(ಹುಲಿ ಮೇಲೆ ಬರುವುದು ಅವಮಾನಿತರ ಪ್ರತಿಭಟನಾ ರೂಪಕ. ಕೂಲಹಳ್ಳಿಯ ಮೇಟಿ ಬಣಕಾರನ ಮನೆಯಲ್ಲಿ ಜೀತಕ್ಕೆ ಸೇರಿಕೊಂಡು ಅವನ ಹೊಲದ ಬೇಸಾಯ ಮಾಡಲು ಹೋಗಿ, ಹಾವುಗಳನ್ನೇ ಹಾಸಿಗೆ ಹೊದಿಕೆ ಮಾಡಿಕೊಂಡು ಮಲಗಿರುತ್ತಾನೆ. ಇದು ಅವನ ಮೊದಲ ಪವಾಡ. ಇದರಿಂದ ಬಣಕಾರ ಭಕ್ತನಾಗುತ್ತಾನೆ. ಎರಡನೇ ಪವಾಡ ಬಾಗಳಿ ಭೂಪನನ್ನು ಗೆಲ್ಲುವುದು. ಬಾಗಳಿ ರಾಜನಿಗೆ ಜಂಗಮರು ‘ಗೋಣಿ ಬಸಪ್ಪ ಜಾತಿಯಿಂದ ಬೇಡರವನು ಆದರೆ ನಮ್ಮಂತೆ ಜಂಗಮರ ವೇಷ ಹಾಕಿ ಭಿಕ್ಷೆ ಮಾಡುತ್ತಾನೆ ಕರೆದು ವಿಚಾರಿಸಿ’ ಎಂದು ದೂರ ಕೊಡುತ್ತಾರೆ. ಆಗ ಗೋಣಿ ಬಸಪ್ಪ ಇದಕ್ಕೆ ಉತ್ತರ ಹೇಳಲು ಒಂದು ದಿನದ ಅವಕಾಶ ಪಡೆದು ಹುಲಿಯ ಮೇಲೆ ಅರಮನೆ ಪ್ರವೇಶ ಮಾಡುವ ಮೂಲಕ ಪವಾಡ ಮೆರೆದು ಎರಡು ರಾಜಕೀಯ ಶಕ್ತಿಗಳನ್ನು ಸುಮ್ಮನಾಗಿಸುತ್ತಾನೆ. ಆದರೆ ಕೂಲಹಳ್ಳಿಯ ಲಿಂಗಾಯತ ಸಮುದಾಯ ಇವನ ನಾಯಕತ್ವವನ್ನು ಸುಲಭವಾಗಿ ಒಪ್ಪುವುದಿಲ್ಲ. ಇದರಿಂದ ಬೇಸತ್ತ ಗೋಣಿ ಬಸಪ್ಪ ತನ್ನ ಪೂರ್ವಜ ಕೊಟ್ಟೂರೇಶನ ಮೂಲಕ ಕಮ್ಯೂನಿಟಿಯ ಪೊಲಿಟಿಕಲ್ ಸಪೋರ್ಟ್ಗೆ ಕೊಟ್ಟೂರಿಗೆ ಹೋಗುತ್ತಾನೆ. ಪ್ರತಿ ದಿನ ಅವನಿಗೆ ಕಾಣದ ಹಾಗೆ ಅವನ ಚಾಕರಿಯನ್ನೇ ಮೂರು ತಿಂಗಳು ಮಾಡಿ ‘ನಿನ್ನ ಜನ ನನಗೆ ಸಪೋರ್ಟ್ ಮಾಡುತ್ತಿಲ್ಲ ನೀನೆ ಬಂದು ಕೊಟ್ಟೂರಿನಲ್ಲಿ ಇದ್ದುಬಿಡು’ ಎನ್ನುತ್ತಾನೆ. ಇವನೂ ಚಾಣಾಕ್ಷ ಒಂದು ಶರತ್ ಹಾಕುತ್ತಾನೆ. ಕೊಟ್ಟೂರಿನಿಂದ ಕೂಲಹಳ್ಳಿಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಎಲ್ಲೂ ಹಿಂತಿರುಗಿ ನನ್ನನ್ನು ನೋಡಕೂಡದು, ‘ಆಯ್ತು’ ಎಂದಾ ಕೂಲಹಳ್ಳಿಯ ತನಕ ಹಿಂತಿರುಗಿ ನೋಡದೆ ಬಂದಾ. ಊರ ಬಾಗಿಲಿಗೆ ಬಂದಾಗ ಡೌಟ್ ಬಂತು. ಈ ಲಿಂಗಾಯತನನ್ನು ನಂಬುವುದಾದರು ಹೇಗೆ? ಹಿಂತಿರುಗಿ ನೋಡಿದ ಕೊಟ್ಟೂರಪ್ಪ ಅಲ್ಲೇ ಸೆಟ್ಲಾದ. ಆದರೂ ಕೊಟ್ಟೂರೇಶನ ಬೆಂಬಲವಿದೆ ಎಂದು ಲಿಂಗಾಯತರ ಸುಮ್ಮನಾದರು. ಕುಲಗೆಟ್ಟ ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬರಬೇಕಾದರೆ ಎಷ್ಟೆಲ್ಲಾ ತಂತ್ರಗಳನ್ನು ಬಳಸಬೇಕು ಎಂಬುದರ ರಾಜಕೀಯ ಚಿತ್ರಣವನ್ನು ಕಲಾವಿದ ಇಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಈ ಕಾಲದ ಪವರ್ ಪಾಲಿಟಿಕ್ಸ್ನ ಆ ಕಾಲದ ಕತೆಯಲ್ಲಿ ಇಟ್ಟು ಹೇಳುತ್ತಿದ್ದಾನೆ. ಒಟ್ಟು ಕತೆಯಲ್ಲಿ ಮೂರು ಕಮ್ಯೂನಿಟಿ ಸೆನ್ಸ್ಗಳು ರೋಲ್ ಮಾಡುತ್ತಿವೆ. ಒಂದು ಪ್ರಭಾವಿ ಲಿಂಗಾಯತರ ಸಮುದಾಯ. ಇದರ ಕೆಳಗೆ ಬೇಡರು ಇದ್ದಾರೆ. ಅದರಾಚೆಗೆ ಮಾದಿಗ ಸಮುದಾಯ ಇದೆ. ಇವರೆಲ್ಲರು ದೇವದಾಸಿ ಪದ್ದತಿಯ ಒಳಗಿದ್ದಾರೆ. ಫ್ಯೂಡಲ್ ಕಮ್ಯುನಿಟಿ ದೇವದಾಸ ಪದ್ದತಿಯನ್ನು ತನ್ನ ಸುಖ ಭೋಗಕ್ಕೆ ಬಳಸುತ್ತಿದೆ. ಅದರಲ್ಲೂ ಲಿಂಗಾಯತರು ಬೇಡರ ದೇವದಾಸಿ ಹೆಣ್ಣು ಮಕ್ಕಳನ್ನು ಪ್ರತಿಷ್ಠೆಯ ಸಂಕೇತವಾಗಿ ಇಟ್ಟುಕೊಳ್ಳುತ್ತಾರೆ. ಈ ಕತೆಯ ನಾಯಕ ಲಿಂಗಾಯತ ತಂದೆಗೆ ಬೇಡರ ಹೆಣ್ಣು ಮಗಳ ಹೊಟ್ಟೆಯಲ್ಲಿ ಹುಟ್ಟಿದವನು. ಇವನ ಕತೆಯನ್ನು ಹಾಡುವ ವಾರಸುದಾರರು ಮಾದಿಗ ಸಮುದಾಯದ ಬಾಲ ಬಸಪ್ಪಗಳು ಅವರಿಗೆ ಹುಟ್ಟುವ ಹೆಣ್ಣಗಳೆಲ್ಲಾ ಈಗಲೂ ಗಂಡು ಸಿಗದೆ ಬಾಲಬಸವಿ ಎನ್ನುವ ಹೆಸರಿನಲ್ಲಿ ದೇವದಾಸಿಯರಾಗುತ್ತಾರೆ. ಮೇಲ್ ಸ್ತರದಲ್ಲಿ ಇದು ಧಾರ್ಮಿಕ ಆಚರಣೆಯೆಂದು ಒಪ್ಪಿಕೊಂಡರೂ ಆಳದಲ್ಲಿ ಅದರ ನೋವಿದೆ. ಆ ತರದ ನೋವಿನ ಪ್ರತಿನಿಧಿಯಾಗಿ ಗೋಣಿ ಬಸಪ್ಪನ ಪಾತ್ರವಿದೆ. ಅವನು ಈ ಮೂರು ಸಮುದಾಯಗಳ ಎಲ್ಲ ರಾಜಕೀಯವನ್ನು ಅಥ್ ಮಾಡಿಕೊಂಡು ಇವರಿಗೆಲ್ಲ ದೈವವಾಗಬೇಕಾಗಿದೆ. ಆದ್ದರಿಂದ ಕಾವ್ಯ ಇಲ್ಲಿ ಬಹುದೊಡ್ಡ ರಾಜಕೀಯ ದರ್ಶನವನ್ನು ಮೂಡಿಸುತ್ತದೆ.
ಇಲ್ಲಿಗೆ ಗೋಣಿ ಬಸಪ್ಪನಿಗೆ ಒಂದು ಅಧಿಕಾರ ಸಿಕ್ಕಿತು. ಎಲ್ಲ ಕಡೆಯಿಂದ ಟ್ಯಾಕ್ಸ ಕಮಿಷನ್ಗಳು ಬರುವುದಕ್ಕೆ ಪ್ರಾರಂಭವಾಗಿ ಆದಾಯ ಹೆಚ್ಚಾಯಿತು. ಇದು ಹಣದ ರೂಪದಲ್ಲಿ ಇರುವುದಿಲ್ಲ ವಸ್ತುಗಳ ರೂಪದಲ್ಲಿ ಇರುತ್ತದೆ ಇದಕ್ಕೆ ಅವರು ಹಾಲುಮಾಲು ಎನ್ನುತ್ತಾರೆ. ಆಧುನಿಕ ಕಾಲದಲ್ಲಿ ಒಬ್ಬ ಎಂ.ಎಲ್.ಎ ಆಗುವುದಕ್ಕೆ ಎಷ್ಟಲ್ಲಾ ಕಷ್ಟ ಪಡುತ್ತಾನೆ. ಆ ಸ್ಥಾನಕ್ಕೆ ಹೋದ ನಂತರ ಅವನ ಅಧಿಕಾರ ಇರುವ ತನಕ ಅವನು ಹಣ ಮಾಡುವುದರಲ್ಲೇ ಅಸಕ್ತನಾಗಿರುತ್ತಾನೆ. ಸುಮ್ಮನೆ ಇದ್ದರು ಅವನ ಅಕೌಂಟ್ ಯಾವ ಯಾವ ರೂಪದಲ್ಲಿ ತುಂಬುತ್ತಿರುತ್ತದೆ. ಎನ್ನುವ ರಾಜಕೀಯ ವಿದ್ಯಮಾನಗಳನ್ನು ಬಲ್ಲ ಕಲಾವಿದ ಗೋಣಿ ಬಸಪ್ಪನ ಕತೆಯನ್ನು ಈ ಕಾಲದ ರಾಜಕೀಯದೊಟ್ಟಿಗೆ ಚಿತ್ರಿಸುವ ಪ್ರಯತ್ನ ಮಾಡುತ್ತಾನೆ. ಅಧಿಕಾರಕ್ಕೆ ಶಕ್ತಿ ಇದೆ ಎನ್ನುವುದನ್ನು ರೂಪಕದ ಭಾಷೆಯಲ್ಲಿ ಹೇಳುತ್ತಿರುತ್ತಾನೆ. ಇಲ್ಲಿ ಅವನು ತನ್ನ ನಾಯಕನ್ನು ಅಚಾರಿತ್ರಗೊಳಿಸಲು ಹಿಂಜರಿಯುವುದಿಲ್ಲ. ಆದ್ದರಿಂದ ಹಾಲು ಮಾಲು ಬಂದವಯ್ಯೋ ಎನ್ನುವಲ್ಲಿ ಮಠವೊಂದಕ್ಕೆ ಸೇರುವ ವಸ್ತುಗಳ ಅದರ ದೇಸಿಯತೆಯನ್ನು ಸೂಚಿಸಿದರೆ, ಅದರ ರಾಜಕಾರಣವನ್ನು ಅಷ್ಟೇ ಸಮರ್ಥವಾಗಿ ಸೂಚಿಸುತ್ತಿವೆ. ಇಲ್ಲಿಗೆ ಗೋಣಿ ಬಸಪ್ಪನಿಗೆ ಒಂದು ಅಧಿಕಾರ ಸಿಕ್ಕಿ ಸಂಪತ್ತು ಸೇರಿದ ತಕ್ಷಣ ನೆರೆಯ ರಾಜ ಹಾಗೂ ಸೋದರ ಮಾವನಿಗೆ ನಿದ್ದೆ ಕೆಟ್ಟಿತು. ಅವನು ಯುದ್ದಕ್ಕೆ ಕರೆಕೊಡುವ ಮೊದಲು ಒಂದು ಲವ್ ಸೀನ್…)
ಬಾಗಳಿಗೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ಭಿಕ್ಷಾ ಮಾಡುತಾನೇ | ಸೋಕೀರ ಮೂವ ತಾಜೀಜಿ |
ಬಾಗಳ್ಯಾಗ ಭಿಕ್ಷಾ ಮಾಡ್ತಾನ್ರೀ. ಅಲ್ಲಿ ಜಂಗಮರು ಮಾತಾಡ್ತಾರೆ. ‘ನೋಡಿ, ಆಗ್ಲಿನ್ ಕಾಲಕ್ಕೆ ಬಾಗಳಿಭೂಪ ಅಂತ ರಾಜ ಇದ್ದ. ಆತನಲ್ಲಿಗೆ ಬಂದಾರು. ನೋಡ್ರಿ ಆತಗ ಚಾಡ ನಾಳೆ ಬಂದಾ ಹೇಳತೀನೇ | ಸೋಕೀರ ಮೂವ ತಾಜೀಜಿ | ‘ಆ ಇವತ್ತು ಬಿಟ್ಟ ಬಿಡ್ರೀ ನಾಳೆ ಬಂದು ಹೇಳ್ತೀನಿ’. ‘ಹೌದೇನಯ್ಯ’ ‘ಹೌದುಬುದ್ದಿ’ ‘ಆ ಜಂಗಮರಾ ನಾಳೆ ಬಂದು ಹೇಳ್ತಾನಂತ ಬಿಡನೇನ’. ‘ಏ, ಬಿಡ್ರೀ ಬುದ್ಧಿ, ಅವನೇಟ ದೂರ್ದಾಗದನ, ಕೂಲಳ್ಳಿ ಏನ್ ದೂರೈತೆ, ಅವನ್ ಬರಲ್ದಿದ್ರೆ ಹೋಗಿ ಹೊತ್ಗಂಡ್ ಬರ್ತೀವಿ.’ ‘ಆ ಹೋಗಯ್ಯ ನಾಳೆ ಬಾ ಹೋಗು’. ನೋಡ್ರಿ ಭಾಗಳಿಭೂಪ ಹೇಳಿದ್ಕೆ ಅವತ್ತು ಭಿಕ್ಷಾ ಬಿಟ್ಟ, ಬಾಗಳಿ ಬಿಟ್ಟ, ಕೂಲಳ್ಳಿಗೆ ಬಂದಾನು ಕೂಲಳ್ಳಿ ಮಠದಾಕ ಸೇರ್ಕೆಂಡ. ಬಾಗಳಿಭೂಪ ಮತ್ತು ಜಂಗಮ್ರು ಮಾತಾಡ್ತಾರೆ. ‘ನಾಳೆ ಬರ್ತಾನಂತೆ ಏನು ಹೇಳ್ತಾನ’ ಏನು ಅಂತ ಕಾದಬಿಟ್ಟಾರೆ ಜನ. ಭಾಗಳಿ ಭೂಪನ ಅರಮನಿ ಹಿಡೀದಂತೇ ಕೂತುಬಿಟ್ಟಾರು, ಅಂಗ್ಳ ಹಿಡೀದಂಗ ಕೂತುಬಿಟ್ಟಾರು ಜನ. ‘ಈಗ ಬರ್ತಾನಂತೆ ಏನ್ ಹೇಳ್ತಾನೋ ಏನೋ ಕೇಳಪ್ಪ’ ಜಂಗಮ್ರು ರೈತ್ರು ಎಲ್ಲ ಕಾದ ನಿಂತಬಿಟ್ಟೈತೆ. ಗೋಣಿ ಬಸವೇಶ್ವರ ಮ್ಯಾಲಕೆದ್ದಾನು, ಪೂಜಿ ಪುನಸ್ಕಾರ ಮಾಡ್ದ, ಬೆಟ್ಟದ ಕಡಿ ನೋಡ್ದ. ಬೆಟ್ಟದ ಕಡೆ ನೋಡಿ ಕೈ ಬೀಸಿದ. ಕೈ ಬೀಸಿದಾಗ ಏಳು ಮೆಟ್ಟಿನ ಹುಲಿರಾಜ. ಓಡಿ ಓಡಿ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ | ಏಳು ಮೆಟ್ಟಿನ ಹುಲಿ ಬಂದು ಗುರುವಿನ ಪಾದ್ಕ ಬಿತ್ತಂತ್ರೀ. ಆಗ ಹುಲಿ ಬೆನ್ನಮೇಲೆ ಕೈಎಳ್ದು ದಾಗಡಿ[3] ಬಳ್ಳಿ ಹರ್ಕಂಡ, ಕಡಿವಾಣ ಅಕ್ಕೆಂಡ, ಹುತ್ತದಾಗ ಕೈ ಇಕ್ಕಿ ಸರ್ಪ ಹಿಡ್ಕಂಡ. ಹುಲಿಮ್ಯಾಲ ಕುತ್ಗಂಡ. ಹುಲಿ ಹತ್ಕೆಂಡೇ ಬಾಗಳಿಗೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ | ಹುಲಿ ಹತ್ತ್ಕೆಂಡು ಬರ್ತಾನು. ನೋಡ್ರಿ ಹತ್ತಿದ ಹುಲಿ ಕೆಳಗ ಇಳಿಲಿಲ್ದಂಗ ಊರಕ ಬರ್ತಾನು. ರೈತ್ರು, ಜಂಗಮ್ರು ಬಾಗಳಿಭೂಪ ಸಿಂಹಾಸನದ ಮ್ಯಾಲೆ ಕುಂತಾನು ಅವರೆಲ್ಲ ‘ಊರಾಕ ಹುಲಿಬಂತ್ರಲೇ’. ಸಾಲು ಕದ ಮುಚ್ಚ್ಯಾರಯ್ಯೋ | ಸೋಕೀರ ಮೂವ ತಾಜೀಜಿ | ರಾಜ್ರ ಮನಿಗೆ ಬಂದಾಗ ಜಂಗಮರು, ರೈತ್ರು ಇದ್ದ್ರಲ್ಲೀ ಅವರೆಲ್ಲ ‘ಲೇ ಹುಲಿ ಹತ್ತೆಂಡ ಬಂದ ಬಿಟ್ನಲಲೇ’ ಅಂದು. ಓಡಿ ಓಡಿ ಹೋಗುತಾರೇ | ಸೋಕೀರ ಮೂವ ತಾಜೀಜಿ | ಜಂಗಮರು ಅಡವಿಗೆ ಬಿದ್ದ್ರುರೈತ್ರು ಅಡವಿಗೆ ಬಿದ್ರು, ಭಾಗಳಿ ಭೂಪ ಸದರಿಮ್ಯಾಲ ಕುತ್ಗಂಡಿದ್ದನ್ನಲ್ರೀ ಆ ಸದರಿಮ್ಯಾಲೆ ಕುಂತೇ ಉಚ್ಚಿ ಹೊಯ್ಯುತಾನೇ | ಸೋಕೀರ ಮೂವ ತಾಜೀಜಿ | ಬಾಗಳಿಭೂಪ ಉಚ್ಚಿ ಹೊಯ್ಕೆಂಡು. ಹೊತ್ಗಂಡು ಬಿದ್ದು, ಮ್ಯಾಕೆದ್ದು ನಿಂತಗ್ಗಂಡ. ಹೇಳಿದ ಮಾತ ಕೇಳ್ತೀನಯ್ಯೋ | ಆ ಶಿವನನಯನ ದೇವೈ | ‘ಗುರುಗಳೇ ಗುರುಗಳೇ ಸಾಕು ನಿನ್ನ ಮಹಿಮಾ, ಜಂಗಮರ ಮಾತ ಕೇಳಿ ನಂದು ತಪ್ಪು. ಇಲ್ಲಿಂದ ಇತ್ಲಾಗೆ ಹತ್ತಿದ ಹುಲಿ ಕೆಳಗಿಳಬ್ಯಾಡ. ಎಲ್ಲೆರ ಮೆರಿ ಹೋಗೋ | ಸೋಕೀರ ಮೂವ ತಾಜೀಜಿ | ಅಲ್ಲಿ ನೋಡ್ರಿ ಬಾಗಳಿ ಭೂಪಗೆ, ಜಂಗಮುರಿಗೆ, ಹುಲಿ ಹತ್ತ್ಗೆಂಡು ಹೋಗಿ ಅಲ್ಲಿ ಕುರುವು ತೋರ್ಸಿ ಹತ್ತಿದ ಹುಲಿ ಇಳಿಲಿಲ್ದಂಗ. ಕೂಲಹಳ್ಳಿಗೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ | ಮಠಕೆ ಬಂದಾನು, ಹುಲಿ ಇಳ್ದಾನು, ಹುಲಿ ಮ್ಯಾಲೆ ಕೈ ಎಳೆದ. ‘ಹೋಗಪ ನನ್ನ ಕಷ್ಟಕಾದೆಪಾ ನನ್ನ ಪ್ರಾಣ ಪಡೆದೆಪ್ಪಾ ಹೋಗು ಬೆಟ್ಟ ಸೇರ್ಕ್ಯ’. ಹುಲಿ ಬೆಟ್ಟಕ ಬಿಟ್ಟ ಮಠದಾಗ ಹೋದ, ಅಲ್ಲಿ ನೋಡ್ರಿ ಗದ್ದಿಗಿ ಮಾಡ್ಕೆಂಡು ಗದ್ದಿಗಿ ಮ್ಯಾಲ ಕುಂತಾನ, ಗದ್ದಿಗಿ ಆಳ್ತಾನ, ಗದಿಗಿ ಆಳ ಕರಗ, ಜಂಗಮ್ರು, ಅಡ್ಡಲಿಂಗದೋರು, ದೊಡ್ಡಲಿಂಗದೋರು ಆ ಗುರುವಿಗೆ ಬೇಧ ಮಾತಾಡ್ತಾರ ‘ಏನಯ್ಯ ನಾವ್ ನೋಡಿದ್ರೆ ಲಿಂಗದೋರು, ಅಡ್ಡಲಿಂಗದೋರು ದೊಡ್ಡಲಿಂಗದೋರು, ಲಿಂಗಾಯತ್ರು, ಅವ್ನು ನೋಡಿದ್ರ, ಬ್ಯಾಡ್ರನು. ಅವನ ಕಾಲಿಗೆ ಬೀಳ್ಬೇಕಲ್ಲೋ’, ಭೇದ ಮಾತಾಡ್ತಾರೀ ಹೊರಗ ನಿಂತ್ಕಂಡು. ಅದನ್ನ ಕಿವಿ ತುಂಬ ಕೇಳ್ದ ಗೋಣಿಬಸವೇಶ್ವರ. ‘ಆಹಾ ಪರಮಾತುಮ, ಕೊಟ್ರೇಶ, ಹಟ್ಟಿತಿಪ್ಪಣ್ಣ, ಕೆಂಪಯ್ಯ, ಕೋಲಶಾಂತಯ್ಯನವರೆ ಅಡ್ಡಲಿಂಗ್ದೋರು, ದೊಡ್ಡಲಿಂಗ್ದೋರು ನನಗೆ ಕುಂದಾಡ್ತಾರೆ, ಭೇದ ಮಾಡ್ತಾರು. ನಾನಿನ್ನ ಇಲ್ಲಿರ್ಬಾರ್ದಪ’ ಕೂಲಹಳ್ಳಿ ಬಿಟ್ಟ ಮಠಬಿಟ್ಟ. ಶಾಪುರಕ್ಕ ಹೋಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ | ಕೊಟ್ಟೂರಿಗೆ ಹೋಗ್ಯಾನು. ಆ ಕೊಟ್ರೇಶನ ಚಾಕಿ[4] ಮಾಡ್ತಾನ್ರಿ, ಎಂಗ ಮಾಡ್ತಾನೆ? ಸೂರ್ಯ ಹುಟ್ಟಿರೋದಿಲ್ಲ ಆಷ್ಟೊತ್ತಿಗೆ ಮಂಗಳಾರತಿ ಎತ್ತುತ್ತಾನೆ, ಪುಷ್ಪ ಒಗಿತಾನೆ, ಮಾಯವಾಗಿ ಬಿಡ್ತಾನೆ. ಆ ತಂದಿ ಕಣ್ಣಿಗೆ ಕಾಣದೇ ಇಲ್ಲಾ. ಕೊಟ್ರೇಶ ಮುಂಜಾನೆ ನೋಡ್ತಾನೆ. ನೀರು ಉಗ್ಗಿರ್ತಾವೆ, ಪುಷ್ಪ ಬಿದ್ದಿರ್ತಾವೆ. ಕೊಟ್ರೇಶ ಯೋಚ್ನಿ ಮಾಡ್ತಾನೆ. ‘ಅಲ್ಲಪಾ ನನ್ನ ಚಾಕ್ರಿ ಯಾ ಭಕ್ತ ಮಾಡ್ತಿದ್ದಾನು. ನನ್ನ ಕಣ್ಣಿಗೆ ಕಾಣಂಗಿಲ್ಲಲಾ, ಎಂಥಾ ಮಹಾತ್ಮ ಇದ್ದಾನವ್ನು ಚಾಕ್ರಿ ಮಾಡೋನು, ಕೊಟ್ರೇಶ ಚಿಂತೆ ಮಾಡ್ತಾನ್ರೀ. ತಂದಿ ಕಣ್ಣಿಗೆ ಕಾಣ್ದಂಗ. ತಂದಿ ಚಾಕ್ರಿನ ಮೂರು ತಿಂಗಳ ಮಾಡ್ಯಾನಯ್ಯೋ | ಸೋಕೀರ ಮೂವ ತಾಜೀಜಿ | ಮೂರು ತಿಂಗಳ ತುಂಬಿದಾಗ, ಮತ್ತೇನಂತಾನೆ ಕೊಟ್ರೇಶ ‘ಅಲ್ಲಪಾ ಇಲ್ಲಿಗೆ ಮೂರು ತಿಂಗ್ಳಾತು ಯಾರಿರಬೌದು ಅವ್ರು? ನನ್ನ ಚಾಕ್ರಿ ಮಾಡೊನು’, ಯೋಚ್ನಿ ಮಾಡ ಕರಗ ಆಗ ಗೋಣಿಬಸವೇಶ್ವರ ತಂದಿಗೆ ಭೇಟಿಯಾದ. ‘ಗೋಣಿಬಸವಣ್ಣನವರೆ ಏನ್ ಕಷ್ಟ ಬಂತಪ್ಪಾ, ನನ್ನ ಚಾಕರಿ ನೀನ್ಯಾಕ ಮಾಡ್ತಿ’ ‘ಆ ಜನಕನವರೇ ಏನಿಲ್ಲ ಅಡ್ಡಲಿಂಗದೋರು, ದೊಡ್ಡ ಲಿಂಗದೋರು ನನಗೆ ಭಿನ್ನ ಬೇಧ ಮಾಡ್ತಾರೆ, ನನ್ನ ಊರಿಗೆ ನೀನೇ’ ದಯಮಾಡೋ ಜನಕನವರೇ | ಸೋಕೀರ ಮೂವ ತಾಜೀಜಿ | ‘ನನಿಗೆ ಭೇದ ಮಾಡ್ತಾರಿ, ನೀವೇ ದಯಾಮಾಡ್ರಿ ನನ್ನೂರಿಗೆ. ಅಲ್ಲಿದ್ಬಿಡ್ರೀ ದಯಮಾಡಿ. ಅದಕ್ಕೆ ನಿಮಗೆ ಚಾಕ್ರಿ ಮಾಡ್ದೆ’. ಅಂದಾಗ ಕೊಟ್ರೇಶ ಹೇಳ್ದ ‘ಮಗು ಬರ್ತೀನಪ, ನನ್ನ ಚಾಕ್ರಿ ಮಾಡೀದ್ದೀ. ಅಂದ್ರೆ ನನ್ನ ವಾಕ್ಯ ನಡೆಸ್ಟೇಕು ಅಂಗಾದ್ರೆ ಬರ್ತೀನಿ. ಇಲ್ಲಾಂದ್ರೆ ಬರಲ್ಲ’ ‘ಏನು ವಾಕ್ಯ?’ ‘ಏನಿಲ್ಲ ನನ್ನ ನೀನು ತಿರುಗಿ ನೋಡ್ದಂಗ ಕರ್ಕಂಡು ಹೋಗ್ಬೇಕಪ್ಪ ನೀನೆಲ್ಲಿ ತಿರುಗಿ ನೋಡ್ತೀಯೋ ಅಲ್ಲೇ ನಾನೇ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ | ನೋಡ್ರೀ ತಿರುಗಿ ನೋಡ್ದಾಗ ಹೋಗ್ಬೇಕು ಎಲ್ಲಿ ತಿರುಗಿ ನೋಡ್ತಾನೆ ಅಲ್ಲೇ ಇರ್ತಾನ. ಮುಂದಕ ಹೋಗಂಗಿಲ್ಲ. ತಂದಿ ಆಜ್ಞೆ ಆಗೇತೆ. ಮುಂದು ಮುಂದು ಗೋಣೀ ಬಸವೇಶ್ವರ, ಹಿಂದ ಹಿಂದೆ ಕೊಟ್ರೇಶ ಶಾಪುರ ಬಿಟ್ಟು ಬೆಣ್ಣಿಹಳ್ಳಿಗೆ ಹೋಗುತಾರೇ | ಸೋಕೀರ ಮೂವ ತಾಜೀಜಿ | ಅಲ್ಲೀವರ್ಗು ತಿರುಗಿ ನೋಡ್ದಂಗ ಬಂದ. ‘ನಮ್ಮಪ್ಪನ ಆಜ್ಞೆ ಆಗೇತಪಾ ತಿರುಗಿ ನೋಡ್ಬಾರ್ದು’ ಮುಂದೆ ಮುಂದೆ ತಿರುಗಿ ನೋಡ್ದಂಗೆ ಕೂಲಳ್ಳಿ ಕೆರೆ ಅಂಗಳ ತನಕ ಬಂದ. ಕೂಲಳ್ಳಿ ಊರಕ ಬರಾಕ ಇನ್ನೂ ಸ್ವಲ್ಪ ಐತೆ. ಕೆರೆ ಅಂಗಳಕ ಬಂದಾಗ ಗೋಣಿಬಸವಶ್ವರ ಯೋಚ್ನ ಮಾಡ್ತಾನೆ. ‘ಅಲ್ಲಪ ಆತನ ಶಬ್ದ ಇಲ್ಲ, ಗುನುಗು[5] ಇಲ್ಲ, ಕಾಲ ಸಪ್ಪಳ ಇಲ್ಲ, ಬಂದ್ನಾ ಬರಲಿಲ್ಲಾ. ನನಿಗೆ ಸುಳ್ಳು ಹೇಳಿ ಕಳ್ಸಿ ಬಿಟ್ಟಾನು. ಬಂದಿಲ್ಲಿ ಬಿಡಪಾ’ ನೋಡ್ರಿ ಕೆರೆ ಅಂಗಳದಾಗ ಸ್ವಲ್ಪ ತಿರುಗಿ ನೋಡ್ದ. ‘ಆ ಬಸವಣ್ಣಾ ಇಲ್ಲೇ ನಾನೇ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ | ನೋಡಪಾ ನನ್ನ ಮಾತ ತಪ್ಪಿದೆ. ನೀನೇ ಒಳಗೆ ನಾನೇ ಹೊರಗಪ್ಪ. ಆದ್ರೆ ನಿನ್ನ ರಥೋತ್ಸವ ಸಾಗಿದಾಗ ನಿನ್ನ ರಥದಲ್ಲಿ ನಾನಿರ್ತೀನಿ. ಮ್ಯಾಲೆ ನೀನು ಕೆಳಗ ನಾನು ನಡಿಯಪಾ ನಿನಿಗೆ ಏನೇ ಬರ್ಲಪಾ. ಬೆನ್ನ ಹಿಂದೆ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ | ಮಠಕೆ ಬಂದಾನು ಕೊಟ್ರೇಶ ಹೊರಗಾದ. ಗೋಣಿ ಬಸವೇಶ್ವರ ಒಳಗಾದ. ಕೊಟ್ರೇಶ ಊರು ಹೊರಗೆ ಕೆಳಗೇರ್ಯಾಗ ನೆಲಗೊಂಡ. ಗೋಣಿಬಸವೇಶ್ವರ ತನ್ನ ಮಠಕ್ಕೆ ತಾನು ಬಂದ, ಕೊಟ್ರೇಶ ಹೋಗಿ ಕೂಲಳ್ಳಿಯಾಗ ನೆಲೆಗೊಂಡಾಗ ಈಗ ಕೂಲಳ್ಳಿಯ ಗೋಣಿ ಬಸವೇಶ್ವರನ ರಥ ಸಾಗಿದಾಗ ಕೊಟ್ರೇಶ ರಥ ಏರ್ತಾನ್ರೀ, ಗೋಣಿಬಸವೇಶ್ವರ ಮುಂದು ಮುಂದು ಹೋಗ್ತಾನ್ರೀ. ಈಗ್ಗೇ ಆದ್ರೂ ಕೂಡ ಗೋಣಿಬಸವೇಶ್ವರ ರಥ ಅತ್ತಂಗಿಲ್ಲ. ಮುಂದೆ ಆತ, ಮ್ಯಾಲೆ ಕೊಟ್ರೇಶ. ಆತ ಅಲ್ಲಿ ನೆಲಗೊಂಡಾಗ ಅಡ್ಡಲಿಂಗದವ್ರು, ದೊಡ್ಡ ಲಿಂಗದವ್ರು, ಕುಲಹದಿನೆಂಟು ಜಾತೆಲ್ಲ ಭಿನ್ನ ಭೇದ ಬಿಟ್ಟು ಗೋಣಿಬಸಪ್ಪನ ಪಾದಕ್ಕೆ ಬಿಳ್ತಾರೇ | ಸೋಕೀರ ಮೂವ ತಾಜೀಜಿ | ಎಲ್ಲ ಜಾತಿ ಪಾದಕ್ಕ ಬಿದ್ದು ಬೇಡ್ತೈತ್ರೀ, ಗದ್ದಿಗೆ ಮ್ಯಾಲ ಕುಂತು ಗದ್ದಿಗಿ ಆಳಕರಗ ಕೂಲಳ್ಳಿ ಗೋಣಿಬಸಪ್ಪನ ಮಠಕ್ಕೆ ಹಾಲುಮಾಲು ಬಂದು ಬೀಳ್ತತ್ರೀ ಏನೇನು ಹಾಲುಮಾಲು ಗೊತ್ತಾ ಹರಿಹರ ಭಗವಂತಾ | ತಾನಿ ತಂದನಿ ನಾನೋ | ನೋಡ್ರೀ ಮಠಕ್ಕ ಹಾಲುಮಾಲು ಬಂದು ಬಂದು ಬೀಳ್ತೈತ್ರೀ. ಗೋಣಿ ಬಸವೇಶ್ವರ ಕೂಲಳ್ಯಾಗ ಗುರುವೇ ಗದ್ದಿಗಿ ಆಳುತಾನೇ | ಸೋಕೀರ ಮೂವ ತಾಜೀಜಿ | ನೋಡ್ರಿ, ಆಗ ಗದ್ದಿಗಿ ಮ್ಯಾಲ ಕೂತ್ಕಂಡು, ಮಠಮಾನ್ಯ ಆಳ್ತಾನೆ. ಗದ್ದಿಗಿ ಆಳ್ತಾನೆ. ಗೋಣಿಬಸವೇಶ್ವರ, ಗದ್ದಿಗಿ ಆಳಕರಗ ಹರಪ್ನಳ್ಳಿ ನಾಲಕ್ಕು ಮಂದಿ ಗಾಣಿಗರು ಕೂಲಳ್ಳಿಗೆ ಬರ್ತಾರೀ. ಮಠಕ್ಕೆ ಬಂದು ಮಠಮಾನ್ಯ ನೋಡ್ತಾರು. ಹಾಲುಮಾಲು ನೋಡ್ತಾರು. ದೇವತಾ ಉಪ್ಪರಿಗಿ ನೋಡ್ತಾರು. ಸುತ್ತ ಪೌಳಿ ನೋಡ್ತಾರು. ಗಾಣಿಗರು ಮಾತಾಡ್ತಾರೆ ನಾಲಕ್ಕು ಮಂದಿ ‘ಈತ ದೊಡ್ಡ ಮಹಾತುಮನಯ್ಯ, ಏಳು ಖಂಡುಗ ಬರೀ ಕಾಳು ರಾಶಿ ರಾಶಿ ಬಿದ್ದೈತಲ್ಲೋ, ಎಷ್ಟು ಎತ್ತು ಎಮ್ಮೆ, ದನ, ಕುರಿ, ಆಡು, ಎಷ್ಟಪ್ಪಾ ಹಾಲುಮಾಲು ಈತಗ ಬರೋದು. ಅಂದ್ರೆ ಇಂಥಾ ಮಹಿಮಾ ಪುರುಷ ಎಲ್ಲಿಲ್ಲಯ್ಯ ದೊಡ್ಡ ಮಹಾತುಮನಪ್ಪಾ, ಆದ್ರೆ ನಮ್ಮೂರಗ ಅದಾನೆ ರಾಜ ಶಿವನಪ್ಪ ಅವನ ತಗೊಂಡ ಏನ್ ಮಾಡಕಾ ಕೆಲ್ಸಗೇಡಿನಾ. ಮತ್ತೆ ರಾಜಾಗಿ ಸಿಂಹಾಸನ ಆಳ್ತಾನೆ. ಪಾಪಿ ಸೂಳೇ ಮಗ, ಅಂದ್ರೆ ಇಂಥಾ ಸಂಪತ್ತು ಅವನಿಗಿಲ್ಲ’. ಗಾಣಿಗರು ಮಾತಾಡ್ತಾರೆ. ಆನಂದ ಪಟ್ಟು, ಅದನ್ನೆಲ್ಲಾ ನೋಡಿ ಹರಪ್ನಳ್ಳಿ ಸಿಂಹಾಸನಕ್ಕೆ ಹೋಗ್ಯಾರು. ನೋಡ್ರಿ ನಾಲಕ್ಕು ಮಂದಿ ಗಾಣಿಗರು ಶಿವನಪ್ಪಗ ಚಾಡ ಹೇಳ್ತಾರಿ. ‘ರಾಜಾಧಿರಾಜ, ಕೂಲಳ್ಯಾಗೆ ಕನಕವ್ನ ಮಗನಂತೆ ಗೋಣಿಬಸವೇಶ್ವರ ಹುಟ್ಟಿಬಿಟ್ಟಾನೆ. ಏನ್ ಕೇಳ್ತೀರೀ, ಮಠಮಾನ್ಯ ಎಂಥದ್ರೀ, ಮುಂದ ಉಪ್ಪರಿಗಿ ಎಂತದು, ಸುತ್ತಾ ಪೌಳಿ ಎಂಥದು. ಬ್ಯಾಳಿಕಾಳು ಎಳ್ಳು ಕುಂಡುಗ ರಾಶಿ ರಾಶಿ ಬಿದ್ದಬಿಟ್ಟೈತೆ. ಹಾಲುಮಾಲು ಬಂದು ಬೀಳ್ತೈತೆ. ಅಡ್ಡಲಿಂಗದೋರು, ದೊಡ್ಡಲಿಂಗದೋರು ಆತನ ಪಾ ಪೂಜ ಮಾಡಿ ಪಾದೋದಕ ಕುಡಿತಾರ. ಆತನ ಸೇವಾ ಮಾಡ್ತಾರ. ಅಂಥಾ ಸಂಪತ್ತು. ನಿನಗಿಲ್ಲೋ ನನ್ನಾ ರಾಜಾ | ಸೋಕೀರ ಮೂವ ತಾಜೀಜಿ | ಶಿವನಯ್ಯ ‘ಭಲೇ ಭಲೇ ಕನಕವ್ವನ ಮಗ ಗೋಣಿಬಸವ, ಅಕ್ಕನಮಗ ಅಳಿಯ, ಪರವಿಲ್ಲ ಪರವಿಲ್ಲ’ ಗೊಂಡದ ಮೀಸಿಮ್ಯಾಲೆ ಕೈ ಎಳ್ದಾನು. ‘ಅಂದ್ರೇ ಅವನ ಕೊಂದ ಹಾಕಿದ್ರೆ ಅವ್ನು ಮಠಮಾನ್ಯ ನನ್ನ ಸ್ವಾಧೀನ ಆಗ್ತದೆ. ಅವ್ನ ಕರಿಕಿಬಟ್ಟೆ ಮಾನ್ಯವೂ ನನ್ನ ಸ್ವಾಧೀನಾಗ್ತದೆ, ಅಂದೆ, ಅವನಿಗೆ ನಾನೇ ಕೊಲ್ಲಬೇಕೋ | ಸೋಕೀರ ಮೂವ ತಾಜೀಜಿ | ನೋಡ್ರೀ, ಸೊಕ್ಕಿನ ಶಿವನಯ್ಯ, ಸೋದರಮಾವ್ನೇ, ಯೋಚ್ನಿ ಮಾಡ್ತಾನ್ರೀ ಗೋಣಿ ಬಸಪ್ಪನ ಕೊಲ್ಲಾಕ.
