ಜಯ ಜಯ ಜಯ ಹತಬಾಧಾ
ಜಯ ಜಯ ಜಯ ಸಕಳವಿಮಳಕೇವಳಬೋಧಾ
ಜಯ ಜಯ ಜಯ ಸಮಗಾಥಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೫೧

ಜಯ ಜಯ ಜಯ ಗತಕಾಮಾ
ಜಯ ಜಯ ಜಯ ವಿಶ್ವವಿನುಕೀರ್ತಿಸ್ತೋಮಾ
ಜಯ ಜಯ ಜಯ ಸತ್ಪ್ರೇಮಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೫೨

ಜಯ ಜಯ ಜಯ ಗುಣಭೂಷಾ
ಜಯ ಜಯ ಜಯ ರಹಿತವಿಷಮತರದೋಷಾಯಾ
ಜಯ ಜಯ ಜಯ ಹಿತಭಾಷಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೫೩

ಜಯ ಜಯ ಜಯ ದಲನಿಂದ್ಯಾ
ಜಯ ಜಯ ಜಯ ನಿಖಿಲಭುವನಜನತಾವಂದ್ಯಾ
ಜಯ ಜಯ ಜಯ ಸುಖನಂದ್ಯಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೫೪

ಜಯ ಜಯ ಜಯ ಕೃತಕೃತ್ಯಾ
ಜಯ ಜಯ ಜಯ ಶೇಷನಿಂ ವಿಶೇಷಸ್ತುತ್ಯಾ
ಜಯ ಜಯ ಜಯ ಯುತಸತ್ಯಾ
ಜಯ ಜಯ ಜಯ ರಕ್ಷಿಸೆನ್ನನರ್ಹದ್ದೇವಾ       ೫೫

ವ : ಎಂದನೇಕಸ್ತುತಿಶತಸಹಸ್ರಂಗಳಿಂದಾ ಪರಮೇಶ್ವರನಂ ಸ್ತುತಿಗೆಯ್ದು ಪೊಡವಂಟು ಶ್ರುತವಂದನಾನಂತರುಂ ಗುರುಗಳಿಂಗೆ ಪಾದಾರ್ಚನಾಪೂರ್ವಕಂ ನಮಸ್ಕರಿಸಿ ನಿತ್ಯಬ್ರತಧಾರಿಯಾಗಿ ಜಿನಮಾರ್ಗಪ್ರಭಾವಕರರಪ್ಪ ಜೈನೋಪಾಧ್ಯಾಯರ್ಗೆ ಸುವರ್ಣವಸ್ತ್ರ ಕಪಿಲಾಕಲಾಪಂಗಳಿಂ ನಿತ್ಯದಾನಮಂ ನಿರ್ವರ್ತಿಸಿ ಕಿಱಿದುಂ ಪೊಳ್ತು ಧರ್ಮಕಥಾರಸಾಯ ನದಿಂ ಶ್ರವಣೇಂದ್ರಿಯಮಂ ತಣಿಪಿಸಿ ಬಳಿಯಂ ಬೀ‌ಳ್ಕೊಂಡರಮನೆಗೆ ಬಂದು ಸಮುಪಚರಿತ ಮಜ್ಜನಭೋಜನವ್ಯಾಪಾರಪರನಾಗಿ ಚಾರುಕರ್ಪೂರಪೂರಪಾರಿಸಂಸ್ಕಾರದಿ ಬಹಳಪರಿಮಳಮಂ ಬಳಯಿಸುತ್ತಿರ್ಪ ತಾಂಬೂಲಚರ್ವಣದಿಂದಂತರಂಗಸಂಗತ ರಾಗರಸಮಂ ಬೇಗದಿಂ ಪೊಱಗೆ ಪೊಱಮಡಿಪಂತಧರಮಂ ರಾಗರಂಜಿತಮಂ ಮಾಡುತ್ತುಂ ವಿಚಿತ್ರವೇತ್ರಧರಪುರಸ್ಸರಂ ನಿಜಸಭಾನಿವಾಸಕ್ಕೆ ಬಂದು ವೃಂದಮಂತ್ರಿ ಮಂಡಳಿಕ ದಂಡನಾಥ ಮಹಾಪ್ರಧಾನ ಪುರೋಹಿತ ಸಾಮಂತ ಸೇನಾನಾಯಕರ್ ಮುಖ್ಯಮಾದಾಪ್ತವರ್ಗಂ ಬೆರಸು ಬಂದು ನಿಷ್ಟಾಪ್ತಾಷ್ಟಾಪದಪರಿಪುಷ್ಪ ಸಿಂಹವಿಷ್ಟರ ನಿವಷ್ಟನಾಗಿ

ಅತಿರಥಕುಮಾರನಂ ಭೂ
ಪತಿ ಬರವೇಳ್ದಟ್ಟಿದಂ ಪ್ರತೀಹಾರಕರಂ
ನುತವಸ್ತ್ರಾಲಂಕರಣಾ
ನ್ವಿತನುಚ್ಚಮನೋನುರಾಗದಿಂ ಪೊಱಮಟ್ಟಂ೫೬

ಮಕುಟಾಗ್ರ ಪ್ರೋತಭಾಸ್ವನ್ಮಣಿಕಿರಣದಿನಾಕಾಶಮಂ ಚಿತ್ರಿಸುತ್ತುಂ
ಸಕಲಾಲಂಕಾರಕಾಂತಿಪ್ರಸರದೆ ವಿಲಸದ್ವಸ್ತ್ರಮಂ ಚಿತ್ರಿಸುತ್ತುಂ
ಸುಕನತ್ಪಾದಾಬ್ಜವಿನ್ಯಾಸದೆ ಮಣಿಧರೆಯಂ ಚಿತ್ರಿಸುತ್ತುಂ ವಿಶಿಷ್ಟಾ
ಧಿಕಪುಣ್ಯಂ ಬಂದು ಪೊಕ್ಕಂ ನೃಪತಿಸಭೆಯನೇಕಾಂಗವೀರಂ ಕುಮಾರಂ         ೫೭

ವ : ಅಂತುಬಂದು ವಿನಯವಿನಮಿತೋತ್ತಮಾಂಗನಾಗಿ ನರಪಾಲ ಪರಿಸಂಜ್ಞಿತಮಪ್ಪ ಬಲದ ಕೆಲದೊಳ್ ಕುಳ್ಳಿರ್ಪುದುಂ ಮತ್ತಂ

ಆ ನರಪಂ ತನ್ನ ಕುಮಾ
ರಾನನಮಂ ನೋಡಿ ನುಡಿದನತಿಮುದದಿಂದಂ
ಮಾನಿತಸಭೆ ಭಾಪ್ಪೆನೆ ಸತ್
ಜ್ಞಾನಾಂಬುಧಿ ಚತುರವಚನಚಯಚಾತುರ್ಯಂ  ೫೮

ವ : ಅದೆಂತೆನೆ

ಬೇಸಱದಿನ್ನೆಗಂ ಭವಸುಖಾನುಭವಾಂಶೆಯೊಳೊಂದಿ ವೈರಿಸಂ
ತ್ರಾಸನಮಂ ವಿನಿರ್ಮಿಸಿ ತದೀಯ ಸುದುರ್ಗಮದುರ್ಗವರ್ಗಮಂ
ಲೇಸೆನೆ ಕೊಂಡೆನಿನ್ನು ಕೆಡದಿರ್ದ ಸುಖಕ್ಕೆಳಸುತ್ತುಮಿರ್ದುದೆ
ನ್ನಾಶಯಮಂತು ಕಾರಣಮೆ ಸಾಧಿಪೆನಾನಪವರ್ಗದುರ್ಗಮಂ        ೫೯

ಅದು ಜಿನದೀಕಷಾಬಲಸಂ
ಪದದಿಂದಲ್ಲದೆ ಸುಸಾಧ್ಯಮಾಗದು ದುರ್ಗಂ
ವಿದಿತ ಚತುರ್ವಿಧಬಲದೊಂ
ದೊದವಿಂದಂ ಸಾಧ್ಯಮಪ್ಪ ತೆಱದಂತೆವೊಲಂ   ೬೦

ವ : ಅದುಕಾರಣದಿಂ ಜಿನದೀಕ್ಷೆಯಂ ಕೈಕೊಳುವೆನೆಂದು ತಱಿಸಂದು ನುಡಿವುದಂ ಕೇಳ್ದು ಸಭಾಜಮೆಲ್ಲಂ ಸಂಕ್ಲೇಶಭಾಜನಮಾಗಿ ಕಾರ್ಗಾಲದ ಕಾದಂಬಿನೀ ನಿನದಮಂ ಕೇಳ್ದ ಕಳಹಂಸೆಯಂತೆ ಕಳವಳಿದು ಮಲ್ಮಲ ಮಱುಗುತ್ತಮಿರಲಲ್ಲಿಯೊರ್ವಂ ಶೂನ್ಯವಾದ ಪ್ರತಿಪಾದನಪ್ರವೀಣನುಂ ಪರಿವಿದಿತವಿಚಿತ್ರತತ್ತ್ವನುಂ ಚಾರ್ವಾಕಮತಾನು ಸಾರಿಮತಿಯುಮಪ್ಪ ಸುಮಂತ್ರನೆಂಬ ಮಂತ್ರಿ ಬಿನ್ನಪಮೆಂದಿಂತೆಂದಂ

