(ಗೋಣಿ ಬಸಪ್ಪನ ಕತೆ ಒಂದು ಬೆಡಗಿನಿಂದ ಪ್ರಾರಂಭವಾಗಿದೆ. ಕೈಲಾಸದ ಶಿವನ ಮೇಲೆ ಮಡಿದಿಯೇ ಕುಳಿತು ಬಿಟ್ಟಿದ್ದಾಳೆ, ಆನೆಗೆ ಜನ್ಮ ಮಾಡಲು ಬಂದ ಅಂಬಾರಿಯ ಹೊಟ್ಟೆ ಮೇಲೆ ನಗಾರಿ, ನೀರಿಗಂತಾ ಹೋದರೆ ಬಾವಿ ತುಂಬಿದೆ. ಬಾವಿಯಾಗೇ ಹಾವು ನಿಂತಿದೆ, ಅದೇ ಹಾವನ್ನು ತಿನಬೇಕೆಂದು ಗರುಡ ಬಂದಿದೆ, ಎರಡಕ್ಕೂ ಜಗಳ ಬಿದ್ದಿದೆ, ಮೋಡವಿಲ್ಲದ ಮುಗಿಲು ಇಲ್ಲದೆ ಮಳೆಯು ಸುರಿದಿದೆ, ಹೊಳೆ ಭೋರ್ಗರೆದು ಬರುತಿದೆ, ಹೊಳೆಗೆ ಆನೆ ಧುಮುಕಿ, ಹೊಳೆಯೇ ಮುಳಿಗಿದೆ, ಮೀನು ತೆಪ್ಪಗೆ ನಿಂತಿದೆ, ಹೊಳೆಯ ಬಲಗಡೆ ಅರಗು ಎಡಗಡೆ ಅರಗನ್ನು ತಿಂದು ಆಮೆಗೆ ಮರಿಯ ಮಾಡಿದೆ ಶರಣು ನಿಮಗೆ ಕರುಣೆ ಲಾಲಿಸು.

ಕರ್ನಾಟಕದ ಕೆಲವು ಜನಪದ ಮಹಾಕಾವ್ಯಗಳು ಈಗ ಸಂಸ್ಕೃತೀಕರಣ ಗೊಂಡುಗಣಸುತ್ತಿ. ಸರಸ್ವತಿ ಸ್ಮರಣೆಯಿಂದ ಪ್ರಾರಂಭವಾಗುತ್ತವೆ. ಆದರೆ ತುಮನೆಪ್ಪ ಎಲ್ಲೂ ಶಿಷ್ಟ ದೈವಗಳನ್ನು ನೆನೆಯದೇ ಒಂದು ಬೆಡಗನ್ನು ಹೇಳಿ ಕತೆ ಶುರುಮಾಡಿದ. ಕೊಳವಿ ಕಳಚಿ ಕಹಳೆ ಹುಟ್ಟಿತು ರೂಪಕದಿಂದ ಕಲ್ಯಾಣದ ಕತೆ ಪ್ರಾರಂಭವಾಗುತ್ತದೆ. ಕಲ್ಯಾಣವೆಂದರೆ ಅದು ಅನೇಕ ಆಶಯಗಳ ಸೃಷ್ಟಿ. ಮುಂದೆ ಕಲಿಯಲ್ಲಿ ಏನು ನಡೆಯಬೇಕು ಎನ್ನುವುದರ ಒಂದು ಪೂರ್ವ ತಯಾರಿ ಇಲ್ಲಿ ನಡೆಯುತ್ತದೆ. ಇಲ್ಲಿ ಬಸವಣ್ಣ ಎಂದರೆ ವ್ಯಕ್ತಿಯೂ ಹೌದು, ಪ್ರಾಣಿಯು ಹೌದು, ಸಸ್ಯವೂ ಹೊದು. ಅವನಿಗೆ ಶುಂಟಿ, ಅರಿಸಿಣ, ಬಜೆ ಮೂರು ಕೋಡುಗಳು ಇದ್ದವು. ಈಗ ಅವನಿಗೆ ವೃದ್ದಾಪ್ಯ ಬಂದಿದೆ. ಮೂರು ಕೋಡುಗಳು ಇದ್ದವು. ಈಗ ಅವನಿಗೆ ವೃದ್ಧಾಪ್ಯ ಬಂದಿದೆ. ಮೂರು ಕೋಡುಗಳ ಕೊಳವಿ ಬಿಚ್ಚಿಹೋಗಿವೆ. ಅದನ್ನು ಯಾರಿಗೆ ಕೊಡಬೇಕು ಎನ್ನುವ ಸಮಸ್ಯೆ ಇದೆ. ಇದನ್ನು ಶುದ್ಧವಾಗಿ ಬಳಸುವ ಕುಲದವರು ಬೇಕು. ಕಾಯಕನಿರತ ವ್ಯಕ್ತಿಗಳು ಬೇಕು, ಒಂದನ್ನು ಅರಳಯ್ಯನಿಗೆ ಕೊಟ್ಟ ಅವನು ಚರ್ಮ ಕುಟ್ಟುವ ಅಡಿಗಲ್ಲು ಮಾಡಿಕೊಂಡ, ಮಾದರ ಚೆನ್ನಯ್ಯನಿಗೆ ಕೊಟ್ಟಅವನು ಕಾವಿ ಮಾಡಿಕೊಂಡ. ಮಾಸಾಳನಿಗೆ ಕೊಟ್ಟ ಅವನು ಕಹಳಿ ಊದುತ್ತಾ ಹೊಂಟ. ನಿತ್ಯಕರ್ಮ ನಿವಾರಣೆಗೆ ಬಸವಣ್ಣ ಜಂಗಮರಿಗೆ ಸಿಹಿ ಊಟ ಕೊಡಲು ಸಿದ್ಧನಾದ. ಪರಮಾತುಮನನ್ನು ಊಟಕ್ಕೆ ಕರೆಯುವುದು ಮರೆತ. ಮುಂದಿನ ಕತೆ: ಸಿಹಿ ಊಟವೆಲ್ಲಾಮಾಂಸದ ಅಡುಗೆಯಾಗಿ ಪರಿವರ್ತನೆಗೊಳ್ಳುವ ಒಂದು ಮಾಂತ್ರಿಕತೆಯನ್ನು ಕಾವ್ಯ ಕಟ್ಟುತ್ತದೆ. ತುಂಬಾ ಪ್ರತಿಮಾತ್ಮಕವಾದ ಭಾಗ ಅಸಂಖ್ಯಾತ ರೂಪಕಗಳಲ್ಲಿ ದಲಿತೀಕರಣಗೊಳ್ಳುತ್ತದೆ.ಕೈಲಾಸದಿಂದ ಬಂದ ಪರಮಾತುಮ ನೇರ ಅರಳಯ್ಯನ ಮನೆಗೆ ಭಿಕ್ಷಕ್ಕೆ ಹೋಗುವುದು, ಅಲ್ಲಿ ಹರಳಯ್ಯನ ಕರು ಸತ್ತಿದ್ದರೆ ಅದನ್ನು ತಿನ್ನಲು ಜೋಳವಿಲ್ಲದೆ ಕೊರಗುವುದು, ಪರಮಾತುಮನ ಜೋಳಿಗೆಗೆ ಸತ್ತ ಕರುವನ್ನೇ ಭಿಕ್ಷೆ ನೀಡುವುದು. ಅದನ್ನು ಪರಮಾತುಮ ಫೈನಾಗಿ ಜಿಗಿದು ಆಹಾರ್ವಾಗಿ ಮಾಡುವುದು, ಮಾಂಸದ ಅಡುಗೆಯ ವಿಧಾನಗಳೆಲ್ಲಾ ಅವನಿಗೆ ಗೊತ್ತಿರುವುದು. ಕಸರೆಯನ್ನೆಲ್ಲಾ ತೆಗೆದು ಮೈ ಕೈಗೆ ಸವರಿಕೊಳ್ಳುವುದು, ಕರುಳನ್ನು ಜನಿವಾರ ಮಾಡಿಕೊಳ್ಳುವುದು. ಮಾಂಸಹಾರದ ಸಂಭ್ರಮದಲ್ಲಿ ಜಂಗಮರ ಸಿಹಿ ಊಟಕ್ಕೆ ಬರುವಲ್ಲಿ ಇರುವ ವ್ಯಂಗ್ಯ. ಜಂಗಮರು ಮೂಗು ಮುಚ್ಚಿಕೊಂಡು ಓಡುವುದು, ಸಕ್ಕರಿ. ಊಟ ರಕ್ತ ಮಾಂಸದ ಊಟವಾಗುವುದು. ಅವನು ಕಲ್ಯಾಣಕ್ಕೆ ಬಂದರೆ ರಕ್ತ ಸಂಬಂಧಿ ಅರಳಯ್ಯನ ಮನೆಯಲ್ಲಿ ಮಾತ್ರ ವಸತಿ ಮಾಡುವುದು. ಮಲಿನವೆನ್ನುವುದೇ ಮಹತ್ವವಾಗುವ ಹಸಿವಿನ ಮಹಾ ಕಥನವಿದು. ದಲಿತ ಕಲಾವಿದ ಮಾತ್ರ ಇದನ್ನು ಚಿತ್ರಿಸಲುಸಾಧ್ಯ.

ಈಗ ಕಥಾನಾಯಕ ಗೋಣಿ ಬಸವನನ್ನು ಇಲ್ಲೊಮ್ಮೆ (ಕಲ್ಯಾಣ) ಹುಟ್ಟಿಸುವ ರಿಹರ್ಸಲ್ಸ್. ಮತ್ತು ಅಲ್ಲಿ ದಲಿತತ್ವ ಏನು ಎಂದರೆ ಲೋಕವನ್ನೇ ಸೃಷ್ಟಿಸಿದ ಪಾರ್ವತಿ ಪರಮೇಶ್ವರರಿಗೆ ಮದುವೆಯಾಗಬೇಕಿದೆ, ಆದರೆ ತಾಳಿ ಮಾಡುವುದು ಗೊತ್ತಿಲ್ಲ. ಅದು ದಲಿತ ಅರಳಯ್ಯನಿಗೆ ಮಾತ್ರ ಗೊತ್ತಿದೆ. ಅವನನ್ನು ಕೈಲಸಕ್ಕೆ ಬರಮಾಡಿಕೊಂಡು ತಂಗಡಿ ಗಿಡದಿದಂ ತಾಳಿ ಮಾಡಿಸಿಕೊಂಡು ಮದುವೆಯಾಗುತ್ತಾರೆ. ಮದುವೆಗೆ ಬಳಕೆಯಾದ ಸಕ್ಕರಿ ಚೀಲವನ್ನು ಒದರುವಾಗ ಗೋಣಿ ಬಸಪ್ಪ ಹುಟ್ಟುತ್ತಾನೆ. ಅವನನ್ನು ಐದು ಮಂದಿ ಶರಣರು ಕಲಿಗೆ ತರುತ್ತಾರೆ.

