ಶ್ರೀಮಜ್ಜಿನಧರ್ಮಮನಾ
ಸೋಮಯಶಂ ಪ್ರಕಟಿಸುತ್ತುಮಿರ್ದಂ ಪುದಿಯಲ್
ಪ್ರೇಮೋತ್ಕಟರಸಪಿಶುನಂ
ರೋಮಾಂಚಂ ಸರಸಚತುರಕವಿಕುಳತಿಳಕಂ       ೧

ವ : ಮತ್ತಮಾ ಧರ್ಮನಾಥಕುಮಾರನೊಂದುದಿವಸಂ ವಿಕೀರ್ಣನಾನಾ ವರ್ಣಪರಿವರ್ಣ್ಯಮಾನ ರಮಣೀಯಮಾಣಿಕ್ಯಮಯಂ ಪೂರ್ಣಕಳಶಕಳಾಪಚೂಳಿಕಾ ಭಾಗಂಗಳಿಂ ಚೋಚುಂಬ್ಯಮಾನಾಂಬರತಳಮೆನಿಪ್ಪರೇಕಜಾತೀಯಚತುರರಚನಾವಿಶೇಷಾತಿಶಯದಿಂದಶೇಷಜನಕ್ಕಾಶ್ಚರ್ಯಕಾರಿಯಾಗಿ ಪುಟಮಿಕ್ಕಿ ಮಿಱುಗುವ ಕಡೆಯಾಣಿಯ ಮಿಸುನಿಯಿಂ ಸಮೆದು ಥಳಥಳಿಸಿ ಪೊಳೆವ ನೆಲೆಮಾಡದ ಮೇಲೆ ಮಂಡಳಿಕ ದಂಡನಾಥ ಸಾಮಂತ ಸೇನಾನಾಯಕ ಪ್ರಧಾನಪಸಾಯಿತರ್ ಮುಖ್ಯಮಾದಖಿಳಪರಿವಾರಂಬೆರಸು ಸರ್ವಾವಸರಸಮಯಮಾಗಿ ಒಡ್ಡೋಲಗಂಗೊಟ್ಟು ಲೀಲೆಯಿಂದಿರ್ಪುದುಂ

ತಂದೆಯುಮಾ ಸಭೆಗಾಗಳ್
ಬಂದುಚಿತಾಸ್ಥಾನದಲ್ಲಿ ಕುಳ್ಳಿರ್ದು ಮಹಾ
ನಂದಮನೆಯ್ದುತ್ತಿರ್ದಂ
ನಂದನನಂ ನೋಡನೋಡಿ ಕಣ್ತಣಿವಿನೆಗಂ         ೨

ವ : ತದನಂತರಂ

ಸಕಳನೃಪಾಳಮೌಳಿಮಣಿರಂಜಿತಪಾದನ ತತ್ಸಭಾಪ್ರವೇ
ದಿಕೆಗತಿವೇಗದಿಂ ಧವಳಲಂಬಿತಕೂರ್ಚಧರಂ ಸುಶುಭ್ರಕಂ
ಚುಕ ಪರಿಶೋಭಿತಂ ಪೃಥುಳಕುಕ್ಷಿತಳಂ ಧೃತಚಿತ್ರವೇತ್ರಯ
ಷ್ಟಿಕನಿರದೆಯ್ದಿಬಂದನುಱೆ ದೂತನದೊರ್ವನುಪಾತ್ತಲೇಖನಂ     ೩

ವ : ಇಂತು ಪಿರಿದುನರ್ಘ್ಯಂಗಳಾದ ಪಾಗುಡುಂಗಳಂ ಕೊಂಡುಬಂದು ಪ್ರಥಮ ರಾಜದ್ವಾರೋಪಾಂತರದೊಳ್‌ನಿಂದ ದೂರದೇಶಾಯಾತದೂತನಂ ಕಂಡು ಪ್ರತಿಹಾರಕಂ ಪೋಗಿ ತದಾಗಮನವಾರ್ತೆಯನರಸಂಗೆ ಬಿನ್ನಪಂಗೆಯ್ದೆ ಬರವೇಳೆಂಬು ದುಮಾ ದೂತಂ ಪೋಗಿ ಸಭಾಸದನದೊಳಗಂ ಪೊಕ್ಕು ನಿರ್ಭರಭಕ್ತಿಯಿಂದೀರ್ವರ್ಗಂ ಸಾಷ್ಟಾಂಗವೆಱಗಿ ಪೊಡವಂಟು ಭೂಪತಿ ಭ್ರೂಭಂಗಚ್ಛದಪರಿಸಂಜ್ಞಿತಮಪ್ಪ ತದುಚಿತಮಾದ ಮುಂದಣ ಬಲದ ಕೆಲದ ಸ್ಥಾನದೊಳ್ ಕುಳ್ಳಿದಿರಲಾ ದೂತನ ಮೊಗಮಂ ಭೂತಳಾಧಿಪತಿ ನೋಡಿ ನೀಂ ಬಂದ ಕಾರಣಮೇನೆಂಬುದುಮಾತಂ ತನ್ನುತ್ತರೀಯಾಂಚಳ ಮನಧರಪಲ್ಲವಸಮೀಪಕ್ಕೆ ತಂದು ಬಿನ್ನಪಮೆಂದಿಂತೆಂದಂ

ಮುಖ್ಯವಿದರ್ಭದೇಶದೊಡೆಯಂ ಕುರುವಂಶವರಪ್ರತಾಪರಾ
ಜಾಖ್ಯಕನುದ್ಘಕುಂಡಿನಪುರಾಧಿಪನಪ್ಪ ನರಾಧಿನಾಯಕಂ
ಸೌಖ್ಯದ ಜನ್ಮಭೂಮಿಯೆನಿಸಿರ್ದುಱೆ ತನ್ನ ಕುಮಾರಿಕಾಮಹಾ
ಪ್ರಖ್ಯತರ ಸ್ವಯಂಬರದೆ ನಿಮ್ಮ ಸುತಾನಯನಾರ್ಥಮಟ್ಟಿದಂ      ೪

ವ : ಇಂತೆಂದು ಬಿನ್ನಪಂಗೆಯ್ದನಂತರಂ

ತಾಂ ತಂದ ಪಾಗುಡಂಗಳ
ಸಂತತಿಯಂ ಕಾಣ್ಕೆಯಾಗಿ ಕೊಟ್ಟ ಬಳಿಕ್ಕಂ
ಸಂತೋಷಕಾರ್ಯಪರಿವೃ
ತ್ತಾಂತದಲೇಕಾರ್ಥಮೊಂದನಾತಂಗಿತ್ತಂ           ೫

ಓದಿದನಂದೋಲೆಯನಿಂ
ತಾದರದಿಂದೊರ್ವ ಸೇನಬೋವಂ ಮಿಗೆಸಂ
ಪಾದಿಸುತುಂ ಕಿವಿಗಳ್ಗತಿ
ಮೇದುರಪೀಯೂಷವರ್ಷಮಂ ಭರದಿಂದಂ      ೬

ವ : ಸ್ವಸ್ತಿ ಶ್ರೀಮನ್ಮಹಾಸೇನಮಹಾರಾಜಂ ತನ್ನಯ ಧರ್ಮನಾಥಕುಮಾರನನೆನ್ನ ಕುಮಾರಿ ಶೃಂಗಾರವತೀದೇವಿಯ ಸ್ವಯಂಬರವಿವಾಹಕಲ್ಯಾಣೋತ್ಸಾಹಕ್ಕೆ ಬೇಗಂ ಕಳಿಪುವು ದೆಂದೋದುವುದುಮದಂ ಕೇಳ್ದು ಸಭಾಜನಮೆಲ್ಲಂ ನಿರಂತರಿತಸಂತೋಷಭಾಜನ ಮಾಗಿ ಲೇಸುಲೇಸೆಂದು ಮಿಗೆ ಪೊಗಳ್ದು ಕೊಂಡಾಡುತ್ತುಮಿರ್ಪನ್ನೆಗಮಾ ದೂತಂ

ಪಡಿಯಂ ತೋಱಿಪಡಿಲ್ಲದ
ಕಡುಚೆಲ್ವವಿಳಾಸದಿಂದೆ ಮನ್ಮಥನಂ ಕೈ
ಮಡಗದೆ ಗೆಲ್ದ ಕುಮಾರನ
ನಡಿಗಡಿಗಂ ನೋಡಿ ಬಗೆದು ವರಸಾದೃಶಮಂ   ೭

ವ : ಸಮನಂತರಮೀ ಕುಮಾರಂಗಾ ಕನ್ಯಾರತ್ನಮನುರೂಪಮೆಂಬಿದಂ ಸಭೆಗಂ ಸಭಾಪತಿಗಂ ತೋಱಿಸಲ್ವೇಡಿ

ಆಕೆಯ ರೂಪಿನೊಂದು ಸುಭಗಾಕೃತಿ ನೋಳ್ಪಡಮೆಂತುಟಂತೆ ನಾ
ನಾಕುಶಲತ್ವಮೊಂದಿರಲದಂ ಪಟದೊಳ್ ಬರೆದು ಪ್ರಯತ್ನದಿಂ
ದೊಯ್ಕನೆ ಕೊಂಡುಬಂದು ಧರಣೀಪರಿಪಾಲನ ಮುಂದೆ ತ್ಪ್ರೋದಂ
ಲೋಕಮನಃಪ್ರಲುಂಟನ ವಿಲಂಪಟಮಂ ಪಟಮಂ ವಿಚಿತ್ರಮಂ       ೮

ವ : ಆಕ್ಷಣಮಲ್ಲಲ್ಲಿಗುಚಿತಮಾಗಿ ಚಂಚತ್ಪಂಚವರ್ಣಕ್ರಮದಿಂದಂ ಬಣ್ಣ ಮಿಟ್ಟು ಮಿಱಮಿಱಮಿಂಚುವ ನಾನಾಪ್ರಕಾರ ತುಂಗಮಣಿಮಯಶೃಂಗಾರಭಂಗಿಯಿಂ ಬೆಡಂಗುವಡೆದು ಥಳಥಳಿಸಿ ಪೊಳೆಯುತ್ತುಮಿರ್ಪರ ಸಚಿತ್ರಭಾವಚಿತ್ರದಿಂ ವಿಚಿತ್ರಚಿತ್ತ ಭಾವಿ ಸ್ವಯಂವರ ವಿವಾಹಕಲ್ಯಾಣಕ್ಕೆ ಯೋಗ್ಯಳಾದ ಶೃಂಗಾರವತೀದೇವಿಯೆಂಬ ನೂತ್ನ ತರಕನ್ಯಕಾರತ್ನದ ರೂಪಚಿತ್ರಮಂ ಪಟಪರಿಲಿಖಿತಮಂ ಕಂಡು ಮನದೆಗೊಂಡು ಸಭೆಯುಂ ಸಭಾಪತಿಯುಂ ಬೆಕ್ಕಸಂಬೆಱಗಾಗಿ ಚಿತ್ತದೊಳ್ ಕೌತೂಹಳಂ ಕೈಮಿಕ್ಕು ಪೆರ್ಚುತುಮಿರೆ ಚಿತ್ರಮಯಕನ್ಯಕಾಪ್ರತಿಬಿಂಬರೂಪುಮಂ ನೋಡಿ ನೋಡಿ ಮುನ್ನೆಂದುಮಿಂತಪ್ಪ ವಿಸ್ಮಾಪಕ ರೂಪಮಂ ಸ್ವಪ್ನದೊಳಾದೊಡಂ ಕಂಡುದಿಲ್ಲೆಂದು ನಾಡೆಯುಂ ಕೊಂಡಾಡುತ್ತುಮಿರ್ದ ಮೂರ್ಧಾಭಿಷಿಕ್ತಂ ಕೆಲದೊಳ್ ಬರೆದಿರ್ದುದೊಂದು ನಿರವದ್ಯಮಾದ ಹೃದ್ಯಮಯ ಪದ್ಯಮಂ ಕಂಡು

ಈಕೆಯ ರೂಪನಿರ್ದಪರಿಯಿಂ ಬರೆವನ್ನನದೊರ್ಬನುಂ ಮಹೀ
ಲೋಕದೊಳಿಲ್ಲ ಕೌಶಲವಿರಿಂಚನನಾದೊಡಮೀ ಘುಣಾಕ್ಷರ
ಪ್ರಾಕಟದಂದಂದಿಂ ಸಮೆದ ವಿಸ್ಮಯಕಾರಕಮಂ ತದೀಯ
ರೂಪಾಕೃತಿಯಂ ವಿನಿರ್ಮಿಸುವ ಪೊತ್ತಿನೊಳೆಯ್ದೆವಿಮೋಹಿಪಂ ಜನಂ         ೯

ಎಂತಕ್ಕೆಂತಕೆ ದೆಯ್ವಯೋಗವಶದಿಂದಂ ಜಾಣನೊರ್ವಂ ಕಳಾ
ವಂತಂ ನೂರ್ಮಡಿಯಾದ ರೂಪಕಳೆಯಲ್ಲೊಂದಂದಮಂ ಕೊಂಡು ಮ
ತ್ತೆಂತುಂ ತತ್ಪ್ರತಿರೂಪಮಂ ಬರೆದನೆಲ್ಲಾ ಚೆಲ್ವಿನಂಶಂಗಳುಂ
ಚಿಂತಾಗೋಚರಿಗಳ್ ಸಮಂತು ಬರೆಯಲ್ಕೇಂ ಮೊಗ್ಗೆ ತತ್ಕಾಂತೆಯಾ          ೧೦

ಇಂತೆಂದೋದುವುದುಂ ಸಭಾಜನಮದೆಲ್ಲಂ ಕೇಳ್ದು ಕೊಂಡಾಡುತುಂ
ಸಂತೋಷಂ ಮಿಗೆ ಮೆಚ್ಚಿಮೆಚ್ಚಿ ತಲೆಯಂ ತೂಗುತ್ತುಮಿರ್ದತ್ತು ಭೂ
ಕಾಂತಂ ವಿಸ್ಮಿತಚಿತ್ತನಾಗಿ ಮಗನೊಂದಾಶ್ಚರ್ಯಸೌಂದರ್ಯಮಂ
ಕಾಂತಾರತ್ನದ ಚೆಲ್ವರೂಪಕಳೆಯಂ ನೋಡುತ್ತುಮಂತಿರ್ಪುದುಂ    ೧೧

ವ : ಮತ್ತಮಾ ಮಹೀಕಾಂತಂ ದುರಂತತಮಚಿಂತಾಪರವಶೀಭೂತಸ್ವಾಂತನಾಗಿ ತನ್ನೊಳಿಂತೆಂದಂ

ಎಲ್ಲಿಯದೀ ಸ್ತ್ರೀರತ್ನಮಿ
ದೆಲ್ಲಿಯನೀ ಚರಮದೇಹಧಾರಿಕುಮಾರಂ
ದುರ್ಲಭಮೀ ಸಂಬಂಧಂ
ತಲ್ಲಜಪುಣ್ಯಂಗೆ ಲೋಕದಲ್ಲಿರದುಂಟೇ        ೧೨

ವ : ಮತ್ತಮಾ ನರೋತ್ತಮಂ ತನ್ನಿಕ್ಕೆಲದೊಳೆತ್ತಲುಂ ಮೊತ್ತಂಗೊಂಡು ಕುಳ್ಳಿರ್ದ ಕ್ಷತ್ರಿಯ ಕುಮಾರಕನ ನಗೆಮೊಗಂಗಳಂ ನೋಡುತ್ತುಮವರೊಡನಿಂತೆಂದು ನುಡಿದಂ

ಕುಲಮುಂ ಜವ್ವನಮುಂ ಮಹಾವಿಭವಮುಂ ಸತ್ಕೀರ್ತಿಯುಂ ಜಾಣ್ಮೆಯುಂ
ಛಲಮುಂ ಶೀಲಮುಮೆಂಬಿನಲ್ಲಿ ನೆಲಸಿರ್ದೀಕಾರಣಂ ಯೋಗ್ಯತಾ
ಕಳಿತಸ್ಥಾನಮದಾಯ್ತು ಕೊಳ್ಕೊಡೆಗೆ ಲೀಲಾಮಾತ್ರದಿಂ ಧಾರಿಣೀ
ತಳದೊಳ್ ದುರ್ಘಟಕಾರ್ಯಮುಂ ಘಟಿಸುಗುಂ ಪುಣ್ಯಪ್ರಭಾವಂಗಳಿಂ         ೧೩

ಎನ್ನ ಕುಮಾರನಲ್ಲದುಳಿದನ್ಯಕುಮಾರಕರಿಂಗೆ ಮಾಲೆಯಂ
ಕನ್ಯಕೆ ತತ್ಸ್ವಯಂಬರದೊಳಿಕ್ಕಳದೆಂದತಿಚಾರುಕೌಮುದೀ
ಪ್ರೋನ್ನತಚಂದ್ರನಂ ಬಿಸುಟು ತಾರೆಗಳಂ ಸಲೆ ಪೊರ್ದದೆಲ್ಲಿಯುಂ
ಮಾನ್ಯರತಿವಮಾನ್ಯರುಮನಲ್ಲದೆ ಪೊರ್ದರಿಳಾತಳಾಗ್ರದೊಳ್     ೧೪

ವ : ಇಂತು ನಿರಂತರಿಸಂತೋಷಮನೆಯ್ದಿ ನುಡಿಯುತ್ತುಮಿರ್ದ ಮೂರ್ಧಾಭಿಷಿಕ್ತಂ ತನ್ನಯ ಮಗನಪ್ಪ ಧರ್ಮನಾಥಕುಮಾರನ ಪ್ರಸನ್ನವದನಾರವಿಂದಮಂ ನೋಳ್ಪಾಗಳ್

ಅತಿರಮಣೀಯಮಾಗಿ ಪಟದೊಳ್ ಬರೆದಿರ್ದ ನೃಪಾಳಪುತ್ರಿಯೊಂ
ದತಿಶಯಮಪ್ಪ ಚೆಲ್ವನತಿಕೌತುಕದಿಂದಮೆ ನೋಡುತಿರ್ದ ಭೂ
ನುತಯುವರಾಜಕುಂಜರನ ರಾಗಸಮಾಕುಳಲೋಚನಂಗಳಂ
ಕ್ಷಿತಿಪತಿ ಕಂಡು ಭಾವಿಸಿದನೀಕೆಯೊಳುಂಟಭಿವಾಂಛೆಯೆಂಬಿದಂ        ೧೫

