ವ್ಯಾಪಕವಾಗಿ ಬೆಳೆಯುತ್ತಿದೆ, ತಿಂಡಿ ಉದ್ಯಮ. ರಂಗುರಂಗಿನ ಪ್ಯಾಕಿಂಗ್, ಸ್ಯಾಚೆಟ್‌ಗಳೊಳಗೆ ಅಡಗಿ ಬರುವ ವಿವಿಧ ನಮೂನೆಯ ತಿಂಡಿಗಳನ್ನು ಎಷ್ಟು ಬೆಲೆ ತೆತ್ತಾದರೂ ಮನೆಗೆ ಒಯ್ಯುತ್ತೇವೆ. ಹೊರಗಿರುವ ಆಕರ್ಷಕ ಪ್ಯಾಕಿಂಗ್ ನಮ್ಮನ್ನು ಸೆಳೆಯುತ್ತದೆ. ಆದರೆ ಒಳಗಿರುವ ತಿಂಡಿಗಳ ಗುಣಮಟ್ಟ, ಅವು ಆರೋಗ್ಯದತ್ತ ಬೀರುವ ಪರಿಣಾಮ. ಇದ್ಯಾವುದೂ ಬೇಕಾಗಿಲ್ಲ! ಈ ಭರಾಟೆ ಮಧ್ಯೆ ತೋಟದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ‘ತಾಜಾ ಉತ್ಪನ್ನ’ವನ್ನು ಮಾಡಿಕೊಡುವ ಗೃಹ ಉದ್ದಿಮೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಗ್ರಾಹಕರ ಒಲವೂ ಹೆಚ್ಚು. ಮಲೆನಾಡಿನ ಹೆಣ್ಮಗಳೊಬ್ಬರು ಬಾಳೆಹಣ್ಣಿನ ಆಯಷ್ಯವನ್ನು ತಮ್ಮ ಮನೆಯಲ್ಲೇ ದೀರ್ಘಾಯುಷ್ಯಗೊಳಿಸುತ್ತಿದ್ದಾರೆ.

ಮಲೆನಾಡಿನ ಜನಪ್ರಿಯ ಮಿಠಾಯಿ ‘ಸುಕೇಳಿ’. ಇದು ಬಾಳೆ ಹಣ್ಣಿನ ನಿರ್ಜಲೀಕೃತ ರೂಪ. ಡ್ರೈಫ್ರುಟ್ಸ್‌ನಂತೆ ತಿನ್ನಲು ಬಳಕೆ. ಒಮ್ಮೆ ತಿಂದರೆ ಮತ್ತಷ್ಟು ಕೇಳಿ ಪಡೆಯುವ ರುಚಿ. ಪ್ರವಾಸ ವೇಳೆಯಲ್ಲಿ ಒಳ್ಳೆಯ ಸಂಗಾತಿ. ಬಾಯಾರಿಕೆ ಶಮನ. ಶಿರಸಿ ಸನಿಹದ ಸೋಂದಾದ ಮನೋರಮಾ ಜೋಶಿಯವರ ಸುಕೇಳಿ ಮನೆ ಉದ್ಯಮಕ್ಕೆ ಈಗ ಏಳು ವರುಷ.

ನಸುಗೆಂಪು ಬಣ್ಣದ ಕೊನೆಉತ್ಪನ್ನ - ಸುಕೇಳಿ

ಸುಕೇಳಿ ತಯಾರಿಯಲ್ಲಿ ಮೂರು ಹಂತಗಳು. ಬಾಳೆಹಣ್ಣನ್ನು ಸಿಪ್ಪೆ ತೆಗೆದು ಡ್ರೈಯರ್‌ನಲ್ಲಿ ಒಂದು ದಿನ ಸ್ನಾನ. ಮರುದಿವಸ ಚಿಪ್ಸ್‌ನ ಗಾತ್ರಕ್ಕೆ ರೂಪಾಂತರ. ಮೂರನೇ ದಿವಸ ಪುನಃ ಡ್ರೈಯರ್‌ನಲ್ಲಿ ಸಣ್ಣ ಉರಿಯಲ್ಲಿ ಮರುಸ್ನಾನ. ಹೀಗೆ ವಾರಕ್ಕೆ ಎರಡು ಬ್ಯಾಚ್‌ಗಳಲ್ಲಿ ತಯಾರಿ.

