(ಉಜ್ಜನಿ ಪಂಚಪೀಠಗಳಲ್ಲಿ ಒಂದು. ಅದರ ದಟ್ಟ ಪ್ರಭಾವ ಜನಪದರಿಗೆ ಇದೆ. ಆದರೆ ಇಲ್ಲೂ ಸಹ ಹರಪನಹಳ್ಳಿ ಕೆಂಚೇಶ ಮತ್ತು ಅರಸೀಕೆರೆ ಕೋಲಶಾಂತಯ್ಯ ಚಾರಿತ್ರಿಕ ವ್ಯಕ್ತಿಗಳಾದ ಕೊಟ್ಟೂರೇಶ್ವರ, ತಿಪ್ಪೇಸ್ವಾಮಿ, ಮದ್ದಾನೇಶರ ಸಮಕಾಲೀನರು ಎಂಬುದಕ್ಕೆ ಹೆಚ್ಚು ಆಕರಗಳು ಇಲ್ಲ. ಪಂಚಪೀಠಕ್ಕೆ ಪರ್ಯಾಯವಾಗಿ ಪಂಚಗಣಾಧೀಶ್ವರು ಎಂದು ಕರೆದುಕೊಂಡಿದ್ದಾರೆ. ಕಲಾವಿದ ತನ್ನ ಕಾವ್ಯದ್ದೂದಕ್ಕೂ ತಪ್ಪಿಯೂ ಪಂಚಗಣಾಧೀಶ್ವರರು ಎಂದು ಕರೆಯುವುದಿಲ್ಲ ಐದು ಮಂದಿ ಶರಣರೆಂದಷ್ಟೆ ಕರೆದಿದ್ದಾನೆ. ಯಾವಾಗ ಮದ್ದಾನೇಶ್ವರ ಇಂದ್ರಿಯ ಸರಿದವೋ, ಈಗ ನಮ್ಮ ಇಂದ್ರಿಯಗಳು ಉದ್ದೀಪನವಾದರೆ ಏನು ಗತಿಯೆಂದು ಉಳಿದ ನಾಲ್ಕು ಮಂದಿ ಒಂದೊಂದು ಕಡೆ ಸೆಟ್ಲಾಗುತ್ತಾರೆ. ಐದು ಪೀಠಗಳಾಗುತ್ತವೆ. ಹೀಗೆ ಆಂಶಿಕವಾಗಷ್ಟೇ ಪಂಚಗಣಾಧೀಶ್ವರರು ಬಂದು ನಿಜವಾದ ನಾಯಕ ಗೋಣಿಬಸವನ ಕತೆ ಪ್ರಾರಂಭವಾಗುತ್ತದೆ. ಇಲ್ಲಿಂದ ಗುರುವಿ ಕತೆ ಕೇಳಬೇಕ್ರೀ ಎನ್ನುವಲ್ಲಿ ಒಂದು ಸಂಘರ್ಷಾತ್ಮಕ ಚಲನೆ ಪ್ರಾರಂಭವಾಗುತ್ತದೆ, ಕೊಲ್ಲವ ಅದನ್ನು ಗೆಲ್ಲುವ ಘಟನೆಗಳು ಸರಣಿ ಇಲ್ಲಿಂದ ಪ್ರಾರಂಭ, ಒಬ್ಬ ಅಮಾಯಕ ಜಂಗಮನ ಕೊಲೆಯ ಕತೆ ಮೊದಲು ಬರುತ್ತದೆ. ಅವನೇ ಕೋರಿ ಈರಯ್ಯ. ನಾಯಕನ ಮೊದಲ ಸಮಸ್ಯೆ ನನ್ನ ತಂದೆ ಯಾರು? ಎನ್ನುವುದು. ದೈವೀಕರಣಗೊಂಡಿದ್ದ ಮದ್ದಾನೇಶ್ವರನನ್ನು ಕನಕಮ್ಮ ನಿನ್ನ ತಂದೆ ಎಂದು ಹೇಳುವುದಿಲ್ಲ, ಹೆರಿಗೆ ಮಾಡಿಸಲು ಸಹಾಯ ಮಾಡಿದ ಕೋರಿ ಈರಯ್ಯ ನಿನ್ನ ತಂದೆ ಎಂದು ಸಹಜವಾಗಿ ಹೇಳಿಬಿಡುತ್ತಾಳೆ. ( ಭಾಗದ ದೇವದಾಸಿ ಪದ್ಧತಿಯಲ್ಲಿ ಒಬ್ಬ ದೇವದಾಸಿ ತನ್ನ ಜೀವಿತದ ಅವಧಿಯಲ್ಲಿ ಇಬ್ಬರ ಮೂವರನ್ನು ಬದಲಾಯಿಸುವುದು ಅನಿವಾರ್ಯವಾಗಿ ಹೋಗಿದೆ. ಪದ್ಧತಿಯ ಪ್ರತಿನಿಧಿಯಾದ ಕನಕಮ್ಮನ ಪಾತ್ರ ಬಹಳ ಸಹಜವಾಗಿ ಬದಲಾವಣೆಯನ್ನು ಹೇಳುತ್ತಿದೆ) ಗೋಣಿ ಬಸವ ಅವನನ್ನು ಕೊಂದು ತನ್ನ ತಂದೆ ಮದ್ದಾನೇಶ್ವರ ಎಂದು ಪುನರ್ ಸ್ಥಾಪಿಸುತ್ತಾನೆ. ದೇವದಾಸಿಯೊಬ್ಬಳ ಬದುಕಿನ ಸೂಕ್ಷ್ಮತೆಗಳು ಮತ್ತು ಲಿಂಗಾಯತೀಕರಣಗಳ ಘೋರ ಸಂಘರ್ಷದ ಚಿತ್ರಣ ಇದು).

ಒಂದು ದಿನ ಅಂಬೋದೆ | ತಾನಿ ತಂದನಿ ನಾನೋ |
ಒಂದು ದಿನ ತಿಂಗಳಾಗ್ಯಾವೇ | ತಾನಿ ತಂದನಿ ನಾನೋ |
ಎಲ್ಡು ದಿನ ಎಂಬೋದೇ | ತಾನಿ ತಂದನಿ ನಾನೋ |
ಎಲ್ಡು ತಿಂಗಳಾಗ್ಯಾವೇ | ತಾನಿ ತಂದನಿ ನಾನೋ |
ಮೂರು ಆರು ಒಂಬತ್ತು | ತಾನಿ ತಂದನಿ ನಾನೋ |
ವರುಷದಾ ಮಗುವಯ್ಯೋ | ತಾನಿ ತಂದನಿ ನಾನೋ |

ಗೋಣಿಬಸವೇಶ್ವರಗ ಕೂಲಳ್ಳಿವೊಳಗೆ ಒಂದು ವರ್ಷ ತುಂಬಿತ್ರೀ. ಮಗ

ಹಿರೇಮಂಡೀಲಿ ಆಡುತಾನೇ | ಸೋಕೀರ ಮೂವ ತಾಜೀಜಿ |
ಮಂಡಿಹಚ್ಚಿ ಆಡುತಾನೇ | ಸೋಕೀರ ಮೂವ ತಾಜೀಜಿ |
ಈದ ಇಕ್ಕಿ

[1] ತುಂಬುತಾನೇ | ಸೋಕೀರ ಮೂವ ತಾಜೀಜಿ |

ಇದರಂತೆ ಗೋಣಿಬಸವ ಕೂಲಳ್ಳ್ಯಾಗೆ ದೊಡ್ಡನಾಗ್ತಾನ್ರೀ. ಮತ್ತು

ಹರಹರ ಭಗವಂತಾ | ತಾನಿ ತಂದನಿ ನಾನೋ |
ಒಂದು ತಿಂಗಳೆಂಬೋದೇ | ತಾನಿ ತಂದನಿ ನಾನೋ |
ಒಂದು ವರುಷನಾಗ್ಯಾನೇ | ತಾನಿ ತಂದನಿ ನಾನೋ |
ಎಲ್ಡು ತಿಂಗಳೆಂಬೋದೇ | ತಾನಿ ತಂದನಿ ನಾನೋ |
ಎಲ್ಡು ವರುಷದಾಗ್ಯಾನೇ | ತಾನಿ ತಂದನಿ ನಾನೋ |
ಮೂರು ತಿಂಗಳೆಂಬೋದೇ | ತಾನಿ ತಂದನಿ ನಾನೋ |
ಮೂರು ವರುಷ ತುಂಬ್ಯಾದೇ | ತಾನಿ ತಂದನಿ ನಾನೋ |
ಆರು ಮೂರು ಒಂಬತ್ತು | ತಾನಿ ತಂದನಿ ನಾನೋ |
ಹತ್ತು ವರುಷ ತುಂಬ್ಯಾದೇ | ತಾನಿ ತಂದನಿ ನಾನೋ |

ಗೋಣಿಬಸವೇಶ್ವರಗೆ ಹತ್ತು ವರುಷ ತುಂಬ್ಯಾವಯ್ಯೋ

ಹತ್ತೇ ವರುಷ ತುಂಬ್ಯಾವಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ದೊಡ್ಡೋನಾಗುತಾನೇ | ಸೋಕೀರ ಮೂವ ತಾಜೀಜಿ |
ಗುರುವೇ ದೊಡ್ಡೋನಾಗುತಾನೇ | ಸೋಕೀರ ಮೂವ ತಾಜೀಜಿ |

ಹತ್ತು ವರ್ಷ ಮುಗಿದಾಗ ಇಲ್ಲಿಂದ.

