(ಗೋಣಿ ಬಸವನನ್ನು ಕೈಲಾಸದಲ್ಲಿ ಹುಟ್ಟಿಸುವ ಏಕೈಕ ಕಾರಣ, ಅವನನ್ನು ದೈವೀಕರಣಗೊಳಿಸುವುದಕ್ಕಾಗಿ. ಈಗ ಅವನು ಮತ್ತೇ ಕಲಿಯಲ್ಲಿ ಹುಟ್ಟಬೇಕು. ಇಲ್ಲಿಂದ ಕಾವ್ಯಕ್ಕೆ ಮುಜುಗರಗಳು ಇಲ್ಲ. ಎಲ್ಲ ಬಂದು ಬಾಗಳಿಯಲ್ಲಿ ಸೇರಿಕೊಂಡಿರುತ್ತಾರೆ. ಒಂದು ಪೂರ್ವ ನಿಶ್ಚತವಾದ ಸಂಗತಿಯಿದೆ. ಜಂಗಮರ ಮದ್ದಾನೇಶ್ವರನಿಗೆ ಬೇಡರ ಕನಕಮ್ಮನಿಗೆ ಮದುವೆ ಮಾಡಿ ಗೋಣಿ ಬಸಪ್ಪನನ್ನು ಹುಟ್ಟಿಸಬೇಕು. ಈಗ ಅವನನ್ನು ದೈವೀಕರಿಸಿ ಆಗಿದೆ. ಆದರೆ ಲೌಕಿಕದಲ್ಲೂ ಅವನ ಹುಟ್ಟಿಗೆ ಒಂದು ನಾಟಕೀಯ ಘಟನೆ ಬೇಕು. ಬಾಗಳಿ ಮಠದಿಂದ ಗೋಣಿ ಬಸಪ್ಪ ವಾಕ್ ಹೋಗುತ್ತಾನೆ. ತೋಟದಲ್ಲಿ ಕನಕಮ್ಮ ಹೂ ಕೊಯಿತ್ತ ಇದ್ದಾಳೆ. ಅವಳನ್ನು ನೋಡಿದ್ದೇ ತಡ ಇಂದ್ರತಾವೆ (ವೀರ್ಯ) ಸರಿದು ಬಿಡುತ್ತದೆ. ತಕ್ಷಣ ಇಲ್ಲಿ ಜಂಗಮರ ಜೊತೆಯಲ್ಲಿದ್ದ ಮಗು ತಟ್ಟಂತ ಕನಕಮ್ಮ ಹೊಟ್ಟೆ ಸೇರಿಕೊಂಡು ‘ಸದ್ಯಪ್ಪ ಹುಟ್ಟಿಗೆ ಒಂದು ತಳ ಸಿಕ್ಕಿತು’ ಎಂದು ನಿಟ್ಟುಸಿರು ಬಿಡುತ್ತದೆ. (ಕರ್ನಾಟಕದ ಅನೇಕ ಸಾಂಸ್ಕೃತಿಕ ನಾಯಕರು ತಂದೆ ಇಲ್ಲದೆ ಹುಟ್ಟಿದವರು ಉದಾ: ಮಂಟೇಸ್ವಾಮಿ, ಮಹಾದೇಶ್ವರ, ಜಂಜಪ್ಪ, ಮೈಲಾರ, ಮುಂತಾದವರು. ಈ ಕಾವ್ಯದಲ್ಲೂ ಮುಂದೆ ಗೋಣಿ ಬಸಪ್ಪ ತಂದೆ ಇಲ್ಲದೆ ಅನೇಕ ಬಿಕ್ಕಟ್ಟು ಎದುರಿಸುತ್ತಾನೆ). ಮದ್ದಾನೇಶ ಕನಕಮ್ಮನ ಸೌಂದರ್ಯಕ್ಕೆ ಮರುಳಾಗಿ ಜಾತಿ ಜಂಗಮತ್ವನೆಲ್ಲ ಮೀರಿ ವೀರಶೈದಿಂದ ಬಿಡುಗಡೆಗೊಂಡು ಸಂಸಾರಿಯಾಗುವ ನಾಟಕೀಯ ಪ್ರಸಂಗವನ್ನು ಒಂದು ಪ್ರೇಮ ಕಥಾನಕದ ತರ ಕಲಾವಿದ ಚಿತ್ರಿಸುತ್ತಾನೆ. ಇಂದ್ರಿಯ ಸುಖಕ್ಕೆ ಆಸೆ ಪಟ್ಟು ನೀನು ಜಂಗಮತ್ವವನ್ನು ಕಳೆದುಕೊಂಡೇ ಎಂದು ಉಳಿದ ನಾಲ್ಕುಮಂದಿ ವ್ಯಂಗ್ಯ ಮಾಡುವುದಂತೂ ರನ್ನ್ ಮಾಡುವ ಮೊದಲೇ ವಿಕೆಟ್ ಕಳೆದುಕೊಂಡವನ ಸ್ಥಿತಿಯಂತೆ ಚಿತ್ರಿತನಾಗಿದ್ದಾನೆ. ಇದು ಆ ಮೂಮೆಂಟ್ಗೆ ಬಹುದೊಡ್ಡ ತಿರುವು. ೧೫ನೇ ಶತಮಾನದಲ್ಲಿ ಈತರದ ಒಂದು ಸಂಗತಿ ನಡೆಯುವುದರಲ್ಲಿ ವಿಶೇಷವೇನು ಇಲ್ಲ ಏಕೆಂದರೆ ಈ ಭಾಗದ ದೇವದಾಸಿ ಪದ್ದತಿಯನ್ನು ಹೆಚ್ಚು ಪ್ರಾಕ್ಟೀಸ್ನಲ್ಲಿ ಇಟ್ಟಿರುವವರು ಲಿಂಗಾಯತರು. ಬೇಡರ ದೇವದಾಸಿ ಹೆಣ್ಣು ಮಕ್ಕಳು ಲಿಂಗಾಯತ ಪ್ಯೂಡಲ್ ಕ್ಲಾಸಿನವರ ಆಸ್ತಿಯಾಗಿದ್ದಾರೆ. ಈಗಲೂ ಈ ಪ್ರಾಕ್ಟೀಸ್ ಇದೆ. ಇದರ ವಿಶೇಷವೆಂದರೆ ಹೀಗೆ ದೇವದಾಸಿಗೆ ಹುಟ್ಟಿದ ಮಗ ತನ್ನೆಲ್ಲ ಅವಮಾನ ಹಿಂಸೆಗಳನ್ನು ಗೆದ್ದು ದೈವವಾಗಿರುವುದು. ಈ ಕಾರಣದಿಂದಲೇ ಶಿಷ್ಟ ವೀರಶೈವ ಬರಹ ಪರಂಪರೆ ಮದ್ದಾನೇಶನನ್ನು ಕುರಿತು ಒಂದು ವಾಕ್ಯವನ್ನು ಬರೆಯಲಿಲ್ಲ. ಮತ್ತು ಇಷ್ಟ ದೊಡ್ಡ ಮೂಮೆಂಟ್ನ್ನು ಮುಂದಿನ ವೀರಶೈವ ಮುಚ್ಚಾಕುವುದರಲ್ಲೇ ಆಸಕ್ತವಾಗಿತ್ತು.)
ಕೂಲಳ್ಳಿಗೆ ಬಂದಾಳು. ಕೂಲಳ್ಳ್ಯಾಗ ಕನಕಮ್ಮ ‘ಅಪ್ಪಾ ಎಲ್ಲಿಗೋದ್ರು ಊರ್ಗಳು, ಎಲ್ಲಿಗೋದ್ರು ಜನ್ಗಳು, ಎಲ್ಲೆಂತ ಹೆಣ್ಣು ಮುಂಡೆ ಹೋಗ್ಲಿ ‘ರಾಜನ ಅಕ್ಕ ದೇವತಾ ಅರಮನಿಯೊಳಗ ಅಮೃತಪಾಯ್ಸ ಊಟ ಮಾಡ್ದ ಪ್ರಾಣಿ, ನೋಡ್ರಿ ಕೂಲಳ್ಳಾಗ.
