ಶ್ರೀಮಜ್ಜಿನಪತಿಪೂಜಾ
ಪ್ರೇಮಂ ವಿಬುಧಾಧಿನಾಯಕಂ ತಾಳ್ದಂ ನಿ
ಸ್ಸೀಮ ಸಂತೋಷಭರಮಂ
ಸೋಮಯಶಂ ಸರಸಚತುರ ಕವಿಕುಳತಿಲಕಂ     ೧

ವ : ತದನಂತರಂ

ಬಂದ ಜಿನಂಗೆ ಮೇರುಗಿರಿ ತನ್ನಯ ರತ್ನಮರೀಚಿ ನೀರದಿಂ
ದಂದಿರದರ್ಘ್ಯಪಾದ್ಯಮನೆ ಕೊಟ್ಟು ಪಯೋಜದ ಮೌಕ್ತಿಕಾಕ್ಷತೋ
ವೃಂದದಿನರ್ಚಿಸಿ ಪ್ರಬಲತತ್ಪ್ರತಿನಾದದೆ ಸಂಸ್ತವಂಗಳಂ
ಕುಂದದ ಭಕ್ತಿಯಿಂ ಬಿಡದೆ ಮಾಳ್ಪವೊಲೊಪ್ಪುತುಮಿರ್ದುದಾಕ್ಷಣಂ            ೨

ಕಡುಗಾಳಿಯಿಂದೆ ಮೇಗ
ಣ್ಗಡರ್ದುಱಃ ಮಂಡಳಿಸಿ ಕೆದಱಿ ಬೀಳ್ವಲರಿಂದಂ
ಕೊಡುವಂತಿರ್ದುದು ಜಿನಪತಿ
ಯಡಿಗಳ್ಗೆ ಸುಮೇರು ಚಾರುಪುಷ್ಪಾಂಜಳಿಯಂ೩

ಸುರಪತಿ ಕೂರಂಕುಶದಿಂ
ಸುರಕರಿಪತಿಯಂ ದಲಣೆದು ನೂಂಕಲ್ಕೆ ಕರಂ
ಸುರಗಿರಿಯನಡರ್ದುದಾಗಳ್
ಸುರತೂರ್ಯನಿನಾದಮೆಯ್ದೆಪುದಿಯಲ್ ದೆಸೆಯಂ         ೪

ಸಮಭೂಮಂಡಳಮಂ ಸಮಂತು ತಳೆದಿರ್ದೈರಾವತಂ ಪುಂಡರೀ
ಕಮುಮಾ ವಾಮನಮುಂ ಲಸತ್ಕುಮುದಮುಂ ಕ್ರೂರಾಂಜನಂ ಪುಷ್ಪದಂ
ತಮುಮಾ ಸಾರ್ವವಿಭೌಮಮುಂ ಪಿರಿದುಮಾದ್ಯತ್ಸುಪ್ರತೀಕಂ ದಲೆಂ
ಬ ಮಹಾದಿಗ್ಗಜಭಾರಮಂ ತಳೆದು ಕೀಳ್ಮಾಡಿತ್ತು ಭೂಭೃತ್ವಮಂ೫

ಮದಮಾತಂಗಘಟಾವಿತಾನಪದಸಂಚಾರಪ್ರಹಾರಂಗಳಿಂ
ದದು ನುಗ್ಗಾಗದೆ ತಗ್ಗಿ ಮುಗ್ಗದೆ ಕರಂ ತಾಳ್ದಿರ್ದು ತದ್ಭಾರಮಂ
ಪದೆಪಿಂ ತನ್ನ ಮಹಾಚಲತ್ವಮನದಂ ಸತ್ಯಾರ್ಥಮಂ ಮಾಡುತಿ
ರ್ದುದು ತನ್ಮಂದರಮಂದು ಸುಸ್ಥಿರನನಾಂತಿರ್ದಾಂತುದು ಸ್ಥೈರ್ಯಮಂ     ೬

ಅದುಕಾಣಲ್ಪಟ್ಟೊಡಂ ಮುನ್ನಡಿಗಡಿಗನಿಶಂ ಮತ್ತಮಾತಂಗಸೇನಾ
ಮದಧಾರಾಪೂರಮೆತ್ತಂ ಪಸರಿಸಿ ಪರಿದಾ ಮೇರುವಂ ವ್ಯಾಪಿಸಲ್ ಮಾ
ಣದೆ ಮತ್ತಾ ಪೊತ್ತಿನೊಳ್ ಕಜ್ಜಲಮಯಗಿರಿರಾಜಂ ದಲೆಂಬೊಂದು ಶಂಕಾ
ಪದಮಂ ದೇವಾಸುರೌಘಂಗಳಿಗೆ ಸುರನಗಂ ಪುಟ್ಟಿಸುತ್ತಿರ್ದುದಾದಂ           ೭

ಘನಕುಂಭಸ್ಥಳಜಾತರತ್ನರುಚಿಯಿಂದಂತಸ್ತಮಂ ಕೂಡೆ ತ
ತ್ತನುವಿಂದಂ ಪೊಱಮಟ್ಟುಪೋಪ ತೆಱದಿಂ ಗಂಡಸ್ಥಳೀನಿರ್ಗತಾ
ತನುದಾನಾಂಬುಗಳಿಂ ನಿರುದ್ಧನಯನಂಗಳ್ ಭದ್ರಮಾತಂಗ ಪಾ
ವನಯೂಥಂಗಳವೇಱಿ ಪೋದುವು ಕರಂ ಮಂದಪ್ರಚಾರಂಗಳಿಂ     ೮

ವ : ಅದೆಱಿಂ ಬಳಿಯಂ

ಮದಮೆಂಬಂಜನದಿಂ ಗಜಂಗಳನಜವಿಂದಂ ದಕ್ಷರ ನ್ಯಾಸಮಂ
ಕೆದಱಲ್ ಮತ್ತೆ ಖುರಂಗಳೆಂಬ ವಿಲಸಟ್ಟಂಕಂಗಳಿಂ ವಾಜಿಗಳ್
ಪದೆಪಿಂ ಜೈನಯಶಃಪ್ರಶಸ್ತಿಯನದಂ ಹೇಷಾಳಿಯಿಂದೋದುತುಂ
ಮುದದಿಂದಂ ಬರೆವಂತೆ ಮೇರುಶಿಲೆಯೊಳ್ ಪೆಂಪೋದವೆಯ್ದೊಪ್ಪದಿಂ       ೯

ಕುಸಿಯೆ ಕೊರಳ್ಗಳುಂ ತೆಗೆದ ವಾಘೆಗಳಿಂ ನೆಱೆ ಪಿಂದಣಂಗಮಂ
ಪಸರಿಸೆ ಪೂರ್ವಕಾಯದೊಳೆ ಸಂಕುಚಿತಾಂಗತುರಂಗಮಂಗಳುಂ
ಪೊಸತೆನಿಸಿರ್ದ ಚಿತ್ರಗತಿಯಿಂ ಕುಣಿವುತ್ತುಮವೆಯ್ದೆ ಕೂಡಿ ಸಂ
ತಸದೊಳೆ ಪೋದುವಂದು ಜಿನನಾಥನ ಮುಂದೆ ವಿಶೇಷವೇಷದಿಂ    ೧೦

ಕುದುರೆಗಳ ಖುರವಿಘಟ್ಟನ
ದೊದವಿಂ ನೆಗೆವುತ್ತುಮಿರ್ದ ಕಿಡಿಗಳ್ ಶೋಭಾ
ಸ್ಪದಮಾದುವು ಭೂತಳಮಂ
ಪದೆದೊದೆದುಱೆ ನೆಗೆವ ಫಣಿಪಮೌಲಿಪ್ರಭೆಯೊಲ್        ೧೧

ಸಾಧಿತ ಪಂಚಧಾರೆಗಳೆನಿಪ್ಪ ಮನೋಜ್ಞತುರಂಗಮಂಗಳು
ದ್ಬೋಧಿತ ವಿಸ್ಮಯಾಭಿನವವೀಥಿಗಳೊಳ್ ಬಿಡದುಚ್ಚನೀಚಮಾ
ರ್ಗಾಧಿಕವೇಗದಿಂದೆ ಪರಿಲಂಘಿಸುವಲ್ಲಿಯವೇ ನಭೋಂತದೊಳ್
ಸಾಧನೆಯಿಂದೆ ಮತ್ತೆ ಕೆಲವೆಂಬಿನಮೊಂದೆರಡಾಗಿ ತೋಱುಗುಂ       ೧೨

ವ : ಮತ್ತಂ

ಕಾಂಚನಭೂಮಿಭಾಗಮದು ಚಾರುರಥಂಗಳ ತೀಷ್ಣನೇಮಿಧಾ
ರಾಂಚಿತಮಾಗಿ ತಾನೊಡೆದು ಧೂಳಿಸಮಾಕುಳಮಾದುದಂತು ಮು
ನ್ನಂ ಚಿರಕಾಲದಿಂ ನಡೆದೊಡಂ ರವಿ ಸಾರಥಿಗೆಯ್ದೆ ಚಿತ್ತಮಂ
ಸಂಚಳಿಸುತ್ತುಮಿರ್ದುಱೆ ಪಥಭ್ರಮಮೆಂತಿರದಪ್ಪುದಾಕ್ಷಣಂ         ೧೩

ವ : ಅನಂತರಂ ಪದಾತಿಸೈನ್ಯಂ ಪತ್ತಿಪೋಪ ಪೊತ್ತಿನೊಳ್

ಅದು ಮೊದಲಾಗಿ ಮಕ್ಕಳುಗಳಂತಿರೆ ದೇವಸಮೂಹಮೆಲ್ಲಮುಂ
ಪದುಳದೆ ಭೂಮಿಯಲ್ಲಿ ಚರಣಂಗಳನಿಟ್ಟುಱೆ ಮೆಲ್ಲಮೆಲ್ಲನಾ
ತುದಿಗಿರಲೆಯ್ದುವಲ್ಲಿ ಸಲೆಮುಂದನೆ ಪೋಪ ಯಮಂ ವಿದೃಷ್ಟಿದೋ
ಷದ ಪರಿಹಾರಕಾರಣಮೆ ಕಾಡಿಗೆಯಾರತಿಯಂತಿರೊಪ್ಪದಿಂ          ೧೪

ವ : ಆಗಳ್

ಮೂಸಿ ನಿತಂಬಮಂ ಮದದಿನೆತ್ತಿ ನಿಜಾನನಮಂ ನಿಕುಂಚಿತೋ
ನ್ನಾಸಿಕೆಯಗ್ರಮಂ ಪಡೆದರಳ್ಚಿಸಿ ಮಾಣದೆ ಕಾಮಧೇನು ಸಂ
ಭಾಷಿತ ಪೃಷ್ಠಮಂ ಬಿಡದೆ ಪತ್ತಿರದೋಡುವ ಗೂಳಿ ಕಾಡಿ ಸಂ
ಕ್ಲೇಶಮನಿತ್ತುದೇಱಿ ನಡೆವಲ್ಲಿ ಕುಬೇರಸಖಂಗೆ ನಾಡೆಯುಂ        ೧೫

ವ : ಅಂತು ದಿವಿಜರ ಪಡೆ ನಡೆಯೆ

ಅತಿಮುದದಿಂದನಂತಪಥದೊಳ್ ಪಥಿಕರ್ ವಿಬುಧರ್ ಬರಲ್ಕೆಯು
ನ್ನತಶಿರದಲ್ಲಿ ತಾಳ್ದಿ ವಿಬುಧೌಘ ನಿರಂತರಿತಾನುವೃತ್ತಿಸಂ
ಗತಫಲಮಂ ಜಗಕ್ಕೆ ನೆಱೆತೋ ಱಿಸುತಿರ್ದುದಾಕ್ಷಣಂ ಮಹಾ
ಕ್ಷಿತಿಯೊಳುದಾತ್ತರಪ್ಪರುಚಿತಜ್ಞತೆಯಂ ಸಲೆ ಮಾಡದಿರ್ಪರೇ         ೧೬

ಬಂದುದು ಭದ್ರಸಾಲವನಸಾನುಗದೆಂಬನಿತಕ್ಕೆ ಬೇಗದಿಂ
ನಂದನಸಾನುಗೆಯ್ದುದದೊರ್ಮೆಯೆ ಸೌಮನಸಕ್ಕೆ ಪೋದುದ
ಲ್ಲಿಂದಮೆನಲ್ಕೆ ಪಾಂಡುಕಶಿಲಾವನಸಾನುಗಡರ್ದುದಿಂತು ದೇ
ವೇಂದ್ರನ ವಿಕ್ರಿಯಾಗಜಮದೇಂ ಮನದಿಂ ಕಡವೇಗಿಯಾದುದೋ    ೧೭

ಇಂದ್ರನನಗಲ್ದಿರಲಾಱದೆ
ನಂದನಮಾ ದಿವದಿನಿಳಿದು ಬಂದಿರ್ದುದೆನಲ್
ಮುಂದೆ ನೆಲಸಿರ್ದ ಪಾಂಡುಕ
ಸೌಂದರವನಮಂ ಸುರೇಂದ್ರನೆಯ್ದಿದನೊಲವಿಂ೧೮

ವ : ಆಸಮಯದೊಳ್

ಪಾಂಡುಕವನವನಜವನಾ
ಡಂಬರದಿಂ ಬಂದ ಮಂದಮರುತಂ ಕಾಮವಿ
ಡಂಬನಮಂಡಿತನಂತಿರ
ಖಂಡಂ ನೆಱೆಬೀಸಿದತ್ತು ಮಂದರಗತಿಯಿಂ       ೧೯

ದೇವಸ್ತ್ರೀಯರ ಕೇಶಮಂ ಕೆದಱುತುಂ ವಸ್ತ್ರಂಗಳಂ ನೂಂಕಿ ಜಂ
ಘಾವಕ್ಷೋರುಹಮಂಡಳಂಗಳನವಂ ಮುಟ್ಟುತ್ತುಮಂಗಂಗಳಂ
ತೀವಿ ವ್ಯಾಪಿಸಿ ಮಿಕ್ಕು ತರ್ಕಯಿಸುತುಂ ತಾಳ್ದತ್ತು ಸತ್ಸೌಖ್ಯಮಂ
ಭಾವಾಶಂ ಮರುತಂ ಮರುತ್ವಪದಮಂ ತಾನೆಯ್ದಿತಂದೆಂಬಿನಂ     ೨೦

ವ : ಇಂತು ಕಲ್ಪಾಧಿನಾಯಕಂ ಸಮಸ್ತಜನಸಂಕಲ್ಪಿತವಸ್ತಪ್ರಧಾನಪ್ರವೀಣಾ ನಲ್ಪತರ ಕಲ್ಪತರುವರನಿಕರರಮಣೀಯಮುಂ ಚಾರುನಿರ್ಝರವಾರಿಧಾರಾಪೂರವಿಹಾರ ಮನೋಹಾರಿಯುಂ ವಿಲಸತ್ಕಿಸಲಯಕುಸುಮವಿಸರವಿಪುಳಫಳಮಂಡಳಾಖಂಡ ಮಂಡನಾಭಿಯೋಗಪರಿಮಂಡಿತಮುಮೆನಿಪ್ಪ ಪ್ರಕಾಂಡಕಪಾಂಡುಕವನಮಂ ದೂರದೊಳ್ ಕಂಡು ಮನಂಗೊಂಡು ಕೊಂಡಾಡುತ್ತುಂ ಮುಂದೆಪೋದೆ ಸರ್ವಗೀರ್ವಾಣಸೈನ್ಯ ಮೆಲ್ಲಮನಲ್ಲಿ ಬಿಡಲ್ವೇಳ್ವುದುಂ ಸ್ಥಳಚರ ವನಚರ ಜಳಚರ ಶಾಖಾಚರಂಗಳಪ್ಪ ತಂತಮ್ಮ ವಾಹನಂಗಳ್ಗೆ ಯೋಗ್ಯಂಗಳಾದ ಸ್ಥಾನಂಗಳಂ ನೋಡಿ ಯಥಾಯಥಮಾಗಿ ದೇವರ್ಕಳೆಲ್ಲಂ ನಿಜನಿಜವಾಹನಂಗಳನಲ್ಲಿ ನಿಲಿಸುವುದುಂ

ಸಕಳ ಸುರಾಸುರರ್ ನಿಜನಿಜೋಚ್ಚಗಜಂಗಳ ಮೇಲೆ ಪಣ್ಣಿದ
ಪ್ರಕಟಕುಥಂಗಳಂ ತೆಗೆದೊಡಾಕ್ಷಣದೊಳ್ ನೆಱೆಬಿಟ್ಟವಂತವಂ
ವಿಕಸಿತಕರ್ಮಕಾವರಣಮಂ ಬಿಡುವಂತಿರೆ ಲೋಕದೊಳ್ ಜಿನಾ
ಧಿಕತರಮಾರ್ಗಗಾಮಿಗಳಿಗಾವರಣಂ ಸಲೆ ಬಿಟ್ಟುಪೋಗದೇ          ೨೧

ವ : ಅನಂತರಂ

ಭೂರಿಪಯೋಧರಸ್ಥಿತಿಯನೊಪ್ಪಿ ವಿಶೇಷವಿಲಾಸದಿಂ ಮನೋ
ಹಾರಿಯುಮಾಗಿ ವಾಮೆಯೆನಿಸಿರ್ದುಱೆ ಪೋಗುತಮಿರ್ದ ತನ್ನದೀ
ನಾರಿಯ ಕೇಶದಂತೆಸೆವ ನೀಲಸಮುತ್ಪಲಮಂ ಕರಾಗ್ರದೊಳ್
ಸೇರಿಸಿ ಬಲ್ಪಿನಿಂ ಪಿಡಿದು ಸೇವಿಸಿದತ್ತು ಮಹಾಮತಂಗಜಂ           ೨೨