ಗುರುವಿನ ಕತಿಯ ಕೇಳಾಬೇಕ್ರೀ | ಶಿವನನಯನ ದೇವೈ |
ಮಹಾತುಮನ ಕತಿಯ ಕೇಳಾಬೇಕ್ರೀ | ಶಿವನನಯನ ದೇವೈ |
ಗುರುವೇ ದೊಡ್ಡೋನೆ ಆಗಾತಾನೇ | ಶಿವನನಯನ ದೇವೈ |

ಗೋಣಿಬಸವೇಶ್ವರ ಹತ್ತು ವರ್ಷದ ಪ್ರಾಯಕ್ಕೆ ಬಂದಾನು. ಹತ್ತು ವರ್ಷದು ಪ್ರಾಯಕ್ಕೆ ಬಂದಾಗ ಕೇಳ್ತಾನ್ರೀ ತಾಯಿ ಕನಕಮ್ಮನಿಗ ‘ಆ ಕನಕಮ್ಮನವರೇ ನನಿಗೆ ಗೊತ್ತಿಲ್ಲ, ನನ್ನ ತಂದೆ ಯಾರು? ಯಾರಿಗೆ ಅಪ್ಪ ಅನ್ಲಮ್ಮಾ?’ ‘ಅಯ್ಯೋ ಗೋಣಿಬಸವೇಶ್ವರ ನೀನು ತಂದಿ ಇಲ್ದಾ ಹುಟ್ಟೀಯೆನಪಾ? ಈ ಊರಲ್ಲಿ ಕೋರಿ ಈರಯ್ಯ[2] ಅದಾನಲ್ಲ ಜಂಗಮ್ರುನಾತ, ಆತನೆ ನನಗೆ ಗಂಡ ನಿನಿಗೆ ಆತನೇ ತಂದಿ’. ‘ಆ ಸಾಕಮ್ಮ ಸಾಕು ಸಾಕು’ ಕೋರಿ ಈರಯ್ಯ ಅಡವಿಗೆ ದನ ಕಾಯೋ ಮನುಷ. ಆ ಸಮಯದೊಳಗೆ ಗೋಣಿಬಸಪ್ಪ ಹೋದಾಗ ಬೈಸಿಲೆ[3] ಹೋಗಿಬಿಟ್ಟಾನು. ಅಷ್ಟೊತ್ತಿಗೆ ಏನ್ ಮಾಡ್ಕೊಂಡ ಗೋಣಿ ಬಸವೇಶ್ವರ ಮೂರು ಗೇಣಿಂದು ವಣಕಿ[4] ತುಂಡು ತಗೊಂಡ. ಸಜ್ಜು ಮಾಡಿ ಇಟ್ಕಂಡ. ಕೋರಿ ಈರಯ್ಯ ಸಾಯಂಕಾಲ ಮನಿಗೆ ಬಂದು ಮಗನ್ನ ಕರೀತಾನೆ.

ಬಾರಪ ನನ್ನ ಮಗನೇ | ತಾನಿ ತಂದನಿ ನಾನೋ |
ಬಾರಪ ನನ್ನ ಮಗನೇ | ತಾನಿ ತಂದನಿ ನಾನೋ |
ಬಾರಪ ನನ್ನ ಬಾಲ | ತಾನಿ ತಂದನಿ ನಾನೋ |
ಮಗನೆಂದೆ ಕರದಾನೋ | ತಾನಿ ತಂದನಿ ನಾನೋ |

ಕೋರಿ ಈರಯ್ಯ ಮಗ ಅನ್ನಕರಗ ಗೋಣಿಬಸವೇಶ್ವರನ ಹೊಟ್ಟಿವೊಳಗ ಅಗ್ನಿಬಿತ್ತು. ಗೋಣಿಬಸವೇಶ್ವರ ಮೂರುಗೇಣು ವಣಕಿ ತುಂಡು ತಗೊಂಡ ಕೋರಿ ಈರಪ್ಪನ

