ಮನಸಿಜಮದಗಜದಂತದೊ
ಳನುನಯದಿಂ ಕೀರ್ತಿಮುಖಮನಿಕ್ಕುವ ತೆಱದಿ
ವನಿತೆಯ ಬಾಹುಗಳೊಳ್ ಮ
ತ್ತನುಪಮಮಣಿಬಾಹುವಳಯಮಂ ಕೀಲಿಸಿದಳ್            ೭೧

ಸಿರಿಸದ ಬಾಸಿಗಮಂ ವಧು
ಕರಮಾಳಿಕೆ ಬಳಸಿದಂತೆ ಮುಂಗೆಯ್ಗಳೊಳಂ
ಹರಿನೀಳದ ಕಂಕಣಮಂ
ವರಸತಿಗಿಕ್ಕಿದಳಮರ್ತ್ಯಸತಿ ಮತ್ತೊರ್ವಳ್       ೭೨

ಮರಕತಮಣಿಮುದ್ರಿಕೆಗಳ
ನರಸಿಯ ಕಡುಚೆಲ್ವ ಬೆರಳ್ಗಳಲ್ಲಿಕ್ಕಿದಳೊ
ಪ್ಪಿರೆ ದಿಗ್ವಿಜಯಾರ್ಥಂ ಶಂ
ಬರರಿಪುವ ಶರಲ್ಗಳಿಂಗೆ ಗಱಿಗಟ್ಟುವವೊಲ್   ೭೩

ಪೊಳೆವ ಕದಂಪಿನೊಳ್ ಮಕರಿಕಾದಿವಿಚಿತ್ರಿತ ಪತ್ರವಲ್ಲಿಯಂ
ವಿಳಸಿತಗಂಧಸಾರರಸದಿಂ ಬರೆದಳ್ ಸುರಕಾಂತೆಯೊರ್ವಳಂ
ದಳಿಕುಳನೀಳಕುಂತಳೆಯ ಭೂರಿವಿಳಾಸಸಮುದ್ರಗಾಧದೊಂ
ದಳವಿಯನೆಯ್ದೆ ಸಂಗಡಿಸಬಾರದುದಂ ನೆಱೆ ಪೇಳ್ವ ಮಾಳ್ಕೆಯಿಂ  ೭೪

ಚಿತ್ತಭವಂ ತನ್ನಾಜ್ಞೆಯ
ನೊತ್ತಮಿಸಲ್ ಬಾರದೆಂದು ಮುದ್ರೆಯನಿಟ್ಟಂ
ತುತ್ತುಮೆಯಾ ಮೂಗಿನೊಳ್ ಮಿಗೆ
ಮುತ್ತಿನ ಮೂಕುತಿಯನಿಕ್ಕಿದಳ್ ಕಡುನಲವಿಂ   ೭೫

ವ : ಮತ್ತೊರ್ವಳಮರಕನ್ನಿಕೆಯಾಕೆಯ ಕರ್ಣಪಾಲಿಕೆಗಳೊಳನೇಕವರ್ಣ ಪರಿವರ್ಣನೀಯಪರಾರ್ಥ್ಯರತ್ನಂಗಳಿಂ ಪರಭಾಗಂಬಡೆದ ಸುವರ್ಣಮಯ ಕರ್ಣಾ ಭರಣಂಗಳಂ ತೊಡಿಸಿ ನೋಡಿ

ಕಿವಿದೊಡವಿನ ಮಣಿಗಳು ಸು
ಚ್ಛವಿಗಲ್ಲದೊಳೆಯ್ದೆಪೊಳೆಯೆ ತಾಂಬೂಳರಸಂ
ಕವಿದಿರ್ದುದೆಂಬ ಬಗೆಯಿಂ
ದಿವಿಜಾಂಗನೆ ತೊಡೆದಳಂದು ತನ್ನಯ ಕರದಿಂ   ೭೬

ನಯನಂಗಳೊಳಂಜನಮಂ
ನಯದಿಂ ರಂಜಿಸಿದಳೊರ್ವಳಮರಾಂಗನೆಯತಿ
ಶಯಿತಮನೋಭವಶರಸಂ
ಚಯಮಂ ಕಪ್ಪಿಂದೆ ಬಚ್ಚಿಸುವ ತೆಱದಿಂದಂ     ೭೭

ವರಕಸ್ತೂರೀತಿಲಕಮ
ನರಸಿಯ ಕಡುಚೆಲ್ವನೊಸಲೊಳಿಟ್ಟಳ್ ಸುರಸೌಂ
ದರಿಯೊರ್ವಳ್ ನಗೆಮೊಗಮೆಂ
ಬುರುಚಂದ್ರಮನಲ್ಲಿ ಮೆಱೆವ ಕಱೆಯೆಂಬಿನೆಗಂ           ೭೮

ವ : ಆ ದೇವಿಗೆ ದೇವಕುಮಾರಿ ಮತ್ತೊರ್ವಳ್

ಕೂದಲನೆಯ್ದೆ ಪಿಕ್ಕಿ ಪುಡಿಗತ್ತುರಿಯಂ ತಳೆದಲ್ಲಿಗಲ್ಲಿಗಂ
ಮೇದಿನಿ ತೋರಮಾಗಿ ಮುಡಿಯಂ ಮುಡಿಸಿಟ್ಟಿದಱಲ್ಲಿ ಕಲ್ಪಭೂ
ಚೋದಿತಪುಷ್ಟಮಂ ಪಿಡಿದು ಸೂಡಲದಾಕ್ಷಣದಲ್ಲಿ ಕಣ್ಗೆ ಚೆ
ಲ್ವಾದುದು ತಾರಕಾಳಿ ಪುದಿದಿರ್ದ ನಭಸ್ಥಳಮೆಂಬವೊಲ್ ಕರಂ     ೭೯

ಪಿರಿದುಂ ಶ್ರೀಮಾಡಿದಳ್ ಸೌಖ್ಯಮನನವರತಂ ಭಾರತೀದೇವಿ ತನ್ನಾ
ದರದಿಂದಂ ಪ್ರೀತಿಯಂ ಪುಟ್ಟಿಸುವ ಬೆವಸೆಯಿಂದೆಯ್ದೆ ಮಾತಾಡಿದಳ್ ಬಂ
ಧುರರಾಗೋದ್ರೇಕಮಂ ಮಾಡಿದಳುಱೆ ಮತ್ತೆಲ್ಲರುಂ ಮಾಳ್ಪುದಂ ಬಿ
ತ್ತರದಿಂದಂ ಮಾಡುತಿರ್ದರ್ ಜಿನಜನನಿಗೆ ಸ್ಪರ್ಧೆಯಿಂದೆಂಬವೊಲ್‌ತಾಂ       ೮೦

ವ : ಅಂತುಮಲ್ಲದೆಯುಂ

ಶರದದ ಚಂದ್ರಮಂಡಳಮನೂನ ಕನತ್ಪರಿವೇಷಶೋಭೆಯಂ
ಧರಿಯಿಸಿತೆಂಬಿನಂ ಮೆಱೆವ ಪಲ್ಲವಸತಿಗೆಯಂ ಸಮುಜ್ವಳೋ
ದ್ಧುರತರನೂತ್ನರತ್ನಮಯದಂಡವಿಮಂಡಿತಮಂ ಸುರೇಂದ್ರಸೌಂ
ದರಿ ಪಿಡಿದಿರ್ದಳೊರ್ವಳುಱೆ ಪಟ್ಟದ ರಾಣಿಗೆ ಮುಟ್ಟಿದರ್ಥಿಯಿಂ  ೮೧

ಅಮರಕುಮಾರಿಯರಾ ಭೂ
ರಮಣನ ವಲ್ಲಭೆಗೆ ಚಾಮರಂಗಳನತಿಸಂ
ಭ್ರಮದಿಂದಿಕ್ಕಿದರತ್ತು
ತ್ತಮಕಾಂಚನದಂಡಮಂಡಿತಂಗಳನಾಗಳ್         ೮೨

ವ : ಹಡಪಮಂ ಪಿಡಿದಿಪ್ಪ ನಿಯೋಗನಿಯುಕ್ತೆಯಪ್ಪ ಮತ್ತೊರ್ವಳ್

ಕಡುವೆಳಿದಾದ ತಂಬುಲದ ಚೆಲ್ವೆಲೆಯಂ ಮಡಿಸಾಳ್ಬೆರಳ್ಗಳಿಂ
ಪಿಡಿದು ಜಿನೇಶನಂಬಿಕೆಗೆ ನೀಡುತುಮಿರ್ದ ನಿಳಿಂಪಕಾಂತೆ ಸಂ
ಗಡಿಸಿದ ಪುಂಡರೀಕದಳಮಂ ಪಿಡಿದಂಬುಧಿಮಧ್ಯದಿಂದೆ ಮೇ
ಗಡರ್ವ ಸುಲಕ್ಷ್ಮಿಯಂತೆ ತಳೆದಳ್ ಸಲೆ ನೂರ್ಮಡಿಯಾದ ಗಾಡಿಯಂ           ೮೩

ದರದಳಿತಮಾದ ಹೊಂದಾ
ವರೆಯಲರಂ ಪಿಡಿದು ಮೆಱೆವ ಲಕ್ಷ್ಮಿಯ ತೆಱದಿಂ
ಸುರನಾರಿಯೊರ್ವಳಾ ಭೂ
ವರನಾರಿಗೆ ಹೊನ್ನ ಡವಕೆಯಂ ಪಿಡಿದಿರ್ದಳ್    ೮೪

ಲಾಲಿಪ ಪೇರಣೆಯೊಳ್ ಮಿಗೆ
ಮೇಲೆನಿಸುವ ಕುಶಲೆ ದಿವಿಜಸತಿ ಮತ್ತೊರ್ವಳ್
ಕಾಲೇ ನಾಲಗೆಯೆಂಬಂ
ತೋಲಗದೊಳ್ ಕುಣಿದು ದೇವಿಯಂ ಮೆಚ್ಚಿಸಿದಳ್        ೮೫

