ಸಿಡಿಲಿನ ಕಿಡಿಯ ಅನಾಹುತಗಳು

ನೀರಾವಿಯನ್ನು ಹೊತ್ತು ಮೇಲೇರುವ ಬಿಸಿಗಾಳಿಯಿಂದಾಗಿ ಆ ಪ್ರದೇಶದಲ್ಲಿ ವಾತಾವರಣದ ಒತ್ತಡ ಕಡಿಮೆಯಾಗುತ್ತದೆ. ಮೋಡಗಳ ನಡುವೆ ಘರ್ಷಣೆಯುಂಟಾಗಿ ಅತ್ಯಧಿಕ ವೋಲ್ಟೇಜು ಉತ್ಪನ್ನವಾಗಿ ಅದೇ ಸಿಡಿಲಾಗಿ ಹೊಡೆಯುತ್ತದೆ. ಈ ಸಿಡಿಲಿನಿಂದ ಏನೇನು ದುಷ್ಪರಿಣಾಮಗಳಾಗುತ್ತವೆ ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ.  ಜನ-ಜಾನುವಾರುಗಳ ಪ್ರಾಣಕ್ಕೆ ಸಂಚಕಾರ ಒದಗುತ್ತದೆ. ಸಿಡಿಲು ಅರಣ್ಯಗಳಲ್ಲಿ ಬಿದ್ದರೆ, ಬಹುತೇಕ ಸಂದರ್ಭಗಳಲ್ಲಿ ಕಾಳ್ಗಿಚ್ಚಿಗೆ ಕಾರಣವಾಗುತ್ತದೆ. ಆದರೆ ಕೆಲವು ಕೀಟಗಳು, ಸೂಕ್ಷ್ಮಾಣು ಜೀವಿಗಳು, ಈ ಸಂದರ್ಭದ ಲಾಭ ಪಡೆಯುತ್ತವೆ. ಜೋರಾಗಿ ಗಾಳಿ ಬೀಸುತ್ತಿರುವಾಗ, ಕೀಟಗಳು ತಮ್ಮ ಶಕ್ತಿಯನ್ನು ಖರ್ಚು ಮಾಡದೆ, ಗಾಳಿಯ ಜೊತೆಗೇ ದೂರ-ದೂರಕ್ಕೆ ಪ್ರಯಾಣಿಸುತ್ತವೆ. ಸಿಡಿಲಿನ ವೇಳೆಯಲ್ಲಿ ವಾತಾವರಣ ಬೆಚ್ಚಗಾಗುವುದರಿಂದ ಕೀಟಗಳಿಗೆ, ಸೂಕ್ಷ್ಮಾಣು ಜೀವಿಗಳಿಗೆ ಹೆಚ್ಚಿನ ಮೊಟ್ಟೆಗಳನ್ನು ಇಡಲು ಅಥವಾ ತಮ್ಮ ಸಂತತಿಯನ್ನು ಮುಂದುವರಿಸಲು ಅನುಕೂಲಕರವಾದ ವಾತಾವರಣ ಸಿಗುತ್ತದೆ. ಸಿಡಿಲು, ಗಾಳಿ, ಮಳೆ ಆದಾಗ ಹಾಲು ಒಡೆದು ಮೊಸರಾಗುವುದೂ ವರದಿಯಾಗಿದೆ. ಬೆಚ್ಚಗಿನ, ತೇವಯುಕ್ತ ಗಾಳಿಯೇ ಇದಕ್ಕೆ ಕಾರಣ. ಇಂಥ ವಾತಾವರಣದಲ್ಲಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗಿ ಅದು ಮೊಸರಾಗಿ ಪರಿವರ್ತನೆಯಾಗುತ್ತದೆ. ಬರೀ ಅಡಿಗೆ ಮನೆಯ ಕಟ್ಟೆಯ ಮೇಲೆ ಇಟ್ಟಿರುವ ಹಾಲಷ್ಟೇ ಒಡೆಯುತ್ತದೆಂದುಕೊಳ್ಳಬೇಡಿ. ಕೆಲವೊಮ್ಮೆ ರೆಫ್ರಿಜರೇಟರ್‌ನಲ್ಲಿ ಇಟ್ಟಿರುವ ಹಾಲು ಕೂಡ ಮೊಸರಾಗುವುದು ಕಂಡು ಬಂದಿದೆಯಂತೆ! ಸಿಡಿಲು ಬೀಳುವ ಸಮಯದಲ್ಲಿ ವಿದ್ಯುತ್ ಕಾಂತೀಯ ತರಂಗಗಳು ರೆಫ್ರಿಜರೇಟರ್‌ನ ಕಬ್ಬಿಣದ ಬಾಗಿಲನ್ನು ಭೇದಿಸಿಕೊಂಡು ಒಳಗೆ ಹೋಗುತ್ತವೆ ಎಂದು ತಜ್ಞರು ಹೇಳುತ್ತಾರಾದರೂ ಹಾಲಿನ ಬ್ಯಾಕ್ಟೀರಿಯಾಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂಬ ನಿರ್ದಿಷ್ಟ ಅಂಶ ಇನ್ನೂ ಗೊತ್ತಾಗಬೇಕಿದೆ.

ಎಲ್ಲ ಸಿಡಿಲುಗಳೂ ನೆಲಕ್ಕೇ ಬೀಳುತ್ತವೆಯೇ……?