ತಲೆಮ್ಯಾಲೆ ಬಡದಾನಯ್ಯೋ | ಸೋಕೀರ ಮೂವ ತಾಜೀಜಿ |
ತಲಿಯಮ್ಯಾಲೆ ಬಡದಾನಯ್ಯೋ | ಸೋಕೀರ ಮೂವ ತಾಜೀಜಿ |
ಕೋರಿ ಈರಪ್ಪ ಸತ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಕೋರಿ ಈರಪ್ಪ ಸತ್ತಾನಯ್ಯೋ | ಸೋಕೀರ ಮೂವ ತಾಜೀಜಿ |

‘ಅಯ್ಯೋ ಗೋಣಿಬಸವೇಶ್ವರ’ ‘ಏನಮ್ಮ’ ‘ನನ್ನ ಹಿಡಿದು ರಕ್ಕೆಯೊಳಗೆ ಇಟ್ಟು ಜ್ವಾಪಾನ ಮಾಡಿದ ಗಂಡನ್ನ ಕೊಂದಾಕಿದಲ್ನಪ್ಪಾ ಈಗ.’

ಯಾರಿಗೆ ಗಂಡ ಅನ್ನಾಲಯ್ಯೋ | ಸೋಕೀರ ಮೂವ ತಾಜೀಜಿ |
ಯಾರಿಗೆ ಗಂಡ ಅನ್ನಾಲಯ್ಯೋ | ಸೋಕೀರ ಮೂವ ತಾಜೀಜಿ |
ಸತ್ತೇ ಹೋಗ್ಯಾನ ನನ್ನ ಪತಿಯೇ | ಸೋಕೀರ ಮೂವ ತಾಜೀಜಿ |
ಕನಕಮ್ಮ ಹೇಳತಾಳೇ | ಸೋಕೀರ ಮೂವ ತಾಜೀಜಿ |

ಕನಕಮ್ಮನವರೇ ಆಗನ್ಬೇಡಮ್ಮಾ ಆ ಕೋರಿ ಈರಯ್ಯ ನಿನಗೆ ಗಂಡಲ್ಲಾ ನನಿಗ ತಂದಿ ಅಲ್ಲಮ್ಮಾ ಹಾಗನ್ಬಾರ್ದು. ನಮ್ಮ ತಂದಿ

ಮುದ್ದಾನಸ್ವಾಮಿಗಳಿದ್ದಾರಯ್ಯೋ | ಶಿವನನಯನ ದೇವೈ |
ನನಿಗೆ ತಂದೀ ಇದ್ದಾನವ್ವೋ | ಶಿವನನಯನ ದೇವೈ |
ನಿನಿಗೆ ಗಂಡಾ ಇದ್ದಾನವ್ವೋ | ಶಿವನನಯನ ದೇವೈ |

04_35_GBK-KUH

‘ಆಗನ್ಬೇಡಮ್ಮಾ ಈ ಕೋರಿ ಈರಯ್ಯ ನಿನಗ ಗಂಡಲ್ಲಾ, ಗೋಣಿಬಸವ ಹೇಳ್ತಾನೆ. ‘ಮುಂದೆ ನನ್ನ ತಂದಿ ಎದ್ರುಗೆ ನಿನ್ನ ಸಮಾಧಿ ಮಾಡಿ ನಿನ್ನ ಎದಿಮ್ಯಾಗ ದೀಪಮಾಲೆ ಕಂಭ ನಿಲ್ಸಿ. ದೀಪ ಹಚ್ಚತ್ನಯ್ಯ’ ಅಂದು ನೋಡ್ರೀ ಮದ್ದಾನಸ್ವಾಮಿ ಎದುರಿಗ ಕೋರಿ ಈರಯ್ಯನ ಸಮಾಧಿ ಮಾಡ್ಸಿ ಎದಿಮಟ ಕಟ್ಟಿ ಕಟ್ಸಿ ಆ ದೀಪಮಾಲೆ ಕಂಬ ನಿಲ್ಸಿ ದೀಪ ಹಚ್ಚದ್ನಂತ. ದೀಪ ಹಚ್ಚಿ ಮುಂಗೈಗೆ ಜೋಳ್ಗಿ ಹಿಡ್ಕಂಡಾನು. ಕೈಗೆ ಬೆತ್ತ ಹಿಡ್ಕಂಡಾನು. ಕಾವಿ ಕಮಾಲೆ ಧರ‍್ಸಿಕೊಂಡಾನು. ನೋಡ್ರಿ ಬ್ಯಾಡ್ರು ಹೊಟ್ಟ್ಯಾಗ ಹುಟ್ಟಿ ಗೋಣಿಬಸವೇಶ್ವರ

