ಕನ್ನಡ ವಿಶ್ವವಿದ್ಯಾಲಯವು ಕೈಕೊಂಡಿರುವ ಸಮಗ್ರ ಜೈನ ಸಾಹಿತ್ಯ ಮಾಲೆಯ ಯೋಜನೆಯಲ್ಲಿ ಜೈನ ಸಮಗ್ರ ಕಾವ್ಯಗಳ ಸಂಪಾದನೆಯಲ್ಲಿ ನನಗೆ ಬಾಹುಬಲಿ ಪಂಡಿತ ಹಾಗೂ ಮಧುರನ ಧರ್ಮನಾಥ ಪುರಾಣಗಳ ಸಂಯುಕ್ತ ಸಂಪುಟವನ್ನು ಸಂಪಾದಿಸಿ ಕೊಡುವ ಕಾರ್ಯವನ್ನು ವಹಿಸಿತು. ಅದರಂತೆ ಈ ಎರಡು ಪ್ರಾಚೀನ ಕೃತಿಗಳನ್ನು ಸಂಪಾದಿಸಿಕೊಡಲಾಗಿದೆ. ಅವುಗಳ ವಿವರಗಳು ಇಂತಿವೆ.

ಬಾಹುಬಲಿಪಂಡಿತ ವಿರಚಿತ ಧರ್ಮನಾಥ ಪುರಾಣವನ್ನು ನಾನು ಶಾಸ್ತ್ರೀಯವಾಗಿ ಸಂಪಾದಿಸಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಿಂದ ೧೯೭೫ರಲ್ಲಿ ಪ್ರಕಟಿಸಿದ್ದೆ. ಈ ಕೃತಿಯನ್ನು ನಾಲ್ಕು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಲಾಗಿದೆ. ಇವುಗಳಲ್ಲಿ ಎರಡು ಓಲೆಯ ಪ್ರತಿಗಳು, ಒಂದು ಕಾಗದದ ಪ್ರತಿ, ಮತ್ತೊಂದು ಅಸಮಗ್ರ ಮುದ್ರಿತ ಪ್ರತಿ. ಬಾಹುಬಲಿ ಪಂಡಿತನ ಕಾಲ ಕ್ರಿ.ಶ. ೧೩೫೨. ಧರ್ಮನಾಥ ಪುರಾಣವನ್ನು ರಚಿಸಿದ ಕಾಲವನ್ನು ಕವಿಯೇ ಹೇಳಿಕೊಂಡಿದ್ದಾನೆ. ಚಂಪು ಕಾವ್ಯಗಳ ಶ್ರೇಣಿಯಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಹದಿನೈದನೆಯ ತೀರ್ಥಂಕರನಾದ ಧರ್ಮನಾಥನ ಚರಿತ್ರೆ ನಿರೂಪಿತವಾಗಿದೆ. ಇದರಲ್ಲಿ ಹದಿನಾರು ಆಶ್ವಾಸಗಳಿವೆ. ಕನ್ನಡ ಸಾಹಿತ್ಯದಲ್ಲಿ ಧರ್ಮನಾಥ ತೀರ್ಥಂಕನ ಬಗೆಗೆ ಕೃತಿ ರಚಿಸಿದವರಲ್ಲಿ ಬಾಹುಬಲಿ ಪಂಡಿತನೇ ಮೊದಲಿಗನೆನ್ನಬಹುದು. ಧರ್ಮನಾಥಪುರಾಣದಲ್ಲಿ ನಾವು ೞವನ್ನು ಬಳಸಿಲ್ಲ. ಏಕೆಂದರೆ ಈ ಕವಿ ಪ್ರಾಸ ಸ್ಥಾನಗಳಲ್ಲಿ ನಿಯತವಾಗಿ ೞವನ್ನು ಉಪಯೋಗಿಸಿಲ್ಲ. ಜೊತೆಗೆ ಈ ಕಾಲಕ್ಕಾಗಲೇ ೞ ಕಣ್ಮರೆಯಾಗುತ್ತಾ ಬಂದಿತ್ತೆಂದು ಭಾವಿಸಬಹುದಾಗಿದೆ.

