ಮತ್ತಮದಭ್ರವಿಭ್ರಮವಿನಿರ್ಭರಿತಾಭ್ರಪರಿಸ್ಪೃಶನ್ಮರು
ನ್ನರ್ತಿತಶುಭ್ರಕೇತನಪಟಂಗಳವೊಪ್ಪಿದುವಭ್ರದಲ್ಲಿ ದೇ
ವೋತ್ತಮಗಂಗೆ ಮಜ್ಜನದ ಪೊತ್ತಱಿದಂದುರುರೂಪಕೋಟಿಯಂ
ಪೆತ್ತು ಬರುತ್ತುಮಿರ್ದ ತೆಱದಿಂ ಕಳಿದರ್ ಸುರರಾ ದ್ಯುಗಂಗೆಯಂ    ೭೧

ಆಗಸಮೆಂಬ ವಾರಿನಿಧಿಯಂ ಮಕರೋಚ್ಛಕುಳೀರಮೀನಸಂ
ಯೋಗಮನುಳ್ಳುದಂ ಸುರರ ಗೀತರವೋಲ್ಲಹರೀತರಂಗಿತಾ
ಭೋಗಮನೆಯ್ದಲುತ್ತರಿಸಿ ಬಂದರಶೇಷ ಸುರಾಸುರರ್ ಕರಂ
ಬೇಗದಿನುಲ್ಲಸನ್ಮಣಿವಿಮಾನಬಹಿತ್ರಕದಂಬಕಂಗಳಿಂ      ೭೨

ನಿರ್ಜರರಾಜಧಾನಿ ಮೊದಲಾಗಿ ಜಿನೇಶ್ವರಪತ್ತನಂಬರಂ
ನಿರ್ಜರಸೈನ್ಯದೋರಣಿ ನಭಸ್ಥಳದೊಳ್ ತೆಱಪಿಲ್ಲದೆಲ್ಲಿಯುಂ
ಸಜ್ಜಿಕೆ ಮಾಲೆಗೊಂಡು ಮಿಗೆದಟ್ಟಮದಾಗಿ ಬರುತ್ತುಮಿರ್ದುದಾ
ದುರ್ಜಯಮೋಕ್ಷಮಾರ್ಗ ವರಪಂತಿಯಿಂದೆಂಬಿನಮಾಳ್ದುದೊಪ್ಪಮಂ        ೭೩

ವ : ಮತ್ತಮಿತ್ತಲಾ ರತ್ನಪುರದ ಸ್ತ್ರೀಜನಂಗಳುಂ ಪುರುಷರ ಮೊತ್ತಂಗಳುಂ ತಂತಮ್ಮ ನೆಲೆಮಾಡಂಗಳ ಚೂಳಿಕಾಗ್ರಂಗಳುಮಂ ವಸತಿಕಾಶಿಖರ ಶಿಖಾಕಳಾಪಂಗ ಳುಮಂ ಪ್ರೋತ್ತುಂಗಪ್ರಕಾರಪ್ರತೋಳಿಕಾಪ್ರದೇಶಪ್ರಕಟೀಕೃತಹಾಟಕಕೂಟ ಕೋಟಿಗಳುಮಂ ಸಮುತ್ತಾಳಿಕಾಟ್ಟಾಳಜಾಳಂಗಳುಮನೊರ್ಮೊದಲೊಳಮೆಡೆವಱಿಯದೆ ತಿಂತಿಣಿಗೊಂಡು ಸಂದಣಿಸಿ ನಿಂದು ಸಮುದಗ್ರಗ್ರೀವರಾಗಿರ್ದು ದೇವತ್ವಮಿಲ್ಲದೆಯನಿಮಿಷತ್ವಮಂ ಪಡೆದು ವಿಸ್ಮಯಸ್ಮೇರನಿರೀಕ್ಷಣರಾಗಿ ದೇವಾಗಮನಸಂಭ್ರಮಮಾದಭ್ರವಿಭ್ರಮಮಂ ಕೌತೂಹಳದಿಂ ನೀಡುಂನೋಡುತ್ತುಮಿರಲಾ ದೇವಸಮೂಹಮೆಲ್ಲಮಾಕಾಶಪ್ರದೇಶದಿಂದಿಳಿದಾ ಪಟ್ಟಣಮಂ ಮುಟ್ಟೆವರ್ಪುದುಂ

ಆಗಳ್ ಬಿತ್ತಿರ್ದ ಪುಣ್ಯದ್ರುಮ ನಿರುಪಮ ಬೀಜಂಗಳಿಂ ಪುಟ್ಟಿ ಮತ್ತಂ
ಮೇಗಣ್ಗೆ ವ್ಯಾಪಿಸುತ್ತಿರ್ಪವಿರಳತರ ಸಾರಾಂಕುರಾಕಾರಶಂಕಾ
ಪೂಗಪ್ರಾಕಟ್ಯಮಂ ಪುಟ್ಟಿಸುತುಮಡರ್ದು ತಾಂ ನೀಳ್ದು ಪರ್ವಿರ್ದ ಕಾಂತ್ಯಾ
ಭೋಗವ್ಯಾಕೀರ್ಣರತ್ನಂಗಳ ಬಳಗಮುಮಂ ದೂರದೊಳ್ ಕಂಡನಿಂದ್ರಂ       ೭೪

ಪುರದೆಲ್ಲಾ ತಾಣದೊಳ್ ಮಾಣದೆ ಮಣಿಗಣದಾಸಾರಮುಂ ಪೊಯ್ಯಲಂದಂ
ಬರದಿಂದಂ ಬಿಳ್ದ ರತ್ನಂಗಳ ಪೊಳೆವ ಮಹಾರಾಶಿಗಳ್ ಸುತ್ತಲುಂ ತಾ
ಳ್ದಿರೆ ಚೆಲ್ವಂ ಶ್ರೀಯ ಕೇಳೀಗಿರಿಗಳ ತೆಱದಿಂದಾಗಳಂತೆಲ್ಲವಂ ಕಂ
ಡಿರದಿಂದ್ರಂ ಚೋದ್ಯದಿಂ ರತ್ನಪುರಮಿದು ಕರಂ ತಪ್ಪದಾಯ್ತೀಗಳೆಂದಂ       ೭೫

ವ : ಬಳಿಯಂ

ಗಗನದೊಳೆಯ್ದೆಮಂಡಳಿಸಿ ನಿಂದ ವಿಮಾನಸಮೂಹಪಂತಿಗಳ್
ಸೊಗಸಿದವಲ್ಲಿ ಬೇಱೆ ಪೊಸಪಟ್ಟಣಮಂ ನೆಱೆಕಟ್ಟಿದಂದದಿಂ
ನಗರದ ಸುತ್ತಲೆಲ್ಲೆಡೆಯೊಳಂ ಸಲೆಕೋಂಟೆಯ ಮೇಲೆಯುಂ ಗೃಹಾ
ಳಿಗಳ ಸಮೀಪದೊಳ್ ತೊಳಗುವಟ್ಟಳೆಯೋಳಿಗಳಿಗಳಿಕ್ಕೆಲಂಗಳೊಳ್          ೭೬

ತೆಕ್ಕನೆ ತೀವಿರ್ದು ಕರಂ
ಕಿಕ್ಕಿಱಿಗಿಱಿದೆಯ್ದೆ ತುಂಬಿ ನೆರೆದಿರ್ದವು ಮಾ
ಣಿಕ್ಯವಿಮಾನಂಗಳವುಂ
ಮಿಕ್ಕುಱೆ ನೋಳ್ಪರ್ಗೆ ಮಾಡುತುಂ ವಿಸ್ಮಯಮಂ         ೭೭

ವ : ಅನಂತರಂ ದೇವಸಮೂಹಂಬೆರಸು ದೇವೇಂದ್ರಂ ತದ್ರತ್ನಪುರಮಂ ಮೂಱುಸೂಳ್ವರಂ ಬಲಗೊಂಡು ಪುರಲಕ್ಷ್ಮೀಮಣಿಮಯನೂಪುರಮೆಂಬಂತಿರ್ದ ಗೋಪುರ ದ್ವಾರದೊಳಗಂ ಪೊಕ್ಕು ಜಿನನ ಜನ್ಮೋತ್ಸಾಹ ಕೋಳಾಹಳಸಂಗತಸಮುತ್ತುಂ ಗಮಂಗಳಮಂ ನೋಡುತ್ತುಂ ಬಂದು ತ್ರಿಜಗಜ್ಜನಸಂಪೂಜ್ಯಮಾನ ನಾನಾವಿಧ ಶೋಭಾ ರಾರಾಜ್ಯಮಾನ ರಾಜಮಂದಿರಮುಮನಾ ಪರಿಯಿಂದಂ ಬಲಗೊಂಡು ರಾಜಾಂಗಣ ದೊಳೈರಾವಣ ಮಹಾವಾರಣಮಂ ನಿಲಿಸುವುದುಂ

ಸುರಗಂಧಗಜದ ಮೂವ
ತ್ತೆರಡುಂ ಹಸ್ತಂಗಳೊಪ್ಪಿದುವು ಲಂಬಿಸುತುಂ
ಪರಮನರಮನೆಯೆ ಪಳಿಕಿನ
ಪುರುವಿಜಯಸ್ತಂಭಪಂತಿಯೆಂಬಂತೆವೊಲಂ      ೭೮