ಕಂತಿ ಭಿಕ್ಷಾ ಮಾಡುತಾನೇ | ಸೋಕೀರ ಮೂವ ತಾಜೀಜಿ |
ವರವ ಕುರುವ ತೋರ್ಸತಾನೇ | ಸೋಕೀರ ಮೂವ ತಾಜೀಜಿ |
ಅಂತ್ರ ಮಂತ್ರ ಮಾಡುತ್ತಾನೇ | ಸೋಕೀರ ಮೂವ ತಾಜೀಜಿ |

ಹಿಂದೆ ಐದು ಮಂದಿ ಶರಣ್ರು ವರುವು ಕುರುವು, ಅಂತ್ರ ಮಂತ್ರ ಮಕ್ಳ ಫಲ ಎಂಗ ಕೊಡ್ತಿದ್ರೋ ಅದ್ರಂತೆ ತಳಭಿಕ್ಷಾನ್ನ ಮಾಡ್ದ ಗೋಣಿಬಸವೇಶ್ವರ. ಅವರಿಗಿನ್ನ ಜಾಸ್ತಿ ಅತ್ರೀ ಈತನ ವರುವು ಕುರುವು. ಭಿಕ್ಷಾ ಮಾಡ್ತಾ ತಂದಿಗೆ ಮಠ ಮಾನ್ಯ ಕಟ್ಟಸ್ತಾನ್ರೀ. ಬರೀ ಕಂತಿಭಿಕ್ಷಾ ಮಾಡ್ತಲೇ, ಮದ್ದಾನಸ್ವಾಮಿಗೆ ಮಠ ಕಟ್ಟಸ್ತಾನ್ರೀ.

ಸುತ್ತಾಪೌಳಿಯ[5] ಕಟ್ಟಸ್ತಾನೇ | ಶಿವನನಯನ ದೇವೈ |
ತಂದಿಗೆ ಮಠ ಕಟ್ಟಾಸ್ತಾನೇ | ಶಿವನನಯನ ದೇವೈ |
ಕಂತೀಯ ಭಿಕ್ಷಾ ಮಾಡುತಾನೇ | ಶಿವನನಯನ ದೇವೈ |

ಬರೀ ಭಿಕ್ಷೆ ಮಾಡ್ತಲೇ ಮಠ ಕಟ್ಟಸ್ತಾನ್ರೀ ತಂದಿಗೆ. ದೇವತಾ ಮಠ ಕಟ್ಟಾಸ್ತಾನು. ಮುಂದೆ ಉಪ್ಪರಿಗೆ ಕಟ್ಟಸ್ತಾನು. ಸುತ್ತ ಪೌಳಿ ಕಟ್ಟಸ್ತಾನು. ಗೋಣಿಬಸವೇಶ್ವರ ಭಿಕ್ಷಾ ಮಾಡ್ತಾನ ಒಂದಾನೊಂದು ದಿನ ಚಿಕ್ಕಳ್ಳಿಗೆ ಬಂದಾನು. ಅಲ್ಲಿ ಭಿಕ್ಷಾ ಮಾಡ್ತಾ ಮಾಡ್ತಾ ಎಲ್ಲಿಗೆ ಬಂದಾನು? ಮೇಟಿ ಬಣಕಾರರ ಮನಿಗೆ ಬಂದಾನು. ಮೇಟಿ ಬಣಕಾರ ಕೇಳ್ತಾನೆ. ‘ಯಾರಯ್ಯ ನೀನು’ ‘ನಾನು ಗೋಣಿಬಸವೇಶ್ವರ’ ‘ಗೋಣಿಬಸವಶ್ವರನಾ, ಅಲ್ಲಪ ತುದಿಗೆ ಬಡ್ಡಿಗೆ[6] ಏಕ ಅದೀಯಲೆ ನಿನಗ್ಯಾಕಲೆ ಭಿಕ್ಷಾ ಬೇಡಾದು. ನನ್ನ ಮನಿಯಾಗೆ ಸಂಬ್ಳ ಇರ‍್ತಿಯೇನಲೇ’ ‘ಅಹಾ ಅದೇ ಬೇಕಾಗ್ತರೀ ನನಿಗೆ ಯಾರು ಇಟ್ಕಂತಾರೋ ಇಲ್ಲೋ, ಅಂತಾ ಕೇಳ್ ಬಾರ‍್ದೆ ಸುಮ್ನಿದ್ದೆ ನಿಮ್ಮ ಬಾಯಾಗ ಬಂತು. ಆ ಇನ್ಮೇಲೆ ನಿಮ್ಮನ್ಯಾಗೆ ಸಂಬಳ ಇರ‍್ತೀನ್ರೀ’ ನೋಡ್ರೀ ಬಣಕಾರಗ ಗೊತ್ತಿಲ್ಲ ಈಗ ಮಹಿಮಾಪುರುಷ, ಗುರುಗಳೆಂಬೋದು ಗೊತ್ತಿಲ್ಲ. ಆತನ ಮನ್ಯಾಗ ಸಂಬಳ ಇಟ್ಕಂಡಬಿಟ್ಟ. ಆಗ ‘ಅದೇನ್ ಕೈಯಾಗಲ್ಲು ಅತ್ಲಾಗ ಹೊಗಿಯಲೇ, ಅದೇನ್ ಬಟ್ಟಿಗಳು ಹೊಗಿಯಲೇ, ಆ ತಗಳಲೇ ಬರ್ರೆಲೆ. ತಗಳಲೇ ಬೋಕಿ, ತಗಳಲೇ ಮುಸುಳ[7] ಬಣಕಾರ ಹೇಳ್ತಾನು. ನೋಡ್ರಿ ಚಿಕ್ಕಳ್ಳಿಯೊಳಗೆ ಮೇಟಿ ಬಣಕಾರನ ಮನಿಯೊಳಗೆ.

ಗುರುವೆ ಸಂಬಳ ದುಡಿಯಾತಾನೇ | ಶಿವನನಯನ ದೇವೈ |
ಕಲಿಯಾ ಪುರುಷೋ ನನ್ನ ದೈವೇ | ಶಿವನನಯನ ದೇವೈ |

ದುಡಿತಾ, ದುಡಿತಾ ಬಂದಾನು. ಬಣಕಾರ ಒಂದಾನೊಂದು ದಿನದಲ್ಲಿ ಯೋಚ್ನಿ ಮಾಡ್ತಾನೆ. ‘ಮನಿಮಕ್ಳಲ್ಲ ಆಳುಮಕ್ಳು ಮಾಡಿದ ಬದ್ಕು ಮನಿ ಹಾಳಂತೆ. ಉದ್ದಾರಾಗದಿಲ್ಲಂತೆ. ಎಷ್ಟು ಬೇಸಾಯ ಮಾಡ್ತಾನೆ, ಯಂಗ ಹೊಡಿತಾನೆ, ಇವತ್ತು ಪರೀಕ್ಷೆ ಮಾಡಬೇಕಪ’ ಮೇಟಿ ಬಣಕಾರ ಅವತ್ತು ಹೊಲಕ್ಕೆ ಕಳ್ಸಿದ. ‘ಆ ಬಸವಾ ಇವತ್ತು ರಂಟಿ[8] ಹೂಡಯ್ಯ, ರಂಟಿ ಹೊಡಿಯೋ’ ‘ಆಗ್ಲಿ ರೀ’ ರಂಟಿ ಹಕ್ಕೆಂಡ ಹೋಗ್ಯಾನು. ರಂಟಿ ಹೂಡ್ಯಾನು. ರಂಟಿ ಬೇಸಾಯ ಮಾಡಾಕರಗ ನಿದ್ದಿ ಬಂತ್ರೀ, ಕಣ್ ಮುಚ್ಚಿದ. ಹಾವು ಬಂದು ಹಾಸಿಗಿಯಾತು, ದಾಸಾವು ಬಂದು ತೆಲಿ ದಿಂಬಾತು, ಹಸುರಾವು ಬಂದು ಹೊದ್ಕಿ ಆತು. ಗೋಣಿಬಸವೇಶ್ವರ ನಿದ್ದಿ ಮಾಡ್ತಾನೆ. ಎತ್ತುಗಳು ಬೇಸಾಯ ಮಾಡ್ತಾವೆ.

