ವ : ಮತ್ತಮಾ ವಧೂವರರಂ ಕೆಯ್ಮಿಕ್ಕ ಬೆಕ್ಕಸಮುತ್ತು ನೋಡುತ್ತುಮಿರ್ದ ನಿಖಿಳನಿಖಿಳ ಕ್ಷತ್ರಿಯಪುತ್ರಮೊತ್ತಂಗಳೆಲ್ಲಂ ಮಿತ್ರನಂ ಕಂಡ ನಕ್ಷತ್ರಂಗಳಂತಿರತ್ತಲು ಮಿತ್ತಲುಂ ತಾಱುಂತೀಱಾಗಿ ಕೆದಱಿ ಕಿತ್ತೆತ್ತಿ ಪರೆದು ಪಾಱಿಪೋಗಿ ನಿಜನಿಜನಿವಾಸಂಗಳಂ ಪೊಕ್ಕುರ್ಪುದುಂ

ಬಳಿಯಂ ಪ್ರತಾಪರಾಜಂ
ಕುಲಪುತ್ರಿಯನುದ್ಘಧರ್ಮತೀರ್ಥಂಕರನಂ
ಸಲೆಮುಂದಿರ್ದೊಡಗೊಂಡ
ಗ್ಗಳಿಕೆಯ ಕುಂಡಿನಪುರಕ್ಕೆ ಪೋಗಲ್ ಬಗೆದಂ    ೧೨೧

ಪಣ್ಣಿದ ಪಟ್ಟದಾನೆಯುಮನೇಱಿ ವಧೂವರರಿಬ್ಬರೂ ಜಗಂ
ಬಣ್ಣಿಸೆ ಕುಂಡಿನಕ್ಕಭಿಮುಖಮಪ್ಪದೆದಾಗಿಯೆ ಬಂದರಂದು ಮೆ
ಯ್ವಣ್ಣದೊಳಯ್ದುರನ್ನದ ಕದಿರ್ ಪುದಿದೊಪ್ಪಿರೆ ತಂದೆತಾಯ್ಗಳುಂ
ಪೂರ್ಣಮನೋರಥರ್ ನಡೆದರೇಱಿ ಗಜಂಗಳನಿಕ್ಕೆಲಂಗಳೊಳ್      ೧೨೨

ಅಱುವತ್ತೊಳ್ಚಾಮರಶ್ರೇಣಿಗಳನಬಳೆಯರ್ ಬಿಂಕದಿಂದಿಕ್ಕಿದರ್ ಮ
ತ್ತುಱುವ ಶ್ವೇತಾತಪತ್ರಂಗಳ ಬಳಗಮನೊಲ್ದೆತ್ತಿ ತಾಳ್ದಿರ್ದರೆಲ್ಲಂ
ತುಱುಗಿತ್ತು ವ್ಯೋಮದೊಳ್ ಪೀವರವಿಜಯಪತಾಕಾಕುಳಂ ಕಣ್ಗಗುರ್ವಂ
ಕಱೆವುತ್ತುಂ ಪೆರ್ಚಿದತ್ಯದ್ಭುತವಿಭವದಿನೆಳ್ತಂದನಾ ಧರ್ಮನಾಥಂ  ೧೨೩

ವ : ಇಂತು ದೇವೇಂದ್ರನುಮಿಂದ್ರಾಣಿಯುಮೈರಾವಣ ಸಮಾರೋಹಣಂ ಗೆಯ್ದು ಕೆಯ್ಗೆಯ್ದು ಬರ್ಪಂತೆ ನಾನಾಪ್ರಕಾರ ಪುಣ್ಯಪಾಠಪ್ರಕರಮಾಂಗಳಿಕಪದ್ಯಪಠನ ಪರಂಪರಾಪಟುರವಂ ಪರಕಲಿಸಿ ಕಿವಿ ಶಬ್ದಂಗಿಡುವವೊಲಗ್ಗಳಮಾದುದಱೊಡನೆ ಪದೆದು ಪುದಿದ ವಿಲಸದಭಿನದ ದುಂದುಭಿಸಂದೋಹಗಭೀರಭೂರಿಧ್ವಾನಂ ಸಕಳದಿಗಂತ ರಾಳಮಂ ಮೂವಳಸಾಗಿ ಬಳಸುತ್ತುಮಿರೆ ಸಮಸ್ತಚಾತುರ್ದಂತಸೈನ್ಯಂಬೆರಸು ಧರ್ಮನಾಥ ಕುಮಾರನುಂ ಶೃಂಗಾರವತೀದೇವಿಯುಂ ಪುರಸ್ಸರಮಾಗಿ ಪ್ರತಾಪರಾಜಂ ಸಂತೋಷ ಸರ್ವಸ್ವ ಕರಂಡಕಮಾದ ಕುಂಡಿನಪುರದ ಗೋಪುರದ್ವಾರಮಂ ಮಹಾಮಹಿಮೆಯಿಂ ಮುಟ್ಟೆವರ್ಪುದುಂ

ಭೋಂಕನೆ ಕೇಳ್ದು ವಾದ್ಯರವಮಂ ಪುರದಲ್ಲಿಯ ಸರ್ವಕಾಮಿನೀ
ಸಂಕುಳಮುಂ ಸಮಸ್ತಜನಮೆಯ್ದೆವಧೂವರರಂ ನಿರೀಕ್ಷಿಪಾ
ಶಂಕೆಯಿನೆಯ್ದಿ ಬಂದು ಪುರಗೋಪುರಮಂ ನೆಲೆಮಾಡದೋಳಿಯಂ
ಬಿಂಕದ ಕೋಂಟೆಯ ತೆನೆಗಳಂ ಪರಿದೇಱಿದರುತ್ಸುಕತ್ವದಿಂ          ೧೨೪

ಅಟ್ಟಳೆಗಳನೇಱಿ ಕೆಲರ್
ಮೆಟ್ಟಿ ಸುಧಾವಳಯಕೂಟಕೋಟಿಗಳಂ ಕೆಲ
ರೊಟ್ಟೈಸಿ ದೇವಗೃಹಮಂ
ನೆಟ್ಟನೆ ನೋಡುತ್ತುಮಿರ್ದುದಾ ಪೌರುಜನಂ    ೧೨೫

ಇತ್ತಿತ್ತಂ ಬನ್ನಿಬನ್ನಿ ಪ್ರವರಪರಿಣಯೋತ್ಸಾಹಮಂ ನೋಡಿ ನೋಡಿ
ನ್ನತ್ತತ್ತಂ ಪೋಗಿ ಪೋಗೆಂದೆನುತ ಕರೆದು ತಂತಮ್ಮವರ್ಗಾಕ್ಷಣಂ ಪೇ
ಳುತ್ತುಂ ತಾಂ ತೋಱಿಸುತ್ತಿರ್ಪವಿರಳಕಳಕೋಳಾಹಳೋದ್ರೇಕದಿಂದಂ
ಮತ್ತಂ ಪ್ರಕ್ಷೋಭಿಸುತ್ತಿರ್ದುದು ಪುರಮನಿತುಂ ಸಂಭ್ರಮಾವೇಷ್ಟ್ಯಮಾನಂ   ೧೨೬

ಮಿಕ್ಕು ಕದಕ್ಕದಿಸೆ ಕುಚಂ
ಚೆಕ್ಕನೆ ಕುರುಳೋಳಿ ಕೆದಱೆ ಕೆತ್ತೆ ನಿತಂಬಂ
ಸೊಕ್ಕಿಂ ದಿಂಕಿಡೆ ಪರಿದುದ
ಳುರ್ಕಿಂದಬಳಾಜನಂ ನಿರೀಕ್ಷಾತುರದಿಂ  ೧೨೭

