ಸಂದಣಿಸಿರ್ದು ಕೂಡೆ ಬಿಡದಲ್ಲಿದುದಿಲ್ಲಿದುದೆತ್ತಲಿತ್ತಲುಂ
ಸಂದಿಸಿದತ್ತಿದೊರ್ಮೊದಲೊಳೊಂದೆ ದಲೆಲ್ಲಿಯುಮೆಂಬ ಮಾಳ್ಕೆಯಿಂ
ಮಂದರದಲ್ಲಿಯುಂ ನಡೆವೆಯುಂ ಕಡಲಲ್ಲಿಯುಮೆಯ್ದೆ ತಮ್ಮುಮಂ
ಕುಂದದೆ ಕಾಣ್ಬಿನಂ ನಡೆದುಬಂದುದು ಬೇಗಮಮರ್ತ್ಯಸಂಕುಳಂ     ೮೧

ವ : ಅದೆಱಿಂ ಬಳಿಯಂ

ಕೂಡೆ ವಿಗುರ್ವಿಸಿದಂ ಚೆ
ಲ್ವೋಡದ ಸಾಹಸ್ರಬಾಹುಕಂಡಂಗಳುಮಂ
ನಾಡೆ ಶಾಖಾಸಹಸ್ರಂ
ಕೂಡಿದ ಸುರವೃಕ್ಷದಂತಿರೊಪ್ಪಿದನಿಂದ್ರಂ        ೮೨

ವ : ಇಂತು ವಿಕ್ರಿಯರ್ಧಿವಿಭವದಿಂ ವಿಗುರ್ವಿಸಿದ ಸಹಸ್ರಬಾಹು ದಂಡ ಕಾಂಡಂಗಳಿಂದೇಕೈಕ ಯೋಜನಪ್ರಮಿತಮುಖಮುಖರಂಗಳುಮಷ್ಟಯೋಜನ ಪರಿಪ್ರಮಾಣಾಂತರಾಳವಿಸ್ತಾರ ಪ್ರಶಸ್ತಂಗಳಾದ ವಿಕಟಹಟದ್ಧಾಟಕೀಯ ಸಹಸ್ರ ಘಟಪೇಟಕಂಗಳಂ ಪಿಡಿದು ಬಕ್ಕೆವಲಸು ಪಿರಿದಾಗಿ ಕಾಯ್ತು ನಿಂದಿರ್ದುದೆಂಬಂತೆ ಕಣ್ಗಳಿಂಗಾನಂದಮನಜನಿಸುತ್ತುಮಿರೆ

ಥಳಥಳಿಪ ಗಂಡಶೈಲಂ
ಗಳೆ ಸಾಸಿರದಿಂದೆ ಮೆಱೆವ ಮೇರುವ ತೆಱದಿಂ
ಪೊಳೆವ ಸೌವರ್ಣಕುಂಭಂ
ಗಳ ಸಾಸಿರದಿಂದಮೊಪ್ಪಿದಂ ದೇವೇಂದ್ರಂ        ೮೩

ವ : ಅನಂತರಂ

ಪಟುಪಟಹಂಗಳ ರವಮು
ತ್ಕಟ ಕೋಳಾಹಳನಿನಾದದೊಡನೊರ್ಮೆಯೆ ದಿ
ಕ್ತಟಮಂ ಪುದಿಯಲ್ ಪೊಕ್ಕಂ
ಸ್ಫುಟಲಂಘನದಿಂದೆ ಸುರಪನಮೃತಾರ್ಣವಮಂ            ೮೪

ವ : ಇಂತು ತತ್ಕ್ರೋಡಮಂ ಕ್ರೀಡೆಯಿಂ ಪುಗುವುದುಂ

ಸಂಗಡಿಸಿ ಪೊಂಗೊಡಂಗಳ
ಪಿಂಗಪ್ರಭೆ ಕೂಡೆ ಪಿರಿದುಮಾವರಿಸಲ್ ಪಾ
ಲಿಂಗಡಲನುಕರಿಸಿದುದು
ತ್ತುಂಗಘೃತಾರ್ಣವವಿಳಾಸಮಂ ಭರದಿಂದಂ     ೮೫

ಎಮ್ಮ ಮಗಂ ಕರಂ ಕಿಱಿಯನಪ್ಪವನೊರ್ವನೆ ಕುಂಭಸಂಭವಂ
ಮುಮ್ಮಿಗೆ ಪೀರ್ದನೆಂದೊಡೆಮಗೇ ಕಡುಬೇಗದಿಂದಮಿಂ
ತೊರ್ಮೊದಲಲ್ಲಿ ಪೀರ್ವೆವಿದನೀಗಳೆ ನೋಳ್ಪಡಮೆಂದು ಚೋದ್ಯದಿಂ
ದಂ ಮೊಗೆವುತ್ತುಮಿರ್ದವು ಮಹಾಪರಿಣಾಹಕಕುಂಭಕೋಟಿಗಳ್     ೮೬

ನಿಮಿಷದೊಳೆ ತುಂಬಿ ನೀಡಿದ
ನಮರೇಶಂ ಸಲಿಲದೇವಿಯರ್ ಕಾಣಿಕೆಗೊ
ಟ್ಟಮೃತದ ಕುಂಭಂಗಳ ಸುರ
ಸಮಿತಿಗೆ ಕೊಡುತಿರ್ಪ ಮಾಳ್ಕೆಯಿಂದೆಂಬಿನೆಗಂ   ೮೭

ವ : ಮತ್ತಂ

ದಿವಿಜರ್ ಬೊಬ್ಬಿಱಿದಾಲಿ ತಂದುಕುಡೆ ಕೋಟಾಕೋಟಿ ಕುಂಭಂಗಳಂ
ದಿವಿಜೇಂದ್ರಂ ಕಡುಚೋಜಿಗಂಬಡೆದ ಕೋಟಾಕೋಟಿ ಹಸ್ತಂಗಳಿಂ
ದೆವೆ ತಾಂ ಕೊಂಡುಱೆ ತುಂಬಿ ನೀಡುವೆಡೆಯಂ ನಿಟ್ಟೈಸಲಾರ್ಪನ್ನನಾ
ರವನಂ ತೋಱುವೊಡಿಲ್ಲದೇಂ ಪಡೆದುದೋ ವೈಚಿತ್ಯ್ರಸಾಮರ್ಥ್ಯಮಂ       ೮೮

ಎಲ್ಲೆಡೆಯಲ್ಲಿಯುಂ ಮೊಗೆವ ಬೆಳ್ಳಿಯ ಪಾವನಚಂದ್ರಕಾಂತದ
ಪ್ರೋಲ್ಲಸಿತಾಮಲಸ್ಫಟಿಕದುಚ್ಚಘಟಂಗಳ ಕೋಟಿ ಕೂಡೆ ತ
ಳ್ವಿಲ್ಲದೆ ಸುತ್ತಲುಂ ಪೊಳೆಯೆ ದುಗ್ಧಸಮುದ್ರಮದಂದು ತಾರಕಾ
ತಲ್ಲಜಮಂಡಳಾವೃತನಭಸ್ಥಳಮೆಂಬಿನಮಾಳ್ದುದೊಪ್ಪಮಂ     ೮೯

ಕಡಲಿಂದೆಳ್ತಪ್ಪ ಮತ್ತಂ ಕಡಲಕಡೆಗೆ ಪೋಗುತ್ತುಮಿರ್ಪಾಳಿಯಿಂದಂ
ನಡೆದಾ ಹೇಮಾದ್ರಿಯಂ ಪತ್ತುವ ಬಿಡದಿಳಿದಲ್ಲಿಂ ಬರುತ್ತಿರ್ಪ ಮುನ್ನಂ
ಕುಡುವಿಂದ್ರಂಗಿದ್ರನುಂ ತಾಂ ಕುಡೆ ಕೊಳುವ ಮಹಾಸಂಭ್ರಮೋತ್ಕರ್ಷದಿಂದಂ
ಪಡೆವುತ್ತಿರ್ದತ್ತಗುರ್ವಂ ಸುರರ ಪಡೆ ಕರಂ ವಾರ್ಘಟೀಯಂತ್ರದನ್ನಂ           ೯೦

ಒರ್ವೊರ್ವರ ಕೈಗಳೊ
ಳುರ್ವಿಂದಂ ಕೊಡುವ ಕೊಳುವ ಪದಮಂ ಬೇಗಂ
ಕೊರ್ವಿದ ಗಮನಾಗಮನಮ
ನುರ್ವರೆಯೊಳ್ ಭೇದಿಸಲ್ಕಮಾಱಂ ಬ್ರಹ್ಮಂ    ೯೧

ನವರತ್ನಕಳಶತಮಭಿ
ನವಮಂದರಗಿರಿನಡರ್ದು ಪೋದುದು ನಾನಾ
ಛವಿಯಿಂದೆ ಮಿಗುವ ತೆಱದಿಂ
ನವಗ್ರಹಂಗಳ ವಿಳಾಸಮಂ ಭರದಿಂದಂ            ೯೨

ಜಿನಪನ ಸಮ್ಮುಖಂಗಳೆನಿಸಿರ್ದವು ಪೂರ್ಣತರಂಗಳಾಗಿ ಪಾ
ವನದಿವಮಂ ಸಮಾಶ್ರಯಿಸಿ ಪೋದುವು ತದ್ವಿಮುಖಂಗಳಾಗಿ ಘ
ಮ್ಮನೆ ಬರುತಿರ್ದ ಕುಂಭನಿಚಯಂಗಳವುಂ ನೆ ಠಿರಿಕ್ತಕಂಗಳೆಂ
ದೆನಿಸಿಯೆ ಬಿಳ್ದವಬ್ಧಿಯೊಳೆ ತ್ಪ್ರೋಸುವಂತೆ ಜಿನಪ್ರಭಾವಮಂ      ೯೩

ಸಡಗರದಿಂದಂ ದಿವಿಜರ
ಪಡೆ ಪಡೆದದ್ಭುತಮನೆಯ್ದೆ ತಂದಿರಿಸಿತ್ತಂ
ದೊಡೆಯನಭಿಷವ ನಿಮಿತ್ತಂ
ತಡೆಯದೆ ಪಾಲ್ಗಡಲನಮರಗಿರಿಮಸ್ತಕದೊಳ್೯೪

ಮೊಗೆಯೆ ಮಗುಳ್ದು ಸರ್ವದಿವಿಜಾಸುರರಾವಳಿ ಮತ್ತೆಮತ್ತೆಯುಂ
ತೆಗೆದನು ಕೂಡೆಕೂಡೆ ನೆಱೆಬತ್ತುತುಮಿರ್ದುದು ಭೂಮಿ ಕಾಣ್ಬಿನಂ
ಜಗದೊಳಿದೇಂ ವಿಚಿತ್ರಮೊ ಜಿನಾಭಿಷವೋತ್ವವಕಾರಣಂ ಸುರಾ
ಳಿಗಳಿಗಧೀಶ್ವರಂ ಬಿಡದೆ ಪಾಲ್ಗಡಲಂ ಮೊಗೆವಂದು ಸಂಭ್ರಮಂ     ೯೫

ಎನಿತಾನುಂ ಘಟಕೋಟಿಯಿಂ ಮೊಗೆಯಲಾ ಕ್ಷೀರಾರ್ಣವಂ ವೀಚಿತಾ
ಡನದಿಂದಾದುರುರೇಖೆಗಳ್ ತಡಿಗಳೊಳ್ ತೋರ್ಪಂತೆ ಪಿಂಗಿತ್ತು ಮ
ತ್ತೆನಸುಂ ತಾಯ್ಗಡಲೆಯ್ದೆ ಕಾಣ್ಬ ತೆಱದಿಂ ಬತ್ತಿತ್ತು ಮತ್ತಂ ಮಹಾ
ಘನರತ್ನಂಗಳ ರಾಶಿಗಳ್ ಬಿಡದೆ ಮೆಯ್ದೋರ್ಪಂತೆ ಪೋದತ್ತು ನೀರ್          ೯೬

ಚುಳಕಪ್ರಮಾಣಮಾದೊಡ
ಮುಳಿಯದವೊಲ್ ದುಗ್ಧವಾರ್ಧಿಜಳಮಂ ಮೊಗೆದರ್
ಪುಳಕಿತ ತನುಗಳ್ ದಿವಿಜರ್
ಬಳಿಯಂ ಮಣಿವಸರದಂತೆ ಪಡೆದುದು ಚೆಲ್ವಂ  ೯೭

ವ : ಇಂತು ನಿರಂತರಾನುಗತ ನಿಖಿಳನಿಳಿಂಪಕುಳಸಮಾರಭ್ಯಮಾಣೋಭಯ ಶ್ರೇಣಿಯೊಳು ಜ್ವಳಿತಾನಣುತರ ಮಣಿಮಯಕಂಕಣಗಣರಮಣೀಯಘನರಣನ ಪರಿಣಾಯ ಮಾನಮಾಗಿ ಲೀಲಾಸಮುತ್ತಂಭಿತೋತ್ತಾಲ ಭುಜಮಾಲಾವಲಯದೊಳತಿ ವೇಗಚಮತ್ಕಾರದಿಂ ರಿಕ್ತಪೂರ್ಣ ಘಟಸಮಾವರ್ತನ ನಿವರ್ತನಂಗಳಿಂದಾಕ್ಷಣಂ ನಭಸ್ಥಳಂ ಚಟುಳಜಯಂತ್ರಘಟಿಕಾಜಾಳಜಟಿಳೀಕೃತಮಾದುದೆಂಬಂತೆ ಪುರಂದರ ಪುರಸ್ಸರಂ ಸಕಳಸುರಾಸುರ ಪರಿಕರನಿಕರಮುಂ ಕ್ಷೀರೋದನೀರನಾಶ್ಚರ್ಯದಿಂ ಜಿನಜನ್ಮಾಭಿಷವಣಕಲ್ಯಾಣಕರಣನಿಮಿತ್ತಂ ಭಕ್ತಿಯಿಂದಂ ತಂದು

ದೇವರ್ಕಳ ಕಳಕಳಘನ
ರಾವದಿನೊಗೆವುತ್ತುಮಿರ್ದು ಕೋಳಾಹಳಮಂ
ಸೇವಕ ಧನದಂ ಮಾಣಿಸಿ
ಯೋವದೆ ತಂತಮ್ಮ ತಾಣದಲ್ಲಿರಿಸುವುದುಂ   ೯೮

ವ : ಮತ್ತಂ

ತಳಿರಿಂ ಪೂಮಾಲೆಯಿಂ ಕನ್ನಡಿಯಿನಮಳಸೂತ್ರಂಗಳಿಂ ಗಂಧಚರ್ಚಾ
ವಿಳಸನ್ಮುಕ್ತಾಕ್ಷತಶ್ರೇಣಿಗಳಿನೆಸೆವ ಸತ್ಕಂಠದೊಳ್ ದಿವ್ಯವಸ್ತ್ರಂ
ಗಳ ಸುತ್ತಿಂ ರಂಜಿಸುತ್ತಿರ್ಪರುಣಮಣಿಮಹಾಪೂರ್ಣಸತ್ಕುಂಭಮಂ ಮಂ
ಗಳ ಚಾತುಷ್ಕಸ್ಥಮಾಯಾಕ್ಷರದ ನಡುವೆ ಸಂಸ್ಥಾಪನಂಗೆಯ್ದನಿಂದ್ರಂ         ೯೯

ವ : ಇಂತು ಓಂ ಹ್ರೀಂ ಸ್ವಸ್ತಯೇಕಳಶಸ್ಥಾಪನಂ ಕರೋಮಿ ಸ್ವಾಹಾ ಎಂಬೀಮಂತ್ರಮನುಚ್ಚರಿಸುತ್ತುಂ ಮಂದಾಕಿನೀಮಾನಸಸರೋವರಾದಿಗಳಿಂ ತಂದ ನವರತ್ನಸಮಾಕಳಿತ ಸರ್ವೌಷಧಿಸಮ್ಮಿಶ್ರೀಕೃತತೀರ್ಥಾಣಃಪರಿಪೂರ್ಣಕುಂಭಮಂ ಸ್ವಸ್ತಿಕ ವಿಸ್ತಾರದಿಂ ಪ್ರಶಸ್ತಮಾದ ಸಮಸ್ತಧಾನ್ಯಪ್ರಸ್ತಾರ ಪ್ರಸ್ತೂಯಮಾನಮಧ್ಯಪ್ರದೇಶದಲ್ಲಿ ಪ್ರಸ್ಥಾಪನಂಗೆಯ್ದಿಂಬಳಿಯಂ ಸೌಧಮೇಂದ್ರನುಮೀಶಾನೇಂದ್ರನುಮಾಚಮನಸಕಳೀ ಕರಣಾದಿ ತದ್ಯೋಗ್ಯಕ್ರಮಮನನುಕ್ರಮದಿಂ ಮಾಡಿ ಸಿದ್ಧಗುಣಸ್ತೋತ್ರಪರಿಸಮಾಪ್ತ್ಯನಂತರಂ

ಅಮರಾಧಿಪರೀರ್ವರುಮ
ರ್ಘ್ಯಮನೆತ್ತೆ ನಭೋಂತರಾಳದೊಳ್ ತೀವಿದುದಂ
ದಮಳ ಜಳಾಕ್ಷತಮಿಶ್ರಿತ
ಸುಮೇರು ನಂದನನಮೇರುಕುಸುಮಪ್ರಸರಂ     ೧೦೦

