ವ : ಮತ್ತಮಾ ವನಂ ಮಹೇಶ್ವರನಂತೆ ವಿಶಾಖಾವಭಾಸಿತಮುಂ ಕ್ಷತ್ರಿಯನಂತೆ ವಿಚಿತ್ರಪತ್ರಸಮಾಲಕ್ಷಿತಮುಂ ನಕ್ಷತ್ರಪ್ರಕರದಂತೆ ಮೂಲಸಮುಲ್ಲಾಲಿತಮುಂ ಚಾಟುಕಾರ ಪಟುಶಠವಿಟನಂತೆ ಕುಶಲಪಥಸನಾಥಮುಂ ಪಾಂಡವಕುಲದಂತರ್ಜುನಾಡಂಬರಪರಿ ಮಂಡಿತಮುಂ ಸುದತೀಜನದಂತೆ ಮದನಸಮುಜ್ಜೃಂಭಣ ಸಂಕಳಿತಮುಮ ದೇವೇಂದ್ರ ನಂತೈರಾವತ ವಿರಾಜಿತಮುಮೆನಿಪುದಂತುಮಲ್ಲದೆಯುಂ

ತಾಳದ ಮೇಳದಿಂದೆಸೆವುತಿರ್ದುದು ನಟ್ಟುವನಂತೆ ತೇಂಗಿನೊಂ
ದೋಳಿಯನೊಪ್ಪಿದತ್ತು ತಣಿವುಂಡವನಂತಿರೆ ಬನ್ನಿಯಿಂ ಸಮು
ಲ್ಲಾಲಿತಮಾಯ್ತು ತಾಂ ಕರೆವನಂತಿರೆ ತಂಡಸದಿಂದೆ ಚೆಲ್ವುಮಂ
ಪಾಲಿಸಿದತ್ತು ಹೇಮಕರನಂತೆ ವನಂ ಸಮುಪಾಶ್ರಿತಾವನಂ೮೧

ಆ ವನದ ವೃಕ್ಷಚಯ ಶಾ
ಖಾವಳಯಾಗ್ರಂಗಳಲ್ಲಿ ಶಶಿರವಿಬಿಂಬಂ
ಪೂವಿನ ಪಣ್ಣಿನ ಗೊಂಚಲ
ಭಾವಮನಾಗಿಸುತುಮಿರ್ದುದಖಿಳಜನಕ್ಕಂ       ೮೨

ವ : ಇಂತು ಕಡುಚೋಚಿಗಂಬಡೆದ ಪೇರಡವಿಯಂ ನೀಡುಂನೋಡುತ್ತ ಮೆಡಬಲ ದವರೊಡನೆಯದಂ ಕೊಂಡಾಡಿನುಡಿಯುತ್ತಮಾ ನಾಡೆಱೆಯಂ ತಣ್ಣೆಳಲಿಂ ತಿಣ್ಣಮಾದರಣ್ಯಾವನಿಯೊಳಗಂ ಪೊಕ್ಕು ನಡೆವಾಗಳ್

ಚಮರಿಯ ಕೂದಲಂ ಕರಿಯ ದಂತಮುಮಂ ಕಡುಚೆಲ್ವ ಜೇನತು
ಪ್ಪಮನೆಳೆಸಿಂಗದೊಂದು ಮಱಿಯಂ ಹೊಸಹೂತಿಯ ಬೆಕ್ಕುಮಂ ಮೃಗೀ
ಸಮಿತಿಯನೊಲ್ದು ಕಾಣಿಕೆಯನಿತ್ತ ವನೇಚರರಾಜರಂ ಮಹೀ
ರಮಣಕುಮಾರಕಂ ಪಿರಿದುಮನ್ನಿಸಿ ತುಷ್ಟಿಯನುಂಟುಮಾಡಿದಂ   ೮೩

ವ : ಅನಂತರಮಾ ಮಾನವಮೀನಕೇತನವರವರಿಂಗವಂ ಕೊಟ್ಟು ಕಾನನದ ಕಡುಚೆಲ್ವನಡಿ ಗಡಿಗವಲೋಕಿಸುತ್ತುಂ ಸಡಗರದಿಂದಂ ಮುಂದೆಪೋಗುತ್ತುಮಿರ್ಪುದುಮ ದಱೊಳೊಂದೆಡೆಯೊಳ್

ಹೊನ್ನೆ ಸುರಹೊನ್ನೆ ನೇಱಿಲ್
ಬನ್ನಿ ಬೆಳಂಬೀಡೆ ಹೊಂಗೆ ಹುಱಿಗಿಲ್ ತಱಿಯಂ
ಚೆನ್ನತ್ತಿ ಮತ್ತಿ ಹುಣಿಸೆ ಬಿ
ದಿರ್ನೆಲ್ಲಿ ತಮಾಳಿ ಚಿಲ್ಲಮರನೆಸೆದಿಕ್ಕುಂ        ೮೪

ನೆಲ್ಲಿಯ ಮರಂಗಳೋಳಿಗ
ಳಲ್ಲಿ ಕರಂ ತೋರ್ಪ ತೋರಗಾಯ್ಗಳ ಮೊತ್ತಂ
ತಲ್ಲಜಶೋಭಾವಿಭವದಿ
ನೆಲ್ಲರ ಕಣ್ಗೀವುತಿರ್ಪುದತಿಶಯಸುಖಮಂ       ೮೫

ಸುಮನೋವಿಳಾಸಮೇನುಂ
ಸಮನಿಸದುಱೆಕಾಯ್ತೊಡಂ ದಲತ್ತಿಯ ಮರನು
ತ್ತಮರಿಂಗಸೇವ್ಯಮಾದುದು
ಸುಮನಂ ದೊರೆಕೊಳ್ಳದಿರ್ದೊಡಲ್ತುಪಯೋಗಂ           ೮೬

ಹೊದಱಾಗಿರ್ದೇಳಾಲತೆ
ಪುದಿದು ಕಱಂಗಿರ್ದ ಮೆಣಸಿನೊಳ್ಬಳ್ಕಿ ತಳಿರ್
ಕೆದಱಿರ್ದ ಮೊಲ್ಲೆಪೂವಿಂ
ಪೊದವಿಸಿದದಿರ್ಮುತ್ತೆಯಲ್ಲಿ ಕರಮೆಸೆದಿರ್ಕುಂ೮೭

ಕತ್ತಲೆಯೋಡಿಪೋಗಿ ಪುಗಲಾ ಗಹನಾಂತರಮಂ ತಮೋರಿ ಬೆಂ
ಬತ್ತಿಬರುತ್ತುಮಿರ್ದು ಪಿಡಿಯಲ್ಕನುಗೆಯ್ಯೆ ವನಾಳಿ ಸಾರ್ದರಾ
ಪತ್ತನಪೋಹಿಸಲ್ ಬಗೆದು ಮಾರ್ಮಲೆದೆತ್ತಿದ ಭಲ್ಲೆಯಂಗಳಂ
ತೆತ್ತಲುಮಿರ್ದ ದರ್ಭೆಗಳಿಗಂಜಿದವೋಲ್ ಪುಗಿಸಂ ಕರಂಗಳಂ          ೮೮

ನೆಱೆಬಿಳ್ದ ಬಿದಿರ ಮೊತ್ತಂ
ಬಿಱುಗಾಳಿ ಕಡಂಗಿ ಪೊಯ್ಯಲಳ್ಳಾಡುತ್ತಂ
ದುಱೆ ಗೀಕುಗೀಕುಗೀಕೆಂ
ದೊಱಳಿ ಕರಂ ಝಂಕಿಪಂತಿರಿರ್ದುದು ಬೆಳಗಂ    ೮೯

ವ : ಮತ್ತಮಲ್ಲಿ

ಅತಿಶಯಭದ್ರಜಾತಿಗಜಸಂಕುಳಮೊಂದೆಡೆಯಲ್ಲಿ ಮತ್ತಮು
ನ್ನತಮೃ‌ಗಜಾತಿವಾರಣಗಣಂಗಳವೊಂದೆಡೆಯಲ್ಲಿ ಮತ್ತೆಯುಂ
ಕ್ಷಿತಿನುತಮಂದ್ರಜಾತಿಕರಿವೃಂದಮದೊಂದೆಡೆಯಲ್ಲಿ ಕೂಡೆ ಸಂ
ಗತಿಯೊಳಮಲ್ಲಿಗಲ್ಲಿಗೆ ಗಜಂಗಳವಿಂಡುಗಳಿರ್ದವೆಲ್ಲಿಯುಂ        ೯೦

ತನ್ನಯ ಕರಪುಷ್ಕರದಿಂ
ಬೆನ್ನಂ ತೊಡೆದೂಡಿ ಮೊಲೆಯನಿತ್ತೊಳ್ದಳಿರಂ
ಮನ್ನಿಸಿ ಪಿಡಿ ನಿಜಶಿಶುವಂ
ಚೆನ್ನಾಗಿಯೆ ನಡಯಿಸುತ್ತುಮಿರ್ದುದು ನೆಳಲೊಳ್         ೯೧

ಪಿಡಿಯ ಮುಂದೋಡಿ ಪೋದುದು
ಕಡುಪಿಂದರೆಗಚ್ಚಿ ತದುಕಿನೆಳೆದಳಿರಂ ಮೇ
ಗಡರೆತ್ತಿ ಸುಂಡಿಲಂ ಮುಂ
ದಿಡುವನ್ನಂ ತಾಯ್ಗೆ ಮೋಹಮೊಂದಿಭಕಳಮಂ            ೯೨