ವ : ಮತ್ತಂ ಭರತಶಾಸ್ತ್ರನಿರತೆಯರಪ್ಪ ಕೆಲಂಬರ್ ದೇವಿಯರ್ ಪಿರಿದಾಗಿ ರಾಗರಸಮಂ ತುಂಬಿ ತುಳ್ಕಾಡುತ್ತುಮಿರೆ ನಾಟ್ಯಮನೊಡ್ಡಯಿಸಿದಾಗಳ್

ಕಳೆಯಂ ನೂಂಕಿ ಸಮಾನದಂಡಿಗೆಗಳಂ ಪೊಯ್ದು ಶ್ರುತಿಸ್ಫೂರ್ತಿಯ
ಗ್ಗಳಮಂ ನೋಡಿ ಸಮಂತು ತಂತಿಯನದಂ ಸಂತೈಸಿ ಪೀನಸ್ತನಂ
ಗಳ ಮೇಲೊಯ್ಯನೆ ಸಾರ್ಚಿಕೊಂಡು ಸೊರೆಯಂ ಗಂಧರ್ವೆಯೊರ್ವಳ್ ಕರಾಂ
ಗುಳಿಯಿಂ ಬೀಣೆಯನೊಲ್ದು ಬಾಜಿಸಿದಳಾ ತನ್ವಂಗಿ ಮೆಚ್ಚಲ್ ಕರಂ           ೮೬

ಪಿರಿದುಂ ನುಣ್ಗೊರಳಿಂಮೊಂದಱೊಳನೇಕಚ್ಛಂದಮಂ ತೋಱಿ ಬಂ
ಧುರರಾಗಂಗಳನುನ್ನತಪ್ರಮದಿಂದಾಳಾಪನಂಗೆಯ್ದೆ ನಿ
ರ್ಜರ ಸೀಮಂತಿನಿಯೊರ್ವಳಾಕೆಯ ಗುಣಸ್ತೋತ್ರಂಕಗೀತಂಗಳಂ
ಭರದಿಂದ ನೆಱೆಪಾಡಿ ಮೆಚ್ಚಿಸಿದಳಾ ಭೂಪಾಳನರ್ಧಾಂಗಿಯಂ       ೮೭

ವ : ಮತ್ತಂ

ಧಿಂ ಧಿಂ ಧಿಮಿಕ್ಕು ಧಿಮಿಕೆಂ
ದಿಂದೀವರಲೋಲಲೋಚನೆಯ ಮುಂದೊಲವಿಂ
ವೃಂದಾರಕ ವಧುವೊರ್ವಳ್
ಕುಂದದ ಜಾಣಿಂದ ಮುರಜಮಂ ಬಾಜಿಸಿದಳ್   ೮೮

ರಂಭೆಯದೊರ್ವಳ್ ನಯದಿಂ
ದಂ ಭಾಮೆಯ ಮುಂದೆ ಚಂದ್ರಕಾಂತದ ಕಡುಪಿಂ
ಭೊಂ ಭೊಂ ಭೊಂ ಭೊಂಬೆಂಬೀ
ಶುಂಭಧ್ವನಿ ಪೊಣ್ಮೆ ಢಕ್ಕೆಯಂ ಬಾಜಿಸಿದಳ್    ೮೯

ಹೊನ್ನಿನ ಕಹಳೆಗಳಂ ಪೊಸ
ರನ್ನದ ವಾಸಂಗಳಂ ಸುಶಂಖಂಗಳುಮಂ
ಚೆನ್ನಿನ ಮೌರಿಗಳಂ ಸುರ
ಕನ್ನೆಯರೊರ್ವೊರ್ವರೂದಿದರ್ ಕಡುನಲವಿಂ   ೯೦

ದಿವಜಸ್ತ್ರೀಯೊರ್ವಳಾ ಪಟ್ಟದ ಯುವತಿಯ ಮುಂದಂದು ತನ್ನಂತರಂಗೋ
ತ್ಸವದಿಂದಂ ತಾಂಡವಾಡಂಬರಮನೊಡರಿಸಲ್ ಚಾರುಮಾಣಿಕ್ಯಭೂಷಾ
ರವಮುಂ ನಾನಾಸುತಾಳಧ್ವನಿಯುಮೊಡನೆ ಮೇಳೈಸಿ ಹಸ್ತಾಂಘ್ರಿಸಂಚಾ
ರವಮುಂ ಚೆಲ್ವಾಗೆ ದೇಹಪ್ರಭೆಯೊಡನೆ ದಲಾಡುತ್ತುಮಿರ್ದಳ್ ವಿಚಿತ್ರಂ      ೯೧

ಆವುದರ್ಪೂಮಾದುದು ದಲಾವುದು ಭಾವಿಪೊಡಿಷ್ಟಮಾದುದಂ
ತಾವುದು ಮೂಱುಲೋಕದೊಳಮುತ್ತಮಮಾದುದುಮಂತದೆಲ್ಲಮಂ
ದೇವಿಯರೊರ್ವರೊರ್ವರ ಮಹಾಕುಶಲತ್ವದ ವೃತ್ತಿಯಂ ಸಮಂ
ತಾವಗಮೆಯ್ದೆ ಮೀಱುವುದಱಿಂದೆನೆ ಮಾಡಿದರಂಬುಜಾಕ್ಷಿಗಂ      ೯೨

ಗದ್ದಿಗೆಯಿಕ್ಕು ನಂದೆ ಪಡಿಗಂಗೊಡು ಮಾಳಿನಿ ಕುಂಭದಲ್ಲಿ ಕಂ
ಪಿದ್ದ ಜಲಂಗಳಂ ವಿಜಯೆ ತೀವುಱೆ ಕಾಳ್ದೊಳೆ ವೈಜಯಂತಿ ನೀ
ನೆದ್ದು ಸುವರ್ಣಭಾಜನಮನಾಯಿತಮಾಗಿಡು ಸುಪ್ರಬುದ್ಧೆಯೆಂ
ದುದ್ದದೆ ಪೇಳ್ದು ಸಂಭ್ರಮಿಸಿದತ್ತೆಡೆಮಾಡುವ ಪೊತ್ತಿನೊಳ್ ಕರಂ೯೩

ಅನಿಮಿಷಕಾಂತೆಯರ್ ವರರಸಾಯನಸಾರದಿ ಚಾರುಗರ್ಭಶೋ
ಧನೆಯನೊಡರ್ಚಿ ದೇವಿಯ ಮನೋಹರಮೂರ್ತಿ ನಿರೀಕ್ಷಣಕ್ಕೆ ಪಾ
ವನಮೆನಿಸಿತ್ತು ಮತ್ತಮೃತವಾರಿಯ ಪೀವರಧಾರೆಯಿಂ ಪಳ
ಚ್ಚನೆ ತೊಳೆದಿರ್ದ ಪೊಚ್ಚ ಪೊಸಮುತ್ತಿನ ಪುತ್ಥಳಿಯೆಂಬ ಮಾಳ್ಕೆಯಿಂ        ೯೪

ವ : ಇಂತಾ ಜಿನಾಂಬಿಕೆಯಂ ಬಗೆಗೊಳಿಸಲೆಂದಾ ನಿಳಿಂಪವಿಳಾಸಿನಿಯರೀ ತೆಱದ ಬಾಹತ್ತರ ನಿಯೋಗಮುಖದಿಂದಾಕೆಗುಪಾಸನಂಗೆಯ್ವುತ್ತುಂ ಕೆಲವುದಿನಂಗಳ್ ಪೋದಿಂಬಳಿಯ ಮನಲ್ಪತರಭಾವಿಫಲ ಲಾಭಾರ್ಥಂ ಕಲ್ಪತರುಶಾಖೆ ಪುಷ್ಪವತಿಯಪ್ಪುದೆಂದಂತಾ ಸುವ್ರತಮಹಾದೇವಿಯುಂ ಧರ್ಮತೀರ್ಥಕರನೆಂಬ ಭವಿಷ್ಯಮಾಣ ವಿಶಿಷ್ಟೇಷ್ಟ ವಿಪುಳಫಳೋದಯಲಾಭಪ್ರಾಪ್ತಿನಿಮಿತ್ತಂ ಪುಷ್ಪವತಿಯಪ್ಪುದುಂ

ಸರಸಿಜವಕ್ತ್ರೆಗುತ್ಪಳದಳಾಯತನೇತ್ರೆಗೆ ಕುಂದಕುಟ್ಮಳೋ
ದ್ಧುರತರದಂತಪಂಕ್ತಿಕೆಗೆ ಚಂಪಕನಾಸಿಕೆಗುದ್ಘಪಾಟಳಾ
ನಳಿನಾಕ್ಷಿಗ ಋತುಸಮಯಂ
ತಲೆದೋಱಿದ ಪೊತ್ತಿನಲ್ಲಿದಾದುದು ಚಿಹ್ನಂ  ೯೬

ವ : ಮತ್ತಂ ಕಡೆಯಾಣಿಯ ಮಿಱುಗುವ ಮಿಸುನಿಯಂ ಸಮೆದ ಚೆಲುವ ಜಗಲಿಯ ಮೇಲೆ ಕುಳ್ಳಿರ್ದು ಬಾಲಕರ್ ಮೊದಲಾದಱಯದನ್ಯಜನಸಂಸ್ಪರ್ಶಪರಿ ಹರಣಾರ್ಥಂ ವಜ್ರಂಗಳಿಂ ಕೇವಣಿಸಿದ ಹೊನ್ನ ಸೆಳೆಯಂ ಪಿಡಿದು ಚಾಳನಂಗೆಯ್ವುತ್ತುಂ ಸುರಕುಮಾರಿಯರೊಡನೆ ಪ್ರಹೇಳಿಕಾವಿನೋದದಿಂ ಪೊತ್ತಂ ಕಳೆವುತ್ತುಮಿರ್ದು ಮೂಱು ದಿನಂಗಳ್ ಪೋಗಲೊಡಂ

