ಸಾವಿರ ಹಾಡಿನ ಸರದಾರನೆಂದೇ ಖ್ಯಾತಿ ಪಡೆದ, ‘ಹಾಡನ್ನು ಹರವೋಣ, ಮತ್ಸರ ಮರೆಯೋಣ’ ಎಂಬ ಧ್ಯೇಯ ವಾಕ್ಯ ಸ್ವೀಕರಿಸಿದ ಜಾನಪದ ಗೀತ ಗಾರುಡಿಗ ಬಾಳಪ್ಪ ವೀರಭದ್ರಪ್ಪ ಹುಕ್ಕೇರಿ ಕನ್ನಡ ನಾಡು ಕಂಡ ಅದ್ಭುತಗಳಲ್ಲಿ ಒಬ್ಬರು. ಒಬ್ಬ ಹಳ್ಳಿಯ ನಿವಾಸಿ ತನ್ನ ಹಳ್ಳಿಯನ್ನು ಹಳ್ಳಿಯ ಜನರನ್ನು ಪ್ರೀತಿಸುತ್ತಾ; ಹುಟ್ಟಿದ ಹಳ್ಳಿಯ ವ್ಯಾಮೋಹವನ್ನು ಬಿಡದೆ, ದಿಲ್ಲಿಯವರೆಗೆ ತನ್ನ ಕಾರ್ಯಕ್ಷೇತ್ರವನ್ನು ಹರಹಿಕೊಂಡ ಇತಿಹಾಸವೇ ಹುಬ್ಬೇರಿಸುವಂಥದ್ದು. ಇಷ್ಟೆಲ್ಲ ಕೀರ್ತಿ, ಯಶಸ್ಸು  ಬಂದದ್ದು ನಾವೆಲ್ಲ ಸಾಮಾನ್ಯವೆಂದು ಗ್ರಹಿಸಿದ ಜನಪ್ರಿಯ  ಹಾಡುಗಾರಿಕೆಯಿಂದ; ಇಷ್ಟೊಂದು ಎತ್ತರಕ್ಕೇರಿದ್ದು, ಜೊತೆಗೆ ಆ ಹಾಡುಗಾರಿಕೆ ಬಗ್ಗೆ ಎಲ್ಲರಲ್ಲಿ ಗೌರವ ಹೆಚ್ಚುವಂತೆ ಮಾಡಿದ್ದು, ಬಾಳಪ್ಪನವರ ಮಹತ್ವದ ಸಾಧನೆ.

ಇದನ್ನೆಲ್ಲ ಗಮನಿಸಿದ ಹಿರಿಯರೊಬ್ಬರು (ಗೊರುಚ) ಹೀಗೆ ಬರೆಯುತ್ತಾರೆ: “ಓಡಾಡಿ ಹಣ್ಣಾದವರು ಕೆಲವರು. ನಾಡಿನಾದ್ಯಂತ ಐವತ್ತು ವರ್ಷಗಳಿಂದ ಹಾಡಿಕೊಂಡು ಬಂದಿರುವ ಬಾಳಪ್ಪ ಹುಕ್ಕೇರಿ ಅವರು ಮಾತ್ರ ಹಣ್ಣಾಗಿರಲಿಲ್ಲ.  ತಮ್ಮ ಕಡೆಯುಸಿರಿನ ತನಕ ಅವರಲ್ಲಿತ್ತು ಇಪ್ಪತ್ತರ ಹರೆಯದ ಉತ್ಸಾಹ. ಮೋಜಿನ ಮಾತು, ನಗೆಯ ನುಡಿ! ಬಾಳಪ್ಪ ಓರ್ವ ಅಪರೂಪದ ಕಲಾವಿದ . ಮತ್ತೊಬ್ಬ ಬಾಳಪ್ಪನವರನ್ನು ಕಾಣುತ್ತೇವೆಂದು ಹೇಳಲಾಗದು .” ಇದೊಂದು ಪ್ರಶಂಸೆಯ ಮಾತೆಂದರೂ ಇದರಲ್ಲಿ ಬಹಳಷ್ಟು  ಸತ್ಯ ಅಡಗಿದೆ ಎಂಬುದು ನಿರ್ವಿವಾದ.

ಒಬ್ಬ ಪ್ರತಿಭಾವಂತ ಕಲಾಕಾರನ ಏಳುಬೀಳಿನ ಕಥೆ ಗಮನಿಸುವುದು ಎಂದರೆ ನಮ್ಮ ಸಂಸ್ಕೃತಿಯ ಏಳುಬೀಳಿನ ಕಥೆಯನ್ನು ಗಮನಿಸಿವುದು ಎಂದರೆ ನಮ್ಮ ಸಂಸ್ಕೃತಿಯ ಏಳುಬೀಳಿನ ಕಥೆಯನ್ನು ಗಮನಿಸಿದಂತೆಯೇ ಅದರಲ್ಲೂ ಹುಕ್ಕೇರಿ ಬಾಳಪ್ಪನಂಥವರ ಜೀವನ ಮತ್ತು ಸಾಧನೆಯ ಕಥೆ ನಮ್ಮ ಸಂಸ್ಕೃತಿ ರೂಪಿಸುವ ಅಗಾಧಗಳಿಗೆ ಉದಾಹರಣೆಗಳಂತಿರುತ್ತವೆ.

ಬಾಳಪ್ಪ ತೀರ ಸಾಧಾರಣ ಮನೆತನದಲ್ಲಿ ಹುಟ್ಟಿದವರು. ಬಾಲ್ಯದಲ್ಲಿ ಅನಂತ ಆತಂಕಗಳನ್ನು ಎದುರಿಸಿದವರು. ಆದರೂ ತನ್ನೂರಿನ ಪ್ರೇಮವನ್ನು ಎಂದೂ ಬಿಡದವರು. ಸತ್ತರೆ ತನ್ನೂರಿನಲ್ಲಿಯೇ ಸಾಯಬೇಕೆಂದು ಬಯಸಿದವರು. ಹುಟ್ಟಿದ್ದ ಊರಿನಲ್ಲಿ ಸಾವು ದೊರಕುವುದೆಂದರೆ ಅದೊಂದು ಪುಣ್ಯ  ಎಂತಲೇ ಭಾವಿಸಿದ ಅವರು ಒಂದು ದಿನ ಅದನ್ನು ಪಡೆದವರು.