ಕಲಾವಿದ ಆಕತಾ ಅಲ್ಲಿಗಿರಲೀಎಂದು ತಕ್ಷಣ ಕಲಿಗೆ ಬಂದು ಬಿಡುತ್ತಾನೆ. ಬಾಗಳಿ ಕೈಲಾಸದ ಬಾಗಿಲಾಗಿ ಬಿಡುತ್ತದೆ. ಚಿಗಟೇರಿ ಶಿನಿಗೆ ಹರಪನಹಳ್ಳಿಯಲ್ಲಿ ರಾಜಕೀಯ ಸಿಕ್ಕಿರುತ್ತದೆ.ಆಡಿನ ಮೊಲೆಯಂಗೆ ಅಕ್ಕತಮ್ಮ ಇರುತ್ತಾರೆ. ಅಕ್ಕ ಕನಕಮ್ಮ ದೇವರಿಗೆ ಬಿಟ್ಟುರುತ್ತಾರೆ. ಶಿವನಯ್ಯ ಅಧಿಕಾರಕ್ಕೆ ತಕ್ಕ ಮರ್ಯಾದೆಯಲ್ಲ ಎಂದು ಅವಳನ್ನು ಮನೆಯಿಂದ ಆಚೆಗೆ ಕಳುಹಿಸಿ ಬಿಡುತ್ತಾನೆ. ಈಗ ಕನಕಮ್ಮ ಗಂಡ ಇಲ್ಲದಾ, ಮಕ್ಕಳಿದ ಅನಾಥೆಯಾಗಿ ಕೂಲಳ್ಳಿಗೆ ಬಂದು ಭಿಕ್ಷೆ ಮಾಡಿ ಬದುಕುತ್ತಿರುತ್ತಾಳೆ.ಇಲ್ಲಿ ಕಲಾವಿದ ಹರಪನಹಲ್ಳಿ ಮತ್ತು ಚಿಗಟೇರಿ ಎರಡು ಊರನ್ನು ತರುವುದಕ್ಕೆ ಮುಖ್ಯಕಾರಣ. ಹರಪನಹಳ್ಳಿ ಪ್ರಸಿದ್ಧ ಪಾಳೇಗಾರ ಸೋಮಶೇಖರನು ದರ್ಪದಿಂದ ಮರೆದದ್ದು ಜನಜನಿತವಾಗಿದೆ. ಅವನು ಗೋಣಿ ಬಸವನ ಕಾಲಕ್ಕೂ ಪೂವ೪ದಲ್ಲೇ ಹರಪನಹಳ್ಳಿ ಪಾಳೇಗಾರನಾಗಿದ್ದವನು. ಕಲಾವಿದ ಚಿಗಟೇರಿ ಶಿವನಯ್ಯ ಸೋಮಶೇಖರನೊಡನೆ ಸಮೀಕರಿಸಿ ಬಿಡುತ್ತಾನೆ)

ಕೈಲಾಸದ ಶಿವನ ಮೇಲೆ ಬಂದು ಮಡದಿ ಕುಳಿತವಳೆ
ಬಂದು ಮಡದಿ ಕುಲಿತಾ ಸ್ವಾಮಿ ದೈವಕೆ ಭಗವಂತೌ

ಆನಿಗ ಜನ್ಮ ಮಾಡಲು ಬಂದ ಮ್ಯಾಲೆ ಅಂಬಾರಿ
ಮ್ಯಾಲೆ ಅಂಬಾರೀ ಹೊಟ್ಟಿಮ್ಯಾಲೆ ನಗಾತು ನಗಾರಿ
ನೀರಿಗಂತ ನಾನು ಹೋದೆ ಬಾವಿ ತುಂಬೈತ್ರಿ
ಬಾವಿ ತುಂಬೈತ್ರೀ ಬಾವೆಗಳ ಹಾವು ನಿಂತೈತ್ರೀ
ಅದೇ ಹಾವಿಗೆ ತಿನ್ನಬೇಕೆಂದ ಗರುಡ ಬಂದೈತ್ರಿ
ಗರುಡ ಬಂದೈತ್ರಿ ಎರೆಡಕ ಜಗಳ ಬಿದ್ದಾತ್ರೀ
ಮೋಡವಿಲ್ಲದ ಮುಗಿಲು ಇಲ್ಲದ ಮಳೇಯ ಸುರದೈತ್ರಿ
ಮಳೆಯ ಸುರದೈತ್ರೀ ಹೀರಿಹೊಳಿ ಬೋರಾಡಿ ಬರತೈತ್ರಿ
ನೀರ ಹೊಳೆಗೆ ಧುಮುಕಿದ ಆನಿ ಬಂದು ಹೊಳೆಯ ಮುಳಿಗೈತ್ರೀ
ಹೊಳೀಯ ಮುಲಿಗೈತ್ರೀ ಮೀನು ತೆಪ್ಪಗ ನಿಂತೈತ್ರೀ
ಎಡಗಡಿ ಬದಿಬಿಟ್ಟು ಬಲಗಡೆ ಬಗ್ಗಿ ಅರೀತಯ ತಿಂದೈತ್ರಿ
ಅರೀಯ

[1] ತಿಂದೈತ್ರೀ ಆಮೆಗ ಮರೀಯ ಮಾಡೈತ್ರೀ
ಶರಣು ಮಾಡುವೆ ನಿಮಗೆ ಕರುಣು ಲಾಲಿಸು ನಮಗೇ

ಕಲ್ಯಾಣ ಪಟ್ಟಣದಾಗೇ | ದೇವ ಶಿವನೆನ ಮಾದೇವೋ ಮನವೇ |
ಕಲ್ಯಾಣ ಪಟ್ಟಣದಾಗೇ | ದೇವ ಶಿವನೆನ ಮಾದೇವೋ ಮನವೇ |
ಕಲ್ಲಿಗೆ ಕೋಟಿ ಶರಣರಯ್ಯೋ | ದೇವ ಶಿವನೆನ ಮಾದೇವೋ ಮನವೇ |
ಸಾಸಿರ ಕೋಟಿ ಜಂಗಮರಯ್ಯೋ | ದೇವ ಶಿವನೆನ ಮಾದೇಡೋ ಮನವೇ |

ಕಲ್ಯಾಣದಲ್ಲಿ ಸಾಸ್ರ[2] ಜಂಗಮರಿದ್ದಾರು. ಕಲ್ಲಿಗೆ ಕೋಟಿ ಶಿವಶರಣರಿದ್ದಾರೇ, ಕಲ್ಯಾಣದೊಳಗೆ ಮತ್ತು ಅದರ ಮೇಲೆ

ದೊಡ್ಡ ಮಹಾತುಮ ಇದ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಶಿವಶರಣ ಇದ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಅವರಿಗೆ ಮೂರು ಕೋಡು ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಅವರಿಗೆ ಮೂರು ಕೊಂಬು ನನ್ನ ದೈವೇ | ಸೋಕೀರ ಮೂವ ತಾಜೀಜಿ |

ಬಸವಣ್ಣೋರು, ಅವರಿಗೆ ನೋಡಿ ಮೂರು ಕೋಡು, ಮೂರು ಕೊಡಂದ್ರೇ ಯ್ಯಾವ್ಯಾವು ಅಂತ ಕೇಳಬೌದ್ರೀ? ಬಲಗಡೆದೊಂದು, ಎಡಗಡೆದೊಂದು, ನಡು ಮಧ್ಯ ಒಂದು ಕೋಡು

ಮೂರಕೋಡಿನ ಬಸವಣ್ಣೋ | ಸೋಕೀರ ಮೂವ ತಾಜೀಜಿ |
ಮತ್ತದರ ಮ್ಯಾಲೆ ಒಂದು ಸೊಂಟಿ[3] ಕೊಂಬು | ಸೋಕೀರ ಮೂವ ತಾಜೀಜಿ |
ಒಂದು ಬಜಿಕೊಂಬು[4] ಒಂದು ಅರಿಶಿನ ಕೊಂಬು | ಸೋಕೀರ ಮೂವ ತಾಜೀಜಿ |
ಮೂರಕೋಡಿನ ಬಸವಣ್ಣೋ | ಸೋಕೀರ ಮೂವ ತಾಜೀಜಿ |

ಮೂರು ಕೋಡು ಇದ್ದ ಬಳಿಕೆ ಆ ಕೊಂಬಿನ ಕೊಳುವಿ[5] ಬಿಚ್ಚೋದುವ್ರೀ ಆ ಕೊಳುವಿ ಬಿಚ್ಚೋದ ಬಳಿಕ ಬಸವಣ್ಣನವರು ಬಿಚ್ಚೋದ ಕೊಳವಿ ಮುಂದಿಟ್ಟುಕೊಂಡು ಚಿಂತಿಮಾಡ್ತಾನ. “ಆಹಾ ಪರಮಾತುಮ ನನಗೆ ವೃದ್ಧಕಾಲ ಬಂತಪ. ಆದ್ರೆ ನನ್ನ ಕೋಡಿನ ಕೊಳವಿ ಬಿಚ್ಚೋದುವು ಇವ್ನು ಎಲ್ಲಿಡ್ಲಿ? ಯಾವ ಸ್ಥಾನದಾಗ ಇಡ್ಲಿ? ಯಾರಿಗ ಕೊಡ್ಲಿ? ಏನ್ ಮಾಡ್ಲಿ? ಬಸವಣ್ಣೋರು ಕಲ್ಯಾಣದಲ್ಲಿ ಚಿಂತಿ ಮಾಡ್ತ ಕುಳಿತಾವ್ರೆ ಚಿಂತಿಮಾಡಿ ಬಸವಣ್ಣೋರು. ಆ ಕೊಳವಿ ಯಾರಿಗೆ ಕೊಡ್ತಾನ್ರೀ ಕಲ್ಯಾಣದೊಳಗೆ, ಒಂದು ಕೊಳವಿನ ’’

ಹರಳಯ್ಯನಿಗೆ ಕೊಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |
ಒಂದೇ ಕೊಳವಿ ಕೊಟ್ಟಾಕನಯ್ಯೋ | ಸೋಕೀರ ಮೂವ ತಾಜೀಜಿ |

ಹರಳಯ್ಯಗೆ ಒಂದು ಕೊಳವಿ ಕೊಟ್ಟಿ. ಹರಳಯ್ಯ ಆ ಕೊಳವಿ ತಗೊಂಡ ನೂರೊಂದು ಪುಷ್ಪಬ ತಂದು. ಅಭ್ಯಂಜ ಸ್ನಾನಮಾಡ್ಸಿ, ಅದಕ್ಕೆ ಪೂಜಿ ಮಾಡಿದ. ಆ ಕೊಳವಿನ ಪೂಜಿ ಮಾಡಿ ಏನು ಮಾಡಿದ? ಆತ ನಿತ್ಯ ಪಾದರಕ್ಷೆ ಮಾಡಕೆ ಅಡಿಗಲ್ಲು ಮಾಡಿಕೊಂಡ. ನಿತ್ಯ ನಿರ್ಮಿಕಾಲ ಕಲ್ಯಾಣದೊಳಗೆ ಹರಳಯ್ಯನೋರು ಆ ಕೊಳವಿ ಮ್ಯಾಲೆ.

ಪಾದರಕ್ಷಿ ಮಾಡತಾರೋ | ಸೋಕೀರ ಮೂವ ತಾಜೀಜಿ |
ಹರಳಯ್ಯೋ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ನಿತ್ಯ ಪಾದರಕ್ಷೆ ಮಾಡುತಾರೋ | ಸೋಕೀರ ಮೂವ ತಾಜೀಜಿ |

ಒಂದು ಕೊಳವಿನ ಹರಳಯ್ಯಗೆ ಕೊಟ್ಟ ಇನ್ನೊಂದು ಯಾರಿಗೆ ಕೊಡ್ತಾನ್ರೀ ಮತ್ತೆ.

