ಶ್ರೀ ಜಿನಪತಿ ವರಚರಣ ಸ
ರೋಜಂಗಳನಮಿತಭಕ್ತಿಯಿಂ ವಿಬುಧೇಂದ್ರಂ
ಪೂಜಿಸಿ ನಲಿವುತ್ತಿರ್ದು ವಿ
ರಾಜಿಸಿದಂ ಸರಸಚತುರ ಕವಿಕುಳತಿಳಕಂ           ೧

ವ : ಅನಂತರಮಾ ದೇವೇಂದ್ರಂ ದೇವಸಭಾಸ್ಥಾನದ ನಟ್ಟನಡುವೆ ಕುಳ್ಳಿರ್ದು ಮಹಾನಂದನರ್ತನೋತ್ಸಾಹ ಸಮುತ್ಸುಕಚಿತ್ತನಾಗಿಯನುರಾಗಂಬೆತ್ತು ರಾಗರಸತರಂಗಿ ತಮಲ್ಲದಾಸ್ಥಾನರಂಗಂ ಪರಿರಂಜಿಸದೆಂದು ಬಗೆದಂದು ತದಾಸ್ಥಾನ ರಂಗದ ಮುಂದೆ ಕುಳ್ಳಿರ್ದ ನಾನಾವಿಧರಾಗಸ್ವರಭಂಗಿಯಿಂ ಭಂಗುರಿತಮಾದ ಸಂಗೀತವಿದ್ಯಾವಿಶೇಷಾ ಧಿಕ್ಯಗರ್ವಿತಸರ್ವಪ್ರಸನ್ನಕಿನ್ನರ ದೇವೀಜನಂಗಳ ಮೊಗಂಗಳಂ ನೋಡುವುದು ಮಾಗಳವರ ವಸರಮಱಿದು ರಚ್ಛೆಯ ಮಟ್ಟೆಯ ಪಡಿಮಟ್ಟೆಯ ಝಂಪೆಯ ಮಡ್ಡತಾಳರೂಪಕಮೆಕ್ಕ ತಾಳಂಗಳೆಂಬ ಸಪ್ತತಾಳಂಗಳಂ ನಿವರ್ತನಗೆಯ್ದು ಜಂತ್ರಸ್ವರಮಂಡಳ ಬ್ರಹ್ಮನಾದ ರಾವಣ ಹಸ್ತಾದಿ ಸಮಸ್ತವೀಣಾ ವಿಶೇಷಂಗಳಂ ಸೈತೆಮಾಡಿ ವಿಪಂಚಿಯ ಸಂಚಯದಿಂಚರ ದೊಳುಪಾಶ್ರಯಂ ಬಡೆದು ವಿಂಶತಿಯತಿಪ್ರಪಂಚದೊಳ್ ನೆಱೆದು ಮಧ್ಯಮ ಧೈವತ ಷಡ್ಜಪಂಚಮ ನ ನಿಷಾದ ರುಷಭ ಗಾಂಧಾರಂಗಳೆಂಬ ಸಪ್ತಸ್ವರಸಂಯೋಗಸಂಜಾತ ದೇಶೀಯರಾಗಂಗಳಂ ಸ್ವರಭಾಷಾವಿದರಿಂದಮಾದ ಮತ್ತೆ ಪೆಱವು ರಾಗಂಗಳಂ ವಲಿ ಹವಣಿ ಠಾಯಂಗಳಿಂದಾಳಾಪನಂಗೆಯ್ದು

ಮದನನ ಬಿಲ್ಲ ಜೇವಡೆಯ ಮೆಲ್ಲುಲಿಯೆಂಬಿನಮಿಂಬುವೆತ್ತ ರಾ
ಗದ ಬಹುಭೇದಮಂ ನೆಱೆಯೆ ತೋಱಿಸುತುಂ ತಲೆದೂಗೆ ತಜ್ಞರಾ
ಪದದೊಳೆ ಮೆಚ್ಚಿ ತಾಳಲಯಮಾರ್ಗವಶಾನುಗತಂ ದಲಾಗಿ ಪಾ
ಡಿದರನುರಾಗದಿಂ ಜಿನಗುಣಸ್ತವನಾಂಕಿತವಸ್ತುಗೀತಮಂ  ೨

ಮನಮೊಲ್ದು ಶ್ರವಣಾವನೀವಳಯದೊಳ್ ಕೌತೂಹಳಂ ಕೂಡೆ ತೋ
ರ್ಪಿನೆಗಂ ಕಾಳ್ಪುರಮಾಗೆ ರಾಗರಸಮಾಶಾದೇಶದಲ್ಲಲ್ಲಿಯುಂ
ಘನರೋಮಾಂಚಚಯಾಂಕುರಂ ಬಳೆದು ಮೆಯ್ದೋರ್ಪನ್ನಮಾ ಕಿನ್ನರೀ
ಜನಮೆಂಬಂಬುದುಮಂದದೇಂ ಕಱೆದುದೋ ಗೀತಾಮೃತಾಸಾರಮಂ          ೩

ವ : ಇಂತು ಸಮಂತು ತೆಕ್ಕನೆ ತೀವಿ ಕಿಕ್ಕಿಱಿಗಿಱಿದುಂ ಕುಳ್ಳಿರ್ದು ಕೇಳ್ವ ಚತುರ್ನಿಕಾಯದೇವರ್ಕಳ ಕಿವಿಯಂ ಕೆಯ್ಮಿಕ್ಕು ಜಕ್ಕುಲಿಸುತ್ತುಮಿರ್ದು ಸೊಕ್ಕಿನಳುರ್ಕೆಯಂ ಮನಕ್ಕೆ ಪುಟ್ಟಿಸುವ ನವರಸಂಗಳಂ ಮುಕ್ಕಳಿಸಿದ ತಾರ ಮಂದ್ರ ಮಧ್ಯಮ ಭೇದಮೇದುರ ನಾದ ಸಮಾಹ್ಲಾದನೀಯ ವಿವಿಧ ಮಧುರಗೀತಜಾತಿಗಳಂ ಪಾಡುವೆಡೆಯೊಳ್