ಇಲ್ಲೊಂದು ಆಶ್ಚರ್ಯಕರವಾದ ಸಂಗತಿ ಇದೆ. ನಾವು ತಿಳಿದುಕೊಂಡಿರುವಂತೆ ಸಿಡಿಲುಗಳು ಮೇಲಿನಿಂದ ಕೆಳಗೆ ಬಿದ್ದು, ಇಲ್ಲಿರುವ ಜೀವಗಳಿಗೆ ಹಾನಿ ಮಾಡುತ್ತವೆ ಎಂದು. ಆದರೆ ಎಲ್ಲ ಸಿಡಿಲುಗಳೂ ಹಾಗಲ್ಲ. ಮೋಡಗಳ ಮೇಲ್ಭಾಗದಲ್ಲಿ ಕೂಡ ಸಿಡಿಲುಗಳು ಅಂದರೆ ‘ವಿದ್ಯುತ್ ಚಾಪ’ (Electrical discharge)ಗಳು ಬಿಡುಗಡೆಯಾಗುತ್ತವೆ. ಅವು ಭೂಮಿಯೆಡೆಗೆ ಬರುವುದೇ ಇಲ್ಲ. ಭೂಮಿಯಿಂದ ಸುಮಾರು 40ರಿಂದ 90 ಕಿಲೊ ಮೀಟರ್‌ಗಳಷ್ಟು ಎತ್ತರದಲ್ಲಿ ಮೋಡಗಳ ನಡುವೆ ಡಿಕ್ಕಿಯಾದಾಗ ಇವು ಹುಟ್ಟುತ್ತವೆ. ಕಳೆದ ಶತಮಾನದ ಕೊನೆಯವರೆಗೆ ಈ ವಿಚಾರ ಗೊತ್ತಾಗಿರಲಿಲ್ಲ. ಆದರೆ ಬಾಹ್ಯಾಕಾಶ ಯಾನಿಗಳು, ವಿಮಾನ ಪೈಲಟ್‌ಗಳು ಈ ವಿಷಯವನ್ನು ದೃಢೀಕರಿಸಿದ್ದಾರೆ. ಈ ವಿದ್ಯುತ್ ಚಾಪಗಳು ಉಂಟಾದಾಗ ಆಕಾಶದಲ್ಲಿ ನೀಲಿ, ಕೆಂಪು ಬೆಳಕಿನ ಕಾರಂಜಿಗಳು ಪುಟಿಯುತ್ತಿರುವಂತೆ ಭಾಸವಾಗುತ್ತದೆ. ಈ ವಿದ್ಯುತ್ ಚಾಪ  ಗಳು ಮತ್ತೆ ಮೇಲಕ್ಕೂ ಹೋಗಬಹುದು ಅಥವಾ ಕೆಳಕ್ಕೂ ಬರಬಹುದು! ಇಂಥ ವಿದ್ಯುತ್ ಚಾಪ ಅಥವಾ ಸಿಡಿಲುಗಳನ್ನು ‘ಬ್ಲೂಜೆಟ್’ (ಅಂದರೆ ನೀಲಿ ಕಾರಂಜಿ), ‘ಸ್ಪ್ರೈಟ್’ ಹಾಗೂ ‘ಎಲ್ಫ್’ಗಳೆಂದು ಕರೆಯುತ್ತಾರೆ.

ಒಂದೇ ಒಂದು ಮಿಲಿ ಸೆಕೆಂಡಿನ ಒಂದು ಭಾಗದಷ್ಟು ಕಡಿಮೆ ಅವಧಿಯಲ್ಲಿ ಒಂದು ಸಿಡಿಲು 20 ಸಾವಿರ ಆಂಪಿಯರ್‌ಗಳಷ್ಟು ವಿದ್ಯುತ್ತನ್ನು ಬಿಡುಗಡೆ ಮಾಡುತ್ತದೆ. ಅದರ ಕ್ಷೇತ್ರಬಲ (Field intensity) ಪ್ರತಿ ಚದುರ ಮೀಟರಿಗೆ 2 ಲಕ್ಷ ವೋಲ್ಟ್‌ಗಳಷ್ಟು ಇರುತ್ತದೆ! ಮೋಡಗಳು ಘರ್ಷಿಸಿದಾಗ ಬಿಡುಗಡೆಯಾಗುವ  ಕೋಲಿನಂತಿದ್ದು, ವಿದ್ಯುತ್ತು ಅಂಕು-ಡೊಂಕಾಗಿ ಚಲಿಸಿ, ವಿವಿಧ ದಿಕ್ಕುಗಳಲ್ಲಿ ಹರಿಯುತ್ತದೆ. ಭೂಮಿ ಹಾಗೂ ಮೋಡಗಳ ನಡುವೆ ಚಲಿಸುವ ಮಿಂಚು ಸರಾಸರಿ 1 ರಿಂದ 2 ಕಿ.ಮೀ. ಉದ್ದವಾಗಿರುತ್ತದೆ. ಮೋಡ-ಮೋಡಗಳ ನಡುವೆ ಉಂಟಾಗುವ ಮಿಂಚಿನ ಉದ್ದ 78 ಕಿಲೋಮೀಟರ್‌ವರೆಗೂ ತಲುಪಬಲ್ಲದು. ಅಪರೂಪದ ಸಂದರ್ಭಗಳಲ್ಲಿ ಸಿಡಿಲುಗಳು 140 ಕಿ.ಮೀಟರುಗಳಷ್ಟು ದೂರದವರೆಗೆ ಪಯಾಣಿಸಿರುವುದುಂಟು.