ಚಲುವಾದಿ ಚೆನ್ನಯ್ಯಗೆ ಕೊಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |
ಅವನು ಕಾವಿ ಮಾಡಕಂಡು ಹೊಂಟಾನಯ್ಯೋ | ಸೋಕೀರ ಮೂವ ತಾಜೀಜಿ |

ಮಾಸಾಳಿಗ ಕೊಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ
ಅವನು ಕಹಳಿ ಊದ್ತಾ ಹೊಂಟಾನಯ್ಯೋ | ಸೋಕೀರ ಮೂವ ತಾಜೀಜಿ
ಮೂವ್ವರಿಗೆ
ಕೊಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |

ಒಂದು ಕೊಳವಿ ಅರಳಯ್ಯನಿಗೆ ಕೊಟ್ಟ, ಅವನು ಅಡಿಗಲ್ಲು ಮಾಡಿಕೊಂಡ. ಮತ್ತೊಂದು ಚೆಲುವಾದಿ ಚೆನ್ನಯ್ಯನಿಗೆ ಕೊಟ್ಟ, ಅವನು ಕಾವಿ ಮಾಡಕಂಡ. ಮತ್ತೊಂದು ಮಾಸಾಳನಿಗೆ ಕೊಟ್ಟ. ಅವನು ಕಹಳಿ ಮಾಡಿಕಂಡ |

ಮಾಸಾಳ[6] ಅವನು ಕಹಳಿ ಊದಕ ಪ್ರಾರಂಭ ಮಾಡಿದ. ಕಲ್ಯಾಣದೊಳಗೆ ಮೂವರಿಗೆ ಮೂರು ಕೊಳವಿ ಕೊಟ್ಟು ಬಸವಣ್ಣೋರು ನಿತ್ಯ ಕರ್ಮಗಳನ್ನು ನಿವಾರಣೆ ಮಾಡ್ಕಳತ್ಲೆ, ಸಕ್ಕರಿಊಟ ಹಾಕಿದ. ಯಾರಿಗೆ, ಜಂಗಮರಿಗೆ, ಶಿವಶರಣರಿಗೆ, ಸಕ್ಕರಿ ಊಟ ಹಾಕಿದಾಗ ಜಂಗಮರು ಕುಂತಾರು. ಶರಣ್ರು ಕುಂತಾರು ಊಟಕ್ಕೆ. ಬಸವಣ್ಣಓರು ಊಟ ನೀಡ್ತಾರೆ. ಬಸವಣ್ಣನ ಹೆಂಡ್ತಿ ನೀಲಮ್ಮ ದೇವಾಲಯದಲ್ಲಿದ್ದಾಳು. ಬಸವಣ್ಣ ನೀಡ್ತಾ ನೀಡ್ತಾ ಬರಕಾಲದಲ್ಲಿ ಇರುವಿ ಎಂಬತ್ತುಕೋಟಿ ಸಲುಹಿರ‍್ತಕ್ಕಂತಹ ಪರಮಾತ್ಮನ ದೃಷ್ಟ್ಯಾಗ ಬಿತ್ತಂತ್ರೀ ಆಗ. ‘ಆಹಾ ಬಸವಣ್ಣನೋರೇ ನೀನು ಮರ‍್ತೇನಪ ನನ್ನಂತ ಮಹಾತ್ಮನ, ಮರ‍್ತು ಜಂಗಮರಿಗೆ, ಶರಣರಿಗೆ ಊಟಕ್ಕೆ ಹಾಕಿಯೇನಪ್ಪ. ಆದ್ರೆ ನಿನಗೆ ಮರುವು ಬಂದಿಲ್ಲ. ನಾನೇ ನಿನಗೆ ಮರುವು ಕೊಟ್ಟಿನಿ ಅದಕ್ಕೆ ಮರ‍್ತೀ. ನಾನು ಬರ‍್ತೀನಪ ನಿರುವಿಲ್ಲ’[7] ಪರಮಾತುಮ ಜೋಳಿಹಿ ಹಿಡ್ಕಂಡ, ಕೈಯ್ಯಾಗ ಒಂದು ಬೆತ್ತ ಹಿಡ್ಕಂಡ, ಮೊದ್ಲು ಎಲ್ಲಿಗೆ ಬಂದ ಪರುಮಾತುಮ. ಆಗ ನೋಡ್ರಿ, ಹರಳಯ್ಯ ಆಗ್ಗೂ ಬಡವ ಈಗ್ಗೂ ಬಡವ. ಒಂದು ಕರ ಸತ್ತಿತ್ತು. ಅದನ್ನು ಮುಂದಿಟ್ಟುಕೊಂಡು ಚಿಂತಿಮಾಡ್ತ ಕುಳ್ತಾನೆ. ಯಾಕೆ? ಆಗತ ಜ್ವಾಳಿಲ್ಲ. ಊಟ ಮಾಡಾಕ ಜತಿ[8] ಇಲ್ಲ. ಆ ಆಹಾರ ಏನೋ ಸಿಕ್ತಪ. ಆದರೆ ಜ್ವಾಳಿಲ್ಲಿಲ್ಲ. ಏನು ಮಾಡ್ಕೊಂಡ ಊಟ ಮಾಡ್ತಿ ಇದನ್ನು. ಆ ಸತ್ತ ಕರ‍್ದ ಮುಂದೆ ಚಿಂತಿ ಮಾಡ್ತಾ ಕುಂತಾಗ ಪರಮಾತುಮ ಹರಳಯ್ಯನ ಮುಂದಕ್ಕೆ

ಕ್ವಾರಣ್ಯ ಇಟ್ಟನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ತಾನೇ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |’

ಕ್ವಾರಣ್ಯ ಕೇಳೋ ತಡ ಹರಳಯ್ಯ ಮ್ಯಾಲಕ್ಕೆ ನೋಡಿದ ಪರಮಾತುಮ ನಿಂತಾನ್ರಿ, ‘ಅಹಾ ಪರಮಾತುಮ ಈಗ ಏನ ಗತಿ ಮಾಡ್ಲಿ? ಹಣ ಎಲ್ಲಿಂದ ತರ‍್ಲಿ. ಈಗ ಮುಂದಕ ಹೋಗು ಅಆಂತೀನಿ ನನಗೆ ಪಾಪ ಬರ‍್ತದ. ಆದ್ರೆ ನಾಳೆ ಬಾ ಹೋಗಪ ಅಂತೀನಿ, ಆದ್ರೆ ದೋಷ ಬರ‍್ತದೆ. ಆದ್ರೆ ಏನ್ ನೀಡ್ಲಿ ನನ್ನಲ್ಲಿ ಏನೂ ಇಲ್ಲ. ಅಂದು ಏನ್ ಮಾಡಿದ. ಆ ‘ನಾನು ಏನೂ ಇಲ್ಲ ಅಂದು ಕಳ್ಸಬಾರ್ದಪ’’ ಅಂದು. ಆ ಸತ್ತಕರ ತಗೊಂಡು ನೀಡಕೆ ಹೋದ. ಪರಮಾತುಮ ಜೋಳಿಗೆ ಒಡ್ಡಿದ. ಆ ಜೋಳಿಗ್ಯಾಗ ಸತ್ತ ಕರ ಹಾಕಿದ. ಹಾಕಿದ ಬಳಿಕ ಸತ್ತಕರ ತಗಂಡು ಪರಮಾತ್ಮನು ಊರ ಹಿಂದಕ್ಕೆ ಹೋಗಿ ಅದ್ರ ಹೊಟ್ಟಿ ಚಿಗಿದ[9] ಅದ್ರಗ ಇದ್ದಂತ ಹೇಸಿಗಿನ ಕರ‍್ಸು[10] ತಗೊಂಡು ಮೈ ತುಂಬ ಬಳ್ಕಂಡ. ಕಳ್ಳು ತಗಂಡು ಜನಿವಾರ ಅಕ್ಕೆಂಡ. ಚರ್ಮ ತಗಂಡು ಜೋಳಗಿಕಟ್ಟಿ ಮುಂಗೈಗೆ ಜೋಳಿಗೆ ಅಕ್ಕೆಂಡ. ಗಾವ ಗುಬ್ಬು ನಾರ‍್ತಾನು. ಅಂಗವಿಕಾರಿಯಾಗಿ ಪರಮಾತುಮ.

ಬಸವಣ್ಣನ ದ್ವಾರಬಾಗಲಿಗಿ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಪರಮಾತಮ ಬಂದಾನಯ್ಯೋ | ಸೋಕೀರ ಮೂವ ತಾಜೀಜಿ |

ಪರಮಾತುಮ ದ್ವಾರಬಾಗಿಲಗೆ ಬಂದಾನು.ದ್ವಾರ ಬಾಗಲು ಕಾಯೋ ದುಂಡಾಳುಗಳು ‘ಆ ಮಕ್ಳ, ಮಕ್ಳ ಬಸವಣ್ಣೋರು ಸಕ್ರಿ ಊಟ ನೀಡ್ತಾರಂತೆ ಸ್ವಲ್ಪ ಒಳಗೆ ಬೀಡ್ರೀ ಊಟ ಮಾಡಿ ಹೋಗ್‌ಬಿಡ್ತಿನಿ.’ ನೋಡ್ರೀ ಅವರ‍್ಗ ಪರಮಾತುಮ ಅಂತ ಗೊತ್ತಿಲ್ಲ. ಏನಂತಾರು ‘ಲೇ ಅವರು ಮಹಾಸರಣ್ರು, ಜಂಗಮರು, ಶಿವಶರಣು,ಊಟಕ್ಕೆ ಕುಂತಾರೆ ಗಾವ್‌ಗಬ್ಬು ನಾರ‍್ತಿ, ಒಳಗ ಬರ‍್ತಿಯಂತಿಯಲಲೇ ಮಂಗ, ನಾಲೆ ಬಾ ಹೋಗಲೇ ಅನಕಂತಾ ಬಾ ಹೋಗಲೇ’ ಹಠ ಮಾಡಿದ್ರು, ದ್ವಾರ ಬಾಗಿಲು ಕಾಯೋ ದುಂಡಾಳು. ‘ಆಗ್ಲಪ, ನಾವೆಂಗೇ ಇರ‍್ಲಿ, ನಾನೆಂಗೇ ನಾರ‍್ಲಿ, ಸ್ವಲ್ಪ ಒಳಬಾಗ್ಲಕ ಬಿಡಪ ಇಲ್ಲೇ ಕುಂತು ಊಟ ಮಾಡಿ ಹೋಗ್‌ಬಿಡ್ತಿನಿ.’ ‘ಇಲ್ಲಯ್ಯ ಬಿಡದಿಲ್ಲ’. ಹಠ ಮಾಡಿದ್ರು, ಪರಮಾತುಮನು ಹಠ ಮಾಡಿದ. ಅವರು ಕೇಳಲಿಲ್ಲ. ಆಗ ಪರಮಾತುಮ ಎರಡು ಸಲ ಬಡ್ಡ ಬಿಟ್ರು. ಬಡದಾಗ ಏನಂದ ಪರಮಾತ್ಮ ‘ಆ ಬಸವಣ್ಣೋರೆ ಹೋಗ್ತಿನಪ ನನ್ಗ ಹೊಡ್ದ ಹೊಡ್ತ ನಿನಗೊಂದು ನಿನ್ಹೆಂಡ್ತಿ ನೀಲಮ್ಮಗೊಂದು’ ಅಂದ.