ಮಧುರನ ಕಾಲ ಕ್ರಿ.ಶ. ಸುಮಾರು ೧೩೮೫. ಈತನು ಚಂಪು ಕವಿಗಳ ಶ್ರೇಣಿಯಲ್ಲಿ ಕೊನೆಯವನೆಂದು ಪರಿಗಣಿಸಲಾಗಿದೆ. ಈತನ ಧರ್ಮನಾಥ ಪುರಾಣ ಅಸಮಗ್ರವಾಗಿದೆ. ಈತನು ಬರೆದಿರುವ ಹಂಪೆಯ ಶಾಸನವನ್ನು ಅನುಬಂಧದಲ್ಲಿ ಕೊಡಲಾಗಿದೆ. ಮಧುರನ ಈ ಹಂಪೆಯ ಶಾಸನವನ್ನು ಮೂಲದಿಂದ ಪ್ರತಿ ಮಾಡಿಕೊಟ್ಟಿದ್ದೇ ಅಲ್ಲದೆ. ಕರಡಚ್ಚನ್ನು ತಿದ್ದಿಕೊಟ್ಟ ಡಾ || ಎಂ. ಜಿ. ನಾಗರಾಜ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿಗಳೂ ಪ್ರಸಾರಾಂಗದ ನಿರ್ದೇಶಕರೂ ಸಮಗ್ರ ಜೈನ ಸಾಹಿತ್ಯ ಮಾಲೆ ಯೋಜನೆಯ ಇನ್ನಿತರ ಸದಸ್ಯರೂ ಬಾಹುಬಲಿ ಪಂಡಿತ ಹಾಗೂ ಮಧುರನ ಧರ್ಮನಾಥ ಪುರಾಣಗಳ ಸಂಪಾದನ ಕಾರ್ಯವನ್ನು ನನಗೆ ವಿಶ್ವಾಸದಿಂದ ವಹಿಸಿಕೊಟ್ಟಿದ್ದಾರೆ. ಇದರಿಂದ ಹದಿನಾಲ್ಕನೆಯ ಶತಮಾನದ ಧರ್ಮನಾಥ ಪುರಾಣದ ಚಂಪು ಕೃತಿಗಳನ್ನು ಮತ್ತೊಮ್ಮೆ ಸಮಗ್ರವಾಗಿ ಓದುವ ಅವಕಾಶ ಪ್ರಾಪ್ತವಾಯಿತು. ಇದಕ್ಕಾಗಿ ಈ ಸಮಿತಿಯ ಅಧ್ಯಕ್ಷರೇ ಅಡಿಯಾಗಿ ಎಲ್ಲ ಸದಸ್ಯರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಮಧುರ ಕವಿಯ ಧರ್ಮನಾಥ ಪುರಾಣ ಶ್ರೀ ಎಂ. ಸಿ. ಪದ್ಮನಾಭ ಶರ್ಮ ಮತ್ತು ಜಿ. ಬ್ರಹ್ಮಪ್ಪನವರ ಸಂಪಾದಕತ್ವದಲ್ಲಿ ವೈನಾಡಿನ ಶ್ರೀ ಕೆ. ಸಿ. ಜಿನಚಂದ್ರಯ್ಯ ಅವರಿಂದ ೧೯೫೫ರಲ್ಲಿ ಪ್ರಕಟವಾಗಿತ್ತು. ಈ ಸಂಪಾದಕರಿಗೆ ಲಭ್ಯವಾಗಿದ್ದುದು ಅಪೂರ್ಣವಾದ ಅಶುದ್ಧಪ್ರತಿ. ಈ ಕೃತಿ ಪ್ರಕಟವಾಗಿ ಐವತ್ತು ವರ್ಷಗಳಾದರೂ ಇದು ಮರುಮುದ್ರಣವನ್ನು ಕಂಡಿಲ್ಲ. ಇದರ ಹಸ್ತಪ್ರತಿಗಳೂ ಲಭ್ಯವಾಗಿಲ್ಲ. ಹೀಗಾಗಿ ಕೃತಿಯ ಸಂಪಾದನೆ ದುಸ್ತರವಾದುದು. ಈ ಕೃತಿಯ ಸಂಪಾದನೆಯನ್ನು ನನಗೆ ವಹಿಸಿದಾಗ ನಾನು ಮತ್ತೊಮ್ಮೆ ಹಸ್ತಪ್ರತಿಗಳಿಗಾಗಿ ಹುಡುಕಾಡಿದೆ. ಎಲ್ಲೂ ಹಸ್ತಪ್ರತಿಗಳು ಕಂಡುಬರಲಿಲ್ಲ. ಇದರ ಏಕೈಕ ಹಸ್ತಪ್ರತಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿದೆ. ಮುದ್ರಿತ ಪ್ರತಿಗಳೂ ಯಾರಲ್ಲೂ ಸಿಕ್ಕಲಿಲ್ಲ. ಸಂಪಾದಕರಲ್ಲೊಬ್ಬರಾಗಿದ್ದ ಶ್ರೀ ಎಂ. ಸಿ. ಪದ್ಮನಾಭ ಶರ್ಮರು ನನಗೆ ಒಂದು ಮುದ್ರಿತ ಪ್ರತಿ ಕೊಟ್ಟಿದ್ದ ನೆನಪು, ಆದರೆ ಈ ಪ್ರತಿ ಸಿಕ್ಕಲಿಲ್ಲ. ಈ ಸಂಪಾದಕರು ಈಗ ಇಲ್ಲ. ಇನ್ನೊಬ್ಬ ಸಂಪಾದಕರಾದ ಪ್ರೊ || ಜಿ. ಬ್ರಹ್ಮಪ್ಪ ಅವರನ್ನು ಕೇಳಿದಾಗ ತಮ್ಮಲ್ಲಿದ್ದ ಪ್ರತಿಯನ್ನು ಯಾವುದೋ ಗ್ರಂಥಭಂಡಾರಕ್ಕೆ ಕೊಟ್ಟುಬಿಟ್ಟುದಾಗಿ ಹೇಳಿದರು. ಕೊನೆಗೆ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ ಶ್ರೀ ಬಿ. ಎಸ್. ಸಣ್ಣಯ್ಯನವರನ್ನು ವಿಚಾರಿಸಿದೆ. ಅವರು ಈ ಕೃತಿಯನ್ನು ಪರಿಷ್ಕರಣ ಮಾಡಬೇಕೆಂದು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ಓಲೆ ಪ್ರತಿಯಿಂದ ತಾಳೆಮಾಡಿಕೊಂಡಿದ್ದ ಪ್ರತಿ ಇರುವುದಾಗಿ ಹೇಳಿದರು. ಈಗ ಅಚ್ಚಾಗಿರುವ ಪ್ರತಿಯ ಝೆರಾಕ್ಸ್ ಮಾಡಿಸಿ ಅದನ್ನು ಕನ್ನಡ ಅಧ್ಯಯನ ಸಂಸ್ಥೆಯ ಓಲೆ ಪ್ರತಿಯಿಂದ ಹೋಲಿಸಿ ಪಾಠಾಂತರಗಳನ್ನು ಗುರುತು ಮಾಡಿಕೊಂಡಿದ್ದರು. ನನ್ನ ಮೇಲಿನ ವಿಶ್ವಾಸದಿಂದ ಪಾಠಾಂತರಗಳಿದ್ದ ಝೆರಾಕ್ಸ್ ಪ್ರತಿಯನ್ನೇ ಕಳಿಸಿಕೊಟ್ಟರು. ಇದರಿಂದ ನಾನು ಮತ್ತೆ ಹಸ್ತಪ್ರತಿಯನ್ನು ನೋಡುವ ತೊಂದರೆ ತಪ್ಪಿತು. ಆಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಭಂಡಾರದಲ್ಲಿ ಮುದ್ರಿತ ಪ್ರತಿ ಲಭ್ಯವಾಯಿತು.

ಈ ಎರಡು ಪ್ರತಿಗಳನ್ನಿಟ್ಟುಕೊಂಡು ತಾಳೆ ನೋಡಿದಾಗ ಇವೆರಡೂ ಅಶುದ್ಧ ಪ್ರತಿಗಳೆಂದು ಸ್ಪಷ್ಟವಾಯಿತು. ಅಕ್ಷರಸ್ಖಾಲಿತ್ಯಗಳನ್ನು ಸರಿಪಡಿಸಬಹುದು. ಆದರೆ ಪಾಠಾಂತರಗಳನ್ನು ನಿರ್ಧರಿಸುವುದು ಸಾಧ್ಯವಾಗಲಿಲ್ಲ. ಮಧುರನ ಧರ್ಮನಾಥ ಪುರಾಣದ ಕೆಲವು ಪದ್ಯಗಳು ಅಭಿನವಾದಿವಿದ್ಯಾನಂದನ ಕಾವ್ಯಸಾರದಲ್ಲೂ, ಭಟ್ಟಾಕಳಂಕ ದೇವ ಶಬ್ದಾನುಶಾಸನದಲ್ಲೂ, ಮಲ್ಲಕವಿ ಸಂಯೋಜಿತ ಕಾವ್ಯಸಾರದಲ್ಲೂ ಉದ್ಧೃತವಾಗಿವೆ. ಈ ಕಾಲಕ್ಕೆ ಧರ್ಮನಾಥ ಪುರಾಣ ಅಚ್ಚಾಗಿರಲಿಲ್ಲ. ಆದುದರಿಂದ ಈ ಮೂರು ಕೃತಿಗಳಲ್ಲಿ ಉದ್ಧೃತವಾದ ಪದ್ಯಗಳನ್ನೆಲ್ಲಾ ಅತ್ಯಂತ ಪ್ರಯಾಸದಿಂದ ಹುಡುಕಿ ಈಗ ಅಚ್ಚಾಗಿರುವ ಕೃತಿಯೊಂದಿಗೆ ತಾಳೆ ನೋಡಲಾಯಿತು. ಈ ಎಲ್ಲಾ ಕಾವ್ಯಗಳಿಂದ ಸುಮಾರು ೮೫ ಪದ್ಯಗಳನ್ನು ತಾಳೆ ನೋಡಲಾಗಿದೆ. ಆದರೆ ಯಾವ ಪಾಠಾಂತರಗಳನ್ನೂ ಸ್ವೀಕರಿಸ ಲಾಗಲಿಲ್ಲ. ಏಕೆಂದರೆ ಆ ಸಂಕಲನಕಾರರು ಯಾವ ಆಕರಗಳಿಂದ ಈ ಪದ್ಯಗಳನ್ನು ತೆಗೆದುಕೊಂಡಿರುವರೆಂಬ ವಿವರಗಳೇ ಇಲ್ಲ. ಈ ಬಗೆಗೆ ಮತ್ತಷ್ಟು ಸಂಶೋಧನೆ ಅಗತ್ಯವಾಗಿದೆ.

ಪ್ರೊ. ಎನ್. ಬಸವಾರಾಧ್ಯ