ಈ ಕನ್ಯಾರತ್ನದ ಮೇ
ಲೀ ಕುವರನ ಚಿತ್ತಮಾದುದಾಸಕ್ತಮಿದೆಂ
ದೊಯ್ಕನೆ ಬಗೆದಂ ಭೂಪಂ
ಲೋಕಮನೋವೃತ್ತಿಬೋಧನಮೆ ಬುದ್ಧಿಫಲಂ            ೧೬

ವ : ಅಂತಾ ಧರ್ಮನಾಥಕುಮಾರನ ಮನೋಗತ ಮನೋರಥ ಪರಿಣಾಮಮಂ ತದಾಕಾರ ನಿರೀಕ್ಷಣದಿಂದನುಮಾನಿಸಿ ಸ್ವಯಂಬರಪರಿಣಯನನಿಮಿತ್ತಂ ಕುಂಡಿನಪುರಕ್ಕೆ ಕುಮಾರನಂ ಕಳಿಪುವುಜ್ಜುಗಂ ಮನದೊಳ್ ಕೆಯ್ಮಿಕ್ಕು ಪೆರ್ಚುತ್ತುಮಿರೆ ಪ್ರಯಾಣ ಕಾರಣಂ ಸಮಕಟ್ಟಿಕೊಳ್ಳಿಮೆಂದು ಕುಮಾರಂಗಂ ಸಭೆಗಂ ಪೇಳ್ದು ತದುಚಿತ ಪ್ರತ್ಯಗ್ರೋದಗ್ರಸಾಮಗ್ರೀ ಸಮಗ್ರೀಕರಣಾರ್ಥಂ ಸಭೆಯಿಂದೆಳ್ದುಪೋಗಿ

ಸಕಳಕ್ಷತ್ರಿಯ ಮಂತ್ರಿ ಮಂಡಳಿಕ ದಂಡಾಧೀಶ ಸಾಮಂತ ಸೈ
ನಿಕ ಸೇನಾಪತಿ ಮುಖ್ಯರಪ್ಪ ಪರಿವಾರಾನೀಕಮಂ ಮತ್ತಹಾ
ಸ್ತಿಕಮಂ ಜಾತಿತುರಂಗಮಪ್ರಕರಮಂ ಮೇಳೈಸಿದಂ ಕೂಡೆ ಕೌ
ತುಕಮಪ್ಪಂತೆ ವಿವಾಹಕಾರ್ಯಗಮನಕ್ಕಂ ಯೋಗ್ಯಸಾಮಗ್ರಿಯಂ  ೧೭

ಕುವರನ ಕೂಡೆ ಪೋಪ ಕಡೆಕಟ್ಟುಗಳಂ ಸಮಕಟ್ಟಿಕೊಟ್ಟು ದೂ
ತವರನ ಮಾತಿನಾಗ್ರಹಪರಂಪರೆಯಿಂ ಶುಭಲಗ್ನದಲ್ಲಿ ಮಾ
ನವಪತಿ ಬೇಗದಿಂ ಬಿಡಿಸಿದಂ ಪೊಱವೀಡನತೀವಸಂಭ್ರಮೋ
ದ್ಭವ ಘನಹೃದ್ಯವಾದ್ಯನಿನದಂ ಪುದಿಯಲ್ ದಶದಿಗ್ವಿಭಾಗಮಂ   ೧೮

ಗುಡಿ ಗೂಡಾರಂ ಚೆಲ್ವಂ
ಗಡಿ ಚೌರಿಗೆ ಚಂಪೆ ತಿವುರಿ ದುಮ್ಮಳಮಿವಱೊಂ
ದಡಸಿದ ಪಸುರಿಂ ಕಪ್ಪಿಂ
ಕಡುಗೆಂಪಿಂ ಮೆಱೆದುದವನ ಪೊಱವೀಡು ಕರಂ೧೯

ವ : ಮತ್ತಂ

ಪರಿಪರಿಯ ಬಣ್ಣವಣ್ಣಿಗೆ
ಬೆರಸಿದ ಕಡುಸಪುರಸೀರೆಗಳನುಟ್ಟು ಮನೋ
ಹರರತ್ನದ ತೊಡವುಗಳಂ
ಪಿರಿದಾಗಿಯೆ ತೊಟ್ಟು ಬಂದರರಸುಗಳೆಲ್ಲಂ    ೨೦

ವ : ಇಂತು ಸುತ್ತಲುಮೊತ್ತಿಪಿಡಿದ ಪಲವುಂತೆಱದ ಪಲ್ಲವಸತ್ತಿಗೆಗಳ ಮೊತ್ತಂಗಳಿಂ ತುಱುಗಿ ತರ್ಳತು ಪೊಳೆದು ಬೀಸುವ ಹೇಮಚಾಮರಂಗಳ ಬಳಗಂಗಳಿಂದಳಂ ಕೃತರಾದ ಸಕಳರಾಜರಾಜನ್ಯಕಪ್ರಭೃತಿರಾಜಕುಮಾರರೆಲ್ಲಂ ಪಿರಿದುಮತಿಶಯಮಾಗಿ ಕೆಯ್ಗೆಯ್ದು ತಂತಮ್ಮ ವಾಹನಂಗಳನೇಱಿ ಸಮಸ್ತಹಸ್ತ್ಯಶ್ವರಥಪದಾತಿಲಕ್ಷಣಪ್ರಬಳ ಚಾತುರ್ದಂತ ಬಲಂಬೆರಸಿ ಬಂದರಮನೆಯ ಮುಂದಣ ವಿಶಾಳರಾಜಾಂಗಣದ ಮಂಗಳಾ ಯಮಾನಸಮುತ್ತುಂಗರಂಗಸ್ಥಳದೊಳೆತ್ತಲುಂ ಮೊತ್ತಂಗೊಂಡು ನೆರೆದು ಧರ್ಮನಾಥ ಕುಮಾರನ ನಿರ್ಗಮನಸಮಯದವಸರಮಂ ಪಾರುತ್ತುಂ ನಿಂದಿರ್ಪುದುಂ

ಪಿರಿದುಮನರ್ಘ್ಯನೂತ್ನನವರತ್ನವಿನಿರ್ಮಿತದಿವ್ಯಭೂಷಣೋ
ತ್ಕರಮನೆ ತೊಟ್ಟು ಸಗ್ಗದೊಳಗಗ್ಗಳಮಾದ ವಿಚಿತ್ರವರ್ಣಬಂ
ಧುರವರವಸ್ತ್ರಮಂ ಮುದದಿನುಟ್ಟು ಮನೋಹರದಿವ್ಯಗಂಧಮಂ
ಭರವಸದಿಂದೆ ಪೂಸಿ ಕುವರಂ ಪರಿಭೂಷಿತನಾದನದ್ಭುತಂ            ೨೧

ವ : ಅಂತು ನಾನಾವಿಧ ನವೀನಶೃಂಗಾರಭಂಗಿಯನಂಗೀಕರಿಸಿದ ಧರ್ಮನಾಥ ಕುಮಾರಂ ನಿಜಕುಲವೃದ್ಧೆಯರ ಜಯಜೀವನಂದೇತ್ಯತ್ಯುಚ್ಚಾಶೀರ್ವಚನೋಚ್ಚಾರಣ ಸಮುಪಲಕ್ಷಿತಧವಳಮಂಗಳಕಳಮಾಕ್ಷತಂಗಳನಾಂತು ಪರಮಾನಂದಮಯ ಮೂರ್ತಿಕನಾಗಿ ತುಚ್ಛೇತರೋತ್ಸಾಹವಿರಾಜಮಾನನಿಜರಾಜಾಲಯಮಂ ಪೊಱಮಟ್ಟು ಬಂದು ರಾಜಾಂಗಣದೊಳ್ ನಿಂದಿರ್ದ ಮಸೃಣಮಣಿಮಯಕಿಂಕಿಣೀಗಣ ರಮಣೀಯಮಾಲಾ ಲಂಬುಷಭೂಷಿತಮಾದ ಕನತ್ಕನಕಸ್ಥೂಲಘಂಟಾಜಾಳ ಜಟಿಳೀಕೃತಮಾಗಿರ್ದ ಚಂಚಚ್ಚಾಮೀಕರ ಚಾರುಚಾಮರಸಂಚಯಸಮಾಲಂಬನ ದಿಂದೊಪ್ಪಂಬೆತ್ತ ಸಿಂಧೂರಮುದ್ರಾ ಸಮಾರಂಜನಶೋಭೆಗಾಧಾರಮಾದ ಪೊಸಪೊಸಬಣ್ಣದಿಂದಂಚಿತ ಱಂಚೆಯಂ ಪಣ್ಣಿದ ಪಟ್ಟವರ್ಧನಗಜೇಂದ್ರಮನೇಱಿ ಸುಸ್ಥಳದಿಂ ಕುಳ್ಳಿರ್ದು ಸುತ್ತಲುಂ ಬಳಸಿನಿಂದ ಪರಿವಾರದ ಸಂಭ್ರಮಪರಿಭ್ರಮಣಸಂಭೂತ ಕಳಕಳಕೋಳಾಹಳ ಶೋಭಾಸಮುತ್ಕರ್ಷಮಂ ನೀಡುಂ ನೋಡುತ್ತುಮಿರ್ಪುದುಂ