ಬಣಕಾರ ಹೊಲಕ್ಕೆ ತಾನೇ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಹೊಲ ನೋಡಕ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ನಿದ್ದಿ ಮಾಡುತಾನೇ | ಸೋಕೀರ ಮೂವ ತಾಜೀಜಿ |

ಬಣಕಾರ ಹೊಲ್ದ ಸಮೀಪಕ್ಕೆ ಬಂದ ನೋಡ್ತಾನೆ. ‘ಆಳಮಕ್ಳ ಕಳ್ಸಿದ ಹೊಲ ಎಂದಿದ್ರು ಅದು ಹಾಳಯ್ಯ ಉದ್ದಾರಾಗೋದಿಲ್ಲ, ನೋಡಿ ಬರೋಣಾ. ಎಲ್ಲಿ ಮಕ್ಕಂಡ್ ಬಿಟ್ಟಾನೊ, ಹೋಗ್ಬಕಪಾ, ಅವ್ನ ಬಡೀಬೇಕಪ, ಮನಿಬಿಟ್ಟು ಗದಿಮಿ ಬಿಡ್ಬೇಕಪ’ ಬಣಕಾರ ಯೋಚ್ನಿ ಮಾಡ್ತಾ ಒಬ್ನೇ ಬರ‍್ತಾನ ದಾರಿಗುಂಟ ಹೊಲಕ್ಕ. ಬಂದು ನೋಡ್ತಾನ್ರೀ ಎಲ್ಲೆಂದ್ರಲ್ಲಿ ಹಾವ್ ಇಳೇಬಿದ್ಬುಟ್ಟಾವು. ಬಣಕಾರ ‘ಅಯ್ಯೋ ಬರೇ ಹಾವು ಅದಾವಪ’ ಅಂದು.

ಓಡಿ ಓಡಿ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಗುರುವಿಗೆ ಎಚ್ಚರಾಗುತಾದೇ | ಸೋಕೀರ ಮೂವ ತಾಜೀಜಿ |

ಬಣಕಾರ ಓಡ್ತಾನೆ. ಗೋಣಿಬಸವೇಶ್ವರಗ ಎಚ್ಚರಾತ್ರೀ. ಕಣ್ಣ್ ತಗದು ನೋಡ್ತಾನು. ಮ್ಯಾಲಿಕೆದ್ದಾನು. ಹಾವ್ ಹರ‍್ದು ಹೋಗ್ಯಾವು. ಬಣಕಾರ ಹೋಗಿ ನಿಗರಿ ನಿಗರಿ ನಿಂತು ನೋಡ್ತಾನೆ. ಆಗ ಗೋಣಿಬಸವೇಶ್ವರ ಮ್ಯಾಗೆದ್ದು ಹಾಸಿಗಿ[9] ಅಕ್ಕೆಂಡು ಮನಿಗೆ ಬರ‍್ತಾನ್ರೀ. ಆಗ ಅಂತಾನ್ರೀ ಬಣಕಾರ ‘ಈತ ಮನುಷ್ಯಾನಲ್ಲಪ ಪರುಮಾತುಮ ಅಲ್ದೆ ಬದ್ಲಿಯಲ್ಲ ಮನುಷ್ಯನಾಗಿ ಬಂದಾನ. ಇದು ಮೋಸಾತಪ,[10] ಕಾಣದ್ ಕಣ್ಣು ಕೇಳ್ದಕಿವಿ. ಹೋಗಲೇ, ಬಾರಲೇ, ನೀ ಯಾರಲೇ ಕುಂದಾಡ್ದೆ. ಅನ್ಯಾಯದ ಭಾಷೆ ನುಡ್ದೆ, ತಪ್ಪಾತು’ ಅಂದು ಅಂಗೆ ನಿಂತ್ಕಂಡಾನು. ಗೋಣಿಬಸವೇಶ್ವರ ಅಲ್ಲಿಗೇ ಹೋಗ್ಯಾನು. ಬಣಕಾರ ಓಡಿ ಬಂದು

ಗುರುವಿನ ಪಾದ ಹಿಡಿದಾನಯ್ಯೋ | ಶಿವನನಯನ ದೇವೈ |
ದೊಡ್ಡಾ ಮಹಾತುಮ ಇದ್ದೀಯಲ್ಲೋ | ಶಿವನನಯನ ದೇವೈ |
ತಪ್ಪೇ ಆತೋ ನನ್ನಾ ಗುರುವೇ | ಶಿವನನಯನ ದೇವೈ |
ಕ್ಷಮಿಸಾಬೇಕೋ ನನ್ನ ಗುರುವೇ | ಶಿವನನಯನ ದೇವೈ |
ಬಿದ್ದೇ ಬಿದ್ದೇ ಬೇಡುತಾನೇ | ಶಿವನನಯನ ದೇವೈ |