ವ : ತದನಂತರಂ

ಎಲೆ ಸತಿ ಪೋಗಿ ನೀಂ ಪರಮಧರ್ಮಜಿನೇಶನನೆತ್ತಿಕೊಂಡು ಬಾ
ಕಳಿಯದೆ ಪೊತ್ತನೆಂದು ಶಚಿಗಂ ಬೆಸಸಲ್ ದಿವಿಜಾಧಿನಾಯಕಂ
ಬಿಳಿಯ ಗಜೇಂದ್ರದಿಂದಿಳಿದು ಪೋಗಿ ದಲಾಕ್ಷಣದಲ್ಲಿ ಪೊಕ್ಕಳಾ
ವಿಳಸಿತಸೂತಿಕಾಗೃಹಮನಾ ಶಚಿ ರಾಜ್ಯಸುಲಕ್ಷ್ಮಿಯಂದದಿಂ          ೭೯

ವ : ಮತ್ತಂ ಪೂರ್ವದಿಗ್ದೇವಿಯ ಮುಂದೆ ಪೊಳೆವ ಧವಳಕಿರಣಮಯೂಖ ಲೇಖೆಯಂತೆ ನೋಳ್ಪರ ಕಣ್ಗಂಳಿಗೆ ಸುಖದಾಯಕನಾಗಿ ನಿಜಜನನಿಯಪ್ಪ ತತ್ಸುವ್ರತಾ ಮಹಾದೇವಿಯ ಮುಂದೆ ಥಳಥಳಿಸುತ್ತುಮಿರ್ದ ತದ್ಭಾಳಕನಂ ಕಂಡು ಬಹಳಪುಳಕಕಳಿತ ಕಳೇವರೆಯಾಗಿ ಕತಿಪಯ ಪರಿವಾರದೇವೀಜನಂಬೆರಸು ಮಾಣಿಕ್ಯದೀಪಕಳಿಕಾಕಳಾಪ ಪರಿರಾಜಮಾನ ನೀರಾಜನಾಭಾಜನಸಮಾಜಂಗಳಂ ಪಿಡಿದು ಮಣಿಮಯಮೇಖಳಾ ಕ್ವಣಿತದೊಡನೆ ಮಚ್ಚರದಿಂದೆಂಬಂತೆ ಮಂಗಳಸಂಗೀತಧ್ವನಿ ನೂರ್ಮಡಿಸುತ್ತಿರೆ ಜಿನನಂ ಜಿನಜನನಿಯುಮಂ ಮೂಱುಸೂಳ್ ಬಲಗೊಂಡು ಪೀವರಾಧಾರದಿಂದಾರತಿಯನೆತ್ತಿ ನಮಸ್ಕಾರಂಗೆಯ್ದಿಂಬಳಿಯಂ

ದೇವಿಯ ಮುಂದಿರಿಸಿದಳಂ
ದೋವದೆ ಮಾಯಾಮಯಾರ್ಭಕನ ರೂಪಂ ತಂ
ದಾ ವನಿತೆಯರ್ಗೆಲ್ಲಂ ನಿ
ದ್ರಾವರಣದ ಮುದ್ರೆಯಂ ವಿಗುರ್ವಿಸಿ ಮುನ್ನಂ೮೦

ಸಲೆ ರತ್ನಾಕರದಿಂದನರ್ಘ್ಯತರಮಂ ಸದ್ರತ್ನಮಂ ನೋಡಿ ಮ
ತ್ತೊಲವಿಂದೆತ್ತುವ ಮಾಳ್ಕೆಯಿಂದೆ ಮಣಿಮಂಚಸ್ಥಾನದಿಂ ಕಾಂತಿಮಂ
ಜುಳನಂ ಬಾಳಕನಂ ಸ್ವಹಸ್ತತಳದಿಂದಂದೆತ್ತಿಕೊಂಡಿರ್ದು ಪೊ
ತ್ತಳದೊಂದಿಂದುವ ಬಿಂಬಮಂ ಪೊಱುವವೊಲ್ ಪೂರ್ವಾಚಳಂ ಮಸ್ತದೊಳ್            ೮೧

ಪೊತ್ತು ನಡೆತಂದಳಂದ
ತ್ಯುತ್ತಮ ಜಿನಶಿಶುವನಿಂದ್ರವಲ್ಲಭೆಯಾ ದೇ
ವಸ್ತ್ರೀಯರ ಮೊತ್ತಂಗಳ
ಬಿತ್ತರಿಸಲ್ ಜಯಜಯಪ್ರಣಾದೋತ್ಕರಮಂ   ೮೨

ಕ್ಷೀರೋದಲಹರಿಯಿಂದಂ
ತಾರೇಶನನೊಯ್ವ ಗಗನಲಕ್ಷ್ಮಿಯ ತೆಱದಿಂ
ದಾ ರಮ್ಯತಳ್ಪತಳದಿಂ
ದಾ ರಮಣಿ ಜಿನೇಶಶಿಶುವನೊಯ್ದಳ್ ನಲವಿಂ೮೩

ವ : ಅನಂತರಂ

ನೆಲೆಮೊಲೆಯೊತ್ತಿನಿಂ ತೊಲಗೆ ಮೇಲುದಿನಂಚಳಮೆಯ್ದೆ ನೀಳ್ದ ತೋ
ಳ್ಗಳ ಮೊದಲಲ್ಲಿ ನುಣ್ಬೊಗರದುಂ ತಲೆದೋಱೆ ಜಿನೇಶಬಾಳನಂ
ಸಲೆ ಶಚಿ ನೀಡುತಿರ್ದ ಪದದಲ್ಲಿದಿರಾಗಿ ಸುರಾಧಿಪಂ ಕರಂ
ಗಳನುರುಭೂಷಣಣಾಂಗ ತರುಶಾಖೆಗಳೆಂಬಿನಮಂದು ನೀಡಿದಂ     ೮೪

ವ : ಅಂತು ನೀಡುವುದುಂ

ಚಿಂತಿತಫಲಪ್ರದಾಯಕ
ಚಿಂತಾಮಣಿಯಂ ಸುಪುಣ್ಯದೇವತೆ ತಂದೀ
ವಂತೆ ಜಿನಶಿಶುವನಿತ್ತಳ್
ಸಂತಸದಿಂ ದೇವಿ ಸುರಪಕರತಳಪುಟದೊಳ್      ೮೫

ವ : ಅಂತೀವುದುಂ ಸಾತಿಶಯಪ್ರೀತಿನಿವಾಸನಾದ ವಾಸವಂ ಬೀಸರಂಬೊಗದ ಸಡಗರ ದಿಂದೀಸಿಕೊಂಡು ಲೇಸಾಗಿ ವಾಸನೆವಡೆದ ದೇವಾಂಗವಾಸಮಂ ತನ್ನಯ ಪರ್ಯಂಕಾಸನ ಬಂಧದೊಳ್ ಪಾಸಿ ಮೆಲ್ಲನಲ್ಲಿ ಕುಳ್ಳಿರಿಸುವುದುಂ

ಪಿರಿದಾದ ಭಕ್ತಿಯಿಂದಂ
ಧರಣೀತ್ರಯಗುರು ಜಿನೇಶಪಾದಂಗಳುಮಂ
ಪರಮಮಣಿಮಕುಟಕಿರಣೋ
ದ್ಧುರಜಳದಿಂದಿಂದ್ರನರ್ಘ್ಯಪಾದ್ಯಮನಿತ್ತಂ     ೮೬

ವ : ಅಂತು ವಿನಯವಿನಿಮಿತಸ್ತಕನಪ್ಪುದುಂ

ಸಾಸಿರಕಣ್ಗಳೊಳಂ ಪ್ರಮ
ದಾಶ್ರುಗಳೊಗೆದೆಯ್ದೆ ತುಂಬಿತುಳ್ಕಾಡುತ್ತಿರೆ
ಭಾಸುರಜಿನಶಿಶುರೂಪಂ
ಕ್ಲೇಶದಿನೀಕ್ಷಿಸಿದನಂದು ಸೌಧಮೇಂದ್ರಂ          ೮೭

ವ : ಇಂತು ನಡೆನೋಡುವ ಪೊತ್ತಿನೊಳ್

ಮಿಸುನಿಯ ಬಣ್ಣಮಂ ದಲಿಳಿಕೆಯ್ವ ಜಿನೇಶತನುಪ್ರಭಾಳಿಗಳ್
ಪಸರಿಸೆ ತತ್ಸಹಸ್ರನಯನಂಗಳ ಮೇಲೆ ವಿಶೇಷಮಾಗಿ ರಂ
ಜಿಸಿದವು ಹೇಮತಾಮರಸಚಾರುಸಹಸ್ರದಳಂಗಳೆಂಬ ಮಾ
ನಸಮನದಾಕ್ಷಣಂ ಬಿಡದೆ ಪುಟ್ಟಿಸುತುಂ ದಿವಿಜಾಸುರರ್ಗೆ ತಾಂ       ೮೮

