ಶ್ರೀಕಾಂತಂ ವಿಶದಯಶಃ
ಶ್ರೀಕಾಂತಂ ಪರಮಹರುಷಮಂ ತಳೆದಿರ್ದಂ
ಲೋಕಜನಲಾಲನೀಯ ಗು
ಣಾಕಾರಂ ಸರಸಚತುರಕವಿಕುಳತಿಳಕಂ೧

ಎಂತುಱೆ ಪೂರ್ವದಿಗ್ವನಿತೆ ಮೇರುತಿರೋಹಿತ ಚಂದ್ರಬಿಂಬಮಂ
ಸಂತಸದಿಂದೆ ತಾಳ್ದಿ ಪರಿರಂಜಿಪಳಂತೆ ದಲಾ ಮಹೀಪಸೀ
ಮಂತಿನಿ ಚೆಲ್ವ ತನ್ನುದರದೊಳ್ ಸಲೆ ತಾಳ್ದಳಪೂರ್ವಗರ್ಭಮಂ
ಸ್ವಾಂತದೊಳೆಯ್ದೆ ರಾಗರಸಮಾವರಿಸಿರ್ದುದು ಪೆರ್ಚಲುತ್ಕಟಂ    ೨

ಜಿನಪೂಜೋತ್ಸಾಹಮಂ ಮಾಡುವ ಭರವಸದಿಂ ದಾನಮಂ ಮಾಳ್ಪ ತದ್ಬಂ
ಧನದೊಳ್ ಸಿಕ್ಕಿರ್ದರಂ ತಾಂ ಬಿಡಿಸುವ ಕರುಣಾಭಾವದಿಂದೆಲ್ಲರುಂ ಪಾ
ಲನಮಂ ಮಾಡುತ್ತುಮಿರ್ಪೀ ಬಯಕೆ ಬಗೆಯೊಳಾ ದೇವಿಗಾದತ್ತು ಮತ್ತಾ
ತನಯಂ ಪೂಜ್ಯಂ ಮಹಾದಾನಿಯುಪಗತವದ್ಬಂಧನಂ ಸರ್ವಪಾಲಂ           ೩

ವ : ಎಂಬಿದಂ ಸೂಚಿಪಂದದಿಂ

ಉದರದೊಳಿರ್ದ ಜಿನೇಶನ
ಸದಮಳಘನಕೀರ್ತಿಯಿಂ ಸಮಾವೃತಮೆಂಬಂ
ತು ಧರಣಿಯ ಕೋಮಳಾಂಗಂ
ಪದೆಪಿಂದಾಂತುದು ಮನೋಜ್ಞಧವಳಚ್ಛವಿಯಂ            ೪

ಲಲನಾಗಂಡಸ್ಥಳೀ ಮಂಡಳದ ಪೊಳೆಪು ಪೂರ್ಣೇಂದುವಂ ಮಾಣದೆಯ್ದಂ
ಡಲೆಯಲ್ ಬೇಸತ್ತು ಮತ್ತಂ ಭಯರಸವಶದಿಂ ಪೇಡಿವಟ್ಟೋಡಿಪೋಗಲ್
ಸಲೆ ಪಾಳಾಗಿರ್ದುದಂತಲ್ಲದೊಡದಱೊಳಗಾರಣ್ಯದಲ್ಲಿರ್ಪ ಪುತ್ತುಂ
ಮೊಲನುಂ ಚೆಲ್ವಾಲಮುಂ ಪುಲ್ಲೆಯುಮುಱೆ ನೆಲಸಿರ್ಪಂದಮಾವಂದಮಿನ್ನುಂ        ೫

ವರಬಲದಿಂದನಂತಬಲಿಯೊರ್ವನೆ ನೂಂಕಿ ವಲಿತ್ರಯಂಗಳಂ
ನಿರುಪಮ ಮಧ್ಯದೇಶಮನೆ ಪೆರ್ಚಿಪುದಂ ನಡೆನೋಡಿ ಹರ್ಷಮಂ
ಧರಿಸಿದವೆಂಬಿನಂ ಪಡೆದುವುಚ್ಚಕುಚಂಗಳವಂದು ಬಿಣ್ಪುಮಂ
ಪರರ ಸಮೃದ್ಧಿಯಿಂ ತಣಿವರೆಯ್ದೆ ಸುಹೃತ್ತುಗಳುಂ ಸುವೃತ್ತರುಂ            ೬

ಪರಮವಿಳಾಸಮೆಂಬ ರಸದಿಂದಮೆ ತೀವಿದುರಸ್ಥಳೋಲ್ಲಸ
ತ್ಸರಸಿಯೊಳೆಯ್ದೆ ಪುಟ್ಟಿದ ಸಭೃಂಗ ಮುಖಾಂಬುಜ ಕೋಶಯುಗ್ಮದಂ
ತಿರೆ ತುದಿ ಕಪ್ಪುವೆತ್ತ ಕುಚಮಂಡಳಯುಗ್ಮ ಮದಂತುಮಲ್ಲದಂ
ದುರುತರ ಪತ್ರವಲ್ಲಿಯದಱಲ್ಲೊಗೆದಿರ್ಪ ನಿಮಿತ್ತಮಾವುದೋ   ೭

ಎನಿತನಿತುಂ ತನೂದರಮದಾಂತುದು ಪೆರ್ಚುಗೆಯಂ ಸಮಂತು ಮ
ತ್ತನಿತನಿತುಂ ಕುಚದ್ವಯಮದಾಂತುದು ವಕ್ತ್ರದೊಳೆಯ್ದೆ ಕಪ್ಪುಮಂ
ಘನಕಠಿಣತ್ವಭಾವದೊದವಂ ತಳೆದಿರ್ದ ಜಡಾತ್ಮರನ್ಯವ
ರ್ಧನಮನೆ ಸೈರಿಸರ್ ತಳೆದೊಡಂ ದಲವರ್ ಸಲೆ ಮಧ್ಯವೃತ್ತಿಯಂ೮

ನೆಟ್ಟನೆ ನೈಜಸುವರ್ಣಮ
ನೊಟ್ಟಜೆಯಿಂ ಕರ್ಕಶಸ್ವಭಾವರ ಮುಖಮುಂ
ತೊಟ್ಟು ಕಱಂಗುವ ತೆಱದಿಂ
ತೊಟ್ಟು ಕಱಂಗಿದುದು ನೋಳ್ಪಡತಿಶಯದಿಂದಂ          ೯

ಬಡವಂ ನಿಧಾನಮಂ ಮ
ತ್ತಡಿಗಡಿಗಂ ನೋಡುತಿರ್ಪ ತೆಱದಿಂದರಸಂ
ಬಿಡದೆ ನೋಡುತುಮಿರ್ದಂ
ಸಡಗರದಿಂ ಗರ್ಭವತಿಯ ಗರ್ಭಸ್ಥಿತಿಯಂ        ೧೦

ಕುಸುಮಮಂಜರಿಗೆ ಪರಮಳ
ದೆಸಕಂ ಭಾರಮನದೇನುಮಂ ಮಾಡದವೊಲ್
ಪೊಸತೆನಿಪ ಗರ್ಭವತಿಗಾ
ಶಿಶು ಭಾರಾಯಸದೊದವನಿನಿಸುಂ ಮಾಡಂ      ೧೧

ಜನನಿಯ ಗರ್ಭದೊಳಿರ್ದುಂ
ಘನತೇಜಂ ಸುಖದ ಪೆರ್ಚನೀವುತ್ತಿರ್ದಂ
ದಿನನಾಯಕ ಕರಮೆಂತ
ಬ್ಜಿನಿಗೆಂದುಂ ಸುಖದ ಪೆರ್ಚನೀವಂತೆ ಕರಂ       ೧೨

ಮೊದಲ ವಿಳಾಸದಿಂ ಪಿರಿದುಮಗ್ಗಳಮಾದ ವಿಳಾಸಮಾದುದ
ಲ್ಲದೆ ಮಿಗೆ ಗರ್ಭಚಿಹ್ನದ ವಿಕಾರಮದಾಕೆಯ ದೇಹದಲ್ಲಿ ತೋ
ಱಿದುದಿನಿತಿಲ್ಲ ನಿರ್ವಿಕೃತಿಯಪ್ಪ ಜಿನಾರ್ಭಕನಿರ್ದ ತಾಣದ
ಲ್ಲುದಯಿಸಲಾರ್ಪುದೇ ವಿಕೃತಿರತ್ನಧರಾದ್ರಿ ವಿಕಾರಿಯಕ್ಕುಮೇ    ೧೩

