ಶ್ರೀಜಿನಚರಣಾಂಬುಜಮಂ
ಪೂಜಿಸುತುಂ ಪಾತ್ರದಾನಮಂ ಮಾಡುತ್ತುಂ
ಧೀಜನವಿನುತಗುಣಂ ರಾ
ರಾಜಿಸಿದಂ ಸರಸಚತುರಕವಿಕುಳತಿಳಕಂ            ೧

ವ : ಮತ್ತಮಾ ದಶರಥಮಹೀನಾಥನಕೂಪಾರಚತುಷ್ಕ ಮೇರೆಯಾದ ಧಾರಿಣೀಮಂಡಳ ಮನಭಿರಕ್ಷಣಂಗೆಯ್ಯುತ್ತುಂ ಕತಿಪಯದಿನಂಗಳ್ ಪೋಗಲೊಡಮೊಂದು ದಿವಸಂ

ಎನ್ನಂತಾವಂ ದಲಿಂದೀವರವಿತತಿಗೆ ವಿದ್ವೇಷಮಂ ಮಾಡುವಂ ಮ
ತ್ತೆನ್ನಂತುತ್ಪಂಕಜಾತ್ಕಿರದತಿಶಯದಿಂ ಕೂರ್ಪನಾವಂ ಕಳಾಸಂ
ಪನ್ನಂಗೆನ್ನಂತಿರಾವಂ ಬಿಡದೆ ಮುನಿವನಾತಂಗಧಃಪಾತಮಕ್ಕಿಂ
ತೆನ್ನಂತೆಂತೆಯ್ದೆ ಲೋಕಕ್ಕಱಿಪುವ ತೆಱದಿಂ ಸೂರ್ಯನಸ್ತಕ್ಕೆ ಸಂದಂ           ೨

ವಾರಿಜಮಿತ್ರಂ ಕರದಿಂ
ವಾರುಣಿಯಂ ಪಿಡಿದು ಸೇವಿಸಿದ ಕಾರಣದಿಂ
ದೋರಂತಂಬರಮಂ ಬಿ
ಟ್ಟಾರಯ್ಯದೆ ನಡುಗಿ ಕೆಡೆದನಸ್ತಾಚಳದೊಳ್   ೩

ಸಾವಿರಕರಂಗಳಂ ಚರ
ವಾವನಿಧರದಲ್ಲಿಯೂಱಿಯುಂ ಖರತೇಜಂ
ಭಾವಿಪೊಡೆ ಬಿಳ್ದನೆಂದೊಡ
ಮಾವಂಗಂ ಮೀಱಲಪ್ಪುದೇ ವಿಧಿವಶಮಂ       ೪

ವ : ಅಂತು ಸೂರ್ಯನಸ್ತಂಗತನಪ್ಪ ಸಮಯದೊಳ್

ಮೂಡಣದಿಕ್ಕಿನಲ್ಲಿ ಪರಿಪೂರ್ಣಕಳಾಯುತಚಂದ್ರಮಂಡಳಂ
ಮೂಡಲೊಡಂ ಕುಮುದ್ವತಿಗೆ ಸಂತಸದಿಂದೆ ವಿಕಾಸಭಾವಮಂ
ಮಾಡಿದುದೆಯ್ದೆ ದೇವಗೃಹದೊಳ್ ವಿವಿಧಾತತವಾದ್ಯನಾದ್ಯಮುಂ
ಮೂಡಿದುದೀ ಜಗಕ್ಕೆ ನೆಱೆಮೂಡಿದುದರ್ಕಜತಾಪಶಾಂತಿಯಂ      ೫

ಸಂಪೂರ್ಣಮಾದ ವಿಧುಬಿಂ
ಬಂ ಪೂರ್ವದಿಗಂಗನಾ ಲಲಾಟದೊಳಿಟ್ಟಾ
ಸೊಂಪಿನ ಚಂದನತಿಲಕದ
ಪೆಂಪಂ ತಲೆದಿರ್ದುದಂದು ಗಗನಾಂಗಣದೊಳ್  ೬

ವ : ಆಪೊತ್ತಿನೊಳ್

ಶಶಿಬಿಂಬಂ ರವಿಬಿಂಬಮೆಂಬ ವರಘಂಟಾಯುಗ್ಮಮಂ ಕಾಂತೆಯೆಂ
ಬೆಸವೀ ನೇಣಿನೊಳೆಯ್ದೆ ಕಟ್ಟಿ ನಭಮೆಂಬುದ್ದಾಮಮಪ್ಪಾನೆಗಂ
ಪೊಸತಾಗಿಬ್ಬರಿಯಲ್ಲಿ ಬಿಟ್ಟ ತೆಱದಿಂದೊಂದುಕ್ಷಣಂ ಶೋಭೆಯಂ

ಪೊಸೆಯುತ್ತಿರ್ದುದು ಮೂಡಲುಂ ಪಡುವಲುಂ ಚಂದ್ರಾರ್ಕಸನ್ಮಂಡಲಂ       ೭

ವ : ಮತ್ತಂ

ಪಾಲ್ಗಡಲೆಯ್ದೆ ಪೆರ್ಚಿ ಘನಮಾಗಿಯೆ ಮೇರೆಯನಂದು ಮೀಱಿ ತಾಂ
ಮೇಲ್ಗಡರುತ್ತುಮೀ ಧರಣಿಮಂಡಲಮೆಲ್ಲಮುಮಂ ಮುಸುಂಕಿಕೊಂ
ಡೇಳ್ಗೆಯೊಳಿರ್ದುದೆಂಬ ತೆಱದಿಂ ಬೆಳುದಿಂಗಳ ಮೊತ್ತಮೆತ್ತಲುಂ
ವಲ್ಗನದಿಂದೆ ಕೊರ್ವಿ ನೆಱೆಪರ್ವಿದುದೀ ಭುವನಾಂತರಾಳಮಂ      ೮

