ಇಷ್ಟೆಲ್ಲಾ ಹಿಂಸೆಗಳಿಗಳನ್ನು ಸಹಿಸಿಕೊಂಡ ನಾಯಕನಿಗೆ ಕೊನೆ ಉಳಿಯುದು ಪ್ರತಿ ಹಿಂಸೆ ಮಾತ್ರ. ಇದಕ್ಕೆ ಅವನ ಪಿಕನಗೌಡನ ಮಕ್ಕಳಿಗೆ ಸಾಮ ವಿದ್ಯೆ ಕಲಿಸಿ ಅವರಿಂದ ಕೊಲಿಸುತ್ತಾನೆ. ಹರಪನಹಳ್ಳಿ ಪಾಳೇಗಾರರಿಗೆ ಮತ್ತು ಕಲ್ಟ್ ನೊಟ್ಟಿಗೆ ಅನೇಕ ಸಂಘರ್ಷಗಳು ನಡೆದಿವೆ. ಇದಕ್ಕೆ ಸಾಕ್ಷಿಯಾಗಿರುವುದು ಕೂಲಹಳ್ಳಿ ಗವಿಯ ಒಳಗಿರುವುದು ಗರಡಿ ಮನೆ. ಶರಣರೆಂದರೆ ಅವರು ಅಹಿಂಸಾ ವಾದಿಗಳು ಎನ್ನುವ ಸಾಮಾನ್ಯವಾದ ನಂಬಿಕೆ ಇದೆ. ಆದರೆ ಇವರು ಪ್ರಭುತ್ವದ ಹಿಂಸೆ ಗೆಲ್ಲಲು ಅನಿವಾರ್ಯವಾಗಿ ಪ್ರತಿ ಹಿಂಸೆಯನ್ನು ಪ್ರಾಕ್ಟೀಸ್ ಮಾಡಿದ್ದಾರೆ ಎನ್ನುವುದಕ್ಕೆ ಕತೆ ಮತ್ತು ಆಚರಣೆಗಳು ಸಾಕ್ಷಿಯಾಗಿವೆ. ಇಲ್ಲಿಗೆ ಕತೆ ಮುಗಿದು ಶಿಲಾಮೂರ್ತಿಯಾಗಲು ಗುಮ್ಮಗೋಳವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.

 

ಗುಮ್ಮಗೋಳ ಪಿಕನಗೌಡ ತ್ವಾಟಕ ಹೋಗ್ಯಾನು. ಪಿಕನಗೌಡ ನೋಡ್ರೀ ಒಂದನೇ ಭಕ್ತ ಗೋಣಿಬಸವೇಶ್ವರಗ ಪಿಕನಗೌಡನ ತ್ವಾಟಕ ಹೋಗಿ ‘ಮಗು ಒಂದು ದಿನ ಇರ‍್ತೀನಪಾ ತ್ವಾಟದಾಗೆ. ನೀನು ಊರಕೋಗಿ ನಮ್ಮ ಪಿಕನಗೌಡಗ ಸುದ್ದಿಮಾಡಪ್ಪ ಬಂದು ಬಿಡ್ತಾರೆ’. ‘ಆಗ್ಲಿ ಗುರುಗಳೇ’ ಅಂದು ಬಿಲ್ಲಿ ಜವಾನ ತ್ವಾಟ ಬಿಟ್ಟು ಊರಾಕಗೋಗಿ ಬಿಟ್ಟು ‘ಆ ಯಜಮಾನ್ರೆ ಗೌಡ್ರ ಮನಿಯಾವ್ದು ‘ಅಂತ ಕೇಳ್ಯಾನು. ‘ಇದಾನೋಡೋ ತಮ್ಮ’ ಅಂದ್ರು, ಗೌಡ್ರ ಮನಿಗೋಗ್ಯಾನು. ಗೌಡ್ರು ಇಳ್ಯಾ ಮೆಲಿಕ್ಕೆಂತ ಪಡಸಾಲಿಮ್ಯಾಲ ಕುಂತಾರು ಹುಡುಗೋಗಿ ಮುಂದಿ ನಿಂತಾನು. ಆಗ ಅಂತಾನ್ರೀ ಗೌಡ ‘ಏಲೈ ಕುಮಾರ

ಯಾವ ದೇಶಕೋಶಾವೋ | ನಿನ್ನದೇಯ ಶಂಕರೂರ ಮುಕ್ಕಾಯೋದೇ |
ಯಾವ ಪಟ್ಟಣ ಹೇಳಯ್ಯ | ನಿನ್ನದೇಯ ಶಂಕರೂರ ಮುಕ್ಕಾಯೋದೇ |
ತಂದೆ ಯಾರೋ ತಾಯಿಯಾರೋ | ನಿನ್ನದೇಯ ಶಂಕರೂರ ಮುಕ್ಕಾಯೋದೇ |
ಏನು ಕೆಲ್ಸಾ ಮಾಡಾಲೋ | ನಿನ್ನದೇಯ ಶಂಕರೂರ ಮುಕ್ಕಾಯೋದೇ |
ಏನು ಚಾಕ್ರಿಯ ಮಾಡಾಲೋ | ನಿನ್ನದೇಯ ಶಂಕರೂರ ಮುಕ್ಕಾಯೋದೇ |
ಇಲ್ಲಿಗೆ ಯಾತಕ್ಕ ಬಂದೇಯಾ | ನಿನ್ನದೇಯ ಶಂಕರೂರ ಮುಕ್ಕಾಯೋದೇ |

‘ಹೇಳಯ್ಯ’ ‘ಗೌಡ್ರೆ ನಂದು ಕೂಲಳ್ಳಿ ಬುದ್ದಿ’ ‘ಕೂಲಳ್ಳಿಯಿಂದ ಯಾಕ ಬಂದೀಯಾ’ ‘ಯಾಕಿಲ್ಲ ನಿಮ್ಮ ಮನಿಸ್ವಾಮಿ ಗೋಣಿಬಸವೇಶ್ವರ ನಿಮ್ಮ ತ್ವಾಟದಾಗ ಅದಾರೆ ಸ್ವಲ್ಪ ದಯಮಾಡ್ರಿ’ ಅಂಗಂದ ತಕ್ಷಣಕ್ಕೆ ಪಿಕನಗೌಡ ಪಲ್ಲಕ್ಕಿ ತಗಂಡಾನು. ಐದು ಮಂದಿ ಗಂಡು ಮಕ್ಳಳ್ಳನ್ನು ಕರಕಂಡ ಕಳಸ ತಗಂಡ ಆರತಿ ತಗಂಡು ತ್ವಾಟಕ್ಕೇ

ಓಡಿ ಓಡಿ ಹೋಗುತಾನೇ | ಸೋಕೀರ ಮೂವ ತಾಜೀಜಿ |
ತ್ವಾಟಕ್ಕೆ ಹೋಗುತಾನೇ | ಸೋಕೀರ ಮೂವ ತಾಜೀಜಿ |

ತ್ವಾಟಕ್ಕೆ ಓಡಿ ಹೋಗಿ ಪಿಕನಗೌಡನ

[1] ಮಕ್ಳು ಹೆಂಡ್ತಿ

ಗುರವಿನ ಪಾದ ಹಿಡದಾರಯ್ಯೋ | ಶಿವನೆನೆಯವ ದೇವೈ |
ಪಾದಾ ಪೂಜೀ ಮಾಡುತಾರೇ | ಶಿವನೆನೆಯವ ದೇವೈ |
ಪಾದದ ಉದಕ ಸೇವ್ಸ್ ತಾರೆ | ಶಿವನೆನೆಯವ ದೇವೈ |
ಬಿದ್ದೇ ಬಿದ್ದೇ ಬೇಡಾತಾರೇ | ಶಿವನೆನೆಯವ ದೇವೈ |

ಆರತೀ ಕಳ್ಸ ಮಾಡಿ ‘ಗುರುಗಳೇ ಗುರುಗಳೇ ದಯಮಾಡ್ರಿ ಏಳಿ, ಮ್ಯಾಲಕ್ಕೆ’ ಎಬ್ಸಿ ಗುರುವಿಗೆ ಪಲ್ಲಕ್ಕಿಯಾಗ ಇಟ್ಗಂಡು ಪಿಕನಗೌಡನ ತ್ವಾಟಬಿಟ್ಟು ಗುರುವನ್ನ

ಊರೊಳೊಗೆ ತರತಾನಯ್ಯೋ | ಸೋಕೀರ ಮೂವ ತಾಜೀಜಿ |
ದಯಮಾಡೋ ನನ್ನ ಗುರುವೆ | ಸೋಕೀರ ಮೂವ ತಾಜೀಜಿ |
ಮೆರವಣಿಗಿ ಮಾಡುತಾರೇ | ಸೋಕೀರ ಮೂವ ತಾಜೀಜಿ |

ಗುಮ್ಮಗೋಳದಲ್ಲಿ ಮೆರವಣಿಗಿ ಮಾಡಿ ದೇವತಾ ಅರಮನಿಯೊಳಗ ತೆಗೆದುಕೊಂಡು ಬಂದಾನು. ಪಿಕನಗೌಡ ಅರಮನಿಗ ತಂದು ದೇವತಾ ಕ್ವಾಣಿಯೊಳಗೆ ಮುತ್ತಿನ ಗದ್ಗಿ ಮಾಡಿ ಗದ್ಗಿ ಮ್ಯಾಲ ಕುಂದ್ರಿಸಿದ. ಪಿಕನಗೌಡ, ಹೆಂಡತಿ, ಮಕ್ಳು.