ಋತುಸಮಯದೊಳೊಪ್ಪಿದಳಾ
ಸತಿ ಭರದಿಂದಂ ವಸಂತ ಋತುಸಮಯದೊಳೊಗೆ
ದತಿಕೋಮಳಲತೆಯಂತುಪ
ಗತವಿಭ್ರಮಿಕೆ ಪ್ರವಾಳವಿಳಸಿತೆ ಪಿರಿದುಂ           ೯೭

ವ : ಬಳಿಯಂ ನಾಲ್ಕನೆಯ ದಿವದೊಳ್ ಮಜ್ಜನಂಬುಗಿಸುವುಜ್ಜುಗಂ ಕೈಮಿಗಲಪ್ಸರಸೆಯರ್ ಕೊಪ್ಪರಿಗೆಗಳೊಳಮಳಜಳಂಗಳಂ ತುಂಬಿಯಗ್ನಿಸಂಧುಕ್ಷಣಂಗೆಯ್ಯೆ ಕಡುಗಾಯ್ದೂಷ್ಮಾಯ ಮಾಣಮಾದ ಜಳಂ ತೆರೆಮಸಗಿ ಕಟಾಹಕೋಟರಾಂತರಾಳದಿಂದುಕ್ಕಿ ಪೊಱಪೊಣ್ಮುತ್ತಿರೆ

ಶಂಬರವೈರಿಯ ಶರಗಳಿ
ವೆಂಬಂದದಿನೆಸೆವುತಿರ್ದ ಸುರನಾರಿಯರುಂ
ಶಂಬರಮಂ ಮಱುಗಿಸಿದರ್
ಸಂಬಂಧಿ ವಿರೋಧಿಗಳ್ಗೆ ಮುಳಿಯದರೊಳರೇ   ೯೮

ವ : ತದನಂತರಂ

ಕೆಮ್ಮೆಣ್ಣೆಯಿಂದೆ ಮಜ್ಜನ
ಮಂ ಮಾಡಿಸಿದರ್ ನಿಳಿಂಪಕಾಂತೆಯರೊಲವಿಂ
ದಂ ಮಿಗೆನೀರ್ದಳಿವಂತಿರೆ
ರಮ್ಯಾಳಕವಲ್ಲಿಗಮಿತನಖಕಾಂತಿಗಳಿಂ           ೯೯

ಪಿಕ್ಕಿದರಳಕಮನುಗುರ್ಗಳಿ
ನುಕ್ಕೆವದಿಂ ಚಂದ್ರಕಳೆಗಳಂ ರಾಹು ಕರಂ
ಮುಕ್ಕುಳಿಸುಗುಳುತುಮಿರ್ದಪು
ದಕ್ಕುಮಿದೆಂಬೊಂದು ಸಂಕೆಯಂ ಪುಟ್ಟಿಸುತುಂ೧೦೦

ವ : ಬಳಿಯಂ ಜಾಂಬೂನದಮಯಮಾದ ಸ್ನಾನಸ್ಥಾನದ ನಟ್ಟನಡುವೆ ಪೊಳೆಯುತ್ತುಮಿರ್ದ ಚಂದ್ರಕಾಂತ ಚತುರಾಘಾಟಪಟ್ಟಕದ ಮಧ್ಯದಲ್ಲಿ ಕುಳ್ಳಿರಿಸಿ

ಸ್ತನಕುಂಭಸ್ಥಳೆಯರ್ ಮದಾನ್ವಿತೆಯರತ್ಯಂತಾಲಸಾಯಾನೆಯರ್
ವಿನುತಾನಂಗಮಹೀಪದಂತಿನಿಗಳೆಂಬಂತಿರ್ದ ದೇವೇಂದ್ರನಂ
ಗನೆಯರ್ ಕೈಗಳಿನೆತ್ತಿಕೊಂಡು ಬಿಸಿನೀರಿಂ ತುಂಬಿರ್ದ ಸ್ವರ್ಣಪಾ
ವನಕುಂಭಂಗಳನಂತು ನೀರೆಱೆದರೆಂತು ಶ್ರೀಗಿಭಂಗಳ್ ಕರಂ           ೧೦೧

ಕಮಳಿನಿಯ ಮೇಲೆ ಪಿರಿದುಂ
ದ್ಯುಮಣಿಯ ಕಿರಣಂಗಳೆಱಗಿ ಸುರಿವಂತಿರೆ ಸ
ತ್ಕಮಳಾಕ್ಷಿಯ ಮೇಲೆಱಗಿದು
ದಮಳಿನ ಕಮಳಪ್ರವಾಹಮತಿಸಂಭ್ರಮದಿಂ       ೧೦೨

ಸಾರತೆ ಜಳದೊಳಮೊಪ್ಪುವ
ಧಾರೆಗಳೊಡಗೂಡಿ ಭುವನದೊಳ್ ಪೊಳವುದಱಿಂ
ದಾ ರಮಣಿ ಕಾಮದೇವನ
ಕೂರಸಿಯೆಂಬಿದನೆ ನಿಶ್ಚಯಂಗೆಯ್ದಳ್ ತಾಂ    ೧೦೩

ವ : ಆಗಳ್

ಭೂಷಣಮೆಲ್ಲಮಂ ತೆಗೆದು ನೈಜಸುರೂಪದೊಳಿರ್ದೊಡಂ ಮರು
ದ್ಯೋಷೆಯರೊಳ್ನೊಸಲ್ಗಳೊಳಮಂದು ಕೊರಲ್ಗಳೊಳಂ ಸಮಂತು ಸಂ
ಪೋಷಿಸಿದುದ್ಘಘರ್ಮಜಳಬಿಂದುಗಳಿಂದುಱೆ ಬೇಱದೊಂದು ವೈ
ಶೇಷಿತರೂಪಮಂ ತಳೆದು ಪುಟ್ಟಿಸಿದರ್ ನಯನಪ್ರಮೋದಮಂ      ೧೦೪

ವ : ಅಂತು ಚತುರ್ಥಸ್ನಾನವಿಧಾನಾನಂತರಂ ಶುದ್ಧೀಕೃತಶರೀರೆಯಾಗಲ್ಲಿಂ ಪೊಱಮಟ್ಟು ಶೃಂಗಾರಾಗಾರಕ್ಕೆ ಮೆಲ್ಲಮೆಲ್ಲನೆ ಬಿಜಯಂಗೆಯ್ವುದುಮಾಗಳಾ ತುಂಗಸ್ತನೆಯ ಮಂಗಳಮಾದಂಗಳದೊಳಂಗವಟ್ಟಮಂ ಸಂಗಡಿಸಿದಿಂಬಳಿಯಂ

ಬೆಳುದಿಂಗಳ ಧಾವಲ್ಯಮ
ನಿಳಿಕೆಯ್ವುತ್ತಿರ್ದ ಬಿಳಿಯ ಪಟ್ಟಾವಳಿಯಂ
ನಳಿನಾಕ್ಷಿಗೆ ತಂದುಡಿಸಿದ
ಳೊಲಿದೊರ್ವಳ್ ದಿವಿಜಕಾಂತೆ ಕಡುಜಾಣಿಂದಂ೧೦೫

ಹರಿಚಂದನಕಲ್ಕಮನೊ
ಲ್ದರಸಿಯ ಮೆಯ್ಯಲ್ಲಿ ಪೂಸಲಂತಾಕ್ಷಣದೊಳ್
ಶರದದ ಮುಗಿಲಾವರಿಸಿದ
ಸುರಗಿರಿಶಿಖರಂ ದಲೆಂಬಿನಂ ಕಣ್ಗೆಸೆದಳ್         ೧೦೬

ಮುತ್ತಿನ ತೋಳಬಂದಿ ಪೊಸಮುತ್ತಿನ ಚೂಳಿಕೆ ಮುತ್ತಿನೈಸರಂ
ಮುತ್ತಿನ ಸೂಡಗಂ ಪೊಳೆವ ಮುತ್ತಿನ ಕಂಕಣಮೆಯ್ದೆ ಮುತ್ತಿನಿಂ
ಬಿತ್ತರಿಸಿರ್ದ ನೂಪುರಮದೊಪ್ಪುವ ಮುತ್ತಿನ ನೇವುರಂ ದಲೆಂ
ದುತ್ತಮಮಾದ ಭೂಷಣದಿ ಭೂಷಿಸಿದರ್ ಸುರಕಾಂತೆಯರ್ ಕರಂ  ೧೦೭

ಮುತ್ತಿನ ದಂಡೆ ಮುತ್ತಿನ ಲಸತ್ತಿಲಕಂ ಸುರಿಮುತ್ತಿನೋಲೆಯೊಳ್
ಮುತ್ತಿನ ಪೆಂಡೆಯಂ ಮಿಸುಪ ಮುತ್ತಿನ ಕೊಪ್ಪುಱೆ ಮುತ್ತಿನುಂಗುರಂ
ಮುತ್ತಿನ ಪಿಲ್ಲಿಯೆಂಬ ಸದಲಂಕರಣಂಗಳನೆಯ್ದೆ ತೊಟ್ಟು ತಾಂ
ಮುತ್ತಿನ ಬೊಂಬೆಯೆಂಬ ಬಗೆಯಂ ನೆಱೆ ಪುಟ್ಟಿಸುತಿರ್ದಳಾಕ್ಷಣಂ   ೧೦೮