ಹಿಂದಕ ತಿರುಗಿ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಮುಂದಕ ತಿರುಗಿ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಬಸವಣ್ಣ ಊಟ ನೀಡುತಾರೇ | ಸೋಕೀರ ಮೂವ ಜಾಜೀಜಿ |

ಪರಮಾತಮ ಹೋದ. ನೀಲಮ್ಮ ಆಗ ‘ಬಸವಣ್ಣೋರೆ ಸ್ವಲ್ಪ ತಡ್ರೀ’, ‘ಏನು’ ‘ಏನಿಲ್ಲ ನನ್ನ ಒಳ ತೊಡಿಯಲ್ಲಿ ಬಾಸಾಳ[11] ಮೂಡ್ತು’, ‘ಹೌದು ನನ್ನ ಬೆನ್ನ ಮೇಲೆನೂ ಬಾಸಾಳ ಮೂಡ್ತು’, “ಆ ಜಂಗಮರ, ಶರಣ್ರಾ, ಸ್ವಲ್ಪ ತಾಳ್ರಪ್ಪ ಹರಊಟ ಮಾಡಬ್ಯಾಡ್ರಿ’’ ಹೊರಗ ಬಂದಾನು ‘ಆ ದುಂಡಾಳು’ ‘ಏನು ಬುದ್ಧಿ’ ‘ಇಲ್ಯಾರನ ಬಂದಾರೇನು?’ ‘ಏ ಗಾವೆದಗಬ್ಬು ನಾರ‍್ತಿದ್ದ. ನೊಣ ಹೇಲ್ತಿದ್ವು. ಒಳಕ ಬಿಡು ಅಂದ. ನಾವಿಲ್ಲಾ ಅಂದ್ವಿ ಹಠ ಮಾಡ್ದ ಎಲ್ಡೇಟು ಹೊಡಿದ್ವಿ. ಗೋ ಅಲ್ಲಿ ಹೊಕ್ಕಾನ್ ನೋಡ್ರಿ’ ಆಗ ಬಸವಣ್ಣೋರಿಗೆ ಅರಿವಿಕಾತ್ರೀ[12] ‘ಅಯ್ಯೋ ಗುರುಗಳೇ ನಿನ್ನ ಮಹಿಮೆಯಲ್ದೇ ಇದು ಬದ್ಲಿ ಅಲ್ಲ’.

ಹೋಗಬ್ಯಾಡೋ ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ಓಡಿ ಓಡಿ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಬಸವಣ್ಣ ಹಿಂಬಾಲತ್ತ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಹಿಂಬಾಲತ್ತಿ ಬಿಟ್ಟಾನು. ಪರಮಾತುಮನು ತಿರುಗಿ ನೋಡ್ದಂಗ ಹೊಕ್ಕಾನು. ಮುಂದೆ ಹೋಗಿ ತಿರುಗಿ ನೋಡ್ತ ಬಸವಣ್ಣ ಓಡಿ ಬರ‍್ತಿದ್ದ. ಬಸವಣ್ಣ ಬರ‍್ತಾನೆ. ಆತನತ್ರ ಮನಸ್ಸು ಭಕ್ತಿ ನೋಡಬೇಕು ಎಂಗ ಐತಿ ಅಂದು ಪರಮಾತುಮ ಒಂದು ಹಾಳ ಹಗೇವು[13] ತಗ್ಗು, ಆ ಹಗೇವುದಾಗ ಕುಂತಗಂಡಬಿಟ್ಟ. ಆಗ ಬಸವಣ್ಣೋರು ಓಡಿ ಬಂದರು. ‘ಗುರುಗಳೇ, ಗುರುಗಳೇ ದಯಮಾಡ್ರಿ ತಪ್ಪಾತ್ಯುರೀ ಕ್ಷಮಿಸಿಬೇಕ್ರಿ’. ಹಾನಿಯಾತಲ್ಲೀ ದಯಮಾಡಿ ಕ್ಷಮಿಸ್ರೀ ಬೆಡ್ಕಂತಾನ್ರೀ, ಪರಮಾತುಮ ಮ್ಯಾಕ ನೋಡಿಂಗಿಲ್ಲ, ಏನ್ ಅನ್ನಂಗಿಲ್ಲ. ಮಖ ಎತ್ತಿ ನೋಡಂಗೇ ಇಲ್ಲ, ಸುಮ್ಕೆ ಕುಂತಬಿಟ್ಟಾನು. ‘ಅಯ್ಯೋ ಗುರುಗಳೇ ಟೈಮು ಮೀರಿ ಹೋಗ್ತತ್ರೀ ಜಂಗಮರು ಕುಂತಾರು, ಶಿವಶರಣ್ರು ಊಟಕ್ಕೆ ಕುಂತಾರೆ, ಸ್ವಲ್ಪ ದಯಮಾಡ್ರಿ’ ಏನ್ ಮಾಡಿದ್ರೂ ಮಾತಾಂಡಗಿಲ್ಲ. ಏಲ್ನು ಹೇಳಂಗಿಲ್ಲ. ಆಗ ಹಿಂಗಾದ್ರೆ ಬರಂಗಿಲ್ಲ ಅಂದು. ಬಸವಣ್ಣೋರು ಆತನ ಡಿಂಬ[14] ಹಿಡ್ಕಂಡು ಭುಜ ಹಿಡ್ಕಂಡು ಮ್ಯಾಕೆತ್ತಿ ಬಿಟ್ಟ. ಎತ್ತಿದಾಗ ಪರಮಾತುಮ ಏನಾದ ಹಗೇವು ತುಂಬಾ ಕೆಟ್ಟ ರಗುತ ಕೀವಾಗಿ ನಿಂತ್ಕಂಡ ಬಿಟ್ಟ. “ಆಹಾ, ಆಹಾ, ರಕ್ತ ಕೀವು ನಾನ್ ಅನಬಾರ‍್ದು. ಇದು ರಕ್ತ ಕೀವಲ್ಲ. ಇದು ಶಿವನ ಅಮೃತ.’’ ಅಂದು ತನ್ನ ತಲೆ ಮ್ಯಾಗ್ಲ ಮುಂಡಾಸ ತಗೊಂಡು ಸೆಡ್ಸಿ[15] ಆ ರಕ್ತ ಕೀವೆಲ್ಲ ಅದರಗ ಏಳ್ಕಂಡಬಿಟ್ಟ. ಎಳ್ಕಂಡು ಕತ್ರಿಮಲಿಕನ[16] ಗಂಟ್ ಹಾಕ್ದ. ಆಗನ ಕಾಲಕ್ಕೆ ಹರಳಯ್ಯಗೆ

ಉಬ್ಬಿಗಂಟು ಹುಟ್ಟ್ಯಾವಯ್ಯೋ | ಸೋಕೀರ ಮೂವ ತಾಜೀಜಿ |
ಬಸವಣ್ಣ ಕಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಆ ಗಂಟು ಹೊತ್ಕಂಡು ಬಸವಣ್ಣೋರು ಓಡಿ ಓಡಿ ಬರ‍್ತಾನು. ಜಂಗಮರು, ಶಿವಶರಣರು ಊಟಕ್ಕೆ ಕುಂತಿದ್ರಲ್ಲೀ ಅವರ್ ಮದ್ಯಕ ತಂದು ಗಂಟು ಎತ್ತಿ ಹಾಕ್ಬಿಟ್ಟ. ಎತ್ತಿಹಾಕ ತಡ. ರಕ್ತ ಕೀವು ಎಲ್ಲ ಸಿಡ್ದು ಸಿಡ್ದು ಪಂಗಡ ಪಂಗಡಾಗಿ ಗಬ್ಬು ನಾತ ಇಡ್ದ್‌ಬಿಡ್ತು. ಶಿವಶರಣ್ರು ಜಂಗಮ್ರು. ‘ಬಸವಣ್ಣೋರೆ ನೀವ ಸಕ್ರಿ ಊಟ ಹಾಕಿ ಏನ ಸಾರ್ಥಕ ಬಂತಯ್ಯ ಊಟ ಕೆಡ್ಸಿಬಿಟ್ಟೆಲ್ಲ, ನಿನ್ನ ಪಾಪ ಕರ್ಮ ನಿವಾರಣೆಯಾಗಲ್ಲ ನಾವ್ ಹೋಗ್ತಿವಪಬ್ಗಬ್ಬು ನಾತಿಕ್ಕಿಬಿಡ್ಡುತ ಎದ್ದೆಳ್ರಲೇ’, ಮೂಗು ಮುಚ್ಚೆಂಡು, ವಾಂತಿ ಮಾಡೋನು ಯಾವನೋ, ಎದ್ದು ಓಡಿಹೋಗಾನು ಯಾವನೋ, ನೋಡ್ರಿ ಜಂಗಮ್ರು ಶಿವಶರಣ್ರು, ಎಲ್ಲ ತಿಪರಂಜಿ[17] ಕೆರಿಗೆ ಸ್ನಾನ ಮಾಡಕ ಹೋದ್ರು. ತಿಪರಂಜಿ ಕೆರಿ ಸ್ನಾನಕ್ಕ ಹೋಗ್ಯಾರು. ಲಿಂಗ ಬಿಚ್ಚಿದ್ರು ಏರಿಮ್ಯಾಗ ಇಟ್ರು, ವಸ್ತ್ರ ತೆಗೆದು ಏರಿಮ್ಯಾಗ ಇಟ್ರು, ನೀರೆಗಿಳಿದ್ರು ಕೆರಿಯಾಕ ಇಳಿಯತಡ, ಆ ಕೆರಿತುಂಬಾ ರಕ್ತ ಕೀವಾಗಿ ನಿಂತ್ಗಂಡಬಿಡ್ತು. ‘ಅಲೆಲೆಲೇ ಬರ್ರೆಲೆ ರಕ್ತ ಕೀವಾತು ಬರ್ರೆಲೆ ಮ್ಯಾಕೆ ಬರ್ರೆಲೆ’ ಅಂದು ಕೆರಿಮ್ಯಾಗ ಬಂದು ನೋಡ್ತಾರೆ. ಲಿಂಗಬಿಚ್ಚಿದ್ರಲ್ಲಾ. ಆ ಸಾಸಿರ ಕೋಟಿ ಲಿಂಗ ಅದು ಮಾಯವಾಗಿ ಹೋತಂತ್ರೀ ಬರೇ ವಸ್ತ್ರ ಇತ್ತಂತ್ರೀ. ಆಗಂದ್ರು ಜಂಗಮರು ‘ಆಯ್ತುಯ್ಯ ಲಿಂಗ ಹೋತು ನೀರಾಕೆ. ವಸ್ತ್ರ ಸಿಕ್ತು ಕೈಯಾಕೆ, ಬರೇ ವಸ್ತ್ರದಾಗೇನೈತ್ರೋ ಲಿಂಗಿಲ್ಲದ ಬಳಿಕಾ.

ಇವರೆ ಮುಸಲ್ಮಾನ್ರು ಆಗ್ಯಾರಯ್ಯೋ | ಸೋಕೀರ ಮೂವ ತಾಜೀಜಿ |
ಅಲ್ಲಿಗೆ ಮುಸುಲ್ಮಾನ ಹುಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |

ಮುಸುಲ್ಮಾನ ಹುಟ್ಟಿದ. ಆಗಿನ ಕಾಲಕ್ಕೆ ಮುಸುಲ್ಮಾನ್ರು ಅದ್ರು. ಅವರ ಕತಿ ಆಗಿರ‍್ಲಿ. ಬಸವಣ್ಣೋರು ಚಿಂತಿಮಾಡ್ತ ಕುತ್ಗಂಡ. ‘ಆಹಾ ಪರುಮಾತುಮ ನನ್ನ ಪಾಪ ಕರ್ಮ ಇವು ನಿವಾರಣೆ ಆಗ್ಲಿಲ್ಲ ಜಂಗಮರು ಊಟ ಮಾಡ್ಲಿಲ್ಲ. ಶರಣ್ರು ಊಟ ಮಾಡ್ದಂಗ ಹೋಗಿಬಿಟ್ರು, ಇದಕ್ಕೆ ಏನ್ ಗತಿ ಮಾಡ್ಲಿ. ಪಾಪ ಉಳಿತು ಕರ್ಮ ಉಳಿತಲ್ಲಾ’ ಅಂತ ಚಿಂತಿಮಾಡ್ತಾ ಕುಳಿತಾಗ ಪರುಮಾತುಮ, ಬಸವಣ್ಣನ ಬೆನ್ನಿಂದೆ

ಪ್ರತ್ಯಕ್ಷವಾಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ತಡಿಯೋ ತಡಿಯೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |

“ಆ ಬಸವಣ್ಣೋರೆ ಚಿಂತಿಮಾಡಬೇಡಪ ಇವತ್ತಿಗೆ ಇಲ್ಲಿಗೆ ನಿನ್ನ ಪಾಪ ಕರ್ಮ ಎಲ್ಲವೂ ನಿವಾರಣೆಯಾಗಿ ಹೋತು. ಈ ಕಲ್ಯಾಣ ಪಟ್ಣಕ್ಕೆ ಅಧಿಕಾರಿಯಾಗಿ, ರಾಜಾ ಆಗಿ ನೀನು ಕಲ್ಯಾಣಪಟ್ಟ ಆಳಪ’’ ಅಂದು ಬಸವಣ್ಣೋರಿಗೆ ಕಲ್ಯಾಣಪಟ್ಣ ಒಪ್ಪ್ಸಿ ಪರಮಾತುಮ ಕೈಲಾಸ ಸೇರ‍್ಕೆಂಡ್ಕಾಂತೆ.

