ ರಗುತ ಕಕ್ಕಿ ಚೆಲುವಾದಿ ಮಗ

ಸತ್ತು ಕೆಳಗೆ ಬಿದ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ರಗುತ ಕಕ್ಕಿ ಸತ್ತಾನಯ್ಯೋ | ಸೋಕೀರ ಮೂವ ತಾಜೀಜಿ |

ಚಲುವಾದಿ ಮಗ ರಗುತ ಕಕ್ಕಿ ಸತ್ತ ಬಿತ್ತಂತ್ರೀ, ತಾಯಿ ಇಲ್ಲ, ತಂದಿ ಇಲ್ಲ ಸತ್ತ ಮಗನ ದ್ಯಾ[7] ಇಲ್ದಾ, ನೆಪ್ಪಿಲ್ದಾ

ಮಾಟದ ಗೊಂಬೀಯ ಮಾಡಾತಾನೇ | ಶಿವನೆನೆಯವ ದೇವೈ |
ಮೊರವಿಯ ಗೊಂಬೆಯ ಮಾಡಾತಾನೇ | ಶಿವನೆನೆಯವ ದೇವೈ |
ಮನಿಯಾ ಸ್ವಾಮೀ ಗೋಣೀಬಸವೋ | ಶಿವನೆನೆಯವ ದೇವೈ |
ಗುರುವಿಗೆ ಮಾಟಾ ಮಾಡಾತಾನೇ | ಶಿವನೆನೆಯವ ದೇವೈ |

ಮಾಟ ಮಾಡ್ತಾನು, ಕಾಳಿಕೊಂಡನ ಹೆಂಡ್ತಿ ಮನಿಗೆ ಬಂದಾಲು, ಕೊಡ ಇಳುಕ್ಯಾಲು ತೊಟ್ಲಿಗಿ ಹೋಗಿ ನೋಡ್ಯಾಳು, ರಕ್ತ ನೋಡ್ಯಾಳು, ಆಹ ಇದೇನಪಾ ಅಯ್ಯೋ

ನನ್ನ ಮಗನ ಸತ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಓಡಿ ಬಾರೋ ಹುಚ್ಚ ಗಂಡೋ | ಸೋಕೀರ ಮೂವ ತಾಜೀಜಿ |
ಓಡಿ ಬಾರೋ ದಡ್ಡ ಗಂಡ | ಸೋಕೀರ ಮೂವ ತಾಜೀಜಿ |
ನಿನ್ನಾ ಮಗನೇ ಸತ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ನನ್ನಾ ಮನಿಯ ಮುರುದಾವಯ್ಯೋ | ಸೋಕೀರ ಮೂವ ತಾಜೀಜಿ |

ಮಾಟ ಮಾಡದು ಬಿಟ್ಟು ಹೊರಗೆ ಬಂದು ನೋಡ್ದ ರಕ್ತಕಕ್ಕಿ ಸತ್ತು ಬಿಟ್ಟಾನ. ಆಗ ಕಾಳಿಕೊಂಡಯ್ಯ ಮೂರುಖಂಡುಗ ದುಃಖ ಹೊಟ್ಟಿಗೆ ತುಂಬ್ಯಾನು. ಸತ್ತು ಮಗುನ ತಗೊಂಡು ಮುಂದ ಅಕ್ಕಂಡು ಮತ್ತ ಗೋಣಿಬಸಪ್ಪನ ನೆನಿತಾನ್ರೀ. ‘ಗೋಣಿಬಸವೇಶ್ವರಾ ಮನಿಸ್ವಾಮಿ ಗೋಣಿ ಬಸವೇಶ್ವರಾ ಬೇಕಂತಾ ನಿನಗೆ ಮಾಡ ಮಾಡದಿಲ್ಲಪಾ, ಶಿವನಪ್ಪಗ ಹೆದ್ರಿ ಬೆದರಿ, ಮಾನಕ್ಕ ಹೆದರಿ ಮಾಟಮಾಡಾಕ ಒಪ್ಕೆಂಡೀನಿ. ಇಲ್ಲಿಂದ್ಲಿತ್ತಾಗೆ ಶಿವನಯ್ಯ ಕಡದ್ರೆ ಕಡೀಲಿ, ಬಡದ್ರೆ ಬಡೀಲಿ, ಊರು ಬಿಟ್ಟು ದೂಡಿದ್ರೆ ದೂಡಲಿ’ ಒಂಬತ್ತು ಲಕ್ಷದ ಹಣ ಹಿಂದಕ್ಕ ಕೊಟ್ಟಬಿಡ್ತೀನಿ. ಮಾಟ ಮಾಡುದಿಲ್ಲ.

ನನ್ನ ಮಗನಿಗೆ ಪ್ರಾಣ ಕೊಡೋ | ಸೋಕೀರ ಮೂವ ತಾಜೀಜಿ |
ಪ್ರಾಣಾಕೊಡೋ ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ತಪ್ಪೇ ಆತೋ ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ಬಿದ್ದೆ ಬಿದ್ದೆ ಬೇಡತಾನೇ | ಸೋಕೀರ ಮೂವ ತಾಜೀಜಿ |
ಅಡ್ಡ ಉದ್ದ ಬೀಳುತಾನೇ | ಸೋಕೀರ ಮೂವ ತಾಜೀಜಿ |

ಬಿದ್ದು ಬೇಡ್ಕೆಂತಾನೆ ಚಲವಾದಿ ಕಾಳಿಕೊಂಡಯ್ಯ. ಅಂದ್ರೆ, ಹರಪ್ನಳ್ಯಾಗ ಬೇಡೋದು ಕೂಲಳ್ಳ್ಯಾಗ ಗೋಣಿ ಬಸವೇಶ್ವರಗ ಅರಿವಿಗಾತಂತ್ರೀ, ‘ಕಲ್ಲಪ್ಪ ನೋಡ್ದೇನಯ್ಯ, ಮಾಡ ಮಾಡಾದು ಬಿಡ್ತಾನಂತೇ, ಮಗನಿಗೆ ಪ್ರಾಣ ಕೊಡ್ಬೇಕಂತೆ. ಆಯ್ತಪ ಬಸವನಾಗಿ ಬಾಳೀನಿ, ಬಡಿಯೋರಿಗೆ ಬೆನ್ನ ಕೊಡಬೇಕು, ಬೈಯೋರಿಗೆ ಬಾಯಿ ಕೊಡಬೇಕು. ಬಾಗೋರು ಇದ್ರಿಗೆ ಬಂದ್ರೆ ತಲಿಬಾಗಿ ಹೋಗ್ಬೇಕು. ವಿಷಾ ನೀಡಿದ್ರೆ ಹಾಲಂದು ಕುಡೀಬೇಕು. ಕರ್ಮಮಾಡ್ದೊರಿಗೆ ಧರ್ಮ ಮಾಡ್ಬೇಕಯ’.

ಮಗನಿಗೆ ನಾನು ಪ್ರಾಣ ಕೊಡ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ಧರ್ಮದ ಗುರುವೋ ನನ್ನ ದೈವೇ | ಸೋಕೀರ ಮೂವ ತಾಜೀಜಿ |

ಮತ್ತೆ ತಾನೆ ಮರುಗುತಾನೆ. ವಿಭೂತಿ ಬೂದಿ ತಗಂಡ, ಕೈಯಾಗ ಇಡ್ಕಂಡ, ಹರಪ್ನಳ್ಳಿ ಕಡಿಗೆ ಬೂದೀನ ಉಗ್ಗಿಬಿಟ್ಟ. ಉಗ್ಗಿದಾಗ ಸತ್ತಂತ ಮಗ ಎಡಗಡಿಗೆ ಹೊರಳಿ, ಬಲಗಡಿಗೆ ಹೊರಳಿ, ತಂದಿತಾಯಿ ಮುಖನ ಕಣ್ತಗದು ನೋಡ್ತತೆ.

ಪಕ ಪಕ ನಗುತಾತಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೆ ಜಲ್ಮ ಕೊಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |

‘ಭಲೈ ಭಲೈ ಆ ಗಾಣಿಗ್ರ ನೋಡಿದ್ರೇನಯ್ಯ, ನನ್ನ ವರವು ಕುರುವ ಶಿವನಲ್ಲಿ ಪಡ್ಕ ಬಂದಿದ್ದಿ, ನನ್ನ ಮಗ ಪಡ್ಕಂಡಿ. ನಾನು ಮಾಡಿದ್ದ ಧರ್ಮ ಬೆನ್ನ ಕಾದಬಂತಯ್ಯ. ದೇವ್ರಿಲ್ಲ, ದಿಂಡ್ರಿಲ್ಲ, ಗೋಣಿಬಸವ ನನ್ನ ಮನಿಯಾಗಿಲ್ಲ.

ಅವನಿಗೆ ಮಾಟಮಾಡಬೇಕೋ | ಸೋಕೀರ ಮೂವ ತಾಜೀಜಿ |
ಅವನಿಗೆ ನಾನೇ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ |

ಸೊಕ್ಕಿನ ಕಾಳಿಕೊಂಡಯ್ಯ ಮತ್ತೆ ಮಿಕ್ಕಿದಂಗೆ ಮಾತಾಡ್ತಾನ್ರೀ. ಧರ‍್ಮದ ಗುರುವಿಗೆ

ಮತ್ತೇ ಮಾಟಾ ಮಾಡಾತನೇ | ಶಿವನೆನೆಯವ ದೇವೈ |
ಧರ್ಮದ ಗುರುವು ನನ್ನ ದೈವೇ | ಶಿವನೆನೆಯವ ದೇವೈ |
ಚಲುವಾದಿ ಮಾಟಾ ಮಾಡುತಾನೇ | ಶಿವನೆನೆಯವ ದೇವೈ |
ಮಾಟಾದ ಗೊಂಬೀಯ ಮಾಡಾತಾನೇ | ಶಿವನೆನೆಯವ ದೇವೈ |
ಮೊರವಿಯ ಗೊಂಬಿಯ ಮಾಡಾತಾರೇ | ಶಿವನೆನೆಯವ ದೇವೈ |
ಗುರುವಿಗೆ ಮರಣಾ ಬಂದಾವೈಯ್ಯೋ | ಶಿವನೆನೆಯವ ದೇವೈ |
ಧರ್ಮದ ಗುರುವೋ ನನ್ನ ದೈವೇ | ಶಿವನೆನೆಯವ ದೇವೈ |
ಶಿವನಿಗೆ ಮೋಸಾ ಮಾಡಾತಾನೇ | ಶಿವನೆನೆಯವ ದೇವೈ |

ಮೂರು ಗೊಂಬೀ ಮಾಡ್ಯಾನು, ಅಂತ್ರ ಮಂತ್ರ ತಂತ್ರ ಮಾಡ್ಯಾನು. ಮೂರು ಗೊಂಬಿ ತಗೊಂಡು ರಾಜಸಿಂಹಾಸನಕ್ಕೆ ಬಂದಾನು ‘ರಾಜಾಧಿರಾಜ ಮೂರು ಗೊಂಬೀ ಮಾಡ್ವೀನ್ರೀ’ ಮೂರು ಬಳಿಲೆ ಮೂರು ಗೊಂಬಿ ಹುಗುದು ಬಿಡ್ರೀ ಸುಟ್ಟು ಬೂದಿಯಾಗಿಬಿಡ್ತಾನೆ. ‘ಭಲೈ ಭಲೈ ಕಾಳಿ ಕೊಂಡಯ್ಯ, ಯ್ಯಾವ ಯಾವ ಸ್ಥಾನದಾಗ ಹುಗೀಬೇಕು ಹೇಳಯ್ಯೋ ಮೂರುಗೊಂಬೀನ?’