ಸಿಡಿಲಿನ ಭಯ: ಬಯಲು ಪ್ರದೇಶಗಳು, ಸರೋವರಗಳು, ಕೆರೆಗಳು, ಈಜುಕೊಳಗಳು, ಗಿಡ-ಮರಗಳಿರುವ ಜಾಗಗಳು ಸಿಡಿಲು ಬೀಳುವ ಸಂದರ್ಭಗಳಲ್ಲಿ ಬಹಳ ಅಪಾಯಕಾರಿಯಾದ ಸ್ಥಳಗಳೆಂದರೆ ತಪ್ಪಿಲ್ಲ. ಅದಕ್ಕಾಗಿ ಈ ಸ್ಥಳಗಳಿಂದ ದೂರವಿರುವುದೇ ಒಳ್ಳೆಯದು. ನೀರು, ಗಿಡ-ಮರಗಳಲ್ಲಿ ವಿದ್ಯುತ್ ಹರಿಯುವುದರಿಂದ ಗುಡುಗು-ಮಿಂಚಿನ ಸಮಯದಲ್ಲಿ ಈಜಾಡುವುದಾಗಲಿ, ಆಸರೆಗಾಗಿ ಗಿಡ-ಮರಗಳ ಕೆಳಗೆ ನಿಲ್ಲುವುದಾಗಲಿ ಮಾಡಬಾರದು.  ರೈತರು, ರೈತ ಮಹಿಳೆಯರು ತಮ್ಮ ಜಾನುವಾರುಗಳೊಂದಿಗೆ ಹೊಲಗಳಲ್ಲಿ ಇರುತ್ತಾರೆ. ಸಿಡಿಲಿನ ಆತಂಕ ಅವರಿಗೆ ತಪ್ಪಿದ್ದಲ್ಲ. ಗುಡುಗಿನಿಂದ ಕೂಡಿದ ಮಳೆಯಾಗುವ ಲಕ್ಷಣಗಳು ಕಂಡು ಬಂದರೆ, ಬೇಗನೆ ಮನೆ ಸೇರುವುದಾಗಲಿ ಅಥವಾ ಯಾವುದಾದರೂ ಒಂದು ಕಟ್ಟಡದಲ್ಲಿ ಆಶ್ರಯ ತೆಗೆದುಕೊಳ್ಳುವುದು ಒಳ್ಳೆಯದು.

ಗುಡುಗು-ಮಿಂಚುಗಳು ಆರ್ಭಟಿಸುವ ಸಮಯದಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಿರುವವರೆಗೆ ಯಾವ ತೊಂದರೆಯೂ ಆಗುವುದಿಲ್ಲ. ಸಂಪೂರ್ಣವಾಗಿ ಬಂದೋಬಸ್ತ್ ಆಗಿರುವ ಕಾರಿನಂತಹ ವಾಹನ ಅತ್ಯಂತ ಸುರಕ್ಷಿತ ಎಂದು ಹೇಳುತ್ತಾರೆ. ಏಕೆಂದರೆ ವಿದ್ಯುತ್ತನ್ನು ಕಾರಿನ ಹೊರ ಕವಚ ಪಕ್ಕಕ್ಕೆ ದೂಡಿ ಬಿಡುತ್ತದೆ. ನಡೆಯುತ್ತ ಹೊರಟಿರುವ ಪಾದಚಾರಿಗಳು ಯಾವುದೇ ಕಾರಣಕ್ಕೂ ಲೋಹದ ವಸ್ತುಗಳನ್ನು ಮುಟ್ಟಬಾರದು. ವಿಶೇಷವಾಗಿ ಛತ್ರಿಯನ್ನು ಏರಿಸಲೇಬಾರದು. ಅದರಲ್ಲಿರುವ ಕಬ್ಬಿಣದ ಸರಳು ಸಿಡಿಲಿಗೆ ನೇರವಾದ ಆಹ್ವಾನ ನೀಡಬಹುದು. ಸೈಕಲ್, ಮೋಟರ್ ಸೈಕಲ್ ಮೇಲೆ ಹೋಗುತ್ತಿರುವವರು ಅವುಗಳನ್ನು ನಿಲ್ಲಿಸಿ, ಅವುಗಳಿಂದ ದೂರ ನಿಂತು ಮಳೆ ನಿಂತ ಮೇಲೆ ಮತ್ತೆ ಪ್ರಯಾಣಿಸುವುದು ಒಳ್ಳೆಯದು. ಒಂದು ವೇಳೆ ಯಾವ ಆಶ್ರಯವೂ ಸಿಗದೇ ಇದ್ದಲ್ಲಿ, ಸುಮ್ಮನೆ ನೆಲದ ಮೇಲೆ ಎರಡು ಕಾಲುಗಳನ್ನು ಜೋಡಿಸಿಕೊಂಡು ಕುಳಿತು ಬಿಡಬೇಕು. ಅಲ್ಲದೆ ಮೊಬೈಲ್ ಫೋನು ಜೊತೆಯಲ್ಲಿದ್ದರೆ ಅದನ್ನು ಸ್ವಿಚ್ ಆಫ್ ಮಾಡಬೇಕು.