ಸುರಪತಿ ಮೆಚ್ಚಿ ಮೆಚ್ಚಿ ತಲೆದೂಗಲೊಡಂ ಮಣಿಮೌಳಿ ಕೂಡೆ ಜೋ
ಲ್ದಿರೆ ಸಸಿನಕ್ಕೆ ತಪ್ಪ ಪದದಲ್ಲಿ ವಿಕೀಲಿತ ಕಿಂಕಿಣೀ ಜಝ
ಣ್ಕರಣದೆ ಕೇಳಬಾರದಿರೆ ಬಾಗಿದ ಕಂಠದಿನೊಪ್ಪುತಿರ್ದನಾ
ವರಿಸಿಯೆ ನಿಂದ ರಾಗರಸಭಾರದಿನೋಸರಮಾದುದೆಂಬಿದಂ           ೪

ವ : ಈತೆಱದಿಂ ಕಿನ್ನರರೆಲ್ಲಂ ಚೆನ್ನಾಗಿ ಪಾಡುತ್ತುಮಿರೆ

ಸಕಳಾಪವಾದ ಪರಿವಾ
ರಕರಂ ನೆಱೆಕೂಡಿಕೊಂಡು ವಾದಕರೆಲ್ಲಂ
ಪ್ರಕಟವಾದ್ಯಂಗಳಂ ಕೌ
ತುಕದಿಂದಂ ಬಾಜಿಸಲ್ಕೆ ತೊಡಗಿದರಾಗಳ್       ೫

ಪಿರಿದುಂ ನಾದಾಪ್ರಕಾರಾತಿಶಯಿತ ಗತಿಭೇದಂಗಳುಂ ಮಾಡಲಂದ
ಚ್ಚರಿಯಂ ಮಾರ್ಗಪ್ರಚಾರಂ ಬಗೆಗೆ ಬಯಕೆಯಂ ಪುಟ್ಟಿಸಲ್ ಚಾರುಚಾರೀ
ಚರಣಂ ವೈಚಿತ್ಯ್ರಮಂ ಸಂಗಡಿಸಿರೆ ಸುಚಮತ್ಕಾರಚಾತುರ್ಯಮಪ್ಪಂ
ತಿರೆ ಸದ್ವಾದ್ಯಂಗಳಂ ವಾದಕರತಿಮುದದಿಂ ಬಾಜಿಸುತ್ತಿರ್ದರೆಲ್ಲಂ  ೬

ಜಗುಝೇಂ ಝೇ ಝಂ ಮೃಣಂ ಝಂ ಝಮೃಣ ಮೃಣಮಣಂ ಝಂ ಮೃಣಂ ಝಂ ಮೃಣಂಣಂ
ತಗಿತತ್ಥೊ ಥಗ್ಗಿಣತ್ಥೊ ಥಗಿಣ ಗಿಣಗಿಣಂ ಥಗ್ಗಿಣಂ ಥಗ್ಗಿಣತ್ಥೋ
ಧಿಗಿ ಧಿಂ ಧಿಂ ಧಿಂ ಧಿಮಿಕ್ಕುಂ ಧಿಮಿ ಧಿಮಿ ಧಿಮಿಕುಂ ಧಿಂಧಿಮಿಕ್ಕುಂ ಧಿಮಿಕ್ಕೆಂ
ದೊಗೆವನ್ನಂ ನಾಟ್ಯರಂಗಸ್ಥಳಿಯೊಳಮರಿಯಲ್ ಬಾಜಿಸುತ್ತಿರ್ದರಾದಂ       ೭

ವ : ಇಂತು ವಾದ್ಯವಿದ್ಯಾವದ್ಯೋತನವಿದುಷಿಯರಪ್ಪ ವಿಬುಧವಿಳಾಸಿನಿ ಯರನೇಕಚ್ಛಂದ ದಿಂದಭಿನವವಾದ್ಯಂಗಳಂ ಹೃದ್ಯಮಾಗಿ ಬಾಜಿಸುತ್ತುಮಿರೆ

ಪರಮಾಖಂಡಮಯೂಖಮಂಡಲ ವಿಲನ್ಮಾಣಿಕ್ಯಸನ್ಮಂಡನೋ
ತ್ಕರದಾಡಂಬರ ಶೋಭೆಯಿಂದೆ ಪಿರಿದುಂ ಕಣ್ಗೊಂಡು ಸಂತೋಷಮೊಂ
ದಿರಲಾಖಂಡಳನಂದು ತಾಂಡವಿವಿಡಂಬಪ್ರೌಢಿಯಂ ತೋಱಲೆಂ
ದಿರದೆಳ್ದಂ ಸಭೆಗೆಳ್ವಿನಂ ಬಿಡದೆ ರೋಮಾಂಚಾಂಕುರಶ್ರೇಣಿಯಂ    ೮

ವ : ಮತ್ತಂ

ಉಟ್ಟ ದೇವಾಂಗಮಂ ನೆಱೆ
ತೊಟ್ಟೊಳ್ಮುತ್ತಿನ ನವೀನಕಂಚುಕಮಂ ಸಮ
ಕಟ್ಟ ನರ್ತನನಿಮಿತ್ತಂ
ಕಟ್ಟಾಯತನಾದನಂದು ಸೌಧಮೇಂದ್ರಂ          ೯

ವ : ಇಂತು ತತ್ಕಾಲಯೋಗ್ಯ ನಾನಾವಿಧಶೃಂಗಾರಭಂಗಿಯಿಂ ಬೆಡಂಗುವಡೆದ ಸುರಲೋಕದೊಡೆಯಂ ನಾಂದೀಪೂಜಾವಿಧಾನಪೂರ್ವಕಂ ನಾಟ್ಯರಂಗದ ಮುಂದೆ ನಿಂದು ಕೈಗಳಂ ಮುಗಿದು ನಿರವದ್ಯಹೃದ್ಯತರ ಮಂಗಳಪಾಠನಾನಂತರಂ

ಪೂರ್ವರಂಗಪ್ರಸಂಗದೊ
ಳುರ್ವಿಂದಂ ಕೂಡೆ ಚೆಲ್ಲಿ ಪುಷ್ಪಾಂಜಳಿಯಂ
ಸರ್ವಜ್ಞಂಗೆಱಗಿ ಮುದಂ
ಪರ್ವಿನ್ನಂ ನಡೆದು ಬಂದು ರಂಗಂಬೊಕ್ಕಂ        ೧೦