‘ಗುರುಗಳೇ ನಿನ್ನ ಮಹಿಮೆ ಈಗ ಗೊತ್ತಾಯ್ತು. ಕೈಬಿಟ್ಟೀನಿ ಅಗ್ಗ[11]’ ‘ಮತ್ಯಾಕಪ್ಪ ನಾನು ಆಲುಮಗನಪ, ನನ್ನ ಪಾದಕ್ಯಾಕ್ ನೀನು ಹಿಡ್ದೆಪಾ, ಪಾದಕ್ಕ ಯಾಕ ಮುಟ್ಟೆಪಾ’ ‘ಗುರುಗಳೇ ಗುರುಗಳೇ ಹಾಗ್ನಬೇಡ್ರೀ ನೀವ್ ಆಳ ಮಗ ಅಲ್ಲ. ನನ್ನ ಮನಿ ದೇವ್ರು, ನನ್ನ ಮನಿ ಸ್ವಾಮಿ. ದಯಮಾಡಿ ಇವತ್ತು ನಿನ್ನ ಮಹಿಮೆ ಗೊತ್ತಾತು. ನಮ್ಮನ್ಯಾಗೆ ಇರಾದು ಬ್ಯಾಡ, ನನ್ನ ಮನ್ಯಾಗ ದುಡಿಯದು ಬ್ಯಾಡ. ಆದ್ರ ನಿನ್ನ ಮಹಿಮೆ ಗೊತ್ತಾತು.

ದಯಮಾಡು ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ಗುರುವೇ ಪಾದ್ಕ ಬಿದ್ದಾನಯ್ಯೋ | ಸೋಕೀರ ಮೂವ ತಾಜೀಜಿ |

‘ಬಸವಣ್ಣೋರೆ ಸಾಕ್ರೀ ನಿಮ್ಮ ಮಹಿಮೆ ಗೊತ್ತಾತು. ದಯಮಾಡ್ರೀ ದಯಮಾಡ್ರೀ ತಪ್ಪಾಯ್ತಿರೀ’ ಅಂತೇಳಿ. ‘ಆದ್ರೆ ನಾನು ಕಾಣ್ದಕಣ್ಣ. ಕೇಳ್ದಕಿವಿ. ನನ್ನ ಮನಿಯೊಳಗೆ ಸಂಬಳ ದುಡ್ಸಿಕೆಂಡ ತಪ್ಪಿಗೆ ವರುಷ ನಿನ್ನ ಗಾಲಿಗೆ[12] ನಾನು ಎಣ್ಣಿ ಎರೀತೀನ್ರಿ’. ಅಂತ ಹರಕಿ[13] ಕಟ್ಕೆಂಡ, ನಿಸೂರು[14] ಕಟ್ಕೆಂಡ. ಗೋಣಿಬಸವೇಶ್ವರ ಅಲ್ಲಿ ಕುರುವು ಸಂಬಳಬಿಟ್ಟು ಜೋಳ್ಗ ಅಕ್ಕೆಂಡಾನು ಬೆತ್ತ ಹಿಡ್ಕಂಡ.[1] ಈದ ಇಕ್ಕಿ -…

[2] ಕೋರಿ ಈರಯ್ಯ – ಈತ ಕಾವ್ಯದಲ್ಲಿ ತುಂಬಾ ಅಸಹಜವಾಗಿ ಕ್ರೂರವಾಗಿ ಕೊಲೆಯಾಗುವ ವ್ಯಕ್ತಿ. ಕನಕಮ್ಮ ತನ್ನ ಗಂಡ ಕೋರಿ ಈರಯ್ಯ ಎಂದು ಕರೆಯುತ್ತಾಳೆ.

[3] ಬೈಸಿಲೆ – ಸಾಯಂಕಾಲ

[4] ವಣಕಿ – ಒನಕೆ

[5] ಪೌಳಿ – ಸುತ್ತುಗೋಡೆ

[6] ಬಡ್ಡಿಗ – ದಪ್ಪಗೆ

[7] ಮುಸುಳ – ಭಿಕ್ಷುಕ

[8] ರಂಟಿ – ವ್ಯವಸಾಯ ಮಾಡುವ ಆಯುಧ

[9] ಹಾಸಿಗ – ಹಾಸಿಗೆ,

[10] ಮೋಸಾ – ಮೋಸ

[11] ಅಗ್ಗ – ಹಗ್ಗ,

[12] ಗಾಲಿ – ಚಕ್ರ

[13] ಹರಕಿ – ಹರಕೆ

[14] ನಿಸೂರು – ಮೀಸಲು