ಸೊಗಯಿಪ ಗರ್ಭದಲ್ಲಿ ನೆಲಸಿರ್ದಿನಿಸುಂ ಪೊರೆಯಂ ಮಲಂಗಳೊಳ್
ಮಿಗುವ ಮತಿಶ್ರುತಾವಧಿಗಳೆಂಬ ವಿಶೇಷಿತನ ತ್ರಿಬೋಧಮಂ
ಬಗೆಯೊಳೆ ತಾಳ್ದಿದಂ ದಲುದಯಾದ್ರಿಕರಂ ಮಱೆಯಾದೊಡಂ ಪ್ರಭಾ
ಳಿಗಳನದಾವಗಂ ತರಣಿಮಂಡಳಮೆಯ್ದುಱೆ ತಾಳ್ದುವಂದದಿಂ      ೧೪

ವ : ಮತ್ತಮಾ ಭೂಪಾಳಕಂ ಕುಲವೃದ್ಧಾನುಗತಕ್ರಮವರ್ತನಾ ಪರಿಪಾಲ ನಾರ್ಥಂ ಪುಂಸವನಾದಿಕ್ರಿಯಾವ್ಯಾಪಾರಮಂ ಕಾಲದೊಳ್ ನಿರ್ವರ್ತಿಸಲ್ವೇಳ್ಕುಮೆಂದು ಬಗೆಯುತ್ತುಮಿರಲಾತನೊಡನೆ ಸ್ಪರ್ಧೆಯೆಂದೆಂಬಂತೆ ವೃದ್ಧಶ್ರವಂ ಮುನ್ನವೆ ಬಂದು ತತ್ಪುಂಸವನಾದಿ ಕರ್ಮಮಂ ನಿರ್ಮಿಸಿ ಪೋದಿಂಬಳಿಯಂ

ತನುನಯಮೇಱಿ ಕೂಡೆ ಬಡವಾದುದು ಲೋಲವಿಶಾಲಚಾರುಲೋ
ಚನಯುಗಮೆಯ್ದೆ ಮೀಱಿ ಪೊಳಪೇಱಿದುದುಜ್ಜುಗಮಂದು ಗುಜ್ಜನಾ
ಯ್ತನುಪಮಗರ್ಭನಿರ್ಭರದ ಪೊತ್ತಿನೊಳೆ ಶುಭಚಿಹ್ನಮಾಗಿ ರಾ
ಜನ ಮನದಲ್ಲಿ ರಾಗರಸಪೂಗಮನಾಗಿಸುತಿರ್ದುದಾವಗಂ            ೧೫

ಅಮರೇಂದ್ರಂ ಪೊಸತಾದಲಂಕರಣವಸ್ತ್ರಾನೀಕಮಂ ಭಕ್ತಿಯಿಂ
ದಮೆ ಕೊಟ್ಟಟ್ಟಲದಂ ನಿರೀಕ್ಷಿಪುದಱಿಂ ಕೊಂಡಾಡುವುತ್ಸಾಹದಿಂ
ದಮರಸ್ತ್ರೀಯರ ತೊತ್ತುಗೆಯ್ತಮನದಂ ಕಂಡುಂ ಮಹಾಸೇನಭೂ
ರಮಣಂ ಮಾಳ್ಪ ವಿಮೋಹದಿಂ ದ್ವಿಗುಣಿಸಿತ್ತಾ ದೇವಿಗಾನಂದಮಂ            ೧೬

ವ : ಇಂತು ತುಚ್ಛೇತರೋತ್ಸಾಹದೊಡನೆ ಗರ್ಭಂ ಬಳೆಯೆವಳೆಯೆ ಮತ್ತಂ ಕೆಲವುದಿನಂಗಳ್ ಪೋದಿಂಬಳಿಯಂ ನವಮಾಸಂ ಪರಿಪೂರ್ಣತೆಯನೆಯ್ದಲೊಡ ಮೊಂದುದಿವಸಮಾ ಮರಾಳಿಕಾಗಮನೆ ತನ್ನಯ ಮೃದುಪಾದತಳಂಗಳೆಂಬ ಕೆಂದಾವರೆಯರಲ್ಗಳ ಲೀಲಾವಿನ್ಯಾಸವಿಶೇಷದಿಂ ಪಳಿಕಿನ ಕುಟ್ಟಿಮಧರಣೀತಳಮಂ ರಾಗರಮಣೀಯತರಮಂ ಮಾಡುತ್ತುಂ ನಿಷ್ಟಿಪ್ತಾಷ್ಟಾಪದ ಪರಿಪುಷ್ಟಾರಿಷ್ಟನಿವಾಸಕ್ಕೆ ಮೆಲ್ಲಮೆಲ್ಲನೆ ಬಿಜಯಂಗೆಯ್ವುದುಮಾಗಳ್ ಪೋಗುತ್ತುಂ ಬರುತ್ತುಮಲ್ಲಲ್ಲಿ ನೆರವಿಯಾಗಿರುತ್ತುಮಿರ್ದ ಬಹಳ ದಿವಿಜ ಮಹಿಳಾಸಂಕುಳದ ಸಂಭ್ರಮ ಸಮುತ್ಥಿತ ಕೋಳಾಹಳರವರಭಸದಿಂ ತುಂಬಿ ತುಳುಂಕಾಡುವ ಸೂತಿಕಾನಿಳಯಂ ಪ್ರತಿಧ್ವನಿಯ ನೆವದಿಂ ಲೋಕತ್ರಯೈಕ ಮಂಗಳನುದಯಮಂ ಮೂಱುಂಜಗಕ್ಕೆ ಸಾಱುವಂತಿರ್ಪುದು ಮನಂತರಂ ಮಾಘಮಾಸದ ವಳಕ್ಷಪಕ್ಷದೊಳಶೇಷಶೋಭನಾವಸಥಿಯಾದೇಕಾದಶೀ ತಿಥಿಯಲ್ಲಿ ಚಂದ್ರಮಂ ಸಮಸ್ತ ಕ್ಷೇಮ ಕ್ಷೇತ್ರಮಾದ ಪುಷ್ಯನಕ್ಷತ್ರ ಸಮಾಶ್ಲಿಷ್ಯಮಾಣ ನಾಗುತ್ತುಮಿರೆ ಸಕಳಾಭೀಷ್ಟ ಫಳಸಂಯೋಗ ಯೋಗ್ಯಮಾದ ಸೌಭಾಗ್ಯಯೋಗದೊಳಂ ನಿಖಿಳಕಲ್ಯಾಣ ಕರಣಪ್ರವೀಣಮಾದ ಗರಜಾಕರಣದೊಳಂ ವಿಪುಳಮಾಂಗಲ್ಯಸಾಕಲ್ಯಕ್ಕಾ ಧಾರಮಾದ ವಾಚಸ್ಪತಿವಾರದೊಳಿಂತು ಪಂಚಾಂಗಮುಂ ಶುಭಾಂಚಿತಮಾಗೆ ಪೂರ್ವಾಹ್ಣದ ಪೊತ್ತಿನೊಳಖಿಳಶುಭಗ್ರಹಂಗಳುದಗ್ರಸ್ಥಾನಂಗಳೊಳಳಿರುತ್ತುಮಿರೆ ಶುಭಮುಹೂರ್ತದಲ್ಲಿ ಪ್ರಾಚೀದಿಗ್ದೇವಿ ಜಗತ್ಪ್ರಕಾಶಕನಪ್ಪ ಸೂರ್ಯನನೆಂತು ಪಡೆವಳಂತಿರಾ ಸುವ್ರತಾಮಹಾದೇವಿಯುಂ ಲೋಕತ್ರಯವರ್ತಿ ಸರ್ವಜನವೃಂದ ಕೊರ್ಮೊದಲೊಳೆ ಸಂಪಾದಿತಾನಂದಾಭಿನಂದನಪ್ಪ ನಂದನನಂ ಪಡೆವುದುಮಾಗಳ್

ಪಿರಿದುಂ ಪೊಂಬಣ್ಣದಂತೊಪ್ಪುವ ತನುವಿನ ಸತ್ಕಾಂತಿಯಿಂ ಚೆಲ್ವನಂದಾ
ವರಿಸಿರ್ದಾ ಬಾಳಕಂ ಪಾವನಜನನಿಯ ಮುಂದೊಪ್ಪುತಿರ್ದಂ ಮಹಾದೇ
ವರ ಮೂರ್ಧಾರ್ಧೇಂದುಲೇಖಾಲಸಿತಕಳೆಯ ಮುಂದಿರ್ದ ಭಾಳಾಂತರಾಳ
ಸ್ಫುರದುದ್ಯತ್ತೇಜದಿಂದಂ ಥಳಥಳಿಪುರಿಗಣ್ಣೆಂಬಿನಂ ರಂಜಿಸುತ್ತುಂ೧೭