ಒಂದು ಕಿಲೋ ಕೊನೆಉತ್ಪನ್ನಕ್ಕೆ ಸುಮಾರು ಹತ್ತು ಕಿಲೋ ಬಾಳೆಹಣ್ಣು ಬೇಕು. ಹಣ್ಣು ದೊಡ್ಡದಾಗಿದ್ದರೆ ಐದು ಕಿಲೋ. ‘ನಮ್ಮಲ್ಲಿರುವ ಡ್ರೈಯರ್ ಇಪ್ಪತ್ತು ಕಿಲೋ ಸಾಮರ್ಥ್ಯದ್ದು. ವಾರಕ್ಕೆ ೪೦-೪೨ ಕಿಲೋದಷ್ಟು ಮಾತ್ರ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ.

ಡ್ರೈಯರ್‌ನೊಳಗೆ ತೂರಲು ಸಿದ್ಧ.

ಬೂದು ಬಾಳೆಹಣ್ಣಿನ ಸುಕೇಳಿಯು ಉತ್ತಮ ನೋಟ ಮತ್ತು ರುಚಿ. ಮಲೆನಾಡಿನಲ್ಲಿ ಹೆಚ್ಚು ವಾಣಿಜ್ಯಿಕವಾಗಿ ಬೆಳೆಯುವ ಏಲಕ್ಕಿ ಬಾಳೆಯ ಸುಕೇಳಿಯ ರುಚಿಯಲ್ಲಿ ಚೆನ್ನಾಗಿದೆ. ಇದರ ಹಣ್ಣು ಚಿಕ್ಕದು, ಸಿಪ್ಪೆ ತೆಳು. ಹಾಗಾಗಿ ಶ್ರಮ ಹೆಚ್ಚಾಗುತ್ತದೆ. ಅಲ್ಲದೆ ಬೂದು ಬಾಳೆಗಿಂತ ಇದಕ್ಕೆ ದರವೂ ಹೆಚ್ಚು.

‘ಬೂದು ಬಾಳೆಹಣ್ಣಿನೊಳಗೆ ಚಿಕ್ಕಚಿಕ್ಕ ಬೀಜಗಳಿರುತ್ತವೆ ಹಣ್ಣನ್ನು ಸುಲಿಯುವಾಗ, ಕತ್ತರಿಸುವಾಗ, ಪ್ಯಾಕಿಂಗ್ ಮಾಡುವಾಗ ಕಣ್ಣಿಗೆ ಕಂಡಷ್ಟನ್ನು ತೆಗೆದುಬಿಡುತ್ತೇವೆ. ಬೀಜಗಳಿದ್ದರೆ ನೋಟ ಚೆನ್ನಾಗಿರುವುದಿಲ್ಲ’ ಎನ್ನುತ್ತಾರೆ ಮನೋರಮಾ. ನೂರು ಗ್ರಾಂನ ಸುಕೇಳಿಗೆ ಹದಿನೈದು ರೂಪಾಯಿ. ತಿಂಗಳಿಗೆ ಒಂದೂವರೆ ಕ್ವಿಂಟಾಲ್‌ಗೂ ಮಿಕ್ಕಿ ತಯಾರಿ.