ಬಸವಣ್ಣೋರೆ ಕಲ್ಯಾಣಪಟ್ಣ ಆಳಾತಾರೇ | ಶಿವನ ನಯನ ದೇವೈ |
ಬಸವಣ್ಣ ರಾಜಾ ಆಗ್ಯಾನಯ್ಯೋ | ಶಿವನ ನಯನ ದೇವೈ |
ಕಲ್ಯಾಣಪಟ್ಟಣ ಆಳಾತಾರೇ | ಶಿವನ ನಯನ ದೇವೈ |

ಕಲ್ಯಾಣಪಟ್ಣ ಆಳತಾನ್ರೀ ಬಸವಣ್ಣೋರು ರಾಜಾಗಿ, ಸಿಂಹಾಸನದ ಮೇಗ ಕುತ್ಗಂಡು. ಅವರ ಕತಿ ಹಾಗಿರ‍್ಲಿ. ಅಷ್ಟತ್ತಿಗೆ ಏನಾತ್ರೀ ಕಲಿಯುಗ ಅಲ್ಲೆಲ್ಲಾ ಕಲಿಯುಗ ಹೆಚ್ಚಿತು. ಕಲಿಯುಗ ಹೆಚ್ಚಿದಾಗ ನರಕಲಿಯೊಳಗ.

02_35_GBK-KUH

ಐದು ಮಂದಿ ಶರಣರಯ್ಯೋ | ಸೋಕೀರ ಮೂವ ತಾಜೀಜಿ |
ಐದು ಶರಣರು ಇದ್ದಾರಯ್ಯೋ | ಸೋಕೀರ ಮೂವ ತಾಜೀಜಿ |

ಐದು ಮಂದಿ ಶರಣು, ಯಾರ‍್ಯಾರು ಅನ್ಪೌದ್ರಿ, ಕೂಲಹಳ್ಳಿ ಮದ್ದಾನಸ್ವಾಮಿಗಳು, ಕಣಗಲಿ ಕೆಂಪಯಯ್ಯ, ಕೋಲಶಾಂತಯ್ಯ, ಹಟ್ಟಿತಿಪ್ಪಯ್ಯ, ಕೊಟ್ರೇಶ.

ಐದು ಮಂದಿ ಶರಣರಯ್ಯೋ | ಸೋಕೀರ ಮೂವ ತಾಜೀಜಿ |
ಅವರೆ ಕಲಿಯೊಳಗೆ ಇದ್ದಾರಯ್ಯೋ | ಸೋಕೀರ ಮೂವ ತಾಜೀಜಿ |

ಕಲಿಯೊಳಗಿದ್ದಾರ್ರೀ, ಕಲಿಯೊಳಗಿದ್ದಾಗ, ಮೆರಿತಾ ಮೆರಿತಾ ಸಂಚಾರ ಮಾಡ್ತಾ ಬರಕಾಲ್ದಲ್ಲಿ ಕಲಿಯುಗ ಅಲ್ಲಿ ಗೆಚ್ಚಾಗ್ತ ಬಂತು. ಹೆಚ್ಚಾಗ್ತ ಬಂದಾಗ ಪಾಪ ಕರ್ಮಗಳು ಚಾಲಾದವು. ಚಾಲಾದಾಗ ಐದು ಮಂದಿ ಶರಣ್ರು ಮಾತಾಡ್ತಾರೆ. ತಿಪ್ಪೇಸ್ವಾಮಿ, ಕೊಟ್ರೇಶ, ಮದ್ದಾನಸ್ವಾಮಿ, ಕಣಗಲಿ ಕೆಂಪಯ್ಯ, ಅರಸೀಕೆರೆ ಕೋಲ ಶಾಂತಯ್ಯ ‘ಆಯ್ತಪ ಪಾಪ ಕರ್ಮಗಳು ಚಾಲಾತು ಇನ್ನ. ನಾವು ನೋಡಬಾರ್ದಪ ಪಾಪಕರ್ಮ, ಆದ್ರೆ ಕೈಲಾಸದೊಳಗೆ ಈವತ್ತಿನ ಕಾಲಕ್ಕೆ ಪಾರ್ವತಿ ಪರಮಾತುಮನ್ನು ಲಗ್ನಂತೆಪಾ ಕೈಲಾಸ ಪಟ್ಲಕ್ಕೆ ಹೋಗಿ ಆತನ ಮದುವೆ ಮಾಡಬೇಕ್ರಯ್ಯ’ ಅಂದು ಕಲಿಯಾಗ ಇದ್ದ ಶರಣ್ರು,

ಕೈಲಾಸಕ ಹೋಗುತಾರೇ |ಸೋಕೀರ ಮೂವ ತಾಜೀಜಿ |
ಐದು ಶರಣರು ಇದ್ದಾರಯ್ಯೋ | ಸೋಕೀರ ಮೂವ ತಾಜೀಜಿ |

ಕೈಲಾಸಕ್ಕೆ ಹೋದಾಗ ಪಾರ್ವತಿ ಪರ ಮಾತುಮನ್ನ ಲಗ್ನ ಪ್ರಾರಂಭ ಆತಂತ್ರೀ. ಆದಾಗ ಪರಮಾತುಗ ತಾಳಿಕಟ್ಟೊ ಮಂಗಳಸೂತ್ರ ಗೊತ್ತಿಲ್ರೀ, ಅಂತ ಮಹಾತುಮುಗ. ಏನು ಕಟ್ಟಬೇಕು? ಯಂಗ ಮಾಡ್ಬೇಕು? ಕಾರ‍್ಯ ಎಂಗ ಮಾಡ್ಬೇಕು? ಆತ್ಗ್ ಗೊತ್ತಿಲ್ಲ. ಮಹಾತುಮುಗೆ. ಆತ ಶರಣ್ರೆಲ್ಲಾ ಸೇರಿಬಿಟ್ಟಾರು. ಸೇರಿದಾಗ ನರಕಲಿಯೊಳಗೆ, ಆಗ ಬಸವಣ್ಣೋರು ಹೇಳ್ತಾರೆ. ‘ಗುರುಗಳೇ ತಾಳಿ ಮಾಡೋದು ಯಾರಿಗೆ ಗೊತ್ತಿಲ್ರೀ ಹರಳಯ್ಯನ ಬಿಟ್ಟು ಇನ್ನು ಯಾರಿಗೆ ಗೊತ್ತಿಲ್ಲಂದ’ ಆಗ ಹರಳಯ್ಯನ ಕರಿಯಾಕ ಕಳ್ಸಿ ಎಂದು ಪರಮಾತುಮು ಕೇಳ್ದ ‘ಹರಳಯ್ಯನೋರೆ, ನೀನು ನನಿಗಿನ ದೊಡ್ಡೋನಪ ಆದ್ರೆ ಈಗ ಲಗ್ನಾಗ್ತೀನಿ. ಆ ಮಂಗಲಸೂತ್ರ ಎಂಗ ಕಟ್ಟೇಕು? ಅದು ಎಂತದು? ಸ್ವಲ್ಪ ನಿನಗೆ ಗೊತ್ತಂತೆ ಹೇಳ್ಬೇಕು’ ಅಂದ. ಅಂದಾಗ ಹರಳಯ್ಯ ಹೇಳ್ದ. ಆಲ್ರೀ ಆಗಿನ ಕಾಲಕ್ಕ ಬಂಗಾರ ಎಲ್ಲಿದ್ದು. ಮಣಿ ಎಲ್ಲಿದ್ದು, ದಾರ ಎಲ್ಲಿದ್ದು, ಇಲ್ಲ. ಈ ನಮ್ಮ ಹರಿಜನ ತಂಗಡಿ ಕಟ್ಟಿಗಿ ಬಡಿತಾರಲ್ರೀ ಹಸೆಕಟ್ಟಿಗಿ ಬಡಿತಾರೆ. ಆ ತಂಗಡಿಕಿ ಹೂವು[18] ತಗಂಡ ಬಂದಾ. ಇದೆ ನೋಡ್ರಿ ಮಂಗಲಸೂತ್ರ ಇದನ್ನ ಕಟ್ಟರೀ?’ ಅಂತ ಹೇಳ್ದ. ಆಗ ಪಾರ್ವತಿ ಕೊರಳಾಕೆ ಆ ತಂಗಡಿ ಹೂವು ಕಟ್ಟಿ ಪರಮಾತುಮ.

ಗುರುವೆ ಲಗ್ನ ಆಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ಮದುವೀ ಆಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ತಂಗಡಿ ಹೂವೇ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಕೊರಳ ಒಳಗೆ ಕಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಆಗ ತಂಗಡಿಕಿ ಹೂವು ಕಟ್ಟಿದ್ರಂತ್ರೀ ಕೊರಳಾಕೆ. ಅದೇ ಮಂಗಲಸೂತ್ರ. ಈಗ ನೋಡ್ರಿ ಪರೀಕ್ಷೆ ಮಾಡ್ರಿ ಬಂಗಾರದ ಬಣ್ಣ ಮತ್ತೆ ತಾಳಿ ಮಾಟ[19] ಐತ್ರೀ ಆ ಹೂವು. ಅದನ್ನು ಕಟ್ಟಿ ಶರಣ್ರಿಗೆ ಹೇಳಿದ್ದು ಪಾರ್ವತಿ ಪರಮಾತುಮ. ‘ಬಸವಣ್ಣೋರೆ, ಬಂದೋರಿಗೆ ಶರಣ್ರಿಗೆ ಎಲ್ಲರಿಗೆ ನೀವೇ ಸಕ್ರಿ ಊಟ ಹಾಕಪ, ಅವ್ರು ಊಟ ಮಾಡಿ ಅವರವರ ಸ್ಥಳಕ್ಕೆ ಹೋಗ್ ಬಿಡ್ಲಿ’. ಅಂದಾಗ ಬಸವಣ್ಣೋರು, ಸಾಸಿರಕೋಟಿ ಸಕ್ರಿ ಚೀಲ ಬಾಯಿಬಿಚ್ಚಿ ಬರೇ ಚೀಲ ಕಡಿಗೆ ಹೊಗಿತಾನು. ಅದು ನೋಡ್ರಿ ದೊಡ್ಡದೊಂದು ಗುಡ್ಡದಂಗಾತು, ಎಲ್ಲ ಚೀಲ ಮುಗೀತು ಇನ್ನೊಂದಿತ್ತು. ಆಗ ತಗೊಂಡು ಆಡಿ ಮಾಡಿ ಕೊಡುವುತ್ತಿದ್ದ ಆ ಸಕ್ರಿ ಚೀಲ್ದಾಗ ಗೋಣಿ ಚೀಲ್ದೊಳಗೆ.