ಬಾಳಪ್ಪ ಹುಟ್ಟಿದ್ದು ಬೆಳಗಾಂ ಜಿಲ್ಲೆಯ ಸೌದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ. ವೀರಶೈವ ಮತಾವಲಂಬಿಳಾದ ವೀರಭದ್ರಪ್ಪ ಮತ್ತು ಚೆನ್ನವೀರಮ್ಮ ಅವರ ಉದರದಲ್ಲಿ . ದಿನಾಂಕ ೨೧-೮-೧೯೧೧ರಲ್ಲಿ ಜನಿಸಿ, ೧೫-೧೧-೧೯೯೨ರವರೆಗೆ ಬದುಕಿದ್ದು ೮೧ ಸಂವತ್ಸರಗಳನ್ನು ಕಂಡ ದೀರ್ಘಾಯುಷಿ. ತನ್ನ ಜೀವಮಾನದ ಆರು ದಶಕಗಳನ್ನು ಹಾಡಿನ ಮೋಡಿಗೆ ಅರ್ಪಿಸಿ, ತನ್ನ ಕಂಠದ ಸಿರಿಗೆ ಜನ ಜೋತುಬೀಳುವಂತೆ ಮಾಡಿದ ಗಾನ ಗಾರುಡಿಗೆ. ಕಲಿತದ್ದು ಕೇವಲ ಐದನೇ ಈಯತ್ತವರೆಗೆ. ಬೈಲಹೊಂಗಲದಲ್ಲಿ ಜಾನ್ಸನ್‌ ಹೈಸ್ಕೂಲಿನಲ್ಲಿ ಮುಂದುವರಿಕೆ, ಆದರೆ ಪೂರ್ಣ ಹೈಸ್ಕೂಲು ಶಿಕ್ಷಣ ಮುಗಿಸಲು  ಆಗದೇ ಇರುವ ಬಡವ.

ಮುರಗೋಡದಲ್ಲಿ ಕಲಾಕಾರರ ಬೀಡೇ ಇತ್ತು. ತಾಯಿ ಜಾನಪದ ಗೀತೆ ಹಾಡುವಾಕೆ, ದೊಡ್ಡಪ್ಪನಿಗೆ ಸಂಗೀತದ ಪರಿಚಯ. ಮಗ್ಗಲು ಮನೆಯ ಶಿವಲಿಂಗಯ್ಯನವರೇ ಬಾಳಪ್ಪನಿಗೆ ಸಂಗೀತ ಹೇಳಿಕೊಟ್ಟವರು. ಗಂಗಾಧರ ಕೆಲಗೇರಿ ಗುಬ್ಬಿ ನಾಟಕ ಕಂಪನಿಯ ಕಲಾವಿದ. ಮಲ್ಲಿಕಾರ್ಜುನ ಹಣ್ಣಿಕೇರಿ ನೃತ್ಯ ಬಲ್ಲವ. ಕೃಷ್ಣ ಪಾರಿಜಾತದ ಜೋಶಿ, ದೊಡ್ಡಾಟದ ಗುರುಪಾದಪ್ಪ ಕರ್ಜಗಿ, ಸಂಗ್ಯಾಬಾಳ್ಯಾ ಸಣ್ಣಾಟದ ಈರಪ್ಪ, ಪ್ರಸಿದ್ಧ ಲಾವಣಿಕಾರರಾದ ರಾಣು  ಕುಬಣ್ಣ – ಇವರೆಲ್ಲ ಮುರಗೋಡದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ವಾತಾವರಣ ನಿರ್ಮಾಣ ಮಾಡಿದವರು. ಬಾಳಪ್ಪನ ಮೇಲೆ ಇವೆಲ್ಲವುಗಳ ಪ್ರಭಾವವಾಗಿರುವುದು ಸಹಜ.

ಬಾಳಪ್ಪನವರಿಗೆ ಗಾಯನ ಪ್ರತಿಭೆ ಹುಟ್ಟಿನಿಂದಲೇ ಬಂದುದು. ತಾಯಿಯ ಮಡಿಲಲ್ಲೇ ಜನಪದ ಗಾಯನದ ದೀಕ್ಷೆ ಪಡೆದವರು. ದೊಡ್ಡಪ್ಪನವರಾದ ಬಾಳಪ್ಪನವರೇ ಇವರ ಸಂಗೀತ ಶಿಕ್ಷಣದ ಮೊದಲ ಗುರು. ನಂತರ ಶ್ರೀ ಶಿವಲಿಂಗಯ್ಯನವರ ಹತ್ತಿರ ಸಂಗೀತದ ಅಭ್ಯಾಸ ಮಾಡಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯನ್ನೇ ಮುಂದುವರೆಸಿದ್ದರೆ ಬಾಳಪ್ಪ ಒಬ್ಬ ಶ್ರೇಷ್ಠ ಶಾಸ್ತ್ರೀಯ ಸಂಗೀತಗಾರನಾಗಬಹುದಿತ್ತು.  ಆದರೆ ಧಾರವಾಡದ ಮೃತ್ಯುಂಜಯ ಸ್ವಾಮಿಗಳು, ಶಿ.ಶಿ. ಬಸವನಾಳರು, ಸಿದ್ಧಯ್ಯ ಪುರಾಣಿಕರು-ಇವರೆಲ್ಲರ ಸಲಹೆಯ ಮೇರೆಗೆ ಬಾಳಪ್ಪನವರು ಲಘುಸಂಗೀತ-ಸುಗಮ ಸಂಗೀತವನ್ನು ಆಶ್ರಯಿಸಿದರು.