ನಲವಿಂ ಪೆಣ್ಣಾನೆಯಂ ಕಂಡನುನಯಪರಮಾಗೊಯ್ದು ಪದ್ಮಾಕರೋರು
ಸ್ಥಳಿಗಂ ಮೇಲ್ಚಲ್ಲಿ ನೀರಂ ಕೊಡೆವಿಡಿದರಳಿರ್ದಂಬುಜಾತಂಗಳಂ ಮಂ
ಜುಳಕುಂಜಕ್ಕೊಯ್ದು ನೀಡುತ್ತರಳಿಯ ತಳಿರಂ ಪೇಚಕೋಚ್ಚುಂಬನಕ್ಕಂ
ದೆಳಸುತ್ತುಂ ವಾಸಿಸುತ್ತುಂ ನಸೆಗನುವಶಮಾಯ್ತಂಬುದಾಭಂ ಮದೇಭಂ      ೯೩

ಎರಡುಂ ಪೆರ್ಬಾವುಗಳುಮ
ನೆರಡುಂ ಕೋಡುಗಳ ಮೊನೆಗಳಿಂದಿಱಿದೆತ್ತಲ್
ಪರಿಲಂಬಿಸಲದು ಮೂಱುಂ
ಭರಿಕೈಗಳನುಳ್ಳ ಕರಿಯವೋಲ್ ಕಣ್ಗೆಸೆಗುಂ    ೯೪

ಮದಗಜಮೊಂದು ಮಾರ್ಪೊಳೆಯೆ ತಾಂ ಸ್ಫಟಿಕೋಪಳದೊಳ್ ಪ್ರತೀಭಮೆಂ
ದದನುಱೆನೋಡಿ ಕೋಪಿಸಿ ರದಂಗಳನೀಡಿಱಿಯಲ್ಕೆ ಕೊಂಬುಗಳ್
ತುದಿಮುಱಿಯಲ್ಕದಂ ಮರಳೆ ಕಂಡಿದು ತಾಂ ಪಿಡಿಯಾನೆಯೆಂದು ಸ
ಮ್ಮದದೊಳೆ ಮುಟ್ಟುತಿರ್ದುದು ಮದಾಭಿಹತಂ ಸುವಿವೇಕಿಯಪ್ಪುದೇ        ೯೫

ಪಿಂದಣಭಾಗದಲ್ಲಿ ಮಱೆಗೊಂಡು ಮದೇಭದ ರೂಪು ತೋರಮಾ
ದೊಂದು ವಿನಿರ್ಮಳಸ್ಫುಟಿಕಕೂಟದೊಳಂ ಪ್ರತಿಬಿಂಬಿಸಲ್ಕದಂ
ಸಂಧಿಸಿ ಸಿಂಹಮೀಕ್ಷಿಸಿ ಕರೀಂದ್ರಮಿದೆಂದಭಿಶಂಕೆಯಿಂದೆ ಸಾ
ರ್ತಂದದು ಪೊಯ್ಯಲಂದುಗುರ್ಗುಳುಂ ಮುಱಿಯಲ್ಕದು ನೊಂದುಪೋಪುದುಂ         ೯೬

ಆನೆಗಳ ಪಿಂಡನೀಕ್ಷಿಸಿ
ತಾನೊಂದುತ್ಕಂಠಕಂಠಕಠೀರವಮ
ಧ್ವಾನಿಸಿ ಸೀಳ್ದತ್ತವಱವ
ಱಾನನದಿಂ ಸುರಿಯಲರುಣಮುಕ್ತಾಜಾಳಂ       ೯೭

ಹರಿಗಳ ಪಿಂಡು ಕಂಡು ಮದದಾನೆಗಳೋಳಿಗಳಂ ಪ್ರಕೋಪಿಸಿ
ತ್ವರಿತದೆ ಬಂದು ಮೇಲೆಮಿಗೆವಾಯ್ದಿರದ್ಪಪಳಿಸಲ್ ಶಿರಂಗಳಿಂ
ಸುರಿದ ವಿಮೌಕ್ತಿಕಂಗಳಿಳೆಯೊಳ್ ಪೊಳೆವುತ್ತುಮವಿರ್ದವೆಲ್ಲಿಯುಂ
ತರುಗಳಮೊತ್ತಮೊತ್ತಿದೊಡೆ ಬೀಳ್ದುಡುಪಂತಿಗಳೆಂಬ ಮಾಳ್ಕೆಯಿಂ೯೮

ಒಂದೆಡೆಯಲ್ಲಿ ಮೇಘಜವಿಮೌಕ್ತಿಕರಾಶಿಗಳಿರ್ದವಲ್ಲಿ ಮ
ತ್ತೊಂದೆಡೆಯಲ್ಲಿ ಕುಂಜರಜಮೌಕ್ತಿಕವೃಂದಮದೊಪ್ಪಿತಲ್ಲಿ ಮ
ತ್ತೊಂದೆಡೆಯಲ್ಲಿ ಸೂಕರಜಮೌಕ್ತಿಕಸಂತತಿ ತುಮಬಿತಲ್ಲಿ ಮ
ತ್ತೊಂದೆಡೆಯಲ್ಲಿ ವೇಣುಜವಿಮೌಕ್ತಿಸಂಕುಳಮಿರ್ದುದೆಲ್ಲಿಯುಂ   ೯೯

ವ : ಇಂತತೀವಗಹನಮಾದಾ ಮಹಾಗಹನಾಂತರಾಳದೊಳ್

ಬಲೆಯಂ ಕಟ್ಟುವ ಪಾಸಮಂ ಪೊಸೆವ ಬಲ್ಕಾಲ್ಗಣ್ಚಿಯಂ ಪಣ್ಣುವ
ಗ್ಗಳಬಿಲ್ಗೀಸುವ ಕಲ್ಲಿಯಂ ಸಮೆವ ತೂಣೀರಂಗಳಂ ಮಾಳ್ಪ ಮಂ
ಜುಳಬಾಣಂಗಳನೆಯ್ದೆತಿರ್ದಿ ಗಱಿಗಟ್ಟುತ್ತಿರ್ಪ ಗುಂಟಂಗಳಂ
ಬಲುವುದ್ಯೋಗದೊಳಿರ್ದು ಹೆಕ್ಕಳಿಸಿದತ್ತುದ್ಯತ್ಕಣಂ ಪಕ್ಕಣಂ      ೧೦೦

ಸಣ್ಣಗಾಡಿಗೆಯ ಪುಡಿಯಿಂ
ಪಣ್ಣಿದ ಪುತ್ಥಳಿಕೆಯಂತೆ ಪೊಳಪೇಱಿದ ಮೆ
ಯ್ವಣ್ಣಂ ಪರಿಕಲಿಸುತ್ತಿರೆ
ತಿಣ್ಣಂ ನೆರದಿರ್ದುದಲ್ಲಿ ಶಬರೀನಿವಹಂ          ೧೦೧

ವ : ಆ ಶಬರಶಿಬಿರದೊಂದೆಡೆಯೊಳ್

ಚಂದನದಿಂದೆ ಮಾಡಿದೊರಳೊಳ್ ಬಿದಿರಕ್ಕಿಯನೆಯ್ದೆ ಪೊಯ್ದು ಚೆ
ಲ್ವೊಂದಿದ ದಂತದೊಂದೊನಕೆಯಂ ಪಿಡಿದೊಳ್ಚಳಿಸುತ್ತುಮಿರ್ದ ಪೌ
ಳಿಂದಿನಿ ಸುವಿಸೂವಿ ಗಜಮಲ್ಲನೆ ನಲ್ಲನೆ ಸೂವಿಸೂವಿ ಶ
ತ್ರುಂದಮ ಬಿಲ್ಲಬಲ್ಲಹನೆ ಸೂವಿಯೆ ಸೂವಿ ದಲೆಂದು ಪಾಡಿದಳ್            ೧೦೨

ಕಾಯಂ ಕೊಯ್ಯಲ್ ಕೆಲಂಬರ್ ಗೆಳಸನಗೆವ ಕಜ್ಜಂಗಳಿಂದಂ ಕೆಲಂಬರ್
ಬೀಯಂ ತಾನೇನುಮಿಲ್ಲೆಂದಱಿದು ಬಿದಿರ ಚೆಲ್ವಕ್ಕಿಯಂ ಬೇಗದಿಂದಂ
ದಾಯಲ್ಬೇಕೆಂದುಮಲ್ಲಿಂ ಕೆಲರುಱೆಪೊಱಮಟ್ಟತ್ತಲಿತ್ತಲ್ ಪುಳಿಂದ
ಸ್ತ್ರೀಯರ್ ಪೋಗುತ್ತುಮಿರ್ದರ್ ಪೊಳೆದು ಮೆಱೆವಿನಂ ಚಂಚಲಾಪಾಂಗಪಾತಂ         ೧೦೩

ರವಿಕರತಾಪತಾಪ್ತರವಿಕಾಂತಶಿಳಾತಳದಲ್ಲಿ ಪೋಗುತಿ
ರ್ಪ ವನಚರೀಜನಂ ಕುಚಯುಗಂಗಳ ಭಾರಮದೆಯ್ದೆ ತಿಣ್ಣಮಾ
ಗವರತಿವೇಗದಿಂ ನಡೆಯಲ್ಕಾಱದವಕ್ಕೆ ಕನಲ್ದು ಬಯ್ವರಿಂ
ತಿವು ಕಡುಚಂದವೇಕೆಮಗೆ ತೋರಿದವಾದುವೆನುತ್ತುಮಾಕ್ಷಣಂ       ೧೦೪