ಹಾವಸೆಯೆಂಬ ನೀಲಿಯ ಸುವಸ್ತ್ರಮನೆಯ್ದೆ ತೆರಳ್ಚಿ ಮಧ್ಯಮಂ
ಭಾವಿಸಿ ದಂತಿ ಮುಟ್ಟಲೆರಡುಂತಡಿಗಳ್ ಜಘನಂಗಳಂತಿರೆ
ದ್ರಾವಮನಾಂತಿರಲ್ ನದಿಯೊಳಾಳ್ದುದು ಸೂಚಿಪ ಮಾಳ್ಕೆಯಿಂ ವಧೂ
ಸೇವೆಯ ಸಂಗದಿಂ ಬಿಡದಧೋಗತಿಯಪ್ಪುದು ತಪ್ಪದೆಂಬಿದಂ       ೨೩

ಜಲದೊಳ್ ಮುಳ್ಗಿದ ಕರಿ ನೀ
ಳ್ದಲಘುಕರಾಗ್ರಮುಮನೆತ್ತಿರಲ್ ಗಂಡವಿಮಂ
ಡಲದಿಂದೆಳ್ದಳಿವಳಯಂ
ಪೊಳೆದುದು ಘನದಂಡನೀಲಿಕಾಚ್ಛತ್ರದವೊಲ್  ೨೪

ಮಿಗೆ ರಜಸ್ವಲೆಯಾದೊಡಮಾ ಗಜಾ
ಳಿಗಳವುಂ ನಟಿಯಂ ಭಜಿಸಿರ್ದವೀ
ಜಗದೊಳುದ್ಘಮದಾಂಧಿತರಪ್ಪವರ್
ಬಗೆವರೇ ಗುಣದೋಷವಿಶೇಷಮಂ    ೨೫

ನೀರಡಿಕೆಯಾದೊಡಂ ವನ
ವಾರಣಮದಮಿಳಿತಜಳಮನೀಂಟಿದುದಿಲ್ಲಾ
ವಾರಣಗಣಮಭಿಮಾನಮೆ
ಸಾರಂ ಮಾನ್ಯರ್ಗೆ ಪೀಡಿತಾವಸ್ಥೆಯೊಳಂ         ೨೬

ವ : ಅಂತುಮಲ್ಲದೆಯುಂ

ಕಮಳದೆಸಳ್ಗಳಂ ತಿಱಿದು ಮೇಲಿರದೊಟ್ಟಿಕೊಳಲ್ಕಮಂತಮೆ
ಲ್ಲಮುಮುಱೆ ದೇಹವಲ್ಲಿ ಮಿಗೆ ಪತ್ತಿರಲೊಪ್ಪುತುಮಿರ್ದುದಾ ಗಜಂ
ಕಮಳಿನಿಯೆಂಬ ಕಾಂತೆ ರತಿಕೇಳಿಯೊಳೆಯ್ದೆ ನಖಕ್ಷತಂಗಳಂ
ಪ್ರಮದದೊಳಿಕ್ಕಿದಂತಿರೆ ಜಲಾಶಯದಿಂ ಪೊಱಮಟ್ಟುದಾಕ್ಷಣಂ    ೨೭

ವ : ಅಂತು ಪೊಱಮಟ್ಟು ಪೋಗುತ್ತುಮಿರ್ದು ಗಂಧಸಿಂಧುರಮಾ ವನದಲ್ಲಿ ಮುಂದೊಂದೆಡೆಯೊಳ್ ದೊಡ್ಡಮಾಗೊಡ್ಡುಗೊಂಡು ಕಱಂಗಿ ನಿಂದು ಕರಿಕಲೇವರಾಕಾರ ಮನನುಕರಿಸುತ್ತುಮಿರ್ದ ಸಪ್ತಚ್ಛದಮಂ ಕಂಡು ಪ್ರತಿಗಜಮೆಂಬ ಭ್ರಾಂತಿಯಿಂದುಪಾತ್ತ ಕೋಪಮಾಗಿ ಪೋಗಿ ಕೋಡುಗಳ ಮೊನೆಯಿಂದೀಡಿಱಿದದಂ ಕೆಡಪಿ ಬಳಿಯಂ ವೀಥಿ ಮಾರ್ಗಮಂ ಬಿಟ್ಟು ಯದೃಚ್ಛೆಯಿಂದತ್ತಲಿತ್ತಲ್ ಪರಿದೋಡಿ ಮಾವಂತಿಗನಂ ಕಾಡುತ್ತು ವಿರ್ದುದಂ ಮೆಲ್ಲಮೆಲ್ಲನೆ ಸಾಮೋಪಾಯಪ್ರಯೋದಿಂದಾಲಾನಸ್ತಂಭದಂತಿಕಕ್ಕೆ ತಂದು ನಿಲಿಸುವುದುಂ

ಪಿರಿದು ನಯಪ್ರಯುಕ್ತಗಜಸಂತತಿಗಳ್ ಮಿಗೆ ತಮ್ಮ ಪೀ
ವರತನುಬಂಧನಾರ್ಥಮುರುರಜ್ಜುಗಳಂ ಸಲೆತಂದು ಕೈಗಳೆಂ
ದಿರದವು ಕೊಟ್ಟು ತಾವೆ ನೆಱೆಕಟ್ಟಿಸಿಕೊಂಡವು ಲೋಕದೊಳ್ ಜಡಾ
ತ್ಮರ ಗಡಣಂ ಹಿತಾಹಿತವಿವೇಕದ ವೃತ್ತಿಯನೆಂತುಬಲ್ಲುದೋ     ೨೮

ವ : ಅನಂತರಂ ಮತ್ತೊಂದೆಡೆಯೊಳ್

ಸಡಿಲಿಸಿ ಪಲ್ಲಣಂಗಳನವಂ ನೆಬಿಟ್ಟು ಸುರಾಸುರಾಳಿ ಕೈ
ಮಡಗದೆ ಲೀಲೆಯಿಂ ತೆಗೆದಂದು ದೃಢೀಕೃತಕರ್ಮಬಂಧಮಂ
ಬಿಡಿಸುವ ಮಾಳ್ಕೆಯಿಂ ಕುದುರೆಗಳ್ ಕಡಿಯಾಣಮುಮಂ ಕಳಲ್ಚಿಕೊಂ
ಡೆಡಬಲದಲ್ಲಿ ಪಲ್ಮಿಸುತುಮೋಡಿಯೆ ಕಾಡಿದುವೆಯ್ದೆ ಗೋವರಂ            ೨೯

ಅತ್ತಲುಮಿತ್ತಲುಂ ಬಿಡದೆ ಸುತ್ತಿರದೋಡುವ ವಾಜಿರಾಜಿ ಸ
ದ್ವೃತ್ತಮುಖಂಗಳಿಂದುಗುವ ಫೇನಲವಂಗಳವಲ್ಲಿಗಲ್ಲಿಗಂ
ಬಿತ್ತರಿಸಿರ್ದುವಂದವಱ ಕೂಟದೆ ಭೂಮಿನಿತಂಬಿನೀ ಮನೋ
ಹೃತ್ತರಹಾರಮುಂ ಪಱುದು ಚೆಲ್ಲಿದ ಮುತ್ತುಗಳೋಳಿಯೆಂಬಿನಂ೩೦

ಸಲಿಲಕ್ರೀಡೆಯೊಳಿರ್ದ ವಾಜಿಗಳ ಸರ್ವಾಂಗಂಗಳೊಳ್ ತುಂಬಿ ಸೈ
ವಳಜಾಳಂ ಪುದಿಯಲ್ಕವಂದು ಪಿರಿದುಂ ನೀಲಂಗಳಾಗಾ ಕೊಳಂ
ಗಳಿನಾಗಳ್ ಪೊಱಮಟ್ಟುಪೋಪ ಪದದೊಳ್ ಸೂರ್ಯೋದ್ಧುರಾಶ್ವಂಗಳುಂ
ಜಲಧಿಕ್ರೋಡದಿನಂಬರಕ್ಕಡರ್ದು ಪೋಪಂತಾಳ್ದುವೆಯ್ದೊಪ್ಪಮಂ            ೩೧

ವ : ಇಂತು ನದೀನದಸರಸ್ಸಂಕುಳಂಗಳೊಳ್ ಜಲಾವಗಾಹನಂಗೆಯ್ದು ಬಳಿಯಂ ಪೊಱಮಟ್ಟುಪೋಪ ವಿರಾಜಮಾನ ವಾಜಿರಾಜಸಮಾಜಂಗಳಂ ನಯವಿದರಪ್ಪ ಚತುರವಾಹಕರನುನಯದಿಂ ತಂದು ತಂತಮ್ಮ ನಿವಾಸಮಂದಿರಂಗಳೊಳ್ ಕಟ್ಟಿದನಂತರಂ