ಸುತ್ತಲುಮೆಯ್ದೆ ತಳ್ತ ಪರಿವೇಷದೊಳೊಂದಿದ ಚಂದ್ರಮಂಡಳಂ
ಬಿತ್ತರದಿಂದೆ ನಾಲ್ಕುಮುಖಮಾಗಿರದೋಲಯಿಸಲ್ಕೆ ಬಂದವೊ
ಲುತ್ತಮಚಿತ್ರವರ್ಣಮಯಪಲ್ಲವಶೋಭೆಗಳಾದ ನಾಡೆಯುಂ
ಮುತ್ತಿನ ಚೌಕ ಸತ್ತಿಗೆಗಳಂ ಪಿಡಿದಿರ್ದರತೀವಲೀಲೆಯಿಂ   ೨೨

ಬೀಸಿದರಂದೊಲವಿಂದಂ
ಲೇಸಾಗಱುವತ್ತುನಾಲ್ಕುಚಮರಂಗಳನಾ
ಭೂಸೇವ್ಯಚರಣಕಂಗಭಿ
ಭಾಸುರಮಣಿದಂಡಮಂಡಿತಂಗಳನಾಗಳ್         ೨೩

ವ : ಆಪೊತ್ತಿನೊಳ್

ಥಳಥಳಿಸಿ ಪೊಳೆವ ಮಕುಟೋ
ಜ್ಜ್ವಳಚೂಡಾಮಣಿಮಯೂಖಮಂಜರಿಯಿಂದಂ
ಬೆಳಯಿಸುತಿರ್ದಂ ಗಗನ
ಸ್ಥಳದಲ್ಲಿ ಸಮಂತು ಶಕ್ರಚಾಪಶ್ರೀಯಂ         ೨೪

ಅರುಣಮಣಿಕುಂಡಲಂಗಳ
ಕಿರಣಂ ನಗೆಮೊಗದ ಮೇಲೆ ಪಸರಿಸಲೆಸೆಗುಂ
ತರುಣತರಣಿಪ್ರಭಾವಳಿ
ಬೆರಸಿದ ಕನಕಾಂಬುಜಾತಮೆಂಬಂತೆವೊಲಂ       ೨೫

ನವರತ್ನದ ಪದಕಮುಮಾ
ಕುವರನ ಕೊರಳಲ್ಲಿ ಚೆಲ್ವನಾಂತಿರ್ದುದು ತ
ನ್ನ ವಿಶಾಲಲಕ್ಷ್ಮಿಯಾಡುವ
ನವಿಲುಯ್ಯಲಿದೆಂಬ ಶಂಕೆಯಂ ಪುಟ್ಟಿಸುತುಂ    ೨೬

ಕ್ಷಿತಿನುತಧರ್ಮನಾಥನೆರಡುಂಘನಬಾಹುಗಳಗ್ರದಲ್ಲಿ ಮ
ತ್ತತಿರಮಣೀಯಬಾಹುವಳಯಂಗಳುವೊಪ್ಪಮನಾಳ್ದುವಾಕ್ಷಣಂ
ಪತಿಭಜನಾರ್ಥಮಾಗಿರದೆಬಂದು ದಿವಾಕರಚಂದ್ರಬಿಂದುಮು
ನ್ನತಭುಜಮೂಲಮಂ ಬಿಡದೆ ಪೊರ್ದಿ ಬರ್ದುಂಕುತುಮಿರ್ದುದೆಂಬಿನಂ        ೨೭

ಅಂದು ಕಡುಚೆಲ್ವನಾಂತುವು
ಸೌಂದರಘನಪದ್ಮರಾಗಮಣಿಕಂಕಣದಿಂ
ಸಿಂಧೂರಾರುಣಕರಿಕರ
ದಂದದೆ ಮುಂಗೈಗಳಾ ಕುಮಾರಾಗ್ರಣಿಯಾ     ೨೮

ಹರಿನೀಳಖಚಿತರಸನಾ
ಕಿರಣಂ ಕುವರನ ಸುನಾಭಿಕೂಪದೊಳಂ ತುಂ
ಬಿರಲದು ಪೋಲ್ತುದು ಯಮುನೆಯ
ಪಿರಿದೆನಿಸುವ ಸುಳಿಯ ಚೆಲ್ವನತಿರಮಣೀಯಂ  ೨೯

ಮಾಣಿಕದ ಕಡೆಯದೊಡನುಱೆ
ಕಾಣಿಕೆಯಂ ಪಡೆದ ಚೆಲ್ವಪೆಂಡೆಯದ ಮಣಿ
ಶ್ರೇಣಿಕೆ ರಂಜಿಸಿದತ್ತಾ
ಜಾಣನ ಪದದಲ್ಲಿ ರಾಗಮಿಮ್ಮಡಿಸುವಿನಂ      ೩೦

ವ : ಇಂತು ತೊಟ್ಟಂತಪ್ಪ ಷೋಡಶಾಭರಣಕಿರಣಂಗಳುಂ ಕಡುನಿಮಿರ್ದು ಕುಡಿಯಡರಿ ತಾಂ ಪೊದೆದಿರ್ದ ಸಪುರಸೀರೆಯಲ್ಲಿ ಪರಿಕಲಿಸಿ ರಂಜಿಸುತ್ತುಮಿರೆ ಪಂಚವರ್ಣ ವಿನ್ಯಾಸಕ್ರಮದಿಂ ಮಂಜಿಷ್ಠಾಶಂಕೆಯನಂಕುರಿಸುತ್ತುಮಿರ್ದುದಱ ಸೆಱಂಗ ಬೀಸುವ ಚಾಮರಂಗಳ ಗಾಳಿಯಿಂ ಸಂಚಳಿಸಿದ ಕದಕ್ಕದಿಸುತ್ತುಮಿರೆ

ಸಂಪನ್ನನ ರೂಪಂ ಮು
ನ್ನಂ ಪಲವುಂ ಬಾರಿ ಕಂಡೊಡಂ ಪುರನಾರೀ
ಕಂಪಾಕ್ಷಿಗಳುಂ ವಿಕಸನ
ಮಂ ಪಡೆದವು ರವಿಯ ಕಂಡು ತಾವರೆಗಳವೊಲ್           ೩೧

ವ : ಇಂತು ನಿರಂತರಿತ ಪೌರನಾರೀಜನಾದಿ ಸಮಸ್ತಪರಿಜನ ಪುರಜನಂಗಳ ಕಣ್ಗಳುಂ ಮನಂಗಳುಂ ಕಡುತವಕದಿಂದೊಡನೊಡಪೋಗಿಯಾ ಕುವರನ ನಿರುಪಮ ರೂಪಮೆಂಬ ವಿಶ್ರಮಸ್ಥಾನದೊಳ್ ನೆಲಸಿನಿಂದು ತಣ್ಣಗೆ ತಣಿವುತ್ತುಮಿರ್ಪುದುಂ

ದೇವಕುಮಾರಿಯರೊಲವಿಂ
ಪೂವಿನ ಮಳೆಯಂ ಸಮಂತು ಕಱೆಯುತ್ತಿರ್ದರ್
ಭೂವಳಯಪಾಲಕನ ಮೇ
ಲೋವದೆ ಮಱಿದುಂಬಿಗಳ್ ಕರಂ ಮೊರೆವಿನೆಗಂ            ೩೨

ವ : ಅಂತಾಕ್ಷಣಮಾ ಕುಮಾರನ ವಿಳಾಸದೊದವನೆಲ್ಲರುಮಲ್ಲಲ್ಲಿ ನೆರೆದು ನಿಂದು ನೋಡುತ್ತುಂ ಕಿಕ್ಕಿಱಿಗಿಱಿದು ಸಂದಣಿಸಿ ತಿಂತಿಣಿಗೊಂಡಿರ್ಪುದುಂ ಅನಂತರಂ

ಜನತಾಕೋಳಾಹಳಂ ಮತ್ತವರ ಕರಿಘಟಾಗರ್ಜಿತಂ ವಾಜಿರಾಜಿ
ಸ್ವನಮುಂ ನಿಸ್ಸಂಖ್ಯಶಂಖಪ್ರಪಟುಪಟಹಸತ್ಕಾಹಳಾಭೂರಿಭೇರೀ
ಧ್ವನಿಯುಂ ಭೋರೆಂದು ತಾನೊರ್ಮೊದಲೊಳೆ ಪಿರಿದುಂ ಘೂರ್ಣಿಸಲ್ ಕೂಡೆ ಪೆರ್ಚಲ್
ಮನದುತ್ಸಾಹಂ ಸಮಸ್ತರ್ ಪೊಗಳೆ ತಳರ್ದನಲ್ಲಿಂದಮಾ ಧರ್ಮನಾಥಂ     ೩೩

ವ : ಆ ಪ್ರಸ್ಥಾನಶಿಬಿರದಿಂದಂ ತಳರ್ದಾಗಳ್

ಸಲೆನೆಲನೆಂಬ ಪೆರ್ಮಡದಿಯೆಣ್ದೆಸೆನೋಡಿರದೆಯ್ದೆ ಕೂಡಿಕೊಂ
ಡಲಘುವಿನೋದದಿಂ ಬಿಡದೆ ಪಾಡುತುಮಿರ್ದಪಳೆಂಬ ಮಾಳ್ಕೆಯಿಂ
ಬಲದೊಳಗುಣ್ಮಿಪೊಣ್ಮುವ ಮಹಾಪಟಹಧ್ವನಿ ಲೋಕಮೆಲ್ಲಮಂ
ಬಳಸುತುಮಿರ್ದುದಂದು ಕುವರಂ ನಡೆವಲ್ಲಿ ವಿವಾಹಕಾರಣಂ      ೩೪

