ಶ್ರೀಯಂ ಕೂರಿಸಿ ತಾಳ್ದಂ
ಶ್ರೇಯೋನಿಧಿ ಧರ್ಮವೃತ್ತಿಯಂ ಪೆರ್ಚಿಸುತುಂ
ಬೀಯದ ಪೆಂಪಿಂದೆಸೆದನ
ಮೇಯಗುಣಂ ಸರಸಚತುರಕವಿಕುಳತಿಳಕಂ       ೧

ವ : ಅಂತು ನಿರ್ವರ್ತಿತ ವಿವಾಹಮಹೋತ್ಸವಾನಂತರಂ ಕತಿಪಯದಿನಂಗಳಂ ಪ್ರತಿದಿನಂ ಪ್ರವರ್ಧಮಾನ ನವಪ್ರಣಯಪ್ರಸ್ತುತವಿನೋದಕೇಳಿಗಳಿಂ ಕಳಿವುತ್ತುಮಿರಲೊಂದು ದಿವಸಮಾ ಧರ್ಮನಾಥಕುಮಾರನುಂ ಶೃಂಗಾರವತೀಮಹಾದೇವಿಯ ಮೊಂದಾಗಿ ನಿಸ್ಸೀಮಧಾಮಸ್ತೋಮಸಮಾವೃತ ಹೇಮಮಯಸಿಂಹಾಸನಮನಳಂಕರಿಸಿ ಪ್ರತಾಪ ರಾಜಂಬೆರಸು ಸಭಾನಿವಾಸವಾಸಿಗಳಾಗಿರ್ಪುದುಮಾಗಳ್

ಪೂಜ್ಯಮಹಾಸೇನಮಹಾ
ರಾಜಂ ಕಳಿಪಿದೊಡೆ ರತ್ನಪುರದಿಂ ಬಂದಂ
ರಾಜಿತಸಿತತರಕೂರ್ಚಸ
ಮಾಜಂ ಧವಳೋತ್ತರೀಯನೊರ್ವಂ ದೂತಂ    ೨

ವ : ಬಂದು ಬಾಗಿಲೊಳ್ ನಿಂದು ನಿಜಾಗಮನವಾರ್ತೆಯಂ ದ್ವಾರಪಾಲಕಂ ಗಱಿಪುವುದು ಮಾತಂ ಪೋಗಿ ನಿಮ್ಮಯ ಪಿತೃಪ್ರೇಷಿತದೂತಂ ಬಾಗಿಲೊಳಿರ್ದಪನೆಂದು ಬಿನ್ನಪಂಗೆಯ್ಯೆ ಬರವೇಳೆಂಬುದುಂ

ಅತಿವೇಗದಿಂದೆ ಬಂದಾ
ನತನಾಗಿ ಕುವರನ ಮುಂದೆ ಕುಳ್ಳಿರ್ದು ಚರಂ
ಪಿತೃಕುಶಲವಾರ್ತೆಯಂ ಪೇ
ಳ್ದು ತೋಷಲೇಖಮನದೊಂದನಾತಂಗಿತ್ತಂ     ೩

ವ : ಅನಂತರಂ

ನಡೆದೋದುತ್ತೋಲೆಯಂ ಬರ್ಪುದು ತಡೆಯದೆ ಬೇಗಂ ದಲೆಂದೋದಲೆಯ್ದಾ
ಗಡೆ ತನ್ನ ಸ್ಥಾನಮಪ್ಪಾ ಪುರಿಗತಿಜವದಿಂ ಪೋಗಲುದ್ಯೋಗಿಸಲ್ಕಂ
ದೊಡೆಯಂ ತಾಂ ತನ್ನ ಸೇನಾಪತಿಯೆನಿಪ ಸುಷೇಣಂಗೆ ಪೇಳ್ದೆಲ್ಲಮಂ ಪೆ
ರ್ವಡೆಯಂ ನೀಂ ಕೂಡಿಕೊಂಡೊಯ್ಯನೆ ಗತಿವಶದಿಂ ಪಿಂದೆಬಾಯೆಂದು ಪೇಳ್ದಂ          ೪

ವ : ಅಂತು ನಿಖಿಳರಾಜಕಾರ್ಯಕಾರಣನಿರ್ವಹಣಧುರೀಣನಪ್ಪ ಸುಷೇಣನೆಂಬ ಸೇನಾಪತಿಗೆ ಬುದ್ಧಿಗಲಿಸಿ ಸಮಸ್ತಸೈನ್ಯಮನಾಂತಗಪ್ಪಯಿಸುವುದದಂ ಕಂಡು ಪ್ರತಾಪ ಮಹಾಮಂಡಳೇಶ್ವರಂ ಧರ್ಮನಾಥಕುಮಾರನಭಿಪ್ರಾಯಂ ನಿಜಜನನೀಜನಕ ಸಂದರ್ಶನೋತ್ಸುಕತೆಯಿಂದಂ ಮುಂದೆ ತನ್ನಯ ರತ್ನಪುರಗಮನಕ್ಕಭಿ ಮುಖನಾಗಿರ್ದುದೆಂದಱಿದು ಬಳಿಯಂ ಬಳುವಳಿಯಾಗಿ ತನ್ನ ಮಗಳಪ್ಪ ಶೃಂಗಾರವತೀ ದೇವಿವೊಡವೋಪಂತು ಕುಂಚದಡಪದ ಡವಕೆಯ ಕನ್ನಡಿಯ ಬೋನದ ಪರಿಯಾಣದ ಪಡಿಗದ ಪಾವುಗೆಯ ಪಲವುಂತೆಱದ ಬಾಹತ್ತರನಿಯೋಗಯೋಗ್ಯ ಕಾಮಿನೀ ನಿಕಾಯಮಂ ನಿಯಾಮಿಸಿ

ಕಡುರಾಂಗಬೆತ್ತು ತೋರ್ಪಗ್ಗಳದ ವಿವಿಧದೇವಾಂಗವಸ್ತ್ರಂಗಳಂ ನೇ
ರ್ಪಡಿಸುತ್ತುಂ ಮಾಣಿಕಂ ಕೇವಣಿಸಿದ ಸದಲಂಕಾರಸಾರಂಗಳಂ ಚೆ
ಲ್ವೊಡಲಿಂದಾಶ್ಚರ್ಯಮಂ ಪುಟ್ಟಿಸುವ ಕರಿಗಳಂ ಲಕ್ಷಣಂ ಶಿಕ್ಷಣಂ ಬ
ಲ್ನಡೆಯೆಂಬಿ ಪೆಂಪನಾಂತೊಪ್ಪುವ ಕುದುರೆಗಳಂ ದೇಶಮಂ ಪುತ್ರಿಗಿತ್ತಂ        ೫

ಸಮಕಟ್ಟಿಕೊಟ್ಟನಾ ಭೂ
ರಮಣಂ ಪಾಡುವರನಾಡುವರನೇಡಿಪರಂ
ಕ್ರಮಮಱಿವ ವಾದಕರನಾ
ದಮೆ ನಗಿಸುವರಾದಿಯಾದ ತರುಣೀಜನಮಂ   ೬

ವ : ಇಂತಿವು ಮುಂತಾದ ಸಮಸ್ತವಸ್ತುವಿಶೇಷಮಂ ಬಳುವಳಿಯಂ ಕೊಟ್ಟು ವಿಶಿಷ್ಟವಾರವಾಸರತಾರಾಕರಣಯೋಗಸಂಯೋಗಮನುಳ್ಳ ಶುಭ ಮುಹೂರ್ತದೊಳ್

ಬರಿಸಿ ವಧೂವರರಂ ವಿ
ಷ್ಟರದೊಳ್ ಕುಳ್ಳಿರಿಸಿ ಮತ್ತಮುಡಲುಂ ತುಡಲುಂ
ಪಿರಿದಾಗಿ ಕೊಟ್ಟು ಮಗಳಂ
ಪರಿರಕ್ಷಿಸಿ ಸುಖದಿನೆಂದು ಕೈಲಡೆಗೊಟ್ಟಂ        ೭