ಜಿನನಂ ಧರಿಸಿದ ಕಾರಣ
ಮನಿಮಿಷಪತಿ ವೃಜಿನರಹಿತನಾಗಿ ಸುಪಾಂಡುಕ
ವನಮನುಱೆ ಮುಟ್ಟೆವಂದಂ
ಘನಮುದದಿಂ ನೋಡಿ ನೋಡಿ ಕೊಂಡಾಡುತ್ತುಂ           ೩೨

ಶ್ರೀಕರಸಾರದಿಂದೆ ಮಿಗೆ ನೀರ್ದಳಿದುಂ ಸುಪರಾಗದಿಂದೆ ಚಿ
ತ್ರೀಕರರಂಗವಾಲಿಯುಮನಿಕ್ಕಿದಳುತ್ಕುಸುಮೋಪಹಾರಮಂ
ಬೇಕೆನೆಮಾಡಿ ತುಂಬಿಗಳ ಮಂಗಳಗೀತಪುರಸ್ಸರಂ ಸುಮಂ
ದಾಕೃತಿವಾಯು ಬಂದುದು ಜಿನಂಗಿದಿರಾಗಿ ಪಯಃಕಣಾಕ್ಷತಂ         ೩೩

ಆದರದಿಂದಂ ಜಿನಪತಿ
ಪಾದಂಗಳನೆಯ್ದೆ ಮುಟ್ಟಿ ಪೂಜಿಸಿ ಕರೆವವೊ
ಲಾದುದು ಜಿನನಂ ತತ್ಸಮ
ಯೋದಯದೊಳ್ ಕೂಡೆ ಬೀಱುತುಂ ಸೌರಭಮಂ          ೩೪

ವ : ಇಂತು ಸುರಪತಿ ಸುರಸಮಿತಿವೆರಸು ನಾಲ್ಕನೆಯ ಮೇಖಳೆಗೆಯ್ತಪ್ಪುದು ಮದಱುತ್ತರ ಪೂರ್ವ ದಿಶಾಭಾಗಾಂತರಾಳದೊಳ್

ವಿಕಟ ಧೂರ್ಜಟಿಜಟಾಜೂ
ಟಕದೊಳಗಧೇಂದಪೊಳೆವವೊಲ್ ಮೇರು ಚತು
ರ್ಥಕ ಮೇಖಳಾಗ್ರದೊಳ್ ಪಾಂ
ಡುಕಶಿಲೆ ಪರಿರಂಜಿಕುಂ ಸಿತಾಂಶುಪ್ರಸರಂ         ೩೫

ಘನಸಂಸಾರಾರ್ಥಿಯೆಂಬಂದದೆ ಗತಿಪಥಮಂ ಬಿಟ್ಟು ಲೋಕಾಗ್ರದಲ್ಲೆಂ
ಬಿನಮಾ ಹೇಮಾದ್ರಿಧಾಮಾಗ್ರದೊಳೆ ನೆಲಸಿ ನಿತ್ಯತ್ವಮಂ ತಾಳ್ದಿದತ್ತೆಂ
ಬಿನೆಗಂ ಶೋಭಾವೀಶೇಷಾತಿಶಯಮನೊಳಕೊಂಡಿರ್ದು ತತ್ಪಾಂಡುಕಂ ಪಾ
ವನಮೋಕ್ಷಸ್ಥಾನಮೆಂಬಂತಿರೆ ಸುರಪನದಂ ಪೊರ್ದಿ ಸತ್ಸೌಖ್ಯನಾದಂ           ೩೬

ವ : ಮತ್ತಮದಷ್ಟಯೋಜನದುದ್ದಮಯ್ವತ್ತುಯೋಜನದಗಲಮಗಲದಿಮ್ಮಡಿ ನೀಳಮಾಗಿ ಥಳಥಳಿಸಿ ಪೊಳಿವರ್ಧಚಂದ್ರಾಕಾರಮನನುಕರಿಸುತ್ತುಮಿರ್ದ ಪಾಂಡುಕ ಶಿಲಾತಲಂ ಕಡುರಮಣೀಯತರಮಾಗಿರ್ದುದಂತುಮಲ್ಲದೆಯುಂ

ಸುಳಿವಮರೀ ವಿಶಾಲಪರಿಲೋಲವಿಲೋಚನಸಂಚಯಂ ಸಮು
ಜ್ವಳಿತ ಸುಧಾಂಶುಕಾಂತಮಯ ಪಾಂಡುಶಿಲಾತಳದಲ್ಲಿ ಕೂಡೆ ಮಾ
ರ್ಪೊಳೆದೊಡದಂದು ಕಣ್ಗೊಳಿಪ ಬಾಳೆಯ ಮೀಂಗಳ ಮೊತ್ತಮೆತ್ತಲುಂ
ಬಳಸಿದ ದುಗ್ಧವಾರಿನಿಧಿಮಧ್ಯಮದೆಂಬಿನಮಾಳ್ದುದೊಪ್ಪಮಂ    ೩೭

ಆ ಸಱಿಯ ನಟ್ಟನಡುವೆ ಮ
ಹಾ ಸಿಂಹಾಸನಮದೊಪ್ಪುಗುಂ ದುಗ್ಧಪಯೋ
ರಾಶಿಯ ನಡುವಣ ಮಣಿಭಾ
ಭಾಸುರರತ್ನಾದ್ರಿಯೆಂಬಿನಂ ಪೊಳೆಯುತ್ತುಂ     ೩೮

ಆ ಸಿಂಹಾಸನದಿಕ್ಕೆಲಂಗಳೊಳಮೊಪ್ಪುತ್ತಿರ್ದವಂದು ಪ್ರಭಾ
ರಾಶಿವ್ಯಾಪ್ತಶುಭಾಸನಂಗಳೆರಡುಂ ಜನ್ಮಾಭಿಷೇಕೋದ್ಘ ವ
ರ್ಷಾಸೂಚೀಪ್ರತಿಸೂರ್ಯಬಿಂಬಯುಗಳಂ ಮಾರ್ತಂಡಸನ್ಮಂಡಲಾ
ಭ್ಯಾಸಸ್ಥಾನದೊಳಿರ್ದುದೆಂಬ ತೆಱದಿಂದಾ ಪಾಂಡುಕಾಕಾಶದೊಳ್  ೩೯

ವ : ಮತ್ತಮಾ ಪಾಂಡುಕಶಿಲಾವಳಯದ ಮೇಲೆ

ಅಱೆಯಂ ಸೂತ್ರಮಿಡಲ್ಕೆ ಮತ್ತಮದಱೊಂದಾಕಾರದಿಂ ಪ್ರೌಢಿಯಂ
ಮೆಱೆವಾ ರೂಢಿಯ ವಿಶ್ವಕರ್ಮನುಮೆನಲ್ ಕೌಶಲ್ಯಸಾಕಲ್ಯಮಂ
ನೆಱೆತಾಳ್ದಿರ್ದುಳಿಮುಟ್ಟದಾಕ್ಷಣದೊಳಂತಿರ್ದಿರ್ದುದಂ ಬಣ್ಣಿಸ
ಲ್ಕಱಿಯೆಂ ಶ್ರೀಯಭಿಷೇಕಮಂಡಳಮನುದ್ಯತ್ಕೇತುಮಾಲಾಪಮಂ            ೪೦

ರತ್ನಮಯವಲ್ಲಿ ಪಾಂಡುಕ
ನೂತ್ನಶಿಲಾಗ್ರದೊಳೆ ಪುಟ್ಟಿ ಕೂಡೆ ಮಡಲ್ತ
ಪ್ರತ್ನನಿಕುಂಜಂಗೊಂಡದು
ಯತ್ನದಿನಂಬರಮನಡರ್ವವೊಲ್ ಕಣ್ಗೆಸೆಗುಂ  ೪೧

ಸುತ್ತಲುಮೆಯ್ದೆ ತೆತ್ತಿಸಿದ ಮಿಂಚುವ ಮುತ್ತಿನ ಸೂಸಕಂಗಳಿಂ
ದುತ್ತಮಮಾದ ಕೆಂಬರಲ ಕಂಭದ ಪಂತಿಗಳಿಂ ವಿನೀಲಸ
ದ್ಭಿತ್ತಿಗಳೋಳಿಯಿಂದೆ ಪವಳಂಗಳ ಕೀಲ್ಗಳಿನೊಪ್ಪದೇಳ್ಗೆಯಂ
ಬಿತ್ತರಿಸುತ್ತುಮಿರ್ದುದಭಿಷೇಕದ ಮಂಡಪಮುದ್ಘಮಂಡಪಂ       ೪೨