ಗುರುವಿನ ಚಾಕರಿ ಮಾಡಾತಾರೇ | ಶಿವನೆನೆಯವ ದೇವೈ |
ಆತನ ಪೂಜೀ ಮಾಡಾತಾರೇ | ಶಿವನೆನೆಯವ ದೇವೈ |
ಆತನ ಚಾಕರಿ ಮಾಡಾತಾರೇ | ಶಿವನೆನೆಯವ ದೇವೈ |

ಆತನ ಸೇವಾ ಮಾಡ್ತಾರಿ ನಿತ್ಯ ನಿರ್ಮಿತಿ ಕಾಲ. ಗೋಣಿಬಸವೇಶ್ವರ ಶಿವನಪ್ಪನ ಕಾಲಾಗ

ಗುಮ್ಮಗೋಳ ಸೇರ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಮಠ ಮಾನ್ಯ ಬಿಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |
ಕೂಲಳ್ಳಿ ಬಿಟ್ಟಾನಯ್ಯೊ | ಸೋಕೀರ ಮೂವ ತಾಜೀಜಿ |
ಗುಮ್ಮಗೋಳ ಸೇರ್ಯಾನಯ್ಯೋ | ಸೋಕೀರ ಮೂವ ತಾಜೀಜಿ |

ಗುಮ್ಮಗೋಳ ಸೇರ‍್ಕೆಂಡ್ನಂತ್ರೀ. ಸೇರ‍್ಕೆಂಡ ಬಳಿಕ ಗೋಣಿಬಸವೇಶ್ವರ ಪಿಕನಗೌಡನ ಐದು ಮಂದಿ ಮಕ್ಳಿಗೆ ವಿದ್ಯಾಭ್ಯಾಸ. ಸಾಮುಶಕ್ತಿ ಕಲ್ಸಿ ತಯಾರು ಮಾಡ್ತಾನೆ. ಅಲ್ಲಿಗ ನೋಡ್ರಿ ಏನಾತು ತಿಂಗಳಿಲ್ಲ, ಎರೆಡು ತಿಂಗಳ ಇಲ್ಲ ಮೂರು ತಿಂಗ್ಳ ಇಲ್ಲ. ಆ ಮೂರು ತಿಂಗಳ ನಂತರ ಏನಾತು. ಶಿವನಪ್ಪನಗೆ ಗೊತ್ತಾತ್ರೀ. ಏನು ಗೊತ್ತಾತು. ಗೋಣಿಬಸವೇಶ್ವರ ಕೊಲಹಳ್ಳಿ ಮಠ ಮಾನ್ಯ ಬಿಟ್ಟು ಎರಡು ಸಾವಿರ ಬೇಡ್ಕಿ ತಗಂಡು ಹಮ್ಮಿಗಿ ಹೊಳಿಗೆ ಹೋದ್ನಂತೆ. ಗೋಣಿಬಸವೇಶ್ವರ ಹೊಳಿ ದಾಟಿದ್ನಂತೆ ಹನ್ನೆರಡು ಸಾವಿರ ಬೇಡ್ಕಿ ಹೊಳಿಯಾಗ ಮುಳುಗಿ ಸತ್ತು ಹೋದ್ವಂತೆ. ಗೋಣಿಬಸವೇಶ್ವರ ಗುಮ್ಮಗೋಳದಾಗೆ ಪಿಕನಗೌಡ್ನ ಮನಿಯಾಗ ಅದಾನಂತೆ ಅಂತ ಮೂರು ತಿಂಗ್ಳ ಮ್ಯಾಲ ಸುದ್ದಿ ಹೋತ್ರಿ. ಹರಪನಳ್ಳಿ ಶಿವನಪ್ಪನ ಸಿಂಹಾಸನಕ್ಕೆ. ನೆರಿನೆರಿ ಹಲ್ಲುಕಡ್ಡಾನು, ಗೊಂಡದ ಮೀಸಿಮ್ಯಾಗ ಕೈ ಹಾಕ್ಯಾನು. ನೋಡ್ರಿ ಅವಾಗ ಪೆನ್ನಿಲ್ಲಾ ಕಾಗ್ದ ಇಲ್ಲ, ತಾಳಿಗರಿ ತಗಂಡನು ಅಂಕಳಿ ಮುಳ್ಳು ತಗಂಡ, ಗುಮ್ಮಗೋಳದ ಪಿಕನಗೌಡಗ ವಾಲಿ[2] ಬರಿತಾನಂತರೀ. ವಾಲಿ ಬರಿತಾನ್ರೀ ಏನು ಬರಿತಾನು. ‘ಗುಮ್ಮಗೋಳದ ಪಿಕನಗೌಡ ನಿನ್ನ ಮನಿಯೊಳಗೆ ಗೋಣಿಬಸವ ಅದನಂತೆ. ಈ ವಾಲಿ ನೋಡ್ದ ತಕ್ಷಣ ಅವ್ನ ತಗಂಡ್ ಬಂದು ನನ್ನ ಕೈಯಾಗ ಕೊಡಬೇಕು ನೀನು ಅತಿಥ್ಯಾ ಮಾಡಿ ಅವ್ನ ಅಲ್ಲೇ ಇಟ್ಟಗಂಡ್ರೇ ಹನ್ನೆರಡು ಸಾವಿರ ಬೇಡ್ಕಿ ಅಲ್ಲ, ಹನ್ನೆರಡು ಮತ್ತು ಹನ್ನೆರಡು ಒಟ್ಟು ಇಪ್ಪತ್ನಾಲ್ಕು ಸಾವಿರ ಸೈನ್ಯ ತಗಂಡುಬಂದು ನಿಮ್ಮೂರಿಗೆ ಮತ್ತಿಗಿಹಾಕಿ ಯುದ್ದಮಾಡಿ ಗೋಣಿಬಸವನ್ನ ತಗಂಡು ಬರ‍್ತೀನಿ’ ಅಂಥಾ

ರಾಜವಾಲಿ ಬರ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಪಿಕನಗೌಡಗ ಬರ್ದಾನಯ್ಯೋ | ಸೋಕೀರ ಮೂವ ತಾಜೀಜಿ |
ಚಿಗಟೇರಿ ಶಿವನಪ್ಪನವರೇ | ಸೋಕೀರ ಮೂವ ತಾಜೀಜಿ |

ವಾಲಿ ಬರ‍್ದಾನು. ‘ಆ ದುಂಡಾಳುಗಲೇ ಇಲ್ಲಿ ಬರ್ರಯ್ಯ, ಇದನ್ನು ತಗಂಡೋಗಿ ಗುಮ್ಮಗೋಳಕ ಹೋಗಿ ಪಿಕನಗೌಡಗ ವಾಲಿ ಮುಟ್ಟಸರಯ್ಯ’ ಅಂದು ಶಿವನಪ್ಪ ಕೊಟ್ನಂತೆ. ದುಂಡಾಳುಗಳು ವಾಲಿ ತಗಂಡೋಗಿ ಪಿಕನಗೌಡಗ ಮುಟ್ಟಿಸಿದ್ರು. ಪಿಕನಗೌಡ ವಾಲಿ ವಡ್ದ, ಕಣ್ಮಿಗೆ ಒತ್ತಿ, ವಾಲಿ ಒದ್ತಾನು, ನೋಡ್ತಾನು. ನೋಡಿದ ತಕ್ಷಣಕ್ಕೆ ನೋಡ್ರೀ ಗೌಡ ಹೆದುರಿದ. ಹೆದರಿ ಏನಂತಾನೆ ‘ಗುರುಗಳೆ ಗುರುಗಳೇ ರಾಜ ಬರ‍್ತಾನಂತೆ. ಯುದ್ಧ ಮಾಡಿ ನನ್ನೂರು ಹಾಳು ಮಾಡಿ ಹೊಕ್ಕಾನಂತೆ ನಿನ್ನ ಕಾಲಾಗೇ ನಿನ್ನ ನನ್ನೂರು ಹಾಳಾಗೋಕತೆ.