ವ : ಮತ್ತಮದಱಿಂದತ್ತಲೊಂದನೇಕಾನೋಕಹನಿಕರಸಮುದ್ರೇಕದಿಂ ಪರ್ವಿ ಸುರ್ವುಗೊಂಡ ಬಲ್ಲಡವಿಯಲ್ಲೊಂದು ತಾಣದೊಳ್

ಹಿಡಯಂಬಂ ಕಟ್ಟೆ ಬಾರಿಂದುಡೆದೊವಲೆಡೆಯೊಳ್ ಬಿಲ್ಲುಮಂ ಕೌಂಕುಳಲ್ಲಂ
ದಡಸಿಟ್ಟೆಯ್ದೊತ್ತಿಯಂಬಂ ತಿರುಪುತೆ ಬಲಗೈಯಲ್ಲಿ ಪೆಣ್ಣಾಯ್ಗಳಂ ಸಂ
ಗಡದೊಳ್ ಕೊಂಡೊಯ್ವುತ್ತುಂ ಸುತ್ತಲುಮೆಡಬಲನಂ ನೋಡುತುಂ ಪೋದನೊರ್ವಂ
ಕಡುಪಿಂದಂ ಬೇಂಟೆಯ ಕ್ರೀಡೆಗೆ ದರವಿಳಸತ್ಕಿಂಕರಾತಂ ಕಿರಾತಂ      ೧೦೫

ವ : ಆಗಳ್

ತಳಿರ್ಗಳ ತೊಂಗಲಂ ಬಿಗಿದು ಸೀರೆಯ ಮಾಳ್ಕೆಯಿನುಟ್ಟು ಗುಂಜೆಯಿಂ
ದಳವಡೆ ಮಾಡಿದೊಳ್ದೊಡಿಗೆಯಂ ಸಲೆತೊಟ್ಟುಱೆ ಹೀಲಿದಂಡೆಯಂ
ತಲೆಯೊಳೆ ಸುತ್ತಿಂ ತಾಮ ಬಿದಿರಮುತ್ತಿನ ಹಾರಮನಿಕ್ಕಿ ಗಂಡನಂ
ತೊಲಗದೆ ಪಿಂದೆ ಬಿಲ್ವಿಡಿದು ಬರ್ಪ ಪುಳಿಂದಿನಿಯೊರ್ವಳೊಪ್ಪಿದಳ್            ೧೦೬

ಕಾಡೊಳೆ ಬೇಂಟೆಗಾಗಿ ಸುಳಿದಾಡುತುಮಿರ್ಪೆಡೆಯಲ್ಲಿ ಬೇಡನಂ
ಬೇಡಿತಿ ಬೇಡೆ ತಂಬುಲಮನಿಕ್ಕುವ ಪೊತ್ತಿನೊಳೆಯ್ದೆ ಘರ್ಜನಂ
ಮಾಡುವ ಸೊಕ್ಕಿದೆಕ್ಕಲನನೀಕ್ಷಿಸಿ ನಾರಿಯೊಳಿಟ್ಟು ಬಾಣಮಂ
ಹೂಡಿದಂ ಬಿಲ್ಲುಮಂ ಪಿಡಿದೆಸಲ್ಕವನುದ್ಯತನಾಗಲಾಕ್ಷಣಂ         ೧೦೭

ಕಡುಪಿಂ ಮೇಲ್ವಾಯಲೆಂದವ್ವಳಿಸಿದಪುದಿದೆಂದಂಜತುಂ ವಾಮಪಾರ್ಶ್ವಂ
ಬಿಡದೆಯ್ತಂದಾತನಂತಚ್ಛ ಬರಿಬರಿಯನಾಲಿಂಗನಂಗೆಯ್ಯಲಾಗಳ್
ಕಡುರಾಗದ್ವೇಷಮೆಂಬೀಯೆರಡುಮೊಡನೆ ಕೂಡಿರ್ದು ತಳ್ತೇಕರೂಪಂ
ಬಡೆದಿರ್ದತ್ತೆಂಬಿನಂ ಕಣ್ಗೆಸೆದನುಪಗತಂ ಸೊಪ್ಪುಳಿಂದ ಪುಳಿಂದಂ    ೧೦೮

ಮಸೆವುತ್ತಂ ದಾಡೆಯಂ ಕೆಕ್ಕಳಿಸಿ ದೆಸೆಗಳಂ ನೋಡುತುಂ ಬಾಲಮಂ ಲಂ
ಬಿಸುತುಂ ರೋಮಾಂಕುರಂಗಳ್ ನೆಗೆನೆಗೆದು ನಿಲಲ್ ಗರ್ಜಿಸುತ್ತುಂ ಕರಂ ಮಾ
ಮಸಕಂಬೆತ್ತಿರ್ದು ಸುತ್ತಂಬಳಿಸಿದ ಶಬರವ್ರಾತಮಂ ಮೇಲೆವಾಯ್ದಂ
ಜಿಸಿಯೊಟ್ಟೈಸೋಡಿಪೋದತ್ತದಱೊಳೆ ವಿಲಸದ್ದೀರ್ಘದೇಹಂ ವರಾಹಂ    ೧೦೯

ವ : ಸಮನಂತರಂ

ಜಡಿಯುತ್ತುಂ ಬಾಲಮಂ ಗರ್ಜಿಸಿ ಕರತಳದಿಂ ಭೂಮಿಯಂ ಪೊಯ್ದು ಮತ್ತಂ
ಕಡುಮೇಲ್ವಾಯದೋವದಂದಪ್ಪಳಿಸಿ ನಖಮುಖಾಗ್ರಂಗಳಿಂದೌಡೆ ಮೆಯ್ಯಂ
ಕಡುಪಿಂದಂ ಕೀಳ್ತು ಕೂರಿತ್ತೆನಿಪ ಸುರಿಗೆಯಿಂ ಕುತ್ತೆ ರಕ್ತಪ್ರವಾಹಂ
ಬಿಡೆ ಬಾಯಂ ಮೂಗಿನಿಂ ಪೆರ್ವುಲಿಯನತಿಬಳಂ ಕೊಂದನೊಂದಂ ಪುಳಿಂದಂ    ೧೧೦

ವ : ಬಳಿಯಮಲ್ಲಿಂದಂ ಮುಂದೊಂದು ವಿಕಟವಿಶಾಲವಿಟಪಪ್ರಕಟೀಕೃತ ಸಮುತ್ಕಟಪಟು ತರನಿಕಟವಿಟಪಿಪಟಲಿಕಾಸಮುಪಜಟಿಳಿತ ಪರಿಸ್ಫುಟಮಾದಟವಿ ಮಧ್ಯ ಪ್ರದೇಶದೊಳ್

ಬಿಡುಬಿಡು ನಾಯ್ಗಳಂ ಪರಿದು ಬೆನ್ನೊಳೆ ಮಾಣದೆ ಪೋಗು ಪೋಗು ಸಂ
ಗಡಿಸಿಯೆ ಬೀಸುಬೀಸು ಬಲೆಯಂ ಬಿಡದಾರ್ದೆಸೆಸೆ ಯ್ದುಕೊಲ್ಲು ಕೊ
ಲ್ಲಡಸಡಸೆಂಬ ಘೋರತರಘೋಷಮದುಣ್ಮಿರೆ ಬೇಂಟೆಕಾಱಪೆ
ರ್ವಡೆ ವೃಗರಾಜಿಗಂತಕನ ಸೇನೆ ಕರಂ ಕವಿದಂತಿರೊಪ್ಪುಗುಂ           ೧೧೧

ವ : ಆಪೊತ್ತಿನೊಳ್

ಉರವಣಿಪ ಬೇಂಟೆಕಾಱರ
ನೆರವಿಯನವಳೋಕಿಸುತ್ತುಮಿರ್ದತಿಭಯದಿಂ
ಹರಿಹರಿದುಪೋಯ್ತು ಮಱಿಕೇ
ಸರಿ ಸರಿದೋಡಿತ್ತು ಹರಿಣಿ ಹರಿಸಿದುದಸುವಂ   ೧೧೨

ಹುಲಿ ಹೊದಱಲ್ಲಿ ತಗ್ಗಿದುದು ಹೇರುಡು ಹುತ್ತದೊಳೋಡಿ ಪೊಕ್ಕುದ
ಗ್ಗಲಿಸಿದ ಕುಂಜದೊಳ್ ಕರಡಿ ಮೆಯ್ಗರೆದಿರ್ದುದು ತಳ್ತ ಕಂತುಱೊಳ್
ಮೊಲನಡಗಿತ್ತು ಗಹ್ವರದ ಕತ್ತಲೆಯೊಳ್ ಮರೆ ಕುಳ್ಳಿದತ್ತು ಕೀ
ಳ್ನೆಲದೊಳೆ ಪತ್ತಿದೊಂದುಸಿರದೆಯ್ಯಮೃಗಂ ಜಗುಳ್ದತ್ತು ಜಂಬುಕಂ           ೧೧೩

ಕೆಲವದಱೊಳ್ ಪುಣ್ಬಡೆದವು
ಕೆಲವದಱೊಳ್ ಬಿಳ್ದು ಮೊರೆವುತಿರ್ದವು ಮತ್ತಂ
ಕೆಲವದಱೊಳೋಡಿಪೋದವು
ಕೆಲವದಱೊಳ್ ಸತ್ತುದಾಳ್ದವತಿರೌದ್ರತೆಯಂ  ೧೧೪