ಕೆದಱಿದ ಚೆಲ್ವ ಪೂವಲಿಗಳಿಂ ಬಿಡುಮುತ್ತಿನ ರಂಗವಾಲಿಯಿಂ
ಪುದಿದುಱೆ ಚೆನ್ನರನ್ನದುರುತೋರಣದೋರಣವೀಧಿಯೊಳ್ ತೊಡ
ರ್ಚಿದ ಪೊಸಪೊನ್ನಘಂಟೆಗಳಿನುತ್ತಮಮಂಗ ದರ್ಪಣಂಗಳಿಂ
ದದು ರಮಣೀಯಮಾಗಿ ಪರಿರಂಜಿಸಿದತ್ತಭಿಷೇಕಮಂಡಪಂ          ೪೩

ಘನಕೌತುಕಕರಶೋಭೆಯಿ
ನನುಪಮ ವರಸಮವಸರಣಮೆನ್ನದೆ ಮತ್ತೊಂ
ದನೆ ಬೇ ಱೆ ಕಲ್ಪಿಸುವುದೇ
ಜಿನಪನ ಜನ್ಮಾಭಿಷೇಕಮಣಿಮಂಡಪಮಂ        ೪೪

ವ : ಮತ್ತಮದಱೊಳ್

ನಿಲಿಸಿದ ನೆಲವಡಲಿಗೆಗಳ
ಪಲವಾದುಱೆ ಜಾಗರಂಗಳಿಂ ದ್ವಿಗುಣಿಸಿದ
ಗ್ಗಳ ಪಚ್ಚೆಯ ಕಂಬಂಗಳ
ಬೆಳಗುಂ ಪೊಲಗೆಡಿಸಿದತ್ತು ಸುರರೀಕ್ಷಣಮಂ     ೪೫

ಹರಿನೀಳಸ್ತಂಭಾಭ್ಯಂ
ತರದೊಳ್ ಮಾರ್ಪೊಳೆದ ರತ್ನದೀಪಪ್ರಭೆ ಬಂ
ಧುರಮಾದುದು ಕೃಷ್ಣನ ಭಾ
ಸುರತನುವಂ ನೆಮ್ಮಿ ತೋರ್ಪ ಲಕ್ಷ್ಮಿಯ ತೆಱದಿಂ           ೪೬

ಅರುಣಮಣಿದೀಪದಿಂದಂ
ಪರಭಾಗಂಬಡೆದ ಸೂರ್ಯಕಾಂತಸ್ತಂಭಂ
ಪರಿರಂಜಿಸಿದುದು ಭಸ್ಮ
ಸ್ಫುರದೀಶಂ ತೋಱಿದಂತೆ ನೊಸಲುರಿಗಣ್ಣಂ  ೪೭

ವ : ಮತ್ತಂ ಪರಮಕರುಣಾಕರನೆನಿಸಿದಾ ಜಿನೇಶ್ವರನ ಸಮೀಪದೊಳ್ ಪರಪೀಡಾಕರ ಮಪ್ಪುಷ್ಣಮಂ ಮಾಳ್ಪುದನುಚಿತಮೆಂದು ತರುಣತರತರಣಿಕಿರಣಂ ತನ್ನಯ ಸಹಜಮಾದು ಷ್ಣಮನೇನುಮಂ ತೋಱದೆ ಪರಿಕಲಿಸಿ ತೊಳಗಿ ಬೆಳಗುತ್ತುಮಿರ್ದುದೆಂಬಂತತಿ ರಮಣೀಯಮಂಡಪದಂತಃಪ್ರದೇಶಂಗಳೊಳ್ ಕಡುಢಾಳಂಬೆತ್ತು ಥಳಥಳಿಸಿ ಪೊಳೆವ ಮಾಣಿಕದ ಸೊಡರ್ಗುಡಿಗಳ್ ಸುತ್ತಲುಂ ಮೊತ್ತಂಗೊಂಡು ಮಾಣದೆ ಸಮುಜ್ವಳಿಸುತ್ತುಮಿರ್ದುಮಂತಮಲ್ಲದೆಯುಂ

ನಾನಾಶೃಂಗಾರಭಾರಂಗಳಿನಧಿಕತರಾಲಂಕೃತಂಗಳ್ ಸಮಂಧಾ
ರಾನೇಕಸ್ಫಾರಮಾಲಾವಲಯವಿಲಸಿತಂಗಳ್ ಚತುಷ್ಕೋಣಶೋಣಾ
ಪೀನೋನ್ಮಾಣಿಕ್ಯಕುಂಭಂಗಳನಣುರುಚಿಗಳ್ ನೋಳ್ಪ ಸರ್ವಾಮರೀ ಸಂ
ತಾನಕ್ಕಂ ಚೋದ್ಯಮಂ ಪುಟ್ಟಿಸಿದುವು ಪಿರಿದುಂ ದರ್ಪಣಾಭ್ಯರ್ಚಿತಂಗಳ್     ೪೮

ವ : ಇಂತು ಕಮನೀಯಕಂಠಾವಲುಂಠಿತ ಚಾರುಹರಿಚಂದನಚರ್ಚಾರ್ಚಿತ ಮುಕ್ತಾಫಲಾಕ್ಷತ ಸಮಾಲಕ್ಷಿತ ವಿಕಸಿತಸಹಸ್ರದಳಧವಳಕಮಳಕುಳ ಪರಿಕಳಿತಮಾತು ಳುಂಗಫಳವಿಳಸಿತ ಮುಖಮುಖರ ಸಮುತ್ತುಂಗ ಶೃಂಗಾರಿತಭೃಂಗಾರಸಂಘಾತ ಸಂಗತ ನಿರತಿಶಯ ಮಣಿಮಯಮಂಗಳಕಳಶಹಸ್ರಪರಿಕಳಿತಮುಂ ವಿಶಿಷ್ಟಾಷ್ಟಮಂಗಳ ಪರಿವೇಷ್ಟಿತ ಮುಮಷ್ಟವಿಧಾರ್ಚನಾಯೋಗ್ಯ ನವ್ಯದ್ರವ್ಯಪರಿಪೂರ್ಣವಿಸ್ತೀರ್ಣ ತತ್ಸಮ ಯೋಚಿತ ಬಹಳೋಪಕಿರಣ ಕಿರಣಗಣಾಭಿದ್ಯೋತಿತಾಭ್ಯಂತರಮುಮಾದ ಮಹಾಭಿಷೇಕ ಮಣಿಮಂಡಪಮನಾಖಂಡಳಂ ಮುಟ್ಟೆವಂದು ವಂದನ ಮಾಲಾದಿ ಬಹುವಿಧಾಲಂಕರಣ ರಮಣೀಯಮುಮಾದ ಮರಕತಮಯದ್ವಾರಬಂಧದ ಮುಂದೈರಾವತ ಮಹಾಮಾತಂಗಮಂ ನಿಲಿಸಿ

ಕರತಳಪುಟದೊಳ್ ಜಿನನಂ
ಧರಿಸಿ ಸುರಾಧೀಶನಿಳಿದನಾ ಗಜದಿಂದಂ
ಸುರರ ಜಯಜೀವನಂದ
ಸ್ವರಮಾಗಳ್ ಪುದಿಯೆ ಸಕಳದಿಙ್ಮಂಡಳಮಂ   ೪೯

ಆಗಳ್ ದೇವಾನಕಂಗಳ್ ಮೊಳಗೆ ಜಯಜಯದ್ಘೋಷಣಂ ಪೆರ್ಚೆ ಚೇತೋ
ರಾಗಂ ಕೈಗಣ್ಮಿ ಪೊಣ್ಮುತ್ತಿರೆ ಜಿನಪತಿಯಂ ನಾಗಲೋಕಾಧಿನಾಥಂ
ಬೇಗಂ ದಲ್ ತನ್ನ ಹಸ್ತಾಂಜಳಿಯೊಳೆ ಬಿಜಯಂಗೆಯ್ಸಿ ಭೂರಿಪ್ರಕಾಶಾ
ಭೋಗಂ ವ್ಯಾಕೀರ್ಣತನ್ಮಂಡಪದ ನಡುವೆಗೆಯ್ತಂದನಾನಂದದಿಂದಂ           ೫೦

ವ : ಮತ್ತಮಾ ಮಂಡಪದ ನಟ್ಟನಡುವಣರ್ಚಿಸಿ ನವೀನರಚನಾಖಚಿತ ಸಮುಜ್ವಳ ಮಣಿಮರೀಚಿನಿಚಯಪರಿಭಾಭಾಸ್ಯಮಾನಮಹಾರ್ಹ ಸಿಂಹಾಸನದೊಳ್ ಪೂರ್ವಾಭಿಮುಖನಾಗಿ ತಜ್ಜಿನಾರ್ಭಕನನಿರಿಸುವುದುಂ