ವ : ಮತ್ತಂ

ನಿರುಪಮರೂಪನೀಕ್ಷಿಪಡೆ ಲೋಚನಯುಗ್ಮಮಿದೆಯ್ದದೆಂದು ಸಾ
ಸಿರಮಲರ್ಗಣ್ಗಳಂ ಬಯಸಿ ಬಾಯ್ವಿಡುತಿರ್ದುದದಾಕ್ಷಣಂ ಸುರಾ
ಸುರರ ಸಮೂಹಕಂ ತವಕದಿಂ ನೆರೆದೆಲ್ಲಮುಮೆಯ್ದೆ ನೋಡಿದ
ತ್ತುರುಶುಭಲಕ್ಷಣಪ್ರಯುತಮಪ್ಪ ಜಿನಾರ್ಭಕದಿವ್ಯಮೂರ್ತಿಯಂ   ೮೯

ವ : ಅದಲ್ಲದೆಯಂ

ಕಾಂಚನದಂತೆ ರಮ್ಯತರಮಪ್ಪ ಜಿನಾಧಿಪಮೂರ್ತಿ ಸತ್ಪ್ರಭಾ
ಸಂಚಯ ಮಧ್ಯವರ್ತಿಯೆನಿಸಿರ್ದು ಸುರೇಂದ್ರಮದೇಭಮಸ್ತದೊಳ್
ಪ್ರಾಂಚಿತಮಾಗಿ ತಾಂ ಪೊಳೆಯುತಿರ್ದುದು ಶಾರದ ಮೇಘದೊಡ್ಡಿನೊಳ್
ಚಂಚದನೂನದೀಧಿತಿಯುತಾಭಿನಯೋದಿತಚಂದ್ರನಂದದಿಂ           ೯೦

ಸುರರ ಕರಂಗಳೆಂಬ ಕಮಳಾವಳಿಗಳ್ ಮುಕುಳಂಗಳಾದವಂ
ದುರುನಯನಂಗಳೆಂಬ ಕುಮುದಂಗಳರಲ್ದವು ಮಾನಸಂಗಳೆಂ
ಬಿರದೆ ಚಕೋರಕಂಗಳೊಲವಿಂ ತಣಿವಂ ತಳೆದಿರ್ದವಾಕ್ಷಣಂ
ಧರೆಯೊಳೆ ಮಾಡಿದತ್ತು ಜಿನಚಂದ್ರಮನಾಗಮಮೆಯ್ದೆ ರಾಗಮಂ  ೯೧

ವ : ತದನಂತರಂ

ಪರಿವೇಷಂಬೆತ್ತ ಬೇಱೊಂದಮಳತರಶರಚ್ಚಂದ್ರಬಿಂಬಂಬೊಲಿಂಬಾ
ದುರು ನಾನಾರತ್ನಮಾಲಾಮಯ ವಿಲುಳಿತ ಸತ್ಪಲ್ಲವಾಲಂಕೃತಿಪ್ರ
ಸ್ಫುರಿತಂ ತಾನಾದ ಮುಕ್ತಾಖಚಿತ ವರಸಿತಚ್ಛತ್ರಮಂ ತಾಳ್ದಿ ನಿಂದಂ
ಪರಮೇಶಾನೇಂದ್ರನುದ್ಭೂಷಣ ಸಮಭಿಯುತಂ ವಾರಣೇಂದ್ರಾಧಿರೂಢಂ    ೯೨

ವ : ಆಗಳ್

ಮಣಿಮಯಮಕುಟಚ್ಛಾಯಾ
ಗಣಮುಂ ನಿಜರತ್ನಮುದ್ರಿಕಾದೀಧಿತಿಯುಂ
ಪೆಣದೊಂದಿ ಮಂಡಳಿಸೆ ತಾ
ನೆಣೆಯಾದುದು ಮತ್ತಮೊಂದು ಸತ್ತಿಗೆಗೆ ಕರಂ   ೯೩

ವ : ಮತ್ತಂ ಕೆಲಂಬರಂಬರಚರೇಂದ್ರರಂಬರತಳಂ ವಿಕಚಸ್ಥಳಪದ್ಮಕದಂಬ ವಿಡಂಬನದಿಂ ತುಂಬಿದುದೆಂಬಂತೆ ಜಾಜ್ವಲ್ಯಮಾನ ಜಾಂಬೂನದ ದಂಡಕಾಂಡಪರಿ ಮಂಡಿತ ವಿಚಿತ್ರಚಿತ್ರರಚನಾರುಚಿರತರಾತಭ್ರಶುಭ್ರಾತಪತ್ರಶತಂಗಳಂ ಪಿಡಿದಿರ್ಪುದುಂ

ನಲವಂ ತಾಳ್ದ ಸನತ್ಕುಮಾರವರನುಂ ಮಾಹೇಂದ್ರನುಂ ದೇವನಿ
ಕ್ಕೆಲದೊಳ್ ನಿಂದು ಸುಚಾಮರಂಗಳನತೀವಪ್ರೌಢಿಯಿಂದಿಕ್ಕಿದರ್
ವಿಲಸತ್ಕಲ್ಪಜಭೂಷಣಾಂಗ ತರುಶಾಖಾಕಾಂಡದಲ್ಲೆಯ್ದೆ ಸಂ
ಚಳಿಸುತ್ತಿರ್ದುಱೆ ನೀಳ್ದ ಪೂಗುಡಿಗಳೆಂಬಂತಂದು ಕಣ್ಗಾದುವಂ    ೯೪

ವ : ಮತ್ತಂ ಕೆಲರಮರಾಧಿಪರಮೃತಾಂಗನಾ ಸಮುತ್ತುಂಗಮಂಗಳ ಭಂಗುರಾಪಾಂಗ ಭಂಗಿಯಂ ಸಂಘಾತಮೆಂಬಂತೆ ಥಳಥಳಿಸಿ ಪೊಳೆವ ನವರತ್ನಖಚಿತ ಕನಕದಂಡದ ಬೆಡಂಗನಂಗೀಕರಿಸಿದ ಚಟುಳಧವಳತರಚಾರುಚಾಮರ ಸಂಚಯಂಗಳ ನಿಕ್ಕುವುದುಂ

ಜಿನಪನ ಮೆಯ್ಯ ಚಾರುಕನಕೋಜ್ವಳಕಾಂತಿಗಳೀಂಟಿ ಶಂಗಮಾ
ದನಿಮಿಷದಂತಿಯೊಪ್ಪಿದುದು ಭಕ್ತಿಯಿನಂದಿದಿರಾಗಿ ಬಂದ ಕಾಂ
ಚನಗಿರಿಯಂತೆ ತಜ್ಜಿನಪದದ್ವಯ ಸನ್ನಖದೀಪ್ತಿಗಳ್ ಮೃಗಾಂ
ಕನ ಸಕುಟುಂಬನ ಪ್ರಭೆಗಳೆಂಬಿನಮಾವರಿಸಿರ್ದುವಂದದಂ೯೫

ವ : ಮತ್ತಂ ಸುತ್ರಾಮನಾ ಧರ್ಮಜಿನನಾಥನ ಜನ್ಮಾಭಿಷೇಕಕಲ್ಯಾಣ ಯಾತ್ರಾನಿ ಮಿತ್ತಮದ್ಭುತಕ್ಕೆ ಮೊಗಮಿತ್ತೈರಾವತಮಹಾಮಾತಂಗಮನಣೆದು ನೂಂಕಲೊಡಂ

ಒಲವಿಂದಂದಮರೀಜನಂ ಬಿಡದೆ ಪಾಡುತ್ತಿರ್ದನಾನೋರುಮಂ
ಗಳ ಸಂಗೀತನಿನಾದಮೆಯ್ದೆ ಪುದಿಯಲ್ ವ್ಯೋಮಸ್ಥಳೀಸ್ಥಾನಮಂ
ಕಲವೀಣಾರವ ವೇಣುನಾದ ಪಟಹಪ್ರಧ್ವಾನಮುಂ ಕೂಡೆ ದಿ
ಕ್ತಲದೊಳ್ ತುಂಬಿ ತುಳುಂಕೆ ತಾಂ ತಳರ್ದನಲ್ಲಿಂದಿಂದ್ರನಾನಂದದಿಂ           ೯೬

ತ್ರಿಜಗತ್ಪೂಜ್ಯನೆನಿಪ್ಪ ಧರ್ಮಜಿನನಂ ತಾಳ್ದಿರ್ದ ಪುಣ್ಯೋದಯಂ
ತ್ರಿಜಗನ್ಮಂಡಳದಲ್ಲಿ ನೋಳ್ಪಡೆನಗೊಂದಕ್ಕಲ್ಲದನ್ಯೋನ್ಮತಂ
ಗಜಯೂಥಂಗಳಿಲ್ಲವೆಂಬ ಮದದಿಂದಂ ಪೆಟ್ಟುವೆಚ್ಚಿರ್ದ ನಾ
ಕಜನಾಗಂ ನಡೆದತ್ತು ಮಂದಗತಿಯಿಂದಾ ವೀಥಿಕಾಮಾರ್ಗದೊಳ್   ೯೭

ಪಿರಿದಾದೈರಾವತಾಂಗೋತ್ಕಿರಣದ ಬಳಸಿಂ ಶುಭ್ರಮಾಗಿರ್ದ ದೇವಾ
ಸುರಸೈನ್ಯಂ ಕಣ್ಗೆ ಚೆಲ್ವಂ ಜಿನಜನ್ಮಾಭಿಷೇಕಾರ್ಥಮಾಯಾ
ತ್ಪರಮ ಕ್ಷೀರಾಬ್ಧಿಯೆಂಬಂತುರುತರಧವಳಚ್ಛತ್ರಫೇನಪ್ರತಾನಂ
ಪರಿಚಂಚಚ್ಛುಭ್ರಲೋಲಧ್ವಜ ಪಟಪಟಲೀ ನಿರ್ಮಲೋರ್ಮಿಪ್ರತಾನಂ       ೯೮