ಸಿಡಿಲಿನಿಂದ ಮನುಷ್ಯರು, ಪ್ರಾಣಿಗಳಿಗೆ ಅಪಾಯ

ಪಾಶ್ಚಾತ್ಯರಲ್ಲಿ ಒಂದು ಗಾದೆ ಮಾತು ಪ್ರಚಲಿತವಿದೆ. “ಬಿರುಗಾಳಿ ಮಳೆಯ ಸಂದರ್ಭದಲ್ಲಿ ‘ಓಕ್(OK)’ ಗಿಡಗಳನ್ನು ಬಿಟ್ಟು, ‘ಬೀಚ್ (Beech)’ ಗಿಡಗಳ ಕೆಳಗೆ ಆಶ್ರಯ ತೆಗೆದುಕೊಳ್ಳಬೇಕು” ಎಂಬುದೇ ಆ ಗಾದೆ ಮಾತು. ‘ಓಕ್’ ಗಿಡಗಳು ಬಹಳ ಎತ್ತರಕ್ಕೆ ನೇರವಾಗಿ ಬೆಳೆಯುತ್ತವೆ. ಆದರೆ ‘ಬೀಚ್’ಗಿಡಗಳು ‘ಓಕ್’ಗಳಿಗೆ ಹೋಲಿಸಿದರೆ ಚಿಕ್ಕವು.  ಅವರ ತಿಳುವಳಿಕೆಯಂತೆ ಸಿಡಿಲು ಎತ್ತರದ ಗಿಡಗಳಿಗೆ ಬಡಿಯುತ್ತದೆ. ಆದರೆ ಸಣ್ಣ ಗಿಡಗಳಿಗೆ ಹೊಡೆಯುವುದಿಲ್ಲ. ಆದರೆ ಇದು ನಿಜವಲ್ಲ ಎಂಬುದನ್ನು ಗಮನಿಸಬೇಕು. ಸಿಡಿಲು ಎಲ್ಲ ಗಿಡ-ಮರಗಳಿಗೂ ಹೊಡೆಯುತ್ತದೆ. ಸಿಡಿಲು ಗಿಡಗಳಿಗೆ ಹೊಡೆದಾಗ ಅವು ಕಿತ್ತು ಬೀಳಬಹುದು,  ಸೀಳಿ ಹೋಗಬಹುದು. ಸಿಡಿಲಿನಲ್ಲಿರುವ ವಿದ್ಯುತ್ತು ನೆಲದಡಿಯಲ್ಲಿರುವ ಬೇರುಗಳ ತನಕವೂ ಚಲಿಸಿ, ಗಿಡದ ಸಾವಿಗೆ ಕಾರಣವಾಗಲೂಬಹುದು. ಗಿಡದ ಆಶ್ರಯ ಹುಡುಕಿ ಬಂದ ಮಾನವರು, ದನ ಕರು, ಕುರಿಗಳ ಪರಿಸ್ಥಿತಿ ಗಂಭೀರವಾಗಬಹುದು. ಶರೀರಕ್ಕೆ  ಗಂಭೀರವಾದ ಸುಟ್ಟಗಾಯಗಳಾಗಬಹುದು ಇಲ್ಲವೇ ಪಾರ್ಶ್ವವಾಯು ಕೂಡ ಬಡಿಯಬಹುದು.

ಹೊಂಡಗಳಲ್ಲಿ, ಕೆರೆಗಳಲ್ಲಿ ಮೀನು ಉತ್ಪಾದನೆಯಲ್ಲಿ ತೊಡಗಿರುವವರಿಗೂ ಕೂಡ ಸಿಡಿಲಿನಿಂದ ಅಪಾಯ ತಪ್ಪಿದ್ದಲ್ಲ. ಮನುಷ್ಯರು ಹಾಗೂ ಜಾನುವಾರುಗಳಿಗೆ ಹೋಲಿಸಿದರೆ ಮೀನುಗಳಿಗೆ ಸಿಡಿಲಿನ ಅಪಾಯ ಅಷ್ಟಾಗಿ ಇರುವುದಿಲ್ಲ. ಹೊಂಡದಲ್ಲಿ ಸಿಡಿಲು ಬಿದ್ದಾಗ, ಅದರಿಂದ ಹರಿಯುವ ವಿದ್ಯುತ್ತು ಇಡೀ ಹೊಂಡದಲ್ಲಿ ಏಕರೂಪವಾಗಿ ಹರಡಿಕೊಂಡು ಬಿಡುತ್ತದೆ.  ಮೀನುಗಳ ಶರೀರದಿಂದ ಕೂಡ ವಿದ್ಯುತ್ತು ಸರಳವಾಗಿ ಹರಿದು ಹೋಗುವುದರಿಂದ, ಅವು ಸಾಯುವುದಿಲ್ಲ. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಹೀಗೆಯೇ ಆಗುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಸಿಡಿಲು ಬಿದ್ದ ಜಾಗ ದೂರದಲ್ಲಿದ್ದರೆ ಸಿಡಿಲಿನ ವಿದ್ಯುತ್ತಿನ ಪ್ರಮಾಣ ಕಡಿಮೆ ಇದ್ದರೆ, ಅಪಾಯ ತಪ್ಪಬಹುದು. ಆದರೆ ಮೀನುಗಳ ಗುಂಪುಗಳ ಸಮೀಪದಲ್ಲಿಯೇ ಭಾರೀ ಸಿಡಿಲೊಂದು ಎರಗಿದರೆ, ಅವುಗಳ ಕಥೆ ಮುಗಿದಂತೆಯೇ….! ಆದ್ದರಿಂದ ಮೀನು ಉತ್ಪಾದಕರು ಮುಂಜಾಗ್ರತಾ ಕ್ರಮವಾಗಿ ತಮ್ಮ ಹೊಂಡಗಳ ಮಗ್ಗುಲಲ್ಲಿ ಒಂದು ‘ಸಿಡಿಲುವಾಹಕ (Lightning Conductor)’ ವನ್ನು ಸ್ಥಾಪಿಸಿಕೊಂಡರೆ, ಸಿಡಿಲಿನಿಂದ ಆಗಬಹುದಾದ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದು.

