ಪ್ರಸ್ತಾವನೆ

ತೋಡುಬಾವಿಗಳ ಬಗ್ಗೆ ಮಾಹಿತಿ ಹುಡುಕಲು ಹೊರಟರೆ ಕನಿಷ್ಠ ೩೫ ವರ್ಷಗಳಷ್ಟು ಹಿಂದೆ ಹೋಗಬೇಕು.  ನೀರಾವರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ತೋಡುಬಾವಿಗಳು, ಅದಕ್ಕೆ ಪೂರಕವಾದ ಬದುಕು ಹಿನ್ನೆಲೆಗೆ ಸರಿಯುತ್ತಿರುವುದು ವಿಶೇಷವೇನಲ್ಲ.

ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷ ತೋಡುಬಾವಿಗಳಿವೆ ಎಂದು ಇಸವಿ ೧೯೮೦ರ ಕೃಷಿಇಲಾಖೆಯ ಅಂಕಿಸಂಖ್ಯೆ ದಾಖಲೆ ಹೇಳುತ್ತದೆ.  ಅದರಲ್ಲಿ ೩.೫ ಲಕ್ಷ ನೀರಾವರಿ ಕೃಷಿಗಿರುವ ಬಾವಿಗಳು.  ಕುಡಿಯುವ ನೀರಿಗೋಸ್ಕರ ಇರುವ ಬಾವಿಗಳು ೫೦ ಸಾವಿರ.

ಊರಲ್ಲೊಂದು ಕೆರೆಯಿದ್ದರೆ ಅದನ್ನು ಅವಲಂಬಿಸಿ ೫೦ರಿಂದ ೧೦೦ ಬಾವಿಗಳು ಇರುತ್ತಿದ್ದವು.  ಕೆರೆಯಲ್ಲಿ ಇಟ್ಟ ಠೇವಣಿ ಬಾವಿಯಲ್ಲಿ ಆಪತ್ಕಾಲಕ್ಕೆ ಒದಗುತ್ತಿತ್ತು.

ಭತ್ತ, ರಾಗಿ, ಜೋಳ, ಬೇಳೆಕಾಳುಗಳು, ನೆಲಗಡಲೆ, ಕಬ್ಬು, ಹಣ್ಣು, ತರಕಾರಿ, ಹಿಪ್ಪುನೇರಳೆ, ತೋಟದ ಬೆಳೆಗಳು ಎಲ್ಲವೂ ಬಾವಿಯ ನೀರಿನಿಂದಲೇ ಸಮೃದ್ಧವಾಗಿ ಬೆಳೆಯುತ್ತಿದ್ದವು.  ಸುಮಾರು ೨.೭ ಲಕ್ಷ ಬಾವಿಗಳ ಆಳ ೩೦ ಅಡಿಗಳಿಗಿಂತಲೂ ಕಡಿಮೆ.  ಅಂದರೆ ಅಂತರ್ಜಲದ ಮಟ್ಟ ಅತ್ಯಂತ ಮೇಲಿತ್ತು ಎಂಬುದು ದಾಖಲೆ ಸಹಿತ ಸಿಗುತ್ತದೆ.

ಬಾವಿಗಳನ್ನು ತೋಡಿ ಕೃಷಿಗೆ ನೀರಾವರಿಯನ್ನು ಒದಗಿಸುವುದು ಅತ್ಯಂತ ಸುಲಭದ ಕೆಲಸವಾಗಿತ್ತು.  ಪರಿಣಿತರು ಒಂದು ತಿಂಗಳೊಳಗೆ ಬಾವಿ ತೋಡಿಕೊಡುತ್ತಿದ್ದರು. ಈಗಲೂ ಕಡಿಮೆ ಖರ್ಚಿನಲ್ಲಿ ಬಾವಿಯನ್ನು ತೆಗೆಯಬಹುದಾಗಿದೆ.  ಕೃಷಿಗೆ ಕಡಿಮೆ ಖರ್ಚಿನಲ್ಲಿ ನೀರೊದಗಿಸಬಹುದಾಗಿದೆ. ಬಾವಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಕುಡಿಯುಲು, ಗೃಹಬಳಕೆಗೆ ಉಪಯುಕ್ತ.

ಪ್ರಾರಂಭ

ತೆನಾಲಿ ರಾಮಕೃಷ್ಣ ಬಚ್ಚಲುಮನೆಗೆ ಹೋದಾಗ ಹಿತ್ತಲಲ್ಲಿ ಯಾರೋ ಗುಸುಗುಸು ಮಾತನಾಡುವ ಶಬ್ದ ಕೇಳಿಸಿತು.  ಓಹೋ, ಕಳ್ಳರು ಬಂದಿದ್ದಾರೆ, ಮನೆಯನ್ನು ದೋಚುವುದು ಖಂಡತಾ ಎಂದು ತಿಳಿದ ರಾಮಕೃಷ್ಣ ಒಂದು ಉಪಾಯ ಹೂಡಿದ.  ಹೆಂಡತಿಯನ್ನು ಜೋರಾಗಿ ಕೂಗಿ, ನೋಡು, ಮನೆಯಲ್ಲಿರುವ ಚಿನ್ನ, ಬೆಳ್ಳಿ, ಆಭರಣಗಳನ್ನೆಲ್ಲಾ ಗಂಟು ಕಟ್ಟು. ದೊಡ್ಡ ಪೆಟ್ಟಿಗೆಯಲ್ಲಿ ಹಾಕು ಎಂದು ಕೂಗಿ ಹೇಳಿದನು. ಹೆಂಡತಿಗೆ ಏನೊಂದೂ ತಿಳಿಯದೆ ತಡಬಡಾಯಿಸತೊಡಗಿದಳು.

ಮನೆಯೊಳಗಿನಿಂದ ದೊಡ್ಡದೊಂದು ಪೆಟ್ಟಿಗೆಯನ್ನು ಇಬ್ಬರೂ ಹೊರಲಾರದೇ ಹೊತ್ತು ತಂದು ದೊಪ್ ಎಂದು ಬಾವಿಗೆ ಹಾಕಿದರು.  ಅಬ್ಬಾ ಯಾವುದೇ ಕಳ್ಳರು ಬಂದರೂ ನಮ್ಮ ಚಿನ್ನ ಬೆಳ್ಳಿಯೆಲ್ಲಾ ಬಾವಿಯೊಳಗಿದೆ ಎಂದು ಗೊತ್ತಾಗಲು ಸಾಧ್ಯವೇ ಇಲ್ಲ ಎಂದು ಮತ್ತೆ ದೊಡ್ಡ ದನಿಯಲ್ಲಿ ಹೆಂಡತಿಗೆ ಹೇಳಿದನು.  ಇಬ್ಬರೂ ಒಳಹೋಗಿ ಮಲಗಿದರು.

ಕಳ್ಳರಿಗೆ ಖುಷಿಯೋ ಖುಷಿ.  ಆದರೆ ಬಾವಿ ಆಳವಿದೆ.  ನೀರೂ ಅಧಿಕವಿದೆ.  ಏನು ಮಾಡುವುದು?

ನೀರು ಖಾಲಿ ಮಾಡುವುದೊಂದೇ ದಾರಿ.  ಪಕ್ಕದಲ್ಲಿದ್ದ ಹಗ್ಗ, ಕೊಡ ಬಳಸಿ ನೀರು ಎಳೆಯತೊಡಗಿದರು.  ಬಾವಿ ಖಾಲಿ ಮಾಡಿ ಪೆಟ್ಟಿಗೆ ಮೇಲೆತ್ತುವ ಗುರಿ.  ನೀರು ಎತ್ತಿದಷ್ಟೂ ಕಡಿಮೆಯೇ?!  ಅಂತೂ ಬೆಳಗಿನವರೆಗೂ ನೀರು ಎತ್ತಿದ್ದೇ ಎತ್ತಿದ್ದು.  ಕೊನೆಯಲ್ಲಿ ಸಿಕ್ಕ ಪೆಟ್ಟಿಗೆಯನ್ನು ಮೇಲೆತ್ತಿ ತೆಗೆಯುವ ವೇಳೆಗೆ ಬೆಳಗಾಗಿತ್ತು.  ರಾಮಕೃಷ್ಣ ಎದುರು ಬಂದು ಕೈಮುಗಿದು ನಿಂತಿದ್ದ.  ಮಹನೀಯರೇ, ಪೆಟ್ಟಿಗೆಯಲ್ಲಿ ಏನೂ ಇಲ್ಲ.  ನಮ್ಮ ಹಿತ್ತಲಿನ ಬಾಳೆಯ ಗಿಡಗಳಿಗೆ ನೀರು ಹಾಕಿ ಉಪಕಾರ ಮಾಡಿದ್ದೀರಿ.  ವಂದನೆಗಳು ಎಂದು ಹೇಳಿದ್ದೇ ತಡ ಕಳ್ಳರು ಎದ್ದುಬಿದ್ದು ಓಡಿದರು.

ಈಗಲೂ ಚಿನ್ನ ಬೆಳ್ಳಿಯಷ್ಟೇ ಅಮೂಲ್ಯ ಖಜಾನೆ ಬಾವಿಯೊಳಗಿದೆ.  ಒಮ್ಮೆಲೇ ಬಳಸಲು ಹೋದರೆ ದಕ್ಕುವುದಿಲ್ಲ ಅಷ್ಟೆ.