ನಿರುಪಮಭದ್ರಜಾತಿಗಜಮಂ ಪದೆದೇಱಿ ಕರಾಗ್ರದಲ್ಲಿ ಭಾ
ಸುರತರಭೂರಿವಜ್ರನಿಶಿತಾಂಕುಶಮಂ ಪಿಡಿದಿರ್ದು ನಾಡೆಯುಂ
ಗುರುವಿನನುಜ್ಞೆಯಿಂದೆ ಪೊಱಮಟ್ಟುಱೆಪೋಪ ಕುಮಾರಕಂ ಪುರಂ
ದರನ ವಿಭೂತಿಯಂ ಪಡೆದು ಸಂತಸಮಂ ಸುಮನರ್ಗೆ ಮಾಡಿದಂ    ೩೫

ವ : ಆ ಕುಮಾರನಿಕ್ಕೆಲದೊಳ್

ಓಜೋಗುಣದೊಡಗೂಡಿದ
ರಾಜದಳಂಕಾರದಿಂದಮೊಪ್ಪುವ ನೃಪರಾ
ರಾಜನ ಬೆಂಬಳಿಸಂದರ್
ಪೂಜ್ಯರ್ತಾನುಗತ ಸಾಧುಶಬ್ದಂಗಳವೊಲ್      ೩೬

ಆ ಕುವರನ ಬಳಿಸಂದರ್
ಬೇಕೆಂಬ ಸಮಸ್ತಭೂಮಿಪಾಲಕರಾಗಳ
ನೇಕರುಮೆಂತು ಮದಾಳಿಗ
ಳೊಯ್ಕನೆ ಪೂಮಾಲೆಯೊಡನೆ ಪೋಪಂತೆವೊಲಂ           ೩೭

ವ : ಮತ್ತಂ

ಆನೆಗಳೊಡ್ಡುಗಳ್ ಪದೆದು ಕಾರ್ಮುಗಿಲೊಡ್ಡುಗಳೆಂಬ ಶಂಕೆಯಂ
ಮಾನವರ್ಗೀವುತುಂ ನಡೆದುಪೋಗುತಮಿರ್ದವವಂದು ಲೀಲೆಯಿಂ
ದಾನಜಲಂಗಳಂ ಕಱೆ ಯುತುಂ ಮಿಗೆಮಿಂಚುವ ಹೊನ್ನಚಾಮರಾ
ನೂನತಟಿಲ್ಲತಾವಳಿಗಳಿಂದಭಿರಂಜಿಸುತುಂ ಸಗರ್ಜಿತಂ    ೩೮

ಪೊಳೆವ ಪರಿವೃತ್ತಕುಂಭಂ
ಗಳಿನೊಪ್ಪಮನಾಂತು ಪಂತಿಗೊಂಡಿಕ್ಕೆಲದೊಳ್
ಬಲದ ಮದಕುಂಜರಂಗಳ
ಬಳಗಂ ಚೆಲ್ವಾಯ್ತು ಮನೆಗಳೋಳಿಯ ತೆಱದಿಂ೩೯

ವ : ಬಳಿಯಂ

ಅತಿಶಯವಾಯುವೇಗಯುತ ತುಂಗತುರಂಗಮಪುಂಗವಂಗಳ
ಪ್ರತತಿಕೆ ಕೂಡೆ ಮುಂದೆ ನಡೆಗೊಂಡುದು ವಾದ್ಯರವಕ್ಕೆ ತಕ್ಕವೊಲ್
ಗತಿಗಳ ಭೇದದಿಂ ಕುಣಿವುತುಂ ಕೆಲವುಂ ಕೆಲವಲ್ಲಿ ಮತ್ತೆ ಸಂ
ಗತಘನಲೀಲೆಯಿಂ ನಡೆವುತಿರ್ದವು ಮಂದಪದಪ್ರಚಾರದಿಂ            ೪೦

ಕಡಿಯಾಣಂಗಳ ಘಾಸಿಯಿಂದೆ ನೊರೆಗಳ್ ತೇರೈಸಲುಂ ಬಾಯಿಯೊಳ್
ಕುಡಿವಂತೆ ಪ್ರತಿವೈರಿಕೀರ್ತಿಗಳನೊಪ್ಪುತಿರ್ದು ಪಾರ್ಶ್ವಂಗಳೊಳ್
ಕಡುಪಿಂ ಬೀಸಿದ ಚೆಲ್ವಹಕ್ಕರಿಕೆಗಳಂ ವ್ಯೋಮಾಧ್ವದೊಳ್ ಪೋಗಲೆಂ
ದಡಸಿಟ್ಟುನ್ನತಪಕ್ಷಕಂಗಳನೆ ತಾಳ್ದೆಯ್ತಂದವಶ್ವಂಗಳುಂ೪೧

ಭೂದೇವಿಯ ಮೆಯ್ಯೊಳ್ ತುರ
ಗಾದಿಗಳಂದಿಕ್ಕೆ ನಖಮುಖಂಗಳನತ್ಯಾ
ಮೋದದೆ ಮನಕಾಂಕುರತತಿ
ಯಾದಂತಿರೆ ನೆಗೆದುದಮಮ ಧೂಳೀಜಾಳಂ      ೪೨

ಯುವರಾಜನ ಗುಣಗಣದಿಂ
ದವನೊಪ್ಪಿರೆ ಪೊಗಳ್ವ ಪಾಠಕರ ತೆಱದಿಂದಂ
ತೀವಿದ ರಥಂಗಳ್ ಪೋದವು
ಜವದಿಂ ಚೀತ್ಕಾರರಾವದಿಂದೆಸೆವುತ್ತುಂ           ೪೩

ನೇಮಿದಾಹಾರ ಪ್ರತಿಯಿಂ
ದಾ ಮಹಿಯೊಡೆಯಲ್ಕೆಯಲ್ಲಿ ಚೆಲ್ಲಿದ ಮುಕ್ತಾ
ಸ್ತೋಮಂ ಪರಿರಂಜಿಸಿದ
ತ್ತಾ ಮಹಿಪನ ಕೀರ್ತಿಬೀಜಮಂ ಬಿತ್ತುವವೊಲ್೪೪

ವರಸೈನ್ಯಪಾದತಾಡನ
ದುರವಣೆಯಿಂ ಪೀಡ್ಕಮಾನಭೂತಳಮಾಗಳ್
ಪರಮರಥಾವಳಿ ಚೀತ್ಕಾ
ರರವಂಗಳ ನೆವದಿನೊದಱುತಿರ್ದವೊಲೆಸೆಗುಂ    ೪೫

ವ : ಮತ್ತಂ

ವಂಶಜಮಪ್ಪ ನಾರಿಯೊಡಗೂಡಿ ವಿಶೇಷಿತದಿವ್ಯಬಾಣಸಂ
ದಂಸಮನಾಂತು ಸಂಹರಣಕಾರಣಮಾಗಿ ದಲುಗ್ರಭಾವದಿಂ
ದಂ ಸಮುಪೇತಮಾದುದರಿನೀಶ್ವರನೆಂಬವೊಲಿರ್ದ ಬಿಲ್ಗಳಂ
ಸಂಸನ ಹಸ್ತದೊಳ್ ಪಿಡಿದು ಬಂದುದು ಧನ್ವಿಪದಾತಿ ಸುತ್ತಲುಂ   ೪೬

ನಡೆದುದು ಪದಾತಿಸೈನ್ಯಂ
ಕಡುಗಲಿಯೆನಿಸಿರ್ದ ಧರ್ಮನಾಥಕುಮಾರಕ
ನೆಡಬಲದೊಳೆಲ್ಲಿಯುಂ ಸಂ
ಗಡಿಸಿದ ವಜ್ರಾಂಗಿ ಜೋಡುಗಳಿನೊಪ್ಪುತ್ತುಂ    ೪೭

ಧವಳಚ್ಛತ್ರಂಗಳೆಂಬ ಪ್ರಬಳತರ ಮಹಾಫೇನಪಿಂಡಂಗಳಿಂದಂ
ಪ್ರವಿಭಾಸ್ವತ್ಸಂಚಳ ಚಾಮರವಿತತಿಗಳೆಂಬೂರ್ಮಿವೃಂದಂಗಳಿಂದಂ
ನವರತ್ನಶ್ರೇಣಿಯಂ ಪೇಱಿದುರುಕರಿಗಳೆಂಬುದ್ಬಹಿತ್ರಂಗಳಿಂದಂ
ಭವದುದ್ಘೋಷಂಗಳಿಂದಂ ಮಹಿಮೆವಡೆದದೊಪ್ಪಿತ್ತು ಸೇನಾಸಮುದ್ರಂ     ೪೮

ಕಡುಹೀಲಿಯ ಝಲ್ಲರಿಗಳ
ಗಡಣಮನಾ ನಡೆವ ಕುದುರೆಗಳ ಕೆಲದೊಳ್
ಪಿಡಿಯಲ್ಕೆ ಸೈನ್ಯವಾರ್ಧಿಯೊ
ಳಡಸಿದ ಹಾವಂಚೆಯಂತಿರದು ಕಣ್ಗೆಸೆಗುಂ       ೪೯