ತಿರಕಂಡ ತಾನೇ ತಿಂಬಾತಾಳೇ | ಆ ಶಿವನ ನಯನ ದೇವೈ |
ಆ ರೈತ್ರ ಮುದ್ದೀಯ ಕೇಳಾತಾಳೇ | ಆ ಶಿವನ ನಯನ ದೇವೈ |
ಅಕ್ಕ ಕನಕಮ್ಮ ಕೂಲಳ್ಳಾಗ ತಿರಕಂಡ ಊಟ ಮಾಡ್ತಾಳ್ರೀ. ಕೂಲಳ್ಳಿ ಸೇರ್ಕೆಂಡ್ಲು ಸೇರ್ಕಂಡಾಗ ಸೊಕ್ಕಿನ ಶಿವನಯ್ಯ ಹರಪ್ನಳ್ಳಿ ಸಿಂಹಾಸನ ಆಳ್ತಾನ್ರೀ. ಕನಕಮ್ಮಗ ವೃದ್ಧಕಾಲ ಬಂತ್ರೀ ಹೊಟ್ಟ್ಯಾಗ ಮಕ್ಳಿಲ್ಲ. ಬಂಜಿ, ವಾರಿಗಿ ಸ್ತ್ರೀಯರು ಕುಂದಾಡ್ತಾರೆ. ಬಂಜಿ ಎಂದೇ ಕರೆಯುತ್ತಿದ್ದರೇ | ಆ ಶಿವನ ನಯನ ದೇವೈ | ದುಃಖಮಾಡ್ತಾಳೆ, ನಿರ್ವಿಲ್ಲ ನೆರೆಯೂರು ತಿರಕಂಡೆ ತಿಂಬ್ತಾಳೆ. ಐದುಮಂದಿ ಶರಣ್ರು ಕೂಸು ಜ್ವಾಪಾನ ಮಾಡ್ತಾ ಬಾಗಳಿ ಕಲ್ಲೇಶ್ವರನ ಗುಡಿಯೊಳಗೆ ಇದ್ರು. ನೋಡಿದವ್ರು ಹೇಳ್ತಾರೆ ಕನಕಮ್ಮನಿಗೆ ‘ಆ ಕನಕಮ್ಮನವರೆ ನಿನಿಗೆ ಮಕ್ಳಿಲ್ಲ ಬಂಜಿ ಆದೆ, ಪರಮಾತುಮ ಫಲ ಕೊಡ್ಲಿಲ್ಲ ಅಂತೀಯಲ್ಲ, ಬಾಗಳಿ ಕಲ್ಲೇಶ್ವರನ ಗುಡಿಯೊಳಗೆ ಐದು ಮಂದಿ ಶರಣ್ರು ಬಂದಾರಂತೆ. ಅವ್ರು ವರವು ಕುರುವು[2], ಅಂತ್ರ, ಮಂತ್ರ, ಮಕ್ಳಿಲ್ಲದವರಿಗೆ ಮಕ್ಳು ಫಲ ಕೊಡೋದು ಮಾಡ್ತಾರಂತೆ. ಹೋಗಿ ಕೇಳ್ಕೆ ನಿನಿಗೆ ಫಲ ಕೊಡ್ತಾರೆಂಗ’ ಊರಾಗಿನ ವಾರಿಗಿ ಸ್ತ್ರೀಯರು ಹೇಳ್ದಾಗ ಕನಕಮ್ಮ ಅವ್ರು ಮಾತುಕೇಳಿ ಒಂದೇ ಮನಿಸೀಲಿ ಭಾಳ ಭಕ್ತೀಲಿ, ಮಕ್ಳ ಫಲಕ್ಕ ಹೋಗ್ತಾಳ್ರೀ. ಆ ಕೂಲಳ್ಳಿಯಾಗ ಆಯಮ್ಮ ಹೊಂಡೋದು, ಫಲ ಬೇಡೋದು ಶರಣ್ರಿಗೆ ಅರಿವಿಕೆ ಆಗೈತ್ರೀ, ಗೊತ್ತಾಗತೈತೆ, ‘ಆಹಾ ಇಂಥ ಭಾಳ ದೊಡ್ಡ ಭಕ್ತಳಿದಾಳಪ್ಪ, ಯಾವ ತಾಯಿ ಆದಾಳಪ್ಪ, ಎಷ್ಟು ಒಂದೇ ಮನ್ಸಿಲೀ ಬರ್ತಾಳೆ ಮಕ್ಳ ಫಲಕ್ಕೆ. ಆ ಮಗು ಗೋಣಿ ಬಸವಣ್ಣೋರೆ ನಿಮ್ಮ ತಾಯಿ ಬರ್ತಾಳಪ್ಪ’. ನಮ್ಮನ್ನ ಬಿಟ್ಟೇ ಹೋಗಾತೀಯೋ | ಆ ಶಿವನ ನಯನ ದೇವೈ | ಶರಣ್ರು ಮಾತಾಡ್ತಾರೆ. ಕನಕಮ್ಮ ಬಾಗಳಿ ಕಲ್ಲೇಶ್ವರನ ಮಠಕ್ಕೆ ಬರ್ತಾಳೆ. ತೋಯ್ದು ಬಟ್ಟೆ ಉಟ್ಟು ಮಹಾಭಕ್ತೀಲೆ ಪುಪ್ಪ ತಗೊಂಡು, ಕಾಯಿ ಕರ್ಪೂರ ತಗೊಂಡು, ಬಾಗಳಿ ಕೆರಿ ಏರಿಮ್ಯಾಗ ಬಂದಾಳು. ಕೆರಿ ಹಿಂದಕ್ಕೆ ದಕ್ಷಿಣಕ್ಕೆ ಮುಖವಾಗಿ ಇಳಿಯಾ ಕರಗ ಮಠದಾಗೆ, ಆಗ ಮದ್ದಾನಸ್ವಾಮಿ ಗಾಳಿ ತಗಣಾಕೆ ಹೂವಿನ ಹವಾ ತಗಣಾಕೆ ಊರು ವನದಾಗೆ ಸುಳಿದಾಡ್ತಾನರೀ. ಆತೊಬ್ಬಾತೆ,[3] ಇನ್ನು ನಾಲ್ಕು ಮಂದಿ ಶರಣ್ರು ಮಠದಾಗ ಅದಾರ. ಮದ್ದಾನಸ್ವಾಮಿ ತಿರುಗಿದಾಗ್ಲೆ ಕನಕಮ್ಮನ ಮ್ಯಾಲೆ ಮದ್ದಾನಸ್ವಾಮಿ ದೃಷ್ಟಿ ಬಿತ್ತಿರೀ, ದೃಷ್ಟಿ ಬಡೀತು. ಬರೇ ದೃಷ್ಟಿ ಬಿದ್ದದ್ಕೆ ಮದ್ದಾನಸ್ವಾಮಿಗೆ ಇಂದ್ರತಾವೇ[4] ಸುರದಾವಯ್ಯೋ | ಸೋಕೀರ ಮೂವ ತಾಜೀಜಿ | ಮದ್ದಾನಸ್ವಾಮಿಗೆ ಈ ಇಂದ್ರ ಸರಿಯ ತಡ ಈ ನಾಲ್ಕು ಮಂದಿ ಜೊತಿಗಿತ್ತಲ್ತೀ ಮಠದಾಗೆ ಕೂಸು ಗೋಣಿ ಬಸವೇಶ್ವರ, ಮಾಯಾವಾಗಿ ಹೋಗ್ತಾನಯ್ಯೋ | ಸೋಕೀರ ಮೂವ ತಾಜೀಜಿ | ಕೂಸು ಮಾಯವಾತಂತ್ರೀ ಅಲ್ಲೇ ಕನಕಮ್ಮನ ಹೊಟ್ಯಾಕ ಸೇರ್ಕಂಡ್ನಂತೆ. ಆಗ ಸೇರ್ಕೆಂಡಿದ್ದು, ಮಾಯವಾಗಿದ್ದು, ಮದ್ದಾನಸ್ವಾಮಿಗೆ ಇಂದ್ರ ಸರದಿದ್ದು, ಒಳಗೆ ಇದ್ರಲ್ಲಿ ನಾಲ್ಕು ಮಂದಿ ಶರಣ್ರು, ಅವರಿಗೆ ಗೊತ್ತಾತಂತೆ. ‘ಆಹಾ ಮದ್ದಾನಸ್ವಾಮಿ ಕೆಟ್ಟ, ಕೆಟ್ಟ ಕೆಟ್ಟ’ ಪಕಪಕ ನಗುತಾರು, ಬಿದ್ದು ಬಿದ್ದು ನಗುತಾರ್ರೀ ನಾಲ್ಕು ಮಂದಿ ಶರಣ್ರು, ಮದ್ದಾನಸ್ವಾಮಿ ಇಂದ್ರ ಸರಿದಿದ್ದಕ್ಕ ಮೈಲಿಗಿಯಾದಕ್ಕ. ಒಳಕ ಬರಂಗಿಲ್ಲ. ಶರಣ್ರನ ಮುಟ್ಟಂಗಿಲ್ಲ. ಅಲ್ಲೇ ನಿಂತ್ಕಂಡ್ ಬಿಟ್ಟಾನು. ಕನಕಮ್ಮಗ ಅದು ಗೊತ್ತಿಲ್ಲ. ನಿರ್ಧಾರದಿಂದ ಮಠದ ಬಾಗ್ಲಿಗೆ ಹೋಗ್ಯಾಳು, ಶರಣ್ರುನ್ನ ಮುಟ್ಟಂಗಿಲ್ಲ. ಅವರಮ್ಯಾಕ ನೀರು ಉಗ್ಗ್ಯಾಳು,[5] ಅವರಮ್ಯಾಕ ಪುಪ್ಪ ಒಗದಾಳು, ಕಾಯಿ ಒಡ್ಡು, ಅಡ್ಡ ಬಿದ್ದು ‘ಗುರುಗಳೇ ಗುರುಗಳೇ ನಿಮ್ಮಿಂದ ಧನ್ಯಳಾಗ್ಬೇಕು, ಇಲ್ದಿದ್ರೆ ನನ್ಗೆ ಸ್ವರ್ಗದಾರೀನೇ ಸುಳಿಯಲ್ಲ. ಅಂದ್ರೆ ನನಿಗೆ ಭಂಜಿ, ನಿರ್ವಾಣಿ, ಲೋಭಿ ಅಂತ ಕುಂದಾಡ್ತಾರೆ, ಇವತ್ತೆ ಹುಟ್ಟಿ ನಾಳೆ ಸತ್ತೋಗ್ಲೀ ಬಿಡ್ಲಿರೀ. ಮಕ್ಕಳ ಫಲವ ಕೊಡಬೇಕಯ್ಯೋ | ಆ ಶಿವನನಯನ ದೇವೈ | ಈಯಮ್ಮ ಕೇಳದ್ಕೆ ನಾಲ್ಕು ಮಂದಿ ಶರಣ್ರು, ಪಕಪಕ ಬಿದ್ದು ಬಿದ್ದು ನಗುತಾರು, ‘ಅಲ್ಲಮ್ಮ ನಿನ್ನ ಹೊಟ್ಟಿ ಒಳಗೆ ಜಗದ್ಗುರುವನ್ನು ಇಟ್ಕಂಡು ನಮ್ಮನ್ನು ಮತ್ತೇ ಫಲ ಕೇಳ್ತಿಯಲ್ಲಮ್ಮ ನಿನ್ನ ಹೊಟ್ಟಿ ಒಳಗೆ ಗಂಡುಮಗ ಹುಟ್ತಾನೆ. ‘ಗೋಣಿ ಬಸವೇಶ್ವರ’ ಅಂತ ನಾಮಕರಣ ಕರಿಯಮ್ಮ. ಹೋಗೆ ಹೋಗೆ ನನ್ನ ಮಗಳೇ | ಸೋಕೀರ ಮೂವ ತಾಜೀಜಿ | ‘ಆ ಹೋಗಮ್ಮ’ ‘ಆಗ್ಲಿ ಗುರುಗಳೇ’ ಆಗ ಅವರಿಗೆ ಅಡ್ಡಬಿದ್ದು ಕೂಲಳ್ಳಿಗೆ ಹೊಂಟಾಳು. ನಾಲ್ಕು ಮಂದಿ ಶರಣ್ರು ಹೊರಗೆ ಬಂದಾರು. ‘ಆ ಮದ್ದಾನಸ್ವಾಮಿಗಳೇ’ ‘ಮತ್ತೇನ್ರಪಾ’ ಏನಿಲ್ಲ ಅದ್ರೆ ಕೆಟ್ಟೋದೆ, ಮೈಲಿಗೆಯಾದೆ ನಮ್ಮನ್ನು ಮುಟ್ಟಂಗಿಲ್ಲ ನಮ್ತಾಗ ಬರಂಗಿಲ್ಲ. ಕನಕಮ್ಮನೆ ಹೆಂಡ್ತೀ, ನೀನೇ ಗಂಡ. ಇನ್ಮುಂದೆ ಕೂಲಳ್ಳಿಗೆ ಹೋಗಪ. ನಾವ್ ಯಾತರ ಹೋಗ್ಬಿಡ್ತೀವಿ ಮಾರಾಯ’ ಕೊಟ್ರೇಶ್ ಹೇಳಿದ್ನಂತೆ, ಕೊಟ್ರೇಶ್ ಹೇಳಿದಾಗ ಮ್ರದ್ದಾನಸ್ವಾಮಿ ಕೇಳ್ದ. ‘ಅಲ್ಲಯ್ಯ ನೀವ್ ನನಿಗಿನ ದೊಡ್ಡೋರು. ಅಕಿ ನೋಡಿದ್ರ ಬ್ಯಾಡರಾಕಿ[6] ಅಕಿ ಹಿಂದ ಹೋಗಂತಿರಲಯ್ಯ ನನ್ನಂತಾ ಶಿವಶರಣನ್ನ’ ಆಗ ಕೊಟ್ರೇಶ ಅಂತಾನೆ. ‘ಆಯ್ತಪ ಕೊಟ್ಟೋದೆ, ಬರೀ ದೃಷ್ಟಿಗೆ. ನಮ್ತಾಗ ಬರಂಗಿಲ್ಲ, ಮುಟ್ಟಂಗಿಲ್ಲ, ಆಕಿ ಹಿಂದೆ ಹೋಗ್ಬಿಡು. ಅಯಮ್ಮನೇ ಹೆಂಡ್ತಿ, ನೀನೇ ಗಂಡ’ ಅಂದಾಗ. ‘ಹೋಗ್ತಿನಪ ನಿರ್ವಿಲ್ಲಾ ನೀವ್ ಬ್ಯಾಡ್ರಾಕಿ ಹಿಂದೆ ಹೋಗಂತೀರಲ್ಲ ನೀನು ಕೊಟ್ರೇಶ ಎಲ್ಲಿ ನೀನು ನೆಲೆಗೊಂಡು ರಥೋತ್ಸವ ಸಾಗ್ತತೋ ಅಲ್ಲಿ. ಮಾದರಾಕಿ ಆರತಿಯ ಬೆಳಗಾಲಯ್ಯೋ | ಸೋಕೀರ ಮೂವ ತಾಜೀಜಿ | ಹೋಗ್ತಿನಪ ಮತ್ತೆ ಬಿಡುಗಡಿಲ್ಲ. ಆಗ ಮದ್ದಾನಸ್ವಾಮಿ ಕರಕಂಡು, ಮಕ್ಳ ಫಲ ಪಡಕಂಡು ಕನಕಮ್ಮ ಕೂಲಳ್ಳಿಗೆ ಬರ್ತಾಳಯ್ಯೋ | ಆ ಶಿವನನಯನ ದೇವೈ | ಕೂಲಹಳ್ಳಿಗೆ ಹೋಗ್ಯಾಳು ಒಂದು ಬೈಲು ಜಾಗ ನೋಡಿದ್ಲು ಅಲ್ಲಿ ಮರುಳು ತಂದ್ಲು. ಆ ಮರಲು ಗದ್ದಿಗಿ ಮಾಡಿ ಆದ್ರಮ್ಯಾಲ ಕುಂದ್ರಿಸಿದ್ಲು. ನಾಲ್ಕು ದಿಕ್ಕಿನ್ಯಾಗ ಗೂಟ ಉಗುದು[7], ನಾಲ್ಕು ತೆಂಗಿನಕಾಯಿ ಗರಿ ತಂದು ಮ್ಯಾಲಾಕಿ ಆತನಿಗೆ ನೆಳ್ಳು[8] ಮಾಡಿದ್ಲು ಕನಕಮ್ಮ ಮದ್ದಾನಸ್ವಾಮಿ ಕರಕಂಡೋಗಿ ಸೇರಿಕೊಂಡಳು. ಕನಕಮ್ಮ ಮಕ್ಳ ಫಲ ಪಡಕೊಂಡ್ಳು. ಆಯಮ್ಮನ ಕತಿ ಆಗಿರ್ಲಿ. ತಿಪ್ಪಣ್ಣ ಕೆಂಪಯ್ಯ, ಕೊಟ್ರೇಶ, ಕೋಲಶಾಂತಯ್ಯ ಮಾತಾಡ್ಕೊಳ್ತಾರೆ ‘ಅಯ್ತನ ಮತ್ತೆ ಮದ್ದಾನಸ್ವಾಮಿ ಹೋದ ಮತ್ತೆ ನಾವೆಲ್ಲರ ಹೋಗಾನನ ನಡ್ರೆ ಮತ್ತೆ ನಾವ್ಯಾಕೆ ಇಲ್ಲಿರ್ಬೇಕು’. ನೋಡ್ರಿ ನಾಲ್ಕು ಮಂದಿ ಸೇರಿ ಬಾಗಳಿ ಕಲ್ಲೇಶ್ವರನ ಮಠ ಬಿಟ್ಟು ಹರಪನಹಳ್ಳಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ | ಹರಪ್ನಳ್ಳಿಗೆ ಬಂದಾರು. ಆಗಂತಾನ್ರೀ ಕಣಗಲಿ ಕೆಂಪಯ್ಯ ‘ಆಯ್ತಪ ಎಲ್ಲಿಗೋದ್ರು ಜಗತ್ತೇ. ನಾನು ಮುದುಕಪ ನನ್ನ ಕೈಲಿ ಬರಾದಾಗದಿಲ್ಲ ಮಾರಾಯ. ನೀವೇ ಎಲ್ಲರ ಹೋಗ್ರಿ ನಾನಿಲ್ಲಿ ಇದ್ಬುಡ್ತಿನಿ’. ಕಣಗಲಿ ಕೆಂಪಯ್ಯ ಹರಪ್ನಳ್ಳಿಗೆ ಆದ. ಅಲ್ಲೆ ನೆಲಗೊಂಡ. ಮತ್ತು ಕೊಟ್ರೇಶ ತಿಪ್ಪೇಸ್ವಾಮಿ ಕೋಲಶಾಂತಯ್ಯ. ಅರಸೀಕೇರಿಗೆ ಹೋಗ್ಯಾರಯ್ಯೋ | ಸೋಕೀರ ಮೂವ ತಾಜೀಜಿ | ಅರಸೀಕೇರಿಗೆ ಹೋದಾಗ ಅಂತಾನ್ರಿ ಕೋಲಶಾಂತಯ್ಯ ‘ಆ ತಿಪ್ಪಣ್ಣ, ಕೊಟ್ರೇಶ ನನ್ನ ಕೈಲೆ ಆಗಾದಿಲ್ಲಪ ಬರೋದು, ನೀವೆಲ್ಲರ ಹೋಗ್ರಿ ಮಾರಾಯ ನಾನ್ ಇದಾ ಊರಾಗ ಇರ್ತಿನಿ’. ಅರಿಸಿಕೆರೆಯಾಗೆ ಕೋಲಶಾಂತಯ್ಯ ಆದ. ತಿಪ್ಪೇಸ್ವಾಮಿ ಕೊಟ್ರೇಶ. ನಾಯ್ಕನಟ್ಟಿಗೆ ಹೋಗ್ಯಾರಯ್ಯೋ | ಸೋಕೀರ ಮೂವ ತಾಜೀಜಿ | ನಾಯ್ಕನಟ್ಟಿಗೆ ಹೋಗ್ಯಾರು ‘ಆ ಕೊಟ್ರೇಶ ಎಲ್ಲಿಗೋದ್ರು ಜಗತ್ತಪ್ಪಾ, ಕಡಿ ಆತು ಅನ್ನಂಗಿಲ್ಲ ಊರುಗಳು. ನನ್ನ ಕೈಲೀ ಆಗಾದಿಲ್ಲಪಾ ಬರೋದು. ನೀನೊಬ್ಬನ ಬೇಕಾದ್ರೆ ಎಲ್ಲಿಗಾರ ಹೋಗು, ನಾನಿಲ್ಲೇ ಇರ್ತಿನಿ’ ನಾಯಕನಟ್ಟಿಯಾಗ ತಿಪ್ಪೇಸ್ವಾಮಿ ನಿಂತ್ಗಂಡ. ಕೊಟ್ರೇಶ ಒಬ್ಬನಾದ. ಮುಂಗೈಯಾಗ ಜೋಳಿಗಿ ಅಕ್ಕಂಡ. ಕೈಯ್ಯಾಗ ಒಂದು ಬೆತ್ತ ಇಡ್ಕಂಡ. ಎಲ್ಲಿಗೆ ನಾನೇ ಹೋಗಾಲಯ್ಯೋ | ಆ ಶಿವನನಯನ ದೇವೈ | ಶಾಪುರಕ್ಕೆ ಬಂದ. ಶಾಪುರದೊಳಗೆ ನೋಡ್ರಿ ಮಹಾತುಮ ಕೊಟ್ರೇಶ ಕಂತಿಭಿಕ್ಷಾ ಮಾಡುತಾನೇ | ಸೋಕೀರ ಮೂವ ತಾಜೀಜಿ | ಶಾಪುರದಾಗ ಭಿಕ್ಷಾ ಮಾಡಕರಗ ಅಲ್ಲಿ ರೈತ್ರು ಕೋಟೆ ಮಾಡ್ತಾರೆ. ‘ಏನಯ್ಯ ನೀನು ಯಾರು?’ ‘ನಾನೊಬ್ಬ ಗುರುವಪ್ಪ’ ‘ಆ ಬಲು ದೊಡ್ಡ ಗುರು ಬಿಡಾ, ಇಂಗಾಗಿಯಲೇ ಎಲ್ಲರೂ ಗುರುವಾಗಿ ಹೊಂಟಿರೋದು. ನಾನು ಗುರು, ನೀನು ಗುರು, ಏನಯ್ಯ ದುಡ್ಕಂಡ ತಿನ್ಬೇಕಯ್ಯ ಇಂಥ ವೇಷಧಾರಿ ಆಗ್ಬಾರ್ದು’. ‘ಇಲ್ಲಪ ಆಗನ್ಬೇಡ್ರೀ ನಾನು ಗುರುವು, ಆ ಒಳ್ಳೇ ಗುರುವು’ ಬಿಡಲೇ, ಅಲ್ಲೆಲ್ಲೇ, ಗುರುವಾದ್ರೆ ಚೌರ ಮಾಡಿಸ್ಕೆಳ, ಆ ಬಟ್ಟಿ ಒಕ್ಕಳ, ಮೈತೊಕ್ಕಳ’ ಆ ಕೋಟಾ ಮಾಡೋ ರೈತ್ರು ಮಾತಾಡಕರಗ ಕೊಟ್ರೇಶ ಹೇಳ್ತಾನ. ‘ನೋಡ್ರಪ ನಾನು ಎಂಗಾರ ಇರ್ಲಿ. ನೀವ್ ನನ್ನ ಪರೀಕ್ಷೆ ಮಾಡಂಗಿದ್ರೆ ನಾನ್ ನಿಮಗೆ ಕುರುವು ತೋರ್ಸಿತ್ನಿ, ಆ ಕುರುವು ನೋಡ್ರಯ್ಯ’ ‘ಅಯ್ಯೋ ತೊರ್ಸಯ್ಯ ಕುರುವ, ಅಲ್ಲೆಲೆ ಕುರುವಂದ್ರೆ ನೀನ್ ಬಲ್ಲೇ, ನಿಮ್ಮಪ್ಪ ಬಲ್ಲೆ, ಕುರುವು ಎಂಗ ತೋರ್ಸತಿ ಕುರುವು ಎಂಗ ತೋರ್ಸತಿ’ ‘ಎಂಗಿಲ್ಲಾ ನಾಲ್ಕು ದಿಕ್ಕಿಗೆ ನಾಲ್ಕು ಕಲ್ಲು ಹುಗೀರಿ. ನಾಲ್ಕು ದಿಕ್ಕಿಗೆ ಹುಗುದು ಆದ್ರಗ ಕುಂದ್ರಿಸಿ ಬಿಡ್ರಿ ಮ್ಯಾಲೊಂದು ಕಲ್ಲು ಮುಚ್ಚ್ಯಾಕಿ ಬಿಡ್ರಿ. ದಪ್ಪಾಕಿ ಬಿಡ್ರಿ ನಾನ್ ಕುರುವು ತೋರ್ಸತೀನಿ’. ‘ಅಯ್ಯೋ ಕೇಳ್ರಾ, ಅವ್ನ ಮಾತ್ನ, ಆ ಕಲ್ಲಾಕಿಕ್ಕಿ ಕಲ್ಲು ಮ್ಯಾಕ ಏರ್ರಿ ನಾನ್ ಸತ್ತೋಗ್ತಿನಿ ನಿಮ್ಮೂರಿಗೆ ಪಿಡುಗು ಬರ್ತತೆ ಅಂತ ಹೇಳ್ತಾನೆ, ಏ ಹೋಗ ಹೋಗಯ್ಯ’ ‘ಇಲ್ಲಪ ನಾನ್ ಸಾಯಲ್ಲಯ್ಯ. ನನ್ನ ಕುರುವು ಪರೀಕ್ಷೆ ಮಾಡ್ರಿ’ ಹಠಿ ಮಾಡ್ಬಿಟ್ಟ. ‘ಲೇ ಇವ್ನ್ಯಾಕ ಬಲು ಹಠಿ ಮಾಡ್ತಾನೆ. ನಮ್ಮೂರಿಗೆ ಇವ್ನೊಬ್ಬ ಈಡಲ್ಲ.