ವ : ಅಂತು ಪತ್ತುಂದಿಕ್ಕಿನೊಳ್ ಪಸರಿಸಿದ ತತ್ಪುಣ್ಯಮೂರ್ತಿಯ ಕೀರ್ತಿಯೊಳ್ ಪುರುಡಿಸುವಂತಚ್ಚವೆಳ್ದಿಂಗಳುಂ ದಶದಿಶಾಪಟಮಂ ಪರಿವ್ಯಾಪಿಸಿ ಸಮಸ್ತಜನಕ್ಕಾನಂದಮಂ ಸಂಪಾದಿಸುತ್ತುಮಿರಲಿತ್ತಲಾ ದಶರಥಮಹೀನಾಥನೊಂ ದಿಂದುಕಾಂತಶಿಲಾಮಯಮಾದ ಸಮುದಗ್ರಸೌಧಶಿಖರಾಗ್ರದೊಳಶೇಷವಿವೇಕವಿಶೇಷ ದೊಳೊಂದಿದ ಮೇಳದ ವಿಳಾಸಿನೀಕಳಾಪದೊಡಗೂಡಿ ಲೀಲೆಯಿಂದೋಲಗಂ ಗೊಟ್ಟಿರ್ದು ದಿಶಾಶೋಭಾವ ಳೋಕನಂಗೆಯ್ವುತ್ತುಮಿರ್ಪಾಗಳ್ ತೊಟ್ಟನೆ ಕಟ್ಟಿದಿರೊಳ್

ಈ ನರನಾಯಕಂಗಮೆನಗಂ ಸಲೆ ಚಾರುಕಳಾಭೀಯೋಗಮುಂ
ಮಾನವವಂದ್ಯಮಾನವರ ಪಾದಮುಮೆಂದು ಸುಧಾಕರಂ ಕರಂ
ಮಾನಿತತಾರಕಾಯುವತಿವೃಂದದೊಳೊಂದಿ ನಭೋನಿವಾಸದೊಳ್
ತಾನುಮದಂತಿರೋಲದೊಳಿರ್ದೆಸೆದಂ ಪುರುಡಿಂದಮೆಂಬವೊಲ್     ೯

ಆ ರಾಜನ ಸರಿಯಾಗಿ ದ
ಲೀ ರಾಜಂ ಮುಗಿಲಲೇಶಮಾದೊಡಮೇನುಂ
ಸಾರದ ಮಿಗೆ ಪ್ರಸನ್ನ ನ
ಭೋರಾಜಾಲಯದೊಳೊಪ್ಪಮಂ ತಾಳ್ದಿರ್ದಂ ೧೦

ಅತಿರಮಣೀಯಮಾಗಿ ಪೊಳೆವ ಶ್ರವಣಸ್ಥಿತಿಯಿಂದಮೊಪ್ಪಿ ಸ
ನ್ನುತಮೆನಿಸಿರ್ದ ಕೋಮಳಸುಹಸ್ತವಿಶೇಷದೊಳೊಂದಿ ಸಾರಮ
ಪ್ಪತಿಶಯಚಿತ್ತನಾಗಿ ವಿಶದಾಂಶುಕಮಂ ಪೊದೆದಿರ್ದು ತಾಳ್ದಿಯು
ನ್ನತಿಯನೆ ರಾಜನಂತಿರೆ ವಿರಾಜಿಸಿದಂ ಮಿಗೆ ರಾಜನಾಕ್ಷಣಂ            ೧೧

ವ : ಅಂತು ರಾಜಶಬ್ದಸಾಮ್ಯಸಂಜಾತದುರ್ವಹಗರ್ವದಿಂ ಖರ್ವನೆಂಬಂತೆ ನಿಜಪರಿಕರಪರಿವಾರದಿಂ ಪರಿವೃತನಾಗಿ ದಿವದೊಳ್ ಪ್ರತಿಕೂಲಸಭಾಶೋಭೆಯಂ ನಿರ್ವರ್ತಿಸಿ ತನ್ಮಧ್ಯದೊಳೊಪ್ಪುತ್ತುಮಿರ್ದ ಚಂದ್ರಮನಂ ನರೇಂದ್ರಕುಂಜರಂ ನೋಡಿ

ಮೆಚ್ಚೆ ನೃಪಾಳಂ ಹೃದಯದೊ
ಳಚ್ಚರಿಯಂ ತಾಳ್ದಿ ನಾಡೆ ಕೊಂಡಾಡುತ್ತುಂ
ಪೆರ್ಚಿದ ಚಂದ್ರನ ಸಿರಿಯಂ
ಚೆಚ್ಚರದಿಂ ನೋಡಿ ತೂಗುತಿರ್ದಂ ತಲೆಯಂ     ೧೨

