(ಇಂದ್ರತಾವೇ ಸುರಿದಾವಯ್ಯೋ ಎನ್ನುವ ಭಾಗದಲ್ಲೇ ಒಂದು ವಿಘಟನೆ ಇದೆ. ಜಂಗಮರ ಮದ್ದಾನೇಶ ಬೇಡರ ಕನಕಮ್ಮ ಒಂದಾಗಿ ಮದ್ದಾನೇಶ ಲಿಂಗಾಯತರಿಂದ, ಕನಕಮ್ಮ ಸ್ವತಃ ತಮ್ಮನಿಂದ ಪ್ರತ್ಯೇಕಗೊಳ್ಳುತ್ತಾರೆ. ಮಗ ಹುಟ್ಟಿದ ತಕ್ಷಣ ತಾಯಿ ಕನಕಮ್ಮ ತನ್ನ ತಮ್ಮನಿಗೆ ಸವಲಾಕುವುದು ಮುಂದೆ ನನ್ನ ಮಗನನ್ನು ರಾಜನಾಗಿ ಮಾಡುತ್ತೇನೆ ಎಂದು. ಮಗ ದೊಡ್ಡವನಾಗುತ್ತಾನೆ ಅವನಿಗೆ ಹೆಣ್ಣನ್ನು ಲಿಂಗಾಯತರು ಕೊಡುವುದಿಲ್ಲ. ಆದ್ದರಿಂದ ಅವನು ಬೇರೆ ದಾರಿ ಹುಡುಕಬೇಕಾಗುತ್ತದೆ. ಇದುವರೆಗೂ ಲಿಂಗಾಯತರ, ಬೇಡರ, ಮಾದರ ಕತೆಯಾಗಿದ್ದ ಇದು ಇಲ್ಲಿ ಇನ್ನೊಂದು ಪ್ರಬಲ ಜಾತಿಯಾದ ಕುರುಬರನ್ನು ಒಳಗೊಳ್ಳುತ್ತದೆ. ಕುರುಬರ ವಡ್ಡಟವ್ವ ಗೋಣಿ ಬಸಪ್ಪನನ್ನು ಮದುವೆಯಾಗುತ್ತಾಳೆ. ಮದ್ದಾನೇಶನ ಕೂಡುವಿಕೆಯ ಹಾಗೆ ಇದು ಸಹ ಯಾವುದೇ ಆಡಂಬರವಿಲ್ಲದೇ ಸಿಂಪಲ್ ಮ್ಯಾರೇಜ. ಹೂವು, ಬಳೆ, ಕುಂಕುಮದಲ್ಲೇ ಮುಗಿದು ಹೋಗುತ್ತದೆ. ಈ ಮಠಕ್ಕೆ ತಂದೆ ಜಂಗಮ, ತಾಯಿ ಬೇಡರವಳು, ಹೆಂಡತಿ ಕುರುಬರಾಕೆ. ಈ ತರದ ಒಂದು ಜಾತಿ ಸಂಕರ ನಡೆದಿದೆ ಎನ್ನುವುದಕ್ಕೆ ಕೆಲವು ಕುಲಮೂಲ ಆಧಾರಗಳು ಇವೆ. ಕೂಲಹಳ್ಳಿಯ ಮದ್ದಾನೇಶ ಮಠದ ಸ್ವಾಮಿಗಳು ಗೋಣಿ ಬಸವನ ವಂಶಸ್ಥರೆಂದು ಅವರಿಗೆ ಲಿಂಗಾಯತರು ನಡೆದುಕೊಂಡರೂ ಕುಲದ ಹೆಣ್ಣಗಳನ್ನು ಮಾತ್ರ ಕೊಡುವುದಿಲ್ಲ, ಇವರು ಬೇಡರ ಹೆಣ್ಣನ್ನು ತಂದು ಲಿಂಗಾಯತೀಕರಿಸಿಕೊಂಡು ಮದುವೆಯಾಗುತ್ತಾರೆ. ಮೇಲುನೋಟಕ್ಕೆ ಪ್ರೇಮವಿವಾಹದಂತೆ ಕಂಡರೂ ಆಳದಲ್ಲಿ ಈ ತರದ ಕುಲವಿಘಟನೆಗೆ ಮುಖ್ಯ ಕಾರಣ ದೇವದಾಸಿ ಪದ್ದತಿ. ಇದರ ಸಮಸ್ಯೆಯನ್ನು ಅನುಭವಿಸುವವರು ಲಿಂಗಾಯತರ ಮದ್ದಾನೇಶವಲ್ಲ ಕನಕಮ್ಮ ಮತ್ತು ಗೋಣಿಬಸವ. ಇದರ ವಿಶೇಷತೆ ಇರುವುದು ಗೋಣಿ ಬಸಪ್ಪ ಮತ್ತೇ ಲಿಂಗಾಯತ ರಾಜಕಾರಣವನ್ನು ಗೆದ್ದು ದೈವವಾಗುವಲ್ಲಿ. ದೇವದಾಸಿ ಮಗನೊಬ್ಬನ ತಲ್ಲಣಗಳ ಕತೆ ಇದು. ಆದರೆ ವಾಸ್ತವವಾಗಿ ಗೋಣಿ ಬಸಪ್ಪನ ತಂದೆಗೆ ಆಸ್ತಿ, ಮಠ ಇಷ್ಟೆಲ್ಲಾ ಇದ್ದರೂ ಅಲ್ಲಿಂದ ಗಡಿಪಾರಾಗಿ ಗುಮ್ಮಗೋಳದಲ್ಲಿ ಸಮಾಧಿಯಾಗಬೇಕಾಗುತ್ತದೆ. ಅಲ್ಲ ಗೋಣಿ ಬಸವನ ಪಾತ್ರ ಮಾತಾಡದೇ ಶಿಲಾಮೂರ್ತಿಯಾಗುವಲ್ಲಿ ನೋವಿನ ಚಿತ್ರಣ ಮಡುಗಟ್ಟುತ್ತದೆ. ಆದ್ದರಿಂದ ಕಲಾವಿದ ಗುಮ್ಮಗೋಳವನ್ನು ಚಾರಿತ್ರಿಕ ಊರು ಎಂದು ಪರಿಗಣಿಸುವುದೇ ಇಲ್ಲ. ಇದೇ ಸಮಸ್ಯೆಯನ್ನು ಅನುಭವಿಸುತ್ತಿರುವ ಬಾಲಬಸಪ್ಪಗಳಿಗೆ ಇದನ್ನು ಕಥನವಾಗಿ ಹಾಡುವಲ್ಲಿ ಆಸಕ್ತಿ).
ಆತ ಯೋಚ್ನಿ ಮಡಕರಗ ಗೋಣಿ ಬಸವೇಶ್ವರ ಬೆಟ್ಟಕ ಹೊಂಟ, ಬೆಟ್ಟದ ಮಲ್ಲೇಶ್ವರನ ದರ್ಶನ ತಗಂಡ ಬರಾಕೆ. ‘ಹಡೆದ ತಾಯಿ ಕನಕಮ್ಮ, ಬೆಟ್ಟಕ್ಕೆ ಹೋಗಿ ಬರ್ತೀನಮ್ಮ’ ಅಂತ ಹೇಳಿ ಬೆಟ್ಟಕ ಹೋಗಿ ಮಲ್ಲೇಶ್ವರನ ದರ್ಶನ ತಗೊಂಡು ತಿರುಗಿ ಬರ್ತಾನ್ರೀ. ತಿರುಗಿ ಬರತ್ಕೆ ಏನಾತ್ರೀ ಕೂಲಳ್ಯಾಗ ಕೆರಿ ಕೋಡ್ಯಾಗ ಜಿಡ್ಡುನಕಟ್ಟಿ ಕುರುಬರು ಕುರಿ ಹಿಂಡು ತರ್ಬ್ಯಾಕ ಅವರಮ್ಯಾಲ ಬಿದ್ದಾವಯ್ಯೋ | ಸೋಕೀರ ಮೂವ ತಾಜೀಜಿ | ಬಿಚ್ಚಿದ ಕಣ್ಣು, ಮೂಗದಬಾಯಿ ಅಂಗಾ ನಿಂತಾರ್ರೀ. ಏಳು ವರ್ಷದ ಮಗ್ಳು ವಡ್ಡಟ್ಟಮ್ಮ ತೆಲಿಮ್ಯಾಲೆ ಪುಟ್ಟಿ ಹೊತ್ಕಂಡು ಹಂಗೇ ನಿಂತಾಳು. ಗೋಣಿ ಬಸವೇಶ್ವರ ಹಂಗೇ ನಿಂತಾನೆ. ಹಡೆದ ತಾಯಿ ಕನಕಮ್ಮ ‘ನನ್ನ ಮಗ ಬೆಟ್ಟಕ ಹೋದ ಇನ್ನ ಬರ್ಲಿಲ್ಲ ಹೊತ್ತಾಯ್ತು’. ಅಂತ ಮಠ ಬಿಟ್ಟು ಹೊರಗ ಬಂದು ನಿಂತು ನೋಡ್ತಾಳ್ರೀ ಬೆಟ್ಟದಕಡಿಗ ಮಗ ಹಟ್ಟಿಮುಂದೆ ನಿಂತಾನು. ‘ಆ ಇದೇನಪ್ಪಾ ನನ್ನ ಮಗ ಎಷ್ಟೊತ್ತು ನಿಂತ್ಕಂಡಿಲ್ಲಾ ಹಟ್ಟಿ ಮುಂದೆ ಇನ್ನೂ ಬರ್ಲಿಲ್ಲಾ ‘ಗಾಬ್ರಿಯಾತ್ರೀ ತಾಯಿಗೆ, ಹಡ್ದಹೊಟ್ಟಿ, ಓಡಿ ಓಡಿ ಬರ್ತಾಳೆ, ನೋಡ್ತಾಳೆ. ಹಂಗಾ ನಿಂತಾನೆ, ಈಯಮ್ಮ ಮಾತಾಡ್ಸಂಗಿಲ್ಲ ಅವ್ರು ಮಾತಾಡಂಗಿಲ್ಲ. ಇಬ್ರೂ ಅಂಗೇ ನಿಂತಾರೆ. ಆಗ ಅಕ್ಕಿ, ಹೂವು, ಬಳಿ, ಮೂಗ್ತಿ, ತಾಳಿ ಅವ್ರು ಮ್ಯಾಲೆ ಬಿದ್ದಿದ್ವಲ್ಲಾ ಅವನ್ನ ನೋಡಿದ್ಲು. ‘ಇದೇನಪ ಇವೆಲ್ಲ ಯಾಕೆ ಬಿದ್ದಿದ್ದಾವು. ಇದು ನನಗೆ ತಿಳಿಯದಿಲ್ಲ. ಗೊತ್ತಾಗದಿಲ್ಲಂದು’ ಊರಾಕ ಓಡಿಬಂದಾಳು. ಊರಾಕ ಬಂದು ದೊಡ್ಡರೈತ್ರುನ್ನ ಕರ್ಕಂಡು, ಯಜಮಾನ್ರುನ್ನ ಕರ್ಕಂಡು ಹೋಗ್ತಾಳೆ, ಯಜಮಾನ್ರು ಪರೀಕ್ಷೆ ಮಾಡ್ತಾರೆ. ಅವ್ರು ಹೇಳ್ತಾರೆ. ‘ಆ ಕನಕಮ್ಮ ಈ ಅಕ್ಕಿ, ಹೂವು ಬಳಿ, ಮೂಗುತಿ, ತಾಳಿ ಇವ್ರು ಮ್ಯಾಲೆ ಬಿದ್ದಾವಂದಮ್ಯಾಗ ಈಯಮ್ಮನೆ ಹೆಂಡತಿ. ಅಯಪ್ಪನೇ ಗಂಡ, ಇವ್ರು ಇಬ್ರೂ ಗಂಡಹೆಂಡ್ತಿ ಆಗಿದ್ರಿಂದ ಮ್ಯಾಲೆ ಬಿದ್ದಾವಮ್ಮಾ. ಅಂದ್ರೆ ಕುಲಗೋತ್ರ ಇಲ್ಲ. ಕುರುಬರ ಮಗಳ ವಡ್ಡೆಟವ್ವಗ, ಬ್ಯಾಡ್ರು ಮಗ ಗೋಣಿಬಸವೇಶ್ವರಗೆ ಕೂಲಹಳ್ಳ್ಯಾಗ ಮದವಿ ಮಾಡ್ರೀ’ ಅಂದ್ರಂತೆ. ಅವರೆ ಮದುವಿಯ ಮಾಡ್ಯಾರೇ | ನೋಡವ್ವ ಅವರು ಶಂಕರೀ ಶಿವರಾಣೆ ಮಾದೇವೂ | ಗೋಣಿಬಸವೇಶ್ವರಗ ಲಗ್ನಾತಂತ್ರೀ. ಆ ಕುರುಬರ ಮಗ್ಳು ವಡ್ಡಟ್ಟವ್ವ, ಬ್ಯಾಡ್ರು ಮಗ ಗೋಣಿಬಸವೇಶ್ವರ, ಲಗ್ನವಾದ್ನಂತ, ಆದ್ರಿಂದ ಕೂಲಳ್ಳಿ ಮಠಕ್ಕೆ ಹೆಂಡ್ತಿ ಕುರುಬರಾಕಿ ತಾಯಿ ಬೇಡರಾರೆ. ತಂದಿ ಜಂಗಮ್ರುನು. ಕೂಲಹಳ್ಳಿ ಮಠಕ ಮೂರುಕುಲ ಸೇರ್ಯಾವಯ್ಯ | ಸೋಕೀರ ಮೂವ ತಾಜೀಜಿ | ಲಗ್ನ ಮುಗೀತ್ರಿ ಲಗ್ನ ಮುಗ್ದ ಬಳಿಕ ಮೂರು ತಿಂಗಾಳಿಗೆ ಗದ್ದಿಗಿ ಆಳ್ತಾನೆ. ಹಡೆದ ತಾಯಿ ಕನಕವ್ವ ಮಗನಿಗೆ ನೋಡಿ ಪಕ ಪಕ ನಗುತಾಳಯ್ಯೋ | ಆ ಶಿವನನಯನ ದೇವೈ | ತಾಯಿ ಕನಕಮ್ಮ ಗಂಡನ ಪಾದಾ ಕಾಣಾತಾಳೇ | ಆ ಶಿವನನಯನ ದೇವೈ | ವಡ್ಡಟ್ಟವ್ವ ಹೆಂಡ್ತಿ ಆನಂದಪಡ್ತಾಳೆ. ಪೂಜಾರಿ ಕಲ್ಲಪ ಗುರುವಿಗೆ ಪೂಜಿ ಮಾಡೂತಾನೇ | ಆ ಶಿವನನಯನ ದೇವೈ | ಇದ್ರಂತೆ ಕೂಲಳ್ಳಿ ಮಠದಾಗೆ ಗೋಣಿಬಸವೇಶ್ವರ ಗುರುವೇ ಮಠ ಆಳುತಾನೇ | ಸೋಕೀರ ಮೂವ ತಾಜೀಜಿ | ಗದ್ದಿಗಿ ಆಳ್ತಾನ್ರಿ. ಸೊಕ್ಕಿನ ಶಿವನಯ್ಯ ಸೋದರಮಾವ ಆಲೋಚ್ನಿ ಮಾಡ್ತಾನು. ‘ಆ ಗಾಣಿಗ್ರ, ನಮ್ಮೂರೊಳಗೆ ಅಂತ್ರ ಮಂತ್ರದವರು ಯಾರಿಲ್ಲೇನಯ್ಯ’ ‘ಆದಾರ ಬುದ್ದಿ’ ‘ಯಾರು’ ‘ಕಾಳಿಕೊಂಡಯ್ಯ ಸ್ವಲ್ಪ ಅಂತ್ರ ತಂತ್ರ ಮಾಡ್ತಾನ್ರೀ’. ‘ಆ ಕರಕಂಡ ಬರೀ ಸಿಂಹಾಸನಕ್ಕೆ’ ನೋಡ್ರಿ, ಅಧಿಕಾರ, ಮೊದಲೇ ಸೊಕ್ಕಿನ ಶಿವನಯ್ಯ. ಗಾಣಿಗ್ರು ಕಾಳಿ ಕೊಂಡಯ್ಯನ ಮನಿಗ ಹೋಗ್ಯಾರು. ‘ಆ ಕಾಳಿಕೊಂಡಯ್ಯ ರಾಜರ ಅಪ್ಪಣಿ ಆಗೈತೇ ಸ್ವಲ್ಪ ಸಿಂಹಾಸನಕ್ಕೆ ಬಾರಯ್ಯ’ ‘ಆ ಬರ್ತೀನ್ರೀ’. ನೋಡ್ರೀ ಚಲುವಾದಿ ಕಾಳಿಕೊಂಡ ಸಿಂಹಾಸನಕ್ಕೆ ಬರ್ತಾನು. ಶಿವನಪ್ಪ ಕೇಳ್ತಾನು. ಏಲೈಕೊಂಡ, ನಿನಗೇನೇನು ವಿದ್ಯಾ ಬರ್ತದೆ ಅದರ ಮಹಿಮೆ ತೋರ್ಸಯ್ಯ ನೋಡ್ತೀನಿ ಎದ್ರು ಬ್ಯಾಡ’ ಕಾಳಿಕೊಂಡಯ್ಯ ರಾಜನೆದ್ರುಗ ತೋರ್ಸತಾನ್ರೀ, ಅಂತ್ರ ಮಂತ್ರ, ಏನೇನು ತೋರ್ಸತಾನೆ. ಹರಹರ ಭಗವಂತಾ | ತಾನಿ ತಂದನಿ ನಾನೋ | ಇಂಥ ವಿದ್ಯೆಯನ್ನೆಲ್ಲಾ ಕಾಳಿಕೊಂಡ ತೋರುತ್ತಿದ್ದಾ | ಸೋಕೀರ ಮೂವ ತಾಜೀಜಿ | ‘ಆ ಕಾಳಿಕೊಂಡಯ್ಯ ಒಂದು ಲಕ್ಷವಲ್ಲ, ಎರೆಡು ಲಕ್ಷವಲ್ಲ, ಮೂರು ಲಕ್ಷವಲ್ಲ, ಒಂಬತ್ತು ಲಕ್ಷ ಕೊಡ್ತೀನಯ್ಯ ಅವನ ಕೈಕಾಲು ಸುಟ್ಟೊಗಂತದೇ’ ನನಿಗೆ ಮಾಟ ಮಾಡಿಕೊಡೋ | ಸೋಕೀರ ಮೂವ ತಾಜೀಜಿ | ‘ಏ ತಗೋ ಒಂಬತ್ತು ಲಕ್ಷ ಕೊಡ್ತೀನಿ. ಕೈಕಾಲು ಸುಟ್ಟೋಗಂತ ಮಾಟ ಮಾಡಿ ಕೊಡಯ್ಯ’ ‘ರಾಜಾಧಿರಾಜ ಒಂಬತ್ತು ಲಕ್ಷವಲ್ಲ ಹತ್ತು ಲಕ್ಷವಾಗ್ಲಿ ಹಣಕಾ ಆಸಿಬಿದ್ದು ಮಾಟ ಮಾಡಾದಿಲ್ಲ. ಅವ್ನು ಯಾರು? ಅವ್ನ ಹೆಸರೇನು? ಹೇಳಿದ್ರೆ. ನಾನು ಮಾಟ ಮಾಡುತೀನೇ | ಸೋಕೀರ ಮೂವ ತಾಜೀಜಿ | ಆ ಅವ್ನೆಸರು ಏನು ಹೇಳ್ರಿ ಮಾಡಿಬಿಡ್ತೀನಿ’ ‘ಹೇಳ್ತಿನಿ ಕೇಳಯ್ಯ, ಕೂಲಳ್ಯಾಗ ಕನಕವ್ವನ ಮಗ ಗೋಣಿಬಸವೇಶ್ವರಗೆ’ ಅಂದ ತಕ್ಷಣ ನೋಡ್ರೀ ಕಾಳಿಕೊಂಡಯ್ಯನ ಹೊಟ್ಟಿ ಒಳಗೆ ಅಗ್ನಿ ಬಿತ್ತು. ‘ರಾಜಾಧಿರಾಜ, ಮನಿ ಸ್ವಾಮಿ ಗೋಣಿಬಸವೇಶ್ವರ. ಮನಿ ಗುರುವಯ್ಯಾ. ಹೇಳದು ಆತನ ಹೆಸ್ರು, ಕರಕಟ್ಟ ಕಣ್ಣಿ[2] ಹತ್ತ್ಸದು ಆತನ ದೀಪ. ನನ್ನ ಮನಿಸ್ವಾಮಿಗೆ ನಾನು ಮಾಟ ಮಾಡೋದಿಲ್ಲೋ | ಸೋಕೀರ ಮೂವ ತಾಜೀಜಿ | ರಾಜಾಧಿರಾಜ ನಾನು ಗುರುವಿಗೆ ಮಾಡ ಮಾಡಾದಿಲ್ರೀ’ ಅಂದ ತಕ್ಷಣಕ ನೋಡ್ರೀ ಸೊಕ್ಕಿನ ಶಿವನಯ್ಯ ಹೇಳ್ತಾನೆ. ‘ಗಾಣಿಗ್ರಾ, ಅಗಸರ ಮನಿಗೆ ಹೋಗಿ ಒಂದು ಕತ್ತಿ ಇಡ್ಕಂಡ್ ಬರ್ರೆಯ್ಯ. ಇವ್ನ ಕೊಳ್ಳಾಕ ಉಳಗಡ್ಡಿಸರ, ಈರಿಕಾಯಿ ಸರ, ಮೆಣಸಿನಕಾಯಿ ಸರ ಮಾಡ್ಯಾಕಿ ಕತ್ತಿ ಮ್ಯಾಗ ಕುಂದ್ರಿಸಿ. ನಮ್ಮ ಹರಪನಹಳ್ಳಾಗೆ ಹನ್ನೆಲ್ಡು ಉಕ್ಕುಡದಾಗ,[3] ಹನ್ನೆಲ್ಡು ಬಜಾರದಾಗೆ ಮೆರ್ಸಿಕೆಂಡು ಬಂದು ಇವ್ನ ಊರುಬಿಟ್ಟು ಚಂಡ[4] ಹಿಡ್ದು ದೂಡಿಬಿಡ್ರಾ’ ರಾಜನ ಅಪ್ಪಣೆ ಆತಂತ್ರೀ. ಆಗ ಕಾಳಿ ಕೊಂಡಯ್ಯ ಹೆದ್ರಿದ, ಮಾನಕ್ಕೆ. ‘ರಾಜಾಧಿರಾಜ ಕತ್ತಿ ಹತ್ಸಬ್ಯಾಡ, ನನ್ನ ಮರ್ಯಾದಿ ಕಳೀಬ್ಯಾಡ. ಗೋಣಿಬಸವೇಶ್ವರಗ ನಾನು ಮಾಟ ಮಾಡುತೀನೇ | ಸೋಕೀರ ಮೂವ ತಾಜೀಜಿ | ‘ಬ್ಯಾಡಬುದ್ದಿ ಬ್ಯಾಡಬುದ್ದಿ ಮಾಡ್ತೀನ್ರೀ’ ಎಂದು ಮರ್ಯಾದಿಗೆ ಹೆದರಿ ಒಪ್ಪಿಕೊಂಡಬಿಟ್ಟ. ಆ ತಗೊಳಯ್ಯ ಒಂಬತ್ತು ಲಕ್ಷ’ ಚಲುವಾದಿ ಕಾಳಿಕೊಂಡನ ಮುಂದೆ ಒಂಬತ್ತು ಲಕ್ಷ ಹಣ ಸುರುವಿಬಟ್ಟಾನು. ಚಲುವಾದಿ ಒಂಬತ್ತು ಲಕ್ಷ ತಗಂಡ ತನ್ನ ಮನೆಗೆ ಬಂದ. ಆತಗ ಬೇಕಾದಷ್ಟು ಹಣ ಮಾತ್ರ ತಗಂಡು ಪ್ಯಾಟ್ಯಾಕ ಹೋದ.