ಬಾಳಪ್ಪನವರು ತಮ್ಮ ಉಪಜೀವನಕ್ಕಾಗಿ ಪಟ್ಟಪಾಡು, ಕಷ್ಟ-ನಷ್ಟಗಳು ಅನಂತ. ಉಪಜೀವನಕ್ಕಾಗಿ ಕಾಗದದ ಹೂಗಳನ್ನು ಮಾಡಿ ಮಾರಿದ ಘಟನೆಗಳೂ ಇವೆ. ಮುರಗೋಡದಿಂದ ಆರು ಕಿಲೋಮೀಟರ್ ದೂರದ ಬೈಲಹೊಂಗಲದ ಸಂತೆಗೆ ಶುಕ್ರವಾರ ನಡೆದೇ ಹೋಗುವ ಬಾಳಪ್ಪ, ತಲೆಯ ಮೇಲೆ ಬೆಲ್ಲ ಹೊತ್ತು ಬರುತ್ತಿದ್ದ. ಬುಧವಾರ ತಮ್ಮೂರಿನ ಸಂತೆ, ಅಲ್ಲಿ ಬೆಲ್ಲದ ತಮ್ಮೂರಿನ ಸಂತೆ, ಅಲ್ಲಿ ಬೆಲ್ಲದ ವ್ಯಾಪಾರ. ಹೀಗೆ ಅನೇಕ ದಿನಗಳವರೆಗೆ ತಲೆಯ ಮೇಲೆ ಬೆಲ್ಲ ಹೊತ್ತು ಮಾರಿ ಉಪಜೀವನ ಸಾಗಿಸಿದ ಹಾಡುಗಾರ.

ಬಾಳಪ್ಪನವರನ್ನು ಬಲ್ಲ ಎಲ್ಲರೂ ಹೇಳುವ ಮಾತೆಂದರೆ ಅವರ ನಡೆ ಶುದ್ಧ, ನುಡಿ ಶುದ್ಧ; ಮನಸ್ಸು ಅಂತಃಕರಣಗಳೂ ಶುದ್ಧ; ಕೈ-ಬಾಯಿಕಚ್ಚೆಗಳು ತೀರ ಶುದ್ಧವಿದ್ದ ಮನುಷ್ಯ. ಅಂತಲೇ ಆತ ಮುರಗೋಡದ ಕಾಕಾ, ಬಲ್ಲವರ ಬಾಳಪ್ಪಣ್ಣ ತನ್ನ ಪರಿಚಿತರ ಮನೆಯ ಅಡುಗೆ ಮನೆವರೆಗೂ ಸರಾಗವಾಗಿ ಓಡಾಡುವ, ಆ ಮನೆಯ ಹೆಣ್ಣು ಮಕ್ಕಳ ಬಗ್ಗೆ ಬಾಯಿತುಂಬ ಮಾತನಾಡುವ ಬಾಳಪ್ಪ ಹೆಣ್ಣು ಮಕ್ಕಳ ಅಣ್ಣನೇ ಆಗಿದ್ದ. ಬಾಳಪ್ಪ ಹಾಡನ್ನು ಎಷ್ಟು ಪ್ರೀತಿಸುತ್ತಿದ್ದನೋ ಹಾಗೆಯೇ ಊಟವನ್ನೂ ಅಷ್ಟೇ ಪ್ರೀತಿಸುತ್ತಿದ್ದ. ಅದಕ್ಕೆಂದೇ ಅವರು ಹೇಳುತ್ತಿದ್ದರು …. “ಹಡೆದ ಹೊಟ್ಟಿ, ಹಾಡೂ ಹೊಟ್ಟಿ ಎರಡೂ ಸಮ ಎಂದು. ಕರ್ನಾಟಕದ ತುಂಬ ಊರಿಗೊಂದು ಮನೆ ಪಡೆದ ಬಾಳಪ್ಪ ವಿಶ್ವಾಸಕ್ಕೆ ಪ್ರತೀಕವಾದ ವ್ಯಕ್ತಿ. ನಾವು ಏನೆಲ್ಲ ಸಾಧಿಸಬಹುದು-ಇದು ಸಾಧಿಸುವುದು ಸಾಮಾನ್ಯ ಸಂಗತಿ ಅಲ್ಲ.

ಜನಪ್ರಿಯ ಸದಭಿರುಚಿಯ ಹಾಡುಗಳನ್ನು  ಆಯ್ಕೆ ಮಾಡಿಕೊಳ್ಳುವ ಬಾಳಪ್ಪನವರಿಗೆ ಶಾಸ್ತ್ರೀಯ ಸಂಗೀತದ ಜೊತೆ ರಂಗಗೀತೆಗಳ ಅನುಭವವೂ ಇರುವುದು ಗಮನಾರ್ಹ. ಅದಕ್ಕಾಗಿ ಅವರ ಧಾಟಿಗಳಲ್ಲಿ ಈ ರಂಗಗೀತೆಯ ಧಾಟಿಗಳ ಛಾಯೆ ದಟ್ಟವಾಗಿರುವುದು ಗಮನಕ್ಕೆ ಬರುತ್ತದೆ. ಜನಪದ ವಿವಿಧ ಹಾಡುಗಳ ಧಾಟಿಗಳು-ಸೋಬಾನ, ಕುಟ್ಟುವ, ಬೀಸುವ, ಲಾವಣಿ-ಮುಂತಾದವುಗಳ ಧಾಟಿಗಳು, ಮರಾಠಿ ಅಭಂಗಗಳು, ಹಿಂಧಿ ಭಜನೆಗಳು ಇವುಗಳ ಪರಿಚಯ ಇರುವುದರಿಂದ ಅವರ ಹಾಡುಗಾರಿಕೆಗೆ ಒಂದು ವೈಶಿಷ್ಟ್ಯತೆ ಇರುವುದು ಗಮನಾರ್ಹ. ಅವರ ದನಿಯ ಆಲಾಪ, ಪಲಕುಗಳು ಅವರ ಗಾಯನಕ್ಕೆ ಒಂದು ವಿಶೇಷ ಮೆರಗನ್ನು ತರುತ್ತಿದ್ದವು.