ವ : ಅನ್ನೆಗಮಿತ್ತಲ್

ಕ್ರೂರಾಕಾರಮನೆಯ್ದೆ ತಾಳ್ದಿ ತಮಮಂ ಚೆಲ್ಲುತ್ತುಮಿರ್ದೆಲ್ಲಿಯುಂ
ಘೋರಂ ಕಷ್ಟತರಂ ಭಯಂಕರಮುಖಂ ಪೀಡಾಕರಂ ರಾಹು ಬಂ
ದಾ ರಾಜದ್ವಿಧುಬಿಂಬಮಂ ಬಿಡದೆ ಮೇಲ್ಪೊರ್ದುತ್ತುಮಿರ್ದತ್ತು ಮ
ತ್ತೋರಂತುಗ್ರವಿಷಂ ಮಹಾಮೃತಮನಂದೆಯ್ತಂದು ಸಾರ್ವಂದದಿಂ            ೧೩

ವಿರಹಿಜನಕ್ಕೆ ತೀವ್ರಪರಿತಾಪಮನಾಗಿಸುತಿರ್ಪಕಾರಣಂ
ನೆರಪಿದ ಪಾಪಪಿಂಡಮದು ತಾಂ ಪಿಡಿವಂತಿರೆ ರಾಹು ಚಂದ್ರನಂ
ತ್ವರಿತದೊಳೆಯ್ದೆ ಬಂದು ಪಿಡಿಯಲ್ಕೆ ಸುಧಾಕರಬಿಂಬಮಾಕ್ಷಣಂ
ಕರಮರುಣತ್ವಮಂ ತಳೆದು ಮುನ್ನಿನ ಶೋಭೆಯನೊಕ್ಕುದೆಲ್ಲಮಂ           ೧೪

ವ : ಅದಂ ಕಂಡು ಮಹೀಮಂಡನಂ ವಿಸ್ಮಯಂಬಡುತ್ತುಂ ಸಂಶಯಾಕುಳಿತ ಚಿತ್ತನಾಗಿ ತನ್ನೊಳಿಂತೆಂದು ವಿಕಲ್ಪಿಸಿದಂ

ಸುರಕರಿ ಸೊಕ್ಕಿ ಪೊಕ್ಕು ಸುರಗಂಗೆಯನೆಯ್ದೆಕಲಂಕಿ ಪಂಕಜೋ
ತ್ಕರಮನದೆತ್ತಿ ಕಿಳ್ತು ಪಿಡಿದಿರ್ದೊಡೆ ತೋಱುವ ಪಂಕಕಂದಮೋ
ತ್ವರಿತದೆ ತುಂಬಿಗಳ್ ಮುಸುಱಿಕೊಂಡ ವಿಕಾಸಿತ ಕೈರವಾಸ್ಯಮೋ
ಸುರುಚಿರನೀಳಕುಂತಳಸಮಾವೃತಪೂರ್ವದಿಗಂಗನಾಸ್ಯಮೋ         ೧೫

ವ : ಇಂತಿವಱೊಳಾವುದೆಂದು ಕ್ಷಣಮಾತ್ರಂಬರಂ ಸಂದೇಹಾಂದೋಳಿತ ಚಿತ್ತನಪ್ಪ ನೃಪಾಳೋತ್ತಮಂ ಬಳಿಯಂ ಚಂದ್ರಗ್ರಹಣಮೆಂದು ನಿಶ್ಚಯಸುತ್ತುಮಿರ್ಪಿನಂ ಸರ್ವಗ್ರಾಸಿಯಾಗಲಾಗಳೆ ಕತ್ತಲೆಯ ಮೊತ್ತಮೆತ್ತಲುಂ ಬಿತ್ತರಿಸೆ ತಾರಗೆಗಳಿನಿಮಿನಿಯೆ ನುತ್ತುಂ ಪೊಳೆಯಲದಂ ಕಂಡು ನಿಷ್ಪನ್ನನೇತ್ರದಿಂದಂತರಂಗದ ಪರಿಭೇದಮಂ ಪ್ರಕಟೀಕರಿಸುತ್ತುಂ ತನ್ನೊಳಿಂತೆಂದಂ

ನೋಡಿರೆ ನೋಡಿರೇ ಕಟಕಟಾ ಕಡುಕಷ್ಟಮನಯ್ಯೊ ಅಯ್ಯೊ ಪೆಂ
ಪೋಡದ ಚಂದ್ರನಂ ಪಿಡಿದು ನುಂಗಿದುದೀಗಡೆ ಬೆಂದ ರಾಹವೇಂ
ಮಾಡುವೆನಾವೆನೋ ನಿಯತಿಯಂ ನೆಱೆಮೀಱುವನೀ ಧರಿತ್ರಿಯೊಳ್
ಮಾಡಿದ ಪುಣ್ಯಪಾಪಮನುಭೂತಿಯನೀಯದೆ ಸೈತೆಪೋಕುಮೇ    ೧೬

ಈತನ ಶಕ್ತಿಯಪ್ಪೊಡೆ ಸುರಾಸುರರಿಂಗಮಗೋಚರಂ ನಿಜ
ಪ್ರೀತನೆನಿಪ್ಪ ಕಾಮನನುಮಾಪತಿ ಭಾಳದೃಗಗ್ನಿಯಿಂದೆ ಸಂ
ಜಾತವಿಶಿಷ್ಟಕೋಪನುಱೆ ಸುಟ್ಟೊಡೆ ತನ್ನಮೃತದ್ರವಂಗಳಂ
ಸಾತಿಶಯಂಗಳಂ ತಳಿದು ಜೀವನಮಂ ಪಡೆದಿಂದುವೆತ್ತಿದಂ            ೧೭