ಅನ್ಯರ ತೇಜಮನೀತಂ
ಮನ್ನಿಪನಲ್ಲೆಂದು ಬಗೆದು ಬೆದಱಿದ ತೆಱದಿಂ
ಕೆನ್ನಂ ವಿಜಯಧ್ವಜಸಂ
ಛನ್ನ ಪದಾವಳಿಯಿನರ್ಯಮಂ ಮಱೆಗೊಂಡರ್           ೫೦

ಬಲಘಟ್ಟನದಿಂ ಪುಟ್ಟಿದ
ಖಳಧೂಳಿಯಿನಾಗಸಂ ಮಲೀಮಸಮಾಗಲ್
ಸಲೆರಜನೀಶಂಕೆಯಿನು
ಜ್ಜ್ವಳಕರಮಂ ಕೆದಱಿತಿಲ್ಲ ರವಿ ದಿಕ್ಕುಳದೊಳ್           ೫೧

ವ : ಮತ್ತಮಲ್ಲಿ

ತುರಗಖುರಾಗ್ರಘಟ್ಟನ ಸಮುತ್ಥಮಹಾಘನಧೂಳಿಜಾಳಕಂ
ಕರಿನಿಕರಂಗಳುತ್ಕಟ ಕಟಸ್ಥಳದಿಂ ಸುಳಿಯುತ್ತುಮಿರ್ದ ಪೀ
ವರಮದವಾರಿಧಾರೆಗಳಿನಂದುಪಶಾಂತಿಯನೆಯ್ದಲಾಕ್ಷಣಂ
ಪರಿಕಿಸಿ ನೋಡಿ ಕಂಡರುಱೆ ಬಟ್ಟೆಗಳೊಳ್ ನಡೆವಾ ಜನಂಗಳಂ      ೫೨

ವ : ಮತ್ತಮೊಂದೆಡೆಯೊಳ್

ಒದಱುತ್ತುಂ ಗರ್ಘರೋದ್ಘೋಷದಿನುಱೆ ಕೊರಳಂ ನೀಳಮಾಗೆತ್ತಿ ಮೇಗಂ
ಪದೆಪಿಂ ನೋಡುತ್ತುಮೆಲ್ಲಾದೆಸೆಗೆ ಪರಿಯುತುಂ ಪೊತ್ತುಕೊಂಡಿರ್ದ ಪೇಱಂ
ಬೆದಱೀಡಾಡುತ್ತಮೊಂದೊಟ್ಟೆಯ ಮಱಿ ಪಿರಿದುಂ ಕಾಡಿಮಾಡುತ್ತುಮಿರ್ದ
ತ್ತದು ಹಾಸ್ಯಾಶ್ಚರ್ಯಮಂ ನೋಡುವ ಸಕಳಜನಾಸ್ಯಂಗಳೊಳ್ ಚೋದ್ಯದಿಂದಂ       ೫೩

ಕಂಡು ಮದೇಭಮಂ ನಡೆವ ಬಟ್ಟೆಯೊಳಾದ ವಿಶೇಷಭೀತಿಯಿಂ
ಭಂಡಿಯ ಹೂಡಿದೆತ್ತುಗಳವುಂ ಪರಿದೋಡುವ ಬೇಗದಲ್ಲಿ ಕೀಲ್
ಖಂಡಿಸಿ ಗಾಲಿ ಬೇಳೆ ಘೃತಪೂರ್ಣಘಟಂಗಳವೆಯ್ದೆ ಬೀಳ್ದು ಸಾ
ಲ್ಗೊಂಡೆಡದಲ್ಲಿ ಮಾಡಿದುವು ದುಃಖಮನಾ ವ್ಯವಹಾರಿಗಾಕ್ಷಣಂ  ೫೪

ಕರಿಪೂತ್ಕಾರಮನಿದ್ದಂ
ತಿರೆ ಕೇಳ್ದತಿಭೀತಿಗೊಂಡು ಹಮ್ಮೈಸಿಯೆ ಪಾ
ಮರಿ ಪೊತ್ತ ಮೊಸರ ಮಡಕೆಯ
ನಿರಬೀಳಿಸಿಯೊಡೆದು ತೊಲಗಿದಳ್ ನೃಪಪಥದಿಂ           ೫೫

ವ : ಮತ್ತಮೇಕಪ್ರದೇಶದೊಳ್

ಪುರರಭಸಕ್ಕಂಜಿದ ವೇ
ಸರಿ ಬೇಗದಿನೋಡಲುಟ್ಟವಸ್ತ್ರಂ ತೊಲಗು
ತ್ತಿರಲವಯವಂಗಳುಂ ತೋ
ಱಿರಲೇಱಿದ ತರುಣಿ ನಗಿಸಿದಳ್ ಸೈನಿಕರಂ      ೫೬

ಪಿರಿದಪ್ಪ ಭಾರದಿಂದಂ
ಪರಿಕುಬ್ಜಿತದೇಹರಾದ ಕಾವಡಿಕಾಱರ್
ಭರದಿಂದ ಮುಂದೆ ಪೋಪರ
ನುರವಣೆಯಿಂ ಪಿಂದೆಮಾಡಿ ಪೋದರ್ ಬೇಗಂ   ೫೭

ವ : ಆ ಪ್ರಸ್ತಾವದೊಳ್

ಪಳಿಕಿನ ಕುಟ್ಟಿಮ ಧರಣೀ
ತಳದೊಳ್ ಮಾರ್ಪೊಳೆದ ಸೈನ್ಯಮೊಪ್ಪಿತ್ತು ರಸಾ
ತಳದಿಂ ಬರುತ್ತುಮಿರ್ಪು
ಜ್ಜ್ವಳಭವನಾಮರರ ಸೈನ್ಯಮೆಂಬಂತೆವೊಲಂ   ೫೮

ತರುಣೀವೃತ್ತಾಂತಮನಾ
ದರದಿಂದಂ ಕೇಳ್ದು ದಕ್ಷಿಣಕ್ಕಭಿಮುಖನಾ
ಗಿರದೆ ಹರಿಸೈನ್ಯಪರಿವೃತ
ನರಸಂ ಶ್ರೀರಾಮನಂತೆ ಪೋಗುತ್ತಿರ್ದಂ           ೫೯

ವ : ಇಂತಾ ಕುಮಾರನತೀವಕೌತುಕಂಬೆತ್ತು ಮಹಿಮೆವೆರಸು ಪರಿಪರಿಯ ಬಹುವಿಧ ನವೀನರಚನಾತಿಶಯದಿಂ ವಿಶೇಷಿತಮಾದ ಪುರಗೋಪುರದ್ವಾರಮಂ ಮುಟ್ಟೆವರ್ಪುದುಂ

ಎಡೆವಿಡದೆ ಪೋಪ ಸೈನ್ಯದ
ನಡುವಣದಾಗಿರ್ದು ಕೂಡೆ ಪಿಂದುಂ ಮುಂದುಂ
ಕಡುದೊಡ್ಡಿತಾಗಿ ಪೊಱಮಡು
ವೆಡೆಯೊಳ್ ಮಿಗೆ ಮಡದಿಯಂತೆ ಪಡೆದುದು ಚೆಲ್ವಂ      ೬೦

ವ : ಅಂದಾ ಸೈನ್ಯಂ ಪುರವಿಭೂತಿಯಿಂ ಪುರದ್ವಾರಮಂ ಪೊಱಮಟ್ಟು ಪಸರಿಸಿ ನಡೆವುದುಂ

ಓಲೈಸಲೆಂದು ದಶದಿ
ಕ್ಪಾಲಕರ ಪುರಂಗಳೆಯ್ದಿ ಬಂದಾವರಿಸಿದ
ವೊಲೊಪ್ಪುವ ಪೊಱವೊಳಲಂ
ಮೇಲೆನಿಪ ಕುಮಾರಕಂ ನಿರೀಕ್ಷಿಸಿತಿರ್ದಂ           ೬೧

ವ : ಇಂತುಱುವ ಸಿರಿಯಿಂದಂ ನೆಱೆಮೆಱೆವ ಪೊಱವೊಳಲಂ ಕುಮಾರಕಂ ನೋಡಿ ನೋಡಿ ಕೊಂಡಾಡುತ್ತುಂ ಕಿಱಿದಂತರಂ ಪೋಪುದುಂ

ವಿಮಲಾಂಬರಧಾರಿಗಳಂ
ರಮಣೀಯ ವಯೋವಿಶೇಷ ಸಂಶೋಭಿಗಳಂ
ಸಮುಪಾತ್ತಪಯೋಧರ ಸಂ
ಭ್ರಮಿಗಳನಂಗನೆಯರೆಂಬಿನಂ ದಿಕ್ಕುಗಳಂ          ೬೨

ನೋಡುತ್ತುಂ ಪೋದರ ಮಿಗೆ
ನಾಡೆಱೆಯಂ ಮತ್ತೆಮತ್ತೆಯತ್ಯಾದರದಿಂ
ಕೋಡುವ ತೆಂಬೆರಲಾಗಳ್
ತೀಡಿದುದತಿಮಿತ್ರನೆಂಬಿನಂ ನೃಪಸುತನಂ         ೬೩