ಇಬ್ರೂ ಹಂಗೇ ನಿಂತಾರಯ್ಯೋ | ಸೋಕೀರ ಮೂವ ತಾಜೀಜಿ |
ಗುರುವಿಗೆ ಲಗ್ನಾ ಮಾಡ್ಯಾರೋ | ನೋಡವ್ವ ಅವರು ಶಂಕರೀ ಶಿವರಾಣೆ ಮಾದೇವೂ |
ಮೂರಕುಲ ಸೇರ್ಯಾವಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೆ ಮದ್ವಿ ಆಗ್ಯಾವಯ್ಯೋ | ಸೋಕೀರ ಮೂವ ತಾಜೀಜಿ |
ಅವರೆ ಲಗ್ನ ಆಗ್ಯಾರಯ್ಯೋ | ಸೋಕೀರ ಮೂವ ತಾಜೀಜಿ |
ಗುರುವಿಗೆ ಪಟ್ಟಾ ಕಟ್ಟುತಾರೇ | ಆ ಶಿವನನಯನ ದೇವೈ |
ಮಠಕೆ ಅಧಿಕಾರಿ ಮಾಡಾತಾರೇ | ಆ ಶಿವನನಯನ ದೇವೈ |
ಗುರುವೇ ಗದ್ದಿಗಿ ಆಳಾತಾನೇ | ಆ ಶಿವನನಯನ ದೇವೈ |
ಕಿವಿ ಕಿವಿ ನಗುತಾಳಯ್ಯೋ | ಆ ಶಿವನನಯನ ದೇವೈ |
ಮಗುನಿಗೆ ಸಂತೋಷ ಪಟ್ಟಾಳಯ್ಯೋ | ಆ ಶಿವನನಯನ ದೇವೈ |
ಗುರುವಿನ ಕಂಡು ಧನ್ಯಾಳಾದೇ | ಆ ಶಿವನನಯನ ದೇವೈ |
ಆತನ ಸೇವಾ ಮಾಡೂತಾನೇ | ಆ ಶಿವನನಯನ ದೇವೈ |
ಗುರುವೇ ಗದ್ದಿಗಿ ಆಳುತಾನೇ | ಸೋಕೀರ ಮೂವ ತಾಜೀಜಿ |
ಮರಕ್ಕೆ ಕಾಯ ಕಟ್ಟಿದರ | ತಾನಿ ತಂದನಿ ನಾನೋ |
ಮರ ಉರಿದವಂತಾ | ತಾನಿ ತಂದನಿ ನಾನೋ |
ಸಕ್ಕರಿಯ ನೋಡು ಗುರುವೇ | ತಾನಿ ತಂದನಿ ನಾನೋ |
ಕಬ್ಬೂ ಮಾಡುವ ಗುರುವೇ | ತಾನಿ ತಂದನಿ ನಾನೋ |
ಕಳ್ಳಿಯ ನೋಡ ಗುರುವೇ | ತಾನಿ ತಂದನಿ ನಾನೋ |
ಹಾಲು ಮಾಡುವನಂತೇ | ತಾನಿ ತಂದನಿ ನಾನೋ |
ಕಲ್ಲು ನೋಡು ಗುರುವೇ | ತಾನಿ ತಂದನಿ ನಾನೋ |
ಸಕ್ರಿಯ ಮಾಡುವನಂತೆ | ತಾನಿ ತಂದನಿ ನಾನೋ |
ಸುಣ್ಣಾ ನೋಡು ಗುರುವೇ | ತಾನಿ ತಂದನಿ ನಾನೋ |
ಬೆಣ್ಣಿ ಮಾಡುವನಂತೇ | ತಾನಿ ತಂದನಿ ನಾನೋ |
ಸಗಣಿಯ ನೋಡು ಗುರುವೇ | ತಾನಿ ತಂದನಿ ನಾನೋ |
ಬೆಲ್ಲ ಮಾಡುವನಂತೇ | ತಾನಿ ತಂದನಿ ನಾನೋ |
ಶಿವನಯ್ಯ ನೋಡುತಾನೇ | ಸೋಕೀರ ಮೂವ ತಾಜೀಜಿ |
ಒಂಬತ್ತು ಲಕ್ಷ ಕೊಡ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ಇಲ್ಲದಿದ್ರೇ ಮಾಡೋದಿಲ್ಲೋ | ಸೋಕೀರ ಮೂವ ತಾಜೀಜಿ |
ನಾನು ಮಾಟ ಮಾಡೋದಿಲ್ಲೋ | ಸೋಕೀರ ಮೂವ ತಾಜೀಜಿ |
ಮನಿಸ್ವಾಮಿ ಇದ್ದಾರಯ್ಯೋ | ಸೋಕೀರ ಮೂವ ತಾಜೀಜಿ |
ನಾನು ಮಾಟ ಮಾಡಾದಿಲ್ಲೋ | ಸೋಕೀರ ಮೂವ ತಾಜೀಜಿ |
ನನ್ನ ಕತ್ತಿ ಹತ್ತ್ಸಬ್ಯಾಡೋ | ಸೋಕೀರ ಮೂವ ತಾಜೀಜಿ |
ನನ್ನ ಮಾನ ಕಳೀಬ್ಯಾಡೋ | ಸೋಕೀರ ಮೂವ ತಾಜೀಜಿ |
Leave A Comment