ಆ ವೈರಪ್ರತಿಕಾರಮ
ನೋವದೆ ಮಾಳ್ಪೊಂದು ಬಯಕೆ ಕೈಮಿಗೆ ಕೋಪೋ
ದ್ಭಾವದಿನೆಂಬಂತೀಶನ
ಪಾವನಶಿರದಲ್ಲಿ ತನ್ನ ಪಾದಮನಿಟ್ಟಂ          ೧೮

ಭಾಸುರಬಾಡಮಾಗ್ನಿಯ ವಿಜೃಂಭಣದೊಂದೆಡೆಯಲ್ಲಿ ಮತ್ತೆ ಮ
ತ್ತೀ ಶಶಿ ಚಾರುಕಿರಣೋದಯದಿಂದೆ ಸಮದ್ರವೃದ್ಧಿಯಂ
ಲೇಸೆನೆ ಮಾಡದಿರ್ದೊಡುಱೆಜೀವನಮಂ ಪಿಡಿದಿರ್ಪ ಶಕ್ತಿಯುಂ
ದ್ಭಾಸನಮೆತ್ತಣಿಂ ಬಿಡದೆಬಂದುದದಕ್ಕೆನುತಿರ್ದನಾ ನೃಪಂ           ೧೯

ತನ್ನ ಕರಾಗ್ರದಿಂದೆ ವರಮಾನವತೀಜನಚಿತ್ತಮಾನದೊಂ
ದುನ್ನತಿಮೂಲಮಂ ಬಿಡದೆ ಕೀಳ್ವ ಸಮರ್ಥನುಮೀತನಿಂದೆ ಮ
ತ್ತನ್ಯನದಾವನೋ ಪ್ರಬಲಮಪ್ಪ ತಮಸ್ತತಿಯೆಂಬ ಚೋರದು
ಸ್ಸೈನ್ಯಮನೆಯ್ದೆ ತೂಳ್ದುವವನಾವನೊ ಭಾವಿಪೊಡೀತನಿಂ ಪರಂ ೨೦

ಸುರತರುವಿಂಗೆ ಸೋದರನಶೇಷಜನಸ್ತುತಲಕ್ಷ್ಮಿಗಣ್ಣನು
ದ್ಧುರತರರತ್ನರಾಶಿಯುತ ವಾರಿಧಿಪುತ್ರನನೂನಸತ್ಕಳಾ
ದರನೆನಿಪೀ ಸುಧಾಂಶುಗಿರದಾದುದು ನೋಳ್ಪಡಮೀಯವಸ್ಥೆಯ
ನ್ಯರನುಱೆ ಕೊಂದುಕೂಗಿ ಪಟಚೂರ್ಣಮನಾಗಿಸನೇ ವಿಧಾತ್ರಕಂ    ೨೧

ವ : ಇಂತು ವಿಚಿತ್ರಸಾಮರ್ಥ್ಯದೊಳ್ ಕೂಡಿದ ಸಮುತ್ತಮ ಸಂಪತ್ತಿಯಿಂ ರೂಢಿವಡೆದ ಚಂದ್ರಮನೀಯವಸ್ಥೆಯನೆಯ್ದಿದನೆಂದೊಡೆ ಮತ್ತಿನನ್ಯರತಿ ತುಚ್ಛ ಸಾಮರ್ಥ್ಯ ಸಮನ್ವಿತರಲ್ಪತರಸಂಪದುಪಗತರಪ್ಪ ಮನುಷ್ಯರಿಂತಪ್ಪವಸ್ಥೆಯನೆಯ್ದಿದರೆಂದು ವೈರಾಗ್ಯ ಸೌಭಾಗ್ಯಭಾಗ್ಯೋದಯಸಮಾವೃತಹೃದಯಂ ಧರಾಧಿನಾಯಕಂ ಸಿರಿಯ ಪಿರಿದ ಪ್ಪೊಂದಸ್ಥಿರತೆಯಂ ಸಂಸಾರದೆ ನಿಸ್ಸಾರತೆಯುಮನಿಂತೆಂದು ಚಿಂತಿಸಿದಂ

ತಿಂಗಳ ಸಿರಿ ಪಕ್ಷದೊಳಂ
ಪಿಂಗಿದುದೆಂದೊಡೆ ಮನುಷ್ಯನಾವನೊ ಸಿರಿಯಿರ
ವಿಂಗಂ ಮುಯ್ವಾಂತಿರ್ಪಂ
ಸಂಗಡಿಸಿದ ಗಾಳಿಯಂತೆ ಪಾಱುವುದಕ್ಕಂ          ೨೨

ಬೆಟ್ಟದ ಮೇಗಣಿಂ ಕೆಳಗೆ ಬೀಳ್ವ ಸುನಿರ್ಝರವಾರಿವೇಗದೋ
ಲೊಟ್ಟಜೆಯಿಂದೆ ಬಪ್ಪ ಬರವೇ ನೆಱೆ ಪೋಪುದು ಪೋಪುದೇ ಕರಂ
ನೆಟ್ಟನೆ ಬಪ್ಪುದೆಂದೊಡದಱಸ್ಥಿರಭಾವಮನಾವನೋ ನರಂ
ನಿಟ್ಟಿಸಲಾರ್ಪನಂತೆ ಸಿರಿಯಾಗತಿಯುಂ ಗತಿಯುಂ ಸ್ಥಿರತ್ವಮುಂ   ೨೩