ವ : ಇಂತು ನಡೆವ ಪೊತ್ತಿನೊಳಮಳಿನ ಸೂರ್ಯಕಾಂತಮಯಮಾದೊಂದೇ ಕಾವಿನೊಳ್ ಪೊಂಗಳಸಂಗಳಿಂ ಪೊಳೆವ ಸಾಸಿರ ಬೆಳ್ಗೊಡೆಗಳ ಗಡಣಮಂ ಪಿಡಿದೊತ್ತಿ ಪಂತಿಗೊಂಡು ತೆತ್ತಿಸಿದರೆಂಬಂತೆ ಧರಣೀಂದ್ರಂ ತನ್ನಯ ಕೆದಱಿದ ಸಹಸ್ರಪೃಥುಳ ಫಣಾಮಂಡಳಂಗಳೊಳನೇಕವಿಧೋಪಹಾರ ಮನೋಹಾರಿ ವಿಪುಲತರ ಸಹಸ್ರಸುವರ್ಣಮಯ ಪೂರ್ಣಮಂಗಳಕಳಶಂಗಳನಭಿಷವಣನಿಮಿತ್ತಂ ಪೊತ್ತು ಮುಂದೆ ನಡೆಯೆ

ಮೇಗಣ್ಗೆ ನಿಮಿರ್ವ ಘನಕಾ
ಳಾಗರು ಸದ್ಧೂಪಧೂಮಲಕಾವರ್ತಿಗ
ಳಾಗಸದೊಳೊಪ್ಪಿದವು ಸೇ
ವಾಗತ ನಿಶ್ಶೇಷ ಭೋಗಿವೃಂದಂಗಳವೊಲ್      ೯೯

ವ : ಆಗಳ್

ಸುರತೂರ್ಯಧ್ವನಿಯುಣ್ಮಿ ಪೊಣ್ಮೆ ಸುರಪಂ ಮಾಡುತ್ತುಮಿರ್ದಾ ಜಿನೇ
ಶ್ವರಸಂಸ್ತೋತ್ರಮದೆಲ್ಲರಿಂದೆ ಮಿಗೆ ಕೇಳಲ್ಪಟ್ಟುದಿಲ್ಲಾದೊಡಂ
ಭರದಿಂದುಚ್ಚರಿಪಲ್ಲಿ ಮಾಣದಧರೋಷ್ಠಸ್ಪಂದಲೀಲಾಪರಂ
ಪರೆಯಂ ಕಂಡನುಮಾನದಿಂದಮಱಿಯಲ್ಪಟ್ಟತ್ತು ಗೀರ್ವಾಣರಿಂ  ೧೦೦

ತ್ರಿಭುವನಜನಮೆಲ್ಲಂ ಬಂದು ಕೂಡಿರ್ದುದೊಂದಾ
ಗಭಿಷವಣನಿಮಿತ್ತಂ ದೇವನಂ ಕೊಂಡುಪೋಪ
ಲ್ಲಭಿನವಘನಶೋಭಾತತ್ಪುರೀಸ್ಥಾನದೊಳ್ ತಾಂ
ಪ್ರಭವಿಸಿದುದು ಭೂಯಸ್ಸಂಭ್ರಮ ಚೋದ್ಯದಿಂದಂ       ೧೦೧

ವ : ಇಂತು ಸೌಧಮೇಂದ್ರಂ ರುಂದ್ರಪ್ರಭಾವನಾತಿಶಯದಿಂದಾ ರತ್ನಪುರಮಂ ಪೊಱಮಟ್ಟು ಕಿಱಿದಂತರಂ ಪೋದಿಂಬಳಿಯಂ

ದಿವಿಜವಿಳಾಸಿನೀಕುಳಮದಾಲಸಭೂರಿವಿಳಾಸಯಾನಮುಂ
ದಿವಿಜರ ಗಂಧಸಿಂಧುರಘಟಾಮದಮಂಥರ ಚಾರುಯಾನಮುಂ
ನವರಸಸಾರತಾಂಡವ ವಿಡಂಬನದೊಳ್ ವಿಲಸತ್ಕಳಾಸಮುಂ
ದಿವದೊಳುಪಾಶ್ರಯಂಬಡೆಯದಂತದಱಿಂ ಪಿರಿದಾಗಿ ಮುಗ್ಗುಗುಂ            ೧೦೨

ವ : ಆಧಾರಮಿಲ್ಲದಂದೆಲ್ಲಾ ಕಾರ್ಯಮುಂ ಪೊಲ್ಲದಕ್ಕುಮೆಂದು ಮನಂದಂದು ಶಕ್ರಂ ವಿಕ್ರಿಯರ್ಧಿಯಿಂದಾ ರತ್ನಪುರದ ಬಹಿಃಪ್ರದೇಶಂಬಿಡಿದು ಮಂದರಗಿರಿ ಪರಿಯಂತರಂ ಸ್ಫಟಿಕಶಿಲಾಪರಿಘಟಿತ ವಿಕಟವಿಶಾಲಸಹಸ್ರಸೋಪಾನವೀಥಿಕಾಸಂಪತ್ತಿಯ ನಂತರಿಕ್ಷ ವಿಭಾಗದೊಳ್ ವಿರಚಿಸಿಯದಱ ಪೂರ್ವಾಪರದೆರಡುಂ ಕೆಲಂಗಳೊಳಿಂದ್ರನೀಲ ಮಾಣಿಕ್ಯಮಯಂಗಳಾದ ಮೂಱುಮೂಱುಸೋಪಾನಪಂತಿಗಳಂ ವಿಗುರ್ವಿಸಿದಾಗಳ್

ಆಕಾಶಗಂಗೆಯಂ ಪರಿ
ಲೋಕಿಸಲೆಂದಂದು ಬಂದು ಬಳಸಿದ ಕಾಳಿಂ
ದಾಕೃತಿಯಂ ಪೋಲ್ತು ಕಣ್ಗೆ ಪಡೆದವಗುರ್ವಂ  ೧೦೩

ವ : ಇಂತು ದೇವೇಂದ್ರಂ ಸಮಸ್ತದೇವಸೈನ್ಯಮೆಲ್ಲಮಂ ವೈಕುರ್ವಣ ಸೋಪಾನ ವೀಥೀಪಂತಿಗಳ ಮೇಲೆ ಪೋಗಲ್ವೇಳ್ದನಂತರಂ

ನೆಲದಿಂದಂ ಗಗನಸ್ಥಳಕ್ಕೆ ನೆಗೆದತ್ತೈರಾವತಂ ಶಕ್ರನು
ಜ್ವಳಸಾಹಸ್ರವಿಲೋಚನಪ್ರಭೆ ನಭೋಭಾಗಂಗಳಂ ಚಿತ್ರಿಸಲ್
ಸಲೆ ಘಂಟಾರವನಾದಮೆಣ್ದೆಸೆಗಳಂ ತಳ್ಪೊಯ್ಯೆ ಚಾತುರ್ಯ ಮಂ
ಜುಳವಲ್ಲಂಘನದಿಂದಮಾ ಸಭೆಗೆ ತಾಂ ಮಾಡಿತ್ತುಮಾಶ್ಚರ್ಯಮಂ          ೧೦೪

ನೆಗೆದವು ಕೂಡೆ ಕುಂಜರಘಟಾವಳಿಗಳ್ ಜವದಿಂದಮಾಕ್ಷಣಂ
ಮಿಗುವ ತುರಂಗಮಂಗಳಗಣಂಗಳವಂದೊಡನೊಡ್ಡುಗೊಂಡು ಮೇ
ಗೊಗೆದವು ಮತ್ತಮಾಗಳೊಡನೆನೊರ್ಮೊದಲಲ್ಲಿ ರಥಂಗಳೋಳಿಗಳ್
ನೆಗೆದವವುಂ ಪದಾತಿಗಳ ಪಂತಿಗಳುಂ ನೆಗೆದಿರ್ದುವೆಲ್ಲಮುಂ         ೧೦೫

ಪೊಸಪೊಸರಾಹುಮಂಡಳಿಗಳೆಳ್ತರುತಿರ್ದಪುವೆಂದು ನಾಡೆಯುಂ
ಶಶಿರವಿಮಂಡಳಂಗಳಿರದಂಜುವಿನಂ ಹರಿನೀಳಸದ್ವಿಮಾ
ನಸಮುದಯಂಗಳಂ ನೆಗೆದವಂದದಱೊಂದು ತಮಸ್ಸಮೂಹಮಂ
ಪೊಸತಱೆಯಟ್ಟುವಂತೆ ನೆಗೆದಿರ್ದವು ಶೋಣವಿಮಾನಕಂಗಳುಂ     ೧೦೬