ಹೋಗಬಾರೋ ನನ್ನ ಗುರುವೇ | ಸೋಕೀರ ಮೂವ ತಾಜೀಜಿ |
ನೀನೇ ತಡಮಾಡಬ್ಯಾಡೋ | ಸೋಕೀರ ಮೂವ ತಾಜೀಜಿ |

‘ದಯಮಾಡ್ರಿ, ರಾಜ ಬರ‍್ತಾನಂತೆ. ಊರು ಹಾಳಾಗಿ ಹೊಕ್ಕತೇ ನಡ್ರೀ ಹೋಗ ಬರ್ರೀ’. ಅಂತ ಬೇಡ್ಕೆಣಕರಗ ಗೋಣಿಬಸವೇಶ್ವರ ಹೇಳ್ತಾನು ‘ಮಗು ಮಗು ಹೆದರಬ್ಯಾಡಯ್ಯ ಆ ಶಿವನಪ್ಪನ ರಾಜತ್ವ ಮುಗೀತಪ್ಪಾ ನಿನಿಗೆ ಬೇಕಾದ್ದು ಕಷ್ಟ ಬರ‍್ಲಯ್ಯ ನಿನ್ನ

ಬೆನ್ನ ಹಿಂದೆ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ಹೆದರಬ್ಯಾಡೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |

ಹೆದರಬ್ಯಾಡಪಾ ನಾನಿರ‍್ತೀನಿ. ಅಂತ ಗುರು ಹೇಳ್ದಾಗ ಪಿಕನಗೌಡ ಧೈರ‍್ಯ ಮಾಡಿ ಸುಮ್ನಾದ. ಮತ್ತೆ ಶಿವನಪ್ಪ ವಾಲಿ ಬರ‍್ದು ತಿಂಗ್ಳು ನೋಡ್ದ. ಯಾವ ಸುದ್ದಿಲ್ಲ ಗದ್ಲಿಲ್ಲಾರೀ. ಗೋಣಿಬಸವೇಶ್ವರ ಇಲ್ಲ, ಪಿಕನಗೌಡ ಇಲ್ಲ. ಸೊಕ್ಕಿನ ಶಿವನಯ್ಯ ಸೈನ್ಯ ಹೊಂಡಸ್ತಾನು. ಮೂವತ್ತು ಸಾವಿರ ಬೇಡ್ಕಿ ಹೊಂಡಿಸ್ದ. ಬೀಸ ದೊಣ್ಣೇರು, ಕಂದು ಕೊಡ್ಲೇರು, ಬಾಣ ಭರ್ಚಿಯವರು, ಕೊಡ್ಲಿ ಕುಡುಗೋಲನವ್ರು ಮೂವತ್ತ ಸಾವ್ರ ಬೇಡ್ಕಿ ತಗಂಡ ಕೆಂದುಗುದುರಿ ಮ್ಯಾಲ ಕುತ್ಗಂಡ. ಕಿರೀಟ ಇಟ್ಗಂಡ ಎಡಗೈ ದಾಲು[3] ತಗಂಡ, ಬಲಗೈ ಖಡ್ಗ ತಗಂಡ, ಶಿವನಪ್ಪ ದಂಡು ತಗಂಡು ಗೋಣಿಬಸಪ್ಪನ್ನ ಕೊಲ್ಲಾಕ ಹೊಕ್ತಾನ್ರೀ ಗುಮ್ಮಗೋಳಕ್ಕ. ಅಂದ್ರೆ ಗೋಣಿಬಸವೇಶ್ವರ ಸಾಯದಿಲ್ಲಾ

ಇವ್ನೇ ಸಾಯಾಕ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಇಲ್ಲಿಗೆ ರಾಜಗ ಮರಣಾ ಬಂದಾವಯ್ಯೋ | ಸೋಕೀರ ಮೂವ ತಾಜೀಜಿ |

ಆ ದಂಡಿನ ಮಲ್ಲಣಾರ‍್ಯ ಸಾಗ್ಲಯ್ಯ.

ಒಂದು ಎಂಬೋ ಗವದ ಮ್ಯಾಲೇ | ಸುಖರಾಜ ಬಗದಿ |
ಸೈನ್ಯ ತಗಂಡೇ ಹೋಗುತಾನೇ | ಸುಖರಾಜ ಬಗದಿ |
ದಂಡು ತಗಂಡೇ ಹೋಗುತಾನೇ | ಸುಖರಾಜ ಬಗದಿ |
ಮುಂದೆ ಎಲ್ಲಿಗೆ ಹೋಗುತಾನೇ | ಸುಖರಾಜ ಬಗದಿ |

ಹಮ್ಮಿಗಿ ಹೊಳಿಗೆಪ್ಪಾ ದಂಡು ತಗಂಡು ಇಳದಾನೇ ಅ…. ಹಮ್ಮಿಗಿ ಹೊಳಿಗೆ ಇಳ್ದಾನು. ಡೇರಿ ಹೊಡ್ದಾನು. ಶಿವನಪ್ಪ, ಪಿಕನಗೌಡಗ ಮತ್ತು ವಾಲಿ ಬರೀತಾನ್ರೀ ಏನು ಬರೀತಾನು? ‘ಗುಮ್ಮಗೋಳ ಪಿಕನಗೌಡ ಹಿಂದಿನ ತಿಂಗ್ಳಾಗೆ ವಾಲಿ ಕಳ್ಸಿದೆ. ಅದಕ್ಕ ಮರ‍್ಯಾದಿ ಕೊಡ್ದಂಗೆ ಅಂಗೇ ಇಟ್ಗಂಡೆ. ನಾನೀಗ ಮೂವತ್ತು ಸಾವ್ರ ಬೇಡ್ಕಿ ತಗಂಡು ಬಂದೀನಿ. ನೀನಂಥ ಸಮರ್ಥನಾದ್ರೆ ನಿನ್ನ ಗುರುವನ್ನ ಬೆನ್ನಿಗೆ ಕಟ್ಟಾಕ್ಯಾ ನಾಳೇ ಹನ್ನೆರಡು ಗಂಟಿಗೇ

ಯುದ್ದ ಮಾಡಕ ಬರಬೇಕಯ್ಯೋ | ಸೋಕೀರ ಮೂವ ತಾಜೀಜಿ |
ರಾಜ ವಾಲಿ ಬರಬೇಕಯ್ಯೋ | ಸೋಕೀರ ಮೂವ ತಾಜೀಜಿ |

ದುಂಡಾಳು ಕರ‍್ದಾನು. ‘ಹೋಗಯ್ಯ ಗೌಡಗ ವಾಲಿ ಕೊಟ್ಟುಬಾ’ ದುಂಡಾಳು ಹೋಗಿ ಗೌಡ್ಗ ವಾಲಿ ಕೊಟ್ಟಾನು. ವಾಲಿ ಹೊಡ್ದು ಓದ್ತಾನು. ‘ಗುರುಗಳೇ ಗುರುಗಳೇ ರಾಜ ಬಂದಾನಂತೆ, ಮೂವತ್ತಸಾವ್ರ ಬೇಡ್ಕಿ ತಗಂಡು ಬಂದಾನೆ ನಾನು ನಿನ್ನ ಬೆನ್ನಿಗೆ ಕಟ್ಕೆಂಡು ನಾನು ಸಮರ್ಥನಾದ್ರೆ ನಾಳೆ ಹನ್ನೆರಡು ಗಂಟಿಗೆ ಯುದ್ದ ಮಾಡಾಕ ಹೋಗಕಂತೆ. ನೋಡ್ರಿ ನಾನೆಷ್ಟು ಹೇಳಿದ್ರು ಕೇಳಿಲ್ಲ. ಇನ್ನ ಶಿವನಪ್ಪ ನನ್ನೂರು ಹಾಳು ಮಾಡಿ ಹೋಗಿಬಿಡ್ತಾನೆ. ನನ್ನ ಮಾತು ನೀವ್ ಕೇಳಿಲ್ಲ’ ಅಡರ‍್ಯಾಡ್ತಾನೆ ಪಿಕನಗೌಡ. ‘ಆ ಮಗು ಹೆದರಬ್ಯಾಡ. ನಿನ್ನ ಬೆಂದ ಹಿಂದೆ ಇರ‍್ತೀನಂತ ವಾಕ್ಯ ಕೊಟ್ಟೀನಪ್ಪಾ ಹೆದರಬೇಡ ಆಗ ಗೋಣಿಬಸವೇಶ್ವರ ಪಿಕನಗೌಡನ ಐದು ಮಂದಿ ಮಕ್ಳಿಗೆ ವಿದ್ಯಾಭ್ಯಾಸ ಕಲ್ಸಿದ್ನಲ್ರೀ ಅವರ‍್ನ ತಯಾರು ಮಾಡತಾನ್ರೀ.

ಹರಹರ ಭಗವಂತಾ | ತಾನಿ ತಂದನಿ ನಾನೋ |
ಕುತನಿ ಕುಂಡೀ[4] ಚಣ್ಣೋ[5] | ತಾನಿ ತಂದನಿ ನಾನೋ |
ಕೊಂಡೆದಾ ನಡುಕಟ್ಟೋ | ತಾನಿ ತಂದನಿ ನಾನೋ |
ಕೊಳ್ಳಾಗ ಇರದಾಳೇ[6] | ತಾನಿ ತಂದನಿ ನಾನೋ |
ರಟ್ಟಗೇ ರಣಬಿಲ್ಲೇ[7] | ತಾನಿ ತಂದನಿ ನಾನೋ |
ಮುಂಗೈ ಬಂಗಾರ ತಾಯತೋ | ತಾನಿ ತಂದನಿ ನಾನೋ |
ತಯ್ಯಾರು ಮಾಡ್ಯಾನೋ | ತಾನಿ ತಂದನಿ ನಾನೋ |

ತಯ್ಯಾರು ಮಾಡಿ ಐದು ಮಂದಿ ಮಕ್ಳ ಕೈಯ್ಯಾಕೆ ಐದು ಖಡ್ಗ ಕೊಟ್ಟ ‘ಮಕ್ಕಳಾ ಮಕ್ಕಳಾ ವೈರಿ ಖಡ್ಗ ಅಡಿಯಾಗಲಿ, ನಿಮ್ಮ ಖಡ್ಗ ಮೇಲಾಗ್ಲಪಾ.