ಬರ್ಪೆಡೆಯಲ್ಲಿ ತೀವ್ರತರದುಃಖಮನೆಯ್ದಿಸುತಿರ್ಪುದಂತೆ ಮ
ತ್ತಿಪ್ಪೆಡೆಯಲ್ಲಿ ಕಾಣನವರೆಂದುದನಾಲಿಸನೆಂತು ಮೂರ್ಛೆಯಂ
ತಪ್ಪದು ಪೋಪಪೊತ್ತಿನೊಳಮಾತ್ಮನನೋವದೆ ಕೊಂಡುಪೋದುದಿಂ
ತಪ್ಪುದುಕಾರಣಂ ವಿಷಸಹೋದರಿಯೆಂದಱಿದೆಂ ಕುಲಕ್ಷ್ಮಿಯಂ      ೨೪

ಎಂದಿರ್ದುಂ ಸಿರಿ ಕೊಟ್ಟುಪೋಪುದು ಚಿರಂ ಪುಣ್ಯಾತ್ಮನೆಲ್ಲಿರ್ದೊಡಂ
ಕುಂದಿಂತಿರ್ದೊಡೆಯುಂ ದುರಾತ್ಮನೊಳದೆಂತತ್ಯುಚ್ಚವೃಕ್ಷಾಗ್ರದೊಳ್
ಸಂದಂ ಕೇಳಿಳಿವಂತೆ ಮತ್ತಮದುಂ ತಾಂ ಪೋದಂದು ಚಿತ್ತವೃಥಾ
ವೃಂದಂ ಪೊರ್ದುಗುಮೆಂದು ಮುನ್ನಮೆ ಸುಪಾತ್ರಕ್ಕಿತ್ತವಂ ಸತ್ಸುಖಂ         ೨೫

ದಾನಂಗೆಯ್ಯದೆ ತಾನುಮುಣ್ಣದೆ ಮಹಾಯತ್ನಂಗಳಿಂ ವಸ್ತುವಂ
ದೀನಂ ರಕ್ಷಿಸುತಿರ್ದೊಡಾತನ ಧನಂ ಮತ್ತನ್ಯರಿಂಗಾಗಿಯ
ನ್ಯೂನೋದ್ಭಾಗಮನೀವುತಿರ್ಪುದವರ್ಗಂ ತಾಂ ತಮ್ಮನೋರಾಗದಿಂ
ಕನ್ಯಾರತ್ನಮನೆಂತು ರಕ್ಷಿಸಿದೊಡಂ ಮತ್ತನ್ಯರಿಂಗಪ್ಪವೊಲ್         ೨೬

ಧನಮುಂಟಾದೊಡೆ ಭೋಗಂ
ಘನತರಸತ್ಪಾತ್ರದಾನಮುಳ್ಳೊಡೆ ಸಫಲಂ
ಜನದ ಮನದಾಸೆಯಂ ತಾ
ನಿನಿಸುಂ ಪೂರೈಸದಾತನರ್ಥಂ ವ್ಯರ್ಥಂ           ೨೭

ದಾನಿ ಕಡುಲೋಭಿ ಧನಮಂ
ದಾನದೆ ತಾಂ ಕೂಡಿಕೊಂಡು ಪೋಪುದಱೆಂದಂ
ದೀನಂ ತ್ಯಾಗಿಯದೆಂತೆನೆ
ತಾನಿಲ್ಲಿಯೆ ಬಿಟ್ಟುಪೋಪನಪ್ಪುದಱಿಂದಂ     ೨೮

ಸ್ಥಿರಮಲ್ಲದ ಸಿರಿ ಸಾರ್ದೊಡೆ
ಪಿರಿದುಂ ದಾನವನೆ ಮಾಡುವಂ ಕಡುಜಾಣಂ
ನೆರಪಿ ಬೈತಿಟ್ಟು ಮಲ್ಲನೆ
ಪರಿಭೋಗಿಪೆನೆಂದು ಬಗೆವವಂ ಕಡುಮೂರ್ಖಂ ೨೯

ವ : ಇಂತು ಸಿರಿಯ ಕೇಡಂ ಪರಿಭಾವಿಸಿ ಮತ್ತಂ ಸಂಸಾರದ ನಿಸ್ಸಾರಸ್ವರೂ ಪಮಂ ಮನದೊಳಿಂತೆಂದು ಚಿಂತಿಸಿದಂ

ಹಡಿಕೆಯ ತಾಣಮೆಯ್ದೆ ಕೊಳೆ ನೆತ್ತರ ಕೀವಿನ ಭಾಜನಂ ಸಮಂ
ತಡಸಿದ ಮಾಂಸಪಿಂಡಮೆಲುವಂ ನರದಿಂದಮೆ ಕಟ್ಟಿ ಚರ್ಮದಿಂ
ಬಿಡದೆ ಮುಸುಂಕಿ ಮಾಡಿದುದು ಮತ್ತಮಜಂಗಮಮುದ್ಘಜಂಗಮಂ
ನಡಯಿಪ ಜಂತ್ರಮಾದ ತನುವೆನ್ನದಿದೆಂದು ವಿಮೋಹಿಪಂ ಜಡಂ   ೩೦