ಲಟಹಸುರಾಂಗನಾನಿಕರಮಂ ನೆಱೆತಾಳ್ದಿದ ಪೀನನಿರ್ಮಳ
ಸ್ಫಟಿಕಶಿಲಾವಿನಿರ್ಮಿತ ವಿಮಾನಚಯಂ ನೆಗೆದತ್ತದಾ ನಭ
ಸ್ತಟಿಗೆ ಸರೋಜಿನೀಲತೆಗಳೊಳ್ ಪುದಿದಿರ್ದ ಸರೋವರಂಗಳು
ತ್ಕಟದೆ ನಭಸ್ಥಳಕ್ಕೆ ನೆಗೆವಂತಿರೊಡರ್ಚಿಸಿದತ್ತು ಚಿತ್ರಮಂ            ೧೦೭

ಜಿನಮತಪಕ್ಷಮನಾಂತಿ
ರ್ದನವದ್ಯರ್ ಮೇಗೆ ನೆಗೆದು ಪೋಪುದನೆಲ್ಲಾ
ಜನವಿತತಿಗಱಿಪುವಂತೆ ದ
ಲನಿಮಿಷಸೈನ್ಯಂ ನಭಕ್ಕೆ ನೆಗೆದತ್ತಾಗಳ್           ೧೦೮

ಅಂಬರದೊಳಿರ್ದ ದೇವನಿ
ತಂಬಿನಿಯರ ತೆಕ್ಕೆಗೊಂಡ ಸೋರ್ಮುಡಿಗಳ್ ಚೆ
ಲ್ವಂ ಬಳಯಿಸಿದವು ಗಗನದೊ
ಳಿಂಬೆನೆ ನೆರೆದಿರ್ದ ಸೋಗೆಗಳ ತೆಱದಿಂದಂ         ೧೦೯

ತಿಂತಿಣಿಗೊಂಡು ಕೂಡೆ ನೆರೆದಿರ್ದ ಸಮಸ್ತವಿಮಾನಮಾಳಿಕಾ
ಸಂತತಿಯಿಂದೆ ಸಂದಣಿಸಿದತ್ತು ನಭಸ್ಥಳಿ ಸರ್ವದಿಕ್ಪ್ರದೇ
ಶಾಂತಮಸಂಖ್ಯಸುರವಾದ್ಯವಿತಾನಪಟುಪ್ರಣಾದದಿಂ
ದಂತುಱೆ ತುಂಬಿದತ್ತುರು ಪತಾಕೆಗಳಳ್ಳಿಱಿಯಲ್ ನಭೋಂತಮಂ೧೧೦

ವ : ಆಸಮಯದೊಳಿಂದ್ರನೈರಾವತರೀಂದ್ರಮಂ ಮೇರುಗಿರೀಂದ್ರಕ್ಕಭಿಮುಖ ಮಾಗಿ ಕೂರಂಕುಸದಿಂದಣೆದುನೂಂಕುವುದುಂ

ಒಂದೊಡ್ಡುಗಳೊಡ್ಡಾಗಿಯೆ
ಕುಂದದೆ ಸಪ್ತಾಂಗಭೇದದಿಂದಂ ತೋರ್ಕುಂ
ಮಂದೈಸಿದ ಮೊದಲೊಡ್ಡುಮ
ದೊಂದೆ ದಲಱುವತ್ತುನಾಲ್ಕುಸಾಸಿರಮಕ್ಕುಂ   ೧೧೧

ವ : ಮಹರ್ಧಿಕರಪ್ಪೊರ್ವೊರ್ವ ದೇವರ್ಕಳನಂತಪ್ಪ ಮೊದಲೊಡ್ಡುಗಳಱು ವತ್ತುನಾಲ್ಕುಸಾಸಿರಂ ಬಳಸಿಕೊಂಡಿರ್ಕುಮಾ ಮಹರ್ಧಿಕದೇವರ್ಕಳಸಂಖ್ಯಾತರಪ್ಪುದು ಕಾರಣಂ ಸಾಮರ್ಥ್ಯ ಭೇದದಿಂ ದ್ವಿಗುಣ ತ್ರಿಗುಣ ಚತುರ್ಗುಣ ವಿಸ್ತಾರಂಗಳಾಗುತ್ತರೋತ್ತರಮ ಸಂಖ್ಯಾತಂಗಳಾದ ಚತುರ್ವಿಧದೇವರ್ಕಳ ಚತುರಂಗಸೈನ್ಯಸಮೂಹಂಗಳೆಲ್ಲಮೊಂದಾಗಿ ಕೂಡಿ ಗಗನಮಂಡಳದೊಳಖಂಡಿತಂಗಳಾಗಿ ಮೊತ್ತಂಗೊಂಡು ಸಡಗರದಿಂದಂ ನಡೆಯೆ

ಕೀರ್ತಿಮುಖಂಗಳಿಂ ಪೊಳೆವ ಕೈಗಳನೆತ್ತಿ ತಟಿಲ್ಲತಾಳಿಗಳ್
ವರ್ತಿಸಿದಂತೆ ತೋಱಿರೆ ವಿಷಾಣ ಪರಸ್ಪರಘಾತಘೋಷವಿ
ಸ್ಫೂರ್ತಿ ವಿಘೂರ್ಣಿಸಲ್ ಮೊಳಗಿನಂತಿರೆ ಕಾರ್ಮುಗಿಲೊಡ್ಡಿನಂದದಿಂ
ಸಾರ್ತರುತಿರ್ದುದಂದು ಗಜಸೇನೆ ಬಿಡುತ್ತೆ ಮದಾಂಬುಧಾರೆಯಂ    ೧೧೨

ಕವಿತರೆ ಲೋಳೆಗಳ್ ಬಿಡದೆರಳ್ಕಟವಾಯಿಗಳಿಂದೆ ಪೂಗಳಾ
ದಿವದೊಳೆ ತುಂಬಿದಂತೆ ದೆಸೆಗಳ್ ತೆಱಪಿಲ್ಲದವಾಗೆ ಹೇಷಿತ
ಪ್ರವಿತತಿಗೊಡ್ಡುಗಟ್ಟಿ ನಡೆತಂದವು ಕೂಡೆ ತುರಂಗಮಂಗಳಂ
ದವಿರಳ ದೇವವಾಹಿನಿಯ ತುಂಗತರಂಗಚಯಂಗಳೆಂಬಿನಂ೧೧೩

ಘೋಣಾವಿವರ ಸಮೀರಣ
ಘೂರ್ಣಿತ ವದನಂಗಳೆಸೆದವಶ್ವಂಗಳ್ ಕಡಿ
ಯಾಣಂಗಳೊಡನೆ ತಮ್ಮ ಪ್ರ
ಯಾಣಾರೋದನಮನುಸಿರ್ದು ಝಂಕಿಪ ತೆಱದಿಂ           ೧೧೪

ಮಿಗೆ ಚೀತ್ಕಾರನಿನಾದದಿಂ ಜಿನಗುಣಸ್ತೋತ್ರಾಂಕಗೀತಂಗಳೋ
ಳಿಗಳಂ ಪಾಡುತುಮಿರ್ದುದೆಂಬ ತೆಱದಿಂ ಬಂದತ್ತು ನಾನಾಯುಧಾ
ಳಿಗಳಿಂ ತೀವಿದ ತಪ್ತಹೇಮರಥಯೂಥಂ ಭಾಸನಾಥಂ ಮಹಾ
ಖಗಸಂಪಾದಿ ಮನೋರಥಂ ಧ್ವಜಸಮಾಲಿಂಗತ್ಪಯೋಭೃತ್ಪಥಂ  ೧೧೫

ಪಿರಿದದ್ಭುತಕಾಯಬಲಂ
ನೆರೆದು ಬರುತ್ತಿರ್ದುದಂದು ಘನಪತ್ತಿಬಲಂ
ನಿರುಪಮ ಸಂಪತ್ಪ್ರಬಲಂ
ಪರದುಸ್ಸಹ್ಯಪ್ರತಾಪರೂಪಾತಿಬಲಂ೧೧೬

ವ : ಮತ್ತಂ

ಭರದಿಂದಂ ರಸಭಾವಮಂ ಪಡೆದು ತತ್ತೂರ್ಯಾಂಗಮೆಂಬಿಂದ್ರಭೂ
ಮಿರುಹಂ ಕೊಟ್ಟ ವಿಶೇಷವಾದ್ಯಚಯಮಂ ನಾನಾಗತಿಸ್ಥಾನಬಂ
ಧುರಮಾರ್ಗಂಗಳಿನಂದು ಬಾಜಿಸುತುಮುದ್ಯತ್ತಾನಮಾನಂಗಳೊಳ್
ಸರಿಸಂಬೆತ್ತು ಬರುತ್ತುಮಿರ್ದುದು ಕರಂ ಗಂಧರ್ವದೇವೋತ್ಕರಂ    ೧೧೭

ಗಡಣಮಗೊಂಡೆಳಮಿಂಚುಗಳ್ ಪೊಳೆವವೋಲಾಡುತ್ತುಮಿರ್ಪಲ್ಲಿ ಸಂ
ಗಡದಿಂ ಬಾಹುಪರಿಭ್ರಮೋಲ್ಲಸಿತ ನಾಟ್ಯಚ್ಛದ್ಮದಿಂ ಚೆಲ್ವು ಮುಂ
ದಿಡೆ ತದ್ವ್ಯೋಮಸಮುದ್ರದಲ್ಲಿ ಪಿರಿದಾಗೀಸಾಡುತಿರ್ಪದದಿಂ
ನಡೆಗೊಂಡತ್ತು ನಿರಾಕುಳಂ ಬಹಳನಾನಾನರ್ತಕೀಸಂಕುಳಂ೧೧೮

ವ : ಅನಂತರಂ

ರಾಗದೊಳೊಂದಿ ವಿಭ್ರಮದಗುರ್ವನೆ ತೋಱುವ ವೃದ್ಧಮೂರ್ತಿಯ
ಪ್ಪಾಗಸಮೆಂಬ ಕಾಮಿನಿಯ ಮಸ್ತಕದಿಂದಿಳಿತರ್ಪ ಬೆಳ್ಪು ಲೇ
ಸಾಗೆಸೆದಿರ್ದು ನೀಳ್ದ ಜಡೆಯೊಂದೆ ದಲೆಂಬಿನಮೊಪ್ಪುವಾ ನಭೋ
ಗಂಗೆಯನಂದು ನಿರ್ಜರವರಂ ಕಡುದೂರದೆ ಬಿಟ್ಟುಪೋಪುದುಂ     ೧೧೯

ವ : ಆ ಸಮಯದೊಳ್

ಸುರರ ಕಿರೀಟಕಾಂತಿಗಳ ಪರ್ವುಗೆಯಿಂದೆ ವಿಚಿತ್ರವರ್ಣಮಂ
ಧರಿಸಿದ ತಾರಕಾತತಿಗಳೊಳ್ ಪುದಿದಿರ್ದ ದಲಗ್ರಭಾಗದೊಳ್
ತರಣಿಯ ಬಿಂಬಮಂ ತಳೆದ ಶಾರದನೀರದಖಂಡಮಾ ಜಿನೇ
ಶ್ವರಶಿಶುಗೆತ್ತಿದೊಂದು ಪೊಸಮುತ್ತಿನ ಸತ್ತಿಗೆಯಂತೆ ರಂಜಿಕುಂ      ೧೨೦

ಪಿರಿದುಂ ಶೀಘ್ರಗತಿಪ್ರಭೂತಪವಮಾನಾಕೃಷ್ಣಮಾಣಾಂಬುದೋ
ತ್ಕರಮಾ ಚಾರುವಿಮಾನಸಂಹತಿಗಳಂ ಪಿಂದಟ್ಟಿ ಪೋದತ್ತು ಬಂ
ಧುರದಿಂದಂತವಱಲ್ಲಿ ಕೀಲಿಸಿದ ನಾನಾರತ್ನಕಾಂತಿಸ್ಫುರ
ತ್ಸುರಚಾಪಂಗಳನೆಯ್ದೆಕೊಳ್ವ ಬಗೆಯಿಂದೆಂಬಂತೆ ತತ್ಕಾಲದೊಳ್೧೨೧

ವ : ಮತ್ತಮಾಗಳ್

ಸುರಕರಿ ಬೆಳ್ಮುಗಿಲೊಡ್ಡಂ
ನಿರೀಕ್ಷಿಸಿ ಪ್ರತಿಗಜಂ ದಲೆಂಬೀ ಬಗೆಯಿಂ
ಭರಿಕೈಗಳನೆತ್ತಿಯದ
ಕ್ಕಿರದಿದಿರಂ ಬಿಡದೆ ನಡೆದು ಪೋದತ್ತಾಗಳ್     ೧೨೨

ಸೊಕ್ಕಿಂದೆನ್ನಯ ಮುಂದಿದೊಂದುಮೊಗದೊಡ್ಡಿಂದಾಂತು ನಿಂದಿರ್ಪ ಸಾ
ಸಕ್ಕಂ ತಕ್ಕಗಜಂಗಳಿಲ್ಲ ದಲಿದೊಂದುಂ ಬಂದು ನಿಂದಿರ್ದುದೆ
ನ್ನುರ್ಕಂ ತೋಱುವೆನೆಂದು ದೊಡ್ಡ ಮುಗಿಲೊಡ್ಡಂ ಪೊಯ್ದು ನೂಂಕಲ್ಕೆ ಮೇ
ಲ್ಪೊಕ್ಕುಂ ಪಾಱಿ ಸಮೀರನಿಂ ಹಳಿಗಿ ತಾಂ ಮಾಡಿತ್ತು ಹಾಸ್ಯತ್ವಮಂ         ೧೨೩

ವ : ಇಂತು ರುಂದ್ರಲೀಲೆಯಿಂದಮರೇಂದ್ರನಮರವರೂಥಿನೀಸಮೇತನಾಗಿ ಮನೋವೇಗದಿಂ ವಿಯನ್ಮಾರ್ಗದೊಳ್ ಪೋಗುತ್ತುಮಿರ್ಪುದುಂ

ತೊಟ್ಟನೆ ಕಟ್ಟಿದಿರೊಳ್ ಪೊಂ
ಬೆಟ್ಟಂ ಜನ್ಮಾಭಿಷೇಕ ಸಮುಚಿತಪಟ್ಟಂ
ದಿಟ್ಟಿಗೆ ಪೊಲನಾದುದು ಮಿಗೆ
ಪುಟ್ಟಿದುತುಂ ತನ್ನ ಕಾಂತಿಯಿಂ ಮಿಂಚುಗಳಂ   ೧೨೪

ವ : ಆ ಸಮಯದೊಳಖಂಡಮಾಗಡಿಕಿಲ್ಗೊಂಡಿರ್ದ ಷೋಡಶಕಲ್ಪಭೂಮಿಕೆ ಗಳೆಂಬ ಪದಿನಾಱುಂ ನೆಲೆಯ ಮಣಿಮಾಡಂಗಳನಾಂತಿರಲೆಂದಾಧಾರಮಾಗಿ ಸುವರ್ಣ ಮಯಮಾದೊಂದು ಕಂಭಮನಾಂಕೆಗೊಟ್ಟುನಂಬುಜಗರ್ಭನೆಂಬಂತುನ್ನತಿಯಂ ಪಡೆದು ತನ್ನಯ ಚೂಳಿಕೆಯಿಂ ಮೊದಲ ಸ್ವರ್ಗದ ನೆಲಗಟ್ಟಿನ ತಳಮಂ ಮುಟ್ಟುತ್ತುಂ ನವನವತಿ ಸಹಸ್ರಯೋಜನೋತ್ಸೇಧದಿಂ ಪ್ರಶಸ್ತಮಾದ ಮಂದರಮಹೀಧರೇಂದ್ರಮಂ ಕಂಡು ಭವನಾಮರೇಂದ್ರರಪ್ಪ ಚಮರವೈರೋಚನರ್ಗೆ ತೋಱಿ

ಉದ್ಯಾನಶೋಭಮಾನಂ
ಹೃದ್ಯೋಜ್ವಳವಜ್ರಧಾರಿ ಸುಮನಸ್ಸೇವ್ಯಂ
ಸದ್ವರ್ಣಮಾಗಿಯೆನ್ನಂ
ತಿರ್ದುದು ಮಂದರಮಿದೆಂದು ಪೊಗಳ್ದಂ ಸುರಪಂ          ೧೨೫

ಮೇರುನಿತಂಬಿನಿಯಂಗಮ
ನೋರಂತೆ ಮುಸುಂಕಿ ಮೇಖಳಾಮಣಿರುಚಿ ಕಿ
ಮ್ಮೀರಮದಾಗಿರ್ದಂಬರ
ಮಾರಯಲಂಬರದ ತೆಱದಿನಿರ್ದುದದಕ್ಕಂ        ೧೨೬

ಸುರಚಾಪ ಚಿತ್ರಮೇಘೋ
ತ್ಕರಮೆಲ್ಲಾ ದೆಸೆಗಳಿಂದೆ ಬಂದಿರೆ ಕೆಲದೊಳ್
ವರರತ್ನವಿರಚನಾಯುತ
ಧರಂಗಳೋಲೈಸಲೆಂದು ಬಂದವೊಲೆಸೆಗುಂ      ೧೨೭

ಎನ್ನ ಸುವರ್ಣಕೋಟಿಗಳನೀಯುಡುಚೋರರೆ ಕಳ್ದುಕೊಳ್ವೆವೆಂ
ಬನ್ನಯದಿಂದೆ ಸುತ್ತಿಬರುತಿರ್ದಪರೆಂದು ಮಹೀಧರಾಧಿಪಂ
ತನ್ನ ವಿಶಾಲವತ್ಕಟದಲ್ಲಿ ತೊಳಲ್ವವೊಲಾಗಿ ಮಾಡಿದಂ
ಪ್ರೋನ್ನತತೇಜದಿಂದೆಸೆವ ಭಾಸ್ಕರಮುಖ್ಯನವಗ್ರಹಂಗಳಂ            ೧೨೮

ವಿಳಸಿತ ಭದ್ರಶಾಲವನಮೆಂಬ ವಿಶಾಲವಿಶೇಷ ಮೇಖಳಾ
ವಳಯದೊಳೊಪ್ಪುಗುಂ ಸುರಮಹೀಧರಮೆಂಬ ನಿತಂಬಿನೀಸಮು
ಜ್ವಳಿತ ನಿತಂಬಮಂಡಳದ ಮೇಲೆ ಹರಿನ್ಮಣಿಶಾಲಿಮೇಖಳಾ
ವಳಯದ ಮಾಳ್ಕೆಯಿಂ ಮಿಗೆ ವಿಚಿತ್ರತರಂ ವಿಬುಧಾಳಿ ಸಂತತಂ      ೧೨೯