ವ : ಅಂತು ತಜ್ಜಿನಾರ್ಭಕನ ಮುಂದೆ ಸಮಗ್ರಾಘ್ಯೊದ್ಧರಣಮಂ ನಿರ್ವರ್ತಿಸಿ

ಬಹಳದಶಾಂಗಧೂಪವರಧೂಮಲತಾನಿಚಯಂ ಸಮಸ್ತದಿ
ಕ್ಕುಹರಮನೆಲ್ಲಮಂ ಪರಿಮಳೀಕರಿಸುತ್ತುಮದಿರ್ದುದಾಕ್ಷಣಂ
ಬಹುವಿಧನೂತ್ನರತ್ನಮಯದೀಪಕಳಾಕಳಿಕಾಕಳಾಪಮುಂ
ಮಹಿಮಸಮೇತ ಕಾಂತಿಭರದಿಂ ಬೆಳಗಿತ್ತು ತದಂತರಾಳಮಂ          ೧೦೧

ಪಿರಿದುಂ ನಾನಾಪ್ರಕಾರ ಪ್ರಪಟುಪಟಹಸಂದೋಹಗಂಭೀರಭೇರೀ
ಪರಿಷತ್ಸತ್ಕಾಹಳಾಸಂಕುಳಬಹುವಿಧ ನಿಸ್ಸಂಖ್ಯಶಂಖಪ್ರರಿಂಖ
ದ್ದರನಿರ್ಘೋಷಂಗಳಂದೊರ್ಮೊದಲೊಳೆ ದಶದಿಙ್ಮಂಡಳೀಸರ್ವಕೋಣಾಂ
ತರದೊಳ್ ಭೋರೆಂದು ತಾವಿಮ್ಮಡಿಸಿದವು ಮಹಾತತ್ಪ್ರತಿಧ್ವಾನದಿಂದಂ     ೧೦೨

ಗಂಧರ್ವದೇವದೇವೀ
ಬಂಧುರಸಂಗೀತತುಂಗಮಂಗಳರವಸಂ
ಬಂಧಂ ತೀವಿರ್ದುದು ದಿ
ಕ್ಸಂಧಿಗಳೊಳ್ ಜಿನನ ಜನನಸವನೋತ್ಸವದೊಳ್         ೧೦೩

ಘನತರ ಸುಷಿರಾಳೀಜಾತಚಾರುಪ್ರಣಾದಂ
ಘನಮಣಿಮಯಭೂಷಾರಾವದಿಂದೆಯ್ದೆ ಪೆರ್ಚಲ್
ವಿನುತನವರಸಂಗಳ್ ತುಂಬಿ ತುಳ್ಕಾಡೆ ದೇವಾಂ
ಗೆನೆಯರೊಲಿದು ನಾಟ್ಯಂಗೆಯ್ವುತಿರ್ದರ್ ವಿಚಿತ್ರಂ        ೧೦೪

ವ : ಇಂತು ಜಿನಜನ್ಮಾಭಿಷೇಕಸೂಚಕ ಸಂಭ್ರಮಕೋಳಾಹಳಂ ಕೈಗಣ್ಮಿ ಪೋಣ್ಮುತ್ತಿರಲಾಗಳುಚ್ಚಾರಿತ ಕಳಶೋದ್ಧರಣಮಂತ್ರ ಮುಖರಮುಖರಪ್ಪ ಶತ ಮಖರಿರ್ವರುಂ ಪೂರ್ಣಕಳಶಂಗಳಂ ತಳೆದುಕೊಂಡು ತತ್ಪರಮೇಶ್ವರನುಭಯ ಪಾರ್ಶ್ವಂಗಳಲ್ಲಿ ನಿಂದಿರ್ಪುದುಂ

ಇಕ್ಕೆಲದಲ್ಲಿ ನಿಂದ ದಿವಿಜೇಂದ್ರರ ಹಸ್ತತಳಂಗಳಲ್ಲಿ ಕೈ
ಮಿ‌ಕ್ಕಭಿರಂಜಿಸಿರ್ಪ ಕಳಶಂಗಳವೊಪ್ಪಮನಾಳ್ದವಾಕ್ಷಣಂ
ಚೆಕ್ಕನೆ ತಜ್ಜಿನೇಶ್ವರನ ಪುಣ್ಯಮಹಾಮಹಿಮಪ್ರಭಾವಸೌ
ಧಕ್ಕೆ ಸುವರ್ಣಪೂರ್ಣಕಳಶಂಗಳನಿಟ್ಟಪರೆಂಬ ಮಾಳ್ಕೆಯಿಂ           ೧೦೫

ಜಯಜಯಘೋಷಣಂ ಪುದಿಯೆ ದಿಕ್ತಟಮಂ ಪ್ರಣಾದಿಮಂತ್ರಸಂ
ಚಯಮುಮನೋದುತುಂ ಜಿನನ ಮಸ್ತಕದೊಳ್ ಘನದುಗ್ಧವಾರಿಧಾ
ರೆಯನಮರಾಧಿಪರ್ ಸುರಿವುತಿರ್ದರದೆಂತುಸಮಸ್ತದೇವಕೋ
ಟಿಯ ಹೃದಯಕ್ಕೆ ಕೌತುಕವಿಶೇಷಮನಾಗಿಪುದಂತಿರಾಕ್ಷಣಂ          ೧೦೬

ಸೊಗಯಿಪ ತೋರಕೆಚ್ಚಲಮೊಲೊಪ್ಪೆ ಮಹಾಕಳಶಂ ತದಗ್ರದ
ಲ್ಲೊಗೆದುಱುನೀಳ್ದ ಪೆರ್ಮೊಲೆಗಳಂತೆ ಕರಾಂಗುಳಿಗಳ್ ವಿರಾಜಿಸಲ್
ಮಿಗೆ ವೃಷವತ್ಸವತ್ಸಳತರಾಶಯವೃತ್ತಿಗಳಾಗಿ ಕಾಮಧೇ
ನುಗಳವೊಲಿಂದ್ರರುಂ ಕಱೆವುತಿರ್ದರುದಾರಪಯಃಪ್ರವಾಹಮಂ     ೧೦೭

ಪರಿವಿಸತ್ಪಯೋಧರಘಟಾತ್ರಯಕಂ ಮಣಿಮುದ್ರಿಕಾಪ್ರಭಾ
ಪರಿಕರಶಕ್ರಚಾಪವಿಸರಂ ಘನಕಂಕಣದುಜ್ಝಣೆಂಬ ಪೀ
ವರರವಗರ್ಜಿತಂ ನಖಮಯೂಖತಟಲ್ಲತಿಕಾ ವಿಶೇಷಮಾ
ಗಿರೆ ಕಱೆಯುತ್ತುಮಿರ್ದುದುರುಹಸ್ತಮನೂನಪಯಃಸುಧಾರೆಯಂ  ೧೦೮

ಪಲವುಂ ಕಾಲದ ಗೆಡ್ಡೆಯಂತೆ ಸೊಗಿಸಿರ್ದಾ ಪಾಂಡುಕೋಚ್ಚೈಶ್ಯಿಳಾ
ತಳದೊಳ್ ಪುಟ್ಟಿದ ಶೋಣಪಾಣಿತಳಚಂಚತ್ಪಲ್ಲವೋಲ್ಲಾಸಿ ಕೋ
ಮಳಪುಣ್ಯದ್ರುಮಸಸ್ಯದಂತೆಸೆವ ತೀರ್ಥೇಶಂಗೆ ದೇವೇಂದ್ರರಂ
ದೊಲವಿಂದಂ ಸುರಿಯುತ್ತುಮಿರ್ದರಧಿಕಂ ಪೀಯೂಷತಾಪೂರಮಂ            ೧೦೯

ಮಿಗೆವೈಕುರ್ವಣದಿಂದೆ ಕೊರ್ವಿ ಪಿರಿದುಂ ಪರ್ವಿರ್ದ ಹಸ್ತಂಗಳೋ
ಳಿಗಳಂ ಪೂರ್ಣಘಟಂಗಳಂ ಕೊಳುವ ತಾಂ ರಿಕ್ತಂಗಳಂ ನೀಡುವು
ಜ್ಜುಗುದಿಂ ಱಾಟಣಮೆಂಬಿನಂ ಜಿನಪಪುಣ್ಯಕ್ಷೇತ್ರದೊಳ್ ಪುಣ್ಯವಾ
ರಿಗಳಂ ಪೊಯ್ದರಧೀಂದ್ರರುಂ ಬಳೆವವೊಲ್ ವಿಜ್ಞಾನಸಸ್ಯಂಕರಂ     ೧೧೦

ವ : ಅಂತುಮಲ್ಲದೆಯುಂ

ಅರುಣಮಣಿಮಯಘಟಂಗಳಿ
ನುರವಣಿಸಿಯೆ ಬೀಳ್ವ ದುಗ್ಧಪೂರಂ ಚೆಲ್ವಂ
ಧರಿಸಿದುದು ತಳಿರ ತೊಂಗಲ
ನೆರವಿಗಳಿಂದುಗುವ ಕುಸುಮಮಂಜರಿಗಳವೊಲ್            ೧೧೧