ವ : ಅಂತನೇಕವಿಧರಚನಾಸಮುತ್ತುಂಗ ನಾಟ್ಯರಂಗಮಧ್ಯಸ್ಥಳಮನಳಂಕರಿಸಿ ನಿಂದಿರ್ಪುದುಂ

ಮಣಿಮಯನಾಟ್ಯರಂಗವಳಯಾಂತರದೊಳ್ ಪ್ರತಿಬಿಂಬರೂಪದಿಂ
ದೆಣಿಸಿ ಸಹಸ್ರಲೋಚನಮುಮೊರ್ಮೆಯೆ ಪಜ್ಜಳಿಸಲ್ಕೆ ಚೆಲ್ವನಾ
ಕ್ಷಣದೊಳೆ ತಾಳ್ದಿದತ್ತು ವಿಕಸತ್ಕಮಳಂಗಳೆಸಳ್ಗಳಿಂ ಮನಂ
ದಣಿವಿನಮಲ್ಲಿ ಮತ್ತೆ ಕುಸುಮಾಂಜಳಿಯಂ ಮಿಗೆ ಚೆಲ್ಲಿದಂದದಿಂ  ೧೧

ವರವೈಶಾಖಸ್ಥಾನದೊ
ಳುರುಮುದದಿಂ ನಿಂದು ಭರತಶಾಸ್ತ್ರಜ್ಞಂ ತ
ನ್ನೆರಡುಂ ಕೆಯ್ಯತಳಂಗಳ
ನೆರಡುಂ ಕಟಿತಟದೊಳಿಟ್ಟು ತೋಱಿಕೆವೆತ್ತಂ    ೧೨

ವ : ಅಂತು ನಿಂದ ನಿಲವೆ ವೈಕುರ್ವಣಾವಿರ್ಭೂತಮುಮೆನಿಸಿ

ಕಡುತುಱುಗಿರ್ದ ತೋಳ್ಗಳನದೆಯ್ದೆ ವಿಗುರ್ವಿಸಿ ಭಾಪುಭಾಪೆನಲ್
ಬಿಡದಱವತ್ತುನಾಲ್ಕು ವರಹಸ್ತತಳಾಭಿನಯಂಗಳೆಲ್ಲಮಂ
ತಡವಿನಿಸಿಲ್ಲದೊರ್ಮೊದಲೊಳಂ ನೆಱೆತೋಱಿಸುತುಂ ಸುರಾಧಿಪಂ
ಸಡಗರದಿಂದೆ ನರ್ತಿಸುತುಮಿರ್ದನತೀವಕುತೂಹಳಂಗಳಿಂ  ೧೩

ಗದಗಂಪಂಗೊಂಡುದಯ್ದುಂತೆಱದ ಚರಣವಾರಿಪ್ರಯೋಗಂಗಳಿಂ ಮಾ
ಣದೆ ಭೂಮೀಮಂಡಳಂ ದಿಕ್ಕರಿಗಳಳುಱೆ ಬಾಯ್ವಿಟ್ಟುವೀರೈದು ಸಂಸ್ಥಾ
ನದ ಬಾಹುಕ್ಷೇಪದಿಂದಂ ನವತಿನಯನಭೇದಂಗಳಿಂ ರಂಜಿಸುತ್ತಿ
ರ್ದುದು ಸರ್ವಾಶಾಪ್ರದೇಶಂ ಸುರಪತಿನಟನಂ ವಿಸ್ಮಯಂಬೆತ್ತುದಾದಂ         ೧೪

ಆಗಸದಲ್ಲಿಯುಂ ಧರಣಿಮಂಡಳದಲ್ಲಿಯುಮೆಂಟು ದಿಕ್ತಟೀ
ಭಾಗದೊಳೆಲ್ಲಮೊರ್ಮೊದಲೊಳಾ ದಿವಿಜಾಧಿಪನೊಂದುರೂಪು ನೂ
ಱಾಗಿರೆ ವಿಕ್ರಿಯಾವಿಭವದಿಂದೆ ವಿಗುರ್ವಿಸಿ ಮತ್ತೆಮುತ್ತೆಯುಂ
ರಾಗರಸಂ ಪೊನಲ್ವೊನಲನಟ್ಟಿ ತರಂಗಿತಮಾಗಲಾಡಿದಂ ೧೫

ವರಭೂಷಾವೇಷಭಾಸ್ವತ್ಕಿರಣಗಣವಿಶೇಷಂಗಳಿಂ ದಿಗ್ವಿಭಾಗಂ
ಪರಭಾಗಂಬೆತ್ತುಮೊಪ್ಪುತ್ತಿರೆ ಸುರಸಭೆಗಾಶ್ಚರ್ಯಮಂ ಪುಟ್ಟಿಸುತ್ತುಂ
ತಿರುಪಂ ಕೊಟ್ಟಂ ಸಮಸ್ತಾಮರಸಮಿತಿಯ ನೇತ್ರಂಗಳುಂ ಚಿತ್ತಮುಂ ಸ
ತ್ವರದಿಂದಾ ಪೊತ್ತಿನೊಳ್ ತನ್ನೊಡನೆ ತಿರುಗೆ ದೇವೇಂದ್ರನಾಡುತ್ತುಮಿರ್ದಂ ೧೬

ವ : ಇಂತತೀವರೂಢಿವಡೆದ ತಾಂಡವಾಡಂಬರಕ್ರೀಡೆಯೊಳಾಖಂಡಳಂ ಪ್ರೌಢಿವೆತ್ತು ಶೃಂಗಾರಹಾಸ್ಯಕರುಣಭಯಾನಕವೀರರೌದ್ರಭೀಭತ್ಸಾದ್ಭುತಶಾಂತಂಗಳೆಂಬ ನವರಸಂಗಳಿಂ ಪರಿಪೂರ್ಣಮಾದ ವಿಭಾವಾನುಭಾವ ಸಂಚಾರಿವ್ಯಭಿಚಾರಿಸ್ಥಾಯಿಭಾವಂಗಳೆಂಬ ಪಂಚಭಾವಂಗಳಿಂದಂಚಿತಮುಮೆನಿಪನ ತತ್ತದ್ಯೋಗ್ಯಸ್ಥಾನಕಂಗಳೊಳೆಲ್ಲಂ ಪೊಸ ಪೊಸತಾದ ಕಾಳಾಸವಿಳಾಸದಿಂದೆಸೆವುತ್ತುಮಿರ್ದ ಭರತಾಗಮಕ್ಕೆ ಟೀಕಂಬರೆದೋದುವಂತೆ ಪದಪದದುಗ್ಘಡಣೆಯಿಂದಗ್ಗಳಮಾಗಿ ರಂಜಿಸುವ ವಿಕಟನಾಟಕಮಂ ಭರತಶಾಸ್ತ್ರ ಸಮಾಲಕ್ಷಿತ ನಿರತಿಶಯಲಕ್ಷಣಕ್ಕಿದೇ ಪರಮಸೀಮಾಲಕ್ಷ್ಯಮೆಂಬಂತೆಡ್ಡಮಾಗಿ ಜಿನಪತಿಯ ಮುಂದೊಡ್ಡಯಿಸಿದಾಗಳ್