ವ : ಇಂತು ಬೆಳುವಸದನಂಗೆಯ್ದಾಗಳ್

ವರಕರ್ಪೂರದ ಘಟ್ಟಿಯಂ ಕಡೆದು ನಾನಾ ಕೌಶಲೋತ್ಕರ್ಷನಿ
ರ್ಭರದಿಂ ಪುತ್ಥಳಿಯಂ ವಿನಿರ್ಮಿಸಿದವೊಲ್ ಚೆಲ್ವಿಂಗೆ ಪಕ್ಕಾದಳಾ
ಧರಣೀವಲ್ಲಭಚಿತ್ತವಲ್ಲಭೆ ಮಹಾಸೌಗಂಧ್ಯಸಂಬಂಧಬಂ
ಧುರೆ ತಾಳ್ದಳ್ ಪರಿನಿರ್ಮಳಾಭರಣದಿಂ ಶೃಂಗಾರಿತಾಕಾರಮಂ      ೧೦೯

ಮಿಗೆ ಸುಮನೋರಮಾರ್ಪಿತ ವಿರಾಜದಲಂಕರಣಂ ಪ್ರಸಾದ ಚಾ
ರುಗುಣವಿಶೇಷಯುಕ್ತನುಪಸಾರಿತದೋಷಮಶೇಷಲಾಲಿತಂ
ಸೊಗಯಿಪ ಶುದ್ಧವಿಗ್ರಹಮನಾಂತು ಕವೀಶ್ವರವಾಣಿಯಂತೆ ಭೂ
ಮಿಗೆ ಕಡುಜಾಣೆ ರಾಣಿ ರಮಣೀಯತೆಯಂ ಪಡೆದಿರ್ದಳಾಕ್ಷಣಂ      ೧೧೦

ವ : ಮತ್ತಂ ಕಡೆಗಣ್ಗಳುಗುಳ್ವ ಕುಡಿವೆಳಗಿಂ ಮುಡಿದ ಮಲ್ಲಿಗೆಯಚ್ಚವಾಸಿಗಂ ದ್ವಿಗುಣಿಸೆಯುಂ ದರಹಾಸ ವಿಳಾಸದೊಳ್ ಪುದಿದ ಥಳಥಳಪ ಸುಲಿಪಲ್ಗಳ ಪೊಳೆಪಿಂ ಪೊಸಮುತ್ತಿನೈಸರದ ಕಾಂತಿಯ ಮೊತ್ತಂ ತ್ರಿಗುಣಿಸೆಯುಂ ಕೊರಲೊಳಿಕ್ಕಿದ ಮುಕ್ತಾ ಫಳಹಾರ ಕಿರಣದೊಳ್ ಕೂಡಿದ ಪೂಸಿದ ಹರಿಚಂದನ ಚರ್ಚೆಯೊಳೊಂದಿದ ಬೆಳ್ವಸದನದ ನುಣ್ಬೆಳಗಿಂದುಟ್ಟದುಕೂಲಚೇಲದ ಧಾವಲ್ಯಂ ಚತುರ್ಗುಣಮಾಗಿಂತು ಚೆಲ್ವುವೆತ್ತಾ ದೇವಿಯ ದೇಹಯಷ್ಟಿಗೆ ಪೊಸತಾಗಿ ನಿರ್ಮಿಸಲ್ಪಟ್ಟ ಬೆಳ್ವಸದನಂ ನೋಳ್ಪರ ಕಣ್ಗಾನಂದಮಂ ಸಂಪಾದಿಸುತ್ತುಮಿರೆ

ಸೊಗಯಿಪ ಬೆಳ್ವಸದನಮಂ
ಮೃಗಶಾಬ ವಿಶಾಲನೇತ್ರೆ ಕೈಕೊಂಡಾಗಳ್
ಮಿಗೆ ತಣ್ಗದಿರಾವರಿಸಿದ
ಮೃಗಧರಮಂಡಳಿಯವೊಲ್ ವಿರಾಜಿಸುತಿರ್ದಳ್           ೧೧೧

ವ : ಅಂತಾ ಪಟ್ಟದರಸಿ ಪೊಸತಾಗಿಯತಿಶಯದಿಂ ಬೆಳುವಸದನಂಗೆಯ್ದ ನಂತರಮಾಕೆಯ ಮುಂದೆ ಸುರಕುಮಾರಿ ಮತ್ತೊರ್ವಳ್

ಭುಜಶಿಖರಾಗ್ರದಲ್ಲಿ ಘನಕುಂಕುಮದಿಂ ಬರೆದಿರ್ದ ಪತ್ರಕ
ವ್ರಜದಿನತೀವರಮ್ಯಮೆನಿಸಿರ್ದ ಸುಬಾಹುಲತಾಪ್ರಕಾಂಡದ
ಲ್ಲಜನಿಸಿ ತೋರ್ಪ ಸತ್ಕುಸುಮಮಂಜರಿಯೆಂಬಿನಮೊಪ್ಪಮಂ ಕರಂ
ಭಜಿಸಿದ ರುಂದ್ರದರ್ಪಣಮುಮಂ ಪಿಡಿದಿರ್ದಳೊರ್ವಳರ್ಥಿಯಿಂ      ೧೧೨

ಮಡದಿಯ ಮುಖದಿಂದೆನಗಿಂ
ದೊಡರಿಸಿದುದು ಬನ್ನಮೆಂಬ ಚಿಂತೆ ಕರಂ ಸಂ
ಗಡಿಸಿ ಕರಗುವವೊಲೊಸರ್ದುದು
ನಡೆನಯನಂ ಚಂದ್ರಕಾಂತಮಣಿಮಯಮುಕುರಂ            ೧೧೩

ವ : ಮತ್ತಂ

ಥಳಥಳಿಪ ಚಂದ್ರಕಾಂತೋ
ಪಳದಿಂದಂ ಸಮೆದ ಚೆಲ್ವ ಪಾವುಗೆಗಳನು
ಜ್ವಳಿತಾಂಗಿಯ ಮುಂದಿರಿಸಿದ
ಳಿಳೆಯೊಳ್ ಗೀರ್ವಾಣರಮಣಿತ್ಯಾದರದಿಂ        ೧೧೪

ಕಾಲ ಪಳಂಚಿನುಂಗುರದ ಮೆಲ್ಲುಲಿಯಿಂದಮೆ ಪೇಳ್ದು ತಮ್ಮಲೀ
ಲಾಲಸಯಾನಮಂ ಕಳಮರಾಳಯುಗಂಗಳಿಗೆಯ್ದೆ ಶಿಕ್ಷಿಪಂ
ತಾ ಲಲಿತಾಂಗಿ ಪಾವುಗೆಗಳಂ ನಿಜಪಾದತಳಂಗಳಿಂದೆ ಸಂ
ಲಾಲಿತಮಾಗಿ ಮೆಟ್ಟಿ ನಡೆತಂದಳನೂನಮನೋನುರಾಗದಿಂ          ೧೧೫

ವ : ಅಂತು ಬಂದು ದೇಹಾರಾಗಾರಮಂ ಪೊಕ್ಕು ವೀತರಾಗಶ್ರೀಚರಣ ಸಮಾರಾಧನಂಗೆಯ್ದು ಬಳಿಯಮಾರೋಗಣೆಯಂ ಮಾಡಿ ತದನಂತರಮಾ ಶತಪತ್ರನೇತ್ರೆ ರಾಗರಸಪಾತ್ರೆಯಾಗಿ ರಾತ್ರಿಯೊಳ್ ಮೇಳದ ಕೆಳದಿಯರೊಡಗೂಡಿ ತಮ್ಮಯ ಬೆಳಗಿಂದಿರುಳಾದೊಡಂ ಪಗಲಂ ಪುಗಿಸುತ್ತುಮಿರ್ಪ ಕೈದೀವಿಗೆಗಳ ನಟ್ಟನಡುವೆ ಕಾಮವಿಕಾರ ಕಾರಣೋಪಕರಣಸಜ್ಜೀಕೃತಮಾದ ಸೆಜ್ಜಾಗೃಹಕ್ಕೆ ಮೆಲ್ಲನೆ ಬಿಜಯಂಗೆ ಯ್ದಾಗಳ್

ರಾಗಿಣಿಯ ಪದಸ್ಪರ್ಶದೆ
ರಾಗಂಬಡೆದುದು ಸುರತ್ನಕುಟ್ಟಿಮಭೂಮೀ
ಭಾಗಂ ಚೈತನ್ಯಯುತಂ
ರಾಗಾವಿಳನಪ್ಪನೆಂಬಿದೊಪ್ಪದೆ ಜಗದೊಳ್     ೧೧೬

ವ : ಇಂತು ಬಂದು ಬಾಳದ ಬೇರ್ಗಳಿಂ ಸಮೆದ ಕೇರ್ಗಳೊಳ್ ಪನ್ನೀರಂ ತಳಿಯಲ್ಕಿಂಬಾದ ತಂಬೆರಲ ವಶದಿಂ ಮೇಲೆ ಬೀಳ್ವ ತುಮತುರ್ವನಿಗಳಿಂದಂ ಕಪ್ಪುರದ ಧೂಳಿಯ ಕಂಪಿನಿಂ ಸೊಂಪುವಡೆದ ಚಂದನಕರ್ದಮಸ್ಥಾಸಕದ ವಾಸನೆಯನಾಸೆಗೆಯ್ದು ಬಂದ ತುಂಬಿಗಳೆಂಬತಿರ್ದುಪಹಾರದ ಕನ್ನೆಯ್ದಲ್ಗಳಿಂ ಮತ್ತಮಲ್ಲಿ ಬಿಳ್ದಿರ್ದ ಕತ್ತುರಿಯ ಪರಿಮಳವಿಳಾಸಕ್ಕೆ ಸೋಲ್ತು ಕಂದಿ ಸುಗಿದು ನುಸುಳ್ಗಂಡಿಯಿಂ ನುಸುಳ್ದೋಡುವಂತೆ ಗವಾಕ್ಷಜಾಳದಿಂ ನುಗುಳ್ದು ಪೋಪ ಕಾಳಾಗರುವಿನ ಹೊಗೆಗಳಿಂ ಮನಂಗೊಳಿಪ ಸಜ್ಜಾಗೃಹಮಂ ಪುಗುವುದುಂ