ಹರಹರ ಭಗವಂತ | ತಾನಿ ತಂದನಿ ನಾನೋ |
ಮಠದ ಬಾಗಲ ಒಳಗೆ | ತಾನಿ ತಂದನಿ ನಾನೋ |
ಒಂದು ಗೊಂಬಿ ಹುಗೀಬೇಕೋ | ತಾನಿ ತಂದನಿ ನಾನೋ |
ಕುಂದ್ರ ಗದ್ದಿಗಿ ಒಳಗೇ | ತಾನಿ ತಂದನಿ ನಾನೋ |
ಒಂದು ಗೊಂಬಿ ಹುಗೀಬೇಕೋ | ತಾನಿ ತಂದನಿ ನಾನೋ |
ಮಜ್ಜಣ ಬಾವ್ಯಾಗೇ | ತಾನಿ ತಂದನಿ ನಾನೋ |
ಒಂದು ಗೊಂಬಿ ಹುಗಿಬೇಕೋ | ತಾನಿ ತಂದನಿ ನಾನೋ |

‘ಅವ್ನು ಕುಂದ್ರ ಗದ್ದಿಗಿ ಅಡ್ಯಾಗ ಒಂದು ಗೊಂಬಿ ಹುಗೀರಿ, ಮಠದ ಬಾಗ್ಲಾಗ ಒಂದು ಗೊಂಬಿ ಹುಗೀರಿ. ಒಂದು ಗೊಂಬೀನ ಅವ್ನು ಸ್ನಾನಮಾಡ ಮಜ್ಜನ ಬಾವ್ಯಾಗ ಹುಗೀರಿ. ಮೂರು ಬಳೀಲಿ[8] ಮೂರು ಗೊಂಬಿ ಹುಗುದುಬಿಡ್ರೀ ಸುಟ್ಟು ಬೂದಿ ಅಕ್ಕಾನೆ’ ಶಿವನಯ್ಯ ಕೇಕಿ ಹೊಡಿತಾನು, ಟೀಕೆ ಹಾಕಿ ನಗುತಾನು. ಗೊಂಡದ ಮೀಸಿ ತಿರುವುತಾನು. ಹಲ್ಲು ಕಡಿತಾನು, ಬಿರಿ ಬಿರಿ ಕಣ್ ಬಿಡ್ತಾನು. ‘ಆ ಗಾಣಿಗ್ರಾ ಬರೇ ಗೊಂಬಿ ತಗೊಂಡು ಹೋಗ್ಬ್ಯಾಡ್ರಪಾ ಜಪ್ಪದಿಲ್ಲ, ನನ್ನ ಮನ್ಸು ಒಪ್ಪದಿಲ್ಲ ಒಂಬತ್ತು ಎತ್ತಿನ ಮ್ಯಾಲೆ ಹಾಲುಮಾಲು ಏರ್ರೆಯ್ಯ’, ಶಿವನಯ್ಯ ಒಂಬತ್ತು ಎತ್ತಿನ ಮ್ಯಾಲೆ ಹಾಲುಮಾಲು ಏರಿಸ್ತಾನೆ.

ಹರಹರ ಭಗವಂತಾ | ತಾನಿ ತಂದನಿ ನಾನೋ |
ಬೆಲ್ಲದಾ ಏರಣ್ಣಾ | ತಾನಿ ತಂದನಿ ನಾನೋ |
ಸಣ್ಣಕ್ಕಿ ಏರಣ್ಣಾ | ತಾನಿ ತಂದನಿ ನಾನೋ |
ದೊಡ್ಡಕ್ಕಿ ಏರಣ್ಣಾ | ತಾನಿ ತಂದನಿ ನಾನೋ |
ತೆಂಗಿನಕಾಯಿ ಏರಣ್ಣಾ | ತಾನಿ ತಂದನಿ ನಾನೋ |
ಬಾಳೆಹಣ್ಣಿನ ಏರಣ್ಣಾ | ತಾನಿ ತಂದನಿ ನಾನೋ |
ತುಪ್ಪದಾ ಕೊಡವಣ್ಣೋ | ತಾನಿ ತಂದನಿ ನಾನೋ |
ಎಣ್ಣಿಯ ಕೊಡವಣ್ಣಾ | ತಾನಿ ತಂದನಿ ನಾನೋ |

ಶಿವನಯ್ಯ ಒಂಬತ್ತು ಎತ್ತಿನಮ್ಯಾಲೆ

ಹಾಲುಮಾಲು ಏರಸ್ತಾನೇ | ಸೋಕೀರ ಮೂವ ತಾಜೀಜಿ |
ಮೂರು ಗೊಂಬಿಯ ಹಿಡದಾರಯ್ಯೋ | ಸೋಕೀರ ಮೂವ ತಾಜೀಜಿ |

‘ಆ ಗಾಣಿಗ್ರಾ, ಈ ಒಂಬತ್ತು ಎತ್ತಿನ ಹಾಲುಮಾಲು ಅವ್ನ ಮಠಕ್ಕೆ ಒಪ್ಪಿಸ್ರೀ. ಮೂರು ಬಳೀಲೀ ಮೂರು ಗೊಂಬಿ ಹುಗುದು ಬಾ ಹೋಗ್ರಯ್ಯ ‘ಚಿಗಟೇರಿ ಶಿವನಯ್ಯ ಕಳಸ್ತಾನ್ರೀ. ನಾಕು ಮಂದಿ ಗಾಣಿಗ್ರು ಮೂರು ಗೊಂಬಿ ತಗೊಂಡಾರು. ಹಾಲುಮಾಲು ತಗೊಂಡು ಹರಪ್ನಳ್ಳಿ ಬಿಟ್ಟು ಕೂಲಳ್ಳಿಗೆ ಬರ್ತಾರು. ಅವ್ರು ಮಾತಾಡೋದು. ಅವ್ರು ಬರೋದು ಗೋಣಿಬಸಪ್ಪಗೆ ಎಲ್ಲ ಗೊತ್ತಾತ್ರೀ ಕೂಲಳ್ಯಾಗ. ‘ಆ ಇವತ್ತು ಬರ್ತಾರಪಾ ನಾನ್ ಮಠದಾಗ ಇರ‍್ಬಾರ‍್ದಪ ಮಠ ಬಿಟ್ಟು ಎಲ್ಲರ ಹೋಗ್ಬೇಕು, ಆ ಕಲ್ಲಪ್ಪ ಹೊಳೀಮಂದಿ ನನ್ನ ಭಕ್ತರು, ನನ್ನ ಮಠಕ್ಕೆ ಬರೋರು ‘ನೀರು ನೀರು’ ಅಂತಾರಪ ಆ ಬೆಟ್ಟದ ಬಳಿಯಲ್ಲಿ ಒಂದು ಕೆರೆ ಕಟ್ಟಿಸಾನು ನಡಿಯಪ ಹೋಗನು’ ಗೋಣಿ ಬಸವೇಶ್ವರ ಅಳಿಲಗೊಂಗಡಿ[9] ಮುಸುಕಾಕಿದ ಕಾವಿ ಕಮಂಡಲ ಹಕ್ಕೆಂಡ, ಬಲಗೈಲಿ ಕತ್ತಿ ಹಿಡ್ಕಂಡ ಮುಂದೆ ಮುಂದೆ ಕಲ್ಲಪ್ಪ, ಹಿಂದೆ ಹಿಂದೆ ಗೋಣಿ ಬಸವೇಶ್ವರ ಬೆಟ್ಟದ ಬಳಿಯಲ್ಲಿ ಅಟ್ಟದ ಮಾಳೆಣ್ಣದಾಗೆ ಕೆರೆ ಕಟ್ಟಸಾಕೇ

ಮಠಬಿಟ್ಟೇ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಅಡವೀಗೇ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಬೆಟ್ಟದ ಬಳಿಗೆ ಹೋಗುತಾರೇ | ಸೋಕೀರ ಮೂವ ತಾಜೀಜಿ |

ಬೆಟ್ಟದ ಬಳಿಯಲ್ಲಿ, ಕೆರಿ ಕಟ್ಟಸ್ತಾನ್ರೀ ಗೋಣಿ ಬಸವೇಶ್ವರ. ಆತ ಕೆರಿ ಕಟ್ಟಸಾ ಕರಗ ನಾಲ್ಕು ಮಂದಿ ಗಾಣಿಗ್ರು ಮಠ ನುಗ್ಗುತಾರು. ‘ಆ ಒಳ್ಳೇ ಸಮಯಲೇ ಮಠದಾಗೆ ಒಬ್ರೂ ಇಲ್ಲ. ಜಂಬದೇವರ ಗುಡಿ ಮುಂದೆ ಜೋಗೇರು ಇಲ್ಲ. ಉಪ್ಪುರಿಗೆ ಮಂದೆ ಭಿಕ್ಷುಕುರಿಲ್ಲ. ಯಾರಿಲ್ಲಯ್ಯ ಇದೇ ಸಂದರ್ಭದಾಗ ನೆಲ್ದಾಗ ಹುಗುದುಬಿಡೋಣು. ಗಾಬ್ರಿ ಅವಸರಿಂದ ಗಾಣಿಗ್ರು ಕೂಲಳ್ಳಿ ಮಠದಾಗೆ ಮೊರವಿ ಗೊಂಬಿ ಹುಗಿತಾರೆ.

ಹರಹರ ಭಗವಂತ | ತಾನಿ ತಂದನಿ ನಾನೋ |
ಕುಂದ್ರ ಗದ್ದಿಗಿ ಒಳಗೆ | ತಾನಿ ತಂದನಿ ನಾನೋ |
ಒಂದು ಗೊಂಬಿ ಹುಗುದಾರೋ | ತಾನಿ ತಂದನಿ ನಾನೋ |
ಮಠದ ಬಾಗಲ ಒಳಗೇ | ತಾನಿ ತಂದನಿ ನಾನೋ |
ಒಂದು ಗೊಂಬಿ ಹುಗುದಾರೋ | ತಾನಿ ತಂದನಿ ನಾನೋ |
ಮಜ್ಜನ ಬಾವ್ಯಾಗೇ | ತಾನಿ ತಂದನಿ ನಾನೋ |
ಒಂದು ಗೊಂಬಿ ಹುಗುದಾರೋ | ತಾನಿ ತಂದನಿ ನಾನೋ |
ಮೂರುಬಳೀಲೀ ಮೂರೋ | ತಾನಿ ತಂದನಿ ನಾನೋ |
ಗೊಂಬಿಯ ಹುಗುದಾರೋ | ತಾನಿ ತಂದನಿ ನಾನೋ |

ಇಲ್ಲಿ ಮಠದಾಗ ಗೊಂಬಿ ಹುಗಿಯೋದು ಕೆರಿ ಹಿಂದಕೆ ಗೋಣಿಬಸಪ್ಪಗೆ ಅರಿವಿಕೆ ಆಯ್ತಂತ್ರೀ. ಆಗ ಅಂತಾನೆ ‘ಕಲ್ಲಪ್ಪ ನಮಗೆಲ್ಲ ಬದುಕಪ್ಪ, ನಮಗೆಲ್ಲ ಬಾಳಪ್ಪ, ಸಾಕು ಕಲ್ಲು ಹೊಡಕಿ[10] ಬಿಡ್ಸು, ಕಾಮ್ ಹೊಡಕಿ ಬಿಡ್ಸು ಯಾಕ ಮಠದ ಕಡಿಗೆ.