ಪಿಂಡೊಂದು ಬಿದ್ದಾತೈಯ್ಯೋ | ಸೋಕೀರ ಮೂವ ತಾಜೀಜಿ |
ಗೋಣಿ ಚೀಲ್ದಾಗೆ ಬಿದ್ದೈತೈಯ್ಯೋ | ಸೋಕೀರ ಮೂವ ತಾಜೀಜಿ |
ಸಕ್ರಿ ಚೀಲ್ದಗ ಬಿದ್ದಾನಯ್ಯೋ | ಸೋಕೀರ ಮೂವ ತಾಜೀಜಿ |

‘ಇದೇನಪ ಕೂಸು ಬಿತ್ತಲ್ಲ, ಏನಿರ‍್ಬೌದು. ಆ ಜಂಗಮರಾ ಶರಣ್ರಾ. ಸ್ವಲ್ಪ ತಡ್ರೆಪ ಊಟ ಮಾಡ್ಬೇಡ್ರಿ’ ಆ ಕೂಸು ಎತ್ತಿಗೊಂಡ ಬಸವಣ್ಣ ಪರಮಾತುಮನ ಸಿಂಹಾಸನಕ್ಕೆ

ಓಡಿ ಓಡಿ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಕೂಸ ತಗಂಡ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |

‘ಆ ಬಸವಣ್ಣೋರೆ, ಯಾಕೆ ಗಾಬ್ರಿಯಿಂದ ಬರ‍್ತೀರಲ್ಲ ಏನು?’ ಏನಿಲ್ಲ ನೋಡ್ರಿ ಸಕ್ರಿ ಚೀಲ ಇತ್ತಲ್ಲ, ಅದನ್ನು ಬಾಯಿ ಬಿಚ್ಚಿ ಕೊಡವಿದೆ, ಎಲ್ಲ ಚೀಲ ಮುಗುದ್ವು ರೀ, ಇದೊಂದೇ ಕಡೇ ಚೀಲ ಇತ್ತು. ಅದನ್ನು ತಗೊಂಡು ಕೊಡುವಿದೆ. ಆ ಚೀಲ್ದದಿಂದ ನೋಡಿ ಇದು ಕೂಸು ಕೆಳಗೆ ಬಿತ್ತು’. ‘ಎಲ್ಲಿ ತಗೊಂಡ ಬಾರಪ’ ಆಗ ಪಾರ್ವತಿ ಪರಮಾತುಮ ಆ ಕೂಸ್ನ ಮುಂದಿಟ್ಟ್ಗಂಡು ವರ್ಣಿಸ್ತಾರೆ. ಆಗ ಪಾರ್ವತಿ ಹೇಳಿದ್ಲು ‘ಬಸವಣ್ಣೋರೆ, ಸಕ್ರಿಚೀಲ ಗೋಣಿ ಚೀಲದೊಳಗೆ ಹುಟ್ಟಿದ್ರಿಂದ ಕೈಲಾಸದೊಳಗೆ ಇಲ್ಲಿಗೆ ಗೋಣಿಬಸವೇಶ್ವರ ಹುಟ್ಟಿದ್ನಪ’ ಇಲ್ಲಿಗೆ

ಬಸವಣ್ಣ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಗೋಣಿ ಬಸವ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಗೋಣಿ ಚೀಲ್ದಾಗ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ಸಕ್ರಿ ಚೀಲ್ದಗೆ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಇಲ್ಲಿಗೆ ಗೋಣಿಬಸವೇಶ್ವರ ಹುಟ್ಟಿದ ಅಂತ ಕೈಲಾಸದೊಳಗೆ ಕೊಂಡಾಡಿ. ‘ಬಸವಣ್ಣೋರೆ ಆ ಊಟ ಚಾಲುಮಾಡಪ ಈ ಕೂಸು ಇಲ್ಲೇ ಇರ‍್ಲಿ’ ಅಂತ ಅವರತ್ರ ಕೂಸು ಇಟ್ಕೊಂಡಾರು. ಬಸವಣ್ಣೋರು ಸಕ್ರಿ ಊಟ ನೀಡ್ತಾರು. ಜಂಗಮುರೆಲ್ಲಾ ಊಟ ಮಾಡಿ ಅವರವರ ಸ್ಥಳಕ್ಕೆ ಅವ್ರು ಹೋಗಬೇಕಲ್ರಿ ಎಲ್ಲ ಪರಮಾತುಮನ ಪಾದ ಕಂಡು ಅವರವರು ಸ್ಥಳಕ್ಕೆ ಅವ್ರು ಹೋಗ ಕರಗ ಐದು ಮಂದಿ ಶರಣ್ರು. ಉಳ್ಕಂಡ್ರು, ಯಾರ‍್ಯಾರು? ಅದೇ ಮದ್ದಾನಸ್ವಾಮಿ, ಕೆಂಪಯ್ಯ, ಕೋಲಶಾಂತಯ್ಯ, ಹಟ್ಟಿ ತಿಪ್ಪಣ್ಣ. ಕೊಟ್ರೇಶ. ಅವರು ‘ಆ ಗುರುಗಳೇ ನಿಮ್ಮ ಕಾರ‍್ಯ ಮುಗೀತು. ಲಗ್ನ ಮುಗೀತು, ಊಟ ಮುಗೀತು, ನಾವಿನ್ನು ಕೈಲಾಸದಲ್ಲಿ ಇರೋದಿಲ್ರೀ ಮತ್ತೆ ಕಲಿಯ್ಯಾಗ ಹೋಗಿಬಿಡ್ತೀವ್ರಿ’. ‘ಕಲಿಯ್ಯಾಗ ಹೋಗ್ತೀರಿ?’ ‘ಹೌದು ಗುರುಗಳೇ’ ‘ಅಂಗಾದ್ರೆ ನೀವು ಕಲಿಗೆ ಹೋದಬಳಿಕ ಈ ಕೂಸು ನಿಮ್ಮಿಂದೆ ತಗೊಂಡೋಗ್ರಿ. ನರಕಲಿ ಒಳಗೆ ಮಕ್ಳಿಲ್ಲದ ಬಂಜೇರು, ನಿರ್ವಾಣಿ[20]ಗಳು ಮಕ್ಳನ್ನು ಕೇಳಿದ್ರೆ ಅವರಿಗೆ ಇದನ್ನು ತಗೊಂಡೋಗಿ ಕೊಟ್ಬಿಡ್ರಪ. ‘ಆ ಬಸವಣ್ಣೋರೆ, ನೀನು ಕಲಿಯೊಳಗೆ ಹೋಗಿ ಕುಲಹದಿನೆಂಟು ಜಾತಿ ಮನಿಗೆಲ್ಲ ಬಸವಣ್ಣಾಗಿ ಮೆರಿಯಪ ನೀನು ಕಲಿಗೆ ಹೋಗಪ’ ಆಶೀರ್ವಾದ ಕೊಟ್ಟು ಗಂಡ ಹೆಂಡ್ತಿ. ಐದು ಮಂದಿ ಶರಣ್ರ ಕೂಸು ಕೈಯಾಗ ಕೊಟ್ರಂತ್ರೀ ಗೋಣಿಬಸವೇಶ್ವರನ್ನ. ಐದು ಮಂದಿ ಶರಣ್ರು, ಗೋಣಿ ಬಸವೇಶ್ವರನ್ನು ತಗೊಂಡು ಮುಂದೆ ಎಲ್ಲಿಗೆ ಬಂದಾರು.

ಕಲ್ಯಾಣದೊಳಗೆ ವಿಚಾರನಾರಿ[21] ಈ ವಿಚಾರನಾರಿ ಅಂದ್ರೆ ಆಕಿ ಹರಿ ಮತದಾಕಿ. ಆಯಮ್ಮನ ಮನಿಗೆ ಬಂದಾರು ಶರಣ್ರು. ‘ಅಯ್ಯೋ ಶರಣ್ರಾ ಮಹಾತ್ಮರು ನಮ್ಮನಿಗೆ ಬಂದ್ರು ನಮ್ಮದು ನೋಡಿದ್ರೆ ಇಂಥ ಜಾತಿ’, ಆಯಮ್ಮ ಹೆದರಿದ್ಲು. ‘ಆ ವಿಚಾರನಾರಿ’ ‘ಮತ್ತೇನು ಗುರುಗಳೇ’ ‘ಏನಿಲ್ಲಮ್ಮ ನಾವು ಇನ್ನ ಕಲಿಗೆ ಹೋಗ್ತೀವಿ. ಹಸಿವು ಬಾಳ ಕೆಟ್ಟದ್ದು ಹಸಿವಾಗೈತೆ. ಸ್ವಲ್ಪ ಅಡಿಗಿ ಮಾಡಮ್ಮ ಊಟ ಮಾಡಿ ಹೋಗ್‌ಬಿಡ್ತೀವಿ. ‘ಅಯ್ಯೋ ಗುರುಗಳೇ ಗುರುಗಳೇ ಏನಿದು ಅನ್ಯಾಯರೀ’ ‘ಏನಮ್ಮ’ ‘ನಾನ್ ನೋಡಿದ್ರೆ ಹರಿಮತ ದೋಳು ನೀವ್ ಶಿವಶರಣ್ರು ನನ್ನ ಮನಿಗೆ ಎಂಗ ಊಟಮಾಡ್ತೀರಿ’. ‘ಆ ಹಾಗನ್ನ ಬೇಡಮ್ಮ ಅದು ನಿನಗೆ ದೋಷ. ನಮಗೆ ದೋಷಲ್ಲ. ಸುಮ್ನೆ ನೀನ್ ಅಡಿಗಿ ಮಾಡಮ್ಮ ಅದನ್ನೆಲ್ಲ ಭಿನ್ನಭೇದ ಮಾಡಬೇಡ’ ಅಂದ್ರಂತ್ರೀ. ಆಗ ವಿಚಾರನಾರಿ ಅಮೃತ ಪಾಯ್ಸ ಮಾಡಿದ್ಲಂತೆ. ಆಗ ಐದು ಮಂದಿ ಶರಣ್ರು ವಿಚಾರನಾರಿ ಮನೆಗೆ ಊಟ ಮಾಡಿ ಆಯಮ್ಮಗೆ ಆಶೀರ್ವಾದ ಕೊಟ್ಟು, ಶರಣ್ರು ಆ ಕೂಸು ತಗೊಂಡು ವಿಚಾರನಾರಿ ಮನಿ ಬಿಟ್ಟು ಎಲ್ಲಿಗೆ ಬಂದಾರು.