ಹರಿನೀಳದ ಕಳಶಂಗಳಿ
ನಿರದುಱೆಪೊಱಮಡುವ ದುಗ್ಧಮಾಳ್ದುದು ಸೊಗಸಂ
ವರರಾಹುಮಂಡಳಿಗಳಿಂ
ಸುರಿವ ಮಹಾಚಂದ್ರಚಾರುಕಳೆಯೆಂಬಿನೆಗಂ      ೧೧೨

ಹೈರಣ್ಯಕುಂಭಮುಖದಿಂ
ದೋರಂತಿರೆ ಸುರಿವ ದುಗ್ಧಮೊಪ್ಪಿತ್ತು ಕರಂ
ಹೈರಣ್ಯಗರ್ಭಮುಖದೊಳ್
ಸೇರಿರ್ದ ಸರಸ್ವತೀಕಟಾಕ್ಷಂಗಳವೊಲ್೧೧೩

ಸ್ಫಟಿಕಕಳಶಂಗಳಿಂದು
ತ್ಕಟಮಾಗಿ ದಲುಗುವ ದುಗ್ಧಧಾರಾಪೂರಂ
ಪರಮನ ಶುಕ್ಲಧ್ಯಾನಂ
ಭರದಿಂದಂ ಪೊಱಗೆ ಪೊಣ್ಮುವಂತಿರಲೆಸೆಗುಂ    ೧೧೪

ಮುಟ್ಟಿ ಸರ್ವಾಂಗಮಂ ಬೆ
ಳ್ವಟ್ಟೆಯ ಕುಪ್ಪಸಮನೆಯ್ದೆ ತೊಟ್ಟಂತೆ ಕರಂ
ನೆಟ್ಟನೆ ಮಂದರಗತಿಯಿಂ
ದೊಟ್ಟೈಸಿಳಿದುದು ಜಿನಾಭಿಷೇಕಕ್ಷೀರಂ           ೧೧೫

ಬಱಯಿತ್ತಿತ್ತಲ್ ಸುಧಾವಾರಿಧಿ ಮೊಗೆವ ಮಹಾವೇಗದಿಂದಂ ಸುರೇಂದ್ರರ್
ನೆಱೆಮುಳ್ಗಿತ್ತಿತ್ತಲೀ ಮೇರುಗಿರಿ ಬಳಸಿದ ಕ್ಷೀರಪೂರಂಗಳಿಂದಂ
ತುಱುಗಿತ್ತು ವ್ಯೋಮಮಂ ಬಿಂದುಗಳ ಬಳಗದಿಂ ತಾರಕಾಕ್ರಾಂತಮೆಂಬಂ
ತುಱೆ ಪೆರ್ಚುತ್ತಿರ್ದುದೇನದ್ಭುತಮೊ ಶತಮಖಂ ಮಾಳ್ಪ ಜನ್ಮಾಭಿಷೇಕಂ    ೧೧೬

ಪರಮಾನೇಕಘಟಂಗಳಿಂ ಪಿಡಿದು ಪೀನಾನೇಕಹಸ್ತಂಗಳಿಂ
ಸುರರೊರ್ವೊರ್ವರದೆಲ್ಲಿಯುಂ ಬಿಡದ ಯಾನಾಯಾನವೇಗಂಗಳಿಂ
ದಿರದಿಂತೊರ್ಮೊದಲಲ್ಲಿಯೆಲ್ಲೆಡೆಯೊಳಂ ತಂತಮ್ಮ ರೂಪಂಗಳಂ
ಭರದಿಂ ತೋಱಿಪರಾಗಿ ದೇವತತಿ ಸಂಖ್ಯಾತೀತಮೇನಾಗದೇ        ೧೧೭

ಹಿಮಗಿರಿಯಂತೆ ಮೇರುಗಿರಿಯಂತೆ ಸಲೆಮಾಳ್ಪ ಸಮಸ್ತಧಾತ್ರಿಯೆ
ಲ್ಲಮುಮನದೊರ್ಮೆ ಮುಳ್ಗಿಸುವ ಶಕ್ತಿಯನುಳ್ಳ ಪಯಃಪ್ರವಾಹಸಂ
ಭ್ರಮಮುಱೆ ಮೇಲೆ ಮೇಲೆ ಜಿನಮಸ್ತಕದೊಳ್ ಕವಿಯಲ್ಕೆ ನಿಶ್ಚಳ
ಪ್ರಮದದನಿರ್ದನಂದು ಸಹಜಂ ಜಿನಪುಂಗಮವಾರ್ಯವೀರ್ಯಕಂ   ೧೧೮

ಕವಿವ ಕ್ಷೀರವಾಹಂ ಪಿರಿದು ಶಿಶು ಕರಂ ತಾಳಲೇನಾರ್ಪನೆಂದಾ
ದಿವಿಜೌಘಂ ಚಿಂತಿಸಲ್ಕಂದದನಱಿದವಧಿಜ್ಞಾನದಿಂದರ್ಭಕಂ ತ
ತ್ಪ್ರವಿಚಿಂತಾಭಾರಮಂ ಮಾಣಿಸುವ ಬೆವಸೆಯಿಂ ಸೀಂಪುದುಂ ವ್ಯೋಮದೊಳ್
ದೇವವಿಮಾನವ್ರಾತಮುಂ ಪೂವಲಿಗೆದಱಿವೊಲ್ ಚೆಲ್ಲಿಪೋದತ್ತದೆತ್ತಂ      ೧೧೯

ವರನಾಸಾಗರ್ಭದೊಳ್ ತಾಂ ಪೊಱಮಡುವುಸಿರಿಂ ದೂರಮಂ ಪೋಗುತಂ ಮ
ತ್ತಿರದಾಗಳ್ ಬರ್ಪ ಸುಯ್ಲಿಂದೊಡನೆ ಬರುತುಮಿರ್ದಾ ವಿಮಾನಂಗಳಂ ದೇ
ವರ ದೇವಂ ಮೆಲ್ಲನಪ್ಪೊಂದುಸುರಿನ ವಶದಿಂ ಸ್ಥಾಪನಂಗೆಯ್ವುದಕ್ಕ
ಚ್ಚರಿವಟ್ಟಿಂತೆಂದವೆಲ್ಲರ್ ಗಹನಮೆ ಪರಮಾನಂತವೀರ್ಯಂಗಿದೆಲ್ಲಂ       ೧೨೦

ವ : ಇಂತು ಮುನ್ನೆಂದುಂ ಭುವನತ್ರಯದೊಳನುದ್ಭೂತಮಾದದ್ಭುತಮಪ್ಪ ಜಿನನ ಜನನಸವನನಂತರಂ

ನಟನಂಗೆಯ್ವಮರೀಕಟಾಕ್ಷನಿಚಯಂ ತೀರ್ಥೇಶಗಂಡಸ್ಥಳೀ
ಪುಟದೊಳ್ ತಾಂ ಪ್ರತಿಬಿಂಬಿಸುತ್ತಿರಲದಂ ದೇವೇಂದ್ರನರ್ಧಾಂಗಿಯು
ತ್ಕಟದಿಂ ಕಂಡಭಿಷೇಕದುಗ್ಧಕಣಶೇಷಾಶಂಕೆಯಿಂ ಹಸ್ತದೊಳ್
ದಿಟದಿಂದಂ ತೊಡೆವುತ್ತುಮಿರ್ದಮರರಿಂಗಂ ಹಾಸ್ಯಮಂ ಮಾಡಿದಳ್           ೧೨೧

ಕ್ಷೀರೋದಬಿಂದುವಿತತಿ ಶ
ರೀರಮನಾವರಿಸೆ ಮೆಱೆದನಾ ದೇವೇಂದ್ರಂ
ತೋರಮುತ್ತಿನ ಸುಕಂಚುಕ
ಭಾರಮುಮಂ ತೊಟ್ಟನಾಗಳೆಂಬೀ ತೆಱದಿಂ      ೧೨೨

ವಿಳಸಿತರತ್ನಭಿತ್ತಿಗಳ ಸುತ್ತಲುಮೊಯ್ಕನೆ ತೆತ್ತಿಸಿರ್ದ ಪು
ತ್ಥಳಿಗೆಯ ಕೈಗಳೊಳ್ ಬಿಡದೆ ತುಂಬಿದ ಚೆಲ್ವಭಿಷೇಕದುಗ್ಧದು
ಜ್ವಳಕಣರಾಜಿಗಳ್ ಬಿಡದೆ ನಿರ್ಮಳಮೌಕ್ತಿಕಮಂಗಳಾಕ್ಷತಂ
ಗಳ ಬಳಗಂಗಳೆಂಬ ತೆಱದಿಂ ಸೊಗಸಂ ತಳೆದಿರ್ದವಾಕ್ಷಣಂ  ೧೨೩

ಕೃತಪುಣ್ಯೋದ್ರೇಕಪಾಕಂ ಸಕಳವಿಭವಸೀಮಾತಿರೇಕಪ್ರವೇಕಂ
ಕೃತಕೃತ್ಯಾನೇಕಲೋಕಂ ಬಹಳಕಲುಷಸಂಹಾರಣೈಪ್ರಕಾಶಂ
ಹೃತಚಿತ್ತಾಸ್ತೋಕಶೋಕಂ ಪಡೆದುದು ಸೊಗಸಂ ಕೌಶಲಾನೀಕರೇಕಂ
ನುತತುಷ್ಯಂ ನಾಕಲೋಕಂ ಸುರಪತಿಕೃತಕಂ ಜೈನಜನ್ಮಾಭಿಷೇಕಂ   ೧೨೪

ವ : ಇಂತಾ ಪರಮಜಿನೇಶ್ವರಂ ಚರಮದೇಹಧಾರಿಯಪ್ಪುದೆಱಿಂ ಮುನ್ನಮೆ ಸಕಳಮಳಿನವಿರಹಿತನಾಗಿ ಶುದ್ಧೀಕೃತದಿವ್ಯಶರೀರಿಯದೊದಂ ತ್ರೈಲೋಕಾಧಿಪತ್ಯ ಸೂಚಕಮಾಗಿ ರಾಜ್ಯಾಭಿಷೇಕಂಗೆಯ್ವಂತೆ ಜನ್ಮಾಭಿಷೇಕಂಗೆಯ್ವುದುಂ

ಒಳಕೊಂಡತ್ತೆಯ್ದೆ ತತ್ಪಾಂಡುಕವನತಟಮಂ ಸುತ್ತಿಮುತ್ತಿತ್ತು ಮತ್ತ
ಗ್ಗಳಮಾಗಲ್ ಕೂಡೆ ತತ್ಸೌಮನಸವನಮುಮಂ ನಂದನಪ್ರಸ್ಥಮಂ ಮೂ
ವಳಸಾಗಲ್ ಮೀಱಿ ಮತ್ತಂ ಬಳಸಿದುದು ಮಹಾಭದ್ರಶಾಳೋದ್ವಿಶಾಳ
ಸ್ಥಳಮಂ ತಾಂ ಮುದ್ರಿಸಿತ್ತಂದಭಿಷವಣ ಘನಕ್ಷೀರಧಾರಾಪ್ರವಾಹಂ            ೧೨೫

ವ : ಮತ್ತಮಪಾರಸಮುದಾರತತ್ಪಯಃಪೂರಪೂರಿತಮಾದ ಮೇರುಗಿರಿಪರಿ ದೃಶ್ಯಮಾನ ಚೂಡಾಪೀಡಮಾತ್ರಮಾಗಿರ್ಪುದುಂ

ನೆಗೆದುಬಿಂದುಸಂತತಿಗಳಂತಿರೆ ತಾರೆಗಳುಂ ವಿಮಾನರಾ
ಜಿಗಳುಮದೆಲ್ಲಿಯುಂ ನೊರೆಯ ಪಿಂಡುಗಳಂದದನೆಯ್ದೆ ತೇಂಕಿ ಮೇ
ಗೊಗೆಯೆ ಜಿನಾಭಿಷೇಕಘನದುಗ್ಧಜಳಂ ನೆಱೆ ತೀವಿದತ್ತು ತಾಮ
ಗಗನಮುಮಂ ಸಮಸ್ತಧರಣೀತಳಮಂ ಸಮದಿಕ್ಕುಳಂಗಳಂ           ೧೨೬

ವ : ಆ ಜಿನಸವನಸುಧಾವಾರಿಧಿಯೊಳ್

ಜಲದೇವೀಜನಮೆಂಬಿನಂ ಸಕಳತದ್ದೇವೀಜನಂ ಮುಳ್ಗಿದ
ತ್ತೊಲವಿಂದಂ ನೆಱೆನೀರ್ಮನುಷ್ಯರಮೊಲಾ ದೇವರ್ಕಳುಂ ತೇಂಕಿದರ್
ಗೆಲವಿಂದಂದವರೆಲ್ಲರುಂ ಜಿನಪನಂಗಸ್ಪೃಷ್ಟಪೀಯೂಷಮಂ
ಜಳಸೇವಾಫಳದಿಂದೆ ನಿರ್ಜರತೆಯಂ ತಾಳ್ದರ್ ಸುದುರ್ಲಭ್ಯಮಂ    ೧೨೭

ಅಭಿಷೇಕಾಮೃತವಾರಿಪೂರಚಯದೊಳ್ ತೇಂಕಿತ್ತು ಮುಳ್ಗಿತ್ತು ಮ
ತ್ತುಭಯಂ ಕೋಡುಂಗಳಿಂದಮೀಡಿಱಿವುತಂದುತ್ಫೇನಪಿಂಡಂಗಳಂ
ಪ್ರಭವಾನಂದದಿನೀಸಿದತ್ತು ಮರಳಿತ್ತೋಲಾಡಿದತ್ತಾಡಿದ
ತ್ತಭಿನೂತಂ ದಿವಿಜೇಂದ್ರವಾರಣವರಂ ನೀರಾನೆಯೆಂಬಂದದಿಂ        ೧೨೮

ವ : ಮತ್ತಂ ದೇವರ್ಕಕಳೆಲ್ಲಂ ನೆರೆದು ದೇವೇಂದ್ರಾಚಳಚೂಳಿಕಾಗ್ರದಲ್ಲಿ ಜಿನಜನ್ಮಾಭಿಷೇಕವ್ಯಾಪಾರದೊಳ್ ಪರಿಪೂರ್ಣಾಮೃತಾರ್ಣವನಿಮಗ್ನಮೇಖಳಾ ಕಲ್ಪವೃಕ್ಷ ಲಕ್ಷ್ಮೀದಿವಿಜಗಜಂ ಮೊದಲಾದುವೆಲ್ಲ ಮುಳ್ಗಿ ತಿರೋಭಾವಮನೆಯ್ದಿ ಬಳಿಯಂ ತತ್ಪ್ರವಾಹಗಹನವಶದಿಂದಾವಿರ್ಭಾವಮನೆಯ್ದುವುದುಮಮೃತಮಥನವಿಧಾನದೊಳ್ ಪುಟ್ಟಿದವೆಂಬೀ ಪ್ರವಾದಂ ಲೋಕದೊಳೆಸೆದತ್ತೀ ತೆಱದಿಂ ದೇವದಾನವರಿಂದಾದ ಮಹಾಮೃತ ಮಥನಂ ಮಂಗಳಕಾರಣಮಾದುದಿಂತು

ಇಳಿದುದು ಮೆಲ್ಲಮೆಲ್ಲನೆ ಸುರಾಚಳದಿಂದೆ ಪಯಃಪ್ರವಾಹಮ
ಗ್ಗಳಮೆನೆ ಭೂಮಿಯೊಳ್ ನೆಲಸಿ ಮೂರ್ಮೊಗದಿಂ ನಡೆಗೊಂಡು ಬೇಗದಿಂ
ಕಳಿದು ಸಮಸ್ತದೇಶದ ಧರಾತಳಮಂ ಲವಣಾಬ್ಧಿಯಲ್ಲಿ ಸಂ
ಗಳಿಸಿಯೆ ಪೋಗಿ ಪೊಕ್ಕುದದು ವಿಸ್ಮಯಮಂ ಜಗದಲ್ಲಿ ಮಾಡುತುಂ         ೧೨೯

ವ : ತದನಂತರಮಮರನಿಕರಂ ನಿಖಿಳಕುಳನದೀಪ್ರಮುಖಪವಿತ್ರತೀರ್ಥ ಜಲಂಗಳಂ ನಾನಾಸರೋಜಕಿಂಜಲ್ಕಮಂಜರೀಪುಂಜಪರಿರಂಜನಪಿಂಜರಿತಂಗಳನಪಾರ ಭೃಂಗಾರ ಕಳಶಕುಂಭಂಗಳೊಳ್ ತುಂಬಿ ತಂದು ಪುರಂದರಂಗೆ ಸಂಧಿಸುವುದುಂ

ವರಕರ್ಪೂರಪರಾಗಪೂಗಪರಮಶ್ರೀಗಂಧಸತ್ಕುಂಕುಮೋ
ತ್ಕರಕಾಳಾಗರು ಯಕ್ಷಕರ್ದಮಸುಮಾಂಗಲ್ಯಾದಿಸೌಗಂಧಬಂ
ಧುರವದ್ದ್ರವ್ಯವಿಶೇಷಮಿಶ್ರಜಳದಿಂ ಗಂಧೋದಕಸ್ನಾನಮಂ
ಸುರಪಂ ಮಾಡಿದನಾ ಜಿನಂಗೆ ದೆಸೆಯಂ ತಳ್ಪೊಯ್ಯೆ ವಾದ್ಯಸ್ವನಂ೧೩೦