ಸಾಸಿರದೆಂಟುನೂಱು ಶುಭಲಕ್ಷಣಲಕ್ಷಿತಮಪ್ಪುದಂ ಮಹಾ
ಭಾಸುರ ಪುಣ್ಯಮೂರ್ತಿಯೆನಿಸಿರ್ದ ಜಿನಾರ್ಭಕಮೂರ್ತಿಯಂ ಸಮಂ
ತೋಸರಿಸಿರ್ದು ಕೌತುಕದೆ ಕಣ್ಣೆಮೆಯಿಕ್ಕದೆ ನೋಡುತಿರ್ದ ಭಾ
ಮಾಸಮುದಾಯಮಾದುದನಿಮೇಷಕಮಿಲ್ಲದೊಡಂ ಸುರತ್ವಮುಂ           ೧೮

ಬಾಲನ ಮೆಯ್ಯ ಕಾಂತಿಲಹರೀಚಯದಿಂದುದರು ಸೂತಿಕಾತಿ ರ
ಮ್ಯಾಲಯದಲ್ಲಿ ಕತ್ತಲೆ ಬಿಗುತ್ತಿರದೋಡಿದೊಡಂ ವಿಶೇಷದಿಂ
ಬಾಲಿಕೆ ಸಪ್ತದೀಪಿಕೆಗಳಂ ಮಿಗೆ ಕೇವಳ ಮಂಗಳಾರ್ಥಮಾ
ಗೋಳಿಯನೆಯ್ದೆ ಪೊಚ್ಚಿಸಿದೊಡುಜ್ವಳಿಸುತ್ತುಮವಿರ್ದವಾಕ್ಷಣಂ೧೯

ಅಮರಕುಮಾರಿಕಾ ತರಳಲೋಚನ ಪ್ರತಿಬಿಂಬ ದಂಭದಿಂ
ದಮೆ ಧರಣೀಮಹಾರಮಣಿ ತನ್ನಯ ವಲ್ಲಭನಂ ನಿರೀಕ್ಷಿಪು
ದ್ಯಮದೊಳಮಂದು ಕಣ್ದೆಱೆದಳೆಂಬವೊಲೊಪ್ಪಮನಾಳ್ದುದಾ ಮಹೀ
ರಮಣನ ಮಂದಿರಾಂಗಣದ ರತ್ನವಿನಿರ್ಮಿತಭೂಮಿಮಂಡಳಂ       ೨೦

ವ : ಮತ್ತಮಾ ಜಿನರಾಜನ ಜನನಸಮಯದಲ್ಲಿ ರಾಜರಾಜಂ ಬಂದು ರತ್ನಪುರದ ತಾಣದೊಳೆಲ್ಲಿಯುಂ ಮಾಣಿಕದ ಮಳೆಯಂ ಕಱೆಯುತ್ತುಮಿರೆ ಕಡುನಿಮಿರ್ದ ಪರಕಲಿಸಿ ಪೊಳೆವ ಕಿರಣಮನುಗುಳ್ವ ಮಣಿಗಳನೊಳಕೊಂಡ ಧರಣೀವಳಯಮಗಸ್ತ್ಯನಾಪೋಶನಂಗೊಂಡು ನೀರಿಂಗಿದ ರತ್ನಾಕರಮೆಂಬಂತೆ ಕಣ್ಗಿಂಬನಜನಿಸುತ್ತುಮಿರ್ದುದು ಬಳಿಯಂ ಪೊಮ್ಮಳೆಯಂ ಕಱೆಯುತ್ತುಮಿರಲಾ ವಿಶ್ವಂಭರೆ ಸುವರ್ಣಮನೊಳಕೊಂಡ ಕಾರಣಂ ಕ್ಷತ್ರಿಯಕುಲದಂತೆ ಪರಿವರ್ಣ್ಯಮಾನಮಾದುದು ಅನಂತರಮಲರ್ವಳೆಯಂ ಕಱೆಯುತ್ತುಮಿರಲಾ ನೆಲನೆಲ್ಲಂ ಸುಮನಃಪ್ರಸರ ದಿನೆಸೆವ ನಿಮಿತ್ತಂ ಸಜ್ಜನರ ಸಮೂಹದಂತೆ ಸಂಸೇವ್ಯಮಾನಮಾದುದು ತನದಂತರ ಮೊರ್ಮೊದಲೊಳೆಯ್ದೆ ದೇವದುಂದುಭಿಗಳ್ ಮೊಗಳುತ್ತುಮಿರಲಾ ಮಹೀತಳಮ ಪರಿಮಿತ ಶಬ್ದಸಂದರ್ಭದಿಂ ತುಂಬಿ ತುಳುಂಕಾಡುತ್ತುಮಿರ್ಪ ನಿಬಂಧನದಿಂ ಶಬ್ದಾದ್ವೈತವಾದದಂತೆ ರವಿಕಲ್ಪಶಬ್ದಮಯಮಾಗಿರ್ದುದು ಮತ್ತೆ ಕುಳಿರ್ವೆಲರೆಲ್ಲೆಡೆಯೊಳಂ ಮೆಲ್ಲಮೆಲ್ಲನೆ ತೀಡುತ್ತುಮಿರಲಾ ಧರಿತ್ರೀಚಕ್ರಂ ಸುಖ ಸ್ಪರ್ಶನಸಂಬಂಧಮನೊಳಕೊಂಡು ದಱಿಂದಬಳಾಲಿಂಗಿತ ಕಾಮುಕನಂತೆ ಸುಖದ ಸೊಕ್ಕಿಂದುರ್ಕುತ್ತುಮಿರ್ದುದಿಂತು ಪಂಚಾಶ್ಚರ್ಯಮಂ ಪ್ರಪಂಚಿಸುತ್ತುಮಿರೆ

ಜಿನಪೂಜೋತ್ಸಾಹಕೋಳಾಹಳಮಮಮ ಮಹಾಪತ್ತನಸ್ಥಾನದೊಳ್ ತೆ
ಕ್ಕನೆ ತೀವಿರ್ದೆಲ್ಲಿಯುಂ ದಲ್ ಕುಡಿಯಡರಿ ನಿಮಿರ್ದೆಯ್ದೆ ತಾಂ ಪರ್ವಿ ಮತ್ತಂ
ವಿನುತೋದ್ಯನ್ಮೂರ್ತಿಯಂ ಕೊಂಡೊಸೆದು ನೆಲಸಿ ನಿತ್ಯತ್ವಮಂ ತಾಳ್ದಿದತ್ತೆಂ
ಬಿನಮತ್ಯಾಶ್ಚರ್ಯಮಂ ಪುಟ್ಟಿಸಿದುದು ಪಿರಿದುಂ ಕಣ್ಗಳಿಂಗಂ ಮನಕ್ಕಂ      ೨೧

ಲೋಕತ್ರಯಕ್ಕೆ ಭೂಷಣ
ದಾಕಳನಮನಾಂತನರ್ಘ್ಯಜಿನಪತಿರತ್ನಮ
ದೇಕಂ ಪುಟ್ಟಿದ ಕಾರಣ
ಮಾ ಕಾಲಂ ರತ್ನಪುರಮದಾದುದು ಸಾರ್ಥಂ    ೨೨

ವ : ಅನ್ನೆಗಮಿತ್ತಲರ್ಥಾರ್ಥಿಯಪ್ಪನೊರ್ವಂ ಮೊಟ್ಟಮೊದಲೊಳ್ ಬೇಗದಿಂ ಪೋಗಿಯರ ಸಂಗೆ ಜಿನಜನ್ಮೋತ್ಸಾಹ ಪ್ರಥಮವಾರ್ತೆಯಂ ಪೇಳಲಬಳಾಹರ್ಷೋತ್ಕರ್ಷ ದಿಂದುರ್ಲಲಿತಗಾತ್ರನಾಗಿ ಮತ್ತಮೆಲ್ಲಾ ಭೂವಲ್ಲಭರ ಮೌಳಿಗಳಲ್ಲಿ ಚೂಡಾಮಣಿಯಂ ತೊಪ್ಪುತ್ತುಮಿರ್ಪ ಜ್ಞಾನಮುದ್ರೆಯೊಂದಲ್ಲದೆಲ್ಲಾ ವಸ್ತುಗಳನಂಗಚಿತ್ತಮಂ ಕೊಟ್ಟು ಬಹಳಮಪ್ಪೈಶ್ವರ್ಯದಿಂ ತನ್ನಯ ಸಮಾನನಾಗಿ ಮಾಡಿ ಬಳಿಯಂ ಪುರದೊಳರ ಮನೆಯೊಳಮಗ್ಗಳಮಾಗಿ ಪಿರಿದು ಜನ್ಮೋತ್ಸಾಹಮಂ ಕೊಂಡಾಡಲ್ವೇಳ್ವುದುಂ

