ಜನನ: ೨೧-೮-೧೯೧೧-ಮುರುಗೋಡಿನಲ್ಲಿ,

ಮನೆತನ: ತಂದೆ ವೀರಭದ್ರಪ್ಪ-ತಾಯಿ ಚೆನ್ನವೀರಮ್ಮ. ತಾಯಿ ಜಾನಪದ ಗೀತೆ ಹಾಡುತ್ತಿದ್ದರು. ದೊಡ್ಡಪ್ಪನವರಿಗೆ ಸಂಗೀತದ ಪರಿಚಯವಿತ್ತು.

ಗುರು ಪರಂಪರೆ: ಪಕ್ಕದ ಮನೆ ಶಿವಲಿಂಗಯ್ಯನವರೆ ಪ್ರಥಮ ಸಂಗೀತ ಗುರುಗಳು. ಕೆಲಕಾಲ ದೊಡ್ಡಪ್ಪ ಬಾಳಪ್ಪನವರಲ್ಲೂ ಸಂಗೀತ ಶಿಕ್ಷಣ. ಮುಂದೆ ಬಾಲಕೃಷ್ಣ ಬುವಾ ಈಚಲಕರಂಜಿ ಹಾಗೂ ಶಿವಲಿಂಗಸ್ವಾಮಿ ಮಲ್ಲಯ್ಯ ಮಠ ಅವರಲ್ಲಿ ಹೆಚ್ಚಿನ ಶಿಕ್ಷಣ ದೊರೆಯಿತು. ಧಾರವಾಡದ ಮೃತ್ಯಂಜಯಸ್ವಾಮಿ, ಶಿ.ಶಿ. ಬಸವನಾಳ, ಸಿದ್ದಯ್ಯ ಪುರಾಣಿಕ ಇವರ ಆದೇಶದ ಮೇಲೆ ಲಘು ಸಂಗೀತದ ಕಡೆ ವಾಲಿದರು.

ಸಾಧನೆ: ೧೯೩೦ರ ಸುಮಾರಿನಲ್ಲಿ, ಸಂಗೀತ ಕಾರ್ಯಕ್ರಮಗಳನ್ನು ನಿಡಲು ಆರಂಭಿಸಿದ ಹುಕ್ಕೇರಿ ಬಾಳಪ್ಪನವರು ಎಂದೂ ಹಿಂದಿರುಗಿ ನೋಡಿದವರಲ್ಲ. ಅಂದಿನ ಸ್ವಾತಂತ್ರ‍್ಯ ಚಳುವಳಿಯಲ್ಲಿ ಭಾಗವಹಿಸಿ ದೇಶಭಕ್ತಿ ಗೀತೆಗಳನ್ನು ಹಾಡುತ್ತ ಜನಪ್ರಿಯತೆ ಗಳಿಸಿದರು. ನಾಟಕ ಕ್ಷೇತ್ರದಲ್ಲೂ ಕೈಯಾಡಿಸಿದ ಹುಕ್ಕೇರಿಯವರು ರಂಗಗೀತೆಗಳನ್ನು ಹಾಡುವಲ್ಲಿ ನಿಷ್ಣಾತರಾದರು. ಜಾನಪದ ಕ್ಷೇತ್ರದ ಸೋಬಾನ, ಕುಟ್ಟುವ, ಬೀಸುವ, ಹಾಡುಗಳು ಲಾವಣಿಗಳು ಇವರ ಕಂಠಶ್ರೀಯಿಂದ ಹೊಮ್ಮಿತು.