ಕರ್ನಾಟಕ ವೈವಿಧ್ಯಮಯ ಬಾವಿಗಳಿಗೆ ಹೆಸರುವಾಸಿ.  ಕೃಷಿಗೆ ನೀರುಣಿಸುವುದರಲ್ಲಿ ಬಾವಿಗಳಿಗೆ ನಾಲೆ ಹಾಗೂ ಕೆರೆಗಳ ನಂತರದ ಸ್ಥಾನ.  ಸುಮಾರು ೩.೫ ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕೃಷಿ ಮಾಡಲು ಬಾವಿನೀರೇ ಆಧಾರ.  ಕೇವಲ ಒಂದು ಬೆಳೆಗೆ ಮಾತ್ರವಲ್ಲ, ಎರಡೂ ಬೆಳೆಗಳಿಗೆ ನೀರೊದಗಿಸುವ ಬಾವಿಗಳು ಇನ್ನೂ ಇವೆ ಹಾಗೂ ಮೂರು ಬೆಳೆಗಳಿಗೆ ನೀರೊದಗಿಸುವ ಬಾವಿಗಳು ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಿಗುತ್ತವೆ ಎಂದು ಆರ್ಥಿಕ ಹಾಗು ಸಾಂಖ್ಯಿಕ ಇಲಾಖೆ ತಿಳಿಸಿದೆ.

ಕುಡಿಯುವ ನೀರು ಪೂರೈಕೆ, ಮನೆಯ ಇತರ ಕೆಲಸಗಳನ್ನೇ ಮುಖ್ಯವಾಗಿಟ್ಟುಕೊಂಡು ಮನೆಯೊಳಗೆ ಇರುವ ತೋಡುಬಾವಿಗಳು ಈ ಲೆಖ್ಖದಲ್ಲಿ ಇಲ್ಲ ಹಾಗು ಈಗಿನ ಕೊಳವೆಬಾವಿಗಳನ್ನು ಪರಿಗಣಿಸಿಲ್ಲ.

ತೆರೆದ ಬಾವಿಗಳು ಅತ್ಯಧಿಕ ಸಂಖ್ಯೆಯಲ್ಲಿರುವುದು ಕೋಲಾರದಲ್ಲಿ.  ಬೆಳಗಾಂಗೆ ಎರಡನೇ ಸ್ಥಾನ. ಬಿಜಾಪುರ ಮೂರನೇ ಸ್ಥಾನದಲ್ಲಿದೆ. ಆದರೆ ಬಿಜಾಪುರದಲ್ಲಿರುವ ಬಾವಿಗಳು ದೊಡ್ಡ ಸರೋವರಗಳಂತಿವೆ. ಅತ್ಯಧಿಕ ಕೃಷಿಕ್ಷೇತ್ರಕ್ಕೆ ನೀರುಣಿಸುತ್ತವೆ.  ಸುಲ್ತಾನರ ಕಾಲದಲ್ಲಿ ಅತ್ಯಂತ ಮೇರು ಮಟ್ಟಕ್ಕೇರಿದ್ದ ನೀರಾವರಿ ವ್ಯವಸ್ಥೆಗೆ ಮೂಲ ಈ ಬಾವಿಗಳು. ಇದನ್ನೇ ಬಿಜಾಪುರದಲ್ಲಿ ಬಾವಡಿ ಅಥವಾ ಬಾವರಿ ಎಂದು ಕರೆಯುತ್ತಾರೆ. ಇದಕ್ಕೆ ಹೊರತಾದ ಬಾವಿಗಳೂ ಸಹ ಇವೆ.

ವಿಶಾಲವಾದ ಕೊಳ.  ಅದಕ್ಕೆ ಚೌಕಾಕಾರದಲ್ಲಿ ಕಟ್ಟಿದ ಕಲ್ಲಿನ ಗೋಡೆ.  ನೀರಿನವರೆಗೂ ಇಳಿದುಹೋಗಲು ಮೆಟ್ಟಿಲುಗಳು.  ಸುತ್ತಲೂ ನಡೆದಾಡಲು ದಾರಿ.  ಕುಳಿತುಕೊಳ್ಳಲು ವಿಶ್ರಾಂತಿಧಾಮ.  ಒಂದೆರಡು ಕೊಠಡಿಗಳು.  ಹೊರನೀರು ಒಳಬರದಂತಹ ವ್ಯವಸ್ಥೆ.  ನೀರಿಗೊಂದು ಸುಂದರ ವಾಸ್ತುರಚನೆಯೇ ಬಾವಡಿಗಳು.  ಒಂದೊಂದು ಬಾವಡಿಯೂ ವಿಭಿನ್ನ.

ಚಾಂದ್ ಬಾವಡಿ, ತಾಜ್ ಬಾವಡಿ, ಅಲಿಖಾನ್ ಬಾವಡಿ, ಮುಖಾರಿ ಮಸ್ಜಿದ್ ಬಾವಡಿ, ಸಾಟ್‌ಗೋರಿ ಬಾವಡಿ, ಇಬ್ರಾಹಿಂಪುರದ ಬಾವಡಿ-ಬಿಜಾಪುರದ ತುಂಬಾ ಬಾವಡಿಗಳ ಮಾಲೆ.  ಚಾಂದ್ ಬಾವಡಿ ಅರ್ಧ ಎಕರೆ ಪ್ರದೇಶದಲ್ಲಿದೆ.  ಅದಕ್ಕೆ ಕಟ್ಟಿದ ಕಟ್ಟಡ, ಕೊಠಡಿಗಳೆಲ್ಲಾ ಸೇರಿದರೆ ಒಂದು ಎಕರೆ ಆದೀತು.  ತಾಜ್ ಬಾವಡಿ ೧೦ ಗುಂಟೆ ಪ್ರದೇಶದಲ್ಲಿದೆ.  ಆಳ ೫೨ ಅಡಿಗಳು.  ಸುತ್ತಲೂ ಗೋಡೆ.  ನಾಲ್ಕು ದಿಕ್ಕಿನಲ್ಲೂ ವಿಶ್ರಾಂತಿಧಾಮಗಳು.  ಕೊಠಡಿಗಳು, ಮೊಗಸಾಲೆ ಭವ್ಯ ನಿರ್ಮಾಣ.  ಅಸರ್ ಮಹಲ್ ಬಾವಡಿಯೊಂದು ವಿಶಾಲ ಸರೋವರ.  ಒಂದು ದಿಕ್ಕಿನಲ್ಲಿ ಮರದಲ್ಲಿ ಕಟ್ಟಿದ ದೊಡ್ಡ ಸಭಾಂಗಣ.  ಸದಾ ಸರ್ರ್ ಎನ್ನುತ್ತಾ ಬೀಸುವ ಗಾಳಿ.  ಸಂಜೆಯ ತಂಪು ಬಿಜಾಪುರದ ಬಿಸಿಲನ್ನು ಮರೆಸುತ್ತದೆ.

ಈ ಬಾವಡಿಗಳೆಲ್ಲಾ ಬಿಜಾಪುರವನ್ನು ತಂಪಾಗಿಡಲು ನಿರ್ಮಿಸಿದವುಗಳಾಗಿವೆ.  ರಾಜರಾಣಿಯರಿಗೆ ಸ್ನಾನಗೃಹಗಳಿವು.  ನೀರಿನಲ್ಲಿ ಜಲಕ್ರೀಡೆಯಾಡುತ್ತಾ ಸ್ನಾನದಲ್ಲೇ ದಿನವಿಡೀ ಕಳೆಯುತ್ತಿದ್ದ ಭೋಗದ ತಾಣಗಳಿವು.  ಕ್ರಿ.ಶ.೧೬೨೦ರಲ್ಲಿ ಆದಿಲ್‌ಶಾಹಿ ಅರಸರ ಕಾಲದಿಂದಲೂ ನಿರ್ಮಾಣವಾಗುತ್ತಿರುವುದು ಇತಿಹಾಸದಲ್ಲಿ ದಾಖಲಾಗಿದೆ.  ಕ್ಯಾಪ್ಟನ್ ಸೈಕ್ ಕ್ರಿ.ಶ.೧೮೧೫ರಲ್ಲಿ ಬಿಜಾಪುರಕ್ಕೆ ಬಂದಾಗ ಇಲ್ಲಿ ೨೦೦ ಬಾವಡಿಗಳು, ೩೦೦ ಬಾವಿಗಳು ಇದ್ದುವೆಂದು ಹೇಳಿದ್ದಾನೆ.  ಹಾಗೇ ಬಿಜಾಪುರದ ಉತ್ತರದ ಹಳ್ಳಿಗಳಲ್ಲಿ ಕನಾತುಗಳಿವೆ ಎಂದು ಹೇಳಿದ್ದಾನೆ.  ಈ ಕನಾತುಗಳು ಸರಣಿ ಬಾವಿಗಳಿಗಿರುವ ಆಂತರಿಕ ಸಂಬಂಧ.  ತಗ್ಗಿನಲ್ಲಿರುವ ಕೊನೆಯ ಬಾವಿಗೆ ನೀರು ಪೂರೈಕೆಗಾಗಿ ಮೇಲಿನ ಅನೇಕ ಬಾವಿಗಳನ್ನು ಅಡಿಯಲ್ಲಿ ಛಾನಲ್‌ಗಳ ಮೂಲಕ ಸೇರಿಸುವ ಕ್ರಮ.  ಆದರೆ ಈ ಕನಾತುಗಳ ಬಗ್ಗೆ ಅಲ್ಲಿಯ ಹಳ್ಳಿಯವರಿಗೆ ಮಾಹಿತಿ ಇಲ್ಲ.  ಊರಲ್ಲಿರುವ ಬಾವಿಗಳು ಒಂದಕ್ಕೊಂದು ಸಂಬಂಧವಿರುವ ಕುರಿತು ಹೇಳಿದರೂ ಅಡಿಯಲ್ಲಿ ಛಾನಲ್ ಇರುವುದರ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ.  ಬಾವಿ ಹಾಗೂ ಕನಾತುಗಳು ಕುಡಿಯಲು, ಮನೆಬಳಕೆಗೆ ಹಾಗೂ ಕೃಷಿಗಾದರೆ ಬಾವಡಿಗಳು ಕೇವಲ ಸ್ನಾನಗೃಹಗಳಾಗಿಯೇ ಉಳಿದಿರುತ್ತಿತ್ತು.  ಈಗ ಬಾವಡಿಗಳು ದಿನೇ ದಿನೇ ಸಾಯುತ್ತಿವೆ.  ಬಿಜಾಪುರ ಪಟ್ಟಣದಲ್ಲಿಯೇ ಇಸವಿ ೨೦೦೨ರಲ್ಲಿ ೨೭೦ ಕೊಳವೆಬಾವಿಗಳಿದ್ದವು.   ಹೀಗಾಗಿ ಬಾವಿಗಳೂ ಸಹ ಕಣ್ಮರೆ.  ಬಿಜಾಪುರದ ಬೇಗಂ ತಾಲಾಬ್ ಕೆರೆ ೩೦ ಎಕರೆ ವಿಸ್ತಾರವಾಗಿದ್ದು,  ಈ ಬಾವಿಗಳು ಹಾಗೂ ಬಾವಡಿಗಳಿಗೆ ಆಶ್ರಯದಾತ.  ಆದಿಲ್‌ಶಾಹಿಯ ಕಾಲದಲ್ಲಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆಗಳು, ಬುರುಜುಗಳು ಇನ್ನೂ ಸುಸ್ಥಿತಿಯಲ್ಲಿರುವುದು ಆಶ್ಚರ್ಯ ಆದರೂ ನಿಜ.