ಮಂಡೆಯ ಕೂದಲಂ ಪಱಿದುಬಿಟ್ಟು ದಲುಟ್ಟುದನೆಯ್ದೆ ದೇಹಮಂ
ದಂಡಿಸಿ ಸೌಖ್ಯಮಂ ಪಡೆವೆನೆಂಬ ದಿಗಂಬರವಾಕ್ಯಮಂ ಮನಂ
ಗೊಂಡುಱೆ ಕೇಳ್ದು ನೀಂ ಮರುಳನಾಗದಿರಿಂದ್ರಿಯಪೋಷಿಯಾಗು ಕೇಳ್
ಕಂಡವರಾರೊ ಮುಂದಣ ಭವಂಗಳನಿಲ್ಲಿ ಧರಾಧಿನಾಯಕಾ          ೬೧

ಕಾಣಲ್ಬಾರದ ಮೋಕ್ಷಸೌಖ್ಯ ಪರಿಸೇವಾಲಾಭದಾಕಾಂಕ್ಷೆಯಿಂ
ಕಾಣುತ್ತಿರ್ದ ಸಮಸ್ತರಾಜುಸುಖಮಂ ಬಿಟ್ಟಪ್ಪೆನಿನ್ನೆಂಬಿದಂ
ಕ್ಷೋಣೀನಾಯಕ ಮಾಣ್ದು ನೀಂ ಸುಖದೊಳೋಲಾಡುತ್ತಿರಾವಂ ಪಯ
ಶ್ರೇಣೀಕಾರಣಮಾಕಳಸ್ತನಮುಮಂ ಮಾಣ್ದೀಸುವಂ ಶೃಂಗಮಂ    ೬೨

ವ : ಅಂತುಮಲ್ಲದೆಯುಂ

ಎನೆ ನೃಪ ಜೀವತತ್ತ್ವದ ಪೊಲಂಬದು ಭಾವಪೊಡಿಲ್ಲ ಪುಣ್ಯಮುಂ
ಕಲುಷಮುಮೆಂಬುದಿಲ್ಲದಱಿನೆಯ್ದುವ ತತ್ಪರಲೋಕವಾರ್ತೆಯಂ
ನಲಿದು ಠಿ ಕೇಳ್ವೊಡಿಲ್ಲದಱ ಕಾಂಕ್ಷಣಮೆಂಬುದು ಗಾವಿಲಂ ನಭಃ
ಫಲದುಪಭೋಗಮಂ ಬಯಸಿ ಬಾಯ್ವಿಡುವಂದಮನುಂಟುಮಾಡುಗುಂ     ೬೩

ಪುಟ್ಟಿಂದಂ ಮುನ್ನೆ ಸಾವಿಂ ಬಳಿಯಮವಯಚ್ಛೇದಮಂ ಮಾಡೆ ದುಃಖಂ
ಬಟ್ಟಿರ್ಪಾಖಂಡಯುಗ್ಮಂಗಳ ನಡುವೆ ಕರಂ ಕಾಯದಿಂ ಭಿನ್ನನಾಗ
ಲ್ಪಟ್ಟುಂ ತತ್ಕಾಯದೊಳ್ ತಾಂ ಪುಗುವ ಪೊಱಮಡುತ್ತಿರ್ಪ ಚೈತನ್ಯನಂ ಮೆ
ಳ್ಪಟ್ಟಿಂತೆಲ್ಲಂದದಿಂದಂ ಬಿಡದಱಸಿದೊಡಂ ಕಾಯಮಂ ಬಿಟ್ಟು ಕಾಣೆಂ      ೬೪

ವ : ಮತ್ತಂ ತುಂಬೀಫಲಂ ದಂಡಂ ತಂತಿ ಕಳೆ ಕರಾಂಗುಳಿತಾಡನಮೆಂಬಯ್ದಱ ಕೂಟದಿಂ ಧ್ವನಿವಿಶೇಷಮೆಂತು ಪುಟ್ಟುಗುಂ ಗುಡಾನ್ನಪಿಷ್ಟೋದಕ ಧಾತಕೀಕುಸು ಮಂಗಳೆಂಬಿವಱ ಸಮ್ಮೇಳನದಿಂದುನ್ಮಾದಿನೀಶಕ್ತಿಯುಮೆಂತುಪುಟ್ಟುಗುಮಂತಂತೆ ಪೃಥಿ ವ್ಯಪ್ತೇಜೋವಾಯ್ವಾ ಕಾಶಂಗಳೆಂಬ ಪಂಚಭೂತಂಗಳ ಕೂಟದಿಂ ಚೈತನ್ಯರೂಪನಪ್ಪಾತ್ಮಂ ಪುಟ್ಟಿ ಚೇಷ್ಟಿಸುತಿರ್ಪನವು ಪರೆಯೆ ಕೆಟ್ಟುಪೋಪನಿಂತಲ್ಲದೆ ನಿತ್ಯರೂಪನಪ್ಪಾತ್ಮ ನೊರ್ವನುಮಿಲ್ಲಾತನಿಂ ಮಾಡಲ್ಪಡುವ ಪುಣ್ಯಪಾಪಮುಂ ತತ್ಫಲಾನುಭವನಮುಂ ಸ್ವರ್ಗಾಪವರ್ಗಾದಿ ಪರಲೋಕಮುಮಿಲ್ಲದುಕಾರಣದಿಂ ಮೋಕ್ಷಸೌಖ್ಯಸಾಧನೋಪ ಯೋಗಿ ಭೂತತಪೋವಿಧಾನೋದ್ಯೋಗಮಂ ಮಾಣ್ದು ಸುಖದಿನಿರ್ಪುದೆನಲಾತನ ಮಾತಂ ಭೂತಳಾಧಿಪತಿ ಕೇಳ್ದು ಮುಗುಳ್ನಗೆ ನಕ್ಕು

ಕಿರಣದಿನಾದಿತ್ಯಂ ದು
ರ್ಧರತಮಮಂ ಕೆಡಿಪ ಮಾಳ್ಕೆಯಿಂ ದುರ್ಮತಮಂ
ಭರದೆ ನಿರಾಕರಿಸಿದನಾ
ನರನಾಥಂ ತರ್ಕಕರ್ಕಶೋಕ್ತಿಗಳಿಂದಂ   ೬೫

ನೀಂ ಪೇಳ್ದುನ್ಮಾದಿನೀಶಕ್ತಿಗೆ ನಿನಗೊಗೆದುದ್ರಿಕ್ತಮಾಯ್ತೆಂಬಿದಂ ಸೊ
ಕ್ಕಂಪ್ಪ್ರೇರ್ದೀ ವಿಕಾರಾನ್ವಿತವಚನವಿಶೇಷಂಗಳಿಂ ವ್ಯಕ್ತಮಾಯ್ತೀ
ಪೆಂಪಿಂ ಸನ್ಮಂತ್ರನೆಂಬೀ ಪೆಸರಿದು ನಿನಗಂ ವ್ಯರ್ಥಮೆಂದಾ ನೃಪಂ ವಾ
ಗ್ಗುಂಫಂ ಸ್ಯಾದ್ವಾದಮಂ ಸ್ಥಾಪಿಸಿದನಿರದನೇಕಾಂತವಿದ್ಯಾವಿನೋದಂ       ೬೬