೧೯೫೫ರಲ್ಲಿ ಅಂದಿನ ಭಾರತದ ಪ್ರಧಾನಿ ಪಂ. ಜವಾಹರಲಾಲ ನೆಹರು ಸಮ್ಮುಖದಲ್ಲಿ ಹಾಡುವ ಅವಕಾಶ ದೊರೆಯಿತು. ಅಲ್ಲದೆ ರಾಷ್ಟ್ರಪತಿಗಳ ಮುಂದೆ, ಬಾಬುರಾಜೇಂದ್ರಪ್ರಸಾದ್, ಇಂದಿರಾಗಾಂಧಿ, ಝಾಕಿರ್ ಹುಸೇನ್, ಸಿದ್ಧವನಳ್ಳಿ ನಿಜಲಿಂಗಪ್ಪ-ಕೆಂಗಲ್ ಹನುಮಂತಯ್ಯ ಮುಂತಾದ ರಾಷ್ಟ್ರ ನಾಯಕರ ಮುಂದೆ ದೇಶಭಕ್ತಿ ಗೀತೆಗಳನ್ನು ಹಾಡಿ ಪ್ರಶಂಸೆಗೆ ಪಾತ್ರರಾದವರು. ಸ್ವಾತಂತ್ರ‍್ಯ ಚಳವಳಿಯಲ್ಲೂ ಧುಮುಕಿ ೧೯೩೦ರಲ್ಲಿ ಆರು ತಿಂಗಳ ಕಾಲ ಸೆರೆಮನೆ ವಾಸವನ್ನೂ ಅನುಭವಿಸಿದವರು. ಮುಂದೆ ತಮ್ಮದೇ ಆದ ಮಹಾತ್ಮಾ ಸೇವಾ ಸಂಗೀತ ನಾಟಕ ಮಂಡಳಿ ಸಂಸ್ಥೆಯನ್ನು ಸ್ಥಾಪಿಸಿ ಎಂಟು ವರ್ಷಗಳ ಕಾಲ ನಡೆಸಿದರು.

ಅನಂತರ ೧೯೪೩ರಿಂದ ೧೯೭೨ರ ತನಕ ಸರ್ಕಾರದ ಕೋರಿಕೆಯ ಮೇರೆ ಪ್ರಚಾರಕ (Field Publicity) ರಾಗಿ ರೈತರ ಒಕ್ಕಲುತನ, ಕುಟುಂಬ ಯೋಜನೆ ಕುರಿತಾಗಿ ಹಾಡಿನ ಮೂಲಕವೇ ಪ್ರಚಾರ ನೀಡಿದರು. ರಾಜ್ಯಾದ್ಯಂತ, ಮಠ-ಮಾನ್ಯಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ, ಗಾಯನ ಸಾಮ್ರಾಟರಾಗಿ ಮೆರೆದರು. ಮಹಾರಾಷ್ಟ್ರದಲ್ಲಿ ಅಭಂಗಗಳು, ಕಾಶಿಯಲ್ಲಿ ದೋಹಾಗಳು, ಉತ್ತರ ಭಾರತದಲ್ಲಿ ಠುಮ್ರಿಗಳನ್ನು ಹಾಡಿ ಜನಪ್ರಿಯರಾದವರು. ಆದರೂ ಕನ್ನಡವೇ ಉಸಿರು ಎಂದು ಕನ್ನಡಕ್ಕೇ ಜೋತು ಬಿದ್ದು ಎಂದೆಂದಿಗೂ ಕನ್ನಡವಾಗಿದ್ದು-ಮೊದಲು ಮಾನವನಾಗು ಎಂದು ಸಾರಿದವರು ಬಾಳಪ್ಪನವರು.

ಪ್ರಶಸ್ತಿ-ಸನ್ಮಾನ: ೧೯೬೯-೭೦ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೦ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. ೧೯೮೬ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಅಲ್ಲದೆ ಅನೇಕ ಮಠಮಾನ್ಯಗಳಿಂದ, ಸಾರ್ವಜನಿಕ ಸಂಸ್ಥೆಗಳಿಂದ ಗೌರವಿಸಿ ಸನ್ಮಾನಿಸಲ್ಪಟ್ಟಿದ್ದಾರೆ.

ಹೀಗೆ ಸುಗಮ ಸಂಗೀತ ಕ್ಷೇತ್ರದಲ್ಲಿ ತಾನೇ ತಾನಾಗಿ ಮೆರೆದ ಬಾಳಪ್ಪ ಹುಕ್ಕೇರಿ ಅವರು ೧೫-೧೧-೧೯೯೨ರಂದು ಕೈಲಾಸವಾಸಿಗಳಾದವರು.