ಹರಿವಿಷ್ಟರಮುದಯಮಹೀ
ಧರದಂತಿರೆ ಬಾಳಕಂ ಸುಬಾಳಾರ್ಕನ ವೋಲ್
ಪಿರಿದಾದ ತೇಜದೊದವಂ
ಪರಕಲಿಸುತ್ತಿರ್ದನಖಿಳದಿಕ್ತಟದೆಡೆಯೊಳ್         ೫೧

ಮೊದಲೊಳ್ ಪಾಂಡುಶಿಲಾತಳಂ ದಲಭಿಷೇಕೋತ್ಸಾಹಮಂ ಮಾಳ್ಪವೊಲ್
ಕೆದಱುತ್ತಿರ್ದವು ಪಾಂಡುರಪ್ರಭೆಯನಾ ತೀರ್ಥೇಶಸರ್ವಾಂಗದೊಳ್
ಪದೆಪಿಂ ಪಾಂಡುರವರ್ಣನಾಗಿ ಸುರರಿಂಗಂ ಪುಟ್ಟಿಸುತ್ತಿರ್ದನೋ
ವದೆ ತನ್ನೊಪ್ಪುವ ಕೀರ್ತಿಯಾವರಿಸಿದತ್ತೆಂಬೊಂದು ಸಂದೇಹಮಂ  ೫೨

ಇರೆ ದಿಕ್ಪಾಲಕರಂದು ತಂತಮಗೆ ಯೋಗ್ಯಸ್ಥಾನದೊಳ್ ಸ್ವಾಂಗನಾ
ಪರಿವಾರಾಯುಧವಾಹನಂಬೆರಸು ಶೇಷಾಶೇಷದೇವರ್ಕಳಂ
ನೆರೆದಲ್ಲಲ್ಲಿ ಪರಿಗ್ರಹಂಬೆರಸಿರೆ ಸ್ವಸ್ಥಾನದೊಳ್ ಕಿನ್ನರೇ
ಶ್ವರನಾದೇಶದಿನಲ್ಲಿ ತಳ್ತೆಸೆಯೆ ನಾನಾಭೂಷಣಾಂಶೂತ್ಕರಂ       ೫೩

ವ : ಆಗಳಾ ಮಣಿಮಯಸಿಂಹಾಸನದೆರಡುಂಕೆಲದೊಳಿರ್ದ ಶುಭಾಸನಂಗಳಲ್ಲಿ ಸೌಧಮೇಂದ್ರನುಮೀಶಾನೇಂದ್ರನುಮುತ್ತರ ದಕ್ಷಿಣಾಭಿಮುಖರಾಗಿ ತಜ್ಜಿನಾಧೀಶ್ವರನ ದಕ್ಷಿಣ ವಾಮಭಾಗದೊಳ್ ಕುಳ್ಳಿರ್ದು ಸಕಳಕಳ್ಪಾಮರಪ್ರಮುಖ ನಿಜನಿಜ ಪರಿಕರಪರಿವೃತಸುರನಿಕರಮನುಚಿತಸ್ಥಾನದೊಳ್ ಕುಳ್ಳಿರಿಸಿ ಜ್ಯೋತಿಷ್ಕ ದೇವೇಂದ್ರರ್ ಮುಂತಾದ ಭವನಾಮರೇಂದ್ರಂ ಕರೆದು ಪರಿಚಾರಕ ಪದವಿಯೊಳ್ ನಿಱಿಸಿದನಂತರ

ಕರಸಿ ಕುಬೇರನಂ ಬೆಸಸಿದಂ ಸುರನಾಯಕನಂದು ನೀಂ ಸುರಾ
ಸುರರ ಗಣಂಗಳಂ ನಿಜನಿಜೋಚಿತಕೃತ್ಯದೊಳಂ ನಿಯೋಜಿಸಿ
ತ್ವರಿತದೆ ಮಾಡಿಸೆಂದು ಗುರುಭಕ್ತಿಯಿನಾಂತನವಂ ತದಾಜ್ಞೆಯಂ
ಸುರಚಿರನೂತ್ನರತ್ನಮಯದಂಡವಿಮಂಡಿತ ಬಾಹುದಂಡಕಂ        ೫೪

ವ : ಆಗಳ್

ಕಳೆ ನೀಂ ವಾಯುಕುಮಾರ ಸೂಕ್ಷ್ಮರಜಮಂ ಗಂಧೋದಕಾಸಾರಮಂ
ತಳಿ ನೀಂ ಮೇಘಕುಮಾರ ಮಾಡುಮಣಿಯಿಂ ಮುಕ್ತಾಫಳಶ್ರೇಣಿಯಿಂ
ದೆಲೆ ದಿಕ್ಕಾಂತೆಯರಿಕ್ಕಿ ಕೊಡೆ ಪಿರಿದುಂ ರಂಗಾವಲೀಭಂಗಿಯಂ
ನಲವಿಂ ದೇವಿಯರೆಯ್ದೆ ಚೆಲ್ಲಿಯದಱೊಳ್ ಮಂದಾರಪುಷ್ಪಂಗಳಂ          ೫೫

ತಾಳಮನೆಯ್ದೆ ಮೇಳವಿಸು ತುಂಬುರ ಮಂಗಳಗೀತಮಂ ಸಮಂ
ತೋಳಿಯಿನೊಲ್ದು ಪಾಡು ವರಕಿನ್ನರ ಪಾವನವಾಣಿವೀಣೆಯಂ
ಲಾಲಿಸಿ ಸೈತೆಮಾಡು ಭರತಜ್ಞ ವಿಶೇಷಿಸು ನಾಟ್ಯರಂಗಮಂ
ಲೋಲವಿನೇತ್ರೆ ರಂಭೆ ನಟನಾರ್ಥಮೆ ನೀಂ ಸಮಕಟ್ಟಿಕೊಳ್ ಕರಂ    ೫೬

ಮುತ್ತಿನ ಚೆಲ್ವಸತ್ತಿಗೆಗಳಂ ಭವನಾಮರರೆತ್ತಿನಿಲ್ಲಿಯ
ತ್ಯುತ್ತಮ ಹೇಮದಂಡ ಪರಿಮಂಡಿತಚಾಮರಸಂಚಯಂಗಳಂ
ಮತ್ತೆ ಸನತ್ಕುಮಾರವರರಿಕ್ಕಿ ತದಂಗನೆಯರ್ ಕೆಲಂಬರುಂ
ಬಿತ್ತರದಿಂದೆ ಬೀಸಿ ಪೊಸಬಾಳದ ಬೇರ್ಗಳ ವೀಜನಂಗಳಂ  ೫೭

ವ್ಯಂತರದೇವರುದ್ಘಪಟಹಪ್ರಕರಂಗಳನಾಯತಂಗಳೆಂ
ಬಂತಿರೆ ಚೆಲ್ವನಾಗಿ ನೆಱೆಮಾಡಿ ತದೀಯವಧೂಜನಂಗಳುಂ
ಸಂತೊಸದಿಂದೆ ಮತ್ತೆಕೆಲವುಂ ಸಮಯೋಚಿತಮಂಗಳಂಗಳಂ
ಚಿಂತಿಸಿ ಬೇಗದಿಂ ಸಮೆಯಿಯೆಂದುಸಿರ್ದಂ ಧನದಂ ದಲಾಕ್ಷಣಂ       ೫೮

ದೇವಕುಮಾರಿಯರ್ ಪರಮಪುಷ್ಪಫಳಾಕ್ಷತಗಂಧಧೂಪಮಂ
ತೀವಿ ವಿಚಿತ್ರಪಾತ್ರಚಯದಲ್ಲಿ ಮಹಾಕುಲದೇವಿಯರ್ ಕರಂ
ಪೀವರ ಮಂಗಳಾರತಿಗಳಂ ಮಣಿಭಾಜನಪಂತಿಯಲ್ಲಿ ಸಂ
ಭಾವಿಸಿ ಮಾಡಿಯೆಂದು ಸುರದೇವಿಯರಿಂಗುಸಿರ್ದಂ ಧನಾಧಿಪಂ     ೫೯

ವ : ಇಂತು ಸಕಳಾಮರೇಂದ್ರಪ್ರಮುಖ ದೇವದೇವೀನಿವಹಂಗಳಂ ದ್ವಾರ ಪಾಲಕನಪ್ಪಕುಬೇರನಂ ಜಿನಜನ್ಮಾಭಿಷೇಕಕಾಲಕರಣೀಯಂಗಳಪ್ಪ ಬಾಹುತ್ತರನಿಯೋ ಗಂಗಳ್ ಬೇಱೆವೇ ಱೆ ಪಾಕಶಾಸನ ಸಮಾದೇಶದಿಂ ನಿಯಾಮಿಸುವುದುಂ