ಈ ಎಲ್ಲ ಸಂಪತ್ತುಗಳಿಂದ ಅವರು ಇಡೀ ದೇಶದ ತುಂಬ ತಮ್ಮ ಹಾಡುಗಾರಿಕೆಯಿಂದ ಪ್ರಸಿದ್ಧಿ ಪಡೆಯಲು ಸಾಧ್ಯವಾಗಿದೆ. ಹೀಗೆ ಒಬ್ಬ ಸುಗಮ ಸಂಗೀತಗಾರ ಇಡೀ ದೇಶದ ಮರ್ಯಾದೆಯನ್ನು ಪಡೆದದ್ದು, ಮುರಗೋಡಿನ ಮಹಾಂತರಿಂದ ದಿಲ್ಲಿಯ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳವರೆಗೆ-ಶ್ರೋತೃಗಳ  ಸಂಬಂಧ ಪಡೆದದ್ದು ಅವರ ಸಾಧನೆಯ ಮಹತ್ತನ್ನು ಹೇಳುತ್ತವೆ. ಹೀಗಾಗಿ ಬಾಳಪ್ಪ ಕರ್ನಾಟಕಕ್ಕೆ ವಿಶಿಷ್ಟವಾದ ಸುಗಮ ಸಂಗೀತಗಾರನಷ್ಟೇ ಅಲ್ಲ. ಭಾರತ ಕಂಡ ಅಪರೂಪದ ಗಾಯಕ ಎಂಬುದು ಗಮನಾರ್ಹ ಸಂಗತಿ.

ಹುಕ್ಕೇರಿ ಬಾಳಪ್ಪನವರ ನೆನಪು ಬಂದಾಗಲೆಲ್ಲ ಬಿಳಿಯ ಧೋತರ, ಬಿಳಿಯ ಅಂಗಿ, ತಲೆಯ ಮೇಲೆ ಟೊಪ್ಪಿಗೆ, ಆಜಾನುಬಾಹು ದೇಹ ನೆನಪಿಗೆ ಬರುವ ಆಕೃತಿ. ಸ್ವಲ್ಪ ವಿಶೇಷ ಕಾರ್ಯಕ್ರಮವಿದ್ದರೆ ಮೇಲೊಂದು ಕರಿಯಕೋಟು, ತಲೆಗೆ ಜರತಾರಿ ರುಮಾಲು. ೧೯೫೫ರಲ್ಲಿ ದೆಹಲಿಯಲ್ಲಿ ನಡೆದ ಯುವಜನ ಮೇಳಕ್ಕೆ ಹೋದ ಬಾಳಪ್ಪನವರಿಗೆ ಜವಹರಲಾಲ ನೆಹರು ಅವರ ಮನೆಯಲ್ಲಿ ಹಾಡುವ ಅವಕಾಶ ದೊರೆಯಿತು . ಬಾಳಪ್ಪನವರ ಗಾಯನಕ್ಕೆ ಮನಸೋತ ನೆಹರೂಜಿ ಸಂತೋಷದಲ್ಲಿ ಶಹಬ್ಬಾಶ್‌ ಎಂದು ಬೆನ್ನು ಚಪ್ಪರಿಸಿದರಂತೆ. ‘ಆ ಕೋಟು ಇನ್ನೂ ಒಗದಿಲ್ರಿ ನಾ’ ಎಂದು ಚಟಾಕಿ ಹಾರಿಸಿ ನೆಹರೂಜಿ ಅವರನ್ನು ನೆನಪಿಸಿಕೊಳ್ಳುವ ಮಾತನ್ನು ಬಾಳಪ್ಪನವರ ಬಾಯಿಂದಲೇ ಕೇಳಬೇಕು.

ಪ್ರಸಿದ್ಧ ಹಾಡುಗಾರನಾದ ಬಾಳಪ್ಪ ದಿಲ್ಲಿಯ ಪ್ರಧಾನಿ, ರಾಷ್ಟ್ರಪತಿಗಳ ಮುಂದೆ ಹಾಡುವುದಕ್ಕಿಂತ ಮುಂಚೆ ಮೈಸೂರಿನ ಅರಸರ ದರಬಾರಿನಲ್ಲೂ ಹಾಡಿದವ. ಬಾಳಪ್ಪನವರ ಶ್ರೋತೃಗಳ ಬಳಗ ಬಹಳ ದೊಡ್ಡದು. ನೆಹರೂಜಿ, ಇಂದಿರಾಗಾಂಧಿ, ಝಾಕೀರ್ ಹುಸೇನ್‌, ರಾಜೇಂದ್ರ ಪ್ರಸಾದ್‌, ನಿಜಲಿಂಗಪ್ಪ ಮುಂತಾದ ಪ್ರತಿಷ್ಠಿತ ರಾಷ್ಟ್ರನಾಯಕರ ಎದುರಿಗೆ; ಕುವೆಂಪು, ಬೇಂದ್ರೆ, ಡಿ.ಎಲ್‌. ನರಸಿಂಹಾಚಾರ್ ಮುಂತಾದ ಶ್ರೇಷ್ಠ ಸಾಹಿತಿಗಳ ಸಮ್ಮುಖದಲ್ಲಿ ಹಾಡಿದ ಹೆಗ್ಗಳಿಕೆ ಬಾಳಪ್ಪನವರದು. ಆಕಾಶವಾಣಿ ದೂರದರ್ಶನಗಳಿಗಲ್ಲದೆ, ಎಚ್‌.ಎಂ.ವಿ. ಗಾಗಿಯೂ ಹಾಡಿದ ಕೀರ್ತಿ ಅವರದಾಗಿದೆ.