ವ : ಆ ಮೇರುಗಿರೀಂದ್ರಮಂ ಬಳಸಿದ ಭದ್ರಸಾಲಮೆಂಬ ಪ್ರಥಮಮೇಖಳಾವನದ ನಾಲ್ಕುಂದೆಸೆಗಳೊಳಂ ಮಣಿಕನಕರಜತಮಯಂಗಳಾದ ನಾಲ್ಕಕೃತ್ರಿಮ ಜಿನ ಚೈತ್ಯಾಲಯಂಗಳೊಳ್ ತೊಳಗುತ್ತುಮಿರ್ಪುವಲ್ಲಿಂ ಮೇಲೆ

ಅತ್ಯುಚ್ಚೈಸ್ತನತಟಮಂ
ಬಿತ್ತರಿಸಿ ಮುಸುಂಕಿದುರು ಹರಿದ್ವಸ್ತ್ರದವೋಲ್
ಸುತ್ತಿರ್ದುದು ನಂದನಮೆಂ
ಬುತ್ತಮವನಮತ್ತಪುಷ್ಟಜಾತಿಸಪತ್ರಂ            ೧೩೦

ವ : ಆ ನಂದನಮೆಂಬದ್ವಿತೀಯಮೇಖಳಾವನದ ನಾಲ್ಕುಂದೆಸೆಗಳ ನಾಲ್ಕು ಮೆಯ್ಯೊಳಂತಪ್ಪ ನಾಲ್ಕಕೃತ್ರಿಮಜಿನಚೈತ್ಯಾಲಯಂಗಳ್ ಬೆಳಗುತ್ತುಮಿರ್ಪುವಲ್ಲಿಂದತ್ತಲ್

ತೊಳಗುವ ಮೇರುವೆಂಬ ವರಕಲ್ಪಮಹೀರುಹದಲ್ಲಿ ಪುಟ್ಟಿದ
ಗ್ಗಳಮೆನಿಸಿರ್ದ ಸೌರಭವಿಲೋಭವಿಲೀನಮದಾಳಿನೀ ಸಮಾ
ಕುಳಿತ ವಿಶೇಷಸೌಮನಸಮಂಜರಿಯಂತಿರೆ ಕಣ್ಗೆ ಶೋಭೆಯಂ
ಬಳಯಿಸಿದತ್ತು ಸೌಮನಸಮೆಂಬ ವನಂ ಸ್ಮರಕೇಳಿಕಾರಣಂ            ೧೩೧

ವ : ಆ ಸೌಮನಸಮೆಂಬ ತೃತೀಯಮೇಖಳಾವನದ ನಾಲ್ಕುಂದೆಸೆಗಳ ನಾಲ್ಕು ಭಾಗಂಗಳೊಳಂ ಸುವರ್ಣರೂಪ್ಯರತ್ನರಮಣೀಯಂಗಳಾದ ನಾಲ್ಕಕೃತ್ರಿಯ ಜಿನ ಚೈತ್ಯಾಲಯಂಗಳೊಳ್ ತೊಳಗುತ್ತುಮಿರ್ಪುವಲ್ಲಿಂ ಮೇಲೆ

ಸುರಗಿರಿಯೆಂಬ ಕಾಮಿನಿಯ ಮಸ್ತಕದಲ್ಲಿಯ ನೀಳ್ದ ಕುಂತಳೋ
ತ್ಕರದವೊಲಿರ್ದ ವೃಕ್ಷಚಯದಿಂ ಮಿಗೆ ನೀಲತೆವೆತ್ತ ಪಾಂಡುಕೋ
ದ್ಧುರವನಮೆಂಬ ತೋರಮುಡಿಯಲ್ಲಿ ತುಱುಂಬಿದ ಕೇತಕೀಮನೋ
ಹರದಳಮೆಂಬಿನಂ ಬಗೆಗೆವಂದುದು ಪಾಂಡುಶಿಲಾತಲಂ ಕರಂ        ೧೩೨

ವ : ಅಂತಖಂಡಶೋಭಾಕರಂಡಕಮಾದ ಪಾಂಡುಕವನಮೆಂಬ ಚತುರ್ಥ ಮೇಖಳಾ ವಳಯದೊಳಂ ಚಿತ್ರೀಯಮಾಣ ಮಂಡನಮಹಿಮಾಪರಿಮಂಡಿತಂಗಳಪ್ಪ ನಾಲ್ಕಕೃತ್ರಿಮ ಜಿನಚೈತ್ಯಾಲಯಂಗಳಿಂ ಲಾಲನೀಯಮಾಗಿರ್ದುದಲ್ಲಿ ತತ್ತದ್ದಿಗ್ದೇಶ ದೊಳುದ್ಭವಿಸಿದ ತೀರ್ಥಕರಜನ್ಮಾಭಿಷವಣಕರಣಕಾರಣಂ ಪೀಠೀಭೂತತಾದೃಗ್ವಿ ಶಿಷ್ಟಶಿಳಾಚತುಷ್ಟಯಂ ಕಣ್ಗಾನಂದಮಂ ಪುಟ್ಟಿಸುತ್ತಿರ್ದುದಲ್ಲಿಂದಂ ಮೇಲೆ ತುತ್ತತುದಿಯೊಳ್

ಬೆಳ್ಪೆಸೆದಿರ್ಪ ಪಾಂಡುಕಮುಮೊಳ್ಕವಿಲಾದುರುಪಾಂಡು ಕಂಬಳಂ
ನೋಳ್ಪೊಡಲಕ್ತಕಪ್ರಭೆಯ ರಕ್ತಕಮುಂ ಕಿಸುಗಲ್ಲ ಸಾರದಿಂ
ಕಲ್ಪಿತರಕ್ತಕಂಬಳಮುಮೆಂಬಿವು ನಾಲ್ಕುತಟಂಗಳೋಳಿಯಿಂ
ಮಾಳ್ಪುವಗುರ್ವನೀಶನದಿಶಂ ಮೊದಲಾದ ವಿದಿಗ್ವಿಭಾಗದೊಳ್    ೧೩೩

ಬಲವರುತಿರ್ಪ ಸೂರ್ಯಶಶಿಗಳ್ಗಿರದಂಜಿ ತಮಸ್ಸಮೂಹಕಂ
ನಿಲಲಣಮಾಱದೋಡಿ ಮಿಗೆಪೋಗಿ ಸುರಾಚಳಚೂಳಿಕಾಗ್ರದೊಳ್
ನೆಲಸಿದುದೆಂಬಿನಂ ಸುಹರಿನೀಳಮಯಾಗ್ರದ ಕಾಂತಿ ಸುತ್ತಲುಂ
ತಳೆದುದಗುರ್ವನಿಂದ್ರಗಿರಿಗೆತ್ತಿದ ಝಲ್ಲರಿಯೆಂಬ ಮಾಳ್ಕೆಯಿಂ     ೧೩೪

ವ : ಇಂತು ಬೇಱೆವೇಱೆ ನಾಲ್ಕುಮೇಖಳಾವನಾಂತರಾಳದೊಳಕೃತ್ರಿ ಮಂಗಳಾದ ಷೋಡಶಜಿಮಂದಿರಂಗಳಂ ತಾಳ್ದಿ ನಿಂದ ಮಂದರಗಿರಿಯಂ ಪುರಂದರನಂ ದೀಕ್ಷಿಸಿದ ತೀರ್ಥಸ್ನಾನಮೆಂದು ಕರಕಮಳಂಗಳಂ ಮುಗಿದು ವಂದನಾಪರನಪ್ಪುದುಮಾ ಗರ್ವದಿಂ ಗರಿಷ್ಠಾಪ್ರತಿಷ್ಠಾಧಿಷ್ಠಿತಮದುದೆಂಬಂತೆ ಉನ್ನತಶಿರಸ್ಕಮಾಗಿರ್ದು ದಂತುಮಲ್ಲದೆಯುಂ

ಸ್ಥಳಕಮಳರೇಣುಪುಂಜಂ
ಗಳನನಿಳಂ ನೆಗಪೆ ಮಂಡಳಿಸಿ ನಿಲೆ ತುದಿಯ
ಲ್ಲೆಳಸಿ ಜಿನನೀಕ್ಷಣಕ್ಕು
ದ್ಗಳಮಂ ನೆಗಪಿರ್ದುದೆಂಬಿನಂ ಕಣ್ಗೆಸೆಗುಂ       ೧೩೫

ವ : ಮತ್ತಂ

ಮೊದಲೊಳನಂತಲೋಕಮಧಃಕೃತಮಾದುದು ಮತ್ತಮುನ್ನತ
ತ್ರಿದಶರಲೋಕಮಿಂದೆನಗೆ ಸಂಪದದಿಂದಧಿಕಂ ದಲಾದುದೆಂ
ದದಱತಿಕೋಪದಿಂದಮರುಣಾಬ್ಜವಿಲೋಚನವಕ್ತ್ರಬಿಂಬಮಂ
ಪದೆದಿರಲೆತ್ತಿನೋಡುವವೊಲೊಪ್ಪಮನಾಳ್ದುದು ಮಂದರಾಗ್ರಕಂ೧೩೬