ಅಲಗುಗಳೊಪ್ಪಿ ರಂಗವಲನಕ್ಕನುಕೂಲತೆವೆತ್ತ ದೋರ್ಲತಾ
ವಲನದ ವೇಗದಲ್ಲಿ ಗತಿಭಾವರಸಾಭಿನಯಂಗಳೋಜೆಯಂ
ಗೊಲೆಗೊಳಿಸಲ್ ಕರಂ ಲಯವಶಾನುಗಮಾಗಿರೆ ದೇವಕಾಂತೆಯರ್
ನಲಿದೊಡನಾಡುತಿರ್ದರಮರೇಂದ್ರನ ಸುತ್ತಲುಮೊಪ್ಪಮಪ್ಪಿನಂ   ೧೭

ಒಡೆಯಂ ಕುಡೆ ತಿರುಪಂ ತ
ನ್ನೊಡನಮರೀಜನಮುಮಂದು ಕೊಟ್ಟುದು ತಿರುಪಂ
ಕುಡೆ ದಂಡಭ್ರಮರಿಯನಾ
ಗಡೆ ದಂಡಭ್ರಮರಿಯಂ ನಿಮಿರ್ಚಿತ್ತದುವುಂ       ೧೮

ಸವಿಯಂ ಸಾಲಿಡುತಿರ್ಪ ಗೀತರಸಮಾ ಗೀತಕ್ಕೆ ನೇರ್ಪಟ್ಟು ಪೊ
ಣ್ಮುವ ವಾದ್ಯಂ ಮೃದುಗೀತವಾದ್ಯಮೆರಡಕ್ಕಿಂಬಾದ ನೃತ್ಯಂ ಮಹಾ
ದಿವಿಜಾಸ್ಥಾನಜನಕ್ಕೆ ಮಾಡೆ ಬಿಡದತ್ಯಾನಂದಮುಂ ನಾಡೆಯುಂ
ದಿವಿಜಾಧೀಶನ ಮುಂದದೇನೆಸೆದುದೋ ಸಂಗೀತಕಂ ಕೌತುಕಂ        ೧೯

ದೇವೇಂದ್ರಂ ಶಾಶ್ವತಸುಖ
ಸೇವನೆಯಂ ಬಯಸಿ ಭಕ್ತಿಯಿಂದಾಡಿದನಾ
ದೇವನ ಮುಂದೆಂದೊಡಮಿ
ನ್ನೇವೇಳ್ಪುದೊ ನೃತ್ಯಫಳಮುಮಂ ನೃತ್ಯಮುಮಂ       ೨೦

ವ : ಇಂತು ಪುರಂದರನಾನಂದನರ್ತನಮಂ ನಿರ್ವರ್ತಿಸಿ ಜಯಜಯ ಘೋಷಣಂಗೆಯ್ದು ತದನಂತರಮಾ ಧರ್ಮಜಿನನಾಥನ ಮುಂದೆ ಸಂಭ್ರಮ ದಿಂದಿಳಾಮೂಲ ಮಿಳನ್ಮೌಳಿಯಾಗಿ ಮತ್ತಂ ದಿವಿಜಸಭಾಮಧ್ಯಸ್ಥಿತಶುಭಾಸನ ಸಮಾಸೀನ ನಾಗಿರ್ಪುದುಂ

ದಿವಿಜರುಘೇಯುಘೇನಿನದಮಂ ಸುರಪಾಠಕಪದ್ಯನಾದಮಂ
ದಿವಿಜಕರಾಹತಪ್ರಬಳವಾದ್ಯನಿನಾದಮುಮಷ್ಟದಿಕ್ತಟೀ
ವಿವರದೊಳೆಯ್ದೆ ತೀವೆ ದಿವಿಜಾಂಗನೆಯರ್ ನೆರೆದೆಲ್ಲರುಂ ಸಮು
ತ್ಸವದೊಳೆ ಮಂಗಳಾರತಿಗಳು ಜಿನಪಂಗಿರದೆತ್ತಿದರ್ ಕರಂ            ೨೧

ವ : ಆಗಳಾ ಶಚೀಮಹಾದೇವಿ ದೇವೀಜನಂಬೆರಸು ಕಳಧೌತಭಾಜನ ಸಮಾಕಳಿತ ನೀರಾಜನದೀಪಕಳಿಕಾಕಳಾಪಂಗಳ ಬೆಳಗಿನ ಬಳಗದಿಂ ದ್ವಿಗುಣಿಸಿದ ಕಮನೀಯ ಕಾಯಕಾಂತಿಮಯ ಸಮ್ಮೋಹರಸತರಂಗಿಣಿಯ ತೆರೆಮಾಲೆಗಳೆನಿಪ ತೋಳ್ಗಳಿಂ ಕೇವಳಮಂಗಳಾರ್ಥಮಾಗಿ ಮಂಗಳಾರತಿಗಳಂ ನಿವಾಳಿಸಿಯಷ್ಟವಿಧಾರ್ಚನೆ ಗಳಿಂದನರ್ಚಿಸಿ ಪೊಡೆವಟ್ಟು

ಕಣ್ಣೆಮೆಯಿಕ್ಕುವರೆಲ್ಲಂ
ಕಣ್ಣೆಮೆಯಿಕ್ಕಲ್ಕೆ ಮಱೆದರೆಮೆಯಿಕ್ಕದರುಂ
ಕಣೆಮೆಯಿಕ್ಕದುದೆಮಗಂ
ತಿಣ್ಣಂ ಫಳಮಾದುದೆಂದು ನೋಡುತ್ತಿರ್ದರ್   ೨೨

ವ : ಬಳಿಯಮಿಂತು ಕಯ್ಗೆಯ್ವ ಧರ್ಮನಾಥಕುಮಾರನಂ ನಿಜಪುರಕ್ಕೆಯ್ದಿಸುವ ಬಗೆ ಬಗೆಯೊಳೊಗೆಯೆ ಮಘವಂ ಪ್ರಯಾಣಭೇರಿಯಂ ಪೊಯ್ಯಲ್ವೇಳ್ವುದುಂ