ವ : ತದನಂತರಂ ಬಹಳಕಾಹಳಾನಿಸ್ಸಾಳಭೇರೀಮೃದಂಗಾದಿ ಸಮುತ್ತುಂಗ ಮಂಗಳಾನಕಂಗಳ ಮಾಂಗಳಿಕ ಸಂಗೀತಂಗಳ ಪರಮಾಶೀರ್ವಾದ ನಾದಂಗಳ ಪಟುಪಾಠಕರ ನಿರವಧಿರವಂಗಳ ಕೋಳಾಹಳಮೆಲ್ಲಮೊರ್ಮೊದಲೊಳ್ ಭೋರೆಂದು ನೆಗೆದು ದೆಸೆಯಂಮುಸುಂಕಿ ದಿಂಕಿಡಿಸುತ್ತುಮಿರೆ ಪರಸಿ ತಳಿವ ಮುಕ್ತಾಫಳಮಯ ವಿಮಳಾಕ್ಷತಂಗಳನಾನುತ್ತುಂ ದಂಪತಿಗಳ್ ಪಿರಿದಾದ ಸಂಭ್ರಮದಿಂದರಮನೆಯಂ ಪುರಮುಮಂ ಪೊಱಮಟ್ಟು ಕಿಱಿದಂತರಂ ಪೋದಿಂಬಳಿಯಮಾ ಪ್ರತಾಪರಾಜಂ ಧರ್ಮನಾಥಕುಮಾರನ ಮೊಗಮಂ ನೋಡಿ

ಎಮ್ಮಯ ಪಂಬಲಂ ಮಱೆವವೊಲ್ ಪ್ರತಿಪಾಳಿಸಿ ತಪ್ಪುಗಂಡೊಡಂ
ತೆಮ್ಮನೆ ನೋಡಿ ಸೈರಿಸಿ ವಿಶೇಷಿತಕಾರ್ಯದೊಳೋಜೆವೇಳ್ದು ಮ
ತ್ತಿಮ್ಮಡಿಬುದ್ಧಿಯಂ ಕಲಿಸಿ ಮನ್ನಿಸಿ ಚಿತ್ತದೊಳೇನುಮಾಗದಂ
ತು‌ಮ್ಮಳಮೀಕೆಯಂ ನಡಸಿಯೊಂದನೆ ಕೈಮುಗಿದಿರ್ದು ಬೇಡಿದೆಂ    ೮

ವ : ಎಂದರಸಂ ಕುವರನ ಕೈವಿಡಿದು ಕಡುದೈನ್ಯದಿಂ ಪೇಳ್ದು ಬೇಡಿಕೊಂಡು ಕುಮಾರಂಗೆ ವಿನಯವಿನಮಿತೋತ್ತಮಾಂಗನಾಗಿ ಬೀಳ್ಕೊಂಡು ಮತ್ತಂ ತಾನುಂ ಸತ್ಯವತೀ ಮಹಾದೇವಿಯುಂ ಶೃಂಗಾರವತಿದೇವಿಯ ಸಮೀಪಕ್ಕೆ ಬಂದು ಪ್ರೇಮರಸವಿಸರ ಮೊಸರ್ದು ಪರಸಿ ಪರಕಲಿಸುವ ವಿಲೋಚನಗಳಿಂದಾಕೆಯ ಮೊಗಮಂ ನೋಡಿ

ಮಕ್ಕಳ ಮಾಳ್ಕೆಯಿಮದಿರದೆ ನಿನ್ನಯ ಗಂಡನ ಚಿತ್ತವೃತ್ತಿಗಂ
ತಕ್ಕವೊಲಂಜಿ ಬೆಚ್ಚಿ ಬೆಸಕೆಯ್ವುದು ಮಾವನುಮತ್ತೆಯುಂ ಪೊಗ
ಳ್ದಕ್ಕುಮೆನಲ್ಕೆ ವರ್ತಿಸುವುದುತ್ತಮೆ ನಿನ್ನೊಡವಂದರೆಲ್ಲರಂ
ಮಿಕ್ಕೊಲವಿಂದೆ ಮನ್ನಿಸುವುದೇಳಿಸದಿರ್ಪುದು ಭಾವಮೈದರಂ       ೯

ಬುದ್ಧಿವತಿಯಾಗಿ ನಡೆವುದು
ಸದ್ಧರ್ಮಮನೆಯ್ದೆ ಮಾಳ್ಪುದೆಮ್ಮಯ ಚಿತ್ತ
ಕ್ಕುದ್ಧುರಸಂತೋಷಮನಿ
ತ್ತುದ್ಧರಿಪುದು ನಿನ್ನ ಕುಲದ ಪೆಂಪಂ ಮಗಳೇ   ೧೦

ವ : ಎಂದು ತಾಯುಂ ತಂದೆಯುಂ ಮಗಳ ಚಿಬುಕಮಂ ಪಿಡಿದು ಬುದ್ಧಿ ವೇಳ್ದು ಕಡುಮೋಹದಿಂ ಪ್ರಕೃಷ್ಟಪ್ರಮದಾಶ್ರುಬಿಂದುಸಂದೋಹಂ ಮೇಲೆಮೇಲೆ ತೇಂಕುತ್ತುಮಿರೆ ನುಡಿನುಡಿಗೊರ್ಮೆ ತೆಗೆತೆಗೆದು ಮುಂಡಾಡುತ್ತುಮಪ್ಪಿಕೊಳ್ಳುತ್ತುಂ ಕಿಱಿದಂ ತರಮಾ ಶೃಂಗಾರವತೀದೇವಿಯಂಕಳಿಪಿ ಮರಳಲಾಱದಲ್ಲಿ ನಿಂದು ನೋಡುತ್ತುಮೆಂ ತಕ್ಕೆಂತಕೆ ಮರಳ್ದುಪೋಗಿ ಕುಂಡಿನಪುರಮಂ ಪೊಕ್ಕು ಮಗಳ ಮುದ್ದಾಟಮನೊರ್ವೊರ್ವರೊಡನೆ ನುಡಿನುಡಿದು ಕೊಂಡಾಡುತ್ತುಂ ಸುಖದಿನಿರ್ಪುದುಮಿತ್ತಲ್

ತನ್ನಯ ದೀಧಿತಿಪ್ರಸರಮೆಯ್ದೆಕವಲ್ವರಿದಲ್ಲಿಗಲ್ಲಿಗಂ
ಚೆನ್ನಸುರೇಂದ್ರಚಾಪತತಿ ಮೂಡಿದುದೆಂಬಿನಮೊಪ್ಪಿತೋಱಿರಲ್
ಕಿನ್ನರನಾಯಕಂ ಮಣಿವಿಮಾನಮನಾ ಕುವರಂಗೆ ತಂದುಕೊ
ಟ್ಟಂ ನಲವಿಂದಮಂಬರದ ಪುಷ್ಪದವೊಲ್ ಪರಿರಂಜಿಸಿರ್ಪುದುಂ    ೧೧

ಇಂದ್ರಾಣಿಯೊಳೊಂದಿದ ದೇ
ವೇಂದ್ರಂ ಬಂದೇಱುವಂತೆ ರತ್ನವಿಮಾನಮ
ನಂದು ಶೃಂಗಾರವತಿಯುಂ
ಸೌಂದರಯುವರಾಜನುಂ ದಲೇಱಿದರೊಲವಿಂ೧೨

ವ : ಮತ್ತಂ

ನಿರ್ಮುಕ್ತದಕ್ಷಿಣಾಶಂ
ಶರ್ಮಪರಾಯಣಕನುತ್ತರಾಶಾಭಿಮುಖಂ
ನರ್ಮದೆ ಸನ್ಮಾರ್ಗದೊಳಂ
ಧರ್ಮಜಿನಂ ಪವನನುತ್ತಮನವೊಲ್ ಪೋದಂ  ೧೩