ಕುಡಿಗಳ್ ಕಟ್ಟಿದವೆಲ್ಲಿಯುಂ ಮಣಿಮಯೋದ್ಯತ್ತೋರಣಶ್ರೇಣಿಗಳ್
ಬಿಡದೆತ್ತಿರ್ದವು ಬೀದಿಬೀದಿಗಳೊಳಂ ರಂಗಾವಳೀಪಂತಿಗಳ್
ನಡುವಿಕ್ಕಿರ್ದವು ಕೂಡೆ ಬದ್ದವಣಮುಂ ಭೋರೆಂದು ದಲ್ ಬಾಜಿಸಲ್
ಗಡಣಂಗೊಂಡೆಡೆಯಾಡುತಿರ್ದದದಱೊಳ್ ಶೃಂಗಾರಿತಸ್ತ್ರೀಜನಂ  ೨೩

ಒಂದೆಡೆಯಲ್ಲಿ ಪಾಠಕಜನಂ ಬಿಡದೋದುವ ಗದ್ಯಪದ್ಯಸಂ
ನಂದಿತ ಮಂಗಳಧ್ವನಿಗಳುಂ ದಲದೊಂದೆಡೆಯಲ್ಲಿ ಯೋಗ್ಯರುಂ
ಗೊಂದಣಿಸಿರ್ದು ಘೋಷಿಸುವ ಮಂತ್ರನಿನಾದಮುಮೆಯ್ದೆ ಪೆರ್ಚಿ ಭೋ
ರೆಂದುಲಿಯಲ್ಕದಾಯ್ತು ಕರೆವಂತಿರೆ ತಾಂ ತ್ರಿಜಗತ್ಪುರಂಗಳಂ       ೨೪

ಗಗನಮನೆಯ್ದೆ ಚುಂಬಿಸುತುಮಿರ್ದ ಲಸದ್ಧ್ವಜಚೂಳಿಕಾಪಟಾ
ಳಿಗಳಿನತೀವ ಪಲ್ಲವಿತಮಾಗೆಸೆವಾ ಪುರದಲ್ಲಿ ಭಾಸ್ಕರಂ
ಸೊಗಯಿಪ ತನ್ನ ಪಾದಮುಮನಿಕ್ಕಿದುದಿಲ್ಲ ಸುಚಂದನಾಂಬುವಂ
ಮಿಗೆ ತಳೆಯಲ್ ದಲಾದ ಕೆಸಱಿಂಗಿರದಂಜಿದನೆಂಬ ಮಾಳ್ಕೆಯಿಂ    ೨೫

ಪಳಿಕಿಂ ಸಮೆದ ಸುಸೌಧಂ
ಗಳೊಳಂ ಮಾರ್ಪೊಳೆದ ಧವಳಕೇತುಪಟಂಗಳ್
ತಳೆದುವು ಚೆಲ್ವಂ ರಜತಾ
ಚಳದೊಳ್ ಮಿಗೆ ಪೊಳೆವ ಬಳಿಯ ಮುಗಿಲೆಂಬಿನೆಗಂ       ೨೬

ಮನೆಮನೆತಪ್ಪದೆಲ್ಲೆಡೆಯೊಳಂ ವಿವಿಧಾತತವಾದ್ಯನಾದಮುಂ
ಘನಲಯ ತಾಳನಾದದೊಡಗೂಡಿದ ಮಂಗಳಗೀತನಾದಮುಂ
ಮನಮನಲರ್ಚಲುಣ್ಮೆ ನೆಱೆಪೊಣ್ಮಿ ವಿಭಾಷಿತವಾರನಾರಿಯರ್
ವಿನುತಮೆನಿಪ್ಪ ನೃತ್ಯಮನೊಡರ್ಚಿ ದಲಾಡುತುಮಿರ್ದರರ್ಥಿಯಿಂ  ೨೭

ಸಂದಣಿಸಿ ಕುಣಿವ ಲಲನಾ
ವೃಂದ ಪ್ರತಿಬಿಂಬಮೆಲ್ಲಿಯುಂ ಪೊಳೆಯಲ್ಕಾ
ನಂದದಿನನೇಕರೂಪಿನೊ
ಳೊಂದಿ ಪುರೀಲಕ್ಷ್ಮಿ ಕುಣಿವವೊಲ್ ಕಣ್ಗೆಸೆಗುಂ  ೨೮

ವ : ಅದಲ್ಲದೆಯುಂ

ಎಮ್ಮಯ ವಲ್ಲಭರ್ ತ್ರಿದಿವದಿಂದಿರದೀಗಳೆ ಬಂದು ಪೆರ್ಮೆ ಮ
ತ್ತಿಮ್ಮಡಿಯಾಗೆ ಕೂಡಿದಪರೆಂದು ವಿಶೇಷಿತಪುಣ್ಯತೀರ್ಥದೊಳ್
ಸಮ್ಮದದಿಂದೆ ಮಿಂದವೆನೆ ದಿಕ್ಕುಗಳೆಲ್ಲಮತಿಪ್ರಸನ್ನತಾ
ಧರ್ಮಿಗಳಾಗಿ ನಿರ್ಮಳತೆಯಂ ಪಡೆದೊಪ್ಪುತುಮಿರ್ದವಾಕ್ಷಣಂ      ೨೯

ನೀರಜಮಾಯ್ತು ಭೂಮಿ ಸುಜನೋತ್ಕರದಂತೆ ಸರೋವರಂಗಳುಂ
ಸಾರತೆವೆತ್ತು ಕೂಡೆ ತಿಳಿದಿರ್ದುವು ಲಾಲಿತಸನ್ಮಂಗಳಂ
ತಾರಯೆ ವಹ್ನಿ ದಕ್ಷಿಣದೊಳಂ ಸುಳಿದಿರ್ದುದು ಪಾಂಚಜನ್ಯದಂ
ತಾ ರಮಣೀಯವಾಯ್ತು ಸುರಭಿತ್ವಮನಾಂತುದು ಧೇನುವೆಂಬಿನಂ            ೩೦

ನಿರ್ಮಳಮಾದುದು ಗಗನಮ
ದೊರ್ಮೊದಲೊಳಮಿಂದುಕಾಂತಶಿಲೆಯಂತೆ ಕರಂ
ಪೆರ್ಮೆಯ ಪಂಚವಿಭೂತಿಗ
ಳಂ ಮಿಗೆ ತಾಳ್ದಿದವು ಪಂಚಭೂತಂಗಳವುಂ      ೩೧

ವ : ತನದನಂತರಂ

ಚಿರಕಾಲದೆ ಸೆಱೆಯೊಳಗಿ
ರ್ದರಿರಾಯರ್ ಮುಖ್ಯರಾದ ಸೆಱೆಯೆಲ್ಲಮುಮಂ
ನರಪಂ ಬಿಡಿಸಿದೊಡಾಗಳ್
ಪರೆದುದು ಮಿಗೆ ಮೆಲ್ಲಮೆಲ್ಲನಡಿಯನಿಡುತ್ತುಂ          ೩೨

ಎಲ್ಲಾ ಪ್ರಜೆಗಳ್ಗಂ ತ
ಳ್ವಿಲ್ಲದೆ ಸಂಪತ್ತಿಯುಂ ಮಹಾರೋಗ್ಯಮುಮಾ
ಯ್ತಲ್ಲಿ ಜಿನಜನನಸಮಯದೊ
ಳೆಲ್ಲಂ ಸುಖಕಾರಣಂ ದಲಾಗದುದುಂಟೇ        ೩೩

ವ : ಇಂತು ಸಕಳಜನಮನೋನಯನ ಸಮಾಕರ್ಷಣ ವಿದ್ಯಾದೇವತೆಯಂತೆ ಹೃದ್ಯಮಯ ಮಾಗಿರ್ಪುದುಂ

ಪಿರಿದಾದುತ್ಸವರಾಶಿಯ
ನರವಿಂದಜನಲ್ಲಿ ಬೈಕೆಯಾಗಿರಿಸಿದವೊಲ್
ಪುರಮದು ನಿರವಧಿ ನಿರುಪಮ
ಪರಮೋತ್ಸವಭರಿತಮಾಗಿ ಪಡೆದುದು ಚೆಲ್ವಂ೩೪

ವ : ಮತ್ತಂ ದೇವಾಧಿದೇವನ ಜನನಮಂ ಚತುರ್ವಿಧದೇವರ್ಕಳೆಲ್ಲಮಱಿ ವಂತಿರಾ ಮಹಾಮಹಿಮನ ನಿರತಿಶಯಸುಕೃತಮೆಂಬ ದೂತಂ ಪೋಗಿ ತನ್ನಿವಾಸ ದೊಳಸಾಧಾರಣ ಲಕ್ಷಣಮಂ ಪ್ರೇರಿಸಿದನೆಂಬಂತಿರಿಂತಪ್ಪ ಚಿಹ್ನಂಗಳೊಗೆದವ ವೆಂತೆಂದೊಡೆ