ಸುಕೇಳಿ ಪ್ಯಾಕೆಟ್

ಡ್ರೈಫ್ರುಟ್ಸ್ ಅಂಗಡಿಯವರು ಸುಕೇಳಿಗೆ ವ್ಯಾಪಾರಿ ಗ್ರಾಹಕರು. ನಿರಂತರ ಪೂರೈಕೆ ಮತ್ತು ಗುಣಮಟ್ಟದ ಖಾತ್ರಿಯಲ್ಲಿ ವರುಷಪೂರ್ತಿ ಬೇಡಿಕೆ. ಸುಕೇಳಿಯ ತಾಳಿಕೆ ಮೂರು ತಿಂಗಳು. ಒಣಪ್ರದೇಶದಲ್ಲಿ ಆರು ತಿಂಗಳು ಕೆಡಲಾರದು. ಕ್ಷೀರ, ಪಾಯಸಗಳಿಗೆ ದ್ರಾಕ್ಷಿಯ ಬದಲಿಗೆ ಬಳಸಬಹುದು. ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಡ್ರೈಫ್ರುಟ್ಸ್ ಜತೆಗೆ ಹಾಕುತ್ತಾರೆ.  ಬರ್ಫಿ ತಯಾರಿಯಲ್ಲಿ ಸುಕೇಳಿ ಸೇರಿಸಿದರೆ ರುಚಿವರ್ಧನೆ.

ದಶಂಬರ ತಿಂಗಳಲ್ಲಿ ಖರ್ಜೂರ, ಎಪ್ರಿಲ್ ತಿಂಗಳಲ್ಲಿ ಮಾವಿನ ಹಣ್ಣಿನ ಸೀಸನ್ ಹೊರತು ಪಡಿಸಿ; ಮಿಕ್ಕೆಲ್ಲಾ ಸಮಯದಲ್ಲಿ ಸುಕೇಳಿಗೆ ಮಾರುಕಟ್ಟೆಯಿದೆ. ‘ಬರ್ಫಿ ಮಾಡುವವರೊಬ್ಬರು ನಮ್ಮಲ್ಲಿಂದ ಖಾಯಂ ಆಗಿ ಖರೀದಿಸುತ್ತಾರೆ. ಅವರಿಗಾಗಿಯೇ ಬಾಳೆಹಣ್ಣನ್ನು ಸಣ್ಣದಾಗಿ ಕತ್ತರಿಸಿ ತಯಾರಿಸಬೇಕು. ಇಷ್ಟರತನಕ ಮಾರುಕಟ್ಟೆಗೆ ಹೋದ ಸುಕೇಳಿ ಮಾರಾಟವಾಗದೆ ಮನೆಗೆ ಬಂದದ್ದಿಲ್ಲ!’ ಎಂಬ ಸಂತಸ ಹಂಚಿಕೊಳ್ಳುತ್ತಾರೆ ಮನೋರಮಾ. ಮದುವೆ, ಉಪನಯನ ಮುಂತಾದ ಶುಭ ಸಮಾರಂಭಗಳ ಋತುವಿನಲ್ಲಿ ಮನೆಗೆ ಬಂದು ಒಯ್ಯುವ ಗ್ರಾಹಕರಿದ್ದಾರೆ.

ಗುಣಮಟ್ಟದತ್ತ ನಿಗಾ – ಮನೋರಮಾ

ಬಾಳೆಕಾಯಿಯ ದರಗಳಲ್ಲಿ ಏರಿಳಿತವಾಗುತ್ತದೆ. ಹಾಗೆಂತ ಸುಕೇಳಿಯ ದರ ವ್ಯತ್ಯಾಸ ಮಾಡಲಾಗುವುದಿಲ್ಲ. ಏಲಕ್ಕಿ ಬಾಳೆಗೆ ಉತ್ತಮ ಧಾರಣೆಯಿರುವುದರಿಂದ ರೈತರ ಒಲವು ಜಾಸ್ತಿ. ಹೀಗಾಗಿ ಬೂದು ಬಾಳೆಕಾಯಿ ಒಂದು ರೀತಿಯಲ್ಲಿ ಅಲಕ್ಷಿತ. ಸ್ವಲ್ಪ ಮಟ್ಟಿಗೆ ಮಾರುಕಟ್ಟೆಯಿಂದ ಖರೀದಿ. ಮಿಕ್ಕಂತೆ ಗುತ್ತಿಗೆ ಆಧಾರದಲ್ಲಿ ಬೆಳೆದು ಕೊಡುವವರಿದ್ದಾರೆ.