ವ : ಮತ್ತಮಾ ಪತ್ತನಂ ಪ್ರಜಾಮಯಮಾದುದೆಂಬಂತೆ ಸುತ್ತಲುಂ ಪೌರನಾರೀಜನಂಗಳೆಲ್ಲಂ ನೆರೆದಲ್ಲಲ್ಲಿ ಮೊತ್ತಂಗೊಂಡು ನಿಂದು ಸಮುಪಕಂಠದೊಳ್ ಬರುತ್ತುಮಿರ್ದ ಮದುವೆಯ ಸಂಭ್ರಮಮನುತ್ಕಂಠ ತಾವಗುಂಠಿತ ಸಮುನ್ನತಕಂಠರಾಗಿ ನೋಡುತ್ತುಮಿರ್ಪುದುಮೊರ್ವಳಾ ಪೊತ್ತಿನೊಳ್

ಅಂದುಗೆಯಂ ಮುಂಗೈಯೊಳ್
ಸೌಂದರಕಂಕಣಮನಂಘ್ರಿಯೊಳ್ ಸಾರ್ಚಿದಳಂ
ದಿಂದುಲಲಾಟದೊಳಂಜನ
ಮಂ ದೃಷ್ಟಿಯೊಳೊರ್ವಳಿಕ್ಕಿದಳ್ ಕತ್ತುರಿಯಂ೧೨೮

ನೋಡುವ ವಾಂಛೆಯಿಂದ ಪರಿದೋಡುತುಮಿಪ್ಪೆಡೆಯಲ್ಲಿ ಪೆಂಡಿರಂ
ಬೇಡೆನೆ ಗಂಡನಂ ಬಗೆಯದೋಡುವಳಂ ಪಿಡಿದೊಂದು ದಂಭದಿಂ
ಗಾಡಿಕೆಯಿಂದೆ ತಕ್ಕಿಸಿದೊಡಾ ಸುಖದಿಂದಮೆ ಮೂರ್ಛೆವೋಗಿ ಮು
ಮ್ಮಾಡಿದವೋಲದಚ್ಚಳಿಯದಿರ್ದೊಡೆ ಜಾಱಿದಳೊಯ್ಯನಾಕ್ಷಣಂ೧೨೯

ಎಡಗಣ್ಣೊಂದಱೊಳೆಚ್ಚೆಯಂಜನಮುಮಂ ವಾಮಸ್ತನಾಭಾಗದೊಂ
ದೆಡೆಯಂ ತೋಱಿಸುವಂದು ವಾಮಕರಮಂ ಶೃಂಗಾರಿತಂಮಾಡಿ ಮ
ತ್ತೆಡಗಾಲೊಂದಱೊಳಿ‌ಕ್ಕಿಯಂದುಗೆಯುಮಂ ನೋಳ್ಪುತ್ಸವಂ ಪೆರ್ಚಿಯಾ
ಗಡೆಬಂದಿರ್ದಳದರ್ಧನಾರಿ ಶಿವನೆಂಬೀ ಶಂಕೆಯಂ ಮಾಡುತುಂ        ೧೩೦

ವ : ಇಂತು ಸಮಂತು ತಿಂತಿಣಿಯಾದ ಸೀಮಂತಿನೀ ಸಂತತಿಯೊಳೊರ್ವಳ್

ಗುಣಯುಕ್ತಂ ಮುಕ್ತಾಮಯ
ನೆಣೆಯಿಲ್ಲದ ಚಚ್ಚರುಚಿ ದಲೆನ್ನಂತೆ ನೃಪಾ
ಗ್ರಣಿ ಹೃದಯದೊಳಿರ್ಪನೆಂ
ಬೆಣಿಕೆಯಿನೆನೆ ಪಱಿದುಬೀಳ್ದುದುರದಿಂ ಹಾರಂ೧೩೧

ವ : ಅಲ್ಲಿಯೊರ್ವಳ್ ಕಡುವಿದಗ್ಧೆ

ತರ್ಕಯಿಸಿಕೊಂಡು ಮಗನನ
ಳುರ್ಕಿಂದೆ ಮೆಲುತ್ತುಮಿರ್ದ ತಂಬುಲಮಂ ಬಿಡ
ದಿಕ್ಕಿ ಬಾಯಿಂದೆ ಬಾಯೊಳ್
ತಕ್ಕಿಂ ಚುಂಬನವಿವೇಕಮಂ ತೋಱಿಸಿದಳ್      ೧೩೨

ಮಾಲೆಯನೀ ಸ್ವಯಂವರದೊಳಿಕ್ಕಿದೊಡಾದ ವರಂ ದಲೀತನು
ಲ್ಲಾಲಿತಧರ್ಮನಾಥನೆನಿಪಂ ಪೆಸರಿಂದಮೆ ಪಿಂದಣಾಕೆ ಮ
ತ್ತೀ ಲಲನಾಶಿರೋಮಣಿ ಕುಮಾರಿಕೆಯಾಕೆ ಸುರೂಪೆಯೆಂದು ತ
ದ್ಬಾಲೆಯನೆಲ್ಲರುಂ ನುಡಿವುತುಂ ಬೆರಳಿಂದಮೆ ತೋಱಿ ನೋಡಿದರ್         ೧೩೩

ಬಲೆವೀಸಿದಂದದಿಂ ಪರ
ಕಲಿಸುವ ಮೆಯ್ವಣ್ಣದಲ್ಲಿ ನೋಳ್ಪರ ಕಣ್ಗಳ್
ತೊಲಗದೆ ನಿಂದವು ಮೀಂಗಳ
ಬಳಗಂಗಳಿವೆಂಬ ಮಾಳ್ಕಿಯಿಂ ಬರ್ಪಾಗಳ್       ೧೩೪

ಅವರಿರ್ಬರ ರೂಪಂ ನೋ
ಡುವ ತರುಣಿಯರೆಯ್ದೆ ಮೆಚ್ಚಿ ತಲೆದೂಗಿದರತಿ
ಜವದಿಂ ಪೋಗಲ್ವೇಡೆಂ
ದವರಂ ತಲೆಸನ್ನೆಗೆಯ್ದು ನಿಲಿಸುವ ತೆಱದಿಂ     ೧೩೫

ವ : ಇಂತಾ ಪಟ್ಟಣದ ಪೆಣ್ಗೂಸುಗಳ ಪಿಂಡುಗಳೆಲ್ಲಮುಂ ಪರಿಜನಂಗಳುಂ ಪುರಜನಂಗಳು ಮವರವರಂ ಸುಟ್ಟುಂಬೆಯಿಂ ತೋಱಿತೋರಿ ನಟ್ಟದಿಟ್ಟಿಯಿಂ ನಾಡೆಯುಂ ನೋಡಿ ತಂತಮ್ಮೊಳೋರೊರ್ವರ್ ಕೊಂಡಾಡುತ್ತುಮಿರ್ಪುದುಮಿತ್ತಲತ್ಯದ್ಭುತ ವಿಭವದಿಂದಾ ಧರ್ಮನಾಥಕುಮಾರಂ ಪ್ರತಾಪರಾಜನರಮನೆಯಂ ಪೊಕ್ಕು ಕರುಮಾಡದ ಮುಂದಣ ಮಣಿಮಯರಮಣೀಯಪರಿಣಯನಭವನಂ ದೆಸೆದೆಸೆಗೆ ಕೆದಱಿ ತೆರೆಮಸಗಿ ಪರಿವನಣುತರ ಕಿರಣಗಣಂಗಳಿಂದಾಗಸದೊಳಿಂದ್ರಚಾಪಶ್ರೀಯನಜನಿಸುತ್ತುಮಿರ್ಪುದುಂ