ಚಂಚದನೂನಚಿತ್ರಯುತಕಾಂಚನಮಂಚದ ಮೇಲೆ ಚೆಲ್ವುವೆ
ತ್ತಂಚೆಯ ತುಪ್ಪುಳಿಂ ಸಮೆದ ಪಾಸುಗೆಗಳೇಳುಮನಿಕ್ಕಿ ಸಮ್ಮದಂ
ಸಂಚಿಸೆ ಮೇಲೆ ಮೇಲ್ಮಡಿಕೆ ಮತ್ತೆ ದುಕೂಲ ಪರಿಚ್ಛದಂಗಳಂ
ಪ್ರಾಂಚಿತಮಾಗಿ ಪಾಸಿದೊಡೆ ಪುಟ್ಟಿಸುತಿರ್ದುದದಂದು ರಾಗಮಂ   ೧೧೭

ವ : ಅಂತು ಪಾಲಿಂಗಡಲ ತೆರೆಯಡಂಗಿದ ತಾಣದೊಳ್ ನಿಶ್ಚಳಮಾಗಡಿ ಕಿಲ್ಗೊಂಡ ಫೇನಪಿಂಡಂಗಳೆಂಬ ಬಗೆಯನೊಗೆಯಿಸುತ್ತಿರ್ದಡುಕುವಾಸುಗಳ ಮೇಲೆ ಬುದ್ಟುದಾಯ ಮಾನ ಕುಸುಮೋಪಹಾರದಿಂ ರಮಣೀಯಮಾದುದಂ ಕಂಡದಱ ಮೇಲೆ ಕುಳ್ಳಿರ್ದಾಗಳ್

ಪಾಲ ಬಿಂದುಗಳ ಮೊತ್ತಂ
ಮೇಲುಱೆ ಕವಿದಿರ್ದು ನೆಗೆವ ಲಕ್ಷ್ಮಿಯ ತೆಱದಿಂ
ಲಾಲಿತ ಮುಕ್ತಾಭರಣದ
ಮೇಳವದಿಂದಬಳೆ ತಳೆದಳತಿಶಯರೂಪಂ        ೧೧೮

ವ : ಮತ್ತಮುದ್ರಿಕ್ತಮಾದ ಕಾಮವಿಕಾರೋತ್ಕರ್ಷಸಮಾಕರ್ಷನಿಮಿತ್ತಂ ಮಾಡಿದೌಷಧದ ಘಟಿಕಾಪೇಟಕಂಗಳೆಂಬಂತಿರ್ದ ಕರ್ಪೂರತೈಲದಿಂ ಘೋಳಿಸಿದ ಮೇಲುವತ್ತಿಯಾದಡಕೆಯ ಭಾಗಂಗಳಿಂದಂ ನಿನ್ನಯ ರಂಗದ ಪಾಂಗಂಗಳೆಂಬ ಮೋಹನ ಬಾಣಂಗಳಿಂ ಜಗಂಗಳನೊರ್ಮೊದಲೊಳೆ ಭಂಗಂಬಡಿಸುವೆನೆಂಬೀ ಪ್ರತಿಜ್ಞೆಯಿಂದನಂಗಂ ತದನಂಗವತಿಗೆ ಭಾಷಾಪತ್ರಂಗಳಂ ಕೊಟ್ಟನೆಂಬಂತಿರ್ದ ಕಡುಚೆಲ್ವನಾಗಿ ಚಿಬ್ಬಂಪೊಯಿದು ನೇರ್ಪಿಂಗಡರ್ಪಾದ ನಾಗವಲ್ಲೀಪತ್ರಂಗಳಿಂದಂ ಕರ್ಪೂರಚೂರ್ಣಪರಿಮಿಶ್ರೀಕರಣದಿಂ ಸೆಜ್ಜಾನಿಶಾಂತಭ್ಯಂತರಮಂ ಸುಗಂಧೀಕರಿಸುತ್ತುಮಿರ್ದತಿಬಹಳಧವಳಿತೆಯನಾಂತು ಖಂಡಿತಪರ್ಣಂಗಳಲ್ಲಿ ಲಘುಪಿಂಡಂಗಳಾಗಿಟ್ಟ ಸುಸ್ನಿಗ್ಧಚೂರ್ಣಂಗಳಿಂ ತುಂಬಿದ ರಜತ ಭಾಜನಂಗಳುಮಂ ನಾನಾವಿಧರಚನಾವಿಶೇಷಸಂಸ್ಕೃತಮಾಗಿ ಬಹಳತರಸುಗಂಧಿದ್ರವ್ಯ ಸಂಬಂಧಾಧಿವಾಸನದಿಂ ಮನೋಹರಮಾದ ಪರಮಾಮೃತರಸಸಮಾಸ್ವಾದಸೋದರೀ ಭೂತನೂತನಶೀತಳಪಾನೀಯಪರಿಪೂರ್ಣಕುಂಭಗಳುಮಂ ಅವ್ಯಕ್ತಮಾದ ಕಾಮನಂ ರಾಗೋಜ್ಜೃಂಭಣಮುಖದಿಂ ವ್ಯಕ್ತಮಾಗಿ ತೋಱಿಸುವಂತೆ ಸುತ್ತಲುಂ ಥಳಥಳಿಸಿ ಪೊಳೆಯುತ್ತುಮಿರ್ದ ರತಿಸಮುದ್ದೀಪಕಮಾದ ಮಾಣಿಕ್ಯಮಯದೀಪಕಳಾಪಂಗಳುಮಂ ಕಾಮೋದ್ದೀಪೀಕರಣಪ್ರವೀಣ ನಾನಾಪ್ರಾಕಾರೋಪಕರಣಕಿರಣಗಣಂಗಳ ರಮಣೀಯತೆಯುಮಂ ಕಂಡು ಕಡುಪಿರಿದುಂ ರಾಗರಸಂ ತನ್ನಯ ಮನದೊಳೊಗೆಯಲದಱ ಭಾರದಿಂ ಮಲಂಗುವಂತೆ ಸೋಪಧಾನಶಯನೀಯದ ಮೇಲೆ ಮೆಲ್ಲನೆ ಮಲಂಗುವುದುಂ

ಚರಣತಳಂ ಮೃದುವೋ ಮೇಣ್
ಸರಸಿರುಹಂ ಮೃದುವೊಯೆಂದು ಪರಿಕಿಪ ತೆಱದಿಂ
ಕರತಳದಿಂದೊತ್ತಿದಳಂ
ದರಸಿಯ ಪದತಳಮನಮರಕಾಮಿನಿಯೊರ್ವಳ್೧೧೯

ವ : ಅಂತಿರ್ಪುದುಮಿತ್ತಲಾ ಮಹಾಸೇನಮಹಾರಾಜಂ ಗರ್ಭಾಧಾನಮೆಂಬ ಮಂಗಳ ವಿಧಾನಮನಂಗೀಕರಿಸಿದಿಂಬಳಿಯಂ

ಅನುಪಮರಚನಾಚಿತ್ರಿತ
ಘನಪರಿಧಾನೋತ್ತರೀಯಕಂ ಮಣಿಮಯ ನೂ
ತನಭೂಷಣ ಪರಿಭೂಷಿತ
ನನುಲೇಪನಶೋಭಿತಾಂಗನಾಗಿ ನರೇಂದ್ರಂ       ೧೨೦

ವ : ಸೆಜ್ಜಾಗೃಹಪ್ರವೇಶಯೋಗ್ಯ ಕತಿಪಯಾಂಗರಕ್ಷಕಜನಂಬೆರಸು ವಿಚಿತ್ರ ವೇತ್ರಧರಪುರಸ್ಸರಂ ಸೆಜ್ಜೆವನೆಗೆ ಬಿಜಯಂಗೆಯ್ವುದುಮಾಗಳ್ ಬೆಳುವಸದನದ ಪೊಸ ದೇಸೆಯಂದೆಸೆ ಯುತ್ತುಮಿರ್ದ ತತ್ಸುವ್ರತಾಮಹಾದೇವಿ ನಿಪ್ಪೊಸತಪ್ಪ ಕಪ್ಪುರದ ಲೆಪ್ಪದ ಪೆಣ್ಣೆಂಬಂತೆ ಕಣ್ಗೆ ಸೊಗಸನಜನಿಸುತ್ತುಮತಿಸಂಭ್ರಮದಿನಿದಿರೆಳ್ದು ನಿಂದಿರ್ಪುದುಂ

ಶರದದ ಮುಗಿಲೊಡ್ಡುಗಳೊಳ್
ಪರಿಪೂರ್ಣಶಶಾಂಕನಿರ್ಪ ತೆಱದಿಂದರಸಂ
ವರಹಂಸತೂಳತಳ್ಪದೊ
ಳುರುಮುದದಿಂದರಸಿವೆರಸು ತಾಂ ಕುಳ್ಳಿರ್ದಂ   ೧೨೧

ವ : ಅನಂತರಂ

ಚತುರಪರಿಹಾಸವಚನಾ
ಮೃತಚಂದ್ರಿಕೆಯಿಂದೆ ನರಪಮುಖವಿಧುಬಿಂಬಂ
ಸತಿಯ ಮನಃಕುಮುದಮನುರು
ರತಿರಸಮಂ ಬಿಡದಲರ್ಚಿಸಿತ್ತು ನಿತಾಂತಂ         ೧೨೨

ಸ್ಮಿತಧವಳಕಮಳದೊಳ್ ಮ
ತ್ತತಿಶಯಹಂಸಂ ಸ್ವಹಂಸೆಯಂ ಸೋಂಕುವವೊಲ್
ಪತಿ ನಿಜಸತಿಯಂ ಸೋಂಕಿದ
ನತುಳಿತತಳ್ಪದೊಳು ರಾಗರಸದೊದವಿಂದಂ     ೧೨೩