ವ : ಮತ್ತಮಲ್ಲಿ

ಬಿಲ್ಲಂ ಬಿಲ್ವೆ ಸ್ವಹಸ್ತಾಗ್ರದೊಳೆ ಪಿಡಿದುಮಾಕರ್ಣಪೂರ್ಣಂ ದಲಾಗಿ
ರ್ದೆ‌ಲ್ಲರ್ಗಂ ಚೋದ್ಯಮಪ್ಪಂತಿರೆ ತೆಗದೆಸಲಾ ಬಾಣದಿಂ ಮುಂದೆ ಮುಂದಂ
ತಲ್ಲಿಂದತ್ತತ್ತಮೋಡುತ್ತವೆ ತಿರಿಪಿ ನಿಜಾಗ್ರೀವಮಂ ನೋಡುತುಂ ಮ
ತ್ತಲ್ಲಿಂದಾಳೇಱನೆಂಟಂ ಸರಳಿಸಿದುದು ಭೀತಾಂತರಂಗಂ ಕುರಂಗಂ   ೧೧೫

ಬೊಬ್ಬಿಱಿದಾಲಿ ಪಿಂದುವರಿದೋಡುವ ಪುಲ್ಲೆಯನೆಚ್ಚುಕೊಂದಡಂ
ತುರ್ವರೆಯಲ್ಲಿ ಬಿಳ್ದಿರಲದಂ ಬಳಸಿರ್ದು ನಿರೀಕ್ಷಿಸುತ್ತುಮಿ
ರ್ಪ್ಪುರ್ವಿದ ಸತ್ಪುಳಿಂದಿಯರ ಚಾರುಕಟಾಕ್ಷಮರೀಚಿ ಸುತ್ತಲುಂ
ಪರ್ವಿರೆ ಚಂದ್ರಮಂಡಲದ ಪುಲ್ಲೆಯವೋಲೆಸೆದತ್ತದಾಕ್ಷಣಂ         ೧೧೬

ವ : ಅಲ್ಲಿಂ ಮುಂದೊಂದು ರಮಣೀಯಮಣಿಮಯವಿಮಳತರ ವಿಪುಳಶಿಳಾ ತಳಪ್ರದೇಶದೊಳ್

ಕಿರಣಗಣಂಗಳಂ ಕೆದಱುತಿರ್ದ ವಿಶಾಲಸುಪದ್ಮರಾಗವಿ
ಸ್ಫುರಿತಶಿಳಾತಳಾಗ್ರದೊಳೆ ನಿಂದಿರೆ ಪುಲ್ಲೆಯದಂ ಸಮೀಪದೊಳ್
ತ್ವರಿತದೆ ಕಂಡು ಪೇರಡವಿಗಿಚ್ಚು ಸಮಾವರಿಸಿತ್ತು ನೋಳ್ಪಡಿಂ
ತಿರದಿದನೆಂದು ತಳ್ಳಳಿಸುತಿರ್ದುದು ತನ್ಮೃಗಶಾಬಮಾಕ್ಷಣಂ         ೧೧೭

ಆಗಸದಲ್ಲಿ ಪಾಱಿ ಮಿಗೆಪೋಗುತುಮಿರ್ದ ವಿಹಂಗಮಾಂಗಮಿಂ
ಬಾಗಿರೆ ಚಂದ್ರಕಾಂತಶಿಲೆಯೊಳ್ ಪ್ರತಿಬಿಂಬಿಸಿ ತೋಱುತಿರ್ದುದಂ
ಬೇಗದೆ ಸುತ್ತುತಿರ್ದಡವಿಬೆಕ್ಕು ನಿರೀಕ್ಷಿಸಿ ಪಕ್ಷಿ ತಪ್ಪದೆಂ
ದಾಗಳದಂ ಕದಕ್ಕದಿಸಿ ಕಚ್ಚುತುಮಿರ್ದುದು ಕೂಡೆ ಪೋಗುತುಂ     ೧೧೮

ತಿಳಿದ ಕೊಳಂಗಳಿತ್ತಡಿಗಳಲ್ಲಿಯ ನಿರ್ಮಳಚಂದ್ರಕಾಂತ ಮಂ
ಜುಳಶಿಲೆಯಲ್ಲಿ ಲೀಲೆಯೊಳೆ ಕುಳ್ಳಿದ ಬಾಳಮರಾಳಕಂಗಳು
ಜ್ಜ್ವಳಿಸಿ ದಲಲ್ಲಿ ಮಾರ್ಪೊಳದವಿಮ್ಮಡಿಯಾಗಿರೆ ಕಂಡು ತಾಯ್ಗಳುಂ
ತಳೆದುವು ಹರ್ಷಮಂ ಪಲವುಮಕ್ಕಳುಮಾಗಿರಲಾರೊ ಮೋಹಿಸರ್೧೧೯

ಫಲತರುಶಾಖೆಗಳ್ ಕೆಲದ ಸುಸ್ಫಟಿಕಾಫಳದಲ್ಲಿ ಕೂಡೆ ಮಾ
ರ್ಪೊಳೆಯಲದಂ ವಿಮುಗ್ಧಕಪಿಗಳ್ ನಡೆನೋಡಿ ದಿಟಂ ದಲೆಂದು ತ
ತ್ಫಳದಭಿಲಾಷೆಯಿಂದಮಿರದ್ಲಿಲಗೆ ಲಂಘಿಸಿ ಕಚ್ಚಿಕಚ್ಚಿಯುಂ
ಸೆಳೆದೊಡೆ ನೊಂದು ಪಲ್ ಮುಱಿಯೆ ಬೀಳ್ದುರುಳಿತ್ತೊದಱುತ್ತುಮಾಕ್ಷಣಂ೧೨೦

ಗಂಡಭೇರುಂಡನತ್ಯು
ದ್ದಂಡಂ ಸರಭಂಗಳೆರಡುಮಂ ಕಚ್ಚಿ ನಭೋ
ಮಂಡಳದೊಳ್ ತೂಗಿದುದುಱೆ
ತುಂಡತುಳಾದಂಡದಿಂದಮೊಂದರೆಜಾವಂ         ೧೨೧

ವ : ಇಂತಗುರ್ವುವಡೆದುರ್ವಿ ಕೊರ್ವಿ ಪರ್ವಿದ ಪೇರಡವಿಯೊಳಗತೀವ ಭಯಂಕರಾಕಾರಂಗಳಪ್ಪ ತಿರ್ಯಗ್ಜೀವಂಗಳ ಗತಿಸ್ವಭಾವವ್ಯಾಮೋಹವಧವೈರಸ್ಯಂಗಳಂ ನೋಡಿ ನೋಡಿ ಕಡುಚೋದ್ಯಂಬಡುತ್ತುಂ ನಡೆವ ಧರ್ಮನಾಥಕುಮಾರನ ಮುಂದೊಂದೆಡೆಯೊಳ್

ವನದೊಳ್ ಕೂಡೆ ತೊಳಲ್ದು ಬಂದುದಱಿನಾದಾಯಾಸಮಂ ಮದ್ಯಸೇ
ವನೆಯಿಂದಂ ಕಿಡಿಸಲ್ಕೆವೇಡಿ ಮಿಗೆಮೊತ್ತಂಗೊಂಡು ಸುತ್ತಂ ಪುಳಿಂ
ದಿನಿಯರ್ ಸರ್ವಪುಳಿಂದರುಂ ಬಿಡದೆ ಕುಳ್ಳಿರ್ದರ್ ಸುರಾಪೂರ್ಣಭಾ
ಜನಮಂದೋಹಮನಿಟ್ಟು ಮದ್ಯದೆಡೆಯೊಳ್ ಕೈಮಿಕ್ಕ ಸಂತೋಷದಿಂ        ೧೨೨

ಕಿವಿಯೊಳ್ ಸೆಕ್ಕಿ ತೊಳಪ್ಪ ದಾಸಣದ ಹೂವಂ ಚೆಲ್ವ ದಂತಂಗಳಿಂ
ದವೆಮಾಡಿರ್ದುರುಕುಂಡಳಂ ಮಣಿಗಳುಂ ತಳ್ತೊಪ್ಪಿರಲ್ಕುಟ್ಟು ನು
ಣ್ದೊವಲಂ ಬಿಲ್ಗಳನಿಕ್ಕಿಕೊಂಡು ಹೆಗಲೊಳ್ ತದ್ವಾರ್ತೆಗೇಳ್ದಾರ್ತದಿಂ
ದವೆ ಮತ್ತಲ್ಲಿಗೆ ಬೇಡರೆಯ್ದಿಬರುತಿರ್ದರ್ ನಾಲ್ಕುದಿಗ್ಭಾಗದಿಂ   ೧೨೩

ಹಾವಿನ ಹಾರಮಂ ಕೊರಳೊಳಿಕ್ಕಿ ತೊಡಂಕಿಸಿ ಕಕ್ಕಪಾಳಮಂ
ತೀವಿದ ಚೆಲ್ವನುಳ್ಳ ಪೆಗಲೊಳ್ ಕಡುಹುಂಡಮೆನಿಪ್ಪ ಕಂಥೆಯಂ
ಭಾವಿಸಿ ತೊಟ್ಟಕೊಂಡೆರಲೆಗೋಡುಗಳುಂ ಕುಣಿದಾಡೆ ವಕ್ಷದೊಳ್
ಸಾವಗಿಸುತ್ತೆ ಜೋಗಿಣಿಯರಂ ನೆರೆದೆಯ್ದಿದರಲ್ಲಿ ಜೋಗಿಗಳ್      ೧೨೪