ವ : ಮತ್ತಮಾಗಳ್ ಸಂದಣಿಸಿ ತಿಂತಿಣಿಗೊಂಡು ಪೋಪ ಶಿಬಿಕಾಕದಂಬಂಗಳಿಂ ಪರಿನಿಚಿತಾಂತರಮಾದ ಕಟಕಂ ನೂತನಪೋತಬ್ರಾತಂಗಳಿಂದಂ ತುಂಬಿದಂಬುಧಿಯೆಂಬಿನಂವ ಶೋಭಾವಲಂಬಿಯಾಗಲತ್ತಲುಮಿತ್ತಲುಂ ಮೊತ್ತಂಗೊಂಡು ಕಡುವೇಗದಿಂ ಸಂಗಡಿಸಿ ನಡೆವ ಹಸ್ತ್ಯಶ್ವರಥಪದಾತಿಲಕ್ಷಣ ಚಾತುರ್ದಂತಬಲಂಗಳುಂ ಪ್ರವಾಹಂಗಳೆಂಬಂತೆ ಬಹುಮುಖಂಗಳಿಂ ಸುತ್ತಲುಂ ಬಿತ್ತರಿಸಿ ನಡೆವುತ್ತುಮಿರೆ

ಒಳಕೊಂಡು ದಲುತ್ತಮರಂ
ಖಳತತಿಯಂ ಪೊಱಗುಮಾಡಿ ಸಜ್ಜನರೆಂಬಂ
ತಿಳೆಯೊಳ್ ಚೆಲ್ವಂ ತಾಳ್ದೂರ್ಗಳ
ಬಳಗಮನರಸು ನೋಡಿ ನಲಿಯುತ್ತಿರ್ದಂ         ೬೪

ವ : ಆಗಳ್

ತುಂಬೀಫಲಸಂತತಿಗಳ
ಲಂಬನದಿಂ ತಗ್ಗಿದೂರ ಬೇಲಿಯ ಮಱೆಯಿ
ರ್ದಂಬುಜಮುಖಿಯರ್ ಮಿಗೆ ಕ
ಣ್ತುಂಬಿ ನಿರೀಕ್ಷಿಸುತುಮಿರ್ದರಾ ನೃಪಬಲಮಂ  ೬೫

ರಲ್ಲಕರಂಜಿತತನುಗಳ್
ಗೊಲ್ಲರ ಮೊತ್ತಂಗಳೆಯ್ದೆ ಕಾಣಿಕೆಯಂ ತಂ
ದಲ್ಲಿರಿಸಿದ ಪಾಲ್ಮೊಸರಂ
ಸಲ್ಲಲಿತಾಖ್ಯಮನೆ ನೋಡಿ ತಣಿಸಿದನವರಂ     ೬೬

ವ : ಮತ್ತಂ ಮೂಡಲ್ ಗಂಗಾಸರಿತ್ತೀರಮೇ ಮೇರೆಯಾಗಿ ಪಡುವಲ್ ಸಿಂಧೂನದೀಪಾರ ಪರ್ಯಂತಂ ಬಡಗಲ್ ವಿಜಯಾರ್ಧಪರ್ವತಮವಧಿಯಾಗಿ ತೆಂಕಲ್ ಸಿಂಹಕಾ ದ್ವೀಪಮೇ ಸೀಮೆಯಾಗಿ ಮಧ್ಯಪ್ರದೇಶಂಗಳೊಳೆಲ್ಲಂ ತುಂಬಿ ಪರಿವರ್ತಿಸುತ್ತು ಮಿರ್ಪ ಬಹಳತರದುರ್ವಹವಾಹಿನೀನಿವಹ ಪರಿಪೂರಿತಮಾದ ಸೈನ್ಯಸಮುದ್ರಂ ಮೇರೆಯಂ ಮೀಱುತ್ತುಮಿರ್ದುದೆಂಬಂತೆತ್ತಲುಂ ಪಸರಿಸಿ

ಬೆಟ್ಟದ ಘಟ್ಟದಿಟ್ಟೆಡೆಯೆ ಬಟ್ಟೆಗಳಲ್ಲಿ ನದೀನದಂಗಳೊಂ
ದೊಟ್ಟಜೆಯಾದೆರಳ್ತಡಿಗಳಲ್ಲಿಯುಮೂರ್ಗಳ ಸುತ್ತಲೆಲ್ಲಿಯುಂ
ದಟ್ಟಮುಮಾಗಿ ಕೂಡಿ ನಡೆವುತ್ತುಮದಿರ್ದುದು ಸರ್ವಸೈನ್ಯಕಂ
ಪುಟ್ಟಿಸುತುಂ ನಿರೀಕ್ಷಿಪರ ಚಿತ್ತದೊಳಚ್ಚರಿಯಂ ದಲಾಕ್ಷಣಂ         ೬೭

ವ : ಇಂತು ಸದಾಶ್ರಿತನಪ್ಪಾ ಕುಮಾರಂಗಂ ಸದನಾಶ್ರಿತಮಪ್ಪಾ ಪುರಕ್ಕಂ ರಮಣೀಯಾನನ ಶ್ರೀಕನಾದಾ ಯುವರಾಜಂಗಂ ಪರಿಧೃತಕಾನನಶ್ರೀಕಮದಾ ನಗರಕ್ಕ ಮಂತರಂ ಪಿರಿದುಂ ದೂರಮಾಗೆ ಮುಂದೊಂದೆಡೆಯೊಳ್

ನೊರೆಗಳ ಪಿಂಡು ಮಂಡಳಿಸಿ ತಾರೆಗಳಂತಿರೆ ಚೆಲ್ವನಾವಗಂ
ಧರಿಸೆ ತಟದ್ವಯಸ್ಥಹರಿನೀಳಶಿಲಾತಳ ಕಾಂತಿ ಸಂತತ
ಸ್ಫುರಣವಿಶೇಷರಂಜನದೆ ಕೃಷ್ಣತರಚ್ಛವಿಯಾಗೆ ತೋಯಮಂ
ಬರತಳದಂತಿರೊಪ್ಪಿದುದು ಗಂಗೆ ತರಂಗಿಣಿ ತಾಳ್ದಿ ಮೀನಮಂ      ೬೮

ಎರಡುಂ ತಡಿಯೊಳ್ ಪುಟ್ಟಿದ
ತರುಗಳ್ ಮಾರ್ಪೊಳೆದು ನೀರೊಳೊಪ್ಪಿದವಂದು
ದ್ಧುರರವಿತಾಪಕ್ಕಾಱದೆ
ಭರದಿಂ ಸ್ನಾನಾರ್ಥಮಲ್ಲಿ ಮುಳ್ಗಿದ ತೆಱದಿಂ   ೬೯

ಮಕರಂಗಳ ಫೂತ್ಕಾರ
ಪ್ರಕಟನದಿಂ ಮೇಗೆ ನೆಗೆವುತಿರ್ದ ಪಯೋಬಿಂ
ದುಕದಂಬಕದಿಂ ಮಾಳ್ಪುದು
ನಿಕಟದ್ರುಮತತಿಗಳಲ್ಲಿ ಪುಷ್ಪಶ್ರೀಯಂ           ೭೦

ವಿಂಧ್ಯಾಚಳಮೆಂಬುರು ಧರ
ಣೀಂದ್ರಂ ಕಳಚಿದೊಡೆ ಬಿಳ್ದು ಕೆಲದೊಳಗಿದ್ದತಿ
ರುಂದ್ರ ನಿರ್ಮೋಕದಂದದಿ
ನಂದು ಕರಂ ಗಂಗೆ ಕಣ್ಗೆ ಪಡೆದುದಗುರ್ವಂ       ೭೧

ವ : ಮತ್ತಮಾ ಗಂಗಾತರಂಗಿಣೀ ತುಂಗವಾತೂಳಿಕಾ ಸಂಗದಿಂದಳ್ಳಾಡುತ್ತು ಮಿರ್ದ ತೀರದ್ವಯಪರ್ಯಂತ ಕಾಂತಾರತರುನಿಕರಶಾಖಾವಳಯಾಗ್ರಂಗಳಿಂದು ದಿರ್ದು ಬಿಳ್ದು ತೆರೆಮಾಲೆಗಳ ವೇಗವಶದಿಂದೊಂದಾಗಿ ಮಂದೈಸಿ ತೇಂಕುತ್ತುಂ ತೇರೈಸಿದ ಪೂಗಳ ಬಳಗದಿಂ ಕಡುಬಿಳಿದಾಗಿ ವಿಯದ್ಗಂಗಾಭಂಗಿಯನಂಗೀಕರಿಸುತ್ತುಂ ಮತ್ತ ಮೊಂದೆಡೆಯಲ್ಲಿ ವನ್ಯಮತ್ತಮಾತಂಗಯೂಥಂಗಳ್ ಬಂದು ಜಳಕೇಳೀವಿನೋದಾರ್ಥಂ ತದವಗಾಹ ನಂಗೆಯ್ದು ಜಳಮಂ ವಿಲೋಡಿಸಿ ಮುಳ್ಗಿದ ಪದದೊಳಪಾರಮದ ಧಾರಾಪೂರ ಪರಿವ್ಯಾಪ್ತಿಯಿಂದಂ ಕಪ್ಪಾಗಿ ಕಾಳಿಂದೀನದಿಯ ಶಂಕೆಯನಂಕರಿಸುತ್ತುಂ ಮತ್ತಮೊಂದೆಡೆಯಲ್ಲಿ ಮರಾಳಮರಾಳಿಕಾಲೀಲಾವಿನೋದದಿಂದಾದ ಘಾಸಿಯಿಂದಳ್ಳಾ ಡುತ್ತುಮಿರ್ದ ಮೃಣಾಳನಾಳಮನುಳ್ಳ ಮರಳ್ದರಳ್ದರವಿಂದವೃಂದಪರಿನಿಷ್ಯಂದಮಾನ ಮಕರಂದಬಿಂದು ಸಂದೋಹಮೊಂದಿ ಸುತ್ತಲುಂ ಪರಿಕೀಲಿಸೆ ಪಿಂಗಲವರ್ಣದಿ ಸೌಂದರಮಾಗಿ ಭಂಗಾರದ ಘಟ್ಟಿ ಕರಗಿ ಪರಿವ ಹೇಮರಸರೂಪಪ್ರವಾಹಮೆಂಬಂತೆ ಸೊಗಸನಜನಿಸುತ್ತುಮಿರೆ