ಭವನಾಮರ ಲೋಕದೊಳೂ
ದುವರನಪೇಕ್ಷಿಸದೆ ಶಂಖನಿನದಂ ದಶದಿ
ಗ್ವರವನ್ನಾವರಿಸಿತ್ತಭಿ
ನವಪುಣ್ಯನ ಜನಿಯನಱಿದರವರದಱಿಂದಂ     ೩೫

ವ್ಯಂತರಲೋಕದೊಳಂ ಕರ
ಸಂತಾಡನರಹಿತಮಾಗಿ ಡಿಂಡಿಮರವಮಾ
ಶಾಂತದೊಳೆಲ್ಲೆಡೆಯೊಳಮೋ
ರಂತಿರೆ ಪರಕಲಿಸಲಱಿದರವರದಱಿಂದಂ         ೩೬

ಜ್ಯೋತಿರ್ಲೋಕದೊಳಂ ಸಲೆ
ಸಾತಿಶಯಂಬಡೆದುದುಚ್ಚಸಿಂಹನಿನಾದಂ
ಘಾತಗುಣನಿಳಯನುದಯಮ
ನೀತೆಱದಿಂದಱಿದರಾಗಳಾ ಜ್ಯೋತಿಷ್ಕರ್        ೩೭

ಕಲ್ಪಾವಾಸಿಗಲೋಕದೊ
ಳಲ್ಪತರವವಾ ಸುವರ್ಣಘಂಟಾಜಾಳಂ
ಶಿಲ್ಪಿಕರಸ್ಪರ್ಶನ ಪರಿ
ಕಲ್ಪನಮಿಲ್ಲದೆಯುಮುಲಿಯಲದಱಿಂದಱಿದರ್         ೩೮

ವ : ಇಂತೀ ತೆಱದ ಕುಱುಪುಗಳಿಂ ನಾಲ್ಕುಪರಿಯಾದ ದೇವರ್ಕಳೆಲ್ಲಂ ಧರ್ಮ ಜಿನನಾಥನುತ್ಪತ್ತಿಯನೊರ್ಮೊದಲೆಯಱಿತತೀವ ಭಕ್ತಿಭಾರಭರದಿಂದೆಂ ಬಂತಿರವನತ ಮಸ್ತಕರಾಗಿ ಕೈಗಳಂ ಮುಗಿದಾನಂದದೊಳೊಂದಿರ್ಪುದುಂ ಬಳಿಯಂ ಸೌಧರ್ಮಕಲ್ಪದ ಸುಧರ್ಮಾಪರಿಸರದೊಳ್

ಸುರರೊಲವಿಂ ಸುರಿಯದೊಡಂ
ಪಿರಿದಾಗಿಯೆ ಕೊಳ್ವ ಚೆಲ್ವ ಪೂಮಳೆಯಂ ಕಂ
ಡರಿದಪ್ಪ ಮೈಮೆಗಂದ
ಚ್ಚರಿವಟ್ಟುದು ಶಕ್ರಮುಖ್ಯದೇವಸಮೂಹಂ   ೩೯

ವ : ತದನಂತರಂ

ಉದಯಿಸೆ ಮೂಜಗಕ್ಕೊಡೆಯನುಂ ಪರಮಾತಿಶಯಪ್ರಭಾವ ಸಂ
ಪದನುಮೆನಿಪ್ಪ ಧರ್ಮಜಿನಪಂ ಸಲೆ ಮತ್ತುಳಿದನ್ಯರಿಂಗದೇ
ಕೊದವಿದ[ಡಿದ್ಧತಾ] ಮದ ವಿಡಂಬನಮೆಂತು ತದೀಯಶಕ್ತಿ ಬಂ
ದೊದೆದವೊಲಾಕ್ಷಣಂ ನಡುಗಿದತ್ತು ಸುರಾಧಿಪಸಿಂಹವಿಷ್ಟರಂ       ೪೦

ನಿಜಸಿಂಹಾಸನಕಂಪಕಾರಣಮುಮಂ ಸಾಹಸ್ರನೇತ್ರಂಗಳ
ವ್ರಜದಿಂ ಕಾಣದೆ ವಿಸ್ಮಯಾಕುಳಿತನಾಗುತ್ತಾವಧಿಜ್ಞಾನಮೆಂ
ಬ ಜನಸ್ತುತ್ಯವಿನೇತ್ರಮಂ ತೆಱೆದು ಕಂಡಂ ವ್ಯಕ್ತಮಾಗಂದು ಧ
ರ್ಮಜಿನಾಧೀಶ ಸಮುದ್ಭವಸ್ಥಿತಿಯನಾ ದೇವೇಂದ್ರನಾನಾಂದದಿಂ  ೪೧

ವ : ಅದಱಿಂ ಪದಿನಯ್ದನೆಯ ತೀರ್ಥಂಕರನುದಯಮನತಿವಿಸ್ತಾರದಿಂದಱಿದು ಬೇಗದಿಂ ಸಿಂಹಾಸನದಿಂದೆಳ್ದು ಕೈಗಳಂ ಮುಗಿದು ನೊಸಲ್ಗೆತಂದಾ ದಿಕ್ಕಿಂಗಭಿಮುಖನಾಗಿ

ಏಳಡಿಯಂ ನಡೆದತ್ತಲ್
ಮೇಲೆನೆ ಜಯಜಯನಿನಾದಮಂ ಮಾಡುತ್ತುಂ
ಲೀಲೆಯಿನೆಱಗಿದನಿಂದ್ರಂ
ಪಾಲಿತಘನಭಕ್ತಿಭಾರದಿಂದೆಂಬಿನೆಗಂ   ೪೨

ವ : ಮತ್ತಂ

ಜನ್ಮಾಭಿಷೇಕಮಂ ಮಿಗೆ
ಮನ್ಮಥಹರಣಂಗೆ ಮಾಳ್ಪ ಬಗೆಯಿಂದಂ ದಿವಿ
ಷನ್ಮಂಡಳಮಱಿವಂತಿರೆ
ಸನ್ಮಣಿಯಾನಂದಭೇರಿಯಂ ಪೊಯ್ಯಿಸಿದಂ      ೪೩

ಆ ಭೇರೀನಾದಮಾದಂ ಸಕಳಸುರವಿಮಾನಪ್ರತಾನೋರುರಂಧ್ರಾ
ಳೀ ಭೋಗಾಭೋಗದೊಳ್ ತೆಕ್ಕನೆ ಭರವಸದಿಂ ತೀವಿ ಪೆರ್ಚಿದುದೆತ್ತಂ
ಶೋಭಾವದ್ದೇವವೃಂದಂಗಳನುಱೆ ಕರೆಯಲ್ಕೆಂಬವೊಲ್ ಬೇಗದಿಂದೆ
ಸ್ವರ್ಭೂಮಿಸ್ಥಾನದೊಳ್ ವ್ಯಾಪಿಸಿದುದು ಪಿರಿದಾಶ್ಚರ್ಯಮಂ ಪುಟ್ಟಿಸುತ್ತುಂ         ೪೪

ವ : ಅನಂತರಂ ಭವನಾಮರಲೋಕದಿಂ ಚಮರವೈರೋಚನ ಪ್ರಮುಖ ಚತ್ವಾರಿಂಶದಿಂದ್ರರ್ ಮುಖ್ಯಮಾದ ಭವನವಾಸಿದೇವರ್ಕಳೆಲ್ಲಂ ವ್ಯಂತರಲೋಕದಿಂ ಸತ್ಪುರುಷ ಮಹಾಪುರುಷ ಪುರಸ್ಸರ ದ್ವಾತ್ರಿಂಶದಿಂದ್ರರಾದಿಯಾದ ವ್ಯಂತರದೇವರ್ಕಳೆಲ್ಲಂ ಜ್ಯೋತಿರ್ಲೋಕದಿಂ ಚಂದ್ರಸೂರ್ಯರ್ಮುಖರಾದ ಜ್ಯೋತಿಷ್ಯದೇವರ್ಕಳೆಲ್ಲಂ ಕಲ್ಪಾಮರ ಲೋಕಂಗಳಿಂದೀ ಸನತ್ಕುಮಾರ ಮಾಹೇಂದ್ರಪ್ರಭೃತಿ ಚತುರ್ವಿಂಶತೀಂದ್ರರ್ ಮುಂತಾದ ಕಲ್ಪವಾಸಿ ದೇವರ್ಕಳೆಲ್ಲಂ ನಿಜನಿಜದೇವಿಯರೊಡಗೂಡಿ ಮಣಿಮಯ ಷೋಡಶಾಭರಣ ಪರಿಭೂಷಿತ ದಿವ್ಯದೇಹರಾಗಿ ಸಾಮಾನಿಕತ್ರಯಸ್ತ್ರಿಂಶದಾತ್ಮ ರಕ್ಷಲೋಕಪಾಳಕ ಪ್ರಕೀರ್ಣಕಾಭಿಯೋಗ್ಯ ಕಿಲ್ಬಿಷದೇವಪ್ರಮುಖ ಪರಿವಾರ ಸೇನಾಸಮೂಹಂಬೆರಸು ತಂತಮ್ಮ ವಾಹನಂಗಳನೇಱಿ ಮನೋವೇಗದಿಂದೆಯ್ದಿಬಂದು ಸೌಧರ್ಮೆಂದ್ರನರುತುವಿಮಾನದ ಮುಂದೆ ಸಂದಣಿಸಿ ಗೊಂದಣಂಗೊಂಡು ನಿಂದಿರ್ಪುದುಂ

ದಶದಿಕ್ಪಾಲಕರೆಯ್ದಿದ
ರೊಸೆದು ಸ್ವಾಯುಧವಧೂಸುಚಿಹ್ನಸಮೇತರ್
ಮಿಸುಪ ಪರಿವಾರಮುಂ ಬೆರ
ಸೆಸೆವ ಸ್ವಸ್ವೋರುವಾಹನಾರೂಢರ್ ತಾಂ      ೪೫

ವ : ಅಂತವಿಲಂಬನದಿಂ ನೆರೆದು ಬಂದ ನಿರವಶೇಷಿತಾಂಬರಚರ ಚಮೂ ವಿಚಿತ್ರ ಶೋಭಾಡಂಬರ ಕರಂಬಿತ ವಿಮಾನ ನಿಕುರುಂಬಂಗಳ ಪಂತಿಗಳ್ ತಿಂತಿಣಿಗೊಂಡೊಂದೆ ತಾಣದೊಳ್ ನಿಲಲಂದು ಧರ್ಮಜಿನನಾಥನ ಜನ್ಮಾಭಿಷವಣಕಲ್ಯಾಣ ಕರಣಕಾರಣಂ ನಿರ್ಯಾಣರಣರಣಕ ಪರಿಕಳಿತನಾದ ಗೀರ್ವಾಣರಮಣನ ಪೊಱ ವೀಡೆಂಬಂತೆ ಕಣ್ಗೊಂಡಿಪ್ಪುದುಂ

ಪಿರಿದುಂ ತೋರಿದವಾದ ರತ್ನಮಯಘಂಟಾಚಕ್ರವಾಳಂಗಳಿಂ
ವರಮುಕ್ತಾಮಯಮಾಲಿಕಾವಿಸರ ನಾನಾಚಿತ್ರಲಂಬಂಗಳಿಂ
ಪರಿತಪ್ತೋತ್ತಮ ಹೇಮಕಿಂಕಿಣಿಗಳಿಂ ಸದ್ಘಂಟಿಕಾಪೇಟದಿಂ
ಕರಮೊಪ್ಪಂಬಡೆದಿರ್ದ ದೇವಗಜಮಾಗಳ್ ಬಂದುದಾನಂದದಿಂ      ೪೬

ವ : ಮತ್ತಮೈರಾವತಕ್ಕೆ ಮೂವತ್ತೆರಡು ಮೊಗಂಗಳಾ ಮೊಗಂಗಳೊಂದೊಂದ ಕ್ಕೆಂಟೆಂಟು ದಂತಂಗಳಾ ದಂತಂಗಳೊಂದೊಂದಱೊಳೊಂದೊಂದು ಸರೋವರಂಗಳಾ ಸರೋವರಂಗಳೊಂದೊಂದಱೊಳೊಂದೊಂದು ಪದ್ಮಿನೀವಲ್ಲಿಯಾ ಪದ್ಮಿನೀವಲ್ಲಿಯೊಂದೊಂದಱೊಳ್ ಮೂವತ್ತೆರಡು ವಿಕಚಕಮಳಂಗಳಾ ಕಮಳಂಗಳೊಂದೊಂದಕ್ಕೆ ಮೂವತ್ತೆರಡೆಸಳ್ಗಳಾ ಚೆಲ್ವೆಸಳ್ಗಳೊಂದೊಂದಱೊಳ್ ಮೂವತ್ತಿರ್ವರಮರಕುಮಾರಿಯರ್ ತಾಂಡವಾಡಂಬರಮಂ ವಿಡಂಬಿಸುತ್ತುಮಿರ್ಪರಿಂತು ವಿಗುರ್ವಣೆಯಗುರ್ವಿಂದುರ್ವಿ ಕೊರ್ವಿದೈರಾವಣ ಮಹಾವಾರಣಂ ಬಂದು ನಿಂದಿರ್ಪುದುಂ

ಧರಣೀಂದ್ರಶ್ರೇಣಿ ಮೇಗಣ್ಗಡರಿದ ತೆಱದಿಂ ಲಂಬಿಸುತ್ತಿರ್ದ ಮೂವ
ತ್ತೆರಡುಂ ಶುಂಡಾಲದಂಡಂಗಳನತಿಸಿತಮೇಘಂಗಳೊಡ್ಡೆಂಬಿನಂ ಪೀ
ವರಕಂಪೋತ್ಕರ್ಷತಾಳಂಗಳಿನುಱೆ ಗಗನಾಭಾಗಮಂ ತುಂಬಿಕೊಂಡಿ
ರ್ದುರು ಭಾಸ್ವತ್ಕಾಯದಿಂದದ್ಭುತಮನೊಡರಿಸಿತ್ತಭ್ರಮೂಜೀವಿತೇಶಂ      ೪೭

ವ : ಅನಂತರಂ

ಪಿರಿದುಮನರ್ಘ್ಯರತ್ನಮಯಷೋಡಶಭೂಷಣಮೆಲ್ಲಮಂ ಮಹಾ
ಕಿರಣಗಣಂಗಳಂ ಕೆದಱುತಿರ್ದುದನೊಯ್ಕನೆ ತೊಟ್ಟು ಚಿತ್ರಬಂ
ಧುರತರವಸ್ತ್ರಮಂ ಮುದದಿನುಟ್ಟು ಮಹಾಶಚಿಯುಂ ಸುರೇಂದ್ರನುಂ
ಸುರಕರಿಯಂತಿಕಕ್ಕೆ ನಡೆತಂದರತೀವ ವಿಚತ್ರವೇಷದಿಂ      ೪೮

ಸಾಸಿರಕಣ್ಗಳೆಲ್ಲಮುಮನೊರ್ಮೊದಲೊಳ್ ತೆಱೆದಾ ಪ್ರಭಾವಳಿಯಿಂ
ಲೇಸೆನೆ ಚಿತ್ರಿಪಂತೆ ಬಿಳಿಯಾನೆಯ ವಿಸ್ಮಯಕಾರಿರೂಪಮಂ
ವಾಸವನೆಯ್ದೆನೋಡಿ ತಲೆಯಂ ನೆಱೆತೂಗಿರದೇಱಿದಂ ಸಮು
ದ್ಭಾಸಿ ಸಿತಾತಪತ್ರತತಿಗಳ್ ಪುದಿಯಲ್ ನಭದಂತರಾಳಮಂ          ೪೯

ಮಣಿಮಯಪಾರಿಹಾರ್ಯರವ ಕಿಂಕಿಣಿ ಕಂಕಣಮುಖ್ಯಚಾರುಭೂ
ಷಣನಿನದಂಗಳುಣ್ಮಿ ನೆಱೆ ಪೊಣ್ಮಿರೆ ಕೋಮಳದೇಹಕಾಂತಿಗಳ್
ಕುಣಿದಡರ್ದೆಱಲಾಗಸಮುಮಂ ಮುದಮೇಱಿರೆ ಚಿತ್ತವೃತ್ತಿಯಿಂ
ಪ್ರಣುತೆ ಶಚೀಮಹಾಸತಿ ದಲೇಱಿದಳಂದು ಸುರೇಂದ್ರದಂತಿಯಂ   ೫೦

ವ : ಇಂತು ನಾನಾವಿಧ ಪರಿಲಂಬಮಾನಚಂಚಚ್ಚಾರುಚಾಮೀಕರ ಚಾಮರ ಸಂಚಯಂಗಳಿಂ ಪಲವುಂ ತೆಱದ ಪಲ್ಲವ ಸತ್ತಿಗೆಗಳ ಮೊತ್ತದಿಂದಳಂಕೃತಮಾ ದೈರಾವಣ ಮಹಾವಾರಣಮಂ ದೇವೇಂದ್ರನಿಂದ್ರಾಣಿ ಸಮೇತನಾಗಿ ಸಮಾರೋಹಣಂ ಗೆಯ್ದು ಸಿಂಧುರಸ್ಕಂಧದೊಳ್ ಕುಳ್ಳಿರ್ಪುದುಂ