ಗುಲ್ಬರ್ಗಾದ ಸೇಡಂ ಬಳಿಯ ಕೊಡ್ಲಾ ಗ್ರಾಮ ೧೯೮೦ನೇ ಇಸವಿಯಲ್ಲಿ ಅತ್ಯಂತ ಕುಪ್ರಸಿದ್ಧಿ ಪಡೆಯಿತು.  ಕಾರಣ-ಬಾವಿಗಳು.  ಊರಿನ ಕೊಳಚೆ, ಗಂಜಳ, ಪಾತ್ರೆ, ಬಟ್ಟೆ ತೊಳೆದ ನೀರು ಎಲ್ಲವೂ ಬಾವಿಗಳ ಸಮೀಪವೇ ಇಂಗಿದ್ದರಿಂದ ಬಾವಿನೀರು ಪೂರ್ತಿ ಕಲುಷಿತವಾಯಿತು.  ಶೌಚಾಲಯ ಇಲ್ಲದಿರುವುದು, ರಸ್ತೆಪಕ್ಕದಲ್ಲೇ ಮಲಮೂತ್ರ ವಿಸರ್ಜನೆ ಇವೆಲ್ಲಾ ಸೇರಿ ನೀರು ಪೂರ್ತಿ ಹಾಳಾಯಿತು.  ಜನರಿಗೆ ಕಾಯಿಲೆಗಳು ಪ್ರಾರಂಭವಾಯಿತು.  ಮುಖ್ಯವಾಗಿ ದಾರದಹುಣ್ಣು, ದಾರದಹುಳುಗಳೂ ಒಂದೇ ಸಮನೆ ಆಕ್ರಮಿಸತೊಡಗಿದವು.  ಪ್ರತಿಯೊಬ್ಬರ ದೇಹದಲ್ಲೂ ಸುಮಾರು ೩೦ ಮೀಟರ್‌ವರೆಗಿನ ದಾರದಹುಳು ಹೊರಬರುತ್ತಿತ್ತು.  ಇದು ಉಲ್ಬಣಗೊಂಡು ನಾಲ್ಕಾರು ಜನ ಸತ್ತಮೇಲೆ ಸೇಡಂನ ಆರೋಗ್ಯ ಇಲಾಖೆ ಎಚ್ಚರಗೊಂಡಿತು.  ಗುಲ್ಬರ್ಗಾದ ಸರ್ಕಾರಿ ಆಸ್ಪತ್ರೆ ಸ್ಥಳ ಪರಿಶೀಲನೆಗೆ ಬಂತು.  ಸದನದಲ್ಲಿ ಗದ್ದಲವಾಯಿತು.  ಡಬ್ಲ್ಯೂ.ಎಚ್.ಓ. ರಂಗಕ್ಕಿಳಿಯಿತು.  ಕೊಡ್ಲಾವನ್ನು ಸಕಲ ಪ್ರಯೋಗ ಪರೀಕ್ಷೆಗಳಿಗೊಡ್ಡಿದರು.  ನೀರನ್ನು ಸಂಪೂರ್ಣ ನಿಷೇಧಿಸಿದರು.  ಊರಿನ ಬಾವಿಗಳಿಂದ ನೀರೆತ್ತಲೇಬಾರದೆಂಬ ಕಾನೂನನ್ನು ಮಾಡಿದರು.  ಇದೆಲ್ಲಾ ಸಾಕ್ಷ್ಯಚಿತ್ರವಾಗಿ ದೇಶ-ವಿದೇಶಗಳಲ್ಲೂ ಪ್ರಸಾರವಾಯಿತು.   ಬಹುಶಃ ಬಾವಿನೀರು ಕಲುಷಿತಗೊಂಡರೆ ಆಗುವ ಅನಾಹುತದ ಏಕೈಕ ಚಿತ್ರಣ ಕೊಡ್ಲಾದಲ್ಲಿ ದಾಖಲಾಯಿತು.

ಸರ್ಕಾರ ಪರ್ಯಾಯವಾಗಿ ಕೊಳವೆಬಾವಿಗಳನ್ನು ನಿರ್ಮಿಸಿತು.  ಕೆಲವು ಶ್ರೀಮಂತರು ಹೊಲದಲ್ಲೇ ಹೊಸಬಾವಿ ತೆಗೆಸಿದರು.  ಕೃಷಿ ಹಾಗೂ ಕುಡಿಯಲು, ಗೃಹಬಳಕೆಗೆ ಅದೇ ನೀರನ್ನು ಬಳಸತೊಡಗಿದರು.

ಸಾಮಾಜಿಕ ಸಮಸ್ಯೆಗಳೂ ಪ್ರಾರಂಭವಾದವು.  ಕೊಡ್ಲಾಕ್ಕೆ ಯಾರೂ ಹೆಣ್ಣು ಕೊಡಲು ಒಪ್ಪಲಿಲ್ಲ.  ಕೊಡ್ಲಾದ ಹೆಣ್ಣುಗಳನ್ನು ಒಯ್ಯಲು ನಿರಾಕರಣೆ.  ಅಕ್ಕಪಕ್ಕದವರು ಕೊಡ್ಲಾಕ್ಕೆ ಕಾಲಿಡುವುದನ್ನೇ ಬಿಟ್ಟರು.  ಅಘೋಷಿತ ನಿರ್ಬಂಧ.  ಇದೆಲ್ಲಾ ಕಳೆದು ಈಗ ೨೫ ವರ್ಷಗಳಾದರೂ ಅಲ್ಲಿನ ಜನ ಊರಿನಲ್ಲಿರುವ ಬಾವಿಯ ನೀರನ್ನು ಬಳಸಲು ಹಿಂಜರಿಯುತ್ತಾರೆ.  ರೋಗಗಳು ಇರದಿದ್ದರೂ ಪರವೂರಿನವರು ಹೆಣ್ಣು ಕೊಡುವಾಗ ಮತ್ತೆ ಮತ್ತೆ ವಿಚಾರಿಸುತ್ತಾರೆ.  ಬಾವಿಗಳು ಭಯದ ತಾಣಗಳಾಗಿ ನೀರನ್ನು ನಿರ್ಮಲವಾಗಿಟ್ಟುಕೊಳ್ಳುವುದು, ಶುದ್ಧ ನೀರನ್ನು ಬಳಸುವುದರ ಅರಿವು ಈ ರೀತಿಯ ಪ್ರಕರಣಗಳಿಂದ ಸಾಬೀತಾಗುತ್ತದೆ.  ಊರಿನ ಆರೋಗ್ಯ ಬಾವಿಗಳ ಕೈಯಲ್ಲಿದೆ.  ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳನ್ನೂ ಸಹ ಬಾವಿಗಳೇ ನಿರ್ಧರಿಸುತ್ತವೆ.