ನಮ್ಮ ಹಿರಿಯರಲ್ಲಿ ಒಂದು ಸಾಮಾನ್ಯ ನಂಬಿಕೆ ಜನಜನಿತವಾಗಿದೆ. ಮಳೆ ಬರುವುದಕ್ಕಿಂತ ಮೊದಲು ಹೆಲಿಕಾಪ್ಟರ್ ಚಿಟ್ಟೆ(Dragon Flies)ಗಳು (ಬಾದುಂಬಿ) ಕೆಲವು ಬಗೆಯ ಸೊಳ್ಳೆಗಳು, ನೊಣಗಳು, ನುಸಿಗಳು ಹೊಂಡ ಅಥವಾ ಕೆರೆಗಳ ಮೇಲೆ ಅತಿ ಕೆಳಮಟ್ಟದಲ್ಲಿ ಹಾರಾಡುತ್ತವೆ.  ಹಾಗೆ ಅವು ಕೆಳಮಟ್ಟದಲ್ಲಿ ಹಾರಾಡುತ್ತಿದ್ದರೆ ಸ್ವಲ್ಪ ಹೊತ್ತಿನಲ್ಲಿ ಮಳೆ ಬರುತ್ತದೆ ಎಂದು ಅವರು ಹೇಳುತ್ತಾರೆ. ವೈಜ್ಞಾನಿಕವಾಗಿಯೂ ಇದಕ್ಕೆ ಬೆಂಬಲವಿದೆ.

ಕೀಟಗಳ ಪುಕ್ಕಟೆ ಪ್ರಯಾಣ

ವಾತಾವರಣದ ಒತ್ತಡ ಅಧಿಕವಾಗಿರುವಾಗ ಗಾಳಿ ಭಾರವಾಗಿರುತ್ತದೆ. ಈ ಭಾರವಾದ ಗಾಳಿ ಸಣ್ಣ ಕೀಟಗಳು ತೇಲಲು ಸಾಕಷ್ಟು ಸಂಪ್ಲವನ ಶಕ್ತಿಯನ್ನು ಕೊಡುತ್ತದೆ. ಹಾಗಾಗಿ ಕೀಟಗಳು ನಿರಾಯಾಸವಾಗಿ, ತಮ್ಮ ಸ್ವಂತ ಶಕ್ತಿಯ ಖರ್ಚಿಲ್ಲದೆ, ವಾತಾವರಣದ ಎತ್ತರದ ಸ್ತರಗಳಲ್ಲಿ ಹಾರಾಟ ನಡೆಸುತ್ತವೆ.

ಬಿರುಗಾಳಿ, ಗುಡುಗು, ಮಿಂಚುಗಳು ಆರಂಭವಾಗುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ವಾತಾವರಣದ ಒತ್ತಡ ಕುಸಿಯುತ್ತದೆ. ಒತ್ತಡ ಕುಸಿದಾಗ ಗಾಳಿ ಹಗುರವಾಗುತ್ತದೆ. ತಮಗೆ ಬೆಂಬಲ ಕೊಡುತ್ತಿದ್ದ ಗಾಳಿಯ ಬಲ ಕಡಿಮೆಯಾದ ಕೂಡಲೇ ಕೀಟಗಳು ಕೂಡ ಅನಿವಾರ್ಯವಾಗಿ ಕೆಳಗಿನ ಹಂತಕ್ಕೆ ಬರಲೇ ಬೇಕಾಗುತ್ತದೆ. ಹೀಗಾದಾಗ ನೆಲದಿಂದ ಸ್ವಲ್ಪ ಎತ್ತರದಲ್ಲಿ ಬಹಳ ಸಂಖ್ಯೆಯಲ್ಲಿ ಕೀಟಗಳು ಹಾರಾಟ ನಡೆಸುತ್ತಿರುವಂತೆ ನಮಗೆ ತೋರಿಬರುತ್ತದಷ್ಟೇ ಅಲ್ಲ. ಈ ದೃಶ್ಯ ಮಳೆ ಬರುವ ಸೂಚನೆಯನ್ನು ಕೂಡ ನಮಗೆ ಕೊಡುತ್ತದೆ.

ವಾತಾವರಣದ ಒತ್ತಡದ ಬದಲಾವಣೆಗಳಿಗೆ ಸ್ಪಂದಿಸುವ ಸುಮಾರು ಐದು ಸಾವಿರದಷ್ಟು ಕೀಟಗಳ ಪ್ರಬೇದಗಳು ನಮಗೆ ಕಾಣ ಸಿಗುತ್ತವೆ. ಈ ಕೀಟಗಳಿಗೆ ‘ಗುಡುಗುಕೀಟ’ (Thunderbug) ಗಳೆಂದೇ ಕರೆಯುತ್ತಾರೆ. ಇವುಗಳನ್ನು ವೈಜ್ಞಾನಿಕವಾಗಿ Thysanoptera (ಥೈಸನೊಪ್ಟೆರಾ) ವರ್ಗಕ್ಕೆ ಸೇರಿಸಲಾಗಿದೆ. ಈ ವರ್ಗದ ಕೀಟಗಳಲ್ಲಿ ಅನೇಕ ಬಗೆಗಳಿವೆ.  ನೊಣಗಳು, ಹೇನುಗಳು, ನುಸಿಗಳು ಮುಂತಾದ ಕೀಟಗಳೂ ಈ ಗುಂಪಿಗೆ ಸೇರಿವೆ.  ಇವುಗಳ ರೆಕ್ಕೆ ಹೆಚ್ಚು ಕಡಿಮೆ ಒಂದೇ ಬಗೆಯವಾಗಿದ್ದು ಎಳೆಗಳು, ಕುಚ್ಚುಗಳಿಂದ ಕೂಡಿವೆ.  ಈ ಹಗುರವಾದ ಎಳೆಗಳು, ಕುಚ್ಚುಗಳಿಂದ ಮಾಡಲ್ಪಟ್ಟಿರುವ ರೆಕ್ಕೆಗಳ ಸಹಾಯದಿಂದ ಅವು ಗಾಳಿಯಲ್ಲಿ ಅನಾಯಾಸವಾಗಿ ತೇಲುತ್ತ, ಗಾಳಿ ಕರೆದುಕೊಂಡು ಹೋದಲ್ಲಿಗೆ  ಪ್ರಯಾಣ ಬೆಳೆಸಬಲ್ಲವು.