ದಿವಿಜಗಜಂ ಜಳಜ್ಝಳಝಳೆಂದುರುಚಂಚಳಕರ್ಣಪಾಳಿಕಾ
ನಿವಹಮನೆಯ್ದೆ ಬೀಸೆ ಮದಗಂಡವಿಮಂಡಳಮಂಡಿತಾಳಿಗಳ್
ಜವದೊಳಮೆಳ್ದು ಮೇಗಡತಿರ್ದುದು ಕಣ್ಗೆಸೆದತ್ತು ಪಾಪದು
ರ್ಲವಮಿರದಂಜಿ ಜೈನಪಥವರ್ತಿಗಳಂ ನೆಱೆಬಿಟ್ಟು ಪೋಪವೊಲ್  ೫೧

ವ : ಇಂತು ಚತುರ್ನಿಕಾಯಾಮರೇಂದ್ರಪುರಸ್ಸರಂ ಸೌಧರ್ಮೇಂದ್ರತೀವ ರುಂದ್ರಲೀಲೆಯಿನಲ್ಲಿಂದಂ ತಳರ್ವುದುಂ

ನಾನಾಜಾತೀಯ ಗಂಭೀರ ಮಣಿಮಯಮಹಾತೂರ್ಯಸಂದೋಹಭೂರಿ
ಧ್ವಾನಂ ತಳ್ಪೊಯ್ಯೆ ದಿಗ್ಭಿತ್ತಿಗಳನಮಿತಸತ್ಕಾಹಳಾವತ್ಕಳಾಪ
ಸ್ವಾನಂ ಕೈಗಣ್ಮಿ ಪೊಣ್ಮುತ್ತಿರೆ ಜಯಜಯವೆಂಬುದ್ಘನಿರ್ಘೋಷಣಾಸಂ
ತಾನಂ ಭೋರೆಂದು ಪೆರ್ಚುತ್ತಿರೆ ಮಿಗೆ ನಡೆಗೊಂಡಂ ನಿಳಿಂಪಾಧಿರಾಜಂ         ೫೨

ಗಗನಂ ತೆಕ್ಕನೆ ತೀವೆ ಚಿತ್ರರುಚಿರಶ್ವೇತಾತಪತ್ರಂಗಳಿಂ
ಸೊಗಸಂ ಬೀಱುವ ರತ್ನದಂಡ ಚಮರೀಜಶ್ರೇಣಿ ಸಂಚಾರದಿಂ
ದೊರೆವುತ್ತಿರ್ದುರುಮಂದಗಂಧವಹನಿಂದಂ ಪೆರ್ಚಿ ತೀವ್ರಾನಿಳಂ
ಗಗನಂ ತಾಂ ತೆಱಪಿಲ್ಲಮೆಂಬ ತೆಱದಿಂ ಬಂದತ್ತದೊಂದೊಪ್ಪದಿಂ   ೫೩

ಬಾಳದ ಬೇರ್ಗಳಿಂ ಸಮೆದ ಬಾಳಮನೋಹರತಾಳವೃಂತಮಂ
ಲೀಲೆಯೊಳೊಪ್ಪದಿಂ ಪಿಡಿದ ದೇವವಿಳಾಸವತೀಜನಂಗಳಂ
ದೋಳಿಯೆ ನಿರ್ಜರಾಧಿಪತಿಯಿಕ್ಕೆಲದೊಳ್ ನಡೆತಂದರುತ್ಕಟಾ
ಕ್ಷಾಳಿಗಳಿಂ ಕರಂ ಧವಳಿಸಿತ್ತುಮಶೇಷದಿಗಂತರಾಳಮಂ      ೫೪

ವ : ಮತ್ತಂ ದೇವೀಜನಂ ದೇವಾಧಿಪನ ಸುತ್ತಲುಮತ್ಯುತ್ತಮ ವಿಳಾಸರಸಂ ತುಂಬಿ ತುಳ್ಕಾಡುತ್ತುಮಡಿಗಡಿಗಳನಿಡುವ ಪದಪದದೊಳ್ ಕೊರಳ್ಗಳೊಳಿಕ್ಕಿದ ಮಣಿಮಯ ತೋರಹಾರಭಾರಾಗ್ರಂಗಳ ಬಳಗಂ ತಂತಮ್ಮೊಳೊಂದೊಂದಱೊರ ಸೊರಸಿಂ ಪುಟ್ಟಿದ ಝಣಝಣ ಮೆಲ್ಲುಲಿಯಿಂ ವಾಚಾಳಿತಂಗಳಾದ ತೋರಬಟ್ಟ ಮೊಲೆಗಳ್ ತಮ್ಮೊಳೆಂದೊಂದು ಮುಟ್ಟಿ ಬಿಣ್ಪಿಂದಳ್ಳಾಡುತ್ತುಮಿರ್ದು ಸಮುಲ್ಲಾಸಿ ಲಾಸ್ಯರಸಪೇಶಲ ಕಾಂಸ್ಯತಾಳಲೀಲಾಸಮಾಶ್ರಿತಂಗಳಾದುವೆಂಬ ಶಂಕೆಯನಂಕುರಿಸು ತ್ತುಮಿರೆ ಮೊತ್ತಗೊಂಡು ಮೆಲ್ಲಮೆಲ್ಲನೆ ನಡೆವಾಗಳ್

ತೊಡಿಗೆಯ ತೋರಮುತ್ತುಗಳ ಮೊತ್ತಮೆ ತಾರೆಗಳಂತೆ ಕೂಡೆ ಸಂ
ಗಡಿಸಿರೆ ವಕ್ತ್ರಮಂಡಳಿಗಳುದ್ಘ ಕಳಾಧರಮಂಡಳಂಗಳಂ
ತೊಡರಿಸೆ ಚೆಲ್ವನೆಯ್ದೆ ದರಹಾಸವಿಳಾಸಮೆ ಚಂದ್ರಿಕೌಘಮಂ
ಬಿಡದುಱೆ ಪೆರ್ಚಿಸಲ್ ಪಗಲೊಳಂ ಪಡೆದತ್ತದು ರಾತ್ರಿಯಂದಮಂ೫೫

ಪಿರಿದುಂ ನಾಟ್ಯಮನಾಡುತಿರ್ದಮರನಾರೀರತ್ನಭೂಷಾವಳೀ
ಕಿರಣಂ ಚಂಚದಪಾಂಗಕಾಂತಿ ನಿಕುರುಂಬಂ ಕುಂತಳಚ್ಛಾಯೆಯಂ
ಭರದಿಂದಂ ಪುದಿದೆಯ್ದೆ ರಂಜಿಸುತುಮಿರ್ದತ್ತಾಕ್ಷಣಂ ಬಾಳಭಾ
ಸ್ಕರತೇಜಂ ಬೆಳುದಿಂಗಳುಂ ತಮಮುಮೊಂದಾಗಲ್ಲಿ ತೋರ್ಪಂದದಿಂ          ೫೬

ದಿವಿಜಸ್ತ್ರೀಯರದೊರ್ವರೊರ್ವರ ತನೂಸಂಘಟ್ಟದಿಂ ರತ್ನಹಾ
ರವರಂಗಳ್ ಪಱಿದೆಯ್ದೆ ಚಲ್ಲಿ ಪೊಳೆಯುತ್ತುಂ ವ್ಯೋಮದಿಂ ಬಿಳ್ದು ತಾಂ
ಕವಿಯುತ್ತಿರ್ದವು ತಾಳ್ದವಂದು ಸೊಗಸಂ ದೇವೇಭಪಾದಪ್ರಭಾ
ರವಶೋಚ್ಚೂರ್ಣಿತ ತಾರಕಾವಿತತಿಗಳ್ ವ್ಯೋಮಾಗ್ರದಿಂ ಬೀಳ್ವವೊಲ್      ೫೭

ಕಂಗಳ್ ಮೀಂಗಳ್ ಮೊಲೆಗಳ್
ತುಂಗ ರಥಾಂಗಂಗಳಾಗೆ ಲಾವಣ್ಯರಸಂ
ಪಿಂಗದಿರಲಪ್ಸರೋಗಣ
ಮಂ ಗೆಲೆವಂದಪ್ಸರೋಗಣಂ ರಂಜಿಸುಗುಂ      ೫೮

ರಂಭೆಯ ತೆಱದಿಂ ಚೆಲ್ವಂ
ರಂಭೆಕರಂ ತಳೆದಳಂದು ನೀಲಾವರಣೋ
ಜ್ಜೃಂಭದ್ವಿವರಾಂತರದೊಳೆ
ಶುಂಭನ್ಮೃದುಳೋರುದಂಡೆಯಪ್ಪುದಂದಂ      ೫೯