ಮುಪ್ಪಿರದೆ ತೋಱಿ ಮೆಯ್ಯಂ
ಸೊಪ್ಪಿಸಿದಂತಾಗೆ ಮಾಡೆ ಶಕ್ತಿಯ ಭರಮುಂ
ನೇರ್ಪಟ್ಟು ಚೆಲ್ವುಮಾದಂ
ತಪ್ಪಿದುದಪಹಾಸ್ಯಮಪ್ಪ ರೂಪಾಯ್ತು ಕರಂ  ೩೧

ತನುವಿಂಗೆ ಚಾರುಭೂಷಣ
ಮೆನಿಸುವ ಯವ್ವನಸುರತ್ನಮೆಲ್ಲಿಯೊ ಬಿಳ್ದ
ತ್ತನುಪಮಮೆಂದೀಕ್ಷಿಸುವಂ
ತೆನೆ ವೃದ್ಧಂ ಕೆಳಗನೀಕ್ಷಿಸುತ್ತುಂ ನಡೆವಂ          ೩೨

ಜರೆಯೆಂಬೀಕಾಂತೆ ತನ್ನಿಂದುಳಿದಬಲೆಯರೊಳ್ ಕೂಡಿ ಬಾಳುತ್ತುಮಿರ್ದಂ
ನರನೆಂಬೀಕೋಪದಿಂ ಬಂದಡಸಿ ಪಿಡಿದು ಮುಂಗೂದಲಂ ಪೊಯ್ದು ಮತ್ತಂ
ವರಪಾದದ್ವಂದ್ವದಿಂ ಪಲ್ಮುಱಿಯೊದೊಡೆ ಬಾಯಲ್ಲಿ ಪುಟ್ಟಿರ್ದ ದಂತೋ
ತ್ಕರಮೆಲ್ಲಂ ಬಿಳ್ದುದೆಂಬಂತಿರೆ ಕಳೆದವು ವೃದ್ಧಂಗೆ ದಂತಂಗಳೆಲ್ಲ            ೩೩

ತೆರೆಗಳ್ ಬಂದು ಶರೀರಮಂ ಬಿಡದೆ ಸುತ್ತಂ ಮುತ್ತಿಕೊಂಡಿರ್ದೊಡು
ದ್ಧುರಸಂಕ್ಲೇಶದಿನೆಯ್ದೆ ಜೋಲ್ದು ಶಿಥಿಲತ್ವಾಧಾರಮಾಗಲ್ ಭಯಾ
ತುರದಿಂ ಕೆಟ್ಟನನಂಗನೆಂಬ ತೆಱನಂ ವೃದ್ಧಂಗೆ ಪೇಳ್ದೀ ಜರಾ
ಪರಿಹಾಸಪ್ರಭೆಯೆಂಬಿನಂ ಪಳಿತಮಾಳ್ದತ್ತೊಪ್ಪಮಂ ಕೆನ್ನೆಯೊಳ್  ೩೪

ಪಿಂದಾಂ ಬಂದಪೆನೆಂಬಿದಂ ನರರ್ಗೆ ನೀಂ ಪೇಳೆಂದು ಮೂರ್ಖಾಂತಕಂ
ನಿಂದ್ಯಾಂಗಂ ಜರೆಯೆಂಬ ದೂದವಿಯುಮಂ ಮುಂದಟ್ಟಿ ಶೀಘ್ರತ್ವದಿಂ
ಬಂದೊಂದಿರ್ದವಳಂ ನಿರೀಕ್ಷಿಸಿಯುಮಾಕಾಲಂ ತಗುಳ್ದೆಯ್ದೆ ಸಾ
ರ್ತಂದಿಂತೊಂದದ ಮುನ್ನಮೇ ತಪದಿನಾಂ ಸಿದ್ಧತ್ವಮಂ ಸಾಧಿಪೆಂ ೩೫

ನೆರಮಂ ಪಾರದೆ ಕೊಲ್ವ ಮೃತ್ಯುಗೆ ಗಜಂ ವ್ಯಾಘ್ರಾಳಿಯುಂ ಕಂಟಕೋ
ತ್ಕರಮುಂ ಶಸ್ತ್ರಸಮೂಹಮುಂ ವಿಷಮುಮುತ್ಯುಗ್ರಾಹಿಸಂದೋಹಮುಂ
ನೆರಮಾಗಲ್ ಮಿಗೆ ಕೊಲ್ಲದಿರ್ಪನೆ ಖಳಂ ಸಂಸಾರಿಜೀವಂಗಳಂ
ಭರದಿಂದಂ ಸುಡದಿಪ್ಪುದೇ ಘೃತಸಮಿತ್ಸಂಘಾತದಿಂ ಪಾವಕಂ       ೩೬

ಎಡರಡಸಿದಲ್ಲಿ ಶರಣಂ
ಕಡೆಗಣಿಸುವೊಡಾರುಮಿಲ್ಲ ಸಂಸಾರಿಗೆ ತಾಂ
ಕಡೆಯಿಲ್ಲದಬ್ಧಿಮಧ್ಯದ
ಹಡಗಂ ಬಿಟ್ಟಿರ್ದ ಪಕ್ಷಿಗೆಂತಂತೆವೊಲಂ            ೩೭