ಮಿಗೆ ಗಂಧೋದಕಪರಿಮಳ
ಮಗಣಿತಜಿನದೇಹಸಹಜಪರಿಮಳಭರಮಂ
ಸೊಗಸಿಂ ಪೊರ್ದಿಯದಾಯ್ತು
ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ            ೧೩೧

ಪರಮೌದಾರಿಕದಿವ್ಯದೇಹಸಹಜಾಮೋದಾಭಿಸಮ್ಮಿಶ್ರಬಂ
ಧುರಗಂಧೋದಕಭೂರಿಭೂರಿಪರಮಾಮೋದಕ್ಕೆ ಸೋಲ್ತಂಜಿ ನಿ
ತ್ತರಿಸಲ್ಕಾಱದೆಯೋಡಿಪೋಗಿ ಜಲಮಂ ಪೊಕ್ಕಿರ್ದುವಬ್ಜಂಗಳು
ದ್ಧುರಪುಷ್ಪಂಗಳವುಂ ಮರಂಗಳನಡರ್ದೇಱಿರ್ದವಂದಾದಿಯಿಂ     ೧೩೨

ಬನಮಂ ಪೊಕ್ಕುದು ಚಂದನ
ಮನುಪಮಕಸ್ತೂರಿಮೃಗದ ಬಸಿಱಂ ಪೊಕ್ಕುದು
ಜಿನಗಂಧೋದಕನಿರುಪಮ
ಘನಗಂಧಕ್ಕಗಿದು ಸೋಲ್ತುದೆಂಬಂತೆ ವಲಂ      ೧೩೩

ಮೂಱುಂ ಲೋಕದೊಳುಳ್ಳ ಸರ್ವಸುರಭಿದ್ರವ್ಯಂಗಳಾಮೋದಮಂ
ಮಾಱಾಂತಿರ್ದು ಜಿನಾಂಗದಿವ್ಯಸಹಜಾಮೋದಕ್ಕೆ ಸೋಲ್ತಂಜಿ ಮೆ
ಯ್ದೋಱಲ್ಕಮ್ಮದೆಯೋಡಿಪೋಗಿ ಜಲಮಂ ಪೊಕ್ಕಿರ್ದುದೆಂಬಂದದಿಂ
ಬೇಱೊಂದದ್ಭುತಗಂಧಮಂ ತಳೆದುದಾ ಗಂಧೋದಕಂ ಶ್ರೀದಕಂ   ೧೩೪

ದಿಗ್ಗಜಗಂಡಮಂಡಲಗಲನ್ಮದಗಂಧಮನೆಯ್ದೆಬಿಟ್ಟು ಮ
ತ್ತಗ್ಗದ ಪುಷ್ಪಸಂಕುಳದ ಗಂಧಮನೊಲ್ಲದೆಯಾತುರತ್ವದಿಂ
ದಗ್ಗಳಮಾದ ಜೈನಸವನೋದಕಗಂಧನಿಷೇವಣಾಸೆ ಮೆ
ಯ್ಯೊಗ್ಗೆ ಮಧುವ್ರತಪ್ರತತಿಬಂದುದು ಸರ್ವದಿಗಂತರಾಳದಿಂ         ೧೩೫

ಪಿರಿದುಂ ಪಾಪಮಲಪ್ರಲೇಪಭರಮಂ ವ್ಯಾಲೋಪನಂಗೆಯ್ದು ಬಿ
ತ್ತರದಿಂ ನಿರ್ಮಳಭಾವಮಂ ಬಿಡದೆ ಮಾಳ್ಕೆಮ್ಮಲ್ಲಿ ಸಲ್ಲೀಲೆಯಿಂ
ಪರಿತಾಪಪ್ರವಿಭೇದಿಕಂ ಘನದಾಯಾವಲ್ಲೀಸಮುತ್ಪಾದಕಂ
ವರಶಾಂತಿಪ್ರತಿಪಾದಕಂ ಜಿನಪತಿಸ್ನಾನೋರುಗಂಧೋದಕಂ          ೧೩೬

ವ : ಅನಂತರಂ

ದೇವಾಂಗವಸ್ತ್ರದಿಂ ಜಿನ
ದೇವಾಂಗಮನೆಯ್ದೆ ತೊಡೆದು ಕುಂಕುಮಕರ್ಪೂ
ರಾವಿಳಗಂಧಕ್ಷೋದದೆ
ಪಾವನಜಿನತನುವನೊಲ್ದು ಪೂಸಿದನಿಂದ್ರಂ      ೧೩೭

ವ : ಮತ್ತಮಾ ತ್ರಿಳೋಕೀತಿಲಕನ ಸಹಜಸುರಭಿಪರಿಮಳಮಿಳಿತನಿಟಿಳಸ್ಥಳ ದೊಳತಿಶಯಿತ ಹರಿಚಂದನರಸಕಲ್ಕದ ಮಂಗಳತಿಳಕಮನಿಡಲೊಡಮಾಗಳಾ ನಗೆಮೊಗಂ ಧವಳ ಮಧುಕರದಿಂದೊಂದಿದ ಪೊಂದಾವರೆಯಲರನನುಕರಿಸುತ್ತುಮಿರೆ

ಮಸೃಣಮಣಿಮಕುಟಮಂ ಜಿನ
ಶಿಶುವಿನ ಮಸ್ತಕದೊಳಿಕ್ಕಿ ದೇವೇಂದ್ರಂ ದಲ್
ಪೊಸತೆನಿಪ ಕಿರಣಜಾಳ
ಪ್ರಸರದಿ ಸಾಗಿಸುತುಮಿರ್ದುದದು ಕೌತುಕಮಂ  ೧೩೮

ವ : ಮತ್ತಂ ವಜ್ರಧರಂ ಪರಿನಿಶಿತವಜ್ರಮಯಸೂಚ್ಯಗ್ರದಿಂ ಕೋಮಳಕರ್ಣ ಪಾಳಿಕಾಯುಗಳಮನೂಱಿ ಪ್ರತ್ಯಗ್ರೋದಗ್ರವಜ್ರಮಾಣಿಕ್ಯಮಯಕುಂಡಲಂಗಳನಿಕ್ಕಿ ಚಂದ್ರಸೂರ್ಯರ್ ಬಂದು ನಾವಾವ ಬೆಸನಂ ಮಾಳ್ಪೆವೆಂದು ಕರ್ಣೋಪಾಂತಮನೆಯ್ದೆ ಕೇಳ್ವಂತೆ ಥಳಥಳಿಸಿ ಪೊಳೆಯುತ್ತುಮಿರ್ದವು ಬಳಿಯಂ ಮುಕ್ತಾಫಳತಾರಹಾರಂಗಳಂ ತ್ರಿಗುಣಿಸಿ ವಿಶಾಳವಕ್ಷಸ್ಥಳದೊಳಿಕ್ಕಿ ಮುಕ್ತಿಲಕ್ಷ್ಮಿಯುಂ ಶ್ರೀದೇವಿಯುಂ ಧರಣೀರಮಣಿಯುಮೆಂಬೀ ಮೂವರುಮೊರ್ಮೊದಲೊಳೆ ಬಂದು ತವಕದ ಸಂಭ್ರಮಂ ಕೈಮಿಗಲಾಗಳೆ ಸ್ವಯಂಬರಮಾಲೆಗಳನಿಕ್ಕಿದರೆಂಬಂತೆ ತೊಳಗಿಬೆಳಗಿದವು ಬಳಿಕ್ಕಂ ರಮಣೀಯಮಣಿ ಕಂಕಣಕಾಂಚನಮಯಕಾಂಚೀದಾಮ ವೈಡೂರ್ಯಕೃತಕೇಯೂರ ನವರತ್ನರಚಿತ ಗ್ರೈವೇಯಕ ಗೋಮೇಧಮೇದುರಾಂಗದಂ ಮೊದಲಾದ ಸಕಳಭೂಷಣ ಕಳಾಪಮಂ ತೊಡಿಸಿ ಸ್ವರ್ಗಲೋಕದೊಳಗಗ್ಗಳಮಾದ ವಿಚಿತ್ರಚಿತ್ರವಿಸ್ತೃತಪ್ರಶಸ್ತವಸ್ತ್ರಂಗಳನುಡಿಸಿ ಯುಮಿಂತತ್ಯಾಶ್ಚರ್ಯಕಾರಿಯಪ್ಪಲಂಕಾರಸಾರದಿಂದದ್ಭುತಮಾಗಳಂಕರಿಸೆ

ಚರಮಶರೀರಮುಂ ಸಹಜದಿಂದಮತೀವವಿಳಾಸಭಾಸುರಂ
ಸುರಪತಿಕಾಂತೆ ಮತ್ತಮದನುತ್ತಮಬಾಳವಿಭೂಷಣಂಗಳಂ
ಸುರತರು ಕೊಟ್ಟವಂ ತೊಡಿಸಿ ನೋಡಿದೊಡಂ ರವಿಬಿಂಬಮಂ ಮಹಾ
ದರದೊಳೆ ದೀಪಿಕಾತತಿಗಳಿಂದಭಿರಂಜಿಸುವಂತಿರಾಯ್ತು ತಾಂ         ೧೩೯