ಭಾಳ ಗದ್ದಲಾಗುತೈತೇ | ಸೋಕೀರ ಮೂವ ತಾಜೀಜಿ |
ನಾವೇ ಮಠಕೆ ಹೋಗಬೇಕೋ | ಸೋಕೀರ ಮೂವ ತಾಜೀಜಿ |

ಆಗ ಕಲ್ಲುಮಡ್ಕಿ ಬಿಡಿಸ್ಯಾನು ‘ಆ ಮಕ್ಕಳಾ ಭಕ್ತರ, ನಿಮಿಗೆ ಬಟವಾಡಿ[11] ಮಾಡ್ತಿನಪಾ ಮಳಲುಗುಂಪಿ[12] ಮಾಡ್ಕೊಳ್ರಯ್ಯ’ ಅವ್ರು ಬದ್ಕು ಮಾಡಿದವ್ರು ಆಳು ಮಕ್ಳು ಆ ಮಳಲುಗುಂಪಿ ಮಾಡ್ಕೆಂತಾರೆ. ಅದ್ಕೆ ಬೆತ್ತ ಮುಟ್ಟಿಸ್ಕೆಂತ ಹೊಕ್ಕಾನ. ‘ಆ ಅದನ್ನು ಕೆದ್ರಿ ತಗೊಳ್ರಯ್ಯ ಹಣ ಐತೆ’ ಕೆದರಾಡಿ ನೋಡ್ತಾರೀ ಬೇಷ ಮೈ ಮರ‍್ದು. ಮೈ ದಣಿಸಿ, ಕೆಲ್ಸ ಮಾಡಿದವನಿಗೆ ಕೈ ತುಂಬಾ ಹಣ ಸಿಕ್ಕೈತೆ. ಕೆಲ್ಸ ಸ್ವಲ್ಪ ಕಡಿಮೆ ಮಾಡ್ದವ್ರಿಗೆ ಸ್ವಲ್ಪ ಸಿಗ್ತತೆ. ಅಂಗಾ ಸುಳ್ತಾಡಿದವನಿಗೆ ಅಲ್ಲಿ ಇಲ್ಲೇ ಇಲ್ಲ. ಇದ್ರಂತೆ ಬಟವಾಡಿ ಮಾಡಿ ಗೋಣಿ ಬಸವೇಶ್ವರಾ

ಮಠಕೆ ತಾನೇ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಇವೆ, ಗಾಣಿಗ್ರ, ನೋಡುತಾರೇ | ಸೋಕೀರ ಮೂವ ತಾಜೀಜಿ |

‘ಆ ತಡಿಯಾ, ಎಲ್ಲೆರ ಹೋಗ್ಲಿ ಅವನೊಂದು ಬರೋದು ತಡಲೇ ಸುಟ್ಟ ಬೂದಿ ಯಾಗ್ತಾನೆ’. ಹುಸಿ ನಗು ನಗ್ತಾರು, ಗುರುವಿನ ದಾರಿ ಕಾಯ್ತಾರು, ನಿಗ್ರಿ ನಿಗ್ರಿ ನೋಡ್ತಾರು. ಗೋಣಿ ಬಸವೇಶ್ವರ ಕೆರಿಮ್ಯಾಗಿಂದ ಮಜ್ಜನ ಬಾವಿಗೆ ಬಂದಾನು. ‘ಆ ಕಲ್ಲಪ ಈಗ ಮಠದಾಕ ಹೊಕ್ಕೇನಿ. ಮೊದ್ಲು ಈ ಬಾವ್ಯಾಗ ಸ್ನಾನ ಮಾಡ್ಕೆಂತೀನಿ ಅಂಗ ಒಳಕ ಹೋಗಾನು’, ‘ಆಗ್ಲಿ ಬುದ್ದಿ’ ಅಂದ. ಗೋಣಿ ಬಸವೇಶ್ವರ ಮಜ್ಜನ ಬಾವ್ಯಾಗ ಸ್ನಾನ ಮಾಡ್ತಾನ್ರೀ. ಕಾವಿ ತಗದಾನು, ಕಮಂಡಲ ತಗದಾನು, ಬಾವಿ ದಂಡಿ ಮ್ಯಾಲಿಟ್ಟು ಬಾವ್ಯಾಕ ಇಳಿತಾನು. ಬಾವ್ಯಾಕ ಇಳ್ದು ಎರೆಡುಪಾದ ನೀರಾಕ ಇಟ್ಟ. ಮೆಟ್ಲು ಮ್ಯಾಲ ಕುತ್ಕಂಡು ಸ್ನಾನ ಮಾಡ್ತಾನ್ರೀ. ಆ ಮಜ್ಜನಬಾವ್ಯಾಗ ಇದ್ದಂತ ಗೊಂಬಿ ಆಲೋಚ್ನಿ ಮಾಡ್ತದ್ರೀ. ‘ಆಹಾ ಪರಮಾತ್ಮ ಗುರುವಿನ ಪಾದಕಂಡು ಸ್ವರ್ಗ ಸೇರ‍್ಬೇಕಯ್ಯ ಅಂಗ ಹೋಗ್ಬಾರ್ದು ಗುರುವಿನ ಪಾದ ಕಾಣ್ ದಿದ್ದರೆ ಸ್ವರ್ಗ ಸಿಗಂಗಿಲ್ಲ. ಯಾವ ಕಾಲಕ್ಕೂ ನನಿಗೆ ಗುರುವಿನ ಪಾದ ಸಿಗ್ಬೇಕಯ್ಯ’ ಹುಗ್ದಂತ ಮೊರವಿ ಗೊಂಬಿ ಪಟ ಪಟ ಕೊಡಿವಿ, ಬುಡಮೇಲ ಅಲ್ಲಾಡಿಸಿ, ಕೆಳಗ ಗುಳ್ಳಿ ಮ್ಯಾಕ ಹೋಯ್ತು, ಮ್ಯಾಗಳ ಗುಳ್ಳಿ ಕೆಳಕ ಹೋಯ್ತು. ಮಾಟದ ಗೊಂಬಿ ಗೋಣಿಬಸಪ್ಪನ

ಪಾದಕ್ಕ ಬೀಳುತೈತೇ | ಸೋಕೀರ ಮೂವ ತಾಜೀಜಿ |
ಬಿದ್ದೆ ಬಿದ್ದೆ ಬೇಡುತೈತೇ | ಸೋಕೀರ ಮೂವ ತಾಜೀಜಿ |

‘ನೋಡಪಾ ಕಲ್ಲಪಾ, ಗೊಂಬಿ ಪಾದಕ್ಕ ಬಿದ್ದು ಬೇಡ್ತೈತೇ’ ಗೊಂಬಿ ಇಡ್ಕಂಡಾನು. ‘ಕಲ್ಲಪಾ ಇದನ್ನು ಬಿಡಬೇಡಾ ಬೇಶ್ ಇಡ್ಕಾ’ ಪೂಜಾರಿ ಕಲ್ಲಪ್ಪ ತೆಕ್ಕೆಬಡು[13] ಗೊಂಬಿ ಇಡ್ಕಂಡಾನು. ಗೋಣಿ ಬಸವೇಶ್ವರಾ ಸ್ನಾನ ಮಾಡ್ತಾನು. ಸ್ನಾನ ಮಾಡಿ ಮತ್ತೆ ಕಾವಿ ಕಮಂಡಲ ಹಾಕ್ದ ಮುಂಗೈಗೆ ಜೋಳ್ಗಿ ಹಾಕ್ಕೆಂಡ. ಗೋಣಿ ಬಸವೇಶ್ವರ ಹಿಂದೆ ಹಿಂದೆ ಕಲ್ಲಪ ಮುಂದೆ ಮುಂದೆ ಮಜ್ಜನಬಾವಿ ಬಿಟ್ಟು.

ಮಠಕೆ ತಾನೇ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಮಠದ ಬಾಗ್ಲಿಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |

‘ಆಹಾ ಬಂದಾ ಬಂದಾ ಈಗ ನೋಡಾ ಸುಟ್ಟು ಬೂದಿ ಆಗ್ಬಿಡ್ತಾನೆ’. ಗಾಣಿಗ್ರು ಮಾತಾಡ್ತಾರೆ. ಹುಸಿನಗು ನಗ್ತಾರೆ. ಗೋಣಿ ಬಸವೇಶ್ವರಾ ಬಾಗಿಲಿಗೆ ಬರತಡ ಬಾಗ್ಲಗ ಹುಗುದಂತ ಗೊಂಬಿ ಅಲೋಚ್ನಿ ಮಾಡ್ತ್‌ತ್ರೀ. ‘ಆಹಾ ಇಲ್ಲಿಗೆ ಸ್ವರ್ಗದಾರಿ ಸಿಗ್ತಪ. ಗುರುವಿನ ಪಾದ ಸಿಕ್ತು, ಇನ್ನೇನು ಸ್ವರ್ಗದ ದಾರಿ ಸಿಕ್ಕಂಗ’ ಹುಗ್ದದಂತ ಮಾಟದ ಗೊಂಬಿ ಪಟ ಪಟ ಕೊಡಿವಿ ಬುಡಮೇಲ ಅಲ್ಲಾಡಿಸಿ ಕೆಳಗಲ ಎಂಡಿ ಮ್ಯಾಲಕ್ಕ ಹೋತು. ಗೊಂಬಿ ಹುಗ್ದಂತಲ್ಲಿಂದ ಕಡೀಗೆ ಬಂದು ಗೋಣಿಬಸಪ್ಪನ

ಪಾದಕ್ಕ ಬೀಳುತೈತೇ | ಸೋಕೀರ ಮೂವ ತಾಜೀಜಿ |
ತಪ್ಪು ಆತೋ ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ಬಿದ್ದ ಬಿದ್ದ ಬೇಡುತಾದೆ | ಸೋಕೀರ ಮೂವ ತಾಜೀಜಿ |

ಬಿದ್ದು ಬಿದ್ದು ಬೇಡತೈತೆ. ನಾಕು ಮಂದಿ ಗಾಣಿಗ್ರು ಕೆಕ್ಕರಿಸಿಕೊಂಡು ನೋಡ್ತಾರೆ. ‘ಅಲೇ ಇದೇನ್ಲೆ ಆ ಗೊಂಬಿನೆ ಕಾಲಿಗಿ ಬೀಳ್ತತಲ್ಲೋ, ಇನ್ನ ಏನಾಗದಿಲ್ಲ ಬಿಡ. ರಾಜಗೇನು ಹೇಳಾನು ಹೋಗಿ’ ಪಿಸಿ ಪಿಸಿ ಮಾತಾಡ್ತಾರು. ನೋಡ್ರಿ, ಮೈತೊಳ್ಕಂಡಂಗ ಬೆವತುಬಿಟ್ಟರು. ಅದರಾಗ ಒಬ್ಬಾತ ಅಂತಾನು ‘ಏ ಇವೆರಡ್ರಾಗ ಏನೈತಿ ಬಿಡು ಒಳಗ ಐತಿ ಬಿಡಾ ನಾಟ[14] ಅವ್ನ ಗದ್ದಿಗಿ ಮ್ಯಾಗ ಕುಂದ್ರತಡ ಅಂಗ ಸುಟ್ಟ ಬೂದಿ ಆಗಿಬಿಡ್ತಾನ’ ಮತ್ತೆ ಮಾತಾಡ್ತಾರ ಆಗ ‘ಕಲ್ಲಪ ಇದೊಂದು ಗೊಂಬಿ ತಗೊಳಪಾ’ ಆಗ ಮಠದ ಬಾಗ್ಲು ದಾಟಿ ಒಳಗ ಗುಡಿಗೆ ಹೋಗಿ ಗದ್ದಿಗೆ ಮ್ಯಾಗ ಕುಂತಾನು. ಪೂಜಾರಿ ಕಲ್ಲಪ್ಪ ಪೂಜಿ ಮಾಡ್ತಾನೆ. ಗುರು ಗದ್ದಿಗಿ ಮ್ಯಾಗ ಕುಂತಾನು. ಕುಂತ ತಾಸ ಹೊತ್ತಿಗೆ ಹುಗದಂತ ಗೊಂಬಿ ಅಲೋಚ್ನಿ ಮಾಡ್ತದೆ. ‘ಇಲ್ಲಿಗೆ ಗುರುವಿನ ಪಾದ ಸಿಕ್ಕವಪ್ಪ, ಗುರುವಿನ ಪಾದ ಕಂಡು ಸ್ವರ್ಗ ಸೇರ‍್ಬಕಪ್ಪಾ ಇಲ್ಲಿಗೆ ಧನ್ಯನಾದೆ ನಾನು’ ಅಂದು ಮೊರವಿಗೊಂಬಿ ಪಟ ಪಟ ಕೊಡವಿ ಬುಡಮೇಲು ಅಲ್ಲಾಡಿಸಿ ಕೆಳಗಲ ಕಲ್ಲು ಮ್ಯಾಕ ಹೊಗೀತು, ಮ್ಯಾಗಲ ಕಲ್ಲು ಕೆಳಕ ಹೊಗುದು ಗೋಣಿಬಸಪ್ಪನ