ರತಿಸಾಗರದೊಳಗೋಲಾ
ಡುತುಮಿರ್ದಾ ನೃಪತಿಯುಂ ಮಹಾದೇವಿಯುಮೆ
ಯ್ದತನು ಬಿಡದಾಡಿಸುತ್ತಿ
ರ್ದತಿಶಯಪುತ್ರಿಕೆಗಳೆಂಬ ತೆಱದಿಂದಾಗಳ್         ೧೨೪

ವ : ಅಂತು ವಿಶ್ರಾಂತಸಂಭೋಗಸುಖದಿಂದೊಗೆದ ಬೆಮರ ಬಿಂದುಗಳಿಂದಾ ದಂಪತಿಗಳ ನಿಕಾಮಕೋಮಳತನುಲತೆಗಳಾರ್ದಂಗಳಾಗಿಯುಂ ಮೆಯ್ಸೋಂಕಿನೊಳು ಬ್ಬರಿಸುವ ವಿಪುಳಪುಳಕಾಂಕುರಂಗಳಿಂ ಕಠಿನತ್ವಮಂ ತಾಳ್ದಿರ್ದವು ಮತ್ತಂ ನಿಬಿಡಮಾದ ಗಾಢಾಲಿಂಗನದಿಂದಿರ್ವರ ಶರೀರಂಗಳನೋಮದಾಗಿ ಪಚ್ಚಿಸಿದರೆಂಬಂತೈಕ್ಯಮನಾಂತು ಕ್ಷೀರನೀರಾಕಾರದೊಳೊಂದಿದ ರತ್ನವೇಳೆಯಂತಿರಾ ಮಹಾಸೇನಮಹಾರಾಜನೊಡನೆ ಪವಡಿಸುತ್ತುಮಿರ್ದ ಸುವ್ರತಾಮಹಾದೇವಿ ಪರಿಶ್ರಮನಿಮೀಲಿತನಯನೆಯಾಗಿ ಬೆಳಗಪ್ಪ ಜಾವದೊಳ್

ಅನುಪಮತೀರ್ಥನಾಥಜನನೋತ್ಸವಮಂಗಳಕಾರಣಂಗಳಂ
ಕನಸುಗಳಂ ಯಥಾಕ್ರಮದೊಳಂ ಪದಿನಾಱುಮನೆಯ್ದೆ ಕಂಡಳಾ
ಜಿನಜನನಿ ಪ್ರಮೋದಭರದಿಂದುರುಷೋಡಶಭಾವನಾದಿ ಭಾ
ಜನನೆನಿಸಿರ್ದ ಪುಣ್ಯತನಯೋದಯಮಂ ನೆಱೆಸೂಚಿಪಂದದಿಂ        ೧೨೫

ವ : ಅದೆಂತೆನೆ

ಮಿಳ್ಳಿಸಿ ತುಂಬಿಗಳ್ ಮೊರೆದುಬಂದು ಮದಾಂಬುವ ಗಂಧಶಾಲೆಯಿಂ
ಕುಳ್ಳಿರೆ ಗಂಧದೊಳ್ ಮೆಱೆವ ವಾಸನಭದ್ರಗಜಾಧಿರಾಜನಂ
ಬೆಳ್ಳಿಯನ ಬೆಟ್ಟಮೆಂಬ ಬಗೆಯಮ ಸಲೆಪುಟ್ಟಿಸುತಿರ್ದುದಂ ಭಯಂ
ಗೊಳ್ಳದೆ ನೋಡಿದಳ್ ಕನಸಿನೊಳ್ ಮದಕುಂಜರಯಾನೆ ಲೀಲೆಯಿಂ            ೧೨೬

ಶರದದ ಚಂದ್ರಮಂಡಲದವೊಲ್ ಪರಿಪಾಂಡುರದೇಹವರ್ಣನಂ
ಸುರುಚಿರವೃತ್ತವತ್ಕಕುದನಂ ಘನಲಂಬಿತಲೋಲವಾಲನಂ
ವರತರಶೃಂಗಸಂಗತಿ ಕದರ್ಥಿತವದ್ಗ್ರಹನಂ ಗವೇಂದ್ರನಂ
ಪರಿಕಿಸಿ ನೋಡಿದಳ್ ಕನಸಿನಲ್ಲಿ ಗವೇಂದ್ರಸುಕಂಠೆ ರಾಗದಿಂ          ೧೨೭

ಕೆಂಪಾಗಿರ್ದುರುಕೇಸರಪ್ರಸರದಿಂ ಚೆಲ್ವಾದ ದುರ್ದರ್ಪದಿಂ
ಪೆಂಪಂ ತಾಳ್ದ ವಿಭಾಸುರಾರ್ಧ ಶಶಿಲೇಖಾಕಾರದಂಷ್ಟ್ರಂಗಳಿಂ
ಸೊಂಪಂ ನೇಱಿದ ವೃತ್ತವತ್ಕಟಿಗಳಿಂದೊಪ್ಪಿರ್ದುದಂ ಸಿಂಹಮಂ
ಕಂಪಾಪಾಂಗಿಕೆ ನೋಡಿದಳ್ ಕನಸಿನೊಳ್ ತನ್ನೊಂದು ಸಂತೋಷದಿಂ           ೧೨೮

ಮಿಗೆ ನಿಮಿರುತ್ತುಮಿರ್ದ ವರರತ್ನವಿಭೂಷಣಭೂರಿಕಾಂತಿಯಿಂ
ದ್ವಿಗುಣಿತ ದೇಹಕಾಂತಿಯ ಪರಂಪರೆಯೊಳ್ ಪೊಳೆಯುತ್ತುಮಿರ್ದ ಗಾ
ಡಿಗೆ ನೆಲೆಯಾದ ಲಕ್ಷ್ಮಿಯನದಾಕ್ಷಣದೊಳ್ ಮಥಿತಾಬ್ಧಿಮಧ್ಯದೊಳ್
ಸೊಗಯಿಪಳಂತಿರಿರ್ದವಳನಂಗನೆ ಕಂಡಳತಿಪ್ರಮೋದದಿಂ  ೧೨೯

ಅತಿಧವಳಪುಷ್ಪಮಾಲಾ
ದ್ವಿತಯಮನುದ್ಭ್ರ ಮರಭಂಗಿ ಸಂಭ್ರಮಭೃತಮಂ
ನುತವಿಕಸನಯುತಮಂ ನೋ
ಡುತುಮಿರ್ದಳ್ ಕನಸಿನಲ್ಲಿ ಗತಿಕೌತುಕದಿಂ       ೧೩೦

ಸಕಳಕಳಾವಿಳಾಸದೊಡಗೂಡಿ ಸಮಸ್ತದಿಗಂತರಾಳಮಂ
ಪ್ರಕಟಿತಮಾಗಿ ದಲ್ ಬೆಳಗುತಿರ್ದ ಸಮುದ್ಧುರಚಂದ್ರಬಿಂಬಮಂ
ಮಕರಪತಾಕನುತ್ಸವವಿಧಾನಸಮರ್ಥಮೆನಿಪ್ಪುದಂ ಕರಂ
ವಿಕಸಿತಕೈರವಾಕ್ಷಿ ನಡೆನೋಡುತಮಿರ್ದಳಪೂರ್ವರಾಗದಿಂ೧೩೧

ಕಮಳನಂಗಳಂ ಬಿಡದಲರ್ಚಿಸುತುಂ ನಿಬಿಡಾಂಧಕಾರವೃಂ
ದಮನುಱೆ ಬೆರ್ಚಿಸುತ್ತುಮುರುರಾಗನಿಭಾಸಿ ಸಹಸ್ರಭಾನು ಸಾ
ರ್ಥಮನೆ ನಿಮಿರ್ಚಿಸುತ್ತುಮುದಯಾಚಳಚೂಳಿಕೆಯಗ್ರಭಾಗದಿಂ
ದಮುದಯಿಸುತ್ತುಮಿರ್ದ ರವಿಮಂಡಳಮಂ ನಳಿನಾಸ್ಯೆ ನೋಡಿದಳ್           ೧೩೨

ಮೀಂಗಳಯುಗಳಮನುದಕದೊ
ಳಂಗೀಕೃತಚಾರುಚಿತ್ರಸಂಚಾರಮುಮಂ
ಪಿಂಗದೆ ಪೊಳೆಯುತ್ತಿರ್ಪುದ
ನಂಗನೆ ಕನಸಿನೊಳೆ ಕಂಡಳಚ್ಚರಿಯಿಂದಂ          ೧೩೩

ಸಿತತಂತುದ್ವಯವೇಷ್ಟಿತಂಗಳನತಿಸ್ವಚ್ಛಾಂಬುಪೂರ್ಣಂಗಳಂ
ನುತಮುಕ್ತಾಸ್ರಗಲಂಕೃತಂಗಳನುರುಶ್ರೀಗಂಧಚರ್ಚಾರ್ಚಿತಾ
ಕ್ಷತರಮ್ಯಂಗಳನ್ಯಾಸದೊಳ್ ಪೊಳೆವ ಪಂಕೇಜಂಗಳಿಂದೊಪ್ಪದು
ನ್ನತಿಯಂ ತಾಳ್ದಿದ ಚೆನ್ನಹೊನ್ನವೆರಡುಂ ಕುಂಭಂಗಳಂ ನೋಡಿದಳ್          ೧೩೪

ದೇವಿ ಕನಸಿನೊಳ್ ಕಂಡಳ್
ತಾವರೆಗೊಳನಂ ಮರಾಳಿಕಾಪಕ್ಷಸುಲೀ
ಲಾವಿಕ್ಷಿಪ್ತ ಸರೋರುಹ
ಪಾವನಕಿಂಜಲ್ಕಪುಂಜಪಿಂಜರಿತಮುಮಂ         ೧೩೫