ವ : ಆಗಳ್

ವರಮೇಖಳಾಭಿರಮ್ಯಂ
ಪರಮಸುವರ್ಣಪ್ರಭಾವಿಶೇಷಿತರೂಪಂ
ಸುರಗಿರಿ ಮತ್ತೊಂದೆಂಬಿನ
ಮರಹಂತಂ ಪಾಂಡುಶಿಲೆಯೊಳೆಸೆಯುತ್ತಿರ್ದಂ   ೧೪೦

ವ : ಆಪೊತ್ತಿನೊಳ್

ಜಿನಪನ ದಿವ್ಯಮೂರ್ತಿಯನಭೀಕ್ಷಿಪೊಡೆನ್ನಯ ಲೋಲಚಾರುಲೋ
ಚನಯುಗಮೆಯ್ದದೆಂದುಱೆ ವಿಗುರ್ವಿಸಿ ಸಾಸಿರಕಣ್ಗಳೋಳಿಯಂ
ಘನತರಭಕ್ತಿಯಿಂ ಸುಕೃತಮೂರ್ತಿಯ ವಿಸ್ಮಯಕಾರಿರೂಪಮಂ
ಮನದನುರಾಗಮುಣ್ಮೆ ನಡೆನೋಡುತುಮಿರ್ದನಮರ್ತ್ಯನಾಯಕಂ  ೧೪೧

ಸುರಪತಿಯಂತೆ ಮತ್ತಮೆಮಗಂ ಸಲೆಸಾಸಿರಕಣ್ಗಳಾದೊಡೀ
ಪರಮನ ಮೂರ್ತಿಯಂ ಬಿಡದೆ ನೋಡುತುಮಿಂತಿರಲಕ್ಕುಮೆಂದು ಸ
ರ್ವರುಮಮರಾಧಿಪರ್ ಪಡೆದು ಬಾಯ್ವಿಡುತುಂ ನಡೆನೋಡುತಿರ್ದರಾ
ಸುರುಚಿರಮೂರ್ತಿಯಂ ತವಕದಿಂ ನೆಱೆಕಣ್ತಣಿವನ್ನಮಾಕ್ಷಣಂ       ೧೪

ವ : ಇಂತಾಸೇಚನಕಾರಿಯಪ್ಪ ಜಿನನಾಯಕನಾಕಾರಮಂ ಸಮಸ್ತಸುರಾಸುರ ನಿಕರಮೆಲ್ಲಂ ನೀಡುಂನೋಡುತ್ತುಮಿರೆ ಬಿಡೌಜಂ ಪರಮೇಷ್ಠಿಗಷ್ಟವಿಧಾರ್ಚನಾವಿರಚನ ತತ್ಪರನಾಗಿ

ಶ್ರೀಮತ್ಕಾಂಚನಕಳಶಭೃ
ತಾಮಳತರಕಮಳದಳಸುವಾಸಿತಜಳದಿಂ
ಕಾಮಿತಫಳಪ್ರದಾಮರ
ಭೂಮಿಜನಂ ಧರ್ಮನಾಥನಂ ಪೂಜಿಸುವೆಂ       ೧೪೩

ವರಕುಂಕುಮಪಂಕಾಂಕಿತ
ಸುರುಚಿರಕರ್ಪೂರಚೂರ್ಣಪರಿಕಳಿತ ಮಹಾ
ಹರಿಚಂದನಕಲ್ಕದಿನಘ
ಪರಿಹರನಂ ಧರ್ಮನಾಥನಂ ಪೂಜಿಸುವೆಂ         ೧೪೪

ವಿಳಸಿತಕಿರಣಕಳಾವಳಿ
ಗಳ ಧವಳತರಾಕ್ಷತಾಂಗಕಳಮಾಕ್ಷತಸಂ
ಕುಳರಂಜಿತಪುಂಜದಿನು
ಜ್ವಳಗುಣನಂ ಧರ್ಮನಾಥನಂ ಪೂಜಿಸುವೆಂ     ೧೪೫

ಸುರಭಿಪರಿಮಳ ವಿಶೇಷಿತ
ದರದಳಿತ ಸರೋಜಮಲ್ಲಿಕಾ ಚಂಪಕ ಬಂ
ಧುರಪುಷ್ಪಮಾಲೆಯಿಂದಂ
ದರಹರನಂ ಧರ್ಮನಾಥನಂ ಪೂಜಿಸುವೆಂ         ೧೪೬

ಕಾಂಚನಮಯ ಘನಭಾಜನ
ಸಂಚಯನಿಹಿತಾಮೃತೋಪಮಾನಪ್ರಾಜ್ಯಾ
ಜ್ಯಾಂಚಿತ ನಾನಾಚರುವಿಂ
ದಂಚಿತನಂ ಧರ್ಮನಾಥನಂ ಪೂಜಿಸುವೆಂ          ೧೪೭

ವಿನುತಪ್ರಭಾಪ್ರಭಾವಿತ
ಘನತರರತ್ನಪ್ರದೀಪದೀಪಕಳಾಪದಿ
ನನುಪಮಕೇವಳಬೋಧಾ
ತ್ಮನನೊಲವಿಂ ಧರ್ಮನಾಥನಂ ಪೂಜಿಸುವೆಂ    ೧೪೮

ಧೂಪಿತದಿಙ್ಮಂಡಲದಿಂ
ದಾಪತದಳಿನೀವಿತಾನಕಾಘ್ರಾತದಿನು
ದ್ವ್ಯಾಪಿತೋಷ್ಮಾಯಮಾಣಸು
ಧೂಪದಿನಾಂ ಧರ್ಮನಾಥನಂ ಪೂಜಿಸುವೆಂ      ೧೪೯

ಚೂತಪನಸಾಮ್ರಕದಳೀ
ನೂತನಜಂಬೀರ ನಾಳಿಕೇರಾದಿ ಫಳ
ವ್ರಾತದಿನಭಿರಕ್ಷಿತ ಜಗ
ತೀತಳನಂ ಧರ್ಮನಾಥನಂ ಪೂಜಿಸುವೆಂ           ೧೫೦

ಮಳೆ ಪಿರಿದಾಗಿ ಕೊಳ್ಗೆ ಧರಣೀತಳದಲ್ಲಿ ಸಮಸ್ತಧ್ಯಾನಮುಂ
ಬೆಳಗೆ ಸುಭಿಕ್ಷಮಕ್ಕೆ ಬಿಡದೆಲ್ಲೆಡೆಯಲ್ಲಿಯುಮೆಯ್ದೆ ಭೂಪರುಂ
ವಿಳಸಿತ ಧರ್ಮದಿಂ ನೆಲನನಾಳ್ಗೆ ವಿಶೇಷಿತ ಜೈನಧರ್ಮಮ
ಗ್ಗಳಮೆನೆ ಲೋಕದೊಳ್ ಪರೆದತಿಪ್ರಬಳತ್ವಮನೆಯ್ದುಗಾವಗಂ    ೧೫೧

ಪೂಜಿಸುವಂ ದೇವೇಂದ್ರಂ
ಪೂಜ್ಯಂ ಜಿನನಾಥನಮಳಪೂಜಾದ್ರವ್ಯಂ
ರಾಜಿತಸುರತರು ಸುಫಳಿಸ
ಮಾಜಂ ಗಡಮದಱ ಮಹಿಮೆ ಸಾಧಾರಣಮೇ  ೧೫೨

ವ : ಇಂತು ವಿಶಿಷ್ಟಾಷ್ಟವಿಧಾರ್ಚನಾವಿಧಾನದಿಂ ಸಂತುಷ್ಟಚಿತ್ತನಾದ ತ್ರಿವಿಷ್ಟಪಾಧೀಶ್ವರಂ ವಿಪುಳಪುಳಕಾಂಕುರಾಕಳಿತಕಳೇವರಂ ಬಳಿಯಂ ಕಿಂಚಿನ್ನಮಿತ ನಿಜ ನಿಟಿಳತಟ ಘಟಿತಾಂಜಳೀಪುಟನಾಗಿ ಸಕಳದೇವದಾನವನಿವಹಂಬೆರಸು ಜಯಜಯಯೆಂದು ನಿರ್ಭರಭಕ್ತಿಯಿಂದಾ ಸರ್ವಜ್ಞನ ವಾಸ್ತವಮಾದ ರೂಪಗುಣವಾಸ್ತವಸ್ತವನ ವಿಸ್ತಾರಸ್ತೂಯಮಾನಸ್ತೋತ್ರಮುಖರಮುಖನಾಗಿ