ಯುದ್ದ ಮಾಡ್ರೋ ನನ್ನ ಮಕ್ಕಳಾ | ಸೋಕೀರ ಮೂವ ತಾಜೀಜಿ |
ಗುರುವೇ ಧೈರ್ಯ ಹೇಳತಾವೇ | ಸೋಕೀರ ಮೂವ ತಾಜೀಜಿ |

ಗುರು ಮಕ್ಳಿಗೆ ಹೇಳಿ ಐದು ಮಂದಿಗೆ ಆಶೀರ್ವಾದ ಕೊಟ್ಟು. ಪಿಕನಗೌಡ ಮತ್ತು ಗೋಣಿಬಸವೇಶ್ವರ ಮೇಲುಮಾಡಿ ಹತ್ತಿ ರೂಂ ಮೇಲೆ ಕುತ್ಗಂಡು ನೋಡ್ತಾರೆ. ಯುದ್ದ ಮಾಡಾಕ ಹೋಗ್ತಾರೆ ರಾಜಾಧಿರಾಜ ದೊರೆಯೇ

ಇನ್ಯಾಕ ಅನುಮಾನಣ್ಣಾ ಅನುಮಾನೋ ಜೀಜೀ
ಅವರೇ ಭೂಮಿ ಬಿಟ್ಟಾರಣ್ಣಾ ಬಿಟ್ಟಾರೋ ಜೀಜೀ
ವೇಗದಲ್ಲಿ ಹೋಗ್ಯಾರಣ್ಣಾ ಹೋಗ್ಯಾರೋ ಜೀಜೀ
ಹೆಣ ಮ್ಯಾಕ ತೊರ್ಯಾರಣ್ಣಾ ತೂರ್ಯಾರೋ ಜೀಜೀ
ಮಕ್ಕಳ ಕತ್ತಿಗೆ ಒಡ್ಡ್ಯಾರಣ್ಣಾ ಒಡ್ಡ್ಯಾರೋ ಜೀಜೀ
ನಿಂಬಿ ಹಣ್ಣಾ ಹೆಚ್ಚಿದಂಗೇ ಹೆಚ್ಚ್ಯಾರೋ ಜೀಜೀ
ಮಕ್ಳು ಯುದಾ ಮಾಡ್ಯಾರಣ್ಣಾ ಮಾಡ್ಯಾರೋ ಜೀಜೀ
ರಗುತ ಕಾಲುವೆ ಹರದಾದಣ್ಣಾ ಮಾಡ್ಯಾರೋ ಜೀಜೀ
ಸೈನ್ಯ ಎಲ್ಲಾ ಸೋತಾವಣ್ಣ ಸೋತಾವೊ ಜೀಜೀ

ಸೈನ್ಯೆಲ್ಲ ಸತ್ತಿ ಕೆಟ್ಟೋತಂತ್ರೀ. ಶಿವನಪ್ಪ ಒಬ್ನ ಉಳಕಂಡ್ನಂತೆ. ಐದು ಮಕ್ಳ ಹಾಳು ಮಾಡಿದಾಗ, ಶಿವನಪ್ಪ ಒಬ್ನ ಉಳಕಂಡು ಕೆಕ್ಕರಿಸಿ, ಅತ್ತಿತ್ತ ನೋಡ್ತಾನೆ. ಸೈನ್ಯಿಲ್ಲ. ರಗತ ಕಾಲವೆ ಹರೀತತೆ, ಆಗ ಐದು ಮಂದಿ ಮಕ್ಳು ಉಸಿರು ಬಿಟ್ಟು ಶಿವನಪ್ಪಗ ಕಡೇಕ ಹೋಗಿ ಮುತ್ತಿಗಿ ಹಾಕಿದ್ರು. ಖಡ್ಗ ಎತ್ತಿ ಬಿಟ್ರು ಆಗ ಗೋಣಿಬಸವೇಶ್ವರ ಕೂಗಿ ಹೇಳ್ತಾನು ಮಕ್ಳಿಗೆ, ‘ಮಕ್ಳ ನನಿಗೆ ಸ್ವಾದರ ಮಾವಪ್ಪಾ ನನ್ನ ಮಾವನ್ನ’

ಕಡಿಬ್ಯಾಡ್ರೋ ನನ್ನ ಮಕ್ಳಾ | ಸೋಕೀರ ಮೂವ ತಾಜೀಜಿ |
ನನಿಗೆ ಸ್ವಾದರ ಮಾವ ಇದ್ದಾನಯ್ಯೋ | ಸೋಕೀರ ಮೂವ ತಾಜೀಜಿ |

‘ನನಿಗೆ ಸ್ವಾದರ ಮಾವನಪಾ ಕೊಲ್ಲಬ್ಯಾಡ್ರಿ ಕೊಲ್ಲಬ್ಯಾಡ್ರಿ’ ಅಂತಾನು. ಐದು ಮಕ್ಳು ಹೇಳ್ತಾರೆ. ಗುರುಗಳೇ ನಿಮ್ಮ ಮಾತು ಕೇಳಿ ಇವ್ನ ಬಿಟ್ರೆ ಇವ್ನಿಗೆ ಮುಂದೆ ಉಳುವಿಲ್ಲ.

ಶಿವನಪ್ಪನ್ನ ಕಡದಾರಯ್ಯೋ | ಸೋಕೀರ ಮೂವ ತಾಜೀಜಿ |
ಕಡಿದ ತಕ್ಷಣಕ್ಕ ಡಿಂಭ ನೆಲಕ್ಕ ಬಿತ್ತರೀ. ಶಿವನಪ್ಪನ ತಲಿ
ಮೇಘದಲ್ಲಿ ಹೋಗತೈ | ಸೋಕೀರ ಮೂವ ತಾಜೀಜಿ |

ಮೇಘದಲ್ಲಿ ಹೋಗಿ ಗೋಣಿಬಸಪ್ಪನ ತೊಡಿಮ್ಯಾಲ ಕುತ್ಗಂತಂತ್ರೀ ಶಿವನಪ್ಪನ ತಲಿ. ಕುತ್ಗಂಡಾಗ ಗೋಣಿಬಸವೇಶ್ವರ ಮಾವನ ತಲಿ ತಗಂಡ ದುಃಖ ಮಾಡ್ತಾನ್ರೀ. ಇಲ್ಲಿಗೇ

ಸ್ವಾದರ ಮಾವನ ಕಳಾಕಂಡೇ | ಶಿವನೆನಯನ ದೇವೈ |
ಯಾರಿಗೆ ಮಾವ ಅನ್ನಾಲಯ್ಯೋ | ಶಿವನೆನಯನ ದೇವೈ |
ಇಲ್ಲಿಗೆ ಮಾವನ ಕಳಾಕಂಡೇ | ಶಿವನೆನಯನ ದೇವೈ |
ಇಲ್ಲಿಗೆ ರಾಜಾ ಸತ್ತನಯ್ಯೋ | ಶಿವನೆನಯನ ದೇವೈ |

ಮಾವ ಇಲ್ಲಿಗೆ ಹನ್ನೆರಡು ವರ್ಷ ನಿನ್ನ ಕೂಟ

ಕಾದಾಟನಾನೇ ಮಾಡಿದೆನಯ್ಯೋ | ಶಿವನೆನಯನ ದೇವೈ |
ನಾನೇ ಬೇಸರ ಕಳಾಕಂಡೇ | ಶಿವನೆನಯನ ದೇವೈ |
ಯಾರ ಕೂಟ ಕಾದಾಟ ಆಡಾಲಯ್ಯೋ | ಶಿವನೆನಯನ ದೇವೈ |

ಗೋಣಿಬಸವೇಶ್ವರ ಮಾನವ ತಲಿ ತಗಂಡು ದುಃಖ ಮಾಡಿ, ದುಃಖ ಅಡಗಿಸಿ ಒಂದು ಹಿಡಿ ಬಾಳೇ ಎಲಿ ತಗಂಡ. ನೆನಿಅಕ್ಕಿ ನೆನಿಗಡಲಿ, ಗೊನಿಮುರ‍್ದ ಬಾಳೇಹಣ್ಣು, ಕೈಸಿಕ್ಕ ತೆಂಗಿನಕಾಯ, ಊದು ಕರ್ಪೂರ ತಗಂಡಾ ಗೋಣಿಬಸವೇಶ್ವರ ಹಮ್ಮಿಗಿ ಒಳಗೆ ಬಂದ. ಹಮ್ಮಿಗಿ ಒಳಗೆ ಬಂದು ನೀರಿನ ಮ್ಯಾಲೆ ಎಲಿ ಹಾಸಿದ. ಎಲಿ ಮ್ಯಾಲೆ ಮಾವನ ತಲಿ ಇಟ್ಟ, ಕರ್ಪೂರ ಸುಟ್ಟ, ಕಾಯಿ ಹೊಡ್ಸಿದ, ಹಣ್ಣು ಹಿಡ್ದ.