ವ : ಆಸಮಯದೊಳ್

ಅತಿರಮಣೀಯಪರ್ವತನಿತಂಬವನಗಳೊಳಂ ಮಹಾನದೀ
ಪ್ರತಿತಟನಂದನಂಗಳೊಳೆ ಕೆಂದಳಿರ್ದೊಂಗಲಪಾಸಿನಲ್ಲಿ ಮ
ತ್ತತಿಶಯಪುಷ್ಪಕಲ್ಪಿತಸುತಳ್ಪದೊಳಂ ರತಿಕೇಳಿಕಾರಣಂ
ನುತಯುವರಾಜನುಂ ಯುವತಿಯುಂ ಕಳಿದರ್ ಕೆಲವುಂ ಕ್ಷಣಂಗಳಂ೧೪

ವ : ಇಂತಲ್ಲಲ್ಲಿ ಲೀಲಾವಿನೋದಂಗಳಿಂ ಪೊತ್ತಂ ಕಳಿವುತ್ತುಂ ಮೆಲ್ಲಮೆಲ್ಲನೆ ನಿಜಾನ್ವಯರಾಜಧಾನಿಯೊಂದುಕ್ರೋಶಮಾತ್ರಮೆನಲ್ ಬಂದುನಿಂದು ಮುಂದೆ ವಾರ್ತಾಹರರಂ ಕಳಿಪಲವರ್ ಪೋಗಿಯೋಲಗದೊಳಿರ್ದ ಮಹಾಸೇನಮಹಾರಾಜಂಗೆ ಯುವರಾಜನಾಗಮನವಾರ್ತೆಯಂ ಪೇಳ್ವುದುಂ

ಪರಮಾನಂದಮನಪ್ಪುಕೆಯ್ಯೆ ಹೃದಯಂ ರೋಮಾಂಚಸಂದೋಹವಾ
ವರಿಸಲ್ ಕೋಮಳದೇಹಮಂ ನಯನದೊಳ್ ಬಾಷ್ಪಾಂಬು ಕೆಯ್ಮಿಕ್ಕು ಪೊ
ಣ್ಮಿರೆ ಸಂತೋಷಮಯಸ್ವರೂಪಮನದಂ ಪೆತ್ತಂತಿರಿರ್ದಂ ನೃಪಂ
ಧರಣೀಚಕ್ರದೊಳಾರ್ಗೆ ಪುಟ್ಟಿಸದು ಸತ್ಪುತ್ರಾಗಮಂ ರಾಗಮಂ      ೧೫

ವ : ಅನಂತರಮಾ ಸುವ್ರತಾಮಹಾದೇವಿಯುಂ ಧಾರಾಧರವಿರಾವಮಂ ಕೇಳ್ದ ಮಯೂರನಾರಿಯಂತೆ ನಿರವಧಿಪರಿತೋಷಭರಮನಾಂತು ಭೂಕಾಂತನಂತಿಕಕ್ಕೆ ಬಂದು ಮನಃಪ್ರಮೋದಸೂಚನಪರವಶವಚನಂಗಳಂ ನುಡಿದು ಬಂದ ಚರರಿಂಗಂಗಚಿತ್ತ ಮನಿತ್ತು ಪುರದೊಳರಮನೆಯೊಳಂ ಪಿರಿದುಮೊಸಗೆಯನೆಸಗಲ್ವೇಳ್ದು

ನೆಲದೊಳ್ ಬೆಟ್ಟಂಗಳೆಲ್ಲಂ ಚರಿಸುವ ತೆಱದಿಂದಿರ್ದ ಮಾತಂಗಯೂಥಂ
ಗಳಿನೆಂಟುಂ ದಿಗ್ವಿಭಾಗಂಗಳೊಳುದದಧಿತರಂಗಂಗಳೆಲ್ಲಂ ಸಮಂತ
ಗ್ಗಳಮಾಗಲ್ ತುಂಬಿಕೊಂಡಿರ್ದವೊಲೆಸೆವ ಮಹಾವಾಜಿವರ್ಗಂಗಳಿಂದಂ
ನಲವಿಂದಳ್ಳಾಡುವೊಳ್ಪೂಗುಡಿಗಳೆನೆ ಚಲಚ್ಚಾಮರೌಘಂಗಳಿಂದಂ            ೧೬

ಆಗಸದಲ್ಲಿ ಶಾರದಪಯೋಧರಸಂತತಿ ತುಂಬಿದಂತೆ ಚೆ
ಲ್ವಾಗಿರಲೊತ್ತಿಯೆತ್ತಿದ ಲಸದ್ಧವಳಾತಪವಾರಣಂಗಳಿಂ
ದಾಗಳಗುರ್ವುವೆತ್ತು ಕುವರಂಗಿದಿರ್ವಂದರನೇಕಸಂಭ್ರಮಂ
ಭೋಗದಳುರ್ಕೆಯಿಂದೆ ಪಿತೃಮಾತೃಗಳಾನಕನಾದಮುಣ್ಮಲುಂ     ೧೭

ವ : ಅಂತಿದಿರ್ವಂದು

ಬಂದ ಕುಮಾರಕಂಗೆ ಬಿಡುಮುತ್ತಿನ ಸೇಸೆಯನಿಕ್ಕಿ ಮತ್ತೆ ಮ
ತ್ತಂದು ಪಲರ್ಮೆಯಿಂ ಪರಸುತುಂ ತೆಗದಪ್ಪಿ ಬಿಡಲ್ಕಮಾಱದಿ
ರ್ದಂ ದಲದೊಂದು ಜಾವವರೆಗಂ ಧರಣೀಪತಿ ಮತ್ತೆ ಸುವ್ರತಾ
ಸೌಂದರಿಯುಂ ವಿಮೋಹವಶದಿಂ ಬಿಗಿದಪ್ಪಿದಳಾ ತನೂಜನಂ       ೧೮

ಈಗಳ್ ಮನೋರಥಂ ಕೈ
ವಾಗಿದುದೆಯ್ದೆನ್ನ ತಂದೆ ಬಂದ ನಿಮಿತ್ತಂ
ರಾಗದಿನಾ ತಾಯಿ ಮಹಾ
ಭಾಗನನಿಂತೆಂದು ಪೊಗಳ್ದು ಪುಳಕಿತೆಯಾದಳ್  ೧೯

ವ : ಅನಂತರಂ ಕಡುವಿನಯದಿಂ ಪೊಡವಂಟ ಶೃಂಗಾರವತೀದೇವಿಯನ ಭಂಗಿತ ಕರ್ಣಪತ್ರೆಯಾಗಿ ಸುಖದಿಂ ಬಾಳೆಂದು ಪಲಮಾಶೀರ್ವಾದದಿಂ ಪರಸಿ ಗಾಢಾಲಿಂಗನಂಗೆಯ್ದಿಂಬಳಿಯಂ ಮಗನುಮಂ ಸೊಸೆಯುಮನೊಡಗೊಂಡಭಿ ನವ ವಿಭವದಿಂ ಮಹಾಸೇನ ಮಹಾರಾಜನುಂ ಸುವ್ರತಾಮಹಾದೇವಿಯುಂ ನಿಜರಾಜ ಧಾನಿಗಭಿಮುಖರಾಗಿ ಬರ್ಪಾಗಳ್

ಕಡುಬೆಮರಂ ಮೆಯ್ತಾಳ್ದಿ
ರ್ದೆಡೆಯೊಳ್ ತಂಗಾಳಿ ಬಪ್ಪ ತೆಱದಿಂ ಬಡವಂ
ಗೊಡವೆ ಬರ್ಪಂತೆ ಬಂದಂ
ಸಡಗರದಿಂ ನಾವು ಬಯಸುವೆಡೆಯೊಳ್ ಕುವರಂ            ೨೦

ವ : ಎಂದು ಪಣ್ಣಿದ ಪಕ್ಕದ ಪಟ್ಟದಾನೆಗಳನೇಱಿ ಬರ್ಪ ಪಾರ್ಥಿವಪುತ್ರ ಸಾರ್ಥದೊಡನೆ ನುಡಿಯುತ್ತುಮರಸಂ ಬಂದನೇಕಪ್ರಾಕಾರಮಾಣಿಕ್ಯಮಯಮಕರ ತೋರಣಶ್ರೇಣಿಗಳೆಂಬ ಮನೋಹಾರಿಹಾರಂಗಳಿಂದೊಪ್ಪಂಬೆತ್ತತ್ತುಚ್ಚೈಸ್ತನಕೂಟ ರಮಣೀಯ ತರಮುಮವಿರಳ ಹರಿಚಂದನರಸಪರಿಕಳಿತ ಕುಂಕುಮಕರ್ದಮಸ್ಥಾಪಕಸ್ಥಗಿತ ಸಮಸ್ತ ಪ್ರದೇಶಪೇಶಲಮುಂ ಕುಸುಮವಿಸರವಿರಚಿತ ರಚನಾವಿಶೇಷರುಚಿರಮು ಮತಿಶಯಿತ ಪ್ರಾಕಾರ ವಿರಾಜಿತಮುಮಾಗಿ ಕೆಯ್ಗೆಯ್ವು ಕಾಮಿನಿಯಂತೆ ಕಮನೀಯತೆವಡೆದ ಪುರಲಕ್ಷ್ಮಿ ಪಿರಿದಾದ ಸಂಭ್ರಮುಮನೊಳಕೊಂಡ ಧ್ವಜಾದಂಡಂಗಳೆಂಬ ಭುಜಾ ದಂಡಂಗಳಂ ನೆಗಪಿ ಪವನಪರಿಸಂಚಳ ಸಮೀಚೀನಚೀನಮಹಾಚೀನಾದಿಪೀವರ ಚೀವರಂಗಳೆಂಬ ಕರತ ಳಂಗಳಿಂ ಕೆಯ್ವಿಸಿ ಮಂಗಳಪಟಹಪಟುರವಂಗಳಿಂ ನುಡಿದು ಕುಮಾರನಂ ಕರೆವಂತಿರ್ಪು ದುಮದಂ ಮುಟ್ಟೆವಂದೊಳಗಂ ಪೊಗುವಾಗಳ್

ಪಾಡುವರಪ್ರತಿರವದಿಂ
ಪಾಡುವವೋಲಾಡುತಿಪ್ಪರಪ್ರತಿಬಿಂಬದ
ಗಾಡಿಯನೊಲ್ದೋಡುವವೊಲ್
ನಾಡೆಯುಮೊಳಕೊಂಡುದಾ ಪುರಂ ಸಂಭ್ರಮಮಂ          ೨೧

ವ : ಆಪೊತ್ತಿನೊಳತೀವನೂತ್ನಪ್ರಭಾವನಾಪ್ರಭವಪ್ರಯತ್ನಮಾದ ತದ್ರತ್ನ ಪುರದಲ್ಲಿ

ಕಳಶಕುಚಂ ಕದಕ್ಕದಿಸೆ ಚಂಚಳಲೋಚನಕಾಂತಿ ಸುತ್ತಲುಂ
ಪೊಳೆಯೆ ಕುರುಳ್ಗಳುಂ ಕೆದಱೆ ಪಾದತಳಂ ತಳಿರೇಳಿಸಲ್ ಧರಾ
ತಳದೊಳವೇಕ್ಷಣಾತುರಜಸಂಭ್ರಮಸಂಭೃತಚಿತ್ತವೃತ್ತಿಕಂ
ಥಳಥಳಿಸುತ್ತು ಬಂದುದು ಪುರೀತರುಣೀಜನಮಂದು ಲೀಲೆಯಿಂ    ೨೨

ವ : ಅಂತುಬಂದು ವಧೂವರಾವಳೋಕನಸಮಾಕುಳಜನಜನಿತಸಮ್ಮರ್ದ ಕೋಳಾಹಳ ಸನಾಥಮಪ್ಪ ರಾಜವೀಥಿಕಾಪ್ರದೇಶದ ಕೆಲದೊಳ್ ನಿಂದು

ಮಾತಂಗಾರೂಢನೀತಂ ನಿರತಿಶಯಕುಮಾರಂ ದಲೀ ಪಿಂದೆ ರತ್ನ
ಬ್ರಾತಪ್ಪೋತಸ್ಫುರತ್ಪಾವನತರ ಶಿಬಿಕಾರೂಢೆಯಾಗೆಯ್ದೆ ಬರ್ಪ
ಖ್ಯಾತಸ್ತ್ರೀಯಿಕೆ ಶೃಂಗಾರವತಿವೆಸರ ಮಾದೇವಿಯಿಂತೆಂದು ತಮ್ಮೊಳ್
ಮಾತನಾಡುತ್ತುಂ ಕರಂ ನೋಡಿದುದು ಮದುವೆಯಾಗಿಂತು ಬರ್ಪೊಂದು ಚೆಲ್ವಂ       ೨೩

ವ : ಎಂದು ಗಡಣಂಗೊಂಡು ತಮ್ಮೊಳೋರೊರ್ವರೊಡನೆ ನುಡಿವ ಮಡದಿಯರ ಸಡಗರದ ಕಡುನುಡಿಯೊಳ್ ತಡಂಗಲಿಸಿದಗಣ್ಯಪುಣ್ಯಪಾಠಕ ಜನಂಗಳಾಶೀರ್ವಾದ ನಾದಂಗಳ ನಾಕರ್ಣಿಸುತ್ತುಂ ಕುಲವೃದ್ಧಾಂಗನಾಸಂಘಾತಂಗಳ್ ಪರಸಿ ತಳಿವ ಮಂಗಳ ಶೇಷಾಕ್ಷತಂಗಳನಾಂತುಕೊಳುತ್ತುಂ ಬಂದು ರಾಜಮಂದಿರ ದೊಳಗಂ ಪೊಕ್ಕು

ತನ್ನೊಡವಂದರಸುಗಳಂ
ಮನ್ನಿಸಿಬೀಳ್ಕೊಟ್ಟು ಕಳಿಪಿ ಕರುಮಾಡದ ಮೊದ
ಲುನ್ನತಮೆನಿಸುವ ನೆಲೆಯೊಳ್
ಬಿನ್ನವಿಸಿಕ್ಕಿದ ಸುವರ್ಣಸಿಂಹಾಸನದೊಳ್        ೨೪

ಶೃಂಗಾರವತೀದೇವಿಯು
ಮಂಗಜಸನ್ನಿಭಕುಮಾರನುಂ ಕುಳ್ಳಿರ್ದರ್
ಸಂಗಡದಿಂ ಸಂತಸಮಂ
ಪಿಂಗದೆ ಕುಳ್ಳಿರಿಸುತುಂ ಸಮಸ್ತರ ಮನದೊಳ್  ೨೫

ವ : ಸಮನಂತರಮಾ ಮಹಾಸೇನಮಹಾರಾಜನುಂ ಸುವ್ರತಾಮಹಾ ದೇವಿಯುಂ ಮತ್ತಂ ಪುರದೊಳರಮನೆಯೊಳಂ ಮಹೋತ್ಸಾಹಮಂ ಕೊಂಡಾಡಿ ಯಥೋಚಿತ ವಾಸರ ವ್ಯಾಪಾರಮಂ ತೀರ್ಚಿ ಮದುವೆಯಾದ್ಯಂತವೃತ್ತಾಂತಮಂ ತಿಳಿದು ಬಳಿಯಂ ಜಳನಿಧಿಯುಂ ವೇಳೆಯುಂ ನಿಜತನೂಜನಪ್ಪ ಪರಿಪೂರ್ಣಕಳಾಧರನುಂ ರೋಹಿಣಿಯುಮೊಂದಿರ್ಪುದಂ ಕಂಡು ಪೆಟ್ಟುವೆರ್ಚುವಂತರಸನುಮರಸಿಯುಂ ತಮ್ಮಯ ಮಗನುಂ ಸೊಸೆಯುಮಪ್ಪ ಧರ್ಮನಾಥಕುಮಾರನುಂ ಶೃಂಗಾರವತೀದೇವಿಯು ಮೊಂದಾಗಿ ಕೂಡಿ ಸುಖದಿಂ ಬಾಳ್ವುದಂ ಕಂಡು ಕಡುನಲಿದು