ವಿಜಯನಗರದ ಸಾಮಂತ ಮನ್ನೇಸಾಬನೆಂಬುವವನು ಲಿಂಗಸೂಗೂರು ಪ್ರದೇಶದಲ್ಲಿ ೧,೨೦೦ ಬಾವಿಗಳನ್ನು ಕಟ್ಟಿಸಿದನೆಂದು ಇತಿಹಾಸದಲ್ಲಿ ದಾಖಲಾಗಿದೆ.  ಲಿಂಗಸೂಗೂರು ಪ್ರದೇಶದ ಗುರುಗುಂಟಾದಲ್ಲಿ ಮನ್ನೇಸಾಬನ ಬಗ್ಗೆ ಕೇಳಿದವರಿದ್ದರೂ ಬಾವಿಗಳ ಬಗ್ಗೆ ಮಾಹಿತಿ ಸಿಕ್ಕಲಿಲ್ಲ.  ಆದರೆ ಲಿಂಗಸೂಗೂರಿನಲ್ಲಿಯೇ ಇರುವ ಕೆಲವು ಬಾವಿಗಳನ್ನು ನೋಡಿದಾಗ ಅವುಗಳನ್ನು ಕಟ್ಟಿದ ರೀತಿ, ನೀರಿನವರೆಗೆ ಇಳಿಯಲು ನಿರ್ಮಿಸಿದ ಮೆಟ್ಟಿಲುಗಳು, ಕಟ್ಟಿಸಿದ ಕಲ್ಲುಗಳು ಹಾಗೂ ಅವು ಸಾರ್ವಜನಿಕರ ಹಕ್ಕಿನಲ್ಲಿರುವುದನ್ನೆಲ್ಲಾ ತಿಳಿದಾಗ ಇವೇ ಮನ್ನೇಸಾಬ ಕಟ್ಟಿಸಿರುವ ಬಾವಿಗಳು ಇರಬಹುದೆಂದು ಅನಿಸತೊಡಗಿತು.  ಆದರೆ ಖಚಿತವಾಗಲಿಲ್ಲ.

ಈ ಬಾವಿಗಳಲ್ಲಿ ನೀರು ಸದಾ ಸಮೃದ್ಧ.  ನೆಲದಿಂದ ನಾಲ್ಕು ಅಡಿಗಳಿಗೆ ಬೇಸಿಗೆಯಲ್ಲೂ ನೀರಿದೆ.  ಹಿಂದೆ ಬಾವಿಗಳಿಗೆ ಕಪಿಲೆ ಅಳವಡಿಸಿದ ಕುರುಹುಗಳಿವೆ.   ಎಲ್ಲವೂ ಶಹಾಪೂರ ಕಲ್ಲಿನಿಂದ ಕಟ್ಟಿಸಿದ ಬಾವಿಗಳು.  ಇಂದಿಗೂ ಕಲ್ಲು ಕುಸಿದಿಲ್ಲ.  ಹೆಚ್ಚಿನ ಕಡೆಗಳಲ್ಲಿ ನೀರನ್ನು ಕುಡಿಯಲು ಮಾತ್ರ ಬಳಸುತ್ತಿದ್ದಾರೆ.

ಇದೇ ರೀತಿ ಶಹಾಪೂರ ಪ್ರದೇಶದಲ್ಲೂ ನೂರಾರು ಬಾವಿಗಳು ಕಾಣಿಸುತ್ತವೆ.  ಇಲ್ಲಿನ ಸುಣ್ಣದ ಕಲ್ಲುಗಳು ಬಹಳ ಪ್ರಖ್ಯಾತ.  ಮೇಲ್ಪದರದಲ್ಲಿರುವ ಈ ಕಲ್ಲುಗಳನ್ನು ತೆಗೆದರೆ ಸಿಗುವುದು ಸಮೃದ್ಧ ನೀರು.  ಇಲ್ಲಿಯ ಬಾವಿಗಳ ಆಳ ೨೦ ಅಡಿಗಳಷ್ಟು ಮಾತ್ರ.  ನೀರು ಸದಾಕಾಲ ಸಿಗುತ್ತದೆ.  ಪಕ್ಕದ ಸುರಪುರದಲ್ಲೂ ಬಾವಿಗಳು ಅಧಿಕವಾಗಿವೆ.  ಹಿಂದೆ ಸುರಪುರದ ವೆಂಕಟಪ್ಪನಾಯಕ ಕೆರೆಕಟ್ಟೆಗಳನ್ನು, ಬಾವಿಗಳನ್ನು ಕಟ್ಟಿಸಿದನೆಂದೂ, ಅರಣ್ಯ ರಕ್ಷಣೆ ಮಾಡಿದನೆಂದೂ ಇತಿಹಾಸ ಹೇಳುವುದೇ ಅಲ್ಲದೆ ಇಂದಿಗೂ ಸುರಪುರ ಮಲೆನಾಡಿನಂತೆಯೇ ನೆಲ, ಜಲ, ಕಾಡಿನಿಂದ ಸಮೃದ್ಧವಾಗಿದೆ.

ಮಲೆನಾಡಿನಂತಿದ್ದ ಧಾರವಾಡ, ಬೆಳಗಾಂಗಳಲ್ಲಿ ಇಂದು ಬತ್ತಿಹೋದ ಬಾವಿಗಳ ಆಳ ಕೇವಲ ಹತ್ತು ಹದಿನೈದು ಅಡಿಗಳು ಮಾತ್ರ.  ಅಂದರೆ ಕೆಲವು ಬಾವಿಗಳು ಕುಡಿಯುವ ನೀರಿಗೋಸ್ಕರ ಬಳಸುತ್ತಿದ್ದಾಗ ಸಾಕಷ್ಟು ಗಟ್ಟಿಯಾಗೇ ಇದ್ದವು.  ಸುತ್ತಲೂ ಕೊಳವೆಬಾವಿಗಳು ಹೆಚ್ಚಿದಂತೆ ಮತ್ತು ಬಾವಿಗೆ ಪಂಪ್‌ಸೆಟ್ ಅಳವಡಿಸಿ ಅಧಿಕ ನೀರು ಎತ್ತತೊಡಗಿದಾಗ ನೀರು ಕರಗತೊಡಗಿತು ಎಂದು ಧಾರವಾಡದ ಸಾಧನಕೇರಿಯ ಅನಿಲ್ ಅಂಬಾನಿಯವರು ಹೇಳುತ್ತಾರೆ.  ಸಾಧನಕೇರಿಯ ಎಲ್ಲಾ ಬಾವಿಗಳು ಬತ್ತಲು ಮತ್ತೊಂದು ಕಾರಣ ಸಾಧನಕೆರೆ, ಕೆರೆಯಂಗಳ.  ಜಲಾನಯನ ಪ್ರದೇಶಗಳೆಲ್ಲಾ ವಸತಿ ತಾಣಗಳಾಗಿವೆ.  ಕೆರೆಗಳಿಲ್ಲದೆ ಬಾವಿಗಳು ಬದುಕುವುದಾದರೂ ಹೇಗೆ?

ಹೀಗೆ ಬತ್ತಿಹೋದ ಬಾವಿಗಳಿಗೆ ಮರುಜೀವ ನೀಡುವ ಸತತ ಪ್ರಯತ್ನ ಹಾವೇರಿ ಜಿಲ್ಲೆಯ ಕಾಕೋಳದ ಚನ್ನಬಸಪ್ಪ ಶಿವಪ್ಪ ಕೊಂಬಳಿಯವರದು.  ಇಸವಿ ೨೦೦೩ರಿಂದ ಸ್ವತಃ ತೆರೆದ ಬಾವಿಗಳಿಗೆ ಕಾಲುವೆ ನಿರ್ಮಿಸಿ ಮಳೆಗಾಲದಲ್ಲಿ ಗುಡ್ಡದಿಂದಿಳಿವ ನೀರನ್ನೆಲ್ಲಾ ತುಂಬುತ್ತಿದ್ದಾರೆ.  ಊರಿನ ೭೦ ಬಾವಿಗಳಿಗೆ ಮರುಪೂರಣದ ಕೆಲಸವಾಗಿದೆ.  ಮೂರು ಕೆರೆಗಳನ್ನು ಕಟ್ಟಿಸಿದ್ದಾರೆ.  ಕಾಕೋಳ ಈಗ ಜಲಯೋಧರ ಊರು.  ಅಂತರ್ಜಲದ ಮಟ್ಟ ಏರಿದೆ.  ಆದರೆ ಬಾವಿಗಳಲ್ಲಿ ನೀರು ನಿಲ್ಲುತ್ತಿಲ್ಲ.  ಮಳೆನೀರಿನಿಂದ ತುಂಬಿದ ಬಾವಿಗಳು, ಕೆರೆಗಳೆಲ್ಲಾ ಕೆಲವೇ ದಿನಗಳಲ್ಲಿ ಖಾಲಿ ಖಾಲಿ.  ನೆಲದ ದಾಹಕ್ಕೆ ತೆರೆದ ಬಾವಿಗಳೇ ಬಾಯಿ.  ಆದರೂ ದಾಹ ನೀಗುವುದೆಂದು?  ಇಂತಹ ಬಾವಿಗಳಿಂದ ಮತ್ತೆ ಕಪಲಿ ಹೊಡೆದು ನೀರು ಎತ್ತುವ ಆಸೆ ಕೊಂಬಳಿಯವರದು.  ಅಕ್ಕಪಕ್ಕದ ಊರಿನವರೂ ಈಗ ಇದೇ ಸಾಲಿಗೆ ಸೇರಿದ್ದಾರೆ.

ತುಮಕೂರಿನ ದೇವರಾಯನದುರ್ಗದ ನಾಮದ ಚಿಲುಮೆ ಬಹು ಪ್ರಖ್ಯಾತ.  ಗುಡ್ಡದ ಮೇಲಿನ ದೇವಾಲಯದ ಬಾವಿಯಲ್ಲೂ ನೀರು ಮೇಲ್ಪದರದಲ್ಲೇ ಇದೆ.  ಬೇಸಿಗೆಯಲ್ಲೂ ಬತ್ತಿದ ದಾಖಲೆಯಿಲ್ಲ.  ಇಲ್ಲಿನ ಗದ್ದೆಯ ಮಣ್ಣು ಜೇಡಿಮಿಶ್ರಿತ ಮರಳುಮಣ್ಣು.  ಅದಕ್ಕಾಗಿ ನೀರಿನ ಸಂಗ್ರಹ ಅಧಿಕ ಇರಬಹುದೇ?  ಇದೇ ರೀತಿ ಕೋಲಾರದ ಅಂತರಗಂಗೆ ಬೆಟ್ಟಕ್ಕೆ ಕೋಲಾರ ಪಟ್ಟಣದವರು ಬೆಳಗ್ಗೆ ಕೊಡಗಳನ್ನು ಹಿಡಿದು ಸಿಹಿನೀರು ತರಲು ಸೈಕಲ್ ಹೊಡೆಯುವ ನೋಟ ದಿನಾಲೂ ಕಾಣಿಸುತ್ತದೆ ಎನ್ನುತ್ತಾರೆ ಕೋಲಾರದ ಗಣಿತತಜ್ಞ ವಿ.ಎಸ್.ಎನ್.ಶಾಸ್ತ್ರಿ.

ಅತ್ಯಧಿಕ ಕೆರೆಗಳು, ಅತ್ಯಧಿಕ ಬಾವಿಗಳು ಇರುವ ಜಿಲ್ಲೆ ಕೋಲಾರ.  ೬೦ ಸಾವಿರಕ್ಕೂ ಹೆಚ್ಚು ಬಾವಿಗಳಿವೆ.  ೨೫ ಸಾವಿರ ಬಾವಿಗಳಿಗೆ ನೀರೆತ್ತಲು ಪರ್ಷಿಯನ್ ವೀಲ್ ಬಳಸುತ್ತಾರೆ.  ಅಂದರೆ ಈ ಬಾವಿಗಳ ಆಳ ೨೦ ಅಡಿಗಳಿಗೂ ಕಡಿಮೆಯಿದೆ.  ೨೦ ಅಡಿಗಳಿಗಿಂತ ಹೆಚ್ಚು ಆಳದ ಬಾವಿಯಿಂದ ಪರ್ಷಿಯನ್ ವೀಲ್ ಬಳಸಿ ನೀರೆತ್ತಲು ಸಾಧ್ಯವಿಲ್ಲ.

ಅಂತರಗಂಗೆ ಬೆಟ್ಟದ ಮೇಲಿನ ಹಳ್ಳಿಗಳು ಬದುಕಿದ್ದೇ ಬಾವಿಗಳಿಂದ.  ಕೃಷಿ ಕೆಲಸಗಳಿಗೂ ಈ ಬಾವಿಗಳ ನೀರೇ ಆಧಾರ.  ಎಂತಹ ಬೇಸಿಗೆಯಲ್ಲೂ ಇವುಗಳು ಸಮೃದ್ಧ.

ವಿದುರಾಶ್ವತ್ಥದಲ್ಲಿರುವ ಬಾವಿಯಿಂದ ದಿನಾಲೂ ಸಾವಿರ ಕೊಡ ನೀರೆತ್ತಿದರೂ ಖಾಲಿಯಾಗದು ಎಂಬ ಮಾತು ಇಂದಿಗೂ ಪ್ರಚಲಿತ.  ಅದಕ್ಕೆ ಪೂರಕವಾಗಿ ಭಕ್ತರ ಸ್ನಾನ, ಲಿಂಗಗಳಿಗೆ ಅಭಿಷೇಕ ಹೀಗೆ ಸಾವಿರಾರು ಕೊಡ ನೀರು ಬಳಕೆಯಾಗುವುದು ದಿನನಿತ್ಯದಲ್ಲಿ ಕಾಣಬಹುದು.

ದಕ್ಷಿಣಕನ್ನಡದಲ್ಲಿ ಬಾವಿಗಳಿಂದ ತೋಟಗಳಿಗೆ ನೀರು ನೀಡುವ ವ್ಯವಸ್ಥೆ ಪುರಾತನ ಕಾಲದಿಂದಲೂ ಇದೆ.  ತೋಟ ವಿಸ್ತಾರವಾದಂತೆ ಬಾವಿಗಳೂ ಹೆಚ್ಚುತ್ತಿವೆ.  ಜಲಜಾಗೃತಿ ಸಮರೋಪಾದಿಯಲ್ಲಿ ನಡೆಯುತ್ತಿರುವ ಕಾರಣ ಬಾವಿಗಳು ಇನ್ನೂ ಜೀವಂತ.

ಉಡುಪಿಯ ಉತ್ತರಾದಿ ಮಠದೊಳಗಿನ ಅಂಗಳದಲ್ಲಿರುವ ಬಾವಿ ಮನ್ನೂರು ವರ್ಷಗಳಷ್ಟು ಪುರಾತನ ಎಂಬ ಅಭಿಪ್ರಾಯ.  ಬೇಸಿಗೆಯಲ್ಲಿ ಬತ್ತಿದ ದಾಖಲೆಯಿಲ್ಲ.

ಆರ್ಥಿಕ ಹಾಗೂ ಸಾಂಖ್ಯಿಕ ಇಲಾಖೆಯ ಲೆಕ್ಕದಂತೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾವಿಗಳ ಸಂಖ್ಯೆ ಸುಮಾರು ೨,೦೦೦ ಮಾತ್ರ!  ಇಲ್ಲಿನ ವಿಶೇಷ ಸಂಸ್ಕೃತಿಯೊಂದು ಇಲಾಖೆಯ ಕಣ್ಣಿಗೆ ಬೀಳದಿದ್ದುದು ಆಶ್ಚರ್ಯವೇನಲ್ಲ.  ಅದು ಮನೆಯೊಳಗಿನ ಬಾವಿಗಳು!!

ಈ ಬಾವಿಗಳ ಇತಿಹಾಸ ಕೆಳದಿಯ ಅರಸರ ಕಾಲದಿಂದಲೂ ಸಿಗುತ್ತದೆ.  ಮನೆ ಕಟ್ಟಿಸುವ ಮೊದಲೇ ಇಲ್ಲಿನ ಜನ ಬಾವಿ ತೆಗೆಸುತ್ತಿದ್ದರಂತೆ.  ನೆಲದಾಳದಲ್ಲಿ ನೀರು ಸಿಕ್ಕು ಬಾವಿ ಕಟ್ಟಿಸಿದ ಮೇಲೆ ಮನೆ ಕಟ್ಟಿಸುವ ತೀರ್ಮಾನ.  ಸೀರು ಸಿಗದಿದ್ದರೆ ಅಂತಹ ಜಾಗದಲ್ಲಿ ಮನೆಯನ್ನೇ ಕಟ್ಟಿಸುತ್ತಿರಲಿಲ್ಲ.

ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಉತ್ತರಕನ್ನಡದ ಸಿದ್ದಾಪುರದವರೆಗೆ ಈ ವಿಶೇಷ ಬಾವಿಗಳು ಲಭ್ಯ.  ಮನೆಯ ಅಂಗಳ, ಅಡುಗೆಮನೆ, ಚೌಕಿ, ಜಗುಲಿ ಹೀಗೆ ಎಲ್ಲಾದರೂ ಬಾವಿ ಇದ್ದೇ ಇರುತ್ತದೆ.  ಹೆಚ್ಚಾಗಿ ಅಡುಗೆಮನೆ ಹಾಗೂ ಬಚ್ಚಲುಮನೆಗಳನ್ನು ಬಾವಿಯ ಅಕ್ಕಪಕ್ಕದಲ್ಲಿ ಕಟ್ಟಿರುತ್ತಾರೆ.  ನೀರು ತರಲು ಶ್ರಮವಿಲ್ಲ.

ಬಾವಿಗಳು ೨೦ ಅಡಿಗಳಿಂದ ೬೦ ಅಡಿಗಳಷ್ಟು ಆಳ.  ಬಾವಿಗೆ ಬೆಳಕು, ಸೂರ್ಯನ ಬಿಸಿಲು ಬೀಳುವುದಿಲ್ಲ.  ಬಾವಿ ತೆಗೆಸಿದ ಕೂಡಲೇ ಅದಕ್ಕೆ ಕಲ್ಲು ಕಟ್ಟಿಸುತ್ತಾರೆ.  ನೆಲದ ಮೇಲುಭಾಗದಲ್ಲಿ ಕಟ್ಟೆ ಕಟ್ಟಿಸುತ್ತಾರೆ.  ಚೌಕದ ಕಟ್ಟೆ ಸಾಮಾನ್ಯ.  ವೃತ್ತಾಕಾರ, ಷಡ್ಭುಜಾಕಾರಗಳಲ್ಲೂ ಬಾವಿಗಳನ್ನು ತೆಗೆದು, ಕಟ್ಟೆ ಕಟ್ಟುವುದೂ ಇದೆ.

ಬಾವಿಯ ನೀರು ಹಾಳಾಗದಿರಲು ಬಾವಿ ತೆಗೆಸಿದ ಕೂಡಲೇ ನೆಲ್ಲಿಮರದ ತುಂಡನ್ನು ಬಾವಿಗೆ ಹಾಕುತ್ತಾರೆ.  ಇದರಿಂದ ನೀರು ಸಿಹಿಯಾಗಿರುತ್ತದೆ ಎನ್ನುವ ನಂಬಿಕೆ.