ದಯಮಾಡೋ ಸ್ವಾದರ ಮಾವೋ | ಸೋಕೀರ ಮೂವ ತಾಜೀಜಿ |
ನೀರಿನ ಒಳಗೆ ಬಿಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |

ನೀರಿಗ ಬಿಟ್ನಂತ್ರಿ. ಆಗ ಶಿವನಪ್ಪನ ತಲಿ ನೀರಾಗೇ

ತೇಲೀಕಂಡೇ ಹೋಗತೈತೇ | ಶಿವನೆನಯನ ದೇವೈ |
ನೀರಗ ತೇಲ್ಕೆಂಡೆ ಹೋಗಾತೈತೇ | ಶಿವನೆನಯನ ದೇವೈ |
ನಡಿಯೋ ನಡಿಯೋ ಸ್ವಾದರ ಮಾವೋ | ಶಿವನೆನಯನ ದೇವೈ |

ನದಿಯಾಗೆ ಶಿವನಪ್ಪನ ತಲಿ ತೇಲ್ಕೆಂಡು ಹೋತಂತ್ರೀ, ತೇಲ್ತಾ ತೇಲ್ತಾ ಎಲ್ಲಿಗೆ ಹೋಯ್ತು, ಮೈಲಾರ ಹೊಳಿ ದಂಡ್ಯಾಗ ಇರುವಂಥ ಚಂದ್ರಪುರದ ಊರು ಮುಂದಕ್ಕ ಹೋತಂತ್ರೀ. ಚಂದ್ರಪುರದ ಊರು ಮುಂದಕ್ಕೆ ಹೋಗಿ ಅಲ್ಲಿ ಶಿವನಪ್ಪನ ತಲಿ ಏನಾತ್ರಿ ಹೊಳಿದಂಡಿಗೆ ತೇಲ್ಕೆಂಡು ಬಂದು ಹೊಳಿದಂಡ್ಯಾಗ ಶಿವನಪ್ಪನ ತಲಿ ಹೋಗಿ

ಅನಚಂಡಾಳ[8] ಆಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಹೊಳಿ ದಂಡಿಗೆ ನೆಡದಾನಯ್ಯೋ | ಸೋಕೀರ ಮೂವ ತಾಜೀಜಿ |

ಚಗಟೇರಿ ಶಿವನಯ್ಯ ಸತ್ತು ತಲಿ ಹೋಗಿ ಚಂದ್ರಪುರದ ಮುಂದ ಅನಾಚಂಡಳಾಗಿ ನೆಲ್ದನಂತ್ರೀ. ಇದೆಲ್ಲ ಆದಮ್ಯಾಗ ಗೋಣಿಬಸವೇಶ್ವರ ಪಿಕನಗೌಡಗ ಅದ್ನಂತ್ರೀ. ‘ಮಗು ಸ್ವಲ್ಪ ಕೂಲಳ್ಳಿಗೆ ಹೋಗಿ ಬರ್ತೀನಪಾ’ ಅಂದದ್ಕೇ ಪಿಕನಗೌಡ ಸ್ವಲ್ಪ ತಾಪ ಬಂತ್ರೀ. ಏನ್ ತಾಪಾ? ‘ಅಲ್ರೀ ನನ್ನ ಮನಿಯೊಳಗೆ ನಿಮ್ನ ಇಟ್ಗಂಡಿದ್ಕೆ ನನ್ನ ಮಕ್ಳು ನಿನ್ನ ವೈರಿ ಮ್ಯಾಲೆ ಯುದ್ದ ಮಾಡಿ ರಗುತದ ಕಾಲುವಿ ಹರ‍್ಸಿ ನಿನ್ನ ವೈರಿ ಕೊಂದು ನಿನ್ನ ಪ್ರಾಣ ಪಡರ್ದಲ್ಲಾ ಮತ್ತೆ ನನ್ನ ಮನಿ ಬಿಟ್ಟು ಹೊಕ್ಕೀನಿ ಅಂತಾರಲ್ರೀ. ಯಾರ‍್ನ ನಂಬಿದ್ರೆ ಭಿಕ್ಷುಕರನ್ನ ನಂಬಬಾರ್ದು ನೋಡ್ರಿ’ ಅಂದ. ‘ಮಗು ಹಾಗನ್ನಬ್ಯಾಡಪ್ಪಾ. ನಾನಲ್ಲಿ ಇರಾದಿಲ್ಲದಾ ಹೋಗ್ ಬಂದ್ ಬಿಡ್ತೀನಿ. ಕೂಲಳ್ಳಿಗೆ ಹೋಗಿ ತಿರುಗಿ ಬರತ್ಗೆ ನಿನ್ನ ಊರಾಗೆ ರುದ್ರಾಕ್ಷಿ ತೊಲಿಕಂಭದ ಮಠ ಕಟ್ಟಸಯ್ಯ.

ಇಲ್ಲೇ ನಾನೇ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ಗುರುವೇ ತಾನೇ ಹೇಳುತಾನೇ | ಸೋಕೀರ ಮೂವ ತಾಜೀಜಿ |

ಕೊಟ್ಟ ಭಾಷೆಗೆ ತಪ್ಪುವುದಿಲ್ಲಪ್ಪಾ ಇಲ್ಲೇ ಇರ‍್ತೀನಿ ಮಠ ಕಟ್ಟಪಾ’ ಆಗ ನೋಡ್ರಿ ಪಿಕನಗೌಡ ಗುಮ್ಮಗೋಳದಾಗೆ ಮಠಕಟ್ಟಾಕ ಚಾಲು ಮಾಡ್ದ. ಗೋಣಿಬಸವೇಶ್ವರ ಗುಮ್ಮಗೋಳಬಿಟ್ಟಾ.

ಕೂಲಳ್ಳಿಗೆ ಬರ್ತಾನಯ್ಯೋ | ಸೋಕೀರ ಮೂವ ತಾಜೀಜಿ |
ಹಡದ ತಾಯಿ ಕನಕವ್ವನವರೇ | ಸೋಕೀರ ಮೂವ ತಾಜೀಜಿ |
ಪೂಜಾರೀ ಕಲ್ಲಪ್ಪನವರೇ | ಸೋಕೀರ ಮೂವ ತಾಜೀಜಿ |
ಹೆಂಡತಿ ವಡ್ಡಟ್ಟವ್ವೋ | ಸೋಕೀರ ಮೂವ ತಾಜೀಜಿ |

ಕೂಲಳ್ಳಿಗೆ ಬಂದನು. ಸ್ವಲ್ಪ ತಡ ಮಾಡಿದ್ರೆ ಮಠದ ಬಗ್ಲ ಒಳಾಕ ಹೋಗಿ ಬಿಡ್ತಿದ್ನರೀ. ಮಠದ ಬಾಗಿಲ ನೀಟಿಗೆ ಬಂದಾ. ಹಿಂದಕ್ಕ ವಾಕ್ಯ ಕೊಟ್ಟಿದ್ನಲ್ರೀ. ಬಾಲಬಸವ ಮಠದಾಗ ಇದ್ದ ಸರ್ಪಾಗಿ, ಇನ್ನೇನು ಹಿಂಗಾಲಕಿತ್ತಿ ಮುಂಗಾಲಿಕ್ಕಿ ಬಾಗ್ಲದಾಟಬೇಕು. ಆ ಸಮಯದಾಗೆ ಬಾಲಬಸವ ಸರ್ಪ ಓಡಿಬಂದು ಗೋಣಿಬಸಪ್ಪನ್ನ

ಕಾಲಿಗೆ ಸುತ್ತೇತೈಯ್ಯೋ | ಸೋಕೀರ ಮೂವ ತಾಜೀಜಿ |
ತಡಿಯೋ ತಡಿಯೋ ನನ್ನಿಗುರುವೇ | ಸೋಕೀರ ಮೂವ ತಾಜೀಜಿ |