ಪಿರಿದುಂ ಗಂಭೀರತೆಯಂ
ಧರಿಸಿದ ಬಹುರತ್ನರಾಶಿಪರಿರಂಜಿತಮಂ
ಪರಮಕ್ಷೀರಸಮುದ್ರಮ
ನರಸಿ ಸ್ವಪ್ನದೊಳೆ ನೋಡುತಿರ್ದಳ್ ನಲವಿಂ   ೧೩೬

ಕನಕಮಯಚಾರುಸಿಂಹಾ
ಸನಮಂ ನವರತ್ನರಾಜಿಪರಿಕೀಲಿತಮಂ
ಘನಕೌಶಲನಿರ್ಮಿತಮಂ
ವನಿತೋತ್ತಮೆ ಕನಸಿನಲ್ಲಿ ಕಂಡಳ್ ಮುದದಿಂ  ೧೩೭

ಪೀವರತೋರಣೋಲ್ಬಣ ಲಸದ್ಧ್ವಜರಾಜವಿರಾಜಮಾನಮಂ
ಪಾವನರತ್ನಕಿಂಕಿಣಿಗಳ ದ್ಯುತಿಮಂಜರಿದೀಪ್ಯಮಾನಮಂ
ದೇವನಿತಂಬಿನೀ ಮಧುರಗೀತ ಮೃದುಧ್ವನಿಶೋಭಮಾನಮಂ
ದೇವವಿಮಾನಮಂ ಕನಸಿನಲ್ಲಿ ನೃಪಾಂಗನೆ ಕಂಡಳರ್ಥಿಯಿಂ          ೧೩೮

ಎತ್ತಿದ ಪೆಡೆಗಳ ಮೇಲ
ತ್ಯುತ್ತಮಮಣಿಗಳ ಮಯೂಖಮಂಜರಿ ಮಿಗೆ ನಿಮಿ
ರುತ್ತಮಿರೆ ಕಣ್ಗೆ ಸೊಗಸಂ
ಬಿತ್ತರಿಪ ಫಣೀಂದ್ರಗೇಹಮಂ ಸತಿ ಕಂಡಳ್       ೧೩೯

ಪರಕಲಿಸಿ ನಿಮಿರ್ವ ಕಿರಣೋ
ತ್ಕರದಿಂದಾಗಸದೊಳಿಂದ್ರಚಾಪಶ್ರೀಯಂ
ನೆರಪಿಸುತುಮಿಪ್ಪನರ್ಘ್ಯ
ಸ್ಫುರದುದ್ಧುರತ್ನರಾಶಿಗಳನೀಕ್ಷಿಸಿದಳ್          ೧೪೦

ಏನುಂ ಪೊಗೆ ಪೊಱಮಡದ ಕೃ
ಶಾನುಜ್ವಾಲಾಕಲಾಪಮಂ ಕೆಲಗೆಲದೊಳ್
ತಾನವ್ವಳಿಸುತ್ತಿರ್ಪುದ
ನಾ ನೃಪಸತಿ ಕನಸಿನಲ್ಲಿ ಕಂಡಳ್ ನಯದಿಂ       ೧೪೧

ವ : ಈ ಮಹಾಶ್ಚರ್ಯಕರ ಷೋಡಶ ಶುಭಸ್ವಪ್ನಸಂದರ್ಶನಾನಂತರಂ ಸಹಸ್ರ ಕಿರಣೋದಯ ಸಮಯದೊಳ್

ತಂಬೆಲರೆಂಬಿನಂ ಸುಳಿದು ಬೀಸಿ ಸುವರ್ಣಗವಾಕ್ಷಮಾರ್ಗದಿಂ
ದಂ ಬಿಡದೆಯ್ದೆ ಬಂದವರನೊಯ್ಯನೆ ಸೋಂಕಿ ಸೊಡರ್ಗಳಾಗಳಾ
ಲಂಬಿತ ನಿದ್ರೆಯಂ ಕೆಡಿಸಲಾಗೆ ದಲೆಂದುಱೊ ಸನ್ನೆಯಿಂದೆ ಬೇ
ಡೆಂಬವೊಲೆಯ್ದೆ ತೂಗಿ ತಲೆಯಂ ಪಡೆದರ್ ಸುಖದಿಂ ಪ್ರಬೋಧಮಂ         ೧೪೨

ವ : ಆಗಳ್

ಮಂಜೀರಧ್ವನಿಯುಂ ಸುಕಂಕಣಝಣತ್ಕಾರಂಗಳುಂ ಮೇಖಳಾ
ಮಂಜುಧ್ವಾನಮುಮುಣ್ಮಿ ಪೊಣ್ಮೆ ನಯನಂ ಕೆಂಪಾಗೆ ಧಮ್ಮಿಲ್ಲಭಾ
ರಂ ಜೋಲ್ದೊಪ್ಪೆ ಶರೀರಯಷ್ಟಿ ತಳೆಯಲ್ ಬೇಱೊಂದು ಸೌರಭ್ಯಮಂ
ರಂಜಂ ನೀವಿ ಸಡಿಲ್ದು ತೋಱೆ ಸತಿ ಪಾಸಿಂದೆರ್ದಳಾನಂದದಿಂ       ೧೪೩

ವ : ಅಂತುಪ್ಪವಡಿಸಿ ಪ್ರಭಾತಕಾಲಕರಣೀಯನಿತ್ಯನಿಯಮಂಗಳಂ ನಿರ್ವರ್ತಿಸಿ ದನಂತರಂ

ಪತಿಯ ಸಮೀಪಕ್ಕೆ ಮಹಾ
ಸತಿ ಬಂದುಱೆ ತನ್ನ ಗಂಡ ಕನಸುಗಳಂ ಸಂ
ಗತಿಯಿಂ ಪೇಳ್ದಳ್ ದಂತ
ದ್ಯುತಿಯಿಂದಂ ದ್ವಿಗುಣಿಸುತ್ತುಮೆಕ್ಕಾವಳಿಯಂ            ೧೪೪

ಭೂಪಂ ಸ್ವಪ್ನಂಗಳಂ ಕೇಳ್ದಪರಿಮಿತ ವಿವೇಕಪ್ರಭಾವಾತ್ತಚಿತ್ತ
ವ್ಯಾಪಾರಂ ಮತ್ತಮಿಂತೆಂದುಸಿರ್ದನವಱ ಭೂಯಃಫಲಪ್ರಾಪ್ತಿಯಂ ತ
ನ್ನ ಪ್ರಾಣಪ್ರೀತೆಗಾಗಳ್ ನಗೆಯೆ ದಶನಭಭಾರಮುಂ ವಕ್ತ್ರದಿಂದಂ
ಪೆಂಪಿಂ ಬೇಱೊಬ್ಬ ಚಂದ್ರಂ ಪಗಲೊಳಮೆಳೆವೆಳ್ದಿಂಗಳಂ ಬೀಱುವನ್ನಂ       ೧೪೫

ವ : ಅದೆಂತೆಂದೊಡೆ

ಸಿತಗಜದಂತೆ ದಾನಯುತನಂ ವೃಷದಂತಿರೆ ಧರ್ಮಭಾರದು
ದ್ಧೃತಿಪರನಂ ಮೃಗಾಧಿಪತಿಯಂತಿರೆ ವಿಕ್ರಮಯುಕ್ತನಂ ಸಮು
ನ್ನತತರಲಕ್ಷ್ಮಿಯಂತಿರೆ ಸಮಸ್ತಜಗಜ್ಜನಸೇವ್ಯಮಾನನಂ
ಸಿತಕುಸುಮೋಚ್ಚಮಾಲ್ಯದವೊಲೊಪ್ಪುವ ಕೀರ್ತಿಸುಸೌರಭಾಂಕನಂ            ೧೭೬

ಚಂದ್ರಮನಂತೆ ನಿರ್ಮಳಕಳಾಧರನಂ ರವಿಯಂತೆ ದುಸ್ಸಹಾ
ಮಂದಸುತೇಜನಂ ವರಝಷದ್ವಯದಂತಿರೆ ಭೂರಿಹರ್ಷನಂ
ಸೌಂದರ ಹೇಮಕುಂಭಯುಗದಂತಿರೆ ಪೀವರಮಂಗಳತ್ವಸ
ನ್ಮಂದಿರನಂ ಸರೋವರದವೊಲ್ ಜಗತೀಜನತಾಪಹಾರಿಯಂ        ೧೪೭

ಜಲನಿಧಿಯಂತಪಾರಮಹಿಮಾಸ್ಪದನಂ ಹರಿಪೀಠದಂತೆ ಮಂ
ಜುಳತರದರ್ಶನೋನ್ನತನುಮಂ ಸುರಲೋಕವಿಮಾನದಂತಿರು
ಜ್ವಳಿತ ಸುರೇಂದ್ರಯಾತ್ರಕನುಮಂ ಫಣಿರಾಜನಿವಾಸದಂತೆ ನಿ
ರ್ಮಳತರತೀರ್ಥಘೋಷಣವಿಶೇಷಿತಚಾರುಮಹಾನುಭಾವನಂ       ೧೪೮

ವರರತ್ನರಾಶಿಯಂತಿರೆ
ನಿರುಪಮಕಾಂತಿಪ್ರಭಾವನಂ ಪಾವಕನಂ
ತಿರೆ ಘಾತಿಕರ್ಮಗಹನೋ
ದ್ಧುರಗಹನ ಸುದಹನದಕ್ಷನಪ್ಪಾತ್ಮಜನಂ       ೧೪೯

ಪಡೆದಪೆ ನೀನಲ್ಲದರೀ
ಪೊಡವಿಯೊಳಿಂತಪ್ಪ ಕನಸನೀಕ್ಷಿಪ ಸೈಪಿಂ
ಗೆಡೆಯಾದರಾರೊ ಭಾವಿಸು
ವಡೆ ಪೂರ್ವೋಪಾತ್ತಪುಣ್ಯಮೇನದ್ಭುತಮೋ  ೧೫೦