ಗಮನಸಂಸೂಚಿಭೇರೀ
ಸಮಿತಿಗಳೊರ್ಮೊದಲೆ ಮೊಳಗೆ ದೆಸೆಯೆಲ್ಲಂ ಶ
ಬ್ದಮಯಮಾಗಿರ್ದುದದ್ವೈ
ತಮನಾಶ್ರಯಿಸಿದತ್ತದತ್ತದೆಂಬೀ ತೆಱದಿಂ         ೨೩

ವ : ಅಂತು ಪರಿಪೂರ್ಣತಭೇರೀರವಾಕರ್ಣನದಿಂದವಗತನಿರ್ಯಾಣ ಕ್ಷಣರಾಗಿ ಸಕಳಸುರಾಸುರ ನಿಕರವೆಲ್ಲಂ ನೆರೆದುಬರಲೊಡಂ ಪುರುಹೂತನೈರಾವತಮಹಾ ಮಾತಂಗ ಸಮಾರೂಢನಾಗೆ

ನಲವಿಂದಿಂದ್ರಾಣಿ ತನ್ನ ಸ್ತನತಟಯುಗಮಂ ಮಾಡಿ ಮೆಯ್ಗೊತ್ತಿನೊಳ್ ಸೋ
ಗಿಲೊಳಂ ತದ್ಬಾಳಮಂ ಮೆಲ್ಲನೆ ದರಿಕರರಾಧಾರದಿಂ ನೋಡಿ ರಾಗಂ
ನೆಲೆವೆರ್ಚಲ್ ಕೂಡೆ ನಾನಾಪಟುಪಟಹರವಂ ಪೊಣ್ಮೆ ಬಂದೇಱಿದಳ್ ಮಂ
ಗಳ ದೇವೇಂದ್ರೇಭಮಂ ಕೋಮಳಪುಳಕಕುಳಂ ಬೇಱೆ ಬಂದೇಱಿ ಮೆಯ್ಯಂ   ೨೪

ವ : ಇಂತು ಬಂದೇಱಿ ಶಚಿ ತನ್ನಯ ವಲ್ಲಭನ ತಲ್ಲಜಪಾಣಿಪಲ್ಲವಕ್ಕೆ ಮೆಲ್ಲನೆ ಜಿನಶಿಶುವಂ ನೀಡುವುದುಮಾಗಳಾ ಬಳರಿಪು ದುರಿತರಿಪುವಂ ನಿಜಕರತಳಪುಟದೊಳ್ ಬಿಜಯಂಗೆಯ್ಸಿಕೊಂಡು ಸಂಭ್ರಮಕೋಳಾಹಳಂ ಕೆಯ್ಮಿಕ್ಕು ಪೆರ್ಚುತ್ತುಮಿರೆ

ಇಕ್ಕುವ ಚಾಮರಾವಳಿಗಳಿಂ ಪೊಸಮುತ್ತಿನ ಲಂಬನಂಗಳಿಂ
ಸೆಕ್ಕಿದ ಚೆಲ್ವ ಸತ್ತಿಗೆಗಳಿಂದಮಗುರ್ವಿನ ಕೊರ್ವು ಪರ್ವಿ ಕೆ
ಯ್ಮಿಕ್ಕಿರೆ ದೇವಸೈನ್ಯಮೆರಡುಂ ಕೆಲದಲ್ಲಿ ವಿಘೂರ್ಣಿಸುತ್ತಿರಲ್
ಬೆಕ್ಕನೆ ದೇವರಾಜನಿಳಿತಂದನನುತ್ತಮಮಂದರಾಗ್ರದಿಂ     ೨೫

ವ : ಆಗಳ್

ಉಲಿವ ಸಮಸ್ತಸೈನ್ಯಶತಮಂ ಸುರತಾಡಿತವಾದ್ಯಕೋಟಿಯುಂ
ತೊಲಗಲೊಡಂ ಮಹಾಕಳಕಳಂ ಪೆಱಪಿಂಗಿದುದಾಕ್ಷಣಂ ಸುರಾ
ಚಳಮದು ನೋಡೆ ಬಾಜಿಸುತುಮೊಲ್ಲದೆ ಮಾಣ್ದ ಸುವರ್ಣಘಂಟೆಯೆಂ
ಬಳವಿಯ ಶಂಕೆಯಂ ಬಿಡದೆ ಪುಟ್ಟಿಸುತಿರ್ದುದು ಭಿನ್ನನಾಗಿ ತಾಂ    ೨೬

ವ : ಅನಂತರಂ

ನೆಲನೆಲ್ಲಂ ಕೊಳ್ಗೆಸರ್ ಮಾಣದೆ ಮಸಗುವಿನಂ ದಂತಿದಾನಂಗಳಿಂ ದಿ
ಕ್ಕುಲಮೆಲ್ಲಂ ಕೂಡೆ. ಚಿತ್ರಂ ಮಿಗೆ ಮಸಗುವಿನಂ ರತ್ನಭೂಷಾಂಶುವಿಂದಂ
ಸಲೆರೋದಂ ಕಾಳ್ಪುರಂ ಬೇಗದೆ ಮಸಗುವಿನಂ ಗೀತಪೀಯೂಷದಿಂದಂ
ನಲವಿಂದಂದೆಯ್ದಿಬಂದಂ ಜಿನನ ಪುರಿಗೆ ದೇವೇಂದ್ರನಾನಂದದಿಂದಂ            ೨೭