ಅತಿಶಯನಿರ್ಜರಾಂಗನೆಯರೋಲಗದಿಂದಭಿರಂಜಿಸಿರ್ದು ಭೂ
ರಿತರಸುರಾಗನಂದನವಿಲೋಕನಲೀಲೆಯನೆಯ್ದೆ ತಾಳ್ದಿ ಸ
ನ್ನುತಪಿತೃಮಾತೃಗಳ್ ಗುಣಿವಧೂವರರಂ ನಡೆನೋಡಿ ನಿರ್ನಿಮೇ
ಷತೆಯನಲರ್ಚುತುಂ ಶಚಿಶಚೀಶರವೊಲ್ ತಣಿದರ್ ಸುಸೌಖ್ಯದಿಂ  ೨೬

ಅನ್ಯರಾರಿಂಗಮಿಲ್ಲದ
ಮುನ್ನೆಂದುಂ ಕಿಱಿದನಾರ್ದೊಡನುಭವಿಸದ ಸುಖ
ಮುಂ ನೆಱೆಸಮುನಿಸಿದುದು ಪು
ಣ್ಯೋನ್ನತಪಿತೃಮಾತೃಗಳ್ಗೆಸುತದರ್ಶನದಿಂ   ೨೭

ವ : ಇಂತು ನಿರಂತರಿತ ಪರಮಪ್ರಮೋದಪರಂಪರೆಯನಪ್ಪುಕೆಯ್ದಿರ್ಪುದು ಮೊಂದುದಿವಸಮಾ ಮಹಾಸೇನಮಹಾರಾಜಂ ನಿಜತನೂಜನಪ್ಪ ಧರ್ಮನಾಥಕುಮಾರಂ ಬೆರಸು ಪರಿಭಾಸ್ವರಸ್ವರುದಳಪ್ರಾಸಾದಿತ ಕಾರ್ತಸ್ವರಮಯಪ್ರಾಸಾದ ಶಿಖರೀಭೂತಶಿಖರಿ ನಿರ್ಯೂಹಪರ್ಯಂಕಮಂಡಳದೊಳುದ್ದಂಡಮಂಡಳಿಕ ದಂಡನಾಥಮಕುಟ ಬದ್ಧಾದಿ ನಿರವಶೇಷಪರಿವಾರದೊಡಗೂಡಿ ಒಡ್ಡೋಲಗಂಗೊಟ್ಟು ಲೀಲಾವಿನೋದ ದಿಂದಿರುತ್ತುಮಿರಲಾತನ ಸಂತೋಷಮೆಂಬ ಸಸ್ಯಸಮೃದ್ಧಿಯಂ ಸಫಲಂ ಮಾಡಲ ವಸರಂಬಡೆದಂತೆ

ಪದೆಪಿಂದಂ ಧರ್ಮನಾಥಂ ನಿರುಪಮಪರಮೈಶ್ವರ್ಯಕಾರ್ಹಂತ್ಯಲಕ್ಷ್ಮೀ
ಪದಮಂ ತಾಳ್ದಂದು ನಮ್ಮಂ ಬಳಿಕೆ ಬಗೆಯನಾತಂಗೆ ನಮ್ಮೋಲಗಂ ಪ
ತ್ತದು ಮತ್ತಿಂತೆಂದು ಸೇವಾಸಮಯಮಱಿದು ಬರ್ಪಂತಿರಾಶ್ಚರ್ಯದಿಂ ಬಂ
ದುದು ಕಾರ್ಗಾಲಂ ವಿನೀಲಂ ತಟಿದುದಯವಿಲೋಲಂ ಧ್ವನನ್ಮೇಘಜಾಲಂ   ೨೮

ಮಿಗುವ ದ್ವಿಜರಾಜಕಳಾ
ಳಿಗಳಂ ಕಿಡಿಸುತ್ತುಮೆಯ್ದೆ ಮಿತ್ರನ ತೇಜಮ
ನಗಿಯದೆ ಕುಂದಿಸುತುಂ ಬಿಡ
ದೊಗೆದಂ ಕಾರೆಂಬ ದುರ್ಜನಂ ಗರ್ಜಿಸುತುಂ      ೨೯

ವ : ಆಗಳ್

ಪಡುವಣಗಾಳಿಯೆಂಬ ಕಡುನಲ್ಲನ ಸೋಂಕಿನೊಳುಬ್ಬಿ ರಾಗಮಿ
ಮ್ಮಡಿಸೆ ಧರಿತ್ರಿಯೆಂಬಬಳೆಗೊರ್ಮೊದಲೊಳ್ ಪರಿತಾಪದೇಳ್ಗೆ ತಾ
ನಡಗಿದುದೆಯ್ದೆ ದೂಳಿಗಣಮೆಂಬ ಲಸತ್ಪುಳಕಾಂಕುರಾಳಿ ಮ
ತ್ತೊಡನೊಡನೆಳ್ದುದದೃಭಯಮೆಂಬ ಕುರುಳ್ ಕುಣಿದತ್ತು ನಾಡೆಯುಂ       ೩೦

ವ : ಇಂತು ವಿರಹಿಜನಂಗಳೆಂಬ ತರುನಿಕರಂಗಳಂ ಸುಡುವ ವಿರಹಾಗ್ನಿಯ ವಿಜೃಂಭಣಕ್ಕೆ ನೆರಮಾಗಿ ಕಯ್ವಾರಂ ಬಂದಂತೆ ಗಭೀರಂ ಪಶ್ಚಿಮಾಶಾಸಮೀರಂ ಬಂದು ತೀಡಲೊಡಂ

ತೊಟ್ಟನೆ ಬೆಟ್ಟಬೇಸಗೆಯ ನಟ್ಟಬಿಸಿಲ್ಗಳವಟ್ಟು ತಣ್ಣಸಂ
ಪುಟ್ಟಿದುದಳ್ತಿವಟ್ಟುದು ಮರಾಳಕುಳಂ ಗಮನಾತುರಕ್ಕೆ ನೇ
ರ್ಪಟ್ಟುದು ಚಾತಕಪ್ರತತಿಗಂ ಪ್ರಮದಂ ನವಿಲೋಳಿಗಳ್ಗೆ ಮುಂ
ದಿಟ್ಟುದು ನರ್ತನಂ ಮಿಸುಪ ಪಣ್ಗೊನೆವೆತ್ತುದು ಜಂಬುನೇಱಿಲಂ೩೧

ಮೊಲ್ಲೆ ಮುಗುಳ್ಗಳನಾಂತುದು
ಚಿಲ್ಲಂ ಪರಲೊತ್ತಿ ತೋರ್ಕೆವೆತ್ತುದು ತದುಕುಂ
ಪಲ್ಲವಿಸಿರ್ದುದ ಕೇದಗೆ
ಮೆಲ್ಲನೆ ಗಱಿಗಟ್ಟಿ ತಳೆದುದದು ಬೆಳ್ಸುಳಿಯಂ            ೩೭