ಪೋದ ಭವಂಗಳೊಳ್ ನೆರಪಿದೊಂದು ತಫಃಫಲಮೀಗಳೆಯ್ದೆ ಸಂ
ಪಾದಿಸಿದತ್ತು ತಾನುದಯಮಂ ಸಲೆ ನಿನ್ನೊಳಶೇಷದೇವರಾ
ಜಾದಿಕವಂದ್ಯತೀರ್ಥಕರಮಾತೃವೆನಲ್ ದೊರೆವೆತ್ತ ಚಾರುಪು
ಣ್ಯೋದಯೆ ನಿನ್ನವೊಲ್ ಮಿಗುವ ನೋಂಪಿಗಳಂ ನೆಱೆನೋಂತರಾರೊ ಪೇಳ್           ೧೫೧

ಕನಸುಗಳೆಲ್ಲವುಂ ಫಳಮನೀವುವು ತಪ್ಪದೆ ಸುವ್ರತಾಢ್ಯರುಂ
ಘನಗುಣರುಂ ನಿರೀಕ್ಷಿಸಿಲೊಡಂ ಪುಸಿಯಾಗವವೆಲ್ಲಿಯುಂ ವ್ರತಾ
ಭಿನುತಗುಣಾಢ್ಯೆ ನೀಂ ಬಗೆವೊಡೀ ಕನಸಂ ನೆಱೆಕಂಡ ಕಾರಣಂ
ಜಿನಪತಿಮಾತೃವಾಗಿ ಪಡೆದಪ್ಪೆ ಕೃತಾರ್ಥತೆಯಂ ವಿಶೇಷದಿಂ        ೧೫೨

ತನುಭವಲಾಭವಾರ್ತೆಯನಿದಂ ನಿಜಹೃತ್ಪತಿ ಪೇಳೆ ಕೇಳ್ದು ಮ
ತ್ತನುಪಮಭೂರಿಹರ್ಷಭರದಿಂ ಪುಳಕೋದ್ಗಮಭಾರಮಂ ನೃಪಾಂ
ಗನೆ ತಳೆದಿರ್ದಳಂದು ವನಲಕ್ಷ್ಮಿ ವಿಶೇಷವಸಂತಕಾಲದೊಳ್
ಘನಕಳಿಕಾಕಳಾಪಮನದೆಂತುಱೆ ತಾಳ್ದುವಳಂತಿರೊಪ್ಪದಿಂ          ೧೫೩

ವ : ಅನ್ನೆಗಮಿತ್ತಲಾ ಸರ್ವಾರ್ಥಸಿದ್ಧಿಯೆಂಬ ವಿಮಾನದೊಳ್ ಪುಟ್ಟಿರ್ದ ದಶರಥ
ಚರನಪ್ಪಹಮಿಂದ್ರನೆಂಬ ದೇವಂ ತನ್ನಯ ಪರಮಾಯುಷ್ಯಮಾದ ಮೂವತ್ತ ಮೂಱುಸಾಗರೋಪಮಕಲಾಮೆಲ್ಲಂ ದಿವ್ಯಸುಖಾನುಭವದಿಂದೊಂದುದಿನಮೆಂಬಂತೆ ಸಂಪೂರ್ಣತೆಯನೆಯ್ದಲೊಡಂ ನಿಜಾಯುರವಸಾನಸಮಯಮನಱಿದು

ಬಗೆಯೊಳ್ ಭೇದಜ್ಞಾನಮ
ದೊಗೆದಿರೆ ಪರಮಾತ್ಮರೂಪಮಂ ಧ್ಯಾನಿಸುತುಂ
ಬಗೆಯದಹಮಿಂದ್ರಸುಖಮಂ
ಮಿಗೆ ದಿವ್ಯಶರೀರಭಾರಮಂ ವಿಭು ಬಿಟ್ಟಂ       ೧೫೪

ವ : ಮತ್ತಮಾ ದೇವಿ ಸರ್ವಾರ್ಥಸಿದ್ಧಿಯಿಂ ಬಿಳ್ಚಿ ಬಂದು ವೈಶಾಖಮಾಸದ ಕೃಷ್ಣಪಕ್ಷದ ತ್ರಯೋದಶೀ ತಿಥಿಯೊಳ್ ಚಂದ್ರಮಂ ರೇವತೀನಕ್ಷತ್ರದಲ್ಲಿರುತ್ತಮಿರೆ ಬಾಳತರಣಿಕಿರಣಂ ಕಮಳಿನಿಯ ಕಮಳದೆಸಳ ಪೊರೆಯೊಳ್ ಪೊಕ್ಕೊಳಗಣ್ಗಿಳಿದು ಪೋಗಿ ಮೃಣಾಳಿಕಾ ಗರ್ಭದೊಳುದ್ಭವಿಸುವಂತಿರಾ ಸುವ್ರತಾಮಹಾದೇವಿಯ ಕೋಮಳ ಮುಖ ಕಮಲದೊಳ್ ಕರಿಕಲೇವರಾಕಾರದಿಂ ಪೊಕ್ಕು ನುಸುಳ್ದು ಪೋಗಿ ನಿರ್ಭರಿತ ಶೋಭಾ ಸಂದರ್ಭಗರ್ಭಿತಮಾದ ಗರ್ಭಾವಾಸದಲ್ಲಿ ಶುಭಮುಹೂರ್ತದೊಳವರತಣ ಕರಣಮ ನಪ್ಪುಕೆಯ್ವುದುಮಾಗಳ್

ಆಸನಕಂಪಕಲ್ಪಿತ ಚಮತ್ಕೃತಿಯಿಂದಱಿದುದ್ಘಭಕ್ತಿಯಿಂ
ವಾಸಮಮುಖ್ಯಮಾದಖಿಳದೇವಸಮೂಹಮದೆಯ್ದೆಬಂದು ಜೈ
ನೇಶನ ಮಾತೃವಂ ನಮಿಸಿದರ್ ಬಲವಂದರನರ್ಘ್ಯರತ್ನದಿಂ
ಲೇಸೆನೆ ವಸ್ತ್ರದಿಂದೆ ಪರಿಪೂಜಿಸಿದರ್ ನುತಿಗೆಯ್ದರೊಪ್ಪದಿಂ        ೧೫೫

ವ : ಇಂತು ಚತುರ್ನಿಕಾಯದೇವರ್ಕಳೆಲ್ಲಂ ಪಂಚಾಶ್ಚರ್ಯಪುರಸ್ಸರಂ ಗರ್ಭಾವತ ರಣಕಲ್ಯಾಣರ್ಹಾವಿಧಾನಮಂ ಮಹಾಮಹಿಮೆವೆರಸು ಮಾಳ್ಪುದಂ ನೋಡುತ್ತುಮಿರ್ದು ಮಹಾಸೇನ ಮಹಾರಾಜಂ ಮನದೊಳ್ ಪೆಟ್ಟುವೆರ್ಚಿ ನಾನುಮೀತೆಱದಿಂದೀ ಕಲ್ಯಾಣೋತ್ಸಾಹಮನಿಲ್ಲೀಗಳೆ ಮಾಳ್ಪೆನೆಂದು ಬಗೆಯುತ್ತು ಮಿರಲಮರ್ತ್ಯರ ಮೊತ್ತಮೆಲ್ಲಂ ತತ್ಕಲ್ಯಾಣಪೂಜೆಯಂ ಮಾಡಿ ಸ್ವಕೀಯಧಾಮಗಾಮಿಗಳಪ್ಪುದುಂ

ಪುಟ್ಟದ ಮುನ್ನಂ ದಿವಿಜರ್
ನೆಟ್ಟನೆ ಗರ್ಭಾವತರಣದುತ್ಸವಮಂ ಮುಂ
ದಿಟ್ಟು ಸೇವಿಸಿದರೆಂದೊಡೆ
ಪುಟ್ಟಿದ ಪೊತ್ತಿನೊಳೆ ಮಾಳ್ಪುದಂ ಬಣ್ಣಿಪರಾರ್         ೧೫೬

ವ : ಅನಂತರಂ

ಒಡೆಯನ ಗರ್ಭಾಧಾನದ
ಸಡಗರಮಂ ಪಿರಿದುಮಳ್ತಿಯಿಂ ಭೂತಳದೊಳ್
ಕಡುಚೋಜಿಗಮಪ್ಪಂತಿರ
ಲೊಡರಿಸಿದಂ ಮತ್ತಮಾ ನೃಪಾಳಕತಿಳಕಂ        ೧೫೭

ಕ್ಷಿತಿನಾಥಂ ತನ್ನ ಪುಣ್ಯೋದಯದ ಮಹಿಮೆಯಂ ಕೂಡೆಕೊಂಡಾಡುತಿರ್ದಂ
ವ್ರತಶೀಲಾಧಾರನುದ್ಯದ್ವಿಮಳತರಗುಣಂ ಭಾರತೀಕರ್ಣಪೂರಂ
ನುತವದ್ದಾನಪ್ರಿಯಂ ಬಾಹುಬಲಿಸುಕವಿರಾಜಂ ಮಹಾರಾಜಪೂಜ್ಯಂ
ಜಿತಮಿಥ್ಯಾವಾದಿ ಸಾರ್ಥಪ್ರವಚನರಚನಂ ಚಾತುರೀಜನ್ಮಗೇಹಂ    ೧೫೮

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವ ಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾಕವಿ ಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ಧರ್ಮತೀರ್ಥಕರ ಗರ್ಭಾವರತರಣಕಲ್ಯಾಣಪರಿವ್ಯಾವರ್ಣನಂ ಷಷ್ಠಾಶ್ವಾಸಂ.