ಗಂಭೀರಾವರ್ತವೃತ್ತಿ ಪ್ರವಲವಶಲುಟತ್ಪೀನಪಾಠೀನಯೂಥಃ
ಕುಂಭೀರ ಕ್ಷುದ್ರ ಶಂಖೋನ್ಮಕರ ಕಮಠ ಶಂಭೂಕಭೇಕ ಪ್ರವೇಕೋ
ಜ್ಜೃಂಭಂ ರಂಗತ್ತರಂಗ ಪ್ರಕಟನಟನರಂಗಂ ಮಹಾಘೋರಘೋಷಾ
ಸಂಭೀಳಂ ಕಣ್ಗಗುರ್ವಂ ಪಡೆದುದು ಪಿರಿದುಂ ತುಂಗಗಂಗಾಪ್ರವಾಹಂ          ೭೨

ಸುತ್ತಂ ನೋಳ್ಪಡೆ ಚೆಲ್ವುವೆತ್ತ ಪುಳಿನಸ್ಥಾನಂಗಳಲ್ಲಿರ್ದು ಲೀ
ಲಾತ್ಯುತ್ಕೃಷ್ಟತೆಯಿಂದೆ ಪಾಡುವ ಪುಳಿಂದೀ ಗೀತರಾಗಂಗಳಿಂ
ದೆತ್ತಂ ಭೋರೆನುತುಂ ಮನೋಹರತೆಯಂ ತಾಳ್ದಿತ್ತದಾಶ್ಚರ್ಯದಿಂ
ಮತ್ತಾ ಗಂಗೆಯ ಪೋಲ್ವೆಗಿಲ್ಲ ತೊ ಠಿಗಳ್ ವಿಶ್ವಂಭರಾ ಭಾಗದೊಳ್        ೭೩

ಈ ವಾಹಿನಿಯ ಸಮೀಪ
ಕ್ಕಾ ವಾಹಿನಿ ಬಂದೊಡುಚಿತವಚನಮನದು ಸಂ
ಭಾವಿಸಿ ನುಡಿವಂತಿರ್ದುದು
ತೀವಿದೆರಳ್ತಡಿಯ ವೃಕ್ಷಪಕ್ಷಿಧ್ವನಿಯಿಂ            ೭೪

ವ : ಇಂತತ್ಯುತ್ಕಟಮಾದ ತತ್ತಟಿನೀನಿಕಟತಟಿನಿಕಟಪ್ರದೇಶಮನಾ ಸೈನ್ಯಂ ತೊಟ್ಟನೆ ಮುಟ್ಟೆವರ್ಪುದುಂ

ಪಱುಗೊಲಂ ಕೆಲರೇಱಿ ಗುಂಡಿಗೆಗಳಿಂದೀಸಾಡಿ ಮತ್ತಂ ಕೆಲರ್
ನೆಱೆ ತೆಪ್ಪಂಗಳನೇಱಿ ಮತ್ತೆ ಕೆಲರಂ ಮಾತುಂಗಯೂಥಂಗಳಂ
ತಱಿಸಂದೇಱಿ ಕೆಲಂಬರುಂ ತುರಗಮಂ ಬಂದೇಱಿ ಮತ್ತಂ ಕೆಲರ್
ತೊಱೆಯಂ ಪಾಯ್ದುದಶೇಷ ಸೈನಿಕಜನಂ ಕೌತೂಹಳಂ ತೋರ್ಪಿನಂ          ೭೫

ವ : ಆಗಳ್

ವರಶುಂಡಾಲವಿಗಂಡಮಂಡಲ ಗಲದ್ದಾನಾಂಬುಧಾರಾ ನಿರಂ
ತರಪೂರಂಗಳಿನುನ್ನತ ಶ್ರಮತುರಂಗಬ್ರಾತ ಕಿಂಚಿಚ್ಚಲೋ
ದ್ಧುರ ವಕ್ತ್ರಂಗಳಿನೆಯ್ದೆ ಬಿಳ್ದ ಘನಫೇನೋತ್ಪಿಂಡಖಂಡಂಗಳಿಂ
ಪಿರಿದುಂ ವಾಹಿನಿ ಪೆರ್ಚಿದತ್ತು ಸಮನಾಮಪ್ರೀತಿಯೆಂದೆಂಬಿನಂ       ೭೬

ವ : ಅಂತು ಮುಂಕುಡಿಯ ಸೇನಾಜನಂಗಳೆಲ್ಲಂ ತಂತಮ್ಮಿಚ್ಛಾನುಕೂಲ ವರ್ತಿಗಳಾಗಿ ತೊಱೆಯಂ ದಾಂಟುತ್ತುಮಿರಲ್ ಮತ್ತಮಾ ಧರ್ಮನಾಥಕುಮಾರಂ ಜಾಹ್ನವೀಜಳ ನೈರ್ಮಲ್ಯಮಂ ನೋಡಿನೋಡಿ ಕೊಂಡಾಡುತ್ತುಂ ತತ್ತೀರಮನೆಯ್ದೆವರ್ಪುದುಂ

ಒಡೆಯಂ ತಡಿಯೊಳ್ ನಿಲೆ ಕೈ
ಮಡಗದೆ ಪಱುಗೋಲನಂಬಿಗಂ ಸಾರ್ಚಿದೊಡಾ
ಗಡೆಯದಱಿಂದಂ ತೊಱೆಯಂ
ಕಡುಬೇಗದೆ ದಾಂಟಿಪೋಗಿಯಡರ್ದಂ ತಡಿಯಂ೭೭

ವ : ಇಂತು ವಿಜ್ಞಾನನೌಕೆಯಿಂದಂ ತೃಷ್ಣಾನದಿಯನುತ್ತರಿಸುವಂತೆ ಕುವರಂ ತರಣಿಯಿಂ ಗಂಗಾತರಂಗಿಣಿಯನುತ್ತರಿಸುವುದುಂ ಬಳಿಯ ಸಮಸ್ತಸೈನ್ಯ ಜನಸಮೂಹಂಗಳೆಲ್ಲಂ ಪಾಯ್ದುಪೋಗಿಯಪರತೀರದೊಳ್ ನೆರೆದು ನಿಲಲೊಡಂ

ಜಡರೂಪೆ ತ್ರಿಪಥೆಗೆಯ್ದಿದ
ಱೊಡನಿರ್ಪುದನುಚಿತಮೆಂದು ತದ್ವಾಹಿನಿಯಂ
ಬಿಡೆ ಬೀಸಾಡಿಯೆ ದೂರಂ
ಗಡ ಪೋದುದಸಂಖ್ಯಪಥಗೆ ವಾಹಿನಿನೃಪನಾ   ೭೮

ವ : ಮತ್ತಂ ವರೂಥಿನೀಸನಾಥನಪ್ಪಾ ಧರ್ಮನಾಥಕುಮಾರಂ ಗಂಗೆಯಂತೆ ಸಮಕರ ಮಾದನೇಕದೇಶಮಂ ದಾಂಟಿ ಕಿಱಿದಂತರಂ ಪೋಪುದುಮುಂದೊಂದೆ ಡೆಯೊಳ್ ಕಱಂಗಿ ಕತ್ತಲಿಸುತ್ತುಮಿರ್ಪ ವಿಂಧ್ಯಾಟವಿಯೆಂಬಗಣ್ಯಮಹಾರಣ್ಯಸ್ಥಳಮುಂ ಕಣ್ಬೊಲನಾಗೆ

ಕಡುನೀಳ್ದದ್ರುಮಷಂಡಮಂಡನ ಮಹಾಶಾಖಾಲೇಖಾಲೇಖೆಯಿಂ
ಕೊಡುತುಂ ಚುಂಬನಮಂ ವಿಯನ್ಮುಖಕೆ ಭೂರಿಧ್ವಾಂತದಿಂ ಕೂಡೆ ಭಿ
ಮ್ಮಿಡುತುಂ ಕ್ರೂರಮೃಗಂಗಳಿಂದೊಡರಿಸುತ್ತುಂ ಭೀತಿಯಂ ಸುತ್ತಲುಂ
ಪಡೆದತ್ತದ್ಭುತಮಂ ತಿರೋಹಿತದಿಶಾನೀಕಾನನಂ ಕಾನನಂ            ೭೯

ಅತಿವಿಷಮವಿಷಧರಂ ಸಂ
ಯುತ ಭೀಷಣ ವನಚರಪ್ರಚಾರಂ ಪರಿವಿ
ಸ್ತೃಥ ವಿದ್ರುಮಮುತ್ಕಳಿಕಾ
ಭೃತಮಾಗಿ ಸಮುದ್ರದಂತೆ ವನಮೆಸೆದಿರ್ಕುಂ     ೮೦