ವ : ಇಂತು ಶರೀರದಸ್ಥಿರತೆಯನವಧರಿಸಿ ಮತ್ತಂ ಸಂಸಾರಿಕಸೌಖ್ಯದಂದ ಮನಿಂತೆಂದು ಬಗೆದಂ

ವಿಷಮಮೆನಿಸಿರ್ದ ದುಃಖಾ
ಮಿಷಮಂ ಮಾಡುವ ಚಿರಂ ದಲಲ್ಲದ ಕಡುಕ
ಲ್ಮಷಕಾರಣಮಾಗಿರ್ದೀ
ವಿಷಯಸುಖಕ್ಕೆಳಸಿಯಾತ್ಮಹಿತಮಂ ಮಱಿವರ್           ೩೮

ಘನದುಃಖಂಗಳನೆಯ್ದೆ ಮಾಳ್ಪ ವನಿತಾಸೌಖ್ಯಕ್ಕೆ ಬಾಯ್ವಿಟ್ಟು ದು
ರ್ಮನುಜಂ ಸಿಕ್ಕಿ ವಿಶೇಷದಿಂದೆ ಬಳಲುತ್ತಿರ್ಪಂ ದಲಾತ್ಮಜ್ಞನೆಂ
ದೆನಿಪಂ ಬಾಯ್ವಿಡನಂಬುವೆಂಬ ಬಗೆಯಿಂ ಗಾಂಪಂ ಮರೀಚೀಲಜಲ
ಕ್ಕೆನಸುಂ ಬಾಯ್ವಿಡುವಂ ಪರೀಕ್ಷಕನದಕ್ಕೆಂತಾದೊಡಂ ಬಾಯ್ವಿಡಂ            ೩೯

ಆಗಲ್ಬೇಡಿರ್ದ ಲಸ
ದ್ಭೋಗಂಗಳೊಳುಂಟೆ ನಿಶ್ಚಯಂ ಪೋದವು ತಾ
ವೇಗೆಯ್ದುಂ ಪೋದುವೆ ಮ
ತ್ತೀಗಳಿನ ಸುಖಂಗಳಿಂಗೆ ಬಾಯಂ ಬಿಡುವರ್     ೪೦

ಖಳತರಸಪ್ತವ್ಯಸನಂ
ಗಳ ವಶಗತರಾಗಿ ಕಷ್ಟಮತಿಗಳ್ ದುಃಖಂ
ಗಳನನುಭವಿಸುತ್ತಿರ್ಪರ್
ತಳವಱರ ವಶಕ್ಕೆ ಸಂದ ಕಳ್ಳರ ತೆಱದಿಂ           ೪೧

ಸಿರಿ ಬಡತನಕ್ಕೆ ಪುಟ್ಟುಂ
ಮರಣಕ್ಕೆ ಸುಖಂ ಸಮಂತು ದುಃಖಕ್ಕೆ ಮನೋ
ಹರ ಯವ್ವನಮದು ಮುಪ್ಪಿಂ
ಗುರುಕಾರಣಮೆಂದು ಬಲ್ಲೊಡಂ ಮೋಹಿಸುವರ್         ೪೨

ಪೆಂಡತಿ ದುಃಖಪಿಂಡಮುಱೆಸೂನು ಕೃಶಾನು ಧನಂ ಸುಬಂಧನಂ
ಮಂಡಳದಲ್ಲಿ ಬಂಧುಪರಿಮೋಹನಸಿಂಧು ಪರಿಗ್ರಹಂ ಗ್ರಹಂ
ಖಂಡಿತಬೋಧನಾದ ಮನುಜಂ ನಿಜದಿಂದೆ ಪರಂಗಳಪ್ಪುವಂ
ಕಂಡುಮವಕ್ಕೆ ಮೋಹಿಸುವನೆನ್ನವಿವೆಂಬ ದುರಾಭಿಶಂಕೆಯಿಂ         ೪೩

ಪಿಂದಣ ಜನ್ಮದಲ್ಲಿ ಕೃತಪುಣ್ಯಮನೀಗಳುಣುತ್ತುಮಿರ್ದೊಡಂ
ಮುಂದಣ ಜನ್ಮದಲ್ಲಿಯುಮದಾಗಲೆವೇಳ್ಪುದುಮೆಂದು ಮತ್ತೆಯುಂ
ಕುಂದದ ಪುಣ್ಯಮಂ ಬಿಡದೆ ಮಾಡುವನೀಗಳೆಯೆಂತುಮಾಡದಿ
ರ್ದಂದುಱೆ ಬಿತ್ತನಟ್ಟು ಪದೆದುಣ್ಬ ನರಂಗೆಣೆಯಾಗದಿರ್ಪನೇ      ೪೪

ವ : ಅಂತುಮಲ್ಲದೆಯುಂ

ಮೊದಲಲ್ಲಿ ಯೌವರಾಜ್ಯಂ
ಪದಪಿಂದಂ ನಡುವೆ ಸಕಳಸಾಮ್ರಾಜ್ಯಂ ತಾಂ
ತುದಿಯಲ್ಲಿ ತಪೋರಾಜ್ಯಂ
ಮದನ್ವಯಾಗತ ನೃಪರ್ಗೆ ಕರಮಿದು ಸಹಜಂ   ೪೫