ದಿವಸತಮಸ್ವಿನೀಭ್ರಮಣದಿಂದಭಿರಂಜಿಪ ಕಾಂಚನಾಚಳಂ
ನವನಿಜತೇಜಮಂ ನಿಖಿಳಕಾಷ್ಠೆಯೊಳುಜ್ವಲಿಸುತ್ತುಮಿರ್ದುದು
ಪ್ರವರವಿವಾಹದಲ್ಲಿ ಸಲೆ ದಂಪತಿಗಳ್ ಬಲಗೊಳ್ವ ಹೋಮವ
ಹ್ನಿವಿಸರ ಪುಂಜಮೆಂಬ ಬಗೆಯಂ ನೆಱೆಪುಟ್ಟಿಸುತಿರ್ದುದಾಕ್ಷಣಂ    ೧೩೭

ಬಿಳಿಯ ಮುಗಿಲ್ಗಳಾವರಿಸಿದರ್ಧಸುವರ್ಣಮಯಸ್ವರೂಪಮಂ
ತಳೆದುದು ಪಂತಿಯೆಂಬುರುಕಪಾಲಮಾಲಿಕೆಯಿಂದಮೊಪ್ಪಿ ತಾಂ
ತಲೆಯೊಳೆ ಪೊತ್ತು ಪಾಂಡುಕಶಿಲಾತಳಮೆಂಬ ದಲರ್ಧಚಂದ್ರನಂ
ಬಳಯಿಸಿತರ್ಧನಾರಿ ಪರಿಶಂಕೆಯನಾಂತು ಗಿರೀಶಭಾವಮಂ           ೧೩೮

ಶಶಿರವಿಮಂಡಳಂಗಳೆರಡುಂ ಕೆಲದೊಳ್ ವರಶಂಖಚಕ್ರದಂ
ತೆಸೆದಿರಲಂತರಾಳ ಧೃತನೀಲಮಣಿಪ್ರಭಹೇಮಮೂರ್ತಿ ಕಂ
ಪೊಸತೆನಿಸಿರ್ದ ಪೀತವಸನಾವೃತಕೃಷ್ಣನ ಮೂರ್ತಿಯಂದಮಂ
ಪೊಸಯಿಸಿತಿರ್ದು ಮೇರುನವಮಾಲೆಯಿನೊಪ್ಪಮನಾಂತುದಗ್ಗಳಂ            ೧೩೯

ಬಂದಪನೆನ್ನ ಸನ್ನಿಧಿಗೆ ಧರ್ಮಜಿನೇಶ್ವರನೆಂಬ ತೋಷದಿಂ
ದಂದು ಮಣಿಪ್ರಭಾತತಿಗಳೆಂಬ ಲಸತ್ಪುಲಕೋದ್ಗಮಂಗಳಿಂ
ದೊಂದಿ ಮರುಚ್ಚಲತ್ಸುರಮಹೀರುಹಶಾಖೆಗಳೆಂಬ ಕೈಗಳ
ಸ್ಪಂದನದಿಂದೆ ನಾಟ್ಯಮನೊಡರ್ಚುತುಮಿರ್ದವೊಲಾಯ್ತು ಮಂದರಂ         ೧೪೦

ಮಿಗೆ ನಿಷ್ಕಂಪ ಚಮೂಧ್ವಜಾಗ್ರನೆನಿಪಾ ದೇವೇಂದ್ರನೆಳ್ತಪ್ಪ ಚೋ
ಜಿಗಮಂ ನೋಡುವೆನೆಂದು ಮುಂದೆ ಪಿರಿದಾದೌತ್ಸುಕ್ಯದಿಂದೆಯ್ದೆ ಸಾ
ರಿಗೆ ತಾಂ ಬಂದುಱೆ ನಿಂದುದೆಂಬ ತೆಱದಿಂದಾಯ್ತಾ ಕ್ಷಣಂ ಸಮ್ಮುಖಂ
ನಗರಾಜಂ ಪ್ರತಿನಾದದಿಂ ವಿನಯವಾಕ್ಸಂಭಾಷಣಂಗೆಯ್ವವೊಲ್   ೧೪೧

ಗಜದಂತಾದ್ರಿಗಳಿಂದಮೊಪ್ಪಿ ಘನಸತ್ಪಾದಂಗಳಿಂ ಶೋಭೆಯಂ
ಭಜಿಸಿ ಪ್ರೋನ್ನತದಾನವಾರಿಗಳಿಗಾಧಾರಂ ದಲಾಗಿರ್ದು ಸ
ರ್ವಜನಸ್ತುತ್ಯಕರಾಗ್ರ ಸಂಚರಣದಿಂ ಚೆಲ್ವಾಗಿಯಾ ಮೇರು ನಾ
ಕಜಮಾತಂಗದ ಮುಂದೆ ತಾಂ ಪ್ರತಿಗಜಂ ನಿಂದಿರ್ದುದೆಂಬಂದದಿಂ    ೧೪೨

ವ : ಮತ್ತಮಂತಲ್ಲದೆಯುಂ

ನಿರತಿಶಯಾಗಮಪ್ರಭವಕಾರಣಕಂ ಘನಮಾನಮಾನಿತಂ
ಸ್ಥಿರಗುಣಕಂ ಕ್ಷಮಾಧರಮುಮೆಯ್ದೆ ನಿರಾಶಮಶೇಷಲಾಲಿತಂ
ಗುರುಭುವನಕ್ಕೆ ಸಾಧುಪರಿಕೀರ್ತಿತ ಪಾದಮುಮಾಗಿ ತಜ್ಜಿನೇ
ಶ್ವರನ ಸಮೀಪದೊಳ್ ಗಣಧರಪ್ರಭುವೆಂಬಿನಮಿರ್ದುದಾ ನಗಂ     ೧೪೩

ವ : ಇಂತಪ್ಪದ್ಭುತಾತಿಶಯ ಪರಿವರ್ಣನೀಯಮಾದ ಸುವರ್ಣಾಚಲಮೂಲ ಮನಾಖಂಡಳಂ ನೋಡಿ ನಾಡೆಯುಂ ಸಹಸ್ರಮುಖದಿಂ ಕೊಂಡಾಡುತ್ತಂ ಮತ್ತಮದಂ ಪೊಗಳ್ವ ಸುರಸೇನೆಯ ಕಳಕಳರವಮಂ ಕೇಳುತ್ತುಂ ಮುಟ್ಟೆವಂದು ಪಿಂದೆ ಬರುತ್ತುಮಿರ್ದ ವೃಂದಾರಕ ವೃಂದಮೆಲ್ಲಮನೊಂದಾಗಿ ಕೂಡಿಕೊಂಡು ಮಂದಯ್ಸಿ ಪೋಗಲ್ವೇಡಿ ಮತ್ತೈರಾವತ ಮಾತಂಗಮನಲ್ಲಿ ನಿಲಿಸಿ ಕುಂದದ ಪರಮಾನಂದದೊಳೊಂದಿ ನಿಂದಿರ್ದು ದಿಶಾವಲೋಕ ನಂಗೆಯ್ವಾಗಳ್

ಒಂದೆಡೆಯಲ್ಲಿ ಪಾಡುವವರಂ ಬಿಡದೊಂದೆಡೆಯಲ್ಲಿ ನಾಟ್ಯಮಂ
ಗೊಂದಣಿಸಿರ್ದೊಡರ್ಚುವವರಂ ಮಿಗೆಯೊಂದೆಡೆಯಲ್ಲಿ ಭಕ್ತಿಯಿಂ
ವಂದಿಸುತಿರ್ಪ ದೇವನಿವಹಂಗಳನೆಯ್ದೆ ಸಹಸ್ರದೃಷ್ಟಿಯಿಂ
ದಿಂದ್ರನತೀವರಾಗರಸಮುಣ್ಮಲದೊರ್ಮೊದಲಲ್ಲಿ ನೋಡಿದಂ      ೧೪೪

ವ : ತದನಂತರಂ

ಸುರರಾಜಂ ಮೆಚ್ಚಿ ತಾಳ್ದಂ ನಿರುಪಮಮಘಸಂತೋಷದುತ್ಕರ್ಷಮ ಬಂ
ಧುರಭವ್ಯಸ್ತೂಯಮಾನಂ ಪರಮಜಿನಪಪೂಜಾವಿಧಾನಪ್ರದಾನಂ
ಸ್ಫುರದುತ್ತೇಜೋವ್ರಜಂ ಬಾಹುಬಲಿ ಸುಕವಿರಾಜಂ ವಿಬೋಧಾನುಭಾವಂ
ವರಸದ್ಧರ್ಮಪ್ರಭಾವಂ ಕುಮತಸಮಪಹಂ ಚಾತುರೀಜನ್ಮಗೇಹಂ೧೪೫

ಗದ್ಯ : ಇದು ಸಕಳಭುವನಜವಿನೂಯಮಾನಾನೂನ ಮಹಿಮಾಮಾನನೀಯ ಪರಮಜಿನ ಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವ ಪ್ರಸಾದ ಸಂಪಾದಪಾದ ನಿಧಾನದೀಪವರ್ತಿಯುಭಯಭಾಷಾಕವಿ ಚಕ್ರವರ್ತಿ ಬಾಹುಬಲಿಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ಧರ್ಮತೀರ್ಥಂಕರ ಕುಮಾರೋದಯ ವರ್ಣನಂ ಸಪ್ತಮಾಶ್ವಾಸಂ.