ಗಗನಮನಳ್ಳಿಱಿದುದು ಮಿಗೆ
ನೆಗೆದ ಪಟಧ್ವಜಸಮೂಹಕಂ ಮದುವೆಯ ಚೋ
ಜಿಗಮಂ ನೋಡಿ ದಿವಿಜಾ
ಳಿಗಳಿಂಗುಡಕೊಡುವ ವಸ್ತಚಯಮೆಂಬಿನೆಗಂ     ೧೩೬

ನಾನಾರತ್ನಸ್ಫುರತ್ತೋರಣಗಣರಚನಾಶ್ಚರ್ಯದಿಂ ಕಣ್ಗಗುರ್ವಂ
ತಾನೀವುತ್ತಿರ್ದ ಕರ್ಕೇತನಮಯವಿಲಸದ್ವಾರಶಾಲಾಭಿಶೋಭಾ
ಸ್ಥಾನಂ ವೈವಾಹಗೇಹಂ ಪಡೆದುದು ಸೊಗಸಂ ಚಂದ್ರಕಾಂತೋಜ್ವಳೀ ಭೂ
ತಾನೂನಸ್ತಂಭಸಂದೋಹಕಪರಿಕಳಿತಂ ಪದ್ಮರಾಗೋರುಕೀಲಂ      ೧೩೭

ಪುರುಜಿನರಾದಿಯಾದ ಜಿನನಾಥ ಚರಿತ್ರಕಥಾಪ್ರಪಂಚಮಂ
ವರಭರತಾದಿ ಚಕ್ರಧರವರ್ತನೆಯೊಂದು ಕಥಾಪ್ರಪಂಚಮಂ
ಸುರಮಿಥುನಂಗಳಿಪ್ಪ ತೆಱನಂ ಸುವಿಚಿತ್ರಿತಚಿತ್ತರೂಪದಿಂ
ಬರೆದ ವಿನೀಲಭಿತ್ತಿಗಳ ಮೊತ್ತಮದೊಪ್ಪುತುಮಿರ್ದುದೆತ್ತಲುಂ      ೧೩೮

ವ : ಮತ್ತಂ ಪಟ್ಟಾವಳಿಯ ಮೇಲ್ಗಟ್ಟಿಂ ಕಟ್ಟುವ ಸಾದಿನ ಸಾರಣೆಯನೆಸಗುವ ಕುಂಕುಮಪಂಕದಿಂ ಕಾರಣೆಗೊಳ್ವ ಪನ್ನೀರ ಸಿಂಪಣಿಯಂ ಕೊಡುವ ಮುತ್ತಿನ ರಂಗವಾಲಿಯನಿಕ್ಕುವ ಮಂದಾರದ ಪೂವಲಿಯಂ ಕೆದಱುವ ಪರಿಪರಿಯ ಕುಶಲವೃತ್ತಿಯ ಕೆಲಸದೊಳು ಸಂದಣಿಗೊಳ್ವ ಸೌಂದರಿಯರ ಸಂದೋಹದ ಪೊಂದುಡಿಗೆಯ ಕಡುರವದ ಗಡಣದಿಂದಡಿಗಡಿಗೆಯೊಡನೊಡನೆ ನುಡಿವಂದದಿಂ ಚೆಲ್ವಂಪಡೆದ ಮದುವೆಯ ಮನೆಯ ಸಂಭ್ರಮದ ಸಿರಿಯನೊಳಗೊಂಡಿರ್ಪುದುಮಲ್ಲಿ

ಪುಗುವ ಪೊಱಮಡುವ ಮೆಯ್ದೊಡ
ವುಗಳಂ ನೆಱೆತೊಡುವ ಮಡದಿಯರ ಸಡಗರದಿಂ
ಬಗೆಗೊಳಿಸುತ್ತಿರ್ದುದು ಚೋ
ಜಿಗಮಪ್ಪಿನಮಾ ವಿವಾಹಮಣಿಮಂಡಪಕಂ     ೧೩೯

ವ : ಇಂತು ವಿಚಿತ್ರಶೋಭಾವಹಮಾದ ವಿವಾಹಗೇಹದ ವಿಳಾಸಾವಳೋಕ ನಂಗೆಯ್ವುತ್ತುಂ ಬಂದು ತಂತಮ್ಮ ವಾಹನಂಗಳಿನಿಳಿದು ಲಾವಣ್ಯರಸವರೇಣ್ಯಪುಣ್ಯ ಪಣ್ಯಾಂಗನಾ ನಿಕರಂಗಳ್ ಪರಿಮಾಶೀರ್ವಾದನಾದಂಗಳಿಂ ಪರಸಿ ತಳಿವ ವಿಮಳತರ ವಿಪುಳ ಮುಕ್ತಾಫಳಮಯವಿಳಸದ್ಧವಳಮಂಗಳಾಕ್ಷತಂಗಳ ಬಳಗಂಗಳಿಂದಂ ದಂಪತಿಗಳ್ ತಮ್ಮಯ ಕುಂತಳವಲ್ಲರಿಯಂ ಕುಸುಮಿಸುತ್ತುಮದಱೊಳಗಂ ಪುಗುವುದುಮಾಗಳಲ್ಲಿ

ಪಸುರ್ವರಲ ಜಗಲಿ ಪರಿರಂ
ಜಿಸಿದುದು ರಮಣೀಯ ಧರಣಿರಮಣಿಯ ಮಂಡೆಯೊ
ಳೆಸೆವ ಕೇಶಂಬೊಲೊಪ್ಪಿತು
ಪೊಸಮುತ್ತಿನ ತೊಡಿಗೆಯಂತೆ ರಂಗಾವಲಿಯುಂ            ೧೪೦

ವ : ಆ ವಿಶಾಲತರಮಾದ ವೇದಿಕಾಂತರಾಳದೇಕೈಕಪ್ರದೇಶದೊಳ್

ಬಾಳೆಯ ಪಣ್ಗೊನೆಗಳ್ ಪೊಂ
ಬಾಳೆಯ ಪೆರ್ಮಡಲ್ಗಳಡಕೆಯೊಳ್ಗೊಂಚಲ್ಗಳ್
ಮೇಲೆಸೆದವು ಚೆಂದೆಂಗಿನ
ಮೇಲೆನಿಪೆಳನೀರ ತೋರಗಾಯ್ಗಳ್ ಪಲವುಂ    ೧೪೧

ಒಂದೆಡೆಯಲ್ಲಿ ಸಾದುಮಿಗೆ ತುಂಬಿದ ಕಾಂಚನ ಭಾಜನಂಗಳಂ
ತೊಂದೆಡೆಯಲ್ಲಿ ಚಾರುಹರಿಚಂದನಕರ್ದಮಮೆಯ್ದೆತೀವಿ ಚೆ
ಲ್ವೊಂದಿದ ರಾಜತೋರುತರ ಭಾಜನರಾಜಿಗಳಿರ್ದವಲ್ಲಿ ಮ
ತ್ತೊಂದೆಡೆಯಲ್ಲಿ ಮಂಗಳಸದಕ್ಷತೆತೀವಿದ ಭಾಜನಂಗಳುಂ           ೧೪೨