ಆನಂತುಮಾಡದಿರ್ದೊಡೆ
ಭೂನುತಮಪ್ಪೆನ್ನ ವಂಶವೃದ್ಧಕ್ರಮಮಂ
ಹೀನಂ ಮಾಳ್ಪುವನಪ್ಪೆಂ
ಮಾನಿತಪುತ್ರಂ ಕುಲಕ್ಕೆ ದೀಪಕನಕ್ಕುಂ ೪೬

ವ : ಇಂತು ತೂರ್ಣಂ ಪರಿಜೀರ್ಣಕರ್ಮಬಂಧನನಪ್ಪಾ ವಸುಂಧರಾಧಿ ನಾಯಕಂ ಸಿರಿಯ ತರಳತ್ವಮಂ ಸಂಸಾರಸ್ವರೂಪದ ನಿಸ್ಸಾರತೆಯಮಂ ಮನದೊಳ್ ಭಿವರ್ಣಿಸಿ ಸಾಂಸಾರಿಕಸುಖಕ್ಕೆ ಪಿರಿದುಂ ಕೊಕ್ಕರಿಸಿ ನಿಯಮದಿಂ ದುಶ್ಚರತಪಶ್ಚರಣಪರಿಗ್ರ ಹಣಮಂ ಮಾಳ್ಪೆನೆಂದು ನಿಶ್ಚಯಿಸಿ ಬಳಿಯಂ ವಿಪಶ್ಚಿಚ್ಚೂಡಾಮಣಿಭೂಮಿನೀಸಭೆಯಂ ವಿಸರ್ಜಿಸಿ ಸಿಂಹಾಸನದಿಂದಮೆಳ್ದುಪೋಗಿ ಹಂಸತೂಳಪರಿಕಳ್ಪಿತಮಾದ ತಳ್ಪತಳ ದೊಳೊಯ್ಯನೆಮೆಯ್ಯನೀಡಾಡಲೊಡಂ ವೈರಾಗ್ಯಚಿಂತಾಯುವತಿಸಮಾಲಿಂಗಿತನಪ್ಪಾ ಭೂಪತಿಯಂ ನಿದ್ರಾಪುರಂಧ್ರಿ ಪುರುಡಿಂದೆಂಬಂತೆ ಪೊರ್ದದಿದೆ ಮತ್ತಮೆತ್ತಾನುಮಿರುಳುಂ ಕಳೆದು ಸುಪ್ರಭಾತಸಮಯದೊಳ್

ಮಂಗಳಗಾಯಕಗೀತರ
ವಂಗಳ ಪಾಠಕಜನಂಗಳೋದುವ ಸತ್ಪ
ದ್ಯಂಗಳ ದೇವಾಲಯವಾ
ದ್ಯಂಗಳ ಸುಶ್ರವಣದಿಂದಮೆಳ್ದಂ ನರಪಂ         ೪೭

ವ : ತದನಂತರಂ ದಂತಧಾವನ ಸ್ನಾನಮಂ ಮಾಡಿ ಧೌತವಸ್ತ್ರದಿಂದ ಳಂಕೃತನಾಗಿ ಕತಿಪಯಭವ್ಯಜನಂಬೆರಸು ಚೈತ್ಯಾಲಯಕ್ಕೆ ಬಂದು ಸಂಗೀತವಾದ್ಯ ನೃತ್ಯಸಹಿತಂ ಬಸದಿಯಂ ಬಲಗೊಂಡು ಪಾದಪ್ರಕ್ಷಾಲನಾನಂತರಂ ನಿಷಿದ್ಧಿಯೆಂದು ಚ್ಚಾರಣಂಗೆಯ್ಯುತ್ತು ಮೊಳಗಂ ಪೊಕ್ಕು ಮುಕುಳಿತಮಾದ ಕರಕಮಳಮಂ ನೊಸಲ್ಗೆತಂದು ಜಯ ಜಯ ಎಂದು ಸಾಷ್ಟಾಂಗಪ್ರಣತನಾಗಿ ಬಳಿಯಮಷ್ಟವಿಧಾರ್ಚನೆಯಿಂದಂ ದುಶ್ಚ್ಯವನಾರ್ಚನೀಯನ ಸಚ್ಚರಣಮಂ ಪೆರ್ಚಿದ ಭಕ್ತಿಯಿಂದರ್ಚಿಸಿ ತತ್ಪರಮೇಶ್ವರಂಗ ಭಿಮುಖನಾಗಿನಿಂದು

ಜಯ ಜಯ ಜಯ ಶುಭಭಾವಾ
ಜಯ ಜಯ ಜಯ ವಿಧೃತವಿಲಸನುಭಾವಾ
ಜಯ ಜಯ ಜಯ ನತದೇವಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೪೮

ಜಯ ಜಯ ಜಯ ಸರ್ವಜ್ಞ
ಜಯ ಜಯ ಜಯ ಕೋಟಿಚಂದ್ರಕಾಂತಿಮನೋಜ್ಞಾ
ಜಯ ಜಯ ಜಯ ಬಹುಲಜ್ಞ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೪೯

ಜಯ ಜಯ ಜಯ ಜಿನನಾಥಾ
ಜಯ ಜಯ ಜಯ ಪರಮನಿತ್ಯಮಹಿಮಸನಾಥಾ
ಜಯ ಜಯ ಜಯ ಮುನಿನಾಥಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೫೦