ಸಿಡಿಲಿನಿಂದ ಶಕ್ತಿ

ಲೋಹ ಹಾಗೂ ಲೋಹದ ಸಾಮಾನುಗಳು ಸಿಡಿಲನ್ನು ಆಕರ್ಷಿಸುತ್ತವೆ ಎನ್ನುವ ಮಾತು ಅಷ್ಟು ನಿಜವಲ್ಲ. ಏಕೆಂದರೆ ಸಿಡಿಲು ಚಲಿಸುತ್ತಿರುವಾಗ ಅದು ತನ್ನ ವೋಲ್ಟೇಜ್ ವ್ಯತ್ಯಾಸವನ್ನು ಸಮದೂಗಿಸುವ ಪ್ರಯತ್ನದಲ್ಲಿ ಇರುತ್ತದೆ. ಅದಕ್ಕಾಗಿ  ಅತ್ಯಂತ ಕಡಿಮೆ ಪ್ರತಿರೋಧ ಒಡ್ಡುವ ವಸ್ತುವು ಅವುಗಳಿಗೆ ಅನುಕೂಲವಾಗುತ್ತದೆ. ಲೋಹಗಳು ನಮಗೆ ಗೊತ್ತಿರುವ ಹಾಗೆ ವಿದ್ಯುತ್ತಿಗೆ ಅತ್ಯಂತ ಕಡಿಮೆ ಪ್ರತಿರೋಧವನ್ನು ಒಡ್ಡುತ್ತವೆ. ಅಂದರೆ ಅವುಗಳ ಮೂಲಕ ವಿದ್ಯುತ್ತು ಸರಾಗವಾಗಿ ಹರಿಯುತ್ತದೆ ಎಂದರ್ಥ. ಅದೇ ಒಣ ಕಟ್ಟಿಗೆಯನ್ನು ನೋಡಿ. ಅದರೊಳಗೆ ವಿದ್ಯುತ್ತು ಹರಿಯುವುದೇ ಇಲ್ಲ. ಅಂದರೆ ವಿದ್ಯುತ್ತಿಗೆ ಅತ್ಯಂತ ಅಧಿಕ ಪ್ರತಿರೋಧವನ್ನು ಅದು ಒಡ್ಡುತ್ತದೆ. ಸಿಡಿಲಿಗೆ ಸಂಬಂಧಿಸಿದಂತೆ, ಬಯಲು ಪ್ರದೇಶದಲ್ಲಿ ನೆಲದ ಮೇಲೆ ನಿಂತಿರುವ ಮನುಷ್ಯ ಹಾಗೂ ಲೋಹದ ಸರಳುಗಳ ನಡುವೆ ಯಾವ ವ್ಯತ್ಯಾಸಗಳೂ ಇಲ್ಲ. ಮನುಷ್ಯ ಹಾಗೂ ಲೋಹದ ಸರಳಿಗೆ ಸಿಡಿಲಿನಿಂದಾಗಬಹುದಾದ ಅಪಾಯ ಒಂದೇ ಆಗಿರುತ್ತದೆ. ನೆಲದಿಂದ ಮೇಲಕ್ಕೆ ಚಾಚಿಕೊಂಡಿರುವ ಲೋಹದ ವಸ್ತುವಿಗೆ   ಸಿಡಿಲು ಹೊಡೆದರೂ ಇದೇ ಪರಿಣಾಮವಾಗುತ್ತದೆ. ಸಿಡಿಲಿನ ಹಾದಿಯಲ್ಲಿ ಮೊದಲು ಸಿಗಬಹುದಾದ ಯಾವುದೇ ಲೋಹದ ವಸ್ತುವಿಗೆ ಅಥವಾ ಮನುಷ್ಯರಿಗೆ ಸಿಡಿಲು ಹೊಡೆಯಬಹುದು. ಏಕೆಂದರೆ ಸಿಡಿಲು ಆದಷ್ಟು ತನಗೆ ಸಮೀಪ ಸಿಗುವ ‘ಗುರಿ’ಯನ್ನು ತಲುಪುತ್ತದೆ.