ಬಾಳಪ್ಪ ಕೇವಲ ಒಬ್ಬ ಹಾಡುಗಾರನಾಗಿ ಜೀವನ ಕಳೆದಿದ್ದರೆ ಅದಕ್ಕೆ ಇಷ್ಟೊಂದು ಮಹತ್ವ ಬರುತ್ತಿರಲಿಲ್ಲ. ತನ್ನ ಹಾಡುಗಾರಿಕೆಯ ಪ್ರತಿಭೆಯನ್ನು ಸ್ವಾತಂತ್ಯ್ರ ಚಳುವಳಿಯ ಕಾಲಕ್ಕೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ ತೊಡಗಿಸಿದ್ದು ಒಂದು ಇತಿಹಾಸ. ಕನ್ನಡ, ಮರಾಠಿ, ಉರ್ದು, ಹಿಂದಿ-ಭಾಷೆಗಳನ್ನು ಬಲ್ಲ ಬಾಳಪ್ಪ ಆ ಎಲ್ಲ ಭಾಷೆಗಳಲ್ಲಿ ಸ್ವಾತಂತ್ಯ್ರದ ಅರಿವನ್ನು ಹೆಚ್ಚಿಸುವ ಹಾಡುಗಳನ್ನು ಹಾಡಿದ, ಭಾಷಣ ಮಾಡಿದ, ಪ್ರಭಾತ ಫೇರಿ ನಡೆಸಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ, ಅಸಹಕಾರ ಮತ್ತು ಕಾಯಿದೆ ಭಂಗ ಚಳುವಳಿಯ ಕಾಲಕ್ಕೆ ಈ ಎಲ್ಲ ಕೆಲಸಗಳನ್ನು ಅತ್ಯಂತ ಚುರುಕಿನಿಂದ ಮಾಡಿದ ಬಾಳಪ್ಪ ಇಂಗ್ಲಿಷರ ದುಷ್ಟ ಕಣ್ಣಿಗೆ ಬಿದ್ದ.  ಪರಿಣಾಮವಾಗಿ ೧೯೩೦ರಲ್ಲಿ ಆರು ತಿಂಗಳ ಕಾಲ ಕಾರಾಗೃಹವಾಸವನ್ನೂ ಅನುಭವಿಸಿದ.

೧೯೬೨ರ ಪಾಕಿಸ್ತಾನ-ಚೀನ ಯುದ್ಧಗಳ ಸಮಯದಲ್ಲಿ ತಮ್ಮ ಹಾಡುಗಳಿಂದ ಜನರಲ್ಲಿ ಉತ್ಸಾಹ ತುಂಬಿದರಲ್ಲದೆ, ತಮಗೆ ಬಂದ ಬೆಳ್ಳಿ-ಬಂಗಾರದ ಪದಕಗಳನ್ನು ಸೈನಿಕರ ನಿಧಿಗೆ ದಾನಮಾಡಿದ ಅಪರೂಪದ ಉದಾಹರಣೆಗಳೂ ಇವೆ.

ಬಾಳಪ್ಪ ೧೯೩೨ರಲ್ಲಿ ಗೆಳೆಯರೊಂದಿಗೆ ಕೂಡಿ ‘ಮಹಾತ್ಮಾ ಸೇವಾ ಸಂಗೀತ ನಾಟಕ ಮಂಡಳಿ’ ಎಂಬ ಒಂದು ನಾಟಕ ಕಂಪನಿಯನ್ನೇ ತೆರೆದು ಎಂಟು ವರ್ಷಗಳ ಕಾಳ (೧೯೪೦ ರವರೆಗೆ) ನಡೆಸಿದ. ಆ ನಾಟಕಗಳ ಜೀವಾಳವೆಂದರೆ ಬಾಳಪ್ಪನವರ ಹಾಡುಗಾರಿಕೆ. ಹೀಗಾಗಿ ಅವೆಲ್ಲ ಗಾಯನ ಪ್ರಧಾನ ನಾಟಕಗಳು ಅರ್ಥಾತ್‌ ಬಾಳಪ್ಪನ ನಾಟಕಗಳು. ಇಲ್ಲೂ ಬಾಳಪ್ಪ ಮಾಡಿದ್ದು, ಜನರಿಗೆ ಸ್ವಾತಂತ್ಯ್ರ ಚಳುವಳಿಯ ಸಂದೇಶವನ್ನು ಬೀರುವುದೇ.

೧೯೪೦ರಲ್ಲಿ ನಾಟಕ ಕಂಪನಿ ಮುಚ್ಚಿತು. ಬಾಳಪ್ಪ ಛಲಗಾರ. ಮತ್ತೆ ೧೯೪೧ರಿಂದ ೪೫ರವರೆಗೆ ಇಡೀ ಭಾರತ ದೇಶದ ತುಂಬೆಲ್ಲ ಸಂಚರಿಸಿದ. (ವಿಶೇಷವಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ) ಲಾವಣಿ, ದೇಶಭಕ್ತಿಗೀತೆ, ಭಾವಗೀತೆಗಳನ್ನು ಹಾಡುತ್ತ ಜನರಿಗೆ ಸ್ವಾತಂತ್ಯ್ರದ ಅರಿವು ಹೆಚ್ಚಿಸುವಲ್ಲಿ ಸಹಾಯ ಮಾಡಿದ. ಭಾರತದ ಜನಮನ ಗೆದ್ದ.

ಒಬ್ಬ ಸಾಮಾನ್ಯ ಹಾಡುಗಾರ ಇಷ್ಟೆಲ್ಲ ಮಾಡಲು ಸಾಧ್ಯವೇ ಎಂಬ ಅನುಮಾನ ಬರುವಷ್ಟು ಬಾಳಪ್ಪನವರ ಸಾಧನೆ ಇರುವುದು ಗಮನಾರ್ಹ ಸಂಗತಿ.