ಅವಱ ವಿಳಾಸಮಂ ಗಹನಲಕ್ಷ್ಮಿ ನಿರೀಕ್ಷಿಸಲೆಂದು ನಾಡೆಯುಂ
ತವಕಿಸಿ ಚೋದ್ಯದಿಂ ಪಲವುಕಣ್ದೆಱೆದಿರ್ದಪಳೆಂಬ ಮಾಳ್ಕೆಯಿಂ
ದವೆ ಕೆದಱರ್ದವೆಲ್ಲೆಡೆಯೊಳಂ ಪರಿರಂಜಿಪ ಕಣ್ಣಪೀಲಿಗಳ್
ನವನುತಿಯಂತಿರೊಪ್ಪಿದುದು ಕೇಗುವ ಸೋಗೆನವಿಲ್ಗಳ ಸ್ವರಂ     ೩೩

ವ : ಅಂತು ಘನಸಮಯಪ್ರವೇಶಮಖಿಳಜನಮನೋವಿಕಾಸಕ್ಕವಕಾಶಮಾಗೆ

ಬಡವಾಗ್ನಿಜ್ವಾಲಿಕಾಭೀತಿಯಿನಪರಪಯೋರಾಶಿವೇಳಾವನಂ ಮೇ
ಗಡರ್ದು ವ್ಯೋಮಾಂತರಾಳಸ್ಥಳಮನುರೆಶರಣ್ಬೊಕ್ಕುದೆಂಬಂದದಿಂ ಮೇಣ್
ಸಿಡಿಲಗ್ನಿಪ್ರೋದ್ಯದತ್ಯದ್ಭುತಹಳತಳಮೋದ್ಧೂತಧೂಮಪ್ರತಾನಂ
ಗಡಣಂಗೊಂಡಿರ್ದುದೆಂಬಂದದೆ ಪಸರಿಸಿತುತ್ತಾಳಮಂಭೋದಜಾಳಂ           ೩೪

ಪೊತ್ತುವ ಬಾಡವಾಗ್ನಿಯ ಪೊದರ್ ಪೊಗೆಸುತ್ತಿದೊಡುಬ್ಬೆಗಂ ಪೊದ
ಳ್ದತ್ತೆ ಸಮಂತು ನಿತ್ತರಿಸಲಾಱದೆ ಪಶ್ಚಿಮಾವಾರ್ಧಿಯಿಂದೆ ಮೇ
ಲ್ಪತ್ತುವ ವಾಃಕರೀಂದ್ರಘಟೆಯಂತೆ ಪಯೋಧಘಟೆ ದ್ಯುಕಕ್ಷದೊಳ್
ಸುತ್ತಿದುದರ್ಕಸತ್ಕಿರಣಪಲ್ಲವಮಂ ತಿನಲೆಂಬ ಮಾಳ್ಕೆಯಿಂ          ೩೫

ನೀರದಸಂಕುಳಂ ನೆರದುಬಂದು ಘನಾತುರದಿಂ ಪ್ರತೀಚಿಕಾ
ನೀರಧಿ ನೀರನೀಂಟುವೆಡೆಯೊಳ್ ಬಡವಾಗ್ನಿಯನೀಂಟಿ ಪೋಗಿ ತ
ನ್ನೀರದಮಾರ್ಗದೊಳ್ ಪಸರಿಸಿರ್ದುದಲ್ಲದೊಡೆಂತು ಬಂದುದೋ
ಭೂರಿಕೃಶಾನುಕಾಂತಿಯೆನಲುಣ್ಮವ ಮಿಂಚಿನ ಗೊಂಚಲೆತ್ತಲುಂ     ೩೬

ಜಗಮಂ ತಾಪಿಸುವರ್ಕಂ
ಜಗುಳ್ದೋಡಿದನೆಲ್ಲಿಗೆಂದು ಮಿಂಚೆಂಬೀ ದೀ
ವಿಗೆವಿಡಿದು ತೋರ್ಪ ತೆಱದಿಂ
ಗಗನದೊಳಂ ಪಸರಿಸಿತ್ತು ಕಾರ್ಮುಗಿಲೆತ್ತಂ       ೩೭

ದ್ರುತಜಲಗರ್ಭದಿಗ್ವಧುಗೆ ಗೆಂಟಿಗೆಗಟ್ಟುವ ಪೊತ್ತಿನೊಳ್ ತಟಿ
ಲ್ಲತೆ ಕಡುಪಾಗಿ ಪೊಯ್ವುತಿರೆ ಕಾರ್ಮುಗಿಲೆಂಬ ಗಭೀರಭೇರಿಯಿಂ
ದತಿಶಯರಾವಮುಣ್ಮಿ ನೆಱೆಪೊಣ್ಮಿದುದೆಂಬಿನಮುರ್ವಿಕೊರ್ವಿ ಪ
ರ್ವಿತು ದಶದಿಕ್ತಟೀವಿವರದಲ್ಲಿ ನಿರಂತರಮೇಘಗರ್ಜನಂ೩೮

ಜಳಧರಲಕ್ಷ್ಮೀಯ ಕಟಿಯೊಳ್
ವಿಳಸನಮಂ ತಳೆದ ಹೊನ್ನಮೇಖಳೆಯೆಂಬಂ
ತೆಳಮಿಂಚಿನ ಬಳಗಂ ಥಳ
ಥಳಿಸುತ್ತುಂ ನಿಮಿರ್ದು ನೀಳ್ದು ಪೊಳೆದುದು ಸುತ್ತುಂ     ೩೯

ಕಱೆದುದು ಮುನ್ನಮೆಯ್ದೆಕಡುಗತ್ತಲೆಯೋಳಿಯದೊಂದು ತಂದಲಂ
ಕಱೆದುದು ಮತ್ತೆ ಮಿಂಚುಗಳ ಪಿಂಡಿನ ಬಲ್ಸರಿಯಂ ಬಳಿಕ್ಕದುಂ
ಕಱೆದುದು ಮಾಣದೆಲ್ಲೆಡೆಯೊಳಾಲಿವರಲ್ಗಳ ನಟ್ಟ ಸೋನೆಯಂ
ಕಱೆದುದನಂತರಂ ಪಿರಿದುವಾರಿಯ ಪೆರ್ಮಳೆಯಂ ಪಯೋಧರಂ    ೪೦

ಗಗನಶ್ರೀಘನಕಾಲಮೆಂಬ ವಿಟನೊಳ್ ಸಂಭೋಗಮಂ ಮಾಡುತುಂ
ಬಿಗಿದಪ್ಪಲ್ಕೆ ಪಯೋಧರಾಗ್ರದೆಡೆಯೊಳ್ ನಿಂದಿರ್ದ ಹಾರಂಗಳೋ
ಳಿಗಳೆಲ್ಲಂ ಪಱಿದೆಯ್ದೆಳಲ್ವ ತೆಱದಿಂ ಮುನ್ನಂ ಮಹಾನೀರಧಾ
ರೆಗಳುಂ ಬೀಳ್ತರುತಿರ್ದು ಪುಟ್ಟಿರಿದವಂದೆಲ್ಲರ್ಗಮಾಶ್ಚರ್ಯಮಂ೪೧

ಪಡುವಣ ಗಾಳಿಯ ಪೊಯ್ಲಿನ
ಕಡುಪಳವಡೆ ಕಾರಮೇಘಮೆಂಬವ ನಿಜದಿಂ
ಬಿಡದುದಿರ್ವ ಪೂಗಳೆಂಬಂ
ತೆಡೆಯುಡುಗದೆ ಬೀಳ್ದವಾಲಿಕಲ್ಗಳವೆತ್ತಂ       ೪೨

ಸ್ಮರಚಾಪದೆ ಶರವರ್ಷಂ
ಸುರಿವಂತಿರೆ ನೀಲನೀರಧರದಿಂ ಬಿಡುತಂ
ದುರವಣಿಸಿ ಸುರಿದದೆತ್ತಂ
ಶರಷರ್ವಂ ಪುಟ್ಟುವಂತಿರುತ್ಕಳಿಕೌಘಂ           ೪೩