ವ : ಇಂತಾಸವಸೇವನಾಶೆಯಿಂದಂ ಬಂದೊಂದಿ ನಿಂದ ಪುಳಿಂದಿಯರ ಜೋಗಿಗಳಂದ ಮನಿಂದುಮುಖಿಯರಂದು ನಡೆನೋಡಿ ಕಂಡು ಕರೆದು ಹಿರಿಯರಱಿದಲ್ಲಲ್ಲಿ ಕುಳ್ಳಿರಿಸಿದನಂತರಂ ನಡುವಣೆಡೆಯೊಳಡಸಿಟ್ಟ ರಂಗವಾಲಿಯ ಮೇಲೆ

ವಾಸಂತಿಯ ಕುಸುಮದ ಹೊಸ
ಹಾಸಿನೊಳಂ ಗಂಡಭೈರವನನಿರಿಸಿ ಮಹಾ
ಭಾಸುರಕಿಸಲಯದಿಂ ಸಮೆ
ದಾಸುರ ಹಸೆಗಳೊಳಮಷ್ಟವಿಧದೇವ್ಯರುಮಂ  ೧೨೫

ವ : ನೆಲೆಗೊಳಿಸಿ ಬಳಿಯಮವರ ಮುಂದೆ ಮಾಂದಳಿರ ಮಣೆಗಳೊಳ್

ಸಿರಿಸಿಂಬಿ ತಂಪುಗಂ ಬ
ಬ್ಬರಿ ಗಂಗಾಸಾಗರಂ ಸುರಾಳಂ ಸೋಮಂ
ವರವಾಣಿ ಮಾಳವೋದರಿ
ಮರವಟ್ಟಿಗೆಯೆಂಬ ಕೆಲವು ಪೆಸರಿನ ಕಳ್ಳಂ       ೧೨೬

ತುಂಬಿರ್ದನೇಕಘಟಿನಿಕು
ರುಂಬಮನನುರಾಗದಿಂದೆ ತಂದಿಳಿಪಿದೊಡಂ
ದಂಬುರುಹಂ ಮೊದಲಾದವ
ಱಿಂ ಬಗೆವುಗೆ ಮಾಡಿದರ್ ಸಮಧಿವಾಸನೆಯಂ  ೧೨೭

ವ : ಇಂತು ಕಂಪುವಡೆಯಿಸಿ ಮಂತ್ರವಿಧಿಯಿಂ ಪೂಜಿಸೆನಲೊಡಂ

ಪಡೆದು ಭುವನೇಶ್ವರೀಕೋ
ಶದ ವಿವರಮನೆಯ್ದೆತಿಳಿದ ಕಾಳೋಜಂ ಬಹು
ವಿಧಬಲಿವಿಧಾನದಿಂದಂ
ಮಧುದೇವತೆಯಂ ಪ್ರಮೋದದಿಂ ಪೂಜಿಸಿದಂ   ೧೨೮

ವ : ಇಂತು ಘಟಪೂಜೆಯಂ ಮಾಡಿದಾಗಳ್

ಪೆಸರಿಲಿಯ ಬೊಟ್ಟಿನಿಂದಂ
ದೆಸೆದೆಸೆಗಂ ಮಿಡಿದುಮಿಡಿದು ಕೈಮುಗಿವುತ್ತುಂ
ವಸುಧೆಗೆಂದೊಕ್ಕು ಕಿಱಿದಂ
ಮುಸುಱೆಯೆ ತಲೆಯಲ್ಲಿ ತಳಿದು ಸಲೆಪೊಡೆವಟ್ಟರ್     ೧೨೯

ವ : ತದನಂತರಂ

ಚಟ್ಟಳೆಯಲ್ಲಿ ಬಟ್ಟಸೊರೆಯೊಳ್ ಪೊಸಗಾಜಿನ ಚಾರುಪಾತ್ರೆಯೊಳ್
ಬಟ್ಟಲೊಳಿಂದುಕಾಂತಮಯಭಾಜನದೊಳ್ಪರಲಾವೆಯೋಡಿನೊಳ್
ಘಟ್ಟಿಯೆ ಮೇರೆಯಾಗಿ ತಿಳಿಗಳ್ಳನದಂ ನೆಱೆತುಂಬಿತಂದು ಮುಂ
ಘಟ್ಟಿಯೆ ಮೇರೆಯಾಗಿ ತಿಳಿಗಳ್ಳನದಂ ನೆಱೆತುಂಬಿತಂದು ಮುಂ
ದಿಟ್ಟುದು ಮೀಱದಗ್ರಜರನುಕ್ರಮಮಂ ಶಬರೀಸಮೂಹಕಂ          ೧೩೦

ಕೆಲದೊಳ್ ಪಾಸಿದ ಕದಳೀ
ದಳಭಾಜನದಲ್ಲಿ ಪಲವುತೆಱದಡಬಳಮಂ
ಲಲನೆಯರೊಲ್ದಿಕ್ಕಿದರ
ಗ್ಗಲಿಸಿದ ಪರಿಪರಿಯ ಮೀನ ಬಾಡುಮನದಱೊಳ್       ೧೩೧

ಧಮ್ಮಗಳ್ಳೆಱೆವುತುಂ ಘನ
ಸಮ್ಮದದಿಂ ಭಾಗಗಳ್ಳನೆಱೆವುತ್ತುಂ ಬಳಿ
ಯಮ್ಮಿಗೆ ಬಿನದದ ಕಳ್ಳೆಱೆ
ದರ್ಮಡದಿಯರಂದು ಕಳ್ಳನೀಂಟುವ ಮೊದಲೊಳ್        ೧೩೨

ವ : ಮತ್ತಂ ಮದ್ಯಮನಂಟುಸೂರ್ಯಂಗೆ ತೋಱಿ ಪೊಡೆವಟ್ಟು ಕಳ್ಳಂ ಕುಡಿ ಕುಡಿದು ಬಿಡಲಾಱದೆ ಕಡುತವಕದಿಂದಡಿಗಡಿಗೆ ಕೊರಳೆ ಮೇರೆಯಾಗಿ ಕುಡಿದು ಚೆಲ್ಲಗಾರ್ತಿಯರೊಡನೆ ಸಿರಿಸಿಂಬಿ ಸಾಸನಾಯ್ತು ಕಂಪಿಗಂ ಹಸನಾಯ್ತು ಬಬ್ಬರಿಗೆ ರುಚಿಯಾಯ್ತೆಂದು ಸವಿವೇಳ್ದು ಕೊಂಡಾಡುತ್ತುಂ ನಡುನಡುವೆ ಹುಲ್ಲೆಯೆರಲೆಯ ಹಂದಿಯ ತುಪ್ಪದಿಂದಂ ತೋಯ್ದುಪ್ಪುಗಂಡಂಗಳಂ ಚಪ್ಪಿಱಿದು ಕಡವಾಯಿಂ ಸೀಂಟಿಯಾಃಯೆನುತ್ತುಂ ಕಡಿಗಳಂ ಕಚ್ಚಿ ಮಡದಿಯರ್ಗೆ ಕೊಡುತ್ತುಂ ಸವಿಸವಿದು

ಚಟ್ಟಳೆಯಲ್ಲಿ ತೀವಿದ ಸುರಾರಸಮಂ ಕುಡಿಯುತ್ತುಮಿರ್ದ ನೇ
ರ್ಪಟ್ಟಿನಿಯಳ್ಗೆ ನೀಡಿ ಪಿಪಿಪಿಪ್ರಿಯ ಪಿಪ್ರಿಯಬೇಡವೇಡಿದಂ
ಬಿಟ್ಟುಮಮೋಹದಿಂ ಬಬಬಬಾಯೊಳೆ ಮುಕ್ಕುಳಿಸಿರ್ದು ಮದ್ಯಮಂ
ಕೊಟ್ಟೆನಗಾಗಿ ಸಾತಣಿವನೆಂಬ ತೊದಲ್ನುಡಿಯಿಂದಮೊಪ್ಪಿದಳ್    ೧೩೩

ವ : ಮತ್ತಮೊರ್ವಳ್ ಕಡುಮುಗ್ಧೆ ಪಳಿಕಿನ ಪಾತ್ರೆಯೊಳ್ ತಿಳಿಗಳ್ಳಂ ತುಂಬಿ ಕುಡಿವೆಡೆಯೊಳ್

ದೇಯದ ನೀಲದುಂಗುರದ ಕಾಂತಿಗಳಿಂ ಕರಿದಾಗಿ ಶೋಭೆಯುಂ
ಬೀಯದ ಪಾಣಿಶೋಣಮಣಿಕಂಕಣಸತ್ಕಿರಣಂಗಳಿಂದೆ ಕೆಂ
ಪಾಯತಮಾಗಿ ತೋಱಿದೊಡೆ ಮಾನಸದೊಳ್ ಪುದಿಯಲ್ಕೆ ಕೌತುಕಂ
ಮಾಯದ ಮದ್ಯಮೆಂದಬಳೆ ಪಿರದೆ ನೋಡಿದಳೊಂದುಜಾವಮುಂ೧೩೪