ಅಯ್ಯೋ ಗುರುಗಳೇ ಗುರುಗಳೇ, ಯಾವಾಗ ಮಠಬಿಟ್ಟು ಹೋದ್ರೋ ಅಲ್ಲಿಗೆ ಮುಗೀತಪ್ಪಾ ಒಳಕಾ ಬರಾಕ ನನಿಗೆ ಅಧಿಕಾರಿಲ್ಲ. ಆದ್ರೆ ನೀನು ಇಲ್ಲಿ ಇರಾಂಗಿಲ್ಲ. ಹೋಗಿಬಿಡಪ್ಪಾ. ನಾನು ಅಡ್ಡ ಅದೀನಿ. ನೀನು ಇದಕ್ಕ ಸಂಬಂಧ ಇಲ್ಲ.’ ಅದ್ನಂತ್ರೀ ಬಾಲಬಸವ. ಆಗ ಸರ್ಪನ ವಾಕ್ಯ ಕೇಳಿ ಹೊರಗ ನಿಂತ್ಗಂಡ. ‘ಆ ಮಗು ಅಡ್ಡಾಗಿಯಪ್ಪಾ ಬರೋದಿಕ್ಕೆ. ಆತು ಮಗು ಒಳಗ ಬರಾದಿಲ್ಲಪ್ಪಾ ಹೋಗ್ತೀನಿ. ಇಲ್ಲೇನು ಇರೋದಿಲ್ಲ. ಸ್ವಲ್ಪ ಶಾಂತಿಯಾಗಿ ಮಗು’, ಆಗ ಹೆಂಡ್ತಿ ಕರಿಯಾ ಕಳ್ಸಿದ, ತಾಯಿ ಕರಿಯಾ ಕಳ್ಸಿದ, ಪೂಜಾರಿ ಕಲ್ಲಪ್ಪ ಕರಿಯಾಕ ಕಳ್ಸಿದ. ಅಮ್ಮಾ ಕನಕಮ್ಮ ನವ್ರೆ, ಹೆಂಡ್ತಿ ವಡ್ಡೆಟ್ಟವ್ವ, ಕಲ್ಲಪ್ಪ ನಿಮ್ನ ನೋಡಾಕ ಬಂದ್ನೆಪಾ ಅರಗಳಿಗೆ ತಡ ಮಾಡ್ದೆ. ಒಳಾಕ ಬಂದು ಬಿಡ್ತಿದ್ದೆ ನನ್ನ ಮಗ ಬಾಲಬಸವ ಸರ್ಪಗಿ ಅಡ್ಡಾದ. ಒಳಾಕ ಬರಾಕ ನನಿಗೆ ಅಧಿಕಾರ ಇಲ್ಲ, ಒಪ್ಪದಿಲ್ಲಾ ನಾನೇ

ಹೋಗತೀನಿ ಕನಕಮ್ಮ | ಸೋಕೀರ ಮೂವ ತಾಜೀಜಿ |
ಹೋಗತೀನೇ ನನ್ನ ಮಡದೀ | ಸೋಕೀರ ಮೂವ ತಾಜೀಜಿ |
ಹೋಗತೀನಿ ಪೂಜಾರಿ ಕಲ್ಲಪ್ಪ | ಸೋಕೀರ ಮೂವ ತಾಜೀಜಿ |

ಅಂದಾಗ ಕನಕಮ್ಮ ಹಡದ ತಾಯಿ ಹಡದ ಹೊಟ್ಟಿ, ಸಂಕಟದಿಂದ

ಏಲ್ಲಿಗೆ ನೀನೇ ಹೋಗಾತೀಯೋ | ಶಿವನೆನೆಯವ ದೇವೈ |
ಮುಪ್ಪಿನ ಕಾಲಾಬಂದಾವೈಯ್ಯೋ | ಶಿವನೆನೆಯವ ದೇವೈ |
ನಮ್ಮನ್ನು ಬಿಟ್ಟೆ ಹೋಗಾಬಹುದೇ | ಶಿವನೆನೆಯವ ದೇವೈ |
ಮುದುಕ್ರನ್ನ ಬಿಟ್ಟು ಹೋಗಬಹುದೇ | ಶಿವನೆನೆಯವ ದೇವೈ |

ದುಃಖದಲ್ಲಿ ಮುಳುಗಿ ಈಚಾಡ್ತಾಳು. ಹೆಂಡ್ತಿ ವಡ್ಡೆಟ್ಟೆವ್ವ

ಗಂಡನ ಪಾದ ಹಿಡಿದಾಳಯ್ಯೋ | ಶಿವನೆನೆಯವ ದೇವೈ |
ಗಂಡನ ಪಾದ ಹಿಡಿದಾಳಯ್ಯೋ | ಶಿವನೆನೆಯವ ದೇವೈ |
ನಿನ್ನ ಕಾಲಿಗೆ ಬೀಳಾತೇನೇ | ಶಿವನೆನೆಯವ ದೇವೈ |
ನನ್ನಾ ಬಿಟ್ಟು ಹೋಗಾಬ್ಯಾಡ್ರೀ | ಶಿವನೆನೆಯವ ದೇವೈ |
ನನಿಗೆ ಕಷ್ಟಾ ತಪ್ಪಾಲಿಲ್ಲೋ | ಶಿವನೆನೆಯವ ದೇವೈ |
ಹೋಗತೀಯಾ ನನ್ನ ಪತಿಯೇ | ಶಿವನೆನೆಯವ ದೇವೈ |

ಪೂಜಾರಿ ಕಲ್ಲಪ್ಪ ಹೇಳ್ತಾನ ಗುರುಗಳೇ ಗುರುಗಳೇ

ನಮ್ಮನ್ನು ಬಿಟ್ಟೇ ಹೋಗಾತೀರಾ | ಶಿವನೆನೆಯವ ದೇವೈ |
ನೀವೇ ಬಿಟ್ಟಾ ಹೋದಾಮ್ಯಾಲೇ | ಶಿವನೆನೆಯವ ದೇವೈ |
ಇಲ್ಲಿಗೆ ಮಠಾ ಮುಳುಗ್ಯಾವಯ್ಯೋ | ಶಿವನೆನೆಯವ ದೇವೈ |
ಇಲ್ಲಿಗೆ ಹೆಸರೇ ಹೊಗ್ಯಾತಲ್ಲೋ | ಶಿವನೆನೆಯವ ದೇವೈ |
ಯಾರಿಗೆ ಪೂಜೀಯ ಮಾಡಾಲಯ್ಯೋ | ಶಿವನೆನೆಯವ ದೇವೈ |
ಯಾರಿಗೆ ಗುರುವೇ ಅನ್ನಾಲಯ್ಯೋ | ಶಿವನೆನೆಯವ ದೇವೈ |
ಹೋಗಾತೀಯಾ ನನ್ನ ಗುರುವೇ | ಶಿವನೆನೆಯವ ದೇವೈ |

ಕಲ್ಲಪ್ಪ ದುಃಖದಲ್ಲಿ ಮುಳುಗ್ಯಾನು. ಗುರುವುನ್ನ ಅಪ್ಪಿಕೆಂಡು ಗೋಳಾಡಿ ‘ಮಗು ಮಗ ಅಳಬ್ಯಾಡಪ್ಪಾ, ವಡ್ಡಟ್ಟೆವ್ವ ಆಳಬ್ಯಾಡವ್ವ, ಹಡದಾಯಿ ಕನಕಮ್ಮನವರೇ ಹೋಗ್ತಿನಮ್ಮಾ. ನಿಮ್ಮ ಹೊಟ್ಟೆ ತಣ್ಣಗಿರಲಮ್ಮಾ ಹೋಗ್ತಿನಿ. ಇವತ್ತು ಹೋದದು ಇನ್ನು ಯಾವ ಕಾಲಕ್ಕೇ

ತಿರುಗಿ ನಾನೇ ಬರೋದಿಲ್ಲೇ | ಸೋಕೀರ ಮೂವ ತಾಜೀಜಿ |
ಹೋಗಲೇನ ಕನಕವ್ವೋ | ಸೋಕೀರ ಮೂವ ತಾಜೀಜಿ |
ಬಾಲಬಸವ ಪಾದ ಹಿಡದಾನಯ್ಯೋ | ಸೋಕೀರ ಮೂವ ತಾಜೀಜಿ |

‘ನನ್ನ ಪಾದ ಬಿಟ್ಟು ಬಿಡಪಾ ಹೋಗ್ತಿನಿ ಮತ್ತೇ’ ಆಗ ನೋಡ್ರಿ ಬಾಲಬಸವ ಪಾದ ಬಿಟ್ನಂತೆ. ಹಾಗೆ ಬಿಟ್ಟಬಳಿಕ. ‘ಗುರುಗಳೇ ಗುರುಗಳೇ ನಿನ್ನ ಕಾಲಗ ನಾನು ಮಠ ಬಿಟ್ಟು ಹೊರಾಗ ಬಂದೀನಿ. ನಾನು ಒಳಕೆ ಹೋಗೋದಿಲ್ಲ.

ಹೊರಗ ನಾನೇ ಇರ್ತೀನಯ್ಯೋ | ಸೋಕೀರ ಮೂವ ತಾಜೀಜಿ |
ನಿನ್ನ ಪಾದ ಕಾಯುತೀನೇ | ಸೋಕೀರ ಮೂವ ತಾಜೀಜಿ |
ನಿನ್ನ ಮಠ ಕಾಯುತೀನೇ | ಸೋಕೀರ ಮೂವ ತಾಜೀಜಿ |

ಸರ್ಪಾಗಿದ್ದ ಬಾಲಬಸವನು ಹೊರಾಕ ಬಂದಿದ್ದು ಅದು ಒಳಹೋಗ್ಲಿಲ್ಲಂತ್ರೀ. ಅದು ಮಠದ ಬಾಗ್ಲಗ ನಿಲ್ತಂತ್ರೀ. ಗೋಣಿಬಸವೇಶ್ವರ ಕೂಲಹಳ್ಳಿಬಿಟ್ಟು

ಗುಮ್ಮಗೋಳಕ ಹೋಗುತಾನೇ | ಸೋಕೀರ ಮೂವ ತಾಜೀಜಿ |
ಕೂಲಹಳ್ಳಿ ಬಿಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |
ಮಠಮಾನ್ಯ ಬಿಟ್ಟಾನಯ್ಯೋ | ಸೋಕೀರ ಮೂವ ತಾಜೀಜಿ |