ಪಳಿಕಿನ ಕಂಬದೊಳಂ ಮಾ
ರ್ಪೊಳೆದಚ್ಚೊತ್ತಿದವೊಲಿರ್ದ ಜಾಗರಮೆಸೆಗುಂ
ವಿಳಸಿತ ಪುಣ್ಯಾಂಕುರಸಂ
ಕುಳಮಾಗಳ್ ಬಳೆದು ನಿಮಿರ್ದು ಮೇಗಡರ್ವ‌ನ್ನಂ          ೧೪೩

ಪೊಳೆವ ವೈಡೂರ್ಯಕುಡ್ಕಂ
ಗಳೊಳಂ ಪ್ರತಿಬಿಂಬಿಸಿರ್ದು ಥಳಥಳಿಸುವ ಮಂ
ಗಳದೀಪಂಗಳ ಬಳಗಂ
ಜ್ವಳಿಸಿದವಗೆವೊಯ್ದು ಸುತ್ತಲಿಱಿಸಿದ ತೆಱದಿಂ            ೧೪೪

ವ : ಇಂತನೇಕವಿಧ ಮಂಗಳಸುಗಂಧಿ ದ್ರವ್ಯಸಂಬಂಧಬಂಧಬಂಧುರಂಗಳಪ್ಪ ಕೆಲ ಕೆಲವು ಭಾಜನಂಗಳಂ ಮಿಗೆಬೆಳಗನುಗುಳ್ವ ತದ್ಯೋಗ್ಯಂಗಳಾದುಪಕರಣಂಗಳ ಬಳಗಮ ನೊಳಕೊಂಡ ವಿತರ್ದಿಕಾಂತರ್ಭಾಗಂ ಬಗೆಗೊಳಿಸುತ್ತುಮಿರೆ

ಸುರಚಿರಮಪ್ಪಾ ವೇದಿಯ
ಪರಮಚತುಃಕೋಣಶೋಣಮಾಣಿಕ್ಯಮಯೋ
ದ್ಧುರಮಂಗಳಕಳಶಂಗಳ್
ಪಿರಿದುಂ ಕೌತುಕಮನಿತ್ತವಖಿಳಜನಕ್ಕಂ            ೧೪೫

ವ : ಇಂತಷ್ಟಮಂಗಳಸಮಾವೇಷ್ಟಿತಂಗಳಾಗಿ ಸಮುತ್ತುಂಗಭೃಂಗಾರಸಂ ಘಾತಮದಂಗೀಕರಿಸಿ ಬೆಡಂಗುವಡೆದ ತದ್ವೇದಿಕಾಚತುಃಕೋಣಮಂಗಳಕಳಶಂಗಳಾನಂದ ಮನಜ ನಿಸುತ್ತುಮಿರಲದಱ ನಟ್ಟನಡುವೆ

ವರಸರ್ವೌಷಧಿಪಂಚರತ್ನ ಕನಕಶ್ರೀಗಂಧಸತ್ಪುಷ್ಪಬಂ
ಧುರಸಮ್ಮಿಶ್ರಿತ ತೀರ್ಥವಾರಿಪರಿಪೂರ್ಣಂ ಶ್ವೇತಸೂತ್ರಾವೃತಂ
ಪರಭಾಗಂಬಡೆದಿರ್ದ ಹೇಮಮಯಭಾಸ್ವತ್ಪೂರ್ಣಕುಂಭಂ ಪರಿ
ಸ್ಫುರಿಸುತ್ತಿರ್ದುದು ರತ್ನದರ್ಪಣಸುದೂರ್ವಾಪಲ್ಲವೋಲ್ಲಾಸಿತಂ           ೧೪೬

ವ : ಮತ್ತಂ ಪಾರಿಜಾತಪ್ರಸೂನಮಾಲಾಜಾಲಸಮಾಲಂಬನರಚನಾವಿಶೇಷಂಗಳಿಂದಳಂಕೃತಮುಂ ಸ್ವಸ್ತಿಕೋಪಲಕ್ಷಿತಂ ಸರ್ವಧಾನ್ಯಪ್ರಸ್ತರಣದಿಂ ರಮಣೀಯತರಮಾದ ತಳಪ್ರದೇಶಮುಂ ದಿವ್ಯವಸ್ತ್ರಸಮಾವರಣದಿಂ ಪ್ರಶಸ್ತಮಾದ ಗಳಸ್ತಾನಮುಮಾಗಿ ಥಳ ಥಳಿಸಿ ಪೊಳೆಯುತ್ತುಮಿರಲಲ್ಲಿಯೊರ್ವಳ್

ಮಂಗಳಪೂರ್ಣಕುಂಭಮುಖದೋಳ್ ಮನಣಿದರ್ಪಣಮುಂ ತಗುಳ್ಚಿಯು
ತ್ತುಂಗ ಸುವೇದಿಕಾಗ್ರದೊಳಗರ್ಚಿಸಿರಲ್ ಕೆಲದಲ್ಲಿ ತೋರ್ಪ ನೇ
ರ್ಪಿಂಗೆಡೆಯಾದ ರತ್ನಮಯಭಿತ್ತಿಯೊಳಂ ಪ್ರತಿಬಿಂಬಿಸುತ್ತಿರ
ಲ್ಕಂಗನೆಯಲ್ಲಿ ಕೆಂದಳಿರನಿಕ್ಕಿಯೆ ಮಾಡಿದಳಂದು ಹಾಸ್ಯಮಂ       ೧೪೭

ವ : ಇಂತನಂತಮಂಗಳದ್ರವ್ಯಸಂಗದಿಂ ಬೆಡಂಗುವಡೆದ ವೇದಿಕಾಸಮಧಿಕ ಶೋಭೆಯಂ ನೀಡುಂನೋಡುತ್ತುಂ ನಡೆತಂದು ತನ್ಮಧ್ಯಸಮುದ್ಯುಷಿತಮಹಾರಜತಮಯ ವಿರಾಜಮಾನಭಾಜನಂಗಳೊಳ್ ತುಂಬಿ ತುಳುಂಕಾಡುತ್ತುಮಿರ್ದ ಬಿಡುಮುತ್ತಿನ ಮೆಟ್ಟಕ್ಕಿಯಿಂ ಮೆಟ್ಟಿ ಚಂದ್ರಮನುಂ ರೋಹಿಣಿಯುಮಿರ್ಪಂದದಿಂ ದಂಪತಿಗಳಿರ್ದರಲ್ಲಿ ಪ್ರತಾಪ ರಾಜನನೇಕಮಕುಟಬದ್ಧಪರಿವೃತನಾಗಿ ಲಕ್ಷ್ಮೀಪತಿಯೆಂಬಂತೆ ಮುಂದೆ ಕುಳ್ಳಿರ್ಪುದುಮಾ ತನ ಪಟ್ಟದರಸಿಯಪ್ಪ ಸತ್ಯವತೀಮಹಾದೇವಿಯುಂ ಮಹಾಲಕ್ಷ್ಮಿಯಂತೆ ನಿರವಶೇಷರಾಜ ಕುಮಾರಿಕಾನಿಕರಂಬೆರಸು ಪಿಂದೆ ಕುಳ್ಳಿರ್ಪುದುಂ

ಕೆಂದಾವರೆಯಲರ್ಗಳೊಳಂ
ನಿಂದಿರ್ದ ಸುರಾಜಹಂಸಮಿಥುನದ ತೆಱದಿಂ
ದಂದಾ ಮಿಥುನಂ ಕಣ್ಗಾ
ನಂದಮನೊದವಿಸುತುಮಿರ್ದುದತಿರಮಣೀಯಂ           ೧೪೮