ಇವತ್ತು ಕೈಯಾ ಬಿಡೋ ನನ್ನ ರಾಜಾ | ಸೋಕೀರ ಮೂವ ತಾಜೀಜಿ |
ನಾಳೆ ಬಂದೇ ಹೇಳತೀನೇ | ಸೋಕೀರ ಮೂವ ತಾಜೀಜಿ |
ಹುಲಿಯ ರಾಜ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ತಾನೇ ಕರ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಗುಡಿಯಾಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಹುಲಿ ಮ್ಯಾಲೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಹತ್ತಿದ ಹುಲಿಯಾ ಇಳಿಯಾಲಿಲ್ಲೋ | ಸೋಕೀರ ಮೂವ ತಾಜೀಜಿ |
ರಾಜನ ಮನಿಗೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಓಡಿ ಓಡಿ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಗದಗದ ನಡಿಗ್ಯಾನೆ ಕೆಳಗೆ ಹೊತ್ಗಂಡು ಬಿದ್ದಾನೇ | ಸೋಕೀರ ಮೂವ ತಾಜೀಜಿ |
ಜಂಗಮ್ರು ದೋಷಾ ಮಾಡಿದರಯ್ಯೋ | ಆ ಶಿವನನಯನ ದೇವೈ |
ತಪ್ಪೇ ಆತೋ ನನ್ನಾ ಗುರುವೇ | ಆ ಶಿವನನಯನ ದೇವೈ |
ದಯಾಮಾಡೋ ನನ್ನಾ ಗುರುವೇ | ಆ ಶಿವನನಯನ ದೇವೈ |
ಬಾಗಳಿ ರಾಜ ಹೇಳುತಾನೇ | ಸೋಕೀರ ಮೂವ ತಾಜೀಜಿ |
ಗುರುವಿಗೆ ಹೇಳುತಾನೇ | ಸೋಕೀರ ಮೂವ ತಾಜೀಜಿ |
ಗುರುವೇ ಮಠಕೆ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |
ಕೊಟ್ಟೂರಿಗೆ ಹೋಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಮೂರು ತಿಂಗಳ ಮಾಡ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ನನ್ನ ಊರಿಗೆ ಬರಬೇಕಯ್ಯೋ | ಸೋಕೀರ ಮೂವ ತಾಜೀಜಿ |
ತಂದಿ ಪಾದ ಹಿಡಿದಾನಯ್ಯೋ | ಸೋಕೀರ ಮೂವ ತಾಜೀಜಿ |
ತಿರುಗಿ ನೋಡ್ದಂಗ ಹೋಗಬೇಕೋ | ಸೋಕೀರ ಮೂವ ತಾಜೀಜಿ |
ಬರುತೀನೋ ನನ್ನಾ ಮಗನ | ಸೋಕೀರ ಮೂವ ತಾಜೀಜಿ |
ಹರಪನಹಳ್ಳಿಗೆ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಹರಪನಹಳ್ಳಿ ಹಿಂದಾಮಾಡೀ | ಸೋಕೀರ ಮೂವ ತಾಜೀಜಿ |
ಚಿಕ್ಕಳ್ಳಿಗೆ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಚಿಕ್ಕಳ್ಳಿ ಹಿಂದಾಮಾಡೀ | ಸೋಕೀರ ಮೂವ ತಾಜೀಜಿ |
ಕೂಲಳ್ಳಿಗ ಹೋಗುತಾರೇ | ಸೋಕೀರ ಮೂವ ತಾಜೀಜಿ |
ಹೋಗೋ ಹೋಗೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |
ಒಳಗೆ ಹೋಗೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |
ಗುರುವೇ ಮಠಕೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಅಡ್ಡಲಿಂಗದವ್ರು ಬಿಳ್ತಾರೆ | ಸೋಕೀರ ಮೂವ ತಾಜೀಜಿ |
ಕುರುಬರ ಮನಿಯಿಂದಾ | ತಾನಿ ತಂದನಿ ನಾನೋ |
ಕುರಿ ಹಿಂಡೇ ಬರುತೈತೇ | ತಾನಿ ತಂದನಿ ನಾನೋ |
ವಕ್ಕಲಿಗರ ಮನಿಯಿಂದೋ | ತಾನಿ ತಂದನಿ ನಾನೋ |
ಎತ್ತು ಎಮ್ಮಿ ಬರುತೈತೇ | ತಾನಿ ತಂದನಿ ನಾನೋ |
ಮೇವಾರ[6] ಮನಿಯಿಂದೋ | ತಾನಿ ತಂದನಿ ನಾನೋ |
ಜವಳಿಪೆಂಡಿ[7] ಬರುತೈತೇ | ತಾನಿ ತಂದನಿ ನಾನೋ |
ಉಪ್ಪಾರ ಮನಿಯಿಂದೋ | ತಾನಿ ತಂದನಿ ನಾನೋ |
ಸೊಪ್ಪು ಕಾಯಿ ಬರುತೈತೀ | ತಾನಿ ತಂದನಿ ನಾನೋ |
ಮಾದಿಗರ ಮನಿಯಿಂದೋ | ತಾನಿ ತಂದನಿ ನಾನೋ |
ಮಿಣಿ ಕಣ್ಣಿ[8] ಬರುತೈತೀ | ತಾನಿ ತಂದನಿ ನಾನೋ |
ವರು ವರುಷಕೆ ನೋಡಿರಪ್ಪೋ | ತಾನಿ ತಂದನಿ ನಾನೋ |
ಏಳು ಖಂಡಾಗ ಎಳ್ಳೋ | ತಾನಿ ತಂದನಿ ನಾನೋ |
ಬೆಂಕಿ ಕಾಳು ಬೀಳುತೈತೀ | ತಾನಿ ತಂದನಿ ನಾನೋ |
ಕ್ವಾಟಿ[9] ಕಟ್ಟುತೈತೀ | ತಾನಿ ತಂದನಿ ನಾನೋ |
ಕ್ವತ್ತಲ[10] ಕಟ್ಟುತೈತೀ | ತಾನಿ ತಂದನಿ ನಾನೋ |
ಹರಳ ಅರವಟ್ಟಿಗಿ[11] | ತಾನಿ ತಂದನಿ ನಾನೋ |
ಕುರಿಗಳ ಕಟ್ಟುತೈತೀ | ತಾನಿ ತಂದನಿ ನಾನೋ |
ಮಠಮಾನ್ಯ ಆಳುತಾನೇ | ಸೋಕೀರ ಮೂವ ತಾಜೀಜಿ |
ದೊಡ್ಡ ಮಹಾತುಮ ಇದ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಅವ್ನ ಗದ್ದಿಗಿ ಹತ್ತಾಬೇಕೋ | ಸೋಕೀರ ಮೂವ ತಾಜೀಜಿ |
Leave A Comment