ಪಾದಕ್ಕೆ ಬೀಳುತೈತೇ | ಸೋಕೀರ ಮೂವ ತಾಜೀಜಿ |
ಬಿದ್ದೆ ಬಿದ್ದೇ ಬೇಡುತೈತೇ | ಸೋಕೀರ ಮೂವ ತಾಜೀಜಿ |
ನನ್ನ ಗುರುವಿನ ಪಾದ ಸಿಕ್ಕಾವೈಯ್ಯೋ | ಸೋಕೀರ ಮೂವ ತಾಜೀಜಿ |
ಗುರುವು ಕಂಡು ಧನ್ಯನಾದೇ | ಸೋಕೀರ ಮೂವ ತಾಜೀಜಿ |

ಬಿದ್ದು ಬಿದ್ದು ಬೇಡ್ತದೆ. ‘ಆ ಕಲ್ಲಪ್ಪ ಇದೊಂದು ಗೊಂಬಿ ತಗೊಳಪಾ’ ಕಲ್ಲಪ್ಪ ಮೂರು ಗೊಂಬಿ ಇಡ್ಕಂಡಾನು. ‘ಕಲ್ಲಪ್ಪಾ, ಅವರು ತಂದಂಥ ಹಾಲು ಮಾಲು ಹಿಂದ್ಕ ಕಳಿಸಿದ್ರೆ, ಶಿವಪ್ಪ ಬೆದರಿದ ಅಂತಾನೆ. ಅವರು ತಂದಂಥ ಹಾಲು ಮಾಲು ಆ ಉಗ್ರಾಣಕ್ಕೆ ತುಂಬಿ. ಹಿಂದೆ ಲಾಯ್ದಕೆ ಹಾರಿ ಒಂದು ಮಠದ ಕುಳ್ಳು[15] ತಗೊಂಡು ಬಾ ಮಠದ ಕುಳ್ಳು ತಗೊಂಡು ಬಂದು ಮಠದ ಬಾಗಲೊಳಗೆ ಕುಳ್ಳಿನ ಈಡು ಒಟ್ಟಿ ಗೊಂಬಿ ಇಟ್ಟು’

ಸುಟ್ಟ ಬೂದೀ ಮಾಡೋ ಮಗನೇ | ಸೋಕೀರ ಮೂವ ತಾಜೀಜಿ |
ಗುರುವೇ ತಾನೇ ಹೇಳುತಾನೇ | ಸೋಕೀರ ಮೂವ ತಾಜೀಜಿ |
ಗೋಣಿಬಸವಾ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಒಂಬತ್ತು ಎತ್ತಿನ ಹಾಲು ಮಾಲು ಉಗ್ರಾಣದಾಗ ತುಂಬ್ಯಾನು. ಲಾಯ್ದಕ ಹಾರಿ ಮಠದ ಕುಳ್ಳು ತಂದ, ಮಠದ ಬಾಗಲಗೆ ಕುಳ್ಳು ಹೊಟ್ಟಿದ. ಅದರ ಮ್ಯಾಗ ಮೂರು ಗೊಂಬೀ ಇಟ್ಟ ಬೆಂಕಿ ಇಟ್ಟ. ಜಳಾ ಬಡಿಯತನ್ಕ ಸುಮ್ಕಿದ್ದ ಗೊಂಬೀ ಪೂಜಾರಿ ಕಲ್ಲಪ್ಪನ್ನ

ಒಂದು ಕ್ವಾಣ ಗದುಮಿ[16] ದಂಗೇ | ಸೋಕೀರ ಮೂವ ತಾಜೀಜಿ |
ಗದಮಿಕಂಡೇ ಹೋಗ ತಾವೇ | ಸೋಕೀರ ಮೂವ ತಾಜೀಜಿ |
ಹದ್ದೇ ಆಡಿದಂಗ ಆಡುತಾವೇ | ಸೋಕೀರ ಮೂವ ತಾಜೀಜಿ |
ಬಿಟ್ಟು ಕೊಟ್ಟು ಕಲ್ಲಪ್ಪ ಓಡಿ ಓಡಿ ಹೋಗ್ಯಾನೆ.
ಗುರುಗಳೇ ಗುರುಗಳೇ ಗೊಂಬಿ ಸುಡಾದು
ನನ್ನ ಕೈಲೀ ಆಗೋದಿಲ್ಲೋ | ಸೋಕೀರ ಮೂವ ತಾಜೀಜಿ |
ಗದಿಮಿಕಂಡೇ ಬರ್ತಾವಯ್ಯೋ | ಸೋಕೀರ ಮೂವ ತಾಜೀಜಿ |
ಮ್ಯಾಗ ಮ್ಯಾಗ ಬರ್ತಾವಯ್ಯೋ | ಸೋಕೀರ ಮೂವ ತಾಜೀಜಿ |
ಮ್ಯಾಲೆ ಹದ್ದೇ ಆಡಿದಾಂಗೆ ಆಡುತಾವೇ | ಸೋಕೀರ ಮೂವ ತಾಜೀಜಿ |

ಕಲ್ಲಪ್ಪ ಹೇಳಿದ. ಆಗಂತಾನ್ರೀ ಗೋಣಿ ಬಸವೇಶ್ವರ ‘ಮಗು ಕಲ್ಲಪ್ಪ, ನನಗೆ ಬಂದ ಎಡೀ ನಾನೇ ಉಣ್ಬೇಕಪಾ, ಯಾರಿಗೆ ಕೊಡ್ಬಾರ್ದು. ಮಗು ಆದ್ರೆ ಬಸವಾಗಿ ಬಾಳೀನಪ’ ಅಂದು ಅಳಿಲುಗೊಂಗಡಿ ಮುಸುಗಾಕ್ಯಾನ್, ಕೈಯಾಗ ಬೆತ್ತ ಹಿಡ್ಕಂಡು ಗದ್ದಿಗಿ ಬಿಟ್ಟು, ಮಠ ಬಿಟ್ಟು, ಮಠದ ಹೊರಗೆ ತಾನೇ ಬಂದ. ಮಠದ ಹೊರಗೆ ಬಂದು ಮ್ಯಾಕ್ ನೋಡ್ದ. ಹದ್ದು ಆಡಿದಾಂಗ ಆಡ್ತಾವ್ ಗೊಂಬಿ. ಆಗ ಕೈ ಬೀಸಿದ, ಕೈ ಬೀಸ ತಡ ಮೂರು ಗೊಂಬೀ ಕೆಳಾಕ ಬಂದು ಗುರುವಿನ ಪಾದ್ಕ ಬಿದ್ದವಂತೆ ಆಗ ಗೊಂಬಿ ಇಡ್ಕಂಡು ‘ಆ ಕಲ್ಲಪ್ಪ ಸುತ್ತಮುತ್ತ ಕುಳ್ಳು ಆದು ಈಡು ಹೊಟ್ಟಯ್ಯ’. ಮತ್ತೆ ಈಡು ಹೊಟ್ಟಿಸ್ಯಾನು ಈಡಿನ ಮ್ಯಾಲೆ ಮೂರು ಗೊಂಬಿ ಇಟ್ಟಾನು. ಗೊಂಬಿ ಮ್ಯಾಲೆ ತನ್ನ ಕೈಯನ ಬೆತ್ತ ಇಟ್ಟ, ಗೋಣಿ ಬಸವೇಶ್ವರ ಮಠದ ಬಾಗ್ಲಾಗೆ ಮೊರವಿ ಗೊಂಬಿಗಳಿಗೆ ಬುದ್ಧಿ ಜ್ಞಾನ ಹೇಳ್ತಾನ್ರೀ. ಏನು ಹೇಳ್ತಾನು. ಮೊರವಿಗೊಂಬಿಗಳ, ಅಲ್ಲ ದೇವರ ಗಂಡ, ಹೆಣ್ಣ ದೇವರ ಮಿಂಡ, ತುರುಕರ ದೇವರಿಗೆ ಗಂಡ. ಸಿದ್ಧರ ಕೂಡ ಆಡಿ ಸಿದ್ದ ವಿದ್ಯ ಕಲ್ತೀನಿ ನನಿಗೆ ಅಂತ್ರ ಮಂತ್ರ ಅತ್ತದಿಲ್ಲಾ ಮಾಡಿಕೊಟ್ಟನ ಸುದ್ದಿ ಮ್ಯಾಲೆ ನೋಡಿಬಿಟ್ಟಿನಿ ಉರಿಯೋದಅಂದ.

ಮೂರುಗೊಂಬಿಗಳೇ ದಗ್ಗ ದಗ್ಗ ಉರಿಯತಾವೇ | ಸೋಕೀರ ಮೂವ ತಾಜೀಜಿ |
ಮೂರಗೊಂಬೀ ಸುಡತಾವಯ್ಯೋ | ಸೋಕೀರ ಮೂವ ತಾಜೀಜಿ |

ಸುಟ್ಟು ಬೂದಿ ಆದವಂತ್ರೀ. ಆಗ ನೀರಾಕಿ ನೆನ್ಸಿ ಆ ಬೂದ್ಯಾಗ ಕೆದರ‍್ಯಾಡಿ ನೋಡ್ತಾರೆ. ದಡ್ಲಿ[17] ಹಣ್ಣಿನಂಗೆ

ಬಂಗಾರ ಇಳಿದೈತಯ್ಯೋ | ಸೋಕೀರ ಮೂವ ತಾಜೀಜಿ |

‘ಶಿವನಪ್ಪನ ಧರ‍್ಮ ಕರ‍್ಮದ ಬಂಗಾರ ಕಂಡೀವಯ್ಯ’ ಅಕ್ಕಸಾಲಿ ಕರ‍್ಸಿ ಗೋಣಿಬಸಪ್ಪ ಬಂಗಾರ ತೂಕ ಹಾಕ್ಸಿದ. ಅಕ್ಕಸಾಲಿ ಹೇಳ್ತಾನೆ. ‘ಆ ಗುರುಗಳೇ, ಆ ಬಂಗಾರ ಒಂಬತ್ತು ಲಕ್ಷದ ಹಣ ಐತಿ ನೋಡ್ರೀ’. ‘ಆಯ್ತಯ್ಯ ಶಿವನಪ್ಪನ ದಯದಿಂದ ಬಂಗಾರ ಕಂಡೀವಿ ನಮ್ಮ ದೇವ್ರಿಗೆ ಕಣ್ಣಕೊಂಬಿ ಮಾಡು, ಕ್ವಾರಮೀಸ ಮಾಡು ಮತ್ತು ಗಂಡ್ ಗೊಡ್ಲಿ ಮಾಡು, ಅದಾಗಿ ಬಂಗಾರ ಉಳದ್ರ ನನಿಗಿಬ್ರೂ ಸೂಳೇರ ಅದಾರ ಮಾಳಾದೇವಿ, ಪಿಟ್ಟಾದೇವಿ.

ಸೂಳೇರಿಗೆ ವಾಲಿಕಪ್ಪೇ[18] ಮಾಡೋ ಮಗನೇ | ಸೋಕೀರ ಮೂವ ತಾಜೀಜಿ |
ಗುರುವೇ ತಾನ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಆಗ ಅಕ್ಕಸಾಲಿ ಕಳ್ಸಿ ಗೋಣಿಬಸಪ್ಪ ನಾಲ್ಕು ಮಂದಿ ಗಾಣಿಗ್ರತಾಗ ಬಂದಾನು. ಗಾಣಿಗ್ರ ನಿಮ್ಮ ರಾಜಗ ಬುದ್ಧಿ ಹೇಳ್ರಯ್ಯ, ಊರುಕಟ್ಟಿ ಓಕ್ಕಲು ಮಾಡ್ಸಬೇಕು, ಅದು ಮಹಾಪುಣ್ಯ. ತೇರು ಕಟ್ಟಿ ಪರಿಸೆ ನೆಡ್ಸಬೇಕು, ಅದು ಮಹಾಪುಣ್ಯ. ಕೆರೆಬಾವಿ ಕಟ್ಟಿಸಿ ಬಡವಿಗೆ ಬಗ್ಗರಿಗೆ ಅನ್ನದಾನ ಕನ್ಯಾದಾನ ಕೊಟ್ಟು ಮದುವಿ ಮಾಡ್ಬೇಕು, ಅದು ಕೋಟಿಪುಣ್ಯ. ನನ್ನಂತಾನ ಪರದೇಶಿ ಮಾಡಿ’.