ಸ್ವಾತಂತ್ಯ್ರಪೂರ್ವದ ಬಾಳಪ್ಪನವರ ಚರಿತ್ರೆ ಈ ರೀತಿಯದು. ಅವರೇ ಹೇಳುತ್ತಾರೆ: ‘ನಾನಾಗ ಜನಪದ ಹಾಡುಗಳನ್ನು ಹಾಡುತ್ತಿರಲಿಲ್ಲ’ ಎಂದು ಸ್ವಾತಂತ್ಯ್ರಪೂರ್ವದಲ್ಲಿ ಅವರು ಮಾಡಿದ ದೇಶಭಕ್ತಿಯ ಕೆಲಸ ಯ ಆವ ರಾಷ್ಟ್ರಪ್ರೇಮಿಗೂ ಕಡಿಮೆ ಇಲ್ಲದ್ದು. ಹೊಟ್ಟೆ ಹೊರಕೊಳ್ಳುವುದೇ ದುಸ್ತರವಾಗಿದ್ದ ಕಾಲದಲ್ಲಿ, ಬಾಳಪ್ಪನವರು ಹೊಟ್ಟೆ ಹೊರಕೊಳ್ಳುವ ಕೆಲಸದ ಜೊತೆಗೆ ದೇಶ ಸ್ವಾತಂತ್ಯ್ರದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಹಾಡುಗಾರಿಕೆ ಕೇವಲ ಗಾಯನ ಗೋಷ್ಠಿಗಳಾಗಿರಲಿಲ್ಲ. ಅವರು ತಮ್ಮದೇ ಆದ ವಿವರಣೆಗಳನ್ನು ಕೊಡುತ್ತ ಹೋಗುವ ರೀತಿ ತುಂಬಾ ಪರಿಣಾಮಕಾರಿಯಾಗಿರುತ್ತಿತ್ತಂತೆ. ಸ್ವಾತಂತ್ಯ್ರ ಬಂದ ನಂತರ ಸಂಧರ್ಭ ಬದಲಾಯಿತು. ಬಾಳಪ್ಪನವರ ಹಾಡುಗಳೂ ಬದಲಾದವು. ಒಂದು ಇಲಾಖೆಯ ಸಾಮಾನ್ಯ ನೌಕರನಾಗಿ ಪುನಃ ಅವರು ಅವಶ್ಯಕವಾದ ದೇಶದ ಕೆಲಸದಲ್ಲಿಯೇ ತೊಡಗಿದರು.

ದೇಶ ಸ್ವಾತಂತ್ಯ್ರ ಪಡೆದ ಮೇಲೆ-ಅದೇ ೧೯೪೩ರಲ್ಲಿಯೇ ಬಾಳಪ್ಪನವರದು ಒಂದು ಕಡೆ ಗಾಯನ ಗೋಷ್ಠಿ. ವ್ಯವಸಯ ಇಲಾಖೆಯ ಉಪನಿರ್ದೇಶಕರಾದ ಶ್ರೀ ವ್ಹಿ.ಸಿ. ಪಾವಟೆ ಇವರ ಶ್ರೋತೃಗಳಲ್ಲಿ ಒಬ್ಬರು. ಬಾಳಪ್ಪನವರ ಜೇನ ದನಿಯ ಹಾಡಿನ ಮೋಡಿಗೆ, ಸೂಕ್ತ ವಿವರಣೆಗಳಿಗೆ ಮಾರುಹೋದ ಅವರು ವ್ಯವಸಾಯ ಇಲಾಖೆಯಲ್ಲಿ ಕ್ಷೇತ್ರಪ್ರಚಾರ ನೌಕರಿಗೆ ಬರಲು ಆಮಂತ್ರಣ ಇತ್ತರು. ಬಾಳಪ್ಪನವರು ಕಷ್ಟದ ದಿನಗಳಲ್ಲಿ ಸಹಾಯಕ್ಕೆ ಬಂದ ಈ ಸಣ್ಣ ನೌಕರಿಯನ್ನು  ಒಲ್ಲೆ ಎನ್ನದೆ ‘ಆಗಲ್ರಿ ಸಾಹೇಬ್ರ’ ಎಂದು ನಿಷ್ಠೆಯಿಂದ ಸ್ವೀಕರಿಸಿದರು.

೧೯೪೩ ರಿಂಧ ೧೯೭೨ರವರೆಗೆ ಈ ನೌಕರಿಯಲ್ಲಿದ್ದುಕೊಂಡು ರೈತರಿಗೆ ಒಕ್ಕಲುತನ ವಿಷಯಕವಾದ ಬೀಜ, ಗೊಬ್ಬರ, ಆಧುನಿಕ ಕೃಷಿ ಬೇಸಾಯ ಪದ್ಧತಿಗಳನ್ನಲ್ಲದೆ, ಕುಟುಂಬ ಯೋಜನೆಯ ಕುರಿತಾದ ಹಾಡುಗಳನ್ನು ರಚಿಸಿ-ಹಾಡಿ, ತಿಳಿಸಿ ಹೇಳಿ ದೇಶದ ರೈತರ ಉದ್ಯೋಗ ಸುಧಾರಿಸಲು, ಅವರ ಕುಟುಂಬಗಳು ಸುಧಾರಿಸಲು ಸಹಾಯವಾದರು. ಇದೆಲ್ಲ ನೋಡಿದರೆ ಬಾಳಪ್ಪನವರ ಸಂಗೀತ ಸೇವೆ ಅವರಿರುವವರೆಗೆ ದೇಶಕ್ಕಾಗಿ ದುಡಿಯಿತು ಎಂಬುದು ಗಮನಾರ್ಹ ಸಂಗತಿ.