ವ : ಇಂತು ಪ್ತತ್ಯಕ್ಷಾದಿಪ್ರಮಾಣವಿರೋಧಂಗಳಾದ ವಚನಂಗಳಿದಾತ್ಮ ನಿಲ್ಲೆಂಬೆಯಪ್ಪೊಡೆ ಸತ್ತವರ್ ವ್ಯಂತರಂಗಳಾಗಿ ಪುಟ್ಟಿ ಪೂರ್ವಜನ್ಮಪ್ರಿಯಾಪ್ರಿಯ ಸಂಬಂಧಾನುಬಂಧದಿಂ ಮಿತ್ರಾಮಿತ್ರವರ್ಗಕ್ಕೆ ಜೀವನೋಪಾಯಮಂ ಮಾಳ್ಪುದಂ ಕಾಣ್ಬುದಱಿಂದ ತೀತಜನ್ಮದೊಳಾತ್ಮನುಂಟೆಂಬಿದು ಪ್ರತ್ಯಕ್ಷಸಿದ್ಧಂ ತನ್ನಯ ಶರೀರ ದೊಳಾತ್ಮನುಂಟೆಂಬಿದು ಜೀವಂ ಸ್ವಸಂವೇದನಜ್ಞಾನಪರಿವೇದ್ಯಂ ಬಾಧಕಪ್ರಮಾಣ ಮಿಲ್ಲಪ್ಪುದಱಿಂ ಸುಖ ದುಃಖಾದಿಕಮೆಂತಂತೆಂಬೀ ಸ್ವಾರ್ಥನುಮಾನದಿಂ ಸಮರ್ಥಿತಂ ಪರರ ಶರೀರದೊಳಾತ್ಮ ನುಂಟೆಂಬಿದು ಜೀವಂ ವಿದ್ಯಮಾನತಾಸಮೇತಂ ಬುದ್ಧಿಪೂರ್ವಕ ವ್ಯಾಹಾರಗಮನಾ ಗಮನಾದಿ ಕಾರ್ಯದರ್ಶನದಿಂದೆನ್ಮಾತ್ಮನೆಂತಂತೆಂಬೀ ಪರಾರ್ಥಾನು ಮಾನದಿಂದನು ಮೇಯರೂಪನಪ್ಪುದಱಿಂದನುಮಾನಪ್ರಸಿದ್ಧಮಸ್ತ್ಯಾತ್ಮಾನಾದಿ ಬುದ್ಧಿಯೆಂಬೀಯಾಗಮದಿಂದಾತ್ಮಸ್ತಿತ್ವಮವಗಮ್ಯಮಾಗಳಂತೆ ಪುಟ್ಟಿದ ಶಿಶುವಿಂಗೆ ಪೂರ್ವಜನ್ಮ ಸಂಸ್ಕಾರಮಂ ಬಿಟ್ಟು ಮೊಲೆಯುಣ್ಬಭ್ಯಾಸಮಂ ಕಲಿಸಿದರಾರುಮಿಲ್ಲದು ಕಾರಣದಿಂ ಪಿಂದಣ ಜನ್ಮದೊಳಾತ್ಮನುಂಟೆಂಬಿದರ್ಥಾಪತ್ತಿಯಿಂ ಪ್ರತಿಪನ್ನಮಿಂತು ಸ್ಥಿತ್ಯುತ್ಪತ್ತಿವ್ಯಯಾತ್ಮಕನಪ್ಪಾತ್ಮಂ ಭೂತಭವದ್ಭಾವಿಭವಾಂತರದೊಳ್ ವ್ಯಾಪಾರ್ಯಮಾಣ ಸ್ವರೂಪ ನುಂಟೆಂಬಿಡು ಪ್ರತ್ಯಕ್ಷಾನುಮಾನಾಗಮಾರ್ಥಾಪತ್ತಿಗಳೆಂಬ ಪ್ರಮಾಣಂಗಳಿಂದಂ ಸಂಸಿದ್ಧಮಾದಾತ್ಮದ್ರವ್ಯಮಿಲ್ಲೆಂದಪಲಾಪನಂಗೆಯ್ವುದುಪಪತ್ತಿಶೂನ್ಯಮಪ್ಪುದಱಿಂ ಬಾಲಭಾಷಿತಮಲ್ಲದೆ ಪ್ರಬುದ್ಧಭಾಷಿತಮಲ್ತು

ಮೂರ್ತಿಯುತದೃಷ್ಟಿ ಬಗೆವೊಡ
ಮೂರ್ತನೆನಿಪ್ಪಾತ್ಮನಂ ಕರಂ ಕಾಣಲ್ಕೇ
ನಾರ್ತಪುದೆ ಮಸೆದ ಖಳ್ಗಮ
ಮೂರ್ತಾಂಬರಮಂ ವಿಭೇದಿಪುದೆ ಪೊಯ್ಯಲೊಡಂ         ೬೭

ವ : ಮತ್ತಂ ಪಂಚಭೂತಂಗಳ ಸಂಯೋಗದಿಂದಾತ್ಮಂ ಪುಟ್ಟುವನೆಂದು ಪೇಳ್ದೆಯಂತಾದೊಡೆ ಪವಮಾನಪ್ರಾಬಲ್ಯಜಾಜ್ವಲ್ಯಮಾನಪಾವಕನಿಂ ಪಾನೀಯ ಸಂತಪನ ಸಮಯದೊಳ್ ಮೃತ್ತಿಕಾಮಯಭಾಜನಜಲತೇಜೋವಾಯ್ವಾಕಾಶಸಂಯೋಗ ಮುಂಟಾಗಿಯುಮಾತ್ಮನೇಕಲ್ಲಿ ಪುಟ್ಟನದುಕಾರಣದಿಂ ನೀಂ ಪೇಳ್ದ ಲಕ್ಷಣಮವ್ಯಾಪ್ತಿಯೆಂಬ ದೋಷ ದೂಷ್ಯಮಾಣಮಿಂತವಿಚಾರಿತವಚನದಿಂದಿಷ್ಟಸಾಧ್ಯಸಂಸಿದ್ಧಿಯಾಗದಂತು ಮಲ್ಲದೆಯುಂ ಚೈತನ್ಯಾತ್ಮಕನಪ್ಪಾತ್ಮಂಗೆ ವಿಜಾತೀಯಾ ಚೈತನ್ಯರೂಪಮಾದ ತುಂಬೀ ಫಲದಂಡಾದಿ ಸಂಯೋಗಸಂಜಾತವಿಶಿಷ್ಟವೀಣಾಧ್ವನಿವಿಶೇಷಮುಂ ಗುಡಾದಿಸಂಬಂಧ ಸಮುದ್ಭವದುನ್ಮಾದಿಕಾಶಕ್ತಿಯುಂ ದೃಷ್ಟಾಂತಕಕ್ಷಾಸಮುಪಲಕ್ಷಿತಮಲ್ತತ್ಯಂತ ವಿಜಾತೀ ಯಮಂ ವಿಜಾತೀಯಕ್ಕೆ ದೃಷ್ಟಾಂತೀಕರಣಂ ಯುಕ್ತಿಯುಕ್ತಮಲ್ತಿಂತಿದು ಚಾರ್ವಾಕಮತ ನಿರಾಕರಣಾನಂತರಂ

ಮತ್ತೊರ್ವಂ ಬೌದ್ಧಮತಾ
ಯತ್ತಮನಂ ಸುಮತಿಯೆಂಬ ಮಂತ್ರಿವರೇಣ್ಯಂ
ಬಿತ್ತರಿಸಿ ನುಡಿದನಂದು
ನ್ಮತ್ತನವೊಲ್ ಕ್ಷಣಿಕವಾದಮಂ ಕುನಯಜ್ಞಂ     ೬೮

ವ : ಸರ್ವಂ ಕ್ಷಣಿಕಂ ಸತ್ತ್ವಮುಂಟಪ್ಪುದಱಿಂ ದೀಪಿಕಾಶಿಖಾಕಳಾಪಮೆಂ ತಂತೆಂಬ ನುಮಾನದಿಂದಾತ್ಮಂಗಂ ಕ್ಷಣಿಕತ್ವಮುಂಟಾದ ಕಾರಣಂ ತತ್ಕೃತಪುಣ್ಯಪಾಪ ಫಲಾನುಭವನಮಿಲ್ಲೆಂಬಿದನರಸಂ ಕೇಳ್ದು ಪೂರ್ವಾಪಕ್ಷಪರಿಕ್ಷೇಪಣಾರ್ಥಮಿಂತೆಂದನಾತ್ಮಂ ಕ್ಷಣಿಕನಾಗಿ ತತ್ಫಲೋಪಭೋಕ್ತೃವಲ್ಲೆಂಬೆಯಪ್ಪೊಡೆ ಲೋಕದಲ್ಲಿ ಸಂಪತ್ತಿವಿಪತ್ತಿಗಳಲ್ಲದೆ ಪೋಗಲ್ವೇಳ್ಕುಮವಂ ಕಾಣುತ್ತುಂ ಕೇಳುತ್ತುಮುಣುತ್ತುಮಿರ್ದುಂ ಸುಖದುಃಖಾನುಭವನ ಮಿಲ್ಲೆಂಬಿದು ಪ್ರತ್ಯಕ್ಷವಿರೋಧಮೀ ವ್ಯಭಿಚಾರಿಸಾಧನಾಭಿಧಾನದಿಂದಿಷ್ಟಸಿದ್ಧಿಯಾಗದೆಂದು ಬೌದ್ಧಮತವಿಧ್ವಂಸನಮಂ ವಿರಚಿಸಿ ಮತ್ತಂ ಸರ್ವಥಾ ನಿತ್ಯತ್ವಾನಿತ್ಯತ್ವ ವ್ಯಾಪಕತ್ವಾವ್ಯಾಪಕತ್ವ ಮೂರ್ತತ್ವಾಮೂರ್ತತ್ವಾನೇಕತ್ವಾದ್ಯಯಥಾರ್ಥಾರ್ಥ ಸಮರ್ಥನಸಮರ್ಥಿತ ದುರ್ಮತವಾದಿಸಾರ್ಥ ಸಮ್ಮತವ್ಯರ್ಥೀಕರಣಸಮರ್ಥನಪ್ಪಾ ಪಾರ್ಥಿವಂ ಸ್ವಪಕ್ಷರಕ್ಷೀಕೃತ ಪ್ರತ್ಯಕ್ಷಪರೋಕ್ಷಲಕ್ಷಣಪ್ರಮಾಣಂಗಳಿಂದನೇಕಧರ್ಮಾತ್ಮಕನಪ್ಪಾತ್ಮಂಗೆ ಕಥಂಚಿದೇಕ ತ್ವಾನೇಕತ್ವ ನಿತ್ಯತ್ವಾನಿತ್ಯತ್ವಾದಿ ಪರಮಾರ್ಥಸ್ವರೂಪ ನಿರೂಪಣಸ್ಥಾಪನಂಗೆಯ್ದು

ಕಿಡುವೊಡಲಿಂದಂ ಭಿನ್ನಂ
ಕಿಡದಿರ್ಪಾತ್ಮಂ ಸ್ವದೇಹಮಾತ್ಮಪ್ರವಿ ಬೆಂ
ಬಿಡದಿರ್ಪ ಪುಣ್ಯಪಾಪ
ಕ್ಕೊಡೆಯಂ ಕರ್ತೃತ್ವಭೋಕ್ತೃತಾವಸ್ಥೆಯೊಳಂ೬೯

ನಿಜದಿಂದೂರ್ಧ್ವಗತಿಸ್ವಭಾವನಹುದಿಚ್ಛಾಶಕ್ತಿಯಿಂ ವಕ್ರಮಂ
ಭಜಿಸಿರ್ಪ ಘನವಾದ ವಾಯುವಶದಿಂದಂ ಪಾವಕಜ್ವಾಲೆಯಂ
ತಜರಂ ಕರ್ಮಕಲಂಕದಾವರಣಮಂ ಸಮ್ಯಕ್ತಪೋಧ್ಯಾನದಿಂ
ತ್ಯಜಿಪಂ ಭೇಷಜಯೋಗದಿಂದೆ ಕನಕಂ ನಿರ್ದೋಷಮಪ್ಪಂದದಿಂ     ೭೦

ಆನದುಕಾರಣಂ ತನುಮದಾವೃತ ಕರ್ಮಕಳಂಕಪಂಕಮಂ
ಜೈನತಪೋವಿಧಾನಜಲದಿಂ ತೊಳೆವೆಂ ಕೆಸಱದ ರತ್ನಮಂ
ಮಾನವನಾವನೋ ತೊಳೆಯದಿರ್ಪವನಂಬುವಧಾರೆಯಿಂದಮೆಂ
ದಾ ನರಪಾಳಕಂ ನುಡಿದನಂದುಱೆ ಮೆಚ್ಚುವಿನಂ ಸಭಾಜನಂ         ೭೧

ವ : ಆ ನೃಪಾಳೋತ್ತಮನಿಂತು ಬಾಧಾರಹಿತಮಾದುತ್ತರಮನನುತ್ತರಮಾಗಿತ್ತು ದುರ್ನೀತಿನಿರ್ಣಯನಿಪುಣರಪ್ಪ ಪ್ರತಿವಾದಿಗಳಂ ನಿರುತ್ತರರಂ ಮಾಡಿ ಬಳಿಯ ಮತಿರಥನೆಂಬ ತನ್ನ ಕುಮಾರನನೆತ್ತಾನುಮೊಡಂಬಡಿಸಿ ಸಮಸ್ತಸಾಮ್ರಾಜ್ಯಮಂ ಕೊಟ್ಟು ಪಟ್ಟಮಂ ಕಟ್ಟಿ

ಪುಲ್ಲಿಂದಂ ಕಡುನೊಚ್ಚಿತಾಗಿ ಬಗೆದಂ ಭೂಭಾರಮಂ ಮತ್ತಮಂ
ತೆಲ್ಲಾ ಬಂಧುಜನಂಗಳಂ ಸುಖಫಲಾರ್ಥಂ ಬಂದು ಕೂಡಿರ್ದ ಕಾ
ರ್ಯೋಲ್ಲಾಸಾಂಡಭವಂಗಳೆಂದು ಬಗೆದಂ ಸ್ತ್ರೀಯರ್ಕಳಿಂ ನಿಶ್ಚಯಂ
ಪೊಲ್ಲಾಗಿರ್ದುಱೆನಾಯ್ಗಳೆಂದು ಬಗೆದಂ ವೈರಾಗ್ಯಭಾಗ್ಯೋದಯಂ         ೭೨

ಕೈವಲ್ಯಕ್ಕೆಱಗುವ ಮನ
ಮೋವದೆ ಸಂಸಾರಪದವಿಗೇನೆಱಗುವುದೇ
ಪೂವಿಂಗೆಱಗುವ ಮಧುಪಂ
ಭಾವಿಸೆ ದುರ್ದಮಿತಕರ್ದಮಕ್ಕೆಱಗುವುದೇ       ೭೩

ವ : ಅನಂತರಮಸ್ತೋಕಶೋಕರಸಾಕ್ರಾಂತಮಪ್ಪನೇಕಕಾಂತಾನೀಕಮಂ ಸಮಾಕ್ರಾಂತ ಮಂದಿರಮಾದ ಬಂಧುಸಂದೋಹಮಂ ರೋದನಭರಪರಿವೃತಮಾದ ಪ್ರಧಾನ ಪ್ರಭೃತಿಸಮಸ್ತಪರಿವಾರಮಂ ಸಮಧಿಕದುಃಖಾವಲಿಖ್ಯಮಾನಮನಸ್ಸಂಸೂಚಕ ಬಾಷ್ಪಾ ಕುಳಿತನೇತ್ರನಪ್ಪ ಪುತ್ರನುಮನೊಡಂಬಡಿಸಿ ದೀಕ್ಷಾವನಕ್ಕೆ ನಡೆವಾಗಳ್ ಪುರಜನಂಗಳ್ ಬೀದಿಗಳೊಳೊಂದೊಂದೆಡೆಯೊಳ್ ನಿಂದು ನೋಡುತ್ತಂ ತಂತಮ್ಮೊಳೊ ರ್ವೊರ್ವ ರಿಂತೆಂಬರ್

ಭೂತಳನೂತಮಪ್ಪಖಿಳರಾಜ್ಯಮನಾಳ್ದವನೀಗಳುತ್ತಮ
ಖ್ಯಾತವಿಮುಕ್ತಿರಾಜ್ಯಪದಸಾಧನೆಗಾಗಿ ತಪಸ್ಸು ರಾಜ್ಯಮಂ
ಪ್ರೀತಿಯಿನಾಳ್ವೆನೆಂದಿರದೆ ಪೋದಪನೀತನೊಳಂ ತ್ರಿರಾಜ್ಯಮಂ
ನೂತನಮಾದುದೀತನ ಪುರಾತನಪುಣ್ಯಮದೇನುದಾತ್ತಮೋ         ೭೪

ವ : ಮತ್ತೊಂದೆಡೆಯೊಳ್

ಕೆಯ್ಯದನೆಯ್ದೆ ಬಿಟ್ಟು ನೆಱಪಾಱುವುದಕ್ಕೆಳಸುತ್ತುಮಿರ್ಪನಂ
ರಯ್ಯಮೆನಲ್ಕೆ ಪೋಲ್ತನಿರದೀ ನರಪಂ ವಶಮಾದ ರಾಜ್ಯಮಂ
ಸುಯ್ಯದೆ ಬಿಟ್ಟು ದೀಕ್ಷೆಗುಱೆ ಪೋಗುತಮಿರ್ದಪನೆಂದು ಪೌರರಂ
ದೊಯ್ಯನೆ ನಾಡೆ ನೋಡಿ ನುಡಿದರ್ ಕೆಲರಜ್ಞಜನಂಗಳಾತನಂ         ೭೫

ವ : ಅಂತು ಸುಟ್ಟಂ ಬೇಱೆ ಬೇಱೆ ನುಡಿಯುತ್ತುಮಿರೆ

ಎಲ್ಲರ ಚಿತ್ತದೊಳಿರ್ದುಂ
ನಿಲ್ಲದೆ ದೀಕ್ಷಾವನಕ್ಕೆ ಪೋದಂ ನೃಪನಾ
ರ್ವಲ್ಲರೊ ಧರಣೀನಾಥನ
ಸಲ್ಲಲಿತಾಚರಣಮಂ ಮಹೀಮಂಡಳದೊಳ್   ೭೬

ವ : ಬಳಿಯಮೆಲ್ಲರಂ ನಿಲಿಸಿದೊಡಂ ನಿಲ್ಲದೊಡನೊಡನೆ ಬರುತ್ತುಮಿರ ಲಿತ್ತಲಾ ದಶರಥಮಹೀನಾಥಂ ವಿಮಳವಾಹನಭಟ್ಟಾರಕರ ಶ್ರೀಪಾದೋಪಾಂತಮನೆಯ್ದಿ ತತ್ಪದಪದ್ಮಯುಗ್ಮಮನಷ್ಟವಿಧಾರ್ಚನೆಯಿಂದರ್ಚಿಸಿ ಗುರುಭಕ್ತಿಪೂರ್ವಕಂ ವಂದನೆಯಂ ಮಾಡಿ ಮುಂದೆ ಕೈಗಳಂ ಮುಗಿದು ನಿಂದು ಮುನಿಮುಖಾರವಿಂದಮಂ ನೋಡಿ ಬಿನ್ನಪಮೆಂದಿಂತೆಂದನೆಲೆ ಸ್ವಾಮಿಯೆನಗೆ ದೀಕ್ಷಾಪ್ರಸಾದಮಂ ಕಾರುಣ್ಯಂಮಾಡಿಯೆನಲಾ ಮುನೀಂದ್ರನಿಂತೆಂದಂ

ರಾಜಶರೀರಮೆಂಬುದತಿಕೋಮಳಮೀ ಕಠಿನಸ್ವಭಾವತಾ
ಭಾಜನಮಾದ ದುರ್ಧರತಪೋಗುಣಮಂ ಧರಿಸಲ್ಕೆ ಸಕ್ತಮೇ
ಭೂಜಗದಲ್ಲಿ ದೀನಜನದುದ್ಧೃತಿಯಲ್ಲದೆ ಬೀಱೆ ಸತ್ತಪೋ
ಯೋಜನೆಯುಂಟೆ ಭಾವಿಪೊಡನಾಥಜನಪ್ರವಿತಾನಬಂಧುವೇ        ೭೭

ವ : ಅದುಕಾರಣದಿಂ ಸರ್ವಜನರಕ್ಷಮೆ ದೀಕ್ಷೆ ಮತ್ತಮೀ ದೂರಕ್ಷಮಮಪ್ಪ ಜೈನದೀಕ್ಷೆಯಂ ಮಾಣ್ದು ಸುಖದೊಳಿರ್ಪುದೆಂದು ಬಿಡೆನುಡಿದೊಡಂ ಮಾಣದೆ ಪಿರಿದು ಮಾಗ್ರಹಮಗೆಯ್ದು ಪ್ರಾರ್ಥಿಸಿ

ಕೇಶಪಾಶಂಗಳಂ ಧರ
ಣೀಶಂ ಪಱಿದಿಕ್ಕಿದಂ ಮುನೀಶ್ವರಚರಣಾ
ಭಾಸದೊಳೆ ಮೋಹನೀಯ ಕು
ಪಾಶಂಗಳನೆಯ್ದೆ ಪಱಿದುಬೀಸಾಡುವವೊಲ್  ೭೮

ವ : ಅಂತು ತನ್ನ ಸಮಾನರಪ್ಪರಸುಮಕ್ಕಳ್ ನೂರ್ವರ್ವೆರಸು ಪ್ರತಿಪಕ್ಷಕರ್ಮ ಪಕ್ಷಪರೀಕ್ಷೇಪಣದಕ್ಷಮಪ್ತ ಜಿನದೀಕ್ಷೆಯಂ ಕೈಕೊಳಲೊಡನೊಡನೆ ಬಂದವರ್ ಮಿಡು ಮಿಡು ಮಿಡುಕುತ್ತುಂ ಪೋಗಲೊಡಮಿತ್ತಲ್

ಉಗ್ರತಪಶ್ಚರಣದಿನತಿ
ನಿಗ್ರಹಮಂ ಬಿಡದೆ ಮಾಡುತಿರ್ದಂ ತನ್ನಯ
ವಿಗ್ರಹಕ್ಕಂದು ಮಿಗೆ ನಿ
ರ್ವ್ಯಗ್ರೀಕೃತಚಿತ್ತನಾಗಿ ತನ್ಮುನಿಮುಖ್ಯಂ         ೭೯

ದ್ವಾದಶವಿಧತಪದಿಂದಂ
ದ್ವಾದಶವಿಧಶಾಸ್ತ್ರದೊಂದು ಪರಿಣತೆಯಿಂದಂ
ಮೇದಿನಿಯೊಳ್ ಪೂಜ್ಯತ್ವಮ
ನಾದಂ ತಳೆದಂ ವಿಶಿಷ್ಟದಶಧರ್ಮಯುತಂ       ೮೦

ಪಗೆ ಕೆಳೆಯೆಂಬ ಭೇದಮಿನಿತಾದೊಡಮಿಲ್ಲದೆ ಮೋನದಿಂದಮಿ
ರ್ದಗಣಿತಸರ್ಪವೇಷ್ಟಿತಕಳೇವರನುಚ್ಚವನೈಕದೇಶದೊಳ್
ಮಿಗೆ ನೆಲಸಿರ್ದ ಚಿನ್ಮಯನ ಚಿಂತೆಯ ನಿಶ್ಚಲರೂಪನಾಗಿ ಮೂ
ಲಗುಣಯುತಂ ವಿರಾಜಿಸಿದನಾ ಮುನಿ ಚಂದನವೃಕ್ಷಮೆಂಬಿನಂ       ೮೧

ಒಳಗಿರ್ದಂಜನಮಂ ಬಿಡುತ್ತುಮಧಿಕಂ ಪಾತ್ರಾತನುಸ್ನೇಹಮಂ
ತಳೆದಿರ್ದುಂ ಪರಮಪ್ರಕಾಶಮಯರೂಪಿಂದೊಪ್ಪಮಂ ತಾಳ್ದಿಯ
ಗ್ಗಳನಪ್ಪಾ ಮುನಿಪುಂಗವಂ ನಿಬಿಡಮಿಥ್ಯಾತ್ವಾಂಧಕಾರಂಗಳಂ
ಕಳೆವುತ್ತಂ ಜಿನಧರ್ಮಮಂ ಬೆಳಗಿದಂ ದೀಪಂ ದಲೆಂಬಂದದಿಂ         ೮೨

ತಪದೊಳಗತ್ಯಲ್ಪರುಚಿ ತ
ತ್ತಪನಂ ದೋಷಾಕರಂ ತದಮೃತಪ್ರಭನೆಂ
ತುಪಮೆಯನೆಯ್ದುವರಾ ಮುನಿ
ಗಪಹೃತದುಸ್ತಂ ತಮೋವಿಕಾರಂಗೆ ಕರಂ          ೮೩

ಬೇಸಗೆಯಲ್ಲಿ ಬೇಸಱದೆ ಕಲ್ನೆಲೆಯಿದ್ದುಱೆ ಮಾಗಿಯಲ್ಲಿ ಮ
ತ್ತಾಸುರಬೆಳ್ಳವಾಸದೊಳಮಿರ್ದು ಕರಂ ಮಳೆಗಾಲದಲ್ಲಿಯುಂ
ಭಾಸುರವೃಕ್ಷಮೂಳದೊಳಮಿರ್ದು ತಪಶ್ಚರಣೋದ್ಯಮಂ ಗುಣೋ
ದ್ಭಾಷಿತನಪ್ಪ ಯೋಗಿತಿಳಕಂ ಕಳಿದಂ ಮುದದಿಂ ತ್ರಿಕಾಲಮಂ        ೮೪

ವ : ಅಂತು ಮೋಕ್ಷಲಕ್ಷ್ಮೀನಿವಾಸನೀ ಪ್ರಮಾದತೀವ್ರತಪೋನುಷ್ಠಾನಾಧಿಷ್ಠಿತಂ ಬಾಹ್ಯಾಭ್ಯಂತರಪರಿಗ್ರಹಮಂ ತೊಱೆದೇಹವಿಹಾರಿಯಾಗಿ ವಿಹಾರಿಸುತ್ತುಂ ಬಂದಲ್ಲಿ