ವ : ಅಂತಳಂಕಾರಶಾಸ್ತ್ರದಂತೆ ನಾನಾಪ್ರಕಾರಚಿತ್ರಾಳಂಕಾರಪ್ರಕರದಿಂದಳಂ ಕೃತಮಾದ ಧರ್ಮಜಿನರಾಜನ ರಾಜಧಾನೀರುತ್ಸೇತರೋತ್ಸಾಹ ವಿರಾಜಮಾನಮಾದ ರತ್ನಪುರಮಂ ದಿವಿಜರಾಜಂ ದಿವಿಜಸಮಾಜಂಬೆರಸು ಮಹಾಪ್ರಭಾವನಾಪ್ರಭಾವ ಪ್ರಾದುರ್ಭಾವ ಮಗುರ್ವುವಡೆವಿನಂ ಮುಟ್ಟೆವೆಂದು ಪುರಮನರಮನೆಯುಮಂ ಪೊಕ್ಕು ತನ್ನಯ ಬೆಸದಿಂಮುನ್ನಮೆ ಪೋಗಿ ಕಲ್ಪಜಶಿಲ್ಪಿಗಳ್ ಪರಿಕಲ್ಪಿಸಿದ ಕರುಮಾಡದ ಮುಂದಣ ಮಹಾಸಭಾಮಂಟಪದ ಮಣಿಕುಟ್ಟಿಮಧರಣಿಯ ನಟ್ಟನಡುವಣ ರಮಣೀಯಮಣಿ ಮಯಸಿಂಹಪೀಠದೊಳಾ ಜಿನಾರ್ಭಕನನಿರಿಸಿ ತತ್ಪುರಂದರಂ ಮುಂದೆ ಕುಳ್ಳಿರ್ದು ಸಮಸ್ತ ಸುರಾಸುರರೆಲ್ಲಂ ನೆರೆದು ಮಹಾಮಹಿಮೆಯಿಂ ಒಡ್ಡೋಲಗಂಗೊಟ್ಟಿರ್ಪುದುಂ

ಪೂಜ್ಯಮಹಾಸೇನಮಹಾ
ರಾಜನುಮಾ ಸುವ್ರತಾಮಹಾದೇವಿಯುಮಂ
ದಾ ಜಿನಮಣಿಮಂಡಪಮಂ
ರಾಜಿತಮುಮನೆಯ್ದಿವಂದು ಪೊಕ್ಕರ್ ಮುದದಿಂ          ೨೮

ತನಯಮುಖದರ್ಶನೋತ್ಸುಕ
ಮನರಾಗಳ್ ಬಂದು ಕೆಲದ ಭದ್ರಾಸನದೊಳ್
ಘನರಾಗದೆ ಕುಳ್ಳಿರ್ದರ್
ತನುಲತೆಯೊಳ್ ತೋಱೆ ಪುಳಕಕಳಿಕಾಜಾಳಂ    ೨೯

ವ : ಅಂತು ಕುಳ್ಳಿರ್ದು

ತವಕದೆ ಚಕ್ರವಾಕಮಿಥುನಂ ತದಹರ್ಮುಖಮಂ ನಿರೀಕ್ಷಿಸಿ
ಪ್ರವರವಿಶೇಷಹರ್ಷದೊದವಿಂ ನಲಿವಂತೆ ಮಹಾತನೂಜನೊ
ಪ್ಪುವ ಮುಖಮಂ ಮನಂದಣಿವಿನಂ ನಡೆನೋಡಿ ವಿಶೇಷಹರ್ಷದಿಂ
ದವೆ ನಲಿಯುತ್ತುಮಿರ್ದುದು ದಲಾ ಮಿಥುನಂ ಪವಣಿಲ್ಲಮೆಂಬಿನಂ           ೩೦

ವ : ಇಂತನಂತಸಂತೋಷಸಮುದ್ರದಪರಪಾರಮನೆಯ್ದುತ್ತುಮಿರ್ಪುದುಂ

ಅಂತಪ್ಪುದ್ಭುತಪುಣ್ಯಮೂರ್ತಿಯೆನಿಪೀ ಲೋಕತ್ರಯಸ್ವಾಮಿಗೆಂ
ತುಂ ತಾಯ್ತಂದೆಗಳಪ್ಪ ಸೈಪು ದೊರೆಕೊಂಡಂದೇ ಸಮಾರಾಧ್ಯರುಂ
ಚಿಂತ್ಯರ್ ಪೂಜ್ಯರುಮೀ ಜಗಕ್ಕಿವರೆನುತ್ತುಂ ಶಕ್ರನಾನಂದಿತ
ಸ್ವಾಂತಂ ಪೂಜಿಸಿದಂ ಸುಕಲ್ಪಜವಿಭುಷಾಮಾಲ್ಯವಸ್ತ್ರಂಗಳಿಂ       ೩೧

ವ : ಅಂತಾ ಜಿನನ ಜನನೀಜನಕರಂ ದಿವಿಜರಾಜಂ ದಿವ್ಯವಸ್ತುಗಳಿಂ ಪರಿ ಪೂಜಿಸುತ್ತುಮಿರೆ

ಇನ್ನುಂ ರತ್ನಸುವರ್ಣವೃಷ್ಟಿ ಕಱೆಯುತ್ತಿರ್ದಪ್ಪುದೀ ತಾಣದೊಳ್
ಸ್ವರ್ನಾಥಂ ದಿವಿಜಾಸುರರ್ ಬೆರಸಿಬಂದಾರಾಧಿಸುತ್ತಿರ್ದಪಂ
ಮುನ್ನೆಂದುಂ ಸುತ ನಿನ್ನನಂ ಪಡೆದರಿಲ್ಲೀ ಲೋಕದಲ್ಲೆಲ್ಲಿಯುಂ
ಕೆನ್ನಂ ತತ್ಪಿತೃಮಾತೃಗಳ್ ಪಿರಿದು ಮುನ್ನೇಂ ನೋಂಪಿಯಂ ನೋಂತರೋ  ೩೬

ಆ ಮಾತಾಪಿತೃಗಳನಿ
ನ್ನೇಮಾತಿಂತೆಂದು ಕೂಡೆ ಕೊಂಡಾಡುತ್ತುಂ
ಪ್ರೇಮದೆ ನೋಡುತ್ತಿರ್ದುದು
ವೈಮಾನಿಕದೇವದೇವಿಕಾನಿಕುರುಂಬಂ ೩೩

ವ : ಅಂತುಮಲ್ಲದೆಯುಂ

ಲೇಸಾಗಿರ್ದಾ ಜಿನಾಧೀಶ್ವರನ ನಿರುಪಮಾಕಾರಮಂ ಪೆತ್ತ ತಾಯಂ
ದೀಸಾರಂ ತಾನೆನಿಪ್ಪಾ ಜನಕನವರ ರೂಪಂ ಸಭಾಶೋಭೆಯಂ ಕಂ
ಡೀ ಸೈಪಿನ್ನಾರ್ಗೆ ಕೈಸಾರ್ಗುಮೊ ದಿಟಮೆನುತುಂ ಪೌರನಾರೀರೌಘಂ
ಸೂಸುತ್ತುಂ ಹರ್ಷಬಾಷ್ಪಾಂಬುವನತಿಶಯದಿಂ ನೋಡುತಿರ್ದತ್ತದಾದಂ      ೩೪