ಮುಂದೆ ಉತ್ತರ ಕರ್ನಾಟಕದ ಪ್ರಸಿದ್ಧಮಠಗಳ ಜಾತ್ರೆ, ಉತ್ಸವಗಳಲ್ಲದೆ, ಪ್ರತಿಷ್ಠಿತ ವೇದಿಕೆಗಳಿಗೆ ಬಾಳಪ್ಪನವರನ್ನು ಆಮಂತ್ರಿಸಲು ಪ್ರಾರಂಭವಾಯಿತು. ಅವರು ಎಷ್ಟರಮಟ್ಟಿಗೆ ಜನಪ್ರಿಯವಾಗಲು ತೊಡಗಿದರೆಂದರೆ ಹುಕ್ಕೇರಿ ಬಾಳಪ್ಪನವರ ಹಾಡುಗಾರಿಕೆ ಇಲ್ಲದೆ ಅವೆಲ್ಲ ಭಣ ಭಣವೆನ್ನತೊಡಗಿದವು. ಕಲಬುರ್ಗಿಯ ಗುರುಬಸವ ಮಠಕ್ಕೂ ಅವರನ್ನು ಮೇಲಿಂದ ಮೇಲೆ ಕರೆಸಲಾಗುತ್ತಿತ್ತು. ಇಂತಹ ಪ್ರಸಂಗಗಳಲ್ಲಿ ಅವರು ಜಾನಪದ ಹಾಡುಗಳನ್ನು ವ್ಯಾಪಕವಾಗಿ ಬಳಸಲು ಪ್ರಾರಂಭಿಸಿದರು. ಸೋಬಾನೆ ಹಾಡುಗಳು, ಕುಟ್ಟುವ, ಬೀಸುವ, ಲಾವಣಿ, ದಾಂಪತ್ಯ  ಪ್ರಧಾನ ಮುಂತಾದ ಜಾನಪದ ಹಾಡುಗಳನ್ನು ಹಾಡುವುದಲ್ಲದೆ, ಕನ್ನಡದ ಪ್ರಸಿದ್ಧ ಕವಿಗಳಾದ ಕುವೆಂಪು, ಬೇಂದ್ರೆ, ಕಣವಿ, ನರಸಿಂಹಸ್ವಾಮಿ, ಕಾವ್ಯಾನಂದ, ಆನಂದಕಂದ, ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ ಮುಂತಾದ ಕವಿಗಳ ಪ್ರಸಿದ್ಧ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು. ಕುವೆಂಪು ಅವರ ‘ಬಾರಿಸು  ಕನ್ನಡ ಡಿಂಡಿಮವ’, ಆನಂದ ಕಂದರ ‘ಯಾತಕವ್ವ ಹುಬ್ಬಳ್ಳಿ ಧಾರವಾಡ’, ಕಾವ್ಯಾನಂದರ ‘ಮೊದಲು  ಮಾನವನಾಗು’,ಬೇಂದ್ರೆಯವರ ‘ಹುಬ್ಬಳ್ಳಿಯಾಂವ’, ಕಡಕಂಓಳ ಮಡಿವಾಳಪ್ಪನವರ ‘ತನ್ನ ತಾ ತಿಳಿದ ಮೇಲೆ’ ಮುಂತಾದ ಹಾಡುಗಳನ್ನು ಬಾಳಪ್ಪನವರ ಬಾಯಿಯಿಂದಲೇ ಕೇಳಬೇಕೆಂಬಷ್ಟು ಪ್ರಸಿದ್ಧರಾದರು.

ವಚನಗಳನ್ನು ಹಾಡುಗಾರಿಕೆಗೆ ಅಳವಡಿಸಿದ ಇತಿಹಾಸ ಇದೇ ಅರವತ್ತು ವರ್ಷಗಳಷ್ಟು ಹಿಂದಿನದು. ಪಂಚಾಕ್ಷರಿ ಗವಾಯಿಗಳು, ಅನಕೃ ಅವರ ಸಲಹೆಯ ಮೇರೆಗೆ ಮಲ್ಲಿಕಾರ್ಜುನ ಮನ್ಸೂರ್ ಅವರು, ಇವರ ಶಿಷ್ಯಂದಿರಾದ ದಿ. ಸಿದ್ಧರಾಮ ಜಂಬಲದಿನ್ನಿ, ಬಸವರಾಜ ರಾಜಗುರು-ಮುಂತಾದವರು ಹಿಂದುಸ್ತಾನಿ ಸಂಗೀತದ ರಾಗಗಳನ್ನು ವಚನಗಳಿಗೆ ಅಳವಡಿಸಿ ಹಾಡಲು ಪ್ರಾರಂಭಿಸಿದ್ದೇ ಪ್ರಥಮ.

ದಿ. ಸಿದ್ಧರಾಮ ಜಂಬಲದಿನ್ನಿ ಮತ್ತು ರಾಜಗುರು ಅವರ ಸಮಕಾಲೀನರಾದ ಬಾಳಪ್ಪನವರು ಹಿಂದುಸ್ತಾನಿ ಸಂಗೀತಕ್ಕಿಂತಲೂ ಭಿನ್ನವಾದ ಜಾನಪದ ಧಾಟಿಗಳಿಗೆ ಹತ್ತಿರವಾದ ರೀತಿಯಲ್ಲಿ ವಚನಗಳಿಗೆ ತಮ್ಮದೇ ಆದ ಧಾಟಿಯನ್ನು ಅಳವಡಿಸಿ ಹಾಡಲು ಪ್ರಾರಂಭಿಸಿದರು. ಇದು ಬಾಳಪ್ಪನವರು ಹಾಕಿದ ಸ್ವತಂತ್ರ ಸಂಪ್ರದಾಯ. ಪ್ರಸಿದ್ಧ ಹಿಂದೂಸ್ತಾನೀ ಸಂಗೀತಗಾರರ ಜೊತೆ ಸುಗಮ ಸಂಗೀತದ ಎಳತಕ್ಕೆ ವಚನಗಳ ಹಾಡುಗಾರಿಕೆಯನ್ನು ಎಳೆತಂದದ್ದು ತೀರ ಗಮನಾರ್ಹ ಸಂಗತಿ.