ನೀರಿನ ಬಳಕೆ ಮಿತವಾಗಿದ್ದ ಕಾಲದಲ್ಲಿ ಈ ಬಾವಿಗಳು ಬತ್ತುತ್ತಿರಲಿಲ್ಲ.  ಈಗ ಈ ಬಾವಿಗಳಿಗೂ ಪಂಪ್‌ಸೆಟ್ ಬಂದಿದೆ.  ನೀರೆತ್ತುವುದು ಹೆಚ್ಚಿದೆ.  ಮಳೆಪ್ರಮಾಣ ಕುಸಿದಂತೆ ಈ ಬಾವಿಗಳಿಗೆಲ್ಲಾ ಆಶ್ರಯತಾಣವಾಗಿದ್ದ ಕೆರೆಗಳೂ ಬತ್ತಿಹೋಗುತ್ತಿವೆ.  ಹೀಗೆ ಬಾವಿಗಳು ಏಪ್ರಿಲ್, ಮೇ ತಿಂಗಳುಗಳಲ್ಲಿ ಬತ್ತುತ್ತಿವೆ.   ಬಾವಿಗಳು ಬತ್ತದಿರಲು ಮಳೆನೀರು ಕೊಯ್ಲು ಈ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ.  ಯಶಸ್ವಿಯೂ ಆಗಿದೆ.

ಇಸವಿ ೨೦೦೩ರಲ್ಲಿ ಸಾಗರ ತಾಲ್ಲೂಕಿನ ೬೦ ಹಳ್ಳಿಗಳಲ್ಲಿ ಈ ರೀತಿಯ ಬಾವಿ ನೀರಿನ ಪರೀಕ್ಷೆಯನ್ನು ಚನ್ನೈನ ಸಿ.ಪಿ. ರಾಮಸ್ವಾಮಿಯ್ಯಂಗಾರ್ ಟ್ರಸ್ಟ್ ಮಾಡಿತು.  ಎಲ್ಲಾ ಬಾವಿಗಳ ನೀರೂ ಅತ್ಯಂತ ಸುರಕ್ಷಿತ ಹಾಗೂ ಶುದ್ಧ ಎಂದು ದೃಢಪಟ್ಟಿದೆ.  ಇಲ್ಲಿನ ಕೊಳವೆಬಾವಿಗಳ ನೀರೂ ಸಹ ಸುರಕ್ಷಿತವೆಂದು ಪ್ರಮಾಣಪತ್ರ ದೊರೆತಿದೆ.

ಬಾವಿಬದುಕು

ಬಾವಿಗಳು ಸಾಮಾಜಿಕವಾಗಿ ಬಹುದೊಡ್ಡ ಪಾತ್ರ ವಹಿಸುತ್ತವೆ.  ಬಿಜಾಪುರದ ಬಾವಡಿಗಳು ರಾಣಿಯರ ಸ್ನಾನಗೃಹಗಳೇ ಆಗಿದ್ದವು.  ಯುದ್ಧದಲ್ಲಿ ರಾಜರು ಸೋತಾಗ ಈ ಬಾವಿಗಳೇ ಮೋಕ್ಷತಾಣಗಳಾಗುತ್ತಿದ್ದವು.  ಸಾಟ್‌ಖಬರ್ ಬಳಿ ಇರುವ ಬಾವಿ ಹಾಗೂ ಅದಕ್ಕೆ ನಿರ್ಮಿಸಿದ ಮೂರು ಮಹಡಿಗಳ ಕಟ್ಟಡ ಇದಕ್ಕೆ ಮೂಕ ಸಾಕ್ಷಿ.  ಈ ಬಾವಿಗಳ ನೀರನ್ನು ಕುಡಿಯಲು, ಗೃಹಬಳಕೆಗೆ ಉಪಯೋಗಿಸುವಂತಿರಲಿಲ್ಲ.  ಅದಕ್ಕಾಗಿ ಬೇರೆ ಬಾವಿಗಳಿದ್ದವು. ಬಾವಿಗಳ ಪಕ್ಕದಲ್ಲೇ ಇತರರು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಸ್ನಾನ ಮುಂತಾದ ದಿನನಿತ್ಯದ ಬದುಕು ನಡೆಯುತ್ತಿತ್ತು.  ಎಲ್ಲಾ ಮುಗಿಸಿ ಎರಡು ಕೊಡ ನೀರನ್ನು ಕುಡಿಯಲು ಹೊತ್ತು ಮನೆಗೆ ಒಯ್ಯುತ್ತಿದ್ದರು.  ಬಿಜಾಪುರದ ಅನೇಕ ಹಳ್ಳಿಗಳಲ್ಲಿ ಈ ರೀತಿಯ ಬಾವಿಗಳು ಹಾಗೂ ಬದುಕು ಇನ್ನೂ ಇದೆ.  ಇಸವಿ ೨೦೦೨ರಲ್ಲಿ ಬಾದಾಮಿಯ ದೊಡ್ಡ ಬಾವಿ ಬತ್ತಿದಾಗ ಊರಿಗೆ ಊರೇ ನಿಟ್ಟುಸಿರುಬಿಟ್ಟಿದ್ದು ಪತ್ರಿಕೆಗಳಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು.  ೨೦ ಅಡಿ ಅಗಲ, ೪೦ ಅಡಿU ಆಳದ ಬಾವಿಗೆ ತಳದವರೆಗೂ ಮೆಟ್ಟಿಲುಗಳಿವೆ.  ಮೇಲಿರುವ ಕಟ್ಟೆಗೆ ಮೂರು ದಿಕ್ಕಿನಲ್ಲಿ ನೀರೆತ್ತುವ ರಾಟೆಯಿದೆ.  ಊರಿನಲ್ಲಿ ಎಂದೆಂದಿಗೂ ನೀರಿಗಾಗಿ ಸರದಿ ಸಾಲು ನಿಂತಿರಲಿಲ್ಲ ಎಂದು ಹಿರಿಯರು ನೆನೆಯುತ್ತಾರೆ.

ಪ್ರತಿ ಊರಿನಲ್ಲೂ ಊರೊಟ್ಟಿನ ಬಾವಿ ಇರುತ್ತಿತ್ತು.  ಇದು ಎಲ್ಲಾ ಜನಾಂಗದವರಿಗೂ ಮುಕ್ತವಾಗಿತ್ತು.  ಬಾಯಾರಿದ ದಾರಿಹೋಕರಿಗೂ ಇದು ದಾಹ ನೀಗಿಸುತ್ತಿತ್ತು.  ಅಲೆಮಾರಿಗಳಿಗೆ ಬಾವಿಕಟ್ಟೆಯ ಪಕ್ಕದ ಬಯಲೇ ಆಶ್ರಯತಾಣ.  ಪ್ರತಿಯೊಂದು ಜಾತಿಗೂ ಒಂದೊಂದು ಬಾವಿ ಇರುವ ಊರುಗಳೂ ಇವೆ.  ಕೆಲವು ಊರುಗಳಲ್ಲಿ ದಲಿತರಿಗೆ ಬಾವಿಗಳಿಲ್ಲ.  ಅಸ್ಪೃಶ್ಯತೆ, ಜಾತೀಯತೆಗಳ ಕಾರಣದಿಂದಾಗಿ ಬಾವಿಯ ನೀರೇ ಗಲಭೆಗೆ ಮೂಲವಾಗಿತ್ತು.  ಈಗಲೂ ಅನೇಕ ಹಳ್ಳಿಗಳಲ್ಲಿ ಇದೇ ಕಟ್ಟಳೆಗಳು ಉಳಿದಿವೆ.  ಕೆಲವು ಊರುಗಳಲ್ಲಿ ಹಿಂದು-ಮುಸ್ಲಿಂ ಗಲಭೆಗೂ ಕಾರಣವಾಗಿದೆ.

ಊರೊಟ್ಟಿನ ಬಾವಿಕಟ್ಟೆ ಹೊಸ ಪರಿಚಯದ ತಾಣವೂ ಹೌದು.  ಊರಿಗೆ ಬಂದವಳು ನೀರಿಗೆ ಬಾರದಿರುವಳೇ ಎನ್ನುವ ಗಾದೆ ಹುಟ್ಟಿದ್ದೂ ಈ ಊರೊಟ್ಟಿನ ಬಾವಿಕಟ್ಟೆಗೆ ನೀರು ಒಯ್ಯಲು ಬರುವ ಹೊಸ ಸೊಸೆಯನ್ನು ಕುರಿತೇ ಆಗಿದೆ.

ಮಲೆನಾಡಿನ ಊರೊಟ್ಟಿನ ಬಾವಿಕಟ್ಟೆಯ ಬಳಿ ಎಷ್ಟೆಲ್ಲಾ ಹಬ್ಬಗಳು ನಡೆಯುತ್ತವೆ-ಗೌರಿಹಬ್ಬ, ಬೂರೆಹಬ್ಬಗಳು ಇಡೀ ಊರ ಹೆಂಗಳೆಯರನ್ನು ಬಾವಿಕಟ್ಟೆಯ ಬಳಿ ತಂದು ನಿಲ್ಲಿಸುತ್ತದೆ.