ಕಳಕಳಕೋಲಾಹಳದ
ಗ್ಗಳಮಂ ಮಾಡದಿರಿಯೆಂದು ದೇವಾಸುರರಂ
ಸಲೆ ಜಡಿದು ನುಡಿದು ನಿಲಿಸಿದ
ನೊಲವಿಂದಾ ದೇವಸಭೆಯೊಳಂದು ಕುಬೇರಂ    ೬೦

ವರಕರ್ಪೂರಪರಾಗಪೂಗಘನಗಂಧಾಂಧಾಳಿನೀಸಂಕುಳಂ
ನೆರೆದಲ್ಲಲ್ಲಿಗೆ ಮಾಲೆಗೊಂಡು ನೆಗೆವುತ್ತಿರ್ದತ್ತದಾಗಳ್ ಜಿನೇ
ಶ್ವರಜನ್ಮಾಭಿಷವೋತ್ಸುಕರ ಚೇತೋವೃತ್ತಿಯಂ ಬಿಟ್ಟು ದು
ರ್ಧರಪಾಪಂ ಪಱಿದೋಡಿಪೋಪ ತೆಱದಿಂ ಕಣ್ಗೇಂ ಬೆಡಂಗಾದುದೋ         ೬೧

ವ : ತದನಂತರಂ

ಅನುಭಾವಕ್ಕನುಕೂಲಮಾಗಿ ಸಿರಿಗಂ ತಕ್ಕಂದದಿಂ ತನ್ನ ವ
ರ್ತನೆಗಂ ಯೋಗ್ಯಮೆನಲ್ಕೆ ಮತ್ತಮುಚಿತಂ ತದ್ದೇಶಕಾಲಕ್ಕಮೆಂ
ಬಿನೆಗಂ ಮಾಡಲೆವೇಳ್ಪುದೊಂದು ಪಿರಿದುಂ ಜನ್ಮಾಭಿಷೇಕಪ್ರಭಾ
ವನೆಯಂ ತೋಷದಿನೆದ್ದನಂದು ಸುರಪಂ ಭಕ್ತಿಪ್ರಸನ್ನಾಯಶಂ       ೬೨

ಕ್ಷೀರಸಮುದ್ರದ ನಿರ್ಮಳ
ನೀರಂ ತರಲೆಂದು ಬೇಗಮೆಳ್ದಂ ಸುರಪಂ
ಚಾರುಶತೇಂದ್ರರ್ ತನ್ನೊಡ
ನೋರೊರ್ಮೊದಲೆಳ್ದರಮರತತಿವೆರಸಿ ಕರಂ     ೬೩

ವ : ಇಂತು ಶತೇಂದ್ರರೊಡಗೂಡಿದ ಬಿಡೌಜಂ ಕಡುಸಡಗರದಿಂದುದ್ದಾಮರ ವಾಮಹೇಮೀಯ ಕುಂಭಸಂಭೃತಕರವಿರಾಜಮಾನ ದೇವಸಮೂಹಸಮಾವೃತಮಾಗೆ ಮಹಾಪ್ರಭಾವನೆಯಿಂ ಕ್ಷೀರೋದಯಮನೆಯ್ದುವುದುಂ

ಕ್ಷೀರಸಮುದ್ರಮಂ ಬಿಡದೆ ಕೌತುಕದಿಂದೆಮೆ ನೋಡುತ್ತಿರ್ದ ದೈ
ತ್ಯಾರಿವಿಧಾನಮಂ ಸುರಪನೀಕ್ಷಿಸಿ ತದೀಯಶೃಂ
ಗಾರಮನಿಂತು ವರ್ಣಿಸುತುಮಾ ದಿವಿಜರ್ಗುಸಿರ್ದಂ ಸಮಂತು ವಿ
ಸ್ತಾರಿಸದಿರ್ಪುದೇನವಸರೋಚಿತಭಾಷಣಮೆಯ್ದೆ ತೋಷಮಂ       ೬೪

ಬಡವಾನಳೋಷ್ಣಭರಮಂ
ಕೆಡಿಸಲ್ಕೆಂದಿಂದುಕಿರಣಗಣಮಂ ಪಾಲಿಂ
ಗಡಲೆಯ್ದೆ ಪೊದೆದ ತೆಱದಿಂ
ಕಡುವೆಳಿದಾಗಿರ್ದು ಪಡೆದುದತಿಕೌತುಕಮಂ      ೬೫

ಪಿರಿದುಂ ನಾಗೇಂದ್ರನಂದಾವರಿಸಿದ ವಿಲಸನ್ಮೇರುರೂಪಂಗಳಂತಿ
ರ್ದುರುಮುಕ್ತಾಮಾಲಿಕಾಲಂಕೃತ ಕನಕಮಯಸ್ಥೂಳಕುಂಭಂಗಳ ಸಾ
ದರದಿಂದಂ ಕೊಂಡುಬರ್ಪಾ ಸುರಸಮುದಯಮಂ ಕಂಡು ದುಗ್ಧಾರ್ಣವಂ ಬಿ
ತ್ತರಿಪಂತಿರ್ದತ್ತು ಮತ್ತಂ ಮಥನಭಯದಿನಾಕಂಪಮಂ ತುಂಗಭಂಗಂ           ೬೬

ವ : ಆಗಳ್

ಹರಿನೀಳಚ್ಛವಿಯೆಂಬ ಚೆಲ್ವತೊವಲಂ ಕಲ್ಲೋಲಹಸ್ತಾಗ್ರದೊಳ್
ಧರಿಸಿರ್ದುಂ ಪವಳಂಗಳೊಳ್ ಬೆಳಗಿನಿಂ ಕೆಂಪಾದ ಸಚ್ಛುಕ್ತಿಕೋ
ತ್ಕರದಂತಂಗಳಿನೊಳ್ಪುವೆತ್ತ ಸುಳಿಯೆಂಬಾ ಬಾಯುಮಂ ಬಿಟ್ಟು ದು
ರ್ಧರನಿರ್ಘೋಷಣದಿಂದೆ ಪುಯ್ಯಲಿಡುವಂತಿರ್ದತ್ತು ದುಗ್ಧಾರ್ಣವಂ           ೬೭

ವ : ಅಂತುಮಲ್ಲದೆಯುಂ

ಅಱಿದು ಜಿನಾಭಿಷೇಕಸಮಯಸ್ಥಿತಿಯಂ ಗಗನಾಧ್ವದಲ್ಲಿ ಪೋ
ಪೆಱಕದಿನುಚ್ಚಲದ್ಘನತರಂಗಚಯಚ್ಛಲದಿಂ ಸಘೋಷಣಂ
ನೆಱೆನೆಗೆವುತ್ತುಮಿರ್ದು ನಿಜಭೂರಿಜಡತ್ವದಿನೇಱಲಾಱದಿಂ
ತುಱೆ ಕೆಳಗಣ್ಗೆ ಬೀಳುತಮದಿರ್ದುದು ದುಗ್ಧಸಮುದ್ರಮಾಕ್ಷಣಂ   ೬೮

ಎಮ್ಮಯ ಜನನಿಯೆನಿಪ್ಪೀ
ಸಮ್ಮಹಿಯಂ ಕ್ಷೀರವಾರ್ಧಿಯಾಕ್ರಮಿಸುಗುಮೆಂ
ದುಂ ಮಹಿಜಂಗಳ್ ತಡಿಯನ
ದೊರ್ಮೆಯು ಬಿಡವುದಕವೇಗರೋಧನಿಮಿತ್ತಂ  ೬೯

ಮುತ್ತಂ ಮಾಣಕ್ಯಮಂ ದಲ್ ಪವಳದ ಕುಡಿಯಂ ಚಾರುಕಲ್ಲೋಲಮೆಂಬ
ತ್ಯುತ್ತಾಲೋಲ್ಲೋಲಹಸ್ತಾಗ್ರದೊಳೆ ನೆಗಪಿ ತಾಂ ತೋಱಿಸುತ್ತುಂ ಮಹಾವೃ
ದ್ಧತ್ವವ್ಯಾಪ್ತಾಂಗನಪ್ಪಾ ಪರದನ ತೆಱದಿಂ ಪಾಲ್ಗಡಲ್ ಕೂಡೆ ಚೆಲ್ವಂ
ಬಿತ್ತುತ್ತಿರ್ದತ್ತು ಮತ್ತಂ ಜಡಜಠರತೆಯಿಂದಂ ಸುಶೈಥಿಲ್ಯಕಚ್ಛಂ   ೭೦

ಕಡುಗಾಳಿಯ ಪೊಯಿಲಿಂದಂ
ಕಡಲ ತರಂಗಂಗಳೆಯ್ದೆ ನೆಗೆದವು ದೂರಂ
ಗಡ ಪೋಗಿ ಬೀಳುತಿರ್ದುವು
ವುಡುಮುಕ್ತಾಸಂಗ್ರಹೇಚ್ಛೆಯಿಂದೆಂಬಿನೆಗಂ       ೭೧