ಧರಣೀಮಂಡಲಮೆಂಬ ಭಾಜನಮಿದೆಲ್ಲಂ ತುಂಬಿತುಳ್ಕಾಡುವಂ
ತಿರೆ ಭೋರ್ಭೋರೆನುತುಂ ಸುಪೀವರಪಯೋಧಾರಾಪ್ರವಾಹಂಗಳಂ
ಪಿರಿದುಂ ವಾರಿದಮೆಂಬ ಚೆಲ್ವ ಪಶುವಂ ಸೌದಾಮಿನೀದಾಮದಿಂ
ಕೊರಡುಂ ನೀಳ್ದಿರಲಲ್ಲಿ ಕಟ್ಟಿ ಕ ಠಿದಂ ಕಾರೆಂಬ ಗೋಪಾಳಕಂ     ೪೪

ಪಾಱುತ್ತಿರ್ದವು ಕೆಲವುಂ
ತೂಱುತ್ತಿರ್ದವು ಸಮಂತು ಕೆಲವುಂ ಕೆಲವುಂ
ಮೀಱುತ್ತಿರ್ದವು ಮೇರೆಯ
ನೇಱಿದ ಜಲಬಿಂದುಗಳ್ ಸಮೀರಣವಶದಿಂ     ೪೫

ವ : ಆಸಮಯದೊಳ್

ಪಕ್ಕಮನೆಯ್ದೆಬಿರ್ಚಿ ಗಱಿಮಿಳ್ಳಿಸಿ ನೀಡಿ ಸುಕಂಠನಾಳಮಂ
ಮಿಕ್ಕು ಮಿಕ್ಕು ವಿಯತ್ತಳಕ್ಕೆ ನಿಜಚಂಚುಪುಟಂದೆಱೆದಾರ್ತಮೆಯ್ದೆ ಕೆ
ಯ್ಮಿಕ್ಕಿರೆ ತೋರ ಕಾರ್ಮುಗಿಲ ನೀರ್ವನಿಯಂ ತವೆಪೀರ್ದು ಪೀರ್ದು ತಾಂ
ಸೊಕ್ಕಿನಳುರ್ಕೆಯಿಂ ನಲಿದುದಂದುರುಸಾತಕಮೊಂದು ಚಾತಕಂ       ೪೬

ಒಂದೊಂದಂ ನೋಡಲೆಂದಾ ಚತುರುದಧಿಗಳೆಳ್ತಂದು ಭೂಭಾಗದೊಳ್ ತಾ
ವೊಂದಾಗಿರ್ದಂದದಿಂ ಕಾಳ್ಪುರಮೆಸಗಿದುದದಲ್ಲಲ್ಲಿಗಂ ಕೊರ್ಬಿ ಪರ್ವ
ಲ್ಕಂದಾರಣ್ಯೇಭವೃಂದಂ ಜಲಗಜಚಯಮೆಂಬಂದದಿಂ ಪತ್ತನೌಘಂ
ಸಂದಂತರ್ದ್ವೀಪಮೆಂಬಂದದೆ ಮಳೆ ಕಱೆದತ್ತದ್ಭುತಂ ಪುಟ್ಟುವನ್ನಂ          ೪೭

ವ : ಇಂತಗ್ಗಳಮಾಗಿ ಕೌತೂಹಳಂ ಕೆಯ್ಮಿಗುವಂತು ಪೆರ್ಮಳೆಕೊಂಡು ಮಾಣಲೊಡಂ ಲೋಕಮೆಲ್ಲಮೇಕಾರ್ಣವಮಾದುದೆಂಬಂತೆ ಸುತ್ತಲುಂ ಬೆಳ್ಳಂ ಕವಿದು ಪರಕಲಿಸಿ ನೋಳ್ಪರ ಕಣ್ಗಳಿಂಗಗುರ್ವನೀವುತ್ತುಮಿರೆ

ಕಾಳೆಗದಂತತಿಕ್ಷುಭಿತವಾಹಿನಿಯೊಳ್ ಪಿರಿದಾದ ಘೋಷಮಂ
ಮೇಳಿಸಿದತ್ತು ಗರ್ಭವತಿಯಂದದಿನೆಯ್ದೆ ರಜೋವಿಕಾರನಿ
ರ್ಮೂಳನಮಂ ಸಮಂತೊಡರಿಸಿತ್ತು ದುರಾತ್ಮಕನಂತೆ ಕೂಡೆ ಪರಿ
ಕಾಳಿಯನೆಯ್ದಿಸಿತ್ತಿಳೆಯೊಳೇಂ ಮಳೆಗಾಲಮಳುಂಬಮಾದುದೋ   ೪೮

ಪ್ರತಿಕೂಲವೃತ್ತಿಯಂ ಮಾ
ಡುತುಮಭ್ಯಂತರಮನೆಯ್ದೆಕದಡುತ್ತುಂ ಮೀ
ಱುತಮಿರ್ದುದು ಮೇರೆಯನಂ
ದತಿಶಯದೆ ಜಡಾಶಯಂ ಜಡಾಶಯನನ್ನಂ      ೪೯

ನಟ್ಟೆಱಗುತ್ತುಮಿರ್ಪ ಕಡುಸೋನೆಯ ಧಾರೆಗಳಲ್ಲಿ ಸಿಲ್ಕಿ ಮೆ
ಳ್ಪಟ್ಟು ಕಱಾಗಿಪೋದನೊ ಸಿಡಿಲ್ದನಿಗೊಟ್ಟೊಡೆ ಕೇಳ್ದು ಬೆರ್ಚಿ ಕ
ಣ್ಗೆಟ್ಟು ರಥಾಗ್ರದಿಂ ನೆಲಕೆ ಬಿದ್ದನೊ ಹಾ ರವಿ ಕಾಣೆನೆಂದು ಬಾ
ಯ್ವಿಟ್ಟು ಪಲುಂಬುವಂತೆಸೆದುದಬ್ಜಿನಿ ಮಂಗಳಭೃಂಗರಾವದಿಂ    ೫೦

ಪೂಗಳ ಗೊಂಚಲಿಂ ಪುದಿದ ಜಾದಿಗಳೊಳ್ ನಲಿದಾಡಿ ಪೂತ ಪು
ನ್ನಾಗದ ಬಂಡನುಂಡು ಕುಮುದಂಗಳೆಸಳ್ಗಳ ಪಾಸಿನಲ್ಲಿ ಚೆ
ಲ್ವಾಗಿಯೆ ಕುಳ್ಳಿದಿರ್ದಳಿವಧೂಮೃದುಗೀತಮನಾಲಿಸುತ್ತದೇಂ
ರಾಗಿಸಿದತ್ತೊ ತುಂಬಿಗಳ ಪಿಂಡು ಕರಂ ನೆಲೆಗೊಂಡ ಸೌಖ್ಯದಿಂ       ೫೧

ಅಱಸಿದೆವಿನ್ನೆಗಂ ಬಿಡದೆ ಕಾಣದೆ ನಿಮ್ಮನದೆ‌ಲ್ಲಿಯುಂ ಮನಂ
ಮಱುಗಿದುದೆಂದು ತಾಯೆನಿಪ ವಾರಿಗೆ ಮುದ್ದಿಸಿ ತಮ್ಮ ದಾಹಮಂ
ಮೊಱೆಯಿಡುವಂತೆ ಟಱ್ರ ಟಱಟಱ್ರ ಟಟಱ್ರ ಟಟಱ್ರ ಟಱ್ರಯೆಂ
ದೊಱಲುತುಮಿರ್ದುದಾಗಳಧಿಕಂ ಸಲಿಲಾಶಯಭೇಕಶಾಬಕಂ         ೫೨