ವ : ಅಂತು ನಿಲಲೊಡಂ ಸಕಳಜನದ ಕಳಕಳಕೋಳಾಹಳಮಂ ನಿಲಿಸಿ ಶುಭಮುಹೂರ್ತ ಪ್ರಸ್ತಾವನನಿರೀಕ್ಷಣೋನ್ಮುಖರಾಗಿರ್ಪುದುಮಾಗಳ್

ಆ ಕುವರನ ರೂಪ ಸಮಾ
ಳೋಕನದುತ್ಸುಕತೆಯಿಂದೆ ರಾಜಾತ್ಮಜೆ ಮ
ತ್ತೀಕಾಂಡಪಟಂ ಮಧ್ಯದೊ
ಳೇಕಿರ್ದುದೆನುತ್ತೆ ನೋಡಿದಳ್ ಕಿಸುಗಣ್ಣಿಂ       ೧೪೯

ವ : ಇಂತು ಶುಭಲಗ್ನವಿನಿಮಗ್ನಸಮಯಂ ದೊರೆಕೊಳೆ ತೆರೆಸೀರೆಯಂ ತೆಗೆವುದುಂ

ಆಗಳ್ ಪ್ರತಾಪರಾಜಂ
ಕೈಗೆಯ್ದಭಿಜನ ಸನಾಭಿಜನ ಸಚಿವದ್ವಿಜ
ಪೂಗಂ ಬಳಸಿರೆ ಬಂದಂ
ರಾಗರಸಂ ಮೂರ್ತಿವಡೆದು ಬರ್ಪಂತೆವೊಲಂ     ೧೫೦

ವ : ಅಂತುಬಂದು

ಪಿರಿದುಂ ಮಾಂಗಲ್ಯತೂರ್ಯಧ್ವನಿಗಳೊಡನೆ ಮಾಂಗಲ್ಯಗೀತಸ್ವರಂಗಳ್
ಕರಮಾಶಾದೇಶಮಂದಿಂ ಕಿಡಿಸೆ ಸುರುಚಿರಾಗಣ್ಯಪುಣ್ಯಾಂಗನಾಸ
ತ್ಪರಮಾಶೀರ್ವಾದನಾದೋಚ್ಚರಣದೊಡನೆ ಪುಣ್ಯಾಹಪುಣ್ಯಾಹಮಂತ್ರೋ
ಚ್ಚರಣಂ ಪೆರ್ಚುತ್ತಿರಲ್ ಕಾಂಚನಕಳಶಮನಂದೆತ್ತಿದಂ ಕುಂಡಿನೇಶಂ೧೫೧

ವ : ಅಂತಿಕ್ಷ್ವಾಕುವಂಶಮೆಂಬರಮನೆಗೆ ಪೂರ್ಣಕಳಶಮನೆತ್ತುವಂತೆ ಸುರಭಿ ಶುಚಿಸಲಿಲ ಪರಿಪೂರ್ಣಸುವರ್ಣಮಯಪೂರ್ನಕಳಶಮನೆತ್ತಿ

ಭುಜಶಾಖಾಗ್ರದೊಳೊಪ್ಪೆ ಹೇಮಕಳಶಂ ಕೆಯ್ವಂದ ಮಂದಾರದಂ
ತೆ ಜಿನೇಶಂ ರಮಣೀಯತಾವಿಭವಮಂ ತಾಳ್ದಂ ಮಹಾನಂದದಿಂ
ನಿಜಸಂತಾನ ಸಮೃದ್ಧಿಕಾರಣಮೆ ಪೊಯ್ನೀರೆಂಬಿನಂ ಬಣ್ಣಿಸಲ್
ಪ್ರಜೆ ಕೈನೀರೆಱೆದಂ ದಲಿಮ್ಮಡಿಸುವಂ ರುದ್ಯನ್ನಖಚ್ಛಾಯೆಯಿಂ  ೧೫೨

ಧಾರಾಪೂರ್ವಕಮಾಗಿ ಕು
ಮಾರಿಯನಂದೊಪ್ಪುಗೊಟ್ಟು ಪಾಣಿಗ್ರಹಣಮ
ನೋರಂತಿರೆ ಮಾಡಿಸಿದಂ
ಭೂರಮಣಂ ಲೋಕಮೆಯ್ದೆಕೊಂಡಾಡುವಿನಂ  ೧೫೩

ಚೂತಲತೆ ದಕ್ಷಿಣಾಶಾ
ವಾತಸ್ಪರ್ಶನದಿನಂಕುರಾಂಕಿತೆಯಪ್ಪಂ
ತಾ ತನುಮಧ್ಯ ಕುಮಾರನ
ನೂತ್ನಕರಸ್ಪರ್ಶದಿಂದೆ ಪುಳಕಿತೆಯಾದಳ್         ೧೫೪

ವ : ಮತ್ತಂ

ಸೌಂದರಿ ಪಿಡಿಯಲ್ ತನ್ನಯ
ಕೆಂದಳದಿಂದಂ ಕುಮಾರಕರತಳಮಂ ಚೆ
ಲ್ವಿಂದೆಳವಿಸಿಲಾವರಿಸಿದ
ಕೆಂದಾವರೆವೂವಿನಂತದೊಪ್ಪಿತ್ತು ಕರಂ            ೧೫೫

ಅತಿಮಹಿಮೆವೆತ್ತ ಸೊಬಗಂ
ನುತವಿಭವಮನಾಂತು ಕುಸುಮಶರನುಂ ರತಿಯುಂ
ಕ್ಷಿತಿಯೊಳೊಡನಿರ್ಪ ತೆಱದಿಂ
ದತಿಶಯದಂಪತಿಗಳಿರ್ದರತಿಕೌತುಕದಿಂ            ೧೫೬

ಅಂತೊಪ್ಪುವ ದಂಪತಿಗಳ್
ಮಂತಣಿವಣಮಿಲ್ಲದೆಯ್ದೆನೋಡುತ್ತಿರ್ದರ್
ಸಂತೊಸದಿಂ ನೆರೆದೆಲ್ಲರ್
ಕಾಂತೆಯರುಂ ಪರಿಜನಂಗಳುಂ ಪುರಜನಮುಂ   ೧೫೭

ಪಲಕಾಲಂ ನೆರಪಿರ್ದ ರೂಪಮದಮಂ ಬಿಟ್ಟಂ ಮನೋಜಾತನಾ
ಗಳೆ ಮತ್ತಂ ದಲಪೂರ್ವಸೃಷ್ಟಿಯೆನಿಪೀ ಲಾವಣ್ಯಲಾಭಕ್ಕೆ ಮೂ
ಱಿಳೆಯೊಳ್ ನೋಂತವರಾರೊ ಭಾವಿಸುವೊಡೀ ಪುಣ್ಯಾತ್ಮನಂತೆಂದು ಮಂ
ಗಳನಂ ಪಿಂಗದೆ ನೋಡುತಿರ್ದುದು ಪುರಸ್ತ್ರೀವೃಂದಮೌತ್ಸುಕ್ಯದಿಂ೧೫೮