ಏನು ಪುಣ್ಯ ಪಡದೀರಯ್ಯೋ | ಸೋಕೀರ ಮೂವ ತಾಜೀಜಿ |
ನಿಮ್ಮ ರಾಜಗ ಬುದ್ಧಿ ಹೇಳ್ರೋ | ಸೋಕೀರ ಮೂವ ತಾಜೀಜಿ |

ನಾಲ್ಕು ಮಂದಿ ಗಾಣಿಗ್ರು ಮುಖದ ಮ್ಯಾಗ ನೀರಿಳಿಕೆಂಡು

ಮಠಬಿಟ್ಟೇ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಹರಪನಳ್ಳಿಗೆ ಹೋಗುತಾರೇ | ಸೋಕೀರ ಮೂವ ತಾಜೀಜಿ |
ರಾಜಧಾನಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |

‘ರಾಜಾಧಿರಾಜ’ ‘ಏನಯ್ಯ ಹೋದಕಾರ‍್ಯ ಏನಾತು?’ ‘ಆ ಬುದ್ಧಿ ತಣ್ಣಗಾತು’ ‘ಏನ್ ತಣ್ಣಗಾತು?’ ‘ಏನಿಲ್ಲ ನಾವ್ ಮಠಕ್ಕೆ ಹೋದ್ವಿ, ಆದ್ರ ಅವ್ನು ಮಠದಾಗ ಇರ‍್ಲಿಲ್ಲ. ಎಲ್ಲಿಗೋಗಿದ್ನೇನೋ ಮೂರು ಸ್ಥಳದಾಗ ಮೂರುಗೊಂಬಿ ಹುಗುದುಬಿಟ್ಟಿ ಅವ್ನು ಬರತ್ತಿಗೆ. ಗೊಂಬಿ ಹುಗುದಿಂದೆ ಬಂದ. ಆದ್ರೆ ಗೊಂಬಿ ಏನೂ ಮಾಡ್ಲಿಲ್ಲ ಹೋಗಿ ಅವ್ನ ಕಾಲಿಗೆ ಬಿದ್ದು ಬಿಟ್ಟು ಗೊಂಬಿ. ಅವುಗಳನ್ನು ತಗೊಂಡು ಸುಟ್ಟು ಬೂದಿ ಮಾಡ್ಬಿಟ್ಟ’. ಅಂಗ ಅಂದ್ ಕೂಡ್ಲೆ ಶಿವನಯ್ಯ ನೆರಿನೆರಿ ಹಲ್ಲು ಕಡದಾನು, ಬಿರಿ ಬಿರಿ ಕಣ್ ಬಿಟ್ಟಾನು, ಗೊಂಡ ಮೀಸಿ ಮೇಲೆ ಕೈ ಎಳದಾನು. ‘ಗಾಣಿಗ್ರ ಅವ್ನ ಕಾಲಾಗ ನನ್ನ ಸಿಂಹಾಸನ ಹಾಳಾಗ್ಲಿ, ಅರಮನಿ ಮಂದ್ಲು ಪಟ್ಟದಾನಿ ಹೋಗ್ಲಿ, ಬೊಕ್ಕಸ ಮನಿಯೊಳಗೆ ಎರಡು ಭಾಗ ಹೋಗ್ಲಿ, ಅಂದ್ರೆ ದಗ್ಗ ದಗ್ಗ ಎರಿಯಂತದು’.

ಅವನಿಗೆ ಮಾಟ ಮಾಡ್ಸಬೇಕೋ | ಸೋಕೀರ ಮೂವ ತಾಜೀಜಿ |
ಅವನಿಗೆ ನಾನೇ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ |
ಅವ್ನ ಗದ್ದಿಗಿ ಹತ್ತಬೇಕೋ | ಸೋಕೀರ ಮೂವ ತಾಜೀಜಿ |

ಅಂದ್ರೆ ಅವ್ನ ಮಠ ಮನಿ ನನ್ನ ಸ್ವಾಧೀನ ಆಗಬೇಕು, ಅವನ ಕಾವಿ ಕಮಂಡಲ ನನ್ನ ಸ್ವಾಧೀನ ಆಗಬೇಕು, ಅವ್ನಹೆಂಡ್ತಿ.

ನನ್ನ ವಾಸಿಯಾಗಬೇಕೋ | ಸೋಕೀರ ಮೂವ ತಾಜೀಜಿ |
ಅವನಿಗೆ ನಾನೇ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ |
ಅವನ ಗದ್ದಿಗಿ ಹತ್ತಾಬೇಕೋ | ಸೋಕೀರ ಮೂವ ತಾಜೀಜಿ |

‘ಗಾಣಿಗ್ರ ಒಂದು ಲಕ್ಷವಲ್ಲ, ಎರಡು ಲಕ್ಷವಲ್ಲಯ್ಯ, ಮೂವತ್ತು ಲಕ್ಷ ಕೊಡ್ತೀನಿ, ಒಳ್ಳೇರತ್ರ ಹೋಗಿ ದಗ್ಗ ದಗ್ಗ ಉರಿಯಂತದು

ಅವ್ನಿಗೆ ಮಾಟ ಮಾಡ್ಸಬೇಕೋ | ಸೋಕೀರ ಮೂವ ತಾಜೀಜಿ |
ಮೂವತ್ತು ಲಕ್ಷ ಕೊಡ್ತೀನಯ್ಯೋ | ಸೋಕೀರ ಮೂವ ತಾಜೀಜಿ |

ಶಿವನಯ್ಯ ಮೂವತ್ತು ಲಕ್ಷ ಹಣ ಎಣಿಸಿಕೊಟ್ಟುಬಿಟ್ಟಾನು. ನಾಕು ಮಂದಿ ಗಾಣಿಗ್ರೂ ಮೂವತ್ತು ಲಕ್ಷ ಹಣ ತಗಂಡಾರು. ರೊಟ್ಟಿ ಬುತ್ತಿ ಮಾಡ್ಸಿಕೆಂಡಾರು. ಯಂಡ್ರು ಮಕ್ಳಿಗೆ ಬುದ್ಧಿ ಜ್ಞಾನ ಹೇಳಿ ಗೋಣಿಬಸಪ್ಪನಿಗೆ ದಗ್ಗ ದಗ್ಗ ಉರಿಯಂತ ಮಾಟ ಮಾಡ್ಸಕ ಹೊಕ್ಕಾರೀ ಎಲ್ಲಿ ಗೋಕಾರೆ?

ಒಂದು ಎಂಬೋಗವದ ಮ್ಯಾಲೆ | ಸುಖಿರಾಜ ಬಗದಿ |
ಮುಂದೆ ಎಲ್ಲಿಗೆ ಹೋಗತಾತೇ | ಸುಖಿರಾಜ ಬಗದಿ |
ಸಿರಸ್ನಳ್ಳಿಗೆ ಹೋಗತಾರೇ | ಸುಖಿರಾಜ ಬಗದಿ |
ಸಿರಸ್ನಳ್ಳಿಯ ಹಿಂದಮಾಡೀ | ಸುಖಿರಾಜ ಬಗದಿ |
ಮಾಚಿಹಳ್ಳಿಗೆ ಹೋಗತಾರೇ | ಸುಖಿರಾಜ ಬಗದಿ |
ಮಾಚಿಹಳ್ಳಿಯ ಹಿಂದಮಾಡೀ | ಸುಖಿರಾಜ ಬಗದಿ |
ಮದರಿಕಟ್ಟಿಗೆ ಹೋಗುತಾರೇ | ಸುಖಿರಾಜ ಬಗದಿ |
ಮದರಿಕಟ್ಟಿಯ ಹಿಂದಮಾಡೀ | ಸುಖಿರಾಜ ಬಗದಿ |
ಕಂಚಿಕೇರಿಗೆ ಹೋಗುತಾರೇ | ಸುಖಿರಾಜ ಬಗದಿ |
ಕಂಚಿಕೇರಿಯ ಹಿಂದಮಾಡೀ | ಸುಖಿರಾಜ ಬಗದಿ |
ಮ್ಯಾಗಳಗೇರಿಗೆ ಹೋಗುತಾರೇ | ಸುಖಿರಾಜ ಬಗದಿ |
ಮ್ಯಾಗಳಗೇರಿಯ ಹಿಂದಮಾಡೀ | ಸುಖಿರಾಜ ಬಗದಿ |
ದಾವಣಗೇರಿಗೆ ಹೋಗುತಾರೇ | ಸುಖಿರಾಜ ಬಗದಿ |
ದಾವಣಗೇರಿಗೆ ಹಿಂದಮಾಡೀ | ಸುಖಿರಾಜ ಬಗದಿ |
ಬೆಂಕಿಪುರಕ್ಕೆ ಹೋಗುತಾರೇ | ಸುಖಿರಾಜ ಬಗದಿ |
ಬೆಂಕಿಪುರಾ ಹಿಂದಮಾಡೀ | ಸುಖಿರಾಜ ಬಗದಿ |
ಜಾಜನೂರಿಗೆ ಹೋಗುತಾರೇ | ಸುಖಿರಾಜ ಬಗದಿ |
ಜಾಜನೂರಾ ಹಿಂದಮಾಡೀ | ಸುಖಿರಾಜ ಬಗದಿ |
ಗುಜನೂರಿಗೆ ಹೋಗುತಾರೇ | ಸುಖಿರಾಜ ಬಗದಿ |
ಗುಜನೂರಾ ಹಿಂದಮಾಡೀ | ಸುಖಿರಾಜ ಬಗದಿ |

ದುಪ್ಪಳಸೀ ಹೋಗಿ ಬಿದ್ರೋ ಗಾಳಿಪೂಜಿ ಪಟ್ಟಣಕೆ. ದುಪ್ಪಳಿಸೀ ಹೋಗಿ ಬಿದ್ರಂತೆ ಗಾಳಿಪೂಜಿ ಪಟ್ಟಕ್ಕೆ, ಎಂಟು ದಿನದ ದಾರಿನ ದಿನ ಮಧ್ಯಾಹ್ನಕ್ಕೆ ಹೋಗಿ ಬಿಟ್ಟಾರೀ. ಗಾಳಿಪೂಜಿ ಪಟ್ಣದೊಳಗೆ

ನಾಲಕ್ಕು ಮಂದೀ ಸಿದ್ಧಾರಯ್ಯೋ | ಶಿವನೆನೆಯವ ದೇವೈ |
ಬಾಳಾ ಪಂಡಿತರಿದ್ದಾರಯ್ಯೋ | ಶಿವನೆನೆಯವ ದೇವೈ |
ಅಲ್ಲಿಗೆ ಗಾಣಿಗರು ಹೋಗುತಾರೇ | ಶಿವನೆನೆಯವ ದೇವೈ |