ಹಂಪಿ ಸರೋವರಕ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |
ಗುರು ಐದು ಮಂದಿ ಶರಣಾರಯ್ಯೋ | ಸೋಕೀರ ಮೂವ ತಾಜೀಜಿ |

ಐದು ಮಂದಿ ಶರಣ್ರು ಗೋಣಿಬಸವೇಶ್ವರ ಆರು ಮಂದಿ, ಹಂಪಿ ಸರೋವರಕ ಇಳದಾರು. ಹಂಪಿ ಸರೋವರಕ ಇಳಿದು ಹಂಪಿಯಲ್ಲಿ ಮಾಡ ಕರ್ತವ್ಯನೆಲ್ಲ ಮಾಡಿ, ಅಂದ್ರೆ ಎಣಿಸ್ದಂಗೆ ಲೆಕ್ಕಸಿಗ್ದಂಗೆ ದೇವಾನುದೇವತೆಗಳನ್ನೆಲ್ಲ ಮಾಡಿ ನಿಳೆ[22] ಹಾಕಿ ಹೆಸರಿಟ್ಟು ಹಂಪೆಪ್ಪ ಇದು ಹಂಪಿ ಸರೋವರ ಅಂದು ಅದಕ್ಕೆ ನಾಮಕಾರ್ತಿ ಇಟ್ಟು ಆ ಕೂಸು ತಗೊಂಡು ಹಂಪಿ ಬಿಟ್ಟು ಶರಣ್ರು

ಕೂಡ್ಲಿಗಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |
ಕೂಡ್ಲಿಗಿಯ ಹಿಂದಮಾಡಿ | ಸೋಕೀರ ಮೂವ ತಾಜೀಜಿ |
ಕುಪ್ಪಿನಕೇರಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |

ಕುಪ್ಪಿನಕೇರಿಗೆ ಬಂದಾರು. ಕುಪ್ಪಿನಕೇರಿಗೆ ಬರೊತ್ತಿಗೆ ಸೂರ‍್ಯ ಅಸ್ತಮಯವಾದ್ನಂತ್ರೀ. ಹೊತ್ತು ಮುಣಿಗೀತಂತೆ. ಆಗ ಶರಣ್ರು ಮಾತಾಡ್ತಾರೆ. ‘ಏನಪ, ತಿಪ್ಪಣ್ಣ ಕೊಟ್ರೇಶ ಸೂರ‍್ಯ ಮುಣುಗಿದ ಎಲ್ಲಿ ವಸ್ತಿ[23] ಮಾಡೋನು? ಎಲ್ಲಿ ಇರೋನು?’ ಮಾತಾಡಕರಗ ಮದ್ದಾನ ಸ್ವಾಮಿ ಹೇಳಿದ ‘ಮತ್ತೆಲ್ಲಿ ಇರ‍್ತಿಯಪ್ಪಾ ಈ ಊರಾಗ ಯಾವದಾದರು ದೇವಸ್ಥಾನ ಇದ್ರೆ ಆ ಗುಡಿಯಾಗ ಇದ್ದು ಮುಂಜಾನೆದ್ದು ಹೋಗಾನು ನಡ್ರೋ’ ನೋಡ್ರೀ ಅಂಗಂದು ಕುಪ್ಪಿನಕೇರಿ ಹನುಮಂತನ[24] ಗುಡಿಗೆ ಬಂದಾರು. ‘ಹನುಮಂತರಾಯ, ನಾವೆ ಐದು ಮಂದಿ ಶರಣ್ರಯ್ಯ ಇಲ್ಲಿಗೆ ನಿನ್ನ ಬಳಿಗೆ ಬಂದ್ವಿ ಸೂರ‍್ಯ ಮುಣಿಗಿದ ಸ್ವಲ್ಪ ಜಾಗ ಕೊಡಪ, ಇಲ್ಲಿ ವಸ್ತಿ ಮಾಡಿ ಮುಂಜಾನೆ ಹೋಗಿ ಬಿಡ್ತೀವಿ’. ‘ಆಗ ಕುಪ್ಪಿನಕೇರಿ ಹನುಮಂತರಾಯ ಜಾಗ ಕೊಟ್ನಂತ್ರೀ ವಸ್ತಿ ಮಾಡಿದ್ರು, ಸೂರ‍್ಯ ಪ್ರಕಾಶಿಸಿದ ‘ಆ ಕೊಟ್ರೇಶ’ ಮ್ಯಾಲಿಕೆದ್ದಾನು. ‘ಮತ್ತೇನು’ ‘ಏನಿಲ್ಲ ನಮಗೆ ಆತ ಜಾಗ ಕೊಟ್ಟಾನಪ ಅಂಗೆ ಹೋಗ್ಬಾರ್ದಪ ಈತನಿಗೆ ಅಭ್ಯಂಜನ ಸ್ನಾನ ಮಾಡ್ಸಿ ಲಿಂಗದ ಪೂಜಿ ಮಾಡ್ಸಿ ಅಯ್ಯಾಚಾರ ಮಾಡಿ ಈತಗೆ ಲಿಂಗದೀಕ್ಷೆ ನೀಡಿ ಹೋಗ್ಬೇಕಪಾ, ಅಂಗಾ ಹೋಗಬಾರ್ದು’ ಅಂದು ಐದು ಮಂದಿ ಶರಣ್ರು ಕುಪ್ಪಿನಕೇರಿ ಹನುಮಂತರಾಯಗೆ ಲಿಂಗಧಾರಣೆ ಮಾಡಿ ‘ನಾವೆಲಿರ‍್ತೀವೋ ಎಲ್ಲಿ ನೆಲಿತೀವೋ ಅಲ್ಲಿ ನೀನು ಇರಬೇಕಪಾ’, ಅಂದು ಆಶೀರ್ವಾದ ಮಾಡಿ ಶರಣ್ರು ಕುಪ್ಪಿನಕೇರಿ ಬಿಟ್ಟು.

ಶಾಪುರಕೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |
ಶಾಪುರ ಹಿಂದಾಮಾಡಿ | ಸೋಕೀರ ಮೂವ ತಾಜೀಜಿ |
ಬೆಣ್ಣಿಹಳ್ಳಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |
ಬೆಣ್ಣಿಹಳ್ಳಿ ಹಿಂದಾಮಾಡಿ | ಸೋಕೀರ ಮೂವ ತಾಜೀಜಿ |
ಹರಪನಹಳ್ಳಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |
ಹರಪನಹಳ್ಳಿ ಹಿಂದಾಮಾಡಿ | ಸೋಕೀರ ಮೂವ ತಾಜೀಜಿ |
ಶೃಂಗಾರ ತೋಟ ಹಿಂದಾಮಾಡಿ | ಸೋಕೀರ ಮೂವ ತಾಜೀಜಿ |
ಬಾಗಳಿಗೆ ಬಂದಾರಯ್ಯೋ | ಸೋಕೀರ ಮೂವ ತಾಜೀಜಿ |

ಬಾಗಳಿಗೆ ಬಂದಾರು. ಅಲ್ಲಿಗೆ ಹೊತ್ತು ಮುಣುಗ್ತಂತ್ರೀ ‘ಆ ಇಲ್ಲಿಗೆ ಸೂರ‍್ಯ ಮುಳುಗಿದ್ನಪ ಇಲ್ಲೇ ಇರಾನು, ಏ ಬರ‍್ಯಪ ಕೆರಿ ಹಿಂದೆ ಕಲ್ಲೇಶ್ವರ ಮಠ ಐತೆ, ಆ ಕಲ್ಲೇಶ್ವರ ಮಠದಾಗ ಇರಾನು’ ಅಂತ ಶರಣ್ರು ಮಾತಾಡ್ಕೆಂಡು ಬಾಗಳಿ ಹಿಂದ ಮಾಡಿ ಬಾಗಳಿ ಕೆರಿ ಹಿಂದೆ ಕಲ್ಲೇಶ್ವರ ಮಠ ಐತ್ರಿ ಆ ಕಲ್ಲೇಶ್ವರ ಮಠ ಅಂದ್ರೆ, ಅದು ಕೈಲಾಸದ ಬಾಗ್ಲರೀ. ಈಗ್ಗಾದರೂ ಆಗ್ಗಾದ್ರೂ ಅದು ಕೈಲಾಸದ ಬಾಗ್ಲು. ಆ ಕಲ್ಲೇಶ್ವರ ಮಠಕ್ಕೆ ಬಂದು ಐದು ಮಂದಿ ಶರಣ್ರು ವಸ್ತಿ ಮಾಡ್ಯಾರು. ಕಲ್ಲೇಶ್ವರನ ಮಠ ಸೇರ‍್ಕೊಂಡು. ಗೋಣಿ ಬಸವೇಶ್ವರ‍್ಗ ಜೋಪಾನ ಮಾಡ್ತಾರು. ಅಮೃತ ಎರಿತಾರು. ಆಶೀರ್ವಾದ ಕೊಡ್ತಾರು. ದೊಡ್ಡೋನ ಆಗಪ ಅಂತಾರು. ಮಗನಿಗೆ ಜ್ವಾಪಾನ ಮಾಡ್ತಾರಿ. ಅದರ ಮ್ಯಾಲೆ ಶರಣ್ರು ಅಂತ್ರ, ಮಂತ್ರ, ತಂತ್ರ ಮಾಡೋದು ಮಕ್ಳಿಲ್ಲ ದೋರಿಗೆ ಮಕ್ಳು ಫಲ ಕೊಡೋದು, ಇದನ್ನು ಮಾಡ್ತಾರೆ. ಐದು ಮಂದಿ ಶರಣ್ರು. ಬಾಗಳಿ ಕಲ್ಲೇಶ್ವರ ಮಠದಾಗೆ ಇಂಗ ಮಾಡ್ತಾ ಆ ಮಠದಾಗೆ ಜೀವಿಸ್ತಾರೆ.

ಅವರಕತಿ ಅಲ್ಲಿರ್ಲಿ. ಮತ್ಯಾದು ಹೇಳ್ಬೇಕು. ಇನ್ನೊಂದ್ಕಡೆ ಕಲಿಯೊಳಗೆ
ಚಿಗಟೇರಿ ಗ್ರಾಮದಾಗೇ | ರಾಜ ಶಿವನೆನ ಮಾದೇವೋ ಮನವೇ |
ಚಿಗಟೇರಿಯ ಶಿವಪ್ಪ[25] ನವರೇ | ರಾಜ ಶಿವನೆನ ಮಾದೇವೋ ಮನವೇ |

ಚಿಗಟೇರಿ ಶಿವನಯ್ಯ ಈತ ಪಾಳೇಗಾರ, ಕತ್ತಿ ಮೊನೆಗಲ್ಲು ರಕ್ತ ಕುಡಿಯೋ ಜಾತಿ ಪಾಳೇಗಾರ್ರು ಅಂದ್ರಾ. ಆ ಶಿವನಪ್ಪನಿಗೆ ಸ್ವಲ್ಪ ರಾಜಕೀಯ ಸಿಕ್ಕಿತ್ರೀ. ಆದ್ರೆ ಶಿವನಪ್ಪನ ಅಕ್ಕ ಕನಕವ್ವ.