ವ : ಬಳಿಯಂ ಕೆಳದಿಯರಿಂದದಱಂದಮಂ ತಿಳಿದು ಕುಡಿಯ ಮೊದಲ್ಗೊಂ ಬುದುಂ

ರವಿಬಿಂಬಂ ಪ್ರತಿಬಿಂಬಿಸಿರ್ದದಱೊಳಂ ತೋಱುತ್ತಿರಲ್ ಕಂಡು ಮ
ದ್ಯಮನಾಸ್ವಾದಿಸುತಿರ್ದವಳ್ ಬೆದಱಿ ಕಂಪಂಗೊಂಡು ನೀನಾರೊ ಮಾ
ನವನೋ ದೈವನೋ ಪೇಳುಪೇಳೆನಗೆನುತ್ತುಂ ಪೋಗುಪೋಗೆಂದು ಡೊಂ
ಗುವ ಕೈಯಂ ಮಿಗೆ ನೀಡಿ ಮತ್ತೆ ಬಲಿದೌಡಂ ಕಚ್ಚುತಂ ನೂಂಕಿದಳ್            ೧೩೫

ವ : ಅನಂತರಂ ತಣ್ಗಂಪಿನ ತಮರ್ಮನೆಯೆನಿಪ ಗಂಗಾಸಾರಮಂ ಕುಡಿದು ಸವಿವೊಗಳ್ದು ಮಗುಳ್ದು ತೇಯೆಂದು ಬೇಡುವುದುಂ

ಮಗಮಿಗಸುತ್ತಿರಲ್ ಮೊಗಪೆ ತಂದೆಱವಾಕೆಯ ಚೆಲ್ವನಪ್ಪ ನು
ಣ್ಮೊಗಮದಱಲ್ಲಿ ಮಾರ್ಪೊಳೆಯಲಾಗಳದಂ ನಡೆನೋಡಿ ಸಿಂಹಮೋ
ಸೊಗಯಿಸುವಾನೆಯೋ ಗಿಳಿಯೋ ಕೋಗಿಲೆಯೋ ದಲಿದಾವುದೆಂದು ಸಂ
ದೆಗಿಸಿ ಮರುಳ್ಗಳೇನಱಿವರೋ ಕಳಹಂಸೆಯಿದೆಂದಳಾಳಿಗಂ           ೧೩೬

ವ : ಎಂದು ವಿಕಳತೆಯನೊಳಕೊಂಡು ನುಡಿವುತ್ತುಂ ಕಳ್ಳಂ ಕುಡಿದಡಗಂ ತಿಂದದಱ ಮಹಿಮೆಯಂ ಮೆಚ್ಚಿಮೆಚ್ಚಿ ಬಿಚ್ಚತಂ ನಡಿದೊರ್ವೊರ್ವರ ನಗೆಮೊಗಮಂ ನೋಡಿ ತಮ್ಮೊಳಿಂತೆಂದರ್

ಕನಸಿನೊಳ್ ಕುಡಿದೊಡಾಗಳೆ
ಮನಸಿನೊಳಂ ಸೊಕ್ಕಿಸುತ್ತುಮಿರ್ಪತಿಸಿತಗಂ
ಘನಮಾಗಿ ಸುಖಮನೀವೊಂ
ದನುವೀ ಮಧುವಿನೊಳಮಲ್ಲದುಳಿದಱೊಳುಂಟೇ       ೧೩೭

ಭಾವಜನ ಮಾವನಿದು ಲ
ಕ್ಷ್ಮೀವಧುವಿಂಗಣ್ಣನಿದು ಸುಧಾರಸದನುಜಂ
ಭೂವಳಯದೊಳೀ ಮದ್ಯ
ಕ್ಕಾವನೋ ಮರುಳಾಗಿ ವಸ್ತುವಂ ಸಮೆಯದವಂ           ೧೩೮

ಪೊಸತೆನೆ ತೋಱುವೊಳ್ಸವಿಯ ಸಾರಮಿದಂ ಬಿಡುವನ್ನನಾವನೋ
ವಸುಮತಿಯಲ್ಲಿ ದೇವರಿದು ಕಾರಣಮಾಗಿ ಸುಧಾಂಬುರಾಶಿಯಂ
ಪೊಸೆದಖಿಳರ್ಗೆ ಕೊಟ್ಟರಿದನರ್ಥಿಯೊಳೆಂದೊಡೆ ಮತ್ತೆ ಲೋಕದೊಳ್
ಬಿಸುಟಿದನಾರೊ ಬಾಳುವರಿದಂ ತೊಱೆಯೆಂಬರನಿಕ್ಕು ಕಿಚ್ಚಿನೊಳ್            ೧೩೯

ವ : ಇಂತು ಶೌಂಡೀಕರೆಲ್ಲರುಂ ಶುಂಡಾಸಾಮರ್ಥ್ಯಮಂ ಕೊಂಡಾಡುತ್ತು ಮಿರ್ದ ನವರತಂ ಮದಿರಾರಸದ ಮದವೇಱಿ ಕಣ್ಣೊಳ್ ಕೆಂಪು ತಿಣ್ಣಮಾಗಿ ಬಿಣ್ಪುಮೆಯ್ಯೊಳ್ ಸೊಂಪಾಗಿ ಬಾಸೆ ಬಿಱ್ರನೆ ಬೀಗಿ ತೋಱೆ ಮೇಗೆಮೇಗೆ ತೇಗುನೆಗೆದು ಬಿಕ್ಕುಳೊಡನೆ ಪರಿಮಱಿಯಾಡುತ್ತುಮಿರಲಲ್ಲಿಗಲ್ಲಿಗೆ ಮಂಡಲಂಗೊಂಡು ಕಂಡರಂ ದಸರಿದೊಡಕಾದ ತೊದಳ್ನುಡಿಯಿಂದಂ ಕರದು ಬಯ್ವುತ್ತು ಮುಟ್ಟುದಂ ಬಿಟ್ಟು ತಪ್ಪಣೆಗುಟ್ಟುತುಂ ಕುಣಿದು ಮತಿಗೆಟ್ಟು ಕಳವಳಿಸುತ್ತಿರಲ ದಱೊಳೊರ್ವಂ

ಚಿಂತಿಸುವಂತಿರೊಂದುನಿಮಿಷಂ ತಲೆಗುತ್ತಿ ಬಳಿಕ್ಕೆ ಬೇಗದಿಂ
ದಂ ತೆಱೆದಕ್ಷಿಯಿಂದಱಸುವಂತಿರೆ ನೋಡಿದನಿಕ್ಕೆಲಂಗಳಂ
ಭ್ರಾಂತನಕಾರಣಂ ನಗುತುಮಿರ್ದುಗುಳ್ದಂ ನಸುಮುಚ್ಚಿದೋಷ್ಠದಿಂ
ದಂ ತುಱುಗಿರ್ದ ಮದ್ಯಮಯಬಿಂದುಗಳಂ ಮಧುಪಾನಮತ್ತಕಂ    ೧೪೦

ವ : ಬಳಿಯಮ ಹಳೆಗಲಹಮಂ ನೆನೆದು ಕೆರಳ್ದು ಬಯ್ದು ಹುರುಡಿಸಿ ಬಾಯ್ಗೆವಂದಂತೆ ಕೈನಿಱಿದು ಗಳಪುತ್ತುಂ ಹೊತ್ತ ಮಡಕೆಯ ಕಳ್ಳು ನೆತ್ತಿಯಿಂ ಧಾರೆಗಟ್ಟಿ ಸುರಿಯುತ್ತುಮಿರ್ಪಿನಂ ನರ್ತಿಸುತ್ತುಂ ತಾರೇಲೈಯ ಹಾಡುತ್ತುಂ ತಾಯ ಮೊಗಮಂ ನೋಡಿ ಸಾಯಿ ನೀನಾರೆನುತ್ತುಂ ಕೆಯ್ವೊಯ್ದು ಕಾಡುತ್ತುಮಿರ್ದು

ಉಟ್ಟುದನು ಮಱೆದುಬಿಟ್ಟೊಡೆ
ಚಟ್ಟಳೆಯಂ ಬಿಡದೆ ಪಿಡಿದು ಮಱೆಯದೆ ನಿಲ್ವೀ
ನಿಟ್ಟಿಗೆ ನೆಲೆಯಾದುದು ಬಾ
ಯ್ವಿಟ್ಟೊದಱುವ ಮದ್ಯಪಾನಮತ್ತಜನೌಘಂ೧೪೧

ವ : ಇಂತು ಬೇರ್ವರಿದು ಕೆಯ್ಮಿಕ್ಕು ಸೊರ್ಕಿನಳುರ್ಕೆಯಿಂದುಕ್ಕುತ್ತುಂ ಪಲವು ತೆಱದನನ್ವಿತಮಂ ಗಳಪುತ್ತುಂಱಿಕ್ಕಟಂ ಮಸಗಿ ಕುಣಿದಾಡುತ್ತುಮಿರ್ದ ಮದ್ಯಪಿಗಳ ಬಳಗದ ಮಧುಪಾನಕೇಳೀವಿಜೃಂಭಣ ಬಹಳಕೋಳಾಹಳಕುತೂಹಳಮಂ ಧರ್ಮನಾಥ ಕುಮಾರಂ ನೋಡಿನೋಡಿ ನಗುತ್ತುಮಿಕ್ಕೆಲದೊಳಿರ್ದ ಮೇಳದವರ ಮೊಗಮನವ ಳೋಕನಂಗೆಯ್ದವರ ವಿಕಾರದ ಗೊಡ್ಡಾಟಮಂ ಸುಟ್ಟುಂಬೆಯಿಂ ತೋಱಿ ತೋಱಿ ಪೇಳುತ್ತುಂ ಕಿಱಿದಂತರಂ ಪೋಗೆ ತೊಟ್ಟನೆ ಕಟ್ಟಿದಿಱೊಳ್