ಗಾಣಿಗ್ರು ಸಿದ್ಧರ ಪಾದಕ್ಕ ಹೋಗಿಬಿದ್ದಾರು. ಸಿದ್ಧರು ಕೇಳ್ತಾರು. ‘ಏನಯ್ಯ, ಹರಪನಳ್ಳಿ ದೇಶದವ್ರು ಚೀಟಿ ಚಿನ್ನಾಲ್ದವ್ರು,[19] ಗೊಂಡಿನ ನಡುಕಟ್ಟಿನವ್ರು, ಬೀಸು ದೊಣ್ಣೆಯವ್ರು ಇಲ್ಲಿ ತನ್ಕ ಯಾಕ ಬಂದ್ರಯ್ಯ’ ‘ಆ ಗುರುಗಳೆ, ಹರಪನಳ್ಳಿ ರಾಜ ಶಿವನಯ್ಯ ಕಳ್ಸ್ಯಾನ್ರೀ. ನೀವೆ ದಗ್ಗ ದಗ್ಗ ಉರಿಯಂತದು ಮಾಟ ಮಾಡಿ ಕೊಡಬೇಕಂತೆ’. ‘ಯಾರಿಗೆ’ ‘ಅವನ ಹೆಸರೇನು’ ‘ಕೂಲಹಳ್ಳಿ ಕನಕವ್ವನ ಮಗ ಗೋಣಿ ಬಸವೇಶ್ವರಗೆ ಮಾಟ ಮಾಡಬೇಕ್ರೀ. ಅದಕ್ಕ ಮೂವತ್ತುಲಕ್ಷ ಕೊಟ್ಟಾರೀ ನಮ್ಮ ರಾಜರು’ ಅಂತ್ಹೇಳಿ, ಸಿದ್ಧರ ಮುಂದೆ ಮೂವತ್ತು ಲಕ್ಷ ಸುರುದಾರು. ಸಿದ್ಧರು ಮೂವತ್ತು ಲಕ್ಷ ಹಣ ನೋಡ್ಯಾರು. ಪಕ ಪಕ ನಗುತಾರು, ಕಿರಿ ಕಿರಿ ನಗುತಾರು ಅಲ್ಲಯ್ಯ ಅಂತಾ ತಿರುಕನ್ನ ಕೊಲ್ಲಾಕ ಅಲ್ಲ್ಯಾರು ಇದ್ದಿಲ್ಲೇನು’. ‘ಇಲ್ಲ ಬುದ್ಧಿ ಯಾರು ಅಲ್ಲಿ ಸಿಗಲಿಲ್ಲ. ನಿಮ್ಮ ತಾಗ ಕಳ್ಸಿ ಕೊಟ್ಟಾರ’. ಆಗ ಸಿದ್ಧರು ಹಣಕ ಆಸಿ ಬಿದ್ದಾರು. ಮೂವತ್ತು ಲಕ್ಷ ತಗಂಡಾರು, ಪ್ಯಾಟಿಗೆ ಹೋಗ್ಯಾರು. ಸಾಮಾಗ್ರಿ ಕೊಳ್ಳುತಾರೆ.

ಹರಹರ ಭಗವಂತಾ | ತಾನಿ ತಂದನಿ ನಾನೋ |
ಅಳಿದಕ್ಕಿ ಕೊಂಡಾರೋ | ತಾನಿ ತಂದನಿ ನಾನೋ |
ಹಸರಕ್ಕಿ ಕೊಂಡಾರೋ | ತಾನಿ ತಂದನಿ ನಾನೋ |
ಒಕ್ಕಳಕ್ಕಿ ಕೊಂಡಾರೋ | ತಾನಿ ತಂದನಿ ನಾನೋ |
ತೆಂಗಿನಕಾಯಿ ಕೊಂಡಾರೋ | ತಾನಿ ತಂದನಿ ನಾನೋ |
ಬಾಳಿಹಣ್ಣು ಕೊಂಡಾರೋ | ತಾನಿ ತಂದನಿ ನಾನೋ |
ಹನ್ನೆರಡು ಹರದಿನಕೆ | ತಾನಿ ತಂದನಿ ನಾನೋ |
ಕಾಯಿಪಲ್ಲೆ ಕೊಂಡಾರೋ | ತಾನಿ ತಂದನಿ ನಾನೋ |

07_35_GBK-KUH

ಎಲ್ಲ ಸಾಮಾನು ಕೊಂಡು ಗಾಡಿ ಮ್ಯಾಲೆ ಹೊರಸ್ ಕ್ಯಾಂಡು ನಾಕುಮಂದಿ ಗಾಣಿಗ್ರು ನಾಕುಮಂದಿ ಸಿದ್ಧರು ಗಾಳಿಪೂಜಿ ಪಟ್ಣ ಬಿಟ್ಟು.

ದೆವ್ವದ ಮನಿಗೆ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಇಲ್ಲಿಗೆ ಗುರುವಿಗೆ ಸಾವೇ ಬಂದಾವಯ್ಯೋ | ಸೋಕೀರ ಮೂವ ತಾಜೀಜಿ |

ದೆವ್ವದ ಮನಿಗೆ ಹೋಗ್ಯಾರು ದೆವ್ವದ ಮನಿಗೆ ಹೋಗಿ ದೆವ್ವದ ಮನಿ ಬೀಗ ತಗದಾರು.

ಹರಹರ ಭಗವಂತಾ | ತಾನಿ ತಂದನಿ ನಾನೋ |
ನೆಲನೆಪ್ಪುಡೆಂಬೋದೇ | ತಾನಿ ತಂದನಿ ನಾನೋ |
ಅವರೆ ಬಳಕಂಡಾರೇ | ತಾನಿ ತಂದನಿ ನಾನೋ |
ಒಲಿಹತ್ತೊಲೆಂಬೋದೇ | ತಾನಿ ತಂದನಿ ನಾನೋ |
ಅವರೆ ಬಳಕಂಡಾರೋ | ತಾನಿ ತಂದನಿ ನಾನೋ |
ಹಸರಕ್ಕಿ ರಂಗವೋ | ತಾನಿ ತಂದನಿ ನಾನೋ |
ತಾವೇ ಬರಿಯಾತಾರೇ | ತಾನಿ ತಂದನಿ ನಾನೋ |
ಅಳಿದಕ್ಕಿ ರಂಗಾವೋ | ತಾನಿ ತಂದನಿ ನಾನೋ |
ತಾವೇ ಬರಿಯಾತಾರೇ | ತಾನಿ ತಂದನಿ ನಾನೋ |
ಒಕ್ಕಳಕ್ಕಿ ಎಂಬಾವೇ | ತಾನಿ ತಂದನಿ ನಾನೋ |
ರಾಶಿಗೆ ಸುರುವ್ಯಾರೇ | ತಾನಿ ತಂದನಿ ನಾನೋ |
ತೆಂಗಿನಕಾಯಿ ಒಡದಾರೋ | ತಾನಿ ತಂದನಿ ನಾನೋ |
ಬಾಳೆಹಣ್ಣು ಹಿಡದಾರೋ | ತಾನಿ ತಂದನಿ ನಾನೋ |
ಒಂಬತ್ತೆ ಹರಿಶಿಣದಾ | ತಾನಿ ತಂದನಿ ನಾನೋ |
ಕಾಯಿಪಲ್ಲೆ ಕೊಟ್ಟಾರೋ | ತಾನಿ ತಂದನಿ ನಾನೋ |

ನಾಕು ಮೂಲಿಗೆ ನಾಕು ಕೆಂಗುರಿ[20] ಕಡಿತಾರು, ಎಡಿ ಹಿಡಿತಾರು, ಅಂತ್ರ ಮಂತ್ರ ಮಾಡಿ ಮೂವತ್ತುಲಕ್ಷದ ಬಂಗಾರ ಕರಗಿಸಿ ತಂತಿ ಎಳದಾರು. ತಂತಿ ಎಳದು ಮಗ್ಗ ಊಡ್ಯಾರು. ಬಂಗಾರದ ತಂತಿ ಮಣಿಸಿ ಮಗ್ಗದ ಗುಣಿಮ್ಯಾಲಿಟ್ಟಾರು. ಒಂದಲ್ಲ ಎರಡಲ್ಲ ನೂರೊಂದು ದೆವ್ವನ್ನ ಕರಿಯಾ ಕಳಸ್ತಾರೀ ಸಿದ್ಧರು. ನೂರೊಂದು ದೆವ್ವ.

ಭೋರ್ಗರದೆ ಬರ್ತಾವಯ್ಯೋ | ಸೋಕೀರ ಮೂವ ತಾಜೀಜಿ |
ನಾನು ಮುಂದೆ ನೀನು ಮುಂದೇ | ಸೋಕೀರ ಮೂವ ತಾಜೀಜಿ |
ಓಡಿ ಓಡಿ ಬಂದಾವಯ್ಯೋ | ಸೋಕೀರ ಮೂವ ತಾಜೀಜಿ |

ದೆವ್ವ ಮನಿಗೆ ಬಂದಾವಯ್ಯೋ | ಸೋಕೀರ ಮೂವ ತಾಜೀಜಿ |

ದೆವ್ವ ಮನಿಗೆ ಬಂದಾವು ಎಂಥೆಂತವು ಬರ್ತಾವ್ರೀ.
ಕತ್ತಿಯ ಮುಖದಾವೋ | ತಾನಿ ತಂದನಿ ನಾನೋ |
ಕುದುರಿಯ ಮುಖದಾವೋ | ತಾನಿ ತಂದನಿ ನಾನೋ |
ಮಂಗನ ಮಖದಾವೋ | ತಾನಿ ತಂದನಿ ನಾನೋ |
ಕೈಕಾಲ ತಿರುಗಿದಾವೋ | ತಾನಿ ತಂದನಿ ನಾನೋ |
ಮೂಗು ಮುಸುಣಿ ಇಲ್ದಾವೋ | ತಾನಿ ತಂದನಿ ನಾನೋ |
ಕಣ್ಣು ತಾವೇ ಇಲ್ದಾವೋ | ತಾನಿ ತಂದನಿ ನಾನೋ |

ಒಂದೂರ‍್ನ ಒಂದೊಂದು ದೆವ್ವ ಬಂದುಬಿಟ್ಟಾವು. ಬಂದು ದೆವ್ವಗಳಿಗೆ ಸಿದ್ಧರು ಬುದ್ಧಿಜ್ಞಾನ ಹೇಳ್ತಾರು. ಅಂತ್ರ ಮಂತ್ರ ಮಾಡ್ಯಾರು. ನೂರೊಂದು ದೆವ್ವ ಒಳಕೂಡಿ ಕದ ಮುಚ್ಕೆಂಡು, ಬೀಗ ಹಕ್ಕೆಂಡು ಊರಕ ಬಂದುಬಿಟ್ಟಾರು. ಸಿದ್ಧರ ಇರತನ್ನ ಸಮ್ಕಿದ್ದ ದೆವ್ವಗಳು ಅವ್ರು ಹೋಗತಡ ಏನ್ ಮಾಡ್ತವು.

ಹರಹರ ಭಗವಂತ | ತಾನಿ ತಂದನಿ ನಾನೋ |
ತೆಂಗಿನಕಾಯಿ ಅಂಬೋದೇ | ತಾನಿ ತಂದನಿ ನಾನೋ |
ಸಿಪ್ಪಿ ಉಳಿಯಾಲಿಲ್ಲೋ | ತಾನಿ ತಂದನಿ ನಾನೋ |
ಕಚರ[21] ತಿಂದಾವೋ | ತಾನಿ ತಂದನಿ ನಾನೋ |
ಬಾಳಿಹಣ್ಣು ಅಂಬೋದೇ | ತಾನಿ ತಂದನಿ ನಾನೋ |
ಸಿಪ್ಪಿ ಉಳಿಯಾಲಿಲ್ಲೋ | ತಾನಿ ತಂದನಿ ನಾನೋ |
ಕಚರ ತಿಂದಾವೋ | ತಾನಿ ತಂದನಿ ನಾನೋ |
ಒಕ್ಕಳಕ್ಕಿ ಅನ್ನೋದೇ | ತಾನಿ ತಂದನಿ ನಾನೋ |
ಅಗಳೇ ಉಳಿಯಾಲಿಲ್ಲೋ | ತಾನಿ ತಂದನಿ ನಾನೋ |
ಕಚರ ತಿಂದಾವೋ | ತಾನಿ ತಂದನಿ ನಾನೋ |
ಹನ್ನೆಲ್ಲು ಹರಿದಿನವೋ | ತಾನಿ ತಂದನಿ ನಾನೋ |
ಕಾಯಿಪಲ್ಲೇ ಅಂಬೋದೇ | ತಾನಿ ತಂದನಿ ನಾನೋ |
ತುಂಬೆ ಉಳಿಯಾಲಿಲ್ಲೋ | ತಾನಿ ತಂದನಿ ನಾನೋ |
ಕಚರಾ ತಿಂದಾವೋ | ತಾನಿ ತಂದನಿ ನಾನೋ |

ಕಚರಾ ತಿಂದು ಮಗ್ಗ ಹೂಡ್ಯಾವು. ಬಂಗಾರದ ತಂತಿ ಮಗ್ಗಕ ಏರಿಸ್ಯಾವು. ನೋಡ್ರೀ ಗಾಳಿಪೂಜಿ ಪಟ್ಣದ ದೆವ್ವದ ಮನಿಯಾಗೆ ಗೋಣಿಬಸಪ್ಪನಿಗೆ.