ಗೌರಿಹಬ್ಬ ಮಲೆನಾಡಿನ ದೀವ ಜನಾಂಗದವರು ನಡೆಸುವ ದೊಡ್ಡಹಬ್ಬ.  ಗೌರಿ ಕಲಶ ಸ್ಥಾಪನೆ, ಐದು ದಿನಗಳ ಪೂಜೆ ನಡೆಯುತ್ತದೆ.  ಕೊನೆಯ ದಿನ ಗೌರಿ ಬಿಡುವುದು ಊರೊಟ್ಟಿನ ಬಾವಿಯ ಬಳಿ.  ಊರಿನ ಹೆಂಗಳೆಯರೆಲ್ಲಾ ಕಲಶದೊಂದಿಗೆ ಬಾವಿಯ ಬಳಿ ಸೇರುತ್ತಾರೆ. ಹೂವು ಸಿಂಗಾರಗಳಿಂದ ಅಲಂಕರಿಸಿದ ಕಲಶ.  ಅದಕ್ಕಿಂತಲೂ ಹೆಚ್ಚು ಸಿಂಗಾರಭರಿತರಾದ, ಒಡವೆ ಒಡ್ಯಾಣಗಳಿಂದ ಅಲಂಕೃತರಾದ ಮಹಿಳೆಯರು ಬಾವಿಯ ಸುತ್ತಲೂ ಸೇರುತ್ತಾರೆ.  ಬಾವಿಯ ಬದುಕಿನಲ್ಲಿ ಇದೊಂದು ವಿಶಿಷ್ಟ ದಿನ.  ಒಬ್ಬೊಬ್ಬರಾಗಿ ಕಲಶದಲ್ಲಿರುವ ಗಂಗೆಯನ್ನು ಬಾವಿಗೆ ಸುರಿಯುತ್ತಾರೆ.  ಬಾವಿಗೆ ಪೂಜೆ ನಡೆಸುತ್ತಾರೆ.  ಅದಕ್ಕಾಗಿಯೇ ಹಾಡುಹಬ್ಬಗಳೂ ಇವೆ.  ಸಂಪ್ರದಾಯ ಆಚರಣೆಗಳೂ ಇವೆ.

ಮತ್ತೊಂದು ಹಬ್ಬ ದೀಪಾವಳಿಯ ಸಮಯದಲ್ಲಿ ಎರಡು ದಿನ ಮೊದಲು ನಡೆಸುವ ಬೂರೆ ಹಬ್ಬ.ಈ ಹಬ್ಬವನ್ನು ಮಲೆನಾಡಿನ ಎಲ್ಲಾ ಜಾತಿಯವರೂ ನಡೆಸುತ್ತಾರೆ.  ನರಕ ಚತುರ್ದಶಿಯ ಹಿಂದಿನ ಸಂಜೆ ಅಥವಾ ನರಕ ಚತುರ್ದಶಿಯ ಬೆಳಗಿನ ಝಾವ ಬಾವಿಯ ಕಟ್ಟೆಯನ್ನು ಕೆಮ್ಮಣ್ಣು, ಜೇಡಿಮಣ್ಣು, ರಂಗೋಲಿಗಳಿಂದ ಅಲಂಕರಿಸುತ್ತಾರೆ.  ಹೊಸ ಮಣ್ಣಿನ ಕೊಡದಿಂದ ಬೂರೆಯ ನೀರನ್ನು ಮೇಲೆತ್ತುತ್ತಾರೆ.  ಬಾವಿಕಟ್ಟೆಯ ಮೇಲಿಟ್ಟು ಅರಿಶಿನ ಕುಂಕುಮ ಹಚ್ಚಿ ಹತ್ತಿಯ ಹಾರ ಹಾಕಿ ಆರತಿ ಬೆಳಗಿ ಪೂಜಿಸುತ್ತಾರೆ.  ಮನೆಯೊಳಗೊಯ್ದು ದೇವರ ಮುಂದೆ ಇಟ್ಟು ಮಾವಿನ ಎಲೆ, ತೆಂಗಿನಕಾಯಿಗಳನ್ನು ಕೊಡದ ಮೇಲಿಟ್ಟು ಮೂರು ದಿನಗಳ ಕಾಲ ಪೂಜಿಸುತ್ತಾರೆ.  ಹೀಗೆ ಪೂಜಿಸಿದ ನೀರನ್ನು ವರ್ಷತೊಡಕಿನ ಬೆಳಗಿನ ಝಾವ ಗೊಬ್ಬರದ ಗುಂಡಿಗೆ ಚಿಮುಕಿಸುತ್ತಾರೆ.  ಬಚ್ಚಲಿನ ಹಂಡೆಗೆ ಹಾಕುತ್ತಾರೆ.  ಬೂರೆ ನೀರಿನ ಸ್ನಾನದಿಂದ ಮೈ, ಮನಸ್ಸು ಶುದ್ಧವಾಗುತ್ತದೆ ಎನ್ನುವುದು, ಹಾಗೆಯೇ ಗೊಬ್ಬರದ ಸತ್ವವನ್ನು ಹೆಚ್ಚಿಸಿ ಉತ್ತಮ ಫಸಲು ಸಿಗುತ್ತದೆ ಎನ್ನುವ ನಂಬಿಕೆಗಳು ಇವೆ.

ಬಾವಿಸಲಕರಣೆಗಳು

ಬಾವಿಯಿಂದ ನೀರು ಮೇಲೆತ್ತಲು ರಾಟೆ, ಗಡಗಡೆ, ಏತ, ಕಪಿಲೆ, ಪರ್ಷಿಯನ್ ವೀಲ್ ಹಾಗೂ ಪಂಪ್‌ಸೆಟ್‌ಗಳು ಮುಖ್ಯ ಸಲಕರಣೆಗಳು.  ರಾಟೆ, ಗಡಗಡೆಗೆ ದಪ್ಪ ಕತ್ತದ ಹಗ್ಗ ಅಥವಾ ರಬ್ಬರ್, ಪ್ಲಾಸ್ಟಿಕ್ ಹಗ್ಗಗಳನ್ನು ಬಳಸುತ್ತಾರೆ.  ಏತ ನೀರಾವರಿಗೆ, ಕಪಿಲೆ ಹೊಡೆಯಲು ಚರ್ಮದ ಚೀಲ ಮುಖ್ಯ ಸಲಕರಣೆ.  ರಾಟೆ, ಹಗ್ಗ, ನೊಗಗಳನ್ನು ಹಾಗೂ ಎತ್ತುಗಳನ್ನು ನೀರೆತ್ತಲು ಬಳಸುತ್ತಿದ್ದರು.  ಪರ್ಷಿಯನ್ ವೀಲ್‌ನಲ್ಲಿ ಯಾಂತ್ರಿಕ ಚಕ್ರಗಳೇ ಮುಖ್ಯ.

ಮಲೆನಾಡಿನ ಬಾವಿಗಳಲ್ಲಿ ಕೆಳಗಿಳಿಯಲು ಮೆಟ್ಟಿಲುಗಳಿರುವುದಿಲ್ಲ.  ಬಾವಿಗೆ ಕೊಡ ಬಿದ್ದಾಗ ಅದನ್ನು ಮೇಲೆತ್ತಲು ಪದೆ ಪದೇ ಬಾವಿಗಿಳಿಯಬೇಕು.  ಅದಕ್ಕಾಗಿ ಪಾತಾಳಗರುಡ ಎನ್ನುವ ಸಲಕರಣೆಯನ್ನು ಕೊಡ ಮೇಲೆತ್ತಲು ಬಳಸುತ್ತಾರೆ.  ಕಬ್ಬಿಣದ ಕೊಕ್ಕೆಗಳಿಂದ ಕೂಡಿದ ವೃತ್ತಾಕಾರದ ಸಾಧನವಿದು.  ಬಾವಿಗೆ ಬಿದ್ದ ಕೊಡಗಳನ್ನು ತನ್ನ ಕೊಕ್ಕೆಗಳಿಂದ ಮೇಲೆತ್ತಿ ತರುತ್ತದೆ.

ಜಲನೋಡುವವರು

ಹಳ್ಳಿಗಳಲ್ಲಿ ಬಾವಿ ತೆಗೆಸುವ ಮೊದಲು ಸಾಂಪ್ರದಾಯಿಕ ಜಲತಜ್ಞರಿಂದ ಜಲ ನೋಡಿಸುವ ಪದ್ಧತಿಯಿದೆ.  ಜಲತಜ್ಞರು ತೆಂಗಿನಕಾಯಿ ಬಳಸಿ ಅಥವಾ ಕಡ್ಡಿಕೋಲು ಬಳಸಿ ನೆಲದಾಳದ ಜಲ ನೋಡುತ್ತಾರೆ.  ಅಂಗೈ ಮೇಲೆ ತೆಂಗಿನಕಾಯಿ ಇಟ್ಟು ಜಲವಿರುವ ಜಾಗದಲ್ಲಿ ನಿಂತರೆ ಜುಟ್ಟ ಅಡ್ಡಲಾಗಿ ಮಲಗಿದ ತೆಂಗಿನಕಾಯಿ ನೆಟ್ಟಗೆ ಎದ್ದು ನಿಲ್ಲುತ್ತದೆ.  ಎದ್ದು ನಿಲ್ಲುವ ವೇಗ ಅವಲಂಬಿಸಿ ನೀರಿನ ಪ್ರಮಾಣ ಹೇಳುತ್ತಾರೆ.  ಮೂರು-ನಾಲ್ಕು ಬಾರಿ ಅಲ್ಲೇ ನಡೆದಾಡಿ ಖಚಿತ ಜಾಗವನ್ನೂ, ಆಳವನ್ನೂ ತಿಳಿಸುತ್ತಾರೆ.  ಎರಡೂ ಕೈಬೆರಳಿನಲ್ಲಿ ಕಡ್ಡಿಗಳನ್ನು ಹಿಡಿದುಕೊಂಡು ಜೋಡಿಸಿ ಹಿಡಿಕೊಳ್ಳುವ ವಿಧಾನ ಇನ್ನೊಂದು ರೀತಿಯದು.  ಜಲವಿದ್ದಲ್ಲಿ ಕಡ್ಡಿಯು ಗಿರಗಿರನೆ ಸುತ್ತತೊಡಗುತ್ತದೆ.  ಸುತ್ತುವ ವೇಗ ಹಾಗೂ ಕಡ್ಡಿಯ ಆಧಾರದಿಂದ ಖಚಿತ ಸ್ಥಳ ಹಾಗೂ ಆಳವನ್ನು ತಿಳಿಸುತ್ತಾರೆ.  ಉಳಿದಂತೆ ನೆಲಕ್ಕೆ ಕಿವಿಗೊಟ್ಟು ಕೇಳುವುದು, ಭೂಲಕ್ಷಣಗಳ ಮೂಲಕ ಹೇಳುವುದು ಮುಂತಾದ ಅನೇಕ ವಿಧಾನಗಳೂ ಬಳಕೆಯಲ್ಲಿವೆ.