‘ಬೇಡಿಕೆಯಿದೆಯೆಂದು ಬೇಕಾಬಿಟ್ಟಿ ತಯಾರಿಸಲಾಗುವುದಿಲ್ಲವಲ್ಲಾ. ಡ್ರೈಯರ್‌ನ ಕ್ಷಮತೆ ನೋಡಬೇಕಲ್ವಾ. ಗುಣಮಟ್ಟ ಮುಖ್ಯ. ಕಾಯಿ ಹಣ್ಣಾಗುವಲ್ಲಿಯ ತನಕ ಕಾಯಬೇಕು. ಕೆಲವೊಂದು ಸಲ ಹಣ್ಣಿನ ಗಾತ್ರ, ರುಚಿಯನ್ನು ಹೊಂದಿಕೊಂಡು ಸುಕೇಳಿಯ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲಾ ಹಂತದಲ್ಲಿ ನಿಗಾ ಮುಖ್ಯ’ ಗುಣಮಟ್ಟದ ಸೂಕ್ಷ್ಮಗಳನ್ನು ಹೇಳುತ್ತಾರೆ ಮನೋರಮಾ.

ಇದು ಮನೆ ಉತ್ಪನ್ನ. ಸುಕೇಳಿ ತಯಾರಿಯ ಹೊಣೆ ಮನೋರಮಾ ಜೋಶಿಯವರದ್ದು. ಪತಿ ಸೂರ್ಯ ನಾರಾಯಣ ಜೋಶಿಯವರಿಗೆ ಕಚ್ಚಾವಸ್ತುಗಳ ಪೂರೈಕೆ. ಮಗ ವಿವೇಕರಿಗೆ ಮಾರುಕಟ್ಟೆ. ಹೀಗೆ ಮನೆಮಂದಿಯ ಶ್ರಮ. ಹೆಚ್ಚುವರಿ ಕೆಲಸಕ್ಕೆ ಸ್ನೇಹಿತೆಯೊಬ್ಬರ ಅವಲಂಬನೆ. ಇವರ ಉದ್ಯಮದ ಹೆಸರು ‘ಮೈತ್ರಿ ಹೋಂ ಪ್ರಾಡಕ್ಟ್’. ವ್ಯಾಪಾರಿ ನಾಮ ‘ಸಹ್ಯಾದ್ರಿ’. ಶಿರಸಿಯಲ್ಲಿ ಸುಕೇಳಿಯನ್ನು ಖಾಯಂ ಆಗಿ ಖರೀದಿಸುವವರಿದ್ದಾರೆ. ಹುಬ್ಬಳ್ಳಿ, ಪೂನಾ, ಕಾರವಾರ ಇತರ ಮಾರುಕಟ್ಟೆ ಕೇಂದ್ರಗಳು.

ಸುಕೇಳಿಯಂತೆ ಅನಾನಸ್, ಪಪ್ಪಾಯಿಯ ಒಣಉತ್ಪನ್ನದತ್ತ ಪ್ರಯತ್ನ. ಯಶಸ್ಸು. ಸುಕೇಳಿ ಉತ್ಪನ್ನ ತಯಾರಿಯ ಹೊರತಾದ ಸಮಯದಲ್ಲಿ ಇದರ ಉತ್ಪಾದನೆ. ಹೋಳಿ ಹಬ್ಬದಲ್ಲಿ ಬಳಸುವ ಐದು ವಿಧದ ನೈಸರ್ಗಿಕ ಬಣ್ಣಗಳನ್ನು ತಯಾರಿಸುತ್ತಿದ್ದಾರೆ.

ಪತಿ-ಪತ್ನಿಯ ನಿರಂತರ ದುಡಿಮೆ

‘ಗೃಹಿಣಿಯಾಗಿ ಸುಕೇಳಿ ಮನೆಉದ್ಯಮ ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಉತ್ಪನ್ನವನ್ನು ಮಾಡುವವರಿಗೆ ತಿಳಿಹೇಳುವಷ್ಟು ಧ್ಯೆರ್ಯ ಬಂದಿದೆ. ಮನೆಯ ಬಹುಪಾಲು ವೆಚ್ಚವನ್ನು ಸುಕೇಳಿ ಸರಿದೂಗಿಸುತ್ತದೆ’ ಎನ್ನುತ್ತಾರೆ ಮನೋರಮಾ ಜೋಶಿ. (೦೮೩೮೪-೨೭೯೫೫೫)