ಕಾಮನ ಬಿ‌ಲ್ಲಿನೊಳ್ ತೊಡರ್ದುದಂ ಶರಮಂ ಬಿಡದೆಚ್ಚು ಗೆಲ್ದನೀ
ಭೂನಿಯೊಳುಳ್ಳರಂ ಮದನನೆಂದು ಜಯೋತ್ಸವಮಾದುದೆಂಬಿನಂ
ವ್ಯೋಮದೊಳೆಯ್ದೆ ಮಿಂಚು ಗುಡಿ ಬದ್ದವಣಂ ಮೊಳಗಾಗಿಸುತ್ತಲು
ದ್ದಾಮಮೆನಿಪ್ಪ ಸಂಭ್ರಮಮನಾಂತು ವಿಘೂರ್ನಿಸುತಿರ್ದುದಾಕ್ಷಣಂ           ೫೩

ವ : ಬಳಿಯಂ ಪಡುವಣ ಪವಮಾನಪರಿಪ್ರೇರಣಾಪ್ರಾಬಲ್ಯವಶದಿಂ ಪಯೋಧರಪ್ರಸರಂ ಪರೆದು ಪಾಱಿಪೋಗಲೊಡಂ ಪಳಚ್ಚನೆ ಬಿಸಿಲೊಳ್ ಪೊಳೆದು ದೆಸೆಗಳತಿವಿಶದಂಗಳಾಗೆ

ಕಡುಸೀತಂ ಪತ್ತೆ ಸರ್ವಾಂಗದೊಳುದಲವಕಂ ಬೆನ್ನೊಳಂ ತುಂಬೆ ತಮ್ಮೊ
ಳ್ದೊಡೆಯೊಳ್ಬಾಲಾಗ್ರಕಂ ಪತಿಸಿದವೊಲಿರೆ ಸಂಕೋಚಮಂ ತಾಳ್ದೆ ತರ್ಗಿ
ರ್ದೊಡಲುಂ ತಂತಮ್ಮೊಳೊಂದೊಂದಡಸಿಡುಕುಱೊಳೊತ್ತೊತ್ತುಮಂ ಸಾರ್ದುಮತ್ತಂ
ನಡುಗುತ್ತುಂ ಬಿಂದು ಮೆಯ್ಯಂ ಬಿದಿರ್ದು ಮೃಗಮೃಗೀಸಂಕುಳಂ ಪೋಯ್ತದೆತ್ತಂ       ೫೪

ಮಱಿಗಳನಪ್ಪಿಕೊಂಡು ಪೊಱಮಟ್ಟುದು ಕೋಡಂಗೆಯೋಳಿಪೋಳಲಿಂ
ತುಱುಗಿದ ಕೂದಲಂ ಬಿದಿರ್ದು ಜೊಂಪಿಸುತುಂ ಪೊಱಮಟ್ಟುದೆಯ್ದೆ ಕು
ಕ್ಕುಱಿಸಿ ದಲಿರ್ದ ಪೆರ್ಕರಡಿಯುಂ ಮೆಳೆಯಿಂ ಕಟವಾಯ ನಕ್ಕುತುಂ
ಕಿಱುವುಲಿ ಸುರ್ಬುಗೊಂಡು ಪೊದಱಿಂ ಪೊಱಮಟ್ಟುದು ಮೆಲ್ಲನಾಕ್ಷಣಂ    ೫೫

ಪೊಸಪೊನಲೊತ್ತಿ ಪುಗೆ ಪುತ್ತದ ಬಾಯೊಳಮಲ್ಲಿ ಪಾವುಗಳ್
ಬಸಮಳಿದಿಕ್ಕೆಲಕ್ಕೆ ಬಿಡದವ್ವಳಿಸುತ್ತವು ಮೇಗೆ ಪಾಯ್ದು ಲಂ
ಘಿಸಿ ಪೊಱಮಟ್ಟುಬಂದು ಬಲೆ ಭೊಸ್ಸನೆ ಭೊಸ್ಸನೆ ಸುಯ್ದು ಬಳ್ದುದೆ
ಮ್ಮಸುವೆನುತುಂ ಕಡಂಗಿ ಪೆಡೆಯೆತ್ತಿ ದಲಾಡುತುಮಿರ್ದವರ್ಥಿಯಿಂ            ೫೬

ಕರಿಯೂಥಂ ನಿಜಕರಪು
ಷ್ಕರದಿಂದಂ ತುಂಬಿ ತೆಗೆದು ಪೊಸಪೊಸನೀರಂ
ಕರಿಣೀಯೂಥದ ಕರಪು
ಷ್ಕರದೊಳ್ ಪೂತ್ಕರಿಸೆ ಚಲ್ಲಿ ನಲಿದವು ತಮ್ಮೊಳ್        ೫೭

ಎಳವುಲ್ಲಂ ಮೇದು ಮುಂಗಾಲ್ಗಡಿಯೆನೆ ಬಿರಿವನ್ನಂ ಕರಂ ಬೀಗಿ ಬೆನ್ನುಂ
ತಿಳಿನೀರಂ ಪೀರ್ದು ಕೊರ್ಬುಬ್ಬರಿಸಿ ಸುರಿಯೆ ಪಾಲ್ಕೆಚ್ಚಲಿಂದೂಡಿ ವತ್ಸಂ
ಗಿಳೆಯೊಳೆ ನಿಂದಿರ್ದುದೆತ್ತಂ ವನಚರಮಹಿಷೀರಾಜಿ ಮೆಲ್ಕೊತ್ತುತುಂ ಕ
ಣ್ಗಳನರ್ಧಂಮುಚ್ಚಿ ಸಾರ್ತಂದುಗೆ ನೊರೆ ಕಟವಾಯಿಂದಮಳ್ಳಾಡೆ ಬಾಲಂ   ೫೮

ಮಲ್ಲಿಗೆಯ ಪೂವಿನಂಬಂ
ಫೂಲ್ಲಶರಂ ತೊಟ್ಟನೋಡಿ ವಿರಹಿಗಳೆನುತುಂ
ಸೋಲಿಪ ತೆಱದಿಂ ಸೋಗೆಗ
ಳೆಲ್ಲಂ ಕೇಗಿದವು ಕೆದಱಿ ಕಡುವೀಲಿಗಳಂ         ೫೯

ವ : ಇಂತತಿ ಪ್ರಬಳವಾಗಿ ಬಂದಳವಿಗಳೆದು ಕಱೆದು ಮಾಣ್ದ ಕಾರ್ಗಾಲದ ಪೆರ್ಮಳೆಯ ಕೋಳಾಹಳಮಂ ಕಂಡು ಕೌತುಕಮುತ್ತು ಕೊಂಡಾಡಿ ನುಡಿಯುತ್ತುಮಿರ್ದ ಮಹಾಸೇನ ಮಹಾಜನುದಯಶಿಖರೀಶಿಖರಮುಖರಮುಖಶೇಖರೀಭೂತಖರ ಮಯೂಖನೆಂಬಂತೆ ಪ್ರಾಸಾದಶಿಖರಸಂಸ್ಥಿತಸಭಾಮಂಡಳಮಧ್ಯದೊಳ್ ಕುಳ್ಳಿರ್ದು ದಿಶಾಶೋಭಾವಳೋಕಂಗೆಯ್ವುತ್ತುಮಿರ್ಪಿನಂ ಪೂರ್ವದಿಗ್ಭಾಗದಲ್ಲಿ

ಘನಸಮಯಂ ದಲೆಂಬ ಪತಿ ಬಂದೊಡಮಾಗಸಮೆಂಬ ಲಕ್ಷ್ಮಿ ತ
ನ್ನನುಪಮಮಾದ ಪೀವರಪಯೋಧರಮಂಡಳಮಧ್ಯದಲ್ಲಿ ಪಾ
ವನತರ ಪಂಚರತ್ನಮಯಹಾರಮನಿಕ್ಕಿದಳೆಂಬ ಮಾಳ್ಕೆಯಿಂ
ಕನದುರುಶಕ್ರಚಾಪಮಭಿರಂಜಿಸಿದತ್ತು ವಿಚಿತ್ರವರ್ಣದಿಂ   ೬೦