ಚೆಂಡು ಅಥವಾ ದುಂಡು ಮಿಂಚು

ಆಕಾಶದಲ್ಲಿ ನಮಗೆ ಕಾಣುವುದು ಅನೇಕ ಬಿಸಿಲುಗಳೊಂದಿಗೆ ಪ್ರವಹಿಸುವ ‘ಕೋಲ್ಮಿಂಚು’ ಮತ್ತು ಕ್ಯಾಮರಾದ ಫ್ಲ್ಯಾಷ್‌ನಂತೆ ಮೋಡಗಳ ಹಿನ್ನೆಲೆಯಲ್ಲಿ ಹರಡಿಕೊಳ್ಳುವ ಮಿಂಚು. ಈ ಪ್ರಕಾರಗಳನ್ನು ಬಿಟ್ಟರೆ ಬೇರೆ ಬಗೆಯ ‘ಮಿಂಚು’ಗಳನ್ನು ನಾವೆಲ್ಲ ಇಲ್ಲಿಯವರೆಗೆ ಕಂಡಿಲ್ಲ.  ಅಷ್ಟೇ ಅಲ್ಲ ಮತ್ತೆ ಬೇರೆ ಬಗೆಯ ಮಿಂಚುಗಳಿರಬಹುದು ಎಂಬ ಕಲ್ಪನೆಯನ್ನು ಕೂಡ ಮಾಡಿಕೊಂಡಿಲ್ಲ. ಆದರೆ ವಿಜ್ಞಾನಿಗಳು ಹೇಳುವ ಮಾತಿನಂತೆ ದುಂಡಗೆ ವಾಲಿಬಾಲ್ ಆಕಾರದಲ್ಲಿರುವ ‘ಮಿಂಚು’ ಕೂಡ ಇದೆಯಂತೆ. ಅದನ್ನು ‘ಚೆಂಡು ಮಿಂಚು’ ಅಥವಾ ‘ದುಂಡು ಮಿಂಚು’ ಎಂದು ಅವರು ಕರೆಯುತ್ತಾರೆ. ಇದು ಬಹಳ ಹೊತ್ತಿನವರೆಗೆ ಅಸ್ತಿತ್ವದಲ್ಲಿ ಇರುವುದಿಲ್ಲ. ವಾಲಿಬಾಲ್ ಚೆಂಡಿನ ಆಕಾರದ ಇದು  ಕೇವಲ ಎರಡರಿಂದ ಎಂಟು ಸೆಕೆಂಡುಗಳವರೆಗೆ ಹೊಳೆದು ಮಾಯವಾಗಿ ಬಿಡುತ್ತದೆ. ಕೆಲವು ಸಂದರ್ಭಗಳಲ್ಲಿ ಅದು 30 ಸೆಕೆಂಡುಗಳವರೆಗೂ ಅಸ್ತಿತ್ವದಲ್ಲಿ ಇರುತ್ತದೆ ಎಂದು ಅದನ್ನು ನೋಡಿದವರು ಹೇಳಿದ್ದಾರೆ.  ‘ಚೆಂಡು ಮಿಂಚು’ ಯಾವಾಗಲೂ ದುಂಡಗೆ ಇರಬೇಕೆಂದೇನೂ ಇಲ್ಲ. ಮೊಟ್ಟೆಯಾಕಾರದ್ದೂ ಆಗಿರಬಹುದು, ಇಲ್ಲವೇ ದಂಡಾಕಾರದಲ್ಲಿಯೂ ಇರಬಹುದು. ಇಲ್ಲಿಯವರೆಗೆ ನೋಡಲು ಸಿಕ್ಕಿರುವ ಅತ್ಯಂತ ದೊಡ್ಡ ಚೆಂಡು ಮಿಂಚಿನ ವ್ಯಾಸ 15 ರಿಂದ 40 ಸೆಂಟಿಮೀಟರ್ ಇರಬಹುದೆಂದು ಅಂದಾಜು ಮಾಡಲಾಗಿದೆ.

ಸಿಡಿಲು, ನೆಲದ ಮೇಲಿರುವ ಲೋಹದ ವಸ್ತುವಿಗೆ ಹೊಡೆದಾಗ   ಅದು ಕರಗುತ್ತದೆ.  ಅದರೊಳಗಿನ   ಪದಾರ್ಥ ಮೇಲಕ್ಕೆ ‘ಚೆಂಡಿ’ನ ರೂಪದಲ್ಲಿ ಚಿಮ್ಮಲ್ಪಡುತ್ತದೆ.  ಇದೇ ನಮಗೆ ಕಾಣಿಸಬಹುದಾದ ‘ಚೆಂಡು ಮಿಂಚು’.

ವಿಜ್ಞಾನಿಗಳು ಪ್ರಯೋಗ ಶಾಲೆಗಳಲ್ಲಿ ಚೆಂಡು ಮಿಂಚನ್ನು ಉತ್ಪಾದಿಸುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಜಪಾನಿನ ವಿಜ್ಞಾನಿಗಳು 1991ರಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಯೋಗ ಶಾಲೆಯಲ್ಲಿ ಚೆಂಡು ಮಿಂಚನ್ನು ಉತ್ಪಾದಿಸಿದರು. ಬ್ರೆಜಿಲ್ ದೇಶದ ವಿಜ್ಞಾನಿಗಳು ಚೆಂಡು ಮಿಂಚನ್ನು ಉತ್ಪಾದಿಸಿ, ಅದು ಎಂಟು ಸೆಕೆಂಡುಗಳವರೆಗೆ ಇರುವಂತೆ ಮಾಡಿದರು.  ಚೆಂಡು ಮಿಂಚಿನ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ಇನ್ನೂ ಸಾಕಷ್ಟು ಪ್ರಯೋಗಗಳು ಆಗಬೇಕಾಗಿದೆ.