ಮಿಗೆ ಬಾಹ್ಯೇಂದ್ರಿಯವೃತ್ತಿಯಂ ತೊಱೆದು ಭೇದಜ್ಞಾನದೊಳ್ ಚಿತ್ತಮಂ
ಪುಗಿಸಿ ಪ್ರೇಕ್ಷಣಯುಗ್ಮಮಂ ನಿಲಿಸಿ ನಾಸಾಚೂಳಿಕಾಭಾಗದೊಳ್
ಸೊಗಸಂ ಬೀಱುವ ಮೇರುಶೃಂಗದವೊಲಿರ್ದಂ ನಿಶ್ಚಳಧಾನ್ಯದಿಂ
ಪ್ರಗುಣಂ ಶಾತ್ರವಮಿತ್ರರೊಳ್ ಸಮಮನಂ ಯೋಗೀಶ್ವರಾಧೀಶ್ವರಂ          ೮೫

ವ : ಇಂತು ಜಗನ್ಮಾನ್ಯನುಂ ಧನ್ಯನುಮಪ್ಪಾ ತಪೋಧನನುಪಶಮ ಶ್ರೇಣಿಯನೇ ಱಿ ಸಂನ್ಯಸನವಿಧಾನದಿಂ ತಿಂಗಳ್ ಪರ್ಯಂತಮಿರ್ದುಪಶಾಂತಗುಣ ಜ್ಞಾನದೊಳ್ ನಿಂದು ಬಗೆದಂತಿರೆ ಸಮಾಧಿವಿಧಿ ದೊರೆಕೊಳೆ ಶುದ್ಧಧ್ಯಾನದಿಂ ಶರೀರ ಭಾರಮಂ ಬಿಟ್ಟು ಸರ್ವಾರ್ಥಸಿದ್ಧಿಯಂ ಮಾಳ್ಪಲ್ಲಿ ಸಮರ್ಥಮಪ್ಪುದಱಿಂ ಯಥಾರ್ಥ ನಾಮಮಪ್ಪ ಸರ್ವಾರ್ಥಸಿದ್ಧಿನಾಮವಿಮಾನಮನೆಯ್ದಿದನದೆಂತಿರ್ದುದೆಂದೊಡೆ

ವರಮುಕ್ತಾಚಾಲಮಾಲಾನಿಬಿಡತರ ಸಮಾಲಂಬ್ಯಮಾನಂ ಲಸತ್ಪೀ
ವರಮಾಣಿಕ್ಯಪ್ರಘಂಟಾಪಟಳಜಟಿಳಸಂಸೇವ್ಯಮಾನಂ ಮಹಾಭಾ
ಸುರವನ್ನಾನಾಪ್ರಕಾರಾರುಣಮಣಿಮಯಸತ್ಕಿಂಕಿಣೀ ಶೋಭಮಾನಂ
ಪಿರಿದೊಂದಾಶ್ಚರ್ಯಮಂ ಪುಟ್ಟಿಸಿದುದು ಕಿರಣೋದ್ಭಾಸಮಾನಂ ವಿಮಾನಂ           ೮೬

ಸಿದ್ಧಾಲಯಮಂ ನೆಱೆಪೊ
ತ್ತುದ್ಧರಿಪುದು ತನ್ನ ರತ್ನಕಳಶಾವಳಿಯಿಂ
ದುದ್ಧ್ವಜವಿರಾಜಮಾನಮ
ದುದ್ಧುರಕಾಂತ್ಯನುಪಮಾನಮಾಯ್ತು ವಿಮಾನಂ          ೮೭

ಶುದ್ಧಸ್ಫಾಟಿಕ ಘಟಿತಸ
ಮುದ್ಧವಕೃಚ್ಚಿತ್ರಪುತ್ರಿಕಾಸಮುದಯಸಂ
ಬದ್ಧಂ ಚೆಲ್ವಂ ತಾಳ್ದಿದು
ದಿದ್ಧಂ ಸರ್ವಾರ್ಥಸಿದ್ಧಿನಾಮವಿಮಾನಂ         ೮೮

ವ : ಅಂತಾ ಮಣಿಮಯವಿಮಾನಾಂತರಾಳದೊಳುದಂಚಿತಕಾಂಚನಮಯ ಮಂಚದ ಮೇಲಡಿಕಿಲ್ಗೊಂಡಿರ್ದ ನಾಲ್ಕುಂಪಾಸಿನ ಪೊರೆಯೊಳುಪಪಾದಜನ್ಮದಿಂ ಮೂವತ್ತಮೂಱುಸಾಗರೋಪಮಕಾಲಂಬರಂ ಪರಮಾಯುಷ್ಯಸ್ಥಿತಿಪ್ರಮಾಣಪ್ರಮಿತ ನಪ್ಪಹಮಿಂದ್ರನೆಂಬ ದೇವನಾಗಿ ಜನಿಸಿ ಮತ್ತಮೊಂದಂತರ್ಮುಹೂರ್ತಪರ್ಯಂತಂ ಮೂಢತ್ವಾಢೌಕಿತಸ್ವಾಂತನಾಂದಿಂಬಳಿಯಂ

ಚಚ್ಚರದಿಂ ನಿದ್ರಿತ ನರ
ನೆಚ್ಚಱಿಕೆಯನೆಯ್ದೆ ಪಡೆದವೊಲಹಮಿಂದ್ರಂ
ಪೆರ್ಚಿರ್ದವಧಿಜ್ಞಾನಮ
ನಚ್ಚರಿಯುತಪಾದತಲ್ಪತಳದೊಳ್ ಪಡೆದಂ    ೮೯

ವ : ಅಂತು ಸರ್ವಾವಧಿಬೋಧಸಂಪನ್ನನಾದಿಂಬಳಿಯಂ ತದ್ವೃತ್ತಾಂತಮ ನತಿವ್ಯಕ್ತಮಾಗಱಿದು ಮೋಕ್ಷದ ಸೌಖ್ಯಮೊಂದಲ್ಲದುಳಿದೆಲ್ಲಾ ಸೌಖ್ಯಸಂಪತ್ತಿಗಳ ಮೊತ್ತ ಮಲ್ಲಿಯೇ ಮೂರ್ತಿವೆತ್ತುದೆಂಬಂತೆ ದಿವ್ಯಸುಖಮಯಸ್ವರೂಪಮಪ್ಪ ದಿವ್ಯರೂಪಿಂ ದೊಪ್ಪುತ್ತುಮಿರ್ಪಾಗಳ್

ಕರ್ಪುರದ ಘಟ್ಟಿಯಿಂದಂ
ನೇರ್ಪಡೆ ನಿರ್ಮಿಸಿದ ಚಾರುಪುತ್ರಿಕೆಯೆಂಬಂ
ತೊಪ್ಪಿದುದು ಸಪ್ತಧಾತುಮ
ಲಾರ್ಪಣಮಣಮಿಲ್ಲದಿರ್ಪ ದಿವ್ಯಶರೀರಂ       ೯೦

ಮಿಗೆ ಶೃಂಗಾರರಸಪ್ರವಾಹದೊದವಿಂಗಾಧಾರಮಾಗಿರ್ದು ತಾಂ
ಸೊಗಸಂ ಬೀಱುವ ದಿವ್ಯರೂಪಮದು ಕರ್ಣಾನಂದಮಂ ಮಾಳ್ಪೊಡಂ
ಪ್ರಗುಣಾವಾಸನೆನಿಪ್ಪ ನಿರ್ಜರವರಂಗೆಂದುಂ ವಿಕಾರಂಗಳಂ
ಬಗೆಯೊಳ್ ಪುಟ್ಟಿಸದೆಂದೊಡೇವೊಗಳ್ವೆನಾಂ ರೂಪಾತಿಶಾಯಿತ್ವಮಂ        ೯೧

ಬೆಳಗಿನ ಬಳಗಮನುತ್ಕೋ
ಮಳಮಂ ಬಿಡದುಗುಳ್ವ ದೇವದಿವ್ಯಶರೀರಂ
ಥಳಥಳಿಸುತ್ತಿರ್ದು ಮಹಾ
ವಿಳಸನಮಂ ತಲೆದುದತುಳಪರಿಮಳಮಿಳಿತಂ    ೯೨

ವ : ಅಂತುಮಲ್ಲದೆಯುಂ

ಷೋಡಶಾಭರಣಮಾಳಿಕೆಯಿಂದಂ
ಕೂಡಿದಾ ದಿವಿಜನಾಯಕದೇಹಂ
ಗಾಡಿಯಂ ಪಡೆದು ರಂಜಿಸುತ್ತಿರ್ಕುಂ
ನಾಡೆಯುಂ ಮೃದುಳತಳ್ಪದೊಳಾದಂ            ೯೩