ಅಮೃತಂ ಕಲ್ಪಮಹೀರುಹಂ ಸಿತಗಜಂ ಸತ್ಕೌಸ್ತುಭಂ ತಾರಕಾ
ರಮಣಂ ಲಕ್ಷ್ಮಿಪರಾರ್ಧ್ಯರತ್ನನಿಚಯಂ ಮುಂತಾದ ಸದ್ವಸ್ತುಸಾ
ರ್ಥಮುಮಂ ತಂತಮಗೊಯ್ದರೆಂದು ಪಿರಿದಾರ್ಥಂಬಟ್ಟು
ಭ್ರಮೆಗೊಂಡಂತಿರೆ ಘೋಷದಿಂ ಮೊಱೆಯಿಡುತ್ತಿರ್ದತ್ತು ಭಂಗಾಕುಳಂ         ೭೨

ನದಿಯೆಂಬಬಲೆಯ ಶೋಭಾ
ಸ್ಪದಮಾದುರಪುಳಿನಮೆಂಬ ಜಘನಸ್ಥಳಸಂ
ಗದೆ ಮಸೃಣಮಣಿತಮಂ ಘೋ
ಷದೆ ನೆವದಿಂ ದುಗ್ಧವಾರ್ಧಿಯುಬ್ಬರಿಸುವವೊಲ್         ೭೩

ವಿಳಸಿತವಾಹಿನೀಶತಸಹಸ್ರದಿನೊಪ್ಪಮನಾಳ್ದು ಕೂಡೆ ನಿ
ರ್ಮಳತರವಾರಿಮಗ್ನಚರಭೂಧರವೃಂದದೊಳೊಂದಿ ಸರ್ವದಿ
ಕ್ಕುಳಮನದೊರ್ಮೆಯಾಕ್ರಮಿಸಿ ದಿಗ್ಜಯಮಂ ನೆಱೆಮಾಡಿ ಪೆರ್ಚುಮಂ
ತಳೆದುದು ಚಕ್ರವರ್ತಿಯವೊಲೊಪ್ಪುತುಮಿರ್ದುದು ದುಗ್ಧಸಾಗರಂ            ೭೪

ವ : ಮತ್ತಂ ಪದ್ಮಾನ್ವಿತಮಾಗಿಯುಂ ಧರಣೀಂದ್ರನಲ್ತು ಅಮೃತಾಧಿವಾಸ ಮಾಗಿಯುಂ ಸ್ವರ್ಗಭೂಮಿಯಲ್ತು ಕನತ್ಕಂಣಾಂಚಿತಮಾಗಿಯುಂ ಕಾಮಿನೀಜನಮಲ್ತು ವಜ್ರಧರಣಪರಿರಾಜಿತಮಾಗಿಯುಂ ವಾಸವನಲ್ತು ನೂತ್ನರತ್ನರಮಣೀಯಮಾಗಿಯುಂ ರೋಹಣಾಚಳಮಲ್ತುಮಂತುಮಲ್ಲದೆಯುಂ

ಪರಿಕಿಪೊಡೆನ್ನ ಜೀವನಮೆ ಲೋಕದೊಳೆಯ್ದೆ ಕೃತಾರ್ಥಮಾದುದೀ
ಸುರಪನಪೇಕ್ಷೆಗೆಯ್ದನಭಿಷೇಕದೊಳೀ ನೆವದಿಂ ಜಿನಾಂಗಮಂ
ಭರವಸದಿಂದೆ ಮುಟ್ಟುವನಿತಕ್ಕುಱೆ ಯೋಗ್ಯಮುಮಾದೆನೆಂದು ತ
ಚ್ಛರದಿ ತರಂಗದಿಂದೆಸೆವುತಿರ್ದುದು ಕೈನಿಱಿದಾಡುವಂದದಿಂ        ೭೫

ವ : ಇಂತು ವಿಚಿತ್ರಸಾಮರ್ಥ್ಯಕ್ಕಾಧಾರಮಾದ ಕ್ಷೀರನೀರನಿಧಿಯಂ ಶುನಾಸೀರಂ ಸಹಸ್ರಮುಖದಿಂ ಪೊಗಳುತ್ತುಮೆಡಬಲದೊಳ್ ಬರುತ್ತುಮಿರ್ದು ಸುರನಿಕರಂಗಳ ಪ್ರಶಂಸಾವಚನಂಗಳಂ ಕೇಳುತ್ತುಂ ಮುಟ್ಟೆವರ್ಪುದುಮಾಗಳದು ನಳಿನದಳಂಗಳೆಂಬ ನಯ ನಂಗಳಿಂ ನೋಡಿಸಮುಲ್ಲೋಲಕಲ್ಲೋಲಂಗಳೆಂ ಬುಲ್ಲಸತ್ಕರಂಗಳಿಂದರ್ಘ್ಯ ಮಣೀಮಯಾರ್ಘ್ಯಮಂ ಕೊಟ್ಟು ಗಭೀರಘೋಷಣದಿಂ ಸಂಭಾಷಣಂಗೆಯ್ವಂ ತಿರ್ಪುದುಮದಂ ನೋಡುತ್ತುಂ ತಡಿಯೊಳ್ ನಿಲ್ವುದುಂ

ಅತಿವೃದ್ಧಂ ನಿಮ್ನಗಾಧೀಶ್ವರನತಿಶಯಿತಾಂಧಂ ಕರಂ ತಾನೆನಿಪ್ಪೀ
ನುತವದ್ದುಗ್ಧಾರ್ಣವಂ ಮೇರುವಶಿಖರಮನೆಂತೇಱಿಗೆಂದಾ ಸಮಸ್ತಾ
ಮೃತಭೋಜಿವ್ರಾತಮಂದೆಯ್ದಿಸಲದನದಱೊಂದಗ್ರಮಂ ಪಂತಿಯಂ ಮಾ
ಡುತುಮಿರ್ದತ್ತುದ್ಘಶುಂಭತ್ಕನ್ಕಕಳಶಸಂದೋಹಮಂ ತಾಳ್ದಿ ಚೆಲ್ವಂ        ೭೬

ಅದು ಮೊದಲಾಗಿ ಪಾಂಡುಕವನಂಬರಮಿಕ್ಕೆಲದಲ್ಲಿ ಕೂಡೆ ನಿಂ
ದುದು ಮಿಗೆಮಾಲೆಗೊಂಡು ಬಿಡದೋಳಿಯಿನೆಲ್ಲ ಸುರಾಸುರಾಳಿಗಳ್
ಪುದಿಯೆ ಕಿರೀಟಕೋಟಿಜಟಿಲಾಂಶುಗಳುಂ ಸಲೆಪೊತ್ತುಕೊಂಡ ತೋ
ರಿದುವೆನಿಸಿರ್ದನೇಕವಿಧರತ್ನಸುವರ್ಣಘಟಪ್ರಭಾಳಿಯುಂ೭೭೭

ಎಮಗೆ ಪಗೆಯಪ್ಪ ದುರ್ಧ್ವಾಂ
ತಮನೊಳಕೊಂಡಿರ್ದುದೆಂದು ವೇಳಾವನಮಂ
ದ್ಯುಮಣಿಕೋಟಿಗಳೆ ಬಂದಾ
ದೆಮೆ ಮುತ್ತಿದುವೆನಿಸಿದುವು ಸುವರ್ಣಘಟಂಗಳ್           ೭೮

ಚಂದ್ರನ ಪೆರ್ಚೆ ಪೆರ್ಚುಗೆಡಲಾಗಿ ಬರ್ದುಂಕುವ ದುಗ್ಧವಾರ್ಧಿಯುಂ
ಸಂದ ವಿರೋಧಿಮಿತ್ರನೆನಿಸಿರ್ದ ನಿಮಿತ್ತದೆ ವೈರಿಯೆಂದು ಸಾ
ರ್ತಂದುರುರಾಹುಮಂಡಳಿಗಳೋವದೆ ಮುತ್ತಿದುವೆಂಬಿನಂ ಪಯಃ
ಸಿಂಧುವ ತೀರಮಂ ಬಳಸಿನಿಂದುವು ನೀಲಘಟಂಗಳೋಳಿಯಿಂ        ೭೯

ಕ್ಷೀರಸಮುದ್ರತೀರದೆಡೆಯಂ ಮಿಗೆ ನಿರ್ಮಳಚಂದ್ರಕಾಂತಭೃಂ
ಗಾರಮಪಾರಮಾವರಿಸಿ ನಿಂದುದು ಧೋರಣೆಯಿಂದೆ ಸುತ್ತಲುಂ
ಶಾರದನೀರದಂ ಮೊಗೆಯಲೀ ಕವಿತಂದುದೆ ಪಾಲನೆಂಬ ಶಂ
ಕಾರಸಮಂ ನಿರೀಕ್ಷಿಪರ ಚಿತ್ತದೊಳಾಗಿಸುತಿರ್ದುದಾಕ್ಷಣಂ              ೮೦