ಮದನಂ ನೋಡಲನಂಗನೀಶನೆ ವಿರೂಪಾಕ್ಷಂ ಮಹಾನಾಕಲೋ
ಕದನಾಥಂ ಬಲನಾಶಕಂ ಮುರಹರಂ ಕೃಷ್ಣಂ ಕಳಂಕಾಂಕಿತಂ
ಪದೆಪಿಂ ಚಂದ್ರಮನಿಂತಿವರ್ ಸರಿಯೆ ಮತ್ತೀ ಧರ್ಮನಾಥಂಗೆ ಪೆ
ರ್ಚಿದ ಚೆಲ್ವಿಂಗೆ ದಲೆಂದು ಪೌರರೆನುತುಂ ಕಣ್ಸೋಲದಿಂ ನೋಡಿದರ್         ೧೫೯

ವ : ಮತ್ತಂ

ದೇವಕುಮಾರಿಯರ್ ದಿವಿಜಲೋಕದೊಳಂತವರಿಕ್ಕೆ ನಾಗಕ
ನ್ಯಾವಳಿ ನಾಗಲೋಕದೊಳಗಂತವರಿಕ್ಕೆ ವಿಳಾಸನಿರ್ಜಿತೋ
ದ್ಭಾವಜಕಾಂತೆಗೀ ಧರಣಿಪಾಳತನೂಜೆಗೆ ಮತ್ತಿನನ್ಯಕ
ನ್ಯಾವಳಿಗಳ್ ಸಮಾನತೆಯನೆಯ್ದುವರಾರೊ ಸಮಸ್ತಲೋಕದೊಳ್            ೧೬೦

ಭಾಸ್ವತ್ಕೋಮಳದೇಹಕಾಂತಿಚಯದಿಂದಂ ಭೂಷಣಂಗಳ್ ಕರಂ
ಲೇಸಾಗಿರ್ದುವು ಮತ್ತಮೀಕೆಗವಱಿಂ ಚೆಲ್ವೇನುಮಿಲ್ಲೆಂದು ತಾಂ
ಸೂಸುತ್ತುಂ ಪ್ರಮದಾಶ್ರುವಂ ನಯನದಿಂ ಪೌರರ್ ಮನಂಸೋಲ್ತು ಮ
ತ್ತಾ ಶೃಂಗಾರವತೀಕುಮಾರಿಯನತೀಸ್ನೇಹದಿಂ ನೋಡಿದರ್         ೧೬೧

ವ : ಎಂದು ಪುರಜನಂಗಳತೀವಕುತೂಹಳದಿಂ ಪರಸ್ಪರಂ ಮಾತಾಡುತ್ತುಂ ಮಂಗಳ ಕಾರಣಮಾಗಿ ರಮಣೀಯಮಣಿಭೂಷಣಕಳಾಪಮಂ ತೊಟ್ಟಂತಪ್ಪ ವಧೂವರರ ನವಳೋಕಿಸುತ್ತುಮಿರ್ಪುದುಂ

ಇಟ್ಟ ಕಿರೀಟಮೂಲದುರುರತ್ನದ ದಂಡೆಯ ಮುಂದೆ ಶೋಭೆಯಿಂ
ಕಟ್ಟಿದ ಚೆಲ್ವ ಬಾಸಿಗದ ದೇಸೆಗೆ ತಾಂ ನೆಲಗಟ್ಟಿದೆಂಬಿನಂ
ಪಟ್ಟಮನಾ ವಿದರ್ಭದೊಡೆಯಂ ಸುಕುಮಾರನ ಭಾಳಪಟ್ಟದೊಳ್
ಕಟ್ಟಿದನಾಕ್ಷಣಂ ಪರಸುತುಂ ಮಣಿಕೇವಣಚಿತ್ರಮಾದುದುಂ          ೧೬೨

ವ : ಇಂತು ವಿವಾಹಕಲ್ಯಾಣಕ್ಕೆ ಮುಖ್ಯಕಾರಣಮಾಗಿ ಮಂಗಳಪಟ್ಟಮಂ ನಿಟ್ಟೆಗೊಳಿಸಿ ದಿಂಬಳಿಯಂ

ಚೆಂಬೊನ್ನ ಪಟ್ಟವಣಿ ಕ
ಣ್ಗಿಂಬಾದುದು ಪಚ್ಚೆವರಲ ಜಗುಲಿಯ ನಡುವೆ ಮ
ನಂಬುಗುವೆಲೆಗಳ ಮೇಲೆ ಕ
ರಂಬಿತಮಾಗರಳ್ದು ಮರಳ್ದ ಪೊಂದಾವರೆಯೊಲ್         ೧೬೩

ವ : ಅದನಾ ಪಾರ್ಥಿವಮಿಥುನಮಳಂಕರಿಸಿ ಬಾಳಮರಾಳಮಿಥುನಮೆಂಬಂತೆ ಲೀಲೆವಡೆ ದಿರ್ಪುದುಂ

ಲಲನಾರತ್ನಂ ಕುವರನ
ಬಲದಿಂದಮೆಡಕ್ಕೆಬಂದು ನಿಂದಿರಲಾಗಲ್
ಬಲಗೊಂಡರಾ ವಧೂವರ
ರೊಲವಿಂದಂ ಹೋಮವಗ್ನಿಯಂ ಕ್ರಮಯುಕ್ತರ್          ೧೬೪

ಸುಳಿವುತ್ತುಂ ಬಲದಲ್ಲಿ ಮೇಗೆ ನೆಗೆವ ಜ್ವಾಲಾಕಲಾಪಂಗಳ
ವ್ವಳಿಸಲ್ ಪಾವನಹೋಮಕೊಂಡದೊಳಗೆ ತ್ರೇತಾಗ್ನಿಯಂ ದರ್ಭಸ
ತ್ಫಳನೈವೇದ್ಯಸದಕ್ಷತಾರ್ಚಿತಮನುತ್ಪೂರ್ಣಾಹುತಿವ್ಯಾಪ್ತಮಂ
ಬಲಗೊಂಡರ್ ಮುದದಿಂದೆ ದಂಪತಿಗಳಾ ರತ್ನತ್ರಯಾಕಾರಮಂ    ೧೬೫

ವ : ಅಂತು ಮಂತ್ರೋಚ್ಚಾರರಾವಂ ದೆಸೆಯಂ ಪಳಂಚಲೆಯೆ ರತ್ನತ್ರಯ ಜ್ಯೋತಿಸ್ವರೂಪ ಮಾದಗ್ನಿತ್ರಯ ಜ್ಯೋತಿಯಂ ದಂಪತಿಗಳಿರ್ವರುಂ ಪ್ರದಕ್ಷಿಣೀಕರಿಸಿ ವಿಧಿಪೂರ್ವಕ ಮಗ್ನಿಕುಮಾರನಂ ಸಾಕ್ಷೀಕರಿಸಿ ತದನಂತರಮಾ ಶೃಂಗಾರವತೀಕುಮಾರಿಯ ಪೆತ್ತ ತಾಯಪ್ಪಿ ಸತ್ಯವತೀಮಹಾದೇವಿಯೆಂಬಳಾ ಪ್ರತಾಪರಾಜನ ಪಟ್ಟದರಸಿ ಬಾಯಿನಮಂ ಕೊಡಲ್ವೇಡಿ ಬಹುವಿಧಮಂಗಳರಚನಾವಿಶೇಷಮನಂಗೀಕರಿಸಿದ ಚಾರುಚೈತ್ಯಾಲಯಕ್ಕೆ