ಬಾವಿನಿರ್ಮಾಣ

ಬಾವಿಯನ್ನು ಎಲ್ಲರಿಗೂ ತೆಗೆಯಲು ಸಾಧ್ಯವಿಲ್ಲ.  ಕೇರಳದವರು ಬಾವಿ ತೆಗೆಯುವುದರಲ್ಲಿ ಪ್ರಖ್ಯಾತರು.  ಜಲದ ಮೂಲ, ಅಡ್ಡವಿದೆಯೇ, ನೇರವಿದೆಯೇ, ಮೇಲುಜಲವೋ, ಕೆಳಜಲವೋ, ಆಳದ ಜಲ ಅಧಿಕವೋ ಅಥವಾ ಅಡ್ಡ ಜಲ ಅಧಿಕವೋ ಇವನ್ನೆಲ್ಲಾ ಅರಿತಿರಬೇಕು.  ಮಣ್ಣು ಹಿಸಿದುಬೀಳದಂತೆ ಆಳ ಮಾಡುತ್ತಾ ಹೋಗಬೇಕು.  ಸರಿಯಾದ ಆಳ, ಜಲಮೂಲಕ್ಕೆ ನಿಲ್ಲಿಸಬೇಕು.

ಬಾವಿ ತೆಗೆದ ಮೇಲೆ ಕಲ್ಲು ಕಟ್ಟಬೇಕೆ, ಇಟ್ಟಿಗೆ ಕಟ್ಟಬೇಕೆ, ಸಿಮೆಂಟ್ ರಿಂಗ್ ಅಳವಡಿಸಬೇಕೆ ಅಥವಾ ಹಾಗೇ ಬಿಡಬೇಕೆ ಎನ್ನುವ ಅರಿವು ಬಾವಿ ತೆಗೆಯುವವರಿಗಿರಬೇಕು.

ಅದರೊಂದಿಗೆ ಮಣ್ಣು, ಶಿಲೆಗಳ ಲಕ್ಷಣಗಳು ಗೊತ್ತಿರಬೇಕು.  ಕೆಲವು ಮಣ್ಣುಗಳಿಗೆ ಚೌಕಾಕಾರದ ಬಾವಿಗಳು ಸೂಕ್ತವಾದರೆ, ಕಾದಾಳಿ ಮಣ್ಣಿಗೆ ಗುಂಡನೆಯ ವೃತ್ತಾಕಾರ ಸೂಕ್ತ.  ಬಾವಿಯ ಆಳ, ಅಗಲಗಳೂ ಈ ಆಕಾರಗಳ ನಿರ್ಣಯಕ್ಕೆ ಕಾರಣವಾಗುತ್ತದೆ.

ಜಲಮೂಲ ಮುಚ್ಚದಂತೆ ಕಲ್ಲು, ಇಟ್ಟಿಗೆ, ಸಿಮೆಂಟ್ ರಿಂಗ್ ಕಟ್ಟಬೇಕು.  ಮಳೆಗಾಲದ ಒರತೆಗಳೂ ಬಾವಿಗೆ ಸೇರುವಂತೆ ನಿರ್ಮಿಸಬೇಕು.  ಬಾವಿ ನೀರಿನ ಪ್ರಮಾಣವನ್ನು ಎರಡು ಮೂರು ಸಾರಿ ನೀರನ್ನೆಲ್ಲಾ ಖಾಲಿ ಮಾಡಿ ಪರೀಕ್ಷಿಸಬೇಕು.  ಜಲಮೂಲದ ಸಾಮರ್ಥ್ಯ ಗುರುತಿಸಬೇಕು.  ಮಲೆನಾಡಿನಲ್ಲಿ ಸುಮಾರು ೩೦ ಅಡಿಗಳ ಬಾವಿ ನಿರ್ಮಿಸಲು ೫೦ ಸಾವಿರ ರೂಪಾಯಿಗಳು ಬೇಕು.ಇದು ಇಸವಿ ೨೦೦೪ರ ಲೆಕ್ಕಾಚಾರ.  ಕರಾವಳಿಗಳಲ್ಲಿ ಹಾಗೂ ಗುಲ್ಬರ್ಗಾ, ಬೀದರ್‌ಗಳಲ್ಲಿ ಕಡಿಮೆ ಸಾಕು.  ನೀರು ಮೇಲ್ಮಟ್ಟದಲ್ಲಿವೆ ಹಾಗೂ ಮಣ್ಣುಶಿಲೆಗಳು ಗಟ್ಟಿಯಾಗಿವೆ.

ಬಹಳ ಹಿಂದೆ ಬಾವಿಗಳಿಗೆ ಕಲ್ಲು ಕಟ್ಟುವ ಬದಲು ಸಿಮೆಂಟ್ ರಿಂಗ್‌ನಂತೆ ಮಣ್ಣಿನ ರಿಂಗ್ ನಿರ್ಮಿಸಿ ಸುಟ್ಟು ಅದನ್ನು ಬಾವಿಗಳಿಗೆ ಅಳವಡಿಸುತ್ತಿದ್ದರಂತೆ.  ಆ ರೀತಿಯ ಬಾವಿಗಳ ಕುರುಹು ಸೊರಬ ತಾಲ್ಲೂಕಿನ ಉಳವಿಯಲ್ಲಿ ಸಿಕ್ಕಿದೆ.  ಹೀಗೆ ಬಳಸಿದ ಸುಟ್ಟಮಣ್ಣಿನ ರಿಂಗ್‌ಗಳು ಇಂದಿಗೂ ಸ್ವಸ್ಥವಾಗಿವೆ.  ಆದರೆ ಬಾವಿ ಮುಚ್ಚಿಹೋಗಿದೆ.  ಬಯಲುಸೀಮೆಯಲ್ಲಿ ಕಪಿಲೆಬಾವಿಗಳಿದ್ದವಂತೆ.  ಇವು ಕುಂದಣದ ಬಾವಿಗಳೆಂದು ಪ್ರಸಿದ್ಧ.  ಶಿವಮೊಗ್ಗ ಬಳಿಯ ಹಾರನಹಳ್ಳಿಯಲ್ಲಿ ಈ ರೀತಿಯ ಬಾವಿಗಳಿವೆ.

ಇತರೆ

ಬಾವಿಗಳಲ್ಲಿ ಮೀನುಗಳನ್ನೂ, ಆಮೆಗಳನ್ನೂ ಸಾಕುತ್ತಾರೆ.  ಹೆಚ್ಚು ಆಳದ ಬಾವಿಗಳಲ್ಲಿ ಆಮ್ಲಜನಕದ ಕೊರತೆ ಇದ್ದರೆ ಇದು ಅಸಾಧ್ಯ.  ಬಾವಿಗಳನ್ನು ಫ್ರಿಜ್‌ನಂತೆ ಬಳಸುತ್ತಾರೆ.  ಅಂದರೆ ನಿಂಬೆಹಣ್ಣು, ವೀಳ್ಯದೆಲೆ ಮುಂತಾದ ಬೇಗನೆ ಬಾಡುವ ವಸ್ತುಗಳನ್ನು ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ತುಂಬಿ ಬೀಲದಂತೆ ಹಗ್ಗ ಕಟ್ಟಿ ಬಾವಿಯ ಅರ್ಧದವರೆಗೆ ಇಳಿಬಿಟ್ಟರೆ ಅನೇಕ ದಿನಗಳವರೆಗೆ ಕೆಡದೆ, ಹಾಳಾಗದೆ ಹಾಗೇ ಇರುತ್ತದೆ.  ಇದು ಮಲೆನಾಡಿನ ಮನೆಯೊಳಗಿರುವ ಬಾವಿಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ.  ಬಾವಿಯ ನೀರನ್ನು ಸಿಹಿಗೊಳಿಸಲು ಬಾವಿಗೆ ನೆಲ್ಲಿಮರದ ತುಂಡನ್ನು ಹಾಕುತ್ತಾರೆ.

ಕುಂದಣದ ಬಾವಿ, ರಸ ಬಾವಿ, ಕಟ್ಟಿನ ಬಾವಿ, ಬೆಟ್ಟದ ಬಾವಿ, ಸುರಂಗದ ಬಾವಿ ಹೀಗೆ ಬಾವಿಗಳಲ್ಲಿ ಅನೇಕ ವಿಧಗಳಿವೆ.