‘ಆತಮ್ಮಾ, ಇದು ಒಂದು ವಾಕ್ಯ ನಡೆಸಮ್ಮಾ ಮರಿಬ್ಯಾಡ. ನನ್ನ ಹೊಟ್ಟಿ ಒಳಗೆ ಗಂಡು ಮಗು ಹುಟ್ತಾನು. ಅಂದ್ರ ಗೋಣಿಬಸಪ್ಪನ ಮಗ ಮಲ್ಲಿಕಾರ್ಜುನ ಅಂತ ಹೆಸರಿಡಮ್ಮ’. ಅಂತ ಹೇಳಿ ಗೋಣಿಬಸವೇಶ್ವರ ಗುಮ್ಮಗೋಳಕ ಹೊಂಟಿ

ಒಂದು ಎಂಬೋ ಗವದ ಮ್ಯಾಲೆ | ಸುಖರಾಜ ಬಗದಿ |
ಗುಮ್ಮಗೋಳಕ ಹೋಗುತಾನೇ | ಸುಖಿರಾಜ ಬಗದಿ |

ಗುಮ್ಮಗೋಳಕ ಹೋಗ್ಯಾನು. ಗೋಣಿಬಸವೇಶ್ವರ ಹೋಗತ್ತಗೆ ಪಿಕನಗೌಡ ರುದ್ರಾಕ್ಷಿ ತೊಲಿಕಂಭದ ಮಠ ಕಟ್ಟಿಸಿಬಿಟ್ಟಾನ್ರೀ. ಮಠ ಮುಗದಾವು. ಮ್ಯಾಲೆ ಕಳಸ ಇಟ್ಟವು. ‘ಗುರುಗಳ ಗುರುಗಳೇ ನನ್ನ ಯೋಗತಿ ನೀನು ಮನಸು ಒಪ್ಪಂಗ ನನ್ನೇಗ್ತೀ ಆಗಲ್ಲ. ಆದ್ರೂ ಮಠ ಮಾಡೇನ್ರೀ’. ‘ಆ ಮಗು ಸಾಕಪ್ಪ ಇಷ್ಟೇ ಸಾಕು ಮಗು ಇಲ್ಲೇ ಇರ‍್ತೀನಪಾ ಅಂದ್ರೆ ಇನ್ನೊಂದು ವಾಕ್ಯ ಐತೆ. ಅದನ್ನು ನೆಡ್ಸಿಕೊಡು ಇಲ್ಲಿದ್ದು ಬಿಡ್ತಿನಿ’ ‘ಮತ್ತೇನಿಲ್ಲ ಹಿಂದನಿ ಕಾಲಕ್ಕೆ ಪಾತಾಳಗಂಗೆಗೆ ವಾಕ್ಯ ಕೊಟ್ಟೀನಪಾ, ಮಾತುಕೊಟ್ಟೀನಿ. ಏನಂತ ನಾನು ಅನಾಥ ಅದೀನಿ. ಪರದೇಸಿ ಅದೀನಿ. ನನ್ನ ಹೊಟ್ಟಾಯಾಗ ಇಟ್ಗಂಡು ಜ್ವಾಪಾನ ಮಾಡಿ ಆಕಡೆ ದಂಡಿಗೆ ದಾಟ್ಸಿದರೆ, ದಕ್ಕಬಾಳಿ ಕಡ್ಸಿ ಕರಿ ಸೀರಿ ಉಡ್ಸಿ, ಮುತ್ತಿನ ವಡಿ ಹೊಯ್ದು. ನಿನ್ನ ನಿತ್ಯಾ ಪೂಜಿ ಮಾಡ್ತಿನಿ ಅಂತ ವಾಕ್ಯ ಕೊಟ್ಟೀನಿ. ನನ್ನ ಬಲಭಾಗಕ್ಕೆ ಬಾವಿ ಕಡ್ಸಪಾ’ ‘ಆಗ್ಲಿ ಗುರುಗಳ’ ಅಂದು ಆಗ ನೋಡ್ರಿ ಗೋಣಿಬಸಪ್ಪನ ಬಲಭಾಗಕ್ಕೆ ಬಟ್ಟ ಬಾವಿ ಕಡ್ಸ್ಯಾನು. ನೀರು ಬಿದ್ದ ತಕ್ಷಣಕ್ಕೆ ಗಂಗಾಭವಾನಿಗೆ ಕರಿ ಸೀರಿ ಉಡ್ಸಿದ. ಮುತ್ತಿನ ಉಡಕ್ಕಿ[9] ಹೊಯ್ದ. ಆ ಪಿಕನಗೌಡ್ರೇ ನಾನು ವಾಕ್ಯ ಕೊಟ್ಟೀನಪ್ಪಾ ನನ್ನ ತಾಯಿಗೆ ನಿತ್ಯಾ ಪೂಜಿ ಆಗ್ಬೇಕಪ್ಪಾ ನನ್ನ ಪೂಜಿ ಕಮ್ಮಿ ಆಗ್ಲಿ, ನನ್ನ ತಾಯಿ ಪೂಜಿ ನಿತ್ಯಾ ಆಗ್ಲಿ ಮರಿ ಬ್ಯಾಡ’ ಅಂದ. ಆಗ ಒಳಗೋದ ಮಠ ನೋಡ್ದಿ ಗುಮ್ಮಗೋಳದ ಕಡಿಗೆ ಬೆನ್ನು ಮಾಡ್ದ, ಕೂಲಹಳ್ಳಿ ಕಡಿಗೆ ಮಖ ಮಾಡ್ದ ಗೋಣಿಬಸವೇಶ್ವರ ರುದ್ರಾಕ್ಷಿ ತ್ವಲಿ ಕಂಭದ ಮಠದಾಗೇ

ಶಿಲಾಮೂರ್ತಿ ಆಗ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ಗೋಣಿಬಸಪ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಗುಮ್ಮಗೋಳ ಸೇರ್ಯಾರಯ್ಯೋ | ಸೋಕೀರ ಮೂವ ತಾಜೀಜಿ |

ದೇವತಾ ಮಠದಾಗ ಶಿಲಾಮೂರ್ತಿ ಆದ್ನಂತ್ರೀ. ಗುಮ್ಮಗೋಳದಾಗ ಶಿಲಾಮೂರ್ತಿ ಆದ ಬಳಿಕ ಗೋಣಿಬಸವೇಶ್ವರ ನಂತರದ ಮೂರು ತಿಂಗಳ ನೋಡ್ರಿ ಆತ ಹೆಂಡ್ತಿ ವಡ್ಡಟ್ಟೆವ್ವ

ಗಂಡುಮಗುನ ಹಡದಾಳಯ್ಯೋ | ಸೋಕೀರ ಮೂವ ತಾಜೀಜಿ |
ಹುಟ್ಟೀದೇನೋ ನನ್ನ ಮಗನೇ | ಸೋಕೀರ ಮೂವ ತಾಜೀಜಿ |
ಇವ್ನೇ ತಂದೆ ಇಲ್ಲದ ಮಗನಯ್ಯೋ | ಸೋಕೀರ ಮೂವ ತಾಜೀಜಿ |
ಬಾರೋ ಬಾರೋ ನನ್ನ ಪತಿಯೇ | ಸೋಕೀರ ಮೂವ ತಾಜೀಜಿ |
ನಿನಿಗೆ ಮಗನೆ ಹುಟ್ಟ್ಯಾನಯ್ಯೋ | ಸೋಕೀರ ಮೂವ ತಾಜೀಜಿ |
ನನ್ನ ಮಗನಾಗಿ ಬರಬಾರದೇ | ಸೋಕೀರ ಮೂವ ತಾಜೀಜಿ |

‘ಮಗು ತಂದಿ ಇಲ್ಲಪ್ಪಾ, ಆದ್ರೆ ದುಃಖದಲ್ಲಿ ಮುಳುಗಿ ಈಚಾಡಿ ಅಮ್ಮ ತಾಯಿ, ಕಲ್ಲಪ್ಪ ಮಗ್ನ ಮುಂದು ಇಟ್ಟಕಂಡು ದುಃಖದಲ್ಲಿ ಮುಳುಗಿ ಈಚಾಡಿ ಮಗ್ನ ಜ್ವಾಪಾನ ಮಾಡ್ತಾರೀ. ಕೂಲಳ್ಳಿಯಾಗ. ಆಗ ಮಗ ಹುಟ್ಟಿ ಪ್ರಾಯಕ್ಕೆ ಬಂದ, ಮಗನಿಗೆ ಹನ್ನೆರಡು ವರ್ಷ ತುಂಬಿತು. ಹನ್ನೆರಡು ವರ್ಷ ತುಂಬ ತಡ ತಾಯಿ ಮಗ ಮಠಬಿಟ್ಟು ಹೊರಗ ಬಂದಾರು. ಹೊರಗ ಬಂದು ತಾಯಿ ಮಗ, ಎಡಗಡಿಗೆ ತಾಯಿ ಬಲಗಡಿಗೆ ಮಗ ಮಠದ ಬಾಗಲಾಗೆ