ಸ್ಫರುದತ್ಯದ್ಯತ್ಪ್ರಭಾಭಾಸುರನಿರುಪಮಮಾಣಕ್ಯಕೂಟಂ ಕಿರೀಟಂ
ಭರದಿಂದಾ ದೇವತೇಜಃ‌ಪ್ರಸರದ ಶಿಖಿಯೆಂಬಂತೆ ಚೆಲ್ವಾಯ್ತು ಮತ್ತು
ದ್ಧುರಮುಕ್ತಾತಾರಹಾರಾವಳಿ ಕೊರಳೊಳಗೊಪ್ಪುತ್ತುಮಿರ್ದತ್ತು ವೀಕ್ಷಾ
ತುರಿತಶ್ರೇಯಾಂಗನಾಪಾತಿತಬಹಳಕಟಾಕ್ಷಾಳಿಯೆಂಬಂದದಿಂದಂ      ೯೭

ಅರುಣಮಣಿಭೂಷಣಂಗಳ
ಕಿರಣಂಗಳ್ ಪಸರಿಸಲ್ಕೆ ಮಣಿಭಿತ್ತಿಗಳಾ
ಧರಿಸುತ್ತಿರ್ದವು ಕೆಂಪಿನ
ತೆರೆಸೀರೆಗಳೆಂಬ ಶಂಕೆಯಂ ಭರದಿಂದಂ೯೫

ಮುಕ್ತಾಳಂಕೃತೆಯಾದ ವಿ
ಮುಕ್ತಿಸ್ತ್ರೀ ಮಿಗೆ ಸಮೀಪದಲ್ಲಿರ್ದಪಳೆಂ
ದುಕ್ತಮನಂ ಸ್ತ್ರೀಸುಖದನು
ರಕ್ತಿಯನದು ಬಯಸದಿರ್ಪುದಾ ಸುಖನಿಧಿಯೋ೯೬

ಅಹಮೇವೇಂದ್ರಂ ಲೋಕದೊ
ಳಹರ್ನಿಶಂ ಸಿದ್ಧರಲ್ಲದನ್ಯರ್ಗೆಲ್ಲಂ
ವಿಹಿತಾರ್ಥಾಹಂಕಾರದಿ
ನಹಿಮಿಂದ್ರಂಗಾಯ್ತು ಬಗೆವೊಡಹಮಿಂದ್ರಾಖ್ಯಂ           ೯೭

ವ : ಮತ್ತಂ

ಪದಿನಾಱುಂ ತಿಂಗಳುಂ ಪಕ್ಷದೊಳುಸಿರಿಡುವಂ ದಿವ್ಯಪೀಯೂಷಮಂ ಸ
ಮ್ಮದದಿಂ ಮೂವತ್ತಮೂಸಾಸಿರ ಬರಿಸದೊಳಂ ಚಿಂತಿಪಂ ತನ್ನೊಳಾದ
ಭ್ಯುದಯಂ ಕೈಮಿಕ್ಕು ಪೆರ್ಚುತ್ತಿರೆ ಸೊಗಯಿಸುವಂ ನಿಷ್ಪ್ರವೀಚಾರತಾಸಂ
ಪದದಿಂದಂ ಕೂಡಿದಾ ದೇವನ ಮಹಿಮೆಗಳಂ ಬಣ್ಣಿಸಲ್ ಬಲ್ಲನಾವಂ        ೯೮

ಬಾಡದ ಮಾಲೆ ಮುಪ್ಪು ಸಲೆತೋಱದ ಜವ್ವನಮುಟ್ಟೊಡಂ ಮಲಂ
ತೀಡದ ಸೀರೆ ಪೂಸದ ಸುಗಂಧರೆಬೀಯದ ಮೆಯ್ಯ ಸೊಂಪು ಕೈ
ಗೂಡಿದ ಲಕ್ಷಣಂ ಸಹಜಮಾಗಳವಟ್ಟಿರೆ ಲೋಕದಲ್ಲಿ ಕೊಂ
ಡಾಡದನಾವನೋ ತದಹಮಿಂದ್ರನ ಪೆರ್ಚಿದ ಪೆಂಪಿನೇಳ್ಗೆಯಂ       ೯೯

ಅಲರ್ದಂಭೋರುಹಷಂಡದಲ್ಲಿ ಕಳಹಂಸಂ ಲೀಲೆಯಿಂದಿರ್ಪವೊಲ್
ಸಲೆಮಾಣಿಕ್ಯವಿಮಾನದಲ್ಲಿಯಹಮಿಂದ್ರಂ ಭೂರಿಸತ್ಸೌಖ್ಯಮಂ
ನಲವಿಂದಂ ಸವಿಯುತ್ತುಮಿರ್ದು ತಳೆದಂ ನಿಸ್ಸೀಮಸಂತೃಪ್ತಿಯಂ
ವಿಲಸತ್ಪುಣ್ಯಯುತಂಗೆ ಪೇಳ್ ಗಹನಮೇ ಲೋಕೈಕಮಾಂಗಲ್ಯಮಂ          ೧೦೦

ವ : ಇಂತಾ ದಶರಥಚರನುಂ ರುಂದ್ರಸೌಖ್ಯಸಾಂದ್ರನುಮಪ್ಪ ತದಹಮಿಂದ್ರ ನಱುದಿಂಗಳುಳಿಯೆ ಮೂವತ್ತುಮೂಱುಸಾಗರೋಪಮಕಾಲಮಂ ಕಡವರಂ ನಿರಾಯಾಸದಿ ನೀಸಾಡಿ ಮತ್ತಮಿನ್ನಱದಿಂಗಳಿಂ ಮೇಲೆ ಚರಮದೇಹಮಂ ಕೈಕೊಳಲೆಂದಾ ಸರ್ವಾರ್ಥ ಸಿದ್ಧಿಯಿಂದಿಳಿದುಬಂದೀ ಧರಣೀತಳಕ್ಕವತರಿಸುವಲ್ಲಿ ಸ್ವಾತೀನಕ್ಷತ್ರದ ಮಳೆವನಿ ಮುಕ್ತಾತ್ಮಕವಾಗಿ ಶುಕ್ತಿಕಾಗರ್ಭದೊಳುದ್ಭವಿಪುದೆಂಬಂತೆ ನಿನ್ನೀ ಪ್ರಾಣ ಪ್ರೀತಿಯಪ್ಪ ಕುಲಸ್ತ್ರೀಯ ಗರ್ಭದೊಳ್ ಮುಕ್ತಾತ್ಮಕನುಂ ಪದಿನಯ್ದನೆಯ ತೀರ್ಥಂಕರ ನುಮಪ್ಪ ಧರ್ಮನಾಥನಾಗವತರಿಸಿದಪನದುಕಾರಣದಿಂ ನೀರ್ವಿರ್ವರೀ ಲೋಕತ್ರಯ ದಿಂದೆಡ ಸಂಪೂಜ್ಯರೆಂದಾ ಮುನೀಶ್ವರರಾ ಮಹಿಪಾಳತಿಳಕಂಗನಾಗತ ಧರ್ಮನಾಥನ ಪಿಂದಣ ಜನ್ಮವೃತ್ತಾಂತಮಂ ತಿಳಿಯಪೇಳಲೊಡಮಾಗಳವರಿಬ್ಬರುಮತ್ಯಂತ ಬಹಳತರ ಸಂತೋಷಸಮುದ್ರದೊಳ್ ತೇಂಕಾಡುತ್ತುಮುತ್ಪುಳಕಾಂಕುರಾಂಕಿತಂಗಳಪ್ಪ ತಮ್ಮಯ ಶರೀರಂಗಳಂ ವಿಗಳತ್ಪ್ರಮದಾಶ್ರುಧಾರೆಗಳಿಂ ಪ್ರಕ್ಷಾಲನಂಗೆಯ್ದು ತನ್ಮುನಿಗಳ ಚರಣಂಗಳೆಂಬ ಕಮಳಂಗಳನಾತ್ಮೀಯ ಕುಂತಲಂಗಳೆಂಬ ತುಂಬಿಗಳಿಂ ತುಂಬಿ ಮುಸುಂಕಿಸುತ್ತುಂ ಮತ್ತಮಾ ನೃಪಾಳೋತ್ತಮ ಕೈಗಳಂ ಮುಗಿದು ನೊಸಲ್ಗೆತಂದಿಂತೆಂದು

ಮುನಿನಾಥಾ ನಿನ್ನಯ ಶ್ರೀಪದದ ಭಜನೆಯಂ ಯಾಮಮಾತ್ರಂಬರಂ ಮಾ
ಳ್ಪೆನಗಂ ನಿಶ್ಶೇಷಲೋಕತ್ರಯಸಮಭಿನುತಶ್ರೀಪದಂ ಭಾವಿತೀರ್ಥೇ
ಶನ ಜನ್ಮಜ್ಞಾನದ ಶ್ರೀಪದಮುಮೊಡನೆ ಕೈಸಾರ್ದುದೆಂದುಂ ಭವತ್ಸೇ
ವನೆಯಂ ಮಾಳ್ಪಂಗೆ ಕೈಗೂಡದೆ ಕೆಡದ ಘನಶ್ರೀಪದಂ ಭೂರಿಬೋಧಂ        ೧೦೧