ಮುಗಿಲಂ ಮುಟ್ಟುತುಮಿರ್ಪೋನ್ನತಶಿಖರಸಮೂಹಂಗಳಿಂ ವಿಸ್ಫುರದ್ಧ್ಯಾ
ನಗುಣಕ್ಕಾಧಾರಯೋಗಿಪ್ರವರರನೊಳಕೊಂಡಿರ್ದ ದುರ್ಗಹ್ವರಶ್ರೇ
ಣಿಗಳಿಂದಂ ನಿರ್ಜರಾಂಭಃಕಣತತಿಗಳಿನಾಕಾಶದಲ್ಲೆಲ್ಲಿಯುಂ ತಾ
ರೆಗಳಂ ಮಾಡುತ್ತುಮೊಪ್ಪಂಬಡೆದುದು ಪಿರಿದುಂ ರುಂದ್ರವಿಂಧ್ಯಾಚಳೇಂದ್ರಂ            ೧೪೨

ಎನ್ನ ರಥಮೊಂದು ನಡೆಯ
ಲ್ಕುನ್ನತನಿಂ ಮೇಗೆ ಬಟ್ಟೆಯಂ ಕುಡವೇಳ್ಕೆಂ
ಬನ್ನಂ ಪಾದಾನತನಾ
ಗಿನ್ನುಂ ಸೇವಿಸುತುಮಿರ್ಪನಿನಗಾ ಗಿರಿಯಂ       ೧೪೩

ಅದಱ ಘನಮೇಖಲಾವಳ
ಯದೊಳಂ ಕೀಲಿಸಿದ ತೋರಬೆಳ್ಳಿಯ ಗೆಜ್ಜೆಗೆ
ಳೊದವಿದ ಚೆಲ್ವಂ ಮಾಳ್ಪುದು
ಪದೆಪಿಂ ಬಳಸಿರ್ದ ತಾರಕಾನಿಕುರುಂಬಂ           ೧೪೪

ವ : ಮತ್ತಮಾ ಪರ್ವತಂ ಪಾದಂಗಳುಳ್ಳೊಡಂ ಜಂಗಮಮಲ್ತು ವಿಸ್ತೃತ ಪ್ರಸ್ಥಂಗಳುಳ್ಳೊಡಂ ನಿಯತಮಾನಾಭಿಯುತಮಲ್ತು ವಿಪರೀತತೆಯುಳ್ಳೊಡಂ ದೌರ್ಜನ್ಯ ಸಮನ್ವಿತಮಲ್ತು ಚಾಪಮುಳ್ಳೊಡಂ ಧನುರ್ಧರನಲ್ತು ಕಟಕಮುಳ್ಳೊಡಂ ಚಕ್ರವರ್ತಿಯಲ್ತು ಗಾಯತ್ರಿಯುಳ್ಳೊಡಂ ಬ್ರಾಹ್ಮಣನಲ್ತು ಅಮೃತಮುಳ್ಳೊಡಂ ಸ್ವರ್ಗಭೂಮಿಯಲ್ತು ಚಂದನತಿಲಕ ಮುಳ್ಳೊಡಂ ಸುದತೀವದನಮಲ್ತುಮಂತುಮಲ್ಲದೆಯಂ

ಮಿಗುವ ದ್ವಿಜಪರಿವಾರಿತ
ಮಗಣಿತ ಪುನ್ನಾಗಸೇವ್ಯಮಾನಂ ವಂಶೋ
ಪಗತಮೆನಿಸಿರ್ದ ಬೆಟ್ಟಂ
ಸೊಗಯಿಸಿದುದು ರಾಜನಂತೆ ಲಕ್ಷ್ಮಿಯ ಪೆರ್ಚಿಂ೧೪೫

ವ : ಆ ಗಿರಿವರಂ ವಟಸಂಕೀರ್ಣಮಾಗಿಯುಮವಟಸಂಕೀರ್ಣಮಂ ವನಪರಿ ಪೂರ್ಣ ಮಾಗಿಯುಮವನಪರಿಪೂರ್ಣಮುಂ ಭಯೋತ್ಪಾದಕಮಾಗಿಯುಮಭಯೋ ತ್ಪಾದಕಮು ಮೆನಿಪುದಂತುಮಲ್ಲದೆಯುಂ

ತುಂಗವ್ಯಾಧಾಂಗವಾನರಶರಭಭೃಗಿದ್ವೀಪಿಸಿಂಹೋನ್ನತಿ ಧ್ಯಾ
ನಾಂಗಾದಿಪ್ರೌಢಯೋಗೀಶ್ವರಮೃತವೃಕಮಂ ತಾಳ್ದಿದೇ ತನ್ನಿಮಿತ್ತಂ
ಶೃಂಗಾರಂ ಹಾಸ್ಯ ರೌದ್ರಂ ಕರುಣಮುರುಭಯಂ ವೀರಮತ್ಯದ್ಭುತಂ ಶಾಂ
ತಂಗಂ ಭೀಭತ್ಸಮೆಂಬೀ ನವರಸಮಯಮಾಯ್ತುನ್ನಗೇಂದ್ರಂ ನಗೇಂದ್ರಂ     ೧೪೬

ಸುರಮಿಥುನಂಗಳುಂ ಗುಹೆಗಳಲ್ಲಿ ಸುರಮ್ಯತಟಂಗಳಲ್ಲಿ ಖೇ
ಚರಮಿಥುನಂಗಳುಂ ಘನಲತಾಭವನಾಳಿಗಳಲ್ಲಿ ಕೂಡೆ ಕಿ
ನ್ನರಮಿಥುನಂಗಳುಂ ನೆಲಸೆ ಕಾಮವಿನೋದನಿಮಿತ್ತಮೆಲ್ಲಿಯುಂ
ವಿರಚಿಸಿದತ್ತು ಶೈಲಮದು ಕಾಮನ ಕೇಳಿಯ ಶೈಲಶಂಕೆಯಂ         ೧೪೭

ವ : ಅದಲ್ಲದೆಯುಂ

ಮೂಡಣ ಪಡವಣ ಕಡಲೊಡ
ಗೂಡಿ ಕರಂ ನೀಳ್ದು ನಿಮಿರ್ದ ಬೆಟ್ಟಂ ಚೆಲ್ವಿಂ
ರೂಡಿಸಿತು ನೆಲನನಳೆಯಲ್
ಮಾಡಿರಿಸಿದ ಸುಪ್ರಮಾಣದಂಡದ ತೆಱದಿಂ       ೧೪೮

ವರರತ್ನಚ್ಛಾಯೆಯಿಂದಂ ಸಕಳದಶದಿಶಾಭಿತ್ತಿಭಾಗಂಗಳಂ ಕ
ರ್ಬುರಿತಂಮಾಡುತ್ತುಮಾದಂ ವಿಪುಳಕಳಶಚೂಳಾಗ್ರದಿಂ ಚುಂಬಿಸುತ್ತಂ
ಬರಮಂ ನಾನಾಪ್ರಕಾರಾತಿಶಯಿತಜಿನಚೈತ್ಯಾಲಯವ್ರಾತಮುಂ ತ
ದ್ಗಿರಿಸಾನೂದ್ಯಾನದಲ್ಲೊಪ್ಪಿದುದು ಸುರರ ಗೀತಂಗಳಿಂ ಭೋರೆನುತ್ತುಂ    ೧೪೯

ವ : ಇಂತು ಸುರಾಸುರ ಕಿನ್ನರ ಕಿಂಪುರುಷ ಗರುಡ ಗಂಧರ್ವ ಯಕ್ಷ ರಾಕ್ಷಸ ಸಿದ್ಧ ವಿದ್ಯಾಧರ ನಿಕರಂಗಳೆಲ್ಲಂ ನೆರೆದು ಪೂಜಿಸುವ ಹೃದ್ಯವಾದ್ಯಂಗಳಂ ಬಾಜಿಸುವ ಪಾಡುವಾಡುವ ವೀಣೆಯಂಬಿಡಿವ ಸಂಭ್ರಮಕೋಳಾಹಳದಿಂ ಪೊಸಪೊಸತಾದ ವಿಳಸನದಿಂದೆಸೆವುತ್ತಿರ್ದ ಬಸದಿಗಳಿಂ ಬಳಸಿದ ಕಾರಣಂ ಮಂದರಗಿರಿಯಂತೆ ಸೌಂದರ ಮಾದ ವಿಂಧ್ಯಗಿರಿಯಂ ಕಂಡು ಪಿರಿದುಂ ಕೊಂಡಾಡುತ್ತುಂ ಧರ್ಮನಾಥಕುಮಾರಂ ಮುಟ್ಟೆವರ್ಪುದುಂ

ಉದಿರ್ವ ಸಂಪಗೆಯ ಕುಸುಮಸ
ಮುದಯಂಗಳಿನುದ್ಘನಿರ್ಝರೋದಕದಿಂದಂ
ದಿದಿರಾಗಿ ಧರ್ಮನಾಥಂ
ಗದು ಕೊಡುವಂತಿರ್ದುದರ್ಘ್ಯಪಾದ್ಯಂಗಳುಮಂ            ೧೫೦