ಅಕ್ಕ ತಮ್ಮ ಇಬ್ಬಾರಯ್ಯೋ | ಸೋಕೀರ ಮೂವ ತಾಜೀಜಿ |
ಚಿಗಟೇರೇ ನನ್ನ ದೈವೇ | ಸೋಕೀರ ಮೂವ ತಾಜೀಜಿ |

ಶಿವನಯ್ಯಗ ರಾಜಕೀಯ ಸಿಕೈತೆ, ಹರಪನಳ್ಯಾಗ ಸಿಂಹಾಸನ ಆಳ್ಸಾನೆ. ಆರಮನಿ, ಸ್ಥಳ ಎಲ್ಲ ಚಿಗಟೇರಿ. ಒಡಹುಟ್ಟಿದ ಅಕ್ಕ ಕನಕಮ್ಮ ಮನೆಯೊಳಗೆ ವೇಶ್ಯ ಬಿಟ್ಟಿತ್ತು, ಸೂಳಿ ಬಿಟ್ಟಿತು, ಶಿವನಯ್ಯ ಒಂದಾನೊಂದು ದಿನದಲ್ಲಿ ಸಿಂಹಾಸನದ ಮ್ಯಾಲೆ ಕೂತ್ಗಂಡು ಸಿಂಹಾಸನ ಆಳ್ತಾ ಯೋಚ್ನಿ ಮಾಡ್ತಾನೆ. ‘ಅಲೆಲೇಲೇ ನಾನು ರಾಜ ಸುತ್ತ ಮೂವತ್ಮೂರಳ್ಳಿ ಪ್ರಜೆಗಳು ನನ್ನ ಪಾದ್ಕ ಬೀಳ್ತಾರೆ. ರಾಜ ಅಂತಾರೆ, ನನ್ನಂತ ರಾಜನ ಮನ್ಯಾಗ ಸೂಳಿದ್ರೆ ನನ್ನ ಮರ‍್ಯಾದೆ ಏನು? ಮಾನ ಏನು? ಸಿಂಹಾಸನಕ್ಕೆ ಅಪಮಾನ ಆಗ್ತದೆ, ನನ್ನ ಮನ್ಯಾಗ ಸೂಳಿ ಇರ‍್ಬಾರ್ದಪ, ನಮ್ಮಕ್ಕ ಇರ‍್ಬಾರ್ದಪ, ಈಗ ಹೋಗಿ ನಮ್ಮಕ್ಕನಿಗೆ ಹೊಡ್ದು ಬಡ್ದು ಏನೋ ಅತ್ಲಾಗೆ ಗದಿಮಿ[26] ಬಿಡ್ಬೇಕು’, ಶಿವನಯ್ಯ ಅಂಗದ್ಕಂಡು ಸಿಂಹಾಸನ ಇಳ್ದು.

ಚಿಗಟೇರಿಗೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಸೊಕ್ಕಿನ ಶಿವನಯ್ಯೋ | ಸೋಕೀರ ಮೂವ ತಾಜೀಜಿ |

ಚಿಗಟೇರಿಗೆ ಬಂದಾನು ಮನಿಮುಂದೆ ನಿಂತಾನು. ಅಕ್ಕ ಕನಕಮ್ಮ ತಮ್ಮನಿಗೆ

ತಮ್ಮಗ ನೀರಾ ತರ್ತಳಯ್ಯೋ | ಶಿವನ ನಯನ ದೇವೈ |
ಹೆದ್ರುತಾ ಬೆರ್ದುತಾ ಬಂದಾಳಯ್ಯೋ | ಶಿವನ ನಯನ ದೇವೈ |
ಅಂಜುತ ಅಳಕುತ ಬಂದಾಳಯ್ಯೋ | ಶಿವನ ನಯನ ದೇವೈ |

ಸೊಕ್ಕಿನ ಶಿವನಯ್ಯ ಅಂತಾನ್ರಿ ಕನಕಮ್ಮನವರೆ ನನಿಗೆ ನೀರು ಬೇಕಿಲ್ಲ. ಅರಗಳಿಗೆ ತಡ ಮಾಡ್ಬೇಡ ನನ್ನ ಮನಿ ಬಿಟ್ಟು ನಡಿ ನಡಿ ಅಂದ.

ಶಿವನಪ್ಪ ಅಂತಾದೇನೋ ಮಾಡಿದೆನಯ್ಯೋ | ಸೋಕೀರ ಮೂವ ತಾಜೀಜಿ |
ಅಂತಾದೇನೋ ಮಾಡಿದೆನಯ್ಯೋ | ಸೋಕೀರ ಮೂವ ತಾಜೀಜಿ |
ಕಳ್ಳಿ ಅಲ್ಲ ಸುಳ್ಳಿ ಅಲ್ಲ | ಸೋಕೀರ ಮೂವ ತಾಜೀಜಿ |
ರಂಡಿ ಅಲ್ಲ ಮುಂಡಿ ಅಲ್ಲೋ | ಸೋಕೀರ ಮೂವ ತಾಜೀಜಿ |
ಎಲ್ಲಿಗೆ ನಾನೇ ಹೋಗಾಲಯ್ಯೋ | ಸೋಕೀರ ಮೂವ ತಾಜೀಜಿ |

ಬೇಡ್ಕಣಕರಗಾ, ಸೊಕ್ಕಿನ ಶಿವನಯ್ಯ ರಾಜಾಧಿರಾಜ

ಹಾರಿ ಎದಿಗೆ ವದ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಅಕ್ಕನ ಎದಿಗೆ ವದ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಹೊರಗೆ ಹೊಂಡೇ ಕತ್ತೇ ಸೂಳೇ | ಸೋಕೀರ ಮೂವ ತಾಜೀಜಿ |
ನನ್ನ ಮನಿಯಾಗೆ ಇರಬೇಡೇ | ಸೋಕೀರ ಮೂವ ತಾಜೀಜಿ |

ನೆಲ್ದ ಮ್ಯಾಲೆ ಬಿದ್ದಾಳು, ಮ್ಯಾಲಕ್ಕೆದ್ದಾಳು, ಶಿವನಪ್ಪನವರೆ ಹೋಕ್ತಿನಪ, ಆದ್ರೆ

ಆಡಿನ ಮೊಲಿಯಂಗೆ ಅಕ್ಕ ತಮ್ಮ ಇಬ್ಬಾರಯ್ಯೋ | ಶಿವನನಯನ ದೇವೈ
ಹೋಗತೀನೋ ತಮ್ಮಾನವರೇ | ಶಿವನನಯನ ದೇವೈ |
ರಾಜಾ ಪಟ್ಟಾ ನಿನ್ನಾದಯ್ಯೋ | ಶಿವನನಯನ ದೇವೈ |
ಬೋಕಿ[27] ಪಟ್ಟಾ ನನ್ನದಯ್ಯೋ | ಶಿವನನಯನ ದೇವೈ |

ಹೋಗ್ತಿನಪ ಚೆನ್ನಾಗಿ ಬಾಳಯ್ಯ. ಆದ್ರೆ ನಾನು ಹೆಣ್ಣು ಉರ್ದಂಗೆ

ನಿನ್ನ ಮನಿಯು ಉರಿಯಾಲಯ್ಯೋ | ಸೋಕೀರ ಮೂವ ತಾಜೀಜಿ |
ಉಟ್ಟ ಸೀರಿ ಬಿಡಿಸ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಹಳೇ ಸೀರಿ ಉಡಿಸ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ತೊಟ್ಟ ಕುಬುಸ ಬಿಡಿಸ್ದ, ಹಳೇ ಕುಬುಸ ತೊಡಿಸ್ಥ. ‘ಆ ಹೊಂಟ ಬಿಡಮ್ಮ ನನಿಗೆ ಮುಖ ತೋರಸ್ಬಾರ್ದು, ನಡಿ ನಡಿ’ ಅಂದ. ನೋಡಿ, ಕನಕಮ್ಮ ರಾಜಕೀಯ ಬಿಟ್ಟು ದೇವತಾ ಅರಮನಿ ಬಿಟ್ಟು, ಮೂಗಂಡಿಗೆ ದುಃಖ ತುಂಬಿಕೆಂಡು.

ಅಡವಿ ದಾರಿ ಹಿಡದಾಳಯ್ಯೋ | ಸೋಕೀರ ಮೂವ ತಾಜೀಜಿ |
ಶೃಂಗಾರ ತೋಟಕ ಬಂದಾಳಯ್ಯೋ | ಸೋಕೀರ ಮೂವ ತಾಜೀಜಿ |
ಶೃಂಗಾರ ತೋಟ ಹಿಂದಾಮೂಡಿ | ಸೋಕೀರ ಮೂವ ತಾಜೀಜಿ |
ಬಾಗಳಿಗೆ ಬಂದಾಳಯ್ಯೋ | ಸೋಕೀರ ಮೂವ ತಾಜೀಜಿ |
ಬಾಗಳಿಯ ಹಿಂದಾಮೂಡಿ | ಸೋಕೀರ ಮೂವ ತಾಜೀಜಿ |
ಕೂಲಹಳ್ಳಿಗೆ ಬಂದಾಳಯ್ಯೋ | ಸೋಕೀರ ಮೂವ ತಾಜೀಜಿ |[1] ಅರೀಯ = ದಡ

[2] ಸಾಸ್ರ = ಸಹಸ್ರ

[3] ಸೊಂಟಿ = ಶುಂಠಿ,

[4] ಬಜಿ = ಬಜೆ

[5] ಕೊಳವಿ = ಹಸುವಿನ ಪಾದದ ಗೊರಸು

[6] ಮಾಸಾಳ = ಶಿವಶರಣ

[7] ನಿರುವಿಲ್ಲ = ಗತಿಯಿಲ್ಲ

[8] ಜತಿ = ಪದಾರ್ಥ

[9] ಜಿಗಿದ – ಬಗೆದು

[10] ಕರ‍್ಸು – ಕಸರ

[11] ಬಾಸಾಳ – ಬಾಸುಂಡೆ

[12] ಅರಿವಿಕಾತ್ರೀ – ಅರಿವಾಯಿತ್ರಿ

[13] ಹಗೇವು – ದೊಡ್ಡಗುಂಡಿ

[14] ಡಿಂಭ – ದೇಹ

[15] ಸೆಡ್ಸಿ – ಕೊಡವಿ

[16] ಕತ್ರಿಮಲಕಿನ ಗಂಟು – ಎರಡು ತುದಿಗಳನ್ನು ಸೇರಿಸಿ ಹಾಕುವ ಗಂಟು

[17] ತಿರಪುರಂಜಿ – ಕಲ್ಯಾಣದ ತ್ರಿಪುರಾಂತಕ ಕೆರೆ

[18] ತಂಗಡಕಿ ಹೂ – ಅವ್ರುಕೆ ಹೂವಿನ ಇನ್ನೊಂದು ಹೆಸರು

[19] ಮಾಟ – ಲಕ್ಷಣ, ಚಂದ

[20] ನಿರ್ವಾಣಿ – ಗತಿಯಿಲ್ಲದವರು

[21] ವಿಚಾರನಾರಿ – ಈ ಕಥನ ಸಂಬಂಧಿಯಾದ ಆಚರಣೆಯೊಂದು ಈಗಲೂ ಕೊಟ್ಟೂರು ಜಾತ್ರೆಯಲ್ಲಿ ನಡೆಯುತ್ತದೆ. ಹರಿಜನ ಮಹಿಳೆಯ ಮನೆಯಿಂದ ಗಿಣ್ಣು ಹೋದನಂತರ ಕೊಟ್ಟೂರೇಶ್ವರನ ತೇರು ಎಳೆಯುವುದು ಈ ಮಹಿಳೆಯೇ ವಿಚಾರನಾರಿ

[22] ನಿಳೆ – ಇಳೆ, ಆಸರ ತೆಗೆಯುವುದು

[23] ವಸ್ತಿ – ವಸತಿ

[24] ಕುಪ್ಪಿನಕೇರಿ ಹನುಮಂತರಾಯ – ಒಂದು ಚಾರಿತ್ರಿಕ ಸ್ಥಳವಾಗಿದ್ದು ಇಲ್ಲಿರುವ ಹನುಮಂತನ ಮೂರ್ತಿಗೆ ಲಿಂಗದೀಕ್ಷೆಯಾಗಿರುವಂತೆ ಕೆತ್ತಲಾಗಿದೆ.

[25] ಚಿಗಟೇರಿ ಶಿವಪ್ಪ – ಹರಪನಹಳ್ಳಿ ಪಾಳೇಗಾರರ ಇತಿಹಾಸದಲ್ಲಿ ಬರುವ ಇವನು ಸೋಮಶೇಖರನೆಂದು ಲಿಖಿತ ದಾಖಲೆಗಳಲ್ಲಿ ಕರೆಯಲಾಗಿದೆ.

[26] ಗದಿಮಿ – ದೂಡು

[27] ಬೋಕಿ – ಒಡೆದ ಮಡಕೆ ಚೂರು