ಶ್ರೀಪದಲಾಭಕಾರಣಮಶೇಷಜನಂಗಳಧೀಶ ನಿನ್ನಯ
ಶ್ರೀಪದಸೇವೆಯಂ ಬಿಡದೆ ಮಾಳ್ಪರದಲ್ಲದೆ ಮೋಹಕಾರಣಂ
ವ್ಯಾಪಿಸರೇನುಮಂ ಜಗದೊಳೆಂತು ವಿನಿರ್ಮಳವಾರಿಸೇವೆಯಂ
ತಾಪದ ಶಾಂತಿಗಾಗಿ ಮಿಗೆ ಮಾಳ್ಪರುಮಂತೆ ಜಿನಾಧಿನಾಯಕಾ       ೧೫೩

ದೇವರ ದೇವ ನಿನ್ನ ಮತವಾಸನೆಯಿಲ್ಲದನೇಕಕಾಲಮುಂ
ಪೀವರಮಾದ ಸಂಸರಣಕಾನನದಲ್ಲಿ ಪೊಲಂಬುಗೆಟ್ಟೆ ನಿ
ನ್ನೀ ವಚನಂಗಳಿಂ ತಿಳಿದೆನೀಗಳಧೀಶ್ವರ ಧರ್ಮಮಾರ್ಗಮಂ
ಪಾವನಮೋಕ್ಷಪತನಮನೆಯ್ದುವೆ ನಾನದಱಿಂ ಜಿನೇಶ್ವರಾ          ೧೫೪

ಇನಿತುಂ ಕಾಲಂಬರಂ ನಾನಱಿಯದನಘ ನಿನ್ನಂ ಕುಮಿಥ್ಯಾತ್ವದುರ್ಭಾ
ವನೆಯಿಂದಂ ಕ್ಷೀಣದೈವಂಗಳನೆ ಭಜಿಸಿ ಸಂಸಾರದುಃಖಕ್ಕೆ ದುರ್ಭಾ
ಜನನಾದೆಂ ಮೂರ್ಖನೆನೆಂದಱಿಯದೆ ಪೊಸಕೆಂಡಂಗಳಂ ಕಂಡು ಚಂಚ
ಧ್ಘನಮಾಣಿಕ್ಯಂಗಳೆಂದೆತ್ತಿದೊಡೆ ಕರತಳಂ ಬೆಂದು ನೋವಂದದಿಂದಂ          ೧೫೫

ಮೊದಲೊಳ್ ಸ್ವರ್ಗಾವತಾರೋತ್ಸವದಿನಖಿಳವಿಶ್ವಂಭರಾಚಕ್ರದೊಳ್ ಸ್ವ
ರ್ಣದ ವರ್ಷಾಪೂರದಿಂದಂ ಕಳೆದೆ ಜನವಿಪತ್ಪೀಡೆಯಂ ನೀನುಮೀಗಳ್
ಪದೆಪಿಂದೆನ್ನಂತರಂಗಾಳಯದೊಳಿರುತಿರಲ್ಕೆನ್ನ ದುಃಖಂಗಳಂ ಬೇ
ಗದಿನಾದಂ ತೂಳ್ದದೆಂತಿರ್ದೊಡೆ ನಿನಗೆ ಜಿನಾ ಪೊರ್ದುಗುಂ ಪಕ್ಷಪಾತಂ        ೧೫೬

ಮುನ್ನಮನೇಕ ಭವ್ಯತತಿ ನಿನ್ನ ಪದಾಂಬುಜಸೇವನಾರತಾ
ತ್ಯುನ್ನತಮಾಗೆ ಪೆತ್ತುದುರುಶಾಶ್ವತಸೌಖ್ಯಮನೆಂದೊಡಾವಗಂ
ನಿನ್ನಯ ವೇಳೆಯಾಗಿ ಪರಿಪೂಜಿಸು ಭಾವಿಸು ತೀರ್ಥನಾಥನ
ಪ್ಪೆನ್ನನುಪೇಕ್ಷಿಸಲ್ಕೆ ಗುಣವೇ ನಿನಗಿಂದ್ರನರೇಂದ್ರವಂದಿತಾ           ೧೫೭

ಕೆಡದ ಮಹಾಪ್ರಕಾಶಮಯಮೂರ್ತಿಕ ಭವ್ಯನದಾವನೊಲ್ಲದು ನಿ
ನ್ನಡಿಯನೆ ಸಾರ್ದು ಸೇವಿಸುತುಮಿರ್ದಪನಾತನನೆಯ್ದೆ ನಿನ್ನವೋಲ್
ತಡೆಯದೆ ಮಾಳ್ಪ ದೀಪಕಳಿಕಾಂಕುರಮೆಂತುಱೆ ತನ್ನ ಸಾರ್ದು ಸಂ
ಗಡಿಸಿದ ವರ್ತಿಯಂ ಪಡೆದು ತನ್ನವೊಲಾಗಿಸುವಂದದಿಂ ಜಿನಾ       ೧೫೮

ಜಿನಪತಿ ನಿನ್ನ ಮಾರ್ಗಮಪವರ್ಗಸುಖಕ್ಕನುಕೂಲವೃತ್ತಿ ನೆ
ಟ್ಟನೆ ನರಕಾದಿದುಃಖದುದಯಕ್ಕೆ ಕರಂ ಪ್ರತಿಕೂಲವೃತ್ತಿ ಸ
ತ್ವನಿತ ದಯಾಮಯಾತ್ಮಕಮುಮಾಗಿ ಸಮಸ್ತಜನಕ್ಕೆ ಸೌಖ್ಯಮಂ
ಘನಮೆನೆ ಮಾಡುತುಂ ಜಗಮನುದ್ಧರಿಸುತ್ತುಮದಿರ್ದುದೊಪ್ಪದಿಂ           ೧೫೯

ಜಿನ ನಿನ್ನಂಘ್ರಿಯನರ್ಚಿಸುತ್ತುಮಮಳಸ್ತೋತ್ರಂಗಳಂ ಪೇಳುತುಂ
ವಿನುತಾಕಾರಮನೀಕ್ಷಿಸುತ್ತುಮಮೃತಶ್ರೀಮೂರ್ತಿ ಸೌರಭ್ಯಮಂ
ಮನಮೊಲ್ದೋವದೆ ವಾಸಿಸುತ್ತುಮಧಿಕಂ ನಿನ್ನಾಗಮಪ್ರೋಕ್ತ ಪಾ
ವನ ಸದ್ಯುಕ್ತಿಯನಾಲಿಸುತ್ತುಮುಱೆ ಪೋಕಿಂತೆನ್ನ ಜನ್ಮಂ ಕರಂ     ೧೬೦

ವ : ಎಂದಿಂತು ಸೌಧಮೇಂದ್ರನಾ ಜಿನೇಂದ್ರಚಂದ್ರನ ರುಂದ್ರಗುಣಸ್ತವನ ಮಂ ಪವಣಿಲ್ಲೆಂಬಿನಂ ಪ್ರಶಸ್ತಮಾಗಿ ವಿಸ್ತರಿಸಿ ವಿನಯವಿನಮಿತಮಸ್ತಕನಾದಿಂಬಳಿಯಂ ಸಮಸ್ತ ಸುಮನಸ್ತತಿಯ ನಟ್ಟನಡುವೆ ಕುಳ್ಳಿರ್ದು

ಇನಿತೊಂದು ವಿಭವಮಂ ಜಿನ
ಪನ ಜನನದ ಸಮಯದಲ್ಲಿ ಮಾಡಿದನೊಲವಿಂ
ದನಿಮಿಷವರನೆಂದೊಡದಾ
ವನೊ ಬಲ್ಲಂ ಮುಂದೆ ಮಾಳ್ಪ ವಿಭವದ ತೆಱನಂ          ೧೬೧

ವ : ಮತ್ತಂ

ಪಿರಿದುಂ ಜನ್ಮಾಭಿಷೇಕೋತ್ಸವದ ಮಹಿಂಮೆಯಂ ಮೆಚ್ಚಿ ಕೊಂಡಾಡಿ ಶಕ್ರಂ
ಪರಿತೋಷೋತ್ಕರ್ಷಮಂ ತಾಳ್ದಿದನಧಿಗತಸಾಹಿತ್ಯವಿದ್ಯಾವಿಶೇಷಂ
ಕರುಣಾಕೇಳೀಗೃಹಂ ಬಾಹುಬಲಿಸುಕವಿರಾಜಂ ಮಹಾಗಣ್ಯಪುಣ್ಯ
ಸ್ಫುರಣಂ ಸಮ್ಯಕ್ತ್ವಚೂಡಾಮಣಿ ಗುಣನಿವಹಂ ಚಾತುರೀಜನ್ಮಗೇಹಂ       ೧೬೧

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿ ಪಂಡಿತದೇವಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಜನ್ಮಾಭಿಷವಣ ಕಲ್ಯಾಣವರ್ಣನಂ ಅಷ್ಟಮಾಶ್ವಾಸಂ.