[9] ತಗಂಬರ್ರೆಲೆ ಕಲ್ಲಾ’ ನಾಲ್ಕು ಕಲ್ಲು ಹುಗದಾರು. ‘ಆ ಬಾರೋ ಕೂತ್ಕ ಮತ್ತ’ ನೋಡ್ರೀ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಂತಾನು. ಮ್ಯಾಲೆ ಕಲ್ಲು ಮುಚ್ಚ್ಯಾರು. ಅವರವರ ಮನಿಗೆ ಹೋಗಿ ಮಲಿಗಿ ಬಿಟ್ಟಾರು ಶಾಪುರ್ದ ರೈತ್ರು. ಮಲಗಿದಾಗ ಆ ಸಮಯದೊಳಗೆ ನೋಡ್ರಿ ಕೊಟ್ರೇಶ ಹಂಪಿಲಿಂದ ಸಾಸಿರ ಕೋಟಿ ಸ್ವಾಲ್ಡರು[10] ಕರ್ಸಕೆಂಡರು. ಸ್ವಾಲ್ಡರು ಮಠಮಾನ್ಯ ಕಟ್ಟೋರು ‘ಶರಣ್ರು ಕಟ್ಟಿದ ಮಠ ಸ್ವಾಲ್ಡ್ರು ಕಟ್ಟಿದ ಮಠ’ ಅಂತ ಹೇಳ್ತಾರಲ್ರೀ ಅಂತ ಸ್ವಾಲ್ಡರನ ಕರ್ಯಾಕ ಕಳ್ಸಿಕೆಂಡು ಶಾಪೂರದೊಳಗೆ ಕೊಟ್ರೇಶ ರುದ್ರಾಕ್ಷಿ ತೊಲಿ ಕಂಭದ ಮಠ. ಗುರುವೇ ತಾನೆ ಕಟ್ಟಸ್ತಾನೇ | ಸೋಕೀರ ಮೂವ ತಾಜೀಜಿ | ಮಠ ಮುಗ್ಸಿ ಮ್ಯಾಲೆ ಕಳ್ಸ ಇಟ್ಟಂತ್ರೀ. ಮುಂಗೋಳಿ ಕೂಗ್ತಂತೆ. ಆಗ ಸ್ವಾಲ್ಡರು ‘ಗುರುಗಳೇ ಗುರುಗಳೇ ಮುಂಗೋಳಿ ಕೂಗ್ತು, ಮಠ ಮುಗೀತು. ಕಳ್ಸ ಇಟ್ಟೀವಿ. ನರಮಾನವರು ನಮ್ಮನ್ನ ನೋಡ್ತಾರೆ. ಹೋಗ್ತಿವಿ ನಾವ್ ಹಂಪಿ ಸೇರ್ಕಂತೀವಿ’ ಅಂದ್ರಂತೆ. ‘ಆಯ್ತು ಹಂಪಿ ಸೇರ್ಕ ಹೋಗ್ರಪ ಚೆನ್ನಾಗಿ ಬಾಳ್ರಪ’ ಅಂತ ಅವ್ರುಗೆ ಆಶೀರ್ವಾದ ಕೊಟ್ಟು ಕೊಟ್ರೇಶ ಅವರ್ನ ಕಳ್ಸಿ ಕೊಟ್ನಂತೆ. ಸ್ವಾಲುಡ್ರು ಬಂದು ಹಂಪಿ ಸೇರ್ಕೆಂಡ್ರಂತೆ. ದೇವತಾ ರುದ್ರಾಕ್ಷಿ ತೋಲಿ ಕಂಭದ ಮಠದಾಗೇ ಗುರುವೇ ತಾನೇ ಕುಂತಾನಯ್ಯೋ | ಆ ಶಿವನನಯನ ದೇವೈ | ದೇವತಾ ಮಠದಾಗ ಕುಂತಾನು. ಶಾಪುರ್ದ ರೈತ್ರು ‘ಲೇ ತಮ್ಮ, ಮುಂಜಾನೆ ಗದ್ದಿಗಿ ಕದ ತಗಿಬ್ಯಾಡ್ರಲೇ ಅವ್ನು ಸತ್ತ ಬಿಟ್ಟಿರ್ತಾನ. ನಮ್ಮೇಲೆ ಬರ್ತತಲೇ’ ಆಗ ಸೂರ್ಯ ಪ್ರಕಾಶಿಸಿದ, ಮ್ಯಾಲಿಕೆ ಬಂದ. ಆಗ ಒಬ್ಬೊಬ್ರೇ ವಾರಿಗೆ ಬಂದು ನೋಡ್ತಾರೆ. ದೇವತಾಮಠ ‘ಅಲೇಲೇ ದೇವಾ ಮಠ ಆಗೈತಿ ಬರ್ರೋ ಬರ್ರೋ’ ಶಾಪುರ್ದ ರೈತ್ರು ಬಂದ್ ನೋಡ್ತಾರಿ. ರುದ್ರಾಕ್ಷಿ ತೊಲಿ ಕಂಭದ ಮಠ, ಅದರಾಗ ಕುಂತುಬಿಟ್ಟಾನು. ಆಗ ಅಡ್ಡಲಿಂಗ್ದೋರು, ದೊಡ್ಡ ಲಿಂಗ್ದೋರು ಕುಲದಿನೆಂಟು ಜಾತೆಲ್ಲ ಗುರುವಿನ ಪಾದ್ಕ ಬಿದ್ದು ಬಿದ್ದು ಬೇಡ್ಕೆಂತಾರು[11] ‘ಗುರುಗಳೇ ನಿನ್ನ ಮಹಿಮೆ ಗೊತ್ತಾಯ್ತು ದೊಡ್ಡ ಮಾಹಾತುಮುರು, ನಾನ್ ಅಂದಿದ್ದು ತಪ್ಪಾಯ್ತ್ರಿ ಕ್ಷಮಿಸಬೇಕ್ರೀ’ ಬೇಡ್ಕೆಂತಾರು. ‘ಮಕ್ಳ ನೀವೇ ಕೋಟ ಮಾಡಿದ್ದು ನನಿಗೆ ಪಾಡಾತಪ,[12] ಮಠ ಆತು.’ ‘ಆಗ್ಲಿ ಗುರುಗಳೇ ಅದ್ರೆ ನಿಮ್ದು ಗೊತ್ತಿಲ್ಲ, ನಿಮ್ಮ ಹೆಸರೇನು?‘ ಅಂತ ಕೇಳಿದ್ರಂತ್ರೀ. ನೋಡಪಾ ನನ್ನ ಹೆಸ್ರು ಕೊಟ್ರೇಶ. ಇಲ್ಲೇ ನಾನೇ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ | ‘ಆಗ್ಲಿ ಗುರುಗಳೇ’ ಅಂದಾಗ. ಆತನ ಹೆಸ್ರೇಳಿದಾಗ ಆ ಊರು ಹೆಸ್ರು ಹೋಗಿಬಿಡ್ತು. ಆತನೆಸ್ರು ಊರಿಗೆ ಬಿತ್ತು. ಈಗ ಕೊಟ್ರೂರಂತೀರಲ್ರೀ ಅದು ಮೊದಲಿಗೆ ಶಾಪುರ. ಈತನಸ್ರು ಊರಿಗೆ ಬಿದ್ದಾಗ ಈಗ ಕೊಟ್ಟೂರು ಕೊಟ್ಟೂರು ಅಂಬಾತಾರೇ | ಸೋಕೀರ ಮೂವ ತಾಜೀಜಿ | ಐದು ಮಂದಿ ಆಗಲೀಂದ್ರಂತ್ರೀ. ಕಲಿ ಒಳಗ ಐದು ಸಿಂಹಾಸನವಾದ್ವಂತೆ. ಐದಾದ್ವಂತೆ ಪೀಠಗಳು ಕಲಿ ಒಳಗ. ಆಗ ಅವರವ್ರ ಸ್ಥಳ ಸೇರ್ಕೊಂಡಾಗ ಕನಕಮ್ಮ ಅಷ್ಟೊತ್ತಿಗೆ ಮಗಳೇ ಗರ್ಭಿಣಿ ಆಗಾತಾಳೇ | ಆ ಶಿವನನಯನ ದೇವೈ | ಕನಕಮ್ಮನಿಗೆ ದಿವ್ಸ ಬೆಳೀತಾವು. ಗರ್ಭಿಣಿ ಆಗುತಾಳು. ನಿತ್ಯ ನಿರ್ಮಿತಿಗಾಲ ಕನಕಮ್ಮ ಮದ್ದಾನಸ್ವಾಮಿ ಪೂಜೆ ಮಾಡ್ತಾಳು. ಪಾದಪೂಜೆ ಮಾಡ್ತಾಳು. ಬಿದ್ದು ಬಿದ್ದು ಬೇಡ್ಕೆಂತಾಳು. ಗರ್ಭಿಣಿ ಆಗ್ತಾಳು. ಹರಹರ ಭಗವಂತಾ | ತಾನಿ ತಂದನಿ ನಾನೋ | ದಿನಗಳ ತುಂಬಿ ಜನಕರಾಗ[13] ಪ್ರಾರಂಭಾತಲ್ರೀ ಕನಕಮ್ಮ ಅಂತಾಳೇ ‘ಅಯ್ಯೋ ಶಿವನಯ್ಯ ಸಕಲ ಸಂಪತ್ತು ನಿನಿಗಿರ್ಲಯ್ಯ, ಸಿಂಹಾಸನ ನಿನಿಗಿರ್ಲಯ್ಯ, ಆದ್ರೆ ನಾನು ಗರ್ಭಿಣಿ ಆದಾಕಿ ಅಲ್ಲ, ಎಂದೂ ಹಡದೋಳು ಅಲ್ಲ. ಹಡಿಯೋದು ಗುರುತಿಲ್ಲೋ | ಸೋಕೀರ ಮೂವ ತಾಜೀಜಿ | ಕನಕಮ್ಮ ದುಃಖದಲ್ಲಿ ಮುಳುಗಿ ಈಜಾಡ್ತಾಳು. ಆ ತಮ್ಮ ಶಿವನಪ್ಪನ ಧ್ಯಾನ ಮಾಡ್ತಾಳು. ಆತ ಕುಳಹಳ್ಳ್ಯಾಗ ಕೋರಿ ಈರಯ್ಯ ನೋಡ್ರೀ. ಈತನೂ ಬಡವ ರೀ ಆತ ಸೂಲಗಿತ್ತಿಯರ್ನ ಕರತಂದು ಬಿಡ್ತಾನು, ಕನಕಮ್ಮನ ಗುಡಸ್ಲೀಗೆ ಜನಕರಾಗ ಹಾಡ್ತಾಳ್ರೀ ಕೂಲಹಳ್ಯಾಗ. ಹಿಂದೆ ಕಲ್ಯಾಣದೊಳಗೆ ಸಕ್ರೀ ಚೀಲ್ದಾಗ ಹುಟ್ಟಿದ ಗೋಣಿಬಸವ ಈಗ ನರಕಲಿಯೊಳಗೆ ಕನಕವ್ವನ ಹೊಟ್ಟ್ಯಾಗ ಹುಟ್ತಾನ್ರೀ. ಒಂದು ತಾಸು, ಎರಡು ತಾಸು, ಮೂರು ತಾಸಿನೊಳಗೆ ಕನಕಮ್ಮ. ಗಂಡುಮಗನ ಹಡದಾಳಯ್ಯೋ | ಸೋಕೀರ ಮೂವ ತಾಜೀಜಿ | ಆಗ ಕನಕವ್ವ ಮೂರ್ಛಿ ಬಿದ್ದಾಗ ಸೂಲಗಿತ್ತಿಯರು ಮಗನ ಹುರಿ[14] ಕೊಯ್ದು. ಆ ಕೂಸು ತಗೊಂಡು ನೋಡ್ತಾರೀ. ಕಳ, ಕಾಂತಿ, ರೂಪ ಲಾವಣ್ಯ ವರ್ಣಿಸ್ತಾರೆ. ‘ಅಹಾ ಇದೆಂತ ಕೂಸಮ್ಮ, ಈತನ ಬಣ್ಣ ಈಬತ್ತಿಬಣ್ಣ ಐತೆ, ಉತ್ತುತ್ತಿ ಶರೀರ, ತೆಲಿಯಾಗ ಕಿರುಜಡಿ ಐತಿ. ಇವುನು ನರಮನುಷ್ಯನಲ್ಲವೊ’ ಏಳೆ ಏಳೆ ಕನಕವ್ವೋ | ಸೋಕೀರ ಮೂವ ತಾಜೀಜಿ | ಆಗ ಕನಕಮ್ಮ ಮೂರ್ಛೆ ತಿಳ್ದಾಗ ಮೆಲ್ಲಮೆಲ್ಲನೆ ಮ್ಯಾಲಕೆದ್ದಾಳು. ಮಗನಿಗೆ ನೋಡ್ಯಾಳು. ಮಗನಿಗೆ ಮುಖ ನೋಡಿ ಏನಂತಾಳೆ. ಹುಟ್ಟೀದೇನೋ ಪರದೇಶೀ | ಆ ಶಿವನನಯನ ದೇವೈ | ಕನಕಮ್ಮ ಆನಂದ ಪಡ್ತಾ, ಕಣ್ಣೀರಾಕ್ತ, ಮ್ಯಾಲಕೆದ್ದು ಕೂತು ಮಗನಿಗೆ ನೋಡ್ತಾಳು. ಆನಂದ ಪಟ್ಟು ‘ಶಿವನಯ್ಯ ನಿನಗೆ ಅಳಿಯ ಹುಟ್ಟಿದ ನನಗೆ ಇದೇ ಬಡ್ತಾನ ಇರ್ಲಿ. ನಿನಗೆ ಸಿಂಹಾಸನ ಇರ್ಲಿ. ಯಾವ ಕಾಲಕ್ಕಾದ್ರು ಕೂಡ. ರಾಜಾಪಟ್ಟ[15] ನನ್ನದೈಯ್ಯೋ | ಸೋಕೀರ ಮೂವ ತಾಜೀಜಿ | ಕನಕಮ್ಮ ಆಲೋಚ್ನಿ ಮಾಡಿ ಮನಸ್ಸಿನ ಚಿಂತಿ ಬಿಟ್ಟಿ, ಮಗನ ತಡ ಮಾಡ್ದಂಗೆ ಅಭ್ಯಂಜನ ಸ್ನಾನ ಮಾಡ್ಸ್ಯಾರು. ಮೈ ತೊಳದಾರು. ತಾಯಿ ಸ್ನಾನ ಮಾಡ್ರ್ಯಾರು. ಮಗುವನ್ನು ತಗೊಂಡು ಕುಚ್ಚ್ಯಾಕ[16] ಹಾಕ್ಯಾರು. ಕಲ್ಯಾಣದಲ್ಲಿ ಸಕ್ರಿ ಚೀಲ್ದಾಗೆ, ಗೋಣಿ ಚೀಲ್ದಾಗೆ, ಹುಟ್ಟಿದ ನರಕಲಿಯೊಳಗೆ ಕನಕಮ್ಮನ ಹೊಟ್ಟ್ಯಾಗ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ | ಗೋಣಿ ಬಸವೇಶ್ವರ ನರಕಲಿಯೊಳಗೆ ಬ್ಯಾಡ್ರು ಹೊಟ್ಟ್ಯಾಗ ಹುಟ್ಟಿದ, ಅದು ಕೂಲಳ್ಳ್ಯಾಗ. ಇಲ್ಲಿಗೆ ಗೋಣಿ ಬಸವೇಶ್ವರ ಎರೆಡು ವಿಧದಾಗ ಹುಟ್ಟಿದ. ಎರೆಡು ವಿಧದಾಗ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ | ಇಲ್ಲಿಗೆ ಎರಡು ತಲಿ ಆತ್ರಿ, ಇಲ್ಲಿಗೆ ಎರಡು ಯುಗದಾಗ ಹುಟ್ಟಿದ ನರಕಲಿಯೊಳಗೆ ಕನಕವ್ವನ ಹೊಟ್ಟ್ಯಾಗ ಹುಟ್ಟಿದ. ಕನಕವ್ವ ಮಗನಿಗೆ ಜ್ವಾಪಾನ ಮಾಡ್ತಾಳ್ರೀ. ಕೂಲಳ್ಳ್ಯಾಗ. ಆ ಜ್ವಾಪಾನ ಮಾಡಕರಗ ‘ಹರಿ’ ಮತ್ತು ‘ಹರ’ ಎಂಬ ಎರಡೇ ಅಕ್ಷರ ಇದ್ವಂತ್ರೀ ನರಕಲಿಯೊಳಗ, ‘ಶಿವ’ ಎಂಬ ಶಬ್ದ ಇದ್ದಿಲ್ಲಂತ್ರೀ. ಗೋಣಿ ಬಸವೇಶ್ವರ ಹುಟ್ಟಿದಾಗ ‘ಶಿವ’ ಎಂಬ ಶಬ್ದ ಬಂತ್ರಂತ್ರೀ ಕಲಿಗೆ. ಗೋಣೀಬಸವಣ್ಣಾ ಬಂದಾ ಸಿದ್ದರ ಕೂಡಾ ಆಡೀ ಗೋಣೀಬಸವಣ್ಣಾ ಬಂದಾ ಸೋಮುವಾರ ಗೋಣೀಬಸವಾ ಗೋಣೀಬಸವಣ್ಣಾ ಬಂದಾ ಚಿಗಟೇರಿ ಶಿವನಯ್ಯ ನಿನ್ನ ಗೋಣೀಬಸವಣ್ಣಾ ಬಂದಾ ಅಳಿಲುಗೊಂಗಡಿ[19] ಗದ್ದಿಗಿ ಮಾಡೀ ಗೋಣೀಬಸವಣ್ಣಾ ಬಂದಾ ಆ ಗೋಣಿ ಬಸವ ಹುಟ್ಟಿದಾಗ ‘ಶಿವ’ ಎಂಬ ಶಬುದ ಬಂತಂತ್ರೀ. ಆವಾಗ ಮೂರು ಹೆಸರಾದ್ವಂತೆ. ಹರ, ಹರಿ ಮತ್ತು ಶಿವ, ನರಕಲಿಯೊಳಗೆ ಕನಕಮ್ಮ ಮಗನಿಗೆ ಜ್ವಾಪಾನ ಮಾಡ್ತಾಳ್ರೀ. ಕೂಲಳ್ಳಿಯೊಳಗೆ, ಶಿವನಯ್ಯ ಸೋದರಮಾವ ಹರಪನಹಳ್ಳಿಯೊಳಗ ಸಿಂಹಾಸನ ಆಳ್ತಾನ್ರೀ. [1] ಕುಂದು – ಕುಹಕ [2] ವರವು – ಬೇಡಿದ್ದನ್ನು ಕೊಡುವುದು. ಕುರುವು = ಆಧಾರ ಸಮೇತ ನಿರೂಪಿಸುವುದು [3] ಆತೊಬ್ಬಾತ = ಆತನೊಬ್ಬನೆ [4] ಇಂದ್ರತಾವೇ – ವೀರ್ಯ, ಇಂದ್ರಿಯದಿಂದ ಸುರಿದ ದ್ರವ [5] ಉಗ್ಗು – ಎರಚು [6] ಬ್ಯಾಡರಾಕಿ = ಬೇಡರ ಹೆಣ್ಣು [7] ಉಗುದ್ಲು – ನೆಟ್ಟಳು [8] ನೆಳ್ಳು = ನೆರಳು [9] ಈಡಲ್ಲ – ಹೆಚ್ಚಲ್ಲ [10] ಸ್ವಾಲ್ಡರು – ರುದ್ರಾಕ್ಷಿ ಕಂಬದ ಮಠ ಕಟ್ಟುವ ವಡ್ಡರು [11] ಬೇಡ್ಕೆಂತಾರು – ಬೇಡಿಕೊಳ್ಳುತ್ತಾರೆ [12] ಪಾಡು – ಒಳ್ಳೆಯದು ಆಯಿತು, ಬದುಕು ಆಯಿತು [13] ಜನಕರಾಗ – ಹುಟ್ಟಿನ ಹಾಡು [14] ಹುರಿ – ಒಕ್ಕಳು ಬಳ್ಳಿ [15] ರಾಜಪಟ್ಟ – ಹಿಂದೆ ಕನಕಮ್ಮ ಶಿವನಯ್ಯ ಹೊರಗೆ ಅಟ್ಟುವಾಗ ‘ಬೋಕಿಪಟ್ಟ’ ನನ್ನದು ಕರೆದುಕೊಂಡಿದ್ದಳು. ಈಗ ಮಗ ಹುಟ್ಟಿದ ತಕ್ಷಣ ನನ್ನದು ‘ರಾಜಪಟ್ಟ’ ಎಂದು ಕರೆದುಕೊಳ್ಳುತ್ತಾಳೆ. [16] ಕುಚ್ಚ್ಯಾಕ – ಹರಕುಬಟ್ಟೆಯ ಕೌದಿ [17] ನೂರಿನಾವು – ನೂಲಿನ ಹಾವು [18] ಮಿಣಿ – ಹಗ್ಗ [19] ಅಳಿಲುಗೊಂಗಡಿ – ಕಂಬಳಿ, ಅಳಿಲಿನ ಮೈಮೇಲೆ ಇರುವ ಕಪ್ಪುಬಿಳಿ ಪಟ್ಟೆಯಂತೆ ಎರಡು ಬಣ್ಣದಲ್ಲಿ ನೇಯ್ದ ಕಂಬಳಿ
ನನಿಗೆ ಬಂಜೀ ಅನ್ನಾತಾರೋ | ಆ ಶಿವನ ನಯನ ದೇವೈ |
ನನ್ನಿಗೆ ಲೋಭಿ ಅನ್ನಾತಾರೋ | ಆ ಶಿವನ ನಯನ ದೇವೈ |
ನಿನ್ನಾ ತಾಯಿಯೇ ಬರ್ತಾಳಯ್ಯೋ | ಆ ಶಿವನ ನಯನ ದೇವೈ |
ಐದೇ ಮಂದಿಯ ಶರಣರಯ್ಯೋ | ಆ ಶಿವನ ನಯನ ದೇವೈ |
ಇಂದ್ರತಾವೇ ಸುರದಾವಯ್ಯೋ | ಸೋಕೀರ ಮೂವ ತಾಜೀಜಿ |
ಬರೇ ದೃಷ್ಟ್ಯೋ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಮದ್ದಾನಸ್ವಾಮಿಗೆ ಸುರದಾವೈಯ್ಯೋ | ಸೋಕೀರ ಮೂವ ತಾಜೀಜಿ |
ಮಾಯವಾಗಿ ಹೋಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಕನಕಮ್ಮನ ಹೊಟ್ಟ್ಯಾಗ ಸೇರ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಮಗಳ ಹೊಟ್ಟಾಗ ಸೇರ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಬಿದ್ದೇ ಬಿದ್ದೇ ಬೇಡುತಾಳೇ | ಆ ಶಿವನನಯನ ದೇವೈ |
ನಾಲ್ಕು ಮಂದಿ ಶರಣಾರಯ್ಯೋ | ಸೋಕೀರ ಮೂವ ತಾಜೀಜಿ |
ಮಗಳಿಗೆ ತಾವೇ ಹೇಳುತಾರೇ | ಸೋಕೀರ ಮೂವ ತಾಜೀಜಿ |
ನಿನಿಗೆ ಆರ್ತಿ ಬೆಳಗಾಲಯ್ಯೋ | ಸೋಕೀರ ಮೂವ ತಾಜೀಜಿ |
ಮದ್ದಾನಸ್ವಾಮಿ ಹೇಳುತಾರೇ | ಸೋಕೀರ ಮೂವ ತಾಜೀಜಿ |
ಇಲ್ಲಿಗೆ ಧನ್ಯಳಾದೇನಯ್ಯೋ | ಆ ಶಿವನನಯನ ದೇವೈ |
ಬಂಜೆಂಬ ಸೊಲ್ಲು ತಪ್ಪುತ್ತಯ್ಯೊ | ಆ ಶಿವನನಯನ ದೇವೈ |
ದಯಾ ಮಾಡೋ ನನ್ನ ಗುರುವೇ | ಆ ಶಿವನನಯನ ದೇವೈ |
ಮಹಾತುಮ್ಮನ್ನ ತಗೊಂಡೇ ಹೋಗುತಾಳೇ | ಆ ಶಿವನನಯನ ದೇವೈ |
ಕೂಲಹಳ್ಳಿಗೆ ಹೋಗಾತಾಳೇ | ಆ ಶಿವನನಯನ ದೇವೈ |