ಹಾಡನ್ನೇ ತನ್ನ ಉಸಿರಾಗಿಸಿಕೊಂಡ ಬಾಳಪ್ಪನವರಿಗೆ ಜನ ಪ್ರೀತಿಯಿಂದ ಇಟ್ಟ ಹೆಸರುಗಳು, ಕೊಟ್ಟ ಬಿರುದುಗಳು ಅನಂತ. ಅವನ್ನೆಲ್ಲ ನೋಡಿದರೆ ಬಾಳಪ್ಪನವರು ಎಂತಹ ಜನಪ್ರಿಯ ಹಾಡುಗಾರರಾಗಿದ್ದರು. ಎಂಬುದು ನಮಗೆ ಅರಿವಾಗುತ್ತದೆ: ಮುರಗೋಡದ ಮುಂಗೋಳಿ, ಮುರಗೋಡದ ಕಾಕಾ, ಮಾತಿನ ಕಾಕಾ, ಸಭಾಭೂಷಣ, ಜಾನಪದ ಜಾದೂಗಾರ, ಸಾವಿರ ಹಾಡಿನ ಸರದಾರ, ಜನಪದ ಸಾಹಿತ್ಯಾಚಾರ್ಯ, ಜನಪದ ಕಲಾನಿಧಿ, ಜನಪದ ಜ್ಯೋತಿ, ಬೆಲ್ಲದ ಮಾತಿನ ಕಂಚಿನ ಕಂಠದ ಬಾಳಪ್ಪ, ಹೊಂಗಲನಾಡಿನ ಹೆಜ್ಜೇನು, ಜೇನುದನಿಯ ಬಾಳಪ್ಪ ಹುಕ್ಕೇರಿ, ಸಂಗೀತಲೋಕದ ಧ್ರುವತಾರೆ-ಹೀಗೆ ನಾನಾ ಬಗೆಯಾಗಿ ಕರೆದು ಜನ ತಾವೇ ಖುಷಿಗೊಂಡಿದ್ದಾರೆ.

ಅವರ ಹಾಡಿನ ಬದುಕಿಗೆ, ಸಾರ್ಥಕ ಸೇವೆಗೆ, ಪ್ರೋತ್ಸಾಹ ಮನ್ನಣೆ ಎಂಬಂತೆ ಸರಕಾರದಿಂದ ನಾನಾ ಬಗೆಯ ಪ್ರಶಸ್ತಿ ಗೌರವಗಳು ಸಂದಿರುವುದು ಸಹ ವಿಶೇಷದ ಸಂಗತಿ.

೧೯೭೦ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ೧೯೮೦-೮೧ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ೧೯೮೨ರಲ್ಲಿ ದಕ್ಷಿಣ ಹಿಂದೂಸ್ಥಾನದ ಸಾಂಸ್ಕೃತಿಕ ಸಂಸ್ಥೆ (ತಿರುವಾಂಕೂರು-ಕೇರಳ) ಪ್ರಶಸ್ತಿ, ೧೯೮೬ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೮೯ ರಲ್ಲಿ ಮಧ್ಯಪ್ರದೇಶ ಸರ್ಕಾರದ ತುಳಸಿ ಸಮ್ಮಾನ ಪ್ರಶಸ್ತಿ.

ಇವೆಲ್ಲ ಒಬ್ಬ ಮಹಾನ್‌ ಗಾಯಕನ ದಾಖಲೆಗಳು. ಜನಪದ ಅಕಾಡೆಮಿ ಸ್ಥಾಪನೆಯಾದ ಪ್ರಥಮ ಅವಧಿಗೆ ಅವರು ಅದರ ಸದಸ್ಯರಾಗಿದ್ದರು. ಅವರ ಸಾಧನೆಯನ್ನು ಕುರಿತು ಕನ್ನಡದ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ, ಸುಧಾ, ಸಂಯುಕ್ತ ಕರ್ನಾಟಕ, ಪ್ರಪಂಚ, ಕರ್ಮವೀರ, ಜನಮಿತ್ರ, ಇಂಗ್ಲೀಷಿನ ಡೆಬೋನೀಯರ್, ಮರಾಠಿಯ ತರುಣ ಭಾರತ ಮುಂತಾದ ಪತ್ರಿಕೆಗಳು ಬಾಯಿತುಂಬ ಹೊಗಳಿ ಬರೆದಿವೆ.  ಪ್ರಸಿದ್ಧ ಲೇಖಕರಾದ ಡಾ.ಹಾ.ಮಾ. ನಾಯಕ, ಗೂರುಚ, ಸ.ಸ. ಮಾಳವಾಡ, ಕೀ.ರಂ. ನಾಗರಾಜು ಇನ್ನೂ ಮುಂತಾದವರು ಬಾಳಪ್ಪನವರ ಬಗ್ಗೆ ಹೃದಯ ತೆರೆದು ದಾಖಲಿಸಿದ್ದಾರೆ. ಅವರ ಸಾಧನೆಯನ್ನು ದಾಖಲಿಸುವ ಎರಡು ಪುಸ್ತಿಕೆಗಳೂ ಹೊರಬಂದಿವೆ.

ವಿಕಾಸ ಗೀತೆ, ಭಕ್ತಿ ಗೀತೆಗಳೆಂಬ ಎರಡು ಗೀತ ಸಂಗ್ರಹಗಳನ್ನು ಪ್ರಕಟಿಸಿ ಕವಿಗಳ ಸಾಲಿನಲ್ಲಿ ನಿಲ್ಲುವ ಬಾಳಪ್ಪನವರ ಜೀವನವನ್ನು ಕುರಿತಂತೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌.ಡಿ. ಪದವಿಗಾಗಿ ಪ್ರಬಂಧವೊಂದುಕ ಸಿದ್ಧಗೊಳ್ಳುತ್ತಿದೆ.