ವ : ಎಂದಿಂತಾ ಮುನೀಶ್ವರರನಾ ನಾಡೆಱೆಯಂ ನಾಡೆಯುಂ ಕೊಂಡಾಡು ತ್ತುಮಿರೆ ಮತ್ತಮಾ ಸಭೆಯೊಳ್ ಕೆಲಂಬರ್ ದರ್ಶನಮೋಹನೀಯ ಕರ್ಮೋದಯದಿಂದುದ್ಧೂತಶ್ರದ್ಧಾನರಪ್ಪ ಸಂಶಯಮಿಥ್ಯಾದೃಷ್ಟಿಗಳಿದಕ್ಕೆ ಚಿಹ್ನಮೇನಿದನೆಂತುನಂಬಲಕ್ಕೆಂದು ಮನದೊಳ್ ಚಿಂತಿಸಲದಂ ಪರಮಾವಧಿಬೋಧನವಧರಿಸಿ ತನ್ನಿಶ್ಚಯಾತ್ಮಕ ಮಾದನಾಯಕ ವಾಕ್ಯಮನಿಂತೆಂದಂ

ದೇವೇಂದ್ರನೆ ಬೆಸದಿಂದಂ
ದೇವಸ್ತ್ರೀನಿಕರಮಿಲ್ಲಿಗೆಳ್ತಂದಪುದೀ
ಭಾವಕಿಯ ಸೇವೆಗಾಗಿ ಮ
ಹೀವಲ್ಲಭ ನಿನ್ನ ಮಹಿಮೆ ಪೊಗಳಲಳುಂಬಂ   ೧೦೨

ನಾಳೆ ಮೊದಲಾಗಿ ಪುರದೊಳ
ಗೈಳಬಿಳಂ ಬಂದು ಪೊನ್ನಮಳೆಗಱೆದಪನಿ
ನ್ನೇಳಿಸದೆ ನಂಬು ಧರಣೀ
ಪಾಳಕ ಮದ್ವಚನಮಂ ಮನೋಮುದದಿಂದಂ  ೧೦೩

ವ : ಇಂತಜ್ಞರ ಮನದ ಸಂದೇಹಮನಪಹರಿಸಲೆಂದು ನುಡಿದು ಮತ್ತ ಮಿಲ್ಲಿಗಿನ್ನು ಸೇವಾನಿಮಿತ್ತಂ ತಂತಮ್ಮ ಪೊತ್ತನಕ್ರಮಿಸದೆ ಬಪ್ಪಂತಪ್ಪ ದೇವರ್ಕಳಿಂಗಂ ದೇವಿಯರಿಂಗಂ ಯೋಥಚಿತ ಸನ್ಮಾನದಾನಮಂ ಮಾಡಲ್ವೇಳ್ಕುಮದುಕಾರಣಂ ನೀಂ ಬೇಗಂ ಪೋಗೆಂಬುದುಂ

ಅಷ್ಟವಿಧಾರ್ಚನಾರಚನೆಯಿಂದೆ ಮುನೀಂದ್ರನ ಪಾದಪದ್ಮಮಂ
ತುಷ್ಟಿಯೊಳೊಂದಿ ತೋರ್ಪ ನರನಾಯಕನರ್ಚಿಸಿ ಭಕ್ತಿಭಾರಸಂ
ಪುಷ್ಟಮನಂ ನಮಸ್ಕರಿಸದಂ ವರಶೀಲಸಮಾನ ಸದ್ಗುಣೋ
ತ್ಕೃಷ್ಟೆಯೆನಿಪ್ಪ ಸುವ್ರತೆಯುಮಂತಿರೆ ಮಾಡಿದಳಾ ಕ್ರಮಂಗಳಂ    ೧೦೪

ವ : ಅಂತಾ ಮಹಾಸೇನ ಮಹಾರಾಜನುಂ ಸುವ್ರತಮಹಾದೇವಿಯುಂ ವಿಶೇಷ ವ್ರತಂಗಳಂ ಕೈಕೊಂಡು ಸಮ್ಯಗ್ದೃಷ್ಟಿಗಳಪ್ಪ ಶಿಷ್ಟೇಷ್ಟಜನಂಗಳ್ವೆರಸು ಮುನಿರಾಜ ಕುಂಜರನಂ ಬೀಳ್ಕೊಂಡು ಕಿಱಿದಂತರಂ ಪೋದಮಾರ್ಗದಿಂ ಪೋದಿಂಬಳಿಯಂ

ಪೆಣ್ಣುಗಳಿಕ್ಕೆ ಚಾಮರಮನಿಕ್ಕೆಲದೊಳ್ ಧವಳಾತಪತ್ರಮಂ
ತಣ್ಣೆಳಲಿಂಗೆ ಕಾರಣಮದಾಗಿ ದಲೆತ್ತಿ ವಿಶೇಷಭಾವದಿಂ
ಪಣ್ಣಿದ ಪಟ್ಟದಾನೆಯನದಂ ಪಿಡಿದೇಱಿದರಂದು ವಂದಿಗಳ್
ಬಣ್ಣಿಸುತಿರ್ಪಿನಂ ನೃಪತಿಯುಂ ಸತಿಯುಂ ಹೃದಯಾನುರಾಗದಿಂ  ೧೦೫

ವಿಳಸದ್ಗಂಡಂಗಳೊಳ್ ಕುಂಡಳರುಚಿಪಡಳಂ ರಂಜಿಸುತ್ತಿರ್ಪಿನಂ ದಿ
ಗ್ವಳಯಾಂತರ್ಭಾಗದೊಳ್ ವ್ಯಾಪಿಸೆ ಪಟುಪಟಹಧ್ವಾನಮುದ್ಯತ್ಪತಾಕಾ
ಕುಳಮೆಲ್ಲಂ ವ್ಯೋಮಮಂ ಚುಂಬಿಸೆ ರಿಪುನೃಪಸಂತಾನದುಸ್ಸಹ್ಯತೇಜೋ
ಮಿಳಿತಂ ದೇವೇಂದ್ರನೆಂಬಂದದೆ ಧರೆಗಧಿಪಂ ಬಂದನಾನಂದದಿಂದಂ  ೧೦೬

ವ : ಅಂತು ಬಂದು ನಾನಾಶೋಭಾವಿರಾಜಮಾನಮಾದ ನಿಜರಾಜಧಾನಿ ಯನೆಯ್ದಿ ಪುರಮನರಮನೆಯುಮಂ ಪೊಕ್ಕು ಕೂಡೆಬಂದ ರಾಜಕರಾಜನ್ಯಕಮಹಾ ಪ್ರಧಾನರ್ ಮೊದಲಾದ ಸಮಸ್ತಪರಿವಾರಮಂ ಕರ್ಪೂರಸಹಿತಂ ವೀಳೆಯಮಂ ಕೊಟ್ಟು ತಂತಮ್ಮ ನಿವಾಸಕ್ಕೆ ಬೀಳ್ಕೊಟ್ಟು ಕಳಿಪಿದಿಂ ಬಳಿಯಂ

ಮಜ್ಜನಭೋಜನಮಂ ಮಾ
ಳ್ಪುಜ್ಜುಗದೊಳಮಿರ್ದು ಕಳಿದರಂದಿನ ದಿನಮಂ
ಸಜ್ಜನವಂದ್ಯನ ನುಡಿಯಂ
ದುರ್ಜಯರಾದರಿಸಿ ಸುಖದೊಳೋಲಾಡುತ್ತುಂ೧೦೭

ವ : ಮತ್ತಂ

ನರಪಂ ಸಾಮ್ರಾಜ್ಯಸೌಖ್ಯೋದಯದೊಳೊಳಿದು ತಾಳ್ದಿರ್ದನಾನಂದಮಂ ಸ
ತ್ಕರುಣಾವಾರಾಶಿ ಸೋಮಂ ಸಕಳವಿಭವಸೀಮಂ ಪ್ರಪೂಜ್ಯಕ್ರಮಂ ಸು
ಸ್ಥಿರಸತ್ಕೀರ್ತಿವ್ರಜಂ ಬಾಹುಬಲಿಸುಕವಿರಾಜಂ ಜನತ್ಕಲ್ಪಭೂಜಂ
ಧರಣೀಸಂಸ್ತುತ್ಯದೇಹಂ ಘನಗುಣನಿವಹಂ ಚಾತುರೀಜನ್ಮಗೇಹಂ  ೧೦೮

ಗದ್ಯ : ಇದು ಸಕಳಭುವನಜವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದ ಸಂಪಾದ ಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ಧರ್ಮತೀರ್ಥಂಕರ ಭವಾಂತರೋಪ ವ್ಯಾವರ್ಣನಂ ಪಂಚಮಾಶ್ವಾಸಂ.