ಅವರೆ ನಾಲ್ಕು ಮಂದಿ ಅಗಲಾತಾರೇ | ಸೋಕೀರ ಮೂವ ತಾಜೀಜಿ |
ಅವರು ಮೂರು ಮಂದಿ ಆಗರಯ್ಯೊ | ನೋಡಾರ |
ಅವರೇ ನಾಲ್ಕು ಮಂದಿ ಅಗಲುತಾರೇ | ಸೋಕೀರ ಮೂವ ತಾಜೀಜಿ |
ಯಾವ ಊರಿಗೆ ಹೋಗಾಲಯ್ಯೋ | ಆ ಶಿವನನಯನ ದೇವೈ |
ಮುಂದೆ ಎಲ್ಲಿಗೆ ಬಂದಾನಯ್ಯೋ | ಆ ಶಿವನನಯನ ದೇವೈ |
ಶಾಪುರಕೆ ಬಂದಾನಯ್ಯೋ | ಆ ಶಿವನನಯನ ದೇವೈ |
ಶಾಪುರೋ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಗುರುವೇ ಭಿಕ್ಷಾ ಮಾಡುತಾನೇ | ಸೋಕೀರ ಮೂವ ತಾಜೀಜಿ |
ದೇವತಾ ಮಠ ಕಟ್ಟ್ಯಾರಯ್ಯೋ | ಸೋಕೀರ ಮೂವ ತಾಜೀಜಿ |
ಮ್ಯಾಲೆ ಕಳಸ ಇಟ್ಟಾರಯ್ಯೋ | ಸೋಕೀರ ಮೂವ ತಾಜೀಜಿ |
ದೇವತಾ ಮಠವೇ ನನ್ನ ದೈವೇ | ಆ ಶಿವನನಯನ ದೇವೈ |
ಗುರುವೇ ಮಠದಾಗೆ ಕುಂತಾನಯ್ಯೋ | ಆ ಶಿವನನಯನ ದೇವೈ |
ಕೊಟ್ರೇಶ ಅಂಬುತಾರೇ | ಸೋಕೀರ ಮೂವ ತಾಜೀಜಿ |
ಐದು ಮಂದಿ ಶರಣಾರಯ್ಯೋ | ಸೋಕೀರ ಮೂವ ತಾಜೀಜಿ |
ಒಂದಾ ದಿನ ಎಂಬೋದಯ್ಯೋ | ಆ ಶಿವನನಯನ ದೇವೈ |
ಒಂದು ತಿಂಗಳ ತುಂಬ್ಯಾವಯ್ಯೋ | ಆ ಶಿವನನಯನ ದೇವೈ |
ಎರಡಾ ದಿನ ಅಂಬೋದಯ್ಯೋ | ಆ ಶಿವನನಯನ ದೇವೈ |
ಎರೆಡೇ ತಿಂಗಳು ತುಂಬ್ಯಾವಯ್ಯೋ | ಆ ಶಿವನನಯನ ದೇವೈ |
ಮೂರು ದಿನ ಎಂಬೋದೇ | ತಾನಿ ತಂದನಿ ನಾನೋ |
ಮೂರು ತಿಂಗಳಾಗ್ಯಾವೇ | ತಾನಿ ತಂದನಿ ನಾನೋ |
ಮೂರು ಆರು ಒಂಬತ್ತೋ | ತಾನಿ ತಂದನಿ ನಾನೋ |
ದಿನಗಳಾ ತುಂಬ್ಯಾವೇ | ತಾನಿ ತಂದನಿ ನಾನೋ |
ಸೂಲಗಿತ್ತಿಯರು ನನಗಿಲ್ಲೋ | ಸೋಕೀರ ಮೂವ ತಾಜೀಜಿ |
ಹಿಂದೇ ಇಲ್ಲೋ ಮುಂದೇ ಇಲ್ಲೋ | ಸೋಕೀರ ಮೂವ ತಾಜೀಜಿ |
ಗುರುವೇ ಕಲಿಯಾಗ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಕಲಿಯಾಗ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಎಂಥಾ ಮಗನೇ ಹಡದಿಯವ್ವೋ | ಸೋಕೀರ ಮೂವ ತಾಜೀಜಿ |
ಗುರುವೇ ಹೊಟ್ಟ್ಯಗ ಹುಟ್ಟಾನವ್ವೋ | ಸೋಕೀರ ಮೂವ ತಾಜೀಜಿ |
ಕಲಿಯ ಪುರುಷ ಹುಟ್ಟಾನವ್ವೋ | ಸೋಕೀರ ಮೂವ ತಾಜೀಜಿ |
ಬಂಜೆಂಬ ಸೊಲ್ಲ ತಪ್ಪಿದವಲ್ಲೋ | ಆ ಶಿವನನಯನ ದೇವೈ |
ದೇವರೆ ಫಲವ ಕೊಟ್ಟಾನಲ್ಲೋ | ಆ ಶಿವನನಯನ ದೇವೈ |
ನಿನ್ನ ಅಳಿಯ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಬ್ಯಾಡ್ರು ಹೊಟ್ಟ್ಯಾಗ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಎರೆಡು ತಲಿಯೋ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಶಿವಾ ಎಂಬ ಶಬ್ದವ ತಂದಾ
ಕನಕವ್ವನ ಹೊಟ್ಯಾಗ ಹುಟ್ಟೀ
ಕಾವಿಯ ಬಟ್ಟಿ ಧರಿಸೀಕೆಂಡಾ
ಮದ್ದನಸ್ವಾಮಿ ಮಠದಾ ಮುಂದೇ
ಉಪ್ಪರಿಗೀ ಬಲೂ ಚೆಂದಾ
ಗಾಡಿಕಾರ ಗೋಣೀ ಬಸವಾ
ಮೋಡಿಕಾರ ಗೋಣೀ ಬಸವಾ
ಆ ಸಿದ್ದರ ಕೂಡಾ ಆಡಿ
ಸಿದ್ದ ವಿದ್ದ್ಯೆ ಕಲತಾನಲ್ಲಾ.
ಶಿವಾ ಎಂಬ ಶಬ್ದವ ತಂದಾ
ಹುಲಿಯ ಬೇಸಾಯ ಹೊಡೆದ
ನೂಲಿನಾವು[17] ಮಿಣಿಯಾ[18] ಮಾಡಿ
ನಾಗರಾವು ಬಾರ್ ಕೋಲು ಮಾಡಿ
ಶಿವಾ ಎಂಬ ಶಬ್ದವ ತಂದಾ
ಪರೀಪರೀ ಕಾಡಿದನಲ್ಲಾ
ಕಲ್ಲು ಗಾಣಕಾಕಿದನಲ್ಲಾ
ಮುಳ್ಳುಗಾಣಕಾಕಿನದಲ್ಲಾ
ಎದ್ದು ಎದ್ದು ಬಂದೂ ಶರಣಾ
ಶಿವಾ ಎಂಬ ಶಬ್ದವ ತಂದಾ
ದಾಟ್ಯಾನು ಹಮ್ಮಿಗಿ ಹೊಳೆಯಾ
ಗುಮ್ಮಗೋಳಕ ಹೋಗ್ಯಾನಲ್ಲಾ
ಶಿಲಾಮೂರ್ತಿಯಾಗಾನಲ್ಲಿ
ಶಿವಾ ಎಂಬ ಶಬ್ದವ ತಂದಾ
Leave A Comment