ಬಲದೊಳ್ ಕುಳ್ಳಿರ್ದನೀತಂ ಸುರಪತಿ ಕೆಲದೊಳ್ ಕುಳ್ಳಿದಿರ್ದೀಕೆ ಚೆಲ್ವಿಂ
ಗಿಲೆಯಾದಿಂದ್ರಾಣಿ ಸುತ್ತಂ ನೆಲಸಿವರೊಸೆದೋಲೈಸುವರ್ ಲೋಕಪಾಳರ್
ಪಲಬರ್ ದೇವನಿಯೋಗಾಧಿಕೃತಿರತಿರಿವರ್ ಮತ್ತಮಿಂತೆಂದು ತಮ್ಮೊಳ್
ಸಲೆಬೊಟ್ಟಿಂ ತೋಱಿ ಮಾತಾಡುತವೆ ಬಳಸಿ ನೋಡಿತ್ತು ವಾಮಾಸಮೂಹಂ           ೩೫

ವ : ಇಂತು ಪರಿಜನ ಪುರಜನ ಬಂಧುಜನಂಗಳೆಲ್ಲಂ ನೆರೆದುನಿಂದು ನೋಡುತ್ತುಂ ಸುಟ್ಟುಂಬೆದೋಱಿ ನುಡಿಯುತ್ತುಂ ತಜ್ಜಿನಾರ್ಭಕನ ಸಮೂದ್ಭೂತಮಾದ ಪುಣ್ಯಶಕ್ತಿಯಂ ಮಿಗಿಪೊಗಳ್ದು ವ್ಯಕ್ತೀಕರಿಸುತ್ತುಮಿರ್ಪನ್ನೆಗಮಾಗಳನೇಕಪ್ರಶಸ್ತವಸ್ತುವಿಸ್ತೀರ್ಣ ಮಾಗಿ ಜಂಭಾರಾತಿ ಜಾತಕರ್ಮಸಮುತ್ಸವಪರಿನಿರ್ಮಾಣಮಂ ವಿಸ್ತರಿಸಿ ತದನಂತರಂ

ಈತಂ ಮಾಡಿದಪಂ ವಿನಿರ್ಮಳಮಹಾಧರ್ಮಪ್ರಭಾವಾಂಗಮಂ
ಧಾತ್ರೀಮಂಡಳದಲ್ಲಿ ಮೇಲೆನಿಪಿನಂ ಧರ್ಮಕ್ಕಮಿನ್ನುಂ ಸಮಂ
ತೀತಂ ತಾನಧಿನಾಥನೆಂದು ಶಿಶುಗಂ ಶ್ರೀಧರ್ಮನಾಥಂ ದೆಲೆಂ
ಬೀತಂ ನಾಮಮನಿಟ್ಟು ಘೋಷಿಸಿದನಾ ದೇವೇಂದ್ರನಾನಂದದಿಂ    ೩೬

ವ : ಇಂತು ನಾಮೋರಚ್ಚಾರಣಂಗೆಯ್ದಿಂಬಳಿಯಂ

ತತ್ತುವ ಚೆಲ್ವ ಮೆಯ್ದೊಳೆವ ಕಾಡಿಗೆಯೆಚ್ಚುವ ಮುದ್ದುಮಾತುಮಂ
ಬಿತ್ತರಿಸುತ್ತುಮಿರ್ಪ ಮೊಲೆಯೂಡುವ ಬಾಳವಿಭೂಷಣಂಗಳಂ
ಮತ್ತಮದೆಲ್ಲಮಂ ತೊಡಿಪ ಬೇವಸದಲ್ಲಿಗೆ ದೇವರಾಜನ
ತ್ಯುತ್ತಮದೇವಕಾಮಿನಿಯರಂ ಬೆಸವೇಳ್ದನತೀವಭಕ್ತಿಯಿಂ           ೩೭

ವ : ಇಂತು ಬಾಲಕಾಲಕರಣೀಯಪರಿಚರ್ಯಾಪರಿಕರಮಂ ವಿರಚಿಸುತ್ತು ಮಿರಿಯೆಂದು ಪುರುಹೂತಂ ಪುರಮಹತ್ತರಿಕಾಸಂಕುಳಮಂ ಬರಿಸಿಯಪ್ಪಯಿಸುವುದುಂ

ದೇವಕುಮಾರರಂ ಕರೆದು ನೀವು ಸಮಾನವಯಸ್ಕರಾಗಿ ನಾ
ನಾವಿಧಚೋದ್ಯಮಂ ಬಗೆಗೆ ಪುಟ್ಟಿಸುತಿರ್ಪ ವಿನೋದಮಂ ಸಮು
ದ್ಭಾವಿಸಿ ಕೂಡೆಯಾಡುತಿರಿಯೆಂದು ನಿಯಾಮಿಸಿದಂ ಕೆಲಂಬರಂ
ದೇವವರಂ ಸಮರ್ಪಿಸಿದ ನೇಳಕಮಂ ಪಿಡಿಯಲ್ ಕೆಲಂಬರಂ          ೩೮

ವ : ಅಂತಾ ಜಿನಕುಮಾರನಿಚ್ಛಾನುಕೂಲಮಾಗಿ ತತ್ಕಾಲೋಚಿತ ಸಹ ಪಾಂಸುಕ್ರೀಡಾ ವಿನೋದಮನಾತನೊಡನೊಡರ್ಚುತ್ತುಮಿರಿಯೆಂದು ಸುರಕುಮಾರಕರಂ ನಿಯೋಜಿಸಿ ಬಳಿಯಂ ಬಳರಿಪು ಪಿರಿದುಂ ಪ್ರಶ್ರಯವಿನಮ್ರಮಸ್ತಕನಾಗಿ ತದ್ಧರ್ಮಜಿನ ರಾಜನುಮನಾ ಜಿನನ ಜನನೀಜನಕರುಮಂ ಬೀಳ್ಕೊಂಡು

ಬೀಸುವ ಚಾಮರಾವಳಿಗಳಿಂ ಧವಳಾತಪವಾರಣಂಗಳಿಂ
ಸೂಸುವ ಮುತ್ತಿನಕ್ಷತೆಗಳಿಂ ಪಿಡಿದೆತ್ತಿದ ಸದ್ಧ್ವಜಂಗಳಿಂ
ಲೇಸೆನೆ ಶೋಭೆವೆತ್ತಮರಸೈನ್ಯಶತಂಬೆರಸಿಂದ್ರನಂದು ಮ
ತ್ತಾ ಸುರಲೋಕಮಂ ಪಿರಿದು ಸಂತಸದಿಂ ನಿಮಿಷಕ್ಕೆ ಮುಟ್ಟಿದಂ    ೩೯