ತಾಯಿಮಗ ಶಿಲಾಮೂರ್ತಿ ಆದಾರಯ್ಯೋ | ಸೋಕೀರ ಮೂವ ತಾಜೀಜಿ |
ಕೂಲಹಳ್ಳೀ ನನ್ನ ದೈವೇ | ಸೋಕೀರ ಮೂವ ತಾಜೀಜಿ |
ಇವರ ಶಿಲಾಮೂರ್ತಿ ಆಗ್ಯಾರಯ್ಯೋ | ಸೋಕೀರ ಮೂವ ತಾಜೀಜಿ |

ಇವ್ರು ಶಿಲಾಮೂರ್ತಿ ಆದ್ರು. ಗೋಣಿಬಸವೇಶ್ವರ ಮಠ ಬಿಟ್ಟು ಹೋಗಿ ಆತ್ನು ಶಿಲಾಮೂರ್ತಿಯಾದ. ಕನಕವ್ವ ಒಬ್ಬಾಕೆ ಆದ್ಲು. ಮುಪ್ಪಿನ ಕಾಲರೀ. ಆಗ ‘ಇಲ್ಲಿಗೆ ಹಡ್ಡಮಗ್ನ ಕಳಕೊಂಡೆ. ಸೂಸಿ ಕಳಕೊಂಡೆ, ಮೊಮ್ಮಗನ ಕಳಕೊಂಡೆ ಅನಾಥಳಾದೆ’. ಎಂದು ಭಾಳ ದುಃಖ ಪಟ್ಟಳೇ, ಜಗ್ಗಿದುಃಖದಲ್ಲಿ ಮುಳುಗಿ ಈಜಾಡಿ ದುಃಖ ಅಡಗಿಸಿಕೊಂಡು ಬಾಳು ಮರ‍್ತು ಹೋಗಾಕಾಲಕ್ಕೆ ಮೊಮ್ಮಗ ಸೂಸಿ ಶಿಲಾಮೂರ್ತಿ ಆಗಿ ಮೂರು ತಿಂಗಳಾಗೆ ಕನಕಮ್ಮ ಮಠಬಿಟ್ಲು, ಮಾನ್ಯ ಬಿಟ್ಲು ಕೆರಿ ಏರಿಮ್ಯಾಕ ಬಂದ್ಲು. ಕೆರಿ ಏರಿಮ್ಯಾಕ ಬಂದು ಮೊಮ್ಮಗನ ಕಡಿ ಮಖವಾಗಿ ಮಗ್ನ ಧ್ಯಾನ ಮಾಡಿದ್ಲು. ‘ಮಗು ಗೋಣಿಬಸವೇಶ್ವರ ಇನ್ನು ಯಾವ ಕಾಲಕ್ಕ ನಾನು ನಿನ್ನ ಪಾದ ಕಾಣ್ಲಪಾ. ನಿನ್ನ ಮಖ ನೋಡ್ಲಪಾ. ಮಗು ಮಲ್ಲಿಕಾರ್ಜುನಪ್ಪ ಅಂತ ಗೋಣಿಬಸಪ್ಪನ ಮಗನಿಗೆ ನಾಮ ಕರ‍್ದುಳು ‘ಆದ್ರೆ ಇಲ್ಲಿಗೆ ಮುಗಿದೋಯ್ತಪಾ ಅಂತ ಹೇಳಿ ಕನಕಮ್ಮ ಕೆರಿ ಏರಿಮ್ಯಾಲೆ ಮೊಮ್ಮಗನ ಕಡಿಗ ಮಖನಾಗಿ ಏರಿ ಮ್ಯಾಲೆ ಕನಕವ್ವ

ಶಿಲಾಮೂರ್ತಿ ಆಗ್ಯಾಳಯ್ಯೋ | ಸೋಕೀರ ಮೂವ ತಾಜೀಜಿ |
ಕನಕಮ್ಮೋ ನನ್ನಾ ದೈವೇ | ಸೋಕೀರ ಮೂವ ತಾಜೀಜಿ |
ಶಿಲಾಮೂರ್ತಿ ಆಗ್ಯಾಳಯ್ಯೋ | ಸೋಕೀರ ಮೂವ ತಾಜೀಜಿ |

ಶಿಲಾಮೂರ್ತಿ ಆದ್ಲಂತ್ರೀ. ಆದ ಬಳಿಕ ಅಂದ್ರೆ ಬ್ಯಾಡರ ಮಗ ಗೋಣಿಬಸವೇಶ್ವರ ಕೂಲಹಳ್ಯಾಗ ಆದ್ರೆ ಆತನ ವರುವು, ಕುರುವು ಹೆಸ್ರು ಕೂಲಹಳ್ಳಿ

ಗುರುವ ಇರೋದು ಗುಮ್ಮಗೋಳ | ಸೋಕೀರ ಮೂವ ತಾಜೀಜಿ |
ವರವ್ರು ಕುರುವು ಕೂಲಳ್ಳೀ | ಸೋಕೀರ ಮೂವ ತಾಜೀಜಿ |

ವರುವು ಕುರುವು ಕೂಲಹಳ್ಳಿ, ಗುರುವು ಇರೋದು ಗುಮ್ಮಗೋಳ. ಶಿಲಾಮೂರ್ತಿ ಆಗ್ಯಾರ್ರೀ. ಇಂಥ ಗೋಣಿಬಸವೇಶ್ವರ ಕಥಿ ನಮ್ಮ ಹೊಸಪ್ಯಾಟಿ ಗ್ರಾಮದಲ್ಲಿರುವಂಥ ನಮ್ಮ ವಂಕಟೇಶಪ್ಪ ಅವರು ಮತ್ತು ನಮ್ಮ ಕೊಟ್ಟೂರು ಗ್ರಾಮದಲ್ಲಿರುವಂಥ ಸತೀಶಪ್ಪ ಅವ್ರು ಅವರು ವಾರ‍್ಗಿ ಗೆಣೆಕಾರರೆಲ್ಲ ಸೇರ‍್ಕೆಂಡು ಬಾಲಬಸವನ್ನ ಕರಿಯಾಕ ಕಳ್ಸಿ ಗೋಣಿಬಸವೇಶ್ವರನ ಚರಿತ್ರೆ ಹೇಳ್ಸಿ

ಮನಬ್ಯಾಸರ ಕಳದಾರೇ ನೋಡುವ್ವಾ | ಶಿವನೆ ಶಿವನಾಣಿ ಮಾದೇವ್ವಾ ಶಂಕರಿ |
ಇಲ್ಲಿಗೇ ಶಿವನೇ ಶಿವ್ವಾ ಶಾಂಭ | ಶಿವನೇ ಶಿವನಾಣೀ ಮಾದೆವ್ವಾ ಶಂಕರಿ |
ಇಲ್ಲಿಗೇ ಹರನೇ | ದೇವಾ ಶಿವನಾಣೀ ಮಾದೆವ್ವಾ ಶಂಕರಿ |
ಕುಂತಿರೋ ಸಭದೊಳಗೇ | ದೈವ ಶಿವನಾಣೀ ಮಾದೇಪ್ಪಾ ಶಂಕರಿ |
ನಮ್ಮ ಶರಣೆ ಬಂದಾರೇ | ದೈವ ಶಿವನಾಣೀ ಮಾದೇಪ್ಪಾ ಶಂಕರಿ |
ಶರಣು ಮಾಡುವೆ ನಿಮಗೆ ಕರುಣೆ ಲಾಲಿಸು ನಮಗೇ ಆ…
ಕೊಟ್ಟೂರೇಶನ ನೋಡಿರಿ ಮುತ್ತಿನಾರತಿ ಮಾಡಿರಿ
ಕೂಲಳ್ಳೇಶನ ನೋಡಿರೀ ಹವಳದಾರತಿ ಮಾಡಿರಿ
ಶ್ರೀರಂಗರಾಯನ ನೋಡಿರಿ ಜಯ ಮಂಗಳಾರತಿ ಮಾಡಿರಿ
ಉಜ್ಜೀನೀಶನ ನೋಡಿರಿ ಮಂಗಳಾರತಿ ಮಾಡಿರಿ
ಜಯಾ ಜಯಾ ನಮ ಪಾರ್ವತಿ ಪತಿ ಹರಹರ ಮಾದೇವ |

ಗೋಣ ಬಸಪ್ಪನ ಸಮಾಧಿ - ಗುಮ್ಮಗೋಳ

ಗೋಣ ಬಸಪ್ಪನ ಸಮಾಧಿ – ಗುಮ್ಮಗೋಳ

 

[1] ಪಿಕನಗೌಡ – ಹಮ್ಮಿಗೆ ಗೋಳ ಊರಿನ ಗೌಡ

[2] ವಾಲಿ – ಓಲೆ

[3] ದಾಲು – ಕಡಿವಾಣ

[4] ಕುತುನಿ ಕುಂಡೀ – ದಪ್ಪ ಕುಂಡಿ

[5] ಚೆಣ್ಣು – ಚೆಡ್ಡಿ

[6] ಇರದಾಳೇ – ಪದಕ

[7] ರಣಬಿಲ್ಲು – ಯುದ್ಧದ ಆಯುಧ

[8] ಆನ ಚಂಡಾಳ – ಭಿಕಾರಿ

[9] ಉಡಕ್ಕಿ – ಮಡಿಲಿಗೆ ಹೆಕ್ಕಿ ತುಂಬುವುದು