ಕಾಲ ಪಳಂಚಿನುಂಗುರದ ಮೆಲ್ಲುಲಿ ನೂಪುರದಿಂಚರಂ ಸಮು
ಲ್ಲಾಲಿತ ಮೇಖಳಾವಳಯದೊಳ್ ಧ್ವನಿ ಮನ್ಮಥನಿಕ್ಷುಚಾಪದ
ಜ್ಯಾಲತಿಕಾ ಪ್ರತಾಡನಸಮುತ್ಥಿತ ಟಂಕೃತಿಯಂತೆ ಲೀಲೆಯಂ
ಪಾಳಿಸೆ ಬಂದಳಂದು ಕಡೆಗಣ್ ಕುಡಿಮಿಂಚಿನ ಗೊಂಚಲೆಂಬಿನಂ       ೧೬೬

ವ : ಮತ್ತಂ ಪೆಂಡವಾಸದ ವಿಳಾಸಿನೀಜನಂಗಳ್ ನೂರ್ವರ್ ಗಡಣಂ ಗೊಂಡು ವಿವಿಧೋ ಪಾಯನ ರತ್ನಪಟಲಿಕೆಗಳಂ ಪಿಡಿದೊಡನೆ ಬರೆ ಬಸದಿಗೆ ಬಂದು

ಎಳನೀರಿಂ ಸಿತದಿಂ ಸಿತೇಕ್ಷುರಸದಿಂ ಪ್ರಾಜ್ಯಾಜ್ಯದಿಂ ಕ್ಷೀರದಿಂ
ಪೊಳೆವಾದಂ ದಧಿಯಿಂ ಸುಂಗಧಿಜಳದಿಂ ಶ್ರೀಮಜ್ಜಿನಾಧೀಶ್ವರಂ
ಗೊಲವಿಂ ಮಾಡಿಸಿದಂ ಮಹಾಭಿಷವರುಂದ್ರೋತ್ಸಾಹಮಂ ಭೂಪನು
ಜ್ವಳಚೈತ್ಯಾಲಯದಲ್ಲಿ ದಿಕ್ಕುಹರಮಂ ತಳ್ಪೊಯ್ಯೆ ವಾದ್ಯಸ್ವನಂ          ೧೬೭

ಜಳದಿಂದಂ ಗಂಧದಿಂದಂ ಸರಳಶತಕದಿಂದಂ ಸುಪುಷ್ಪಂಗಳಿಂದಂ
ವಿಳಸತ್ಸಾನ್ನಾಯ್ಯದಿಂದಂ ಥಳಥಳಿಸುವ ದೀಪಂಗಳಿಂ ಧೂಪದಿಂದಂ
ಫಳದಿಂದಂ ಪೂತನೂತಾಷ್ಟವಿಧ ನಿರುಪಮದ್ರವ್ಯದಿಂದಂ ಜಿನೇಶೋ
ಜ್ಜ್ವಳಪಾದದ್ವಂದ್ವಮಂ ಪೂಜಿಸಿದನೊಸೆದು ಭೂಪಾಳನಾನಂದದಿಂದಂ     ೧೬೮

ವ : ಇಂತು ಸಕಳಕಲ್ಯಾಣಕಾರ್ಯಕ್ಕಂ ಮುಖ್ಯಮಂಗಳಮಪ್ಪ ಜಿನೇಶ್ವರಾಭಿಷೇಕ ಪೂಜೆಯನಾದಿ ಮಧ್ಯಾವಸಾನದೊಳ್ ಮಹಾಮಹಿಮೆಯಿಂ ಮಾಡಿಸಿ ಪ್ರತಾಪರಾಜಂ ತನ್ನಯ ಪೆರ್ಚಿದ ಪೆಂಪಿನ ಸಂಪದಮಂ ನಿಮಿರ್ಚುವುದುಮನಂತರಮಾ ವಿವಾಹ ಮಂಗಳೋತ್ಸಾಹದೊಳ್

ಇಟ್ಟು ಲಲಾಟದೊಳ್ ತಿಲಕಮಂ ಕಳಮಾಕ್ಷತಮಂ ತಗುಳ್ಚಿ ನೇ
ರ್ಪಟ್ಟ ತುಱುಂಬಿನೊಳ್ ಕುಸುಮಮಾಳೆಯನೊಪ್ಪಿರೆ ಸೂಡಿ ಚೆಲ್ವ ಮುಂ
ದಿಟ್ಟು ಸುವರ್ಣಭಾಜನದ ಬಾಯಿನಮಂ ಕುಲನಾರಿಯರ್ಗೆ ತಾಂ
ಕೊಟ್ಟು ಮನಕ್ಕೆ ಪುಟ್ಟಿಸಿದಳಾಕ್ಷಣದೊಳ್ ಪರಮಾನುರಾಗಮಂ   ೧೬೯

ವ : ಅಂತಾ ಸತ್ಯವತೀಮಹಾದೇವಿ ವಿಚಿತ್ರವಸ್ತ್ರಾಭರಣಾದಿ ವಸ್ತುಗಳಿಂ ತುಂಬಿದ ಬಾಯಿನಂಗಳನಿತ್ತು ಸಂತುಷ್ಟಿಯನೆಯ್ದಿಸಿದಿಂಬಳಿಯಂ

ಜಂಗಮಕಲ್ಪವೃಕ್ಷಮೊ ಸುಚಿಂತನರತ್ನಮೊ ಕಾಮಧೇನುವೋ
ಪಿಂಗದೆ ಪೇಳಿ ಪೇಳಿಯೆನುತುಂ ಜಗತೀಜನಮೆಯ್ದೆ ಬಣ್ಣಿಸಲ್
ತುಂಗಮನಂ ದಲೀಯೊಸಗೆಗಂ ಪೊಱಗಾದವರಾರುಮಿಲ್ಲೆನಲ್
ಪೊಂಗಳನಿತ್ತು ಮನ್ನಿಸಿ ನೃಪಂ ಮೆಱೆದಂ ವಿಭವಪ್ರಭಾವಮಂ      ೧೭೦

ಪಲವುಂ ಚಂದದ ಬಣ್ಣವಣ್ಣಿಗೆಯ ಲೇಸಾಗಿರ್ದ ವಸ್ತ್ರಂಗಳಂ
ಸಲೆಮಾಣಿಕ್ಯವಿಭೂಷಣಾವಳಿಗಳಂ ನಾಡೂರ್ಗಳಂ ಕುಂಜರಂ
ಗಳನಶ್ವಂಗಳಿವಾದಿಯಾದ ವರನಾನಾವಸ್ತುಸಂದೋಹಕಂ
ಗಳನೆಯ್ದಿತ್ತು ನಿಮಿರ್ಚಿದಂ ತ್ರಿಜಗದೊಳ್ ಸತ್ಕೀರ್ತಿಯ ಸ್ಫೂರ್ತಿಯಂ         ೧೭೧

ವ : ಇಂತೆನ್ನವರ್ ತನ್ನವರೆನ್ನದೆ ಪೀನಸನ್ಮಾನಪುರಸ್ಸರಮಾದನೂನದಾನ ವಿಧಾನದ ಬೀಯದ ಚಾಗದ ಪೆರ್ಮೆಯನಾ ಪ್ರತಾಪರಾಜಂ ಮೆಱೆವುದುಮದಂ ಧರ್ಮನಾಥಕುಮಾರಂ ಕಂಡು ಮನಂಗೊಂಡು ಚಂದ್ರೋದಯಮಂ ಕಂಡ ಸಮುದ್ರದಂತೆ ಪೆಟ್ಟುವೆರ್ಚಿ ಸಂತುಷ್ಟಿಯನಾಂತಿರ್ಪುದುಮನಂತರಂ