ವ : ಅನಂತರಂ ಕಿನ್ನರೇಂದ್ರನೊರ್ವನಾ ಪರ್ವತಸಾನುವಿಂದಿಳಿದುಬಂದು ದೇವರಿಂಗೆ ವಿನಯವಿನಮಿತೋತ್ತಮಾಂಗನಾಗಿ ಭಕ್ತಿಭರದಿಂ ಕೈಗಳಂ ಮುಗಿದು ಬಿನ್ನಪಮೆಂದಿಂತೆಂದಂ

ಆವಲ್ಲಿ ನೀವು ನೆಲಸಿದಿ
ರಾ ವಿಷಯಂ ಧನ್ಯಮಾ ನಗಂ ಸೇವ್ಯತರಂ
ಪಾವನಮಾ ವನಮದನುಳಿ
ದಾವುದೊ ಭೂವಳಯದಲ್ಲಿ ತೀರ್ಥಸ್ನಾನಂ    ೧೫೧

ಎನ್ನ ಪುರಮಿರ್ಪುದೀ ಸಾ
ನೂನ್ನತಿಯಲ್ಲದಱ ಪಾವನಾರ್ಥಮೆ ನೀಮುಂ
ಮನ್ನಿಸಿ ಬಿಜಯಂಗೆಯ್ದಿ
ರ್ದೆನ್ನಂ ಕೃತಕೃತ್ಯನಾಗಿ ಮಾಡಲ್ವೇಳ್ಕುಂ       ೧೫೨

ವ : ಅಂತು ಕಾರಣಮೆಂತಾದೊಡಂ ನೀವೀ ಧರಣೀಧರದ ರಮಣೀಯ ಮಣಿಮಯ ಸಾನುಸ್ಥಾನದಲ್ಲಿಗೆ ಮೆಲ್ಲಗೆ ಬಿಜಯಂಗೆಯ್ದಲ್ಲಿ ನೆಲಸಿರ್ದುದಲೆನ್ನ ಪುರಿಗಮತೀವ ಪವಿತ್ರತೆಯುಮನೆನಗಗಣ್ಯಪುಣ್ಯಲಾಭಾಭಿವೃದ್ಧಿಯುಮನೊಡರ್ಚಲ್ವೇಳ್ಕುಮೆಂದು ಕಡುವಿನಯದಿಂ ಬಿನ್ನಪಂಗೆಯ್ದೊಡೆಯರಂ ಬಿಡದೆ ಪ್ರಾರ್ಥಿಸಿ ಬೇಡಿಕೊಂಬುದುಂ

ಅತಿದೂರಂ ಬಂದು ಸೈನ್ಯಂ ಶ್ರಮವಶಗತಮಾಯ್ತಿಲ್ಲಿ ನಾವಿರ್ಪುದೇ ಸ
ನ್ಮತವೆಂದಲ್ಲಿಂಗೆ ಪೋಗಲ್ಬಗೆದಿರಲದಱಿಂ ಮುನ್ನಮಾ ಕಿ‌ನ್ನರೇಂದ್ರಂ
ದ್ರುತದಿಂದಂ ಪೋಗಿ ತಾಂ ನಿರ್ಮಿಸಿದನುರುಪುರೀರೂಪಮಂ ಮತ್ತಮೊಂದು
ನ್ನತಸಾನುಸ್ಥಾನದೊಳ್ ಕೋಂಟೆಗಳಿನೆಸೆವಿನಂ ಮಾಟಕೂಟಂಗಳಿಂದಂ        ೧೫೩

ಕುದುರೆಗಳ ಶಾಲೆಯೊಳಮು
ನ್ಮದ ಗಜಶಾಲೆಯೊಳೆ ಕೇರಿಗೇರಿಯೊಳಂ ತೋ
ರಿದುವೆನಿಪ ಹೊನ್ನಕಳಶಸ
ಮುದಯಂಗಳ ಕಿರಣದಿಂದೆ ಥಳಥಳಿಸುವಿನಂ                ೧೫೪

ವ : ಇಂತು ಕಿನ್ನರೇಂದ್ರಪರಿನಿರ್ಮಿತ ನಿರತಿಶಯಪುರಮನಾ ಧರ್ಮನಾಥ ಕುಮಾರಂ ಚತುರ್ವಿಧಸೈನ್ಯಸಮನ್ವಿತನಾಗಿ ಪುಗುವುದುಂ

ಕ್ರಯವಿಕ್ರಯ ಸಂಭ್ರಮ ಜನ
ಚಯದಿಂದಂ ತುಂಬಿದಂಗಡಿಯನೀಕ್ಷಿಸುತುಂ
ಪ್ರಿಯದಿಂ ಪೊಕ್ಕಂ ಕರಮು
ಚ್ಛ್ರಯ ತೋರಣದಿಂದೆ ಮೆಱೆವ ರಾಜಾಲಯಮಂ        ೧೫೫

ವ : ಅಂತು ಚೆನ್ನರನ್ನದಿಂ ಸಮೆದರಮನೆಯಂ ಪೊಕ್ಕು ಕೂಡೆ ಬಂದಧಿರಾಜ ಮಹಾರಾಜ ಪ್ರಭೃತಿ ರಾಜಕರಾಜ್ಯಕಮಂ ತಂತಮಗೆ ಯೋಗ್ಯಂಗಳಾದಾವಾಸಂಗಳ್ಗೆ ಬೀಳ್ಕೊಟ್ಟು ಕಳಿಪುವುದುಂ

ಆಕ್ಷಣಮವರವರ ಬಲಂ
ಪ್ರಕ್ಷೋಭಿಸೆ ಸಂಭ್ರಮೋತ್ಥಕಳಕಳರವದಿಂ
ದಕ್ಷೂಣವಾದ್ಯರವದಿಂ
ದೆ ಕ್ಷತ್ರಿಯರೆಯ್ದಿದರ್ ನಿಜೋಚಿತ ಗೃಹಮಂ   ೧೫೬

ವ : ಅನಂತರಂ

ದೂರಪಥಶ್ರಮವಶದಿಂ
ಧೀರನ ಮೆಯ್ಯಲ್ಲಿ ಘರ್ಮಜಳಬಿಂದು ಲವಂ
ಸಾರಿತ್ತಿಲ್ಲದು ಚರಮಶ
ರೀರದೊಳುದಯಿಸುವುದೆ ಪೊದಳ್ದದವಳಲಂ   ೧೫೭

ಪಸರಿಸೆ ಮೆಯ್ಗಳಲ್ಲಿ ಬಲದಿಂದಮೆ ಪುಟ್ಟಿದ ಧೂಳಿ ಕಾಂತಿಯಂ
ಮಸುಳಿಸೆ ಮೃನ್ಮಯತ್ವಮುಮನೆಯ್ದಿದುದೆಂಬಿನಮಾಯ್ತು ತಜ್ಜನಂ
ಪೊಸಪೊಸತಾಗಿ ಮತ್ತಮದಱಿಂ ಬೆಳಗಿರ್ದುರುದರ್ಪಣಂ ದಲೆಂ
ಬೆಸಕಮನೆಯ್ದೆಪುಟ್ಟಿಸಿದನಾ ಕುವರಂ ರಮಣೀಯಮೂರ್ತಿಕಂ      ೧೫೮

ವ : ಬಳಿಯಮಾ ಕುಮಾರಶಿರೋಮಣಿ ಯಾತ್ರಾವೇಷ ವಿಶೇಷಮಂ ಪರಿಹರಿಸಿ ಪ್ರವಾಸ ದಾಯಾಸಂ ಲೇಶಮಾತ್ರಮಿಲ್ಲದಿದೊರ್ಡಡಂ ಪ್ರಸಿದ್ಧಲೋಕರೂಢವಶ ನಿಮಿತ್ತಂ ಕೃತಮಜ್ಜನನಾಗಿ ಭೋಜನವಿಧಾನಾನಂತರಂ

ಬೇಱೊಂದು ಚೆಲ್ವನಾಂತಂ
ನೀಱಂ ನೋಳ್ಪವರ ಕಣ್ಗಳಿಂಗತಿಶಯಮಂ
ತೋಱಿಸುತುಮಿರ್ದುದಂ ಮಿಗೆ
ಮೀಱಿದ ಶೃಂಗಾರದಿಂ ಸಮುಜ್ವಳಿಸುವುದುಂ  ೧೫೯

ಮುದಮಂ ತಾಳ್ದಂ ಕುಮಾರೀಪರಿಣಯನದ ವಾರ್ತೋಕ್ತಿಯಿಂದಂ ಕುಮಾರಂ
ಮದನಾಕಾರಂ ಸುಧೀರಂ ನಿರುಪಮಸುಕೃತಾಧಾರನುತ್ಕೀರ್ತಿಪೂರಂ
ಪದನಮ್ರಕ್ಷ್ಮಾಭುಜಂ ಬಾಹುಬಲಿಸುಕವಿರಾಜಂ ಗುಣಾಂಭೋಧಿರಾಜಂ
ಸುದಯಾರೂಪಾಹಮಂ ಸತ್ಸುರಧರಣಿರುಹಂ ಚಾತುರೀಜನ್ಮಗೇಹಂ         ೧೬೦

ಗದ್ಯ : ಇದು ಸಕಳಭುವನಜವಿನೂನಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿ ಪಂಡಿತದೇವಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಶೃಂಗಾರವತೀದೇವಿಯ ಸ್ವಯಂವರಕಲ್ಯಾಣಕಾರಣಂ ಧರ್ಮನಾಥ ಕುಮಾರ ಪ್ರಯಾಣವ್ಯಾವರ್ಣನಂ ದಶಮಾಶ್ವಾಸಂ.