ಮಾಟದ ಅಂಗಿಯ[22] ನೇಯುತಾವೇ | ಶಿವನೆನೆಯವ ದೇವೈ |
ಮೊರಮಿಯ ಅಂಗಿಯ ನೇಯುತಾವೇ | ಶಿವನೆನೆಯವ ದೇವೈ |
ಮೊರಮಿಯ ಅಂಗಿಯ ನೇಯುತಾವೇ | ಶಿವನೆನೆಯವ ದೇವೈ |
ದೆವ್ವ ಅಂಗಿಯ ನೇಯುತಾವೇ | ಶಿವನೆನೆಯವ ದೇವೈ |
ಬಂಗಾರದ ಅಂಗಿಯ ನೇಯುತಾವೇ | ಶಿವನೆನೆಯವ ದೇವೈ |

ದೆವ್ವ ಬಂಗಾರ‍್ದ ಅಂಗಿ ನೇಯ್ತಾವು. ಕರಿ[23] ಕೊಯ್ದಾವು. ಗಳಿಗೆ[24] ಮಡಿಸಿ ಮಗ್ಗದ ಗುಳುವಿಮ್ಯಾಗ ಇಟ್ಟವು ಸೂರ‍್ಯ ಪ್ರಕಾಶಿಸಿದ. ಪ್ರಕಾಶಿಸ ತಡ ನೂರೊಂದು ದೆವ್ವ ಮನಿಬಿಟ್ಟೆ.

ಭೋರ್ಗರ್ದೆ ಹೋಗುತಾವೇ | ಸೋಕೀರ ಮೂವ ತಾಜೀಜಿ |
ಮನಿಯ ಬಿಟ್ಟೆ ಹೋಗುತಾವೇ | ಸೋಕೀರ ಮೂವ ತಾಜೀಜಿ |

ದೆವ್ವ ಹೋದ್ವಂತ್ರೀ. ಸಿದ್ಧರು ಸೂರ‍್ಯ ಪ್ರಕಾಶಿಸ್ದ ನಂತರ ಮ್ಯಾಲಿಕೆದ್ದಾರು. ಕೈಕಾಲ್ ಮುಖ ತೊಳ್ದಾರು. ಒಪ್ಪತ್ತಿನ ಈಬುತ್ತಿ ಬಡಕೊಂಡಾರು ನಾಕು ಮಂದಿ ಸಿದ್ಧರು, ನಾಕಮಂದಿ ಗಾಣಿಗ್ರು, ಅವ್ರ ಮನಿ ಬಿಟ್ಟು ದೆವ್ವದ ಮನಿಗೆ ಬರ್ತಾರು. ದೆವ್ವದ ಮನಿಗೆ ಬಂದು ಬೀಗ ತಗದಾರು. ಕದ ದೂಡ್ಯಾರೀ. ಬೀಗ ತಗಿಯತಡ ಸುಮ್ನಿದ್ದ ಗಳಿಗಿ, ಕದ ದೂಡತಡ ಸಿದ್ಧರನ್ನ

ಮುಂದೆ ಕ್ವಾಣ ಗದುಮಿದಂಗೇ | ಸೋಕೀರ ಮೂವ ತಾಜೀಜಿ |
ಸಿದ್ಧರನ್ನು ಗದುಮುತೈತೇ | ಸೋಕೀರ ಮೂವ ತಾಜೀಜಿ |
ಹದ್ದೇ ಆಡಿದಂಗೆ ಆಡತೈತೇ | ಸೋಕೀರ ಮೂವ ತಾಜೀಜಿ |
ಗಾಳಿಪೂಜಿ ಪಟ್ಟಣ ಬೆಂಕಿಬೆಳಕ ಆಗತೈತೇ | ಸೋಕೀರ ಮೂವ ತಾಜೀಜಿ |

ಗಾಳಿಪೂಜಿಪಟ್ಣ ಬೆಂಕಿಬೆಳಕ ಆತಂತ್ರೀ. ಆಗ ಸಿದ್ಧರು ‘ಹಿಂಗಾದ್ರೆ ಕೈಗೆ ಸಿಗದಿಲ್ಲ’ ಅಂದು ಊರಾಕ ಓಡಿಬಂದಾರು. ಕಮ್ಮಾರ ಮನಿಗೋಗಿ ಇಕ್ಕಳ ಸುತ್ತಿಗಿ ತಗಂಡಾರು. ಜೋಗೇರ ಮನಿಗೋಗಿ ಸೂಜಿದಾರ ತಗಂಡಾರು, ವಡ್ಡರು ಮನಿಗೋಗಿ ಹೊಸ ಶ್ಯಾಟಿ[25] ತಗಂಡಾರು ಮತ್ತು ಕುಂಬಾರ ಮನಿಗೋಗಿ ಹೊಸ ಸ್ವಾರಿ[26] ತಗಂಡಾರು. ಸಿದ್ಧರು ದೆವ್ವದ ಮನಿಗೆ

ಓಡಿ ಓಡಿ ಬರ್ತಾರಯ್ಯೋ | ಸೋಕೀರ ಮೂವ ತಾಜೀಜಿ |
ಗಳಿಗೆ ಹದ್ದೇ ಆಡಿದಂಗ ಆಡುತೈತೇ | ಸೋಕೀರ ಮೂವ ತಾಜೀಜಿ |

ಸಿದ್ಧರು ಓಡಿಬಂದಾರು. ಸಿದ್ಧರ ಬಳಿಗೆ ಗಳಿಗಿ ಬಂತಂತ್ರೀ. ಆಗ ಸಿದ್ಧರು ಕೈಲೆ ಮುಟ್ಟಲಿಲ್ಲ. ಗಳಿಗಿನ ಇಕ್ಕಳದಲೆ ಇಡ್ಕಂಡಾರು ಸುತ್ತಿಗಿಲಿ ಅತ್ತ ಬಡದಾರು. ಒಳಗ ತಗಂಡೋಗ್ಯಾರು. ಹೊಸ ಚಾಪಿ ಹಾಸ್ಯಾರು. ಗಳಿಗಿ ಚಾಪಿ ಮ್ಯಾಲೆ ಇಟ್ಟಾರು. ‘ಆ ಅವ್ನ ಮೈ ಅಳತಿ ಏನ್ ಐತಿ ಹೇಳ್ರಯ್ಯ ಅಂಗಿ ಹೊಲ್ದ್ ಕೊಡ್ತೀವಿ’. ಅವ್ನ ಮೈ ಅಳ್ತಿ ಹೇಳ್ತಿವಿ ಕೇಳ್ರೀ ಅವ್ನು ಭಿಕ್ಷಕ ನಾಟ ಐತಿ, ತಿರುಪಿ ಕೂಳು ತಿಂದು ಹರಕಿ ಕ್ವಾಣ ಆಗ್ಯಾನೆ, ಸ್ವಲ್ಪ ಉದ್ದ ತಗೊಳ್ರೀ, ಸ್ವಲ್ಪ ಅಗಲ ತಗೊಳ್ರಿ ಬಾಗಾದಿ ವೈರಿಗಳು ಹೇಳ್ತಾರೆ.

ಸಿದ್ಧರು ಅಂಗಿ ಹೊಲಿಯತಾರೇ | ಸೋಕೀರ ಮೂವ ತಾಜೀಜಿ |
ಬಂಗಾರ್ದ ಅಂಗಿ ಹೊಲಿಯತಾರೇ | ಸೋಕೀರ ಮೂವ ತಾಜೀಜಿ |

ಮಾಟದ ಅಂಗಿ ಹೊಲ್ದಾರು. ಅಂಗಿ ಹೋಲ್ದು ಗಳಿಗಿ ಉಡಿಸಿ ಉಗ್ಗದ ಸ್ವಾರ‍್ಯಾಕ ಇಟ್ಟಾರು. ‘ಆ ನಾಕು ಮಂದಿ ಗಾಣಿಗ್ರ, ಇದ್ನ ಯಂಗ ತಗೊಂಡು ಹೋಗ್ತೀರಿ’. ‘ಅಯ್ಯೋ ಬುದ್ಧಿ ಯಮಗ ತಗೊಂಡು ಹೋಗ್ತೀರಿ ಅಂತೀರಲ್ರೀ ಅಂಗ ಹೊತ್ತ್ ಕನ್ನತೀವಿ ಹೋಗ್ತೀವಿ’. ‘ಅಂಗಲ್ಲಯ್ಯ ನೆಲದಮ್ಯಾಕ ಇಟ್ರೆ ನೆಲ ಸುಟ್ಟೊಕತೆ ಮರಕ್ಕ ಸಿಗಿ ಹಾಕಿದ್ರೆ ಮರಸುಟ್ಟೊಕತೆ, ಕಲ್ಲ ಮ್ಯಾಲಿಟ್ರೆ ಕಲ್ಲು ಸುಟ್ಟೊಕೊತೆ. ಎಲ್ಲೆಲ್ಲಿ ಕೆಳಗ ಇಡ್ದಂಗೆ

ಅವ್ನತಾಕ ಒಯ್ಯಬೇಕೋ | ಸೋಕೀರ ಮೂವ ತಾಜೀಜಿ |
ಸಿದ್ಧರೆ ಹೇಳತಾರೇ | ಸೋಕೀರ ಮೂವ ತಾಜೀಜಿ |

‘ಅಂಗಾ ಹಾಗ್ಲಿ ಬುದ್ಧಿ, ಅವ್ನು ಸಾಯದ ಬೇಕು, ಅವ್ನತಾಗ ತಗಂಡೋಗಿ ಬಿಡ್ತೀವ್ರೀ. ಆ ಕೊಡ್ರಿ ಗಳಿಗಿ ಹೋಗಿಬಿಡ್ತೀವಿ’. ‘ತಡ್ರಯ್ಯ ಈಗ ಎಲ್ಯಾರ ಉರಿಮ್ಯಾಕ ಎದ್ದೀತು ಒಂದು ಅಳ್ಳು ಮಂತ್ರಿಸಿ ಕೊಡ್ತೀನಿ. ಎಲ್ಯಾರ ಉರಿ ಎದ್ರೆ ಅಳ್ಳು ಒಗದು ಬಿಡ್ರಿ ಬೆಂಕಿ ನಂದಿ ಹೋಗ್ತತೆ.’ ಅಂದು ಸಿದ್ಧರು ಒಂದು ಅಳ್ಳು ಮಂತ್ರಿಸಿ ಕೊಟ್ಟಾರು. ಗಾಳಿಪೂಜಿ ಪಟ್ಣದಾಗೆ ಗಾಣಿಗ್ರು ನಾಕು ಮಂದಿ ಸಿದ್ಧರ ಪಾದಕ್ಕ ಬಿದ್ದಾರು. ಉಗ್ಗದ ಸ್ವಾರಿ ಹೊತ್ತಕಂಡು ಬಿಟ್ಟಾರು. ನೋಡ್ರಿ ಗೋಣಿ ಬಸಪ್ಪಂಗೆ ಮಾಟದ ಅಂಗಿ ಮಾಡ್ಸೆಕೆಂಡು ನಾಕು ಮಂದಿ ಗಾಣಿಗ್ರು ಗಾಳಿಪೂಜಿ ಪಟ್ಣ[27] ಬಿಡ್ತಾರೆ.