ಬೂವಕ್ಕವಸರಮಾಗಲ್
ಪಾವನತರಮಾದುದೊಂದು ಮಣಿಭಾಜನಮಂ
ಪೀವರಮಂ ತಂದಿರಿಸೆ ವ
ಧೂವರರೊಂದಾಗಿ ಕುಳ್ಳಿದರ್ ಮುದದಿಂದಂ   ೧೭೨

ಸಣ್ಣಸರವಳಿಗೆಯಂ ಮಿಗೆ
ಬಣ್ಣಂಬಡೆದಿರ್ದ ಪರಡಿಯಂ ಸೊಜ್ಜಿಗೆಯಂ
ತಿಣ್ಣಂ ಸವಿವಡೆದುದನಾ
ಪುಣ್ಯಸ್ತ್ರೀಯರ್ಕಳಿಕ್ಕದರ್‌ಪಾಯಸಮಂ          ೧೭೩

ಪೂರಿಗೆಯಂ ಮಂಡಗೆಯಂ
ಘಾರಿಗೆಯಂ ಹೂಸಣಂಬುಮಂ ವಡೆಯಂ ಘೃತ
ಪೂರಮನಿಡ್ಡಲಿಗೆಯುಮಂ
ದೋರಣಿಯಂ ಬೇಱೆವೇಱೆ ಬಡಿಸಿದರೊಲವಿಂ            ೧೭೪

ವ : ಇಂತು ಪಿರಿದಾದ ಪರಿಮಳಭರಮಂ ದೆಸೆದೆಸೆಗೆ ಪಸರಿಸುವ ಪ್ರಾಜ್ಯಾಜ್ಯದಿಂ ಸಮಾರಜ್ಯಮಾನ ಶರ್ಕರಾಸಮ್ಮಿಶ್ರಿತಂಗಳಾಗಿ ಪರಮಾಮೃತದೊಡನೆ ಪುರುಡಿಸುವ ಪಕ್ವಾನ್ನಂಗಳಂ ಸವಿಯೆ

ಕಡುಸಣ್ಣಮಾದ ನುಣ್ಪಂ
ಪಡೆದ ಸುರಾಜಾನ್ನದೋಗರಂ ಭಾಜನದೊಳ್
ತಡೆಯದಿರುವಂತಿಯಲರ್ಗಳ
ಗಡಣಂ ಪುಂಜಿಸಿದುದೆಂಬಿನಂ ರಂಜಿಸುಗುಂ       ೧೭೫

ಹೊಂಬೆಸಱ ಸೂಪಮದಱೊಳ
ಗಿಂಬಾದುದು ಕರಗಿ ನಿಂದ ಪೊಸಮಿಸುನಿಯ ರಸ
ಮೆಂಬಂತೆ ಕಣ್ಗೆ ಕಡುಸೊಗ
ಸಂ ಬಯಕೆಯನಂತರಂಗದೊಳ್ ಪುಟ್ಟಿಸುಗುಂ  ೧೭೬

ಪಲವುಂ ಛಂದದ ತಾಳದಂಗಳನತೀವಸ್ನಿಗ್ಧಶಾಕಂಗಳಂ
ವಿಳಸತ್ತೇಮನಕಂಗಳಂ ಮಧುರಸತ್ಪಾನಂಗಳಂ ಸರ್ಷಪಾ
ವಿಳಕರ್ಪೂರ ಪರಾಗಮಿಶ್ರಿತ ಮಹಾಸ್ವಾದೂಪದಂಶಂಗಳಂ
ಕುಲಯೋಷಿಜ್ಜನಮೆಯ್ದೆ ಬಡ್ಡಿಸಿದುದಾ ಸ್ಥಾಳಗ್ರದೊಳ್ ಪ್ರೀತಿಯಿಂ       ೧೭೭

ವ : ಮತ್ತಮಿಂದ್ರನುಮಿಂದ್ರಾಣಿಯುಮೊಂದಾಗಿಯಮೃತಾಹಾರಮನೆಂತುಣ್ಬರಂತಿರಾ ಧರ್ಮನಾಥಕುಮಾರನುಂ ಶೃಂಗಾರವತೀ ಮಹಾದೇವಿಯುಮೊಂದಾಗಿ ಪರಮಾಮೋದ ಪರಿಕಳಿತ ಮಧುರತರ ದಿವ್ಯಾಹಾರಮನಾರೋಗಿಸಿ ತದನಂತರಂ ಗಂಧಸಾರರಸದಿಂ ಕೈಘಟ್ಟಿಗೊಂಡು ಹಸ್ತಪ್ರಕ್ಷಾಲನಂಗೆಯ್ವುದುಂ

ನಿಪ್ಪೊಸತಪ್ಪ ಕಪ್ಪುರದ ವೀಳೆಯಮಂ ಮಿಗೆಕೊಟ್ಟು ತಾನುಮೆ
ಯ್ದೊಪ್ಪುವ ಪೂಗಭಾಗಚಯಮಂ ಸಲೆಕೊಂಡು ವಿಶೇಷಹರ್ಷಮುಂ
ನೇರ್ಪಡೆ ಸರ್ವಭೋಗಮುಪಭೋಗಮುಮಂ ನೆಱೆಭೋಗಿಸುತ್ತುಮು
ತ್ತರ್ಪಣಚಿತ್ತನಿರ್ದನೊಸೆದಲ್ಲಿ ಪಲರ್ ಪೊಗಳಲ್ ಸುಕೀರ್ತಿಯಂ   ೧೭೮

ವ : ಇಂತಾ ಧರ್ಮನಾಥಕುಮಾರನುಂ ಶೃಂಗಾರವತೀ ಮಹಾದೇವಿಯು ಮನ್ಯೋನ್ಯಶಕ್ತಿಯಿಂ ರತಿಕ್ರೀಡಾಸುಖಸಮಾಸ್ವಾದನಪಟುಲಂಪಟರಾಗಿ ಕಾಮನುಂ ರತಿಯುಮೆಂಬಂತೆ ನಿರಂತರಿತ ಪರಮಾನಂದಸಂದೋಹದೊಳೊಂದಿ ತಣ್ಣನೆ ತಣಿವುತ್ತುಮಿರ್ಪುದುಂ

ಮಿಗೆ ಕೊಡಾಡುತ್ತುಮಿರ್ದಂ ಜಿನಸಮಯದ ಮಾಹಾತ್ಮ್ಯಮಂ ಧರ್ಮನಾಥಂ
ಜಗದಾರಾಧ್ಯಾಂಘ್ರಿಯುಗ್ಮಂ ಪರಸಮಯಮಹಾವಾದಿ ನಿರ್ದಾಟತಿಗ್ಮಂ
ನಗರಾಜಸ್ಥೈರ್ಯಕಂ ಬಾಹುಬಲಿಸುಕವಿರಾಜಂ ಕಳಾಂಭೋಜಸೂರ್ಯಂ
ಪ್ರಗುಣಂ ವಿದ್ವಿದ್ವಿಮೋಹಂ ನರಪಕೃತಮಹಂ ಚಾತುರೀಜನ್ಮಗೇಹಂ        ೧೭೯

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯ ಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವ ಪ್ರಸಾದಸಂಪಾದ ಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ಶೃಂಗಾರವತೀದೇವಿಯ ಸ್ವಯಂವರ ಕಲ್ಯಾಣಪರಿವ್ಯಾವರ್ಣನಂ ಏಕಾದಶಾಶ್ವಾಸಂ.