ವ : ಇಂತು ತಜ್ಜಿನಾರ್ಭಕಂಗೆ ಮಹಾಮಹಿಮೆಯಿಂ ಜನ್ಮಾಭಿಷವಣ ಕಲ್ಯಾಣಪುರಸ್ಸರಂ ಜಾತಕರ್ಮನಾಮಕರಣಮಂಗಳವಿಧಾನವಿರಚನಾ ನಂತರಂ ವಾಸವಂ ನಿಜನಿವಾಸಕ್ಕೆ ಪೋಪುದುಂ

ಇತ್ತಲ್ ಬಳಿಕ್ಕಮತಿಮೃದು
ವೆತ್ತಮರಕುಮಾರಿಕಾಕರಾರುಣ ಕಮಲೋ
ನ್ಮತ್ತಕಳಹಂಸನೆನಿಪ ಜಿ
ನೋತ್ತಮಶಿಶು ಕಣ್ಗೆ ಸೊಗಸನೀವುತ್ತಿರ್ದಂ      ೪೦

ಎಱಕಂ ತನಗೇತಱೊಳಂ
ಕಿಱಿದಾದೊಡಮಿಲ್ಲವೆಂಬಿದಂ ಸೂಚಿಸುವಂ
ತಿರೆ ನಿರಪೇಕ್ಷೇಕ್ಷಣದಿಂ
ಮೆಱೆಯುತ್ತುತ್ತಾನಶಯ್ಯೆಯೊಳ್ ಶಿಶುವೆಸದಂ            ೪

ಕಜ್ಜಳಪರಿರಂಜನದಿಂ
ದುಜ್ವಳನಯಂಗಳೆಯ್ದೆ ಕಪ್ಪಾಗಿಯೆ ಪ
ಶ್ಯಜ್ಜನಮನಕ್ಕೆ ರಾಗೋ
ಪಾರ್ಜನಮಂ ಮಾಡುತಿರ್ದನಿದು ಚಿತ್ರತರಂ      ೪

ಮಿಗೆ ಜಾತಿಜರಾಮರಣಾ
ದಿಗಳಿಂಗೊಳಗಾಗಿ ಸೇದೆವಡುತಿರ್ದಪುದೀ
ಜಗಮೆಂದು ನಗುವತೆಱದಿಂ
ಮುಗುಳ್ನಗೆಯಂ ನಕ್ಕು ಮನಮನಿಳ್ಕುಳಿಗೊಂಡಂ          ೪೩

ಪರಮಹರಿನ್ಮಣಿವಿರಚಿತ
ಮರಳೆಲೆ ಬಾಲಕನ ನೊಸಲೊಳೆಸೆವುತ್ತುಂ ಬಂ
ಧರಮಾದುದರ್ಧಚಂದ್ರೋ
ದರದೊಳ್ ಪೊಳೆಯುತ್ತುಮಿರ್ಪ ಕಪ್ಪಿನ ತೆಱದಿಂ           ೪೪

ಮೃದುಸಿಕ್ತಂ ಸಮನೋಭಿರಾಮನಮಿತಚ್ಛಾಯಾವಿಶೇಷಾಸ್ಪದಂ
ಪದುಳಂ ನಂದನಬಾಳುಚೂತಮೆನೆ ಕಣ್ಗಿಂಬಾದನಾ ಬಾಳಕಂ
ಮುದಮಂ ಪುಟ್ಟಿಸಿ ವಸ್ತೃವಿಂಗೆ ಮಿಗೆಮತ್ತಂತಲ್ಲದಂದಿಂದ್ರನೀ
ಲದ ಮಾಗಾಯ್ಗಳವಾವ ಕಾರಣದಿನಾಕರ್ಣಂಗಳಲ್ಲೊಪ್ಪುಗುಂ    ೪೫

ವ : ಆಪೊತ್ತಿನೊಳ್

ಸುತನಂಗಸ್ಪರ್ಶನದೊಂ
ದತಿಶಯದಿಂ ಕಣ್ಗಳೆರಡುಮಂ ಮುಚ್ಚಿದನಾ
ಪಿತೃಸುಖಮನಂತರಂಗಾ
ತತಗೃಹದಲ್ಲಿರಿಸಿ ಕದವನಿಕ್ಕಿದ ತೆಱದಿಂ          ೪೬

ತೊಡೆಯಮೇಲಿರ್ದ ಕೂಸಂ
ಕಡುಪಿಂದಮರ್ದಪ್ಪಿ ಮಾತೃ ಕಣ್ಮುಚ್ಚಿದಳಾ
ಗಡೆ ಗಾಢಾಲಿಂಗನದಿಂ
ದೊಡಲೆನಿತೋ ಪೊಕ್ಕುದೆಂಬಿದಂ ನೋಡುವವೊಲ್       ೪೭

ಕುಂದದ ಪೆರ್ಚುಗೆಯಂ ಜಿನ
ಚಂದ್ರಂ ತಳೆಯಲ್ಕೆ ಕೂಡೆ ನಿರುಪಮಬಹಳಾ
ನಂದಸಮುದ್ರಂ ಪೆರ್ಚಿ ದ
ಲಂದು ಕರಂ ತುಂಬಿದತ್ತು ಲೋಕದೊಳೆಲ್ಲಂ    ೪೮

ಬಿಡದೆನ್ನಂತಿರೆ ತಾನುಂ
ಗಡ ತೇಜೋಮಯಮುಮೆಂಬ ಬಗೆಯಿಂದೆನೆ ಶಿಶು
ಮಡದಿಯರ ಕೈಗಳಿಂದಂ
ಕಡುನಿಮಿರ್ವಂ ಪಿಡಿಯಲೆಂದು ದೀಪಾಂಕುರಮಂ           ೪೯

ಪದೆಪಿಂ ಕಿವಿಗಳ್ಗಿಂಬಂ
ಕೆದಱುತ್ತುಂ ಸರ್ವವಶ್ಯಮಂತ್ರಂಗಳವೊಲ್
ತೊದಳಾದ ಮುದ್ದುನುಡಿಗಳ್
ಮುದಮಂ ಪುಟ್ಟಿಸುತುಮಿರ್ಪವಖಿಳಜನಕ್ಕಂ   ೫೦