ಒಂದು ಎಂಬೋಗಾವದ ಮ್ಯಾಲೆ | ಸುಖಿರಾಜ ಬಗದಿ |
ಮುಂದೆ ಎಲ್ಲಿಗೆ ಬರುವುತಾರೇ | ಸುಖಿರಾಜ ಬಗದಿ |
ಗುಜುನೂರಿಗೆ ಬರುವುತಾರೇ | ಸುಖಿರಾಜ ಬಗದಿ |
ಗುಜನೂರಾ ಹಿಂದಮಾಡೀ | ಸುಖಿರಾಜ ಬಗದಿ |
ಗಾಜನೂರಿಗೆ ಬರುವುತಾರೆ | ಸುಖಿರಾಜ ಬಗದಿ |
ಗಾಜನೂರಾ ಹಿಂದಮಾಡೀ | ಸುಖಿರಾಜ ಬಗದಿ |
ಬೆಂಕಿಪುರಕೆ ಬರುವುತಾರೇ | ಸುಖಿರಾಜ ಬಗದಿ |
ಬೆಂಕಿಪುರಾ ಹಿಂದಮಾಡೀ | ಸುಖಿರಾಜ ಬಗದಿ |
ಹರಿಹರಕೆ ಬರುವುತಾರೇ | ಸುಖಿರಾಜ ಬಗದಿ |
ಹರಿಹರ ಹಿಂದಮಾಡೀ | ಸುಖಿರಾಜ ಬಗದಿ |
ದಾವಣಗೇರಿಗೆ ಬರುವುತಾರೇ | ಸುಖಿರಾಜ ಬಗದಿ |
ದಾವಣಗೇರಿಗೆ ಹಿಂದಮಾಡೀ | ಸುಖಿರಾಜ ಬಗದಿ |
ಮ್ಯಾಗಳಗೇರಿಗೆ ಬರುವುತಾರೇ | ಸುಖಿರಾಜ ಬಗದಿ |
ಮ್ಯಾಗಳಗೇರಿಯ ಹಿಂದಮಾಡೀ | ಸುಖಿರಾಜ ಬಗದಿ |
ಕಂಚಿಕೇರಿಗೆ ಹಿಂದಮಾಡೀ | ಸುಖಿರಾಜ ಬಗದಿ |
ಮದರಿಕಟ್ಟಿಗೆ ಬರುವುತಾರೇ | ಸುಖಿರಾಜ ಬಗದಿ |

ಮದರಿಕಟ್ಟಿಗೆ ಬಂದಾರು. ಆಗ ಗಾಣಿಗ್ರು ಮಾತಾಡ್ತಾರೆ. ‘ಯಣ್ಣಾ, ಸತ್ತಗಿತ್ತು ಹೋದೇವು. ಅಲ್ಲೋ, ಎಲ್ದುದಿನ ಹೋಗೋ ದಾರೀನ ಒಂದಿನ ಮಧ್ಯಾಹ್ನಕ್ಕ ಹೋಗಿ ಮಧ್ಯಾಹ್ನಕ್ಕೂ ಬಂದ್ ಬಿಟ್ಟೀವಿ. ಬುತ್ತೈತೆ, ಈಗ ಮದರಿ ಕಟ್ಟಿ ಹಳ್ಳದಾಗ ನೀರಾದವು. ಸ್ವಲ್ಪ ಬುತ್ತಿ ಉಂಡು ನೀರ್ ಕುಡ್ದು ಹೋಗಾನು ತಡ್ರೋ ಹೊಟ್ಟಿ ಹಸದಾವೇ ಸತ್ತುಗಿತ್ತೇವು’. ‘ಅಲ್ಲಲೇ ತಾವು ಇದನ್ನ ಎಲ್ಲಿ ಇಡಂಗಿಲ್ಲಲೋ’ ‘ಅಯ್ಯೋ ಅದೇನ್ ದೊಡ್ಡದು ಬಿಡಾ ಅತ್ಲಗೆ. ಆ ಹಳ್ಳದ ದಡಕ ಒಂದು ಆಲದ ಮರ ಐತೆ, ಆ ಆಲದ ಮರಕ್ಕ ಸಿಗೇ ಹಾಕ್ರೀ, ಅಂಗ್ಯ ಲಟ್ಟನ ಹೋಗಿ ಲಟ್ಟನ ಬಂದ್ ಬಿಡಾನ’. ‘ಹೌದಲೇ ತಮ್ಮ, ನೀರಡಕಿ ಆಗೈತೆ, ಹೊಟ್ಟೆ ಹಸದಾವು ಅವ್ನ ಮಾತೂ ಕರೇವು’ ಆಲದ ಮರ ನೋಡಿ ಅದಕ್ಕ ಸಿಗಿಹಾಕ್ಯರು. ತಡ ಮಾಡಂಗಿಲ್ಲ. ಮತ್ತು ಗಡಗಡ ಅವುಸ್ರ ಪಟ್ಟು ಕೈಕಾಲು ಮುಖ ತಕ್ಕೊಂಡಾರು. ಬುತ್ತಿ ಬಿಚ್ಚ್ಯಾರು. ಒಂದು ಗುಕ್ಕು[28] ತಗಂಡು ಬಾಯಾಗ ಇಟ್ಟಾರೆ. ಇನ್ನೊಂದು ಗುಕ್ಕು ಕೈಯಾಗ ಇಟ್ಟಕಂಡಾರೆ.

ಆಲದ ಮರದ ದಗ್ಗ ದಗ್ಗ ಉರಿಯತೈತ | ಸೋಕೀರ ಮೂವ ತಾಜೀಜಿ |
ಮರಕ್ಕ ಬಂಕಿ ಬಿದ್ದಾವಯ್ಯಾ | ಸೋಕೀರ ಮೂವ ತಾಜೀಜಿ |

ಯಣ್ಣಾ ಅತ್ಲಾಗ ಏನ್ ನೋಡ್ತಿ ಇಲ್ಲಿ ನೋಡೋ ಬೆಂಕಿ ಯಂಗ ಹತ್ತೈತಿ.

ಇದ್ರಾಗೆ ಉಳಿಯದಿಲ್ಲೋ | ಸೋಕೀರ ಮೂವ ತಾಜೀಜಿ |
ಈಗ ಅವ್ನೆಗೆ ಮರಣಾ ಬಂದಾವೈಯ್ಯೋ | ಸೋಕೀರ ಮೂವ ತಾಜೀಜಿ |
ಯಣ್ಣಾ ನನ್ನ ಹೆಂಣ್ತಿ ಹಡದಾರೇ | ಸೋಕೀರ ಮೂವ ತಾಜೀಜಿ |
ಏನಾನೆ ನಾನೇ ಸಣ್ಣ ಸಿದ್ಧ ಅಂಬಾಲೆನೇ | ಸೋಕೀರ ಮೂವ ತಾಜೀಜಿ |
ಯಣ್ಣಾ ನನ್ನ ಹಂಣ್ತಿ ಹಡದಾರೇ | ಸೋಕೀರ ಮೂವ ತಾಜೀಜಿ |
ನಾನೇ ದೊಡ್ಡ ಸಿದ್ಧ ಅಂಬಾತೀನೇ | ಸೋಕೀರ ಮೂವ ತಾಜೀಜಿ |

ಯಣ್ಣಾ ನಮ್ಮ ಹೆಂಡ್ರು ಹಡದರೆ ಸಿದ್ಧರ ಹೆಸ್ರು ಕರಿಬೇಕಪ. ಇದ್ರಗ ಉಳಿಯಾದಿಲ್ಲೋ’ ಅಂದು ದಡಕ್ಕನ ಎದ್ದು ಬುತ್ತಿ ಉಣ್ಣಲಿಲ್ಲ, ನೀರು ಕುಡಿಲಿಲ್ಲಾ. ಅಳ್ಳು ಮಂತ್ರಿಸಿ ಕೊಟ್ಟಿದ್ರಲ್ರೀ ಆ ಅಳ್ಳು ಹೊಗದಾರು. ಬೆಂಕಿ ನಂದಿ ಹೋತಂತ್ರೀ. ಆಗ ಬುತ್ತಿ ಉಣ್ಣಲಿಲ್ಲ, ನೀರ್ ಕುಡಿಲಿಲ್ಲ. ಉಗ್ಗದ ಸ್ವಾರಿ ಹೊತ್ಗಂಡು. ಮಧರಿ ಕಟ್ಟಿಗೆ ಬಿಟ್ಟೇ.

ಮಾಚಿಹಳ್ಳಿಗೆ ಬರ್ತಾರಯ್ಯೋ | ಸೋಕೀರ ಮೂವ ತಾಜೀಜಿ |
ಮಾಚಿಹಳ್ಳಿ ಹಿಂದಮಾಡಿ | ಸೋಕೀರ ಮೂವ ತಾಜೀಜಿ |
ಶಿರಸ್ದಳ್ಳಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |
ಶಿರಸ್ದಳ್ಳಿಗೆ ಹಿಂದಮಾಡಿ | ಸೋಕೀರ ಮೂವ ತಾಜೀಜಿ |
ಹರಪನಳ್ಳಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |[1] ಹಸರಕ್ಕ = ಹಸಿರು ಅಕ್ಕಿ,

[2] ಅಳಿದಕ್ಕಿ – ಸೋಸಿದ ಅಕ್ಕಿ

[3] ನೆಲನೆಪ್ಪು – ಬಣ್ಣ,

[4] ಓಲಿ ಅತ್ತಲೆ – ಒಲೆ, ಎತ್ತೊಲೆ

[5] ಐದಕ್ಕಿರಂಗ – ರಂಗೋಲೆಯಿಂದ ಬರೆದ ರಂಗ

[6] ಮೊರವಿಗೊಂಬಿ – ಮೊರೆಯುವ ಗೊಂಬೆ

[7] ದ್ಯಾಸ – ಜ್ಞಾನ,

[8] ಬಳಿಲೆ – ಬಳಿಯಲ್ಲಿ

[9] ಅಳಿಲಿಗೊಂಗಡಿ – ಕಂಬಳಿ,

[10] ಒಡಕಿ – ಕೆಲಸ

[11] ಬಟ್ವಾಡಿ – ಬಟವಾಡೆ,

[12] ಮಳಲುಗುಂಪಿ – ಕಪ್ಪೆಗೂಡು

[13] ತೆಕ್ಕೆಬಡೆದು – ಕಾಲು, ಕೈ ಮಡಚಿ

[14] ನಾಟಿ – ಟಾಟಿ,

[15] ಕುಳ್ಳು – ಬೆರಣಿ

[16] ಗದಮಿ – ನೂಕಿ,

[17] ದಡ್ಲಿ – ಒಂದು ಜಾತಿಯ ಹಣ್ಣು

[18] ವಾಲಿಕಪ್ಪೆ – ಮೂಗುತಿ,

[19] ಚಿನ್ನಾಲ್ದವ್ರು – ಚಿಕ್ಕ ಚಡ್ಡಿ ಧರಿಸುವ ಪ್ರದರ್ಶಕರು

[20] ಕೆಂಗುರಿ – ಕೆಂದಕುರಿ,

[21] ಕಚರ – ಕಚಪಚ

[22] ಮಾಟದಂಗಿ – ಮಾಟದ ಅಂಗಿ

[23] ಕರಿ – ಸೆರಗು,

[24] ಗಳಿಗೆ – ಯಾರೂ ತೊಟ್ಟಿರದ ವಸ್ತ್ರ

[25] ಶ್ಯಾಟಿ – ಚಾಪೆ

[26] ಸ್ವಾರಿ ಗಡಿಗೆ

[27] ಗಾಳಿಪೂಜಿ ಪಟ್ಟಣ – ದೆವ್ವಗಳು ವಾಸಿಸುವ ಕಲ್ಪಿತ ಪಟ್ಟಣ

[28] ಗುಕ್ಕು – ತುತ್ತು