ಮಿಂಚಿನಿಂದ ವಿದ್ಯುತ್ ಶಕ್ತಿಯನ್ನು ಪಡೆಯಬಹುದೇ?

ಬಹಳ ಕಾಲದಿಂದಲೂ ವಿಜ್ಞಾನಿಗಳು ಮಿಂಚಿನಿಂದ ವಿದ್ಯುತ್ ಉತ್ಪಾದಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಇದು ಇಲ್ಲಿಯವರೆಗೂ ಇನ್ನೂ ನನಸಾಗದ ಕನಸಾಗಿದೆ.  ಏಕೆಂದರೆ ಮಿಂಚು ಬಹಳ ಕಡಿಮೆ ಸಮಯ ಕಾಣಿಸುತ್ತದೆ. ಅದನ್ನು ಹಿಡಿದಿಡುವುದು ಕಷ್ಟ ಸಾಧ್ಯ. ಆದರೂ ವಿಜ್ಞಾನಿಗಳು ಇದರ ಬಗೆಗಿನ ಆಶಾಭಾವನೆಯನ್ನು ಮಾತ್ರ ಬಿಟ್ಟಿಲ್ಲ.  ಏಕೆಂದರೆ ಸಿಡಿಲು, ಮಿಂಚುಗಳಲ್ಲಿ ಅಪಾರವಾದ ಶಕ್ತಿ ಇದೆ. ಪ್ರತಿ ತಾಸಿಗೆ ಮೂರು ಲಕ್ಷದಷ್ಟು ಸಿಡಿಲುಗಳು ಭೂಮಿಗೆ ಬಡಿಯುತ್ತವೆ. ಇದರೊಳಗಿರುವ ಶಕ್ತಿಯಿಂದ ಬಹಳ ಸೋವಿಯಾದ, ಪರಿಸರ ಸ್ನೇಹಿ ಕ್ರಮಗಳಿಂದ ಸ್ವಚ್ಛವಾದ ವಿದ್ಯುತ್ತನ್ನು ಪಡೆಯಬಹುದು ಎಂಬುದು ಅವರ ವಾದ. ಸಿಡಿಲು ಮಿಂಚುಗಳಿಂದ ಸಿಗುವ ಶಕ್ತಿಯನ್ನು ಕೇಂದ್ರೀಕರಿಸಿ, ನೀರು ಕಾಯಿಸಿದಾಗ ಹಬೆ ತಯಾರಾಗುತ್ತದೆ. ಈ ಹಬೆಯನ್ನು ಬಳಸಿ, ಟರ್ಬೈನುಗಳನ್ನು ತಿರುಗಿಸಿ, ವಿದ್ಯುತ್ ಉತ್ಪಾದನೆ ಮಾಡಬಹುದು. ಸಾಂಪ್ರದಾಯಿಕ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಡೆಯುವ ಕ್ರಿಯೆಗಳನ್ನೇ ಇಲ್ಲೂ ಅನುಸರಿಸಬಹುದು. ಇದು ಒಂದು ಯೋಜನೆ. ಪರ್ಯಾಯವಾಗಿ, ಸಿಡಿಲು, ಮಿಂಚುಗಳಲ್ಲಿರುವ ಶಕ್ತಿಯನ್ನು ಕೇಂದ್ರೀಕರಿಸಿ, ಅದನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿಟ್ಟು ಬಳಸಿಕೊಳ್ಳಬಹುದಾದ ಸಾಧ್ಯತೆಗಳು ಕೂಡ ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಇಲ್ಲಿಯವರೆಗೆ ಈ ಯೋಜನೆಗಳನ್ನು ಕೈಗೊಂಡಿಲ್ಲ. ಒಂದು ಸಿಡಿಲಿನಲ್ಲಿ ಕೆಲವು ನೂರು ವ್ಯಾಟ್‌ಗಳಷ್ಟು ವಿದ್ಯುತ್ ಶಕಿ್ತ ಇರುತ್ತದೆ. ಒಂದು ನೂರು ವ್ಯಾಟಿನ ಬಲ್ಬನ್ನು ಕೆಲವು ತಿಂಗಳುಗಳವರೆಗೆ ಉರಿಸಲು ಇಷ್ಟು ಶಕ್ತಿ ಸಾಕಾಗುತ್ತದೆ. ಒಂದು ಸಿಡಿಲಿನಲ್ಲಿಯೇ ಇಷ್ಟು ಶಕ್ತಿಯಿದೆ. ಒಂದು ತಾಸಿಗೆ ಸರಾಸರಿ ಮೂರು ಲಕ್ಷ ಸಿಡಿಲುಗಳು ನಾವು ಪಡೆಯಬಹುದು.  ಅಂದರೆ ಎಷ್ಟು ಅಗಾಧ ಶಕ್ತಿಯನ್ನು ಸಿಡಿಲು, ಮಿಂಚುಗಳ ರೂಪದಲ್ಲಿ ನಿಸರ್ಗವು ನಮಗೆ ನೀಡುತ್ತಿದೆ ಎಂಬುದನ್ನು ಊಹಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಸಿಡಿಲು ಮಿಂಚುಗಳನ್ನು ಸಮರ್ಥವಾಗಿ ಹಿಡಿದು, ಈ ವಿಶ್ವವೆಲ್ಲ ಶುಭ್ರ ಶಕ್ತಿಯಿಂದ ತುಂಬಿ ತುಳುಕುವ ಕಾಲ ಬೇಗನೇ ಬರಲೆಂದು ಹಾರೈಸೋಣ.