ವ : ಮತ್ತಂ ಮಾಲ್ಯಾಂಗಕಲ್ಪತರುಪರಿನಿ‌ಷ್ಪನ್ನಾನಲ್ಪತರಪುಷ್ಪಮಾಲಾವಳಿ ವಿಪುಳ ಫಳಸಂಕುಳಮಿಳಿತಮಣಿಮಯಪವಿತ್ರಪಾತ್ರಂಗಳಂ ಕರಂಗಳಿಂ ಪಿಡಿದುಕೊಂಡಿರ್ದ ಕಿಂಕರಸುರಚಕ್ರವಾಳಂ ಜನ್ಮಾಭಿಷವಣಕಲ್ಯಾಣಕೌತುಕಮಂ ನೋಡಲೆಂದು ಪಿಂದನೆ ಬರುತ್ತುಮಿರ್ದ ಕಲ್ಪವೃಕ್ಷನಂದನವನಮೆಂಬಂತೆ ಸುತ್ತಲುಂ ಕಿಕ್ಕಿಱಿಗಿಱಿದು ನಡೆಯೆ

ಅಲರ್ಗಳಮಳೆ ಕವಿತರಲಂ
ದೊಲಿದಿದಿರ್ಗೊಳಲೆಂದು ಪೋಪ ತುಂಬಿಗಳೆಂಬಂ
ತೆಲರಿಂದಳ್ಳಾಡುವ ಮಿಗೆ
ಪಳವಿಗೆಗಳ ನೀಲಘನಪಟಂಗಳ ಬಳಗಂ           ೬೦

ವ : ಆಗಳ್

ತರುಣರವಿನಿಕರಣಕಿರಣಂ
ಭರದಿಂದಂಬರಮನೆಯ್ದೆ ಬೆಳಗುವ ತೆಱದಿಂ
ಸುರಮಕುಟಾರುಣ ಮಣಿಗಳ
ಕರಮೊಂದಾಗಂದು ಬೆಳಗಿದತ್ತಂಬರಮಂ          ೬೧

ತಾರಾಪಥದೊಳ್ ದಿವಿಜರ್
ತಾರೆಗಳಂ ಕಂಡು ಪೋಪ ಗಜಘಟೆಗಾಳ ಪೂ
ತ್ಕಾರವಿನಿರ್ಗತ ಜಲಕಣ
ಸಾರಂಗಳಿವೆಂದು ಬಗೆದರತಿದೂರದೊಳಂ        ೬೨

ಒರ್ವೊರ್ವರಂಗಸಂಗದ
ಗುರ್ವಿಂದಂ ಪಱಿದು ಬಿಳ್ದ ಮುತ್ತುಗಳೆಲ್ಲಂ
ಕೊರ್ವಿರ್ದವೆಂದು ಬಗೆದರ್
ಗೀರ್ವಾಣರ್ ಮತ್ತೆ ಸನ್ನಿಧಿಸ್ಥಾನದೊಳಂ        ೬೩

ಹೂಹೂ ಹಾಹಾದಿ ಗಂಧರ್ವರ ಮೃದುತರ ಸಂಗೀತರಾಗಚ್ಛವಿ ಸಂ
ದೋಹಾಸಕ್ತಂ ಸುಧಾಸತಿಯ ಹರಿಣನದೊಂದು ಕ್ಷಣಂ ಕೂಡೆ ಚಿತ್ರೋ
ದ್ವಾಹಿ ಸ್ವರ್ಗಾನಕಂಗಳ್ ಮೊಳಗಲವಱ ನಾದಂಗಳಂ ಕೇಳ್ದು ಭೀತಿ
ಗ್ರಾಹಂ ತಾನತ್ತಲಿತ್ತಲ್ ಪರಿದುಱೆ ವಿಧುವಂ ಕಾಡುತಿರ್ದತ್ತದಾದಂ            ೬೪

ಸುರರ ವಿಚಿತ್ರಪತ್ರಚಯದಿಂದಮೆ ತುಂಬಿ ನಭೋಮಹೀರುಹಂ
ಸುರುಚಿರ ಶೋಣಕೇತುಪಟದಿಂದಮೆ ಪಲ್ಲವಿತಂ ದಲಾಯ್ತು ಬಂ
ಧುರ ಧವಳಾತಪತ್ರಗಣದಿಂದಮೆ ಪುಷ್ಪಿತಮಾಯ್ತು ರತ್ನವಿ
ಸ್ಫುರಿತ ವಿಮಾನದಿಂದೆ ಫಲಿತಂ ಬಿಡದಾಗೆಸೆದತ್ತದಾಕ್ಷಣಂ           ೬೫

ರವಿತುರಂಗಂಗಳುಂ ಯಮನ ಕೋಣನುಮೊಪ್ಪುವ ಚಂದ್ರಸಿಂಹಮುಂ
ಪವನನ ಪುಲ್ಲೆಯುಂ ನೆಱೆಯೆ ಬಿಟ್ಟು ಪರಸ್ಪರ ವೈರಭಾವಮಂ
ಜವದೊಳೆ ಬಂದವಂದು ನೆರೆದೆಲ್ಲವುಮೊಂದಿ ಜಿನೇಶಮಾರ್ಗಸಂ
ಭವಿಗಳದಾರೊ ಬಿಟ್ಟು ಕಳೆಯರ್ ಮನದಲ್ಲಿಯ ವೈರಭಾವಮಂ೬೬

ವ : ಈ ತೆಱದಿಂ ನಾಕಸೈನ್ಯಾನೀಕಮೆಲ್ಲಂ ಜ್ಯೋತಿರ್ಲೋಕಮನಾಕ್ರಮಿಸುತ್ತುಮಿರೆ

ಮಿಸುಪ ವಿಮಾನಸಂತತಿಗಳೆಂಬ ಮನೋಹರಕೂಟಕೋಟಿಯಿಂ
ದೆಸೆವ ನಭಸ್ಥಳೀನಗರಗೋಪುರದೊಳ್ ಪಳಿಕಿಂದೆ ಕೂಡಿ ನಿ
ರ್ಮಿಸಿದ ಪೊಸಂತಿಲೆಂಬ ಬಗೆಯಂ ಸುರರಿಂಗುಱೆ ಪುಟ್ಟಿಸುತ್ತು ಮಾ
ನಸದೊಳೆ ದೇವಗಂಗೆ ಸೆಱೆಗೊಂಡುದು ನೋಳ್ಪರ ಕಣ್ಗಳೆಲ್ಲಮಂ೬೭

ಅನಿಮೇಷದೃಷ್ಟಿವಿಷದು
ದ್ಘನತೆಯಿನುರುಗಗನಮೆಂಬ ಕಾಳೋರಗನಿಂ
ವಿನಿಮಿತ್ತ ಭೂರಿನಿರ್ಮೇ
ಳನ ಮೀನಸುರಜ್ಜುವೆಂಬಿನಂ ಕಣ್ಗೆಸೆಗುಂ        ೬೮

ಕರಿಘಟೆಯೊಡ್ಡುಗಳ್ ತರಣಿಮಂಡಳಸನ್ನಿಧಿಯೊಳ್ ಬರುತ್ತುಮಿ
ರ್ದುರುತರಗಂಡಮೂಲಮತಿತಾಪಮನಾಂತಿರೆ ಜಾಹ್ನವೀಜಲಾಂ
ತರದೊಳೆ ಪೊಕ್ಕು ಮುಕ್ಕುಳಿಸಿ ಪೂತ್ಕರಿಸಲ್ ನೆಗೆದಿರ್ದ ಸೀಕರೋ
ತ್ಕರಮೆಸೆದತ್ತು ತಚ್ಛ್ರವಣಚಂಚಳ ಚಾಮರಸಾರ್ಥದಂದದಿಂ        ೬೯

ವ : ಅಂತುಮಲ್ಲದೆಯುಂ

ಸುರಗಂಗಾತೀರದೊಳ್ ಭೂರಿತರಹರಿತಪತ್ರಂಗಳಿಂ ಚೆಲ್ವನಾಂತಿ
ರ್ದುರುಭಾಸ್ವದ್ಬಿಂಬಮಂ ಕಂಡಿದು ಲಸದರುಣಾಂಭೋಜಮೆಂದಾ ಸುರಾಧೀ
ಶ್ವರದಂತೀಂದ್ರ ಸ್ವಹಸ್ತಾಗ್ರದಿನುಱೆಪಿಡಿಯಲ್ಕುಷ್ಣದಿಂ ನೊಂದು ತಾಂ ಪೂ
ತ್ಕರಿಸುತ್ತುಂ ಬಿಟ್ಟು ಕೈಯಂ ಕೊಡಹಿಕೊಳತುಮಿರ್ದಲ್ಲಿಯಾದತ್ತು ಹಾಸ್ಯಂ           ೭೦